Daily Archives: July 5, 2014

ಗ್ಯಾಂಗ್ ರೇಪ್: ಒಂದು ವಿಕೃತ ಮನಸ್ಥಿತಿ


– ಡಾ.ಎಸ್.ಬಿ. ಜೋಗುರ


 

 

ಭಾರತದಲ್ಲಿ ಇದೀಗ ಗ್ಯಾಂಗ್ ರೇಪ್ ಗಳ ಪರ್ವಕಾಲ ಎನ್ನುವ ಹಾಗೆ ಅತ್ಯಾಚಾರಗಳು ಸರಣಿ ರೂಪದಲ್ಲಿ ಜರುಗುತ್ತಿವೆ. ದೆಹಲಿಯಲ್ಲಿ ಜರಗಿದ ನಿರ್ಭಯಾಳ ಅತ್ಯಾಚಾರದ rape-illustrationಪ್ರಕರಣದ ನಂತರ ನಿರಂತರವಾಗಿ ಅತ್ಯಾಚಾರಗಳು ಒಂದರ ಬೆನ್ನಲ್ಲಿ ಒಂದು ಜರಗುತ್ತಲೇ ಇವೆ. ಸಮಾಜದ ಅಪರಾಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಇನ್ಸ್ ಪೆಕ್ಟರ್ ರಾಹುಲ್ ಪಾಂಡೆ ಮತ್ತವನ ಜೊತೆಗಿದ್ದ ಇಬ್ಬರು ಕಾನಸ್ಟೆಬಲ್ ಗಳು ಕೂಡಿ ಓರ್ವ ಮಹಿಳೆಯ ಮೇಲೆ ಸತತವಾಗಿ ಎರಡು ಘಂಟೆಗಳ ಕಾಲ ಅತ್ಯಾಚಾರವೆಸಗಿ ತಮ್ಮ ರಾಕ್ಷಸತ್ವವನ್ನು ಮೆರೆದು ಮಧ್ಯರಾತ್ರಿ ಅವಳನ್ನು ಪೋಲಿಸ್ ಸ್ಟೇಷನ್ ನಿಂದ ಹೊರಬಿಟ್ಟಿರುವಂತಹ ಘಟನೆಗಳೂ ನಡೆಯುತ್ತಿವೆ. ಹಾಗಿದ್ದರೆ ಆ ಮಹಿಳೆ ಮಾಡಿದ ತಪ್ಪಾದರೂ ಏನು? ಪೋಲಿಸರು ಆಕೆಯ ಗಂಡನನ್ನು ಅನಧಿಕೃತ ಪಿಸ್ತೂಲು ಹೊಂದಿರುವ ಕಾರಣಕ್ಕೆ ಬಂಧಿಸಿದ್ದರು. ತನ್ನ ಗಂಡನನ್ನು ಬಂಧಿಸಲು ಏನು ಕಾರಣ ಎಂದು ಕೇಳಲು ಸ್ಟೆಷನ್ ಗೆ ತೆರಳಿದ ಆಕೆಯನ್ನು ಒಂದು ಘಂಟೆ ಕುಳಿತುಕೊಳ್ಳಲು ಹೇಳಿ, ಅವಳನ್ನು ಇನ್ಸ್ಪೆಕ್ಟರ್ ಪಾಂಡೆ ಮತ್ತವನ ಇಬ್ಬರು ಕಾನಸ್ಟೆಬಲ್ ಗಳು ಅತ್ಯಾಚಾರ ಎಸಗಿದ್ದಾರೆ. ಆಕೆಯ ಗಂಡನನ್ನು ಬಿಡುಗಡೆ ಮಾಡಿದ ಮೂರು ಘಂಟೆಯ ನಂತರ ಅವಳನ್ನು ಬಿಡುಗಡೆ ಮಾಡಲಾಗಿದೆ. ಹಾಗೆ ಅವಳನ್ನು ಹೊರಗೆ ಬಿಡುವಾಗ “ನೀನು ತಪ್ಪಿ ಏನಾದರೂ ಈ ವಿಷಯವನ್ನು ಬಹಿರಂಗ ಮಾಡಿದರೆ ಮತ್ತೆ ನಿನ್ನ ಗಂಡನನ್ನು ಬಂಧಿಸುತ್ತೇವ” ಎಂದು ಬೆದರಿಕೆಯೊಡ್ಡಿ ಅವಳನ್ನು ಬಿಡುಗಡೆ ಮಾಡಿದ್ದರು. ಆಕೆ ಅವರ ಗೊಡ್ದು ಬೆದರಿಕೆಗೆ ಹೆದರದೇ ಕಂಪ್ಲೇಂಟ್ ಮಾಡಿದ್ದರಿಂದಾಗಿಯೇ ಈ ಸುದ್ಧಿ ಬಯಲಾಗಿದ್ದು. ಇಲ್ಲದಿದ್ದರೆ ಇದೂ ಕೂಡಾ ಈ ಬಗೆಯ ಮುಚ್ಚಿ ಹೋದ ಸುದ್ದಿಗಳ ಸಾಲಿಗೆ ಸೇರುತ್ತಿತ್ತು.

