ಬಾಡೂಟದ ಜೊತೆಗೆ ಗಾಂಧಿ ಜಯಂತಿ: ಬಿ.ಎಂ ಬಶೀರ್ ಅವರ ಲೇಖನಗಳ ಸಂಕಲನ


– ಡಾ.ಎಸ್.ಬಿ. ಜೋಗುರ


 

‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಇದು ಲಡಾಯಿ ಪ್ರಕಾಶನದವರು ಪ್ರಕಟಿಸಿರುವ ಬಿ.ಎಂ ಬಶೀರ್ ಅವರ ಬಿಡಿ ಲೇಖನಗಳ ಕೃತಿ. ಒಟ್ಟು 28 ಬೇರೆ ಬೇರೆ ವಿಷಯಗಳನ್ನಾಧರಿಸಿದ ಇಲ್ಲಿಯ ಲೇಖನಗಳು ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಸಹವಾಸದಲ್ಲಿ ಅದ್ದಿ ತೆಗೆದಂತಿವೆ. ಇಲ್ಲಿಯ ಜಾತಿ, ಧರ್ಮ, ಭಾಷೆ, ಆಹಾರ, ವೇಷ ಭೂಷಣ ಮುಂತಾದವುಗಳ ಪಲಕಿನೊಂದಿಗೆ, ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಬರೆಯಿಸಿಕೊಂಡ ಬರಹಗಳಿವು. ಸಮಾಜವೊಂದರ ನಗ್ನತೆಯನ್ನು ನಿಚ್ಚಳವಾಗಿ ತೋರುವ ಶುಭ್ರವಾದ ಕನ್ನಡಿಯಂತೆ ಇಲ್ಲಿಯ ಬರಹಗಳು ಕೆಲಸ ಮಾಡುತ್ತವೆ. ಕೆಲ ಲೇಖನಗಳ ವಿಷಯ ಪುನರಾವರ್ತಿತ ಎಂದೆನಿಸಿದರೂ ಮನುಷ್ಯನ ಮರೆಗುಳಿತನದ ಎಚ್ಚರದ ಹಿನ್ನೆಲೆ ತಾನೇ ತಾನಾಗಿ ಈ ಬರಹಗಳಿಗೆ ಮೈಗೂಡಿಕೊಂಡಿದೆ. ಲೇಖಕರೇ ಖುದ್ದಾಗಿ ‘ಇಲ್ಲಿರುವ ಎಲ್ಲ ಲೇಖನಗಳು ಪತ್ರಿಕೆಗಳಿಗಾಗಿ ಬರೆದವುಗಳು. ಪತ್ರಿಕಾ ಬರಹಗಳಿಗಿರುವ ಎಲ್ಲ ಮಿತಿಗಳನ್ನು ಇಲ್ಲಿರುವ ಲೇಖನಗಳು ತನ್ನದಾಗಿಸಿಕೊಂಡಿವೆ’ ಎಂದು ಹೇಳಿರುವುದರಿಂದ ಮತ್ತೆ ಅವುಗಳ ಮಿತಿಯ ಪ್ರಸ್ತಾಪ ಅನಗತ್ಯವೆನಿಸುತ್ತದೆ.

