Daily Archives: July 16, 2014

ಏರುತಿದೆ ಜನಸಂಖ್ಯೆ, ಹೆಚ್ಚುತಿದೆ ಅಸಮಾನತೆ

– ಡಾ. ಅರುಣ್ ಜೋಳದಕೂಡ್ಲಿಗಿ

ನಾವಿಂದು ಸಾಂಪ್ರದಾಯಿಕವಾಗಿ ಜನಸಂಖ್ಯಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಇದು ಕೇವಲ ಆಚರಣೆಯಾಗುವುದರಿಂದ ಉಪಯೋಗವಿಲ್ಲ. ಈ ಸಂದರ್ಭದಲ್ಲಿ ಜನಸಂಖ್ಯೆಯ ಹೆಚ್ಚಳ ಮತ್ತದರ ದುಷ್ಪರಿಣಾಮಗಳ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಅಂತೆಯೇ ಆಯಾ ದೇಶವು ಜನಸಂಖ್ಯೆಯ ನಿಯಂತ್ರಣದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸದ್ಯಕ್ಕಿರುವ ಜಗತ್ತಿನ ಜನಸಂಖ್ಯೆಯ ಜಾಡು ಹಿಡಿದು ಸುತ್ತಾಡಿದರೆ ಭಯ ಆವರಿಸುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ.

ಜಗತ್ತಿನ ಜನಸಂಖ್ಯಾ ಬೆಳವಣಿಗೆ ವಾರ್ಷಿಕ ಶೇ 1.14 ರಷ್ಟಿದೆ. ಸರಿಸುಮಾರು 8 ಕೋಟಿ ಜನಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಿದೆ. world-populationಕ್ರಿ.ಶ 1800 ರಲ್ಲಿ ಜಾಗತಿಕ ಜನಸಂಖ್ಯೆ 100 ಕೋಟಿ (ಒಂದು ಬಿಲಿಯನ್) ಇದ್ದದ್ದು 1987 ರ ಹೊತ್ತಿಗೆ 500 ಕೋಟಿ ತಲುಪಿತ್ತು. ಆಗ ಏರುತ್ತಿರುವ ಜನಸಂಖ್ಯೆಯನ್ನು ತಗ್ಗಿಸುವ ಜಾಗೃತಿ ಮೂಡಿಸುವ ಸಲುವಾಗಿ ಅಂದಿನಿಂದ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೀಗ ಜಾಗತಿಕ ಜನಸಂಖ್ಯೆ 700 ಕೋಟಿಯನ್ನು ಮುಟ್ಟಿದೆ. ಯುನೈಟೆಡ್ ಸ್ಟೇಟ್ಸ್ ಸೆನ್ಸಸ್ ಬ್ಯೂರೋ ಪ್ರಕಾರ ಪ್ರತಿ 8 ಸೆಕೆಂಡಿಗೆ ಒಂದು ಮಗುವಿನ ಜನನವಾಗುತ್ತದೆ. ಪ್ರತಿ 12 ಸೆಕೆಂಡಿಗೆ ಒಬ್ಬರ ಸಾವಾಗುತ್ತದೆ. ಒಟ್ಟಾರೆ ಪ್ರತಿ 14 ಸೆಕೆಂಡಿಗೆ ಒಂದು ಮಗು ಭೂಮಿಗೆ ಪ್ರವೇಶ ಪಡೆಯುತ್ತದೆ.

ನೈಸರ್ಗಿಕ ಸಮತೋಲನಕ್ಕೆ ಪೂರಕವಾದ ತಾಳಿಕೆ ಮಟ್ಟಕ್ಕಿಂತ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ನೈಸರ್ಗಿಕ ವೈಪರೀತ್ಯಕ್ಕೂ ಇದು ಕಾರಣವೆಂದು ಎಕಾಲಜಿಸ್ಟ್‌ಗಳು ಅಭಿಪ್ರಾಯಪಡುತ್ತಾರೆ. ಬಡ ರಾಷ್ಟ್ರಗಳಲ್ಲಿ ಬಡತನಕ್ಕೂ ಜನಸಂಖ್ಯಾ ಹೆಚ್ಚಳಕ್ಕೂ ಸಂಬಂಧವಿದೆ. ಇದನ್ನು ಸಾಬೀತುಪಡಿಸುವ ಸಿದ್ಧಾಂತಗಳೆ ಹುಟ್ಟಿಕೊಂಡಿವೆ. ಅಭಿವೃದ್ಧಿ ಹೊಂದದ ದೇಶಗಳಲ್ಲಿ 1.2 ಬಿಲಿಯನ್ ಜನರು ಬಡತನದ ರೇಖೆಯಲ್ಲಿ ಜೀವಿಸುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾದಂತೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಆಯಾ ದೇಶಗಳು ಹಿಂದುಳಿಯುತ್ತವೆ. ಈ ಬಗೆಯ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಜನರು ಇನ್ನಷ್ಟು ಬಡತನಕ್ಕೆ ನೂಕಲ್ಪಡುತ್ತಾರೆ. ಸಮಸ್ಯೆಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಅಂತೆಯೇ ಬಡವ ಶ್ರೀಮಂತರ ಅಂತರವೂ global-populationಹೆಚ್ಚಾಗುತ್ತಿದೆ. ಶ್ರೀಮಂತ ವರ್ಗಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯೆ ಬಂಡವಾಳವಾಗಿಯೂ, ಗಿರಾಕಿಗಳಾಗಿಯೂ ಪರಿವರ್ತಿತವಾಗುತ್ತಿರುವುದು ವಿಪರ್ಯಾಸವಾಗಿದೆ.

