Daily Archives: July 19, 2014

“ಅತ್ಯಾಚಾರವೆಂಬ ಕ್ರೌರ್ಯವನೆದುರಿಸುತ್ತಾ..”


– ರೂಪ ಹಾಸನ


 

ಭಾರತದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಲೈಂಗಿಕ ದೌರ್ಜನ್ಯ, ಪ್ರತಿ 20 ನಿಮಿಷಕ್ಕೆ ಒಂದು ಅತ್ಯಾಚಾರ, ಪ್ರತಿ 150 ನಿಮಿಷಕ್ಕೆ 16 ವರ್ಷದೊಳಗಿನ ಒಂದು ಅಪ್ರಾಪ್ತ ಹೆಣ್ಣುಮಗುವಿನ rape-illustrationಅತ್ಯಾಚಾರ ನಡೆಯುತ್ತಿದೆ. 10 ವರ್ಷದ ಕೆಳಗಿನ ಒಂದು ಹೆಣ್ಣು ಮಗು ಪ್ರತಿ 13 ಗಂಟೆಗೊಮ್ಮೆ ಹಾಗೂ 10 ಹೆಣ್ಣುಮಕ್ಕಳಲ್ಲಿ ಒಂದು ಹೆಣ್ಣುಮಗು ಯಾವಾಗ ಬೇಕಾದರೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದೆ ಎಂದು ಭಾರತೀಯ ಮಹಿಳಾ ಅಧ್ಯಯನ ಸಮೀಕ್ಷೆ ತಿಳಿಸುತ್ತದೆ. ಈ ವರದಿಯನ್ನು ಓದಿದಾಗ ನಮ್ಮ ಸುತ್ತಲೂ ಎಂಥಹ ನರಕವಿದೆ ಎಂದು ಹೇಸಿಗೆಯಾಗುತ್ತದೆ. ಸುದ್ದಿಯಾಗುವವು ಕೆಲವು ಮಾತ್ರ. ಸುದ್ದಿಯಾದ ಆನಂತರದ ಪರಿಣಾಮ ಎದುರಿಸಲಾಗದೇ ಮರ್ಯಾದೆಗೆ ಅಂಜಿ ಇಂತಹ ಹಲವು ಪ್ರಕರಣಗಳು ದನಿ ಕಳೆದುಕೊಳ್ಳುತ್ತವೆ. ಆದರೆ ಅವು ಒಳಗೇ ಉಸಿರಾಡುತ್ತಿರುತ್ತವೆ. ಮತ್ತು ನಿತ್ಯ ಮೈ-ಮನ ಮುದುರಿಕೊಳ್ಳುತ್ತಾ ಬದುಕು ಕಮರಿಸಿಕೊಳ್ಳುತ್ತಿರುತ್ತವೆ. ಇಷ್ಟೊಂದು ಪ್ರಮಾಣದಲ್ಲಿ ಅತ್ಯಾಚಾರಗಳು ನಡೆಯುತ್ತಿವೆ ಎಂದಾದರೆ ಎಷ್ಟೊಂದು ‘ಅಮಾನವೀಯ, ಪೈಶಾಚಿಕ’ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ, ನಿತ್ಯ ಸೃಷ್ಟಿಯಾಗುತ್ತಿದ್ದಾರೆ ಎಂದು ಆತಂಕವಾಗುತ್ತದೆ. ಮತ್ತೆ ಇದರ ಹೊಣೆಗಾರಿಕೆ ಸಮಾಜದ ಮೇಲೆಯೇ.

ಎರಡು ದಶಕದ ಹಿಂದೆ ಜಾಗತೀಕರಣದೊಂದಿಗೆ ಭಾರತವನ್ನು ಪ್ರವೇಶಿಸಿರುವ ವಿದೇಶಿ ಮಾರುಕಟ್ಟೆಯು ಹೆಣ್ಣಿನ ದೇಹವನ್ನೇ ‘ಸರಕ’ನ್ನಾಗಿ ವಿಜೃಂಭಿಸಲು ನಮ್ಮ ಮಾಧ್ಯಮಗಳನ್ನು ಯಶಸ್ವಿಯಾಗಿ ಅನುವುಗೊಳಿಸಿದೆ. ಅದರ ಪ್ರಭಾವದಿಂದಾಗಿ, ಹೆಣ್ಣಿನ ದೇಹದ ಮೇಲೆ ‘ಪ್ರಭುತ್ವ’ ಸ್ಥಾಪಿಸಲು, ಅದನ್ನು ‘ಉಪಯೋಗಿಸಿಕೊಳ್ಳಲು’ ಅನೇಕ ಅನೈತಿಕ ಮಾರ್ಗಗಳನ್ನು ನಮ್ಮ ಪುರುಷ ಪ್ರಧಾನ ವ್ಯವಸ್ಥೆ, ತನ್ನ ಮೂಗಿನ ನೇರಕ್ಕೆ ರೂಪಿಸಿಕೊಳ್ಳುತ್ತಿದೆ. ಯಾವ ಹೆಣ್ಣು ಮಗಳು ಬೇಕಾದರೂ, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ದೌರ್ಜನ್ಯಕ್ಕೆ ಒಳಗಾಗಬಹುದಾದಂಥ ಸ್ಥಿತಿ ಇಂದು ನಿರ್ಮಾಣವಾಗಿರುವುದಕ್ಕೆ ಹೆಣ್ಣಿನ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಬಲಾತ್ಕಾರದ ಜೊತೆಗೆ ಕಣ್ಮರೆ, ಮಾರಾಟದ ಪ್ರಮಾಣದ ಸೂಚಿ ದಿನದಿಂದ ದಿನಕ್ಕೆ ಏರುತ್ತಿರುವುದೇ ಸಾಕ್ಷಿಯಾಗಿದೆ. ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆಯೆಂಬ ಅಧ್ಯಯನ ವರದಿ ನಾವೆಷ್ಟು ಅಸುರಕ್ಷಿತವಾಗಿದ್ದೇವೆ ಎಂಬುದಕ್ಕೆ ಕೈಗನ್ನಡಿಯಾಗಿದೆ. ದೇಶದಾದ್ಯಂತ ಶೇಕಡ 80ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಕಾದಿರುವುದು ಏನನ್ನು ಸೂಚಿಸುತ್ತದೆ? ಮಹಿಳೆ ಘನತೆಯಿಂದ ಬದುಕುವ ಯಾವ ಆರೋಗ್ಯಕರ ವಾತಾವರಣವೂ ಇಲ್ಲಿ ಇಲ್ಲ ಎಂಬುದನ್ನೇ ಅಲ್ಲವೇ? ನಮಗೆ ಸಿಕ್ಕುವ ವರದಿಗಳು ದಾಖಲಾಗುವ ಪ್ರಮಾಣವನ್ನು ಅವಲಂಬಿಸಿದ್ದು. ಮರ್ಯಾದೆಗೆ ಅಂಜಿ, ಸಮಾಜಕ್ಕೆ ಹೆದರಿ ಇನ್ನೂ ದಾಖಲಾಗಲು ಸಾಧ್ಯವೇ ಆಗಿಲ್ಲದ ಅಸಂಖ್ಯಾತ ಲೈಂಗಿಕ ದೌರ್ಜನ್ಯದ ಪ್ರಮಾಣವನ್ನು ನೆನೆದು ಉಸಿರು ಕಟ್ಟಿ, ಜೀವ ನಡುಗುತ್ತದೆ.

ನಮ್ಮ ರಾಜ್ಯದಲ್ಲಿ ಕಳೆದ 2013ರಿಂದ ಹಿಂದಿನ ಐದು ವರ್ಷಗಳಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ 2798. ಆದರೆ ಶಿಕ್ಷೆ ಆಗಿದ್ದು ಮಾತ್ರ ಕೇವಲ 123 ಮಂದಿಗೆ! child-rape-indiaಅತ್ಯಾಚಾರಕ್ಕೊಳಗಾದ ಮಹಿಳೆಯರು ದೂರು ನೀಡಿದರೂ ನಂತರ ಜೀವ ಬೆದರಿಕೆ ಒತ್ತಡ ತಂತ್ರಕ್ಕೆ ಸಿಲುಕಿ ಕೇಸು ಹಿಂಪಡೆಯುವುದು ನಡೆಯುತ್ತಿದೆ. ಹಣ ಜಾತಿ ಧರ್ಮ ರಾಜಕೀಯ ಪ್ರಭುತ್ವದ ಒತ್ತಡಗಳೂ ಬಹಳಷ್ಟು ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಿಬಿಡುತ್ತದೆ. ಕೆಲವು ಪ್ರಕರಣಗಳಲ್ಲಿ ಸಾಕ್ಷಿದಾರರಿಂದ ಸುಳ್ಳು ಹೇಳಿಕೆ ಕೊಡಿಸುವುದರಿಂದಲೂ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 31915 ಪ್ರಕರಣಗಳು ದಾಖಲಾಗಿವೆ! ಈ ಪ್ರಮಾಣದ ಪ್ರಕರಣಗಳ ದಾಖಲು ನಮ್ಮ ಮಹಿಳೆಯರಿಗಿರುವ ಸುರಕ್ಷತೆಯ ಮಾನದಂಡಗಳಾಗಿ ನಮಗೆ ಕಾಣುತ್ತವೆ. ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯರು, ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವಂಥಹ, ಆತ್ಮಾಘಾತಕ್ಕೆ ಒಳಗಾಗಿ ಜೀವನ ಪೂರ್ತಿ ನರಳುವಂತಹ, ಸಮಾಜದ ಕಾಕದೃಷ್ಟಿಯಿಂದ ಚಿತ್ರಹಿಂಸೆ ಅನುಭವಿಸುವಂತಹ ಸ್ಥಿತಿಯನ್ನು ನಮ್ಮ ಕಣ್ಣೆದುರಿಗೇ ನೋಡುತ್ತಿರುವಾಗ ಮಹಿಳೆಗೆ ತನ್ನ ದೇಹದ ಮೇಲಿನ ಹಕ್ಕೇ ಇಲ್ಲದಿರುವಾಗ ಘನತೆಯ ಬದುಕಿನ ಕಲ್ಪನೆ, ಅಭಿವೃದ್ಧಿ ಸಾಧ್ಯವೇ? ಎಂಬ ಉತ್ತರವಿಲ್ಲದ ಪ್ರಶ್ನೆ ಕಂಗೆಡಿಸುತ್ತದೆ.

ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಪರಿಹಾರವನ್ನು ನೀಡುವ ಅಥವಾ ಸಾಮಾಜಿಕ ಭದ್ರತೆ ಕೊಡುವ, ಪುನರ್ವಸತಿ ಕಲ್ಪಿಸುವ ಯಾವುದೇ ಸಮರ್ಪಕ ವ್ಯವಸ್ಥೆ ನಮ್ಮಲ್ಲಿ ಇಲ್ಲದಿರುವುದರಿಂದ ಪ್ರಕರಣದಲ್ಲಿ ನೊಂದ ಬಹುಪಾಲು ಮಹಿಳೆಯರು ತಮ್ಮ ಹಕ್ಕನ್ನು ಪ್ರತಿಪಾದಿಸಲಾಗುವುದೇ ಇಲ್ಲ. ಅವರ ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಸ್ಥಾನಮಾನಗಳು ಮಹಿಳೆಯ ಹೋರಾಟದ ಕೆಚ್ಚನ್ನು ನಿರ್ಧರಿಸುವುದರಿಂದಾಗಿ ಬಹಳಷ್ಟು ಮಹಿಳಾ ದೌರ್ಜನ್ಯದ ಪ್ರಕರಣಗಳು ಸದ್ದಿಲ್ಲದೇ ಮುಚ್ಚಿಹೋಗುತ್ತಿವೆ. ಮತ್ತು ನಮ್ಮ ಅನಾರೋಗ್ಯಕರವಾದ ಸಮಾಜದಲ್ಲಿ ಹೆಣ್ಣಿನ ಶೀಲ, ಕೌಮಾರ್ಯ, ಪಾತಿವ್ರತ್ಯದ ಕುರಿತು ಇರುವ ವಿಪರೀತದ ಕಲ್ಪನೆಗಳು ಅವಳನ್ನು ನ್ಯಾಯ ಸ್ಥಾನದವರೆಗೆ ಹೋಗುವುದನ್ನು ತಡೆದು, ಪ್ರಕರಣ ಗೋಪ್ಯವಾಗಿಯೇ ಸತ್ತು ಹೋಗುವಂತೆ ಮಾಡುತ್ತದೆ. ಹೆಣ್ಣಿನ ದೇಹದ ಮೇಲಿನ ಇಂತಹ ಯಾವುದೇ ದಾಳಿಯಿಂದ, ಮುದುಡಿಹೋಗುವ, ಆಘಾತಕ್ಕೊಳಗಾಗುವ ಅವಳ ಮನಸ್ಸು ಮತ್ತು ಬುದ್ಧಿಯನ್ನು ಮತ್ತೆ ಯಥಾಸ್ಥಿತಿಗೆ ತರುವುದಕ್ಕೇ ಅವಳ ಸಮಯ, ಶ್ರಮಗಳು ವಿನಿಯೋಗವಾಗುವಾಗ ಅವಳ ಬದುಕು ಚಲನಶೀಲತೆಯನ್ನು ಕಂಡುಕೊಳ್ಳಲು ಸಾಧ್ಯವೇ? ಅವಳ ಹಕ್ಕನ್ನು ಸಮರ್ಥವಾಗಿ ಚಲಾಯಿಸಲು ಸಾಧ್ಯವೇ?

