ಫ್ಯಾಸಿಸಂ ಶೈಲಿ – ಸೆಕ್ಯುಲರಿಸಂ ಅಥವಾ ಅಭಿವೃದ್ಧಿ ಇವೆರಡರಲ್ಲಿ ಯಾವುದು ಬೇಕು ?


-ಬಿ. ಶ್ರೀಪಾದ್ ಭಟ್


ಲೇಖಕಿ ಅನನ್ಯ ವಾಜಪೇಯಿಯವರು ರಾಜಕೀಯ ವಿಶ್ಲೇಷಣೆ ಮಾಡುತ್ತಾ “ಇತ್ತೀಚಿನ ದಿನಗಳಲ್ಲಿ ಬಹುಪಾಲು ಮಾಧ್ಯಮಗಳು ಮತ್ತು ಚಿಂತಕರು ಸ್ವಯಂಪ್ರೇರಿತರಾಗಿ ಮೋದಿ ಬದಲಾಗಿದ್ದಾರೆ, ಒಂದು ಕಾಲದ ಹಿಂದುತ್ವದ ಪ್ರತಿಪಾದಕ, ಕಟ್ಟಾ ಬಲಪಂಥೀಯರಾಗಿದ್ದ ಮೋದಿ ಇಂದು rightist centre  ಕಡೆಗೆ ವಾಲುತ್ತಿದ್ದಾರೆ ಎಂದು ಹೇಳಿಕೆ ಕೊಡುತ್ತಿದ್ದಾರೆ.  ಮೋದಿ ಭೂತಕಾಲದಲ್ಲಿ ವರ್ತಿಸಿದಂತೆ ಇನ್ನುಮುಂದೆ ಭವಿಷ್ಯದಲ್ಲಿ ವರ್ತಿಸುವುದಿಲ್ಲ ಎಂದು ನಂಬಿಸಲು ಹರಸಾಹಸಪಡುತ್ತಿದ್ದಾರೆ. ಇಂದಿನ ಮತ್ತು ಭವಿಷ್ಯದ ನರೇಂದ್ರ ಮೋದಿ ಧಾರ್ಮಿಕ ಮತ್ತು ಕೋಮುವಾದದ ರಾಜಕಾರಣವನ್ನು ಕೈಬಿಟ್ಟು ಅಭಿವೃದ್ಧಿ ಮತ್ತು ಆರ್ಥಿಕ ರಾಜಕಾರಣವನ್ನು ಮಾಡಲಿದ್ದಾರೆ ಎಂದೂ ಸಹ ಹೇಳುತ್ತಿದ್ದಾರೆ. ಒಂದು ಕಾಲದ ಮೋದಿಯ ಕ್ರೆಡಿಬಲಿಟಿಯನ್ನು ಶಂಕಿಸುವವರೂ ಇಂದು ಬಹಿರಂಗವಾಗಿ ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ರಾಜಕೀಯ ಅಭಿಮತಗಳನ್ನು, ವಿಶ್ಲೇಷಣೆಗಳನ್ನು ರಾಜಕೀಯ ನಿರ್ಣಯಗಳು ಸಂಪೂರ್ಣವಾಗಿ ಹೈಜಾಕ್ ಮಾಡಿವೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಕೋಮುವಾದಿ ನಡೆಗಳನ್ನು ಅಪಾಯಕಾರಿಯಲ್ಲದ ಬಲಪಂಥೀಯ ಮಾರ್ಗಗಳೆಂದು ನಂಬಿಸಲಾಗುತ್ತಿದೆ. ಮೌನವನ್ನು ವಿರೂಪಗೊಳಿಸಿ ಮುಗ್ಧತೆಗೆ ಸಾಕ್ಷಿಯಾಗಿ ಬಳಸಲಾಗುತ್ತಿದೆ. ಕಲ್ಪಿತ, ಊಹಪೋಹದ, ಕಟ್ಟುಕತೆಯ ಅಂಕಿಸಂಖ್ಯೆಗಳನ್ನು, ಹುಸಿಯಾದ ಅಭಿವೃದ್ಧಿ ಮಾದರಿಗಳನ್ನು ಬಳಸುತ್ತಾ ಇವೆಲ್ಲವೂ ಅಲ್ಪಸಂಖ್ಯಾತರ ಓಲೈಕೆಗೆ, ಸೂಡೋ ಸೆಕ್ಯುಲರಿಸಂಗೆ ಪರ್ಯಾಯ ಶಕ್ತಿಗಳು ಎಂದು ಪದೆ ಪದೇ ಸಮರ್ಥಿಸಿಕೊಳ್ಳುತ್ತಿದ್ದಾರೆ” ಎಂದು ಬರೆದಿದ್ದಾರೆ. ಇದು ಗೋಬೆಲ್ಸ್ ತಂತ್ರ. ಫ್ಯಾಸಿಸಂ ಅನ್ನು ವ್ಯವಸ್ಥೆಯೊಳಗಡೆ ಪ್ರಜೆಗಳ ಅನುಮತಿಯೊಂದಿಗೇ ಪ್ರತಿಷ್ಠಾಪಿಸುವ ಅಥವಾ ಹಾಗೆಂದು ನಂಬಿಸುವ ತಂತ್ರ.

ಆದರೆ ವಾಸ್ತವದಲ್ಲಿ  ಮೋದಿಯ ನವ ಸಮರ್ಥಕರು ಎಷ್ಟೇ ಸಮಜಾಯಿಷಿ ನೀಡಿದರೂ ಹುಲಿ ತನ್ನ ಪಟ್ಟೆಗಳನ್ನು ಬದಲಿಸುತ್ತಿಲ್ಲ. ಮತ್ತೆ ಮತ್ತೆ ಫ್ಯಾಸಿಸಂನ ಕೋಮುವಾದಿ ಶೈಲಿಗೆ ಮೋದಿ ಮರಳುತಿದ್ದಾರೆ. ಒಂದೆಡೆ ನಿಜವಾದ ಸರ್ಕಾರವೆಂದರೆ ಅದು ಧರ್ಮವೆಂದೂ, ಸಂವಿಧಾನವು ಪವಿತ್ರ ಗ್ರಂಥವೆಂದೂ, ಸಾರ್ವಜನಿಕ ಸೇವೆಯನ್ನು ಪೂಜೆಯೆಂದೂ ವೈಭವೀಕರಿಸಿ ಮಾತನಾಡಿದರೆ ಇನ್ನೊಂದೆಡೆ  ‘ಹೌದು ನಾನು ಹಿಂದೂ ರಾಷ್ಟ್ರೀಯವಾದಿ’ ಎಂದು ಘೋಷಿಸುತ್ತಾರೆ. ಅವರ ಇತ್ತೀಚಿನ ಭಾಷಣಗಳಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುವಾಗಲೂ ಮೋದಿ ಸಂಭೋದಿಸುವುದು ‘ಭಾರತ ಭಾಗ್ಯವಿಧಾತರೇ’ ಎಂದೇ. ಅವರ ಹಿಂಬಾಲಕರು ಆಗಲೇ ವಾರಣಾಸಿಯಲ್ಲಿ ‘ಹರ ಹರ ಮೋದಿ’ ಮತ್ತು ‘ನಮೋ ನಮೋ’ ಎನ್ನುವ ಸ್ಲೋಗನ್ ಗಳನ್ನು ಬೀದಿ ಬೀದಿಗಳಲ್ಲಿ ತೇಲಿಬಿಡುತ್ತಿದ್ದಾರೆ. ತಮ್ಮನ್ನು ಸೇರಿಸಿಕೊಂಡು ಸಂಘ ಪರಿವಾರವನ್ನು ಹಿಂದೂ ಧಾರ್ಮಿಕ ಹಿನ್ನೆಲೆಯಲ್ಲಿ ಗುರುತಿಸಿಕೊಳ್ಳುವುದು ಮತ್ತು ಸಂಘ ಪರಿವಾರವು ಅಧಿಕಾರಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಹಿಂದುತ್ವವನ್ನೇ ಇಂಡಿಯಾದ ಜೀವನಕ್ರಮವನ್ನಾಗಿಯೇ ರೂಪಿಸುವುದು ಇವರೆಲ್ಲರ ಇಂದಿನ ನಡುವಳಿಕೆಗಳಿಂದ ಬಹಿರಂಗವಾಗಿದೆ.

