Daily Archives: February 4, 2015

ದಿಲ್ಲಿ ಕಿ ದಿಲ್ ಮೇ ಕ್ಯಾ ಹೇ ಭಾಯ್ ಸಾಬ್?!

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ದೇಶದ ರಾಜಧಾನಿಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಬಹಿರಂಗ ಪ್ರಚಾರ ಅಂತಿಮ ಹಂತದಲ್ಲಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ಕೊನೆಯ ಹಂತದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ತಮ್ಮ ಸ್ವಕ್ಷೇತ್ರ ಕೃಷ್ಣಾ ನಗರದಲ್ಲಿ ಇಂದು ಬೆಳಗ್ಗೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ‘ಪ್ರಾಮಾಣಿಕ ರಾಜಕಾರಣಕ್ಕೆ ಹಾಗೂ ಪ್ರೀತಿಯ ಆಡಳಿತ’ಕ್ಕೆ ಜನ ಮನ್ನಣೆ ನೀಡಲಿದ್ದಾರೆ gulpanang-roadshow-krishnanagarಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಆಮ್‍ ಆದ್ಮಿ ಪಕ್ಷ ತನ್ನ ಮೇಲೆ ಬಿಜೆಪಿ ಹೊರೆಸಿರುವ ಮಹಿಳಾ ವಿರೋಧಿ ಕಳಂಕವನ್ನು ತೊಳೆದುಕೊಳ್ಳಲು ಮಹಿಳಾ ನಾಯಕಿಯರನ್ನು ಮುಂದಿಟ್ಟುಕೊಂಡು ಬೃಹತ್‍ ಸಭೆಯನ್ನು ಅದೇ ಕ್ಷೇತ್ರದಲ್ಲಿ ನಡೆಸಿದೆ. ಕಾಂಗ್ರೆಸ್‍ ಮಾತ್ರ ಎಂದಿನಂತೆ ತನ್ನ ಸಾಂಪ್ರದಾಯಿಕ ಚುನಾವಣೆ ಪ್ರಚಾರ ಶೈಲಿಗೆ ಮೊರೆಹೋಗಿದೆ. ಬೂತ್‍ ಮಟ್ಟದಲ್ಲಿ ಮೈಕ್‍ ಪ್ರಚಾರ, ರಾಹುಲ್‍ ಗಾಂಧಿ ಬಹಿರಂಗ ಪ್ರಚಾರ ಮತ್ತು ಟಿವಿ ಮಾಧ್ಯಮದಲ್ಲಿ ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳುವುದು ಬಿಟ್ಟರೆ, ಅನುಭವಿ ಪಕ್ಷದ ಬತ್ತಳಿಕೆ ಖಾಲಿಯಾದಂತೆ ಕಾಣಿಸುತ್ತಿದೆ. ಫೆ. 5ರ ಸಂಜೆಗೆ ದಿಲ್ಲಿಯಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಸಮಯದಲ್ಲಿ ಹೊರಗಿನಿಂದ ಬಂದ ಎಲ್ಲಾ ಪಕ್ಷಗಳ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ದಿಲ್ಲಿ ತೊರೆಯುವಂತೆ ಈಗಾಗಲೇ ತಿಳಿಸಲಾಗಿದೆ. ಹೀಗಾಗಿ, ಕೊನೆಯ ಕೆಲವೇ ಗಂಟೆಗಳು ಬಾಕಿ ಇರುವ ಈ ಸಮಯದಲ್ಲಿ ಸಾಧ್ಯವಾದಷ್ಟು ಜನರನ್ನು ನೇರವಾಗಿ ತಲುಪುವ ಪ್ರಯತ್ನದಲ್ಲಿ ಬಿಜೆಪಿ ಮತ್ತು ಆಮ್‍ ಆದ್ಮಿ ಪಕ್ಷಗಳು ನಿರತರಾಗಿವೆ. ಇಂದು ಬೆಳಗ್ಗೆಯೇ ಆಪ್‍ನ ಸಿಎಂ ಅಭ್ಯರ್ಥಿ ಅರವಿಂದ್‍ ಕೇಜ್ರಿವಾಲ್‍ ಸ್ಪರ್ಧಿಸುತ್ತಿರುವ ನ್ಯೂ ದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಬಹುತೇಕ ಸ್ವಯಂ ಸೇವಕರು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಪ್ರತಿ ಮನೆಗೆ ಪತ್ರ ಬರೆಯುವ ಕ್ರಿಯಾಶೀಲತೆ ತೋರಿಸಿದೆ. ಒಟ್ಟಾರೆ, ದಿಲ್ಲಿ ಚುನಾವಣಾ ಕಣ ಮುಖ್ಯವಾಹಿನಿಯ ಚರ್ಚೆಗಳನ್ನು ಮೀರಿ ರಂಗು ಪಡೆದುಕೊಳ್ಳುತ್ತಿದೆ.

