Daily Archives: October 28, 2014

ಜಯ ಜಯ ಜಯ ಜಯ ಹೇ…ಶ್ರಮೇವ ಜಯತೆ : ನೊಂದ ಪ್ರಧಾನಿ


– ಶ್ರೀಧರ್ ಪ್ರಭು


 

ಈ ದೇಶದ ಮಣ್ಣು ಗೋಪಿ ಚಂದನ; ಪ್ರತೀ ಗ್ರಾಮವೂ ತಪೋ ಭೂಮಿ; ಪ್ರತಿ ಬಾಲೆ ದೇವಿಯ ಪ್ರತಿಮೆ; ಪ್ರತೀ ಬಾಲಕನೂ ಸಾಕ್ಷಾತ್ ಶ್ರೀರಾಮ.

ಬೆಳಿಗ್ಗೆ ಏಳುವಾಗ ಭೂಮಿ ತಾಯಿಯ ಮೇಲೆ ಪಾದ ಸ್ಪರ್ಶ ಮಾಡುವ ಮುಂಚೆ ಕ್ಷಮಿಸಿ ಬಿಡು ತಾಯಿ ಎಂಬ ಪ್ರಾರ್ಥನೆ ಅತ್ಯಗತ್ಯ. ಹಾಗೆಯೇ, ಮಂಚದ ಮೇಲೆ ಮಲಗುವವರು ಮಾಡಿದ ಶಾಸ್ತ್ರದಲ್ಲಿ ಅಪ್ಪಣೆಯಾಗಿದೆ ಏನೆಂದರೆ ‘ಏನೊಂದೂ ಸ್ಪರ್ಶವಾಗದೆ ಅಡ್ಡಡ್ಡ ನುಂಗಿಬಿಟ್ಟರೆ ಪಾಪವಿಲ್ಲ’. ಕರುವನ್ನು ಬೇರೆ ಕಟ್ಟಿ ಹಾಕಿ ಹಿಂಡಿ ಹಿಪ್ಪೆಯಾಗುವಷ್ಟು ಹಾಲು ಕರೆದು, ತುಪ್ಪ ಬೆಣ್ಣೆ ತೆಗೆದು ಚಪ್ಪರಿಸಿ ‘ಗೋದಾನ’ ವೆರೆದು ಧನ್ಯರಾದ ಭೂದೇವರಿಗೆ bharath-maataಗೋಮಾತೆಯಲ್ಲಿ ಮೂವತ್ತ ಮೂರು ಕೋಟಿ ದೇವರ ನಿತ್ಯ ದರ್ಶನ. ವರ ದಕ್ಷಿಣೆ ಇಲ್ಲದೆ ಮದುವೆಯೇ ಧರ್ಮ ಸಮ್ಮತ ಅಲ್ಲ; ಹಣ ಸಂದಾಯವಾಗದಿದ್ದರೆ ಒಪ್ಪಂದ ಕಾನೂನು ಬದ್ಧ ಆಗುವುದೇ? ಹಾಗಾಗಿ ಹಣ ಪಡೆದು, ಹುರಿದು ಮುಕ್ಕಿ ಕಳೆ ಬರ ಸಿಗದಹಾಗೆ ಸುಟ್ಟು ಹಾಕಬೇಕಾದಾಕೆ – ಜಗನ್ಮಾತೆ. ದಲಿತರು ‘ಹರಿ’ ಜನ. ಇತ್ತೀಚಿನ ಹೊಸ ಸೇರ್ಪಡೆ – ‘ಶ್ರಮೇವ ಜಯತೆ’. ಶ್ರಮಿಕ ದೇವರಿಗೆ ಪೂಜೆ; ದೇವಸ್ಥಾನಗಳಲ್ಲಿ ನಿತ್ಯೋತ್ಸವ.

