ಎಸ್.ಎಲ್.ಭೈರಪ್ಪ – ನನ್ನೊಳಗೆ ನಾ ತಿಳಿದುಕೊಳ್ಳಲು ನಿರಾಕರಿಸುವ ಜೀವವಿರೋಧಿ ಲೇಖಕ

– ಬಿ. ಶ್ರೀಪಾದ ಭಟ್

ಎಸ್.ಎಲ್.ಭೈರಪ್ಪನವರ ಹಿಂದೂತ್ವದ, ಹಿಂದೂ ಧರ್ಮದ ಪರವಾದ ಪೂರ್ವಗ್ರಹಪೀಡಿತ ಚಿಂತನೆಗಳ ಕುರಿತು, ಅವರ ಕವಲು, ಆವರಣ, ಯಾನ, ಅಂಚುಗಳಂತಹ ಮೂರನೇ ದರ್ಜೆಯ ಕಾದಂಬರಿಗಳಲ್ಲಿ ಅಡಕಗೊಂಡಿರುವ ಹಿಂದುತ್ವದ ಪ್ರತಿಪಾದನೆ, ಅನ್ಯ ಧರ್ಮದ ಕುರಿತಾದ ತೀವ್ರ ಅಸಹನೆ ಮತ್ತು ತಿರಸ್ಕಾರ, ಸನಾತನ ಧರ್ಮದ ಅಮಾನವೀಯ ತತ್ವಗಳು, ಆಧುನಿಕ ಮಹಿಳೆಯ ಕುರಿತಾದ ಕ್ರೌರ್ಯ ಮನಸ್ಥಿತಿಯ ಚಿಂತನೆಗಳ ಕುರಿತು ಮೊನ್ನೆ ಶ್ರವಣಬೆಳಗೋಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹೋರಾಟಗಾರ್ತಿ, ಲೇಖಕಿಯರಾದ kannada-sammelana-hassan-kavigoshtiಕೆ.ಎಸ್.ವಿಮಲ, ಕೆ.ಷರೀಫಾ, ಗೌರಿ ಲಂಕೇಶ್, ವಿನಯಾ, ಎಂ.ಎಸ್.ಆಶಾದೇವಿಯವರು ಪ್ರಬುದ್ಧವಾಗಿ ವಿಮರ್ಶಿಸಿ ಭೈರಪ್ಪನವರ ಕಾದಂಬರಿಗಳ ವಿಕೃತ ಮನಸ್ಥಿತಿಯ ಕುರಿತಾಗಿ ಅತ್ಯಂತ ಮಾನವೀಯ ನೆಲೆಯಲ್ಲಿ ವಿಶ್ಲೀಷಿಸುತ್ತಾ ಅದು ಹೇಗೆ ಒಬ್ಬ ಜನಪ್ರಿಯ ಲೇಖಕ ಮಹಿಳೆಯರ ಕುರಿತು ಜೀವವಿರೋಧಿ ಧೋರಣೆಯಲ್ಲಿ ನಿರಂತರವಾಗಿ ಬರೆಯಲು ಸಾಧ್ಯ ಎಂದು ದಿಟ್ಟವಾಗಿ ಪ್ರಶ್ನಿಸಿದ್ದಾರೆ. ಇದನ್ನು ಜನಪ್ರಿಯತೆ ಎಂದು ಕರೆಯುವುದಾದದರೆ ಅದು ಈ ನಾಡಿನ ದುರಂತವಷ್ಟೇ ಎಂದು ಭೈರಪ್ಪನವರ ಜನಪ್ರಿಯತೆಯ ಕುರಿತಾದ ಮಿಥ್ ಅನ್ನು ಸಾರ್ವಜನಿಕವಾಗಿ ಬಯಲುಗೊಳಿಸಿದ್ದಾರೆ.