ಈ ಮೇಲಿನ ಸಾಮೂಹಿಕ ಅತ್ಯಾಚಾರಕ್ಕಿಂತಲೂ ಇನ್ನಷ್ಟು ವಿಕೃತವಾದದ್ದು ಮಧ್ಯಪ್ರದೇಶದ ಓರ್ವ ಆದಿವಾಸಿ ಮಹಿಳೆಯ ಮೇಲೆ ಜರುಗಿದ ಅತ್ಯಾಚಾರ. ಆ ಮಹಿಳೆ ಭೈಲಿಖೇಡಾ ಗ್ರಾಮದವಳು. ಒಂದು ಜಮೀನಿನ ವಿಷಯವಾಗಿ ಆಕೆ ತಕರಾರು ತೆಗೆದಿದ್ದಳು. ಈ ತಕರಾರು ಆಕೆಯ ಗಂಡನ ವಿರುದ್ಧವೂ ಆಗಿತ್ತು. ಹೀಗಾಗಿ ಆಕೆಯ ಗಂಡನನ್ನು ಒಳಗೊಂಡು ಸುಮಾರು ಹತ್ತು ಜನರು ಸೇರಿ ಈ ಆದಿವಾಸಿ ಮಹಿಳೆಯ ಮೇಲೆ ಅತ್ಯಂತ ತುಚ್ಚವಾಗಿ ಅತ್ಯಾಚಾರ ಎಸಗಿದ್ದಾರೆ. ಮಾತ್ರವಲ್ಲದೇ ಆಕೆಯನ್ನು ವಿವಸ್ತ್ರಗೊಳಿಸಿ ಪರೇಡ್ ಮಾಡಿಸಿದ್ದಲ್ಲದೇ ಆಕೆಯ ಮಗನ ಎದುರೇ ಮೂತ್ರಿ ಕುಡಿಯುವಂತೆ ಒತ್ತಡ ಹೇರಿದ್ದಾರೆ. ವಿಚಿತ್ರವೆಂದರೆ ಈ ಎಲ್ಲ ಬಗೆಯ ನೀಚತನದಲ್ಲಿ ಆಕೆಯ ಗಂಡನೂ ಭಾಗಿಯಾದದ್ದು. ಮೇಲಿನ ಘಟನೆಯಲ್ಲಿ ಕಾಯುವವರೇ ರೇಪಿಷ್ಟ ಗಳಾದರೆ, ಇಲ್ಲಿ ಗಂಡನೆಂಬ ದಂಡ ಪಿಂಡ ಈ ಬಗೆಯ ಹೀನ ಕೆಲಸಕ್ಕೆ ಸಾಥ್ ನೀಡಿರುವದು ಮತ್ತೊಂದು ವಿಪರ್ಯಾಸ!

