Daily Archives: February 25, 2015

ಸ್ನೇಹಕ್ಕೆ ಅಡ್ಡಿಯಾಗದ ಧರ್ಮ ಭವಿಷ್ಯಕ್ಕೆ ಮುಳ್ಳಾಯಿತು!


-ಇರ್ಷಾದ್ ಉಪ್ಪಿನಂಗಡಿ


ಈ ವಿದ್ಯಾರ್ಥಿಯ ಹೆಸರು ಮುಹಮ್ಮದ್ ಸ್ವಾಲಿ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ಪದವಿ ಶಿಕ್ಷಣMoralPol_Mangalore_1 ಪಡೆದುಕೊಳ್ಳುತ್ತಿರುವ ಮುಹಮ್ಮದ್ ಸ್ವಾಲಿ ಇಂದು ತಾನು ಓದುತ್ತಿರುವ ಕಾಲೇಜು, ಮನೆ ಹಾಗೂ ತನ್ನೂರಿನಿಂದಲೇ ದೂರವಿರುವಂತಹ ಪರಿಸ್ಥಿತಿಯಲ್ಲಿದ್ದಾನೆ. ಮುಹಮ್ಮದ್ ಸ್ವಾಲಿ ತಾನು ಓದುತ್ತಿರುವ ಕಾಲೇಜಿನಲ್ಲಿ ತನ್ನ ಸಹಪಾಠಿ ಅನ್ಯಧರ್ಮೀಯ ವಿದ್ಯಾರ್ಥಿನಿಯರೊಂದಿಗೆ ತೆಗೆಸಿಕೊಂಡ ಪೋಟೋ ಇಂದು ಈತನ ಭವಿಷ್ಯಕ್ಕೆ ಮುಳುವಾಗಿ ಮಾರ್ಪಟ್ಟಿದೆ. ಸ್ವಾಲಿ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ಬಿ.ಸಿ.ಎ ಪದವಿ ಓದುತ್ತಿದ್ದಾನೆ. ಇತ್ತೀಚೆಗೆ ಕಾಲೇಜು ತರಗತಿಯಲ್ಲಿ ತನ್ನ ಸಹಪಾಠಿ ಸ್ನೇಹಿತೆಯರೊಂದಿಗೆ ತಮಾಷೆಗಾಗಿ ಅವರ ತೊಡೆಗಳಲ್ಲಿ ಮಲಗಿಕೊಂಡ ರೀತಿಯಲ್ಲಿ ಪೋಟೋ ತೆಗೆಸಿಕೊಂಡಿದ್ದ. ಈ ಪೋಟೋವನ್ನು ಯಾರೋ ಕಿಡಿಕೇಡಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವ್ಯಾಟ್ಸ್ ಆಫ್ ಗಳಲ್ಲಿ ಹರಿಯಬಿಟ್ಟಿದ್ದರು.

