Daily Archives: July 30, 2014

21ನೇ ಶತಮಾನದಲ್ಲಿದ್ದರೂ ಹೆಣ್ಣಿನ ವಿಷಯಕ್ಕೆ ಗೋಯಿಂಗ್ ಬ್ಯಾಕ್ ಟ್ರೆಂಡ್

– ಶರ್ಮಿಷ್ಠ 

ಮಹಾಭಾರತ, ರಾಮಾಯಣ ಟೀಕಿಸಿದ ಕೂಡಲೇ ಹಿಂದೂಧರ್ಮವನ್ನು ಅವಹೇಳನ ಮಾಡಲಾಗುತ್ತಿದೆ ಎನ್ನುವ ಕೂಗು ಎಲ್ಲೆಡೆ ಶುರುವಾಗತೊಡಗುತ್ತದೆ. ಆದರೆ ಅದನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ನೋಡುವ ವ್ಯವಧಾನ ಯಾರಿಗೂ ಇಲ್ಲ. ತಮ್ಮ ತಮ್ಮ ಮನೆಯ ಬುಡದವರೆಗೂ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಬರುವವರೆಗೂ ಎಲ್ಲಾ ‘ನೈತಿಕ ಮೌಲ್ಯ’ಗಳು ಹಿತವಾಗಿಯೇ ಕೇಳುತ್ತವೆ. ಅಕ್ಕ ಹೇಳುವ ಹಾಗೆ ‘ನೊಂದ ನೋವನ್ನು ನೊಂದವರಲ್ಲದೆ ನೋಯದವರು ಹೇಗೆ ತಾನೇ ಅರಿಯಬಲ್ಲರು?’ ಫೇಸ್‌ಬುಕ್‌ನಲ್ಲಿ ಗಿಡ್ಡ ಸ್ಕರ್ಟ್ ಹಾಕಿರುವ, ಕುಡಿದು ಕುಣಿಯುತ್ತಿರುವ, woman-unchainedಪಬ್‌ಗಳಲ್ಲಿ ನರ್ತಿಸುತ್ತಿರುವ ಹುಡುಗಿಯರ ಚಿತ್ರಗಳನ್ನು ಹಾಕಿ ಇಂಥವರಿಗೆ ರಕ್ಷಣೆ ಬೇಕೆ? ಎಂದು ಹಿಂದೂ ಧರ್ಮದ ಗುತ್ತಿಗೆದಾರರು ಪ್ರಶ್ನೆ ಮಾಡುತ್ತಾರೆ. ಅದು ಮಹಿಳೆಯರಿಗೆ ನಿಷಿದ್ಧವಾದರೆ ಪುರುಷರಿಗೂ ಬೇಡ ಎಂದು ಏಕೆ ಹೇಳಬಾರದು? ಹಿಂದೂ ಧರ್ಮದ ರಕ್ಷಣೆಯ ಭಾರ ಕೇವಲ ಮಹಿಳೆಯರು ಮಾತ್ರ ಹೊತ್ತಿದ್ದಾರೆಯೇ?

