Daily Archives: February 12, 2015

ಸುಳಿದು ಜಂಗಮವಾಗಲರಿಯದ, ನಿಂದು ಭಕ್ತನಾಗಲರಿಯದ ಭ್ರಷ್ಟರು


-ಟಿ ಬಿ.ಶ್ರೀಪಾದ ಭಟ್


ಇಂದು ನವ ಉದಾರೀಕರಣ ನಮ್ಮ ಇಡೀ ಬದುಕನ್ನು, ಚಟುವಟಿಕೆಗಳನ್ನು, ಸಾಮಾಜಿಕ ಸಂಬಂಧಗಳನ್ನು ನಿಯಂತ್ರಿಸುತ್ತಿದೆ. ಅದು ಕೊಡಮಾಡುವ ಅಪಾರ ಸಾಧ್ಯತೆಗಳ ವಶೀಕರಣಕ್ಕೊಳಗಾಗಿರುವ ನಾವು ಅದರಿಂದಾಗಿಯೇ ಸಂಪೂರ್ಣವಾಗಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದೇವೆ ಎನ್ನುವ ಹುಸಿ ಭ್ರಮೆಯಲ್ಲಿದ್ದೇವೆ. ಆದರೆ ತಮ್ಮನ್ನು ಆಧುನಿಕರು ಎಂದು ಕರೆದುಕೊಳ್ಳುವ ಇಲ್ಲಿನ ಮೇಲ್ಜಾತಿ, ಮಧ್ಯಮ ವರ್ಗ ಸಂಪೂರ್ಣವಾಗಿ ಭಾರತದ india-middle-classಸಾಂಪ್ರದಾಯಿಕ ವ್ಯವಸ್ಥೆಗೆ ಮರಳಿ ಶರಣಾಗತರಾಗಿರುವುದು ಮಾತ್ರ ಇಂದಿನ ವಾಸ್ತವ. ಅಭಿವೃದ್ಧಿಯ ಎಲ್ಲಾ ಫಲವನ್ನು ತಾನು ಮಾತ್ರ ಬಾಚಿಕೊಂಡ ಮೇಲಿನ ಗುಂಪು ಅವಕಾಶವಂಚಿತರ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ವರ್ತಿಸಿದರು. ಇಲ್ಲಿ ಇವರಿಗೆ ಪೂರಕವಾಗಿ ಸಹಕರಿಸಿದ್ದು ಇಲ್ಲಿನ ಯಜಮಾನ್ಯ ಸಂಸ್ಕೃತಿ. ಈ ಯಜಮಾನ್ಯ ಸಂಸ್ಕೃತಿ ಮೇಲ್ಜಾತಿಗಳಿಗೆ ಮತ್ತು ಮಧ್ಯಮವರ್ಗಗಳಿಗೆ ಮಾತ್ರ ಶಿಕ್ಷಣದ ಎಲ್ಲಾ ಬಾಗಿಲುಗಳನ್ನು ತೆರೆದು ಶಿಕ್ಷಣದ ಸಂಪೂರ್ಣ ಹಕ್ಕನ್ನು ಅವರು ಮಾತ್ರವೇ ಪಡೆದುಕೊಳ್ಳುವಂತೆ ಮತ್ತು ಸಮಾಜದ ಪ್ರಧಾನ ಧಾರೆಯಲ್ಲಿ ಸದಾ ಮಂಚೂಣಿಯಲ್ಲಿರುವಂತಹ ಸೌಕರ್ಯವನ್ನು ಕಲ್ಪಿಸಿಕೊಟ್ಟಿತು. ನವ ಉದಾರೀಕರಣದ ಇಂದಿನ ಕಾಲಘಟ್ಟದಲ್ಲಿ ಸ್ಥಾಪಿತ ಪ್ರಭಾವಶಾಲಿ ಜಾತಿಗಳಿಗೆ ಸೇರಿದ ಸನಾತನವಾದಿ ಮಠಗಳು ಮತ್ತು ಅವುಗಳ ಮಠಾಧೀಶರು ಈ ಮೇಲೆ ಹೇಳಿದ ಯಜಮಾನ್ಯ ಸಂಸ್ಕೃತಿಯ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಅಂದಕಾಲತ್ತಿನಿಂದಲೂ ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಭಾವಶಾಲಿಯಾಗಿದ್ದ ಈ ಸಂಪ್ರದಾಯಸ್ಥ, ಸನಾತನವಾದಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಜಾತಿಗಳಿಗೆ ಸೇರಿದ ಬಹುಪಾಲು ಮಠಗಳು ಮತ್ತು ಅದರ ಮಠಾಧೀಶರು ಸಾಮಾಜಿಕವಾಗಿ ಶ್ರೇಣಿಕೃತ ಜಾತಿ ಪದ್ಧತಿಯ ಪ್ರತಿನಿಧಿಗಳಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ತಮ್ಮನ್ನು ತಾವು ಜಗದ್ಗುರುಗಳೆಂದೇ ಕರೆದುಕೊಳ್ಳುವ ಮತ್ತು ಪ್ರತ್ಯೇಕತೆ, ಅಸಮಾನತೆ, ತಾರತಮ್ಯ ವ್ಯವಸ್ಥೆಯನ್ನು ಪ್ರತಿಪಾದಿಸುತ್ತ ಅದರ ಪ್ರತಿನಿಧಿಗಳಂತೆ ವರ್ತಿಸುತ್ತಿರುವ ಈ ಮಠಾಧೀಶರು ಅಂದು ಪ್ರಶ್ನಾತೀತರಾಗಿದ್ದರು ಮತ್ತು ಇಂದಿನ ದಿನಗಳಲ್ಲಿಯೂ ಪ್ರಶ್ನಾತೀತರಾಗಿದ್ದಾರೆ. ಶಾಸ್ತ್ರ ಪುರಾಣಗಳನ್ನು, ವೇದಾಂತ ಮತ್ತು ಸತ್ಸಂಗಗಳನ್ನು ಬಳಸಿಕೊಂಡು ಶೂದ್ರರನ್ನು ಅವಮಾನಿಸುತ್ತಿದ್ದ, ಶೋಷಿಸುತ್ತಿದ್ದ ಬ್ರಾಹ್ಮಣ ಮಠಗಳ ಸಿದ್ಧಾಂತಗಳನ್ನು ಇಂದು ಬಲಾಢ್ಯ ಶೂದ್ರ ಜಾತಿಗಳ ಮಠಾಧೀಶರೂ ಆಚರಿಸುತ್ತಿದ್ದಾರೆ ಮತ್ತು ತಮ್ಮ ಶೂದ್ರ ಭಕ್ತರಿಗೆ ಬೋಧಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕೇವಲ ಭ್ರಾಹ್ಮಣ ಮಠಾದೀಶರು ಪ್ರತಿಪಾದಿಸುತ್ತಿದ್ದ ಜಾತಿ ಪದ್ಧತಿ ಮತ್ತು ಹಿಂದೂ ಧರ್ಮದ ಪರಂಪರೆಯನ್ನು ಇಂದು ಶೂದ್ರ ಮಠಗಳು ಪ್ರತಿಪಾದಿಸುತ್ತಿದ್ದಾರೆ. ಜಾತಿ ಸಮೀಕರಣಗಳು ಇಂದು ಸಂಕೀರ್ಣಗೊಳ್ಳುತ್ತಾ ಮತ್ತಷ್ಟು ಅಮಾನವೀಯವಾಗುತ್ತಿವೆ. ಭಕ್ತರ ಧಾರ್ಮಿಕ ನಂಬಿಗೆಯ ನೆಲೆಯಾಗಿದ್ದ ದೇವಸ್ಥಾನಗಳು ಇಂದು ತಮ್ಮ ಹಿಂದಿನ ಅನುಭಾವ ಮತ್ತು ಆಧ್ಯಾತ್ಮದ ಚಹರೆಗಳನ್ನು ಕಳೆದುಕೊಂಡು ಸ್ಥಾವರಗೊಂಡ, ಜಾತಿವಾದಿ, ವ್ಯಾಪಾರೀಕರಣಗೊಂಡ ಮಠಗಳ ಆಶ್ರಯತಾಣಗಳಾಗಿವೆ.

