Daily Archives: February 16, 2015

ಕಾಣದಾಗಿದೆ ರೈತಪರ ಕಾಳಜಿ, ಹುಡುಕಿಕೊಡಿ ಪ್ಲೀಜ್

– ಸದಾನಂದ ಲಕ್ಷ್ಮೀಪುರ

ಹಾಸನದಲ್ಲಿ ರೈತಪರ ಹೋರಾಟಗಾರರ ಬಂಧನ:

ಅಡವಿ ಬಂಟೇನಹಳ್ಳಿ ಹಾಸನ ತಾಲೂಕಿನ ಗ್ರಾಮ. ಹೆಸರೇ ಹೇಳುವಂತೆ ಅಡವಿಯೇ ಆ ಊರು. ಹತ್ತಾರು ಊರುಗಳಿಂದ ಐವತ್ತು ವರ್ಷಗಳ ಹಿಂದೆ ಇಲ್ಲಿಗೆ ಬಂದ ಭೂರಹಿತ ಕೃಷಿ ಕಾರ್ಮಿಕರು ಕಟ್ಟಿಕೊಂಡ ಊರದು. ಸೀಗೆಗುಡ್ಡ ಎಂಬ ಎತ್ತರದ ಪ್ರದೇಶದ ಸುತ್ತಲಲ್ಲಿರುವ ಭೂಮಿಯನ್ನು ಸಮತಟ್ಟು ಮಾಡಿಕೊಂಡು ಬಹಳ ಕಾಲದಿಂದ ಕೃಷಿ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಕರ್ನಾಟಕ ಭೂ ಸುಧಾರಣೆ ಕಾಯಿದೆಯಡಿ ಅದೇ ಭೂಮಿಯ ಮಂಜೂರಿಗಾಗಿ ಅರ್ಜಿ ಹಾಕಿದ್ದಾರೆ.HRN ಬೆರಳೆಣಿಕೆಯಷ್ಟು ಜನರಿಗೆ ಮಂಜೂರೂ ಆಗಿದೆ, ಮತ್ತೆ ಕೆಲವರ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಈಗ್ಗೆ ನಾಲ್ಕು ದಿನಗಳ ಹಿಂದೆ (ದಿನಾಂಕ ಫೆ.12) ಅರಣ್ಯ ಇಲಾಖೆಯ ಸಿಬ್ಬಂದಿ ಆ ಭೂ ಪ್ರದೇಶ ಕಾಯ್ದಿಟ್ಟ ಅರಣ್ಯ ಎಂದು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮುಂದಾದರು. ಒಂದು ದಿನದ ಮಟ್ಟಿಗೆ ಅವರ ಕಾರ್ಯಾಚರಣೆ ಯಾವುದೇ ಅಡೆತಡೆ ಇಲ್ಲದೆ ನಡೆಯಿತು. ಮಾರನೆಯ ದಿನವೂ ಅವರು ಕಾರ್ಯಾಚರಣೆ ಮುಂದುವರಿಸಿದರು. ಆ ಹೊತ್ತಿಗೆ ರೈತರು ಸಂಘಟಿತರಾಗಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಎಚ್.ಆರ್.ನವೀನ್ ಕುಮಾರ್, ಎಂ.ಜಿ. ಪೃಥ್ವಿ, ರಾಘವೇಂದ್ರ ಮತ್ತಿತರರ ನೇತೃತ್ವದಲ್ಲಿ ಸೀಗೆಗುಡ್ಡದ ತಪ್ಪಲಲ್ಲಿ ಧರಣಿ ಕೂತರು. ಅರಣ್ಯಾಧಿಕಾರಿಗಳು ತಮ್ಮ ಕಾರ್ಯ ಮುಂದುವರಿಸಲಾಗದೆ, ಪೊಲೀಸರನ್ನು ಕರೆಸಿದರು. ಪೊಲೀಸ್ ಮೀಸಲು ಪಡೆ ಸ್ಥಳಕ್ಕೆ ಧಾವಿಸಿತು. ರೈತರು ಜೆಸಿಬಿಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದರು.