ಇದು ಇನ್ನೊಂದು ಘಟನೆ. ದೆಹಲಿಯ ಬಸ್ ನಿಲ್ದಾಣ ಒಂದರಲ್ಲಿ ಆ ಮಹಿಳೆ ಮಾರುಕಟ್ಟೆಗೆ ತೆರಳಲೆಂದು ನಿಂತಿದ್ದಳು. ಸಮಯ ಬೆಳಿಗ್ಗೆ ಹತ್ತು ಘಂಟೆ ಅಷ್ಟರಲ್ಲಿ ಒಂದು ಮ್ಯಾಕ್ಸಿ ಕ್ಯಾಬ್stop-rapes-bombay ಬರ್ರನೇ ಬಂದದ್ದೇ ಆಕೆಯ ಮೂಗಿಗೆ ಕ್ಲೋರೋಫರ್ಮ್ ಮೂಸಿಸಿ ಸಿನಮೀಯ ರೀತಿಯಲ್ಲಿ ಅವಳನ್ನು ಎತ್ತಿಹಾಕಿಕೊಂಡು ಹೋಗಿ ಅದರಲ್ಲಿದ್ದ ಮೂವರು ಆಕೆಯನ್ನು ಅತ್ಯಾಚಾರ ಮಾಡಿದರು. ಈಗಾಗಲೇ ಆರೋಪಿಗಳು ಪೋಲಿಸರ ವಶದಲ್ಲಿದ್ದಾರೆ. ಹೇಳುತ್ತಾ ಹೋದಲ್ಲಿ ಇಂಥಾ ಹತ್ತಾರು ಘಟನೆಗಳು ನೆನಪಾಗುತ್ತವೆ. ಇದೆಲ್ಲಾ ಏನು? ಭಾರತ ಈಗೀಗ ಇಡೀ ವಿಶ್ವದಲ್ಲಿ ಅತ್ಯಾಚಾರದ ವಿಷಯದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಸೂಚನೆಯನ್ನು ಈ ಮೂಲಕ ನಿಡುತ್ತಿದೆಯೇ? ರೇಪ್ ಎನ್ನುವುದು ಇಡೀ ವಿಶ್ವದಲ್ಲಿ ಜರುಗುವ ಒಂದು ಬಗೆಯ ಲೈಂಗಿಕ ಅಪರಾಧವಾಗಿದೆಯಾದರೂ ಭಾರತ ಮಾತ್ರ ಯಾಕೆ ಹೀಗೆ ಗ್ಯಾಂಗ್ ರೇಪ್ ಗಳ ವಿಷಯದಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿದೆ? ಅಮೇರಿಕೆಯ ‘ಟೈಮ್’ ಪತ್ರಿಕೆ ಕೂಡಾ ಆ ಬಗ್ಗೆ ಮಾತನಾಡಿದೆ. ಕಳೆದ ವರ್ಷ ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆದ ಮೂರೇ ತಿಂಗಳಲ್ಲಿ ಅತ್ಯಾಚಾರದ ಪ್ರಮಾಣ ಸುಮಾರು 359 ರಷ್ಟಾಗಿತ್ತು. ಅದರ ಹಿಂದಿನ ವರ್ಷ ಆ ಅವಧಿಯಲ್ಲಿ ಅದು ಕೇವಲ 143 ರಷ್ಟಿತ್ತು. ಇಂಗ್ಲಂಡ್ ನ ಗಾರ್ಡಿಯನ್ ಪತ್ರಿಕೆ ಹೇಳುವಂತೆ ಇಂಗ್ಲಂಡಿನಲ್ಲಿ 7 ಪ್ರತಿಶತ ರೇಪ್ ಪ್ರಕರಣಗಳು ವರದಿಯಾದರೆ, ಸ್ವೀಡನ್ ದಲ್ಲಿ 10 ಪ್ರತಿಶತ, ಭಾರತದಲ್ಲಿ ಅದು 24.4 ಪ್ರತಿಶತದಷ್ಟು ಅತ್ಯಾಚಾರದ ಪ್ರಕರಣಗಳು ಬಗ್ಗೆ ವರದಿಯಾಗುತ್ತವೆ. ಭಾರತದ ಮಾಧ್ಯಮಗಳು ಕೂಡಾ ಅತ್ಯಾಚಾರದ ವಿಷಯವಾಗಿ ಅತ್ಯಂತ ವಸ್ತುನಿಷ್ಟವಾಗಿ ವರದಿ ಮಾಡಿರುವದಿದೆ. ಅದರ ಪರಿಣಾಮವೇ ಲಕ್ಷಾನುಗಟ್ಟಲೆ ಜನ ರೇಪ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದು. ಯಾವುದೇ ದೇಶದ ಪ್ರಜೆಗಳು ಅದರಲ್ಲೂ ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರಗಳ ಜನತೆ ಅದನ್ನು ಒಟ್ಟಾರೆ ಸಹಿಸುವದಿಲ್ಲ. ತನ್ನ ದೇಶವೊಂದು ಆ ಮೂಲಕ ಜಗತ್ತಿನಲ್ಲಿ ಗುರುತಿಸಿಕೊಳ್ಳುವದನ್ನು ಯಾರೂ ಇಷ್ಟ ಪಡುವದಿಲ್ಲ.

