Daily Archives: July 24, 2014

ಮಾಧ್ಯಮ : ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?


ಡಾ. ಶ್ರೀಪಾದ ಭಟ್


 

ನಮ್ಮ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಗಂಭೀರವಾಗಿ ಓದುವ, ನೋಡುವ ಯಾರನ್ನೇ ಕೇಳಿ. ಅವರು ಹೇಳುವುದು ಒಂದೇ ಮಾತು: ಲೋಕದ ಡೊಂಕು ತಿದ್ದುವ ಮಾಧ್ಯಮ ತನ್ನ ಡೊಂಕನ್ನು ಮಾತ್ರ ತಿದ್ದಿಕೊಳ್ಳುವುದಿಲ್ಲ. ಕರೆ ಮಾಡಿದ್ದ ಐವತ್ತಕ್ಕೂ ಹೆಚ್ಚು ಜನರಲ್ಲಿ ಯಾರೊಬ್ಬರೂ ಮಾಧ್ಯಮಗಳನ್ನು ಶಂಕಿಸದೇ ಬಿಟ್ಟಿಲ್ಲ! ಮಾಧ್ಯಮಗಳ ವಿಶ್ವಾಸಾರ್ಹತೆಯ ಸಮೀಕ್ಷೆ ನಮ್ಮಲ್ಲಿ ನಡೆಯಬೇಕಾದ ಜರೂರಿದೆ ಎಂಬುದನ್ನು ಇದು ಸೂಚಿಸುತ್ತದೆ. ಹೀಗಾದಾಗ ಮಾಧ್ಯಮಗಳ ನಿಜ ಸ್ವರೂಪ ಬಯಲಾಗುತ್ತದೆ. ಹೀಗಲ್ಲದೇ ಪತ್ರಿಕೆಯ ಹೆಸರಿನೊಂದಿಗೆ ತಾವು ಅತ್ಯಂತ ವಿಶ್ವಾಸಾರ್ಹ ಎಂದು ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗೆ ಯಾರು ಬೇಕಾದರೂ tv-mediaಹೇಳಿಕೊಳ್ಳಬಹುದು. ಅದಕ್ಕೆ ಮಾನದಂಡ? ನಮ್ಮಲ್ಲಿನ್ನೂ ಇಲ್ಲ.

ಮಾಧ್ಯಮಗಳ ಒಳ ಸತ್ಯವನ್ನು ಗಮನಿಸುವ ಯಾರು ಬೇಕಾದರೂ ಅವುಗಳನ್ನು ಕುರಿತು ನಿಷ್ಠುರ ಲೇಖನಗಳನ್ನು ಬರೆಯಬಹುದು. ಆದರೆ ಅಂಥ ಲೇಖನ ಕೂಡ ಯಾವುದಾದರೂ ಒಂದು ಮಾಧ್ಯಮದಲ್ಲೇ ಪ್ರಕಟವಾಗಬೇಕಲ್ಲ? ತನ್ನನ್ನು ತಾನು ನೋಡಿಕೊಳ್ಳಲು ಸಿದ್ಧವಿರುವ, ಅಂಥ ಲೇಖನಗಳಿಗೆ ಜಾಗ ನೀಡುವ ಮಾಧ್ಯಮ ನಿಜಕ್ಕೂ ಅಪರೂಪದ್ದು. ಸಾಮಾನ್ಯವಾಗಿ ನಿಷ್ಠುರ, ಜನಪ್ರಿಯ ಧಾಟಿ ಇಲ್ಲದ ವಸ್ತು, ವಿಷಯಗಳ ಲೇಖನಗಳನ್ನು ಅದೆಷ್ಟೇ ಪೂರಕ ದಾಖಲೆಗಳಿದ್ದರೂ ಮಾಧ್ಯಮಗಳು ಪ್ರಕಟಿಸಲು ಮುಂದಾಗುವುದಿಲ್ಲ. ಮಾಧ್ಯಮಗಳ ಇಂಥ ತೀರ್ಮಾನವನ್ನೇ ಸ್ವಯಂ ನಿರ್ಬಂಧನೆ (ಸೆಲ್ಫ್ ಸೆನ್ಸರ್‌ಶಿಪ್) ಎಂದು ಕರೆಯುವುದು. ಒಂದೊಂದು ಪತ್ರಿಕೆ, ಚಾನೆಲ್ಲುಗಳಿಗೂ ಇದು ಬದಲಾಗುತ್ತದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳೆರಡರಲ್ಲೂ ಇಂಥ ನಿರ್ಬಂಧಗಳಿರುತ್ತವೆ. ವೈಯಕ್ತಿಕ ಹಿತಾಸಕ್ತಿ ಇದ್ದಲ್ಲಿ, ಸಂವಿಧಾನದ ಆಶಯಗಳಿಗೆ ಧಕ್ಕೆ ಬರುವಂತಿದ್ದಲ್ಲಿ ಅಂಥ ಸುದ್ದಿ ಅಥವಾ ಲೇಖನಗಳು ಖಂಡಿತ ತಿರಸ್ಕಾರ ಯೋಗ್ಯ. ಮಾಧ್ಯಮಗಳು ಮೊದಲು ಗಮನಿಸುವುದು ಇದನ್ನು. ಇದಲ್ಲದೆಯೂ ಮಾಧ್ಯಮಗಳು ಸುದ್ದಿ, ಲೇಖನಗಳ ಜಾಣ ಆಯ್ಕೆ ಮಾಡುವುದುಂಟು. ಈ ಜಾಣತನ ಓದುಗ ಅಥವಾ ವೀಕ್ಷಕರಿಗೆ ಸುಲಭವಾಗಿ ಅರ್ಥವಾಗುವಂಥದ್ದಲ್ಲ. ಮಾಧ್ಯಮಗಳ ಈ ಪ್ರವೃತ್ತಿಯನ್ನೇ ಚಿಂತಕರಾದ ಎಡ್ವರ್ಡ್ ಹರ್ಮನ್ ಮತ್ತು ನೋಮ್ ಚಾಮ್‌ಸ್ಕಿ ಸಮ್ಮತಿಯ ಸೃಷ್ಟಿ noam-chomsky(ಮ್ಯಾನ್ಯುಫಾಕ್ಚರಿಂಗ್ ಕನ್ಸೆಂಟ್) ಎಂದು ಕರೆದಿರುವುದು.

