– ಮಹೇಶ್ ಎಂ.
“ಅಧಿಕಾರಿಗಳನ್ನು ನಾವು ಒಳ್ಳೆಯ ಹುದ್ದೆಗೆ ನಿಯೋಜನೆ ಮಾಡುತ್ತೇವೆ. ಆದರೆ, ಅಧಿಕಾರಿಗಳು ಕುರ್ಚಿಯ ಮೇಲೆ ಕುಳಿತರೆ ವಿಶ್ವಮಾನವರಾಗಿ ಬಿಡುತ್ತಾರೆ. ಕೈಯಲ್ಲಿ ಕಾಗದ, ಪೆನ್ನು ಸಿಕ್ಕ ಮೇಲೆ ಇಲ್ಲಸಲ್ಲದ ಕಾನೂನು ಮಾತಾಡುತ್ತಾರೆ. ಅಂಥ ಅಧಿಕಾರಿಗಳ ಹೆಸರು ಹೇಳಲು ಇಷ್ಟಪಡುವುದಿಲ್ಲ. ಅವರವರ ಜನಾಂಗಕ್ಕೆ ಅಧಿಕಾರಿಗಳು ಸಹಾಯ ಮಾಡಬೇಕಾದ್ದು ಅಗತ್ಯ”.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭಾನುವಾರ ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳಿವು. ಅಧಿಕಾರಿಗಳು ವಿಶ್ವಮಾನವರಾಗುತ್ತಾರೆ ಎನ್ನುವ ಮೂಲಕ ಈ ಮಂತ್ರಿ ಮಹೋದಯ ಏಕಕಾಲಕ್ಕೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರನ್ನೂ ಮತ್ತು ಒಕ್ಕಲಿಗ ಸಮುದಾಯದ ಪ್ರಾಮಾಣಿಕ, ನಿಷ್ಪಕ್ಷಪಾತಿ ಅಧಿಕಾರಿಗಳನ್ನು ಅವಮಾನಿಸಿದ್ದಾರೆ. ವಿಪರ್ಯಾಸ ಎಂದರೆ ಇವರು ಮಾತನಾಡಿದ ಹಾಲ್ ನಲ್ಲಿಯೇ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವೂ ಇತ್ತು!
ಇತ್ತೀಚೆಗೆ ಈ ಮಂತ್ರಿಯವರ ಶಿಫಾರಸ್ಸಿನಿಂದ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಆದ ಅಧಿಕಾರಿಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಶಿವಕುಮಾರ್ ಗೆ ಮುಂದೆ ಪಕ್ಷದ ನೇತೃತ್ವ ವಹಿಸಿ ಚುನಾವಣೆ ಎದುರಿಸುವ ಅವಕಾಶ ದೊರೆತಾಗ ಒಕ್ಕಲಿಗ ಸಮುದಾಯ ಒಗ್ಗಟ್ಟಾಗಿ ಇವರ ಬೆನ್ನಿಗೆ ನಿಲ್ಲಬೇಕಂತೆ. ಆದರೆ ಸದ್ಯಕ್ಕೆ ಮುಖ್ಯಮಂತ್ರಿಯಾಗುವ ಪ್ರಯತ್ನ ಮಾಡುವುದಿಲ್ಲ ಎಂದು ಸಿದ್ದರಾಮಯ್ಯನವರಿಗೆ ಮಾತು ಕೊಟ್ಟಿದ್ದಾರಂತೆ. ಈ ಮಾತುಗಳು ಸೂಕ್ಷ್ಮವಾಗಿ ರಾಜ್ಯ ರಾಜಕೀಯದಲ್ಲಿ ಬರುವ ದಿನಗಳಲ್ಲಿ ನಡೆಯಬಹುದಾದ ಘಟನಾವಳಿಗಳನ್ನು ಸೂಚಿಸುತ್ತವೆ.
ತಾನು ಒಕ್ಕಲಿಗರ ಪ್ರತಿನಿಧಿಯಾಗಿ ಮಂತ್ರಿಯಾಗಿದ್ದಾರಂತೆ. ಹಾಗಾದರೆ, ಕನಕಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದವರ ಗತಿಯೇನು? ಅಷ್ಟೇ ಅಲ್ಲ, ಇಂತಹವರು ಮಂತ್ರಿ ಸ್ಥಾನದಲ್ಲಿ ಕುಳಿತಾಗ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾರಾ? ಅದೆಲ್ಲಾ ಬೇಡ, ಶಾಸಕನಾಗಿ, ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಯಾವುದೇ ರಾಗ-ದ್ವೇಷಗಳಿಲ್ಲದೆ ಕೆಲಸ ನಿರ್ವಹಿಸುತ್ತೇನೆ ಎಂದಿದ್ದರಲ್ಲ..ಅದೂ ಮರೆತುಹೋಯಿತೆ? ಇವರ ಮಾತುಗಳು ಸ್ಪಷ್ಟವಾಗಿ ಸಂವಿಧಾನದ ಆಶಯಗಳಿಗೆ ವಿರೋಧ.