ಹಿಂದೂ ವಿದ್ಯಾರ್ಥಿನಿಯರ ಜೊತೆ ಮುಸ್ಲಿಮ್ ಯುವಕ ಈ ರೀತಿಯಾಗಿ ತೆಗೆಸಿಕೊಂಡ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಜಿಲ್ಲೆಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಹುಯಿಲೆಬ್ಬಿಸುತ್ತಾ ಭಿನ್ನ ಕೋಮಿನ ಯುವಕ- ಯುವತಿ ಜೊತೆಗಿದ್ದರೆ ಅವರನ್ನು ನೈತಿಕ ಪೊಲೀಸ್ ಗಿರಿಯ ಹೆಸರಲ್ಲಿ ಹಿಂಸಿಸುವ ಹಿಂದೂಪರ ಸಂಘಟನೆಗಳ ಯುವಕರಂತೂ ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಚ್ಯ ಶಬ್ಧಗಳ ಮೂಲಕ ತಮ್ಮ ದಾಳಿಯನ್ನು ಶುರುಹಚ್ಚಿಕೊಂಡಿದ್ದರು. ಪೋಟೋ ಬಹಿರಂಗವಾಗಿ ವಿವಾದ ಎಬ್ಬಿಸಿದ ಬೆನ್ನಲ್ಲೇ ನೈತಿಕ ಪೊಲೀಸರು ಎಚ್ಚೆತ್ತುಕೊಂಡು ಪೋಟೋದ ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದ ಮುಹಮ್ಮದ್ ಸ್ವಾಲಿ ಸ್ನೇಹಿತ ರಿಯಾಜ್ ಎಂಬಾತನನ್ನು ಆತನ ಮನೆ ಸುರತ್ಕಲ್ ನಿಂದ ಉಪಾಯವಾಗಿ ಅಪಹರಿಸಿ ಹಿಗ್ಗಾ ಮುಗ್ಗಾ ಥಳಿಸಿ ತಮ್ಮ ಕೋಪವನ್ನು ತೀರಿಸಿಕೊಂಡರು. ಇದಿಷ್ಟೇ ಸಾಲದೆಂಬುವುದಕ್ಕೆ ಇನ್ನೊಂದು ಕಡೆಯಲ್ಲಿ ಪೋಟೋದಲ್ಲಿ ಕಾಣಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳಿಗೆ ಬಲಿಯಾಗುತ್ತಿರುವ ಯುವಕ-ಯುವತಿಯ ಪಾಡು MoralPol_Mangalore_2ಹೇಗಿರುತ್ತದೆ ಎಂಬುವುದಕ್ಕೆ ಒಂದು ಸಣ್ಣ ಉದಾಹರಣೆಯಷ್ಟೇ. 2014 ಹಾಗೂ 2015 ಫೆಬ್ರವರಿ 1 ರ ವರೆಗೆ ಜಿಲ್ಲೆಯಲ್ಲಿ ಮಾದ್ಯಮಗಳಲ್ಲಿ ವರದಿಯಾದ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಸಂಖ್ಯೆ ಒಟ್ಟು 37. ಇವುಗಳ ಪೈಕಿ ಹಿಂದೂಪರ ಸಂಘಟನೆಗಳು ನಡೆಸಿದ ನೈತಿಕ ಪೊಲೀಸ್ ಗಿರಿಯ ಸಂಖ್ಯೆ 30 ಹಾಗೂ ಮುಸ್ಲಿಮ್ ಪರ ಸಂಘಟನೆಗಳು ನಡೆಸಿದ ನೈತಿಕ ಪೊಲೀಸ್ ಗಿರಿಯ ಸಂಖ್ಯೆ 7. ಇವು ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣಗಳಷ್ಟೇ. ಇವುಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ನೈತಿಕ ಪೊಲೀಸರು ನಡೆಸುತ್ತಿರುವ ಅನೈತಿಕ ಪೊಲೀಸ್ ಗಿರಿಯಿಂದಾಗಿ ಬಲಿಪಶುಗಳಾದ ಯುವಕ –ಯುವತಿಯರು ಒಂದು ಕಡೆಯಲ್ಲಿ ಹಲ್ಲೆಗೊಳಗಾಗಿ ಇನ್ನೊಂದು ಕಡೆಯಲ್ಲಿ ತಮಗಾದ ಅವಮಾನವನ್ನು ಸಹಿಸಿಕೊಳ್ಳಲಾಗದೆ ಸಮಾಜದ ಮುಂದೆ ತನ್ನ ಮುಖತೋರಿಸಿಕೊಳ್ಳಲಾಗದೆ ಇತ್ತ ಮನೆಯಲ್ಲೂ ಮೂದಳಿಕೆ ಅವಮಾನವನ್ನು ಸಹಿಸಿಕೊಂಡು ಬದುಕಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ.

