Daily Archives: July 28, 2014

ಆಧುನಿಕ ಜಗತ್ತಿನ ಹುಚ್ಚು ! ಹುಚ್ಚುತನ ! ಹುಚ್ಚುತನ!

– ಬಿ. ಶ್ರೀಪಾದ ಭಟ್

1957 ರಲ್ಲಿ ತೆರೆಕಂಡ, ಏಳು ಆಸ್ಕರ್ ಪ್ರಶಸ್ತಿಗಳನ್ನು ಗಳಿಸಿದ ಡೇವಿಡ್ ಲೀನ್ ನಿರ್ದೇಶನದ “The Bridge on the River Kwai” ಸಿನಿಮಾದ ಕಡೆಯ ದೃಶ್ಯದಲ್ಲಿ ಬ್ರಿಟೀಷ್ ಯುದ್ಧ ಕೈದಿಗಳು ಅಪಾರ ಪರಿಶ್ರಮದಿಂದ ಕಟ್ಟಿದ ಸೇತುವೆ ವಿಧ್ವಂಸಕ ಕೃತ್ಯಕ್ಕೆ ಬಲಿಯಾಗಿ ಧ್ವಂಸಗೊಂಡು, ಆ ಮೂಲಕ ಹಾದು ಬರುತ್ತಿದ್ದ ಟ್ರೇನ್ ಅಪಘಾತಕ್ಕೀಡಾಗುತ್ತದೆ.ಅಲ್ಲಿಗೆ ಧಾವಿಸಿ ಬಂದ ಮಿಲಿಟರಿ ಡಾಕ್ಟರ್ ಕ್ಲಿಪ್ಟನ್ “Madness! Madness! Madness!” ಎಂದು ತೀವ್ರ ಹತಾಶೆಯಿಂದ ಉದ್ಗರಿಸುತ್ತಾನೆ. The_Bridge_on_the_River_Kwai_posterಹೌದು ಈ ಸಿನಿಮಾದ ಎರಡು ಮುಖ್ಯ ಪಾತ್ರಗಳಾದ ಬ್ರಿಟೀಷ್ ಆರ್ಮಿಯ ಕರ್ನಲ್ ನಿಕಲ್ಸನ್ ( ಅಲೆಕ್ ಗಿನಿಸ್) ಮತ್ತು ಜಪಾನ್ ಆರ್ಮಿಯ ಕರ್ನಲ್ ಸೈಟೋ ( ಹಯಕವ) ತಮ್ಮ ವರ್ತನೆಗಳಿಂದ ಹುಚ್ಚರಂತೆಯೇ ಕಾಣಿಸುತ್ತಾರೆ. ಆದರೆ ಈ ಶಬ್ದಗಳ ನಿಜವಾದ ಅರ್ಥವೂ ಸಹ ಡೇವಿಡ್ ಲೀನ್‌ನ ಇನ್ನಿತರ ಸಿನಿಮಾಗಳಂತೆಯೇ ನೇರವಾಗಿ ಇಂತದ್ದೇ ಎಂದು ಹೇಳುವುದೇ ಇಲ್ಲ. ಏಕೆಂದರೆ ಇಡೀ ಸಿನಿಮಾದ ಕಥಾ ಹಂದರವೇ ನಿರ್ದಿಷ್ಟ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಮೇಲ್ನೋಟಕ್ಕೆ ತೋಚಿದರೂ ಸಹ ನಿಜದ ಅರ್ಥದಲ್ಲಿ ಚಿತ್ರಕತೆಯು ತರ್ಕಬದ್ಧವಾಗಿ ತನ್ನ ಗತಿಯನ್ನು ಬದಲಿಸುತ್ತಿರುತ್ತದೆ. 1943 ರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಮಿಲಿಟರಿಯ ಕೈಗೆ ಯದ್ಧ ಕೈದಿಗಳಾಗಿ ಬಂಧಿತರಾಗುವ ಬ್ರಿಟೀಷ್ ಆರ್ಮಿಯ ಸೈನಿಕರು ಮತ್ತು ಅವರ ಕರ್ನಲ್ ನಿಕಲ್ಸನ್ ಅವರಿಗೆ Kwai ನದಿಗೆ ಸೇತುವೆಯನ್ನು ಕಟ್ಟುವ ಜವಬ್ದಾರಿಯನ್ನು ಹೊರಿಸಲಾಗುತ್ತದೆ. ಇಲ್ಲಿಂದಲೇ ಮನುಷ್ಯನ ವರ್ತನೆ, ಪ್ರಕ್ಷುಬ್ಧತೆ, ಭಯದ, ತಿಕ್ಕಲುತನದ ಹುಚ್ಚುತನಗಳು ಪ್ರಾರಂಭಗೊಳ್ಳುತ್ತವೆ. ಇಲ್ಲಿ ನಿರ್ದೇಶಕ ಲೀನ್ ಇದು ಸರಿ, ಅದು ತಪ್ಪುಗಳ ಗೊಡವೆಗೇ ಹೋಗದೆ ಮನುಷ್ಯರ ವೈಯುಕ್ತಿಕ ವರ್ತನೆಗಳನ್ನು ನಿರೂಪಿಸುವುದರ ಮೂಲಕ ಪ್ರೇಕ್ಷಕರಿಗೇ ಆ ನಿರ್ಧಾರ ಬಿಡುತ್ತಾನೆ. ಹೌದು ಇದು ಲೀನ್‌ನ ಟಿಪಿಕಲ್ ಶೈಲಿ. (‘ಪ್ಯಾಸೇಜ್ ಟು ಇಂಡಿಯಾ’ ಸಿನಿಮಾದಲ್ಲಿ ಬ್ರಿಟೀಷ್ ಸಂಜಾತೆ ಅಡಿಲಾ ಭಾರತದ ಗುಹೆಗಳಲ್ಲಿ ಒಬ್ಬಂಟಿಯಾಗಿ ಒಳಹೊಕ್ಕು ಕೆಲ ಸಮಯದ ನಂತರ ಮೈಕೈ ರಕ್ತ ಮಾಡಿಕೊಂಡು ಕಿರುಚುತ್ತಾ ಹೊರಗೆ ಓಡಿ ಬರುತ್ತಾಳೆ. ಹಾಗಿದ್ದರೆ ಗುಹೆಯೊಳಗೆ ಆಗಿದ್ದಾರೂ ಏನು? ಲೀನ್ ಏನನ್ನೂ ಹೇಳುವುದಿಲ್ಲ. ಪಾತ್ರಗಳೂ ಏನನ್ನೂ ಹೇಳುವುದಿಲ್ಲ. ಸಾಂಧರ್ಬಿಕ ಘಟನೆಗಳೇ ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ.)