ಕೇವಲ ಧಾರ್ಮಿಕತೆಯ ಮೂಲಕ ಮಾತ್ರವಲ್ಲ ಜೊತೆಗೆ ಶೈಕ್ಷಣಿಕ ವ್ಯವಸ್ಥೆಯನ್ನೂ ಸಹ ಕಬ್ಜಾ ಮಾಡಿಕೊಂಡಿರುವ ಈ ಜಾತಿವಾದಿ ಮಠಗಳು ಆ ಮೂಲಕ ಸಂವಿಧಾನದ ಯಾವುದೇ ಕಾಯ್ದೆಗಳ ಹಿಡಿತಕ್ಕೆ ಸಿಗದಷ್ಟು, ಕಾನೂನು ಕಟ್ಟಳೆಗಳನ್ನು ಮಾನ್ಯ ಮಾಡದಷ್ಟು ಪ್ರಶ್ನಾತೀತರಾಗಿ ಬೆಳೆದಿದ್ದಾರೆ. ravishankar_aolಇದಕ್ಕೆ ಅತ್ಯವಶ್ಯಕವಾದಂತಹ ಯಜಮಾನ್ಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿರುವ ಈ ಮಠಗಳ ಬಳಿ ಜಾತಿ ಸಂಘಟನೆಯ ನೆಪದಲ್ಲಿ ರಾಜಕಾರಣಿಗಳು ಬರುತ್ತಾರೆ, ನ್ಯಾಯಾಧೀಶರು ಬರುತ್ತಾರೆ, ವಿದ್ವಾಂಸರು, ಸಾಹಿತಿಗಳು ಬರುತ್ತಾರೆ ಮತ್ತು ಇವರೆಲ್ಲ ಈ ಸಂಪ್ರದಾಯವಾದಿ ಯಜಮಾನ್ಯ ಸಂಸ್ಕೃತಿಯ ಮಠಗಳಿಗೆ ರಕ್ಷಾಕವಚವಾಗಿಯೇ ಕಾರ್ಯ ನಿರ್ವಹಿಸುತ್ತಾರೆ ಅಥವಾ ಆ ರೀತಿಯ ಒಂದು ವಾತಾವರಣವನ್ನು ನಿರ್ಮಿಸುತ್ತಾರೆ. ಮಠಗಳು ಮತ್ತು ಧಾರ್ಮಿಕತೆ ಇಂದು ಸಂಪೂರ್ಣವಾಗಿ ಜಾಗತೀಕರಣಗೊಂಡಿವೆ. ವ್ಯಾಪಾರೀಕರಣಗೊಂಡಿವೆ. ಸವರ್ಣೀಯ ಜಾತಿಗಳಿಗೆ ಸೇರಿದ ಈ ಮಠಾದೀಶರು ಆರೆಸ್ಸಸ್ ಪ್ರತಿಪಾದಿಸುವ ಹಿಂದುತ್ವವನ್ನು ಇಂದು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುತ್ತಿದ್ದಾರೆ. ಸನಾತನವಾದಿ ಬ್ರಾಹ್ಮಣ ಮಠಾಧೀಶರು ಇದರ ನೇತೃತ್ವ ವಹಿಸಿದ್ದಾರೆ. ವಿದೇಶದಲ್ಲಿರುವ ಅನಿವಾಸಿ ಭಾರತೀಯರು ತಮ್ಮ ಐಡೆಂಟಿಟಿಯನ್ನು ಕಟ್ಟಿಕೊಳ್ಳಲು ತುದಿಗಾಲಲ್ಲಿ ನಿಂತಿರುವಂತಹ ಸಂದರ್ಭದಲ್ಲಿ ಅವರಿಗೆ ದೊರಕಿದ್ದು ಸಂಘ ಪರಿವಾರದ ಬೆಂಬಲಿಗರಾದ ಈ ಪುರೋಹಿತಶಾಹಿ ಮಠಗಳು. ಹಿಂದೂ ಧರ್ಮದ ವಕ್ತಾರಂತೆ ವರ್ತಿಸುವ ಈ ಸನಾತನವಾದಿ ಮಠಗಳನ್ನು ಬಹಿರಂಗವಾಗಿ ಬೆಂಬಲಿಸುವ ಇಲ್ಲಿನ ವಿದ್ಯಾವಂತರು ಮತ್ತು ಅನಿವಾಸಿ ಭಾರತೀಯರು ಇಂದು ನಮ್ಮ ನಡುವಿನ ಅತ್ಯಂತ ಕ್ರಿಯಾಶೀಲ ಜಾತಿವಾದಿಗಳು. ಅನಿವಾಸಿ ಭಾರತೀಯರಾಗಿ ಇವರು ಈ ಸನಾತನವಾದಿ ಮಠಗಳನ್ನು ಪ್ರತಿನಿಧಿಸುವಂತೆ ಹಿಂದೂ ಧಾರ್ಮಿಕತೆಯನ್ನು ಒಳಗೊಳ್ಳುವಂತಹ ವೈದಿಕಶಾಹಿ ರಾಷ್ಟ್ರೀಯತೆಯನ್ನು ವಿದೇಶಗಳಲ್ಲಿ ಪ್ರತಿಪಾದಿಸುತ್ತಾರೆ. ಅಪಾರವಾದ ಧನಸಹಾಯವನ್ನು ನೀಡುತ್ತಾರೆ.