ಅಷ್ಟಕ್ಕೂ ಇಲ್ಲಿ ಮುಹಮ್ಮದ್ ಸ್ವಾಲಿ ಮಾಡಿದ ತಪ್ಪಾದರೂ ಏನು? ಸಹಜವಾಗಿ ಇಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಯುವಕ-ಯುವತಿಯರು ಸಾಕಷ್ಟು ಆತ್ಮೀಯರಾಗಿರುತ್ತಾರೆ. ಕಾಲೇಜು ವಠಾರದಲ್ಲಿ ಸಹಪಾಠಿಗಳು ಧರ್ಮಬೇಧವಿಲ್ಲದೆ ಬೆರೆಯುವುದು ಸಹಜ ಪ್ರಕ್ರಿಯೆ. ಕಾಲೇಜು ಶೈಕ್ಷಣಿಕ ಪ್ರವಾಸ ಹೋಗುವ ಸಂಧರ್ಭಗಳಿರಬಹುದು ಅಥವಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿಕೊಂಡು ಹುಟ್ಟುಹಬ್ಬ ಪಾರ್ಟಿಗಳನ್ನು ಮಾಡೋದಿರಬಹುದು ಅಥವಾ ತರಗತಿ ಸ್ನೇಹಿತರೆಲ್ಲಾ ಸೇರಿಕೊಂಡು ಟ್ರಕ್ಕಿಂಗ್ ಹೋಗೋದಿರಬಹುದು ಈ ಎಲ್ಲಾ ಸಂಧರ್ಭಗಳಲ್ಲೂ ಎಲ್ಲರೂ ಪರಸ್ಪರ ಸ್ನೇಹದಿಂದ ಬೆರೆಯೋದು, ಜೊತೆ ನಿಂತಿಕೊಂಡು ಪೋಟೋ ತೆಗೆಸಿಕೊಳ್ಳುವುದು ಹಾಡುವುದು, ಕುಣಿಯುವುದು ಇವೆಲ್ಲಾ ಕಾಲೇಜು ಶಿಕ್ಷಣದ ಅನುಭವಗಳಲ್ಲೊಂದು. ಇಂಥಹ್ ಹುಡುಗಾಟಿಕೆಯ ಸಹಜ ಪ್ರಕ್ರಿಯೆ ಇಲ್ಲೂ ಆಗಿರುವಂತಹದ್ದು. ಇಲ್ಲಿ ಮುಹಮ್ಮದ್ ಸ್ವಾಲಿ ಮಾಡಿದ ತಪ್ಪು ಅನ್ಯಧರ್ಮೀಯ ಸಹಪಾಠಿ ಸ್ನೇಹಿತೆಯರ ತೊಡೆಗಳಲ್ಲಿ ಮಲಗಿಕೊಂಡು ಪೋಟೋ ತೆಗೆಸಿಕೊಂಡಿದ್ದು.

