Daily Archives: June 21, 2014

ಮೈತೆರದುಕೊಂಡೇ ಉಳಿದ ಬದಲಾಗದ ಭಾರತ        


ಡಾ. ಜಯಪ್ರಕಾಶ್ ಶೆಟ್ಟಿ . ಹೆಚ್


ಭಾರತ ಇತ್ತೀಚೆಗೆ ಹಾದುಬಂದ ಮಹಾಚುನಾವಣೆಯ ಕಂಪನವನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಈಗ ಅದರ ಪಲಿತಾಂಶವೂ ಬಂದಿದೆ. ಇಡಿಯ ದೇಶ ಬಯಸಿದ ಬದಲಾವಣೆಯನ್ನು ಕುರಿತ ವ್ಯಾಖ್ಯಾನಗಳೂ ನಡೆಯುತ್ತಿವೆ. ಜನ ಬಯಸುವ ಬದಲಾವಣೆ ಸಂಭವಿಸಿಯೇ ತೀರುತ್ತದೆ ಎಂಬಂತೆ ಮಾಧ್ಯಮಗಳೂ ದಿನಕ್ಕೊಂದರಂತೆ ಕನಸಿನ ಮಾಲೆಯ ಬಿಕರಿಯಲ್ಲಿ ತೊಡಗಿವೆ. ಸರಕು ಮಾರುಕಟ್ಟೆಯನ್ನು ಉತ್ತೇಜಿಸುತ್ತಿರುವ ಜಾಗತೀಕರಣದ ಆರ್ಥಿಕ ನೀತಿಯನ್ನೇ ಕೇಂದ್ರೀಕರಿಸಿ ತರಾವರಿ ಚರ್ಚೆಗಳು ನಡೆಯುತ್ತಿವೆ. ಆದರೆ ಆರ್ಥಿಕ ಸಂರಚನೆಯ ಪುರಾತನ ಮಾದರಿಯನ್ನಾಧರಿಸಿ ನಿರ್ಮಿತವಾದ ದೇಶವೊಂದರ ಸಾಮಾಜಿಕ ಸಂರಚನೆಯನ್ನು ಬದಲಾಯಿಸದೆ, ಸಮಷ್ಟಿಹಿತದ ಬದಲಾವಣೆಯ ಮಾತುಗಳು ಅರ್ಥಹೀನವಾದುವುಗಳೇ ಆಗುತ್ತವೆ. ಅದನ್ನೇ ಋಜುಗೊಳಿಸುವಂತೆ ‘ದೇಶಕ್ಕೆ ಒಳ್ಳೆಯ ದಿನ ಬಂದೇ ಬಿಟ್ಟಿದೆ’ ಎಂದು ಹೇಳುತ್ತಿರುವ ಹೊತ್ತಲ್ಲಿಯೇ, ದಲಿತ, ಅಪ್ರಾಪ್ತ, ಅಶಕ್ತ ಹೆಣ್ಣುಮಕ್ಕಳ ಅತ್ಯಾಚಾರದ ಸುದ್ಧಿಯಿಂದ ದೇಶ ಬೆವರಿಕೊಳ್ಳುತ್ತಲೇ ಇದೆ. ಮರ್ಯಾದಾ ಹತ್ಯೆಗಳು ಸಾಮಾನ್ಯ ಸುದ್ಧಿಗಳಾಗಿವೆ. ನಿತ್ಯದ ಈ ಘಟನೆಗಳ ವಿವರಗಳಿಗೆ ಹೋಗದೆ, ಇವುಗಳಿಗಿಂತ ಭಿನ್ನವಾದ ಆದರೆ ಬದಲಾಗದ ಭಾರತದ ವಾಸ್ತವವನ್ನು ಇನ್ನಷ್ಟು ಖಚಿತಪಡಿಸುವ ಕರ್ನಾಟಕದ ಎರಡು ಘಟನೆಗಳನ್ನಷ್ಟೇ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಈ ಮಹಾಚುನಾವಣೆಯ ಕುರಿತ ಚರ್ಚೆಯ ನಡುವೆ ಮತ್ತು ಅದರ ಪಲಿತಾಂಶದ ಆಜೂಬಾಜು ಕರ್ನಾಟಕದ ಕರಾವಳಿ ಹಾಗೂ ಉತ್ತರಕರ್ನಾಟಕದ ವಿಜಾಪುರದಲ್ಲಿ ನಡೆದ ಪ್ರತ್ಯೇಕ ಘಟನೆಗಳಿವು. ಒಂದು ಯಾರ ಒತ್ತಾಯವಿಲ್ಲದೆ ನಡೆದ ವ್ಯಕ್ತಿಗತ ನಡಾವಳಿ. ಇನ್ನೊಂದು ಬಲಾತ್ಕಾರಪೂರ್ವಕವಾದುದು. ಆದರೆ ಎರಡೂ ಘಟನೆಗಳು ಈ ದೇಶಕ್ಕೆ ‘ಒಳ್ಳೇ ದಿನ ಬಂದಿಲ್ಲ ಮತ್ತು ಬರುವುದಕ್ಕೂ ಬಿಡಲಾಗುವುದಿಲ್ಲ’ ಎಂಬುದನ್ನೇ ಸಾರಿ ಹೇಳುತ್ತಿವೆ. ಈ ಎರಡೂ ಘಟನೆಗಳು ಅತ್ಯಂತ ದುರ್ಬಲರಿಗೆ ಸಂಬಂಧಿಸಿದವುಗಳಲ್ಲ. ಆದರೆ ಅವೆರಡರ ಹೂರಣವಾಗಿ ಗುಡಿ, ಗದ್ದುಗೆ, ಮಡಿ-ಮೈಲಿಗೆಗಳಿಂದ ಸುತ್ತಿಕೊಂಡ ಈ ದೇಶದ ಸಾಮಾಜಿಕ ಸತ್ಯವಾದ ‘ಜಾತಿ’ ಎನ್ನುವ ಮಹಾಮಾಲಿನ್ಯವೇ ಇದೆ.