ಅಬ್ಬೂ ಕಾಕಾನ ಗೂಡಂಗಡಿಯ ಚಾ ಮತ್ತು ಅಲ್ಲಿಯ ರಾಜಕೀಯ ಚರ್ಚೆಯೊಂದಿಗೆ ರೂಪಿತವಾದ ಅನೇಕuntitled ವ್ಯಕ್ತಿತ್ವಗಳ ಬಗೆಗಿನ ವಿವರಣೆಯೊಂದಿಗೆ ಆರಂಭವಾಗುವ ಲೇಖನ ಅದು ಗೂಡಂಗಡಿ ಕಂ ಕ್ಲಾಸ್ ರೂಂ ಆಗಿ ಕೆಲಸ ಮಾಡಿದ ಬಗೆಯನ್ನು ಲೇಖಕರು ವಿವರಿಸುತ್ತಾ ‘ಆ ಗೂಡಂಗಡಿಯಲ್ಲಿ ದೊರೆಯುತ್ತಿದ್ದ ನೀರು ದೋಸೆ, ಕಲ್ತಪ್ಪವನ್ನು ಮೀನು ಸಾರಿನೊಂದಿಗೆ ಬಡಿಸಿದರೆಂದರೆ..’ ಎನ್ನುತ್ತಲೇ ಓದುಗರ ನಾಲಿಗೆಯನ್ನೂ ನೀರಾಗಿಸುತ್ತಾರೆ. ‘ಯಕ್ಷರಂಗದ ರಾಕ್ಷಸ ವೇಷಗಳು’ ಎನ್ನುವ ಲೇಖನದಲ್ಲಿ ಅವರು ಯಕ್ಷಗಾನ ಕಲೆ ಕ್ರಮೇಣವಾಗಿ ಮೇಲಿನ ಸ್ತರಗಳ ಸ್ವತ್ತಾಗಿ ಅದು ವೈದಿಕೀಕರಣ ಮತ್ತು ಕೋಮುವಾದೀಕರಣಗೊಂಡ ಬಗ್ಗೆ ಖೇದವನ್ನು ವ್ಯಕ್ತಪಡಿಸುತ್ತಲೇ ಅದು ಕಮರ್ಷಿಯಲ್ ಆದ ಬಗ್ಗೆಯೂ ಬೇಸರಿಸುತ್ತಾರೆ. ಆದರೆ ‘ಕಮರ್ಷಿಯಲ್ ಆಗಿರುವುದು ಹಸಿವಿನ ಕಾರಣದಿಂದ ಆಗಿದ್ದರೆ ಅದನ್ನು ಯಾವ ಕಾರಣಕ್ಕೂ ಪ್ರಶ್ನಿಸುವಂತಿಲ್ಲ. ಕಲೆಗಿಂತ ದೊಡ್ಡ ಸತ್ಯ ಬದುಕು. ಆದರೆ ಎರಡನೆಯದನ್ನು ನಾವು ಪ್ರಶ್ನಿಸಲೇ ಬೇಕಾಗುತ್ತದೆ’ ಎನ್ನುವುದು ಲೇಖಕರ ಮನದಾಳದ ನೋವಿನ ಅಭಿಪ್ರಾಯವೂ ಹೌದು. ‘ಮೂತ್ರ ರಾಜಕೀಯ’ ಎನ್ನುವ ಲೇಖನದಲ್ಲಿ ದನದ ಮೂತ್ರವನ್ನು ಔಷಧಿಯಾಗಿ ಬಳಸುವ ಬಗ್ಗೆ ‘ವೈದ್ಯರ ಕೆಲಸವನ್ನು ರಾಜಕಾರಣಿಗಳು ಮಾಡುವಂತಿಲ್ಲ. ಔಷಧಿಗಳಿಗೆ, ವೈದ್ಯಕೀಯಕ್ಕೆ ಅದರದ್ದೇ ಆದ ಚೌಕಟ್ಟುಗಳಿವೆ, ನೀತಿ ಸಂಹಿತೆಗಳಿವೆ’ ಎನ್ನುವ ಲೇಖಕರು ಮೂತ್ರವನ್ನು ಔಷಧಿಗಾಗಿ ಬಳಸುವ ಒತ್ತಡ ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯನ್ನೂ ಎತ್ತುತ್ತಾರೆ.