ಭೂಗೋಳ ತಜ್ಞರು ಅಭಿಪ್ರಾಯ ಪಡುವಂತೆ ಭೂಮಿಯ ಮೇಲೆ ಒಟ್ಟು 110 ಬಿಲಿಯನ್ ಜನಸಂಖ್ಯೆ ಬದುಕಬಹುದು. ಅಂದರೆ ಅಷ್ಟು ಜನ ಜೀವಿಸಲು ಕನಿಷ್ಠ ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಭೂಮಿಗೆ ಸಾಮರ್ಥ್ಯವಿದೆ. ಆದರೆ ಈಗಿರುವ ಜನಸಂಖ್ಯೆ ಭೂಮಿಯ ಶೇ 6 ರಷ್ಟರಲ್ಲಿ ಜೀವಿಸುತ್ತಿದ್ದಾರೆ. ಈ ಶೇ 6 ರಷ್ಟು ಜನಸಂಖ್ಯೆಯ ಮಿತಿಮೀರಿದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಿಂದಾಗಿ ನೈಸರ್ಗಿಕ ಸಮತೋಲನ ಏರುಪೇರಾಗುತ್ತಿದೆ. ಇದನ್ನು ನೋಡಿದರೆ ಈಗಿರುವ ಜನಸಂಖ್ಯೆ ತಮ್ಮ ಅಗತ್ಯಕ್ಕಿಂತ ನೂರುಪಟ್ಟು ನೈಸರ್ಗಿಕ ಸಂಪನ್ಮೂಲಗಳನ್ನು ವ್ಯಯಮಾಡುತ್ತಿದೆ. ಈ ಬಗೆಯ ಏರುಪೇರಿನ ಪರಿಣಾಮ ಜಾಗತಿಕ ತಾಪಮಾನ ಹೆಚ್ಚಳ, ಭೂಕಂಪ, ಸುನಾಮಿ ಮತ್ತಿತರ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ.

ಈಗಿರುವ ಜನಸಂಖ್ಯೆಯಲ್ಲಿ ಧಾರ್ಮಿಕ ಸಮುದಾಯಗಳ ಬಲಾಬಲವೂ ಹೆಚ್ಚುತ್ತಿದೆ. ಜಾಗತಿಕವಾಗಿ ಶೇ 33 ರಷ್ಟು ಕ್ರಿಶ್ಚಿಯನ್ನರು, ಶೇ 23 ರಷ್ಟು ಮುಸ್ಲೀಮರು, ಶೇ 15 ರಷ್ಟು ಹಿಂದುಗಳು, ಶೇ 7 ರಷ್ಟು ಬೌದ್ಧರು, ಶೇ 6 ರಷ್ಟು ಜನಪದ ಅಥವಾ ಬುಡಕಟ್ಟು ಧರ್ಮವನ್ನು ಅನುಸರಿಸುವವರು, ಶೇ 1 ರಷ್ಟು ಜೈನ ಸಿಕ್ ಮೊದಲಾದ ಧರ್ಮಗಳಿವೆ. ಈ ಬಗೆಯ ಧಾರ್ಮಿಕ ಸಮುದಾಯಗಳ ಏರುಪೇರಿಗೂ ಆಯಾ ಧರ್ಮಿಯರು ಅನುಸರಿಸುವ ವೃತ್ತಿಪಲ್ಲಟಗಳಿಗೂ ಸಂಬಂಧವಿದೆ. ಅಂತೆಯೇ ಯಾವುದೇ ನಿರ್ದಿಷ್ಟ ಧರ್ಮದ ಚೌಕಟ್ಟಿನಲ್ಲಿ ಗುರುತಿಸಿಕೊಳ್ಳದ ಜನರು ಜಾಗತಿಕವಾಗಿ ಶೇ 16 ರಷ್ಟಿದ್ದಾರೆ. ಇದು ಧರ್ಮಾತೀತವಾದ ಬಂಡವಾಳಶಾಹಿ ನೆಲೆಯಲ್ಲಿ ಉತ್ಪತ್ತಿಯಾದ ಹೊಸ ಬಗೆಯ ಜನಸಮುದಾಯವೆನ್ನಬಹುದು. ಇವರಿಗೆ ಆರ್ಥಿಕತೆಯೆ ಧರ್ಮ.

