Daily Archives: October 27, 2014

ಸಿದ್ಧಲಿಂಗಯ್ಯ ಮತ್ತು ಆಳ್ವಾಸ್ ನುಡಿಸಿರಿ : ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕಿಲ್ಲ


– ಬಿ. ಶ್ರೀಪಾದ ಭಟ್


 

22 ಅಕ್ಟೋಬರ್, 1964. ಸಾಹಿತ್ಯದಲ್ಲಿನ ಸಾಧನೆಗಾಗಿ ತನಗೆ ನೀಡಿದ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸುತ್ತ ಚಿಂತಕ ಜೀನ್ ಪಾಲ್ ಸಾರ್ತೆ, “ನಾನು ಯಾವಾಗಲೂ ಸರ್ಕಾರ ಅಥವಾ ಅಫೀಶಯಲ್ ಆಹ್ವಾನಗಳನ್ನು,ಪುರಸ್ಕಾರಗಳನ್ನು ಒಪ್ಪಿಕೊಳ್ಳುವುದಿಲ್ಲ. ತಾನು ಒಂದು ಸಂಸ್ಥೆಯಾಗುವ ಎಲ್ಲಾ ಸಾಧ್ಯತೆಗಳನ್ನು ಲೇಖಕನು ತಿರಸ್ಕರಿಸಬೇಕು. ಲೇಖಕನ ಬದ್ಧತೆಯ ಅಗತ್ಯತೆಯನ್ನಾಧರಿಸಿ ನನ್ನ ನಿಲುವನ್ನು ರೂಪಿಸಿಕೊಂಡಿದ್ದೇನೆ. ರಾಜಕೀಯ, ಸಾಮಾಜಿಕ, ಸಾಹಿತ್ಯಕ ಸ್ಥಾನಗಳನ್ನು ಅಲಂಕರಿಸುವ ಲೇಖಕ ಅದರ ಮಿತಿಯೊಳಗೊಳಪಟ್ಟೇ ವರ್ತಿಸಬೇಕು siddalingayyaಮತ್ತು ಮುಖ್ಯವಾಗಿ ಅದು ಕೇವಲ ಆತನ ಲೋಕವಾಗಿರಬೇಕು” ಎಂದು ಮಾರ್ಮಿಕವಾಗಿ ಹೇಳುತ್ತಾನೆ. ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸುವ ಸಾರ್ತೆಗೆ ಅದು ಕೇವಲ ಪಶ್ಚಿಮ ಜಗತ್ತಿನ ಲೇಖಕರಿಗಾಗಿ ಮತ್ತು ಪೂರ್ವ ಜಗತ್ತಿನ ಬಂಡಾಯ ಲೇಖಕರಿಗಾಗಿ ಮಾತ್ರ ಮೀಸಲು ಇರುವಂತಿದೆ ಎಂದು ಅಭಿಪ್ರಾಯ ಪಡುತ್ತಾನೆ.

