Daily Archives: February 10, 2015

ದಿಲ್ಲಿ ಫಲಿತಾಂಶ: ಎಎಪಿ ಭರ್ಜರಿ ವಿಜಯದ ಹಿಂದಿರುವ 10 ಪ್ರಮುಖ ಕಾರಣಗಳು!

ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ]

ರಾಷ್ಟ್ರೀಯ ರಾಜಧಾನಿ ಪ್ರದೇಶ ದಿಲ್ಲಿಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಸಾಮಾನ್ಯ ಜನರ ಒತ್ತಾಸೆ ಏನಿತ್ತು ಎಂಬುದು ಗೊತ್ತಾಗಿದೆ. ಎಲ್ಲಾ ಪಕ್ಷಗಳ ಆಂತರಿಕ ಸಮೀಕ್ಷೆಗಳು, ಹೊರಗಿನ ಸರ್ವೆಗಳು ಹಾಗೂ ಚುನಾವಣಾ ಪೂರ್ವ ವಿಶ್ಲೇಷಣೆಗಳನ್ನು ತಲೆಕೆಳಗಾಗುವಂತಹ ಫಲಿತಾಂಶವನ್ನು ಮತದಾರರು ನೀಡಿದ್ದಾರೆ. ಇರುವ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67ರಲ್ಲಿ ಆಮ್‍ ಆದ್ಮಿ ಪಕ್ಷ ಜಯಗಳಿಸಿದೆ. ಬಿಜೆಪಿ ಮೂರು ಸ್ಥಾನಗಳಿಸಿದೆ. ಪುರಾತನ ಪಕ್ಷ ಕಾಂಗ್ರೆಸ್‍ಗೆ ಖಾತೆ ತೆರೆಯುವ ಅವಕಾಶವನ್ನೂ ನೀಡಿಲ್ಲ. ಖುದ್ದು ಆಮ್‍ ಆದ್ಮಿ ಪಕ್ಷದ ಒಳಗಿರುವವರಿಗೇ ಅಚ್ಚರಿ ಮೂಡಿವಂತಹ ಈ ಫಲಿತಾಂಶದ ಹಿಂದೆ ಇರುವ ಪ್ರಮುಖ ಕಾರಣಗಳನ್ನು ‘ವರ್ತಮಾನ’ ಇಲ್ಲಿ ಪಟ್ಟಿ ಮಾಡುತ್ತಿದೆ. ಈ ಚುನಾವಣೆಯ ಫಲಿತಾಂಶದ ಕುರಿತು ಇನ್ನಷ್ಟು ಆಳಕ್ಕಿಳಿದರೆ ಸಾಕಷ್ಟು ಅಚ್ಚರಿಯ ವಿಚಾರಗಳಿವೆ. ಆದರೆ, ಈ ಭಾಗದಲ್ಲಿ ನಾವು ಆಪ್‍ ವಿಜಯದ ಹಿಂದಿರುವ ಪ್ರಮುಖ ಕಾರಣಗಳನ್ನಷ್ಟೆ ಹುಡುಕಿದ್ದೇವೆ. ಕಳೆದ ಕೆಲವು ದಿನಗಳಿಂದ ದಿಲ್ಲಿಯ ಚುನಾವಣಾ ಕಣದಲ್ಲಿ ಕಂಡು ಬಂದ ಅಂಶಗಳಿವು. ಸಧ್ಯಕ್ಕೆ, ದಿಲ್ಲಿ ಚುನಾವಣೆ ಫಲಿತಾಂಶದ ಕುರಿತು ಅಚ್ಚರಿಗೊಂಡಿರುವವರಿಗೆ, ಹೇಗೀ ಫಲಿತಾಂಶ ಹೊರಬಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಇವು ನೆರವಾಗಬಹುದು ಎಂಬುದು ನಮ್ಮ ಆಶಯ.