ಮುಖ್ಯವಾಗಿ ಜನಸಂಖ್ಯೆಯು ಹೆಚ್ಚಿದಂತೆ ಜಾಗತಿಕವಾಗಿಯೂ ಮನುಷ್ಯರ ಜೀವನಮಟ್ಟವೂ ಕುಸಿಯುತ್ತಿದೆ. crowd_india_trainಹೆಚ್ಚಿನ ಜನಸಂಖ್ಯೆಯಿಂದಾಗಿ ಆಯಾ ದೇಶಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದೆ ಬೀಳುತ್ತಿವೆ. ಜಾಗತಿಕ ಸಮಸ್ಯೆಗಳು ಆಂತರಿಕವಾಗಿ ಜನಸಂಖ್ಯೆಯ ಹೆಚ್ಚಳದೊಂದಿಗೆ ತಳಕುಹಾಕಿಕೊಂಡಿವೆ. ಜನವಸತಿ ಪ್ರದೇಶ ಹೆಚ್ಚುತ್ತಿರುವುದರಿಂದ ಕಾಡು ಮರಗಿಡಗಳ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೃಷಿ ಆಧಾರಿತ ಆರ್ಥಿಕತೆ ಕೈಗಾರಿಕಾ ವಲಯ ಆಧಾರಿತ ಆರ್ಥಿಕತೆಯಾಗಿ ಬದಲಾಗಿದೆ. ಇದರಿಂದಾಗಿ ಜಾಗತಿಕ ತಾಪಮಾನ ಹೆಚ್ಚಳಕ್ಕೂ, ಜನಸಂಖ್ಯಾ ಹೆಚ್ಚಳಕ್ಕೂ ಸಂಬಂಧವಿದೆ. ಹೀಗೆ ಪ್ರತಿಯೊಂದು ಜಾಗತಿಕ ಸಮಸ್ಯೆಗಳ ಹಿಂದೆಯೂ ಹೆಚ್ಚುತ್ತಿರುವ ಜನಸಂಖ್ಯೆಯ ನೆರಳು ಕಾಣುತ್ತಿದೆ.

ಭಾರತದ ಸಂದರ್ಭದಲ್ಲಿ ಜನಸಂಖ್ಯೆಯ ವಿವರಗಳನ್ನು ನೋಡಿದರೆ, ಕೆಲವು ಸಂಗತಿಗಳು ಜಾಗತಿಕ ವಿದ್ಯಮಾನಗಳ ಜತೆ ನಂಟು ಪಡೆದಿವೆ. ಅಂತೆಯೇ ಭಾರತಕ್ಕೆ ವಿಶಿಷ್ಟವಾದ ಅಂಶಗಳೂ ಇವೆ. 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ ಅಥವಾ ವಿಶ್ವದ ಜನಸಂಖ್ಯೆಯ ಶೇ. 17 ರಷ್ಟಿದೆ. ದೇಶದ ಜನಸಂಖ್ಯೆ 2001 ಕ್ಕೆ ಹೋಲಿಸಿದರೆ ಶೇ. 17.6 ರಷ್ಟು ಅಧಿಕಗೊಂಡಿದೆಯಾದರೂ ಬೆಳವಣಿಗೆಯ ಸರಾಸರಿ ಇಳಿಮುಖವಾಗಿದೆ. ದೇಶದ ಒಟ್ಟು 121 ಕೋಟಿ ಜನಸಂಖ್ಯೆಯಲ್ಲಿ 62.37 ಕೋಟಿ ಪುರುಷರು ಮತ್ತು 58.65 ಕೋಟಿ ಮಹಿಳೆಯರಿದ್ದಾರೆ.

ದೇಶದ ಹಾಲಿ ಜನಸಂಖ್ಯೆ ಅಮೆರಿಕ, ಇಂಡೋನೇಷ್ಯ, ಬ್ರೆಝಿಲ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿದೆ. 19,98,12,341 ಜನಸಂಖ್ಯೆ ಇರುವ ಉತ್ತರಪ್ರದೇಶ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಲಕ್ಷದ್ವೀಪದಲ್ಲಿ ಕೇವಲ 64,473 ಜನರಿದ್ದು ಕಡಿಮೆ ಜನಸಂಖ್ಯೆ ಹೊಂದಿದೆ. ಭಾರತದ ಜನಸಂಖ್ಯೆ ಇದೇ ರೀತಿಯಲ್ಲಿ ಹೆಚ್ಚುತ್ತಿದ್ದರೆ 2030 ರ ಹೊತ್ತಿಗೆ ಚೀನಾವನ್ನೂ ಹಿಂದಿಕ್ಕಿ ಪ್ರಪಂಚದ ಮೊದಲನೆಯ ದೇಶವಾಗುತ್ತದೆ. 2011 ರಲ್ಲಿ ಪ್ರತಿ 1000 ಗಂಡುಮಕ್ಕಳಿಗೆ 914 ಹೆಣ್ಣುಮಕ್ಕಳ ಅನುಪಾತವಿದ್ದು, ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಅನುಪಾತ ಪ್ರಮಾಣ ಇಳಿಮುಖವಾಗಿದೆ. ಈಶಾನ್ಯ ನವದೆಹಲಿ ಜಿಲ್ಲೆಯು ಅತಿ ಹೆಚ್ಚು ಜನಸಾಂದ್ರತೆ (ಪ್ರತಿ ಚದರ ಕಿ.ಮೀ.ಗೆ 37,346) ಹೊಂದಿದ್ದರೆ, ಅರುಣಾಚಲಪ್ರದೇಶದ ದಿಲ್‌ಬಂಗ್ ಕಣಿವೆ (ಪ್ರತಿ ಚದರ ಕಿ.ಮೀ. ಒಬ್ಬರು) ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿದೆ.

ಭಾರತದ ಜನಸಂಖ್ಯೆ ಸುಮಾರು 1.24 ಬಿಲಿಯನ್ (1,244,940,000, June 4, 2014, Population Clock ಅಂದಾಜು). population-explosionಪ್ರಪಂಚದ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಈ ದೇಶದಲ್ಲಿದ್ದಾರೆ. ಜಾಗತಿಕ ಜನಸಂಖ್ಯೆಯಲ್ಲಿ ಶೇ 17.4 ರಷ್ಟು ಪಾಲು ಭಾರತದ್ದು. ಸುಮಾರು ಎರಡು ಸಾವಿರ ಬುಡಕಟ್ಟುಗಳ ಮೂಲದ ಜನರಿರುವ ಇಲ್ಲಿ ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳನ್ನು ಪಾಲಿಸುವವರಿದ್ದಾರೆ. ಪ್ರಪಂಚದ ಮುಖ್ಯ ಭಾಷಾ ಕುಟುಂಬಗಳಲ್ಲಿನ ನಾಲ್ಕು ಕುಟುಂಬಗಳ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತದೆ. ಇವು ಇಂಡೋ-ಯುರೋಪಿಯನ್ ಭಾಷೆಗಳು, ದ್ರಾವಿಡ ಭಾಷೆಗಳು, ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳು ಮತ್ತು ಟಿಬೆಟೊ-ಬರ್ಮನ್ ಭಾಷೆಗಳು. ಆಫ್ರಿಕಾ ಖಂಡದಲ್ಲಿ ಮಾತ್ರ ಇದಕ್ಕಿಂತ ಹೆಚ್ಚು ಭಾಷೆ, ಸಂಸ್ಕೃತಿ ಮತ್ತು ವಂಶವಾಹಿಗಳ ವೈವಿಧ್ಯತೆ ಇದೆ.

ಭಾರತದ ಈಗಿನ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಜನರು 25 ವರ್ಷದ ಕೆಳಗಿನ ಯುವ ಸಮುದಾಯ. ಈ ವಿಷಯ ಪ್ರಪಂಚದ ಎಲ್ಲಾ ವಾಣಿಜ್ಯೋದ್ಯಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದೆ. ಕಾರಣ ಈ ಬಗೆಯ ಯಂಗ್ ಇಂಡಿಯಾ ಆಧುನಿಕ ಮಾರುಕಟ್ಟೆಗೆ ಜೋತುಬಿದ್ದಿದೆ. ಅಂತೆಯೇ ಕಡಿಮೆ ವೇತನಕ್ಕೆ ಹೆಚ್ಚು ಶ್ರಮವಹಿಸಿ ದುಡಿದು ಬಂಡವಾಳಶಾಹಿಗಳಿಗೆ ವರವಾಗಿದ್ದಾರೆ. ಹಾಗಾಗಿಯೇ ಜಾಗತಿಕ ಬಂಡವಾಳಶಾಹಿಗಳು ಭಾರತದಲ್ಲಿ ಉದ್ದಿಮೆ ಸ್ಥಾಪಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸರಕಾರವು ಇವರುಗಳಿಗೆ ರತ್ನಗಂಬಳಿ ಹಾಸಿ ಆಹ್ವಾನಿಸುತ್ತಿದೆ. ಈ ಬಗೆಯ ಯುವ ಸಮುದಾಯವನ್ನು ಭಾರತ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡರೂ ಭಾರತ ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ತಲೆಎತ್ತಿ ನಿಲ್ಲಬಹುದಾಗಿದೆ. ಇನ್ನೊಂದು ಸಂಗತಿಯೆಂದರೆ ಜಾಗತಿಕವಾಗಿ ನಮ್ಮ ಕಾರ್ಮಿಕ ವರ್ಗದ ಸರಾಸರಿ ಸಂಖ್ಯೆಯೂ ಜಾಸ್ತಿಯಿದ್ದು, ಇವರು ಏಶಿಯಾದಲ್ಲೇ ಅತ್ಯಂತ ಕಡಿಮೆ ವೇತನ ಪಡೆದುಕೊಳ್ಳುವವರಾಗಿದ್ದಾರೆ.