ಕವಿ ಮಿಲ್ಟನ್ ಒಂದು ಕಡೆ ಜನಪ್ರಿಯತೆಯು ಪ್ರಾಣನಾಶಕ ಭೂಮಿಯ ಮೇಲೆ ಬೆಳೆಯುವ ಗಿಡವಲ್ಲ ಎಂದು ಬರೆಯುತ್ತಾನೆ. ಇದೇ ನೀತಿಯ ಆಧಾರದ ಮೇಲೆ ಭೈರಪ್ಪನವರ ಜನಪ್ರಿಯತೆ ಪ್ರಾಣನಾಶಕ ಭೂಮಿಯ ಮೇಲೆ ಬೆಳೆದಂತ ಗಿಡವೆಂದೇ ವಿಶ್ಲೇಷಿಸಬೇಕಾಗುತ್ತದೆ. ಅದನ್ನು ಮೇಲಿನ ನಮ್ಮ ಹೆಮ್ಮೆಯ vinaya-vakkunda-81st-kannada-sahitya-sammelana-shravanabelagolaಲೇಖಕಿಯರು ತಮ್ಮ ಸ್ಪಷ್ಟ ಮಾತುಗಳಲ್ಲಿ ವಿವರಿಸುತ್ತಾ ಇನ್ನೊಬ್ಬರ ಜೀವ, ಮತ್ತೊಬ್ಬರ ಬದುಕಿನ ಕುರಿತಾಗಿ ಒಬ್ಬ ಜನಪ್ರಿಯ ಲೇಖಕ ಇಷ್ಟೊಂದು ನಿರ್ಲಕ್ಷ್ಯದಿಂದ, ಸದಾ ದ್ವೇಷಿಸುವ ಮನಸ್ಥಿತಿಯಿಂದ ಬರೆಯಲು ಹೇಗೆ ಸಾಧ್ಯ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ನಾವು ಏನನ್ನು ಆರಿಸಿಕೊಳ್ಳುತ್ತೇವೆಯೋ ಅದು ಸದಾಕಾಲವೂ ಉತ್ತಮ ತರದಾಗಿರಬೇಕಿರುತ್ತದೆ. ಈ ಉತ್ತಮತನವು ಎಲ್ಲಾ ಧರ್ಮ, ಜಾತಿಗಳ ಒಳಿತನ್ನು ಒಳಗೊಂಡಿರಬೇಕಾಗಿರುತ್ತದೆ. ಆದರೆ ಜನಪ್ರಿಯ ಲೇಖಕ ಭೈರಪ್ಪನವರ ಚಿಂತನೆಗಳಲ್ಲಿ ಈ ಒಳಗೊಳ್ಳುವಿಕೆಯ ಧೋರಣೆಗಳ ಯಾವ ಲಕ್ಷಣಗಳೂ ಇಲ್ಲ. ಸತ್ಯದ ವಿವಿಧ ಮುಖಗಳನ್ನು ಗ್ರಹಿಸಬೇಕಾದ ಲೇಖಕ ಅದನ್ನು ನಿರಾಕರಿಸಿ ಸುಳ್ಳುಗಳನ್ನು ಕಾದಂಬರಿಗಳನ್ನಾಗಿಸಿದರೆ ಪ್ರಜ್ಞಾವಂತರು ತೀಕ್ಷಣವಾಗಿ ಅದನ್ನು ವಿಮರ್ಶಿಸಲೇಬೇಕಾಗುತ್ತದೆ. ಆದರೆ ಸುಳ್ಳುಗಳು ತಂದುಕೊಡುವ ಈ ಭೈರಪ್ಪನವರ ಮಾದರಿಯ ಜನಪ್ರಿಯತೆಗಳು ವ್ಯವಸ್ಥೆಯಲ್ಲಿ ನಿರ್ಲಜ್ಜತೆಯನ್ನು, ಪೂರ್ವಗ್ರಹಗಳನ್ನು, ಹಳಸಲು ವಾದಗಳನ್ನು, ಹಿಂಸಾತ್ಮಕ ವರ್ತನೆಗಳನ್ನು ಮಾತ್ರ ಹುಟ್ಟುಹಾಕಲು ಸಾಧ್ಯ. ಭೈರಪ್ಪನವರ ಮಾದರಿಯ ಈ ಹುಸಿ ಜನಪ್ರಿಯತೆಗಳು ಫೆನಟಿಸಂ ವ್ಯಕ್ತಿತ್ವದ ಲುಂಪೆನ್ ಮತಾಂಧರ ಕೈಯಲ್ಲಿ ಸಿಟ್ಟು, ದ್ವೇಷ, ಮತ್ಸರದ ಆಯುಧಗಳಾಗುತ್ತವೆ. ಆದರೆ ಭೈರಪ್ಪನವರಂತಹ ಹಿರಿಯ ಲೇಖಕರು ದಶಕಗಳ ಕಾಲ ಈ ನೆಲದಲ್ಲಿನ ರಕ್ತಪಾತಗಳು, ಮತೀಯ ದ್ವೇಷಗಳಿಂದ ಏನನ್ನೂ ಅರಿಯಲಿಲ್ಲವೇ ಎನ್ನುವ ಪ್ರಶ್ನೆಯೇ ಅಪ್ರಸ್ತುತ. ಏಕೆಂದರೆ ಲಂಕೇಶ್ ಮನುಷ್ಯ ಶತಮಾನಗಳು, ವರ್ಷಗಳು ಉರುಳಿದಂತೆ ಉತ್ತಮನಾಗುತ್ತಾನೆಯೇ? ಶಿಕ್ಷಣವಾಗಲಿ, ಕಷ್ಟಗಳಾಗಲಿ, ದುರಂತವಾಗಲಿ ಇವನಿಗೆ ಪಾಠ ಕಲಿಸುತ್ತವೆಯೇ? ಈ ಪ್ರಶ್ನೆಗೆ ನಮ್ಮ ಎದುರಿನ ವಾಸ್ತವ ಇಲ್ಲ ಎಂದು ಉತ್ತರಿಸುತ್ತದೆ ಎಂದು ಬರೆಯುತ್ತಾರೆ. ಇದು ಕಟುವಾಸ್ತವ. ಇಂದು ಭೈರಪ್ಪನವರಂತಹ ಒಬ್ಬ ಜೀವ ವಿರೋಧಿ ನೆಲೆಯ ಜನಪ್ರಿಯ ಲೇಖಕರ ಉದಾಹರಣೆ ನಮ್ಮ ಕಣ್ಣ ಮುಂದಿದೆ.

ಏಕೆಂದರೆ ಹಿಂದೂ ಧರ್ಮದ ಶಕ್ತಿಯ ಕುರಿತಾಗಿ ಮಾತನಾಡುವ ಭೈರಪ್ಪನವರು ಆ ಮೂಲಕ ನೇರವಾಗಿ ಪ್ರತಿಪಾದಿಸುತ್ತಿರುವುದು ಬ್ರಾಹ್ಮಣ್ಯದ ಪುರುತ್ಥಾನವನ್ನು. ವೈದಿಕ ವ್ಯವಸ್ಥೆ ಅಪಾಯವಲ್ಲ ಎಂದೇ ಹೇಳುವ ಭೈರಪ್ಪನವರು ಒಬ್ಬ ತತ್ವಶಾಸ್ತ್ರದ ಮೇಷ್ಟ್ರು ಎನ್ನುವುದು ಇಂದಿಗೂ ಒಂದು ಚೋದ್ಯ. ಭೈರಪ್ಪನವರ ಭಾರತೀಯ ತತ್ವಮೀಮಾಂಸೆ ಅಂದರೆ ವೈದಿಕ ಮೀಮಾಂಸೆ. ಭೈರಪ್ಪನವರ ತತ್ವಶಾಸ್ತ್ರದ ಅನುಸಾರ ಮನುಷ್ಯನ ಅರಿವಿನ ಪ್ರಕ್ರಿಯೆ ಎಂದರೆ ಪೊಳ್ಳುತನದ, ಡಾಂಭಿಕತೆಯ ಧರ್ಮದ ಕಡೆಗೆ ಹಿಮ್ಮುಖವಾಗಿ ಶತಮಾನಗಳ ಹಿಂದಿನ ಕಾಲಕ್ಕೆ ಚಲಿಸುವುದು. Bhyrappaತಮ್ಮೊಳಗಿನ ಪ್ರತ್ಯೇಕತೆ, ತಾರತಮ್ಯದ ಲಕ್ಷಣಗಳನ್ನು ತಮ್ಮ ಕಾದಂಬರಿಗಳ ಮೂಲಕ ಸಮಾಜಕ್ಕೆ ಹಂಚುವುದು, ಪರಂಪರೆಯ ವೈಭವೀಕರಣವನ್ನು ಹೆಗಲಿಗೇರಿಸಿಕೊಂಡು ಶುಷ್ಕವಾದ, ಒಣ ಪಾಂಡಿತ್ಯದ ಪ್ರದರ್ಶನ ಸಹ ಭೈರಪ್ಪನವರ ತತ್ವಶಾಸ್ತ್ರದ ಲಕ್ಷಣಗಳಲ್ಲೊಂದು. ತಮ್ಮ ಬಹುಪಾಲು ಕಾದಂಬರಿಗಳಲ್ಲಿ ಹಿಂದುತ್ವದ ಪ್ರತಿಮೆಗಳನ್ನು ಕಟ್ಟುತ್ತಾ ಅದರ ಶ್ರೇಷ್ಠತೆಯನ್ನೇ ಧ್ಯಾನಿಸುವ,ಓದುಗರ ಮೇಲೆ ಬಲವಂತವಾಗಿ ಹೇರುವ ಭೈರಪ್ಪನವರು ಒಬ್ಬ ಜೀವವಿರೋಧಿ ಲೇಖಕ ಎನ್ನದೆ ವಿಧಿಯಿಲ್ಲ.