ಈ ಗ್ಯಾಂಗ್ ರೇಪ್ ಗಳಿಗೆ ಸಂಬಂಧಿಸಿ ಅನೇಕ ಅಧ್ಯಯನಗಳು ಜರುಗಿವೆ. ಜೋಹಾನ್ಸಬರ್ಗ್ ನಗರವನ್ನು ಆಧರಿಸಿ ಅಧ್ಯಯನ ಮಾಡಿರುವ ಲಿಸಾ ಮತ್ತು ಎಸ್.ಹಾಫ್ಜಿ ಹೇಳುವಂತೆ ‘ಈ ಬಗೆಯ ಅತ್ಯಾಚಾರಗಳಲ್ಲಿ ಕೆಲವು ಯುವಕರು ಒಬ್ಬಾಕೆಯನ್ನು ಹೊಂಚು ಹಾಕುತ್ತಿರುತ್ತಾರೆ. ಇಲ್ಲಿ ಹಿಂಸೆಯ ರೀತಿ ವಿಕೃತವಾಗಿರುತ್ತದೆ’ ಎನ್ನುತ್ತಾರೆ. ಅವರು ಅಧ್ಯಯನ ಮಾಡಿದ 591 ಪ್ರಕರಣಗಳ ಪೈಕಿ ಅದರಲ್ಲಿ ಮೂವರು ಮಾತ್ರ ಈ ರೇಪ್ ಕೃತ್ಯದಲ್ಲಿ ಅಪರಿಚಿತರು. ಮಿಕ್ಕಂತೆ ಇವರಲ್ಲಿ ಬಹುತೇಕರು ಮೊದಲ ಬಾರಿಗೆ ಈ ಬಗೆಯ ಕೃತ್ಯದಲ್ಲಿ ತೊಡಗಿದವರಲ್ಲ ಎನ್ನುವದನ್ನೂ ಅವರು ಬಹಿರಂಗ ಪಡಿಸಿದ್ದಾರೆ. ಗ್ಯಾಂಗ್ ರೇಪಗಳ ಜೊತೆಯಲ್ಲಿ ಭೌಗೋಳಿಕ ಸಂಗತಿಗಳು ಕೂಡಾ ನೇರವಾದ ಸಂಬಂಧ ಹೊಂದಿವೆ ಎನ್ನುವುದನ್ನು ಈ ಲೇಖಕರು ತಮ್ಮ ಅಧ್ಯಯನದ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಪ್ರಕಾರ ಬೇಸಿಗೆಯ ಸಂದರ್ಭದಲ್ಲಿಯೇ ಈ ಬಗೆಯ ಪ್ರಕರಣಗಳು ಹೆಚ್ಚು. ಮೇ ತಿಂಗಳಲ್ಲಿ 12 ಪ್ರತಿಶತ ಸಾಮೂಹಿಕ ಅತ್ಯಾಚಾರಗಳು ಜರುಗಿದ ಬಗ್ಗೆ ಅವರು ದಾಖಲಿಸಿದ್ದಾರೆ. ಜೊತೆಗೆ ಶನಿವಾರ ಹಾಗೂ ರವಿವಾರ ಅಂದರೆ ವೀಕೆಂಡ್ ಗಳಲ್ಲಿಯೇ ಸುಮಾರು 41 ಪ್ರತಿಶತ ಅತ್ಯಾಚಾರಗಳು ಜರುಗುತ್ತವೆ ಎಂದಿದ್ದಾರೆ. ಬಹುತೇಕವಾಗಿ ಗ್ಯಾಂಗ್ ರೇಪ್ ಗಳು ರಾತ್ರಿ ವೇಳೆಯಲ್ಲಿಯೇ ಜರುಗುವುದು ಹೆಚ್ಚು ಎಂದು ಲಿಸಾ ಹೇಳುತ್ತಾಳೆ. ಅವಳ ಪ್ರಕಾರ ಸುಮಾರು 33 ಪ್ರತಿಶತ ಗ್ಯಾಂಗ್ ರೇಪ್ ಗಳು ಸಾಯಂಕಾಲ 7 ರಿಂದ ರಾತ್ರಿ 9 ರ ನಡುವೆ ಘಟಿಸಿದ್ದೇ ಹೆಚ್ಚು ಎನ್ನುತ್ತಾಳೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಂತೂ ಬಹುತೇಕ ಈ ಬಗೆಯ ಗ್ಯಾಂಗ್ ರೇಪ್ ಗಳಲ್ಲಿ ಗನ್ ಬಳಕೆ ಇಲ್ಲವೇ ಇತರೇ ಆಯುಧಗಳ ಬಳಕೆ ಸಾಮಾನ್ಯ. ಅತಿ ಹೆಚ್ಚು ಮಹಿಳೆ ಏಕಾಂಗಿಯಾಗಿ ವಾಕಿಂಗ್ ಮಾಡುವಾಗಲೇ ಅಪಹರಿಸಿದ ಪ್ರಕರಣಗಳಿವೆ. ಕೆಲ ಪ್ರಕರಣಗಳಲ್ಲಿ ಆ ಹುಡುಗಿಯ ಬಾಯ್ ಫ್ರೆಂಡ್ ಕೂಡಾ ಸಾಥ್ ನೀಡಿದ ಬಗ್ಗೆ ಲಿಸಾ ಮಾಡಲಾದ ಅಧ್ಯಯನದಿಂದ ತಿಳಿದುಬಂದಿದೆ.

