Daily Archives: March 26, 2014

ಚುನಾವಣೆ ಪತ್ರಕರ್ತರಿಗೆ ಸುಗ್ಗಿಯ ಕಾಲವೇ?


-ಇರ್ಷಾದ್


 

ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ1625744_654886284570859_1165903399_n ಜೋಷಿ ‘ಚುನಾವಣೆಯ ಸಂಧರ್ಭದಲ್ಲಿ ತಮ್ಮ ಬಗ್ಗೆ ಮೃದು ಧೋರಣೆ ತಾಳುವಂತೆ ಮಾಧ್ಯಮದವರನ್ನು ಓಲೈಸಲು’ ತಮ್ಮ ನೆಚ್ಚಿನ ಬಂಟ ಈರೇಶ ಅಂಚಟಗೇರಿ ಮೂಲಕ ಪತ್ರಕರ್ತರಿಗೆ ಸುಮಾರು 2000 ರೂಪಾಯಿ ಮೌಲ್ಯದ ಒಂದು ಟೈಟಾನ್ ಕಂಪನಿಯ ವಾಚ್ ಹಾಗೂ ಅಂದಾಜು 2000 ಬೆಲೆ ಬಾಳುವ ಸಿಯಾ ರಾಮ್ಸ್ ಮಿನಿಯೇಚರ್ ಕಂಪೆನಿಯ ಶರ್ಟ್ ಮತ್ತು ಪ್ಯಾಂಟ್ ಪೀಸ್ ಇರುವ ಬ್ಯಾಗ್ ನ್ನು ಧಾರವಾಡದ ಮಾಧ್ಯಮ ಕಚೇರಿಗಳಿಗೆ ತಲುಪಿಸಿರುವ ಕುರಿತು ಪ್ರಜಾವಾಣಿ (25 ಮಾರ್ಚ್ 2014 ) ಯಲ್ಲಿ ವರದಿ ಪ್ರಕಟವಾಗಿದೆ. ಆದರೆ ಪ್ರಜಾವಾಣಿಯ ಪ್ರತಿನಿಧಿ ಮನೋಜ್ ಕುಮಾರ್ ಗುದ್ದಿ ಅವುಗಳನ್ನು ಪಡೆಯದೇ ವಾಪಾಸು ಕಳುಹಿಸಿ ವ್ರತ್ತಿ ಧರ್ಮ ಮೆರೆದಿದ್ದಾರೆ. ಅದೇ ದಿನದ  ಪ್ರಜಾವಾಣಿ ಪತ್ರಿಕೆಯಲ್ಲಿ ಅಂತಹದ್ದೇ ಮತ್ತೊಂದು ಸುದ್ದಿ ಪ್ರಕಟವಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ರೆಸ್ಟೋರೆಂಟ್ ಒಂದರಲ್ಲಿ ಭರ್ಜರಿ ಔತಣ ಕೂಟ ಆಯೋಜಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದಾಗ ಔತಣ ಕೂಟಕ್ಕೆ ಆಗಮಿಸಿದ್ದ ಪತ್ರಕರ್ತರು ಹಾಗೂ ಆಯೋಜಕರು ಎದ್ದೂ ಬಿದ್ದು ಪರಾರಿಯಾಗಿದ್ದರು. ಕೆಲ ಪತ್ರಕರ್ತರು ಅರ್ಧಕ್ಕೇ ಊಟ ನಿಲ್ಲಿಸಿ ಕೈಯನ್ನೂ ತೊಳೆಯದೆ ಓಡಿಹೋಗಿದ್ದರಂತೆ!

paid-newsಈ ಎರಡೂ ಸುದ್ದಿಗಳು ಇಂದಿನ ಪತ್ರಿಕೋದ್ಯಮದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ರಾಜಕಾರಣಿಗಳ ಆಮಿಷಗಳಿಗೆ ಬಲಿಯಾಗದೆ ತನ್ನ ವೃತ್ತಿ ಧರ್ಮವನ್ನುಪಾಲಿಸುವ ಪತ್ರಕರ್ತರು ಒಂದೆಡೆಯಾದರೆ, ಪ್ರೆಸ್ ಮೀಟ್ ಹೆಸರಿನಲ್ಲಿ ಗುಂಡು ತುಂಡು ಪಾರ್ಟಿಗಳಿಗೆ ಹೋಗಿ  ರಾಜಕಾರಣಿಗಳು ಕೊಡುವ ಉಡುಗೊರೆಗಳನ್ನು ಅಥವಾ ನೋಟಿನ ಕಂತೆಗಳನ್ನು ಸ್ವೀಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಪತ್ರಕರ್ತರು ಅನೇಕರಿದ್ದಾರೆ. ಪ್ರತಿ ನಿತ್ಯ ದಿನ ಪತ್ರಿಕೆಗಳ ಪುಟ ತಿರುಗಿಸಿದಾಗ, ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ಗಳನ್ನು ಗಮನಿಸಿದಾಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಸುದ್ದಿಗಳು ರಾರಾಜಿಸುತ್ತಲೇ  ಇರುತ್ತವೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರು ಮತದಾರರನ್ನು ಓಲೈಕೆ ಮಾಡಲು ಹಂಚುವ ನೂರು, ಸಾವಿರ ರೂಪಾಯಿಗಳು ಕ್ಯಾಮರಾ ಕಣ್ಣಿನಲ್ಲಿ ಸೆರಯಾಗುತ್ತಿವೆ. ಅಕ್ರಮ ಹಣ ಸಾಗಾಟ, ಮತದಾರರಿಗೆ ಸೀರೆ ಹಂಚುವುದು, ಬಾಡೂಟ ನೀಡುವ ಸುದ್ದಿಗಳು ನಿರಂತರವಾಗಿ ಬರುತ್ತಲೇ ಇವೆ. ವಿಪರ್ಯಾಸವೆಂದರೆ ಇವುಗಳನೆಲ್ಲಾ ಸುದ್ದಿ ಮಾಡುವ ಪತ್ರಕರ್ತರಿಗೇ ರಾಜಕಾರಣಿಗಳು ಅಮಿಷವೊಡ್ಡುವ ಸುದ್ದಿಗಳು ಒಂದೆರಡು ಮಾಧ್ಯಮಗಳಲ್ಲಿ ಮಾತ್ರ ಸುದ್ದಿಯಾಗುತ್ತವೆ. ಇತರ ಮಾಧ್ಯಮಗಳಿಗೆ ಇದು ಸುದ್ದಿ ಎಂದು ಅನ್ನಿಸುವುದಿಲ್ಲ. ಹಿರಿಯ ಪತ್ರಕರ್ತರೊಬ್ಬರು ಹೀಗನ್ನುತ್ತಿದ್ದರು “ ಚುನಾವಣೆ ಬಂತ್ತೆಂದರೆ ಸಾಕು, ಕೆಲ ಪತ್ರಕರ್ತರಿಗಂತೂ ಇದು ಸುಗ್ಗಿಯ ಕಾಲ. ಚುನಾವಣೆಯ ಸಂದರ್ಭದಲ್ಲಿ ಅವರ ಪಾಲಿಗೆ ಉತ್ತಮ ಮಳೆ ಬೆಳೆ ಎರಡೂ ಆಗುತ್ತದೆ”.