ಕರ್ನಾಟಕದ ಸಂದರ್ಭದಲ್ಲಿ ಜನಸಂಖ್ಯೆಯ ಚಿತ್ರಣವೂ ಭಿನ್ನವಾಗಿದೆ. ಕನ್ನಡದ ಹಳೆಯ ಸಿನೆಮಾ ಹಾಡುಗಳಲ್ಲಿ ಮುಕ್ಕೋಟಿ ಕನ್ನಡಿಗರು, ಪಂಚಕೋಟಿ ಕನ್ನಡಿಗರು, ಚತುಷ್ಕೋಟಿ ಕನ್ನಡಿಗರು ಎಂಬ ಅಭಿಮಾನದ ನುಡಿಗಟ್ಟುಗಳಿದ್ದವು. ಇದನ್ನು ಕನ್ನಡದ ಶಕ್ತಿ ಎಂಬಂತೆ ಬಿಂಬಿಸಲಾಗುತ್ತಿತ್ತು. ಆದರೆ ಈ ಹೆಚ್ಚಳ ಕರ್ನಾಟಕವನ್ನು ಎತ್ತ ಒಯ್ಯುತ್ತಿದೆ ಎನ್ನುವ ಬಗ್ಗೆ ಈ ಹಾಡುಗಳಾಗಲಿ, ಸಿನೆಮಾದ ಕಥನಗಳಾಗಲಿ ಮುಂಚಲಿಸುವುದಿಲ್ಲ. ಇದನ್ನು ಕೆಲಮಟ್ಟಿಗೆ ಅಕಾಡೆಮಿಕ್ ಅಧ್ಯಯನಗಳಲ್ಲಿಯೂ, ಮಾಧ್ಯಮಗಳ ವರದಿಗಳಲ್ಲಿಯೂ ಕಾಣಬಹುದಾಗಿದೆ.

ಕರ್ನಾಟಕದ ಜನಸಂಖ್ಯೆಯ ಸ್ಥೂಲ ನೋಟವನ್ನು ನೋಡೋಣ. 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಈಗಿನ ಒಟ್ಟು ಜನಸಂಖ್ಯೆ 6,10,95,297. ಅಂತೆಯೇ ದೇಶದ ಜನಸಂಖ್ಯೆಯಲ್ಲಿ 9ನೇ ಸ್ಥಾನ (ಶೇ.5.05) ಪಡೆದಿದೆ. ರಾಜ್ಯದಲ್ಲಿ 3,09,55,657 ಪುರುಷರು ಹಾಗೂ 3,01,28,640 ಮಹಿಳೆಯರಿದ್ದಾರೆ. ಜನಸಂಖ್ಯೆ ವೃದ್ಧಿ ದರ ಶೇ. 15.60 (2001 ರಲ್ಲಿ ಶೇ. 17.51) ಇದ್ದು, ಶೇ. 1.90 ರಷ್ಟು ಕಡಿಮೆಯಾಗಿದ್ದು, ಜನಸಂಖ್ಯೆ ನಿಯಂತ್ರಣದ ಪರಿಣಾಮವನ್ನು ಗಮನಿಸಬಹುದು. 2011 ರ ಜನ ಗಣತಿಯಂತೆ ರಾಜ್ಯದ ಸಾಕ್ಷರತೆ, ಲಿಂಗ ಅನುಪಾತ, ನಗರ ಪ್ರದೇಶ, ಪರಿಶಿಷ್ಟರ ವಿಭಾಗದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ರಾಜ್ಯ ಜನಗಣತಿ ನಿರ್ದೇಶಕ ಟಿ.ಕೆ.ಅನಿಲ್‌ಕುಮಾರ್ ಹೇಳುತ್ತಾರೆ.

2001 ರಲ್ಲಿ ಶೇ. 66.64 ಸಾಕ್ಷರತೆ ಪ್ರಮಾಣ ಇದ್ದದ್ದು, 2011 ರಲ್ಲಿ ಶೇ. 75.36 ಕ್ಕೆ ಹೆಚ್ಚಿದೆ. ಪುರುಷರಲ್ಲಿ ಶೇ. 82.47, ಮಹಿಳೆಯರಲ್ಲಿ ಶೇ. 68.08 ರಷ್ಟಿದ್ದು, ಹಿಂದಿನ ಗಣತಿಗಿಂತ ಸರಾಸರಿ ಶೇ. 8.72 ರಷ್ಟು ಹೆಚ್ಚಿದೆ. ಜತೆಗೆ, ದೇಶದ ಸರಾಸರಿ (ಶೇ. 72.99) ಯನ್ನು ಮೀರಿಸಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಕ್ಷರತೆ ಶೇ. 80 ರ ಗಡಿ ದಾಟಿದೆ. ಯಾದಗಿರಿ, ರಾಯಚೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅತಿ ಕಡಿಮೆ ಸಾಕ್ಷರರಿದ್ದಾರೆ.