‘ಜಪಾನ್‌ನ ಯುದ್ಧ ಕೈದಿಗಳಾಗಿಯೇ, ಅದರ ನಿಯಮಗಳನ್ನು ಮುರಿಯದೆಯೇ Kwai ನದಿಗೆ ನಾವು ಸೇತುವೆಯನ್ನು ಕಟ್ಟುತ್ತೇವೆ, ಆದರೆ ಅದು ನಮ್ಮ ಸ್ವಂತದ ವಿನ್ಯಾಸ ಮತ್ತು ಅನುಭವಗಳನ್ನು ಆಧರಿಸಿರುತ್ತದೆ. ಆ ಸೇತುವೆ ನನ್ನ ಮೇಲ್ವಿಚಾರಣೆಯಲ್ಲಿ ಕಟ್ಟಲ್ಪಡುತ್ತದೆ’ ಎನ್ನುವ ದೃಢ ನಿರ್ಧಾರವನ್ನು ಬಂಧನದಲ್ಲಿರುವ ಕರ್ನಲ್ ನಿಕಲ್ಸನ್ ಜಪಾನೀ ಕರ್ನಲ್ ಸೈಟೋಗೆ ನೇರವಾಗಿ ದಿಟ್ಟತನದಿಂದ ಹೇಳುತ್ತಾನೆ. bridge-river-kwai-ಆದರೆ ಇದನ್ನು ತಿರಸ್ಕರಿಸುವ ಜಪಾನ್ ಕರ್ನಲ್ ಸೈಟೋ ಇಡೀ ಸೇತುವೆ ನಿರ್ಮಾಣವು ನಮ್ಮ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಬ್ರಿಟೀಷ್ ಮಿಲಿಟರಿಯ ಎಲ್ಲಾ ಯುದ್ಧ ಕೈದಿಗಳು ಈ ಸೇತುವೆ ನಿರ್ಮಾಣದಲ್ಲಿ ಭಾಗವಹಿಸಬೇಕು ಎಂದು ಸರ್ವಾಧಿಕಾರದ ಗತ್ತಿನಲ್ಲಿ ಆದೇಶಿಸುತ್ತಾನೆ. ಆದರೆ ಇದನ್ನು ಘನತೆಯಿಂದಲೇ ತಿರಸ್ಕರಿಸುವ ಕರ್ನಲ್ ನಿಕಲ್ಸನ್ ಜಿನೀವಾ ಒಪ್ಪಂದದ ಪ್ರತಿಯನ್ನು ಓದುತ್ತಾ ಅದರ ಕರಾರಿನ ಅನುಸಾರವಾಗಿ ಸೈನಿಕರು ಮಾತ್ರ ಸೇತುವೆ ನಿರ್ಮಾಣದಲ್ಲಿ ತೊಡಗುತ್ತಾರೆ, ಅಧಿಕಾರಿಗಳು ಅವರ ಮೇಲ್ವಿಚಾರಣೆ ವಹಿಸುತ್ತಾರೆ ಎಂದು ವಾದಿಸುತ್ತಾನೆ. ಇದಕ್ಕೆ ಸೊಪ್ಪು ಹಾಕದ ಕರ್ನಲ್ ಸೈಟೋ ಜಿನಿವಾ ಒಪ್ಪಂದದ ಪ್ರತಿಯನ್ನು ಹರಿದು ನಿಕಲ್ಸನ್ ಮುಖಕ್ಕೆ ರಕ್ತ ಬರುವಂತೆ ಬಾರಿಸಿ ಅವಮಾನಿಸುತ್ತಾನೆ. ಕರ್ನಲ್ ನಿಕಲ್ಸನ್‌ನನ್ನು ಶಿಕ್ಷೆಯಾಗಿ ಕಬ್ಬಿಣದ ಗುಡಿಸಲಿನಲ್ಲಿ ಬಂಧನದಲ್ಲಿರಿಸುತ್ತಾನೆ. ಆದರೆ ತನ್ನ ನೈತಿಕತೆ, ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದ ಕರ್ನಲ್ ನಿಕಲ್ಸನ್ ಈ ಕಠಿಣ ಶಿಕ್ಷೆಯನ್ನು ಅನುಭವಿಸುತ್ತಾನೆ. ಆರಂಭದ ಸುಮಾರು ಅರ್ಧಗಂಟೆಯ ಈ ದೃಶ್ಯಗಳು ಲೀನ್‌ನ ಬಿಗಿಯಾದ ನಿರ್ದೇಶನಕ್ಕೆ ಸಾಕ್ಷಿಯಾಗುತ್ತವೆ. ಈ ಯಶಸ್ಸಿಗೆ ಚಿತ್ರಕತೆಯೂ ಸಹಕರಿಸಿದೆ.