ಇದು ನಡೆದು ಐವತ್ತು ವರ್ಷಗಳಾಗಿವೆ. ಆದರೆ ಅದರ ಆಶಯಗಳು ಇಂದಿಗೂ ಪ್ರಸ್ತುತ. ಏಕೆಂದರೆ ಇತ್ತೀಚೆಗೆ ನಮ್ಮ ಪ್ರೀತಿಯ ಕವಿಗಳು ಸಿದ್ಧಲಿಂಗಯ್ಯನವರು (ನಮ್ಮನ್ನು ರೂಪಿಸಿದ ಕವಿ ಮತ್ತು ಹೋರಾಟಗಾರ) “ಅಳ್ವಾಸ್ ನುಡಿಸಿರಿ”ಯ ಅಧ್ಯಕ್ಷತೆಯನ್ನು ಒಪ್ಪಿಕೊಂಡ ನಂತರ ಅದನ್ನು ತಾತ್ವಿಕ ಮತ್ತು ನೈತಿಕ ಕಾರಣಗಳಿಗಾಗಿ ವಿರೋಧಿಸಿದ ಗೆಳೆಯರಿಗೆ ಉತ್ತರಿಸುತ್ತಾ ಮತ್ತೊಬ್ಬ ಗೆಳೆಯರು ಆ ಭಾಗವಹಿಸುವಿಕೆಯನ್ನು ಸಮರ್ಥಿಸುತ್ತಾ ’ಅದರಲ್ಲಿ ಅಂತಹ ತಪ್ಪೇನಿಲ್ಲ, ಕೇವಲ ನಮ್ಮೊಳಗೆ ಸಿದ್ಧಾಂತಗಳನ್ನು ಮಾತನಾಡಿ ಪ್ರಯೋಜನವಿಲ್ಲ, ಆ ಪ್ರಗತಿಪರ ಚಿಂತನೆಗಳು ವಿರೋಧಿ ಬಣಗಳಿಗೂ ತಲುಪಬೇಕು, ಅಲ್ಲಿಯೂ ಚರ್ಚಿತವಾಗಬೇಕು ಎನ್ನುವ ಕಾರಣಕ್ಕಾಗಿ ಸಿದ್ಧಲಿಂಗಯ್ಯನವರ ಅಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಗೆಳೆಯರು ಒಪ್ಪಿಕೊಂಡಿದ್ದಾರೆ ಮತ್ತು ಅಲ್ಲಿ ನಮ್ಮ ಪ್ರೀತಿಯ ಕವಿಗಳು ತಮ್ಮ ಪ್ರಗತಿಪರ ನಿಲುವುಗಳನ್ನು ಬಿಟ್ಟುಕೊಡದೆ ಆ ಗುಂಪಿಗೂ ಚಾಟಿಯೇಟನ್ನು ಬೀಸಲಿ ಎಂದು ಆಶಿಸಿದ್ದಾರೆ. ಇವರ ಒಟ್ಟಾರೆ ಆಶಯಗಳಿಗೆ ಯಾರಿಗೂ ವಿರೋಧವಿಲ್ಲ. ನಾವೆಲ್ಲ ವಿಭಿನ್ನ ನೆಲೆಯ ಜನರೊಂದಿಗೆ, ಭಿನ್ನಾಭಿಪ್ರಾಯಗಳ ಜನರೊಂದಿಗೆ ಸಂವಾದಿಸಬೇಕು ಎನ್ನುವುದೂ ನಮೆಲ್ಲರ ಆಶಯಗಳೂ ಸಹ ಅಗಿರುತ್ತದೆ. ಆದರೆ ಅದು at what cost? ಗೆಳೆಯರ ಸದುದ್ದೇಶದ ಇಡೀ ಆಶಯಗಳು ವಿತಂಡವಾದದಂತೆ ಕಾಣತೊಡಗುವುದಕ್ಕೆ ಕಾರಣ ಅವರು ಅದಕ್ಕಾಗಿ ಯಾವ ಬೆಲೆ ತೆರಬೇಕು ಎನ್ನುವುದನ್ನು ತಮ್ಮನ್ನು ತಾವು ಪ್ರಶ್ನಿಸಿಕೊಂಡಿಲ್ಲ. ತನ್ನ ಕಡೆಯ ವರ್ಷಗಳಲ್ಲಿ ತಾನು ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಿದ್ದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಸಾರ್ತೆ, “ಆ ಬಹುಮಾನದ ಹಣ (ಸುಮಾರು 21000 ಪೌಂಡ್) ಅನ್ನು ಜನಾಂಗೀಯ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಸಂಘಟನೆಗೆ ಕೊಡಬಹುದಾಗಿತ್ತೇನೋ. ಏಕೆಂದರೆ ಆ ಸಂಘಟನೆಗೆ ಅದರ ಅವಶ್ಯಕತೆ ಇತ್ತು” ಎಂದು ಬರೆದುಕೊಳ್ಳುತ್ತಾನೆ ಹೊರತಾಗಿ ಪಶ್ಚತ್ತಾಪ ಮಾತ್ರ ಪಡುವುದಿಲ್ಲ. ಏಕೆಂದರೆ ಸಾರ್ತೆಗೆ ಗೊತ್ತಿತ್ತು ಒಂದು ಸದುದ್ದೇಶಕ್ಕಾಗಿ ಹಣವನ್ನು ಪಡೆದುಕೊಳ್ಳುವುದೇನೋ ಸರಿ, ಆದರೆ ಅದು at what cost?