ಸಂವಿಧಾನದ ಕಾವಲುಗಾರನ ವಿಪರೀತ ಸಜ್ಜನಿಕೆ

ದಿನಾಂಕ 26-5-14ರ ಪ್ರಜಾವಾಣಿಯಲ್ಲಿ ವರದಿಯಾದಂತೆ ಬಿಜಾಪುರದ ಸಂಸದರು ಗುಡಿಯೊಂದರ ಒಳಪ್ರವೇಶ ಮಾಡದೆ ಹೊರನಿಂತು ಕೈಮುಗಿದು ಸಜ್ಜನಿಕೆ ಮೆರೆದಿದ್ದರು. ramesh_jigajinagiಅಷ್ಟೇ ಅಲ್ಲ ಹಿಂದೆ ಶಾಸಕ, ಸಚಿವ, ಸಂಸದನಾಗಿದ್ದ ದಿನದಿಂದಲೂ ಹೀಗೆಯೇ ಮಾಡುತ್ತಿರುವುದಾಗಿಯೂ, ಅದಕ್ಕೆ ತನ್ನ ತಾಯಿ ‘ದಲಿತರಾದ ತಾವುಗಳು ಗುಡಿಪ್ರವೇಶಮಾಡಿ ಮೇಲ್ಜಾತಿಯ ಮನಸ್ಸಿಗೆ ನೋವುಂಟುಮಾಡಬಾರದು’ ಎಂದಿದ್ದ ಸೂಚನೆಯೆ ಕಾರಣವೆಂದೂ ಸ್ಪಷ್ಟೀಕರಣ ನೀಡಿದ್ದರು. ಇದು ಸಂವಿಧಾನಬದ್ಧವಾದ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸಂಸದರೊಬ್ಬರು, ಅಸಮಾನತೆಯ ಸಾಮಾಜಿಕ ಚರಿತ್ರೆಗೆ ಬದಲಾವಣೆ ತರುವ ದಿಸೆಯಲ್ಲಿ ಚಿಂತಿಸಬೇಕಾದವರೊಬ್ಬರು, ಸಂವಿಧಾನದ ವೈಜ್ಞಾನಿಕ ಮನೋಧರ್ಮದ ಆಶಯಕ್ಕೆ ಬದ್ಧವಾಗಿರಬೇಕಾದವರೊಬ್ಬರು ನಡೆದುಕೊಂಡ ಬಗೆ. “ಗುಡಿ ಪ್ರವೇಶಮಾಡಿ ಸವರ್ಣಿಯರ ಮನಸ್ಸು ನೋಯಿಸಬೇಡ” ಎಂದು ತಾಯಿ ಬೋಧಿಸಿದ ಭೂತಸಂವಿಧಾನವನ್ನು ಪಾಲಿಸಿ, ದೇಶದ ಸಂವಿಧಾನ ಮತ್ತು ಪ್ರಜಾತಂತ್ರವನ್ನು ಅವರು ಧಿಕ್ಕರಿಸಿದ್ದರು. ಮಂತ್ರಿಯಾಗಿದ್ದ ದಿನದಿಂದಲೂ ಇದೇ ಸಂಭಾವಿತತನದಲ್ಲಿ ನಡೆದುಕೊಂಡುದಾಗಿ ಹೇಳಿಕೊಂಡ ಅವರ ನಡತೆ, ಊಳಿಗಮಾನ್ಯ ಮತ್ತು ಪುರೋಹಿತಶಾಹಿ ಜಂಟಿ ಒಡೆತನಕ್ಕೆ ಪ್ರಿಯವಾದ ಸನ್ನಡತೆಯೇ. ಅದರಲ್ಲಿ ಅನುಮಾನವಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳವರ್ಗಕ್ಕೆ ಸೇರಿದ ಸಂಸದನೊಬ್ಬ ತನ್ನದೇ ವರ್ಗದ ಮಿಕ್ಕವರಿಗೂ ಹಾಕಿಕೊಡುವ ಈ ಸಂಭಾವಿಕೆಯ ಮೇಲ್ಪಂಕ್ತಿ ಅಪಾಯಕಾರಿಯಾದುದು. ಇದು ಸಂವಿಧಾನವನ್ನು ಕಾಯಬೇಕಾದವನ ಸಜ್ಜನಿಕೆ ಅಲ್ಲವೇ ಅಲ್ಲ. ಇದು ಜನತಂತ್ರದ ಸಮಬಾಳಿನ ಆಶಯವನ್ನೇ ಮಣ್ಣುಪಾಲಾಗಿಸುವಂಥದ್ದು.

