ದಿಲ್ಲಿ ಮತದಾರ ಪ್ರಬುದ್ಧನಾದ ಬಗೆ ಹೇಗೆ ಗೊತ್ತಾ…?

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

“ಇಲ್ಲಿಯೂ ಕೂಡ ಜನ ಬುದ್ಧಿವಂತರಾಗಿರಲಿಲ್ಲ. ನಾನು ದಿಲ್ಲಿಗೆ ಬಂದು ಸುಮಾರು 26 ವರ್ಷ ಕಳೆಯಿತು. ಈ ರಾಜಕಾರಣಿಗಳ ಆಶ್ವಾಸನೆಗಳು, ಸುಳ್ಳು, ಮೋಸ ಮತ್ತು ದ್ರೋಹವನ್ನು ನೋಡುತ್ತಲೇ ಬಂದಿದ್ದೆವು. ಆದರೆ, 2013ರಲ್ಲಿ ಮೊದಲ ಬಾರಿಗೆ ದಿಲ್ಲಿಯ ಜನ ಎಚ್ಚರಾದರು. ಇವತ್ತು ಅವರ ಓಟನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ,” ಎಂದರು ಗೋವಿಂದ್ ಬಿಲಾಲ್. ಉತ್ತರ ಪ್ರದೇಶದಿಂದ ವಲಸೆ ಬಂದ ಅವರು ಮೊದಲು ದಿಲ್ಲಿಯ ವಿದೇಶಾಂಗ ಕಚೇರಿಯಲ್ಲಿ ಹೊರಗುತ್ತಿಗೆ ನೌಕರಾಗಿ ದುಡಿಯಲು ಶುರುಮಾಡಿದರು. ನಂತರ ಅವರನ್ನು ಅಲ್ಲಿಂದ ಕಿತ್ತುಹಾಕಲಾಯಿತು. cyclerickshaw-delhiಮುಂದೆ ನಾನಾ ಉದ್ಯೋಗಗಳನ್ನು ನಿಭಾಯಿಸಿಕೊಂಡು ಇವತ್ತು ಮಾಲ್ವಿನಗರದ ಬ್ಯಾಂಕ್‍ವೊಂದರ ಮುಂದೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ದಿಲ್ಲಿಯ ಮತದಾರರಿಗೆ ತಮ್ಮ ಹಕ್ಕನ್ನು ಚಲಾಯಿಸುವ ದಿನ. ಬೆಳಗ್ಗೆಯೇ ಎದ್ದ ಗೋವಿಂದ್ ಬಿಲಾಲ್‍ ಚಾಣಕ್ಯಪುರಿಯ ತಮ್ಮ ಮತಗಟ್ಟೆಯಲ್ಲಿ ಮತ ಚಲಾಯಿಸಿ ಬಂದಿದ್ದರು. ರಸ್ತೆ ಬದಿಯಲ್ಲಿ ಜನರನ್ನು ಮಾತನಾಡಿಸುತ್ತಿದ್ದ ನನನ್ನು ಸ್ವಯಂಪೂರ್ವಕವಾಗಿ ಕರೆದು ಪಕ್ಕಕ್ಕೆ ಕೂರಿಸಿಕೊಂಡರು. ಬೆಂಗಳೂರಿನಿಂದ ಬಂದಿದ್ದೇನೆ ಎಂಬುದು ಗೊತ್ತಾದ ನಂತರ ಮನಸ್ಸು ಬಿಚ್ಚಿ ಮಾತನಾಡಲು ಶುರುಮಾಡಿದರು. “ನಾನು ಕಲ್ಯಾಣ್‍ ಸಿಂಗ್‍ ಕ್ಷೇತ್ರದಿಂದ ಬಂದವನು. ಯುವಕನಾಗಿದ್ದ ವೇಳೆ ಒಮ್ಮೆ ಕಲ್ಯಾಣ್‍ ಸಿಂಗ್‍ ಮನೆಗೆ ನಮ್ಮ ಹಳ್ಳಿಯ ಯುವಕನ್ನು ಕರೆದುಕೊಂಡು