ಮಹಾಭಾರತದಲ್ಲಿ ದ್ರೌಪದಿಯ ಸೀರೆಯನ್ನು ಎಳೆಯುವಾಗ ಶ್ರೀಕೃಷ್ಣ ಬಂದು ಸೀರೆ ಕೊಟ್ಟು ‘ಹೀರೋಯಿಸಂ’ ಪ್ರದರ್ಶಿಸುವ ಬದಲು, ‘ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡಿರುವ ಪಾಂಡವ ಕೌರವರಿಬ್ಬರಿಗೂ ನಿನಗೆ ತೋಚಿದ ಶಿಕ್ಷೆ ಕೊಡು, ನಿನ್ನ ಜೊತೆ ನಾನಿದ್ದೇನೆ ಎಂದಿದ್ದರೆ?’ ತನ್ನನ್ನು ಅಡ ಇಟ್ಟ ಪಾಂಡವರಿಗೂ, ಅವಮಾನ ಮಾಡ ಹೊರಟ ಕೌರವರಿಗೂ ದ್ರೌಪದಿ ಅಂದೇ ಬುದ್ಧಿ ಕಲಿಸಿದಿದ್ದರೆ? ಸ್ತ್ರೀ ಸಬಲೀಕರಣವನ್ನು ಮಾಡಿದ ಪ್ರಥಮ ಪುರುಷ ಕೃಷ್ಣನಾಗುತ್ತಿದ್ದ. ತನ್ನವರನ್ನೇ ಕೊಲ್ಲಲು ಹಿಂಜರಿದ ಅರ್ಜುನನಿಗೆ ಕೃಷ್ಣ ‘ಧರ್ಮ ರಕ್ಷಣೆಯ’ ನೆಪ ಹೇಳುತ್ತಾನೆ. ಹಾಗಿದ್ದಲ್ಲಿ ದ್ರೌಪದಿ ತನ್ನ ಮಾನ ರಕ್ಷಣೆಗಾಗಿ woman-insightಅಲ್ಲಿದ್ದವರಿಗೆ ತಕ್ಕ ಶಿಕ್ಷೆ ಕೊಟ್ಟಿದ್ದರೆ ಅದನ್ನು ಧರ್ಮದ ‘ಕ್ರೈಟೀರಿಯಾ’ಕ್ಕೆ ಖಂಡಿತಾ ಸೇರಿಸಬಹುದಿತ್ತಲ್ಲವೇ? ಕಾಳಿದಾಸನ ಶಾಕುಂತಲೆ ಕೂಡ ಈಗಿನ ಕಾಲದ ‘ಫೇರ್ ಆಂಡ್ ಲವ್ಲಿ ಗರ್ಲ್’ ಅಷ್ಟೆ. ಅವಳೊಂದು ಸೌಂದರ್ಯದ ಪ್ರತೀಕ ಇವತ್ತಿನ ಜಾಹೀರಾತು ಜಗತ್ತಿನ ಅರ್ಥವಿಲ್ಲದ ಸೌಂದರ್ಯವೇ ಸರ್ವಸ್ವ ಜಾಹೀರಾತಿನ ಹಾಗೆ. ಯಾವ ಸ್ವಂತಿಕೆಯೂ ಇಲ್ಲ. ಪತಿವ್ರತಾ ಧರ್ಮ ಪಾಲನೆಗೆಂದು ಗಾಂಧಾರಿ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳದೆ ತನ್ನ ಮಕ್ಕಳನ್ನು ನೀತಿವಂತರನ್ನಾಗಿ ಬೆಳೆಸಿದ್ದರೆ, ಮಹಾಭಾರತದಲ್ಲಿ ಕೌರವರು ‘ವಿಲನ್’ಗಳೇ ಆಗುತ್ತಿರಲಿಲ್ಲ.

ಹೀಗೆ ಎಷ್ಟೋ ತರ್ಕಗಳನ್ನು ಕೊಡುತ್ತಾ ಹೋಗಬಹುದು. ಆದರೆ ಅದೆಲ್ಲ ಕುತರ್ಕ ಅನಿಸಿಕೊಳ್ಳುವ ಅಪಾಯಗಳೇ ಜಾಸ್ತಿ. ಬರೆದವರು ಹಿಂದೂ ಧರ್ಮ ವಿರೋಧಿ ಎಂದು ಹಣೆಪಟ್ಟಿ ಹಚ್ಚಿಕೊಂಡುಬಿಡಬಹುದು. ಆದರೆ ಒಂದು ವಿಷಯವನ್ನು ಮಾತ್ರ ಒಪ್ಪಿಕೊಳ್ಳಲೇಬೇಕು. ಹಿಂದೂ ಧರ್ಮದಲ್ಲಿ ನನಗೆ ನನಗನ್ನಿಸಿದನ್ನು ಹೇಳುವ ಸ್ವಾತಂತ್ರ್ಯವಾದರೂ ಇದೆ. ನನ್ನ ಬೆಂಬಲಕ್ಕೆ ಹತ್ತಾರು ದನಿಗಳು ಕೈಗೂಡಬಹುದು. ಅದರೆ ಮುಸ್ಲಿಂ ಧರ್ಮದ ಮಹಿಳೆಯರಿಗೆ? 