ಇಡೀ ಭಕ್ತ ಸಮೂಹವನ್ನೇ ಧಾರ್ಮಿಕತೆಯ, ಜಾತಿಯ ಹೆಸರಿನಲ್ಲಿ ಮಾನಸಿಕವಾಗಿ ತಮ್ಮ ಅಡಿಯಾಳಾಗಿಸಿಕೊಳ್ಳುವ ಅನೇಕ ಮಠಾಧೀಶರು ಇದೇ ಜಾತಿ ಮತ್ತು ಹಣದ ಬಲದಿಂದ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ತಮ್ಮ ಹಂಗಿನಲ್ಲಿರಿಸಿಕೊಂಡಿರುತ್ತಾರೆ. ಇವರ ಹಂಗಿನರಮನೆಯೊಳಗಿರುವ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಈ ಯಜಮಾನ್ಯ ಸಂಸ್ಕೃತಿಯ ಮಠಗಳನ್ನು ಕೆಲವೊಮ್ಮೆ ಪರೋಕ್ಷವಾಗಿ ಅನೇಕ ಬಾರಿ ಬಹಿರಂಗವಾಗಿಯೇ ಪೋಷಿಸುತ್ತಾರೆ. ಆ ಮಠಗಳ ಪೋಷಕರಂತೆ ವರ್ತಿಸುತ್ತಾರೆ. ಸಂವಿಧಾನದ ಕಾಯ್ದೆಗಳಿಗೆ ಅನುಗುಣವಾಗಿ, ಪ್ರಜಾತಾಂತ್ರಿಕ ಆಶಗಳಿಗೆ ಬದ್ಧರಾಗಿ ಈ ಮಠಗಳ ಅವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳಲು ಅಕಸ್ಮಾತ್ ಯಾವಾಗಲಾದರೊಮ್ಮೆ ಕಾನೂನಾತ್ಮಕ ಕ್ರಮಗಳನ್ನು ರೂಪಿಸಿದರೆ, ಆಡಳಿತಾತ್ಮಕ ವಿಕೇಂದ್ರೀಕರಣದ ವ್ಯವಸ್ಥೆಯನ್ನು ತರಬಯಸಿದರೆ, ಈ ಮಠಾಧೀಶರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಅಥವಾ ಆ ತರಹದ ಸೂಚನೆಗಳು ದೊರೆತರೂ ಸಹ ಈ ಜಾತಿವಾದಿ  ಮಠಾಧೀಶರು ವ್ಯಗ್ರರಾಗುತ್ತಾರೆ. ಪತ್ರಿಕಾ ಗೋಷ್ಠಿಗಳ ಮೂಲಕ, ಸಾರ್ವಜನಿಕ ಸಮಾರಂಭಗಳ ಮೂಲಕ ಶಾಸಕಾಂಗಕ್ಕೆ ನೇರವಾಗಿಯೇ ಎಚ್ಚರಿಕೆಯನ್ನು ನೀಡುವಷ್ಟು ಬಲಿಷ್ಟರಾಗಿದ್ದಾರೆ. ಇತಿಹಾಸದ ಪುಟಗಳಲ್ಲಿ ಈ ಕುರಿತಾಗಿ ಅನೇಕ ದಾಖಲೆಗಳು ದೊರಕುತ್ತವೆ. ತೀರಾ ಇತ್ತೀಚಿನ ಉದಾಹರಣೆ ಎಂದರೆ ಹವ್ಯಕರraghaveshwara ಮಠದ ರಾಘವೇಶ್ವರ ಸ್ವಾಮೀಜಿ. ಅವರ ಮಠದ ಭಕ್ತೆಯೊಬ್ಬರು ಆವರ ವಿರುದ್ಧ ನಿರಂತರ ಅತ್ಯಾಚಾರದ ಆರೋಪವನ್ನು ಹೊರಸಿ ನ್ಯಾಯಲಯದಲ್ಲಿ ದೂರು ದಾಖಲಿಸಿದಾಗ ಸರ್ಕಾರವು ಈ ದೂರನ್ನು ಆಧರಿಸಿ ತನಿಖೆಯನ್ನು ಆರಂಬಿಸಿತು. ಆದರೆ ಇಂದಿನವರೆಗೂ ಈ ರಾಘವೇಶ್ವರ ಸ್ವಾಮೀಜಿ ಮತ್ತು ಅವರ ಚೇಲಾಗಳು ತನಿಖಾ ತಂಡಕ್ಕೆ, ನ್ಯಾಯಾಲಯಕ್ಕೆ ಯಾವುದೇ ಬಗೆಯ ಗೌರವ, ಸಹಕಾರವನ್ನು ಕೊಡದೆ ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ, ಸಂವಿಧಾನವನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದಾರೆ. ತಾವು ಕಾನೂನಿನ ಚೌಕಟ್ಟಿಗೆ ಒಳಪಟ್ಟಿಲ್ಲವೆಂದು ನ್ಯಾಯಾಂಗಕ್ಕೆ ಸವಾಲನ್ನು ಹಾಕಿದ್ದಾರೆ. ಇದು ನ್ಯಾಯಾಂಗಕ್ಕೆ ಮಾಡಿದ ಅಪಚಾರವಲ್ಲವೇ? ಇಂದು ಈ ಅತ್ಯಾಚಾರದ ಆರೋಪಿ ರಾಘವೇಶ್ವರ ಸ್ವಾಮಿಯ ವಿರುದ್ಧ ವಿಚಾರಣೆ ನಡೆಸುತ್ತಿರುವ ನ್ಯಾಯಾಂಗ ಪೀಠದ ಸದಸ್ಯರಾದ ನ್ಯಾಯಮೂರ್ತಿ ಫಣೀಂದ್ರ ಅವರು ಮೊದಲು ಮತ್ತು ನಂತರ ರಾಮಮೋಹನ್ ರೆಡ್ಡಿ ಇವರಿಬ್ಬರೂ ವಿಚಾರಣೆ ಪೀಠದಿಂದ ಹೊರ ಬಂದಿದ್ದಾರೆ. ನಂತರ ಇನ್ನೂ ಮೂವರು ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ನಿಜವಾದ ಕಾರಣಗಳನ್ನು ನೀಡಿಲ್ಲ. ಆದರೆ ಯಾವುದೇ ಭಯ ಮತ್ತು ಪಕ್ಷಪಾತವಿಲ್ಲದೆ ಕಾರ್ಯ ನಿರ್ವಹಿಸುತ್ತೇವೆ ಎಂದು ವಚನ ಸ್ವೀಕರಿಸುವ ನ್ಯಾಯಾಧೀಶರು ಇಂತಹ ಅಗ್ನಿ ಪರೀಕ್ಷೆಯ ಸಂದರ್ಭದಲ್ಲಿ ಹಿಂದೇಟು ಹಾಕುವ ಪದ್ಧತಿ ಸ್ವಾಗತಾರ್ಹ ಬೆಳವಣಿಗೆಯಲ್ಲ. ಇದನ್ನು ಸಾಮಾನ್ಯರು ಪ್ರಶ್ನಿಸಿದರೆ ನ್ಯಾಯಾಂಗ ನಿಂದನೆ ಎನಿಸಿಕೊಳ್ಳುತ್ತದೆ ಆದರೆ ಸದರಿ ರಾಘವೇಶ್ವರ ಸ್ವಾಮೀಜಿಯ ಬ್ಲಾಕ್ಮೇಲ್ ತಂತ್ರಗಳು, ಉದ್ಧಟತನಗಳು, ಅಹಂಕಾರ, ದರ್ಪಗಳು ಸಾರ್ವಜನಿಕವಾಗಿ ಖಂಡನೆಗೆ ಒಳಗಾಗುವುದೇ ಇಲ್ಲ. ನ್ಯಾಯಾಂಗ ನಿಂದನೆ ಎನಿಸುವುದೂ ಇಲ್ಲ.

ತೀರಾ ಇತ್ತೀಚೆಗೆ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಚಾರಿಟೆಬಲ್ ಅನುಮೋದನೆ ( ತಿದ್ದುಪಡಿ) ಮಸೂದೆ 2014 ತನ್ನ ಮಂತ್ರಿಮಂಡಲದ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿತು. ನಂತರ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ ಅವರು ಡಿಸೆಂಬರ್20, 2014ರಂದು ವಿಧಾನ ಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು. ಈ 2014ರ ಈ ಮಸೂದೆಯಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಚಾರಿಟೆಬಲ್ ಅನುಮೋದನೆ ( ತಿದ್ದುಪಡಿ) ಮಸೂದೆ 1997 ರನ್ನು ತಿದ್ದುಪಡಿ ಮಾಡಲಾಗಿತ್ತು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಚಾರಿಟೆಬಲ್ ಅನುಮೋದನೆ ( ತಿದ್ದುಪಡಿ) ಮಸೂದೆ 2014 ಈ ಕೂಡಲೆ ಜಾರಿಗೆ ಬರುವಂತೆ ಶಿಫಾರಸ್ಸು ಮಾಡಲಾಗಿತ್ತು. ಈ ತಿದ್ದುಪಡಿಗೊಂಡ ಮಸೂದೆಯ ಅನುಸಾರ