ಮುಹಮ್ಮದ್ ಸ್ವಾಲಿ ಸ್ನೇಹಿತ ನೈತಿಕ ಪೊಲೀಸರಿಂದ ಹಲ್ಲೆಗೊಳಗಾದ ರಿಯಾಜ್ ಹೇಳುವ ಪ್ರಕಾರ ಪೋಟೋದಲ್ಲಿ ಕಾಣಿಸಿಕೊಂಡMoralPol_Mangalore_3 ಹುಡುಗಿಯರು ಹಾಗೂ ಮುಹಮ್ಮದ್ ಸ್ವಾಲಿ ಮತ್ತು ರಿತೇಶ್ ಎಂಬ ಹುಡುಗ ಇವರೆಲ್ಲರೂ ತುಂಬಾನೇ ಆತ್ಮೀಯ ಸ್ನೇಹಿತರು. ಜೊತೆಗೆ ಊಟಮಾಡುವುದು, ಕಾಲೇಜು ಕಾರ್ಯಕ್ರಮಗಳಲ್ಲಿ ಜೊತೆಜೊತೆಗೆ ಭಾಗವಹಿಸುವುದು, ಹರಟೆ ಹೊಡೆಯುವುದು, ಪರಸ್ಪರ ಹುಟ್ಟುಹಬ್ಬದ ಪಾರ್ಟಿಗಳನ್ನು ಆಚರಿಸುವುದು, ತಮಾಷೆ ಮಾಡಿಕೊಂಡು ಆತ್ಮೀಯತೆಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಬರುತ್ತಿದ್ದರು. ಈ ಹುಡುಗ-ಹುಡುಗಿಯರ ನಡುವಿನ ಸ್ನೇಹಕ್ಕೆ ಎಂದಿಗೂ ಧರ್ಮ ಅಡ್ಡಿಯಾಗಲಿಲ್ಲ. ಇನ್ನು ಈ ವಿದ್ಯಾರ್ಥಿಗಳ ಕುರಿತಾಗಿ ಆ ಕಾಲೇಜಿನ ಪ್ರಾಂಶುಪಾಲರೂ ಉತ್ತಮ ಮಾತನ್ನಾಡುತ್ತಾರೆ. ಆದರೆ ತಮಾಷೆಗಾಗಿ ಸ್ನೇಹಿತರು ತೆಗೆಸಿಕೊಂಡ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಧರ್ಮದ ಅಮಲು ತುಂಬಿಸಿಕೊಂಡ ಧರ್ಮರಕ್ಷಕರ ಕಣ್ಣಿಗೆ ಬಿದ್ದಾಗ ಈ ಪೋಟೋ ಅಶ್ಲೀಲವಾಗಿ ಗೋಚರಿಸಿತು. ಹೆಣ್ಮಕ್ಕಳ ತೊಡೆಯಲ್ಲಿ ಮಲಗಿಕೊಂಡ ಈ ಪೋಟೋ ಹೆಣ್ಮಕ್ಕಳ ಪೋಷಕರಿಗೂ ಅಶ್ಲೀಲಾಗಿ ಕಂಡಿಲ್ಲ, ಗಂಡು ಮಕ್ಕಳ ಪೋಷಕರಿಗೂ ಅಶ್ಲೀಲವಾಗಿ ಕಂಡಿಲ್ಲ. ಆದರೆ ಧರ್ಮರಕ್ಷಕರಿಗೆ ಅಶ್ಲೀಲವಾಗಿ ಕಂಡಿರುವುದು ವಿಪರ್ಯಾಸ. ಪರಿಣಾಮ ಪೋಟೋದಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಗಳು ಇಂದು ಮನೆಯಿಂದ ಹೊರಗಡೆ ಕಾಲಿಡದಂತಹ ಪರಿಸ್ಥಿತಿಯಲ್ಲಿದ್ದಾರೆ. ಮುಹಮ್ಮದ್ ಸ್ವಾಲಿ ನೈತಿಕ ಪೊಲೀಸರು ಹಲ್ಲೆ ನಡೆಸುವ ಭಯದಿಂದ ಮಂಗಳೂರಿನ ಸುರತ್ಕಲ್ ಸಮೀಪವಿರುವ ತನ್ನ ಮನೆಯಲ್ಲಿರದೆ ಬೇರೆ ಕಡೆ ಆಶ್ರಯ ಪಡುತ್ತಿದ್ದಾನೆ. ಮುಹಮ್ಮದ್ ಸ್ವಾಲಿಯ ಮನೆಯವರು ಭಯದ ವಾತಾವರಣದಲ್ಲಿ ಜೀವಿಸುವಂತ್ತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ನೇಹವನ್ನೂ ಧರ್ಮದ ಕನ್ನಡಿ ಧರಸಿಕೊಂಡು ನೋಡುತ್ತಿರುವುದರಿಂದ ಯುವಕ –ಯುವತಿ ಸ್ನೇಹಿತರೂ ಪರಸ್ಪರ ಭೇಟಿಯಾಗಿ ಮಾತನಾಡಲಾಗದ ಪರಿಸ್ಥಿತಿ ಇದೆ. ಜನವರಿ 24 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ನೈತಿಕ ಪೊಲೀಸ್ ಘಟನೆ ನಡೆದಿತ್ತು. ಕುಂದಾಪುರದ ಮಹಿಳೆಯೊಬ್ಬರು ಕಲ್ಲಡ್ಕದಲ್ಲಿರುವ ತನ್ನ ಮುಸ್ಲಿಮ್ ಸ್ನೇಹಿತೆಗೆ ಹೆರಿಗೆಯಾದಾಗ ಬಾಣಂತಿಯನ್ನು ಹಾಗೂ ಆಕೆಯ ಮಗುವನ್ನು ನೋಡಿ ಆರೋಗ್ಯ ವಿಚಾರಿಸಿಕೊಂಡು ಹೋಗಲು ಕಲ್ಲಡ್ಕಕ್ಕೆ ಬಂದಿದ್ದಳು. ಮಹಿಳೆಯ ಮುಸ್ಲಿಮ್ ಸ್ನೇಹಿತೆಯ ಪತಿ ಬಸ್ ನಿಲ್ದಾಣಕ್ಕೆ ಬಂದು ಮಹಿಳೆಯನ್ನು ತನ್ನ ಕಾರಿನಲ್ಲಿ ಕೂರಿಸಿ ಮನೆಗೆ ಕರೆದುಕೊಂಡು ಹೋಗುವ ಸಂಧರ್ಭದಲ್ಲಿ ಮುಸ್ಲಿಮ್ ಪುರುಷನ ಕಾರಿನಲ್ಲಿ ಹಿಂದೂ ಮಹಿಳೆಯಿದ್ದದನ್ನು ಅಪಾರ್ಥ ಮಾಡಿಕೊಂಡ ನೈತಿಕ ಪೊಲೀಸರು ಅವರನ್ನು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಹಿಂದೂ ಮಹಿಳೆ ತನ್ನ ಮುಸ್ಲಿಮ್ ಸ್ನೇಹಿತೆ ಹಾಗೂ ಆಕೆಯ ಮಗುವನ್ನು ನೋಡೋದಕ್ಕೆ ಬಂದಿರುವ ಸತ್ಯ ತಿಳಿದು ಆಕೆಯನ್ನು ಮುಸ್ಲಿಮ್ ಸ್ನೇಹಿತೆಯ ಮನೆಗೆ ಹೋಗೋದಕ್ಕೆ ಅವಕಾಶ ಕಲ್ಪಿಸಲಾಯಿತು.