ಇವರ ಚಿಂತನೆ ಹೀಗಿದೆ: ಉದ್ಯಮಿ ಮಾಲೀಕತ್ವದ ಮಾಧ್ಯಮಗಳು ಮಾರುಕಟ್ಟೆಯ ಸೆಳೆತಕ್ಕೆ ಒಳಗಾಗಿ ವ್ಯವಸ್ಥಿತ ಸ್ವಯಂ ನಿರ್ಬಂಧನೆಯನ್ನು ಉತ್ತೇಜಿಸುತ್ತವೆ. ತಾವು ತುಂಬ ಮುಕ್ತ, ವಿಶ್ವಾಸಾರ್ಹ ಎಂದು ಕರೆದುಕೊಳ್ಳುವ ಮಾಧ್ಯಮಗಳು ಕೂಡ ಸ್ವಯಂ ನಿರ್ಬಂಧನೆಯ ಹೆಸರಲ್ಲಿ ಸುದ್ದಿ, ಲೇಖನಗಳ ಆಯ್ಕೆ, ತಿರಸ್ಕಾರದಲ್ಲಿ ಪಕ್ಷಪಾತ ತೋರಿಸುತ್ತವೆ. ತಮ್ಮ ನಿಲುವಿಗೆ ಸರಿ ಹೊಂದುವ ಸುದ್ದಿ ಮತ್ತು ಲೇಖನಗಳನ್ನು ಮಾತ್ರ ಅವು ಪ್ರಕಟಿಸುತ್ತವೆ. ದೀರ್ಘ ಅಧ್ಯಯನದ ನಂತರ ಹೇಳಿದ ಈ ಚಿಂತಕರ ಮಾತು ಸುಳ್ಳೆಂದು ಮಾಧ್ಯಮದ ಯಾರೊಬ್ಬರೂ ಹೇಳಲಾರರು!

