ಕುವೆಂಪು ರಚಿತ ಮಕ್ಕಳ ನಾಟಕಗಳು


– ರೂಪ ಹಾಸನ


 

ಕುವೆಂಪು ಅವರು ಈ ನಾಡು ಕಂಡ ಶ್ರೇಷ್ಠ ಕವಿ ಹಾಗೂ ದಾರ್ಶನಿಕ. ಇಷ್ಟೇ10156079_609745305782339_685038433_n ಆಗಿದ್ದರೆ ಅವರನ್ನು ಇಂದಿಗೂ ನೆನಪಿಸಿಕೊಳ್ಳುವ ತುರ್ತು ಇರುತ್ತಿರಲಿಲ್ಲ. ಅವರು ಸಮಕಾಲೀನ ವಿಚಾರಗಳಿಗೆ ಸ್ಪಂದಿಸುತ್ತಿದ್ದ ರೀತಿ, ಅವರ ಸಾಮಾಜಿಕ ಕಾಳಜಿ, ಬದುಕಿನ ಹಕ್ಕಿನ ಬಗೆಗೆ ಇದ್ದ ಗೌರವ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನೀಡಿದ ಮಹತ್ವ, ತುರ್ತು ಪರಿಸ್ಥಿತಿಯ ವಿರುದ್ಧ ಅವರು ವ್ಯಕ್ತ ಪಡಿಸಿದ ಆಕ್ರೋಶ….. ಹೀಗೆ ಅವರ ಇಡೀ ಬದುಕೇ ಇತರರಿಗೆ ಮಾದರಿಯಾಗಿರುವಂತದ್ದು. ಕುವೆಂಪು ಅವರ ವೈಚಾರಿಕತೆಗೆ ಇರುವ ಮುಖ್ಯ ಲಕ್ಷಣ ವೈಜ್ಞಾನಿಕ ದೃಷ್ಟಿಕೋನವಾದ್ದರಿಂದಲೇ ಅದು ಸಾರ್ವಕಾಲಿಕತೆಯನ್ನು ಪಡೆದಿದೆ. ಅವರು ಕಥೆ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ, ನಾಟಕ ಅಷ್ಟೇ ಅಲ್ಲದೇ ಮಹಾಕಾವ್ಯವನ್ನು ಬರೆದಷ್ಟೇ ಪ್ರೀತಿಯಿಂದ ಮಕ್ಕಳ ಸಾಹಿತ್ಯ ಕೃಷಿಯನ್ನೂ ಮಾಡಿರುವುದು ಅವರ ಹೆಗ್ಗಳಿಕೆಯಾಗಿದೆ.

ಸಾಮಾನ್ಯವಾಗಿ ಹಿರಿಯರ ಸಾಹಿತ್ಯ-ಚರ್ಚೆ-ಸಂವಾದಗಳಲ್ಲಿ ಮಕ್ಕಳನ್ನು ಮರೆತೇ ಬಿಟ್ಟಿರುತ್ತೇವೆ. ಮಕ್ಕಳ ಸಾಹಿತ್ಯ ಇಂದಿಗೂ ಅತ್ಯಂತ ನಿರ್ಲಕ್ಷಿತ ಕ್ಷೇತ್ರವಾಗಿದೆ. ಹಾಗೇ ಮಕ್ಕಳ ಸಾಹಿತಿಯ ಬಗೆಗೂ ಸಮಾಜದಲ್ಲಿ ಒಂದು ಬಗೆಯ ಅವಜ್ಞೆ ಮನೆಮಾಡಿದೆ. ಹಿರಿಯರಿಗಾಗಿ ಸಾಹಿತ್ಯ ರಚಿಸುವ ಹೆಚ್ಚಿನ ಸಾಹಿತಿಗಳು ಮಕ್ಕಳಿಗಾಗಿ ಸಾಹಿತ್ಯ ರಚಿಸುವುದು ಕೀಳೆಂದು ಭಾವಿಸುತ್ತಾರೆ. ಆದರೆ ನವೋದಯ ಕಾಲದ ಹಲವು ಸಾಹಿತಿಗಳು ಹಿರಿಯರಿಗಾಗಿ ಸಾಹಿತ್ಯ ರಚಿಸುವ ಜೊತೆಗೇ ಮಕ್ಕಳ ಮೇಲಿನ ಪ್ರೀತಿಯಿಂದಲೂ ಕೃತಿಗಳನ್ನು ರಚಿಸಿದ್ದು ಮೆಚ್ಚಬೇಕಾದುದು. ಅದರಲ್ಲಿ ಕುವೆಂಪು ಅವರು ಕೂಡ ಒಬ್ಬರು.