ಕಳೆದ 50 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದೇವೆ. ಹೀಗೆ ಏಕಾಏಕಿ ನುಗ್ಗಿ ಎತ್ತಂಗಡಿ ಮಾಡಿಸುವುದೆಂದರೆ ಹೇಗೆ, ಎನ್ನುವುದು ಅವರ ವಾದ. ಅಷ್ಟಲ್ಲದೆ ತೆಂಗಿನ ತೋಟದ ಮಧ್ಯೆ ಜೆಸಿಬಿ ಸಹಾಯದಿಂದ ಗುಂಡಿ ತೋಡಿ ರೈತನ ಆಕ್ರೋಷಕ್ಕೆ ಕಿಡಿ ಹತ್ತಿಸಿದರು.

ಅಧಿಕಾರಿಗಳು ತಮ್ಮ ಕಾರ್ಯಾಚರಣೆಗೂ ಮುನ್ನ ಯಾರಿಗೂ ನೊಟೀಸ್ ನೀಡಿಲ್ಲ. ಕೇಳಿದರೆ, ನೊಟೀಸ್ ನೀಡುವ ಪ್ರಮೇಯವೇ ಸೃಷ್ಟಿಯಾಗುವುದಿಲ್ಲ, ಏಕೆಂದರೆ ಇದು ಅರಣ್ಯ ಭೂಮಿ. 1940 ರಷ್ಟು ಹಿಂದೆಯೇ ಕಾಯ್ದಿಟ್ಟ ಅರಣ್ಯ ಎಂದು ಘೋಷಿಸಿಯಾಗಿದೆ. ಮುಲಾಜಿಲ್ಲದೆ ಎತ್ತಂಗಡಿ ಮಾಡಿಸದೇ ಬೇರೆ ದಾರಿ ಇಲ್ಲ ಎನ್ನುವುದು ಅಧಿಕಾರಿಗಳ ವಾದ. ಆದರೆ ಮಂಜೂರಾದ ಬಗ್ಗೆ ಕೆಲವರ ಬಳಿ ದಾಖಲೆಗಳಿವೆ. ಅವುಗಳನ್ನು ಪರಿಶೀಲಿಸಿ. ಮೇಲಾಗಿ ಸರಕಾರದ ನೇತಾರರು ಆಗಾಗ ಹೇಳುತ್ತಾ ಬಂದಿರುವುದೆಂದರೆ, ಐದು ಎಕರೆಗಿಂತ ಕಡಿಮೆ ಕಂದಾಯ ಭೂಮಿ ಒತ್ತುವರಿ ಮಾಡಿರುವವರನ್ನು ಹಾಗೂ ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಒತ್ತುವರಿ ಮಾಡಿರುವವರನ್ನು ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕೈ ಬಿಡಲಾಗುವುದು. ಇದೇ ಅಭಿಪ್ರಾಯವನ್ನು ಕರ್ನಾಟಕ ಹೈಕೋರ್ಟ್ ಕೂಡ ವ್ಯಕ್ತಪಡಿಸಿದೆ. ಹೀಗಿರುವಾಗ ಒತ್ತುವರಿ ತೆರವು ಮಾಡಬಾರದು ಎನ್ನುವುದು ಪ್ರತಿಭಟನಾಕಾರರ ವಾದ.