1997ರ ಮಸೂದೆಯ ಸೆಕ್ಷನ್ 23ರಲ್ಲಿ ನಮೂದಿತವಾಗಿರುವಂತ ವಿಷಯಗಳ ಜೊತೆಗೆ ‘ಮತ್ತು ಮಠ, ಅಧ್ಯಾಯ 8A ಮಠ ಅಥವಾ ದೇವಸ್ಥಾನವು ಯಾವುದೇ ನಿರ್ದಿಷ್ಟ ಮಠಕ್ಕೆ ಸೇರಿದ್ದು ಅಥವಾ ಆ ಮಠದ ಆಡಳಿತದ ಸುಪರ್ದಿಯಲ್ಲಿದ್ದು’ ಎನ್ನುವ ವಾಕ್ಯಗಳನ್ನು ಸೇರಿಸಬೇಕೆಂದು ತಿದ್ದುಪಡಿ ಸೂಚಿಲಾಗಿದೆ. ಇದರ ಅನುಸಾರ ಅಧ್ಯಾಯ – 8A – ಮಠಗಳಿಗೆ ಸಂಬಂದಿತ ಹಂಚಿಕೆಗಳು ಇದರ ಅಡಿಯಲ್ಲಿ

ಯಾವ ಯಾವ ಸಂದರ್ಭಗಳಲ್ಲಿ ಸರ್ಕಾರವು ಮಠವೊಂದರ ಆಡಳಿತವನ್ನು ಮತ್ತು ಅದರ ಹಕ್ಕುಬಾಧ್ಯತೆಯನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಬಹುದು ಎಂದರೆ

1. ಸರ್ಕಾರವು ತಮ್ಮ ಮಠ ಮತ್ತು ಅದರ ಆಸ್ತಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಸ್ವತಃ ಮಠಾಧಿಪತಿಯು ಸರ್ಕಾರದ ಮುಂದೆ ಕೋರಿಕೆಯನ್ನು ಸಲ್ಲಿಸಿದಾಗ

2. ಮಠಾಧಿಪತಿಯು ಅಪ್ರಾಪ್ತ ವಯಸ್ಸಿನವರಾಗಿದ್ದು ಸೂಕ್ತವಾದ ಪೋಷಕರು ನೇಮಕಗೊಳ್ಳದೆ ಇದ್ದ ಪಕ್ಷದಲ್ಲಿ ಮತ್ತು ಅಂಗವಿಕಲತೆ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಮಠದ ಆಡಳಿತವನ್ನು ನಡೆಸಲು ಅಸಮರ್ಥರಾದ ಪಕ್ಷದಲ್ಲಿ

3. ಮಠಾಧಿಪತಿಯು ತೀರಿಕೊಂಡ ನಂತರ ಅವರ ಉತ್ತರಾಧಿಕಾರಿಯಾಗಿ ಬೇರೊಬ್ಬರು ನೇಮಕವಾಗದೇ ಇದ್ದ ಸಂದರ್ಭದಲ್ಲಿ ಅಥವಾ ಸೂಕ್ತ ಅಭ್ಯರ್ಥಿ ದೊರಕದೇ ಇದ್ದ ಪಕ್ಷದಲ್ಲಿ

4. ಮಠಕ್ಕೆ ಉತ್ತಾಧಿಕಾರಯನ್ನು ನೇಮಿಸುವ ಸಂದರ್ಭದಲ್ಲಿ ವಿವಾದಗಳು ಬಿಕ್ಕಟ್ಟುಗಳು ಉಂಟಾದಂತಹ ಸಂದರ್ಭಗಳಲ್ಲಿ

ಕಡೆಗೆ

ಯಾವುದೇ ಬಗೆಯ ಕರಾರು ಪತ್ರದ ಅವಧಿ ಮುಗಿದ ನಂತರ, ಅಥವಾ ಉತ್ತರಾಧಿಕಾರಿ ನೇಮಕಗೊಂಡ ನಂತರ, ಅಥವಾ ಉತ್ತರಾಧಿಕಾರಿಯ ಅಪ್ರಾಪ್ತ ವಯಸ್ಸು ಕೊನೆಗೊಂಡು ಪ್ರಾಪ್ತ ವಯಸ್ಕರಾದ ನಂತರ ಮಠದ ಮೇಲಿನ ಸರ್ಕಾರದ ಆಡಳಿತಾತ್ಮಕ ಹಕ್ಕುಗಳು ಕೊನೆಗೊಳ್ಳುತ್ತವೆ.

ಆದರೆ ಮಠವೊಂದರ ಅವ್ಯವಹಾರಗಳ ಕುರಿತಾಗಿ, ಯಾವುದೇ ಬಗೆಯ ದೂರಗಳನ್ನು ಸರ್ಕಾರದ ಮುಂದೆ ಸಲ್ಲಿಸಿದಾಗ, ಪ್ರಾಥಮಿಕ ಹಂತದ ತನಿಖೆಯಿಂದ ಸಂಬಂಧಪಟ್ಟ ಕಮಿಷನರ್ ಅವರಿಗೆ ಅದರಲ್ಲಿ ಸತ್ಯಾಸತ್ಯತೆ ಇದೆ ಎಂದು ಮನವರಿಕೆ ಆದಲ್ಲಿ ಅವರು ಮಠಾದಿಪತಿ ಅಥವಾ ವ್ಯವಸ್ಥಾಪಕರನ್ನು ಕರೆದು ವಿವರಣೆ ಕೇಳಲು ಹಕ್ಕನ್ನು ಕೊಡಲಾಗುತ್ತದೆ. ಸಂಬಂಧಪಟ್ಟ ಮಠಗಳ ಆಡಳಿತ ಮಂಡಳಿಗೆ ಮುಂದಿನ ಕ್ರಮಗಳ ಕುರಿತು ಷೋಕಾಸ್ ನೋಟೀಸನ್ನು ನೀಡಲು ಅನುಮತಿ ಕೊಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಸರ್ಕಾರವು ಮಠವನ್ನು ತನ್ನ ಸುಪರ್ದಿಗೆ ತೆಗುದುಕೊಳ್ಳುವುದನ್ನು ಆಕ್ಷೇಪಿಸಿ ಮಠಾಧಿಪತಿ ಅಥವಾ ವ್ಯವಸ್ಥಾಪಕರು ಕಮಿಷನರ್ ಅವರ ಮುಂದೆ ಅಕ್ಷೇಪಣೆಗಳನ್ನು ಸಲ್ಲಿಸಲು ಅಧಿಕಾರವಿದೆ

ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಕ್ರಮದ ಪರ ಅಥವಾ ವಿರೋಧವಾಗಿ ನಲವತ್ತೈದು ದಿನಗಳ ಒಳಗೆ ಯಾವುದೇ ಬಗೆಯ ಮನವಿ ಅಥವಾ ಅಕ್ಷೇಪಣೆಗಳು ಸಲ್ಲಿಸದಿದ್ದರೆ ನಂತರ ಕಮಿಷನರ್ ನೀಡಿದ ವರದಿಯನ್ನು ಆಧರಿಸಿ ಮಠದ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಕೂಡಲೆ ಅನ್ವಯವಾಗುವಂತೆ ಆಡಳಿತಾಧಿಕಾರಿಯನ್ನು ನೇಮಿಸಬೇಕು

ಒಂದು ವೇಳೆ ನಲವತ್ತೈದು ದಿನಗಳ ಒಳಗೆ ಅಕ್ಷೇಪಣೆಯನ್ನು ಸಲ್ಲಿಸಿದಾಗ ಕಮಿಷನರ್ ಅವರು ತನಿಖಾ ತಂಡವನ್ನು ನೇಮಿಸಿ ಆದೇಶ ಹೊರಡಿಸಬೇಕು. ಮಠಾಧಿಪತಿ ಮತ್ತು ಆಡಳಿತ ಮಂಡಳಿಯೊಂದಿಗೆ ವಿಚಾರಣೆ ನಡೆಸಿದ ನಂತರ ತನಿಖಾ ತಂಡವು ತನ್ನ ವರದಿಯನ್ನು ಕಮಿಷನರ್ ಅವರಿಗೆ ಸಲ್ಲಿಸಬೇಕು

ಸೆಕ್ಷನ್ 48 C ನ ಅಡಿಯಲ್ಲಿ ತನಿಖಾ ವರದಿಯನ್ನು ಸ್ವೀಕರಿಸಿದ ನಂತರ ಕಮಿಷನರ್ ಅವರು ಮಠವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದೆಂದು ಸರ್ಕಾರಕ್ಕೆ ಒಂದು ವರದಿಯನ್ನು ಸಲ್ಲಿಸಬೇಕು.

