Daily Archives: March 30, 2014

ಉರಿಯುವ ಬೆಂಕಿಗೆ ಮೈಯೆಲ್ಲಾ ಬಾಯಿ – ನಿಲ್ಲದ ನೆತ್ತರ ದಾಹ


-ಬಿ. ಶ್ರೀಪಾದ್ ಭಟ್


 

 

ನಮ್ಮ ದೇಶದ ಸೋಕಾಲ್ಡ್ ಮೀಡಿಯಾಗಳ ಅತ್ಯುತ್ಸಾಹದ ಮಾತನ್ನೇ ನಂಬುವುದಾದರೆ, ಅವರ ಸಮೀಕ್ಷೆಗಳನ್ನೇ ಅಂತಿಮ ಎನ್ನುವುದಾದರೆ ಇನ್ನು 2014ರ ಚುನಾವಣೆಯಲ್ಲಿ ನಮೋಗೆ ಮತಗಟ್ಟೆ ಕಾಯುತ್ತಿದೆ ಅಷ್ಟೇ. ಇನ್ನೇನು ಉಳಿದಿಲ್ಲ. ಮಾಧ್ಯಮಗಳು ಉತ್ಸಾಹದ ಎಲ್ಲೆ ಮೀರಿ ಆಗಲೇ ಆಗಸ್ಟ್ 15ರಂದು ನಮೋ ಕೆಂಪುಕೋಟೆಯಿಂದ ಏನು ಭಾಷಣ ಮಾಡಬಹುದು ಎಂದು ಚರ್ಚಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ1 ರಣತಂತ್ರವನ್ನು ರೂಪಿಸುವುದು ಮಾಮೂಲಿ ವಿಚಾರ. ಆದರೆ ಇಂದು ಬಹುಪಾಲು ಮೀಡಿಯಾ ಅದರಲ್ಲೂ ದೃಶ್ಯ ಮಾಧ್ಯಮಗಳು ತಮ್ಮ ಪತ್ರಿಕಾ ಧರ್ಮವನ್ನೇ ಮರೆತು ಏಕಪಕ್ಷಿಯವಾಗಿ ನಮೋನ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮಗಳು ಅದರ ಮೌಲ್ಯಗಳ ರಕ್ಷಣೆಗಾಗಿ ತನ್ನನ್ನು ತಾನು ಕಾವಲುಗಾರನಂತೆ ರೂಪಿಸಿಕೊಳ್ಳುವುದರ ಬದಲಾಗಿ ಇಂದು ತನ್ನ ನೀತಿಗಳನ್ನು ಅಪಮೌಲ್ಯೀಕರಣಗೊಳಿಸಿಕೊಂಡು ಅನೈತಿಕತೆಯನ್ನು ಮೆರೆಯುತ್ತಿರುವುದು ಮಾತ್ರ ಆಧುನಿಕ ಇಂಡಿಯಾದ ಕರಾಳ ಅಧ್ಯಾಯವೆಂದೇ ದಾಖಲಾಗಲಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಯುದ್ಧಕ್ಕಿಂತ ಮೊದಲೇ ಸೋಲನ್ನೊಪ್ಪಿಕೊಂಡಂತೆ ವರ್ತಿಸುತ್ತಿದೆ. ಹೆಚ್ಚೂ ಕಡಿಮೆ ಮಕಾಡೆ ಮಲಗಿದಂತೆಯೇ ವರ್ತಿಸುತ್ತಿರುವ ಕಾಂಗ್ರೆಸ್ ಪಕ್ಷದ ನಕಾರಾತ್ಮಕ ನಡವಳಿಕೆ ಮಾತ್ರ ದಯನೀಯವಾಗಿದೆ. ಕಳೆದ ಒಂದು ದಶಕದುದ್ದಕ್ಕೂ ಪೊರೆದಿದ್ದ ಸೋನಿಯಾ ಗಾಂಧಿಯವರ silent ರಾಜಕಾರಣದ ಶೈಲಿಯ ಅಂತ್ಯ ಮೇಲ್ನೋಟಕ್ಕಂತೂ ಕಾಣುತ್ತಿದೆ. ಅದಕ್ಕೆ ಪ್ರತಿಯಾಗಿ ನಮೋ ಬ್ರಿಗ್ರೇಡ್ ನ rhetoric ಅಬ್ಬರದ ಶೈಲಿ ಇಂದು ದೇಶದಾದ್ಯಂತ ವ್ಯಾಪಿಸುತ್ತಿದೆ. ಸಂಘಪರಿವಾರದ ’ಏಕ್ ಧಕ್ಕ ಔರ್ ದೋ” ಮಾದರಿಯ ಮತೀಯವಾದದ ಪುಂಡಾಟಿಕೆಯ ದಿನಗಳು ಪ್ರಾಮುಖ್ಯತೆಗೆ ಮರಳುತ್ತಿವೆ.

