Daily Archives: February 2, 2015

ಅಲೆಯಲ್ಲಿ ತೇಲಿಬಂದ ಬಿದ್ಲಾನ್ ಮತ್ತು ಭುಗಿಲೆದ್ದ ಬಿಜೆಪಿಯ ಅಸಮಾಧಾನ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ಆಕೆ ನಾಲ್ಕೂವರೆ ಅಡಿ ಎತ್ತರದ, ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಾಮಾನ್ಯ ಹೆಣ್ಣು ಮಗಳು. ಕೆಂಪು ಬಣ್ಣದ ಲೆಗ್ಗಿಂಗ್ಸ್, ಬಿಳಿ ಹೂಗಳ ಚಿತ್ತಾರ ಇದ್ದ ಹಸಿರು ಬಣ್ಣದ ಟಾಪ್ ಮತ್ತು ಅದರ ಮೇಲೆ ಖಾದಿಯ ಒಂದು ಕೋಟ್. ಇದು ದಿಲ್ಲಿ ಚುನಾವಣೆಯ ಎಪ್ಪತ್ತು ವಿಧಾನಸಭಾ ಕ್ಷೇತ್ರಗಳ Rakhi-Birlaಪೈಕಿ ಆಮ್ ಆದ್ಮಿ ಪಾರ್ಟಿ ಕಡೆಯಿಂದ ಮಂಗೋಲ್‌ಪುರಿಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಭ್ಯರ್ಥಿ ರಾಖಿ ಬಿದ್ಲಾನ್ ಅವರ ಔಟ್‌ಫಿಟ್. ಆಕೆ ಇನ್ನೂ 25ರ ಆಸುಪಾಸಿನಲ್ಲಿರುವ ಪದವೀಧರೆ. ಅಣ್ಣಾ ಹಜಾರೆ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಧರಣಿ ನಡೆಸುತ್ತಿದ್ದ ಸಮಯದಲ್ಲಿ ಈಕೆ ಸ್ಥಳೀಯ ನ್ಯೂಸ್ ಚಾನಲ್‌ನಲ್ಲಿ ವರದಿಗಾರ್ತಿ ಆಗಿದ್ದವರು. ಅದಕ್ಕೂ ಮುನ್ನ ದಿಲ್ಲಿಯ ಶಿವಾಜಿ ಕಾಲೇಜಿನಲ್ಲಿ ಪದವಿ ಮುಗಿಸಿ ಸಿಎನ್‌ಬಿಸಿಯಲ್ಲಿ ಕೆಲಕಾಲ ಇಂಟರ್ನ್ ಆಗಿ ಕೆಲಸ ಮಾಡಿದ್ದ ಅನುಭವ ಇತ್ತು ಅಷ್ಟೆ. ಹಾಗೆ ಒಂದು ದಿನ ಸ್ಥಳೀಯ ಚಾನಲ್‌ನ ಪ್ರತಿನಿಧಿಯಾಗಿ ಜಂತರ್‌ಮಂತರ್‌ಗೆ ಬಂದವರು ಮತ್ತೆ ಕೆಲಸಕ್ಕೆ ಹೋಗಲಿಲ್ಲ. ಮನೆಯಲ್ಲಿ ತಂದೆಯ ಜತೆ ಕೆಲಸ ಬಿಡುವ ಪ್ರಸ್ತಾಪ ಮಾಡಿದರು. ಮಿಲಿಟರಿಯಲ್ಲಿದ್ದ ತಂದೆಯ ಕೆಲವು ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡು ಬಂದಿದ್ದ ರಾಖಿ ತಂದೆ, ಮರು ಮಾತಿಲ್ಲದೆ ಓಕೆ ಎಂದರು. ಹಾಗೆ, ನಿನ್ನೆ ರಿಪೋರ್ಟರ್ ಬಿದ್ಲಾನ್ ಮಾರನೆ ದಿನ ಅಣ್ಣಾ ಹಜಾರೆ ನೇತೃತ್ವದ ಚಳುವಳಿಯ ಸಕ್ರಿಯ ಕಾರ್ಯಕರ್ತರಾದರು.