 

  1. ಕ್ರೀಯಾಶೀಲ ಸ್ವಯಂ ಸೇವಕರ ಪಡೆ: ದಿಲ್ಲಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಯಶಸ್ಸಿನ ಹಿಂದಿರುವ ಪ್ರಮುಖ ಕಾರಣಗಳ ಪೈಕಿ aap-buzz-team-delhiಮೊದಲನೆಯದು ಅದರ ಸ್ವಯಂ ಸೇವಕರ ಶ್ರಮ ಮತ್ತು ಅವರ ಕ್ರೀಯಾಶೀಲತೆ. ದೇಶದ ನಾನಾ ಭಾಗಗಳಿಂದ ಬಂದ ಸುಮಾರು 8 ಸಾವಿರಕ್ಕೂ ಹೆಚ್ಚು ಸ್ವಂಯ ಸೇವಕರ ತಂಡಗಳು ದಿಲ್ಲಿಯ ಬೀದಿ ಬೀದಿ, ಗಲ್ಲಿ ಗಲ್ಲಿಗಳಲ್ಲಿ ನಡೆಸಿದ ಚುನಾವಣಾ ಪ್ರಚಾರ ಪಕ್ಷಕ್ಕೆ ನೆರವಾಯಿತು. ದಿಲ್ಲಿ ತುಂಬ ತೆಲೆಯ ಮೇಲೆ ಪಕ್ಷದ ಟೋಪಿ ಹಾಕಿಕೊಂಡು ಸಾವಿರಾರು ಜನ ಓಡಾಡುತ್ತಿದ್ದರೆ, ಜನ ಮನಸ್ಸಿನ ಮೇಲೆ ಬೀರಿರಬಹುದಾದ ಪರಿಣಾಮ ದೊಡ್ಡದಿತ್ತು.
  2. ವಿನೂತನ ಪ್ರಚಾರ ತಂತ್ರ: ಮತದಾನಕ್ಕೆ ತಿಂಗಳಿದೆ ಎನ್ನುವಾಗಲೇ ವಿನೂತನ ಪ್ರಚಾರಕ್ಕೆ ತಂಡಗಳನ್ನು ರಚಿಸಿತ್ತು ಆಪ್‍. ಅವರನ್ನು ‘ಬಝ್‍ ಸ್ವಯಂ ಸೇವಕರು ಎಂದು ಪಕ್ಷದ ಅಂತರಂಗದಲ್ಲಿ ಗುರುತಿಸಲಾಗುತ್ತಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಇವರು ದಿಲ್ಲಿಯ ಪ್ರಮುಖ ಸ್ಥಳಗಳಲ್ಲಿ ಪಕ್ಷದ ಉದ್ದೇಶಗಳನ್ನು ಸಾರುವ ಭಿತ್ತಿಪತ್ರಗಳನ್ನು ಹಿಡಿದು ನಿಂತಿರುತ್ತಿದ್ದರು. ಜನ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೂ ವಿನಮೃತೆಯಿಂದ ಕೈ ಮುಗಿದು ಕಳಿಸುತ್ತಿದ್ದ ಇವರು ಭಾರಿ ಗಮನ ಸೆಳೆದಿದ್ದರು. ಜತೆಗೆ ಪಕ್ಷದ ‘ಪಾಸಿಟಿವ್ ಅಜೆಂಡಾ’ವನ್ನು ದಿಲ್ಲಿ ಜನರಿಗೆ ತಲುಪಿಸಿದ್ದು ಕೂಡ ಪಕ್ಷಕ್ಕೆ ನೆರವಾಯಿತು.
  3. ಮಾತನಾಡು ದಿಲ್ಲಿ ಮಾತನಾಡು: ಇನ್ನು ಆಪ್‍ಗೆ ದಿಲ್ಲಿಯ ಜನರ ನಾಡಿ ಮಿಡಿತವನ್ನು ಅರ್ಥಮಾಡಿಸಿದ್ದು ಪಕ್ಷ ನಡೆಸಿದ ‘ದಿಲ್ಲಿ ಡೈಲಾಗ್‍’ ಎಂಬ ಅಭಿಯಾನ. ನಗರದ ಪ್ರತಿ ಗಲ್ಲಿಗಳಲ್ಲಿ ಸಮಸ್ಯೆಗಳ ಹಾಗೂ ಪರಿಹಾರಗಳ ಕುರಿತು ಸಭೆಗಳನ್ನು ನಡೆಸಲಾಯಿತು. ಅಲ್ಲಿ ಸಿಕ್ಕ ಅಂಶಗಳನ್ನೇ ಮುಂದೆ ಪಕ್ಷ ಪ್ರಣಾಳಿಕೆ ರೂಪದಲ್ಲಿ ಮುಂದಿಟ್ಟಿದ್ದು ಪಕ್ಷದ ಪ್ರಣಾಳಿಕೆ ಜನರಿಗೆ ಹತ್ತಿರಾಗುವಂತೆ ಮಾಡಿತು.