ಮಕ್ಕಳ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಗಮನಾರ್ಹವಾದುದೆಂದೇ ಹೇಳಬೇಕು. ಅವರು ರಚಿಸಿದ ಮಕ್ಕಳ ನಾಟಕಗಳು ಎರಡೇ. 1926 ರಲ್ಲಿ ಬರೆದ ‘ಮೋಡಣ್ಣನ ತಮ್ಮ’. ಅದು ಇದುವರೆಗೆ ಆರು ಮುದ್ರಣಗಳನ್ನು ಕಂಡಿದೆ. 1930 ರಲ್ಲಿ ರಚಿಸಿದ ‘ನನ್ನ ಗೋಪಾಲ’ ನಾಟಕ ಏಳು ಮುದ್ರಣಗಳನ್ನು ಕಂಡಿದೆ. ಇದಲ್ಲದೇ ಇಂಗ್ಲೀಷ್ ಕವಿ ರಾಬರ್ಟ್ ಬ್ರೌನಿಂಗ್ ನ ‘ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಯ ಪ್ರೇರಣೆಯಿಂದ ರೂಪುಗೊಂಡ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಆರ್.ಕೆ.ಲಕ್ಷ್ಮಣ್ ಅವರ ಚಿತ್ರಗಳನ್ನೊಳಗೊಂಡು ರಚಿತವಾದ ಕಥನ ಕಾವ್ಯ ಹಾಗೂ ನೀಳ್ಗಾವ್ಯವಾಗಿದ್ದು, ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘದ ಕಿರಿಯರ ಕಾಣಿಕೆಯಲ್ಲಿ 1928ರಲ್ಲಿ ಮೊದಲಿಗೆ ಪ್ರಕಟವಾಗಿ, ನಂತರದಲ್ಲಿ ಆರು ಮುದ್ರಣವನ್ನು ಕಂಡಿದೆ. ನನ್ನ ಮನೆ, ಮರಿ ವಿಜ್ಞಾನಿ, ಶಿಶು ಗೀತಾಂಜಲಿ, ಮೇಘಪುರ, ಬೆಳ್ಳಿ ಹಬ್ಬದ ಕಟ್ಟಿದ ಬಳ್ಳಿ ಎಂಬ ಶಿಶುಕಾವ್ಯ ಸಂಕಲನಗಳನ್ನು ಮಕ್ಕಳಿಗೆ ಕಾಣಿಕೆಯಾಗಿ ನೀಡಿರುವ ಕುವೆಂಪು ಅವರು, ಮೀನಾಕ್ಷಿ ಮನೆ ಮೇಷ್ಟ್ರು, ಒಂದು ಯಶಸ್ವೀ ಕಥೆ, ಸನ್ಯಾಸಿ, ಗುಪ್ತಧನ, ಧನ್ವಂತರಿ ಚಿಕಿತ್ಸೆ, ವೈರಾಗ್ಯದ ಮಹಿಮೆ, ನರಿಗಳಿಗೇಕೆ ಕೋಡಿಲ್ಲ ಎಂಬ ಕಥಾ ಸಂಕಲನಗಳನ್ನೂ ರಚಿಸಿದ್ದಾರೆ.

1926ರಲ್ಲಿ ರಚಿತವಾದ ಕುವೆಂಪು ಅವರ ಮೊದಲ ನಾಟಕ, ಹಾಗೂ ಮಕ್ಕಳ ಗೀತ ನಾಟಕವೂ ಆಗಿರುವ ‘ಮೋಡಣ್ಣನ ತಮ್ಮ’ ಮೋಡದ ಜೊತೆಗೆ modannana-tammaಆಡಲು ಬಯಸುವ ಕಿಟ್ಟು ಎಂಬ ಪುಟ್ಟ ಹುಡುಗನ ಕತೆಯಾಗಿದೆ. ಒಂಟಿಯಾಗಿರುವ ಕಿಟ್ಟುವಿಗೆ ಒಮ್ಮೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ಒಂಟಿಯಾಗಿ ತೇಲುತ್ತಿರುವ ಮೋಡವನ್ನು ನೋಡಿ ತಾನೂ ಅದರ ಜೊತೆಗೆ ಆಕಾಶಕ್ಕೆ ಹಾರಿ ಬಿಡುವ ಮನಸಾಗುತ್ತದೆ. ಅವನು ‘ಓ ಮೋಡಣ್ಣ, ಓ ಮೋಡಣ್ಣ ನಾನೂ ಬರುವೆನು ಕೈ ನೀಡಣ್ಣ’ ಎಂದು ಬೇಡಿಕೊಳ್ಳುತ್ತಾನೆ. ಆದರೆ ಮೋಡಣ್ಣನಿಗೆ ಈ ಹುಡುಗನನ್ನು ತನ್ನೊಂದಿಗೆ ಕರೆದೊಯ್ಯುವ ಮನಸಿಲ್ಲ. ಹೀಗೆಂದೇ ‘ನಿನ್ನ ತಾಯಿ ಬೈಯ್ದಾಳು’ ಎಂಬ ನೆಪವೊಡ್ಡಿ ಹುಡುಗನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಕಿಟ್ಟುವಿಗೆ ಎತ್ತರದಲ್ಲಿ ತೇಲುವ ಮೋಡ, ಅದರ ಆಟ, ಮಿಂಚನ್ನೇ ಬಳೆಯಾಗಿ ಧರಿಸಿರುವ, ಗುಡುಗಿನೊಂದಿಗೆ ಆಡುವ ಎತ್ತರೆತ್ತರದ ಬೆಟ್ಟಗಳನ್ನು ಏರುವ, ದೂರ ದೂರದ ಊರುಗಳನ್ನು ನೋಡುವ ಮೋಡದ ಬದುಕು ವಿಶಿಷ್ಟವಾದುದು ಎನ್ನಿಸಿಬಿಟ್ಟಿದೆ. ಅದಕ್ಕೆ ಮೋಡದೊಡನೆ ಹೋಗಲು ತುದಿಗಾಲಲ್ಲಿ ನಿಂತಿದ್ದಾನೆ. ಆದರೆ ಮೋಡ ಒಪ್ಪುತ್ತಿಲ್ಲ. ಹೀಗಾಗಿ ಕಿಟ್ಟು ಬೆಟ್ಟದ ಮೊರೆ ಹೋಗುತ್ತಾನೆ. ಇಡೀ ದಿನ ಬೆಟ್ಟದಲ್ಲೇ ಅಲೆವ ಕಿಟ್ಟುವಿಗೆ ಅದೂ ಒಬ್ಬ ಮಿತ್ರ. ಬೆಟ್ಟ ಕಿಟ್ಟುವಿನ ಪರವಾಗಿ ಮೋಡವನ್ನು ಬೇಡಿಕೊಳ್ಳುತ್ತದೆ. ಇಲ್ಲಿ ಕುವೆಂಪು ಅವರ ಕಲ್ಪನಾ ಶಕ್ತಿಯನ್ನು ಗಮನಿಸಬೇಕು.