ಕವಿತಾ ಲಂಕೇಶರ ‘ಅವ್ವ’ ಸಿನೇಮಾದ ಬಗ್ಗೆ ಬರೆಯುವಾಗ ಗಾಂಧಿಯಂಥಾ ಮಹಾನ್ ವ್ಯಕ್ತಿತ್ವದ ಅಂತರ್ಯದಲ್ಲಿ ಓರ್ವ ಹೆಣ್ಣಿದ್ದಳು. ಹಾಗಾಗಿಯೇ ಅವರ ಹೋರಾಟ ಗಂಗಾ ನದಿಯ ಹಾಗೆ ಉದ್ದಕ್ಕೂ ಹರಿಯಿತು ಎನ್ನುತ್ತಾರೆ. ‘ಅವ್ವ’ ಚಿತ್ರ ನಿರೀಕ್ಷೆಯ ಮಟ್ಟಕ್ಕೆ ಬಾರದೇ ಇದ್ದದ್ದು ಮತ್ತು ಆ ಪಾತ್ರಕ್ಕಾಗಿ ಆಯ್ಕೆಯಾದ ಶೃತಿ ಪಕ್ಕಾ ಲಂಕೆಶರ ‘ಅವ್ವ’ ಆಗದೇ ಇದ್ದದ್ದನ್ನು ವಿಮರ್ಶಾತ್ಮಕ ನೆಲೆಯಲ್ಲಿ ಗುರುತಿಸುತ್ತಾರೆ. ‘ಚಿತ್ರದುದ್ದಕ್ಕೂ ನಿರ್ದೇಶಕಿಯನ್ನು ಕಾಡಿದ ಲಂಕೇಶ್ ನೆರಳು. ಅದರಿಂದಾಗಿ ಅತ್ತ ಕವಿತಾರ ಚಿತ್ರವೂ ಆಗದೇ ಇತ್ತ ಲಂಕೆಶರ ಕಾದಂಬರಿಯೂ ಆಗದೇ ಪ್ರೇಕ್ಷಕರನ್ನು ನಡುಗಡಲಲ್ಲಿ ಕೈ ಬಿಟ್ಟು ಬಿಡುತ್ತದೆ’ ಎನ್ನುತಾರೆ. ಬ್ಯಾರಿ ಚಿತ್ರ ಮತ್ತು ಸಾರಾ ಅಬೂಬಕ್ಕರ್ ಕುರಿತು ಬರೆಯುವಾಗ ಅತ್ಯಂತ ಸಣ್ಣದಾದ ಪ್ರಾದೇಶಿಕ ಭಾಷೆಯೊಂದರ ಚಿತ್ರಕ್ಕೆ ಸ್ವರ್ಣ ಕಮಲ ದಕ್ಕಿದ್ದು ಸಾಮಾನ್ಯವಲ್ಲ. ‘ತನ್ನ ಇದ್ದ ಬಿದ್ದ ಶಕ್ತಿಯೊಂದಿಗೆ ಒಂದು ಸಣ್ಣ ಭಾಷೆ, ಸಂಸ್ಕೃತಿ, ಸಿನೇಮಾ ರೂಪ ಪಡೆದು ಹಿಂದಿ ಸೇರಿದಂತೆ ರಾಷ್ಟ್ರದ ಎಲ್ಲ ಭಾಷೆಗಳಿಗೆ ಸಡ್ಡು ಹೊಡೆದು ಸ್ವರ್ಣ ಕಮಲವನ್ನು ತನ್ನದಾಗಿಸುವುದು ಸಣ್ಣ ವಿಷಯ ಅಲ್ಲವೇ ಅಲ್ಲ. ಅದು ಈ ದೇಶದ ಬಹು ಸಂಸ್ಕೃತಿಯನ್ನು ನಾಶ ಮಾಡಿ ಏಕ ಸಂಸ್ಕೃತಿಯನ್ನು ಪ್ರತಿಸ್ಠಾಪನೆ ಮಾಡುವವರಿಗೆ ಹಾಕಿದ ಸವಾಲು’ ಎನ್ನುತ್ತಲೇ ತಾವು ಬ್ಯಾರಿ ಭಾಷೆಯನ್ನು ಮಾತನಾಡುವವರು ಎನ್ನುವ ಕಾರಣಕ್ಕಾಗಿಯೇ ಬಾಲ್ಯದಲ್ಲಿ ಅನುಭವಿಸಿದ ನೋವುಗಳನ್ನು ಬ್ಯಾರಿ ಭಾಷೆಯ ಚಿತ್ರವೊಂದರ ಗೆಲುವು ಮರೆಸಿದ್ದ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ‘ಗೋರಿಗಳ ತೋಟದ ಕಾವಲುಗಾರರು’ ಎನ್ನುವ ಲೇಖನದಲ್ಲಿ ಸಾಹಿತಿಯೊಬ್ಬ ನಮ್ಮ ನಡುವಿನಿಂದ ನಿರ್ಗಮಿಸಿದಾಗ ಅವನನ್ನು ಆತ ಮಾಡಿಟ್ಟ ಆಸ್ತಿ ಅಂದರೆ ಮನೆ, ತೋಟ, ಮಣ್ಣು ಮಾಡಿದ ಸ್ಥಳದಲ್ಲಿ ಹುಡುಕುವದಲ್ಲ. ಹಾಗೆಯೇ ಅವರ ಗೋರಿಗಳ ಕಾವಲುಗಾರರಾಗುವುದರಲ್ಲೂ ಯಾವ ಪುರುಷಾರ್ಥವೂ ಇಲ್ಲ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ ಬಶೀರ್ ಪ್ರತಿಪಾದಿಸಿದ್ದಾರೆ. ‘ಕೋಳಿ ಅಂಕಕ್ಕೆ ಒಂದು ಸುತ್ತು’ ಎನ್ನುವ ಲೇಖನದಲ್ಲಿ ಕೋಳಿಗಳ ನಡುವಿನ ಕಾಳಗ ಹೇಗೆ ಮನುಷ್ಯನ ಮೇಲಿನ ಸೇಡಾಗಿ ರೂಪುಗೊಂಡಿರುತ್ತದೆ ಎನ್ನುವುದನ್ನು ಹೇಳುತ್ತಲೇ ‘ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಥಳಿಸುವುದು ನಮಗೆ ರಂಜಿಸುತ್ತದೆ ಎಂದಾದರೆ ಗುಜರಾತ ಹತ್ಯಾಕಾಂಡವೂ ನಮ್ಮನ್ನು ರಂಜಿಸಬಲ್ಲದು’ ಎನ್ನುತ್ತಾರೆ. ‘ದಲಿತರು ‘ಸತ್ತ ದನ’ದ ವಾರಸುದಾರರಾಗಬೇಕೆ..?’ ಎನ್ನುವ ಲೇಖನದಲ್ಲಿ ಅವರನ್ನು ಮೇಲಿನ ಸ್ತರಗಳು ಪೂಸಿ ಹೊಡೆಯುತ್ತಲೇ ಮೋಸ ಮಾಡುವ ಕ್ರಮವನ್ನು ಒಂದು ನಿರಂತರವಾದ ಪ್ರಕ್ರಿಯೆಯಾಗಿ ಹೇಗೆ ಸಮಾಜ ಮತ್ತು ಸಂಸ್ಕೃತಿಯೊಂದರ ಭಾಗವೆಂಬಂತೆ ನಡೆಯಿಸಿಕೊಂಡು ಬರಲಾಗಿದೆ ಎನ್ನುವುದನ್ನು ‘ಅವರೂ ಅರ್ಚಕರಾಗಬಹುದು’ ಎನ್ನುವ ಹೇಳಿಕೆಯ ಅಪಾಯವನ್ನು ಮುಂದಿಟ್ಟುಕೊಂಡು ಚರ್ಚಿಸುತ್ತಾರೆ..