ಇನ್ನೊಂದು ನೆಲೆಯಲ್ಲಿ ಇದು ಗೋಡೆಯೊಡೆದು ಗರ್ಭಗುಡಿಯ ಒಳಗಿನಿಂದಲೇ ಕನಕನಿಗೆ ಮುಖತೋರಿದ ಉಡುಪಿ ಕೃಷ್ಣನ ಮಿಥ್ ಗೆ ಸಮೀಪವೂ ಇದೆ. ಕೃಷ್ಣ ಗೋಡೆಗೆKanakadasa_art ಆಧಾರವಾದ ನೆಲಗಟ್ಟಿನ ಆಯ(ಒಳಾಂಗಣ)ದಿಂದ ಕೆಳಕ್ಕಿಳಿಯದೆ, ಯಾವುದನ್ನೂ ಉಲ್ಲಂಘಿಸದೆ (ಧರ್ಮಗ್ಲಾನಿಯಾಗದಂತೆ) ಕನಕನಿಗೆ ದರ್ಶನದ ಅವಕಾಶ ಮಾಡಿಕೊಟ್ಟ. ಕನಕನೂ ಒಳಹೋಗಿಲ್ಲ. ಮಾನ್ಯ ಸಂಸದರು ಮಾಡಿದ್ದೂ ಇದನ್ನೇ. ಸಂಸದ ರಮೇಶ ಜಿಗಜಿಣಗಿ ತನಗೆ ಓಟು ಹಾಕಿದ ಮೇಲ್ಜಾತಿಯ ಜನ ಏನೂ ಅಂದುಕೊಳ್ಳಲು ಅವಕಾಶವಿರದಂತೆ ದೇಗುಲದ ಹೊರಗೇ ನಿಂತು ದೇವರು ಮತ್ತು ದೇವಸಂಜಾತರಿಬ್ಬರನ್ನೂ ಖುಷಿಪಡಿಸಿದರು. ಹೀಗೆ ದೇವರ ಸ್ಥಾನದಲ್ಲಿದ್ದ ಕೃಷ್ಣ, ಜನಪ್ರತಿನಿಧಿಯ ಸ್ಥಾನದಲ್ಲಿದ್ದ ಜಿಗಜಿಣಗಿ, ಈ ಇಬ್ಬರೂ ಒಂದೇ ರೀತಿ ನಡೆದುಕೊಳ್ಳುವಂತೆ ನಿಯಂತ್ರಿಸಿದ ಶಕ್ತಿ ಮಾತ್ರ ಎರಡೂ ಕಾಲಕ್ಕೆ ಒಂದೇ ಎಂಬುದು ಮುಖ್ಯ. ಅದಕ್ಕೆ ದೇವರು ಮತ್ತು ಜನಪ್ರತಿನಿಧಿ ಇಬ್ಬರನ್ನೂ ಧರ್ಮಸಂಸ್ಥಾಪನೆಗಾಗಿ ಹೇಗೆ ದುಡಿಸಿಕೊಳ್ಳಬೇಕೆಂಬುದು ಚನ್ನಾಗಿಯೇ ಗೊತ್ತು.

ಯಮನ ಮನುಷ್ಯರೇ ಮೇಲು

ಕಾಕತಾಳೀಯವಾಗಿ ಈ ಘಟನೆಗೆ ಸ್ವಲ್ಪ ಮೊದಲು ಉಡುಪಿಯ ಕೃಷ್ಣದೇಗುಲದಲ್ಲಿ ಯಾವಾಗಲೂ ಆಗುತ್ತಿರುವಂತೆಯೇ ಪಂಕ್ತಿಭೇದದ ಇನ್ನೊಂದು ಘಟನೆ ಸುದ್ಧಿಯಾಯಿತು. ಅದು ಊಟಕ್ಕೆ ಕುಳಿತ ಹೆಣ್ಣುಮಗಳೊಬ್ಬಳನ್ನು ಹೊರಹಾಕಿದ ಸುದ್ಧಿ. ನಮ್ಮ ನಡುವಿನ ನಂಬಿಕೆಯಂತೆ ‘ಊಟಕ್ಕೆ ಕುಳಿತವರನ್ನು ಯಮನ ಮನುಷ್ಯರೂ ಊಟಮಾಡಿ ಏಳುವ ತನಕ ಕಾಯ್ತಾರಂತೆ’. ಹಾಗೆಯೇ ಹೆಣ್ಣು ಮಕ್ಕಳಿಗೆ ಸಾರ್ವಜನಿಕವಾಗಿ ಅಪಮಾನ ಮಾಡುವುದನ್ನು ಬಹುಜನರ ನಂಬಿಕೆ ಸರಿ ಎನ್ನಲಾರದು. ಆದರೆ ಆ ನಂಬಿಕೆಗಳನ್ನೇ ಸುಳ್ಳು ಮಾಡುವಂತೆ ಕೃಷಮಠದ ಬ್ರಾಹ್ಮಣರಪಂಕ್ತಿಯಲ್ಲಿ ಊಟಕ್ಕೆ ಕುಳಿತಳೆನ್ನುವ ಕಾರಣಕ್ಕೆ ಶೂದ್ರ ಹೆಣ್ಣುಮಗಳೊಬ್ಬಳನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಲಾಯಿತು.