ಆದರೆ ಚಂದ್ರಕಾಂತ ಪೋಕಳೆಯವರು ಈ ಎಲ್ಲಾ ಸೂಕ್ಷ್ಮತೆಗಳನ್ನು ಗಾಳಿಗೆ ತೂರಿ ಭೈರಪ್ಪನವರು ಅದು ಹೇಗೆ ಜನಪ್ರಿಯ, ಅದು ಹೇಗೆ ರಾಷ್ಟ್ರೀಯ ಮಟ್ಟದಲ್ಲಿ ಭೈರಪ್ಪನವರು ಪ್ರಸಿದ್ಧಿಯಾಗಿದ್ದಾರೆ ಎಂದು ಬರೆದಿರುವ ಧೋರಣೆಯನ್ನು ನಾವಂತೂ ಒಪ್ಪಲು ಸಾಧ್ಯವಿಲ್ಲ. ಎಲ್ಲಿಯೂ ಚರ್ಚೆಗೆ ಆಸ್ಪದ ಕೊಡದಂತೆ ನಿರರ್ಗಳವಾಗಿ ವಿತಂಡವಾದವನ್ನು ಮಂಡಿಸಿರುವ ಪೋಕಳೆಯವರ ಈ ಅಭಿಪ್ರಾಯಗಳು ನಿಷ್ಠುರತೆ, ಪ್ರಾಮಾಣಿಕತೆಯ ಕೊರತೆಯನ್ನು ಎದುರಿಸುತ್ತಿವೆ (ಪ್ರಜಾವಾಣಿ ಸಂಗತ).

ಆದರೆ ಇವರಿಗಿಂತಲೂ ಅಸಹ್ಯವಾಗಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಕಾರಿಕೊಂಡಿರುವ ಪ್ರತಾಪ ಸಿಂಹ ಎನ್ನುವ ಹಾಲಿ ಸಂಸದ ತನ್ನ ಲೇಖನದಲ್ಲಿ ಸೌಜನ್ಯ, ಕನಿಷ್ಠ ನೀತಿಸಂಹಿತೆಗಳನ್ನು ಪ್ರದರ್ಶಿಸದೆ ಕೀಳು ಮಟ್ಟದಲ್ಲಿ ತನ್ನ ಅಸಹನೆಯನ್ನು ವ್ಯಕ್ತಪಡಿಸಿರುವುದು ತಿರಸ್ಕಾರಕ್ಕೆ ಮಾತ್ರ ಯೋಗ್ಯವಾಗಿದೆ. ಸಂವಾದ ನಡೆಸಲು ನಿರಾಕರಿಸುವ ಈ ಪ್ರತಾಪಸಿಂಹ ಶಬ್ದಗಳ ಮೂಲಕ ಸೃಷ್ಟಿಸುವ ಅಪಾಯಕಾರಿ, ದ್ವೇಷದ ಸಾಲುಗಳು ಮಾನವ ವಿರೋಧಿ ಧೋರಣೆಗಳಿಗೆ ಸಂಕೇತಗಳಾಗಿವೆ. ಕ್ಷುಲ್ಲಕವಾದ, ಅಸಭ್ಯ ಚಿಂತನೆಗಳ ಪ್ರತೀಕವಾದ ಈ ಮಾದರಿಯ ಲೇಖನಗಳು ಓದುಗರನ್ನು ಉನ್ಮಾದಗೊಳಿಸುವಲ್ಲಿ ಪ್ರಯತ್ನಿಸುತ್ತವಾದರೂ ಕಡೆಗೆ ದಯನೀಯವಾಗಿ ಸೋಲುತ್ತವೆ. ಹಿಂದೂ ಧರ್ಮದ ಪರಿಪಾಲನೆಯ ಶ್ರೇಷ್ಠತೆಯ ಕುರಿತಾಗಿ ಸಾರ್ವಜನಿಕವಾಗಿ ಅನೈತಿಕವಾಗಿ ಮಾತನಾಡುವ ಪ್ರತಾಪ ಸಿಂಹರಂತಹ ಸಂಸದರ ಅಪಾಯಕಾರಿ ನಿಲುವುಗಳು ಆಳದಲ್ಲಿ ಧಾರ್ಮಿಕ ಮೂಲಭೂತವಾದವನ್ನು ಅಡಗಿಸಿಕೊಂಡಿವೆ. ಸಾರ್ವಜನಿಕವಾಗಿ ಅತ್ಯಂತ ವಿರೂಪವಾಗಿ ಪ್ರಕಟಗೊಳ್ಳುವ ಈ ಸಿಂಹರಂತಹವರ ವರ್ತನೆಗಳು ಯಜಮಾನ್ಯ ಶಕ್ತಿಯನ್ನು ಹೇರಲು ಪ್ರಯತ್ನಿಸುತ್ತವೆ. ಮತೀಯ ಧೂರ್ತತನವನ್ನು ಹೊದ್ದುಕೊಂಡ ಈ ವಿಕೃತ ಸ್ವರೂಪದ ಚಿಂತನೆಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವಂತಿಕೆಗೆ ಅಪಾಯಕಾರಿಯಾಗಿವೆ. ಬೇಜವಬ್ದಾರಿಯುತ ರಾಜಕಾರಣಿಯಾಗಿ ಹಿಂದೂಯಿಸಂನ ಹತಾರಗಳನ್ನು ಬಳಸಿಕೊಳ್ಳುವ ಪ್ರತಾಪ ಸಿಂಹರ ವರ್ತನೆಗಳು ಕೇವಲ ಬಾಲಿಶವಲ್ಲ ಎಂದು ನಾವು ಅರಿಯಬೇಕು. ಏಕೆಂದರೆ ಈ ವ್ಯಕ್ತಿ ಒಬ್ಬ ಸಂಸದ ಸಹ.

ಶ್ರವಣಬೆಳಗೋಳದಲ್ಲಿ ನಮ್ಮ ಹೋರಾಟಗಾರ್ತಿ, ಲೇಖಕಿಯರು ತಾವು ಸ್ವತಹ ನಡೆಯುವುದರ ಮೂಲಕ ಹೊಸ ದಾರಿಯನ್ನು ರೂಪಿಸಿದ್ದಾರೆ. ನನ್ನೊಳಗೆ ನಾ ತಿಳಿದುಕೊಳ್ಳಲು ನಿರಾಕರಿಸುವ ಭೈರಪ್ಪನವರಂತಹ ಜನಪ್ರಿಯ ಸಾಹಿತಿಗಳನ್ನು, ರಾಷ್ಟ್ರೀಯ ಪ್ರ್ರಾಧ್ಯಾಪಕರನ್ನು ಸತ್ಯದ, ಮಾನವೀಯ ನೆಲೆಯಲ್ಲಿ ಸಮರ್ಥವಾಗಿ ವಿಮರ್ಶಿಸಿದ್ದಾರೆ. ಇಲ್ಲಿನ ಮೂಢ ನಂಬಿಕೆಗಳನ್ನು, ಸ್ತ್ರೀ ವಿರೋಧಿ ಧೋರಣೆಗಳನ್ನು ಪ್ರತಿಪಾದಿಸುವ ಭೈರಪ್ಪನವರ ಚಿಂತನೆಗಳ ವಿರುದ್ಧ ನಿಷ್ಠುರವಾದ, ಸಕಾರಾತ್ಮಕವಾದ, ಮೌಲಿಕವಾದ ತಕರಾರುಗಳನ್ನು ಎತ್ತಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಹೊಸ ಸಂವಾದಗಳಿಗೆ, ಚರ್ಚೆಗಳಿಗೆ ಕಿಟಿಕಿಯನ್ನು ತೆರದಿದ್ದಾರೆ. ಈ ನಮ್ಮ ಕಿರಗೂರಿನ ಗಯ್ಯಾಳಿಗಳಿಗೆ ಥ್ಯಾಂಕ್ಸ್.