ಸೆಕ್ಷನ್ 48 B ಅಡಿಯಲ್ಲಿ ಸರ್ಕಾರವು ಕಮಿಷನರ್ ಸಲ್ಲಿಸಿದ ವರದಿಯನ್ನು ಸ್ವೀಕರಿಸಿ ಕಾನೂನಿನ ಅಡಿಯಲ್ಲಿ ಎಲ್ಲಾ ವಿವರಗಳು ಸಮ್ಮತವಾದ ಪಕ್ಷದಲ್ಲಿ ಆ ಕೂಡಲೆ ಸಂಬಂಧಪಟ್ಟ ಮಠಕ್ಕೆ ನೋಟೀಸನ್ನು ಜಾರಿಗೊಳಿಸಬೇಕು

ನಂತರ ಕೂಡಲೆ ಜಾರಿಗೆ ಬರುವಂತೆ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಆಡಳಿತವನ್ನು ಸುಗಮವಾಗಿ ನೆರವೇರಿಸಲು ಆಡಳಿತಾಧಿಕಾರಿಗೆ ಮಠಾಧಿಪತಿಗೆ ಇದ್ದಂತೆ ಸಂಪೂರ್ಣ ಅಧಿಕಾರವನ್ನು ಕೊಡಬೇಕು

ಇದಿಷ್ಟೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಚಾರಿಟೆಬಲ್ ಅನುಮೋದನೆ ( ತಿದ್ದುಪಡಿ) ಮಸೂದೆ 2014ರ ಸಂಕ್ಷಿಪ್ತ ವಿವರಗಳು

ಮೇಲ್ನೋಟಕ್ಕೆ ಕಾಣುವಂತೆಯೇ ಈ 2014ರ ತಿದ್ದುಪಡಿ ಮಸೂದೆಯಲ್ಲಿ ಯಾವುದೇ ಬಗೆಯ ಸಂವಿಧಾನ ವಿರೋಧಿ Karnataka-assembly-sessionಅಂಶಗಳು ಇಲ್ಲ. ಪ್ರಜಾತಾಂತ್ರಿಕ ಆಶಯಗಳಿಗೆ ಅನುಗುಣವಾಗಿಯೇ ಈ ತಿದ್ದುಪಡಿಯನ್ನು ರೂಪಿಸಲಾಗಿದೆ. ಇಲ್ಲಿ ಸರ್ಕಾರವು ಎಲ್ಲಿಯೂ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದಕ್ಕೆ ಪುರಾವೆಗಳಿಲ್ಲ. ಆದರೆ ಈ ತಿದ್ದುಪಡಿ ಮಸೂದೆಯನ್ನು ವಿವರವಾಗಿ ಪರಿಶೀಲಿಸುವ ಗೋಜಿಗೂ ಹೋಗದ ಈ ಮಠಾಧೀಶರು ಸರ್ಕಾರ ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿ ಸರ್ಕಾರವು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಅದು ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವಂತಹ ಬೆದರಿಕೆಯ ಮಾತುಗಳನ್ನೂ ಸಹ ಕೆಲ ಮಠಾಧೀಶರು ಆಡಿದರು. ತಮ್ಮೊಂದಿಗೆ ಚರ್ಚಿಸದೆ ಈ ಮಸೂದೆಯನ್ನು ವಿಧಾನ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಈ ಎಲ್ಲಾ ಮಠಾಧೀಶರ ಪ್ರಮುಖ ದೂರುಗಳಲ್ಲೊಂದು. ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷವು ರಾಜಕೀಯವಾಗಿ ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿತು. ತನ್ನನ್ನು ಹಿಂದೂ ಧರ್ಮರಕ್ಷಕನೆಂಬಂತೆ ಬಿಂಬಿಸಿಕೊಳ್ಳುವ ಈ ಮತೀಯವಾದಿ ಬಿಜೆಪಿ ಪಕ್ಷವು ಕೂಡಲೆ ಮಠಗಳ ರಕ್ಷಣೆಗೆ ಧಾವಿಸಿತು. ಮಠಗಳ ಪರವಾಗಿ ತನ್ನ ಬೆಂಬಲವನ್ನು ಸಹ ಘೋಷಿಸಿತು. ಜನಸಾಮಾನ್ಯರನ್ನು ಧಾರ್ಮಿಕವಾಗಿ ಪ್ರಚೋದಿಸುವ ಕೆಲಸಕ್ಕೂ ಕೈ ಹಾಕಿದ ಬಿಜೆಪಿ ಪಕ್ಷಕ್ಕೆ ನಿರೀಕ್ಷಿತ ಬೆಂಬಲ ದೊರಕದೆ ತೆಪ್ಪಗಾಯಿತು.

ಆದರೆ ಇದೆಲ್ಲದಕ್ಕೂ ಒಂದು ಹಿನ್ನೆಲೆಯಿದೆ.

2007ರಲ್ಲಿ ಕುಮಾರಸ್ವಾಮಿ ನೇತೃತ್ವದ ಜನತಾದಳ ಮತ್ತು ಬಿಜೆಪಿ ಪಕ್ಷಗಳ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಬ್ರಾಹ್ಮಣರ ಅಷ್ಟ ಮಠಗಳಲ್ಲೊಂದಾದ ಸೋಸಲೆ ಮಠವು ‘ತನ್ನ ಆಸ್ತಿಯನ್ನು ಕೆಲವು ಗುಂಪುಗಳು ಕಬಳಿಸಲು ಸಂಚು ರೂಪಿಸುತ್ತಿವೆ. ಅನಧಿಕೃತವಾಗಿ ತಮ್ಮ ಮಠದvyasaraja-mutt-sosale-in_3 ವ್ಯವಹಾರಗಳಲ್ಲಿ ಪಾಲ್ಗೊಳ್ಳುತ್ತಿವೆ. ತಮ್ಮ ಮಠದ ಆಸ್ತಿಯನ್ನು ಮಾರಾಟ ಮಾಡುತ್ತಿವೆ. ತಾವು ನಮಗೆ ಈ ಕೂಡಲೆ ಸೂಕ್ತ ಭಧ್ರತೆಯನ್ನು ಒದಗಿಸಬೇಕು, ಒಬ್ಬ ಆಡಳಿತ ಅಧಿಕಾರಿಯನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ’ ಎಂದು ಹೈಕೋರ್ಟಗೆ ನಂತರ ಸುಪ್ರೀಂ ಕೋರ್ಟಗೆ ಮನವಿ ಸಲ್ಲಿಸಿತು. ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಕರ್ನಾಟಕ ಸರ್ಕಾರಕ್ಕೆ ಸಮನ್ಸ್ ಜಾರಿಗೊಳಿಸಿ ತುರ್ತುಕ್ರಮ ಕೈಗೊಳ್ಳುವಂತೆ ಆದೇಶಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಆಗಿನ ಕರ್ನಾಟಕ ಸರ್ಕಾರವು ಮಠಗಳ ಖಾಸಗಿ ವ್ಯವಹಾರಗಳಲ್ಲಿ ತಾನು ಭಾಗಿಯಾಗುವ ಹಾಗೆ ಇಲ್ಲವೆಂತಲೂ ಇದರ ಕುರಿತಾಗಿ ಸೂಕ್ತ ಕಾನೂನಿನ ಕ್ರಮದ ಕುರಿತಾಗಿ ಅಧ್ಯಯನ ಮಾಡುತ್ತಿರುವುದಾಗಿ ಕೋರ್ಟಗೆ ಅಫಡೆವಿಟ್ ಸಲ್ಲಿಸಿತು. ಸುಮಾರು ಏಳು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಈ ಸೋಸಲೆ ಮಠದ ಕೇಸ್ 2014ರ ಸೆಪ್ಟೆಂಬರ್ ನಲ್ಲಿ ಮತ್ತೆ ಮರುಜೀವ ಪಡೆದುಕೊಂಡು ಸುಪ್ರೀಂ ಕೋರ್ಟ ಕರ್ನಾಟಕ ಸರ್ಕಾರಕ್ಕೆ ತನ್ನ ಸಮನ್ಸ್ ಗೆ ಇನ್ನೂ ಉತ್ತರ ಕೊಡದಿರುವುದಕ್ಕೆ ಅಸಮಧಾನ ವ್ಯಕ್ತಪಡೆಸಿತು. ಈ ಎಲ್ಲಾ ಹಿನ್ನೆಲೆಯಲ್ಲಿ ನ್ಯಾಯಾಂಗದ ಆದೇಶವನ್ನು ಪಾಲಿಸಲು ಈ 2014ರ ತಿದ್ದುಪಡಿ ಮಸೂದೆಯನ್ನು ಕರ್ನಾಟಕ ಸರ್ಕಾರ ಸದನದಲ್ಲಿ ಮಂಡಿಸಿತು. ಇಷ್ಟರಲ್ಲೇ ಕೋರ್ಟನಿಂದ ಹೊಸ ಆದೇಶ ನೀಡುವ ಸಾಧ್ಯತೆಗಳಿವೆ.