ಆರೋಪಗಳು:
ಫೆ.13 ರ ಸಂಜೆ ಹೊತ್ತಿಗೆ ಎಲ್ಲವೂ ಶಾಂತವಾಯ್ತು. ರೈತರ ಬಳಿ ಇರುವ ದಾಖಲೆಯನ್ನು ಪರಿಶೀಲಸಿ ಮುಂದಿನ ಕ್ರಮ ತೆಗೆದುಕೊಳ್ಳುವುದು ಎಂದು ಅಧಿಕಾರಿಗಳು ಹಿಂದೆ ನಡೆದರು. ಕೆಪಿಆರ್‌ಎಸ್ ನೇತಾರರೂ ಹಾಸನಕ್ಕೆ ಹಿಂತಿರುಗಿದರು. ನಗರದ ಸಿಐಟಿಯು ಕಚೇರಿಯಲ್ಲಿ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ ನವೀನ್, ಪೃಥ್ವಿ, ರಾಘವೇಂದ್ರ ಇತರರು ಸಭೆ ನಡೆಸುತ್ತಿರುವಾಗ, ಅಂದರೆ ರಾತ್ರಿ 9 ರ ಹೊತ್ತಿಗೆ, ಧಾವಿಸಿದ ಪೊಲೀಸರು ಮೂವರನ್ನೂ ಬಂಧಿಸಿದರು. ಯಾಕೆ…ಏನು? ಎಂದು ವಿಚಾರಿಸಿದರೆ, ಅರಣ್ಯ ಇಲಾಖೆ ಅಧಿಕಾರಿಗಳು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗಾಗಿ ಬಂಧನ ಆಗಲೇಬೇಕು ಎನ್ನುವುದು ಪೊಲೀಸರ ವಾದ. ಆ ಹೊತ್ತಿಗೆ ವಿರೂಪಾಕ್ಷ ಎನ್ನುವ ಮತ್ತೋರ್ವ ಪ್ರತಿಭಟನಾಕಾರರನ್ನು ಬಂಧಿಸಿಯಾಗಿತ್ತು.

ಬಂಧನವಾಗಿದ್ದು ಶುಕ್ರವಾರ ರಾತ್ರಿ. ನಂತರ ಶನಿವಾರ ರಜೆ (ಎರಡನೇ ಶನಿವಾರ), ಭಾನುವಾರವೂ ರಜೆ. ಸೋಮವಾರ ಒಂದು ದಿನ ಕೋರ್ಟ್-ಕಚೇರಿಗಳು ತೆರೆದಿರುತ್ತವೆ, ಮತ್ತೆ ಮಂಗಳವಾರ ಶಿವರಾತ್ರಿ ರಜೆ. ಚಳವಳಿಯ ಸಂಗಾತಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಯಾರಿಗೂ ಕನಿಷ್ಟ ಮೂರ್ನಾಲ್ಕು ದಿನಗಳ ಮಟ್ಟಿಗಾದರೂ ಸಾಧ್ಯವಾಗಬಾರದು ಎನ್ನುವುದು ಪೊಲೀಸರ ಸಂಚು! ಇಲ್ಲವಾದರೆ ಶುಕ್ರವಾರ ರಾತ್ರಿ ಬಂಧಿಸಿ, ಅದೇ ದಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ತಳ್ಳುವಂತಹದ್ದೇನಿತ್ತು..? ಮುಖ್ಯವಾಗಿ ಇವರೆಲ್ಲರೂ ಪ್ರತಿದಿನ ಒಂದಲ್ಲ ಒಂದು ಜನಪರ ಹೋರಾಟದಲ್ಲಿ ತೊಡಗಿಸಿಕೊಂಡವರು. ಹಿಂದಿನ ದಿನದ ತನಕವೂ ಅಂಗನವಾಡಿ ನೌಕರರ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹಾಗೂ ಪೊಲೀಸರ ಬಂಧನಕ್ಕೆ ಹೆದರಿ ತಲೆಮರೆಸಿಕೊಳ್ಳಲು ಅವರೇನು ಕಳ್ಳತನವನ್ನೋ, ಸುಲಿಗೆಯನ್ನೋ ಮಾಡಿರಲಿಲ್ಲವಲ್ಲ. ಹಾಗಿದ್ದೂ ಅವರನ್ನು ರಾತ್ರೋರಾತ್ರಿ ಬಂಧಿಸುವ ತರಾತುರಿ ಪ್ರದರ್ಶನ ಯಾಕೆ..? ಹಾಗೂ ಪೊಲೀಸರು ಇವರ ವಿರುದ್ಧ ದಾಖಲಿಸಿಕೊಂಡಿರುವ ದೂರಿನಲ್ಲಿ ನಮೂದಿಸಿರುವ ಆರೋಪಗಳು ಎಂಥವು ಒಮ್ಮೆ ನೋಡಿ. ಅಕ್ರಮ ಕೂಟ (ಐಪಿಸಿ ಸೆ.143 ), ಗಲಭೆ (147), ಮಾರಕಾಸ್ತ್ರಗಳಿಂದ ಗಲಭೆ (147), ಅಕ್ರಮ ಬಂಧನ (341), ಶಾಂತಿ ಭಂಗಕ್ಕೆ ಪ್ರಚೋದನೆ (504) ಹಾಗೂ ಸರಕಾರಿ ನೌಕರರು ತಮ್ಮ ಕರ್ತವ್ಯ ಮಾಡದಂತೆ ತಡೆ (353).IMG-20150213-WA0014