ಶರಧಿಯ ನೀರನೆ ಹೊರುವಾ ನಿನಗೆ
ಕಿರಿಯವನಿವನತಿ ಭಾರವೆ, ಅಣ್ಣಾ?
ಸಿಡಿಲನು ಮಿಂಚನು ಆಳುವೆ ನೀನು
ಹುಡುಗನ ಆಳುವುದಸದಳವೇನು
ರೈತರ ನಿಂದೆಯ ಸೈರಿಪ ನೀನು
ತಾಯಿಯ ದೂರನು ಹೊಂದಿದರೇನು?

ಎನ್ನುತ್ತಾರೆ. ಆದರೆ ಮೋಡ ಇದಕ್ಕೂ ಜಗ್ಗುವುದಿಲ್ಲ. ಹತ್ತು ಕಡಲನ್ನ ಹೊತ್ತರೂ ಒಬ್ಬ ಹುಡುಗನನ್ನ ಹೊರಲಾರೆ. ರೈತರ ಗುಂಪೇ ಬೈಯ್ಯಬಹುದು, ಆದರೆ ತಾಯಿಯ ಶಾಪವನ್ನು ಸಹಿಸಲಾರೆ ಎನ್ನುತ್ತದೆ ಮೋಡ. ತಾಯಿಯ ಘನತೆಯನ್ನೂ ಈ ಮೂಲಕ ಕುವೆಂಪು ಅವರು ಸೂಕ್ಷ್ಮದಲ್ಲೇ ಎತ್ತಿ ಹಿಡಿಯುತ್ತಾರೆ. ಮತ್ತೆ ಮತ್ತೆ ಕಿಟ್ಟು ಮೋಡವನ್ನು ಬೇಡಿಕೊಳ್ಳುತ್ತಾನೆ. ಮೋಡದ ಮನೆಯಲ್ಲಿ ಉಳಿಯಲು ಕೊಡೆ, ಕಂಬಳಿ, ಹಾಸಿಗೆ, ಹೊದಿಕೆ ಎಲ್ಲವನ್ನೂ ತರುತ್ತೇನೆ ಒಂದೇ ದಿನ ಉಳಿದು ವಾಪಸ್ ಬಂದು ಬಿಡುತ್ತೇನೆ ಎನ್ನುತ್ತಾನೆ. ಮೋಡದಲ್ಲಿ ಹುಲಿ, ರಾಕ್ಷಸರು, ದೊಡ್ಡ ಊರುಗಳನ್ನು, ಕುರಿಗಳ ಹಿಂಡು, ಹೊಳೆ, ತೊರೆ, ಕಡಲು, ದಟ್ಟಡವಿಗಳನ್ನು ಕಾಣುತ್ತಿದ್ದೇನೆ ಎನ್ನುವ ಕಿಟ್ಟುವಿನ ಕಣ್ಣಿನ ಮೂಲಕ ಕುವೆಂಪು ಅವರು ಮಕ್ಕಳ ಮುಗ್ಧ ಕಾಲ್ಪನಿಕ ಹಾಗೂ ಭಾವುಕ ಜಗತ್ತನ್ನು ಕಟ್ಟಿಕೊಡುತ್ತಾರೆ. ನಂತರ ಕಿಟ್ಟು ಕಾಡನ್ನು ತನ್ನ ಪರವಾಗಿ ಮೋಡದ ಬಳಿ ಬೇಡಿಕೊಳ್ಳಲು ತಿಳಿಸುತ್ತಾನೆ. ಆದರೆ ಕಾಡಿಗೆ ಇಡೀ ಮನುಜ ಕುಲದ ಬಗ್ಗೆಯೇ ಅಸಹನೆ. ಮರಗಳನ್ನು ಕಡಿದು ಕಾಡನ್ನು ನಾಶಪಡಿಸುತ್ತಿರುವ, ಹೊಸ ಕಾಡನ್ನು ರೂಪಿಸಲು ಸಿದ್ಧವಿಲ್ಲದ ಮನುಷ್ಯರ ಸಂತತಿಯ ಕಿಟ್ಟುವನ್ನೂ ನಿನ್ನೊಂದಿಗೆ ಕರೆದೊಯ್ಯ ಬೇಡ ಎಂದು ಹೇಳುವ ಕಾಡಿನ ಮೂಲಕ, ಕಾಡಿನ ಮೂಕ ನೋವುಗಳ ಎಲ್ಲ ಮುಖಗಳನ್ನೂ ಕುವೆಂಪು ಅನಾವರಣಗೊಳಿಸುತ್ತಾ ಮಕ್ಕಳ ಮನಸಿನಲ್ಲಿ ಪ್ರಕೃತಿ ಪ್ರೀತಿಯನ್ನೂ ಮೂಡಿಸುವ ಪ್ರಯತ್ನ ಮಾಡುತ್ತಾರೆ.