ಈ ನಡುವೆ ಈಶಾನ್ಯ ದಿಲ್ಲಿಯ ರೊಹತಾಷ್ ನಗರ್‍ ವಿಧಾನಸಭಾ ಕ್ಷೇತ್ರದಲ್ಲಿ ಆಪ್‍ ಅಭ್ಯರ್ಥಿ ಕಾರಿನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. sarita-sing-rohtasnagar-aapಆಪ್‍ನಿಂದ ಸ್ಪರ್ಧಿಸುತ್ತಿರುವ ಸರಿತಾ ಸಿಂಗ್‍ ಅವರ ಪ್ರಚಾರ ವಾಹನವನ್ನು ಸೋಮವಾರ ರಾತ್ರಿ ಅಡ್ಡಗಟ್ಟಿದ ಸುಮಾರು ಹತ್ತಕ್ಕೂ ಹೆಚ್ಚಿದ್ದ ದುಷ್ಕರ್ಮಿಗಳ ತಂಡ ಗಾಜುಗಳನ್ನು ಒಡೆದು ಹಾಕಿತ್ತು. “ನಾನು ಈ ಕ್ಷೇತ್ರವನ್ನು ಹಿಂದಿನಿಂದ ನೋಡಿಕೊಂಡು ಬರುತ್ತಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ತೋಳ್ಬಲದ ರಾಜಕಾರಣ ಕಾಣಿಸುತ್ತಿದೆ,’’ ಎಂದರು ಆನಂದ್‍ ಸಿಂಗ್. ಇವರು ಆಪ್ ಅಭ್ಯರ್ಥಿ ಸರಿತಾ ಸಿಂಗ್‍ ಅವರ ಕಟ್ಟಾ ಬೆಂಬಲಿಗರು. ಮಂಗಳವಾರ ಸಂಜೆ ರೋಹತಾಷ್ ನಗರದಲ್ಲಿ ಆಯೋಜಿಸಿದ್ದ ಜನ ಸಭೆಗೆ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಪಾಲ್ಗೊಂಡಿದ್ದರು. ಆಪ್‍ನ ಸ್ಟಾರ್‍ ಕ್ಯಾಂಪೇನರ್‍ ಕುಮಾರ್‍ ವಿಶ್ವಾಸ್‍ ಅವರ ಮಾತುಗಳ ಆಕರ್ಷಣೆಯೂ ಇದ್ದಕ್ಕೆ ಕಾರಣ ಇರಬಹುದು. ಈ ಸಮಯದಲ್ಲಿ ಮಾತನಾಡಿದ ಆಪ್‍ ನಾಯಕ ಕುಮಾರ್‍ ವಿಶ್ವಾಸ್, “ಆಪ್‍ ಪಕ್ಷದ ಚಂದಾ ವಿಚಾರವನ್ನು ಬಿಜೆಪಿ ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ನಮಗೆ ಹಣ ನೀಡಿದವರ ಕಂಪನಿಗಳನ್ನು ಭಾರತ ಸರಕಾರ ಅನುಮೋದಿಸಿದೆ. ಅವರು ನೀಡಿದ ಹಣ ಬ್ಯಾಂಕ್‍ ಮೂಲಕ ಚಲಾವಣೆ ಆಗಿದೆ. ಹೀಗಿದ್ದೂ ಇದನ್ನು ಹವಾಲ ಎನ್ನುವುದಾದರೆ ದೇಶದ ಆರ್ಥಿಕ ಸಚಿವರು ರಾಜೀನಾಮೆ ನೀಡಬೇಕು,’’ ಎಂದರು. ಜತೆಗೆ “ಸರಿತಾ ಸಿಂಗ್‍ರನ್ನು ಗೆಲ್ಲಿಸಿ ಕಳುಹಿಸಿ, ಅವರನ್ನು ಮಂತ್ರಿ ಮಾಡಲು ನಾನು ಪ್ರಯತ್ನ ಮಾಡುತ್ತೇನೆ,’’ ಎಂದು ರೋಹತಾಷ್ ನಗರದ ಜನರ ಮೂಗಿಗೆ ತುಪ್ಪವನ್ನೂ ಹಚ್ಚಿದರು.