ಮೇಲ್ನೋಟಕ್ಕೆ ಕಾಣುವಂತೆ ಅಳ್ವಾಸ್ ನುಡಿಸಿರಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸಹಜವಾಗಿಯೇ ಟಿಎ, ಡಿಎ ಮತ್ತು ಪಾಲ್ಗೊಳ್ಳುವಿಕೆಗೆ ಕೃತಜ್ಞತೆಯಾಗಿ ಹಣವನ್ನೂ ಕೊಡುತ್ತಾರೆ. ಮತ್ತು ಅಲ್ಲಿರುವವರೆಗೂ ಊಟ, ವಸತಿಗಳ ಉಚಿತ ವ್ಯವಸ್ಥೆಯೂ ಇರುತ್ತದೆ. ಇಷ್ಟನ್ನು ಅನುಭವಿಸುವ, alva-nudisiri-baraguru-mohan-alva-veerendra-heggade-vivek-raiಪಡೆದುಕೊಳ್ಳುವ ಲೇಖಕ ಅಲ್ಲಿ ಹೋಗಿ ಅವರ ವಿರುದ್ಧ ತನ್ನ ಮಾತಿನ ಚಾಟಿಯೇಟನ್ನು ಬೀಸಬೇಕೆಂದು ಆಶಿಸುವುದು ಕೇವಲ ಮುಗ್ಧತೆಯಲ್ಲ ಅದು ಅಪಾಯಕಾರಿಯೂ ಹೌದು. ಏಕೆ ಅಪಾಯಕಾರಿಯೆಂದರೆ ಸಂಸ್ಥೆಯೊಂದರ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಅದರ ವಿರುದ್ಧ ಮಾತನಾಡುವುದೇ ಆತ್ಮವಂಚನೆಯಲ್ಲವೇ? ಅದಕ್ಕೇ ಸಾರ್ತೆ ಹೇಳುವುದು “ಲೇಖಕ ಸ್ವತ ತಾನೇ ಒಂದು ಸಂಸ್ಥೆಯಾಗುವ ಅಪಾಯದಿಂದ ಸದಾ ಹೊರಗಿಬೇಕು”. ಇಲ್ಲಿ ನಮ್ಮ ಪ್ರೀತಿಯ ಸಿದ್ಧಲಿಗಯ್ಯನವರ ವಿಷಯದಲ್ಲಿ ಅದು ದಯನೀಯವಾಗಿ ಸೋತಿದೆ. ಏಕೆ ಗೊತ್ತೆ? ಪ್ರತಿಭಾವಂತರಿಗೆ, ಪ್ರಾಮಾಣಿಕರಿಗೆ ಅರ್ಥಪೂರ್ಣವಾಗಿ, ನಿಷ್ಪಕ್ಷಪಾತವಾಗಿ ಮಾತನಾಡಲು ಒಂದು ಸಂಸ್ಥೆ, ವ್ಯಕ್ತಿ, ಧರ್ಮ, ಸಮುದಾಯದ ಆಚರಣೆ ಮತ್ತು ಧೋರಣೆಗಳು ಯಾವ ಕಾಲಕ್ಕೂ ಅಡ್ಡಿಯಾಗುವುದಿಲ್ಲ. ಅಡ್ಡಿಯಾಗಿದೆ ಎಂದರೆ ಮತ್ತೇನರ್ಥ?