ಇನ್ನು ಹಿಂದೂ ಸಂಘಟನೆಗಳಿಗೆ ಪರ್ಯಾಯವೆಂಬುವಂತೆ ಮುಸ್ಲಿಮ್ ಸಂಘಟನೆಗಳೂ ತಮ್ಮ ಧರ್ಮದ ಹೆಣ್ಮಕ್ಕಳMoralPol_Mangalore_4 ರಕ್ಷಣೆಯ ಹೊಣೆಹೊತ್ತುಕೊಂಡವರಂತೆ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಬಂಟ್ವಾಳ ತಾಲೂಕಿನ ನಿವಾಸಿ ಮುಸ್ಲಿಮ್ ಮಹಿಳಾ ವಕೀಲೆಯೊಬ್ಬರನ್ನು ಆಕೆಯ ಸಹಪಾಠಿ ಹಿಂದೂ ಧರ್ಮೀಯ ವಕೀಲರೊಬ್ಬರು ಬಸ್ ನಿಲ್ದಾಣಕ್ಕೆ ಬೈಕ್ ನಲ್ಲಿ ಡ್ರಾಪ್ ನೀಡಿದರು ಎಂಬ ಕಾರಣಕ್ಕಾಗಿ ಆಕೆಯನ್ನು ಹಿಂಬಾಳಿಸಿದ ಮುಸ್ಲಿಮ್ ನೈತಿಕ ಪೊಲೀಸರು ಆ ಮಹಿಳೆಯ ಮನೆವರೆಗೂ ಹೋಗಿ ತರಾಟೆಗೆ ತೆಗೆದುಕೊಂಡ್ಡಿದ್ದರು. ಆದರೆ ಆಕೆಯ ಮನೆ ಮಂದಿ ನೈತಿಕ ಪೊಲೀಸರ ವಿರುದ್ಧ ತಿರುಗಿ ಬಿದ್ದಾಗ ಅಲ್ಲಿಂದ ಬಂದ ದಾರಿಗೆ ಸುಂಕವಿಲ್ಲವೆಂದು ಕಾಲ್ಕಿತ್ತರು. ಇದು ಜಿಲ್ಲೆಯ ನೈತಿಕ ಪೊಲೀಸರ ಉಪಟಳದಿಂದಾಗಿ ಆಗುತ್ತಿರುವ ಅವಾಂತರಗಳಿಗೆ ಸಾಕ್ಷಿ. ಜಿಲ್ಲೆಯಲ್ಲಿ ನಡೆಯುತ್ತಿರುವ ಅನೇಕ ನೈತಿಕ ಪೊಲೀಸ್ ಗಿರಿ ಘಟನೆಗಳು ಪೊಲೀಸ್ ಠಾಣೆಯ ಮೆಟ್ಟಿಲೇರೋದೆ ಇಲ್ಲ. ಅನೇಕ ಘಟನೆಗಳಲ್ಲಿ ಪೊಲೀಸರು ನೈತಿಕ ಪೊಲೀಸರಿಂದ ಹಲ್ಲೆಗೊಳಗಾದ ಜೋಡಿಯನ್ನು ರಕ್ಷಿಸಿ ಬುದ್ದಿವಾದ ಹೇಳಿ ಬಿಟ್ಟುಬಿಡುತ್ತಾರೆ ಹೊರತುಪಡಿಸಿ ದೂರು ದಾಖಲು ಮಾಡಿಕೊಳ್ಳುವುದಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ದಾಳಿಗೊಳಗಾದ ಸಂತ್ರಸ್ತರು ಮರ್ಯಾದೆಗೆ ಅಂಜಿ ದೂರು ನೀಡಲೂ ಮುಂದಾಗುವುದಿಲ್ಲ. ಇವು ಜಿಲ್ಲೆಯ ನೈತಿಕ ಪೊಲೀಸರಿಗೆ ವರದಾನವಾಗಿ ಮಾರ್ಪಡುತ್ತಿವೆ.