ತಮ್ಮ ಲೇಖನವೊಂದರಲ್ಲಿ ಡಿ.ಆರ್.ನಾಗರಾಜ್ ಅವರು ಠಾಗೋರರ ಕುರಿತಾಗಿ “ಒಬ್ಬ ಸಾರ್ವಜನಿಕ ವ್ಯಕ್ತಿಗೆ ಸುತ್ತಲೂ ಜನತೆಯ ಕನ್ನಡಿ ಇರುತ್ತದೆ. ಆತ ಯಾವಾಗಲೂ ಅವರ ನಿರೀಕ್ಷೆಗೆ ತಕ್ಕಂತೆ ಇರಬೇಕು. ಠಾಗೋರರ ಕಷ್ಟ ಪ್ರಾರಂಭವಾದದ್ದು ಇಲ್ಲಿಯೇ. ಭಾಷೆ ಆತನಿಗೆ ಸಾರ್ವಜನಿಕ ದಂಧೆಯಾಗಿ ಮಾತ್ರ ಕಾಣತೊಡಗಿತು. ಎಂಥದೇ ಹೆಣ್ಣಿನ ಬಗ್ಗೆ ಬರೆದರೂ ಆಕೆ ಭಾರತ ಮಾತೆಯ ಹಾಗೆ ಕಾಣತೊಡಗಿದಳು. ಎಲ್ಲವೂ ಸಾರ್ವಜನಿಕವೇ ಆಗಿ ಬಯಲಿನಲ್ಲಿ ಬದುಕಿದ ಹಾಗೆ ಅನ್ನಿಸತೊಡಗಿತು” ಎಂದು ಬರೆಯುತ್ತಾರೆ. ಇದು ವಿಚಿತ್ರ. ಒಳ ಮನಸ್ಸು ಸೋಲೊಪ್ಪಿಕೊಂಡು ಬಾಹ್ಯ ವರ್ತನೆಯೇ ಮುಖವಾಡವಾಗಿ ಜನಪ್ರಿಯತೆ ಗಳಿಸುತ್ತಿರುವುದು ಇಂಡಿಯಾದ ಸಾರ್ವಜನಿಕ ಜೀವನ ಮರಳಿ ಊಳಿಗಮಾನ್ಯ ವ್ಯವಸ್ಥೆಗೆ ಮರಳುತ್ತಿರುವುದರ ಸೂಚನೆಯಂತೆ ಭಾಸವಾಗುತ್ತಿದೆ. ಇಂದು ಇಲ್ಲಿ ನೈತಿಕತೆ ಅತ್ಯಂತ ದುಬಾರಿ ವಸ್ತುವಾಗಿರುವುದರ ಫಲವಾಗಿ ಅಸಮಾನತೆ ಒಪ್ಪಿತ ಮೌಲ್ಯವಾಗಿ ಜಾರಿಗೊಂಡಿದೆ. ಘನತೆ ಕಳೆದುಕೊಳ್ಳುವುದು ಆತ್ಮವಂಚನೆಯ ದ್ಯೋತಕವಲ್ಲ. ಬದಲಾಗಿ ಅದು ಕತ್ತಲ ದಾರಿಯಲ್ಲಿ ಉಳಿದಿರುವ ಒಂದೇ ಒಂದು ಬೆಳಕಿನ ದಾರಿ. ಅದು ಅನಿವಾರ್ಯ ಎಂದು ನಂಬಿಸಲಾಗುತ್ತಿದೆ.

ಚಿಂತಕ ಹಸನ್ ಸುರೂರ್ ದ ಹಿಂದೂ ಪತ್ರಿಕೆ(10 ಮಾರ್ಚ 2014)ಯಲ್ಲಿ ಹೀಗೆ ಬರೆಯುತ್ತಾರೆ “ಕಳೆದ ವಾರ ದೃಶ್ಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ ಸಂಘ ಪರಿವಾರದ ಅರಣ್ ಜೇಟ್ಲಿ ’ನಿಜ, ಬಿಜೆಪಿಗೆ ಮುಸ್ಲಿಂ ತೊಂದರೆ ಇದೆ. ಆದರೆ ಇದು ಇಬ್ಬಗೆಯದಾಗಿದೆ. ಮೊದಲನೆಯದಾಗಿ ಅವರು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಎರಡನೆಯದಾಗಿ ನಾವು ಇದನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಇಂದು ವಾತಾವರಣ ಬದಲಾಗಿದೆ’ ಎಂದು ಹೇಳಿದರು. ಇದಕ್ಕೂ ಕೆಲವು ದಿನಗಳ ಹಿಂದೆ ಬಿಜೆಪಿಯ ಅಧ್ಯಕ್ಷ ರಾಜನಾಥ ಸಿಂಗ್ ತಮ್ಮ ಭಾಷಣವೊಂದರಲ್ಲಿ ಮುಸ್ಲಿಮರಲ್ಲಿ ಕ್ಷಮೆ ಕೇಳುವಂತಹ ಧಾಟಿಯಲ್ಲಿ ಮಾತನಾಡಿ ಬಿಜೆಪಿಗೆ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದರು. ಸಂಘ ಪರಿವಾರದ ಕಾರ್ಯತಂತ್ರವೇನೆಂದರೆ ತಾವಾಗಲೇ ಧಾರ್ಮಿಕ ಅಲ್ಪಸಂಖ್ಯಾತರಾದ ಸಿಖ್ಖರನ್ನು ಮತ್ತು ಕೆಲ ಕ್ರಿಶ್ಚಿಯನ್ನರನ್ನು ಗೆದ್ದಿದ್ದಾಗಿದೆ. ಇನ್ನು ಮುಸ್ಲಿಮರನ್ನು ಕೊಳ್ಳಬೇಕಾಗಿದೆ ಅಷ್ಟೇ. ಸೂಡೋ ಸೆಕ್ಯುಲರ್ ಗಳು ಹುಟ್ಟು ಹಾಕಿದ ‘ಕೋಮುವಾದದ’ ಬೋಗಿ ಮಾತ್ರ ಇದಕ್ಕೆ ಅಡ್ಡವಾಗಿದೆ. ಆದರೆ ಫ್ಯಾಸಿಸಂ ಶೈಲಿಯು ಪ್ರಚಾರಕ್ಕೆ ಬರುತ್ತಿರುವ ಇಂದಿನ ದಿನಗಳಲ್ಲಿ sense of alarmism ನ ಸ್ಥಿತಿಯಲ್ಲಿರುವ ಮುಸ್ಲಿಮರ ಈ ಭಯವನ್ನು ಉಪಯೋಗಿಸಿಕೊಂಡು ಈ ಕೋಮುವಾದದ ಬೋಗಿಯನ್ನು ಅಂಚಿಗೆ ತಳ್ಳಬಹುದೆಂಬ ವಿಶ್ವಾಸ ಬಿಜೆಪಿಯಲ್ಲಿದೆ. ಆದರೆ ವಾಸ್ತವದಲ್ಲಿ ಕೋಮುವಾದದ ಅಪಾಯವು ಕೇವಲ ಒಂದು ಬೋಗಿಯಲ್ಲ. ಇದಕ್ಕೆ ಆಧಾರಸಹಿತವಾದ ಸಾಕ್ಷಿಗಳಿವೆ. ದೇಶದೆಡೆಗೆ ಮುಸ್ಲಿಂರ ಬದ್ಧತೆಯನ್ನು ಇಂದಿಗೂ ಪ್ರಶ್ನಿಸುತ್ತಿರುವ ಸಂಘಪರಿವಾರದ ಬೆಂಕಿಯುಗುಳುವಿಕೆಯೇ ಇದಕ್ಕೆ ಪುರಾವೆ. ಹಾಗಿದ್ದರೆ ಅರುಣ್ ಜೇಟ್ಲಿ ‘ಹೇಳುವ ಮುಸ್ಲಿಮರು ಒಪ್ಪಿಕೊಳ್ಳಬೇಕು,ನಾವು ಅರ್ಥ ಮಾಡಿಕೊಳ್ಳಬೇಕು’ ಎನ್ನುವ ಮಾತುಗಳ ಅರ್ಥವೇನು ?”

ಮೇಲಿನ ಸಾಲುಗಳು ಏನನ್ನು ಹೇಳುತ್ತವೆ? ಫ್ಯಾಸಿಸಂ ಶಕ್ತಿ ವರ್ಧಿಸಿಕೊಳ್ಳುತಿರುವ ಇಂದಿನ ದಿನಗಳಲ್ಲಿ ತಮ್ಮ ಡಿಎನ್ಎನಲ್ಲಿಯೇ modi_bjp_conclaveಮುಸ್ಲಿಂ ದ್ವೇಷದ ಗುಣಗಳನ್ನು ತುಂಬಿಕೊಂಡಿರುವ ಸಂಘಪರಿವಾರದ ಎದುರು ಮುಸ್ಲಿಮರು ತಮ್ಮ ಘನತೆ ಕಳೆದುಕೊಳ್ಳುವುದು ಆತ್ಮವಂಚನೆಯ ದ್ಯೋತಕವಲ್ಲ. ಬದಲಾಗಿ ಅದು ಕತ್ತಲ ದಾರಿಯಲ್ಲಿ ಉಳಿದಿರುವ ಒಂದೇ ಒಂದು ಬೆಳಕಿನ ದಾರಿ ಎಂದು ಸಂಘ ಪರಿವಾರ ತಾಕೀತು ಮಾಡುತ್ತಿದೆಯಲ್ಲವೇ? ತನ್ನ ಫ್ಯಾಸಿಸಂ ಗುಣಗಳನ್ನು ಮತ್ತೆ ಮತ್ತೆ ಬಿಚ್ಚಿಡುತ್ತಿರುವ ನರೇಂದ್ರ ಮೋದಿ ಕಾಶ್ಮೀರದಲ್ಲಿ ಭಾಷಣ ಮಾಡುತ್ತ ಮತ್ತೊಮ್ಮೆ ತನ್ನ ನೆತ್ತರ ದಾಹವನ್ನು ತೋರಿಸಿದ್ದಾನೆ. ಹಿಂದೊಮ್ಮೆ ಮೇಡಂ ಮಾರಿಯಾ, ಮಿಯಾ ಮುಶ್ರಾಫ್, ಮೈಕೆಲ್ ಲಿಂಗ್ಡೋ ಎಂದು ಅಹಂಕಾರದಿಂದ ಮಾತನಾಡಿದ್ದ ಮೋದಿ ಅತ್ಯಂತ ಕ್ರೂರವಾದ ಭಾಷೆ ಬಳಸುತ್ತಾ ತನ್ನ ರಾಜಕೀಯ ಎದುರಾಳಿಗಳನ್ನು ಕುರಿತಾಗಿ “ಎಕೆ 47, ಎಕೆ ಅಂಟೊನಿ, ಎಕೆ 49” ಎಂದು ವ್ಯಂಗವಾಡಿದ್ದಾನೆ.