ಜನಪರ, ರೈತಪರ ಹೋರಾಡುವವರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನವಿದು. ಸಿದ್ದರಾಮಯ್ಯನವರೇ, ಕೇಳಿಸಿಕೊಳ್ಳಿ ರಾಜ್ಯದ ರೈತರ ಹಿತ ಕಾಯುತ್ತೇನೆಂದು ಅಧಿಕಾರಕ್ಕೆ ಬಂದ ನೀವು, ಆ ಕೆಲಸ ಮರೆತು ನಿದ್ರೆ ಹೋಗಿರುವಾಗ, ಆ ಬಗ್ಗೆ ಹೋರಾಟಕ್ಕೆ ಇಳಿದವರು ಈ ಚಳವಳಿಗಾರರು. ನೀವು ಸಂವಿಧಾನಬದ್ಧವಾಗಿ ಮಾಡಬೇಕಿದ್ದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಮೂವರಲ್ಲಿ ಯಾರಿಗೂ, ಸೀಗೆಗುಡ್ಡದ ಬುಡದಲ್ಲಿ ಒಂದು ಇಂಚಿನಷ್ಟು ಭೂಮಿಯ ಅಗತ್ಯ ಇಲ್ಲ. ಅಂತಹವರನ್ನು ಬಂಧಿಸಿ, ಜೈಲಿಗಟ್ಟಿ ನೀವು ಸಾಧಿಸುವುದೇನು?