ಪುರಾಣದಲ್ಲಿ ಚರ್ಚಿತವಾದ ಮೋಡದ ಕುರಿತ ವಿವರಗಳು, ಲೌಕಿಕ ಜಗತ್ತಿನ ವಿವರಗಳನ್ನು ಒಳಗೊಂಡಂತೆ, ಮೋಡದ ಬಾಯಿಂದ ಮಕ್ಕಳಿಗೆ ನೈತಿಕತೆಯ ಪಾಠವನ್ನು ಹೇಳಿಸುವುದನ್ನೂ ಇಲ್ಲಿ ಕಾಣುತ್ತೇವೆ. ಆದರ್ಶ ಪುರುಷರನ್ನೆಲ್ಲಾ ಕಿಟ್ಟುವಿಗೆ ಹೋಲಿಸಿ ಅವರಂತೆ ನೀನೂ ಆಗಬೇಕೆಂದು ಮೋಡ ಹಾರೈಸುತ್ತದೆ. ಅಷ್ಟರಲ್ಲಿ ಅವನ ತಾಯಿ ಕರೆಯುತ್ತಾಳೆ. ಮೋಡದ ಬಳಿ ಕಿಟ್ಟುವಿನ ಬೇಡಿಕೆಯೂ ಕರಗಿರುತ್ತದೆ. ಅವನು ಸಂತೋಷದಿಂದ ಮೋಡವನ್ನು ಬೀಳ್ಗೊಡುತ್ತಾನೆ ಎಂಬಲ್ಲಿಗೆ ನಾಟಕ ಮುಗಿಯುತ್ತದೆ. ನಾಟಕದ ಓದಿಗಿಂತ, ಅಭಿನಯದ ಮೂಲಕ ನಾಟಕ ಹೆಚ್ಚು ಸಮರ್ಥವೂ ಸಾರ್ಥಕವೂ ಆಗುವುದು ನಿಜ. ಅಲ್ಲಲ್ಲಿ ಕೆಲವು ಮುಖ್ಯ ತಿದ್ದುಪಡಿಯೊಂದಿಗೆ ಈ ‘ಮೋಡಣ್ಣನ ತಮ್ಮ’ ನಾಟಕದ ಕೆಲವು ಯಶಸ್ವಿ ರಂಗ ಪ್ರಯೋಗಗಳೂ ಆಗಿವೆ ಎಂದು ಕೇಳಿದ್ದೇನೆ.

ಇನ್ನು ಕುವೆಂಪು ಅವರ ಎರಡನೆಯ ಮಕ್ಕಳ ನಾಟಕ 1930 ರಲ್ಲಿ ರಚಿತವಾದ ‘ನನ್ನ ಗೋಪಾಲ’. nanna-gopalaಇದರಲ್ಲಿ ದೇವರು ಮಗುವಿನ ಮುಗ್ಧತೆಗೆ ಒಲಿಯುತ್ತಾನೆ, ಕರ್ಮಠರಿಗಲ್ಲ ಎಂಬ ಸಂದೇಶವಿದೆ. ಬಡ ವಿಧವೆ ತಾಯಿಯೊಡನೆ ಕಾಡಿನ ಅಂಚಿನಲ್ಲಿ ವಾಸಿಸುವ ಬಾಲಕ ಗೋಪಾಲ, ಶಾಲೆಗೆ ಕಾಡನ್ನು ದಾಟಿ ಹೋಗ ಬೇಕಾದ ಅನಿವಾರ್ಯತೆ ಇದೆ. ಶ್ರೀಮಂತರ ಮನೆಯ ಮಕ್ಕಳಿಗೆ ಕಾಡನ್ನು ದಾಟಿ ಹೋಗಲು ಆಳುಗಳು ಜೊತೆಗಿದ್ದಾರೆ. ಕೃಷ್ಣನಲ್ಲಿ ನಿಷ್ಕಲ್ಮಶ ಭಕ್ತಿ ಇರುವ ಗೋಪಾಲನ ತಾಯಿ ತನ್ನ ಮಗನ ಜವಾಬ್ದಾರಿಯನ್ನು ಅವನಿಗೇ ವಹಿಸಿ ನಿಶ್ಚಿಂತಳಾಗಿದ್ದಾಳೆ. ಕಾಡಿನಲ್ಲಿ ಹೆದರಿಕೆಯಾದಾಗಲೆಲ್ಲ ಬಾಲಕ ಗೋಪಾಲ, ತನ್ನ ಅಣ್ಣನೆಂದು ತಾಯಿ ಹೇಳಿಕೊಟ್ಟ ಕೃಷ್ಣನನ್ನೇ ಕರೆದು ತನ್ನ ಭಯವನ್ನು ಹಂತ ಹಂತವಾಗಿ ಮೀರುತ್ತಲೇ ಕೃಷ್ಣನೊಂದಿಗೆ ಆಪ್ತತೆ ಮೂಡಿಬಿಡುತ್ತದೆ. ತಾಯಿಗೂ ಇದನ್ನು ತಿಳಿದು ಅತ್ಯಂತ ನಿರಾಳತೆ. ಕುವೆಂಪು ಅವರು ಬಾಲ್ಯವನ್ನು ವಿಶೇಷ ದೃಷ್ಟಿಯಿಂದ ಇಲ್ಲಿ ವಿವರಿಸಿದ್ದಾರೆ. ಮಗುವಿನ ಮನಸ್ಸನ್ನು ಹೊಕ್ಕು ಅದರ ಮನಸ್ಸಿನಲ್ಲಿ ಇರುವ ಬಾಲ್ಯ ಸಹಜವಾದ ಕುತೂಹಲ, ತಳಮಳ, ಆತಂಕಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕಾಡಿನಲ್ಲಿನ ಕೃಷ್ಣ ಹಾಗು ಗೋಪಾಲರ ಆತ್ಮೀಯ ಮಾತುಕತೆಗಳಲ್ಲಿ ಮಕ್ಕಳ ಮುಗ್ಧ ಲೋಕದ ಅನಾವರಣವಿದೆ. ಗೋಪಾಲನ ಕುತೂಹಲದ ಪ್ರಶ್ನೆಗಳು ಹಾಗೂ ಕೃಷ್ಣನ ಸಮಂಜಸ ಉತ್ತರಗಳಲ್ಲಿ ಲೋಕದ ಎಲ್ಲ ವ್ಯಾಪಾರಗಳೂ ಮಗುವಿನ ನಿರ್ಮಲ ಮನಸ್ಸಿನ ಒಳತೋಟಿಯನ್ನು ಹಿಡಿದೇ ಚಲಿಸುತ್ತವೆ. ಶಾಲೆಯ ಗುರುಗಳು ತಮ್ಮ ಮನೆಯಲ್ಲಿ ವಿಶೇಷ ಮಂಗಳ ಕಾರ್ಯ ನಡೆಯುವುದೆಂದು ಗುರುದಕ್ಷಿಣೆ ನೀಡಬೇಕೆಂದು ಶಿಷ್ಯರಲ್ಲಿ ಕೇಳಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಗೋಪಾಲನ ತಾಯಿ ತನ್ನ ಬಳಿ ಕೊಡಲು ಏನೂ ಇಲ್ಲವೆಂದು ಅಣ್ಣನೆಂದೇ ತಿಳಿದ ಬನದ ಕೃಷ್ಣನಲ್ಲೇ ಕಾಣಿಕೆ ಕೇಳೆಂದು ಹೇಳುತ್ತಾಳೆ. ಕೃಷ್ಣ ಒಂದು ಕುಡಿಕೆಯಲ್ಲಿ ಮೊಸರು ಕೊಟ್ಟು ಕಳಿಸುತ್ತಾನೆ. ಶ್ರೀಮಂತರ ಮನೆಯ ಮಕ್ಕಳೆಲ್ಲ ಬೆಲೆ ಬಾಳುವ ವಸ್ತುಗಳನ್ನು ಕಾಣಿಕೆಯಾಗಿ ತಂದಿದ್ದು, ಅವರೆಲ್ಲ ಗೋಪಾಲನ ಕುಡಿಕೆಯ ಮೊಸರನ್ನು ತಮಾಷೆಯಾಗಿ ಆಡಿಕೊಂಡು ನಗುವ ಚಿತ್ರಣವನ್ನು ಕುವೆಂಪು ಅವರು ಅತ್ಯಂತ ಸಹಜವಾಗಿ ಮಕ್ಕಳ ತುಂಟ ಮನಸಿನಾಳವನ್ನು ಅರಿತವರಂತೆ ಚಿತ್ರಿಸಿದ್ದಾರೆ.