ಆದರೆ ತಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸುವಾಗ ಮೋದಿಯು ಬಳಸುವ ಭಾಷೆ ಮತ್ತು ಸಂಕೇತಗಳು ಮತ್ತು rhetoric ಮಾತ್ರ ಬೇರೆ ಧರ್ಮಗಳದ್ದಾಗಿರುತ್ತವೆ. ರಾಹುಲ್ ಗಾಂಧಿಯವರನ್ನು ‘ಶೆಹಜಾದ’ ಎಂದು ಸಂಬೋಧಿಸುವುದು, ಸೋನಿಯಾಗಾಂಧಿಯವರನ್ನು ‘ಸುಲ್ತಾನ’ ಎಂದು ಸಂಬೋಧಿಸುವುದರ ಮೂಲಕ ಒಂದು ಸುಳ್ಳನ್ನು ನೂರು ಸಲ ಹೇಳುವ ಗೋಬೆಲ್ಸ್ ಸಿದ್ಧಾಂತವನ್ನು ಬಳಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಇಂದಿಗೂ ಪರಕೀಯರೆನ್ನುವ ಭಾವವನ್ನು ಸಾರ್ವಜನಿಕವಾಗಿ ಬಿತ್ತುತ್ತಾರೆ. ಲೇಖಕಿ ಅನನ್ಯ ವಾಜಪೇಯಿಯವರು “2002ರ ಹತ್ಯಾಕಾಂಡದ ನಂತರದಲ್ಲಿ ಸ್ಥಾಪಿಸಲ್ಪಟ್ಟ ಮುಸ್ಲಿಂ ನಿರಾಶ್ರಿತ ಶಿಬಿರಗಳನ್ನು ಉದ್ದೇಶಿಸಿ ಮೋದಿಯು ಆ ಶಿಬಿರಗಳು ಮಕ್ಕಳನ್ನು ಹುಟ್ಟಿಸುವ ಶಿಬಿರಗಳೆಂದು ವ್ಯಂಗವಾಡಿದ್ದರು; ಅರವಿಂದ್ ಕೇಜ್ರಿವಾಲ್ ಅವರನ್ನು ಎಕೆ 49 ಎಂದು ಟೀಕಿಸುವುದರ ಮೂಲಕ ಒಂದು ರೀತಿಯಲ್ಲಿ ಭಯೋತ್ಪಾದನೆಗೆ ಸಂಕೇತವಾಗಿರುವ ಎಕೆ 47 ಗೆ ಹೋಲಿಸಿ ಅವರನ್ನು ಪ್ರತ್ಯೇಕತಾವಾದಿ ಎಂದು ಪರೋಕ್ಷವಾಗಿ ಚಿತ್ರಿಸುತ್ತಾರೆ” ಎಂದು ದಾಖಲಿಸುತ್ತಾರೆ. ಇದು ಭವ್ಯ ಭಾರತದ ಭವಿಷ್ಯದ ಪ್ರಧಾನಿ ಎಂದು ಬಿಂಬಿತಗೊಂಡಿರುವ ನರೇಂದ್ರ ಮೋದಿಯ ಸಾರ್ವಜನಿಕ ನಡುವಳಿಕೆ ಶೈಲಿಯ ಒಂದೆರೆಡು ಉದಾಹರಣೆ ಮಾತ್ರ.

ಮೋದಿಯ ಸಾರ್ವಜನಿಕ ಭಾಷಣಗಳು ಎದುರಾಳಿಗಳನ್ನು ಹೆಚ್ಚೂ ಕಡಿಮೆ ಯುದ್ಧಕ್ಕೆ ಆಹ್ವಾನಿಸುವ ಮಟ್ಟದಲ್ಲಿರುತ್ತವೆ. ತೊಡೆ ತಟ್ಟುವುದು, ತಮ್ಮ 56 ಇಂಚಿನmodi_bjp_conclave ಎದೆ ತಟ್ಟುವುದು!! ಇದು ಅಪ್ಪಟ ಫ್ಯಾಸಿಸಂ ಶೈಲಿ. ಈ ಫ್ಯಾಸಿಸಂನ ಮೂಲಭೂತ ಲಕ್ಷಣವೇ ಸಾರ್ವಜನಿಕವಾಗಿ ಸಜ್ಜನಿಕೆಯ ನಡುವಳಿಕೆಯನ್ನೇ ಧ್ವಂಸಗೊಳಿಸುವುದಾಗಿರುತ್ತದೆ. ಕಳೆದ ಹತ್ತು ವರ್ಷಗಳಿಂದಲೂ ಮೋದಿಯ ಸಾರ್ವಜನಿಕ ನಡುವಳಿಕೆಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ‘ಮಿಯ್ಯಾ ಮುಶ್ರಫ’ನಿಂದ ಮೊದಲುಗೊಂಡು ಇಂದಿನ  ‘ಎಕೆ49’ ವರೆಗಿನ ಅವರ ಸಾರ್ವಜನಿಕ ನಡುವಳಿಕೆಗಳು ಭವ್ಯ ಭಾರತದ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳಿಗೆ ಪೆಟ್ಟು ಕೊಡುತ್ತವೆ. ಇಂತಹ ವ್ಯಕ್ತಿಯ ಭಾಷೆ ಮತ್ತು ನಡಾವಳಿ ಇನ್ನು ಅಧಿಕಾರಕ್ಕೆ ಬಂದ ನಂತರ ಯಾವ ಸ್ವರೂಪ ತಾಳಬಹುದು? ಆಗ ಇವರ ರಾಜಕೀಯ ವಿರೋಧಿಗಳ ಅಂತ್ಯ ಹರೇನ್ ಪಾಂಡ್ಯರಂತಾಗುವುದಿಲ್ಲವೆಂಬುದಕ್ಕೆ ಯಾವುದೇ ಸಮರ್ಥನೆಗಳಿಲ್ಲ. ಏಕೆಂದರೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಗುಜರಾತ್ ಹತ್ಯಾಕಾಂಡವನ್ನು ಕಾರು ಕೆಳಗೆ ಸಿಕ್ಕಿಕೊಂಡ ನಾಯಿಮರಿಗೆ ಹೋಲಿಸಿ ತಿಪ್ಪೆ ಸಾರಿಸಿದ್ದರು. ತಮ್ಮ ಬಾಹ್ಯ ನಡುವಳಿಕೆಗಳಲ್ಲಿ, ಸಾರ್ವಜನಿಕ ಭಾಷಣಗಳಲ್ಲಿ ಒಂದು ಬಗೆಯ ನಿರಂತರ ಹಗೆತನವನ್ನೇ ಮೈವೆತ್ತಂತೆ ವರ್ತಿಸುವ ನರೇಂದ್ರ ಮೋದಿ ಆ ಮೂಲಕ ಯಾವುದನ್ನು ಅಧಿಕೃತವಾಗಿ ಜಾರಿಗೊಳಿಸುತ್ತಿದ್ದಾರೆ ಎನ್ನುವುದಕ್ಕೆ ಹೆಚ್ಚಿನ ವಿವರಣೆಗಳು ಬೇಕಿಲ್ಲ.