ನಮ್ಮ ಸರ್ಕಾರ ಇನ್ನಾದರೂ ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಫಾಸ್ಟ್ child-rapeಟ್ರಾಕ್ ಕೋರ್ಟ್ ಗಳನ್ನು ಸ್ಥಾಪಿಸಿ ಅಪರಾಧಿಗಳಿಗೆ ಕಾನೂನುರೀತ್ಯ ಶಿಕ್ಷೆ ನೀಡುವಂತಾಗಬೇಕಿದೆ. ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಯಾವುದೇ ಕುಂದಿಲ್ಲದೇ ಜಾರಿಗೊಳಿಸುವ ಕೆಲಸವಾಗಬೇಕು. ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಿರುವ ಅಶ್ಲೀಲ ವೆಬ್ಸೈಟ್ ಗಳನ್ನು ಕೂಡಲೇ ನಿರ್ಬಂಧಿಸಬೇಕು. ಅಶ್ಲೀಲ ಸಿನಿಮಾ, ಜಾಹಿರಾತು ಹಾಗೂ ಇತರ ಅಶ್ಲೀಲ ಕಾರ್ಯಕ್ರಮಗಳ ತಡೆಗೆ ಸಂಬಂಧಿಸಿದಂತೆ ಈಗಾಗಲೇ ಇರುವ ನೀತಿ ನಿಯಮಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಜೊತೆಗೆ ಸೆನ್ಸಾರ್ ಸಮಿತಿ ಯಾವುದೇ ಮುಲಾಜಿಲ್ಲದೇ ಸೂಕ್ತ ನೀತಿಗಳನ್ನು ಅಳವಡಿಸಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ, ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಗಳನ್ನು ಸ್ಥಾಪಿಸಬೇಕು.

ಸದ್ಯ ಬದಲಾಗಿರುವ ನಮ್ಮ ಮಹಿಳಾಪರ ಕಾನೂನುಗಳ ಪ್ರಕಾರ ಅತ್ಯಾಚಾರ ಪ್ರಕರಣಗಳು IndiaRapeನ್ಯಾಯಾಲಯದ ಮೆಟ್ಟಿಲೇರಿದಾಗ ವಕೀಲರು ಹಾಕುವ ಸವಾಲು, ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಎಷ್ಟೋ ಬಾರಿ ಉತ್ತರಿಸಲು ಸಾಧ್ಯವಾಗದೇ, ಪುರುಷ ನ್ಯಾಯಾಧೀಶರ ಮುಂದೆ ತಾನು ಅನುಭವಿಸಿದ ಹಿಂಸೆಯನ್ನು ಹೇಳಿಕೊಳ್ಳಲಾಗದೇ ಅತ್ಯಾಚಾರಕ್ಕೊಳಗಾದ ಮಹಿಳೆಯರ ಬಹಳಷ್ಟು ಕೇಸುಗಳು ಬಿದ್ದುಹೋಗುತ್ತವೆ. ಇದೇ ಕಾರಣಕ್ಕೆ ಸಿ ಆರ್ ಪಿ ಸಿ ಯ 21ನೇ ಕಲಮಿಗೆ ತಿದ್ದುಪಡಿ ಮಾಡಲಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಅತ್ಯಾಚಾರ ಪ್ರಕರಣಗಳನ್ನು ಮಹಿಳಾ ನ್ಯಾಯಾಧೀಶರೇ ವಿಚಾರಣೆ ನಡೆಸಬೇಕು ಎನ್ನುತ್ತದೆ ಈ ತಿದ್ದುಪಡಿ. ಇವೆಲ್ಲವೂ ಮಹಿಳೆಯ ದೇಹ ಮತ್ತು ಅವಳ ವ್ಯಕ್ತಿತ್ವದ ಘನತೆಯ ದೃಷ್ಟಿಯಿಂದ ಸ್ವಾಗತಾರ್ಹವಾದುವೇ ಆಗಿವೆ. ಜೊತೆಗೇ ಅತ್ಯಾಚಾರ ಪ್ರಕರಣಗಳನ್ನು ನಡೆಸುವ ವಕೀಲರೂ ಕೂಡ ಮಹಿಳೆಯರೇ ಆಗಿದ್ದರೆ ಇನ್ನಷ್ಟು ಅನುಕೂಲವಾಗುವ ಸಾಧ್ಯತೆಗಳಿರುತ್ತದೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿಯೇ ಅನೇಕ ಅತ್ಯಾಚಾರದ ಪ್ರಕರಣಗಳು ಮುಚ್ಚಿ ಹೋಗುವುದರಿಂದ ಅದಕ್ಕೆ ಸ್ಪಷ್ಟ ಮಾರ್ಗದರ್ಶನ ಸೂತ್ರಗಳನ್ನು ಸರ್ಕಾರ ತಕ್ಷಣವೇ ಜಾರಿಗೊಳಿಸಬೇಕಿದೆ. ಅದರ ಕೆಲ ಮುಖ್ಯ ಟಿಪ್ಪಣಿಗಳು ಈ ರೀತಿಯಾಗಿವೆ.

  1. ಅತ್ಯಾಚಾರದಂತಹ ಪ್ರಕರಣದಲ್ಲಿ ಕಾನೂನುಬದ್ಧ ವೈದ್ಯಕೀಯ ಗರ್ಭಪಾತ[ಎಮ್.ಟಿ.ಪಿ] ಮಾಡಿಸಲು ಸಂತ್ರಸ್ತೆ ಮನವಿ ಮಾಡಿಕೊಂಡಾಗ ವೈದ್ಯಕೀಯ ಪರೀಕ್ಷಾ ಮಾದರಿಗಳನ್ನು ಸಂಗ್ರಹಿಸಲು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೆ ಲಿಖಿತ ಸೂಚನೆ ನೀಡಬೇಕು. ಈ ಕುರಿತು ಮಾರ್ಗಸೂಚಿ ನೀಡಬೇಕು.
  2. ಅಪ್ರಾಪ್ತ ಹೆಣ್ಣುಮಕ್ಕಳ ಮೇಲಾಗುವ ಯಾವುದೇ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳ ಮಾಹಿತಿ, ಯಾವ, ಯಾರ ಮೂಲಕವೇ ಲಭ್ಯವಾದರೂ ಪೊಲೀಸ್ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಬೇಕು. ಬಾಲಕಿಯ ಪರವಾಗಿ ಕುಟುಂಬದವರು ದೂರು ನೀಡಬೇಕೆಂದು ಹೇಳಬಾರದು. ಪ್ರಕರಣ ದಾಖಲಾದರಷ್ಟೇ ವಿಚಾರಣೆ ನಡೆಸುವುದು ಎಂಬ ಸಬೂಬು ಹೇಳುತ್ತಿರುವುದರಿಂದ ಮಕ್ಕಳ ಪ್ರಕರಣಗಳು ನ್ಯಾಯ ಕಾಣದೇ ಮುಚ್ಚಿ ಹೋಗುತ್ತಿವೆ.
  3. ಮಹಿಳೆ ಮತ್ತು ಮಕ್ಕಳಿಗಾಗಿ ನಡೆಯುತ್ತಿರುವ ಯಾವುದೇ ವಸತಿಯುತ ಶಾಲೆ, ಅನಾಥಾಶ್ರಮ, ಪೇಯಿಂಗ್ ಗೆಸ್ಟ್ ವ್ಯವಸ್ಥೆಗಳನ್ನು ನೋಂದವಣಿ ಮಾಡುವ ಕೆಲಸ Court-Indianತುರ್ತಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಆಗಬೇಕು. ನಿಯಮಿತವಾಗಿ ನಿಗಾ ಇಡುವ, ವರ್ಷಕ್ಕೊಮ್ಮೆ ಪುನರ್ ನವೀಕರಿಸುವ ವ್ಯವಸ್ಥೆಯೂ ಆಗಬೇಕು. ನಿಗದಿತ ಅವಧಿಯಲ್ಲಿ ದಾಖಲಾಗದ್ದವನ್ನು ಮಟ್ಟುಗೋಲು ಹಾಕಿಕೊಳ್ಳಬೇಕು. ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ತಕ್ಷಣ ಪೊಲೀಸರಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು.