ಅಧಿಕಾರಿಗೆ ‘ಕರುಣೆ’:
ಅಷ್ಟಕ್ಕೂ, ಅರಣ್ಯ ಇಲಾಖೆ ಒತ್ತುವರಿ ತೆರವಿಗೆಂದು ಮುಂದಾದ ಭೂಮಿ ದಾಖಲೆ ಪ್ರಕಾರ ‘ಕಾಯ್ದಿಟ್ಟ ಅರಣ್ಯ’. ಅವರು ಕಾಯ್ದಿಟ್ಟು ದಶಕಗಳೇ ಆಗಿ ಹೋಗಿವೆ. ಆದರೆ ಇದುವರೆಗೂ ಅಲ್ಲಿ ಅರಣ್ಯದ ಯಾವ ಲಕ್ಷಣಗಳೂ ಇಲ್ಲ. ದಾಖಲೆಗಳು, ನ್ಯಾಯಾಲಯದ ತೀರ್ಪುಗಳನ್ನು ಒಂದು ಕ್ಷಣ ಆಚೆಗಿಟ್ಟು ಯೋಚಿಸೋಣ. ಸರಕಾರ ಇದುವರೆಗೂ ಕಾಯ್ದಿಟ್ಟ ಪ್ರದೇಶವನ್ನು ಅರಣ್ಯವನ್ನಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾಗದ ಮೇಲೆ, ರೈತರು ಅದನ್ನು ಸದುಪಯೋಗ ಪಡಿಸಿಕೊಂಡು ದೇಶಕ್ಕೆ ಅಗತ್ಯವಾದ ಕಾಳು-ಕಡಿ ಬೆಳೆದು ರಾಷ್ಟ್ರದ ಉತ್ಪನ್ನಕ್ಕೆ ಕೊಡುಗೆ ನೀಡಿದರೆ ತಪ್ಪೇನು..? ಆ ಭೂಮಿಯನ್ನು ಹಾಗೆ ಪಾಳು ಬಿಟ್ಟು, ದಾಖಲೆಯಲ್ಲಿ ಕಾಯ್ದಿಟ್ಟ ಅರಣ್ಯ ಎಂದು ತೋರಿಸಿದರೆ, ವಾತಾವರಣದಲ್ಲಿ ಆಮ್ಲಜನಕದ ಉತ್ಪಾದನೆ ಹೆಚ್ಚಾಗುತ್ತದೆಯೆ? ಈ ಭೂಮಿಯನ್ನು ಇದುವರೆಗೆ ಕಾಪಾಡಿಕೊಂಡು ಬಂದಿದ್ದಕ್ಕೆ ರೈತರಿಗೆ ಸರಕಾರ ಮೊದಲು ಧನ್ಯವಾದ ಹೇಳಬೇಕು. ಸರಕಾರದ ಅಧಿಕಾರಕ್ಕೆ ಹತ್ತಿರದಲ್ಲಿರುವ ಯಾರಾದರೂ ಆ ಭೂಮಿಯನ್ನು ಲಪಟಾಯಿಸಿ ಕಾಫಿ ಪ್ಲಾಂಟೇಶನ್ನೋ..ರಿಯಲ್ ಎಸ್ಟೇಟ್ ಆಗಿಯೋ ಪರಿವರ್ತಿಸಿಲ್ಲವಲ್ಲ..ಅದಕ್ಕೆ ಖುಷಿಪಡಿ.

ಇತ್ತೀಚಿನ ವರ್ಷಗಳ ವರೆಗೂ ಉನ್ನತ ಅಧಿಕಾರ ಅನುಭವಿಸಿದ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ ಬೇಲೂರು ತಾಲೂಕಿನಲ್ಲಿ 19 ಎಕರೆ 20 ಗುಂಟೆಯಷ್ಟು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ಅವರ ಪ್ರಕರಣದಲ್ಲಾದರೆ, ಅರಣ್ಯ ಇಲಾಖೆಯವರು ನೊಟೀಸ್ ನೀಡುತ್ತಾರೆ. ಒಂದು ವಾರದೊಳಗೆ ತೆರವು ಮಾಡಬೇಕು ಎಂದು ಹೇಳಿದ ಮೇಲೂ, ನಿವೃತ್ತ ಅಧಿಕಾರಿ ಸುಮ್ಮನಿರುತ್ತಾರೆ. ತಮ್ಮ ವಕೀಲರ ಮೂಲಕ ನೊಟೀಸ್ ಗೆ ಉತ್ತರ ನೀಡುತ್ತಾರೆ. ಆ ನಂತರ ತಿಂಗಳುಗಳೇ ಉರುಳಿದರೂ, ಅಲ್ಲಿ ತೆರವು ಕಾರ್ಯಾಚರಣೆ ಮಾಡಲು ಈ ಸರಕಾರದ ಅಧಿಕಾರಿಗಳು ಮುಂದಾಗುGVSವುದಿಲ್ಲ. ಆದರೆ ಬಡ ರೈತರ ವಿಚಾರ ಬಂದಾಗ ಆ ‘ಕರುಣೆ’ ಇಲ್ಲ.