ಇದು ಸಂಘ ಪರಿವಾರದ ನಾಯಕ ಮೋದಿಯ ಫ್ಯಾಸಿಸಂ ಕತೆಯಾದರೆ ಆವರ ಹಿಂಬಾಲಕರ ಮತೀಯವಾದಿ ವರ್ತನೆಗಳಿಂದ ನೂರಾರು ಗೋಬೆಲ್ಸ್ ಗಳು ಇಂದು ನಮ್ಮ ನಡುವೆ ಇರುವಂತೆ ಅನುಭವವಾಗುತ್ತದೆ. ಮೊನ್ನೆಯಷ್ಟೇ ಮೋದಿಯ ಬಲಗೈ ಬಂಟ ಅಮಿತ್ ಷಾ ಉತ್ತರ ಪ್ರದೇಶದಲ್ಲಿ ಜಾಟ್ ಪಂಗಡದವರನ್ನು ಉದ್ದೇಶಿಸಿ ಮಾತನಾಡುತ್ತಾ ‘ಮುಜಫರ್ ನಗರದ ಗಲಭೆಗಳಿಗೆ ಪ್ರತೀಕಾರವಾಗಿ ಈ 2014ರ ಚುನಾವಣೆಗಳನ್ನು ಬಳಸಿಕೊಳ್ಳಿ’ ಎಂದು ಕರೆ ನೀಡಿದ್ದಾರೆ. ಇದನ್ನು ಅಮಿತ್ ಷಾ ನಿರಾಕರಿಸಲೂ ಇಲ್ಲ. ಬದಲಾಗಿ ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದು ಕಡೆ ‘ಇನ್ನು ಮುಂದೆ ನಾನು ಪ್ರತೀಕಾರದ ನಡಾವಳಿಗಳಿಂದ ಆಡಳಿತ ನಡೆಸುವುದಿಲ್ಲ’ ಎಂದು ಸ್ವತಃ ಸ್ವಯಂಪ್ರೇರಿತನಾಗಿ ಹೇಳಿಕೆ ನೀಡಿದ್ದ ಮೋದಿ ತಮ್ಮ ಬಲಗೈ ಬಂಟನ ಈ ನೆತ್ತರ ದಾಹದ ಹೇಳಿಕೆಗಳನ್ನು ಮಾತ್ರ ಇದುವರೆಗೂ ಖಂಡಿಸಿಲ್ಲ ಅಥವಾ ನಿರಾಕರಿಸಿಲ್ಲ. ಲೇಖಕಿ ಅನನ್ಯ ವಾಜಪೇಯಿಯವರು “ಇತ್ತೀಚಿನ ದಿನಗಳಲ್ಲಿ ನಿಮಗೆ ಸೆಕ್ಯುಲರ್ ಅಥವಾ ಅಭಿವೃದ್ಧಿ ಇವೆರಡರಲ್ಲಿ ಯಾವುದು ಬೇಕು ಎನ್ನುವಂತಹ ಒಂದು ವಿಲಕ್ಷಣ, ಅಸಂಗತ ಆಯ್ಕೆಯನ್ನು ಸಂಘ ಪರಿವಾರದ ಗುಂಪುಗಳು ಇಂಡಿಯಾದ ಜನತೆಯ ಮುಂದಿಡುತ್ತಿದ್ದಾರೆ. ಇದು ತುಂಬಾ ಸರಳವಲ್ಲವೇ !! ಅಭಿವೃದ್ಧಿ ಬೇಕೆಂದರೆ ಸೆಕ್ಯುಲರಿಸಂ ಅನ್ನು ಮರೆತುಬಿಡಿ ಎಂದಷ್ಟೇ ಅಲ್ಲವೇ ?? ಇದೇ ಸಂದರ್ಭದಲ್ಲಿ ಮುಸ್ಲಿಂ ಮತ್ತು ಹಿಂದೂಗಳ ಕುರಿತಾಗಿ ಮಾತನಾಡುವಾಗ ಮತ್ತೆ ಆಕ್ರಮಣಕಾರರು ಮತ್ತು ಸ್ವದೇಶಿಗಳು ಎಂದೇ ಸಂಬೋಧಿಸುತ್ತಿದ್ದಾರೆ, ಈಗ ನಾವು  ಮೋದಿ ಮತ್ತು ಸಂಘ ಪರಿವಾರದ ಈ ಫ್ಯಾಸಿಸಂ ಶೈಲಿಯನ್ನು ಮರೆಯಬೇಕೆ? ನಿರ್ಲಕ್ಷಿಸಬೇಕೆ? ಅಥವಾ  ಕೆಲವು ಪ್ರತಿಷ್ಠಿತ ಮಾಧ್ಯಮಗಳು ಮತ್ತು ಮೋದಿಯ ನಡುವೆ ಏರ್ಪಟ್ಟ ಗುಪ್ತವಾದ ಒಳ ಒಪ್ಪಂದದ ಭಾಗವಾಗಬೇಕೆ? ಅಥವಾ ಲೇಡಿ ಮ್ಯಾಕ್ ಬೆತ್ ಸಿಂಡ್ರೋಮ್ ಗೆ ಬಲಿಯಾಗಿ ನಾವೆಲ್ಲ ಸ್ವತಃ ಮುಂದಾಗಿ  ಸಂಘ ಪರಿವಾರದ ರಕ್ತಸಿಕ್ತ ಕೈಗಳನ್ನು ಪದೇ ಪದೇ ತೊಳೆಯುತ್ತಾ ಆ ಗುಂಪಿಗೆ ಅಧಿಕಾರವನ್ನು ಬಿಟ್ಟುಕೊಡಬೇಕೆ? ದುರಂತವೆಂದರೆ ಇಂದಿನ ಬೌದ್ಧಿಕತೆಯ ಎಲ್ಲಾ ನೆಲೆಗಳೂ ಮೌನ ಭಾಷೆಯ ಅನುಸಂಧಾನದ ಮಾರ್ಗಕ್ಕೆ ಶರಣಾಗಿವೆ. ಆದರೆ ಇನ್ನೂ ಕಾಲ ಮಿಂಚಿಲ್ಲ, ನಾವು ಕಂಡದ್ದನ್ನು ಕಂಡ ಹಾಗೆ ನಿರ್ಭೀತಿಯಿಂದ ಹೇಳಲೇಬೇಕಾಗಿದೆ” ಎಂದು ಬರೆದಿದ್ದಾರೆ.

ಸ್ವಘೋಷಿತ ವಿಕಾಸಪುರುಷ ನರೇಂದ್ರ ಮೋದಿ ತಮ್ಮ ರಕ್ತಸಿಕ್ತ ಕೈಯನ್ನು ತೊಳೆದುಕೊಳ್ಳಲು ಜಗತ್ತಿನ ಎಲ್ಲಾ ಸುಗಂಧ ದ್ರವ್ಯಗಳನ್ನು ಬಳಸಿ ವಿಫಲಗೊಂಡಿದ್ದರೂ malnutrion factಇಂದಿನ ದಿನಗಳಲ್ಲಿ  ಉದಾರೀಕರಣ ಮತ್ತು ಅಭಿವೃದ್ಧಿ ಎನ್ನುವ ಹೊಸದಾದ ಸುಗಂಧ ದ್ರವ್ಯವನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಈ ಸುಗಂಧದ್ರವ್ಯಕ್ಕೆ ‘ಮೋದಿಮಂತ್ರ’, ‘ಮೋದಿಫೆಸ್ಟೋ’ ಎಂದು ಹೆಸರಿಡಲಾಗಿದೆ.  ಮೋದಿಫೆಸ್ಟೋ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಲೇ ಮಾದರಿಯಾಗಿ ಗುಜರಾತ್ ಮಾಡಲ್ ಅನ್ನು ಮುಂದಿಡುತ್ತದೆ. ಅಲ್ಲಿ ಮತ್ತೆ ದ್ವಿವಿಧ ನೀತಿ. ಗುಜರಾತ್ ಮಾಡಲ್ ಎಂದರೆ ಮತ್ತದೇ ಹಿಂದುತ್ವದ ಕೋಮುವಾದ ಮತ್ತು ಹುಸಿ ಅಭಿವೃದ್ಧಿ. ಗುಜರಾತ್ ಅಭಿವೃದ್ಧಿಯ ಹುಸಿತನವನ್ನು ಕುರಿತು, ಅಲ್ಲಿನ ಅಪೌಷ್ಟಿಕತೆಯ ಕುರಿತು, ಅಲ್ಲಿನ ಭ್ರಷ್ಟಾಚಾರದ ಕುರಿತು, ಅಲ್ಲಿನ ನೆಲಕಚ್ಚಿದ ಮಾನವ ಸಂಪನ್ಮೂಲದ ಕುರಿತು, ನೂರಾರು ಸಣ್ಣ ಕೈಗಾರಿಕೆಗಳ ನಾಶಗಳನ್ನು ಕುರಿತು, ರೈತರ ಬದುಕೇ ಧ್ವಂಸಗೊಂಡಿದ್ದರ ಕುರಿತು ನೂರಾರು ವರದಿಗಳು, ಅಂಕಿಸಂಖ್ಯೆಗಳು, ವಿಶ್ಶ್ಲೇಷಣೆಗಳನ್ನು ಆಧಾರಸಹಿತ ಮಂಡಿಸಿದರೂ ಸಹ ಬಹುತೇಕ ಮಾಧ್ಯಮಗಳು, ಮೋದಿ ಸಮರ್ಥಕರು ಮತ್ತು ಹಿಂಬಾಲಕರು ಅದನ್ನು ಕಣ್ಣೆತ್ತಿ ನೋಡಲೂ ನಿರಾಕರಿಸುತ್ತಿದ್ದಾರೆ. 2002ರ ಹತ್ಯಾಕಾಂಡ, ಅಲ್ಲಿನ ಫ್ಯಾಸಿಸಂನ ಕೋಮುವಾದೀ ಸಮಾಜದ ಕುರಿತು ಸಂವಾದವನ್ನು ನಡೆಸಲು ನಿರಾಕರಿಸುವ ಈ ಸಮರ್ಥಕರು ಅದೆಲ್ಲಾ ಮುಗಿದ ಕತೆ ಎನ್ನುತ್ತಾರೆ. ಹಾಗಿದ್ದರೆ ಉಳಿದದ್ದೇನು ??

 ಬಿಜೆಪಿಯ ಪ್ರಣಾಳಿಕೆಯಲ್ಲಿ ಹಾಡಿದ್ದೇ ಹಾಡೋ ಕಿಸಬಾಯಿ ಎನ್ನುವಂತೆ ರಾಮಜನ್ಮಭೂಮಿಯ ಪ್ರಸ್ತಾಪವಿದೆ; ಕಲಮು 370ರ ಕುರಿತು ಪ್ರಸ್ತಾಪವಿದೆ, ಸಮಾನ ನಾಗರಿಕ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲು ಪಣತೊಡಲಾಗಿದೆ, ನೂರು ಸುಸಜ್ಜಿತ ನಗರಗಳನ್ನು ಕಟ್ಟುತ್ತೇವೆ ಎಂದು ಹೇಳಲಾಗಿದೆ (ಅಂದರೆ ಹಳ್ಳಿಗಳು ನಾಮಾವಶೇಷವಾಗಲಿವೆಯೇ?) ಇಲ್ಲಿ ಬ್ರಾಂಡ್ ಇಂಡಿಯಾ ಕಟ್ಟುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಅಂದರೆ ಫ್ಯಾಸಿಸಂ ಭಾರತ ಜಾಗತಿಕವಾಗಿ ಬ್ರಾಂಡ್ ಆಗಲಿದೆಯೇ? ವಿದೇಶಿ ಬಂಡವಾಳ ಹೂಡಿಕೆಯನ್ನು ಸಮರ್ಥಿಸಲಾಗಿದೆ (ಚಿಲ್ಲರೆ ವಲಯದಲ್ಲಿಲ್ಲ ಎನ್ನುವುದು ಕಣ್ಣೊರೆಸುವ ತಂತ್ರ), ಮುಸ್ಲಿಂರಿಗಾಗಿ ಮೊಸಳೆ ಕಣ್ಣೀರು ಸುರಿಸಲಾಗಿದೆ. ಆದರೆ ಯಾವುದೇ ಮಾನಿಫೆಸ್ಟೋಗಳೂ ಕೇವಲ ಕಣ್ಣೊರೆಸುವ ತಂತ್ರಗಳಾಗಿರುವಾಗ ಅದರ ಸಾಧಕಬಾಧಕಗಳ ಕುರಿತು ಯಾರಿಗೂ ಅಂತಹ ಆಸಕ್ತಿಯಿರುವುದಿಲ್ಲ.