‘ನನ್ನ ತಂದೆಯನ್ನು ಯಾಕೆ ಕೊಂದೆ?’ ಎನ್ನುವ ಲೇಖನದಲ್ಲಿ ರಾಜೀವ ಗಾಂಧಿಯವರ ಮಗಳು ಪ್ರಿಯಾಂಕಾ ಜೈಲಿನಲ್ಲಿದ್ದ ನಳಿನಿಯನ್ನು ಕುರಿತು ಕೇಳಿದ ಪ್ರಶೆಯ ಹಿನ್ನಲೆಯಲ್ಲಿ ಹಲವು ಗಹನವಾದ ವಿಚಾರಗಳನ್ನು ವಿಶ್ಲೇಷಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ನಳಿನಿಯೂ ‘ನನ್ನ ತಂದೆಯನ್ನು ನೀವೆಲ್ಲಾ ಸೇರಿ ಯಾಕೆ ಕೊಂದಿರಿ..?’ ಎನ್ನುವ ಮರು ಪ್ರಶ್ನೆ ಹಾಕಿದ್ದರೆ ಬಹುಷ: ಪ್ರಿಯಾಂಕಾಳಲ್ಲಿಯೂ ನಳಿನಿಯ ಮೌನವೇ ಉತ್ತರವಾಗಿರುತ್ತಿತ್ತು ಎನ್ನುವುದು ಲೇಖಕರ ಅಭಿಪ್ರಾಯ. ಶ್ರೀಲಂಕಾದ ನಾಯಕ ಜಯವರ್ಧನೆ ಮತ್ತು ರಾಜೀವಗಾಂಧಿ ಬೆಂಗಳೂರಿನಲ್ಲಿ ಭೇಟಿ ಮಾಡಿದ ಆ ದಿನಗಳ ಬಗ್ಗೆ ಶ್ರೀಲಂಕಾದ ತಮಿಳು ಕವಿ ಚೇರನ್ ಅವರ ಕವಿತೆಯ ಕೆಲವು ಸಾಲುಗಳನ್ನು ಲೇಖಕರು ಬಳಸಿದ್ದಾರೆ.

‘ಕಪ್ಪುಗಳಲ್ಲಿ ಚಹಾ ದಿಢೀರನೇ ರಕ್ತವಾಗಿದ್ದನ್ನು ತಿಳಿಯದೇ
ಇಬ್ಬರೂ ನಾಯಕರು ಕುರುಡು ರಾಜಕೀಯದಲ್ಲಿ ಕಾಲ ಕಳೆದರು
ಮನುಷ್ಯ ಮೂಳೆಗಳು ಸುಂದರ ಚಮಚೆಗಳಾಗಿ
ತಲೆಬುರುಡೆಗಳು ತಟ್ಟೆಗಳಾಗಿ ರೂಪಾಂತರಗೊಂಡವು
ಊಟದ ಮೇಜಿನ ಮೇಲೆ
ದೂರದರ್ಶನ ಕಣ್ನುಗಳೆಲ್ಲಾ ಕುರುಡಾದವು
ನಾವಿಲ್ಲದೇ ನಡೆದ ಒಪ್ಪಂದ ಸಾವಿರಾರು ಜೀವಗಳ
ನುಂಗಿ ನೆತ್ತರಲ್ಲಿ ಬರೆದ ಚರಿತ್ರೆ’– ಚೇರನ್

‘ಅಳು ತರಿಸುವ ರಾಂಪನ ಜೋಕುಗಳು’ ಎನ್ನುವ ಬರಹ ರಾಮಪ್ಪಣ್ಣ ಎನ್ನುವ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಕೇಂದ್ರಿತವಾದ ಬರಹ. ಕೇವಲ 5 ರೂಪಾಯಿಗೆ ಹೊಟ್ಟೆ ತುಂಬ ಊಟ ಕೊಡುವ ಈ ಮನುಷ್ಯ ವಡ್ಡರ್ಸೆ ರಘುರಾಮ ಶೆಟ್ಟರ ಮುಂಗಾರಿಗೂ ಚೈತನ್ಯವಾಗಿದ್ದರು ಎನ್ನುವುದನ್ನು ತೀರಾ ಮನೋಜ್ಞವಾಗಿ ಬರೆದಿದ್ದಾರೆ. ‘ವಿವೇಕ್ ಶಾನಭಾಗ್ ಕಂಡ ಉದ್ಯಾನವೊಂದರ ಕನಸು’ ಎನ್ನುವ ಲೇಖನದಲ್ಲಿ ’ದೇಶ-ಕಾ’ ದಲ್ಲಿಯ ಅಚ್ಚುಕಟ್ಟುತನ ತನ್ನನ್ನು ಬೆರಗುಗೊಳಿಸಿತ್ತಾದರೂ ‘ಜಗತ್ತಿನ ಶ್ರೇಷ್ಟವಾದುದೆಲ್ಲಾ ತನ್ನಲ್ಲಿರಬೇಕೆಂಬ ಹಟ ಈ ಪತ್ರಿಕೆಯೊಳಗಿದೆ ಎನಿಸಿತು’ ಕ್ರಮೇಣವಾಗಿ ‘ಈ ಪತ್ರಿಕೆಗೆ ಒಂದು ಪ್ರತಿ ಆಲೋಚನೆಯನ್ನು ಸೃಷ್ಟಿಸುವುದು ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಾಗತೊಡಗಿತು’ ಎನ್ನುತ್ತಾರೆ. ‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಎನ್ನುವ ಪುಸ್ತಕದ ಶಿರ್ಷಿಕೆಯ ಲೇಖನದಲ್ಲಿ ಹೇಗೆ ಒಂದು ಧರ್ಮದ ಆಚರಣೆ ಇನ್ನೊಂದು ಧರ್ಮದವರ ಆಹಾರದ ಹಕ್ಕನ್ನು ಕಸಿಯುತ್ತದೆ ಎನ್ನುವುದನ್ನು ಲೇಖಕ ಹೀಗೆ ಹೆಳುತ್ತಾರೆ. “ಕೆಲ ವರ್ಷಗಳ ಹಿಂದೆ ಬಕ್ರೀದ್ ಮತ್ತು ಮಹಾವೀರ ಜಯಂತಿ ಜೊತೆ ಜೊತೆಯಾಗಿಯೇ ಬಂತು. ಆಗ ರಾಜ್ಯದ ಮೂರ್ಖ ಸರಕಾರ [ ಬಾಡೂಟವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜೆ.ಎಚ್.ಪಟೆಲರೇ ಆಗ ಮುಖ್ಯ ಮಂತ್ರಿಯಾಗಿದ್ದದ್ದು ದುರಂತ] ಮಹಾವೀರ ಜಯಂತಿ ದಿನ ಮಾಂಸ ಮಾರಾಟವನ್ನು ನಿಷೇಧಿಸಿತು. ಒಂದು ಧರ್ಮವನ್ನು ಗೌರವಿಸುವ ಹೆಸರಿನಲ್ಲಿ ಇನ್ನೊಂದು ಧರ್ಮದ ಮೌಲ್ಯವನ್ನು ಅವಮಾನಿಸಿತು” ಎನ್ನುವುದನ್ನು ವಸ್ತು ನಿಷ್ಟವಾಗಿ ದಾಖಲಿಸುತ್ತಾರೆ. ‘ಹುಲ್ಲು ಹುಲ್ಲು ತಿಂದು ರಾಕ್ಷಸರಾದವರು’ ಎನ್ನುವ ಇನ್ನೊಂದು ಲೇಖನದಲ್ಲಿ ಕವಿ ಎನ್ಕೆ ಹನುಮಂತಯ್ಯನವರ ’ಗೋವು ತಿಂದು ಗೋವಿನಂತಾದವನು’ ಎನ್ನುವ ಕವಿತೆಯ ಸಾಲುಗಳನ್ನು ಉಲ್ಲೇಖಿಸುತ್ತಾ ‘ಇತಿಹಾಸದುದ್ದಕ್ಕೂ ಗೋವು ತಿನ್ನದವರು ಗೋವು ತಿಂದವರ ಮೇಲೆ ದೌರ್ಜನ್ಯ ನಡೆಸಿದರೇ ಹೊರತು ಗೋವು ತಿಂದು ಬದುಕಿದವರು ಸಸ್ಯಾಹಾರಿಗಳ ಮೆಲೆ ಎರಗಿದ ಒಂದೇ ಒಂದು ಉದಾಹರಣೆಗಳಿಲ್ಲ’ ಎನ್ನುವ ಲೇಖಕರು ದೇವರು ಮತ್ತು ರಾಕ್ಷಸರ ನಡುವಿನ ಸಂಘರ್ಷ ಆರ್ಯ-ದ್ರಾವಿಡರ ಘರ್ಷಣೆಯೂ ಹೌದು ಎನ್ನುತ್ತಾರೆ. ‘ಜಾತಿಗೊಬ್ಬ ಕುಲಗುರು’, ‘ರಾವಣನನ್ನು ಸುಡುವುದು ಎಷ್ಟು ಸರಿ..?’ ‘ಎದೆಯ ಧ್ವನಿಯನ್ನು ಆಲಿಸೋಣ’ ಹೀಗೆ ಇಡೀ ಕೃತಿ ಸಾಮಾಜಿಕ ಅಸಮಾನತೆ, ಮೇಲಿನ ಸ್ತರಗಳ ಶೋಷಣೆ, ಉಪ ಸಂಸ್ಕೃತಿಗಳ ಮೇಲೆ ಪ್ರಧಾನ ಸಂಸ್ಕೃತಿಯ ಹಾವಳಿ, ದಂತಕತೆಗಳ ವೈಭವೀಕರಣದ ಮೂಲಕ ಸವಾರಿ ಮಾಡುವ ಕ್ರಮ ಮೊದಲಾದ ವಿಚಾರಗಳ ಜೊತೆಗೆ ವಸ್ತುನಿಷ್ಟ ಅಭಿಪ್ರಾಯಗಳೊಂದಿಗೆ ಓದುಗನನ್ನು ಮುಖಾಮುಖಿಯಾಗಿಸುತ್ತವೆ. ಒಂದು ಕೃತಿಯಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.