ಉತ್ತರ ಪ್ರದೇಶ ಹಾಗೂ ದಿಲ್ಲಿಯ ಗಡಿ ಭಾಗದಲ್ಲಿ ಬರುವ ರೋಹತಾಷ್ ನಗರ ಒಂದು ಕಾಲಕ್ಕೆ ಕಾಂಗ್ರೆಸ್‍ನ ಭದ್ರಕೋಟೆಯಾಗಿತ್ತು. ದಿಲ್ಲಿ ಕಾಂಗ್ರೆಸ್‍ ಪ್ರದೇಶ್‍ ಸಮಿತಿಯ ಅಧ್ಯಕ್ಷರಾಗಿದ್ದ ರಾಮ್‍ ಬಾಬು ಶರ್ಮಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.kumar-vishwas-rohtas-nagar-jansabha-feb0315 “ರಾಮ್‍ ಬಾಬು ಬದುಕಿದ್ದಾಗ ಶೀಲಾ ದೀಕ್ಷಿತ್‍ ಕೂಡ ಅವರಿಗೆ ಹೆದರಿಕೊಳ್ಳುತ್ತಿದ್ದರು. ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ,’’ ಎಂದರು ಲಕ್ಷಣ್‍ ಸೋನೆ. ಚಿಕ್ಕ ಬೇಕರಿ ಇಟ್ಟುಕೊಂಡಿರುವ ಇವರು ಉತ್ತರ ಪ್ರದೇಶ ಮೂಲದವರು. ಇವರಂತೆಯೇ ಯುಪಿ ಮತ್ತಿತರ ಕಡೆಗಳಿಂದ ವಲಸೆ ಬಂದವರ ಸಂಖ್ಯೆ ಈ ಕ್ಷೇತ್ರದಲ್ಲಿ ಹೆಚ್ಚಿದೆ. ಜತೆಗೆ ಬಡತನವೂ ಅಷ್ಟೇ ಪ್ರಮಾಣದಲ್ಲಿದೆ. ರಾಮ್‍ ಬಾಬು ಶರ್ಮಾ 2009ರಲ್ಲಿ ಮೃತಪಟ್ಟ ನಂತರ ನಡೆದ ಉಪಚುನಾವಣೆಯಲ್ಲಿ ಅವರ ಮಗ ವಿಪಿನ್‍ ಶರ್ಮಾರನ್ನು ಇಲ್ಲಿನ ಜನ ದಿಲ್ಲಿ ವಿಧಾನಸಭಾ ಪ್ರತಿನಿಧಿಯಾಗಿ ಕಳುಹಿಸಿಕೊಟ್ಟರು, “ಏನೇ ಹೇಳಿ, ಹಿಂದಿನ ರಾಜಕಾರಣಿಗಳಂತಲ್ಲ ಇಂದಿನ ಯುವಕರು. ಅವರಿಗೆ ಅಧಿಕಾರ ಸಿಗುತ್ತಲೇ ಕ್ಷೇತ್ರ ಮರೆತು ಹೋಗುತ್ತಾರೆ,’’ ಎಂಬುದು ರಾಜೇಶ್‍ ಮಾಜಿ ಎಂಬ ರಿಕ್ಷಾ ಚಾಲಕರೊಬ್ಬರ ಅಭಿಪ್ರಾಯ. ಬಹುಶಃ ಹೀಗಾಗಿಯೇ 2013ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರ ಬಿಜೆಪಿಯ ಜಿತೇಂದರ್‍ ಮಹಾಜನ್‍ ಪಾಲಾಯಿತು. ಎರಡನೇ ಸ್ಥಾನದಲ್ಲಿ ಆಪ್‍ನ ಮುಕೇಶ್‍ ಹೂಡ 14 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದೀಗ, ರೊಹತಾಷ್ ನಗರ್‍ ಎಂಬ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ ತನ್ನೆಲ್ಲಾ ನೆಲೆಗಳನ್ನು ಕಳೆದುಕೊಂಡಿದೆ. ಇಲ್ಲಿನ ಸ್ಥಳೀಯ ಕಾಂಗ್ರೆಸ್‍ ನಾಯಕರು ಆಪ್‍ನ ಯುವ ಅಭ್ಯರ್ಥಿಯ ಹಿಂದೆ ನಿಂತಿದ್ದಾರೆ. ಹೀಗಾಗಿ ಇಲ್ಲೇನಿದ್ದರು ಬಿಜೆಪಿ ಮತ್ತು ಆಪ್‍ ನಡುವಿನ ನೇರ ಕದನ.