ಆಧುನಿಕ ಭಾರತದ ಇತಿಹಾಸದಲ್ಲಿ ರಾಜಕೀಯ ನಾಯಕನೊಬ್ಬ ಇಷ್ಟೊಂದು ಕ್ರೌರ್ಯದ ಭಾಷೆಯಲ್ಲಿ ಮಾತನಾಡಿದ್ದು ಇದೇ ಮೊದಲು. ನೆತ್ತರ ದಾಹದ ಈ ಕ್ರೌರ್ಯ ಸಾರ್ವಜನಿಕ ಸಜ್ಜನಿಕೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ. ಇದನ್ನು ಆಳವಾಗಿ ವಿಶ್ಲೇಶಿಸದೆ ಅತ್ಯಂತ ಉತ್ಸಾಹದಿಂದ ಮುಖಪುಟದಲ್ಲಿ ಪ್ರಕಟಿಸಿರುವ ಮಾಧ್ಯಮಗಳು ಮೋದಿಯ ಈ ನೆತ್ತರ ಬೇಟೆಯ ಶೈಲಿಯನ್ನು ಮರೆತಂತಿವೆ. ಮತ್ತೊಮ್ಮೆ ನಾವು ಪಾಲಿಸಬೇಕಾದ ಧರ್ಮದ ಬಗ್ಗೆ ಗುಡುಗಿರುವ ಮೋದಿಯ ಹುಸಿ ಮುಖವಾಡ ಮತ್ತೆ ಮತ್ತೆ ಕಳಚಿಕೊಳ್ಳುತ್ತಿದೆ. ಆದರೆ ಪ್ರತಿ ಬಾರಿಯೂ ಕಳಚಿದ ಮುಖವಾಡವನ್ನು ಉತ್ಸಾಹದಿಂದ ಮರಳಿ ಮೋದಿಗೆ ತೊಡಿಸುತ್ತಿರುವುದು ಸಂಘ ಪರಿವಾರವಲ್ಲ. ಬದಲಾಗಿ ಆ ಕಾರ್ಯ ಮಾಡುತ್ತಿರುವುದು ಮಾಧ್ಯಮಗಳು. ಧರ್ಮ ಮತ್ತು ರಾಜಕಾರಣ ಮತ್ತೊಮ್ಮೆ ಪರಸ್ಪರ ಬೆರೆಯಲು ಮಾಧ್ಯಮಗಳು ಕೈ ಜೋಡಿಸುತ್ತಿವೆ .

ಇಂದು ಮೋದಿಗೆ ಮತ ಹಾಕುವುದು ದೇಶಪ್ರೇಮದ ದ್ಯೋತಕ ಎಂದು ಆರೆಸ್ಸೆಸ್ ಪ್ರಚಾರ ನಡೆಸುತ್ತಿದೆ. ಕಳೆದ ದಶಕದಲ್ಲಿ ಕುಂದಿದಂತಿದ್ದ ಆರೆಸ್ಸೆಸ್ ಇಂದು ಮತ್ತೆ ಗರಿಗೆದರಿ ನಿಂತುಕೊಂಡಿದೆ. ‘ಮಿಷನ್ 272’ ಎನ್ನುವ ಘೋಷಣೆಯೊಂದಿಗೆ ತನ್ನ ಸ್ವಯಂಸೇವಕರನ್ನು ದೇಶಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಸಿದೆ. India272-banner-image-promotion-250x250ಪ್ರಸ್ತುತ ಚುನಾವಣೆಯಲ್ಲಿ ತಾನು ಬಿಜೆಪಿಯ ಸಾರಥಿಯ ಪಟ್ಟವನ್ನು ವಹಿಸಿಕೊಂಡಿರುವುದನ್ನು ಆರೆಸ್ಸೆಸ್ ಅಲ್ಲಗೆಳೆಯುತ್ತಿಲ್ಲ. ಅದು ಹಿಂದೂ ಮೇಲ್ಜಾತಿಯ ಓಟುಗಳೊಂದಿಗೆ ಇತರೆ ಹಿಂದುಳಿದ ವರ್ಗಗಳ ಮತಗಳಿಗೆ ಕೂಡಾ ಲಗ್ಗೆಯಿಟ್ಟಿದೆ. ಇದು ಆರೆಸ್ಸೆಸ್ ಸಂಘಟನೆಯ ಕೋಮುವಾದಿ ಇತಿಹಾಸದಲ್ಲಿಯೇ ಪ್ರಥಮ. ಬೆಲೆಯೇರಿಕೆ, ಭ್ರಷ್ಟಾಚಾರದ ನೆಲೆಯಲ್ಲಿ ಮೇಲ್ಜಾತಿಗಳ ಮತಗಳನ್ನು ಮತ್ತು ಮುಸ್ಲಿಂ ವಿರೋಧಿ ನೆಲೆಗಟ್ಟಿನಲ್ಲಿ ಇತರೇ ಹಿಂದುಳಿದ ವರ್ಗಗಳ ಮತಗಳನ್ನು ಬೇಟೆಯಾಡಲು ಆರೆಸ್ಸೆಸ್ ಕಾರ್ಯತಂತ್ರ ರೂಪಿಸಿದೆ. ಔಟ್ಲುಕ್ (17ಮಾರ್ಚ 2014) ಪತ್ರಿಕೆಯಲ್ಲಿ ವರದಿಯಾಗಿರುವಂತೆ ಡೆಲ್ಲಿ ಗದ್ದುಗೆಗಾಗಿ ಆರೆಸ್ಸೆಸ್ ನ ಹಿರಿಯ ನಾಯಕರೇ ಈ ಕಾರ್ಯತಂತ್ರದ ನೇತೃತ್ವ ವಹಿಸಿದ್ದಾರೆ. ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಉತ್ತರ ಪ್ರದೇಶ,ಮಧ್ಯಪ್ರದೇಶ ಮತ್ತು ರಾಜಸ್ತಾನದ ನೇತೃತ್ವ ವಹಿಸಿದ್ದರೆ, ಸುರೇಶ್ ಭೈಯ್ಯಾ ಗುಜರಾತ್ ಹಾಗೂ ಮಹಾರಾಷ್ಟ್ರ, ದತ್ತಾತ್ರೇಯ ಹೊಸಬಾಲೆ ಕರ್ನಾಟಕ ಮತ್ತು ಬಿಹಾರ್, ಕ್ರಷ್ಣಗೋಪಾಲ್ ಅಸ್ಸಾಂ, ಸುರೇಶ್ ಸೋನಿ ಛತ್ತೀಸ್ ಗಡದ ನೇತೃತ್ವ ವಹಿಸಿದ್ದಾರೆ. ಆರೆಸ್ಸೆಸ್ ಜೊತೆಗೆ ಅದರ ಅಂಗ ಸಂಸ್ಥೆಗಳಾದ ವಿ ಎಚ್ ಪಿ, ಎಬಿವಿಪಿ, ಭಾರತೀಯ ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್ ಮತ್ತು ಇನ್ನಿತರ ಗುಂಪುಗಳು ನಿರಂತರವಾಗಿ ಶ್ರಮಿಸುತ್ತಿವೆ. ಮೋದಿ ಅಭಿವೃದ್ಧಿ ಅಥವಾ ಭಯೋತ್ಪಾದನೆಯ ಕುರಿತಾಗಿ ಮಾತನಾಡುತ್ತಾನೆಂದರೆ ಅವೆಲ್ಲ ಹಿಂದುತ್ವದೊಂದಿಗೆ ನೇರವಾಗಿ ಸಂಪರ್ಕದಲ್ಲಿವೆಯೆಂದೇ ಅರ್ಥ. ಇವುಗಳ ಕುರಿತಾಗಿ ಮಾತನಾಡಿದರೆ ಹಿಂದುತ್ವದ ಅಜೆಂಡಾ ಜಾರಿಗೊಳಿಸುತ್ತಿದ್ದೇವೆ ಎಂದೇ ಅರ್ಥ. ಶಬ್ದಗಳು ಅದಲುಬದಲಾಗಿವೆ ಅಷ್ಟೇ ಎಂದು ಹಿರಿಯ ಆರೆಸಸ್ ನಾಯಕರು ಹೇಳಿದ್ದಾರೆ. ಇಂತಹ ತಂತ್ರದ ಭಾಗವಾಗಿಯೇ ಉಮಾಭಾರತಿ ಕಾಲಕಾಲಕ್ಕೆ ಗಂಗಾ ಬಚಾವ್ ಆಂದೋಲನದ ಮಂತ್ರ ಜಪಿಸುತ್ತಿರುತ್ತಾರೆ, ವಿ ಎಚ್ ಪಿ, ‘ಹಿಂದೂ ಜಾಗೋ’ ಮಂತ್ರವನ್ನು ಇನ್ನೂ ನಿಲ್ಲಿಸಿಲ್ಲ, ಹಿಂದೂ ರಕ್ಷಾ ದಳ ‘ಕಾಶ್ಮೀರ ಬಚಾವ್’ ಆಂದೋಲನ ಕಟ್ಟುತ್ತಿದೆ. ಜೊತೆಗೆ 2002ರ ಗುಜರಾತ್ ರಾಜ್ಯದಲ್ಲಿ ನಡೆದ ಹತ್ಯಾಕಾಂಡದ ಕುರಿತಾಗಿ ಯಾವ ಕಾರಣಕ್ಕೂ ಕ್ಷಮೆ ಕೇಳಬಾರದೆಂದು ಆರೆಸೆಸ್ ಮೋದಿ ಮತ್ತು ಬಿಜೆಪಿಗೆ ತಾಕೀತು ಮಾಡಿದೆ. ಕ್ಷಮಾಪಣೆ ಕೇಳಿದಲ್ಲಿ ಕಷ್ಟಪಟ್ಟು ಗಳಿಸಿದ ಗೆಲುವಿನ ವೇದಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ಹೆದರಿಸಿದೆ ಎಂದು ಔಟ್ಲುಕ್ ಪತ್ರಿಕೆಯಲ್ಲಿ ವರದಿಯಾಗಿದೆ.