5-6 ವರ್ಷದ ಚಿಕ್ಕ ಮಕ್ಕಳಿಗೂ ಬುರ್ಖಾ ಹಾಕಿಸುವ ಸಂಪ್ರದಾಯ ಮಕ್ಕಳ ಬಾಲ್ಯ ಕಸಿದುಕೊಳ್ಳುತ್ತಿದೆ ಎಂದು ನನಗನಿಸುತ್ತಿದೆ. ಅರ್ಥವಿಲ್ಲದ ಫತ್ವಾಗಳು ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವ ವಿದ್ಯಾವಂತ ಸಮುದಾಯ ಅದನ್ನು ಧರ್ಮದ ಹೆಸರಿನಲ್ಲಿ ಬಲವಂತವಾಗಿ ಹೆಣ್ಮಕ್ಕಳ ಮೇಲೆ ಹೇರುತ್ತಿದೆ. inidan-muslim-womanಜನನಾಂಗ ಛೇಧನದಂತಹ ಸುದ್ದಿಯನ್ನು ಓದಲೂ ಹಿಂಸೆಯಾಗುತ್ತಿದೆ. ಅಂಥದರಲ್ಲಿ ಅದಕ್ಕೆ ಈಡಾಗುವ ಮಹಿಳೆಯರ ಸಂಕಷ್ಟವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ರಮ್ಜಾನ್‌ನ ಪ್ರಯುಕ್ತ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಕೆಲವು ಮಕ್ಕಳು ಪ್ರಾರ್ಥನೆ ಸಲ್ಲಿಸುತ್ತಿರುವುದರ ಚಿತ್ರ ಪ್ರಕಟವಾಗಿತ್ತು. ಅದರಲ್ಲಿ ಬಹುಶ: 4 ಹಾಗು 7 ವರ್ಷದ ಹೆಣ್ಣು ಮಕ್ಕಳಿಬ್ಬರು ಬುರ್ಖಾ ಧರಿಸಿದ್ದರು. ಈ ಚಿತ್ರಗಳನ್ನು ಪ್ರಕಟಿಸುವ ಮೂಲಕ ನಾವೇನು ಹೇಳ ಹೊರಟಿದ್ದೇವೆ? ಅದು ಏನನ್ನು ಬಿಂಬಿಸುತ್ತಿದೆ. ಆ ಚಿಕ್ಕ ಪ್ರಾಯದ ಮಕ್ಕಳಿಗೆ ಬುರ್ಖಾ ಯಾಕೆ ಹಾಕುತ್ತಿದ್ದೀರಾ? ದಯವಿಟ್ಟು ತಿಳಿಸಿ.

ಇತ್ತೀಚೆಗೆ ಒಂದು ಆಭರಣದ ಜಾಹೀರಾತು ನೋಡಿದೆ. ಅಪ್ಪ ಮಗಳಿಗೆ ಚಿನ್ನ ಕೊಡಿಸಿದ ಕಾರಣಕ್ಕೆ ಅವನು ಗಂಡನಿಗಿಂತ ಆಕೆಗೆ ಪ್ರಿಯನಾಗುತ್ತಾನೆ. ಅದಕ್ಕೆ ಆಕೆ ತನ್ನ ಹೆಸರಿನ ಜೊತೆಗೆ ಅಪ್ಪನ ಹೆಸರನ್ನೇ ಇಟ್ಟುಕೊಳ್ಳುತ್ತಾಳೆಯೇ ಹೊರತು ಗಂಡನ ಹೆಸರನ್ನು ಇಟ್ಟುಕೊಳ್ಳುವುದಿಲ್ಲ. ಇಲ್ಲಿ ಆಕೆ ಹೆಸರು ಬದಲಾಯಿಸದೇ ಇರುವುದಕ್ಕೆ ಕಾರಣ ‘ಚಿನ್ನ’ವೇ ಹೊರತು ಅಪ್ಪನ ಮೇಲಿನ ಪ್ರೀತಿ ಆಗಲಿ ಆಕೆಯ ಸ್ವಾಭಿಮಾನವಾಗಲಿ ಅಲ್ಲ. ಇನ್ನು ಧಾರವಾಹಿಗಳು ಶುರುವಾಗುವುದೇ ಹಿರೋಯಿನ್ ಮನೆಯವರಿಗೆಲ್ಲ ಬೆಡ್ ಕಾಫಿ ಕೊಡುವ ಮೂಲಕ. ಆಗ ಆಕೆ ಆದರ್ಶ ಗೃಹಿಣಿ. ಯಾವ ಗಂಡು ಪಾತ್ರವೂ ಅಡುಗೆ ಮನೆಗೆ ಬಂದು ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡೋಣ. ನೀನು ಅಡಿಗೆ ಮಾಡು ನಾನು ಪಾತ್ರೆ ತೊಳಿತೇನೆ ಅನ್ನುವುದಿಲ್ಲ. ಬೆಡ್ ಕಾಫಿ ಬೇಡ ನೀನು ಕಾಫಿ ಆದ ಮೇಲೆ ಕರೆ ನಾನು ನೀನಿದ್ದಲ್ಲಿಗೇ ಬರುತ್ತೇನೆ ಅನ್ನುವುದಿಲ್ಲ. ಒಳ್ಳೆಯ ಸರ್ವೆಂಟ್‌ನ ಹಾಗೆ ಹಿರೋಯಿನ್ ಕೆಲಸ ಮಾಡುತ್ತಿದ್ದರೆ, ಗಂಡು ಪಾತ್ರಧಾರಿಗಳು ಬಾಯಿತುಂಬ ಹೊಗಳುತ್ತವೆಯೇ ಹೊರತು, ಎಲ್ಲ ಕೆಲಸ ನೀನೆ ಯಾಕೆ ಮಾಡಬೇಕು, ನೀನು ಕೆಲಸದವಳಲ್ಲ, ನಮ್ಮ ತಟ್ಟೆ ಲೋಟ ನಾವೇ ತೊಳೆದುಕೊಳ್ಳತ್ತೇವೆ, ನಿನಗೆ ಸಹಾಯ ಮಾಡುತ್ತೇವೆ ಅನ್ನೋ ಮಾತನ್ನು ಆಡೋದೇ ಇಲ್ಲ, ಅವಳ ವ್ಯಕ್ತಿತ್ವವನ್ನು ಗೌರವಿಸೋದು ಇಲ್ಲ. ಸಿನಿಮಾಗಳ ಮಾತೇ ಬೇಡ. ಅಲ್ಲಿ ‘ಹಿರೋಯಿನ್ ಇಸಮ್’ ಗೆ ಜಾಗವೇ ಇಲ್ಲ.

ಇನ್ನು ಇವತ್ತಿನ ‘ಬದಲಾದ’ ಪ್ರಪಂಚವೋ ಅಲ್ಲಿ ಹೆಣ್ಣು ಕೆಲಸಕ್ಕೆ ಹೋಗಿ ಸಂಪಾದಿಸಬಹುದು ಆದರೆ ಆಕೆಗೆ ಸ್ವತಂತ್ರ ವ್ಯಕ್ತಿತ್ವ ಇರಬಾರದು. ಬೆಳಗ್ಗೆ ಹೋಗಿ ಸಂಜೆ ಬರಬೇಕು ಕೆರಿಯರ್ ಇಂಪ್ರುಮೆಂಟ್, ಔಟ್ ಸ್ಟ್ಯಾಂಡಿಂಗ್ ಅಚಿವ್‌ಮೆಂಟ್‌ಗಳೆಲ್ಲ ಆಕೆಗೆ ನಿಷಿದ್ಧ. ಪ್ರೊಗ್ರೆಸ್ಸಿವ್ ಥಿಂಕಿಂಗ್, Indian-policewomanಆದರ್ಶಗಳಂತೂ ಇರಲೇ ಬಾರದು. ಇದೆಲ್ಲ ಅಲಿಖಿತವಾಗಿರುವ ಹೆಣ್ಮಕ್ಕಳ ಮೇಲೆ ಹೇರಲ್ಪಟ್ಟ ನಿಯಮಗಳು. ಇದನ್ನು ನೀವು ಮೀರಿದರೆ ನೀವು ಅತ್ತೆ ಮನೆಗೆ ನಾಲಾಯಕ್ ಸೊಸೆ. ಗಂಡು ಮಗನ ಆದರ್ಶಗಳು ಅದು ಎಷ್ಟೇ ವಿವೇಚನಾರಹಿತವಾಗಿದ್ದರೂ ಅದೇ ತಾಯಿ ‘ನನ್ನ ಮಗನಿಗಾಗಿ’ ಅಂಥ ಎಲ್ಲಾ ರಾಜಿಗಳನ್ನು ಮಾಡಿಕೊಳ್ಳುತ್ತಾಳೆ. ಮನೆಯ ಎಲ್ಲಾ ಹೆಣ್ಮಕ್ಕಳು ಆತನ ಆದರ್ಶವನ್ನು ಎದುರಾಡದೆ ಅನುಸರಿಸಿಕೊಂಡು ಹೋಗಬೇಕು. ಕೆಲವು ಪತ್ರಿಕೆಗಳೂ ತಮ್ಮ ವಿಶೇಷ ಪುರವಣಿಗಳ ಮೂಲಕ ಈ ‘ಸಾರ್ಥಕ ಗೃಹಿಣಿ’ ಯ ತತ್ವಗಳನ್ನು ಬಿತ್ತುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿವೆ. ಆದರೆ ಹೆಣ್ಣಾಗಿ ನಿಮಗೆ ಯಾವ ಆದರ್ಶಗಳೂ ಇರಕೂಡದು ನೀವು ಅದಕ್ಕೆ ಎಲಿಜಿಬಲ್ ಅಲ್ಲ. ಅದು ಅಹಂಕಾರ. ಮಗ ಉನ್ನತ ವ್ಯಾಸಾಂಗ ಮಾಡುತ್ತಾನೆ ಎಂದರೆ ತಾಯಿ ಅವನ ಕೆಲಸದಾಕೆಯೋ ಎಂಬಂತೆ ಆತನ ಎಲ್ಲಾ ಚಾಕರಿಗಳನ್ನು ಮಾಡುತ್ತಾ ಆತನ ಉನ್ನತಿಗಾಗಿ ಶ್ರಮಿಸುತ್ತಾಳೆ. ಆದರೆ ಹೆಣ್ಣು ಮನೆಯ ಜವಾಬ್ದಾರಿಯನ್ನು ಆಫೀಸಿನ ಎಲ್ಲಾ ಹೊಣೆಯೊಂದಿಗೂ ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋದರೆ ಮಾತ್ರ ವ್ಯಾಸಾಂಗ ಮುಂದುವರೆಸಬಹುದು. ಹೆಣ್ಣುಮಕ್ಕಳಿಗೆ ಯಶಸ್ಸು ಸಿಕ್ಕಿದರೆಷ್ಟು ಬಿಟ್ಟರೆಷ್ಟು. ಇನ್ನು ಟೆಕ್ಕಿಗಳ ಕೆಲಸ ಅತ್ಯಾಧುನಿಕ ಕಂಪ್ಯೂಟರ್‌ನಲ್ಲಾದರೂ ಅವರು ಮದುವೆ ಆಗುವ ಹುಡುಗಿಗೆ ಜಾತಕ ನೋಡುವುದು ಕಡ್ಡಾಯ. ಮಡಿ ಮೈಲಿಗೆ ಗೊತ್ತಿರಬೇಕು. ಇದು ಹೆಣ್ಣಿಗಾಗಿ ಬದಲಾಗಿರುವ ‘ಉದಾತ್ತ’ ಪ್ರಪಂಚ.

21 ನೇ ಶತಮಾನದಲ್ಲಿದ್ದೇವೆ. ಆದರೂ ನಮ್ಮಲ್ಲಿ ಅದೊಂಥರಾ ‘ಗೋಯಿಂಗ್ ಬ್ಯಾಕ್ ಟ್ರೆಂಡ್’ ಕಾಣಿಸುತ್ತಿದೆ. ಮನಸುಗಳು ಬದಲಾಗದ ಹೊರತು, ಹೆಣ್ಣನ್ನು ನೋಡುವ ರೀತಿಯನ್ನು ಹೆಣ್ಣೇ ಬದಲಾಯಿಸಕೊಳ್ಳದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ. ಪ್ರತಿಯೊಬ್ಬ ಅಮ್ಮ ತನ್ನ ಮಗನನ್ನು ಹೆಣ್ಣಿನ ವಿಷಯದಲ್ಲಿ ಸಂವೇದನಾಶೀಲನನ್ನಾಗಿ ಮಾಡಹೊರಟರೆ ಸಾಕು ನಾಳೆಗಳು ಆಶಾದಾಯಕವಾಗಿರುತ್ತವೆ