ಪ್ರಸ್ತುತ ಪೋಟೋ ಪ್ರಕರಣದ ನೈತಿಕ ಪೊಲೀಸ್ ಗಿರಿಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆಯಾಗಿ ಕರಾವಳಿಯಲ್ಲಿ ಎರಡೂ ಧರ್ಮದ ನೈತಿಕ ಪೊಲೀಸರ ಕಾಟದಿಂದಾಗಿ ಒಂದು ಧರ್ಮದ ಯುವಕ ಅಥವಾ ಯುವತಿ ಮತ್ತೊಂದು ಧರ್ಮದ ಯುವಕ ಅಥವಾ ಯುವತಿಯ ಜೊತೆ ಮಾತನಾಡುವುದಕ್ಕೆ ಹಿಂದೂ ಮುಂದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಹಮ್ಮದ್ ಸ್ವಾಲಿ ಹಾಗೂ ಗೆಳೆಯರ ಪ್ರಕರಣದಲ್ಲೂ ಇದೇ ಆಗಿದ್ದು. ಪರಸ್ಪರ ಆತ್ಮೀಯ ಸ್ನೇಹಿತರಾದ ಈ ಯುವಕ-ಯುವತಿಯರ ಸ್ನೇಹಕ್ಕೆ ಯಾವತ್ತೂ ಅಡ್ಡಿಯಾಗದ ಧರ್ಮ ಇಂದು ನೈತಿಕ ಪೊಲೀಸರಿಂದಾಗಿ ಈ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳ್ಳಾಗಿ ಪರಿಣಮಿಸುತ್ತಿರುವುದು ವಿಪರ್ಯಾಸ.

ಪೇಡ್ ನ್ಯೂಸ್ ಎಂಬ ಭೂತ: ಕೆ.ಎನ್.ಶಾಂತಕುಮಾರ್

(“ಪ್ರಜಾವಾಣಿ” ಪತ್ರಿಕೆಯ ಸಂಪಾದಕ ಹಾಗೂ ಮಾಲೀಕರಲ್ಲಿ ಒಬ್ಬರಾದ ಕೆ.ಎನ್.ಶಾಂತಕುಮಾರ್‌ರು ಇತ್ತೀಚೆಗೆ ಹಾಸನದ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ಪತ್ರಿಕೋದ್ಯಮದ ಕುರಿತು ಮಾತನಾಡಿದರು, ಸಂವಾದ ಮಾಡಿದರು ಹಾಗೂ ಅವರು ತೆಗೆದ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಿದರು. ಅವರ ಮಾತುಗಳಿಂದ ಆಯ್ದ ಭಾಗಗಳು ಇಲ್ಲಿವೆ.)

ನಾನು ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ ಪಡೆಯಲು ಕಾರಣ – ನನ್ನ ಹುಟ್ಟು.. KN-Shanthakumar-prajavani-Hasana-1ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕಾ ಕಚೇರಿಗೆ ಹೋಗುತ್ತಿದ್ದೆ. ನನ್ನ ತಾತ, ನನ್ನ ಅಣ್ಣಂದಿರು, ಹಾಗೂ ಬಹು ಮುಖ್ಯವಾಗಿ ನನ್ನ ಸಹೋದ್ಯೋಗಿಗಳಿಂದ ತುಂಬಾ ಕಲಿತೆ. ನಿಮ್ಮಂತೆ ನನಗೆ ಪತ್ರಿಕೋದ್ಯಮದ ಯಾವುದೇ ಪದವಿ ನಾನು ಪಡೆದಿಲ್ಲ.