ಕುಡಿಕೆಯ ಮೊಸರು ಪಾತ್ರೆಗೆ ಎಷ್ಟು ಸುರಿದರೂ ಮತ್ತೆ ಮತ್ತೆ ತುಂಬುವ ಕಾಲ್ಪನಿಕತೆಯನ್ನೂ ಮಕ್ಕಳ ಮನೋಲೋಕದ ಪರಿಧಿಗೆ ಹಿಗ್ಗಲಿಸಿ ಕಟ್ಟಿಕೊಡುವ ಕುವೆಂಪು ಅವರು ಗುರುಗಳ ಮೂಲಕ ಗೋಪಾಲನ ತಾಯಿಯ ಹಿರಿಮೆಯನ್ನು ಕುರಿತು ಹೇಳಿಸುತ್ತಾ ಇಡೀ ವಿಶ್ವದ ತಾಯಂದಿರ ಹೃದಯ ವೈಶಾಲ್ಯತೆಯನ್ನೇ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಕೊನೆಯ ಅಂಕದಲ್ಲಿ ಗೋಪಾಲ ಮತ್ತು ಗುರುಗಳೊಂದಿಗೆ ಅ ಅಕ್ಷಯ ಮೊಸರನ್ನು ಕೊಟ್ಟ ಬನದ ಕೃಷ್ಣನನ್ನು ನೋಡಲು ಎಲ್ಲ ಹುಡುಗರೂ ಹೋಗುತ್ತಾರೆ. ಗೋಪಾಲ ಎಷ್ಟು ಕರೆದರೂ ಕೃಷ್ಣ ಕಾಣಿಸದಿದ್ದಾಗ, ಅವನು ದರ್ಶನ ತೋರುವಂತೆ ಕೃಷ್ಣನಲ್ಲಿ ಕಣ್ಣು ತುಂಬಿ ಬೇಡಿಕೊಳ್ಳುತ್ತಾನೆ. ಕೊನೆಗೆ ಅವನ ದನಿಯಷ್ಟೇ ಕೇಳುತ್ತದೆ, ಅವನು ಪ್ರತ್ಯಕ್ಷನಾಗುವುದಿಲ್ಲ. ಈ ಮೂಲಕ ಗೋಪಾಲ ಮತ್ತು ಅವನ ತಾಯಿಯ ಪ್ರಾಮಾಣಿಕ ಭಕ್ತಿ ಮತ್ತು ಪ್ರೀತಿಗಳು ಗೆಲ್ಲುವುದನ್ನು ಕುವೆಂಪು ಅವರು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ. ಹಾಗೇ ಈ ನಾಟಕ ಪುರಾಣ ಪ್ರತಿಮೆಯ ಪುನರ್ ಸೃಷ್ಟಿಯನ್ನು ಮಾಡುತ್ತಾ ಮನಸ್ಸಿನ ಅಂತರ್ ದೃಷ್ಟಿಯ ಕಡೆಗೆ ಒತ್ತು ಕೊಡುವುದನ್ನು ಕಾಣುತ್ತೇವೆ. ಈ ನಾಟಕವೂ ಯಶಸ್ವಿ ರಂಗ ಪ್ರಯೋಗವನ್ನು ಕಂಡು ಮಕ್ಕಳ ಮನಸನ್ನು ಗೆದ್ದಿದೆ.