ಬೇರೆ ದೇಶಗಳೆಲ್ಲ ಈ ಗಿರಿ, ಆ ಗಿರಿ, ಕಡೆಗೆ ಗುಲಾಮಗಿರಿಯನ್ನು ಕಿತ್ತು ಬಿಸುಟುವಾಗ ನಾವು ಶ್ರಮವೇ ಇಲ್ಲದೆ ಕಿರುಬೆರಳಲ್ಲಿ ಗೋವರ್ಧನಗಿರಿ ಎತ್ತಿದ್ದೆವು. ನಾವು ಮಹತ್ತರವಾದ ಎಲ್ಲವನ್ನೂ ಸಾಧಿಸಿದ್ದು ಶ್ರಮದಿಂದಲ್ಲ ತಪೋ ಬಲದಿಂದ. ಹಾಗಾಗಿ ಬ್ರಹ್ಮ ಬಲವೇ ಬಲ. ಹಾಗೆಂದು ನಾವು ಮಲ ಹೊರುವ ಕೆಲಸಕ್ಕೂ ಪವಿತ್ರ ಸ್ಥಾನ ಕೊಟ್ಟಿದ್ದೇವೆ.

ಪುಣ್ಯ ಕಡಿಮೆ ಸಂಪಾದಿಸಿರುವ ದೇಶಗಳಲ್ಲಿ ಶ್ರಮದ ವಿಭಜನೆ (Division of Labour) ಸಾಧ್ಯವಾದರೆ ಪುಣ್ಯ ಭೂಮಿ ಭಾರತದಲ್ಲಿ ಶ್ರಮಿಕರ ವಿಭಜನೆ (Division of Labourers) ಸಾಧ್ಯವಾಗಿದೆ. ಹೀಗಾಗಿ ನಾವು ಇಂದಿಗಿಂತ ನೆನ್ನೆಯೇ ಅಭಿವೃದ್ಧಿ ಸಾಧಿಸಿದ್ದು ಜಾಸ್ತಿ.

ಕಾರಣಾಂತರಗಳಿಂದ, ಈ ಖೊಟ್ಟಿ ರಾಜಕೀಯ ಸ್ವಾತಂತ್ರ್ಯ ಬಂದ ಮೇಲೆ ಓಬೀರಾಯನ ಕಾಲದ ಭಾರತದ ಸಂವಿಧಾನ ಮತ್ತು ಕಾರ್ಮಿಕ ಕಾನೂನುಗಳು ನಮ್ಮ ಸಾಧನೆಯನ್ನು ಮೊಟಕು ಗೊಳಿಸಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಅದ್ದರಿಂದ ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ನೀತಿ ನಿರೂಪಣೆಯ ಮೂಲಕವೇ ಬದಲಾಯಿಸುವ ಸ್ತುತ್ಯರ್ಹ ಕೆಲಸಕ್ಕೆ ಕೈ ಹಾಕಿದೆ.

ಮೊದಲ ಹಂತದಲ್ಲಿ ಕಾರ್ಮಿಕ ಪರಿಶೀಲನಾಧಿಕಾರಿ (Inspector) ಗಳ ಅಧಿಕಾರ ಮೊಟಕು ಮಾಡಲಾಗಿದೆ. ಇನ್ನು ಮೇಲೆ ಅವರು ಮನುಷ್ಯನ ಮರ್ಕಟ ಮನಸ್ಸು ಹೇಳಿದ ಕಡೆ ಹೋಗದೇ ‘ಕಂಪ್ಯೂಟರ್’ ಹೇಳಿದ ಜಾಗಕ್ಕೆ ಮಾತ್ರ ಪರಿಶೀಲನೆ ಹೋಗಬೇಕು. ಕಾರ್ಮಿಕ ಪರಿಶೀಲನಾಧಿಕಾರಿಗಳು ಎಲ್ಲಿ ಬೇಕೆಂದರಲ್ಲಿ, ಯಾವಾಗ ಬೇಕೋ ಅವಾಗ ಹೋಗುವ ಅವಾಂತರ ಇನ್ನು ಹಳೆಯ ಮಾತು.

ತಾವು ಚಿಕ್ಕಂದಿನಿಂದಲೂ ಕಾರ್ಮಿಕ ಅಧಿಕಾರಿಗಳು ಕಾರ್ಖಾನೆಯ ಮಾಲೀಕರಿಗೆ ಕೊಡುವ ಹಿಂಸೆಯ ಗಾಥೆಗಳನ್ನು ಕೇಳಿ ಮನ child-labourನೊಂದಿರುವುದಾಗಿ ಪ್ರಧಾನಿ ಮೋದಿ ತುಂಬಾ ಭಾವುಕರಾಗಿ ನುಡಿದರು. ಹೀಗಾಗಿ ಕಾರ್ಮಿಕ ಇಲಾಖೆಯಲ್ಲಿ Inspector ರಾಜ್ ಕೊನೆಗೊಳ್ಳಬೇಕು ಎಂದರು.