  4. ಮಹಿಳೆಯರ ಮತ್ತು ಅಪ್ರಾಪ್ತ ಮಕ್ಕಳ ಯಾವುದೇ ಲೈಂಗಿಕ ದೌರ್ಜನ್ಯದ ಪ್ರಕರಣ ಪೊಲೀಸ್ ಇಲಾಖೆಯ ಮೆಟ್ಟಿಲೇರಿದರೆ ಅದನ್ನು ವಿಶೇಷ ಮುತುವರ್ಜಿ ವಹಿಸಿ ತಕ್ಷಣವೇ ತನಿಖೆ ಪ್ರಾರಂಭಿಸಿ, ಇತ್ಯರ್ಥಗೊಳಿಸಬೇಕು.
  5. ಅತ್ಯಾಚಾರದಂತಹ ಪ್ರಕರಣಗಳ ತನಿಖೆ ಮಾಡುವಾಗ ಅನುಸರಿಸಬೇಕಾದ ಸುಧಾರಿತ ಕ್ರಮಗಳ [ಸುಪ್ರೀಂಕೋರ್ಟ್ ಆದೇಶದಂತೆ] ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವ ಅವಶ್ಯಕತೆಯಿದೆ. ವೈದ್ಯರು, ಪೊಲೀಸ್ ಅಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಬಂದಿ ಮತ್ತು ಇದರಡಿ ಬರುವ ಎಲ್ಲಾ ಸಮಿತಿಗಳಿಗೂ ತರಬೇತಿ ಅಗತ್ಯ.
  6. ಅತ್ಯಾಚಾರ ಪ್ರಕರಣಗಳಲ್ಲಿ ಪರೀಕ್ಷೆಗಾಗಿ ಈಗಲೂ ಕಾನೂನುಬಾಹಿರವಾದ ಎರಡು ಬೆರಳು ಪರೀಕ್ಷೆ [ಟೂ ಫಿಂಗರ್ ಟೆಸ್ಟ್] ನಡೆಯುತ್ತಿದೆ. ಇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಹೀಗೆ ಪರೀಕ್ಷಿಸುವ ವೈದ್ಯರಿಗೆ ಶಿಕ್ಷೆಯಾಗಬೇಕು.
  7. ಅತ್ಯಾಚಾರಿಯನ್ನು ನಿಗದಿತ ಸಮಯದೊಳಗೆ ಹಿಡಿಯಲು ಕಾಲಾವಧಿಯನ್ನು ಸ್ಪಷ್ಟಗೊಳಿಸಬೇಕು. ಹಿಡಿಯದಿದ್ದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಾರ್ಹರನ್ನಾಗಿಸಬೇಕು. ಇದಾಗದಿದ್ದಕ್ಕೆ ಪ್ರಕರಣಗಳು ಬೇರೆ ಬೇರೆ ಆಮಿಷ, ಒತ್ತಡ, ಜಾತಿ, ರಾಜಕೀಯ, ಪ್ರಭಾವಗಳಿಂದಾಗಿ ಮುಚ್ಚಿಹೋಗುತ್ತಿವೆ.
  8. ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ವೈದ್ಯಕೀಯ ಪರೀಕ್ಷಾ ವರದಿ[ಡಿಎನ್ಎ ಟೆಸ್ಟ್ ರಿಪೋರ್ಟ್] ವಿಧಿವಿಜ್ಞಾನ ಪ್ರಯೋಗಾಲಯದಿಂದ ಬರುವುದು ವರ್ಷಗಟ್ಟಲೆ ಹಿಡಿಯುತ್ತಿರುವುದರಿಂದ ಅತ್ಯಾಚಾರ ಮೊಕದ್ದಮೆಗಳ ಶೀಘ್ರ ಇತ್ಯರ್ಥವಾಗುತ್ತಿಲ್ಲ. ಹೀಗಾಗಿ ಸಾಧ್ಯವಾದಷ್ಟೂ ಜಿಲ್ಲೆಗೊಂದು ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಬೇಕು. ಸಾಧ್ಯವಾದಷ್ಟೂ ತಿಂಗಳೊಳಗೆ ವರದಿ ಬರುವಂತೆ ಮಾಡಬೇಕು.