ಬ್ರೌನ್ ಮಿಲ್ಲರ್ ಎನ್ನುವ ಮಹಿಳೆ ಹೇಳುವಂತೆ ಈ “ಅತ್ಯಾಚಾರ ಎನ್ನುವುದು ಪುರುಷರು ಮಹಿಳೆಯ ಮೇಲೆ [Rape should not be viewed as a deviant sexual act, but as an aggressive and antisocial tool for men’s control over women.] ನಿಯಂತ್ರಣ ಹೇರಲು ಅನುಸರಿಸುವ ಸಮಾಜಬಾಹಿರ ವರ್ತನೆ” ಎಂದಿದ್ದಾಳೆ. ಇನ್ನೂ ಕೆಲವು ಚಿಂತಕರು ಅತ್ಯಾಚಾರ ಎನ್ನುವುದು ಕೇವಲ ಅದಕ್ಕೆ ಸಿಲುಕಿರುವ ಓರ್ವ ಮಾಹಿಳೆಗೆ ಮಾತ್ರ ಸೀಮಿತವಾದ ಸಂಗತಿ ಇದಲ್ಲ, ಅದು ಒಟ್ಟು ಹೆಣ್ಣು ಕುಲವನ್ನೇ ಘಾಸಿಗೊಳಿಸುವಂಥದು ಎನ್ನುತ್ತಾರೆ. ಆ ಮೂಲಕ ಅವರು ಇದೊಂದು ಲಿಂಗ ಸಂಬಂಧಿ ಮನ:ಪ್ರವೃತ್ತಿಯೂ ಹೌದು ಎನ್ನುವ ಅಭಿಪ್ರಾಯವನ್ನು ನೀಡಿದ್ದಾರೆ. ಚಾಪೆಲ್ ಎನ್ನುವ ಚಿಂತಕ ಮಾಡಲಾದ ಅಧ್ಯಯನದಂತೆ ಈ ಗ್ಯಾಂಗ್ ರೇಪಲ್ಲಿ ಕೇವಲ ಲೈಂಗಿಕ ತೀಟೆ ಮಾತ್ರ ಅಡಕವಾಗಿರದೇ ಇತರೇ ಬಗೆಯ ದೈಹಿಕ ಹಿಂಸೆಯಲ್ಲಿಯೂ ರೇಪಿಸ್ಟ್ ಗಳು ತೊಡಗುತ್ತಾರೆ ಎಂದಿರುವರು.