ಪತ್ರಕರ್ತರಿಗೆ ಅಮಿಷಗಳನ್ನೊಡ್ಡಿ ತಮ್ಮ ಪರ ಸುದ್ದಿ ಮಾಡುವಂತೆ ನೋಡಿಕೊಳ್ಳುವುದು, ಅದಕ್ಕಾಗಿ ಅವರನ್ನುuntitled ಓಲೈಸಲು ದುಬಾರಿ ಗಿಫ್ಟ್ ಗಳನ್ನು ಕೊಡುವುದು, prajavaniprajavaniಗುಂಡು ತುಂಡು ಪಾರ್ಟಿಗಳನ್ನು ಏರ್ಪಡಿಸುವುದು, ಪ್ಯಾಕೇಜ್ ಗಳನ್ನು ನೀಡಿ ತಮ್ಮ ಪರ ಸುದ್ದಿ ಪ್ರಸಾರವಾಗುವಂತೆ ನೋಡಿಕೊಳ್ಳುವುದು, ಅದು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಪಕ್ಷ ತನ್ನ ವಿರೋಧವಾಗಿ ಸುದ್ದಿ ಪ್ರಸಾರ ಆಗದಂತೆ ಪತ್ರಕರರ್ತರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಇಂದು ನಿನ್ನೆಯದಲ್ಲ. ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಕಾರವಾರ- ಅಂಕೋಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸತೀಶ್ ಸೈಲ್ ನೀಡಿದ ದುಡ್ಡನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವ್ಯತ್ಯಾಸ ಉಂಟಾಗಿ ಮಾತಿಗೆ ಮಾತು ಬೆಳೆದು ದೃಶ್ಯ ಮಾಧ್ಯಮದ ಕೆಲ ವರದಿಗಾರರು ಪರಸ್ಪರ ಹೊಡೆದಾಟ ನಡೆಸಿದ ಘಟನೆ ಕೂಡಾ ನಡೆದಿತ್ತು. ಹಾಸನದಲ್ಲಿ ಪತ್ರಕರ್ತರ ಸಂಘ ಪಕ್ಷವೊಂದರಿಂದ ಸುದ್ದಿ ಮಾಡಲು ಪ್ಯಾಕೇಜ್ ಪಡೆದ ಆರೋಪದ ಸುದ್ದಿ ಬಯಲಾಗಿ ಅದನ್ನು ಪ್ರಶ್ಮಿಸಿದ ದಿ ಹಿಂದೂ ಪತ್ರಿಕೆಯ ವರದಿಗಾರ ಸತೀಶ್ ಶಿಲೆ ಅವರನ್ನು ಸಂಘದಿಂದ ಹೊರಗಿಟ್ಟ ಪ್ರಕರಣ ಪತ್ರಕರ್ತರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇವಿಷ್ಟೇ ಅಲ್ಲದೆ ಪತ್ರಕರ್ತರು ತಮ್ಮ ವೃತ್ತಿಗೆ ಅವಮಾನಕಾರಿಯಾಗಿ ನಡೆದ ಇಂಥಹ ಸಾಕಷ್ಟು ನಿದರ್ಶನಗಳಿವೆ.

ಚುನಾವಣಾ ಸಂದರ್ಭಗಳಲ್ಲಿ ರಾಜಕಾರಣಿಗಳ ಆಪ್ತ ಸಹಾಯಕರ ಬಳಿ ಒಂದು ಲಿಸ್ಟೇ ಇರುತ್ತದೆ. ಯಾವ ಪತ್ರಿಕೆಯ ಪತ್ರಕರ್ತನಿಗೆ ಎಷ್ಟು ಹಣ ನೀಡಿದ್ದೇವೆ, ಯಾವ ಟಿ.ವಿಯ ವರದಿಗಾರನಿಗೆ ಎಷ್ಟು ನೀಡಬೇಕು ಎಂಬುವುದನ್ನು ಆ ಪಟ್ಟಿಯಲ್ಲಿ ಬರೆದಿಡುತ್ತಾರೆ. ಕೆಲವರು ಇವರ ಅಮಿಷಕ್ಕೆ ಬಲಿಯಾದರೆ ಇನ್ನು ಕೆಲವರು ಅದನ್ನು ತಿರಸ್ಕರಿಸಿ ತಮ್ಮತನವನ್ನು ಉಳಿಸಿಕೊಳ್ಳುತ್ತಾರೆ. ಚುನಾವಣೆಗೆ ಸಂಬಂಧಿಸಿದಂತೆ ಸಂದರ್ಶನಗಳನ್ನು ಮಾಡಲು ರಾಜಕಾರಣಿಗಳ ಬಳಿ ಹೋದಾಗ ಕಾಫಿ ಕುಡಿಯೋದಕ್ಕೆ ಇರಲಿ ಎಂದು ಕಿಸೆಗೆ ಕೈಹಾಕಿ ಒಂದಿಷ್ಟು ಹಣವನ್ನು ನೀಡುವಂತಹ ಸಾಕಷ್ಟು ಮುಜುಗರದ ಪರಿಸ್ಥಿತಿ ಅನೇಕ ಪತ್ರಕರ್ತ ಮಿತ್ರರಿಗೆ ಎದುರಾಗಿದ್ದಿರಬಹುದು. ಇದಕ್ಕೆ ರಾಜಕಾರಣಿಗಳನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ಅವರ ಈ ರೀತಿಯ ನಡವಳಿಕೆಗೆ ಕೆಲ ಪತ್ರಕರ್ತರೂ ಕಾರಣರಾಗಿರುತ್ತಾರೆ.