‘ನನ್ನ ಗೋಪಾಲ’ ನಾಟಕವನ್ನು ಓದಿದ ಶ್ರೀ ಎ. ಆರ್, ಕೃಷ್ಣಶಾಸ್ತ್ರಿಗಳು ಕುವೆಂಪು ಅವರಿಗೆ ಬರೆದ ಪತ್ರದಲ್ಲಿ “ನಿಮ್ಮ ‘ನನ್ನ ಗೋಪಾಲ’ನಾಟಕ ಭಗವದ್ಗೀತೆ ಮತ್ತು ಭಾಗವತ ಎರಡರ ಸಾರಸರ್ವಸ್ವವನ್ನೂ ತನ್ನಲ್ಲಿ ಒಳಗೊಂಡಿರುವ ಒಂದು ಪುಟ್ಟ ಅನಘ್ರ್ಯ ರತ್ನ. ಕಣ್ಣೀರು ತುಂಬಿ ಅದನ್ನು ಓದಿದ್ದೇನೆ.” ಎನ್ನುತ್ತಾರೆ. ಬಹುಶಃ ಇದು ಕುವೆಂಪು ಅವರ ನಾಟಕಕ್ಕೆ ಸಿಕ್ಕ ಬಹು ದೊಡ್ಡ ಮೆಚ್ಚುಗೆ. ಆದರೆ ಈ ಎರಡೂ ಮಕ್ಕಳ ನಾಟಕದಲ್ಲಿ ಇರಲೇಬೇಕಾದ ರಂಜನೆ ಹಿಡಿದಿಡುವಂತಹ ಗುಣಕ್ಕಿಂತಾ ಹೆಚ್ಚಾಗಿ ಉಪದೇಶಾತ್ಮಕ, ಆದರ್ಶಮಯ ನೆಲೆಯಲ್ಲಿ ಚಿತ್ರಿತವಾಗಿದೆ. ಇಂದಿನ ಮಕ್ಕಳಿಗೆ 80-90 ವರ್ಷಗಳ ಹಿಂದೆ ರಚಿತವಾದ ಕುವೆಂಪು ಅವರ ಈ ನಾಟಕಗಳು ಹೇಗೆನ್ನಿಸುತ್ತದೆ ಎಂದು ತಿಳಿದುಕೊಳ್ಳಲೆಂದೇ ಈ ನಾಟಕಗಳನ್ನು ನಮ್ಮ ಮಕ್ಕಳ ಸಂಸ್ಥೆ ಪ್ರೇರಣಾ ವಿಕಾಸ ವೇದಿಕೆಯ ಸಾಹಿತ್ಯಾಸಕ್ತ ಮಕ್ಕಳಿಗೆ ಓದಲು ನೀಡಿದ್ದೆ. ಅವರು ಅದರ ಒಟ್ಟು ಕಥೆಯ ಸಾರಾಂಶವನ್ನು ಇಷ್ಟಪಟ್ಟರೂ ಅದರಲ್ಲಿ ತಮ್ಮನ್ನ ಕಾರ್ಟೂನು ಅಥವಾ ಮಕ್ಕಳ ಇತ್ತೀಚೆಗಿನ ನಾಟಕ ಹಾಗೂ ಮಕ್ಕಳ ಟಿವಿ ಶೋಗಳು ಹಿಡಿದಿಡುವಂತೆ ಹಿಡಿದಿಡಲ್ಲ ಎಂದು ಆರೋಪಿಸಿದರು. ಒಂದಿಷ್ಟು ನೀರಸವಾಗಿದೆ ಎಂಬ ಆಕ್ಷೇಪವನ್ನೂ ಮಾಡಿದರು. ಅದೂ 8 ರಿಂದ 10-12 ವರ್ಷದ ಮಕ್ಕಳಿಗಷ್ಟೇ ಇಂತಹ ಮುಗ್ಧ ಲೋಕದ ಕಥೆಗಳು ಇಷ್ಟವಾಗುತ್ತವೆಯೇ ಹೊರತು ಅದಕ್ಕಿಂತಾ ದೊಡ್ಡ ಮಕ್ಕಳಿಗೆ ಇಂತಹ ಭಾವುಕ ಕಥಾ ಹಂದರ ಹಿಡಿಸುವುದಿಲ್ಲ. ಆದರೆ ‘ಕಿಂದರಿ ಜೋಗಿ’ಯನ್ನು ಮಕ್ಕಳು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಈ ನೀಳ್ಗಾವ್ಯ ಸಶಕ್ತವಾಗಿ ಮಕ್ಕಳ ಮನಸ್ಸನ್ನು ಗೆಲ್ಲಲು ಸಫಲವಾಗಿದೆ ಎಂದೇ ಹೇಳಬೇಕು.