  9. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಜೊತೆಗೆ ವಿಚಾರಣೆಯ ಸಂದರ್ಭದಲ್ಲಿ ಪೊಲೀಸ್ ಮತ್ತು ವೈದ್ಯ ಸಿಬ್ಬಂದಿ ಅಸಭ್ಯವಾಗಿ, ಅನಾಗರಿಕವಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ಅತ್ಯಾಚಾರಗೊಳಿಸುವಂತಹ ಕೆಲಸವಾಗುತ್ತಿದೆ. ಹೀಗಾಗಿ ಅವರಿಗೆ ಮಹಿಳಾ ಹಾಗೂ ಮಕ್ಕಳ ಸ್ನೇಹಿ ಸಂವೇದನಾಶೀಲತೆಯ ನಿರಂತರ ತರಬೇತಿಯಾಗಬೇಕಿದೆ.
  10.  ಯಾವುದೇ ವಸತಿಯುತ ಶಾಲೆಗಳಲ್ಲಿ, ಮುಖ್ಯವಾಗಿ ಅಂಗವಿಕಲ ಮಕ್ಕಳ ವಸತಿಯುತ ಶಾಲೆಗಳಲ್ಲಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿ, ಮಹಿಳೆಯರೇ ಇರುವುದು ಸೂಕ್ತ. ಇಲ್ಲಿ ಬಹು ಪ್ರಮಾಣದಲ್ಲಿ ಹೆಣ್ಣು ಮಕ್ಕಳು ದುರ್ಬಳಕೆಯಾಗುತ್ತಿದ್ದಾರೆ. ಈ ಕುರಿತು ಸಿಬ್ಬಂದಿಯ ಆಯ್ಕೆಯಲ್ಲಿಯೇ ಸ್ಪಷ್ಟ ಹಾಗೂ ನಿರ್ದಿಷ್ಟ ಮಾರ್ಗಸೂಚಿ ನಿಗದಿಗೊಳಿಸಬೇಕು.

ಜೊತೆಗೆ ಅತ್ಯಾಚಾರ ಪ್ರಕರಣಗಳ ಪೂರ್ವಾಪರಗಳನ್ನು ಎತ್ತಿ ಹಿಡಿದು ತೋರುವುದಕ್ಕಿಂತ ಹೆಣ್ಣುಮಕ್ಕಳ ಮೇಲಾಗುವ ಆನಂತರದ ಪರಿಣಾಮಗಳ ಹೃದಯ ವಿದ್ರಾವಕ ಸ್ಥಿತಿಯ ವರದಿಗಳಿಗೆ ಮಾಧ್ಯಮಗಳು ಹೆಚ್ಚಿನ ಗಮನಹರಿಸುವಂತೆ ನಾವು ಮಾಡಬೇಕಿದೆ. ಅವು ಬಹು ಸೂಕ್ಷ್ಮ ರೀತಿಯಲ್ಲಿ ಮಾನವೀಯ ನೆಲೆಗಳಲ್ಲಿ ದಾಖಲಾಗಬೇಕು. ಜೊತೆಗೆ ಅತ್ಯಾಚಾರ ಪ್ರಕರಣಗಳಲ್ಲಿ ನೀಡುವ ಶಿಕ್ಷೆಯ ಕುರಿತೂ ಕಾಲ ಕಾಲಕ್ಕೆ ಸುದ್ದಿ ಮೂಡಿಬರಬೇಕು. ಆಗಲಾದರೂ ವಿಕೃತ ವ್ಯಕ್ತಿಗಳ ಮೇಲೆ ಇವು ಪರಿಣಾಮ ಬೀರಿ ಮನಃಪರಿವರ್ತನೆಗೆ ಕಾರಣವಾಗಬಹುದು.

ಸೆಕ್ಸ್ ಕುರಿತು ಮುಕ್ತವಾಗಿ ಯೋಚಿಸುವ, ನಡೆದುಕೊಳ್ಳುವ ಪ್ರಕ್ರಿಯೆಗಳು ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೂಡ ಕೌಮಾರ್ಯ, ಶೀಲದ ಕುರಿತು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ವಿಪರೀತದ ಕಲ್ಪನೆಗಳು ಇನ್ನೂ ಜೀವಂತವಾಗಿವೆ. ಅತ್ಯಾಚಾರಕ್ಕೊಳಗಾಗಿ ಸುದ್ದಿಯಾದ ಹೆಣ್ಣುಮಕ್ಕಳ ಬದುಕು ಅಸಹನೀಯವಾಗಿ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮತ್ತೆ ಕೆಲವರು ಖಿನ್ನತೆಗೆ, ತೀವ್ರ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗಿ ನರಳುತ್ತಿದ್ದಾರೆ. ಕಾನೂನು ತನ್ನ ಪ್ರಕ್ರಿಯೆ ಪೂರೈಸಲು ದೀರ್ಘ ಸಮಯ ಬೇಕಿರುವುದರಿಂದ ಸರಿಯಾದ ಸಾಕ್ಷ್ಯಾಧಾರಗಳಿಲ್ಲದೇ, ನ್ಯಾಯ ಸಿಗದಿದ್ದಾಗ ಬೀದಿಗೆ ಬಿದ್ದ ಹೆಣ್ಣು ಮಗು ಮಾನಸಿಕವಾಗಿ ಛಿದ್ರವಾಗಿ ಹೋಗುತ್ತದೆ. ನ್ಯಾಯಕ್ಕಾಗಿ ಕಾಯುವ ಹಂತದಲ್ಲಿನ ಮಾನಸಿಕ ಹಿಂಸೆ, ಸಮಾಜದ ಹೀನ ವರ್ತನೆ ವರ್ಣನೆಗೂ ನಿಲುಕದಂತಹುದು.