ಮೋದಿಯವರು ಹೆಚ್ಚು ನೊಂದು ಕೊಳ್ಳಬೇಕಿಲ್ಲ. ಈಗಾಗಲೇ ಕಾರ್ಮಿಕ ಇಲಾಖೆಯ ವ್ಯಾಪ್ತಿ ಸಾಕಷ್ಟು ಮೊಟಕು ಗೊಂಡಿದೆ. ಶೇಕಡಾ ನೂರರಷ್ಟು ರಫ್ತು ಆಧಾರಿತ ಉದ್ಯಮಗಳು, ವಿಶೇಷ ವಿತ್ತ ವಲಯಗಳು, ಐಟಿ-ಬಿಟಿ-ಕಾಲ್ ಸೆಂಟರ್ ಇನ್ನಿತರೆ ಕೆಲ ಮಹತ್ವದ ಉದ್ಯಮಗಳಿಗೆ ಕಾರ್ಮಿಕ ಇಲಾಖೆಯವರು ಕಾಲಿಡುವುದು ಇರಲಿ, ಕಾರ್ಮಿಕ ಕಾನೂನುಗಳೇ ಕಾಲಿಡಲು ಸಾಧ್ಯವಿಲ್ಲ. ಕಾರ್ಮಿಕ ಪರಿಶೀಲನ ಒಡಂಬಡಿಕೆ, 1947 (Labour Inspection Convention, 1947) ಪ್ರಕಾರ, ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ, ಕಾರ್ಮಿಕ ಇಲಾಖೆಯ ಅಧಿಕಾರ ಮೊಟಕು ಗೊಳಿಸುವಂತಿಲ್ಲ. ಇದು ಅಂತರರಾಷ್ಟ್ರೀಯ ಕಾನೂನು. ಭಾರತ ಕೂಡ ಇದಕ್ಕೆ ಸಹಿ ಹಾಕಿದೆ. ಆದರೆ, ಈ ಬಹುರಾಷ್ಟ್ರೀಯ ಕಾನೂನು ದೇಶದ ಅಭಿವೃದ್ಧಿಗೆ ಮಾರಕವಾದ್ದರಿಂದ, ಗಾಳಿಗೆ ತೋರಲು ಮಾತ್ರ ಯೋಗ್ಯ.

ಈ ಅಂತರರಾಷ್ಟ್ರೀಯ ಕಾನೂನು ಹೋಗಲಿ ನಮ್ಮದೇ ಸಂವಿಧಾನದ ಅಡಿ ನಮ್ಮದೇ ಸಂಸತ್ತು ಪಾಸು ಮಾಡಿದ ಕಾರ್ಖಾನೆಗಳ ಕಾಯಿದೆ (Factories Act ), ಕನಿಷ್ಠ ವೇತನ ಕಾಯಿದೆ, ಗ್ರ್ಯಾಚುಟಿ ಕಾಯಿದೆ, ಮಾತೃತ್ವ ಅನುಕೂಲಗಳ (Maternity Benefit) ಕಾಯಿದೆ ಮತ್ತು ವೇತನ ಪಾವತಿ (Payment of Wages) ಕಾಯಿದೆ ಇತ್ಯಾದಿಗಳಲ್ಲೂ ಕಾರ್ಮಿಕ ಕಾನೂನು ಜಾರಿಗೊಳಿಸಲು ಇಲಾಖಾ ಸಿಬ್ಬಂದಿಗೆ ಸಾಕಷ್ಟು ಅಧಿಕಾರ ನೀಡಲಾಗಿದೆ. ಆದರೆ, ಈ ದೇಶದ ಪ್ರತಿ ಒಬ್ಬ ಪ್ರಜೆಯೂ ಆರಿಸಿ ಕಳಿಸಿದ ಪ್ರಧಾನಿಗಳ ಕೋಮಲ ಮನಸ್ಸು ನೋಯಿಸಿದ ಮೇಲೆ ಯಾವ ಕಾನೂನು ತಾನೇ ಪಾಲಿಸಲು ಯೋಗ್ಯವಾಗಿ ಉಳಿದೀತು? ಆದ್ದರಿಂದ ನೀತಿ ನಿರೂಪಣೆಗಳ ಮೂಲಕವೇ ಈ ರಾಕ್ಷಸೀ ಕಾನೂನುಗಳನ್ನು ಸಂಹಾರ ಮಾಡುವ ಕೋಮಲ ಪ್ರಯತ್ನ: ಶ್ರಮೇವ ಜಯತೆ.