ರಾಜ್ಯದ ಪ್ರತಿ ಕಿ.ಮೀ ವಿಸ್ತೀರ್ಣದಲ್ಲಿ 319 ಮಂದಿ (2001 ರಲ್ಲಿ 276) ವಾಸವಿದ್ದಾರೆ. ಲಿಂಗ ಅನುಪಾತ ಪ್ರತಿ ಸಾವಿರ ಪುರುಷರಿಗೆ ಸರಾಸರಿ 973 ಮಹಿಳೆಯರಿದ್ದಾರೆ (2001ರಲ್ಲಿ 965). ನಗರ, ಗ್ರಾಮೀಣದಲ್ಲಿ ಕ್ರಮವಾಗಿ 963 ಹಾಗೂ 979 ಇದೆ. ಉಡುಪಿ (1,094), ದಕ್ಷಿಣ ಕನ್ನಡ (1,020), ಕೊಡಗು (1,019), ಹಾಸ (1,010), ಚಿಕ್ಕಮಗಳೂರು (1,008) ಮಹಿಳೆಯರ ಸಂಖ್ಯೆ ಹೆಚ್ಚು ಇದೆ. ಬೆಂಗಳೂರು ನಗರ (916), ಬೆಂಗಳೂರು ಗ್ರಾಮಾಂತರ (946) ಹಾಗೂ ಹಾವೇರಿ (950) ಅತಿ ಕಡಿಮೆ ಸಂಖ್ಯೆಯ ಮಹಿಳೆಯರಿದ್ದಾರೆ. 0-6 ವರ್ಷದೊಳಗಿನ ಮಕ್ಕಳ ಸಂಖ್ಯೆ 71,61,033. ಹಿಂದಿನ ಗಣತಿಗೆ ಹೋಲಿಸಿದರೆ ಶೇ.1.87ರಷ್ಟು ಇಳಿಕೆ ಕಂಡು ಬಂದಿದೆ. ಯಾದಗಿರಿ, ರಾಯಚೂರು, ವಿಜಾಪುರ ಜಿಲ್ಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ.

ಪರಿಶಿಷ್ಟ ಜಾತಿಯವರು 1,04,74,992ರಷ್ಟಿದ್ದಾರೆ. ಏರಿಕೆ ಶೇ. 22.32. ಕೋಲಾರ, ಚಾಮರಾಜನಗರ, Karnataka mapಗುಲ್ಬರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಪಂಗಡದವರು 42,48,987 ಮಂದಿ ಇದ್ದು, ಶೇ. 22.66 ವೃದ್ಧಿಯಾಗಿದೆ. ಈ ವರ್ಗದ ಜನರು ರಾಯಚೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದು, ಮಂಡ್ಯ, ವಿಜಾಪುರ ಹಾಗೂ ಹಾಸನ ಜಿಲ್ಲೆಗಳಲ್ಲಿ ಕಡಿಮೆ ಇದ್ದಾರೆ.

ಹಾಗೆ ನೋಡಿದರೆ ಕರ್ನಾಟಕದ ನಗರ ಪಾಲಿಕೆಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಇದು ಗ್ರಾಮೀಣ ವಲಸೆಯಿಂದ ನಗರ ವಲಸೆಗೆ ಬದಲಾಗುತ್ತಿರುವುದರ ಚಿತ್ರಣವಿದು. ಬಿಬಿಎಂಪಿ ವ್ಯಾಪ್ತಿಯಲ್ಲಿ 84,43,675, ಹುಬ್ಬಳ್ಳಿ-ಧಾರವಾಡ (9.43 ಲಕ್ಷ), ಮೈಸೂರು (8.93 ಲಕ್ಷ), ಗುಲ್ಬರ್ಗ (5.33 ಲಕ್ಷ), ಮಂಗಳೂರು (4.88 ಲಕ್ಷ), ಬೆಳಗಾವಿ (4.88 ಲಕ್ಷ), ದಾವಣಗೆರೆ (4.34 ಲಕ್ಷ), ಬಳ್ಳಾರಿಯಲ್ಲಿ ಜನಸಂಖ್ಯೆ 4.10 ಲಕ್ಷ ಇದೆ. 0-6 ವರ್ಷದೊಳಗಿನ ಮಕ್ಕಳು ಹಾಗೂ ಪರಿಶಿಷ್ಟರ ವಿಭಾಗದಲ್ಲಿ ಬಳ್ಳಾರಿ ಪಾಲಿಕೆ ಮುಂದಿದೆ. ಸಾಕ್ಷರತೆ ವಿಭಾಗದಲ್ಲಿ ಮಂಗಳೂರು ಪಾಲಿಕೆ ಮೊದಲು. ಬಿಬಿಎಂಪಿ ಮೂರನೇ ಸ್ಥಾನದಲ್ಲಿದೆ.

2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ್ಯೆಗಳು ಹಲವಾರು ಸಂಗತಿಗಳನ್ನು ಬೆಳಕಿಗೆ ತಂದಿವೆ. ಕಳೆದ ಒಂದು ದಶಕದ ಅವಧಿಯಲ್ಲಿ ನಗರೀಕರಣದ ಪ್ರಕ್ರಿಯೆ ತೀವ್ರಗೊಂಡಿದೆ. ಜನಸಂಖ್ಯೆಯ ಸಾಂದ್ರತೆ ಮತ್ತಿತರ ವಿಷಯದಲ್ಲಿ ಬೆಂಗಳೂರು ಉಳಿದ ಜಿಲ್ಲೆಗಳಿಗಿಂತ ಮುಂದಿದೆ. ಈ ಮಹಾನಗರದ ಜನಸಂಖ್ಯೆ ಒಂದು ಕೋಟಿ ಸಮೀಪಿಸುತ್ತಿದೆ. ಈ ಜನಗಣತಿಯ ಅತ್ಯಂತ ಆತಂಕಕಾರಿ ಅಂಶವೆಂದರೆ ಮಹಿಳೆಯರ ಪ್ರಮಾಣದಲ್ಲಿ ಕೊಂಚ ಹೆಚ್ಚಳವಾಗಿದ್ದರೂ ಲಿಂಗಾನುಪಾತ ಒಂದು ಸಾವಿರ ಪುರುಷರಿಗೆ 973 ಮಹಿಳೆಯರಿದ್ದಾರೆ.