ಕರ್ನಲ್ ನಿಕಲ್ಸನ್ ಮತ್ತು ಕರ್ನಲ್ ಸೈಟೋ ಅವರ ಮುಖಾಮುಖಿಯ ಇಡೀ ದೃಶ್ಯಾವಳಿಗಳು ಮತ್ತು ಅವರ ವರ್ತನೆಗಳನ್ನು bridgeoriverkwaiಅವಲಂಬಿಸಿ ನಡೆಯುವ ಚಿತ್ರದ ಇನ್ನಿತರ ಸನ್ನಿವೇಶಗಳು, ಘಟನೆಗಳಿಂದಾಗಿ “Madness! Madness! Madness!” ಎನ್ನುವ ಕ್ಲೈಮಾಕ್ಸ್ ವಾಕ್ಯಗಳ ಅನುಭವವು ನಮಗೆ ಆರಂಭಕ್ಕೆ ದಕ್ಕತೊಡಗುತ್ತದೆ. ನಿಗದಿತ ಅವಧಿಯೊಳಗೆ ಸೇತುವೆ ನಿರ್ಮಾಣವಾಗದಿದ್ದರೆ ತನ್ನ ತಲೆ ಹಾರುವುದು ಎನ್ನುವ ಆತಂಕ ,ಒತ್ತಡದಲ್ಲಿರುವ ಕರ್ನಲ್ ಸೈಟೋ ಕಡೆಗೆ ಅದು ಕರಾರುವಕ್ಕಾಗಿ, ಅತ್ಯುತ್ತಮವಾಗಿ ನಿರ್ಮಾಣಗೊಂಡು ಕಡೆಗೆ ಕರ್ನಲ್ ನಿಕಲ್ಸನ್ ತನಗಿಂತಲೂ ಉತ್ತಮ ಸೇತುವೆ ನಿರ್ಮಾಪಕ ಎಂದು ಸಾಬೀತಾಗತೊಡಗಿದಾಗ ಕರ್ನಲ್ ಸೈಟೋ ಒಬ್ಬಂಟಿಯಾಗಿ ಕತ್ತಲಲ್ಲಿ ಹುಚ್ಚನಂತೆ ರೋದಿಸತೊಡುಗುತ್ತಾನೆ. ಆ ಕ್ಷಣದಲ್ಲಿ ಅವನಿಗೆ ಹುಚ್ಚುತನ ಮತ್ತು ಆತ್ಮಹತ್ಯೆ ಇವೆರಡರ ನಡುವೆ ಅಂತಹ ವ್ಯತ್ಯಾಸವೇ ಇರುವುದಿಲ್ಲ. ಈ ದೃಶ್ಯದಲ್ಲಿ ನಿರ್ದೇಶಕ ಲೀನ್ ಸುತ್ತಲೂ ಶಾಂತತೆ ಇದ್ದರೂ ಆ ಕೂಡಲೇ ಭೂಕಂಪವಾಗುವ ಆತಂಕದಂತಹ ಪರಿಸ್ಥಿತಿಯನ್ನು, ಭವಿಷ್ಯದ ಅನಿಶ್ಚತೆಯನ್ನು ಸೃಷ್ಟಿಸಿಬಿಡುತ್ತಾನೆ. ಅದೂ ಕರ್ನಲ್ ಸೈಟೋ ಪಾಲಿಗೆ ಮಾತ್ರ!! ಹುರಿದ ದನದ ಮಾಂಸ, ಸ್ಕಾಚ್ ವಿಸ್ಕಿಯನ್ನು ಇಷ್ಟಪಡುವ ಕರ್ನಲ್ ಸೈಟೋಗೆ ಸಾಧನೆಯ ವಾಸ್ತವತೆ ಕಣ್ಣೆದುರಿಗಿದ್ದರೂ ತಾನು ಮಾತ್ರ ಮೃತ್ಯುವಿನ ದವಡೆಗೆ ಬಾಗಿಲು ಬಡೆಯುವ ಸ್ಥಿತಿಗೆ ತಳ್ಳಲ್ಪಟ್ಟಿರುವುದು ಕಂಗೆಡಿಸುತ್ತದೆ. ಇದೆಂತಹ Madness!