13 thoughts on “ಎಸ್.ಎಲ್.ಭೈರಪ್ಪ – ನನ್ನೊಳಗೆ ನಾ ತಿಳಿದುಕೊಳ್ಳಲು ನಿರಾಕರಿಸುವ ಜೀವವಿರೋಧಿ ಲೇಖಕ

 1. ಕ್ರಾಂತಿಕೇಶ್ವರ

  ಹಹ್ಹ! ನಮ್ಮ ಶ್ರೀಪಾದ ಅವರಿಂದ ಬಹಳ ದಿನಗಳ ನಂತರ ಒಂದು ತಮಾಷೆಯ ಬರಹ. ಓದಿ ಹೊಟ್ಟೆ ಹುಣ್ಣಾಗುವಷ್ಟು ನಗು ಬಂತು.

  Reply
  1. CHARLES BRICKLAYER

   ನಗು ಆರೋಗ್ಯಕ್ಕೆ ಒಳ್ಳೆಯದು,ಆರೋಗ್ಯ ಸುಧಾರಿಸಿದ ಮೇಲೆ ಮತ್ತಷ್ಟು ಬಾರಿ ಓದಿ

   Reply
   1. ಕ್ರಾಂತಿಕೇಶ್ವರ

    ನನ್ನ ನಗು ನಿಮಗೆ ಕಜ್ಜಿ ತುರಿಕೆ ಉಂಟು ಮಾಡಿದೆ ಅಂತ ಕಾಣುತ್ತದೆ. ಮನಸೋ ಇಚ್ಛೆ ತುರಿಸಿಕೊಳ್ಳಿ ಆದರೆ ಅದನ್ನೇ ಮುಂದುವರೆಸಿದರೆ ಗಾಯವಾಗಿ ರಕ್ತ ಬಂದೀತು.

    Reply
 2. ಅಭಿನವ ಚನ್ನಬಸವಣ್ಣ

  ಶ್ರೀಪಾದ್, ನಾನು ಭೈರಪ್ಪನವರನ್ನು ತಾತ್ವಿಕವಾಗಿ ವಿರೋಧಿಸುತ್ತೇನೆ. ಆದರೆ ಅವರ ಕವಲು, ವಂಶ ವೃಕ್ಷ ಮೊದಲಾದ ಸ್ತ್ರೀ ವಿರೋಧಿ ಕಾದಂಬರಿಗಳು ಕನ್ನಡದ ಮಹಿಳಾ ಓದುಗರಲ್ಲೂ ಬಹಳ ಜನಪ್ರಿಯವಾಗಿವೆ ಎಂಬ ಸತ್ಯವನ್ನು ನಿರಾಕರಿಸಲಾರೆ. ಮಹಿಳಾ ಸಾಹಿತಿಗಳು ವಿಮರ್ಶಕರು ಏನೇ ಹೇಳಲಿ ಕನ್ನಡದ ಮಹಿಳಾ ಓದುಗರಿಗೆ ಮಾತ್ರ ಭೈರಪ್ಪನವರ ಕಾದಂಬರಿಗಳು ಬಹಳ ಆಪ್ತವಾಗಿವೆ. ಕನ್ನಡದ ಓದುಗರ ಒಳಲಯವನ್ನು ಪ್ರಭಾವಿಸಲು ಭೈರಪ್ಪನವರಿಗೆ ಸಾಧ್ಯವಾದದ್ದು ಸಾಯಿಸುತೆ, ಟಿ ಕೆ ರಾಮರಾವ್, ಯಂಡಮೂರಿ ವೀರೇಂದ್ರನಾಥ್, ಬಿ ಎಲ್ ವೇಣು ಅವರಂತಹ ಜನಪ್ರಿಯ ಸಾಹಿತಿಗಳಿಗೇಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಯನ್ನು ಮಹಿಳಾ ಸಾಹಿತಿಗಳು ಎದುರಿಸಬೇಕಾಗಿದೆ. ಆದುದರಿಂದ ಸಾಹಿತ್ಯ ಸಮ್ಮೇಳನಗಳಲ್ಲಿ ಭೈರಪ್ಪನವರನ್ನು ಜೀವವಿರೋಧಿ ಸ್ತ್ರೀವಿರೋಧಿ ಎಂದು ಟೀಕಿಸುವುದರಿಂದ ಮಾತ್ರ ಭೈರಪ್ಪನವರು ಪ್ರತಿನಿಧಿರುವ ಯಜಮಾನ್ಯ ವ್ಯವಸ್ಥೆ ಹಾಗೂ ಬ್ರಾಹ್ಮಣ್ಯವನ್ನು ನ್ಯೂಟ್ರಲೈಸ್ ಮಾಡಲು ಸಾಧ್ಯವಿಲ್ಲ. ಭೈರಪ್ಪನವರ ಕಾದಂಬರಿಗಳು ಕನ್ನಡದ ಓದುಗರ ಪ್ರಜ್ಞಾಸ್ಥರದ ಮೇಲೆ ಮಾಡಿರುವ ಅನನ್ಯ ಪ್ರಭಾವಕ್ಕೆ ಕಾರಣವನ್ನು ಹುಡುಕಬೇಕಾಗಿದೆ. ಭೈರಪ್ಪನವರ ಯಶಸ್ಸಿನ ಸೀಕ್ರೆಟ್ ಸಾಸ್ ಏನು ಎಂದು ಪತ್ತೆ ಹಿಡಿದ ಮೇಲೆ ಅವರ ಅಪಾಯಕಾರಿ ಅಜೆಂಡಾವನ್ನು ಕೌಂಟರ್ ಮಾಡಲು ಸಾಧ್ಯ. ಸಾಹಿತ್ಯ ಸಮ್ಮೇಳನ ಮುಗಿದ ಮೇಲಾದರೂ ನಮ್ಮ ಪ್ರಗತಿಪರ ಮಹಿಳಾ ಸಾಹಿತಿಗಳು ಈ ಕೆಲಸ ಮಾಡತಕ್ಕದ್ದು.

  Reply
  1. M A Sriranga

   ಒಂದೊಂದು ಬ್ಲಾಗಿನಲ್ಲಿ ಒಂದೊಂದು ಹೆಸರಿನಿಂದ ಪ್ರತಿಕ್ರಿಯೆ ಬರೆಯುವ ಅಭಿನವ ಚನ್ನಬಸವಣ್ಣ ಆಲಿಯಾಸ್ ನಾಗಶೆಟ್ಟಿ ಶೆಟ್ಕರ್ ಅವರಿಗೆ — ಭೈರಪ್ಪನವರ ಕಾದಂಬರಿಗಳನ್ನು ಜನಗಳು ಏಕೆ ಅಷ್ಟೊಂದು ಸಂಖ್ಯೆಯಲ್ಲಿ ಕೊಂಡು ಓದುತ್ತಾರೆ ಎಂಬ ಪ್ರಶ್ನೆಗೆ ಕನ್ನಡದ ವಿಮರ್ಶಕರು ಉತ್ತರ ಕಂಡು ಹಿಡಿಯಲು ಪ್ರಾರಂಭಿಸಿ ಈಗಾಗಲೇ ಮೂರು ನಾಲ್ಕು ದಶಕಗಳಾಗುತ್ತಾ ಬಂತು. ಉತ್ತರ ಮಾತ್ರ ಸಿಕ್ಕಿಲ್ಲ. ತಮ್ಮ ಇಷ್ಟು ವಿರೋಧದ ನಂತರವೂ ಅದು ಹೇಗೆ ಭೈರಪ್ಪನವರು ದಿನೇ ದಿನೇ ಜನಪ್ರಿಯರಾಗುತ್ತಿದ್ದಾರೆ ಎಂಬುದೇ ವಿಮರ್ಶಕರಿಗೆ ಸೋಜಿಗವಾಗಿದೆ. ಈಗ ಪ್ರಗತಿಪರ ಮಹಿಳಾ ಲೇಖಕಿಯರು, ಪತ್ರಕರ್ತರು,ಸಾಹಿತಿಗಳು ಮತ್ತು ವಿಮರ್ಶಕರ ಸರದಿ. ಅವರು ಮುಂದುವರಿಸಲಿ. ಬೇಡವೆಂದವರಾರು? ಆದರೆ ಒಬ್ಬ ಲೇಖಕನನ್ನು ‘ಮನುಷ್ಯ’ ಎಂದು ನಾನು ಭಾವಿಸುವುದೇ ಇಲ್ಲ ಎಂಬ ಪ್ರಗತಿಪರ” ಪತ್ರಿಕಾಕರ್ತೆ, ವಿಮರ್ಶಕಿ ಮತ್ತು ಚಿಂತಕಿಯರು/ಚಿಂತಕರು ಅವರುಗಳ ಮಾತು ಅಸಹನೆಯ ಪರಮಾವಧಿ. ಆ ಮೂಲಕ ಒಬ್ಬ ಲೇಖಕನ ಕೃತಿಗಳನ್ನು ಓದುತ್ತಿರುವವರೂ ಮನುಷ್ಯರಲ್ಲ ಎಂದು ಪರೋಕ್ಷವಾಗಿ ನಿಂದಿಸಿದಂತೆ ಆಗುವುದಿಲ್ಲವೇ? ಇದೇ ಏನು ನಿಮ್ಮ ಪ್ರಗತಿಪರತೆ?

   Reply
 3. BNS

  ಕನ್ನಡದ ವಿಮರ್ಶಾವಲಯದ ಅತಿಮುಖ್ಯದೋಷವೆಂದರೆ ಕರ್ತೃಕೇಂದ್ರಿತ ವಿಮರ್ಶೆ. ಕೃತಿಕೇಂದ್ರಿತ ವಿಮರ್ಶೆ ಎನ್ನುವುದನ್ನು ತಮ್ಮ ತಮ್ಮ ಐಡಿಯಾಲಜಿಯ ಮೂಗಿನ ನೇರಕ್ಕೆ ತಮಗೆ ತೋಚಿದ ಬಣ್ಣದ ಕನ್ನಡಕಗಳಲ್ಲಿ ನೋಡುವ ಪ್ರವೃತ್ತಿಯಿಂದ ಕೃತಿಯ ವಸ್ತುನಿಷ್ಠ ಅಧ್ಯಯನವಾಗಲೀ, ವಿಮರ್ಶೆಯಾಗಲೀ ಬರಲು ಸಾಧ್ಯವಿಲ್ಲ. ಎಸ್ ಎಲ್ ಭೈರಪ್ಪನವರ ಕೃತಿಗಳಿಗೂ ಇದೇ ಹಣೆಯಬರಹ ಆಗಿದ್ದರಲ್ಲಿ ನನಗೆ ಆಶ್ಚರ್ಯ ಆಗುವುದಿಲ್ಲ. ಅವರ ಆತ್ಮಚರಿತ್ರೆಯಾದ “ಭಿತ್ತಿ” ಯಲ್ಲಿ ತಮ್ಮ ಒಂದು ಕೃತಿಯಾದ ‘ಪರ್ವ’ದ ಬಗ್ಗೆ ಕರ್ನಾಟಕದ ಅಗ್ರಣೀ ವಿಮರ್ಶಕರಾದ ಶ್ರೀ ಕೀರ್ತಿನಾಥ ಕುರ್ತಕೋಟಿಯವರು ಪ್ರಾರಂಭಿಸಿದ ವಿಮರ್ಶೆಯನ್ನು ಕವಿ ದ.ರಾ. ಬೇಂದ್ರೆಯವರು ಹೇಗೆ ತುಂಡರಿಸಿದರು ಎನ್ನುವುದನ್ನು ವಿವರಿಸಿದ್ದಾರೆ.