ಪೊಲೀಸರ ದೌರ್ಜನ್ಯ:
ಈ ಘಟನೆಯಲ್ಲಿ ಪೊಲೀಸರು ತೋರಿದ ವರ್ತನೆ ಚಳವಳಿಕಾರರಲ್ಲಿ ಆಕ್ರೋಷ ಹುಟ್ಟಿಸಿದೆ. ಅವರು ಈ ಹೋರಾಟಗಾರರನ್ನು, ಕೊಲೆ ಆರೋಪಿಗಳಂತೆ ನಡೆಸಿಕೊಂಡಿದ್ದಾರೆ. ಇಲ್ಲವಾದಲ್ಲಿ, ರಾತ್ರೋರಾತ್ರಿ ಬಂಧಿಸಿ, ಮೂರ್ನಾಲ್ಕು ದಿನಗಳ ಮಟ್ಟಿಗೆ ಜೈಲಿನಲ್ಲಿಡಬೇಕೆಂಬ ಯೋಚನೆ ಬಂದದ್ದೇಕೆ? ಇದೇ ಹಾಸನದ ಪೊಲೀಸರ ಮುಂದೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಇಡೀ ದಿನ ಇವರ ಮುಂದೆ ಎದೆಯುಬ್ಬಿಸಿಕೊಂಡು ಅಡ್ಡಾಡುತ್ತಿದ್ದರೂ, ಅವರನ್ನು ಬಂಧಿಸುವ ಛಾತಿ ತೋರಿಸದ ಪೊಲೀಸರು, ಚಳವಳಿಕಾರರನ್ನು ಬಂಧಿಸುವ ದಾಷ್ಟ್ಯ ತೋರಿಸಿದ್ದೇಕೆ?

ಹಾಸನದ ಶಾಸಕ ಎಚ್.ಎಸ್. ಪ್ರಕಾಶ್ ಸಹೋದರ ಎಚ್.ಎಸ್.ಅನಿಲ್ ಕುಮಾರ್. ಅವರು ಹಾಸನ ನಗರಸಭೆಯ ಸದಸ್ಯರೂ ಹೌದು. ಅವರ ವಿರುದ್ಧ ನಗರಸಭೆ ಆಯುಕ್ತ ದೂರು ದಾಖಲಿಸಿದ್ದಾರೆ. ನಗರಸಭೆಯ ಇಮೇಲ್ ಅಕೌಂಟನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು ಮಾಹಿತಿಯನ್ನು ಮಾಧ್ಯಮ ಸಂಸ್ಥೆಗಳೂ ಸೇರಿದಂತೆ, ಹಲವರಿಗೆ ರವಾನಿಸಿದ ಆರೋಪ ಇದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅಂತಹದೊಂದು ಮೇಲ್ ರವಾನೆಯಾಗಿದ್ದು ಆ ಸದಸ್ಯರಿಗ ಸೇರಿರುವ ಶಿಕ್ಷಣ ಸಂಸ್ಥೆಗೆ ಸೇರಿದ್ದ ಇಂಟರ್ನೆಟ್ ಖಾತೆ (ಐಪಿ ವಿಳಾಸ) ಯಿಂದ ಹೋದದ್ದು ಎಂಬುದು ಗೊತ್ತಾಗಿದೆ. ಆದರೆ, ಇದುವರೆಗೂ ಬಂಧನವಿರಲಿ.., ಸಣ್ಣ ಮಟ್ಟದ ಕ್ರಮ ಕೂಡ ಕೈಗೊಂಡಿಲ್ಲ. ನೆನಪಿಸಿಕೊಳ್ಳುತ್ತಾ ಹೋದರೆ, ಪ್ರಭಾವಿಗಳನ್ನು ಬಚಾವು ಮಾಡುವ, ಮಾಡಿದ ಅನೇಕ ಉದಾಹರಣೆಗಳು ಸಿಗುತ್ತವೆ. ಹಾಗಾದರೆ, ಪೊಲೀಸರು ಇರಬೇಕಾದ್ದು ಯಾರ ಪರ..?