ಇದರ ಎಲ್ಲಾ ವಿವರಗಳನ್ನು ಒಳಗೊಂಡಂತೆ ಆಡಳಿತ ಪಕ್ಷವಾದ ಕಾಂಗ್ರೆಸ್ ಸಹ ಇಂತಹ ಸೂಕ್ಷ್ಮ ಮಸೂದೆಯನ್ನು ವಿರೋಧ ಪಕ್ಷಗಳೊಂದಿಗೆ ಪೂರ್ವಭಾವಿಯಾಗಿ ಸಮಾಲೋಚಿಸುವ ರಾಜಕೀಯ ಮುತ್ಸದ್ದಿತನವನ್ನು ತೋರಿಸದೆ ನೇರವಾಗಿ ಸದನದಲ್ಲಿ ಮಂಡಿಸಲು ಆತುರ ತೋರಿದ್ದು ಒಂದು ಬೇಜವ್ದಾರಿ, ಬಾಲಿಶ ವರ್ತನೆಯಾದರೆ ಮತ್ತೊಂದೆಡೆ ಕೇವಲ ಹಿಂದೂ ಧಾರ್ಮಿಕ ಮಠಗಳಿಗೆ ಸಂಬಂಧಪಟ್ಟಂತೆ ಮಸೂದೆಯನ್ನು ತರಲಾಗಿದ್ದು ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳನ್ನು ಕೈ ಬಿಡಲಾಗಿದೆ ಆ ಮೂಲಕ ಅಲ್ಪಸಂಖ್ಯಾತರ ಓಲೈಸುತ್ತಿದೆ ಎನ್ನುವ ಆರೋಪವನ್ನು ಸಹ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಎದುರಿಸಬೇಕಾಯಿತು. ತನ್ನ ಪಕ್ಷದೊಳಗಿನ ಭಿನ್ನಮತದಿಂದಾಗಿ, ಸಮನ್ವಯತೆಯ, ಸಾಮರಸ್ಯದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷವು ಸದನದಲ್ಲಿ ತಾನೇ ಮಂಡಿಸಿದ ಮಸೂದೆಯೊಂದನ್ನು ಹಿಂಪಡೆಯುವಂತಹ ಮುಜುಗರಕ್ಕೆ, ಸಂವಿಧಾನಿಕ ಬಿಕ್ಕಟ್ಟಿಗೆ ಒಳಗಾಗುವಂತಾಯಿತು.

ಶತಮಾನಗಳ ಕಾಲ ಮೌಢ್ಯದಲ್ಲಿ, ಪ್ರತ್ಯೇಕತೆ ಮತ್ತು ತಾರತಮ್ಯವನ್ನು ಅನುಭವಿಸುತ್ತ ನರಳಿದ ಇಂಡಿಯಾ ದೇಶಕ್ಕೆ ಸಾಮಾಜಿಕ ನ್ಯಾಯವನ್ನು, ಹೊಸ ಆದರ್ಶಗಳನ್ನು, ಬಹುರೂಪಿ ಸಂಸ್ಕೃತಿಯನ್ನು, ಧರ್ಮ ನಿರಪೇಕ್ಷತೆಯನ್ನು, ಸೆಕ್ಯುಲರ್ ಚೌಕಟ್ಟನ್ನು ತಂದುಕೊಡುವ ಸಲುವಾಗಿ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಲಾಯಿತು. ಈ ಮೂಲಕ ಇಂಡಿಯಾ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ, ವಿಕೇಂದ್ರೀಕರಣಗೊಂಡ ಗಣರಾಜ್ಯ ವ್ಯವಸ್ಥೆಯು 1950ರಲ್ಲಿ ಅನುಷ್ಠಾನಗೊಂಡಿತು. ಕಳೆದ ಈ 64 ವರ್ಷಗಳಲ್ಲಿ ಇಂಡಿಯಾ ದೇಶವು ಕ್ರಮಿಸಿದ ಹಾದಿಯನ್ನು ಗಮನಿಸಿದಾಗ ಮೇಲಿನ ಈ ಎಲ್ಲಾ ವೈವಿಧ್ಯತೆಗಳ ನಡುವೆಯೂ ‘ಕೊಡುವವರಾಗಿ ಪ್ರಭುತ್ವ’ ಮತ್ತು ‘ಪಡೆದುಕೊಳ್ಳುವವರಾಗಿ ಪ್ರಜೆ’ ಎನ್ನುವ ಕೇಂದ್ರೀಕರಣಗೊಂಡ ವ್ಯವಸ್ಥೆ ಜಾರಿಗೊಂಡಿದ್ದಂತೂ ವಾಸ್ತವ. ತನ್ನ ನಾಗರಿಕರಿಗೆ, ತಳ ಸಮುದಾಯಗಳಿಗೆ ಸಾಂಸ್ಕೃತಿಕ ವೈವಿಧ್ಯತೆಯನ್ನು,ಶಿಕ್ಷಣವನ್ನು, ಆರೋಗ್ಯವನ್ನು ಕೊಡಬೇಕಾಗಿದ್ದ ಸರ್ಕಾರವು ಕ್ರಮೇಣ ಆ ಜವಾಬ್ದಾರಿಯಿಂದ ನುಣುಚಿಕೊಂಡು ಖಾಸಗಿ ಬಂಡವಾಳಶಾಹಿಗಳ, ಪಟ್ಟಭಧ್ರ ಹಿತಾಸಕ್ತಿಗಳ ಕೈಗೆ ಜವಬ್ದಾರಿಯನ್ನು ವರ್ಗಾಯಿಸಿತು. ಇದರ ವಿವರಗಳನ್ನು ಮತ್ತೊಂದು ವೇದಿಕೆಯಲ್ಲಿಯೇ ಚರ್ಚಿಸಬೇಕಾಗುತ್ತದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕದ ಮಠಗಳ ವಿಷಯಕ್ಕೆ ಬಂದರೆ ಸರ್ಕಾರದ ವೈಫಲ್ಯ ಮತ್ತು ಭ್ರಷ್ಟತೆಯ ಕಾರಣದಿಂದಾಗಿ ಬಲು ಮುಖ್ಯವಾದ ಶೈಕ್ಷಣಿಕ ವಲಯ ಇಂದು ಅನೇಕ ಪ್ರಭಾವಶಾಲಿ ರಾಜಕಾರಣಿಗಳ ಕುಟುಂಬ ಮತ್ತು ಸಂಪೂರ್ಣವಾಗಿ ಜಾತಿಪದ್ಧತಿಯ, ಧಾರ್ಮಿಕತೆಯ ಕೇಂದ್ರಗಳಾದ ಮಠಗಳ ಕೈವಶವಾಗಿದೆ. ಸಂವಿಧಾನದ ಮೂಲಭೂತ ಆಶಯಗಳಾದ ವಿಕೇಂದ್ರೀಕರಣ ಮತ್ತು ಸಾಮಾಜಿಕ ನ್ಯಾಯ ಸಂಪೂರ್ಣವಾಗಿ ಕಣ್ಮರೆಯಾಗಿ ಮೆರಿಟ್, ಪ್ರತಿಭೆ, ಅಭಿವೃದ್ಧಿ, ಆಧುನಿಕ ತಂತ್ರಜ್ಞಾನ ಎನ್ನುವ ಮರೆಮೋಸದ, ಭ್ರಮೆಗಳ ಶ್ರೇಷ್ಠತೆಯ ವ್ಯಸನವನ್ನು ಹುಟ್ಟು ಹಾಕುವ ವ್ಯವಸ್ಥೆ ಸ್ಥಾಪಿತಗೊಂಡಿತು. ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಈ ಜಾತಿವಾದಿ ಮಠಗಳು ಮತ್ತು ರಾಜಕಾರಣಿಗಳ ಕುಟುಂಬದ ಪಟ್ಟಭಧ್ರ ಶಕ್ತಿಗಳ ಹಿತಾಸಕ್ತಿಗಳನ್ನು ಪೋಷಿಸುವ ಕೇಂದ್ರಗಳು ಸ್ಥಾಪಿತಗೊಂಡಿತು. ಈ ಮೂಲಕ ಸಾಮಾಜಿಕ ನ್ಯಾಯ ಮತ್ತು ವಿಕೇಂದ್ರೀಕರಣ ಸಂಪೂರ್ಣ ಕಣ್ಮರೆಯಾಗಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಂಡಿತು. ಸಂವಿಧಾನವನ್ನು ಕೇವಲ ಒಂದು ನುಡಿಕಟ್ಟುಗಳ ಕೃತಿಯಾಗಿ ಬಳಸುವಂತಹ ಒಂದು ಪ್ರಕ್ರಿಯೆ ಇಂದಿಗೂ ಚಾಲ್ತಿಯಲ್ಲಿದೆ.