  ಕಾದಂಬರಿಯೊಂದರಲ್ಲಿ ಶಕ್ತ, ಅಶಕ್ತ ಪಾತ್ರಗಳು ಸಮಾಜದಲ್ಲಿದ್ದಂತೆಯೇ ಇದ್ದರೆ ಅದು ನೈಜವಾಗಿರುತ್ತದೆ. ಭೈರಪ್ಪನವರ ಕಾದಂಬರಿಗಳ ವಿಮರ್ಶೆ ನನ್ನ ಪ್ರತಿಕ್ರಿಯೆಯ ಉದ್ದೇಶವಲ್ಲ. ಆದರೆ ಅವರು ಸ್ತ್ರೀ ಪಾತ್ರಗಳನ್ನು ‘ವಿಲನ್’ ಆಗಿ ಚಿತ್ರಿಸುತ್ತಾರೆ ಎನ್ನುವ ಆರೋಪಕ್ಕೆ ಹುರುಳಿಲ್ಲ. ‘ಸಾಕ್ಷಿ’ ಕಾದಂಬರಿಯ ಲಕ್ಕು ಮತ್ತು ಸರೋಜಾಕ್ಷಿ ಎಂಬ ಎರಡು ಹೆಣ್ಣು ಪಾತ್ರಗಳು ಇಂದಿಗೂ ಹೆಣ್ಣಿನ ಅಬಲೆ ಎನ್ನುವ ಕಲ್ಪನೆಗೆ ಸವಾಲನ್ನು ಒಡ್ಡುತ್ತವೆ. ಎಲ್ಲ ರೀತಿಯ ಮಾನವಸಹಜ ದೌರ್ಬಲ್ಯಗಳ ಮಿತಿಯಲ್ಲಿ ಮಂಜಯ್ಯನಂತಹ ನೀತಿಬಾಹಿರ, ಚಾಣಾಕ್ಷ ಮನುಷ್ಯನನ್ನು ಲಕ್ಕು ದೈಹಿಕವಾಗಿ, ಮತ್ತು ಸರೋಜಾಕ್ಷಿ ಮಾನಸಿಕವಾಗಿ ಹಣಿಯುವ ರೀತಿ ಸ್ತ್ರೀಯರ ಅಂತಃಶಕ್ತಿಯ ಅತ್ಯಂತ ಪ್ರಖರ ನಿರೂಪಣೆ ಎಂದು ನನ್ನ ಅಭಿಪ್ರಾಯ.

  ಕಡೆಯದಾಗಿ ಮತ್ತೊಂದು ಪತ್ರಿಕೆಯಲ್ಲಿ ಬರೆದಿದ್ದ ನನ್ನ ಪ್ರತಿಕ್ರಿಯೆಯ ತಾತ್ಪರ್ಯ: ಲಂಕೇಶರ ‘ಮುಟ್ಟಾದ ಹೆಂಗಸರು ಮೂರುದಿನ ಕೂತು ಓದುವಂತಹ ಕಾದಂಬರಿ ಭೈರಪ್ಪ ಬರೀತಾರೆ’ ಎಂದು ಹೇಳುವ ಮಾತಿನಲ್ಲಿ ಸ್ತ್ರೀಯರ ಬಗ್ಗೆ, ಅವರ ಮಾಸಿಕ ಋತುಚಕ್ರದ ಬಗ್ಗೆ, ಅವರ ಬೌದ್ಧಿಕ ಕ್ಷಮತೆಯ ಬಗ್ಗೆ, ಕಡೆಗೆ ಅವರ ಅಸ್ತಿತ್ವದ ಬಗ್ಗೆಯೇ ಇರುವ ತಿರಸ್ಕಾರಕ್ಕಿಂತ ಹೆಚ್ಚಿನ ಸ್ತ್ರೀ ಅವಹೇಳನ ಭೈರಪ್ಪನವರ ಕೃತಿಗಳಲ್ಲಿ ನನಗಂತೂ ಕಾಣಲಿಲ್ಲ!

  Reply
  1. ಅಭಿನವ ಚನ್ನಬಸವಣ್ಣ

   ಲಂಕೇಶ್ ಅವರು ಕನ್ನಡದ ಮಹಿಳಾ ಸಾಹಿತಿಗಳಿಗೆ ವ್ಹಿಸ್ಕಿ ಆಸ್ವಾದಿಸುವುದನ್ನು ಕಳಿಸಿಕೊಟ್ಟವರು. ತನ್ಮೂಲಕ ಸಮಾನತೆಯನ್ನು ಮೆರೆದವರು. ಅಂತಹವರ ಬಗ್ಗೆ ಗೌರವದಿಂದ ಮಾತನಾಡುವುದನ್ನು ಕಲಿಯಿರಿ.

   Reply
   1. M A Sriranga

    ಅಭಿನವ ಚನ್ನಬಸವಣ್ಣ ಅವರಿಗೆ—- ನಮ್ಮ ಹಳ್ಳಿಗಳಲ್ಲಿ ಸೇಂದಿ,ಸಾರಾಯಿ ಸೇವಿಸುವ ಹೆಂಗಸರು ಮೂವತ್ತು ನಲವತ್ತು ವರ್ಷಗಳ ಹಿಂದೆಯೇ ಇದ್ದರು. ವಿಸ್ಕಿ ಕೊಂಡುಕೊಳ್ಳುವಷ್ಟು ಹಣ ಇದ್ದರೆ ಅದನ್ನೇ ಕುಡಿಯುತ್ತಿದ್ದರು. ಅವರಿಗೆ ಸಾಹಿತ್ಯ ಎಂದರೇನು ಎಂದು ಗೊತ್ತಿಲ್ಲ. ಹೀಗಿರುವಾಗ ಇಂದಿನ ಮಹಿಳಾ ಸಾಹಿತಿಗಳಿಗೆ, ಉದ್ಯೋಗಸ್ತ ಮಹಿಳೆಯರಿಗೆ, ಶ್ರೀಮಂತ ಮಹಿಳೆಯರಿಗೆ ಯಾರೋ ಒಬ್ಬ ಸಾಹಿತಿ ವಿಸ್ಕಿ ಆಸ್ವಾದಿಸಲು ಕಲಿಸಿಕೊಟ್ಟರು ಎಂಬುದರಲ್ಲಿ ಏನು ವಿಶೇಷವಿದೆ?

    Reply
    1. ಅಭಿನವ ಚನ್ನಬಸವಣ್ಣ

     ಸಾಹಿತ್ಯ ಲೋಕದಲ್ಲಿ ವ್ಹಿಸ್ಕಿ ಸೇವನೆಗೆ ಪ್ರಾಮುಖ್ಯತೆ ಇದೆ. ಲಂಕೇಶ್ ಅವರ ಪೂರ್ವ ಕಾಲದಲ್ಲಿ ವ್ಹಿಸ್ಕಿ ಸೇವನೆ ಕೇವಲ ಗಂಡು ಸಾಹಿತಿಗಳಿಗೆ ಸೀಮಿತವಾಗಿತ್ತು. ಹೆಣ್ಣು ಸಾಹಿತಿಗಳನ್ನು ವೈದಿಕ ಸಂಪ್ರದಾಯದ ಕಟ್ಟುನಿಟ್ಟುಗಳು ವ್ಹಿಸ್ಕಿ ಸೇವನೆ ಮಾಡದಂತೆ ತಡೆ ಒಡ್ಡಿದ್ದವು. ಲಂಕೇಶ್ ಅವರು ಸಾಹಿತ್ಯಲೋಕದಲ್ಲಿ ಇದ್ದ ಈ ತಾರತಮ್ಯಕ್ಕೆ ಕೊಡಲಿ ಪೆಟ್ಟು ಕೊಟ್ಟರು. ಲಂಕೇಶ ಕೊಟ್ಟ ಪ್ರೋತ್ಸಾಹದಿಂದ ಅನೇಕ ಹೆಣ್ಣು ಸಾಹಿತಿಗಳು ವ್ಹಿಸ್ಕಿ ಸೇವನೆ ಮಾಡಲು ಧೈರ್ಯ ಮಾಡಿದರು ಹಾಗೂ ವೈದಿಕ ಸಂಪ್ರದಾಯದ ಕಟ್ಟುನಿಟ್ಟುಗಳನ್ನು ನಿರಾಕರಿಸಿದರು.

     Reply
     1. ರಾಧಾ ಮೋಹನ

      ಓಹೋ ವಿಸ್ಕಿ ಕುಡಿದು ತಾವೂ ಹಾಳಾಗುವುದು (ಪಾವನರಾಗುವುದು) ಇನ್ನೊಬ್ಬರಿಗೂ ಹಾಳಾಗಲು (ಪಾವನರಾಗಲು) ಮಾದರಿಯಾಗುವುದು ಪ್ರಗತಿಪರತೆಯಾದರೆ ನಮಸ್ಕಾರ. ಪ್ರಗತಿಪರರು ಶೀಘ್ರ ಅಧಿಕಾರಕ್ಕೆ ಬಂದು (ಛೇ ಮರೆತೆ ನೀವು ಈಗಾಗಲೇ ಅಧಿಕಾರದಲ್ಲಿದ್ದೀರಲ್ಲ) ಹಳ್ಳಿಗೊಂದು ವಿಸ್ಕಿ ಅಂಗಡಿ ತೆರೆದು ಎಲ್ಲ ಹೆಣ್ಣು ಮಕ್ಕಳಿಗೂ ವಿಸ್ಕಿ ಕುಡಿಯಲು ಕಲಿಸಿ. ಮುಂದೆ ಚುನಾವಣೆಕಾಲದಲ್ಲಿ ವಿಸ್ಕಿ ನೀಡಿಯೇ ಮತ್ತೆ ಅಧಿಕಾರ ಹಿಡಿಯಬಹುದು!

     2. BNS

      ಎಂದರೆ ತಮ್ಮ ಅಭಿಮತದಂತೆ ಬಸವಾದಿ ಶರಣರು ಮತ್ತು ತಮ್ಮ “ಪರಮಗುರು” ದರ್ಗಾ ಸರ್ ಸೇರಿದಂತೆ ಎಲ್ಲ “ಸಾಹಿತ್ಯಲೋಕವಾಸಿ”ಗಳು ವ್ಹಿಸ್ಕಿ ಸೇವಿಸಿ ತಮ್ಮ ತಮ್ಮ ಕಾವ್ಯರಚನೆಯನ್ನು ಮಾಡಿದರು! ಹಾಗೇನು “ಅಭಿನವ ಚನ್ನಬಸವಣ್ಣ” ನಾಮಾಂಕಿತ ನಾಗಶೆಟ್ಟಿ ಶೇತ್ಕರ್ ರೆ? ತುಂಬ ಸಂತೋಷ!

     3. ಅಭಿನವ ಚನ್ನಬಸವಣ್ಣ

      ಶರಣರು ವ್ಹಿಸ್ಕಿ ಸೇವನೆ ಮಾಡುವುದಿಲ್ಲ – ಗಂಡಸರೂ ಹೆಂಗಸರೂ. ಶರಣ ಸಂಪ್ರದಾಯದಲ್ಲಿ ಎಲ್ಲರೂ ಸಮಾನರು – ಗಂಡಸರೂ ಹೆಂಗಸರೂ. ಆದರೆ ವೈದಿಕ ಸಂಪ್ರದಾಯವು ಗಂಡಿಗೆ ಗುಂಡು ಸೇವನೆಯ ಅಧಿಕಾರ ಕೊಟ್ಟಿವೆ ಹೆಣ್ಣಿಗೆ ಮಾತ್ರ ಕಟ್ಟುನಿಟ್ಟುಗಳನ್ನು ಹೇರಿದೆ.

 4. Ananda Prasad

  ಭೈರಪ್ಪನವರು ಯಥಾಸ್ಥಿತಿವಾದಿ ಹಾಗೂ ಪುರೋಹಿತಶಾಹಿ ಮೌಲ್ಯಗಳನ್ನು ತಮ್ಮ ಕೃತಿಗಳಲ್ಲಿ ಎತ್ತಿ ಹಿಡಿಯುತ್ತಾರೆ. ಹೀಗಾಗಿ ಯಥಾಸ್ಥಿತಿವಾದಿಗಳಿಗೆ ಹಾಗೂ ಪುರೋಹಿತಶಾಹಿ ಮೌಲ್ಯಗಳ ಆರಾಧಕರಿಗೆ ಅವರ ಬರಹಗಳು ಅಪ್ಯಾಯಮಾನವಾಗುತ್ತವೆ. ಭಾರತೀಯ ಸಮಾಜದಲ್ಲಿ ಯಥಾಸ್ಥಿತಿವಾದಿ ಹಾಗೂ ಪುರೋಹಿತಶಾಹಿ ಮೌಲ್ಯಗಳ ಆರಾಧಕರು ಬಹುಸಂಖ್ಯಾತರಾಗಿರುವುದರಿಂದ ಅಂಥ ಬರಹಗಳಿಗೆ ಓದುಗರು ಹೆಚ್ಚು. ಅದರಲ್ಲೂ ಮುಖ್ಯವಾಗಿ ಭಾರತೀಯ ನಾರಿಯರು ಮೂಢನಂಬಿಕೆ, ಜಾತಿಪದ್ಧತಿಯ ಮೇಲರಿಮೆಯ ಕೂಪದಲ್ಲಿ ಮುಳುಗಿರುವ ಕಾರಣ ಅವರಿಗೆ ಭೈರಪ್ಪನವರ ಕಾದಂಬರಿಗಳು ರಸಪಾಕದಂತೆ ಕಂಡರೆ ಅಚ್ಚರಿಯಿಲ್ಲ. ಭೈರಪ್ಪನವರ ಕೃತಿಗಳಲ್ಲಿ ಸಂಪ್ರದಾಯಕ್ಕೆ ವಿರುದ್ಧವಾಗಿ ಹೋದ ಪಾತ್ರಗಳು ಉದ್ಧಾರವಾಗುವುದಿಲ್ಲ. ಅಂಥವರು ಜೀವನದಲ್ಲಿ ಯಶಸ್ವಿಯಾಗುವುದಿಲ್ಲ. ವಂಶವೃಕ್ಷ ಕಾದಂಬರಿಯಲ್ಲಿ ಮರುವಿವಾಹವಾದ ವಿಧವೆಯನ್ನು ಭೈರಪ್ಪನವರು ಮಾನಸಿಕವಾಗಿ ನರಳಿ ನರಳಿ ಸಾಯುವಂತೆ ಮಾಡುತ್ತಾರೆ ಮತ್ತು ಆ ವಿಧವೆಯು ತನ್ನ ಮೊದಲನೇ ಗಂಡನಿಂದ ಪಡೆದ ಮಗನನ್ನು ತನ್ನ ತಾಯಿಯ ವಿರುದ್ಧವೇ ಎತ್ತಿ ಕಟ್ಟಿ ಸಂಪ್ರದಾಯಗಳನ್ನು ಎತ್ತಿ ಹಿಡಿದು ಆ ತಾಯಿಯು ದಯನೀಯವಾಗಿ ಮಾನಸಿಕವಾಗಿ ಕೊರಗಿ ಸಾಯುವಂತೆ ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ ತನ್ಮೂಲಕ ಸಂಪ್ರದಾಯಗಳ ವಿರುದ್ಧ ಹೋದರೆ ಜೀವನ ಯಶಸ್ವಿಯಾಗುವುದಿಲ್ಲ ಎಂಬ ಸಂದೇಶವನ್ನು ಸಾರುತ್ತಾರೆ. ಇಂಥ ಕೃತಿಗಳು ಪ್ರತಿಗಾಮಿಗಳಿಗೆ ಹಬ್ಬದ ಹೋಳಿಗೆ ಉಂಡಷ್ಟು ಸಂತೋಷ ನೀಡಿದರೆ ಅಚ್ಚರಿ ಇಲ್ಲ. ಇಂದು ವಿಧವಾ ವಿವಾಹ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಮಾತ್ರವಲ್ಲ ಬ್ರಾಹ್ಮಣರಲ್ಲಿ ಹುಡುಗಿಯರ ಕೊರತೆಯಿಂದಾಗಿ ಅದರಲ್ಲೂ ಮುಖ್ಯವಾಗಿ ಕೃಷಿಕರಿಗೆ ಮದುವೆಯಾಗಲು ಹುಡುಗಿ ಸಿಗದಿರುವುದರಿಂದಾಗಿ ಮೊದಲನೇ ಗಂಡನಿಂದ ಮಕ್ಕಳನ್ನು ಪಡೆದ ವಿಧವೆಯರನ್ನೂ ಮದುವೆಯಾಗುತ್ತಿದ್ದಾರೆ. ಹೀಗಾಗಿ ಇಂದು ಭೈರಪ್ಪನವರು ಪ್ರತಿಪಾದಿಸುವ ಕಂದಾಚಾರಗಳು ಅಪ್ರಸ್ತುತವಾಗಿವೆ.