ಮಾಧ್ಯಮಗಳು ವರದಿ ನೀಡುತ್ತವೆಯೇ, ಮಾಹಿತಿ ಕೊಡುತ್ತವೆಯೇ ಅಥವಾ ಜ್ಞಾನ ಒದಗಿಸುತ್ತವೆಯೇ? ವಸ್ತು ನಿಷ್ಠ ವರದಿಯನ್ನು ಮಾತ್ರ ನೀಡಬೇಕಿದ್ದ ಮಾಧ್ಯಮಗಳು ಅದನ್ನೊಂದನ್ನು ಬಿಟ್ಟು ತಮ್ಮಿಷ್ಟದಂತೆ ಸುದ್ದಿಯ ವಿಶ್ಲೇಷಣೆಗೆ ತೊಡಗುತ್ತವೆ. ತಮ್ಮ ಓದುಗ ಅಥವಾ ವೀಕ್ಷಕ ವರ್ಗದಲ್ಲಿ ಮುಕ್ತ ಚಿಂತನೆ ಬೆಳೆಯುವಂತೆ ಮಾಡುವ ಬದಲು ತಮ್ಮ ಚಿಂತನೆಯನ್ನೇ ಅವರು ಪ್ರತಿಪಾದಿಸುವಂತೆ ಪರೋಕ್ಷ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ಪತ್ರಿಕೆಗಳ ಸಂಪಾದಕೀಯ ಲೇಖನಗಳು ಇಂಥ ವಶೀಲಿಯನ್ನು ನಿರಂತರ ಮಾಡುತ್ತವೆ. ಅದಕ್ಕೆ ಒಮ್ಮೆ ಒಗ್ಗಿದ ಓದುಗನ ಅಭಿಪ್ರಾಯ ಕ್ರಮೇಣ ಆತ ಓದುವ ಪತ್ರಿಕೆಯ ಅಭಿಪ್ರಾಯವೇ ಆಗಿಬಿಡುತ್ತದೆ! ಇದು ಆ ಓದುಗನಿಗೆ ಅರ್ಥವೇ ಆಗುವುದಿಲ್ಲ. ಪತ್ರಿಕೆಗಿಂತ ಹೆಚ್ಚು ಪ್ರಭಾವಶಾಲಿಯಾದ ಟಿವಿ ಮಾಧ್ಯಮ ಈ ಕೆಲಸವನ್ನು ಇನ್ನಷ್ಟು ವ್ಯವಸ್ಥಿತವಾಗಿ ಚರ್ಚೆ (ಪ್ಯಾನೆಲ್ ಡಿಸ್ಕಶನ್) ರೂಪದಲ್ಲಿ ಮಾಡುತ್ತದೆ.

ನಮ್ಮ ಮಾಧ್ಯಮಗಳನ್ನೇ ಗಮನಿಸೋಣ. kannada-news-channelsಸಂವಿಧಾನ ಎಲ್ಲರಿಗೂ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು (ವಿಧಿ 19 ರಿಂದ 22) ಮಾತ್ರ ಮಾಧ್ಯಮಗಳಿಗೂ ಇರುವುದು. ಮಾಧ್ಯಮಕ್ಕೇನೂ ವಿಶೇಷ ಹಕ್ಕಿಲ್ಲ. ಸಂವಿಧಾನದ ನಾಲ್ಕನೆಯ ಸ್ತಂಭ ತಾವೆಂದು ಅವು ಎಷ್ಟೇ ಹೇಳಿಕೊಂಡರೂ ಅದು ನೀವೇ ಯಾಕೆ? ಮುಂದಿನ ಪೀಳಿಗೆ ರೂಪಿಸುವ ಶಿಕ್ಷಕರು ಯಾಕಲ್ಲ? ದೇಶದ ಆರೋಗ್ಯ ಕಾಪಾಡುವ ವೈದ್ಯರು ಯಾಕಲ್ಲ? ದೇಶದ ಬೆನ್ನೆಲುಬು ಎನ್ನಲಾಗುವ ರೈತ ವರ್ಗ ಯಾಕಲ್ಲ? ಎಂಬ ಪ್ರಶ್ನೆಗೆ ಅವರಲ್ಲೂ ಉತ್ತರವಿಲ್ಲ! ಅದಿರಲಿ.