ಆದರೆ ಸಂಘಪರಿವಾರವು ಸಿದ್ಧಾಂತಗಳನ್ನು ನಂಬಿದ ಸಂಘಟನೆ ಎನ್ನುವ ಸರ್ವಕಾಲಿಕ ಸತ್ಯವನ್ನು ಎಲ್ಲರೂ ಜಾಣತನದಿಂದ ಮರೆಯುತ್ತಾರೆ. ದ ಹಿಂದೂ ಪತ್ರಿಕೆಯ ಎನ್.ರಾಮ್ ಅವರು ತಮ್ಮ ಲೇಖನದಲ್ಲಿ “ಬಿಜೆಪಿಯ ವೆಬ್ಸೈಟಿನ ಇತಿಹಾಸ ವಿಭಾಗದಲ್ಲಿ ಈ ರೀತಿಯಾಗಿ ಬರೆದಿದ್ದಾರೆ ‘ ಸಂಘ ಪರಿವಾರದ ಮುಖ್ಯ ಸದಸ್ಯನಾಗಿರುವ ಭಾರತೀಯ ಜನತಾ ಪಕ್ಷ ಆರೆಸ್ಸೆಸ್ ನ ಸಿದ್ಧಾಂತಗಳನ್ನು ಪಾಲಿಸುತ್ತದೆ. ಸಂಘ ಪರಿವಾರಕ್ಕೆ ಭಾರತದ ಇತಿಹಾಸದ ಕುರಿತಾಗಿ ಸ್ಪಷ್ಟತೆಯಿದೆ. ಹಿಂದೂ ಐಡೆಂಟಿಟಿ ಮತ್ತು ಸಂಸ್ಕೃತಿ ಭಾರತ ಸಮಾಜದ ಮುಖ್ಯಧಾರೆಯಾಗಬೇಕೆಂಬುದೇ ನಮ್ಮ ಆಶಯ. ಸನಾತನ ಧರ್ಮವು ಹಿಂದೂ ರಾಷ್ಟ್ರೀಯತೆಯೊಂದಿಗೆ ಬೆಸದುಕೊಂಡಿದೆ.’ ಎಂದು ಬರೆದಿದ್ದಾರೆ.

ಇಟಲಿಯ ಮಸಲೋನಿ, ಜರ್ಮನಿಯ ಹಿಟ್ಲರ್, ಸ್ಪೇಯ್ನ್ ದೇಶದ ಫ್ರಾಂಕೋ ಅವರ ಫ್ಯಾಸಿಸ್ಟ್ ಆಡಳಿತವನ್ನು ಅವಲೋಕಿಸಿದಾಗ, ಅಲ್ಲಿ ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ದೇಶದ ತುಂಬಾ ಧ್ವಜಗಳ ಹಾರಾಟ, ದಿನನಿತ್ಯ ರಾಷ್ಟ್ರೀಯವಾದದ ಗೀತೆಗಳ, ಸ್ಲೋಗನ್ ಗಳ ಪ್ರಸಾರ ಇವು ಮೇಲ್ನೋಟಕ್ಕೆ ಕಂಡು ಬರುವ ಪ್ಯಾಸಿಸಂನ ಸಂಕೇತಗಳು. ಕಳೆದ ಇಪ್ಪತ್ತೈದು ವರ್ಷಗಳ ಇಂಡಿಯಾದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸವನ್ನು ಅವಲೋಕಿಸಿದಾಗ ಸಂಘ ಪರಿವಾರದ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಭಗವಧ್ವಜಗಳು ಇಡೀ ಊರಿನ ತುಂಬಾ ಹಾರಾಡುತ್ತಿರುವುದನ್ನು ನಾವು ಕಂಡಿದ್ದೇವೆ. ಇದು ತನ್ನ ಉಗ್ರ ಸ್ವರೂಪ ಪಡೆದುಕೊಳ್ಳುವುದು ಫ್ಯಾಸಿಸಂ ಅಧಿಕಾರಕ್ಕೆ ಬಂದಾಗ. ಈಗಾಗಲೇ ‘ಸೌಗಂಧ್’ ಗೀತೆ ಫ್ಯಾಸಿಸಂನ ಸ್ವರೂಪ ಪಡೆದುಕೊಂಡಾಗಿದೆ. ಇನ್ನು ಮೋದಿಯ ಘೋಷಣೆಗಳ ಕುರಿತು ಹೆಚ್ಚಿನದೇನನ್ನೂ ಹೇಳುವುದು ಉಳಿದಲ್ಲ. ಮೊನ್ನೆ ತಾನೆ ಬಿಹಾರಿನಲ್ಲಿ ಯಾದವರನ್ನು ಉದ್ದೇಶಿ ಮಾತನಾಡುತ್ತ ಗೋವುಗಳನ್ನು ಪಾಲಿಸುವ, ಪೋಷಿಸುವ ನೀವೆಲ್ಲ ಗೋಹಂತಕರನ್ನು ಬೆಂಬಲಿಸುತ್ತೀರಾ ಎಂದು ಪ್ರಚೋದಿಸಿದ್ದಾರೆ. ಇಂತಹ ನೂರಾರು ಘಟನೆಗಳು ಈ ಹಿಂದೆ ದಾಖಲಾಗಿವೆ.

ಯುರೋಪಿಯನ್ ಫ್ಯಾಸಿಸ್ಟ್ ಆಡಳಿತದಲ್ಲಿ ಕಂಡುಬಂದ ಮತ್ತೊಂದು ಲಕ್ಷಣವೆಂದರೆ ಅಲ್ಲಿ ಎಡಪಂಥೀಯರು, ಕಪ್ಪುವರ್ಣೀಯರು, ಯಹೂದಿಗಳು, ಅಲ್ಪಸಂಖ್ಯಾತರು, ಲಿಬರಲ್, ಸಮಾಜವಾದಿಗಳು ಮುಂತಾದವರನ್ನು ಶತ್ರುಗಳೆಂದು ಪರಿಗಣಿಸಿ ಆ ಶತ್ರುಗಳನ್ನು ಹುಡುಕಿ ಹೆಕ್ಕುತ್ತಾ ಅವರನ್ನು ಮುಗಿಸುವುದು. ಇದಕ್ಕಾಗಿ ಇಡೀ ಪೋಲೀಸ್ ವ್ಯವಸ್ಥೆಯನ್ನೇ ಬಳಸಿಕೊಳ್ಳಲಾಗುತ್ತದೆ. ಇದೇ ಮೋದಿ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಬಿಹಾರ್ ರಾಜ್ಯದಲ್ಲಿ ಭಾಷಣ ಮಾಡುತ್ತಾ ‘ಹಮ್ ಚುನ್ ಚುನ್ ಕೆ ಸಬಕ್ ಸಿಖಾಯೇಂಗೇ’ ( ನಾವು ಹುಡುಕಿ ಹುಡುಕಿ ಪಾಠ ಕಲಿಸುತ್ತೇವೆ) ಎಂದು ಹೇಳಿದ್ದಾರೆ. ಇದು ಅಪ್ಪಟ ಫ್ಯಾಸಿಸ್ಟ್ ಶೈಲಿ. 2002ರ ಹತ್ಯಾಕಾಂಡದ ಸಂಧರ್ಭದಲ್ಲಿ ಇಂತಹ ವರ್ತನೆಗಳನ್ನು ದೇಶ ನೋಡಿದೆ. ಮೋದಿ ಆಡಳಿತದ ಹತ್ತು ವರ್ಷಗಳಲ್ಲಿ ಗುಜರಾತ್ ರಾಜ್ಯದಲ್ಲಿ ಪೋಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಹುಡುಕಿ ಹುಡುಕಿ ಹದಿಮೂರು ನಕಲಿ ಎನ್ ಕೌಂಟರುಗಳನ್ನು ನಡೆಸಲಾಗಿದೆ. ಇಂದಿಗೂ ತನಿಖೆಗಳು ಜಾರಿಯಲ್ಲಿವೆ. ಮಹಿಳೆಯ ಮೇಲೆ ಬೇಹುಗಾರಿಕೆ ನಡೆಸಲಾಗಿದೆ. ಹುಡುಕಿ ಹುಡುಕಿ ತೆಗೆದು ಪಾಠ ಕಲಿಸುವ ಇವರ ಭರಾಟೆ ನೆನಸಿಕೊಂಡರೆ ಕರಾಳ ಚಿತ್ರವಷ್ಟೇ ಕಣ್ಣ ಮುಂದೆ ಬರುತ್ತದೆ.