ತಳಮಟ್ಟದಲ್ಲಿ ಆಪ್‍ ಮತ್ತು ಬಿಜೆಪಿ ಸೆಣಸಾಟ ನಡೆಯುತ್ತಿದ್ದರೆ, ಮುಖ್ಯವಾಹಿನಿಯಲ್ಲಿ ಚಂದಾ ಕುರಿತು ಕಳೆದ 36 ಗಂಟೆಗಳಿಂದ ನಿರಂತರವಾಗಿ ಸುದ್ದಿಗಳು ಭಿತ್ತರಗೊಳ್ಳುತ್ತಿವೆ. ಇದರ ನಡುವೆಯೇ ಹೊರಬಂದ ನಾಲ್ಕನೇ ಹಂತದ ಚುನಾವಣಾ ಸಮೀಕ್ಷೆಗಳು ಆಮ್‍ ಆದ್ಮಿ ಪಾರ್ಟಿಗೆ ಸುಮಾರು today-cicero-poll-feb1539- 46 ಸೀಟುಗಳು ಬರಬಹುದು ಎಂದು ಅಂದಾಜಿಸಿವೆ. 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದಿಲ್ಲಿಯ ವಿಧಾನ ಸಭೆಗೆ ಇದು ಸ್ಪಷ್ಟ ಬಹುಮತ. ಜತೆಗೆ, ಸಿಎಂ ಸೂಕ್ತ ಅಭ್ಯರ್ಥಿಗಳ ಸಮೀಕ್ಷೆಯಲ್ಲಿ ಕೇಜ್ರಿವಾಲ್‍ ಎಲ್ಲರನ್ನೂ ಹಿಂದಿಕ್ಕಿದ್ದಾರೆ. ಒಂದು ರೀತಿಯಲ್ಲಿ ಈ ಸಮೀಕ್ಷೆಗಳು ಆಪ್‍ ನೆಚ್ಚಿಕೊಂಡಿರುವ ಸುಮಾರು 2 ಲಕ್ಷ ಆಟೋ ಚಾಲಕರು, ಮೂರು ಲಕ್ಷದಷ್ಟಿರುವ ರಿಕ್ಷಾ ಚಾಲಕರು ಹಾಗೂ 5 ಲಕ್ಷಕ್ಕೂ ಹೆಚ್ಚಿರುವ ಕೊಳೆಗೇರಿ ಕುಟುಂಬಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವಂತೆ ಕಾಣಿಸುತ್ತಿಲ್ಲ. ಅಥವಾ ಇವರಿಗೆ ದಿಲ್ಲಿಗೆ ರಾಜ್ಯದ ಸ್ಥಾನಮಾನ ನೀಡುವ ವಿಚಾರ ಕೂಡ ಗಮನ ಸೆಳೆಯುತ್ತಿಲ್ಲ. ಈ ವರ್ಗದ ಜನರಲ್ಲಿ ಪೊಲೀಸರ ಭ್ರಷ್ಟಾಚಾರ ಮತ್ತು ವಿದ್ಯುತ್‍ ಬಿಲ್‍ ಇಳಿಕೆ ವಿಚಾರಗಳು ಮಾತ್ರವೇ ಸ್ಥಾನ ಪಡೆದುಕೊಂಡಿವೆ. ಮತ್ತೊಂದೆಡೆ ಬುಲೆಟ್‍ ರೈಲಿನ ಮಾತನಾಡುತ್ತಿರುವ ಬಿಜೆಪಿಗೆ ಕೊಂಚ ಮೇಲ್ವರ್ಗದ ಜನರಲ್ಲಿ ಸ್ಥಾನ ಸಿಕ್ಕಂತೆ ಕಾಣಿಸುತ್ತಿದೆ. ಒಟ್ಟಾರೆ, ವರ್ಗಗಳ ಆಧಾರದ ಮೇಲೆ ನಡೆಯುತ್ತಿರುವ ಈ ಚುನಾವಣೆ ದೇಶದ ರೋಚಕ ಚುನಾವಣೆಗಳ ಸಾಲಿನಲ್ಲಿ ಅನಾಯಾಸವಾಗಿ ಸ್ಥಾನ ಪಡೆದುಕೊಳ್ಳುತ್ತದೆ.