1.
ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶ ಪಡೆಯುವುದು ಹಿಂದೆ ಅಷ್ಟು ಸುಲಭವಾಗಿರಲಿಲ್ಲ. ತಂತ್ರಜ್ಞಾನ ಸುಧಾರಿಸಿರಲಿಲ್ಲ. ಹಾಗೂ ಭಾರೀ ಹೂಡಿಕೆ ಅಗತ್ಯವಿತ್ತು. ಕ್ರಮೇಣ ತಂತ್ರಜ್ಞಾನ ಬೆಳೆಯಿತು. ಇಂದು ಹೊಸ ಹೊಸ ಮಾಧ್ಯಮಗಳು ಬಂದಿವೆ. ಸ್ಪರ್ಧೆ ಹೆಚ್ಚಿದೆ. ರೇಡಿಯೊ ಬಂದಾಗ ಅಥವಾ ಟಿವಿ ಬಂದಾಗ ಮುದ್ರಣ ಮಾಧ್ಯಮ ಇಲ್ಲವಾಗುತ್ತೆ ಎಂಬ ಮಾತಿತ್ತು. ಹಾಗೆ ಆಗಲಿಲ್ಲ. ಇತ್ತೀಚೆಗೆ ಕೆಲವೆಡೆ ಮುದ್ರಣ ಮಾಧ್ಯಮ ಭಾರೀ ಬೆಲೆ ತೆತ್ತಿದೆ. ಪ್ರಮುಖ ಪತ್ರಿಕೆಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ದೇಶದ ಅತಿ ಹೆಚ್ಚು ಪ್ರಸರಣ ಹೊಂದಿರುವ ಪತ್ರಿಕೆಯ ವೆಬ್‌ಸೈಟ್ ಗೆ ಕಳೆದ ಎರಡು ವರ್ಷಗಳಲ್ಲಿ ಭೇಟಿ ಕೊಟ್ಟವರಲ್ಲಿ ಶೇಕಡ 50 ಕ್ಕೂ ಹೆಚ್ಚು ಮಂದಿ ಮೊಬೈಲ್ ಮೂಲಕ ವೆಬ್‌ಸೈಟ್ ಗೆ ವಿಸಿಟ್ ಮಾಡಿದ್ದರು. ಮೊಬೈಲ್ ಮೂಲಕ ಸುದ್ದಿ ಸ್ವೀಕರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

2.
ನಮ್ಮ ದೇಶದ ಒಂದು ವಿಶೇಷ ಎಂದರೆ – ನಮ್ಮ ಪತ್ರಿಕೆಗಳ ಮುಖಬೆಲೆ ಅತೀ ಕಡಿಮೆ. ಈ ಬೆಲೆಗೆ ಬೇರೆಲ್ಲೂ ಪತ್ರಿಕೆಗಳು ದೊರೆಯುವುದಿಲ್ಲ. ಇದಕ್ಕೆ ಕಾರಣ ಪೈಪೋಟಿ. ಈ ಬೆಳವಣಿಗೆಯಿಂದ ಒಳ್ಳೆಯದೂ ಆಗಿದೆ, ಕೆಟ್ಟದೂ ಆಗಿದೆ. ಒಳ್ಳೆಯದು ಎಂದರೆ, ಓದುಗರ ಸಂಖ್ಯೆ ಹೆಚ್ಚಾಗಿದೆ. KannadaPapersCollageಆದರೆ ಹತ್ತು-15 ವರ್ಷಗಳ ಹಿಂದೆ ಪ್ರಸರಣದಿಂದ ಪತ್ರಿಕೆಗೆ ಬರುತ್ತಿದ್ದ ಒಟ್ಟು ಆದಾಯದ ಶೇಕಡ 50 ರಷ್ಟಿತ್ತು. ಅದರರ್ಥ ಜಾಹಿರಾತು ಮತ್ತು ಪತ್ರಿಕೆಯ ಮಾರಾಟದಿಂದ ಸಮನಾದ ಆದಾಯ ಬರುತ್ತಿತ್ತು. ಈಗ ಶೇಕಡ 70 ರಷ್ಟು ಆದಾಯ ಕೇವಲ ಜಾಹೀರಾತುಗಳಿಂದ ಬರುತ್ತಿದೆ. ಆ ಕಾರಣಕ್ಕೆ ಪತ್ರಿಕೆ ಸಂಸ್ಥೆಗಳು ಜಾಹಿರಾತುದಾರರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