  4. ಸಾಮಾಜಿಕ ಜಾಲತಾಣಗಳಲ್ಲಿ ಉಪಸ್ಥಿತಿ: ಇವತ್ತಿನ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಆಪ್‍ ಸಾಕ್ಷಿಯಾಯಿತು. ಟ್ವಿಟರ್‍, ಫೇಸ್‍ಬುಕ್‍, ಇನ್ಟಾಗ್ರಾಮ್ ಮತ್ತಿತರ ತಾಣಗಳಲ್ಲಿ ತನ್ನನ್ನು ಸಕ್ರಿಯವಾಗಿಟ್ಟುಕೊಂಡಿತು. ಈ ಮೂಲಕ ಇಂಟರ್‍ನೆಟ್‍ ಬಳಸುವ ವರ್ಗದಲ್ಲಿ ತನ್ನ ಅಭಿಪ್ರಾಯವನ್ನು ಮೂಡಿಸುತ್ತ ಬಂತು.AAP manifesto release
  5. ಟಿಕೆಟ್‍ ಹಂಚಿಕೆಯಲ್ಲಿ ಜಾಣತನ: ಆಪ್‍ ಕುರಿತು ಮೊದಲು ಕೇಳಿಬಂದ ಟೀಕೆಗಳಲ್ಲಿ ಟಿಕೆಟ್ ಹಂಚಿಕೆಯೂ ಒಂದಾಗಿತ್ತು. ಆದರೆ, ಪಕ್ಷ ಕೆಲವರಿಗೆ ಟಿಕೆಟ್‍ ನೀಡುವಾಗ ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಇದೀಗ ನೆರವಾದಂತೆ ಕಾಣಿಸುತ್ತಿದೆ.
  6. 49 ದಿನಗಳ ವರ್ಚುವಲ್ ಕ್ರಾಂತಿ: ದಿಲ್ಲಿಯ ಸಾಮಾನ್ಯ ವರ್ಗದಲ್ಲಿ ಪಕ್ಷದ ಕುರಿತು ಸದಾಭಿಪ್ರಾಯ ಮೂಡಲು ಕಾರಣ ಕೇಜ್ರಿವಾಲ್‍ ನೇತೃತ್ವದ 49 ದಿನಗಳ ಆಡಳಿತಾವಧಿ. ಈ ಸಮಯದಲ್ಲಿ ವಿದ್ಯುತ್‍ ದರ ಇಳಿಕೆ ಹಾಗೂ ಉಚಿತ ನೀರು ಸರಬರಾಜಿಗೆ ಕ್ರಮ ಕೈಗೊಂಡಿದ್ದು ದಿಲ್ಲಿಯ ಬಹುಸಂಖ್ಯಾತ ಕೆಳವರ್ಗವನ್ನು ಪಕ್ಷಕ್ಕೆ ನಿಷ್ಟರಾಗುವಂತೆ ನೋಡಿಕೊಂಡಿತು.
  7. ಬಿಜೆಪಿಯ ಅವಹೇಳನಕಾರಿ ಪ್ರಚಾರ: ಕೊಂಚ ಅಚ್ಚರಿ ಅನ್ನಿಸಿದರೂ ಇದು ಸತ್ಯ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಜನಸಭೆಗಳನ್ನು ನಡೆಸುತ್ತಿದ್ದ ಆಪ್‍ ಕುರಿತು ಕೊನೆಯ ಹಂತದಲ್ಲಿ ವೈಯುಕ್ತಿಕ ಟೀಕೆ ಹಾಗೂ ಅವಹೇಳನಕ್ಕೆ ಬಿಜೆಪಿ ಮುಂದಾಯಿತು. ಆದರೆ ಆಪ್‍ ನಾಯಕತ್ವ ಇವೆಲ್ಲಕ್ಕೂ ವಿನೀತರಾಗಿ ಉತ್ತರ ನೀಡುತ್ತಾ ಹೋದರು. ಸಹಜವಾಗಿಯೇ ಬಿಜೆಪಿಯ ಪ್ರಚಾರ ವೈಖರಿ ದುರಹಂಕಾರದ ನಡತೆಯಂತೆ ಜನರಿಗೆ ಭಾಸವಾಯಿತು. ಇದು ಕೊನೆಯ ಕ್ಷಣದಲ್ಲಿ ಆಪ್‍ ಪರ ಮಧ್ಯಮ ವರ್ಗ ಗಟ್ಟಿಯಾಗಿ ನಿಲ್ಲಲು ನೆರವಾಯಿತು.