ಈ ಅನುಪಾತದ ಅಂತರ ತಗ್ಗಿಸಲು ಹಾಕಿಕೊಂಡ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳು ಹೆಚ್ಚಿನ ಪ್ರಯೋಜನವಾಗಿಲ್ಲ. ಒಂದೆಡೆ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ, ಅದೇ ಹೊತ್ತಿಗೆ ಹೆಣ್ಣು ಭ್ರೂಣ ಹತ್ಯೆ ಪ್ರಮಾಣವೂ ಹೆಚ್ಚಿದೆ. ಇದೊಂದು ಆತಂಕಕಾರಿ ಸಂಗತಿ. ಲಿಂಗಾನುಪಾತದಲ್ಲಿ ದಕ್ಷಿಣಕನ್ನಡ ಜಿಲ್ಲೆ ಮುಂದಿದೆ. ಉಡುಪಿ ಜಿಲ್ಲೆಯಲ್ಲಿ ಪ್ರತೀ 1000 ಪುರುಷರಿಗೆ 1094 ಮಹಿಳೆಯರಿದ್ದಾರೆ. ಲಿಂಗಾನುಪಾತದಲ್ಲಿ ಬೆಂಗಳೂರು ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಈ ಪ್ರಮಾಣ ಸಾವಿರ ಪುರುಷರಿಗೆ 914 ಇದೆ. 2001ರಲ್ಲಿ ಈ ಪ್ರಮಾಣ 908 ಆಗಿತ್ತು. ಈ ಬಗ್ಗೆ ಸರಕಾರ ಎಚ್ಚರಗೊಳ್ಳಬೇಕಿದೆ.

ಈ ಜನಗಣತಿಯ ಇನ್ನೊಂದು ಕಳವಳಕಾರಿ ಸಂಗತಿಯೆಂದರೆ, ಗ್ರಾಮೀಣ ಪ್ರದೇಶದಲ್ಲಿ ಕೃಷಿಯನ್ನು ಅವಲಂಬಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಳ್ಳಿಗಾಡಿನಿಂದ ನಗರ ಪ್ರದೇಶಕ್ಕೆ ವಲಸೆ ಹೆಚ್ಚಾಗುತ್ತಿದೆ. ಇದು ದೇಶದ ಭವಿಷ್ಯದ ದೃಷ್ಟಿಯಿಂದ ನಕಾರಾತ್ಮಕ ಬೆಳವಣಿಗೆ. ನಮ್ಮ ದೇಶದ ಆರ್ಥಿಕತೆಗೆ ಕೃಷಿಯೆ ಬೆನ್ನೆಲುಬು. ಅಂತಹ ಕೃಷಿವಲಯವೇ ಸೊರಗುತ್ತಿರುವುದರಿಂದ ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ದುಡಿಯುವ ಜನರಲ್ಲಿ ಶೇ.23.6 ರಷ್ಟು ಮಾತ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 2001ರ ಜನಗಣತಿಯ ಅಂಕಿಅಂಶಗಳಿಗೆ ಹೋಲಿಸಿದರೆ ಈ ಸಂಖ್ಯೆ droughtಶೇ.5.6ಕ್ಕೆ ಕುಸಿದಿದೆ. ಈ ರೀತಿಯ ಕುಸಿತದ ಹಿನ್ನೆಲೆ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕಾಗಿದೆ. ಕೃಷಿವಲಯ ಈಗ ಲಾಭದಾಯಕವಾಗಿ ಉಳಿದಿಲ್ಲ. ಕೃಷಿಯಲ್ಲಿ ತೊಡಗಿಸುವ ಬಂಡವಾಳಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇದರ ಫಲವಾಗಿ ರೈತ ಸಾಲಗಾರನಾಗುತ್ತಿದ್ದಾನೆ. ರೈತರ ಆತ್ಮಹತ್ಯೆ ಪ್ರಕರಣಗಳು ಈ ಧಾರುಣ ಸಂಗತಿಗೆ ಕನ್ನಡಿ ಹಿಡಿಯುತ್ತಿವೆ.

ವಿಶ್ವ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಂತರ ವರ್ಷದಿಂದ ವರ್ಷಕ್ಕೆ ಕೃಷಿ ಕ್ಷೇತ್ರ ಕ್ಷೀಣಿಸುತ್ತಲೇ ಇದೆ. ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಜಾಗತೀಕರಣದ ಆರ್ಥಿಕ ನೀತಿಗಳಿಗೆ ವಿಮುಖವಾಗಬೇಕಿದೆ. ಸದ್ಯಕ್ಕಿದು ಸಾಧ್ಯವಿಲ್ಲದ ಸಂಗತಿಯಂತೆ ಕಾಣುತ್ತಿದೆ. ಭಾರತವನ್ನು ಮಾರುಕಟ್ಟೆಯನ್ನಾಗಿಕೊಂಡ ಬಹುರಾಷ್ಟ್ರೀಯ ಕಂಪೆನಿಗಳನ್ನು ತಡೆಯುವುದು ನಮ್ಮನ್ನಾಳುವ ಸರಕಾರಗಳಿಂದ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಇಂದು ನಿರುದ್ಯೋಗಿಗಳ ಸಂಖ್ಯೆ 3.32 ಕೋಟಿಯಿದೆ. ಇದು ಜನಸಂಖ್ಯೆ ಹೆಚ್ಚಳದಿಂದಾಗಿ ಕರ್ನಾಟಕ ಎದುರಿಸುತ್ತಿರುವ ತೀವ್ರತೆರನಾದ ಬಿಕ್ಕಟ್ಟುಗಳಲ್ಲಿ ಒಂದಾಗಿದೆ.