ಯುರೋಪಿಯನ್ ಫ್ಯಾಸಿಸ್ಟ್ ಶೈಲಿಯ ಮತ್ತೊಂದು ಲಕ್ಷಣ ಮೀಡಿಯಾಗಳನ್ನು ಹತೋಟಿಗೆ ತೆಗೆದುಕೊಳ್ಳುವುದು. ಇಂದು ಇಂಡಿಯಾದಲ್ಲಾಗಲೇ ದೃಶ್ಯ ಮಾಧ್ಯಮಗಳು ಮತ್ತು modi_ambani_tata_kamathಬಹುಪಾಲು ಮುದ್ರಣ ಮಾಧ್ಯಮಗಳು ಮೋದಿಯ ಹತೋಟಿಯಲ್ಲಿವೆ. ಫ್ಯಾಸಿಸ್ಟ್ ಆಡಳಿತದಲ್ಲಿ ಈ ಮುಷ್ಟಿ ಮತ್ತು ಬಿಗಿಗೊಳ್ಳುತ್ತದೆ. ಮೂವತ್ತು ಮತ್ತು ನಲವತ್ತರ ದಶಕದುದ್ದಕ್ಕೂ ಜರ್ಮನಿಯಲ್ಲಿ ಹಿಟ್ಲರನನ್ನು ವಿಕಾಸಪುರುಷನೆಂದೇ ಕರೆಯುತ್ತಿದ್ದರು. ಫ್ಯಾಸಿಸಂನ ಆ ಕಾಲಘಟ್ಟದಲ್ಲಿ ಜರ್ಮನಿಯ ಇಡೀ ಕಾರ್ಪೋರೇಟ್ ವಲಯ ಹಿಟ್ಲರನನ್ನು ಬೆಂಬಲಿಸಿತ್ತು. ಪರಸ್ಪರ ಹೊಂದಾಣಿಕೆಯ ಮೂಲಕ ಹಿಟ್ಲರ್ ಮತ್ತು ಅಲ್ಲಿನ ಕಾರ್ಪೋರೇಟ್ ವಲಯದ ನಡುವಿನ ಸಂಬಂಧ ಅಭೂತಪೂರ್ವವಾಗಿತ್ತು. ಇಂದಿನ ಇಂಡಿಯಾದಲ್ಲಿ ಇಡೀ ಕಾರ್ಪೋರೇಟ್ ಗುಂಪು ಮೋದಿಯ ಬೆನ್ನ ಹಿಂದಿದೆ. ಮೋದಿ ಮತ್ತು ಇಂಡಿಯಾದ ಕಾರ್ಪೋರೇಟ್ ವಲಯದ ನಡುವಿನ ಸಮನ್ವಯ ಮತ್ತು ಸೌಹಾರ್ದಯುತ ಸಂಬಂಧ ಮತ್ತು ಕೊಡುಕೊಳ್ಳುವಿಕೆಯನ್ನು ಆಗಿನ ಹಿಟ್ಲರ್ ಕಾಲಕ್ಕೆ ಹೋಲಿಸಬಹುದು. ಅನೇಕ ಸಾಮ್ಯತೆಗಳಿವೆ. ರಾಷ್ಟ್ರೀಯ ಸುರಕ್ಷತೆಯ ಕುರಿತಾಗಿ ಹಿಟ್ಲರ್ ಮತ್ತು ಮಸಲೋನಿ ಹುಟ್ಟು ಹಾಕಿದ ಗದ್ದಲಗಳು ಎರಡನೇ ಮಹಾಯುದ್ಧಕ್ಕೆ ಕಾರಣವಾದವು. ಫ್ಯಾಸಿಸಂ ಆಡಳಿತದಲ್ಲಿ  ರಾಷ್ಟ್ರೀಯ ಸುರಕ್ಷತೆ ತನ್ನ ಖುಣಾತ್ಮ ನೆಲೆಯಲ್ಲಿ ಹೂತುಹೋಗಿರುತ್ತದೆ. ನಮ್ಮ ಸಂಘ ಪರಿವಾರದ ಯುದ್ಧದ ಕುರಿತಾದ ದಾಹ ಬೆಚ್ಚಿಬೀಳಿಸುವಂತದ್ದು. ಇನ್ನು ಫ್ಯಾಸಿಸಂ ಆಡಳಿತದಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ ವಲಯಗಳ ಕುರಿತಾಗಿ ಬರೆದಷ್ಟೂ ಮುಗಿಯದು.

ಕಳೆದ ಶತಮಾನದ ಇಪ್ಪತರ ದಶಕದ ಕೊನೆಯಲ್ಲಿ ಇಟಲಿಯಲ್ಲಿ “ಸುಧಾರಣವಾದಿಗಳು ಸೋತಿದ್ದಾರೆ, ನಮ್ಮನ್ನೆಲ್ಲಾ ಮೋಸಗೊಳಿಸಿದ್ದಾರೆ” ಎಂದು ಪ್ರತಿಭಟಿಸುತ್ತಿದ್ದ ಜನತೆಯ ಆಕ್ರೋಶವನ್ನು ಬಳಸಿಕೊಂಡು ಫ್ಯಾಸಿಸಂ ಜನ್ಮ ತಾಳಿತು. ಇಂದು ಸುಧಾರಣಾವಾದಿಗಳಾದ ಯುಪಿಎ ಸರ್ಕಾರದವರು ಸೋತಿದೆ. ನಮ್ಮನ್ನೆಲ್ಲಾ ಮೋಸಗೊಳಿಸಿದ್ದಾರೆ ಎನ್ನುವ ಭಾವನೆ ಬಹುಪಾಲು ಮದ್ಯಮವರ್ಗ ಮತ್ತು ಮೇಲ್ವರ್ಗಗಳ ಮನದಲ್ಲಿದೆ. ಮತ್ತೊಂದು ಕಡೆ ಮೋದಿ ನೇತೃತ್ವದಲ್ಲಿ ಈ ಜನರ ಅಸಹನೆಯನ್ನು ಬಳಸಿಕೊಂಡು ಅಧಿಕಾರಕ್ಕೆ ಏರಲು ಫ್ಯಾಸಿಸ್ಟ್ ಸಂಘಪರಿವಾರ ಕಾಯುತ್ತಿದೆ. ಇನ್ನು ಕೇವಲ ಮತಗಟ್ಟೆ ಕಾಯುತ್ತಿದೆ ಎಂಬುದು ಅವರ ಭಾವನೆ. ಅದರೆ ಇಂಡಿಯಾದ ಮತದಾರ ಇವೆಲ್ಲವನ್ನೂ ಮೀರಿದ್ದಾನೆ ಎಂಬುದು ಪ್ರಜ್ಞಾವಂತರ ಆಶಯ. ಏಕೆಂದರೆ 2004ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ‘ಇಂಡಿಯಾ ಶೈನಿಂಗ್’ ಅಬ್ಬರ ಇದೇ ಮಟ್ಟದಲ್ಲಿತ್ತು. ಆದರೆ ವಿವೇಚನೆಯಿಂದ ವರ್ತಿಸಿದ ಮತದಾರ ಫ್ಯಾಸಿಸ್ಟರನ್ನು ಸೋಲಿಸಿದ್ದ. ಹತ್ತು ವರ್ಷಗಳ ನಂತರ ಇಂದೂ ಸಹ ಅದು ಪುನರಾವರ್ತನೆಯಾಗುವ ಎಲ್ಲಾ ಸಾಧ್ಯತೆಗಳಿವೆ.

8 thoughts on “ಫ್ಯಾಸಿಸಂ ಶೈಲಿ – ಸೆಕ್ಯುಲರಿಸಂ ಅಥವಾ ಅಭಿವೃದ್ಧಿ ಇವೆರಡರಲ್ಲಿ ಯಾವುದು ಬೇಕು ?

 1. Anonymous

  ನಿಮಗೆ ” ಭಾರತ ಭಾಗ್ಯವಿಧಾತರೆ ” ಇದರ ಅರ್ಥ ಗೊತ್ತಿದೆಯಾ ???? ಈ ಮಾತನ್ನು ನಿಮಗೆ ಯಾಕೆ ಸಹಿಸಿಕೊಳ್ಳುವದಕ್ಕೆ ಆಗುವದಿಲ್ಲ ???
  ದಲಿತರೆ, ಅಲ್ಪಸಂಖ್ಯಾತರೇ, ಆ ಜಾತಿಯವರೇ, ಈ ಜಾತಿಯವರೇ ಅಂತ ಸಂಭೋಧಿಸಬೇಕಿತ್ತಾ ????
  ಒಂದು ಕಾಲದಲ್ಲಿ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಅಂತಾ ಹಿರಿಯರು ಹೇಳಿದ್ದರು, ಈಗ ನಿಮ್ಮಂಥವರಿಗೆ ( so called secularist ) ಭಾರತ ಬಿಟ್ಟು ಹೋಗಿ, ಭಾರತ ಉದ್ದಾರ ಆಗುತ್ತೆ ಅಂತಾ ಹೇಳಬೀಕಾಗಿದೆ!!!!!!!!!