ಅದೇ ಕಾರ್ಯಕ್ರಮದಲ್ಲಿ ಡಿಕೆಶಿಯಂತಹವರಿಗೆ ಬುದ್ಧಿಹೇಳುವಂತೆ ಮಾತನಾಡಿದವರು. ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ. “ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ಕೆಂಪೇಗೌಡರು ಒಕ್ಕಲಿಗರಿಗಾಗಿ ಮಾತ್ರ ಬೆಂಗಳೂರನ್ನು ಕಟ್ಟಲಿಲ್ಲ. ಒಂದು ಜಾತಿಯ ನಾಶ ಅಥವಾ ಇನ್ನೊಂದು ಜಾತಿಯ ಉಳಿವಿನಿಂದ ಸಮಾಜ ಉದ್ಧಾರವಾಗುವುದಿಲ್ಲ. ಎಲ್ಲ ಜಾತಿಗಳಿಗೂ, ಎಲ್ಲ ಕಸುಬುಗಳಿಗೂ ಮಾನ್ಯತೆ ದೊರೆತಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದುತ್ತದೆ’ ಎಂದರು.
ಸ್ವಾಮೀಜಿ, ಒಳ್ಳೆ ಮಾತುಗಳನ್ನೇ ಹೇಳಿದ್ದೀರಿ. ನಿಮ್ಮ ಮಾತುಗಳನ್ನು ನಿಮ್ಮ ಜೊತೆ ಸಭೆಯಲ್ಲಿ ಕೂರುವವರೆಲ್ಲ ಕೇಳಿ, ಅರ್ಥಮಾಡಿಕೊಳ್ಳುವಂತಾಗಲಿ.
ಇದೊಂದು ಹಾಸ್ಯಾಸ್ಪದ ಲೇಖನ! ಒಕ್ಕಲಿಗರ ಸಂಘ ಎಂಬುದೇ ವಿಶ್ವಮಾನವ ಪರಿಕಲ್ಪನೆಗೆ ವಿರುದ್ದವಾದದ್ದು. ಜಾತೀಯತೆಯನ್ನೇ ಆಧಾರಿಸಿರುವ ಸಂಘದ ಸಭೆಯಲ್ಲಿ ಜಾತಿವೊಂದರ ರಾಜಕೀಯ ನಾಯಕ ವಿಶ್ವಮಾನವ ಪರಿಕಲ್ಪನೆಗೆ ಬದ್ಧವಾಗಿ ಮಾತನಾಡುತ್ತಾನೆ ಎಂದು ಅಪೇಕ್ಷಿಸಬಹುದೇ?
ಗೋಡಬೋಲೆ ಅವರೇ,
ನಿಮ್ಮ ಪ್ರತಿಕ್ರಿಯೆ ಹಾಸ್ಯಾಸ್ಪದ. ಲೇಖನ ಹಾಗೆ ಕಾಣಿಸುತ್ತಿಲ್ಲ. ನಿಮಗೆ ನೆನಪಿರಲಿ, ಡಿ.ಕೆ.ಶಿವಕುಮಾರ್ ಒಕ್ಕಲಿಗರ ಮತದಿಂದ ಆಯ್ಕೆಯಾದ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಅಲ್ಲಿ ಭಾಗವಹಿಸಿಲ್ಲ. ಈ ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅವರು ಯಾವುದೇ ಜಾತಿಗೆ ಸೀಮಿತನಾದ ರಾಜಕೀಯ ನಾಯಕ ಅಲ್ಲ. ಅವರೊಬ್ಬ ಮಂತ್ರಿ. ಸಂವಿಧಾನಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿಮಗೆ ಅಷ್ಟೂ ಅರ್ಥವಾಗಲಿಲ್ಲವೇ?
ಆ ಸಂಘದ ನಿರ್ದೇಶಕನೊಬ್ಬ ಹೀಗೆ ಮಾತನಾಡಿದ್ದರೆ ಯಾರೂ ಮಹತ್ವ ಕೊಡುತ್ತಿರಲಿಲ್ಲ. ಪ್ರಜಾವಾಣಿ ಅಂತಹ ಪತ್ರಿಕೆಯಲ್ಲಿ ಅದು ಈ ಮಟ್ಟಿಗೆ ಸುದ್ದಿಯಾಗುತ್ತಿರಲಿಲ್ಲ.
“ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.”
ಹಾಗಿದ್ದರೆ ತಾವು ಮಾನ್ಯ ಮಂತ್ರಿವರ್ಯರು ಜಾತಿ ಆಧರಿಸಿದ ಒಂದು ಸಂಘದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಬಗ್ಗೆ ಮೊದಲು ಆಕ್ಷೇಪ ತೆಗೆಯಬೇಕಿತ್ತು. ಏಕೆಂದರೆ ನೀವೇ ಹೇಳಿದಂತೆ ಮಂತ್ರಿಯಾದವನು “ಸಂವಿಧಾನಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿದ” ವ್ಯಕ್ತಿ ಹಾಗೂ ಆತ “ಯಾವುದೇ ಜಾತಿಗೆ ಸೀಮಿತನಾದ ರಾಜಕೀಯ ನಾಯಕ ಅಲ್ಲ”. ಒಕ್ಕಲಿಗರ ಸಂಘದ ಸಭೆಗೆ ಮಂತ್ರಿಯಾಗಿ ಹೋಗುವುದು ಓಕೇ ಅಲ್ಲಿ ಜಾತೀಯ ವಿಚಾರ ತೆಗೆಯುವುದು ನಾಟ್ ಓಕೇ – ಇದು ಹೇಗೆ ಸರಿ ಅಂತ ಹೇಳುತ್ತೀರಿ ನೀವು???