ಹೋಗಿದ್ದೆ. ಅವರಿಂದ ಒಂದು ಗುರುತಿನ ಪತ್ರವನ್ನು ಪಡೆದುಕೊಳ್ಳಬೇಕಾಗಿತ್ತು. ಅವತ್ತಷ್ಟೆ ನಮ್ಮನ್ನು ನೋಡಿದ ಅವರು ಕಳೆದ ಹತ್ತು ವರ್ಷಗಳಿಂದ ಇವರನ್ನು ಬಲ್ಲೆ ಎಂದು ಪತ್ರ ಬರೆದು ಸಹಿ ಮಾಡಿ ಕೊಟ್ಟಿದ್ದರು. ನನ್ನ ಜತೆಗೆ ಬಂದವನಿಗೆ ಪೊಲೀಸ್‍ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಯಿತು. ಅವತ್ತಿಂದ ಮೊನ್ನೆ ಮೊನ್ನೆವರೆಗೂ ನಾನು ಕಾಂಗ್ರೆಸ್‍ಗೆ ಮತ ಹಾಕುತ್ತಿದ್ದೆ,” ಎಂದು ಅವರು ಗತಕಾಲದ ನೆನಪುಗಳನ್ನು ಹಂಚಿಕೊಂಡರು.

ದಿಲ್ಲಿ ಚುನಾವಣೆ, ರಾಷ್ಟ್ರೀಯ ಪಕ್ಷಗಳ ಚುನಾವಣೆ ತಂತ್ರಗಾರಿಕೆ, ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಹತ್ತಿರದಿಂದ ನೋಡುತ್ತಿರುವ ನನಗೆ ಒಂದಂತೂ ಸ್ಪಷ್ಟವಾಗುತ್ತಿದೆ. ‘ಜನ ಹಣಕ್ಕೆ, ಹೆಂಡಕ್ಕೆ ಓಟನ್ನು ಮಾರಿಕೊಳ್ಳುತ್ತಿದ್ದಾರೆ. ಅವರು ಬದಲಾಗದ ಹೊರತು,chanakya-exit-poll-delhi-2015 ಈ ಚುನಾವಣಾ ವ್ಯವಸ್ಥೆ ಬದಲಾಗದ ಹೊರತು ದೇಶದ ರಾಜಕಾರಣವನ್ನು ಬದಲಾಯಿಸುವುದು ಕಷ್ಟ’ ಎಂಬ ಮಾತುಗಳು ಸಂಪೂರ್ಣ ಸತ್ಯವಲ್ಲ ಅಂತ ಅನ್ನಿಸುತ್ತದೆ. ಜನ ಸರಿಯಿಲ್ಲ ಅಥವಾ ಅವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಮೇಲ್ನೋಟದ ಮಾತುಗಳು. ಆದರೆ ಆಳಕ್ಕಿಳಿದು, ಪ್ರಾಮಾಣಿಕವಾದ ಪರ್ಯಾಯವೊಂದನ್ನು ಅವರ ಮುಂದಿಟ್ಟರೆ, ದಿಲ್ಲಿಯ ಇವತ್ತಿನ ಮತದಾದರರು ಪ್ರದರ್ಶಿಸುತ್ತಿರುವ ಇಚ್ಚಾಶಕ್ತಿಯನ್ನು ದೇಶದ ಯಾವ ಭಾಗದಲ್ಲಾದರೂ ಖಂಡಿತಾ ನಿರೀಕ್ಷಿಸಬಹುದು. ಹೀಗಾಗಿಯೇ, ಈ ಬಾರಿಯ ದಿಲ್ಲಿ ಚುನಾವಣೆಯನ್ನು ಇತರೆ ಚುನಾವಣೆಗಳಂತೆ ಕೇವಲ ರಾಜಕೀಯ ಕದನಕ್ಕೆ ಸಮೀಕರಿಸಿ, ಸೋಲು-ಗೆಲವುಗಳ ಅಂತರದಿಂದ ಮಾತ್ರವೇ ಅಳೆಯುವ ಅಗತ್ಯವಿಲ್ಲ.