ಒಂದಂತೂ ನಿಜ. ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕಾಗಿಲ್ಲ. ಇಲ್ಲಿ ಅಳ್ವಾಸ್ ಸಂಸ್ಥೆಯ ಪರಮೋಚ್ಛ ನಾಯಕ ಮೋಹನ್ ಅಳ್ವ ಅವರ ಇತಿಹಾಸ ಇಡೀ ಕನ್ನಡದ ಪ್ರಜ್ಞಾವಂತರಿಗೆ ಗೊತ್ತು. ಆತನ ಸರ್ವಾಧಿಕಾರ ವ್ಯಕ್ತಿತ್ವ ಎಲ್ಲರಿಗೂ ಗೊತ್ತು. ಅವರೊಬ್ಬ ಬಂಡವಾಳಶಾಹಿ ಎನ್ನುವುದೂ ಎಲ್ಲರಿಗೂ ಗೊತ್ತು. ಸಾರ್ವಜನಿಕ ಶಿಕ್ಷಣದ ಸಂವಿಧನಾತ್ಮಕ ಜೀವಪರ ಆಶಯಗಳಿಗೆ ಸ್ವಲ್ಪವೂ ಬೆಲೆ ಕೊಡದ ಶಿಕ್ಷಣದ ವ್ಯಾಪಾರಿ ಎನ್ನುವುದು ಎಲ್ಲರಿಗೂ ಗೊತ್ತು. ಅವರ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಶೋಷಣೆಯ ಕುರಿತಾಗಿ ಅನೇಕ ಆರೋಪಗಳಿವೆ ಎನ್ನುವುದೂ ಎಲ್ಲರಿಗೂ ಗೊತ್ತು. ಅವರು ಮತೀಯವಾದಿ ಸಂಘ ಪರಿವಾರದದೊಂದಿಗೆ ನಂಟನ್ನು ಹೊಂದಿರುವುದು ಎಲ್ಲರಿಗೂ ಗೊತ್ತು. alva-veerendra-heggadeಇತ್ತೀಚೆಗೆ ಸೌಜನ್ಯ ಕೊಲೆ ಪ್ರಕರಣದ ಆರೋಪದಲ್ಲಿ ಹೆಸರು ಕೇಳಿಬರುತ್ತಿರುವ ಕುಟುಂಬದಲ್ಲೊಬ್ಬರಾದ ಧರ್ಮಸ್ಥಳದ ವೀರೇಂದ್ರ ಹೆಗಡೆಯ ಅಪ್ತ ಭಕ್ತರು ಇವರೆಂದೂ ಎಲ್ಲರಿಗೂ ಗೊತ್ತು. ಒಟ್ಟಾರೆ ಈ ಮೋಹನ್ ಆಳ್ವ ಎನ್ನುವ ಉದ್ಯಮಿಯ ಈ ಸಾಹಿತ್ಯ ಸೇವೆ ಒಂದು ದರ್ಪದ, ಸಾಮಂತ ಪಾಳೇಗಾರನ ಅದ್ದೂರಿ ಪ್ರದರ್ಶನ ಎನ್ನುವುದೂ ಎಲ್ಲರಿಗೂ ಗೊತ್ತು. ಅದರೆ ಇಷ್ಟೆಲ್ಲ ಗೊತ್ತಿದ್ದೂ ಒಂದು ತಲೆಮಾರನ್ನು, ಸಮುದಾಯದ ಪ್ರಜ್ಞೆಯನ್ನು ಬೆಳಿಸಿದ ರೂಪಿಸಿದ ಮಹತ್ವದ ಕವಿ, ಹೋರಾಟಗಾರ ಮೇಲಿನ ಅಪಾಯದ ಕರೆಗಂಟೆಯ, ಓಲಗದ ಸದ್ದನ್ನು ಕೇಳಿಸಿಕೊಳ್ಳದೆ ತನ್ನ ಈ ನಿರ್ಲಕ್ಷದ ಕಾರಣಕ್ಕಾಗಿ ತನ್ನ ಈ ವರ್ತನೆಗಳ ಮೂಲಕ ಹೊಸ ತಲೆಮಾರಿನ ಚೇತನವನ್ನೇ ಉಡುಗಿಸಿಬಿಡುತ್ತಾನೆ.