ಪತ್ರಕರ್ತರು ಮಾಡುತ್ತಿರುವ ಭ್ರಷ್ಟಾಚಾರವನ್ನು ಬಹಿರಂಗವಾಗಿ ಖಂಡಿಸಿದ ಸಾಕಷ್ಟು ಪತ್ರಕರ್ತರು ನಮ್ಮಲ್ಲಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯ ಸಂಧರ್ಭದಲ್ಲಿ ನೀಡುತ್ತಿದ್ದ ಉಡುಗೊರೆಯನ್ನು ತಿರಸ್ಕರಿಸುವುದರ ಜೊತೆಗೆ ಬಹಿರಂಗವಾಗಿ ಗಿಫ್ಟ್ ಕೊಡುವ ಸಂಸ್ಕೃತಿಯನ್ನು ವಿರೋಧಿಸಿದ ಪತ್ರಕರ್ತರಾದ ನವೀನ್ ಸೂರಿಂಜೆ, ಅನೀಶಾ ಸೇಟ್ ಹಾಗೂ ಅವರ ಸಂಗಡಿಗರು, ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ವೇಳೆಯಲ್ಲಿ ಪತ್ರಕರ್ತರಿಗೆ ಔತಣ ಕೂಟ ಏರ್ಪಡಿಸಿದಕ್ಕೆ ಹೋಗದೇ ಇದ್ದದ್ದು ಮಾತ್ರವಲ್ಲದೆ ಔತಣ ಕೂಟದ ಮೇಲೆ ನಡೆದ ಚುನಾವಣಾಧಿಕಾರಿಗಳ ದಾಳಿಯನ್ನು ಸುದ್ದಿಯನ್ನಾಗಿ ಜನರ ಮುಂದಿಟ್ಟ ಪತ್ರಕರ್ತ ರಾಹುಲ್ ಬೆಳಗಲಿ (ಇತರ ಮಾಧ್ಯಮಗಳಲ್ಲಿ ಈ ಸುದ್ದಿ, ಸುದ್ದಿಯಾಗಿ ಪ್ರಕಟಗೊಂಡಿರುವುದು ನನ್ನ ಗಮನಕ್ಕಂತೂ ಬಂದಿಲ್ಲ), ಧಾರವಾಡದಲ್ಲಿ ಪ್ರಹ್ಲಾದ್ ಜೋಷಿ ಕೊಟ್ಟ ಉಡುಗೊರೆಯನ್ನು ವಾಪಾಸ್ ಮಾಡಿದ್ದಲ್ಲದೆ ಅದನ್ನು ಸುದ್ದಿ ಮಾಡುವುದರ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸಿದ ಮನೋಜ್ ಕುಮಾರ್ ಗುದ್ದಿ ಮೊದಲಾದ ಅನೇಕ ಹಿರಿಯ ಹಾಗೂ ಯುವ ಪತ್ರಕರ್ತರು ನಮ್ಮ ಜೊತೆಗಿದ್ದಾರೆ. ಇಂಥಹ ಪತ್ರಕರ್ತರ ಅಗತ್ಯ ಹಾಗೂ ಅನಿವಾರ್ಯತೆ ಈ ಕ್ಷೇತ್ರಕ್ಕಿದೆ. ಕೆಲ ತಿಂಗಳ ಹಿಂದೆ ಹಿರಿಯ ಪತ್ರಕರ್ತರಾದ ಕೃಷ್ಣ ರಾಜ ಎಮ್. ಮಂಜುನಾಥ್ ಅವರು ಮಾಧ್ಯಮ ವಲಯದ ಭ್ರಷ್ಟರ ಬೆತ್ತಲು ಅಭಿಯಾನಯನ್ನು ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ಆ ಸಂಧರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರು ನಡೆಸುತ್ತಿರುವ ಭ್ರಷ್ಟಾಚಾರಗಳ ಕುರಿತಾಗಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು.