  8. ಕಿರಣ್‍ ಬೇಡಿ ಟ್ರಂಪ್‍ ಕಾರ್ಡು: ಆಪ್‍ಗೆ ನೆರವಾದ ಮತ್ತೊಂದು ಪ್ರಮುಖ ಅಂಶ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‍ ಬೇಡಿ. ಬಿಜೆಪಿ ಕೊನೆಯ ಕ್ಷಣದಲ್ಲಿ ಅನಿವಾರ್ಯವಾಗಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಿರಣ್‍ ಬೇಡಿಯನ್ನು ಮುಂದಿಟ್ಟಿತು. ಇದು ಬಿಜೆಪಿಯ ದಿಲ್ಲಿ ಕಮಿಟಿಯಲ್ಲಿ ಅಸಮಾಧಾನ ಮೂಡಿಸಿತು. ಅದೇ ವೇಳೆ ಕಿರಣ್‍ ಬೇಡಿ ಪ್ರತಿಕ್ರಿಯೆಗಳು ನಗೆಪಾಟಲಿಗೆ ಈಡಾದವು ಸಹಜವಾಗಿಯೇ ದಿಲ್ಲಿ ಜನರಿಗೆ ಆಪ್‍ ಮುಖ್ಯಮಂತ್ರಿ ಅಭ್ಯರ್ಥಿ ಕೇಜ್ರಿವಾಲ್‍ ಪರ ಅಭಿಪ್ರಾಯ ಇನ್ನಷ್ಟು ಗಟ್ಟಿಯಾಯಿತು.KIRAN_BEDI_on-top
  9. ಸಿದ್ಧತೆಗೆ ಸಿಕ್ಕ ಸಮಯ: ಲೋಕಸಭೆ ಚುನಾವಣೆ ಸಮಯದಲ್ಲೇ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿದ್ದರೆ ಆಪ್‍ ಈ ಪ್ರಮಾಣದ ಜಯ ಗಳಿಸುವುದು ಕಷ್ಟ ಇತ್ತು. ದಿಲ್ಲಿ ವಿಧಾನ ಸಭೆಗೆ ಅಂತಿಮವಾಗಿ ದಿನಾಂಕ ನಿಗಧಿಯಾದ ಸಮಯದಲ್ಲಿ ಆಪ್‍ ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ಎದ್ದು ನಿಂತಿತ್ತು. ಇದನ್ನು ನಿರೀಕ್ಷಿಸದಿದ್ದ ಬಿಜೆಪಿ ತುಸು ಹೆಚ್ಚೇ ಭರವಸೆ ಹೊಂದಿತ್ತು.
  10. ಮಾಧ್ಯಮಗಳನ್ನು ನಿಭಾಯಿಸಿದ ಬಗೆ: ಒಂದು ಕಡೆ ಬಿಜೆಪಿ ಅಭ್ಯರ್ಥಿ ಕಿರಣ್‍ ಬೇಡಿ ಮಾಧ್ಯಮಗಳಲ್ಲಿ ನಗೆಪಾಟಲಿಗೆ ಈಡಾಡುತ್ತಿದ್ದರೆ, ಮತ್ತೊಂದಡೆ ಆಪ್‍ನ ನಾಯಕರು ಮಾಧ್ಯಮಗಳ ಎಲ್ಲಾ ಟೀಕೆಗಳಿಗೆ ಉತ್ತರ ರೆಡಿ ಮಾಡಿಟ್ಟುಕೊಂಡಿದ್ದರು. ಕೇಳುವ ಪ್ರತಿ ಪ್ರಶ್ನೆಗೆ ಒಂದೇ ರೀತಿಯ ಉತ್ತರ ಪಕ್ಷದ ಎಲ್ಲಾ ಸ್ಥರಗಳಿಂದ ಬರುವಂತೆ ನೋಡಿಕೊಳ್ಳಲಾಯಿತು. ಹೀಗಾಗಿ, ಬಿಜೆಪಿ ನಡೆಸಿದ ಅಷ್ಟೂ ಅಪಪ್ರಚಾರ ಆಪ್‍ಗೆ ಸಕಾರಾತ್ಮಕವಾಗಿ ಬದಲಾಯಿತು. ಒಂದು ಅರ್ಥದಲ್ಲಿ ಮೊದಲಿನಿಂದ ಕೊನೆಯವರೆಗೂ ಆಪ್‍ ಚುನಾವಣೆಯ ಅಜೆಂಡಾವನ್ನು ಸೆಟ್‍ಮಾಡಿತು ಮತ್ತು ಮಾಧ್ಯಮಗಳು ಸೇರಿದಂತೆ ಎಲ್ಲರೂ ಅದನ್ನು ಫಾಲೋ ಮಾಡುವಂತೆ ನೋಡಿಕೊಂಡಿತು.