ಸಮಾಜದ ಇನ್ನಿತರ ಸ್ತರಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಸ್ವಾಯತ್ತೆಯ ಬಗ್ಗೆ ಮಾತನಾಡುವ ಮಾಧ್ಯಮಗಳು ತಮ್ಮ ವಲಯದಲ್ಲಿ ಇದನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತವೆ? ಉತ್ತರ ನಿರಾಶಾದಾಯಕ. ಪ್ರತಿ ವರ್ಷ ಪ್ರಪಂಚದ 180 ದೇಶಗಳ ಮಾಧ್ಯಮ ವಲಯದಲ್ಲಿ ಖಚಿತ ಸಮೀಕ್ಷೆ ನಡೆಸಿ ವರದಿ ಮಾಡುವ ಫ್ರಾನ್ಸಿನ ರಿಪೋರ್‍ಟರ್ಸ್ ವಿತೌಟ್ ಬಾರ್ಡರ್ಸ್ ಎಂಬ ಸರ್ಕಾರೇತರ ಸಂಸ್ಥೆ 2012-13 ರಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯದ ಸ್ಥಾನ 140 ಎಂದು ಹೇಳಿದೆ. ಕಳೆದ ವರ್ಷ ಇದು 131 ಕ್ಕಿತ್ತು. 2002 ರಲ್ಲಿ 80 ನೆಯ ಸ್ಥಾನದಲ್ಲಿದ್ದ ಭಾರತ ಬರಬರುತ್ತ 140 ಕ್ಕೆ ಜಾರಿದೆ. ಇದು ಮೇಲೇಳುವ ಲಕ್ಷಣವಿಲ್ಲ. ಮಾಧ್ಯಮ ಪಡೆಯುತ್ತಿರುವ ಈ ಸ್ಥಾನಗಳಿಗೆ ಸ್ವತಃ ಮಾಧ್ಯಮ ಮತ್ತು ಅವುಗಳ ಮಾಲೀಕರು ಕಾರಣವೇ ವಿನಾ ಸರ್ಕಾರವಾಗಲಿ, ಜನರಾಗಲೀ ಅಲ್ಲ. ವರ್ಷವಿಡೀ ನಡೆಯುವ ಈ ಸಮೀಕ್ಷೆಯಲ್ಲಿ ಆಯಾ ದೇಶದ ವಕೀಲರು, ಶಿಕ್ಷಣವೇತ್ತರು, ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು ಮೊದಲಾದ ಎಲ್ಲ ವರ್ಗದ ಜನ ನೀಡುವ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬಹಳ ಮುಖ್ಯವಾಗಿ ಮಾಧ್ಯಮಗಳ ಒಳ ವ್ಯವಸ್ಥೆಯಲ್ಲಿನ ಪರಿಸರ, ಪಾರದರ್ಶಕತೆ, ಸ್ವಯಂ ನಿರ್ಬಂಧ, ಮೂಲಸೌಕರ್ಯ, KannadaPapersCollageವರದಿಗಾರ ನೀಡುವ ಸುದ್ದಿ ಯಥಾವತ್ ಪ್ರಕಟವಾಗುವ ಸಾಧ್ಯತೆ, ಪತ್ರಕರ್ತರ ಆಂತರಿಕ ಸ್ವಾತಂತ್ರ್ಯ ಮೊದಲಾದ ಸಂಗತಿಗಳನ್ನು ಗಮನಿಸಲಾಗುತ್ತದೆ. ಮತ್ತೆ ಮತ್ತೆ ಪರಿಶೀಲಿಸಿ ಸ್ಥಾನ ನಿರ್ಧರಿಸಲಾಗುತ್ತದೆ. ಬಹಳ ಜವಾಬ್ದಾರಿಯಿಂದ ಆ ಸಂಸ್ಥೆ ಈ ಕೆಲಸ ನಿರ್ವಹಿಸುವುದರಿಂದ ಪ್ರಪಂಚಾದ್ಯಂತ ಅದು ನೀಡುವ ವರದಿಗೆ ಮಹತ್ವವಿದೆ. ಮಾಧ್ಯಮಗಳು ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ಸ್ವಯಂ ನಿರ್ಬಂಧವೇ ನಮ್ಮ ಮಾಧ್ಯಮ ಸ್ವಾತಂತ್ರ್ಯಕ್ಕೆ ಇರುವ ಬಹುದೊಡ್ಡ ಅಡ್ಡಿ.