ಅಚ್ಚರಿ ಎಂದರೆ ಹಾಗೆ ಹೊರಹಾಕಿಸಿಕೊಂಡಾಕೆ ಶೂದ್ರಳಾಗಿದ್ದರೂ, ತೀರಾ ತಳವರ್ಗದವಳಲ್ಲ. ಆಕೆಯದು ಮಠವಿಲ್ಲವಾಗಿಯೂ ಮತಿಕಳೆದುಕೊಳ್ಳದ ಪ್ರಭಾವೀ ಸಮಾಜವೇ. Pankti-Bheda-alleged-at-Udupi-Sri-Krishna-Muttಅದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನೆಲೆಗಳಲ್ಲಿ ಸ್ಥಳೀಯವಾಗಿ ಬಲಾಢ್ಯ ಎನಿಸಿಕೊಂಡ ಜಾತಿಯೂ ಹೌದು. ಉಡುಪಿಯ ಕೃಷ್ಣದೇವಸ್ಥಾನವನ್ನೂ ಒಳಗೊಂಡು ಕರಾವಳಿಯ ಹೆದ್ದಾರಿಯುದ್ದಕ್ಕೂ ಇರುವ ಬಹುಸಂಖ್ಯೆಯ ಸ್ವಾಗತಗೋಪುರ ಹಾಗೂ ದೇಗುಲ ಕಟ್ಟಡಗಳ ಮೇಲಿರುವ ದಾನಿಗಳ ಹೆಸರು ಯಾವ ಜಾತಿಗೆ ಸೇರಿದೆಯೋ, ಅದೇ ಜಾತಿಗೆ ಆಕೆಯೂ ಸೇರಿದ್ದಳು! ಆಕೆ ಓದಿಕೊಂಡ ಸುಶಿಕ್ಷಿತ ಅಧ್ಯಾಪಕಿ ಬೇರೆ. ಇಷ್ಟಿದ್ದರೂ ಎಲೆ ಇಟ್ಟುಕೊಂಡು ಊಟಕ್ಕೆ ಕುಳಿತವಳನ್ನು ಏಕಾಏಕಿ ಎಬ್ಬಿಸಿ ಹೊರಕಳಿಸಲಾಗಿತ್ತು. ಪ್ರವೇಶ ನಿರಾಕರಿಸಲ್ಪಟ್ಟ ಕನಕನ ಸಂದರ್ಭದಲ್ಲಾದಂತೆ ಇಲ್ಲಿ ಕೃಷ್ಣ ಗೋಡೆಯೊಡೆಯಲಿಲ್ಲ. ಆದರೆ ಸಾರ್ವಜನಿಕವಾಗಿ ಈ ಕುರಿತು ಸಾಕಷ್ಟು ಚರ್ಚೆ, ಪ್ರತಿಭಟನೆಗಳು ನಡೆದುವು. ಊಟದ ಪಂಕ್ತಿಯಿಂದ ಹೊರಹಾಕಲ್ಪಟ್ಟ ಹೆಣ್ಣುಮಗಳ ಜಾತಿಸಂಘಟನೆಯ ನೆಲೆಯಿಂದಲೂ ಒಂದಿಷ್ಟು ಪ್ರತಿಕ್ರಿಯೆಗಳು ಬಂದುವು. ಇದೆಲ್ಲವನ್ನೂ ಮೀರಿದ ಇನ್ನೊಂದು ವಿಚಿತ್ರವೂ ನಡೆಯಿತು. ಕುಟುಂಬದ ಹಿರೀಕರಾದ ‘ಅಜ್ಜಮಾವಂದಿ’ರನ್ನೇ ತಮ್ಮಪಾಲಿನ ದೈವಗಳೆಂದು ಭಾವಿಸಿ, ಪಾದಪೂಜೆಯಂತಹ ಅನಿಷ್ಠ ಸಂಪ್ರದಾಯದಿಂದ ಮುಕ್ತವಾಗಿ, ಗುರುವಿಲ್ಲದೆಯೂ ಗುರಿತಪ್ಪದ ‘ಅಳಿಯಕಟ್ಟಿನ’ ಆ ಸಮುದಾಯದಿಂದ ಮಠಧ್ವನಿಯೊಂದು ಮೂಡಿಬಂತು!?

ವಿಚಿತ್ರವೆಂದರೆ ಆ ಧ್ವನಿ ಅಪಮಾನಿತಳಾದ ಹೆಣ್ಣಿನ ಪರ ನಿಲ್ಲುವುದಕ್ಕಿಂತ ಎಬ್ಬಿಸಿ ಕಳುಹಿದವರ ಅಮಾನವೀಯ ನಡೆಯನ್ನು ಕುರಿತ ಸಾರ್ವಜನಿಕ ಚರ್ಚೆಯನ್ನು ತಡೆಯುವ ಆಸಕ್ತಿ ತೋರಿತು! ಜೊತೆಗೆ ‘ಶೆಟ್ಟಿ ಸಮುದ್ರ’ ಎಂಬ ಹೆಮ್ಮೆಯ ಇತಿಹಾಸ ತಮ್ಮದೆಂದು ಇಂದಿಗೂ ಅಭಿಮಾನ ಪಡುತ್ತಿರುವವರ ‘ಅಭಿಮಾನದ ಸಮದ್ರ’ವನ್ನು ಮಾಯಕಮಾಡಿ ‘ಕೆರೆ’ಯಾಗಿಸಿತ್ತು. ಹೀಗೆ ಈ ಸಂದರ್ಭದಲ್ಲಿ ಆ ಅಪಮಾನಕ್ಕೆ ಸಾಂವಿಧಾನಿಕ ಪರಿಹಾರವೂ ಸಿಗಲಿಲ್ಲ. ಸಮುದಾಯದ ಧಾರ್ಮಿಕ ಮುಖವೆಂದು ಹೇಳಿಕೊಂಡು ತನ್ನ ಹುಟ್ಟಿಗೆ ಯತ್ನಿಸುತ್ತಿರುವ ಶಕ್ತಿಯೂ ತನ್ನದೇ ಮಾತೃಮೂಲೀಯ ಪರಂಪರೆಯ ಹೆಣ್ಣುಮಗಳ ಘನತೆಗೆ ಉಂಟಾದ ಕುಂದನ್ನು ಯೋಚಿಸದಂತೆ ತಡೆಯುವ ವಿಪರೀತ ಯತ್ನವನ್ನೇ ಮಾಡಿತು. ಸಮುದಾಯ ಹಿತಚಿಂತಕನೆಂದು ಘೋಷಿಸಿಕೊಳ್ಳುತ್ತಿರುವ ಈ ಮುಖ ಸಮುದಾಯದಲ್ಲಿ ಇಲ್ಲಿಯವರೆಗೆ ಇರದ ಪಾದಪೂಜೆಯ ಅನಾಗರಿಕತೆಯನ್ನು ರೂಢಿಸುತ್ತಿರುವ ಹೊತ್ತಿನಲ್ಲೇ, ಜಾತಿಶ್ರೇಷ್ಠರ ಪಂಕ್ತಿಭೇದದ ಕಾವಲಿಗೂ ಬಳಕೆಯಾಗುತ್ತಿದೆ! ಇದು ಯಾರ ಪಾಲಿನ ಒಳ್ಳೆಯ ದಿನಗಳ ಸೂಚನೆ? (ತನ್ನ ಸ್ವಾಭಾವಿಕ ಇರುವಿಕೆಯನ್ನೇ ಕಳೆದುಕೊಳ್ಳುವಂತೆ ಬಲಾತ್ಕರಿಸುತ್ತಿರುವ ಈ ಬೆಳವಣಿಗೆಯನ್ನು ಸಮುದಾಯ ಗಂಭೀರವಾಗಿ ಪ್ರಶ್ನಿಸಿಕೊಳ್ಳಬೇಕಿದೆ.)

