Daily Archives: February 3, 2015

ಆಮ್‍ ಆದ್ಮಿಯ ಹವಾಲ ಚಂದಾ ಮತ್ತು ಮತಕ್ಕಿರುವ ಕಿಮ್ಮತ್ತು!

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

“ಯಾಕೆ ಬಹುತೇಕ ಮಾಧ‍್ಯಮಗಳು ಆಪ್‍ ವಿರುದ್ಧವೇ ಸುದ್ದಿಗಳನ್ನು ತಯಾರಿಸುತ್ತವೆ. ಮೋದಿ ಅಂದಾಕ್ಷಣ ಯಾವುದೇ ಅಂಕೆ ಇಲ್ಲದ ಮಾಹಿತಿ ನೀಡುತ್ತವೆ,’’ ಎಂದು ಪ್ರಶ್ನಿಸಿದರು ಕಿರಣ್‍ ವಿಸ್ಸಾ. ಆಮ್‍ ಆದ್ಮಿ ಪಾರ್ಟಿಯ ಪಟೇಲ್‍ ನಗರ ಕಚೇರಿಯಿಂದ ಕೊಂಚ ದೂರದ ಮನೆಯ modi-kiran-bedi-delhi-rallyಕೋಣೆಯೊಂದರಲ್ಲಿ ಕುಳಿತು ಮಾತನಾಡುತ್ತಿದ್ದ ಅವರು ಕೊಂಚ ಭಾವನಾತ್ಮಕವಾಗಿಯೇ ಹೀಗಂತ ಕೇಳಿದರು. ಮೂಲತಃ ಆಂಧ್ರ ಮೂಲದ ಕಿರಣ್, ಕಳೆದ ಹದಿನೈದು ವರ್ಷಗಳಿಂದ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ, ಅಮೆರಿಕಾದ ಕೆಲವು ಸಂಘ ಸಂಸ್ಥೆಗಳ ಮೂಲಕ ಭಾರತದ ಬಡ ಜನರ ಅಭಿವೃದ್ಧಿಗಾಗಿಯೂ ಕೆಲಸ ಮಾಡುತ್ತಿದ್ದಾರೆ. ಇತರೆ ಎನ್‍ಆರ್‍ಐಗಳಂತಲ್ಲದ ಅವರ ಆಲೋಚನೆಗಳು ಇಲ್ಲಿನ ತಳವರ್ಗದ ನಿಜಸ್ಥಿತಿಯನ್ನು ಅರ್ಥಮಾಡಿಕೊಂಡಂತೆ ಕಾಣಿಸುತ್ತದೆ. ಹೀಗೆ ಮಾಧ್ಯಮಗಳ ಕುರಿತು ಅವರ ಕೇಳಿದ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ ಅಥವಾ ಆತ್ಮಾವಲೋಕನದ ವಿಚಾರ. ಆದರೆ ಅವರಲ್ಲಿ ಹೀಗೊಂದು ಪ್ರಶ್ನೆ ಏಕೆ ಹುಟ್ಟಿತು ಎಂಬುದಕ್ಕೆ ಇವತ್ತಿನ ಚುನಾವಣೆಯ ಬಿಸಿಯಲ್ಲಿ ಬೇಯುತ್ತಿರುವ ದಿಲ್ಲಿಯನ್ನೂ ಮತ್ತು ಇಲ್ಲಿನ ನ್ಯೂಸ್‍ ಚಾನಲ್‍ಗಳು ‘ಸನ್‍ಸನಿ’ಗಳನ್ನು ಭಿತ್ತರಿಸುವ ರೀತಿಯಲ್ಲಿ ಉತ್ತರ ಸಿಗುತ್ತದೆ. “ಕಳೆದ ಲೋಕಸಭೆ ಚುನಾವಣೆ ನಂತರ ಅರವಿಂದ್ ಕೇಜ್ರಿವಾಲ್‍ ದಿಲ್ಲಿಯ ಕನಿಷ್ಟchandan-adarsh-dasari-ravi-delhi-aap 70 ಕಡೆಗಳಲ್ಲಿ ಜನಸಭಾಗಳನ್ನು