ಹಾಗಂತ ದಿಲ್ಲಿಯಲ್ಲಿ ನಡೆಯುತ್ತಿರುವ ಭಿನ್ನ ರಾಜಕೀಯ ಕದನಕ್ಕೆ ತನ್ನದೇ ಆದಂತಹ ಸಿದ್ಧತೆ ಇರುವುದು ಇಲ್ಲಿ ಕಂಡುಬರುತ್ತದೆ. anna-hazare-bhushans“ಅಣ್ಣಾ ಮುಂದಾಳತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಆರಂಭದ ದಿನಗಳಲ್ಲಿ ಆಕರ್ಷಿಸಿದ್ದು ಮದ್ಯಮ ವರ್ಗದ ಯುವ ಸಮುದಾಯವನ್ನು. ಯಾವುದೇ ಆಂದೋಲನ ಅಥವಾ ಚಳವಳಿಗೆ ತನ್ನದೇ ಆದ ಮಿತಿಗಳು ಇರುತ್ತವೆ. ಹೀಗಿರುವಾಗಲೇ ಇಡೀ ಆಂದೋಲದ ಮುಂದುವರಿದ ಭಾಗವಾಗಿ ಆಮ್‍ ಆದ್ಮಿ ಹುಟ್ಟಿಕೊಂಡಿತು. ಈ ಸಮಯದಲ್ಲೂ ಕೂಡ ರಾಜಕೀಯ ಸ್ಪಷ್ಟತೆಯ ಇರಲಿಲ್ಲ. ಉದಾಹರಣೆಗೆ ಮೀಸಲಾತಿ ವಿಚಾರದಲ್ಲಿ ಯಾವ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿತ್ತು,” ಎಂದು ಆಮ್‍ ಆದ್ಮಿ ಪಕ್ಷದ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದರು ಕಿರಣ್‍ ವಿಸ್ಸಾ. ಹಾಗೆ, ಅಸ್ಪಷ್ಟತೆಯೇ ನಡುವೆ ಚುನಾವಣೆಗೆ ಇಳಿದು, ಶೀಲಾ ದೀಕ್ಷಿತ್‍ರನ್ನು ಮಣಿಸಿದ್ದ ಆಪ್‍ಗೆ ಅಧಿಕಾರವೂ ಸಿಕ್ಕಿತ್ತು. ಬಹುಶಃ ಅವತ್ತಿಗಿದ್ದ ಮೆಚ್ಯುರಿಟಿಯನ್ನು ಇಟ್ಟುಕೊಂಡೇ ಆಪ್‍ ಸರಕಾರ 49 ದಿನಗಳಲ್ಲಿ ಸ್ಪಷ್ಟವಾಗಿ ಬಡಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು.kiran-kumar-vissa-aap “ಸಿಕ್ಕ 49 ದಿನಗಳಲ್ಲಿ ನಮ್ಮ ಮನೆಯ ಕರೆಂಟು ಬಿಲ್‍ ಕಡಿಮೆಯಾಯಿತು. ಏನೇ ಆಗಲಿ, ನಾವೇ ಕಟ್ಟಿದ ಟ್ಯಾಕ್ಸ್ ದುಡ್ಡಿನಲ್ಲಿ ನಮಗೆ ಅನುಕೂಲ ಮಾಡಿಕೊಡುವ ಮೊದಲ ಸರಕಾರವನ್ನು ನಾವು ನೋಡಿದ್ದೆವು. ಆದರೆ, ಅಧಿಕಾರ ಬಿಟ್ಟು ಕೆಳಗೆ ಇಳಿದಾಗ ಬೇಜಾಗಿತ್ತು,” ಎಂದರು ಗೋವಿಂದ್ ಬಿಲಾಲ್‍. ಇದು ದಿಲ್ಲಿಯಲ್ಲಿ ಆಪ್‍ ಪರವಾಗಿ ಮಾತನಾಡುವವರೂ ವ್ಯಕ್ತಪಡಿಸುವ ಸಾಮಾನ್ಯ ಭಿನ್ನಾಭಿಪ್ರಾಯ. ಆದರೆ, ಅವತ್ತಿಗಿನ್ನೂ ಮಧ್ಯಮ ವರ್ಗದ ಸ್ವಯಂ ಸೇವಕರು, ಕಾರ್ಯಕರ್ತರು ಮತ್ತು ಪಕ್ಷದ ಸ್ಥರದ ನಾಯಕತ್ವವನ್ನು ಹೊಂದಿದ್ದ ಆಪ್‍, ಸರಕಾರ ನಡೆಸುವ ವಿಚಾರ ಬಂದಾಗ ಹೇಗೆ ಸ್ಪಷ್ಟವಾಗಿ ಬಡ ಜನರ ಸಂಕಷ್ಟಗಳಿಗೆ ಸ್ಪಂದಿಸಿತು ಎಂಬುದೇ ಒಂದು ಸೋಜಿಗ.

ಅಲ್ಲಿಂದ ಮುಂದೆ ಆಮ್‍ ಆದ್ಮಿ ಪಕ್ಷದ ಒಡನಾಟ ನಿಜವಾದ ಜನ ಸಾಮಾನ್ಯ ಜನರ ಜತೆಗೆ ಹೆಚ್ಚಾಯಿತು. “ಒಂದು ಹಂತ ಕಳೆದ ನಂತರ, ವಿಶೇಷವಾಗಿ ಲೋಕಸಭಾ ಚುನಾವಣೆ ನಂತರ ನಾವು ಯಾರಿಗಾಗಿ ರಾಜಕೀಯ ಪಕ್ಷ ನಡೆಸಬೇಕು ಮತ್ತು ಅದರ ಉದ್ದೇಶಗಳು ಏನಿರಬೇಕು ಎಂಬುದು ಸ್ಪಷ್ಟವಾಯಿತು. ಆ ನಂತರ ಮತ್ತೆ ಮೀಸಲಾತಿ ವಿಚಾರದಲ್ಲಿ ಹೆಚ್ಚಿನ ಚರ್ಚೆ ನಡೆಯಲಿಲ್ಲ,” ಎಂದು ಕಿರಣ್‍ ವಿಸ್ಸಾ ವಿವರಿಸಿದ್ದರು. ಇವತ್ತು ದಿಲ್ಲಿಯಲ್ಲಿ ಆಮ್‍ ಆದ್ಮಿ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಮತ್ತು ಅದಕ್ಕೆ ಸಿಕ್ಕಿರುವ ಜನವರ್ಗದ ಬೆಂಬಲವನ್ನು ಗಮನಿಸಿದರೆ ಕಿರಣ್‍ ಅವರ ಮಾತುಗಳಲ್ಲಿನ ಸ್ಪಷ್ಟತೆ ಅರಿವಿಗೆ ಬರುತ್ತದೆ.