ಮತ್ತೊಂದು ಕಡೆ ತನ್ನ ಆರ್ಮಿ ಜೀವನದ 28 ವರ್ಷಗಳನ್ನು ನಿಯಮಬದ್ಧವಾಗಿ ಪೂರೈಸಿದ ಕರ್ನಲ್ ನಿಕಲ್ಸನ್, ಅದರ ಕುರಿತಾಗಿ ಅಪಾರವಾದ ಹೆಮ್ಮೆ ಇರುವ ಕರ್ನಲ್ ನಿಕಲ್ಸನ್ Kwai ನದಿಗೆ ಸೇತುವೆಯನ್ನು ತನ್ನ ಯುದ್ಧ ಕೈದಿಗಳಾದ ಸೈನಿಕರ ನೆರವಿನಿಂದ ನಿಗದಿತ ಅವಧಿಯೊಳಗೆ ಕಟ್ಟುತ್ತಾನೆ. ಆ ಸೇತುವೆಗೆ “ಬ್ರಿಟೀಷ್ ಸೈನಿಕರಿಂದ ನಿರ್ಮಾಣಗೊಂಡ ಸೇತುವೆ” ಎಂದು ನಾಮಫಲಕ ತೂಗು ಹಾಕಿಸುತ್ತಾನೆ. ಡಾಕ್ಟರ್ ಕ್ಲಿಪ್ಟನ್ ನಾವು ಸೇತುವೆ ಕಟ್ಟುವುದರ ಮೂಲಕ ಶತೃಗಳಿಗೆ ನೆರವಾಗುತ್ತಿದ್ದೇವಲ್ಲವೇ ಎಂದು ಅನುಮಾನ ವ್ಯಕ್ತಪಡಿಸಿದಾಗ ಕರ್ನಲ್ ನಿಕಲ್ಸನ್ ಅಲ್ಲಗೆಳಿಯುತ್ತಾ ‘ಇಲ್ಲ, ಯುದ್ಧ ಕೈದಿಗಳು ನಿಯಮಾವಳಿಯ ಪ್ರಕಾರ ಆದೇಶವನ್ನು ಪಾಲಿಸಬೇಕು, ಅಲ್ಲದೆ ಮುಂದೆ ಒಂದು ದಿನ ಯುದ್ಧವು ಕೊನೆಗೊಳ್ಳುತ್ತದೆ. ನಂತರ ಜನಸಾಮಾನ್ಯರು ಶತಮಾನಗಳ ಕಾಲ ಈ ಸೇತುವೆಯನ್ನು ಬಳಸುತ್ತಾರೆ. ಆಗ ಅವರು ಜೀತದಾಳುಗಳನ್ನಲ್ಲ ಬದಲಾಗಿ ಬ್ರಿಟೀಷ್ ಆರ್ಮಿಯನ್ನು ನೆನೆಸುತ್ತಾರೆ. ನಮ್ಮ ವಿನಯವಂತಿಕೆ, ಮಾನವೀಯತೆಯು ದಾಖಲಾಗುತ್ತದೆ’ ಎಂದು ವಿವರಿಸುತ್ತಾನೆ. ಈ ಸೇತುವೆ ಕುರಿತಾಗಿ ನಿಕಲ್ಸನ್ ಎಷ್ಟೊಂದು ಮೋಹಿತನಾಗುತ್ತಾನೆಂದರೆ ಕಡೆಗೆ ಯುದ್ಧವನ್ನೇ ಮರೆತುಬಿಡುತ್ತಾನೆ.

ಕರ್ನಲ್ ನಿಕಲ್ಸನ್ ಆಗಿ ಅಲೆಕ್ ಗಿನಿಸ್ನ ನಟನೆ ಅದ್ಭುತ. ಅತ್ಯುತ್ತಮ ನಟನಾಗಿ ಆಸ್ಕರ್ ಪ್ರಶಸ್ತಿ ಗಳಿಸುವ ಅಲೆಕ್ ಗಿನಿಸ್ ಕರ್ನಲ್ ನಿಕಲ್ಸನ್ ಪಾತ್ರವನ್ನು ಅಂತರ್ಮುಖಿಯಾಗಿ, ಆದರೆ ಸದಾ ಚಡಪಡಿಕೆಯ ವ್ಯಕ್ತಿತ್ವವಾಗಿ ಸಂಪೂರ್ಣವಾಗಿ underplay ನಟನೆಯ ಮೂಲಕ ನಮ್ಮೆಲ್ಲರ ಮನ ಗೆಲ್ಲುತ್ತಾನೆ.