ಗ್ಯಾಂಗ್ ರೇಪಿಸ್ಟ್ ಗಳ ಲಕ್ಷಣಗಳೇನು? ಅವರ ವ್ಯಕ್ತಿತ್ವ ಎಂಥದು?

ಈ ಬಗೆಯ ಪ್ರಶ್ನೆಯನ್ನಿಟ್ಟುಕೊಂಡು ಬಹಳಷ್ಟು ಅಧ್ಯಯನಗಳು ಮುಂಚಿನಿಂದಲೂ ನಡೆದಿವೆ. ಈ ಬಗೆಯ ರೇಪಿಸ್ಟ್ ಗಳನ್ನು ಎಡ್ವರ್ಡ್ ಎನ್ನುವ ಚಿಂತಕರು [1983] national-post-danish-gang-rape-delhi‘ಅನಿಯಂತ್ರಿತ ಉತ್ತೇಜಿತರು’ ಎಂದಿರುವರು. ಸ್ಕಲ್ಲಿ ಮತ್ತು ಮರೊಲಾ ಎನ್ನುವವರು [1984] ಇವರನ್ನು ‘ಅಸಮತೋಲನದ ವ್ಯಕ್ತಿತ್ವದವರು’ ಎಂದಿದ್ದಾರೆ. ಬಹುತೇಕವಾಗಿ ಈ ರೇಪಿಸ್ಟ್ ಗಳು 30 ವರ್ಷ ವಯೋಮಿತಿಯ ಒಳಗಿನವರೇ ಹೆಚ್ಚು ಎನ್ನುವುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಚಾಪೆಲ್ ಎನ್ನುವ ಅಪರಾಧಶಾಸ್ತ್ರಜ್ಞ ಹೇಳುವ ಹಾಗೆ “ಈ ಬಗೆಯ ರೇಪಿಸ್ಟ್ ಗಳು ದಿಢೀರನೇ ಆದವರಲ್ಲ. ಸಾಮಾಜಿಕ ವ್ಯವಸ್ಥೆಯ ಬಗ್ಗೆ ರೋಸಿ ಹೋದವರು, ಈ ಮುಂಚೆ ಅಪರಾಧಿ ಕೃತ್ಯಗಳಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ತೊಡಗಿದವರಾಗಿರುತ್ತಾರೆ” ಎನ್ನುತ್ತಾರೆ. ಸ್ಕಲ್ಲಿ ಮತ್ತು ಮರೋಲಾ ಅವರು ಅಧ್ಯಯನ ಮಾಡಲಾದ 114 ರೇಪಿಸ್ಟ್ ಗಳಲ್ಲಿ 82 ಪ್ರತಿಶತದಷ್ಟು ಈ ಮುಂಚೆಯೇ ಬೇರೆ ಬೇರೆ ಅಪರಾಧಿ ಪ್ರಕರಣಗಳಲ್ಲಿ ಸಿಲುಕಿರುವವರಾಗಿದ್ದರು. ಇನ್ನು ಬಹುತೇಕವಾಗಿ ಗ್ಯಾಂಗ್ ರೇಪ್ ಗಳಲ್ಲಿ ಭಾಗಿಯಾದವರು ಒಂದು ಬಗೆಯ ತಯಾರಿಯೊಂದಿಗೆ ಈ ಕೃತ್ಯದಲ್ಲಿ ತೋಡಗಿದ್ದೇ ಹೆಚ್ಚು. ಯಾವಾಗ, ಎಲ್ಲಿ ಮತ್ತು ಹೇಗೆ ಎನ್ನುವ ಬಗ್ಗೆ ವ್ಯವಸ್ಥಿತವಾದ ಸಂಚು ರೂಪಿಸಲಾಗಿರುತ್ತದೆ. [ಕ್ರಿಮಿನಲ್ ಬಿಹೇವಿಯರ್ – ಕರ್ಟ್ ಬಾರ್ಟಲ್ ಮತ್ತು ಅನ್ನೇ ಬರ್ಟಲ್ ಪುಟ- 203]