ಈ ಮೋಹನ್ ಅಳ್ವಾರ ದರ್ಪದ ದುಡ್ಡಿನ (ಇದಕ್ಕಾಗಿ, ಕನ್ನಡಮ್ಮನ ಸೇವೆಗಾಗಿ ತಾನು ಕೋಟ್ಯಾಂತರ ರೂಪಾಯಿಗಳನ್ನು ಸಾಲ ಮಾಡಿ ದಿವಾಳಿಯಾಗಿದ್ದೇನೆ ಎಂದು ಬೇರೆ ಹೇಳಿಕೊಂಡಿದ್ದಾರೆ) ಒಡ್ಡೋಲಗದಲ್ಲಿ ಭಾಗವಹಿಸುವದೆಂದರೆ ನಮ್ಮ ನಮ್ಮ ನೈತಿಕತೆ ಕಳೆದಿದೆ ಎಂದೇ ಅರ್ಥ. vijaykarnataka-mohan-alva-22122013ಇದು ತುಂಬಾ ಸರಳ. ಏಕೆ ಗೊತ್ತೆ, ಈ ಮೋಹನ ಅಳ್ವಾರಂತವರು ಪಿಂಗಾಣಿ ಅಂಗಡಿಯಲ್ಲಿ ನುಗ್ಗುವ ಗೂಳಿಯಂತೆ. ಆ ನುಗ್ಗುವಿಕೆಯೇ ಧ್ವಂಸಗೊಳಿಸಲಿಕ್ಕಾಗಿ ಮಾತ್ರ. ಇದೂ ಸಹ ತುಂಬಾ ಸರಳ. ಏಕೆ ಗೊತ್ತೆ, ಈ ನವಉದಾರೀಕರಣದ ಇಂದಿನ ಸಂದರ್ಭದಲ್ಲಿ ಈ ಬಗೆಯ ದರ್ಪದ ನಾಯಕರಿಂದ ನಡೆಯುವ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮಗಳೂ ಮಾಕೆಟ್ ಟ್ರೆಂಡ್‌ಗಳನ್ನು ಹುಟ್ಟಿಹಾಕುತ್ತಿರುತ್ತವೆ. ಅರೇ ನೋಡಿ ಅಳ್ವಾಸ್ ನುಡಿಸರಿಯ ವೈಭವ, ಅಚ್ಚುಕಟ್ಟು, ಊಟದ ವ್ಯವಸ್ಥೆ ಆಹಾ ಏನು ಮಜಾ ಏನು ಸುಖಾ ಎನ್ನುವ ಸುಖ ಲೋಲುಪ್ತತೆಯ ಟ್ರೆಂಡ್ ಹುಟ್ಟಿ ಹಾಕುತ್ತದೆ. ಈ ಸುಖ ಲೋಲುಪ್ತತೆಯಲ್ಲಿ ಬೂಟು ಮತ್ತು ಚಾಟಿಯೇಟಿನ ವಿರುದ್ಧ ಹೋರಾಟದ ಸಾವಿರಾರು ನದಿಗಳು ಹುಟ್ಟುವುದಕ್ಕೂ ಸಾಧ್ಯವಿಲ್ಲ. ಅಲ್ಲಿಗೆ ಅದು ಮುಗಿದಂತೆ. ಸಾರ್ತೆಯ “ಶುದ್ಧ ಸಾಹಿತ್ಯ” ಎಂದರೆ ಕೇವಲ ಮಡಿವಂತಿಕೆಯ, ಶ್ರೇಷ್ಠತೆಯ ವ್ಯಸನದ ಸಾಹಿತ್ಯ ಮಾತ್ರವಲ್ಲ. ಆ ಶುದ್ದ ಸಾಹಿತ್ಯ ಆರ್ಥಿಕ ತೆವಲುಗಳನ್ನು ನಿರಾಕರಿಸುತ್ತದೆ. ಆ ಶುದ್ಧ ಸಾಹಿತ್ಯ ವಿತಂಡವಾದಗಳನ್ನು ನಿರಾಕರಿಸುತ್ತದೆ. ಕೊಳ್ಳುಬಾಕುತನವನ್ನು ನಿರಾಕರಿಸುತ್ತದೆ. ಮತ್ತು ತಾತ್ಕಾಲಿಕ ಜನಪ್ರಿಯತೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ ಮತ್ತು ಮುಖ್ಯವಾಗಿ ಜನಪ್ರಿಯತೆ ಪಡೆದುಕೊಂಡಿದ್ದೆಲ್ಲವೂ ಜನಪರವಲ್ಲ ಎಂದು ಘೋಷಿಸಿಬಿಡುತ್ತದೆ ಸಾರ್ತೆಯ ಶುದ್ಧ ಸಾಹಿತ್ಯ.