ಮತ್ತೊಂದು ಕಡೆ ಅಮೇರಿಕನ್ ಯುದ್ಧ ಕೈದಿ ಶಿಯರ್ಸ್ ಜಪಾನ್ ಶಿಬಿರದ ಬಂಧನದಿಂದ ತಪ್ಪಿಸಿಕೊಂಡು ಪರಾರಿಯಾಗುವ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ಬ್ರಿಟೀಷ್ ಆರ್ಮಿಯ ಕೈಗೆ ಸಿಕ್ಕಿಕೊಳ್ಳುತ್ತಾನೆ. ಆಲ್ಲಿನ ಮೇಜರ್ ವಾರ್ಡನ್ ಶಿಯರ್ಸ್‌ನನ್ನು ಒತ್ತಾಯಿಸಿ ಮರಳಿ ಜಪಾನ್ ಶಿಬಿರಕ್ಕೆ ಕರೆದೊಯ್ಯುವಂತೆ ಒತ್ತಾಯಿಸುವಲ್ಲಿ ಯಶಸ್ವಿಯಾಗುತ್ತಾನೆ. ತನ್ನ ಇನ್ನಿಬ್ಬರು ಕರ್ನಲ್‌ಗಳು ಮತ್ತು ಶಿಯರ್ಸ್‌ನೊಂದಿಗೆ Kwai ನದಿಗೆ ಕಟ್ಟಲ್ಪಟ್ಟ ಸೇತುವೆಯನ್ನು ಧ್ವಂಸಗೊಳಿಸಲು ಗೆರಿಲ್ಲಾ ಮಾದರಿಯ ಯುದ್ಧ ತಂತ್ರವನ್ನು ರೂಪಿಸುತ್ತಾನೆ. ಅಲ್ಲಿಗೆ ಕ್ಲೈಮಾಕ್ಸ್ ಬಂದು ತಲುಪುತ್ತದೆ. ಒಂದು ಕಡೆ ಬ್ರಿಟೀಷ್ ಯುದ್ಧ ಕೈದಿಗಳು ಕರ್ನಲ್ ನಿಕಲ್ಸನ್ ನೇತೃತ್ವದಲ್ಲಿ Kwai ನದಿಗೆ ಸೇತುವೆಯನ್ನು ಕಟ್ಟುವುದರ ಮೂಲಕ ತಮ್ಮ ವೃತ್ತಿಪರತೆ ಮತ್ತು ಮಾನವೀಯತೆಯನ್ನು ನಿಭಾಯಿಸುತ್ತಿದ್ದರೆ ಮತ್ತೊಂದು ಕಡೆ ಬ್ರಿಟೀಷ್ ಆರ್ಮಿಗೆ ಸೇರಿದ ಮೇಜರ್ ವಾರ್ಡನ್ ತನ್ನ ದೇಶ ಇಂಗ್ಲೆಂಡ್‌ನ ಯುದ್ಧದ ಕಾರ್ಯತಂತ್ರದ ಭಾಗವಾಗಿಯೇ ತನ್ನ ಶತೃವಾದ ಜಪಾನ್ ಮಿಲಿಟಿರಿಯ ಸೇತುವೆಯನ್ನು ಧ್ವಂಸಗೊಳಿಸಲು ಗೆರಿಲ್ಲಾ ಮಾದರಿಯ ರಣತಂತ್ರವನ್ನು ರೂಪಿಸುತ್ತಾನೆ. ಇಲ್ಲಿ ನ್ಯಾಯ, ಅನ್ಯಾಯದ ಚರ್ಚೆಯನ್ನು ನಿರ್ದೇಶಕ ಲೀನ್ ಕೈಗೆತ್ತಿಕೊಳ್ಳುವುದೇ ಇಲ್ಲ. ಮನುಷ್ಯರ ವರ್ತನೆಗಳೇ ಪ್ರ್ರಾಧಾನ್ಯತೆ ವಹಿಸಿಬಿಡುತ್ತವೆ. the-bridge-on-the-river-kwaiಅಲ್ಲಿ ಹಿಂಸೆಯ ಮತ್ತೊಂದು ಜಗತ್ತು ಅನಾವರಣಗೊಳ್ಳುತ್ತದೆ. ಈ ರುದ್ರಪ್ರಹಸನದಲ್ಲಿ ಭಾಗವಹಿಸಿದ ಎಲ್ಲರೂ ನಟರಾಗಿದ್ದರೂ ಕಡೆಗೆ ಸ್ವತಃ ಅಸಹಾಯಕಾರಾಗಿ ತಮ್ಮ ಪಾತ್ರಗಳೊಂದಿಗೆ ತಾವೇ ಪ್ರೇಕ್ಷಕರಾಗಿ ಮುಖಾಮುಖಿಯಾಗಿ ನಿಲ್ಲುವುದು ನಮ್ಮನ್ನು ಬೆಚ್ಚಿಬೀಳಿಸುತ್ತದೆ ಮತ್ತು ಈ ವರ್ತನೆಗಳು ಹುಚ್ಚು! ಹುಚ್ಚುತನ! ಎನ್ನುವಲ್ಲಿಗೆ ಬಂದು ಮುಟ್ಟುತ್ತವೆ. ಚಿತ್ರ, ವಿಚಿತ್ರವಾದ ತಿರುವುಗಳಿಗೆ ಬಲಿಯಾಗಿ ಕರ್ನಲ್ ನಿಕಲ್ಸನ್ ತನಗರಿವಿಲ್ಲದೆಯೇ ತಾನು ಕಟ್ಟಿದ ಸೇತುವೆಯ ಧ್ವಂಸಕ್ಕೆ ಸ್ವತಃ ತಾನೇ ಕೈಯಾರೆ ಕಾರಣನಾಗಿ ಸಾಯುವುದು ಮತ್ತೊಂದು ದುರಂತ!! ಇಲ್ಲಿ ಜೀವನದ ಸರಳ ರೂಪುಗಳು ತಮಗರಿವಿಲ್ಲದಂತೆಯೇ ವಕ್ರಗೊಳ್ಳುತ್ತವೆ. ಇಲ್ಲಿ ನಿರ್ದೇಶಕ ಲೀನ್ ಯಾವ ಯಾತನೆಯನ್ನು ದಾಖಲಿಸುತ್ತಿದ್ದಾನೆ? ಮನುಷ್ಯನ ಆಶೆ, ಪರಿಶ್ರಮ, ಸಾಧನೆ ಎಲ್ಲವೂ ಕಡೆಗೆ ವಿನಾಶದ ಹಾದಿಯಲ್ಲಿ ಸಾಗುತ್ತ ಶೂನ್ಯದಲ್ಲಿ ಅಂತ್ಯಗೊಳ್ಳುತ್ತದೆ ಎಂದು ಹೇಳುತ್ತಿದ್ದಾನೆಯೇ?? ಇಲ್ಲ, ಲೀನ್ ನೇರವಾಗಿ ಏನನ್ನೂ ಹೇಳುವುದಿಲ್ಲ.ಕಡೆಗೆ ಉಳಿಯುವುದು “Madness! Madness! Madness!”