ಅವರ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಮಕ್ಕಳ ಕಥನಕಾವ್ಯವಾದರೂ ಅದು ತನ್ನ 7325e9bab174325596e65326641444341587343ನಾಟಕೀಯ ಗುಣಗಳಿಂದ ಅದ್ಭುತ ನಾಟಕವಾಗಿ ಮಾರ್ಪಟ್ಟಿದೆ. ಈ ಕಥೆಯ ಭಾಷೆಯ ಲಾಲಿತ್ಯ ಎಂಥಹಾ ಅರಸಿಕ ಮಗುವನ್ನೂ ಹಿಡಿದಿಡುವಷ್ಟು ಸಶಕ್ತವಾಗಿದೆ. ಕಿಂದರಿಜೋಗಿ ಈ ಹೊತ್ತಿಗೂ ಮಕ್ಕಳನ್ನು ಬೆರಗುಗೊಳಿಸುವ ಸಾಮರ್ಥ್ಯ ಹೊಂದಿದೆ. ಅದರ ಕಥಾ ಹಂದರ, ಸ್ವಾರಸ್ಯಕರ ನಿರೂಪಣೆ, ತಮಾಷೆಯ ಪ್ರಸಂಗಗಳು ಎಲ್ಲವೂ ಮನವನ್ನು ಸೆಳೆಯುತ್ತವೆ. ಇದು ವಿದೇಶಿ ಕಥೆಯ ರೂಪಾಂತರವಾದರೂ ನಮ್ಮ ಸಾಮಾಜಿಕ ಪರಿಸರದಲ್ಲಿಯೇ ಸಂಭವಿಸಿದಂತೆ, ಕನ್ನಡ ನಾಡಿನ ಮಣ್ಣಿನ ಹದವನ್ನು ತುಂಬಿ ಕುವೆಂಪು ಅವರ ಕಥನ ಸಾಮರ್ಥ್ಯದ ಮೂಲಕ ಪುನರ್ ಸೃಷ್ಟಿಯಾಗಿದೆ. ಇದು ಮೇಲ್ನೋಟಕ್ಕೆ ಮಕ್ಕಳ ನೀತಿ ಕಥೆಯಂತೆ ಕಂಡರೂ ಅದರೊಳಗೆ ಮಕ್ಕಳ ಮನೋಲೋಕವನ್ನು ವಿಸ್ತರಿಸುವ ಕಾಲ್ಪನಿಕ ಜಗತ್ತು ಅದ್ಭುತವಾಗಿ ಹೆಣೆದುಕೊಂಡಿದೆ.

ಕುವೆಂಪು ಅವರು ಈ ಕವಿತೆಯನ್ನು ಮೊದಲಿಗೆ ಶಿವಮೊಗ್ಗದ ಸಭೆಯೊಂದರಲ್ಲಿ ವಾಚಿಸಿದಾಗ ಪ್ರತಿ ನುಡಿಗೂ ದೀರ್ಘ ಕರತಾಡನದ ಪ್ರತಿಕ್ರಿಯೆ ದೊರಕಿತ್ತಂತೆ. ಮಕ್ಕಳಿಗೆ ಇಲಿಗಳ ದೊಡ್ಡ ಬಳಗದ ಕತೆ, ಅವುಗಳ ಅಸಾಧ್ಯ ಚೇಷ್ಟೆ ಖಂಡಿತಾ ರಂಜನೆಯ ಸಂಗತಿಯೇ. ಕಿನ್ನರಿಯ ನಾದಕ್ಕೆ ಇದ್ದಕ್ಕಿದ್ದ ಹಾಗೆ ಎಲ್ಲ ಅವನನ್ನು ಹಿಂಬಾಲಿಸುವುದು, ನೀರಲ್ಲಿ ಮುಳುಗಿ ಹೋಗುವುದು, ಹಾಗೇ ಮಕ್ಕಳೆಲ್ಲಾ ಹಿಂಬಾಲಿಸುವುದು, ಬೆಟ್ಟ ಬಾಯ್ದೆರೆದು ಅವರೆಲ್ಲಾ ಅದರೊಳಗೆ ಹೋಗಿಬಿಡುವುದು, ಅವಾಸ್ತವದ ಸಂಗತಿಗಳಾಗಿಯೂ ಬಾಲ ಮನಸ್ಸಿನ ಕುತೂಹಲವನ್ನು, ಅಚ್ಚರಿಯನ್ನು ಇಮ್ಮಡಿಗೊಳಿಸುತ್ತದೆ. ಹೀಗಾಗಿಯೇ ಮಕ್ಕಳಿಗೆ ಇದು ಹಿಡಿಸಿದೆ ಮತ್ತು ಮುದಗೊಳಿಸಿದೆ.

ಬಾಲ್ಯದ ಕುರಿತು, ಕಳೆದುಹೋದ ಆ ಸಮಯದ ಕುರಿತು ಮರಳಿ ಅದನ್ನು ಪ್ರಕೃತಿಯ ಮಡಿಲಲ್ಲಿ ಪಡೆಯುವ ಕುರಿತು ಕುವೆಂಪು ಅವರು ಹಲವು ನಾಟಕಗಳಲ್ಲಿ ಬರೆಯುತ್ತಾ ಬಾಲ್ಯದ ಕುರಿತ ತಮ್ಮ ಅತ್ಯಂತ ಸಂತಸದ ಸಂಗತಿಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಬಾಲ್ಯ ಒಂದು ಅಪರೂಪದ ಸಮಯ, ಮತ್ತೆಂದೂ ಸಿಗಲಾರದೇ ಹೋಗಿ ಬಿಡುತ್ತದೆ ಎಂಬ ಲಹರಿಯೊಂದಿಗೆ, ಬಾಲ್ಯವನ್ನು ದೈವೀಕವಾಗಿ ಕಾಣುವ ಕಣ್ಣು ನಮಗೆ ಕುವೆಂಪು ಅವರ ಎಲ್ಲ ಮಕ್ಕಳ ಸಾಹಿತ್ಯದಲ್ಲೂ ಸಿಗುತ್ತದೆ. ಬಾಲ್ಯವೆಲ್ಲ ಬದುಕಿನ ತಯಾರಿಗಾಗಿ ಸಿದ್ಧಗೊಳಿಸುವ ಹಂತವಾಗಿ ಕಾಣದೇ ಅದರಲ್ಲಿಯೂ ಒಂದು ಬಗೆಯ ಪರಿಪೂರ್ಣತೆಯನ್ನು ಕಾಣುವ ಬಗೆ ಇಲ್ಲೆಲ್ಲ ಗೋಚರಿಸುತ್ತದೆ.