3 thoughts on “ಬಾಡೂಟದ ಜೊತೆಗೆ ಗಾಂಧಿ ಜಯಂತಿ: ಬಿ.ಎಂ ಬಶೀರ್ ಅವರ ಲೇಖನಗಳ ಸಂಕಲನ

 1. Salam Bava

  ಬಶೀರ್ ರವರಿಗೆ ಮತ್ತು ಲಡಾಯಿ ಪ್ರಕಾಶನದವರಿಗೆ ಅಬಿನ೦ದನೆಗಳು.ಮುಸ್ಲಿ೦ ಸಮುದಾಯದಲ್ಲಿ ಸಾಹಿತಿ,ಪತ್ರಕರ್ತ ಎ೦ದು ಹೆಸರಿಸಬಹುದಾದ ಕೆಲವೇ ಕೆಲವರಲ್ಲಿ ಬಶೀರ್
  ಸಹಾ ಒಬ್ಬರು.ಪಕ್ಕದ ಕೇರಳದಲ್ಲಿ ಎಲ್ಲಾ ಕಲಾ,ಸಾಹಿತ್ಯ ಪ್ರಕಾರಗಳಲ್ಲಿ ಮುಸ್ಲಿ೦ರು ಮು೦ಚೂಣಿಯಲ್ಲಿ ಇರುವಾಗಕನ್ನಡದಲ್ಲಿ,ನಿಸಾರ್,ಬೊಳುವಾರು,ಪುತ್ತಿಗೆ,ಕಟ್ಪಾಡಿ,ರಷೀದ್,ರಹಮತ್,ಬಾನು,ರ೦ಜಾನ್,ಹನೀಫ ಮತ್ತು ಅರಿಫ ರವರು ಮಾತ್ರಾ ಕಾಣುತ್ತಾರೆ.ಬಾಕಿ so called ಮುಸ್ಲಿ೦ ಸಾಹಿತಿ ಎ೦ದು ಕರೆಯಲ್ಪಡುವವರು ಸಾಹಿತ್ಯಬೂಸಾ ಎ೦ದು ನನ್ನ ಅನಿಸಿಕೆ.ಒಮ್ಮೆ ನನ್ನ ಮನೆಗೆ ಕನ್ನಡದಲ್ಲಿ
  ಮುಸ್ಲಿ೦ ಮಹಿಳೆಯರ ನೋವಿಗೆ ದ್ವನಿ ಕೊಟ್ಟವರು ಎ೦ದು ಪ್ರಖ್ಯಾತಿಯಿರುವ ಸಾಹಿತಿಯ
  ವರು ಬ೦ದ್ದಿದ್ದರು.ನನ್ನ book shelf ಇಟ್ಟಿದ್ದ ಮಲೆಗಳಲ್ಲಿ ಮದುಮಗಳು,ಪುರುಷೋತ್ತಮ ಮತ್ತು
  ಕಾನೂರು ಹೆಗ್ಗಡಿತಿ ಪುಸ್ತಕಗಳನ್ನು ನೋಡಿ ಕೇಳಿದರು-ನೀವು ಇದನ್ನೆಲ್ಲಾ ಓದಿದ್ದೀರ ಎ೦ದು.
  ಕೆಲವು ಸಾರಿ ಓದಿದ್ದೀನಿ,ನೀವು ಓದಿದ್ದೀರ ಅ೦ತ ಕೇಳಿದ್ದಕ್ಕೆ-ಇಲ್ಲ ಅ೦ದರು.ಶೇಕ್ಪಯರ್
  ಓದಿದ್ದೀರ ಎ೦ದು ಕೇಳಿದೆ,ಇಲ್ಲಾ ಅ೦ತ್೦ದರು.ತು೦ಬಾ ಓದದವನು ಸಾಹಿತಿಯಾಗಲಾರ್
  ಎ೦ದು ನನ್ನ ಅನಿಸಿಕೆ .ನಮ್ಮ ಸಮುದಾಯದಲ್ಲಿ ಈ ಕೊರತೆ ಇದೆ ಎ೦ದು ನನ್ನ ಅನಿಸಿಕೆ.
  ಇದು ಯಾರನ್ನು ಕೀಳು ಮಾಡಲು comment ಕೊಟ್ಟದ್ದಲ್ಲ,ನನ್ನ ಪ್ರಾಮಾಣಿಕ ಅಭಿಪ್ರಾಯ ಅಷ್ಟೇ.