ಹೀಗೆ ಜಾಗತಿಕ, ಭಾರತ, ಕರ್ನಾಟಕದ ಜನಸಂಖ್ಯೆಯ ಅಂಕಿಅಂಶ ಮತ್ತು ಅದಕ್ಕೆ ಪೂರಕವಾದ ಕೆಲವು ಸೂಕ್ಷ್ಮಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಜನಸಂಖ್ಯೆಯ ಹೆಚ್ಚಳದಿಂದಾಗಿ ಜಾಗತಿಕವಾಗಿಯೂ, ಒಂದು ಪುಟ್ಟ ರಾಜ್ಯದ ನೆಲೆಯಲ್ಲಿಯೂ ಕೆಲವು ಸಮಾನಾಂಶಗಳು, ಸಮಾನ ಸಮಸ್ಯೆಗಳು ಇವೆ. ಅಂತೆಯೇ ಒಂದು ಹಳ್ಳಿಯ ಹಂತದಿಂದಲೂ ಜನಸಂಖ್ಯೆಯ ನಿಯಂತ್ರಣವನ್ನು ಮಾಡಬೇಕಾದ ಅಗತ್ಯವಿದೆ. ಜನಸಂಖ್ಯೆಯ rural-karnataka-2ಹೆಚ್ಚಳದಿಂದಾಗುವ ಅಪಾಯಗಳನ್ನು ಹೊಸ ತಲೆಮಾರಿನ ಪೀಳಿಗೆಯಲ್ಲಿ ಪರಿಣಾಮಕಾರಿಯಾಗಿ ಬಿಂಬಿಸುವ ಯೋಜನೆಗಳು ರೂಪುಗೊಳ್ಳಬೇಕು.

ಒಂದು ಕುಟುಂಬಕ್ಕೆ ಒಂದೇ ಮಗು ಎನ್ನುವ ಚೀನಾ ದೇಶದ ಕಟ್ಟುನಿಟ್ಟಿನ ಕ್ರಮ ಜಾಗತಿಕವಾಗಿಯೂ ವಿಸ್ತರಿಸಬೇಕು ಎನ್ನುವ ಚಿಂತನೆ ವಿಶ್ವಸಂಸ್ಥೆಯ ಮುಂದಿದೆ. ಜನಸಂಖ್ಯೆ ಏರಿದಂತೆ ಜಾಗತಿಕ ಅಸಮಾನತೆಯೂ ಹೆಚ್ಚುತ್ತದೆ. ಜೈವಿಕ ಅಸಮಾನತೆಯಂತೆ, ಮನುಷ್ಯನಿರ್ಮಿತ ಅಸಮಾನತೆಗಳ ಕಂದರವೂ ದೊಡ್ಡದಾಗುತ್ತಿದೆ. ಹಾಗಾಗಿ ಬಡವರು, ನಿರ್ಗತಿಕರು, ಅಸಹಾಯಕರು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ. ಜನಸಂಖ್ಯೆ ಹೆಚ್ಚಳದಿಂದಾಗಿ ಬಹುಪಾಲು ಆರ್ಥಿಕವಾಗಿ ಬಲಿಷ್ಠರು, ತಾಂತ್ರಿಕ ಕೌಶಲವುಳ್ಳವರೂ, ಮೇಲುವರ್ಗ ಮತ್ತು ಮೇಲುಜಾತಿಗಳವರೂ ಅವಕಾಶಗಳನ್ನು ಪಡೆಯುತ್ತಾ ಮುನ್ನುಗ್ಗುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಆರ್ಥಿಕವಾಗಿ ದುರ್ಭಲರೂ, ಗ್ರಾಮೀಣರೂ, ಅನಕ್ಷರಸ್ತರೂ, ತಾಂತ್ರಿಕ ಕೌಶಲವಿಲ್ಲದವರೂ, ಮಹಿಳೆಯರೂ, ಕೆಳಜಾತಿಗಳೂ ಹಿಂದುಳಿಯುತ್ತಿದ್ದಾರೆ. ಈ ಬಗೆಯ ಮನುಷ್ಯನಿರ್ಮಿತ ಅಸಮಾನತೆಯನ್ನು ತೊಡೆಯಲೂ ಸಹ ಜನಸಂಖ್ಯಾ ನಿಯಂತ್ರಣ ಒಂದು ಅಸ್ತ್ರವಾಗುವುದರಲ್ಲಿ ಎರಡು ಮಾತಿಲ್ಲ.