ಇಂದು ಇಸ್ರೇಲ್ ಸರ್ಕಾರ ಗಾಜಾ ಪಟ್ಟಿಯಲ್ಲಿ ನೆಲೆಸಿರುವ ಪಾಲೆಸ್ಟೇನ್ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸಿ 600ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆ ಮಾಡಿದೆ, ಮಾಡುತ್ತಿದೆ. ಇಸ್ರೇಲ್‌ನ ಗಾಡ್‌ಫಾದರ್ ಅಮೇರಿಕಾ ಅದಕ್ಕೆ ಸಂರಕ್ಷಣೆಯ ಹೆಸರಿನಲ್ಲಿ ಬೆಂಬಲ ನೀಡಿದೆ. ಗಾಜಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಮಿಲಿಟರಿ ಗುಂಪು ಹಮಾಸ್ ಪಕ್ಷವನ್ನು ಭಯೋತ್ಪಾದಕರೆಂದೇ ಏಕಪಕ್ಷೀಯವಾಗಿ ಕರೆದ ಇಸ್ರೇಲ್ ತನ್ನ ಮೂವರು ಯೋಧರನ್ನು ಹಮಾಸ್ ಆಡಳಿತ ಸಾಯಿಸಿದ್ದಕ್ಕೆ ಪ್ರತೀಕಾರವಾಗಿ ರಾಕೆಟ್ ದಾಳಿಯ ಮೂಲಕ ಅಮಾಯಕ, ಮುಗ್ಧ ಪ್ಯಾಲೆಸ್ಟೇನಿಯನ್ನರನ್ನು ನಿರ್ದಾಕ್ಷೀಣವಾಗಿ ಸಾಯಿಸುತ್ತಿದೆ. ಇದು ಡಾ.ಕ್ಲಿಪ್ಟನ್ ಉದ್ಗರಿಸಿದಂತೆ “Madness! Madness! Madness!” ನ ಪ್ರತಿರೂಪವಷ್ಟೇ. ಕರ್ನಲ್ ಸೈಟೋನಂತೆಯೇ ತಮ್ಮ ಹುಚ್ಚುತನಕ್ಕೆ ಯಾವುದೇ ಕಾರಣಗಳಿಲ್ಲದ ಇಸ್ರೇಲಿ ಸರ್ಕಾರ ಅಮಾನವೀಯವಾಗಿ ರಾಕ್ಷಸರಂತೆ ವರ್ತಿಸುತ್ತಾ ಶಾಂತಿ ಮತ್ತು ಮತ್ತು ಒಳ್ಳೆಯತನ ಮತ್ತು ಮುಗ್ಧತೆಯ ಎಲ್ಲಾ ಮಾದರಿಗಳನ್ನು ನಿರಾಕರಿಸಿದ್ದಾರೆ. “The Bridge on the River Kwai” ಸಿನಿಮಾದ ಕಡೆಯ ದೃಶ್ಯಗಳಲ್ಲಿ ಬ್ರಿಟೀಷ್ ಮೇಜರ್ ವಾರ್ಡನ್ ವರ್ತಿಸಿದಂತೆಯೇ ಇದೇ ಇಸ್ರೇಲ್ ಇಂದು ವರ್ತಿಸುತ್ತಿದೆ. ಅದೇ ಮಾದರಿಯಲ್ಲಿ!