ಈ ಎಲ್ಲಾ ನ್ಯೂನ್ಯತೆಗಳನ್ನು ತನ್ನ ಸ್ವಹಿತಾಸಕ್ತಿಗೆ ಬಳಸಿಕೊಂಡ ಮಠಗಳೆಂಬ ಜಾತಿಪದ್ಧತಿಯ ಒಕ್ಕೂಟಗಳು ಇಂದು ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ, ಧಾರ್ಮಿಕ ವಲಯದಲ್ಲಿ ಆಳವಾಗಿ ಬೇರೂರಿವೆ. ಈ ಜಾತಿವಾದಿ ಮಠಗಳ ಸರ್ವಾಧಿಕಾರಿ ಧೋರಣೆಗಳನ್ನು, ಅವ್ಯವಹಾರಗಳನ್ನು, ಭ್ರಷ್ಟತೆಯನ್ನು ಪ್ರಶ್ನಿಸುವ ಹೋರಾಟಗಳನ್ನು ಸಂಪೂರ್ಣವಾಗಿ ಹತ್ತಿಕ್ಕಿದ ಪ್ರಭುತ್ವದ ದೌರ್ಜನ್ಯದ ವಿರುದ್ಧ ಇಂದು ಸಂವಿಧಾನದ ಉಳಿವಿಗಾಗಿ ನ್ಯಾಯಾಲಯವು ಮಧ್ಯ ಪ್ರವೇಶಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದರೆ ಕೆಲವೊಮ್ಮೆ ಮಾನವೀಯ ಸೈದ್ಧಾಂತಿಕತೆಯನ್ನು, ಪ್ರಾಮಾಣಿಕ ಕಳಕಳಿಯನ್ನು ಅಲಕ್ಷಿಸಿ ಕೇವಲ ಸಾಕ್ಷಿಗಳು ಮತ್ತು ದಾಖಲೆಗಳನ್ನು ಆಧರಿಸುವ ನ್ಯಾಯಾಂಗ ವ್ಯವಸ್ಥೆಯು ಅನೇಕ ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಪ್ರತಿಕೂಲವಾಗುವಂತಹ, ಪಟ್ಟಭದ್ರ ಹಿತಾಸಕ್ತಿಗಳ, ಮಠಗಳ ಪರವಾದಂತಹ ತೀರ್ಪುಗಳನ್ನು ಪ್ರಕಟಿಸಿದೆ. ಈ ನೆಲದ ಕಾನೂನನ್ನು ಅನುಸರಿಸಲು, ತಮ್ಮ ವ್ಯಾಪಾರಿ ಸಂಸ್ಥೆಗಳಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಾಗದ ಮಟ್ಟಿಗೆ ಈ ಮಠಗಳು ಮತ್ತು ಮಠಾಧೀಶರು ಜನವಿರೋಧಿಗಳಾಗಿ ವರ್ತಿಸುತ್ತಿದ್ದಾರೆ. ಜಗತ್ತಿನ ಮುಂದೆ ಬಯಲಾಗುತ್ತೇವೆ ಎನ್ನುವ ಅರಿವಿದ್ದರೂ ತಮ್ಮ ಹಂಗಿನಲ್ಲಿರುವ ಅಧಿಕಾರಸ್ತರನ್ನು, ರಾಜಕಾರಣಿಗಳನ್ನು ತಮ್ಮ ಸ್ವಹಿತಾಸಕ್ತಿಗಳಿಗೆ ಬಳಸಿಕೊಳ್ಳುತ್ತಲೇ ತಮ್ಮ ಜಾತೀಯತೆಯನ್ನು ಮತ್ತು ಧಾರ್ಮಿಕ ದರ್ಪವನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಲೇ ಇರುತ್ತಾರೆ.