ಹಳೆಯ ಹುಣ್ಣೂ ಹೊಸ ಪೈಲ್ವಾನರೂ

ಇವೇನೂ ಹೊಸ ಗಾಯಗಳಲ್ಲ. ಈ ಸಮಾಜದ ಹಳೆಯ ಹುಣ್ಣುಗಳೇ. ಗುಣಕಾಣದ ಈ ಹುಣ್ಣುಗಳಿಂದಾಗಿಯೇ ಸಮಾಜವು ಆಧುನಿಕಗೊಳ್ಳುತ್ತಿರುವ ಭ್ರಮೆಯ ನಡುವೆ ಗುಡಿಯ ಹೊರಗೆ ನಿಲ್ಲಬೇಕಾದವರು ಹೊರಗೇ ನಿಂತು ವಿಧೇಯತೆ ತೋರುತ್ತಿದ್ದಾರೆ. ಹೊರನಿಲ್ಲಿಸಿದ ಗುಡಿಯೊಡೆಯರಿಂದ ಸಜ್ಜನಿಕೆಯ ಶಿಪಾರಸುಪತ್ರ ಪಡೆಯುತ್ತಿದ್ದಾರೆ! ಇದಕ್ಕೆ ಬದಲಾಗಿ ಹಳೆಯದನ್ನು ಧಿಕ್ಕರಿಸಿ ಒಳಹೋದವರು ಹೊರದಬ್ಬಿಸಿಕೊಂಡು ಸಾರ್ವಜನಿಕ ಅಪಮಾನ ಅನುಭವಿಸುತ್ತಿದ್ದಾರೆ. ಈ ಹುಣ್ಣಿಗೆ ಮುಲಾಮು ಹಚ್ಚುತ್ತಾ ಆಗಾಗ ಮತ್ತೆ ಮತ್ತೆ ಗೆಬರಿ ಗುಣವಾಗದಂತೆ ಉಳಿಸುವ ತಂತ್ರಗಾರಿಕೆ ಮಾಡುವವರು ದಲಿತರ ಕೇರಿಗೆ ಭೇಟಿಕೊಡುತ್ತಾರೆ. ಕೆಳಜಾತಿಗಳಿಗೆ ದೀಕ್ಷೆಕೊಡುವ ಮಾತಾಡುತ್ತಾರೆ. ಮಾಂಸತಿನ್ನುವವರೊಂದಿಗೆ ಸಮವಾಗಿ ಕೂತು ಉಣ್ಣಲಾಗದೆಂಬುದನ್ನೂ ದ್ವಂದ್ವವಿಲ್ಲದೆ ಸಾರಿಕೊಂಡು ಬರುತ್ತಾರೆ. ನಾವೆಲ್ಲರೂ ಒಂದೇ ಎನ್ನುತ್ತಲೇ ಶಿಷ್ಟಾಚಾರದ ಪರಂಪರೆಯನ್ನು ಮೀರಲಾಗದೆಂದೂ ಅದೇ ಉಸಿರಿನಲ್ಲಿ ಹೇಳಿ ಮುಗಿಸುತ್ತಾರೆ. ಅಷ್ಟೇ ಅಲ್ಲ, ಅದೇ ಮಾತನ್ನು ಹೊರನಿಲ್ಲಬೇಕಾದವರ ಬಾಯಿಂದಲೂ ಅವರು ಉತ್ಪಾದಿಸಬಲ್ಲರು. ವಿಧೇಯ ಸಿಪಾಯಿಗಳನ್ನು ಬೇರೆ ಬೇರೆ ರೂಪದಲ್ಲಿ ಬಿತ್ತನೆ ಮಾಡಿ ಬೆಳೆಸಿಡಬಲ್ಲರು. ಹಾಗಾಗಿಯೇ ಸಾಂವಿಧಾನಿಕ ಧ್ವನಿಯಾಗುವ ಸಂಸದನಿರಲಿ, ತಳಮೂಲ ಸಮುದಾಯದ ಮಠೀಯ ಆವೃತ್ತಿಗಳಿರಲಿ, ಎರಡೂ ಹೇಳಿಕೊಟ್ಟ ಪಾಠವನ್ನೇ ಬೇರೆ ಬೇರೆ ರೀತಿಯಲ್ಲಿ ಒಪ್ಪಿಸಿ ಯಥಾಸ್ಥಿತಿಯ ಕಾವಲಿಗೆ ನಿಲ್ಲುತ್ತಿವೆ. ಗಣತಂತ್ರವ್ಯವಸ್ಥೆಯ ಸರ್ವಮಾನ್ಯವಾದ ಸಂವಿಧಾನದ ಸಮಕ್ಷಮದಲ್ಲೇ ಎಲ್ಲವೂ ಸಾಧ್ಯವಾಗುತ್ತಿವೆ!