  Reply
 2. Ananda Prasad

  ಮೋದಿ ಬೆಂಬಲಿಗರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವಂತೆ ಕಾಣುವುದಿಲ್ಲ. ಇದು ಅವರ ನಡವಳಿಕೆಯಿಂದ ಕಂಡುಬರುತ್ತದೆ. ಕೇಜ್ರಿವಾಲ್ ಗುಜರಾತಿಗೆ ಹೋದಾಗ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಯಿತು. ಇದೀಗ ವಾರಣಾಸಿಯಲ್ಲಿ ಕೇಜ್ರಿವಾಲ್ ಚುನಾವಣಾ ಪ್ರಚಾರ ನಡೆಸುವಾಗ ಅದಕ್ಕೆ ಅಡ್ಡಿ ಪಡಿಸುವ, ಕಲ್ಲೆಸೆಯುವ ಕೀಳು ಮಟ್ಟದ ಅನಾಗರಿಕ ನಡವಳಿಕೆಯನ್ನು ಮೋದಿ ಬೆಂಬಲಿಗರು ತೋರಿಸುತ್ತಿರುವುದು ಕಂಡುಬರುತ್ತಿದೆ. ಇನ್ನೂ ಅಧಿಕಾರಕ್ಕೆ ಬರುವ ಮೊದಲೇ ಈ ರೀತಿಯ ಗೂಂಡಾಗಿರಿ ನಡೆಸುವ ಮೋದಿ ಬೆಂಬಲಿಗರು ಮೋದಿ ಅಧಿಕಾರಕ್ಕೆ ಬಂದರೆ ಯಾವ ರೀತಿ ವರ್ತಿಸಬಹುದು ಎಂಬುದು ಯೋಚಿಸಬೇಕಾದ ವಿಚಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಮೋದಿ ಬೆಂಬಲಿಗರ ಅನಾಗರಿಕ ವರ್ತನೆ ಖಂಡನೀಯ. ಮೋದಿ ತನ್ನ ಬೆಂಬಲಿಗರ ವರ್ತನೆಯನ್ನು ಖಂಡಿಸದೆ ಇರುವುದು ಇದಕ್ಕೆ ಅವರ ಮೌನ ಸಮ್ಮತಿ ಇರಬಹುದು ಎಂಬ ಭಾವನೆಯನ್ನು ಜನತೆಯಲ್ಲಿ ಮೂಡಿಸುತ್ತದೆ. ಕಾಂಗ್ರೆಸ್ ಬೆಂಬಲಿಗರ ವರ್ತನೆಯೂ ಇದಕ್ಕೆ ಹೊರತಾಗಿಲ್ಲ. ಅಮೇಥಿಯಲ್ಲಿ ಕುಮಾರ್ ಆಮ್ ಆದ್ಮಿ ಪಕ್ಷದ ಕುಮಾರ್ ವಿಶ್ವಾಸ್ ಮೇಲೆಯೂ ಕಾಂಗ್ರೆಸ್ ಬೆಂಬಲಿಗರು ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಇದನ್ನು ರಾಹುಲ್ ಗಾಂಧಿ ಕೂಡ ಖಂಡಿಸಿಲ್ಲ.

  ಈ ಸಲದ ಚುನಾವಣೆಯಲ್ಲಿ ಮೋದಿಯ ಪ್ರಚಾರಕ್ಕಾಗಿ ಅಗಾಧ ಪ್ರಮಾಣದ ಹಣ ನೀರಿನಂತೆ ಖರ್ಚು ಮಾಡಲಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಣಬಲದ ಮೂಲಕ ಅಪಹಾಸ್ಯ ಮಾಡಲಾಗುತ್ತಿದೆ. ಈ ರೀತಿಯ ಹಣಬಲದ ಪ್ರಚಾರದ ಪ್ರದರ್ಶನ ಹಿಂದೆಂದೂ ನಡೆದಿರಲಿಲ್ಲ. ಈ ಸಲ ಮೋದಿ ಗೆದ್ದರೆ ಅದು ಮೋದಿಯ ಮೇಲೆ ಬಂಡವಾಳ ಹೂಡಿದವರ ಗೆಲುವೆ ಹೊರತು ಜನರ ಗೆಲುವು, ಪ್ರಜಾಪ್ರಭುತ್ವದ ಗೆಲುವು ಆಗುವುದಿಲ್ಲ. ಮೋದಿ ಬಂದರೂ ಮೂಲಭೂತವಾಗಿ ಯಾವುದೇ ಗಮನಾರ್ಹ ಮಾನವೀಯ ಬದಲಾವಣೆಗಳು ಉಂಟಾಗುವ ಸಂಭವ ಇಲ್ಲ.

  Reply
  1. ವಿಜಯ್

   ೧) ಇಂತಹ ಘಟನೆಗಳು ಕೇವಲ ಮೋದಿ, ರಾಹುಲ್ ನಿಂತಲ್ಲಿ ಏಕಾಗಿವೆ? ಉಳಿದ ಕಡೆ ಏಕಾಗಿಲ್ಲ? ಆಪ್ ನ ಪ್ರಚಂಡ ಪ್ರಾಬಲ್ಯದಿಂದ ಪ್ರಧಾನಮಂತ್ರಿ ಅಭ್ಯರ್ಥಿಗಳು ಸೋಲುವ ಹೆದರಿಕೆಯಿಂದ ಹತಾಶೆ ಆಗಿದ್ದಾರೆ ಎಂದೆ?
   ೨) ಆಪ್ ನ ಸ್ಥಳಿಯ ಬೆಂಬಲಿಗರೇಕೆ ಪೋಲಿಸ್ ಕಂಪ್ಲೈಂಟ್ ಕೊಡಲಿಲ್ಲ? ಕಲ್ಲೆಸದ ಸ್ಥಳೀಯರಂತೂ ಅವರಿಗೆ ಖಂಡಿತ ಗೊತ್ತಿರುತ್ತಾರೆ. ಗುಜರಾತ್ ವಿಷಯ ಬಿಡೋಣ..ಏಕೆಂದರೆ ಅಲ್ಲಿ ಬಿಜೆಪಿ ಸರಕಾರವೆ ಇದೆ..ಪೋಲಿಸರು ಕ್ರಮ ತೆಗೆದುಕೊಳ್ಳಲಿಕ್ಕಿಲ್ಲ ಅಂತ. ಆದರೆ ವಾರಣಾಸಿ, ಅಮೇಥಿಯಲ್ಲಿ ಕಂಪ್ಲೆಂಟ್ ಕೊಡಲು ಏನಾಗಿತ್ತು? ಉ.ಪ್ರದಲ್ಲಿ ಬಿಜೆಪಿ ಸರಕಾರವಿತ್ತೆ?

   Reply
  2. Godbole

   “ಮೋದಿ ಬಂದರೂ ಮೂಲಭೂತವಾಗಿ ಯಾವುದೇ ಗಮನಾರ್ಹ ಮಾನವೀಯ ಬದಲಾವಣೆಗಳು ಉಂಟಾಗುವ ಸಂಭವ ಇಲ್ಲ.”

   Let us admit that there will be no fundamental changes if Modi comes to power. Will there be any fundamental change if Rahul or Kejriwal or third front comes to power?

   Reply
 3. ವಿಜಯ್

  [ಆದರೆ ವಿವೇಚನೆಯಿಂದ ವರ್ತಿಸಿದ ಮತದಾರ ಫ್ಯಾಸಿಸ್ಟರನ್ನು ಸೋಲಿಸಿದ್ದ. ಹತ್ತು ವರ್ಷಗಳ ನಂತರ ಇಂದೂ ಸಹ ಅದು ಪುನರಾವರ್ತನೆಯಾಗುವ ಎಲ್ಲಾ ಸಾಧ್ಯತೆಗಳಿವೆ.]
  ಇಷ್ಟೆಲ್ಲ ಭರವಸೆಯಿದ್ದ ಮೇಲೆ ಮತ್ತೇಕೆ ಹಳಹಳಿಕೆಯೊ? ದೇಶದ/ ಸಮಾಜದ ಭವಿಷ್ಯ ನೆನೆಸಿಕೊಂಡು ಬೆಚ್ಚಿ ಬಿದ್ದವರಂತೆ, ರಾತ್ರಿ ನಿದ್ದೆಯೇ ಬಾರದವರಂತೆ, ಭೂಕಂಪವೇ ಆಗಿಬಿಡುತ್ತದೆ ಎಂಬಂತಹ ವರ್ತನೆ ಏಕೊ? ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಳು ಮುಗಿದ ಮೇಲೆ ಇಂತಹ ‘ಸತ್ಯದರ್ಶನ’ದ ಲೇಖನಗಳಿಗೆ ಬಿಡುವು ಕೊಡುತ್ತಾರೆ ಎಂದು ಕೊಂಡಿದ್ದೆ. ಆದರೆ ಇದೊಂದು ತರಹದ ಡ್ರಗ್ ಆಡಿಕ್ಷನ್ ಇದ್ದ ಹಾಗೆ, ಸುಲಭದಲ್ಲಿ ಮುಕ್ತಿ ಇಲ್ಲ ಎನ್ನುವುದು ಈಗ ಗೊತ್ತಾಯಿತು.