ಮಾಡಿರಬಹುದು. ತಾವು ನೀಡಿದ ರಾಜೀನಾಮೆಯ ಹಿನ್ನಲೆ ಮತ್ತು ಆದ ತಪ್ಪುಗಳ ಕುರಿತು ಜನರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಇವ್ಯಾವವೂ ಮುಖ್ಯವಾಹಿನಿಯ ಮೀಡಿಯಾಗಳಲ್ಲಿ ಬರಲಿಲ್ಲ. ಕೇಜ್ರಿವಾಲ್‍ ಸಭೆ ಸುದ್ದಿಯಾಗಬೇಕು ಎಂದರೆ ಮೊಟ್ಟೆಯನ್ನೋ, ಕಲ್ಲನ್ನೋ ಎಸೆಯಬೇಕಾಗುತ್ತದೆ. ಆದರೆ ಮೋದಿ ಚಿಕ್ಕ ಸಭೆ ನಡೆಸಿದರೂ ಗಂಟೆ ಗಟ್ಟಲೆ ನೇರ ಪ್ರಸಾರವನ್ನು ನೀಡುತ್ತಿದ್ದಾರೆ,’’ ಎಂದರು ಬೆಂಗಳೂರು ಮೂಲದ ಚಂದನ್‍. ಆಪ್‍ನ ಸಕ್ರಿಯ ಕಾರ್ಯಕರ್ತರಾಗಿರುವ ಅವರು ದಿಲ್ಲಿ ಚುನಾವಣೆಯ ಪ್ರಚಾರಕ್ಕಾಗಿಯೇ ಇಲ್ಲಿಗೆ ಬಂದು ತಿಂಗಳ ಮೇಲಾಗಿದೆ.

ಮತದಾನ ದಿನಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಸಮಯದಲ್ಲೂ ಪ್ರಧಾನಿ ಮೋದಿ ಅವರು ನಡೆಸಿದ ಬಹಿರಂಗ ಸಭೆಯಲ್ಲಿ ದಿಲ್ಲಿಯ 70 ಬಿಜೆಪಿ ಅಭ್ಯರ್ಥಿಗಳು ಹಾಜರಿರುವ ಮೂಲಕ ಅಚ್ಚರಿ ಮೂಡಿಸುತ್ತಿದ್ದಾರೆ. “ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಇದ್ದು ಮತಯಾಚನೆ ನಡೆಸುತ್ತಾರೆ. ಆದರೆ ಮೋದಿ ಅವರ ಜತೆ ಪಾಲ್ಗೊಂಡರೆ ಅವರನ್ನು ಸುತ್ತವರೆದಿರುವ ಮಾಧ್ಯಮಗಳ ಮೂಲಕ ಜನರನ್ನು ಸುಲಭವಾಗಿ ತಲುಪಬಹುದು ಎಂಬ ಲೆಕ್ಕಾಚಾರ ಇರಬಹುದು,’’ ಎಂಬುದು ಪಂಜಾಬ್‍ ಮೂಲದ ಚುನಾವಣಾ ಸಮೀಕ್ಷರೊಬ್ಬರ ಅಭಿಪ್ರಾಯ. ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಅವರು ಸಿ- ವೋಟರ್‍ಗಾಗಿ ಕಳೆದ ಕೆಲವು ತಿಂಗಳುಗಳಿಂದ ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಒಂದೆಡೆ ಆಪ್‍ಗೆ ಬಂದ ಚಂದಾಹಣದ ಮೂಲದ ಕುರಿತು ಹುಯಿಲೆದ್ದಿದೆ. ಮತ್ತೊಂದೆಡೆ ಬಿಜೆಪಿ ವೈಯುಕ್ತಿಕ ಟೀಕೆಗಳನ್ನು ಮಾಡುತ್ತಿದೆ. ಮುಖ್ಯವಾಹಿನಿಯಲ್ಲಿ ಹೀಗೆ ದಿಲ್ಲಿ ಚುನಾವಣೆ ಬಿಂಬಿತವಾಗುತ್ತಿರುವ ಹೊತ್ತಿನಲ್ಲೇ ತಳಮಟ್ಟದಲ್ಲಿ ಸಾಕಷ್ಟು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿಯ ಸಿಎಂ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಕಿರಣ್‍ ಬೇಡಿ ಅವರ ಚುನಾವಣ ಕಣವೇ ಬಿಜೆಪಿ ಪಾಲಿಗೆ ಡೋಲಾಯಮಾನವಾಗಿದೆ. sk.bagga-krishnanagar-aap-candidateಆರಂಭದಲ್ಲಿ ಆಪ್‍ನ ‘ಜನರ ಸಿಎಂ’ ಎಂಬ ಪ್ರಚಾರದ ಅನಿವಾರ್ಯತೆಗಳಿಂದಾಗಿ ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯ ಘೋಷಣೆಗೆ ಮುಂದಾಯಿತು. ಕಿರಣ್‍ ಬೇಡಿ ಆಯ್ಕೆ ಆರಂಭದಲ್ಲಿ ಸಕಾರಾತ್ಮಕ ವಾತಾರಣವನ್ನೂ ಸೃಷ್ಟಿಸಿತ್ತು. ಆದರೆ, ಸ್ವತಃ ಬೇಡಿಯವರ ತಡೆರಹಿತ, ಹಿಡಿತ ತಪ್ಪಿದ ಮಾತುಗಳಿಂದಾಗಿ ಒಟ್ಟಾರೆ ಬಿಜೆಪಿಯ ಚರಿಷ್ಮಾಕ್ಕೆ ಸಮಸ್ಯೆ ಸೃಷ್ಟಿಯಾದಂತೆ ಕಾಣಿಸುತ್ತಿದೆ. ಜತೆಗೆ ಕೃಷ್ಣಾ ನಗರದಲ್ಲಿ ಆಪ್‍ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್.ಕೆ. ಬಗ್ಗಾ ವಕೀಲರು. ಬೇಡಿ ವಿರುದ್ಧ ವಕೀಲರು ಬೀದಿಗೆ ಇಳಿದಿದ್ದಾರೆ. ಈಗಷ್ಟೆ ಅವರ ಪ್ರಚಾರದ ಕಚೇರಿ ಮೇಲೆ ದಾಳಿ ನಡೆದಿದೆ ಎಂಬ ಮಾಹಿತಿ ಬಂದಿದೆ. ನಿಧಾನವಾಗಿ ಬೇಡಿ ಅವರ ಸಕಾರಾತ್ಮಕ ವ್ಯಕ್ತಿತ್ವದ ಅಂಶಗಳೇ ಅವರಿಗೆ ಮುಳ್ಳಾಗಿ ಕಾಡಲಾರಂಭಿಸಿದೆ.

“ಆಕೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾರ್‍ನ್ನು ರಸ್ತೆ ಬದಿಯಿಂದ ಎತ್ತಿಕೊಂಡು ಹೋದವರು ಎಂದು ಪ್ರಚಾರ ಮಾಡಿದ್ದರು. ಅದೀಗ ಸುಳ್ಳು ಎಂದು ಗೊತ್ತಾಗಿದೆ. ಹೀಗಿರುವಾಗ ಬಿಜೆಪಿಗೆ ಬೇರೆ ಅಸ್ತ್ರಗಳ ಮೊರೆ ಹೋಗುವುದು ಅನಿವಾರ್ಯ,’’ ಎಂದರು ಎನ್‍. ಕೆ. ಶರ್ಮಾ. ಇವರು ಕಿರಣ್‍ ಬೇಡಿ ಸ್ಪರ್ಧಿಸುತ್ತಿರುವ ಕೃಷ್ಣಾನಗರ ಕ್ಷೇತ್ರದಲ್ಲಿಯೇ ಮೆಕ್ಯಾನಿಕ್‍ ಆಗಿ ಕೆಲಸ ಮಾಡುತ್ತಿದ್ದಾರೆ. “ಇಲ್ಲಿ ಎರಡು ದಶಕಗಳ ಕಾಲ ಇದ್ದವರು ಹರ್ಷವರ್ಧನ್‍. ಈಗ ಕ್ಷೇತ್ರ ಬಿಟ್ಟು ಓಡಿ ಹೋಗಿದ್ದಾರೆ,’’ ಎಂದವರು ತಮ್ಮ ಬಿಜೆಪಿ ವಿರೋಧಿ ನಿಲುವನ್ನು ಗಟ್ಟಿಯಾಗಿ ಪ್ರತಿಪಾಧಿಸಿದರು. ಅವರು ದನಿಯನ್ನು ಕೇಳಿಸಿಕೊಂಡು ತಮ್ಮ ಅಂಗಡಿಯಿಂದ ಹೊರಬಂದ ಗುಜರಾತ್‍ ಮೂಲದ ಹಿರಿಯ ವ್ಯಾಪಾರಿ ದಿಯಾಲ್‍ಚಂದ್, “ಕಷ್ಟವೋ ಸುಖವೋ, ಲಾಭವೋ ನಷ್ಟವೋ ಕೇಜ್ರಿವಾಲ್‍ ಸಿಕ್ಕ ಅವಕಾಶವನ್ನು ಬಿಡಬಾರದಿತ್ತು. ನಾನು ಕಳೆದ ಐವತ್ತು ವರ್ಷಗಳಿಂದ ದಿಲ್ಲಿ ಚುನಾವಣೆಗಳನ್ನು hindustan-times-surveyನೋಡುತ್ತಾ ಬಂದಿದ್ದೇನೆ. ಈ ಬಾರಿ ಇಲ್ಲಿ ಬೇಡಿ ಗೆಲ್ಲುವುದು ಗ್ಯಾರೆಂಟಿ,’’ ಎಂದರು. ಹೀಗೆ, ಇಬ್ಬರ ನಡುವೆ ಒಂದಷ್ಟು ಹೊತ್ತು ವಾಗ್ಯುದ್ಧ ನಡೆದು ಕೊನೆಗೆ ಪರಸ್ಪರ ನಕ್ಕು ಬೀಳ್ಕೊಟ್ಟರು.

ದಿಲ್ಲಿಯ ಚುನಾವಣಾ ಕಣ ವಿಶೇಷ ಎಂದು ಅನ್ನಿಸುವುದು ಈ ಕಾರಣಕ್ಕಾಗಿಯೇ. ಇಲ್ಲಿನ ಸಾಮಾನ್ಯ ಜನರಿಂದ ಹಿಡಿದು ಸಮಾಜದ ಉತ್ತಮ ಸ್ಥರಗಳನ್ನು ತಲುಪಿಕೊಂಡವರ ವರೆಗೆ ರಾಜಕೀಯ ಪ್ರಜ್ಞೆ ಎಂಬುದು ಹಾಸುಹೊಕ್ಕಾದಂತೆ ಕಾಣಿಸುತ್ತದೆ. ಒಂದು ಕಡೆ ಚಿಕ್ಕ ಪ್ರಮಾಣದಲ್ಲಾದರೂ ಆಲೋಚನೆ ಮಾಡುವ ಜನವರ್ಗ, ಮತ್ತೊಂದೆಡೆ ನಾನಾ ಭಾಷೆ, ಪ್ರದೇಶ ಮತ್ತು ಸಂಸ್ಕೃತಿಗಳ ಸಂಕರದಿಂದ ಹುಟ್ಟಿಕೊಂಡಿರುವ ಕಾಸ್ಮೊಪಾಲಿಟನ್‍ ಚಹರೆಗಳ ಹಿನ್ನೆಲೆಯಿಂದಾಗಿ, ನಮ್ಮಲ್ಲಿ ನಡೆದಂತೆ ಜಾತಿ ಆಧಾರಿತ ಚುನಾವಣೆ ಲೆಕ್ಕಚಾರಗಳು ಇಲ್ಲಿ ನಡೆಯುವುದಿಲ್ಲ. ಹೀಗಿದ್ದೂ, ಸೋಮವಾರ ಬಿಜೆಪಿ ಬಿಡುಗಡೆ ಮಾಡಿದ ವೈಯುಕ್ತಿಕ ನಿಂದನೆಯ ಜಾಹೀರಾತಿನಿಂದಾಗಿ ಜಾತಿ ಆಧಾರಿತ ಹೇಳಿಕೆಗಳು ಆಪ್‍ ಕಡೆಯಿಂದ ಹೊರಬಿದ್ದಿದೆ. ಆದರೆ, ಇದು ಚುನಾವಣೆಯ ಕಣದಲ್ಲಿ ಹೆಚ್ಚು ಪ್ರಭಾವ ಬೀರಿದಂತಿಲ್ಲ.