ಇವು ಒಂದೋ ಎರಡೋ ಜಾತಿಗಷ್ಟೇ ಸಂಭವಿಸುವ ಅಪಮಾನದ ಬಿಡಿಘಟನೆಗಳಲ್ಲ. ಇದೊಂದು ಹರಿಗಡಿಯದ ಸರಪಣಿ. ವಿರೋಧಿಸಬೇಕಾದುದು ಈ ಸರಪಣಿಯನ್ನೇ ಅಲ್ಲದೆ ಬಿಡಿತುಂಡುಗಳನ್ನಲ್ಲ. ಹಾಗಾಗಿ ಪಟ್ಟಭದ್ರರ ಹಿಡಿತಕ್ಕೆ ಪ್ರತಿಯಾಗಿ ಬಂಟರೋ, ಇನ್ನಾರೋ ತಮಗಾದ ಅನ್ಯಾಯವನ್ನು ಪ್ರತಿಭಟಿಸುವ ವೇಳೆ ತಮ್ಮಿಂದಾಗುತ್ತಿರುವ ಅನ್ಯಾಯದ ಪ್ರಾಯಶ್ಚಿತ್ತಕ್ಕೂ ತಯಾರಿರಬೇಕು. ತಮಗಿಂತ ಕನಿಷ್ಠರೆಂದು ನೀರು, ನೆಲದಿಂದ ದೂರ ಇರಿಸಿಕೊಂಡು ಬಂದವರೊಂದಿಗೆ ಒಡನಾಡುವ ಸಹತ್ವಕ್ಕೆ ತಯಾರಾಗಬೇಕು. ಉದಾಹರಣೆಗೆ ಶತಮಾನಗಳ ಕಾಲದಿಂದ ದೈವದ ಮನೆಯ ಹೊರಗೆ ನಿಂತು ದೋಲು ಹೊಡೆಯುತ್ತಾ ಇನ್ನೂ ಅಲ್ಲೇ ಕುಂತಿರುವ ಕೊರಗರಂತಹ ಮುಗ್ದರನ್ನು ಅವರು ಆಗ್ರಹಿಸುತ್ತಿರುವಂತೆಯೇ, ದೈವದಮನೆಯ ಆವರಣದೊಳಗೆ ಕೈಪ್ರಸಾದಕೊಟ್ಟು ಕರೆದುಕೊಳ್ಳುವ ಔದಾರ್ಯ ಸಾಧ್ಯವಾಗಬೇಕು. ಸಾಮಾಜಿಕ, ಆರ್ಥಿಕ, ಧಾರ್ಮಿಕವಾದ ಪಿತ್ರಾರ್ಜಿತ ಹಕ್ಕಿನ ಯಥಾಸ್ಥಿತಿಯಲ್ಲಿ ಪಲ್ಲಟ ಸಾಧ್ಯವಾಗಬೇಕು. ಇದೆಲ್ಲವನ್ನೂ ಮರೆತು ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಓಡಿಸಬಲ್ಲ ಕಾರುಗಳಿಗಾಗಿ ಹಾಸಿಬಿದ್ದ ರಸ್ತೆಯನ್ನೋ, ಎತ್ತರಕ್ಕೇರಿ ಮತ್ತೆಂದೋ ಮುರಿದು ಬೀಳುವ ಕಟ್ಟಡಗಳ ಸಂದಣಿಯನ್ನೋ ಬದಲಾದ ಭಾರತವೆಂದುಕೊಳ್ಳಲಾಗದು. ಯಾಕೆಂದರೆ ಸಾಮಾಜಿಕ ಹೊಲಸು ಮತ್ತು ಆರ್ಥಿಕ ಅಸಮಾನತೆಯಿಂದ ಪಾರಾಗುವುದಷ್ಟೇ ಬದಲಾದ ಭಾರತವನ್ನು ಕಾಣಿಸಬಲ್ಲದು.