  ಇದೇ ಮಿಡಿಯಾವನ್ನು ಬಳಸಿ, ನಿರಂತರ ಪುಂಗಿನಾದದಿಂದ ಮೋದಿಯನ್ನು ಕಳೆದ ಹತ್ತು-ಹನ್ನೆರಡು ವರ್ಷಗಳ ಕಾಲ ಕಾಡಿಸಿದವರು, ಹಣಿದವರಿಗ ಈಗ ತೀರ ಹತಾಶೆ ಕಾಡುತ್ತಿದೆ. ತಮ್ಮ ಸಂಗೀತಕ್ಕೆ ಈಗೀಗ ಜನ ಬೆಲೆಯೇ ಕೊಡುತ್ತಿಲ್ಲವಲ್ಲ ಎಂಬ ದು:ಖ ಆವರಿಸಿದೆ. ಇಂತಹ ಸಂದರ್ಭಗಳಲ್ಲಿ ಹುಟ್ಟುವುದೇ ಇಂತಹ ಸ್ವಾನುಕಂಪ, ಊಹಾಪೋಹ ತುಂಬಿದ ಲೇಖನಗಳು. ತಮ್ಮ ಒಳಗೊಳಗಿನ ಕಾಂಗ್ರೆಸ್ ಪ್ರೀತಿಯನ್ನು “It was Nehruvianism which kept the Idea of India together. In the name of reckless anti-Congressism, we are destroying the republic….” ಎಂದು ತೋಡಿಕೊಳ್ಳುವುದು.

  Reply
 4. M A Sriranga

  ಶ್ರೀಪಾದ್ ಭಟ್ ಅವರಿಗೆ—>>>ಫ್ಯಾಸಿಸಂ ಶೈಲಿ-ಸೆಕ್ಯುಲರಿಸಂ ಅಥವಾ ಅಭಿವೃದ್ಧಿ ಯಾವುದು ಬೇಕು? >>>ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ; ಸರಿಯಾದ ಉತ್ತರಕ್ಕೆ ಬಹುಮಾನ. ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳ ಮಾದರಿಯ ಈ ಲೇಖನವೇ ವಿರೋಧಾಭಾಸವಾಗಿದೆ. ಅರವತ್ತು ವರ್ಷಗಳು ಆಳಿದ ಸೆಕ್ಯುಲರ್ ಕಾಂಗ್ರೆಸ್ಸ್ ಪಕ್ಷದಿಂದ ಅಭಿವೃದ್ಧಿಯಾಗಿಲ್ಲ ಎಂಬ “ಧ್ವನಿ” ಈ ಲೇಖನದಿಂದ ಹೊರಡುತ್ತದೆ ಎಂಬುದು ,ಮೋದಿಯವರನ್ನು ಟೀಕಿಸುವ ಭರದಲ್ಲಿ ತಮಗೆ ಹೊಳೆದಿಲ್ಲ. ಜವಾಹರ್ ಲಾಲ್ ನೆಹರು,ಇಂದಿರಾಗಾಂಧಿ,ಮತ್ತು ರಾಜೀವ್ ಗಾಂಧಿ ಇವರುಗಳ ಕಾಲದಲ್ಲಿ ಅಂದಂದಿನ ‘ಕಾಲ ಪರಿಸ್ಥಿತಿ’ಗೆ ತಕ್ಕಂತೆ ಭಾರತದ ಅಭಿವೃದ್ಧಿ ಆಗಿದೆ. (ಅತ್ಯಲ್ಪ ಕಾಲ ಪ್ರಧಾನಿ ಆಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಕೆಲಸ ಇನ್ನೇನು ಪ್ರಾರಂಭಿಸಬೇಕು ಎಂಬ ಸಮಯದಲ್ಲಿ ನಮ್ಮನ್ನು ಅಗಲಿದರು). ನೆಹರು ಅವರ ಕೆಲ ನಡೆಗಳಿಂದ ಆದ ಪರಿಣಾಮ ಇಂದು ವಿಷಮವಾಗಿ ನಮ್ಮನ್ನು ದಿನವೂ ಕಾಡುತ್ತಿದೆ. ಆದರೆ ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟ ಅಂದಿನ ದಿನಗಳ ದುರ್ಭರ ಪರಿಸ್ಥಿತಿಯಲ್ಲಿ ಎದೆಗುಂದದೆ ಭಾರತವನ್ನು ಮುನ್ನಡೆಸಿದ್ದನ್ನು ನಾವು ಮರೆತರೆ ಕೃತಘ್ನರಾಗುತ್ತೇವೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವರ ಕಾಲದಲ್ಲಿ ಏನೂ ಅಭಿವೃದ್ಧಿಯೇ ಆಗಿಲ್ಲ; ಬರೀ ಸೆಕ್ಯುಲರಿಸಂ ನ ಜಪ ಮಾಡಿಕೊಂಡು ಕೂತಿದ್ದರು ಎಂಬುದು ನಿಮ್ಮ ಅಭಿಪ್ರಾಯವೇ? ತಂಟೆಕೋರ ಪಾಕಿಸ್ತಾನಕ್ಕೆ ಸಮರ್ಥ ಉತ್ತರ ನೀಡಿದ್ದು ಶಾಸ್ತ್ರಿಗಳು ಮತ್ತು ಇಂದಿರಾಗಾಂಧಿ ಅವರು. ನಂತರದಲ್ಲಿ ವಾಜಪೇಯಿ ಅವರು. ಇವರುಗಳು ಮಾಡಿದ್ದು ತಪ್ಪೇ? ಚುನಾವಣೆಯ ದಿನಾಕದ ಘೋಷಣೆಗೆ ಮುನ್ನ ಮತ್ತು ಈಗ್ಗೆ ಎರಡು ಮೂರು ದಿನಗಳ ಹಿಂದೆ ತಾನೇ ಪಾಕಿಸ್ತಾನ ಮತ್ತೆ ಕಾಲು ಕೆರೆದುಕೊಂಡು ಬಂದು ನಮ್ಮ ಸೈನಿಕರ ಪ್ರಾಣ ತೆಗೆದಿದೆ. ಇದರ ವಿರುದ್ಧ ಯು ಪಿ ಎ -೨ ರ ನಾಯಕರು ತಮ್ಮ ಭಾಷಣದಲ್ಲಿ ಏಕೆ ಮಾತಾಡುವುದಿಲ್ಲ? ಅದು ಚುನಾವಣೆ ನೀತಿ ಸಂಹಿತೆಗೆ ವಿರುದ್ಧವಾಗುತ್ತದೆಯೇ? ಇದು ಪಾಕಿಸ್ತಾನವನ್ನು ಟೀಕಿಸಿದರೆ ಅಲ್ಪ ಸಂಖ್ಯಾತರ ಮತಗಳು “ಕೈ”ತಪ್ಪುತ್ತದೆ ಎಂಬ ದೂರಾಲೋಚನೆಯ pseudo ಸೆಕ್ಯುಲರಿಸಂ ಅಲ್ಲವೇ? ಅಥವಾ ಪಾಕಿಸ್ತಾನದ ವಿರುದ್ಧ ಮಾತನಾಡಬಾರದೆಂದು ವಿಶ್ವಸಂಸ್ಥೆ ಏನಾದರೂ ಕಟ್ಟಪ್ಪಣೆ ಮಾಡಿದೆಯೇ? ಇದರ ಬಗ್ಗೆ ಮೋದಿಯವರು ತಮ್ಮ ಚುನಾವಣೆಯ ಭಾಷಣಗಳಲ್ಲಿ ಮಾತಾಡುವುದು ತಮ್ಮ ಪ್ರಕಾರ “ಫ್ಯಾಸಿಸಂ” ಆಗುತ್ತದೆ. ಕಾಂಗೈನ think tankನ ಸದಸ್ಯರಲ್ಲಿ ಒಬ್ಬರಾದ ಮಣಿಶಂಕರ್ ಅಯ್ಯರ್ ಅವರು “ಟೀ ಮಾರಿಕೊಂಡಿದ್ದವರು ದೇಶ ಆಳಬಲ್ಲರೆ?”ಎಂದಿದ್ದು ತಮ್ಮಂತಹ ಬುದ್ಧಿಜೀವಿಗಳ ಟೀಕೆಗೆ ಗುರಿಯಾಗುವುದಿಲ್ಲ. ಒಂದು ವೇಳೆ ಅದೇ ಮಾತನ್ನು ಮೋದಿಯವರು ಇತರೆ ಪಕ್ಷಗಳಲ್ಲಿರುವ ಯಾರಾದರೊಬ್ಬರೊಬ್ಬರ ಬಗ್ಗೆ ಹೇಳಿದ್ದರೆ ಆಕಾಶ ಭೂಮಿ ಒಂದು ಮಾಡುತ್ತಿದ್ದಿರಿ. ಆದರೆ ಮುಂಬೈನಲ್ಲಿ ಮೋದಿಯವರು “ಚಾಯ್ ವಾಲಾರ” ಮೇಳವನ್ನೇ ಮಾಡಿದರು ನಂತರ ಭಾರತದ ಸುಮಾರು ಮುನ್ನೂರು ನಗರಗಳಲ್ಲಿ “ಚಾಯ್ ಪೆ ಚರ್ಚಾ” ಏರ್ಪಡಿಸಿದರು. ರಾಜಕಾರಣದಲ್ಲಿ ಇಂತಹ ಬುದ್ಧಿವಂತಿಕೆಯನ್ನೇ ತಾವು ಫ್ಯಾಸಿಸಂ ಎನ್ನುವುದಾದರೆ ನಾನೇನೋ ಹೇಳಲಾರೆ. ತಾವು ಅಮಿತ್ ಷಾ ಅವರ ಆ ಭಾಷಣ ಪೂರ್ತಿ ಕೇಳಿಲ್ಲ. ತಮ್ಮ “ಸೆಕ್ಯುಲರಿಸಂ” ನೀತಿಗೆ ಎಷ್ಟು ಬೇಕೋ ಅಷ್ಟು ಕೇಳಿಕೊಂಡು ಟಿ .ವಿ off ಮಾಡಿದ್ದೀರಿ ಎಂದು ಕಾಣುತ್ತದೆ. ಅವರು ಹೇಳಿದ್ದು ಮತ ಯಂತ್ರದ “ಬಟನ್”ಒತ್ತುವುದರ ಮೂಲಕ ಮುಝಾಫರ್ ಗಲಭೆಗಳಿಗೆ ಉತ್ತರ ಕೊಡಿ ಎಂದು. .ಇಲ್ಲವಾದರೆ ಚುನಾವಣಾ ಆಯೋಗ ವಾರಣಾಸಿಯ ರೋಡ್ ಶೋ’ ನಲ್ಲಿ ಮೋದಿಯವರ ಜತೆ ಷಾ ಭಾಗವಹಿಸಿದ್ದು ಮತ್ತು ಅ ನಂತರ ಮಾಧ್ಯಮಗಳಿಗೆ ಅವರು ಮಾತಾಡಿದ್ದು ತಪ್ಪು ಎಂದು ಇನ್ನೊಂದು ಕೇಸ್ ಹಾಕಬಹುದಿತ್ತಲ್ಲ? ಕಾಂಗ್ರೆಸ್ಸ್ ನವರು ಅಂತಹ ಸುವರ್ಣಾ ಅವಕಾಶ ಬಿಡುತ್ತಿದ್ದರೆ? (೨)>>>ಮಾಧ್ಯಮಗಳನ್ನು ಹತೋಟಿಗೆ ತೆಗೆದುಕೊಳ್ಳುವುದು……. >>>>>ಮೋದಿಯವರು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದ ನಂತರದ ಸುಮಾರು ಆರು ತಿಂಗಳ ಅತ್ಯಲ್ಪ ಅವಧಿಯಲ್ಲಿ ಇಡೀ ಮಾಧ್ಯಮ ಪ್ರಪಂಚವನ್ನು ಹತೋಟಿಗೆ ತೆಗೆದುಕೊಂಡು ಅವುಗಳನ್ನು “ಮೋದಿವಾಣಿ’ ಮತ್ತು “ಮೋದಿ ಪ್ರಸಾರ ಭಾರತಿ”(ಕಾಂಗೈನ ಸರ್ಕಾರಿ ಆಕಾಶವಾಣಿ ಮತ್ತು ಪ್ರಸಾರ ಭಾರತಿಗೆ ಬದಲಾಗಿ)ಗಳಾಗಿ ಮಾಡಿಕೊಂಡು ಬಿಟ್ಟರು ಎಂದರೆ ಬಹುಶಃ ಎರಡೂ ಕಿವಿಗಳಿಗೆ ಹೂವಿಟ್ಟು ಕೊಂಡವನೂ ನಂಬಲಾರ. ಅರ್ನಾಬ್ ಗೋಸ್ವಾಮಿಯವರ ಮೊನಚಾದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಾಗದೆ ಮತ್ತು ಆಪ್ ಕಿ ಅದಾಲತ್ ನಲ್ಲಿ ರಾಹುಲ್ ಗಾಂಧಿ ಪರದಾಡಿದರೆ ಅದು ನಮ್ಮ ತಪ್ಪೂ ಅಲ್ಲ; ನಿಮ್ಮದೂ ಅಲ್ಲ. ಆದರೆ ಅದೇ ಕಾರ್ಯಕ್ರಮದಲ್ಲಿ ಮೋದಿ ಪಾಸಾದರೆ ಅವರು copy ಮಾಡಿ ಪಾಸದರೆಂದು ಹೇಳುವುದು ಮಾತ್ರ ತಪ್ಪು. ಇಂಗ್ಲಿಷ್ ಮತ್ತು ಹಿಂದಿ news channel ಗಳಲ್ಲಿ ಕೇವಲ ಮೋದಿ ಪರ ಪ್ರಚಾರ ನಡೆಯುತ್ತಿದೆ ಎಂಬುದು ಸರಿಯಲ್ಲ. ಪ್ರಿಯಾಂಕ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ರೋಡ್ ಶೋ ಮತ್ತು ಭಾಷಣದ live full show ಸಹ ತೋರಿಸುತ್ತಿದ್ದಾರೆ. ಜತೆಗೆ NDTV 24×7 News channelನಲ್ಲಿ ಬರ್ಖಾದತ್ ನಡೆಸಿದ ಟೋಪಿ=ಜಾತ್ಯಾತೀತತೆ ಮತ್ತು ತಿಲಕ=ಹಿಂದುತ್ವ ಎನ್ನುವಂತಹ “ಬುದ್ಧಿಜೀವಿಗಳ” ಕಾರ್ಯಕ್ರಮವೂ ಪ್ರಸಾರವಾಗುತ್ತದೆ. ಇವುಗಳ repeat telecast ಸಹ ಚುನಾವಣೆಯ ಫಲಿತಾಂಶ ಬರುವ ತನಕ ಇರುತ್ತದೆ. ಬಿಡುವಾದಾಗ ನೋಡಿ.