ಮುಂದೆ, ಅಣ್ಣಾ ಹಜಾರೆ ನೇತೃತ್ವದ ಚಳುವಳಿ ರಾಜಕೀಯ ಸ್ವರೂಪ ಪಡೆದುಕೊಂಡಿತು. 2013ರಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಮುಂದಾಳತ್ವದಲ್ಲಿ ಆಪ್ ಹೆಸರಿನಲ್ಲಿ ದಿಲ್ಲಿ ವಿಧಾನಸಭೆಗೆ ಸ್ಪರ್ಧಿಸಿತು. ಆ ಸಮಯದಲ್ಲಿ ಮಂಗೋಲ್‌ಪುರಿಗೆ ಅಭ್ಯರ್ಥಿಯಾದವರು ಇದೇ ರಾಖಿ ಬಿದ್ಲಾನ್. ಇಂಗ್ಲಿಷ್ ಮಾಧ್ಯಮಗಳ ಪಾಲಿಗೆ ಈಕೆ ರಾಖಿ ಬಿರ್ಲಾ. ಮೊಲದ ಬಾರಿಯ ಚುನಾವಣೆ ಗೆದ್ದು ಕೇಜ್ರಿವಾಲ್ ಸಂಪುಟದಲ್ಲಿ ಸಚಿವೆಯೂ ಆದರು. ಇದೀಗ ಮತ್ತದೇ ಕ್ಷೇತ್ರದಿಂದ ಪುನರ್ ಆಯ್ಕೆ ಬಯಸುತ್ತಿದ್ದಾರೆ. ಆಕೆಯ ಪ್ರಬಲ ಎದುರಾಳಿ ಕಾಂಗ್ರೆಸ್‌ನ ರಾಜ್‌ಕುಮಾರ್ ಚೌಹಾನ್. 2013ಕ್ಕೂ ಮುನ್ನ ಸುಮಾರು ಎರಡು ದಶಕಗಳ ಕಾಲ ಮಂಗೋಲ್‌ಪುರಿಯ ಅನಭಿಷಕ್ತ ದೊರೆಯಂತೆ ಇದ್ದವರು. ಮಾಜಿ ಸಚಿವೆಯ ಮನೆ ಇರುವುದು ಇಲ್ಲಿ ಇಕ್ಕಟ್ಟಾದ ಗಲ್ಲಿಯೊಂದರಲ್ಲಿ. ಇರುವ ಒಂದೇ ಕೋಣೆಯಲ್ಲಿ ಡಬಲ್ ಕಾಟ್, rakhi-bidlan-prashanth-nathuಪಕ್ಕದಲ್ಲೇ ಅಡುಗೆಯ ಸಿಲಿಂಡರ್ ಮತ್ತು ಬಂದವರಿಗೆ ಕೂರಲು ಒಂದೇ ಒಂದು ಕುರ್ಚಿ. “ನಾನು ರಾಜಕೀಯಕ್ಕೆ ಬಂದಿದ್ದು ಬದಲಾವಣೆ ಮಾಡಬೇಕು ಅನ್ನೋ ಹಂಬಲದಿಂದ. ಹೀಗಾಗಿ ನಾನು ಅಥವಾ ನನ್ನ ಮನೆ ಬದಲಾಗುವುದು ಮುಖ್ಯ ಅಂತ ಅನ್ನಿಸುವುದಿಲ್ಲ,” ಎಂದರು ರಾಖಿ. “ಹುಟ್ಟಿನಿಂದಲೇ ಹೋರಾಟ ಮಾಡಿಕೊಂಡು ಬಂದಿದ್ದೀನಿ. ಇನ್ನು ಮುಂದೆಯೂ ಹೋರಾಟವನ್ನು ಬಿಡೋಕೆ ಸಾಧ್ಯವಿಲ್ಲ,” ಎನ್ನುವ ಮೂಲಕ ತಮ್ಮ ವಯಸ್ಸಿನ ಸಹಜ ಆಲೋಚನೆಯನ್ನು ಪ್ರತಿನಿಧಿಸಿದರು.

ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬಗಳು ಎನ್ನುತ್ತಾರೆ. ಇಂತಹ ಹಬ್ಬಗಳು ರಾಖಿಯಂತಹ ಅಭ್ಯರ್ಥಿಗಳಿಂದಾಗಿ ಇನ್ನಷ್ಟು ಮೆರಗು ಪಡೆದುಕೊಳ್ಳುತ್ತವೆ. ಹೇಗೆ ಕಾಲ ಮತ್ತು ಬದಲಾವಣೆಯ ಅಲೆ ಬೀಸಲಾರಂಭಿಸಿದರೆ ಸಾಮಾನ್ಯರೂ ಕೂಡ ಪ್ರಜಾಪ್ರಭುತ್ವದ ಶಕ್ತಿಕೇಂದ್ರಗಳಿಗೆ ಅನಾಯಾಸವಾಗಿ ನಡೆದುಬರಬಲ್ಲರು ಎಂಬುದಕ್ಕೆ ರಾಖಿ ಸಾಕ್ಷಿ. ಹಾಗಂತ ಇಡೀ ಕ್ಷೇತ್ರದಲ್ಲಿ ಈ ಬಾರಿ ರಾಖಿ ಪರ ಅಲೆ ಇದೆ ಎನ್ನುವಂತಿಲ್ಲ ಮತ್ತು ಗೆಲುವು ಸುಲಭವಿಲ್ಲ. ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ಸುರ್ಜಿತ್ ಕುಮಾರ್ ಎಂಬ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ಯುವಕ. ಇವರ ತಂದೆ ಗುತ್ತಿಗೆದಾರರು. “ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. ನಾವು ಮನೆ ಮನೆ ಪ್ರಚಾರ ನಡೆಸಲು ಇಲ್ಲಿನ ಪೊಲೀಸರು ಅಡ್ಡಿ ಪಡಿಸುತ್ತಿದ್ದಾರೆ. ಏನೇ ಆಗಲಿ, ನನ್ನ ಮಗಳನ್ನು ದೇಶಕ್ಕಾಗಿ ಕೊಟ್ಟಿದ್ದೇನೆ. ಅವಳು ಗೆಲ್ಲಲಿ ಸೋಲಲಿ ನನಗೆ ಮುಖ್ಯವಲ್ಲ,” ಎನ್ನುತ್ತಾರೆ ರಾಖಿಯ ತಂದೆ. ಇವರು ಇಡೀ ದಿನ ಮಂಗೋಲ್ಪುರಿಯಲ್ಲಿ ಮಗಳ ಚುನಾವಣಾ ಪಾಂಪ್ಲೆಟ್ ಹಿಡಿದುಕೊಂಡು ರಸ್ತೆ ಬದಿಯಲ್ಲಿ ನಿಲ್ಲುತ್ತಿದ್ದಾರೆ. ಮಗಳು ಗೆದ್ದು ಮತ್ತೊಮ್ಮೆ ಮಂತ್ರಿಯಾದರೂ ಮನೆ ಬದಲಾಯಿಸುವ ಮನಸ್ಸು ಇದ್ದಂತೆ ಕಂಡು ಬರುವುದಿಲ್ಲ.

ದಿಲ್ಲಿಯ ಚುನಾವಣೆ ವಿಶೇಷವೇ ಇಲ್ಲಿನ ವರ್ಗ ತಾರತಮ್ಯದ ಗಾಢವಾದ ಚಹರೆ. ಒಂದು ಕಡೆ ಅತ್ಯಂತ ಐಶಾರಾಮಿತನ delhi-swacch-bharath-mangolpuriಹೊಸದಿಲ್ಲಿಯಲ್ಲಿ ಕಂಡುಬಂದರೆ, ಅದಕ್ಕೆ ತದ್ವಿರುದ್ಧವಾದ ನೆಲೆಯ ಹಳೆ ದಿಲ್ಲಿಯ ಗಲ್ಲಿಗಳಲ್ಲಿ ಕಾಣಿಸುತ್ತದೆ. ಕಡು ಬಡತನ, ಸ್ವಚ್ಚ ಭಾರತ ಅಭಿಯಾನದ ಹೃದಯ ಭಾಗದಲ್ಲೇ ಗಲೀಜು ರಾಚುತ್ತದೆ. ಕೊಳೆಗೇರಿಗಳಲ್ಲಿ ಸಂಕಷ್ಟದ ಬದುಕು ಸಾಗಿಸುವ ಲಕ್ಷಾಂತರ ಜನ ದೇಶದ ರಾಜಧಾನಿಯ ಬಹುಸಂಖ್ಯಾತರು. ಒಂದು ಕೊಳೆಗೇರಿ ಎತ್ತಂಗಡಿ ಆಗುತ್ತಿದ್ದಂತೆ ಈ ಜನರಲ್ಲಿ ಬಹುತೇಕರು ಮತ್ತೊಂದು ನಗರಕ್ಕೆ ವಲಸೆ ಹೋಗುತ್ತಾರೆ. ಇದೀಗ ಜುಗ್ಗಿ ಜನರಿಗೆ ಮನೆ ಕಟ್ಟಿಸಿಕೊಡುವ ಆಶ್ವಾಸನೆ ಎಲ್ಲಾ ಪಕ್ಷಗಳೂ ನೀಡುತ್ತಿವೆ. “ನಮ್ಮ ಜುಗ್ಗಿಯನ್ನು ಯಾರು ಎತ್ತಂಗಡಿ ಮಾಡುವುದಿಲ್ಲವೋ ಅವರಿಗೆ ನಮ್ಮ ಮತ,” ಎಂದರು ಮೀನಾಕ್ಷಿ ಸಿನ್ಹಾ. ಇವರ ಕೈಲಿ ಆಗಷ್ಟೆ ಬಂದಿದ್ದ ವಿದ್ಯುತ್ನ ಬಿಲ್ ಇತ್ತು ಮತ್ತು ಅದು ಅಚ್ಚರಿ ಎನ್ನಿಸುವಷ್ಟು ದುಬಾರಿಯಾಗಿತ್ತು. ಕೆಲವೇ ಅಂಗುಲದ ಅವರ ಮನೆಯ ವಿದ್ಯುತ್ ಬಳಕೆ ಹಾಗೂ 1841 ರೂಪಾಯಿಗಳ ಅವರ ಬಿಲ್ಗೂ ಸಂಬಂಧ ಇರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿಸುತ್ತಿತ್ತು. ಈ ಬಾರಿಯ ಚುನಾವಣೆಯಲ್ಲಿ ವಿದ್ಯುತ್ ಸಮಸ್ಯೆ ಮೂರನೇ ಪ್ರಮುಖ ವಿಚಾರವಾಗಿದೆ. ಈಗಾಗಲೇ ಬಿಜೆಪಿಯ ದಿಲ್ಲಿ ರಾಜ್ಯಾಧ್ಯಕ್ಷ ಸತೀಶ್ ಉಪಾಧ್ಯಾಯ ವಿದ್ಯುತ್ ಮೀಟರ್ ತಯಾರಿಸುವ ಕಂಪನಿ ಜತೆ ವ್ಯವಹಾರಿಕಾ ಸಂಬಂಧ ಹೊಂದಿದ್ದಾರೆ ಎಂಬುದನ್ನು ಆಪ್ ಬಹಿರಂಗಪಡಿಸಿದೆ. ಹೀಗಾಗಿ, ಕೆಳವರ್ಗದ ಜನರಲ್ಲಿ ಬಿಜೆಪಿಗೆ ಇದು ಸಮಸ್ಯೆಯಾಗುವಂತೆ ಕಾಣಿಸುತ್ತಿದೆ.

ರಾಖಿಯಂತಹ ಸಾಮಾನ್ಯ ಕುಟುಂಬಗಳಿಂದ ಬಂದ ಅಭ್ಯರ್ಥಿಗಳನ್ನು ಮುಂದಿಟ್ಟುಕೊಂಡು ಕಾದಾಡುತ್ತಿರುವ ಆಪ್ ಕುರಿತು bjp-aap-minor-clash-at-rajiv-chowk-feb0115ಬಿಜೆಪಿ ಪಾಳೆಯದಲ್ಲಿ ಅಸಮಾಧಾನ ಬುಗಿಲೆದ್ದಂತೆ ಕಾಣಿಸುತ್ತಿದೆ. ಒಂದು ಕಡೆ ಮೋದಿಯಂತಹ ನಾಯಕರು ತಮ್ಮ ಭಾಷಣದಲ್ಲಿ ಆಪ್ ಕುರಿತು ಟೀಕೆಗಳ ಮಳೆಗರೆಯುತ್ತಿದ್ದಾರೆ. ಕೇಜ್ರಿವಾಲ್‌ರನ್ನು ವೈಯಕ್ತಿಕ ನಿಂದನೆಗೆ ಗುರಿಪಡಿಸುವಂತಹ ಜಾಹಿರಾತುಗಳನ್ನು ನೀಡುತ್ತಿದ್ದಾರೆ. ತಳಮಟ್ಟದಲ್ಲಿ ಆಪ್‌ನ ಬಹಿರಂಗ ಪ್ರಚಾರಗಳನ್ನು ತಡೆಯುವ ಪ್ರಯತ್ನಗಳನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ. ಭಾನುವಾರ ಸಂಜೆ ಇಲ್ಲಿನ ಖನ್ನೋಟ್ ಪ್ಲೇಸ್ ಎಂಬ ಶಾಪಿಂಗ್ ಏರಿಯಾದಲ್ಲಿ ಆಪ್ ಹಮ್ಮಿಕೊಂಡಿದ್ದ ಬೀದಿ ನಾಟಕವನ್ನು, ಬಿಜೆಪಿಯ ಕೆಲವು ಯುವ ಕಾರ್ಯಕರ್ತರು ತಡೆಯುವ ವ್ಯರ್ಥ ಪ್ರಯತ್ನ ಮಾಡಿದರು. ದಿಲ್ಲಿಯ ವರ್ಗ ಸಂಘರ್ಷಗಳಂತೆ ಇಲ್ಲಿನ ಚುನಾವಣೆ ಕೂಡ ಎರಡು ಅಂಚಿನ ಕತ್ತಿನ ನಡೆಯ ಹಾದಿಯಲ್ಲಿದೆ. ಒಂದು ಕಡೆ ಗೆಲ್ಲುವ ಉತ್ಸಾಹ, ಮತ್ತೊಂದೆಡೆ ಬುಗಿಲೆದ್ದ ಅಸಮಾಧಾನಗಳ ನಡುವೆಯೇ ಕೌಂಟ್‌ಡೌನ್ ಹತ್ತಿರಾಗುತ್ತಿದೆ.