ತಡೆಗಟ್ಟಲು ಸಾಧ್ಯವಿಲ್ಲವೆ?

ಈ ಗ್ಯಾಂಗ್ ರೇಪ್ ಗಳನ್ನು ಒಟ್ಟಾರೆ ತಡೆಯಲು ಸಾಧ್ಯವಿಲ್ಲದಿದ್ದರೂ ನಿಯಂತ್ರಣವಂತೂ ಮಾಡಬಹುದು.

 • ಮಹಿಳೆಯ ಬಗೆಗಿನ ಗೌರವಾದಾರಗಳನ್ನು ಮತ್ತೆ ಮತ್ತೆ ತಿಳಿಹೇಳಬೇಕು
 • ಕಾನೂನನ್ನು ಇನ್ನಷ್ಟು ಸಶಕ್ತಗೊಳಿಸಬೇಕು
 • ಹೆಚ್ಚೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಬೇಕು.
 • ಪೋಲಿಸು-ಕಾನೂನು-ನ್ಯಾಯಾದೀಶರು ಮತ್ತು ಮಹಿಳಾ ಸಂಘಟನೆಗಳ ನಡುವೆ ಆಗಾಗ ಸಂವಾದ ಏರ್ಪಡಬೇಕು
 • ಈ ಬಗೆಯ ಅಪರಾಧಗಳ ಕಾರ್ಯಾಚರಣೆ ತೀಕ್ಷ್ಣವಾಗಬೇಕು, ಹೆಚ್ಚು ಚುರುಕಾಗಬೇಕು
 • ಈ ವಿಷಯದಲ್ಲಿ ನುರಿತ ಮಹಿಳೆಯರನ್ನು ಹೆಚ್ಚೆಚ್ಚು ಪೋಲಿಸ್ ಇಲಾಖೆಯಲ್ಲಿ ನೇಮಿಸಬೇಕು
 • ಮಹಿಳಾ ಸಂಘಟನೆಗಳು ಅತ್ಯಾಚಾರಕ್ಕೊಳಗಾದ ಮಹಿಳೆಗೆ ನ್ಯಾಯ ಒದಗಿಸಲು ಪಟ್ಟು ಬಿಡದೇ ಹೋರಾಡಬೇಕು
 • ಈ ವಿಷಯವಾಗಿ ಭ್ರಷ್ಟರಾಗುವವರನ್ನು ತಕ್ಷಣ ಅಮಾನತುಗೊಳಿಸಬೇಕು
 • ಮಾಧ್ಯಮಗಳು ಈ ಬಗೆಯ ಸುದ್ಧಿಯನ್ನು ತೋರಿಸುವಂತೆಯೇ ಅಪರಾಧಿಗೆ ಶಿಕ್ಷೆಯಾದಾಗಲೂ ಅದನ್ನು ಮತ್ತೆ ಮತ್ತೆ ಎತ್ತಿ ತೋರಿಸಬೇಕು.
 • ಅತಿ ಮುಖ್ಯವಾಗಿ ಇಂಟರ್ನೆಟ್ ನಲ್ಲಿಯ ಪೋರ್ನ್ ವಿಡಿಯೋ ಗಳ ಮೇಲೆ ನಿಷೇಧ ಹೇರಬೇಕು.
 • ಸಿನೇಮಾದಲ್ಲಿ ಅಶ್ಲೀಲ ಮತ್ತು ಅತ್ಯಾಚಾರದ ದೃಶ್ಯಗಳಿರದಂತೆ ನಿರ್ಬಂಧ ಹೇರಬೇಕು.