  Reply
  1. Nagshetty Shetkar

   ಖುದಾ ಹಾಫೆಜ್ ಸಲಾಂ ಬಾವ ಭಾಯಿ! ನೀವು ಕೆಂಡಸಂಪಿಗೆಯಲ್ಲಿ ಬಹಳ ಪ್ರಬುದ್ಧ ಕಮೆಂಟ್ಸ್ ಮಾಡುತ್ತಿದ್ದದ್ದು ನನಗೆ ಇಂದೂ ನೆನಪಿದೆ. ನೀವು ನಿಲುಮೆ ತಾಣಕ್ಕೆ ಬಂದು ಕಮೆಂಟ್ಸ್ ಮಾಡಬೇಕು. ಏಕೆಂದರೆ ಅಲ್ಲಿ ನಾನೊಬ್ಬನೇ ಬಲಪಂಥೀಯರನ್ನು ಎದುರಿಸಿ ವಿವೇಕ ಹುಟ್ಟಿಸುವ ಕೆಲಸ ಮಾಡುತ್ತಿದ್ದೇನೆ. ನಿಮ್ಮಂತಹ ವಿವೇಕಿಗಳು ಸಹಾಯ ಮಾಡಿದರೆ ಬಲಪಂಥೀಯ ವಾದವನ್ನು ಹತ್ತಿಕ್ಕಲು ಸಾಧ್ಯವಾಗುತ್ತದೆ.

   Reply
   1. Salam Bava

    Dear Mr.Nagshetty,ನಿಮ್ಮ ಕಳಕಳಿಯ ಅಹ್ವಾನಕ್ಕೇ ಕ್ರತ್ಝಜತೆ,ನಾನು ಕೇವಲ ಸಾಮಾನ್ಯ ಓದುಗ ಮತ್ತು ಕೆಲವೊಮ್ಮೆ ಅನ್ಯ್ಯಾಯದ ವಿರುದ್ದ ಪ್ರತಿಕಯಿಸುವ ಮತ್ತು ಪ್ರತಿಭಟಿಸುವವ.
    ನಿಮ್ಮ೦ಥ ಸಜ್ಜನರ ವಿದ್ವತ್ ಮತ್ತು ಬರವಣಿಗೆಯ ಲೇಶ ಮಾತ್ರವೂ ನನ್ನಲ್ಲಿಲ್ಲ. ಆದರೆ ನಿಮ್ಮನ್ನು ಖ೦ಡಿತವಾಗಿಯು ಪ್ರೋತ್ಸಾಹಿಸುವೆ.

    Reply

Leave a Reply

Your email address will not be published.