ಆದರೆ ಇಲ್ಲಿನ ಪ್ರಜ್ಞಾವಂತರು ಸಹ ಈ ಸಂದರ್ಭದಲ್ಲಿ ಈ ನೆಲದ ಕಾನೂನನ್ನು ಈ ಮಠಾಧೀಶರಿಗೆ ಮನದಟ್ಟು ಮಾಡಿಕೊಡುತ್ತಲೇ ಧಾರ್ಮಿಕ ನಂಬಿಕೆಗಳನ್ನು ಮೀರಿದ ಸೈದ್ಧಾಂತಿಕ ಚಳುವಳಿಯೊಂದನ್ನು ಕಟ್ಟುವಲ್ಲಿ ವಿಫಲರಾಗಿರುವುದಕ್ಕೆ ಕಾರಣ ನಮ್ಮಲ್ಲಿ ಆಳವಾಗಿ ಬೇರೂರಿರುವ ಉದಾರವಾದಿ ನಿಲುವುಗಳು. ಮಠಗಳ ಮತ್ತು ಮಠಾಧೀಶರ ಜನವಿರೋಧಿ ತತ್ವಗಳ ಕುರಿತಾಗಿ ನಿರಂತರವಾದ ಸಂಘರ್ಷವನ್ನು ರೂಪಿಸಬೇಕಾದ ಸಂದರ್ಭದಲ್ಲಿ ನಾವು ಹೊಂದಿಕೊಂಡು ಹೋಗುವ ಗುಣಗಳನ್ನು ಬೆಳೆಸಿಕೊಳ್ಳ್ಳುತ್ತಿದ್ದೇವೆ. ಇದರ ಫಲವಾಗಿ ಜನ ಸಾಮಾನ್ಯರ ನಂಬಿಕೆಗಳೂ ಮಠಗಳ ಕರ್ಮಠತನಗಳೂ ಪರಸ್ಪರ ವಿಲೀನಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಪ್ರಜ್ಞಾವಂತರು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾದ ಈ ವಿಲೀನದ ಸ್ವರೂಪದ ಕುರಿತಾಗಿ ಉದಾರವಾದಿ ಧೋರಣೆಗಳನ್ನು ಬೆಳೆಸಿಕೊಳ್ಳುತ್ತಿರುವಂತಹ ಅಷಾಢಭೂತಿ ಧೋರಣೆಗಳೇ ಇಂದಿನ ಪ್ರಧಾನ ಗುಣಲಕ್ಷಣಗಳಾಗಿವೆ. ಹೀಗಾಗಿಯೇ ಸರ್ಕಾರವು ಸಂವಿಧಾನ ವಿಧಿ ನಿಯಮಗಳಿಗೆ ಅನುಗುಣವಾಗಿಯೇ ಮೌಢ್ಯ ವಿರೋಧಿ ಕಾನೂನನ್ನು ಸದನದಲ್ಲಿ ಮಂಡಿಸಿದರೆ ಮಠಾಧೀಶರು, ಮತೀಯವಾದಿಗಳು ಸಂವಿಧಾನಕ್ಕೆ ಅಪಚಾರ ಎಸಗುವ ರೀತಿಯಲ್ಲಿ ಸಾರ್ವಜನಿಕವಾಗಿ ಅದರ ವಿರುದ್ಧ ಟೀಕಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ. ಸಂವಿಧಾನದ ಕಾಯ್ದೆಯ ಅನುಗುಣವಾಗಿ ಈ ಮೌಢ್ಯ ವಿರೋಧಿ ಮಸೂದೆ ಜಾರಿಗೊಂಡರೆ ಸಾಮಾಜಿಕ ಸಂಘರ್ಷಗಳಿಗೆ ಕಾರಣವಾಗುತ್ತದೆ ಎಂದು ಹಿಂಸಾಚಾರದ ಧೋರಣೆಯಲ್ಲಿ ಎಚ್ಚರಿಸುತ್ತಾರೆ. ಮಠಗಳಿಗೆ ಅವರ ಅವಶ್ಯಕತೆಗೆ ಅನುಸಾರವಾಗಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗುವ ತಿದ್ದುಪಡಿ ಮಸೂದೆಯನ್ನು ಮಂಡಿಸಿದಾಗ ಮಠಾಧೀಶರು ಅದನ್ನು ಪ್ರತಿಭಟಿಸಿ ಬಿದಿಗಿಳಿಯುತ್ತಾರೆ. ಸರ್ಕಾರ, ಸಂವಿಧಾನ, ಗಣರಾಜ್ಯ ಒಕ್ಕೂಟ ಇವೆಲ್ಲವನ್ನೂ ಮೀರಿದ ಸಂಸ್ಥೆಗಳು ಈ ಮಠಗಳು, ಮಠಾಧೀಶರಾದ ನಾವು ಸಹ ಪ್ರಶ್ನಾತೀತರು ಯಾವುದೇ ಕಾನೂನಿನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನೇರವಾಗಿ ಸರ್ಕಾರಕ್ಕೆ ಸವಾಲೆಸೆದಿದ್ದರೆ ಕಾಂಗ್ರೆಸ್ ಪಕ್ಷ ಹೊಣಗೇಡಿಯಂತೆ ವರ್ತಿಸುತ್ತಾ ತನ್ನ ಜವಬ್ದಾರಿಯನ್ನು ಮರೆತು ಈ ಮಠಾಧೀಶರಿಗೆ ಶರಣಾಗಿದೆ. ಒಂದು ವರ್ಷದ ಅವಧಿಯಲ್ಲಿ ಇದು ಎರಡನೇ ಬಾರಿ ಈ ರೀತಿ ತನ್ನ ಅಸಹಾಯಕತೆಯನ್ನು,ಶರಣಾಗತಿಯನ್ನು ಪ್ರದರ್ಶಿಸಿದೆ.

ಕಡೆಯದಾಗಿ ಸಮಾನತೆ, ಧರ್ಮ ನಿರಪೇಕ್ಷತೆ, ಬಹುತ್ವ ತತ್ವಗಳನ್ನು ಜನಪರವಾಗಿ ರೂಪಿಸಬೇಕಾದ ಹೊಣೆಗಾರಿಕೆ ಈ ನಾಡಿನ ಪ್ರಜ್ಞಾವಂತರ ಮೇಲಿದೆ. ಆದರೆ ಬೂರ್ಜ್ವಾ ದೃಷ್ಟಿಕೋನ ಮತ್ತು ಸಂತೃಪ್ತ ಜೀವನ ಶೈಲಿಯನ್ನು ರೂಪಿಸಿಕೊಂಡ ನಾವೆಲ್ಲ ಈ ಕಾರಣಕ್ಕಾಗಿಯೇ ಮಠಗಳು ಮತ್ತು ಮಠಾಧೀಶರ ಸರ್ವಾಧಿಕಾರಿ ಧೋರಣೆಗಳಿಗೆ, ವರ್ತನೆಗಳಿಗೆ ಪ್ರಬಲವಾದ ನೈತಿಕ ಪೆಟ್ಟು ಕೊಡಲು ಅಸಮರ್ಥರಾಗಿದ್ದೇವೆ. ನಮ್ಮೊಳಗೆ ಒಂದು ಬಗೆಯ ಶರಣಾಗತಿಯ ವ್ಯಕ್ತಿತ್ವವನ್ನು ಪ್ರಜ್ಞಾಪೂರ್ವವಾಗಿ ಬೆಳೆಸಿಕೊಂಡಿರುವ, ಲಿಬರಲ್ ಧೋರಣೆಯವರು ನಾವು ಎನ್ನುವ ಸ್ಲೋಗನ್ ನ ಮುಖವಾಡವನ್ನು ಧರಿಸಿ ಪ್ರಜ್ಞಾಪೂರ್ವಕವಾಗಯೇ ಅಪ್ರಜ್ಞಾಪೂರ್ವಕವಾಗಿ ಬದುಕುತ್ತಿದ್ದೇವೆ. ನಮ್ಮೆಲ್ಲರ ಈ ಸೋಗಲಾಡಿತನದ, ಹೊಣಗೇಡಿ ವರ್ತನೆಯಿಂದಾಗಿ ಸಂವಿಧಾನವನ್ನು ಧಿಕ್ಕರಿಸುವ ಗುಂಪುಗಳಿಗೆ, ಸಂಸ್ಥೆಗಳಿಗೆ, ಫ್ಯಾಸಿಸ್ಟ್ ಶಕ್ತಿಗಳಿಗೆ ಇಲ್ಲಿನ ಪ್ರಜಾಪ್ರಭುತ್ವದ ವ್ಯವಸ್ಥೆ ವರವಾಗಿ,ಅಡಗುತಾಣವಾಗಿ ಮಾರ್ಪಟ್ಟಿದೆ.