ತಾಯಿ, ಮಗು ಮತ್ತು ಪ್ರಕೃತಿಯ ನಡುವಿನ ಸಂಬಂಧದ ಗಾಢತೆ ಹಾಗೂ ನಿಗೂಢತೆ ಪ್ರಕೃತಿ ಸಹಜವಾದರೂ ಅಪರೂಪದ ಭಾವಲೋಕಕ್ಕೆ ಕರೆದೊಯ್ಯುವ ಶಕ್ತಿ ಕುವೆಂಪು ಅವರಿಗಿದೆ. ಹೀಗೆಂದೇ ಅವರು ರಚಿಸಿದ ಮಕ್ಕಳ ಕಥೆ, ಕವಿತೆ, ನಾಟಕಗಳಲ್ಲೆಲ್ಲಾ ಈ ಬಗೆಯ ಭಾವ ಲೋಕವನ್ನು ಕಾಣುತ್ತೇವೆ. ಮಕ್ಕಳ ಮನೋರಂಗದ ಸಹಜವಾದ ಹರಿವು ಮತ್ತು ಪರಕಾಯ ಪ್ರವೇಶದ ಸಾಧ್ಯತೆಯನ್ನು ಅವರ ಇಂತಹ ಅಭಿವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ನೈಜವಾಗಿ ಎಲ್ಲ ಮಕ್ಕಳಲ್ಲಿ ಕಾಣುವ ಮನೋಲೋಕದ ಭಾವಲಹರಿಗಳು ಈ ಎರಡು ಮಕ್ಕಳ ನಾಟಕಗಳಲ್ಲೂ ಕೆಲಸ ಮಾಡಿದೆ. ಅವರ ಅನೇಕ ಮಕ್ಕಳ ಕಥೆಗಳಲ್ಲೂ ನಾಟಕೀಯ ಗುಣವಿರುವುದರಿಂದ ಅವೂ ಕೂಡ ಯಶಸ್ವಿಯಾಗಿ ನಾಟಕಗಳಾಗಿ ಪರಿವರ್ತನೆ ಹೊಂದಿ ಪ್ರದರ್ಶನಗೊಳ್ಳಲು ಸಾಧ್ಯವಾಗಿದೆ. ಆದರೆ ಮಕ್ಕಳ ರಂಗ ಸಾಧ್ಯತೆಗಳು ಇಂದಿಗೂ ಕೆಲವು ಪ್ರಮುಖ ಪಟ್ಟಣಗಳಿಗಷ್ಟೇ ಸೀಮಿತವಾಗಿರುವುದರಿಂದ, ಅವುಗಳನ್ನು ಹೊರತು ಪಡಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕುವೆಂಪು ಅವರ ನಾಟಕಗಳು ಸಾಹಿತ್ಯವಾಗಿಯಷ್ಟೇ ತಲುಪುವುದೂ ಅವರ ಕಲ್ಪನೆಯ ಪರಿಧಿಯನ್ನು ವಿಸ್ತರಿಸಲು ಇರುವ ಒಂದು ತೊಡಕು ಎಂದು ನಾನು ಭಾವಿಸುತ್ತೇನೆ.

ಕುವೆಂಪು ಅವರಿಗೆ ಮಕ್ಕಳ ಬಗೆಗಿದ್ದ ಅನನ್ಯ ಪ್ರೀತಿಯ ಹಾಗೂ ಅವನು ದೊಡ್ಡವನಾಗುತ್ತಾ ಹೋದಂತೆ ದುರ್ಗುಣಗಳು ಬೆಳೆಯುತ್ತಾ ಪಶುವಾಗುವ ವಿಪಯರ್ಯಾಸವನ್ನು ಕುರಿತು ರಚಿಸಿದ ಈ ಪುಟ್ಟ ಕವಿತೆಯನ್ನು ಓದಿ,

ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ತೃತ ನಾಕದಲಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು
ಹಾಡಲಿ ಕುಣಿಯಲಿ ಹಾರಲಿ ಏರಲಿ
ದಿವಿಜತ್ವಕೆ ಈ ಮನುಜ ಪಶು.

ಮನುಷ್ಯ ಮಗುವಾದರೆ ಅಥವಾ ಮಗುವಿನ ಮುಗ್ಧತೆ ಉಳಿಸಿಕೊಂಡರೆ ಸಾಕು ಅವನು ದೇವರಿಗೆ ಸಮಾನ ಎಂಬ ಕುವೆಂಪು ಅವರ ಕಲ್ಪನೆ ನಿಜಕ್ಕೂ ಇಂದಿನ ಕ್ಷುದ್ರಗೊಂಡ ಬದುಕಿಗೆ ಅತ್ಯಂತ ಅವಶ್ಯಕ ಎಂದು ಭಾವಿಸುವೆ.

5 thoughts on “ಕುವೆಂಪು ರಚಿತ ಮಕ್ಕಳ ನಾಟಕಗಳು

 1. Nagshetty Shetkar

  “ಕುವೆಂಪು ಅವರು ಈ ನಾಡು ಕಂಡ ಶ್ರೇಷ್ಠ ಕವಿ ಹಾಗೂ ದಾರ್ಶನಿಕ”

  ಆದರೂ ಅವರು ವಚನ ಸಾಹಿತ್ಯದ ಬಗ್ಗೆ ಗಮನವೇ ಹರಿಸಲಿಲ್ಲ ಎಂಬುದು ನನಗೆ ಬಹಳ ಬೇಸರದ ವಿಚಾರ.

  Reply
 2. Harshitha

  I liked this so much that l am trying to continue this great readings about kuvempu
  It inspired me to a great extent

  Reply

Leave a Reply

Your email address will not be published.