ಆದರೆ ಮುಖ್ಯವಾಗಿ ಎಲ್ಲ ರೀತಿಯ ದೌರ್ಜನ್ಯವನ್ನು ಪ್ರಶ್ನಿಸುವ ದಿಟ್ಟತನ ನಮ್ಮ ಹೆಣ್ಣುಮಕ್ಕಳಿಗೆ ಬರಬೇಕು. ಕಾನೂನುಗಳ ಸಮಗ್ರ ಅರಿವಿರಬೇಕು. ಅನಿವಾರ್ಯವಾದಾಗ ಅದನ್ನು stop-rapes-bombayಬಳಸಿಕೊಳ್ಳುವ ಆತ್ಮವಿಶ್ವಾಸವಿರಬೇಕು. ಅತ್ಯಾಚಾರಕ್ಕೊಳಗಾಗಿ ದೈಹಿಕ-ಮಾನಸಿಕ ಆಘಾತಕ್ಕೀಡಾದರೂ ಆತ್ಮಹತ್ಯೆಯಂತಾ ಕ್ಷುದ್ರ ತೀರ್ಮಾನವನ್ನು ಎಂದಿಗೂ ತೆಗೆದುಕೊಳ್ಳದೇ ದಿಟ್ಟತನದಿಂದ ಬದುಕನ್ನು ಎದುರಿಸಲು ಆ ಹೆಣ್ಣುಮಕ್ಕಳನ್ನು ತಯಾರು ಮಾಡುವುದು ಹೇಗೆ ಎನ್ನುವುದು ಇನ್ನೊಂದು ಮುಖ್ಯವಾದ ಸವಾಲು. ಹಾಗೇ ಅಪರಾಧಿಗೆ ಕಠಿಣ ಶಿಕ್ಷೆ ಆದಾಗ ಅಪರಾಧ ಮಾಡುವವರಲ್ಲಿ ಭಯ ಮೂಡುತ್ತದೆ. ಸಮುದಾಯದ ಒಳಿತಿಗಾಗಿ ವೈಯಕ್ತಿಕ ಬದುಕು ಒಂದಿಷ್ಟು ಸಮಾಜದೆದುರು ತೆರೆದುಕೊಂಡರೂ ಸರಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಕೇಸು ದಾಖಲು ಮಾಡಬೇಕು. ನಮ್ಮ ನಿಷ್ಠುರ ಸಮಾಜದ, ಹೆಣ್ಣಿನ ಶೀಲದ ಕುರಿತ ಕಠಿಣ ಪರಿಕಲ್ಪನೆಯನ್ನು ಆಧುನಿಕತೆಗೆ ತಕ್ಕಂತೆ ಸೂಕ್ಷ್ಮವಾಗಿ ಮಾರ್ಪಡಿಸಿಕೊಳ್ಳಬೇಕಿರುವುದು ಇಂದಿನ ತುರ್ತು. ಮದುವೆಯೇ ಅಂತಿಮ ಗುರಿಯೆಂಬ ಭ್ರಮೆಯಿಂದ ನಮ್ಮ ಹೆಣ್ಣುಮಕ್ಕಳನ್ನು ಹೊರತಂದು ಅವರಿಗೆ ತಮ್ಮತನದ ಅರಿವು, ವಿಶಾಲ ಪರಿಧಿಯ ಜಾಗೃತಿ ಮೂಡಿಸಬೇಕಿರುವುದು ಎಲ್ಲಕ್ಕಿಂತ ಮುಖ್ಯವಾದುದು.