ಇವುಗಳ ನಡುವೆಯೇ, ದಿಲ್ಲಿಯಲ್ಲಿ ಕಾಂಗ್ರೆಸ್‍ನ ಉಪಸ್ಥಿತಿ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿರುವಂತೆ ಭಾಸವಾಗುತ್ತಿದೆ. ಈ ಕುರಿತು ಕನ್ನಡ ಸುದ್ದಿವಾಹಿನಿಯೊಂದರ ದಿಲ್ಲಿ ವರದಿಗಾರರೊಬ್ಬರು, “ದಿಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಬಿಹಾರ ಮತ್ತಿತರ ರಾಜ್ಯಗಳ ಚುನಾವಣೆ ಬರುತ್ತದೆ. ಒಂದುವೇಳೆ ದಿಲ್ಲಿಯಲ್ಲಿ ಆಪ್‍ ಗೆದ್ದರೆ ಬಿಜೆಪಿ ಮತ್ತು ಮೋದಿ ಹವಾಕ್ಕೆ ಬ್ರೇಕ್‍ ಹಾಕಿದಂತೆ ಆಗುತ್ತದೆ. ಹೀಗಾಗಿ ಕಾಂಗ್ರೆಸ್‍ ಅಂತರಾಳದಲ್ಲಿ ಆಪ್‍ನ ಗೆಲುವನ್ನು ನಿರೀಕ್ಷಿಸುತ್ತಿರುವ ಸಾಧ್ಯತೆ ಇದೆ,’’ ಎಂದರು. ಇದು ಮೇಲ್ನೋಟದ ಅಭಿಪ್ರಾಯ ಇದ್ದಿರಬಹುದಾದರೂ, abp-news-surveyದಿಲ್ಲಿ ಮತದಾನಕ್ಕೆ ಮೂರು ದಿನಗಳ ಬಾಕಿ ಇರುವ ಈ ಸಮಯದಲ್ಲಿ ಹೊರಬರುತ್ತಿರುವ ಸಮೀಕ್ಷೆಗಳು ಇದನ್ನೇ ಬಿಂಬಿಸುತ್ತಿವೆ. ದಿನದಿಂದ ದಿನಕ್ಕೆ ಕಾಂಗ್ರೆಸ್‍ನ ಮತಗಳಿಕೆಯ ಸರಾಸರಿ ಇಳಿಕೆಯಾಗುತ್ತಿದೆ.

ಹೀಗಿರುವಾಗಲೇ, ಕೊನೆಯ ಹಂತದ ಮಾಹಿತಿ ಯುದ್ಧಕ್ಕೆ ಪ್ರಮುಖ ಪಕ್ಷಗಳು ತಯಾರಾಗಿವೆ. “ನಾಳೆಯಿಂದ ಆಪ್‍ನ ಜಾಹೀರಾತುಗಳು ಟಿವಿ ಮತ್ತು ಎಫ್‍ಎಂನಲ್ಲಿ ಪ್ರಸಾರ ಆಗಲಿವೆ. ಇದಕ್ಕಾಗಿ ಆಪ್‍ ಎನ್‍ಆರ್‌ಐ ತಂಡ ಸುಮಾರು 5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ,’’ ಎಂಬ ಮಾಹಿತಿಯನ್ನು ಆಪ್‍ನ ಕಾರ್ಯಕರ್ತರೊಬ್ಬರು ನೀಡಿದರು. ಬಿಜೆಪಿ ಕೂಡ ಟಿವಿಗಳಲ್ಲಿ ಮೋದಿ ಭಾಷಣವನ್ನು ಬಿಂಬಿಸುವ ಜಾಹೀರಾತುಗಳ ಮೊರೆ ಹೋಗಿದೆ. ಮತದಾನಕ್ಕೆ ಕೇವಲ 90 ಗಂಟೆಗೂ ಕಡಿಮೆ ಅವಧಿ ಬಾಕಿ ಇರುವ ಈ ಸಮಯದಲ್ಲಿ  ಆಪ್‍ನ ಚಂದಾ ಕುರಿತು ಎದ್ದಿರುವ ವಿವಾದದ ಮರ್ಮವನ್ನು ದಿಲ್ಲಿಯ ಜನ ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ಹಾಗೂ ಆಮ್‍ ಆದ್ಮಿ ಪಕ್ಷಗಳು ಕೋರಿಕೊಳ್ಳುತ್ತಿವೆ. ಅವರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೆ ಇರಲಿ ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಮತಕ್ಕಿರುವ ಕಿಮ್ಮತ್ತಿಗೆ ಇದೊಂದು ತಾಜಾ ಉದಾಹರಣೆ ಅಷ್ಟೆ…