ಹೀಗೆಲ್ಲಾ ಮಾಡುವ ಮೂಲಕ ಈ ಅತ್ಯಾಚಾರದ ವೇಗವನ್ನು ಕಡಿಮೆ ಮಾಡಬಹುದು. ಆದರೆ ಸಂಪೂರ್ಣವಾಗಿ ಇಲ್ಲವಾಗಿಸುವದು ಕಷ್ಟ. ಅತ್ಯಾಚಾರದಂತ ನಿಸರ್ಗಕ್ಕೆ ವ್ಯತಿರಿಕ್ತವಾದ ಈ ಗುಣ ಮನುಷ್ಯನಲ್ಲಿ ಮಾತ್ರ ಇದೆ. ಇತರೇ ಕೀಳು ಪ್ರಾಣಿಗಳಲ್ಲಿ ಈ ಬಗೆಯ ಕೃತ್ಯವನ್ನು ನಾವು ಕಾಣುವದಿಲ್ಲ. ನಿತ್ಯದ ಸುದ್ದಿಪತ್ರಿಕೆಗಳನ್ನು ಓದಲು ರೇಜಿಗೆ ಎನಿಸುವಂತೆ ಅತ್ಯಾಚಾರದ ಪ್ರಕರಣಗಳು ನಮ್ಮಲ್ಲಿ ಜರಗುತ್ತಿವೆ. ಮಾಧ್ಯಮಗಳು ಇನ್ನು ಮುಂದೆ ಅತ್ಯಾಚಾರ ಎಸಗಿದವರು ಅನುಭವಿಸಿದ ಶಿಕ್ಷೆಯನ್ನು ಹೆಚ್ಚೆಚ್ಚು ಭಿತ್ತರಿಸುವಂತಾಗಲಿ. ಅತ್ಯಾಚಾರದ ವಿಷಯದಲ್ಲಿ ಆ ಬಗೆಯ ಕ್ರಿಯೆಗೆ ಇಳಿಯುವವರಲ್ಲಿ ಭಯ ಬಿತ್ತುವ ಅಗತ್ಯವಿದೆ. ಅದು ಸಮಾಜದ ಯಾರಿಂದಲಾದರೂ ಆಗಲಿ, ಯಾವುದರಿಂದಾದರೂ ಆಗಲಿ. ಒಟ್ಟಾರೆ ಹಾವು ಸಾಯಬೇಕಷ್ಟೆ.