ಉತ್ರರ ಪ್ರದೇಶದ ಮುಜಫ್ಫರ್ ನಗರದ ಕೋಮು ಗಲಭೆ ಇಂಡಿಯಾದಲ್ಲಿ ಅಭಿವೃದ್ಧಿ-ಹಿಂದುತ್ವದ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಿದೆ09a671d9-189f-4b8a-893f-4833f370ce93HiRes ಎನ್ನುವ ಕ್ರೂರ ವ್ಯಂಗ್ಯ ಸತ್ಯವಾದರೆ ಅದು ದಶಕಗಳ ಕಾಲ ಪ್ರಜ್ಞಾವಂತರನ್ನು ಕಾಡಲಿದೆ. ಹಾಗಿದ್ದಲ್ಲಿ ಅಭಿವೃದ್ಧಿ-ಹಿಂದುತ್ವದ ಈ ಅಪಾಯಕಾರಿ ಕಾಂಬಿನೇಷನ್ ಎಲ್ಲಿ ಮುಟ್ಟುತ್ತದೆ ? ಸಂಘ ಪರಿವಾರದ ಹೊಸ ಮಂತ್ರವೇನೆಂದರೆ ‘ಎಲ್ಲರಿಗೂ ನ್ಯಾಯ, ಯಾರಿಗೂ ಓಲೈಕೆ ಇಲ್ಲ’. ಇದು ಇದೇ ರೀತಿಯಲ್ಲಿ ಜನಪ್ರಿಯಗೊಂಡರೆ ಸಾಚಾರ್ ಕಮಿಟಿಯಲ್ಲಿ ವರದಿಯಾದಂತಹ ಮುಸ್ಲಿಮರ ಒಟ್ಟಾರೆ ದುಸ್ಥಿತಿ, ಕುಲುಮೆಯಲ್ಲಿ ನಿರಂತರ ಬೇಯುವಿಕೆ, ಸಾಮಾಜಿಕ ಬಹಿಷ್ಕಾರದ ತೂಗುಗತ್ತಿ ಹಾಗೂ ಮೂರನೇ ದರ್ಜೆಯ ನಾಗರಿಕತೆ ಇನ್ನು ಮುಂದೆಯೂ ಮುಂದುವರೆಯಲಿದೆ. ಇದನ್ನು ಇಂದಿನ ಮುಸ್ಲಿಂ ಯುವಕರು ಅವಲೋಕಿಸಬೇಕಾಗಿದೆ. ’ಆಗಿದ್ದು ಆಗಿಹೋಗಿದೆ ನಾವು ಅಭಿವೃದ್ಧಿಯೊಂದಿಗೆ ಕೈಜೋಡಿಸೋಣ” ಎಂದು ಈ ಯುವಕರು ಬಿಜೆಪಿಯೊಂದಿಗೆ ಹೊರಟರೆ ಅವರು ತಲಪುವುದು ಮತ್ತಷ್ಟು ಕಗ್ಗತ್ತಲಿಗೆ. ಇದು ಆತ್ಮಹತ್ಯೆ ಎಂದು ಅರಿವಾಗುವಷ್ಟರಲ್ಲಿ ಹಳ್ಳಕ್ಕೆ ಬಿದ್ದಾಗಿರುತ್ತದೆ. ಏಕೆಂದರೆ ಇಂದಿನ ಫ್ಯಾಸಿಸಂ ಹಿನ್ನೆಲೆಯ sense of alarmism ನ ಸ್ಥಿತಿಯಲ್ಲಿ ಪ್ರತಿಯೊಬ್ಬ ಅಲ್ಪಸಂಖ್ಯಾತನಾದವನು ಪ್ರಬಲ ಬಹುಸಂಖ್ಯಾತ ಧರ್ಮೀಯರ ನೀತಿಗಳನ್ನು ಇದು ನನ್ನ ಮೌಲ್ಯಗಳು ಎಂದೇ ಅಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಸಂದಿಗ್ಧತೆಯಲ್ಲಿ ಸಂಘ ಪರಿವಾರದ ಹಿಂದುತ್ವದಡಿಯಲ್ಲಿ ಇತರೆ ಹಿಂದುಳಿದ ವರ್ಗಗಳು ಮತ್ತು ದಲಿತರು ಒಂದಾಗಿ ಬಾಣಗಳಾಗಿ ಸಜ್ಜುಗೊಳ್ಳುತ್ತಾರೆ. ಪ್ರಬಲ ಜಾತಿಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಈ ಬಾಣಗಳನ್ನು ಮುಸ್ಲಿಮರ ವಿರುದ್ಧ ಪ್ರಯೋಗಿಸುತ್ತಿರುತ್ತದೆ. ಎಂಬತ್ತರ ದಶಕದಲ್ಲಿ ಬಿಹಾರನ ಭಾಗಲ್ಪುರದಲ್ಲಿ, ಮಹಾರಾಷ್ಟ್ರದ ಭಿವಂಡಿಯಲ್ಲಿ, 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮೇಲಿನ ಬಾಣಗಳೇ ಸಂಪೂರ್ಣವಾಗಿ ಪ್ರಯೋಗಗೊಂಡಿದ್ದು. ಆಗಿನ್ನೂ ಫ್ಯಾಸಿಸಂ ಅಧಿಕಾರದ ಹತ್ತಿರಕ್ಕೂ ಸುಳಿದಿರಲಿಲ್ಲ. ಆದರೆ ಇಂದು? ಎಂಬತ್ತರ ದಶಕದ ಕೊನೆ ಭಾಗದಲ್ಲಿ ಮೀಸಲಾತಿ ವಿರೋಧಿ ಚಳುವಳಿಯ ನೇತೃತ್ವ ವಹಿಸಿದ್ದು ಆರೆಸ್ಸೆಸ್ ನ ಅಂಗಪಕ್ಷ ಎಬಿವಿಪಿ. ಮೇಲ್ನೋಟಕ್ಕೆ ಅದು ಹಿಂದುಳಿದ ವರ್ಗಗಳ ವಿರೋಧದಂತೆ ಕಂಡರೂ ಅವರ ಗುರಿ ದಲಿತರಾಗಿದ್ದರು. ಇವತ್ತು ಕೇರಳದ ಚುನಾವಣಾ ಪ್ರಚಾರದಲ್ಲಿ ಹಿಂದುಳಿದ ಜಾತಿಗಳ ಗುರು ಮತ್ತು ಸಮಾಜ ಸುಧಾರಕ ನಾರಾಯಣ ಗುರು ಅವರನ್ನು ಓಲೈಸುವ ಮೋದಿ ತಮಿಳುನಾಡಿನಲ್ಲಿ ದಲಿತ ಸಮುದಾಯದವರನ್ನು ಕೆರಳಿಸುತ್ತಿದ್ದಾನೆ. ತನ್ನ ಭಾಷಣಗಳಲ್ಲಿ ಮುಂದಿನ ದಶಕ ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ಸೇರಿದ್ದು ಎಂದು ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾನೆ. ಮಹಾರಾಷ್ಟ್ರದಲ್ಲಿ ದಲಿತ ನಾಯಕ ರಾಮದಾಸ್ ಅಟವಳೆ ಮೋದಿಯ ತೆಕ್ಕೆಗೆ ಜಾರಿದ್ದಾಯಿತು. ಹಾಗೆಯೇ ಅಖಿಲ ಭಾರತ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಉದಿತ್ ರಾಜ್ ಕಳೆದ ವಾರ ಬಿಜೆಪಿಗೆ ಸೇರಿಕೊಂಡಿದ್ದಾರೆ.

ಒಂದು ಕಾಲದ ಮಾತಾಗಿದ್ದ ಫ್ಯೂಡಲ್ ಹಿಂಸಾಚಾರ ಅತ್ಯಂತ ತ್ವರಿತಗತಿಯಲ್ಲಿ ಮರಳಿ ತನ್ನ ಹಕ್ಕು ಸ್ಥಾಪಿಸುತ್ತಿದೆ. ಬಿಹಾರದಂತಹ ರಾಜ್ಯದಲ್ಲಿ ಪ್ಯೂಡಲ್ ಪಡೆ ರಣವೀರ ಸೇನಾ ಮತ್ತೆ ತಲೆಯತ್ತಲಿದೆ. 27 ಮಾರ್ಚ 2014ರ ಹಿಂದೂ ಪತ್ರಿಕೆಯಲ್ಲಿ “ಬಿಹಾರದ ಬಟಾನಿ ತೋಲಾದಲ್ಲಿ ರಣವೀರ ಸೇನ ಪಡೆ ದಲಿತ ಹೆಣ್ಣು ಮಕ್ಕಳು ಮತ್ತು ಮಕ್ಕಳನ್ನು, ಹಿಂದುಳಿದ ಮುಸ್ಲಿಂರನ್ನು ಕೊಚ್ಚಿ ಹಾಕಿ ಹತ್ಯೆ ಮಾಡಿತ್ತು. ತೊಂಭತ್ತರ ದಶಕದಲ್ಲಿ ರಣವೀರ ಸೇನಾ ಪಡೆ ಬಿಜೆಪಿಯ ಎಲೆಕ್ಷನ್ ಕರಪತ್ರಗಳನ್ನು ಗ್ರಾಮಗಳಲ್ಲಿ ಹಂಚಿ ಬಿಜೆಪಿಗೆ ಮತ ಹಾಕಲು ಆದೇಶಿಸಿತು. 2012ರಲ್ಲಿ ಹತ್ಯೆಗೊಂಡ ಈ ರಣವೇರ ಸೇನೆಯ ಮುಖ್ಯಸ್ಥ ಭ್ರಹ್ಮೇಶ್ವರ ಸಿಂಗ್ ತಾನು ಬಾಲ್ಯದಿಂದಲೂ ಆರೆಸ್ಸೆಸ್ ಸ್ವಯಂಸೇವಕಾನಾಗಿದ್ದೆ ಎಂದು ಒಪ್ಪಿಕೊಂಡಿದ್ದ. ಆತ ಮೋದಿ ಪ್ರಧಾನಿ ಆಗುವ ಆಸೆ ಕಂಡಿದ್ದ. ಬಿಹಾರಿನ ಬಿಜೆಪಿ ನಾಯಕ ಗಿರಿರಾಜ ಸಿಂಗ್ ಈ ಭ್ರಹ್ಮೇಂದ್ರ ಸಿಂಗ್ ಅವರನ್ನು ಬಿಹಾರದ ಗಾಂಧಿ ಎಂದು ಕರೆದಿದ್ದ. ರಣವೀರ ಸೇನೆ ಪಡೆಯ ಪಠ್ಯಗಳು ಹೆಚ್ಚೂ ಕಡಿಮೆ ಆರೆಸ್ಸೆಸ್ ಸಿದ್ಧಾಂತಗಳು. ಗೋಹತ್ಯೆ ನಿಷೇಧ, 370 ಕಲಮನ್ನು ರದ್ದುಗೊಳಿಸುವುದು, ಸ್ಯೂಡೋ ಸೆಕ್ಯುಲರ್ ಗಳ ಹುಟ್ಟಡಗಿಸುವುದು ಇವುಗಳಲ್ಲಿ ಮುಖ್ಯವಾದವು” ಎಂದು ವರದಿಯಾಗಿದೆ.

ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ರಾಜಠಾಕ್ರೆಯnarendra ಎಂಎನ್ಎಸ್, ಕರ್ನಾಟಕದ ಶ್ರೀರಾಮ ಸೇನೆ ಮತ್ತು ಭಜರಂಗ ದಳ, ಉತ್ತರ ಪ್ರದೇಶದ ಟೋಟಲ್ ಶೂದ್ರ ಶಕ್ತಿಗಳು ಹಾಗೂ ಒಡಿಸ್ಸಾದ ಹಿಂದುತ್ವದ ಪಡೆಗಳು ಇವೇ ಮೊದಲಾದ ಹೊಸ ಫ್ಯಾಸಿಸಂ ಸಾಮ್ರಾಜ್ಯದಲ್ಲಿ ಗರಿಗೆದರುವ ಸಾಧ್ಯತೆಗಳು ಮುಂದೆ ನಡೆಯಲಿರುವ ರಕ್ತದ ಓಕಳಿಯ ಅಂದಾಜು ನೀಡುತ್ತವೆ. ಇವುಗಳ ನೆತ್ತರ ದಾಹ ಶುರುವಾದರೆ ನಿಲ್ಲಿಸಲು ಕಷ್ಟಸಾಧ್ಯ. ಮುಸ್ಲಿಮರ ಮಿತ್ರ ಅರ್ಥಾತ್ ಹಿಂದೂಗಳ ಶತ್ರು ಎಂದು ಆರೋಪಿಸಿ ಗಾಂಧಿಯನ್ನು ಕೊಂದಿದ್ದು ಇದೇ ಫ್ಯಾಸಿಸ್ಟ್ ಸಂಘ ಪರಿವಾರದ ಅಂಗ ಸಂಸ್ಥೆ ಹಿಂದೂ ಮಹಾಸಭಾದ ಘೋಡ್ಸೆ. ಅಂದರೆ ಪ್ರತಿಯೊಂದು ಆರೋಪಕ್ಕೂ ಈ ಸಂಘ ಪರಿವಾರ ಪರಿಹಾರ ಕಂಡುಕೊಳ್ಳುವುದು ನೆತ್ತರ ಹರಿಸುವುದರ ಮೂಲಕವೇ. ನಾಥುರಾಮ್ ಘೋಡ್ಸೆಯ ನೆತ್ತರ ದಾಹದ ಚಿಂತನೆಗಳು ಮರಳಿ ಗೂಡು ಕಟ್ಟುತ್ತಿವೆ. ಮೋದಿಯ ಬಾಯಲ್ಲಿ ಎಕೆ 47, ಎಕೆ ಅಂಟನಿ, ಎಕೆ 49 ಎಂದು ನೆತ್ತರ ದಾಹದ ಮಾತನ್ನು ಆಡಿಸಿದ್ದೂ ಇದೇ ಘೋಡ್ಸೆಯ ಚಿಂತನೆಗಳು. ‘ಒಂದು ದೇಶ, ಒಂದು ಭಾಷೆ, ಒಂದು ಜನಾಂಗ’ ಎನ್ನುವ ಮತೀಯವಾದಿ ರಾಷ್ಟ್ರೀಯತೆಯೂ ಸಹ ನೆತ್ತರ ದಾಹದೊಂದಿಗೆ ದಾಪುಗಾಲಿಡುತ್ತಲಿದೆ. ‘ವೈವಿಧ್ಯತೆಯಲ್ಲಿ ಏಕತೆ, ಬಹುತ್ವವೇ ಸಂವಿಧಾನದ ಆಶಯ, ಬಹುರೂಪತೆ ನಮ್ಮ ಹಕ್ಕು’ ಎನ್ನುವ ಧ್ವನಿಗಳನ್ನು ಅಡಗಿಸಲಾಗುತ್ತದೆ.

ನನಗಂತೂ ಇಡೀ ಮೀಡಿಯಾದ ಹೈಪ್ ಸುಳ್ಳಾಗುತ್ತದೆಂಬ ಭರವಸೆ ಇತ್ತೀಚೆಗೆ ಬಲವಾಗುತ್ತಿದೆ. ಏಕೆಂದರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಮೋಗೆ ಪ್ರತಿಯಾಗಿ ಒಬ್ಬ ಕಬೀರನಿದ್ದಾನೆ. ಈ ನಮ್ಮ ಕಬೀರನಿರುವ ಸ್ಥಳದಲ್ಲಿ ನಮೋಗೆ ಸ್ಥಾನವೇ ಇಲ್ಲ.