  ಭೈರಪ್ಪನವರ ಕಾದಂಬರಿಯೊಂದರಲ್ಲಿ ಮೇಲ್ಜಾತಿಯ ಹುಡುಗಿಯು ಕೆಳಜಾತಿಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿ ಅದು ಕೊನೆಗೆ ವಿಫಲವಾಗುವ ಚಿತ್ರಣ ಇದೆ. ಇನ್ನೊಂದು ಕೃತಿಯಲ್ಲಿ ಭಾರತೀಯ ವ್ಯಕ್ತಿ ವಿದೇಶಿ ಹೆಣ್ಣನ್ನು ಮದುವೆಗಾಗಿ ಅವರು ಕೂಡ ಸುಖವಾಗಿ ಬಾಳದಂತೆ ವಿಫಲವಾಗುವಂತೆ ಚಿತ್ರಿಸಿದ್ದಾರೆ. ಸಂಪ್ರದಾಯಕ್ಕೆ ವಿರುದ್ಧವಾಗಿ ಹೋದವರು ಯಶಸ್ವಿಯಾಗುವುದಿಲ್ಲ ಹಾಗೂ ದಯನೀಯವಾಗಿ ಸೋಲುತ್ತಾರೆ ಎಂದು ಚಿತ್ರಿಸುವುದೇ ಭೈರಪ್ಪನವರ ಆಂತರಿಕ ಆಶಯ ಎಂಬುದು ಅವರ ಎಲ್ಲ ಕೃತಿಗಳಲ್ಲಿಯೂ ಕಂಡುಬರುತ್ತದೆ. ಹೀಗಾಗಿ ಭಾರತೀಯ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರತಿಗಾಮಿಗಳಿಗೆ ಭೈರಪ್ಪನವರ ಕಾದಂಬರಿಗಳು ಎಂದರೆ ಹಬ್ಬದ ಊಟ ಉಂಡಷ್ಟೇ ಸಂತೋಷವಾದೀತು. ಭೈರಪ್ಪನವರು ಸಂಖ್ಯಾದೃಷ್ಟಿಯಿಂದ ಅತೀ ಹೆಚ್ಚು ಓದುಗರನ್ನು ಪಡೆಯಲು ಇದು ಪ್ರಧಾನ ಕಾರಣ.

  ಭೈರಪ್ಪನವರು ಬಿಜೆಪಿ ಪಕ್ಷಕ್ಕೆ ಬಹಿರಂಗವಾಗಿ ರಾಜಕೀಯ ಬೆಂಬಲ ಘೋಷಿಸಿದ್ದಕ್ಕೆ ಪ್ರತಿಯಾಗಿ ಬಳುವಳಿಯಾಗಿ ರಾಷ್ಟ್ರೀಯ ಪ್ರೊಫೆಸರ್ ಎಂಬ ಹುದ್ದೆ ನೀಡಲಾಗಿದೆ. ಭೈರಪ್ಪನವರಲ್ಲಿ ಕಥನ ಕೌಶಲ, ನವಿರಾದ ಕೃತಿಯನ್ನು ಕಟ್ಟುವ ಚಾಕಚಕ್ಯತೆ ಹಾಗೂ ಕಲೆಗಾರಿಕೆ ಇದೆ ಆದರೆ ಅದು ಪ್ರತಿಗಾಮಿ ಮೌಲ್ಯಗಳ ಸಮರ್ಥನೆಗೆ ಬಳಕೆಯಾಗುತ್ತಿದೆ. ಇದು ವಿಷಾದನೀಯ. ಲೇಖಕರು, ಕಾದಂಬರಿಕಾರರು ಪ್ರಗತಿಶೀಲರಾಗಿರಬೇಕಾದುದು ಬಹಳ ಮುಖ್ಯ. ಇಲ್ಲದೆ ಹೋದರೆ ಸಮಾಜವನ್ನು ಮುಂದೆ ಕೊಂಡೊಯ್ಯುವುದು ಅಸಂಭವ. ಜನತೆಯಲ್ಲಿ ಪ್ರಗತಿಯ ಭಾವನೆಗಳನ್ನು ಬಿತ್ತಬೇಕಾದ ಪ್ರಾಥಮಿಕ ಜವಾಬ್ದಾರಿ ಲೇಖಕರು ಹಾಗೂ ಕಾದಂಬರಿಕಾರರು, ಕವಿಗಳ ಮೇಲೆ ಇರುತ್ತದೆ. ಇದನ್ನು ಭೈರಪ್ಪನವರು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.

  Reply

Leave a Reply

Your email address will not be published.