ಒಂದು ಕಡೆ ಆಪ್‍ನ ವೈಚಾರಿಕ ಸ್ಪಷ್ಟತೆ ರೂಪ ಪಡೆದುಕೊಳ್ಳುತ್ತಿರುವ ಹೊತ್ತಿಗೇ, ಚುನಾವಣೆ ರಾಜಕಾರಣದ ತಂತ್ರಗಳು ಪಕ್ಷದ ನಾಯಕತ್ವಕ್ಕೆ ಪಾಠ ಕಲಿಸುತ್ತ ಹೋದವು. ಅದರ ಕುರಿತು ಇನ್ನಷ್ಟು ಆಳವಾಗಿ ಮುಂದೆ ಯಾವಾಗಾದರೂ ಬರೆಯವುದು ಸೂಕ್ತ. ಇಲ್ಲೀಗ, ಮತದಾನದ ಭರಾಟೆ ಅಂತ್ಯವಾಗಿದೆ. ನಿನ್ನೆಯಷ್ಟೆ ಬೆಂಗಳೂರಿನಿಂದ ಕರೆ ಮಾಡಿದ್ದ ದೊಡ್ಡಿಪಾಳ್ಯ ನರಹಿಂಹಮೂರ್ತಿ, “ಬಿಜೆಪಿಯವರು ಕೊನೆಯ ಕ್ಷಣದಲ್ಲಿ ವೋಟಿಂಗ್‍ ಮಷೀನ್‍ಗಳನ್ನು ಬಿಜೆಪಿ ಪರವಾಗಿ ಬದಲಾಯಿಸಿದರೆ ಕತೆ ಏನು? ಪ್ರತಿ ಐದನೇ ಅಥವಾ ಆರನೇ ಮತ ಬಿಜೆಪಿಗೇ ಬೀಳುವಂತೆ ಮಾಡುವ ಸಾಧ್ಯತೆ ಇದೆಯಂತೆ,” aap-war-room-2015-delhiಎಂದು ಕಾಳಜಿ ಮತ್ತು ಆತಂಕವನ್ನು ವ್ಯಕ್ತಪಡಿಸಿದರು. ಬಹುಶಃ ಇವತ್ತು ಪರ್ಯಾಯದ ರಾಜಕಾರಣವನ್ನು ಮಾಡಬೇಕು ಎಂದರೆ, ಕೊನೆಯ ಹಂತದ ಇಂತಹ ಸಾಧ್ಯತೆಗಳ ಕುರಿತು ಗಮನಹರಿಸಬೇಕಿದೆ. ಹೀಗೊಂದು ಅಭಿಪ್ರಾಯವನ್ನು ಆಪ್‍ನ ಕಾರ್ಯಕರ್ತ ಚಂದನ್‍ ಮುಂದಿಟ್ಟರೆ, “ಈ ಬಗ್ಗೆ ನಮಗೂ ದೂರುಗಳು ಬಂದಿದ್ದವು. ಹೀಗಾಗಿ ಮತದಾನದ ದಿನ ಪಟೇಲ್‍ನಗರದ ಆಪ್‍ ಕಚೇರಿಯಲ್ಲಿ ‘ವಾರ್ ರೂಂ’ನ್ನು ಸ್ಥಾಪಿಸಿದ್ದೇವೆ. ದಿಲ್ಲಿಯ ಸೂಕ್ಷ್ಮ ಮತಗಟ್ಟೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ಅಮೆರಿಕಾ, ಲಂಡನ್‍, ಬೆಂಗಳೂರು ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಕುಳಿದ ಆಪ್‍ ಕಾರ್ಯಕರ್ತರು ವೀಕ್ಷಿಸುತ್ತಿದ್ದರು. ಅವರಿಂದ ಬರುವ ದೂರುಗಳನ್ನು ವರ್ಗೀಕರಿಸಿ ಎಲೆಕ್ಷನ್‍ ಕಮಿಷನ್‍ಗೆ ಕಳುಹಿಸಿದ್ದೇವೆ,” ಎಂದರು. ಏನೇ ಆಗಲಿ, ದಿಲ್ಲಿಯ ಮತದಾರರ ಮನಸ್ಸಿನಲ್ಲಿ ಏನಿದೆ ಎಂಬುದು ಫೆ. 10 ಬೆಳಗ್ಗೆ ಹನ್ನೊಂದರ ವೇಳೆಗೆ ಸ್ಪಷ್ಟವಾಗುತ್ತದೆ. ಅಲ್ಲೀವರೆಗೂ ಕಾಯದೆ ಬೇರೆ ವಿಧಿ ಇಲ್ಲ.

Leave a Reply

Your email address will not be published.