  Reply
 5. M A Sriranga

  ಶ್ರೀಪಾದ್ ಭಟ್ ಅವರಿಗೆ –ಹೇಳಲು ಮರೆತ ಮಾತು — ತಮ್ಮ ಇದೇ ಲೇಖನ ಇಲ್ಲೇ ಪಕ್ಕದಲ್ಲೇ ಇರುವ ಇನ್ನೊಂದು ಪ್ರಗತಿಪರ, ಸೆಕುಲರಿಸಂ ಪರ ದಿನ ನಿತ್ಯ ಹೋರಾಡುತ್ತಿರುವ ಕನ್ನಡದ ಬ್ಲಾಗೊಂದರಲ್ಲಿ ೧೮-೪-೨೦೧೪ರಂದೇ ಪ್ರಕಟವಾಗಿದೆ. ಇದುವರೆಗೆ ಅಲ್ಲಿ ಓದುಗರ ಒಂದೂ comment ಇಲ್ಲ. ಇದನ್ನು ತಾವು ಗಮನಿಸಬೇಕೆಂದು ನನ್ನ ಮನವಿ. ಆ ಬ್ಲಾಗಿನಲ್ಲಿ ನಿಮ್ಮದೂ ಸೇರಿದಂತೆ ಯಾರ ಲೇಖನಕ್ಕೂ ಚರ್ಚೆಯ ಸೌಭಾಗ್ಯವಿಲ್ಲ. ನಾನು ಅಲ್ಲಿ ಐದಾರು ಲೇಖನಗಳಿಗೆ comment ಬರೆದು ಪ್ರಯತ್ನಿಸಿ ಫೇಲ್ ಆಗಿದ್ದೇನೆ. “ವರ್ತಮಾನ” ದಲ್ಲಿ ಚರ್ಚೆಯ ಸೌಲಭ್ಯವಿದೆ. ತಾವು ಫ್ಯಾಸಿಸಂ ಹುಡುಕಿಕೊಂಡು ದಿಲ್ಲಿ,ಗುಜರಾತ್,ಉತ್ತರಪ್ರದೇಶಗಳಿಗೆ ಹೋಗಬೇಕಾದ ಅವಶ್ಯಕತೆಯಿಲ್ಲ. ತಮ್ಮ ಕಂಪ್ಯೂಟರ್ ನಲ್ಲಿ ಆರೇಳು ಅಕ್ಷರಗಳನ್ನು ಟೈಪ್ ಮಾಡಿದರೆ ಸಾಕು. ಅದರ ಪ್ರತ್ಯಕ್ಷದರ್ಶನವಾಗುತ್ತದೆ!!!

  Reply

Leave a Reply

Your email address will not be published.