ಇದೀಗ ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ಮತದಾರರನ್ನು ಓಲೈಸುವ ರೀತಿಯಲ್ಲಿಯೇ ಪತ್ರಕರ್ತರನ್ನು ಓಲೈಸುವ ಪ್ರಯತ್ನ ನಡೆಯುತ್ತಿದೆ. ಮತದಾರರ ಖರೀದಿಯನ್ನು ತಡೆಗಟ್ಟಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿದೆ. ಆದರೆ ಪತ್ರಕರ್ತರ ಖರೀದಿಯು ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣಿಗೆ ಬೀಳೋದೇ ಇಲ್ಲ. ಈ ನಿಟ್ಟಿನಲ್ಲಿ Election-Commission-Of-Indiaಚುನಾವಣಾ ಆಯೋಗ ಕೆಳಕಂಡಂತೆ  ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ನಮ್ಮ ಆಗ್ರಹವೂ ಆಗಿದೆ.

  • ರಾಜಕೀಯ ಸಭೆ ಸಮಾರಂಭಗಳ ಮೇಲೆ ತನ್ನ ಹದ್ದಿನ ಕಣ್ಣಿಟ್ಟ ರೀತಿಯಲ್ಲೇ ರಾಜಕಾರಣಿಗಳು ನಡೆಸುವ ಪತ್ರಿಕಾಗೋಷ್ಠಿಗಳ ಮೇಲೂ ನಿಗಾ ವಹಿಸಬೇಕಾಗಿದೆ. ಅದರ ಸಂಪೂರ್ಣ ಚಿತ್ರೀಕರಣ ನಡೆಸಬೇಕಾಗಿದೆ.
  • ಪತ್ರಿಕಾಗೋಷ್ಠಿಗೆ ವ್ಯಯಿಸುವ ಮೊತ್ತಕ್ಕೆ ಕಡಿವಾಣ ಹಾಕಬೇಕಾಗಿದೆ.
  • ಪತ್ರಿಕಾಗೋಷ್ಠಿಯ ಹೆಸರಲ್ಲಿ ರಾತ್ರಿ ವೇಳೆಯಲ್ಲಿ ನಡೆಯುವ ಗುಂಡು ತುಂಡು ಪಾರ್ಟಿಯ ಮೇಲೆ ನಿಗಾ ಇಡಬೇಕಾಗಿದೆ.
  • ಪತ್ರಕರ್ತರಿಗೆ ಹಣದ ಹಾಗೂ ಉಡುಗೊರೆಗಳ ಆಮಿಷ ನೀಡುವ ಜನಪ್ರತಿನಿಧಿಗಳು, ಅದನ್ನು ಪಡೆಯುವ ಪತ್ರಕರ್ತರ ವಿರುದ್ಧ ನೀತಿ ಸಂಹಿತೆಯ ಉಲ್ಲಂಘನೆಯ ಅಡಿಯಲ್ಲಿ ದೂರು ದಾಖಲಿಸಬೇಕು.

ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದ ಮೌಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಬಹಳ ಪ್ರಮುಖವಾದುದು. ಆಯೋಗದ ನೀತಿ ಸಂಹಿತೆಗಿಂತ ಪತ್ರಕರ್ತರು ತಮಗೆ ತಾವೇ ನೀತಿಸಂಹಿತೆಯನ್ನು ಅಳವಡಿಸಿಕೊಳ್ಳಬೇಕು. ದೆಹಲಿ ಮಾಜಿ ಮುಖ್ಯಮಂತ್ರಿ ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರೀವಾಲ್ ಮಾಧ್ಯಮಗಳ ಕುರಿತಾಗಿ ಇತ್ತೀಚೆಗೆ ನೀಡಿದ ಹೇಳಿಕೆ ಎಲ್ಲಾ ಮಾಧ್ಯಮಗಳಲ್ಲಿ ಅತಿರೇಕ ಹಾಗೂ ಬೇಜಾವಾಬ್ದಾರಿಯುತ ಹೇಳಿಕೆ ಎಂದು ಟೀಕೆಗೆ ಕಾರಣವಾಗಿತ್ತು. ವಾಸ್ತವವಾಗಿ ಇಂದಿನ ಪತ್ರಿಕಾ ರಂಗದ ಹಾಗೂ ಕೆಲ ಪತ್ರಕರ್ತರ ಪರಿಸ್ಥಿತಿಯನ್ನು ಗಮನಿಸಿದಾಗ ಅವರ ಮಾತಿನ ಗಂಭೀರತೆಯನ್ನು ಸಾರಾಸಗಟವಾಗಿ ತಿರಸ್ಕರಿಸುವ ಹಾಗಿಲ್ಲ ಎಂಬುವುದು ನನ್ನ ಅಭಿಪ್ರಾಯ.