ಪ್ರತೀಕಾರದ ಹೆಸರಿನಲ್ಲಿ, ಯುದ್ಧದ ಕಾರ್ಯತಂತ್ರದ ಹೆಸರಿನಲ್ಲಿ ಜನಸಾಮಾನ್ಯರ ಸೇತುವೆಯನ್ನು ನಾಶಪಡೆಸಲು ಗೆರಿಲ್ಲಾ ತಂತ್ರ ರೂಪಿಸುವ ಮೇಜರ್ ವಾರ್ಡನ್‌ನಂತೆಯೇ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಆಡಳಿತಕ್ಕೆ ಪಾಠ ಕಲಿಸಲು ಇಸ್ರೇಲ್ ಮುಗ್ಧ ಪ್ಯಾಲೆಸ್ಟೇನಿಯನ್ನರ ಬದುಕನ್ನು ಧ್ವಂಸಗೊಳಿಸುತ್ತಿದೆ. “The Bridge on the River Kwai” ಸಿನಿಮಾದ ಕಡೆಯ ದೃಶ್ಯದಲ್ಲಿ ಸೇತುವೆ ನಿರ್ಮಾಣ ಮುಗಿದು ಮರುದಿನ ಅದು ಬಿಡುಗಡೆಗೆ ಸಿದ್ಧವಾಗುತ್ತಿದ್ದಾಗ ಆ ಸೇತುವೆಯ ಮೇಲೆ ನಿಂತು ಕರ್ನಲ್ ನಿಕಲ್ಸನ್ ಭಾವುಕನಾಗಿ ಕಡೆಗೆ ನಾವು ಮುಕ್ತಾಯದ ಹಂತದಲ್ಲಿದ್ದೇವೆ, ಆರಂಭದ ಘಟ್ಟದಲ್ಲಿ ಅಲ್ಲ ಎಂದು ನಮಗೆ ಅರಿವಾಗುವ ಗಳಿಗೆ ಬಂದೇ ಬರುತ್ತದೆ, ಆದರೆ ಇಡೀ ಕಾಲಘಟ್ಟದಲ್ಲಿ ನಮ್ಮನ್ನು ನಾವು ಹೇಗೆ ಪ್ರತಿನಿಧಿಸಿದ್ದೆವು ಎನ್ನುವ ಪ್ರಶ್ನೆ ಮೂಡುತ್ತದೆ. gazaಅದೂ ಹಠಾತ್ತಾಗಿ ಅವಕಾಶಗಳೇ ಕೊನೆಗೊಂಡ ಮುಕ್ತಾಯದ ಹಂತದಲ್ಲಿ! ಈ ವರ್ಷಗಳಲ್ಲಿನ ನಮ್ಮ ಬದುಕು ಏನಾದರೂ ವ್ಯತ್ಯಾಸವನ್ನು ತಂದಿತ್ತೇ? ಎನ್ನುವ ಯಕ್ಷಪ್ರಶ್ನೆಗೆ ಉತ್ತರಿಸಲೇಬೇಕಾಗುತ್ತದೆ ಎಂದು ಕರ್ನಲ್ ಸೈಟೋನನ್ನು ಉದ್ದೇಶಿಸಿ ಮಾರ್ಮಿಕವಾಗಿ ನುಡಿಯುತ್ತಾನೆ. ಇಂದು ಇಸ್ರೇಲ್ ಆರಂಭದ ತನ್ನ ದಾರುಣ ಇತಿಹಾಸವನ್ನು ಒಡಲಲ್ಲಿಟ್ಟುಕೊಂಡು ಭವಿಷ್ಯದಲ್ಲಿ ತಾನೊಂದು ಮಾದರಿಯಾಗುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದನ್ನು ನಿರಾಕರಿಸುತ್ತಲೇ ಇಂದು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಅದು ಕಳೆದ ಅರವತ್ತು ವರ್ಷಗಳಲ್ಲಿ ತನ್ನ ಪ್ರಾತಿನಿಧ್ಯವನ್ನು ನಿಭಾಯಿಸಿರುವುದು ಮಾತ್ರ ರಕ್ತಚರಿತ್ರೆಯ ಹಿನ್ನೆಲೆಯಾಗಿ.

ಎರಡು ದಶಕಗಳ ಹಿಂದೆಯೇ ಚಿಂತಕ ಎಡ್ವರ್ಡ ಸೈದ್ ಬರೆಯುತ್ತಾನೆ: “West Bank ಮತ್ತು ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಪ್ಯಾಲೆಸ್ಟೇನಿಯರ ಪಾಲಿಗೆ ಸಾಮಾನ್ಯವಾದ, ಹಸನಾದ ಬದುಕು ಎನ್ನುವುದು ಕನಸಾಗಿದೆ. ಇವರಿಗೆ ತಮ್ಮ ನೆಲದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಹತ್ಯೆಗಳ ವಿರುದ್ಧ ದನಿಯೆತ್ತಲೂ ಸಹ ಸಾಧ್ಯವಾಗುತ್ತಿಲ್ಲ. ಪ್ಯಾಲೆಸ್ಟೇನ್ ನಾಯಕ ಯಾಸೆರ್ ಅರಾಫತ್ ಸಹ West Bank ಮತ್ತು ಗಾಜಾ ಪಟ್ಟಿ ಅನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಅನುಮತಿಯನ್ನು ಪಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅರಾಫತ್ ಅವರ ಕಾರ್ಯಾಲಯಗಳು ಮತ್ತು ಅಧಿಕಾರ ಕೇಂದ್ರಗಳ ಮೇಲೆ ನಿರಂತರ ಬಾಂಬ್ ದಾಳಿ ನಡೆಸಲಾಗುತ್ತಿದೆ. ಸೆಪ್ಟೆಂಬರ್ 1993 ರಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಡುವೆ ಆದ ಓಶ್ಲೋ ಶಾಂತಿ ಒಪ್ಪಂದದ ನಂತರ ಸಾವುನೋವುಗಳು ಹೆಚ್ಚಾಗಿವೆ. ಬಾಂಬ್ ದಾಳಿಗಳು ಹೆಚ್ಚಾಗಿವೆ. ಹಾಗಿದ್ದರೆ ಈ ಓಶ್ಲೋ ಒಪ್ಪಂದದ ಮಹತ್ವವೇನು?