ಆದರೆ ಮಠೀಯತೆ ಮತ್ತು ಜಢಸಾಂಪ್ರದಾಯಿಕತೆಯಲ್ಲಿ ಇಂತಹ ಕ್ರಿಯಾಗತಿಯನ್ನು ತಡೆಯುವ ಹುನ್ನಾರಗಳೇ ಇವೆ. ಅದಕ್ಕೆಂದೇ ಮಹಾಸಂಸ್ಥಾನಗಳು, parliamentಪುನರುತ್ಥಾನ, ಜೀರ್ಣೋದ್ಧಾರಗಳೆಂಬ ಹೊಸಪೈಲ್ವಾನರುಗಳ ಪಡೆಯನ್ನು ಅವು ಅಣಿಗೊಳಿಸಿಕೊಳ್ಳುತ್ತಾ ಬರುತ್ತಿವೆ. ಮೂಲಭೂತವಾಗಿ ಯಾವುದೇ ಧರ್ಮ, ಜಾತಿಯ ಸಾಂಸ್ಥಿಕಸ್ವರೂಪವು ಪ್ರತಿಷ್ಠೆಯ ಮೇಲಾಟವನ್ನು ನಡೆಸಬಹುದಲ್ಲದೆ, ಜೀವಪರತೆ, ಸಮಬಾಳಿನ ಪರವಾದ ಹೋರಾಟವನ್ನಲ್ಲ. ಅದಕ್ಕೆಂದೇ ಕುವೆಂಪು ‘ಗುಡಿ ಚರ್ಚು ಮಸೀದಿಯನ್ನು ಬಿಟ್ಟು ಹೊರಬನ್ನಿ’ ಎಂದು ಕೂಗಿ ಹೇಳಿದರು. ಯಾಕೆಂದರೆ ಯಥಾಸ್ಥಿತಿಯ ಪರವಾದ ವಿಧೇಯತೆ, ಅದರ ವಕಾಲತ್ತಿನ ಪೀಠಗಳನ್ನು ಭದ್ರಪಡಿಸುವ ಯಾವತ್ತೂ ಚಟುವಟಿಕೆಗಳು ಈ ದೇಶವನ್ನು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಜ್ಯೋತಿಭಾಪುಲೆ ಕನಸಿನ ಸಮಷ್ಟಿಹಿತದ ಭಾರತವಾಗಿಸಲಾರವು ಎಂಬ ಖಚಿತ ಅರಿವು ಅವರಿಗಿತ್ತು. ಅಂತೆಯೇ ಮೇಲಿನ ಎರಡೂ ಘಟನೆಗಳಲ್ಲೂ ಪಟ್ಟಭದ್ರರ ಹಿತಾಸಕ್ತಿಯ ಅಚ್ಚುಕಟ್ಟಾದ ಕಾವಲುಗಾರಿಕೆ ಇದೆ. ಎರಡರಲ್ಲೂ ಅಂಟೋನಿಯೋ ಗ್ರಾಮ್ಷಿ ಹೇಳುವ ಸಬಾಲ್ಟ್ರನ್(ಕಾಲಾಳುಪಡೆ)ಗಳಿವೆ. ಈ ಕಾಲಾಳು ಪಡೆಗಳ ಗಡಿಕಾವಲಿನಲ್ಲಿ ಹಾಯಾಗಿ ಮಲಗಿರುವ ಪುರೋಹಿತಶಾಹಿಯ ಪಾವಿತ್ರ್ಯದ ನಿರಾತಂಕ ನಿದ್ರೆ ಇದೆ.

ಪಾವಿತ್ರ್ಯಕ್ಕೆ ಪರಾಶಕ್ತಿ ಇಲ್ಲ

ಈ ಪಾವಿತ್ರ್ಯವಾದರೋ ಅತ್ಯಂತ ದುರ್ಬಲವಾದುದು. ದೇವರು, ದೇಗುಲ, ನೆಲ, ನೀರು ಇವೆಲ್ಲವನ್ನೂ ಮನುಷ್ಯ ಪ್ರವೇಶದಿಂದ ಕಾಯುತ್ತಾ ತಮ್ಮ ಪಾವಿತ್ರ್ಯವನ್ನು ರಕ್ಷಿಸಿಕೊಂಡಿದ್ದೇವೆ ಎಂದು ಬೀಗುವವರು ಗಮನಿಸಲೇಬೇಕಾದ ಪುಟ್ಟ ಪ್ರಕರಣವೊಂದು ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಯೇಗ್ದಾಗೆಲ್ಲಾ ಐತೆ’ ಕೃತಿಯಲ್ಲಿದೆ. ಪಾವಿತ್ರ್ಯದ ದುರ್ಬಲತೆಯ ಜೊತೆಗೆ ಅದರ ಕ್ರೌರ್ಯವನ್ನೂ ಮನಮುಟ್ಟುವಂತೆ ಹೇಳುವ ಆ ಭಾಗದಲ್ಲಿ, ಸಾಧಕ ಮುಕುಂದೂರು ಸ್ವಾಮಿಗಳಲ್ಲಿಗೆ ಬಂದ ಸಾಮಾನ್ಯನೊಬ್ಬ ಅಸ್ಪೃಶ್ಯ ಹುಡುಗ ಮಾಡಿದ ಗುಡಿಪ್ರವೇಶ, ಅದರಿಂದ ದೇವರಿಗಾದ ಮಾಲಿನ್ಯ, ಅದಕ್ಕೆ ಪರಿಹಾರವಾಗಿ ಆ ದಲಿತನಿಗೆ ಮಾಡಿದ ಶಿಕ್ಷೆ ಮತ್ತು ದೇವರಿಗೆ ಮಾಡಿದ ಶುದ್ಧೀಕರಣಗಳನ್ನು ಸಂಭ್ರಮದಿಂದಲೇ ಹೇಳಿಕೊಳ್ಳುತ್ತಾನೆ. ಹೀಗೆ ತಮ್ಮಲ್ಲಿ ಸಮಾಚಾರ ನಿವೇದಿಸಿಕೊಂಡ ಆತನಿಗೆ ಕೃಷ್ಣಶಾಸ್ತ್ರಿಗಳ ಎದುರಲ್ಲೇ, “….ಅರಿಜನ ಈಶ್ವರನ ಗುಡಿಯಾಕೆ ಓದ್ಮಾಲೆ ದೇವರಿಗೆ ಸೂತ್ಕ ಆಗೈತೆ ಬಿಡು. ಅಂತೂ ಅವಂಗೆ ದಂಡ ಹಾಕಿ, ಕತ್ತೆ ಮ್ಯಾಲೆ ಮೆರವಣಿಗೆ ಮಾಡಿ, ರುದ್ರಾಭಿಷೇಕ- ಅದೂ ಇದೂ ಮಾಡಿದ ಮ್ಯಾಲೆ ದೇವರು ಸುದ್ದಾಯ್ತು ಬಿಡು” ಎಂದೆನ್ನುತ್ತಲೇ ಬಂದವನು ಸ್ವಾಮಿಗಳ ಮಾತಿಗೆ ಸಂತೋಷಪಟ್ಟು ಹೌದೆನ್ನುವಂತೆ ಸಮ್ಮತಿಸುತ್ತಾನೆ. ಆದರೆ ಅಷ್ಟಕ್ಕೇ ಮಾತು ನಿಲ್ಲಿಸದ ಸ್ವಾಮಿಗಳು ಮತ್ತೆ ಕೃಷ್ಣಶಾಸ್ತ್ರಿಗಳ ಕಡೆಗೆ ತಿರುಗಿ ನಗುತ್ತಾ, “ನೋಡಪ್ಪಾ ಒಬ್ಬ ಅರಿಜನರ ಹುಡುಗ ದೇವರ್ ಗುಡಿಯಾಕೋದ್ರೆ ಆ ದೇವರಿಗೆ ಮೈಲಿಗೆ ಬಂದು ಸೂತ್ಕ ಆಯ್ತು ಅಂದ್ಮೇಲೆ ಆ ಇಂದುಳಿದೊನ ಪೌರು ಯಂತಾದ್ದಿರಬೇಕು! ದೇವರ ಪವರಿನಿಂದ ಅವನು ಸುದ್ದ ಆಗಿ ಚೊಕ್ಕವಾಗ್ಬೇಕಪ್ಪ. ಅದು ಬಿಟ್ಟು ಅವನ ಸಕ್ತೀನೇ ದೊಡ್ಡದಾಗಿ ದೇವರೇ ಕೆಟ್ಟೋಯ್ತು ಅಂದ್ರೆ ಅದೆಂತ ದೇವ್ರು?! ಸೋಜ್ಗ ನೋಡಪ್ಪ. ಇದಕ್ಕೇನೆನ್ನಬೇಕು!” ಎಂದು ಮತ್ತೆ ಮತ್ತೆ ನಕ್ಕರಂತೆ.(ಯೇಗ್ದಾಗೆಲ್ಲಾ ಐತೆ’ ಅಭಿನವ ಪ್ರಕಾಶನ, 2010, ಪು.100). ಶುದ್ಧಾಶುದ್ಧಗಳು ಎಂತಹ ಅಪಕಲ್ಪನೆಗಳು ಎಂಬುದನ್ನು ಇದಕ್ಕಿಂತ ಸೊಗಸಾಗಿ ಬೇರೆ ಹೇಳಬೇಕಿಲ್ಲ.