ಕಾರ್ಮಿಕ ಕಾನೂನುಗಳ ಸುಧಾರಣೆ ವಿಚಾರ ಪ್ರಸ್ತಾಪ ಮಾಡುತ್ತಾ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಬಹು ಮುಖ್ಯವಾದ ಒಂದು ಮಾತನ್ನು ಹೇಳಿದರು. modi_ambani_tata_kamathಅನೇಕ ಕಾರಣಗಳಿಂದ ನಮ್ಮ ದೇಶದಲ್ಲಿ ಶ್ರಮಕ್ಕೆ ಘನತೆ ಎಂಬುದಿಲ್ಲ ಎಂದು. ಈ ‘ಅನೇಕ’ ಕಾರಣಗಳಲ್ಲಿ ಒಂದನ್ನಾದರೂ ಅವರು ಬಿಡಿಸಿ ಹೇಳಬಹುದೇನೋ, ಇಲ್ಲ, ಕನಿಷ್ಠ ಪಕ್ಷ ಹೆಸರಿಸಬಹುದೇನೋ ಎಂದು ಆಸೆಯಿಂದ ಅವರ ಭಾಷಣ ಕೇಳಿದೆ. ನಿರಾಶೆ ಕಾದಿತ್ತು. ಇರಲಿ, ಆಸೆಯೇ ದುಃಖಕ್ಕೆ ಮೂಲ.

ಈ ದೇಶದಲ್ಲಿ ಕಾರ್ಮಿಕರ ವೇತನ-ಬೋನಸ್ ಹೆಚ್ಚಳವಾದಷ್ಟೂ ಎಡ ಪಕ್ಷಗಳ ಮೂಳೆ ಚಕ್ಕಳ ಹೆಚ್ಚು ಸ್ಪಷ್ಟವಾಗಿ ಕಾಣಿಸತೊಡಗಿದೆ. ಹೀಗಾಗಿ ದೇಶದ ಚಿಂತನೆಯಲ್ಲಿ ನಿತ್ಯ ನಿರತ ಸಂಘ ಪರಿವಾರಕ್ಕೆ ಸೇರಿದ ಭಾರತೀಯ ಮಜ್ದೂರ್ ಸಂಘ ಬೆಳೆದದ್ದು. ಮಜ್ದೂರ್ ಸಂಘ ಒಂದು ಕೋಟಿ ಕಾರ್ಮಿಕರನ್ನು ಸದಸ್ಯರನ್ನಾಗಿ ಹೊಂದಿರುವುದಾಗಿ ಹೇಳಿಕೊಳ್ಳುವುದಲ್ಲದೇ, ತನ್ನನ್ನು ತಾನು ಈ ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆ ಎಂದು ಹೇಳಿಕೊಳ್ಳುತ್ತದೆ. ಇದ್ದರೂ ಇರಬಹುದೇನೋ. ಈ ದೇಶದ ಕಾರ್ಮಿಕರಿಗೆ ಕೆಲಸದ ಸುರಕ್ಷತೆಗಿಂತ ಧರ್ಮದ ಸುರಕ್ಷತೆಯ ಚಿಂತೆ ಜಾಸ್ತಿ. ಧರ್ಮವಿದ್ದರಲ್ಲವೇ ನಾವು. ಆದರೆ ಈ ಧರ್ಮಕಾರಣದ ಮಧ್ಯೆ ಪ್ರಧಾನಿಯವರ ಜಯ ಘೋಷ ಅವರಿಗೆ ಸರಿಯಾಗಿ ಕೇಳಿಸಿದೆಯೋ ಇಲ್ಲವೋ. ಯಾವುದಕ್ಕೂ ಯಾರಾದರೂ ಒಬ್ಬರು ಕೇಳಿ ನೋಡುವುದು ಒಳ್ಳೆಯದು.