ಅದರ ಔಚಿತ್ಯವೇನು? RISOT ವರದಿಯ ಪ್ರಕಾರ ಓಶ್ಲೋ ಒಪ್ಪಂದಕ್ಕಿಂತಲೂ ಮೊದಲು 110000 ಯಹೂದಿಗಳು West Bank ಮತ್ತು ಗಾಜಾ ಪಟ್ಟಿಯಲ್ಲಿ ಅಕ್ರಮವಾಗಿ ನೆಲೆಸಿದ್ದರೆ ಒಪ್ಪಂದದ ನಂತರ ಆ ಸಂಖ್ಯೆ 195000 ಗೆ ಏರಿದೆ. ಇದು ಏನನ್ನು ಸೂಚಿಸುತ್ತದೆ ?? ಪ್ಯಾಲೆಸ್ಟೇನಿಯರಿಗೆ israel.gazaತಮ್ಮ ಶತೃಗಳು ಬರೆದ ತಮ್ಮ ಬದುಕಿನ ಸ್ಕ್ರಿಪ್ಟ್ ಅನ್ನು ಓದಬೇಕಾದಂತಹ ಪರಿಸ್ಥಿತಿಗೆ ಯಾರು ಹೊಣೆ? ಪ್ಯಾಲೆಸ್ಟೇನ್ ಅರಬರಾಗಿ ನಮ್ಮ ಘನತೆ ಮತ್ತು ಆತ್ಮಗೌರವವನ್ನು ನಮ್ಮ ಭಾಷೆಯ ಮೂಲಕ, ಪರಂಪರೆಯ ಮೂಲಕ, ಇತಿಹಾಸದ ಮೂಲಕ, ನಮ್ಮ ಪ್ರಾತಿನಿಧ್ಯವನ್ನು, ನಮ್ಮ ನೋವನ್ನು ಈ ಅರಬ್ ರಾಷ್ಟ್ರಗಳಲ್ಲಿ, ಈ ಅಮೇರಿಕಾದಲ್ಲಿ ಹಂಚಿಕೊಳ್ಳಬೇಕಾಗಿದೆ. ಆದರೆ ದುರಂತವೆಂದರೆ ನಾವು ಯಾರು, ನಮಗೇನು ಬೇಕು, ನಮ್ಮ ಇತಿಹಾಸವೇನು, ನಾವು ಮುಂದೆ ಎಲ್ಲಿಗೆ ಸಾಗಬೇಕೆಂದಿದ್ದೇವೆ, ನಮ್ಮ ಘನತೆ, ಆತ್ಮ ಗೌರವದ ಕುರಿತಾಗಿ 1948 ರಿಂದ ಇಂದಿನವರೆಗೂ ಯಾವೊಬ್ಬ ರಾಜಕೀಯ ನಾಯಕನೂ ನಮ್ಮ ವಕ್ತಾರರಾಗಿ ಮಾತನಾಡಿಲ್ಲ.”

ಪ್ಯಾಲೆಸ್ಟೇನಿಯರೆಂದರೆ ಭಯೋತ್ಪಾದಕರು ಎಂದು ಹೇಳಿಕೆಗಳನ್ನು ಕೊಡುತ್ತಿರುವ ಇಸ್ರೇಲ್ ಸರ್ಕಾರ ಗಾಜಾ ಪಟ್ಟಿಯಲ್ಲಿ ಹಿಂಸೆಯ ಜಗತ್ತನ್ನು ಸೃಷ್ಟಿಸುತ್ತಿದೆ. ಪಾಲೆಸ್ಟೀನಿಯರ ಬದುಕು ವಿನಾಶದ ಹಾದಿಗೆ ತಳ್ಳುತ್ತಿರುವ ಇಸ್ರೇಲ್‌ನ ಈ ಭೀಕರ ಕನಸನ್ನು ಧ್ವಂಸಗೊಳಿಸುವವರಾರು?? ಇಸ್ರೇಲ್‌ನ ನೀಚತನದ ಫಲವಾಗಿ ಪ್ಯಾಲೆಸ್ಟೇನ್ ಮುಸ್ಲಿಂರ ಬದುಕು ಛಿದ್ರ ಛಿದ್ರವಾಗುತ್ತಿರುವದಕ್ಕೆ ನಿಜಕ್ಕೂ ದುರಂತಮಯ. ನಮ್ಮಲ್ಲಿ ಪಾಪಪ್ರಜ್ಞೆಯ ಅಂಶಗಳೇ ಕಾಣೆಯಾಗುತ್ತಿವೆ. ಕಡೆಗೆ ಕರ್ನಲ್ ಸೈಟೋನಂತೆ ಹುಚ್ಚುತನ ಮತ್ತು ಆತ್ಮಹತ್ಯೆ ಇವೆರಡರ ನಡುವೆ ಅಂತಹ ವ್ಯತ್ಯಾಸವೇ ಇಲ್ಲದಂತಹ ಸ್ಥಿತಿಗೆ ಇಸ್ರೇಲ್ ಸಾಗುತ್ತಿದೆ. ಆಧುನಿಕ ಮಾನವೀಯ ಜಗತ್ತಿಗೆ ಭೀಕರ ಸವಾಲಾಗಿ ನಿಂತಿದೆ.

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014 : ಕತೆಗಳಿಗೆ ಆಹ್ವಾನ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2014(ಕಳೆದ ವರ್ಷದ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2014

ಸೆಪ್ಟೆಂಬರ್ katha spardhe inside logo 2014 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