ನಮ್ಮ ಮಾಧ್ಯಮಗಳಲ್ಲಿ ವರದಿಗಾರರ ನೇಮಕಾತಿಯಲ್ಲೂ ಆಯಾ ಮಾಧ್ಯಮಗಳ ಹಿತಾಸಕ್ತಿ ಕೆಲಸಮಾಡುತ್ತದೆ. ನಿಷ್ಠುರ ವರದಿಗಾರನಿಗೆ ದೊಡ್ಡ ಮಾಧ್ಯಮಗಳಲ್ಲಿ ಕೆಲಸ ದೊರೆಯುವುದು ದುರ್ಲಭ. ನಮ್ಮ ಬಹುತೇಕ ದೊಡ್ಡ ಪತ್ರಿಕೆಗಳು, ಚಾನೆಲ್ಲುಗಳು ಒಂದಲ್ಲ ಒಂದು ರಾಜಕೀಯ ಪಕ್ಷದ ಕೃಪೆಯಲ್ಲಿರುವವೇ ಆಗಿವೆ. ಕೆಲವು ನೇರವಾಗಿ ಗೋಚರವಾದರೆ ಇನ್ನು ಬಹಳಷ್ಟು ಮಾಧ್ಯಮಗಳದ್ದು ಗೌಪ್ಯ ಸಂಬಂಧ. ಇದನ್ನೇ ಹಿಡನ್ ಅಜೆಂಡಾ ಎನ್ನುವುದು. ನಮ್ಮ ದೇಶದಲ್ಲಿ ಪಂಚಾಯ್ತಿ ಮಟ್ಟದಿಂದ ಲೋಕಸಭೆಯವರೆಗೆ ಒಂದಲ್ಲ ಒಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ಚುನಾವಣಾ ಸಂದರ್ಭದಲ್ಲಿ ಅವುಗಳ ನಿಲುವು, ವರದಿಗಾರರ ಸಾಚಾತನ ಮೊದಲಾದವು ಗೋಚರವಾಗುವುದುಂಟು. ಒಂದೇ ಸುದ್ದಿಯನ್ನು ಬೇರೆ ಬೇರೆ ಮಾಧ್ಯಮಗಳು ಬೇರೆ ಬೇರೆ ರೀತಿ ಓದಿಕೊಳ್ಳುವಂತೆ ಪ್ರಸ್ತುತಪಡಿಸುತ್ತವೆ! ಪರಿಸ್ಥಿತಿ ಹೀಗಿರುವಾಗ ಅವುಗಳಿಗೆ ಮುಕ್ತ ವಾತಾವರಣ ಎಲ್ಲಿಂದ ಬರಬೇಕು? tv-mediaಕೆಲವೊಮ್ಮೆ ಮಾಧ್ಯಮಗಳ ಮಾಲೀಕರು ತಮಗಾಗದ ವ್ಯಕ್ತಿ, ಸಂಸ್ಥೆಗಳ ವಿರುದ್ಧವೋ ಬೇಕಾದ ವ್ಯಕ್ತಿ, ಸಂಸ್ಥೆಗಳ ಪರವೋ ವರದಿ ತಯಾರಿಸಿಕೊಡುವಂತೆ ವರದಿಗಾರರ ಮೇಲೆ ನೇರ ಒತ್ತಡ ಹೇರುವುದೂ ಇದೆ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಬಲವಂತದ ಮಾಘಸ್ನಾನ ಮಾಡುವ ಪತ್ರಕರ್ತರಿಗೆ ಕೊರತೆಯೇನೂ ಇಲ್ಲ.

ಮಾಧ್ಯಮದ ಜನ ಕೂಡ ಮನುಷ್ಯರೇ ಆದ್ದರಿಂದ ಅವರಿಗೂ ಮಾನವ ಸಹಜ ದೌರ್ಬಲ್ಯ, ಶಕ್ತಿಗಳೆಲ್ಲವೂ ಇರುತ್ತವೆ. ಅಧಿಕಾರ, ಹಣ, ಪ್ರಶಸ್ತಿ-ಕೀರ್ತಿ ಮೊದಲಾದವುಗಳ ಆಮಿಷ ಅವರ ವೃತ್ತಿ ನಿಷ್ಠೆಯನ್ನು ಬಲಿಪಡೆದರೂ ಅಚ್ಚರಿ ಇಲ್ಲ. ಅಲ್ಲದೇ ನಮ್ಮ ವ್ಯವಸ್ಥೆಯಲ್ಲಿ ಮಾಧ್ಯಮ ಪ್ರತಿನಿಧಿಸುವವರಿಗೆ ಆಯಾ ಮಾಧ್ಯಮಗಳೇ ರಕ್ಷಾಕವಚವಾಗುವುದರಿಂದ ಹಾಗೂ ಜನರ ಜವಾಬಿಗೆ ಉತ್ತರ ಕೊಡಲೇಬೇಕು ಎಂಬ ಜರೂರು ಇಲ್ಲದ ಕಾರಣದಿಂದ ಮಾಧ್ಯಮಗಳು ತಮ್ಮ ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಗೆರೆ ಎಳೆದುಕೊಳ್ಳುವುದನ್ನು ಮರೆಯಲೂಬಹುದು. ಆದರೆ ಅದರ ಪರಿಣಾಮ ಮಾಧ್ಯಮಗಳ ಸ್ಥಾನ ತೋರಿಸುವ ವರದಿಗಳಲ್ಲಿ ಹೀಗೆ ಬಯಲಾಗುತ್ತದೆ. ಸಾಮಾನ್ಯ ಜನತೆಗೆ ಮಾಧ್ಯಮದ ಮೇಲೆ ಏನೇ ಸಿಟ್ಟಿರಲಿ, ಸರ್ಕಾರಕ್ಕೆ ಎಷ್ಟೇ ಅಸಮಾಧಾನವಿರಲಿ, ಇವರೇನೂ ಮಾಡಲಾಗದು. ಯಾಕೆಂದರೆ ಇದು ಬೆಕ್ಕಿಗೆ ಗಂಟೆ ಕಟ್ಟುವ ಪ್ರಶ್ನೆ!