ಹೀಗೆ ಪರಿಶುದ್ಧರು ತಾವೆಂದುಕೊಳ್ಳುವವರು ಮೈಲಿಗೆಯವರನ್ನು ಶುದ್ಧಮಾಡುವ ಬದಲು ತಾವೇ ಮಲಿನವಾಗುತ್ತೇವೆ ಎಂದು ಬೆಚ್ಚಿಬೀಳುತ್ತಾರೆ. ಅಷ್ಟಕ್ಕೇ ನಿಲ್ಲದೆ ತಾವು ಮಲಿನವಾದರೆ ಲೋಕ ಕೆಡುತ್ತದೆ ಎಂದೂ ಬೆದರಿಸುತ್ತಾರೆ. ಈ ನೀಚತನ ಕೊಳೆತು ನಾರುವ ಗಂಗೆಯ ಮಾಲಿನ್ಯಕ್ಕಿಂತಲೂ ಅಪಾಯಕಾರಿ. ಈ ಕಠೋರ ಮಾಲಿನ್ಯದ ಹೂರಣ ದುರ್ಬಲವಾದ ಮಡಿಯ ಕೆಸರೇ. ಮೌಢ್ಯ ಮತ್ತು ಹಿತಾಸಕ್ತಿಗಳ ಮುಷ್ಟಿಯಲ್ಲಿ ಸಿಕ್ಕು ಕಿಲುಬುಗೊಂಡ ಪುರಾಣದ ಪರಿಶುದ್ಧ ಗಂಗೆಯಂತೆ, ಸಮಾಜಗಂಗೆಯೂ ಈ ಪಾವಿತ್ರ್ಯದಿಂದಲೇ ಪರಿತಪಿಸುತ್ತಿದೆ. ಹಾಗಾಗಿ ಗಂಗೆಯ ಪಾತ್ರವನ್ನು ತುಂಬಿಕೊಂಡ ಹೂಳೆತ್ತಿದಂತೆ ಸಮಾಜಗಂಗೆಯ ಒಡಲಿಗಂಟಿದ ‘ಮಡಿ’ ಎಂಬ ಹೊಲಸನ್ನು ಮೊದಲು ತೆರವು ಮಾಡಬೇಕಿದೆ. ಮೈಲಿಗೆಯ ಪವರಿಗೆ ಕೆಡುವ ದೇವರನ್ನೆಸೆದು ಮಡಿಯಿಲ್ಲದ ದೇವರನ್ನು ಸಾಧ್ಯವಾಗಿಸಿಕೊಳ್ಳಬೇಕಿದೆ. ಅಲ್ಲಿಯ ತನಕ ಮಡಿಯ ಕಾವಲಿಗೆ ನಿಂತ ಪಡೆಯ ಪಹರೆಯಲ್ಲಿ ಊಟದ ಪಂಕ್ತಿಯಿಂದ ಉಚ್ಛಾಟಿಸಿಕೊಳ್ಳುವ ಹಣೆಬರಹ, ಪಾರ್ಲಿಮೆಂಟ್ ಭವನವನ್ನು ಹೊಕ್ಕೂ ಗುಡಿಯಿಂದ ಹೊರಗುಳಿಯುವ ಸಜ್ಜನಿಕೆಗಳ ‘ಗತಭಾರತ’ ಹೀಗೆ ನಿರ್ಲಜ್ಜವಾಗಿ ಮೈತೆರೆದುಕೊಂಡಿರುತ್ತದೆ.