ಹೀಗಾಗಿ ಅತ್ಯಂತ ಜನಪ್ರಿಯ “ಅಳ್ವಾಸ್ ನುಡಿಸಿರಿ” ಜನಪರ ಸಮ್ಮೇಳನ ಅಲ್ಲವೇ ಅಲ್ಲ. ಇದನ್ನು ಈ ನಾಡಿನ ಪ್ರಜ್ಞಾವಂತರೆಲ್ಲರೂ ನಿರಾಕರಿಸಬೇಕು. ನಿಜ ನಮ್ಮ ಗೆಳೆಯರ ಆಶಯದಂತೆ ನಾವು ಭಿನ್ನಾಭಿಪ್ರಾಯದ ಗುಂಪಿನೊಂದಿಗೆ, ವಿಭಿನ್ನ ಧೋರಣೆಗಳ, ಚಿಂತನೆಗಳ ಗುಂಪಿನೊಂದಿಗೆ ಬೆರೆತು ಸಂವಾದ ನಡೆಸಬೇಕಾಗಿದೆ. ಚರ್ಚಿಸಬೇಕಾಗಿದೆ. ನಾವೆಲ್ಲ ಕುರುಡಾಗಿ, ಕಿವುಡಾಗಿ ವರ್ತಿಸಲು ಸಾಧ್ಯವಿಲ್ಲ. ಆದರೆ ಈ ದರ್ಪದ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವದರ ಮೂಲಕ ಅದು ಸಾಧ್ಯವೂ ಇಲ್ಲ ಮತ್ತು ಅದರ ಅವಶ್ಯಕತೆ ಖಂಡಿತವಾಗಿಯೂ ಇಲ್ಲ.

ಒಂದು ಕಡೆ ಲಂಕೇಶ್ ಹೇಳುತ್ತಾರೆ, “ಒಂದು ವಚನ ತನ್ನ ಪ್ರೀತಿಯ ಬಲದಿಂದ ಕಾಲವನ್ನೂ ಮೀರಿ ಹರಿದು ಬರುತ್ತದೆ. ನಾಶಗೊಳ್ಳಲು ಅದು ಒಪ್ಪುವುದೇ ಇಲ್ಲ”. ಹೌದು ನಾವು ಈ ಪ್ರೀತಿಯ, ಸೌಹಾರ್ದತೆಯ ಬಲೆಯನ್ನು ನೇಯುವುದರ ಮೂಲಕ ಬಿನ್ನಾಭಿಪ್ರಾಯದ ಗುಂಪಿನೊಂದಿಗೆ, ವಿಭಿನ್ನ ಧೋರಣೆಗಳ, ಚಿಂತನೆಗಳ ಗುಂಪಿನೊಂದಿಗೆ ಚರ್ಚಿಸಬೇಕಾಗಿದೆಯೇ ಹೊರತು ಆ ಅವಾಂತಕಾರಿ ಮತ್ತು ಅಪಾಯಕಾರಿ ಆಳ್ವಾಸ್ ನುಡಿಸಿರಿಯ ವೇದಿಕೆಯಿಂದ ಮಾತ್ರ ಅಲ್ಲವೇ ಅಲ್ಲ.