3.
ಜಾಹೀರಾತುಗಳಿಂದ ಬರುವ ಆದಾಯ ಪತ್ರಿಕಾ ಸಂಸ್ಥೆಗೆ ಬಹುಮುಖ್ಯ ಎಂದಾದುದರ ಪರಿಣಾಮವಾಗಿ ಜಾಹಿರಾತುದಾರರು, ಅದು ಸರಕಾರ ಅಥವಾ ಖಾಸಗಿ ಕಂಪನಿಗಳಿರಬಹುದು – ಪತ್ರಿಕೆಯ ಮೇಲೆ ಪ್ರಭಾವ ಬೀರಲು ಆರಂಭಿಸಿದರು. ಜಾಹಿರಾತುದಾರರು ಅವರಿಗೆ ಅಪಥ್ಯವಾಗುವಂತಹ ಸುದ್ದಿಗಳು ಬರಬಾರದು ಎಂದು ಬಯಸುತ್ತಾರೆ. ಪತ್ರಿಕಾಲಯಗಳು ಕೂಡ ಜಾಹಿರಾತು ವಿಚಾರವಾಗಿ ತುಂಬಾ ಸೂಕ್ಷ್ಮ ವಾಗಿರುತ್ತವೆ. ಒಂದು ಜಾಹಿರಾತು ಮಿಸ್ ಆದರೆ, ಪತ್ರಿಕಾ ಸಂಸ್ಥೆಯವರು ತಲೆ ಕೆಡಿಸಿಕೊಳ್ಳುತ್ತಾರೆ. ಏಕೆಂದರೆ ಅದರಿಂದ ಆದಾಯದ ಮೇಲೆ ಪರಿಣಾಮಗಳಿರುತ್ತವೆ.

ಸರಕಾರದ ವಿರುದ್ಧ ಒಂದು ಲೇಖನ ಬಂದರೆ, ಅಂತಹ ಲೇಖನ ಪ್ರಕಟಿಸಿದ ಪತ್ರಿಕೆಗೆ ಸರಕಾರ ಜಾಹೀರಾತುಗಳನ್ನು ನಿಲ್ಲಿಸಿದ ಉದಾಹರಣೆಗಳು ನಮ್ಮ ದೇಶದಲ್ಲಿಯೇ ಬೇಕಾದಷ್ಟಿವೆ. ಖಾಸಗಿ ಕಂಪನಿಗಳೂ ಹೀಗೆ ಮಾಡಿರುವ ಅನೇಕ ಉದಾರಹಣೆಗಳಿವೆ. ಇದು ಬೆಲೆ ಸಮರದಿಂದಾದ ದುಷ್ಪರಿಣಾಮ.

4.
ಜೊತೆಗೆ ಇತ್ತೀಚೆಗೆ ಪತ್ರಿಕಾ ಸಂಸ್ಥೆಗಳು ಸುದ್ದಿ ಸಂಗ್ರಹಣೆಗಾಗಿ ತೊಡಗಿಸುವ ವೆಚ್ಚವನ್ನು ಗಣನೀಯವಾಗಿ ಕಡಿತ ಮಾಡಿವೆ. ಆ ಕಾರಣಕ್ಕಾಗಿ ಆರಾಮ್ ಚೇರ್ ಗಳಲ್ಲಿ ಕೂತು, ಎಂತಹದೇ ಸುದ್ದಿಯನ್ನು ಹೆಣೆಯುವ ಪ್ರವೃತ್ತಿ ಇದೆ. ಮೇಲಾಗಿ ಈಗ ಸಂಪರ್ಕ ತುಂಬಾ ಸುಲಭ. ಮೊದಲೆಲ್ಲಾ, ಪತ್ರಕರ್ತರಿಗೆ ಫೋನ್ ಸಂಪರ್ಕ ಸಿಗುತ್ತಿದ್ದುದು ಕಚೇರಿಗೆ ಬಂದರಷ್ಟೆ. ಇಲ್ಲವಾದರೆ ಅವರು ಪಬ್ಲಿಕ್ ಬೂತ್ ಮುಂದೆ ನಿಂತು ಕಾಯಬೇಕಿರುತ್ತಿತ್ತು. ಆದರೆ ಈಗ ಹಾಗಿಲ್ಲ, ಬಹುತೇಕರ ಹತ್ತಿರ ಮೊಬೈಲ್ ಇದೆ. ಕೆಲವರ ಹತ್ತಿರ ಎರಡೆರಸು ಮೊಬೈಲ್ ಗಳಿವೆ. ಅಷ್ಟಲ್ಲದೆ ಇಂಟರ್ ನೆಟ್ ಲಭ್ಯವಿದೆ. ಗೂಗಲ್ ಮಾಡಿ ಸಿಕ್ಕಿದ ಮಾಹಿತಿಯನ್ನೇ ಸತ್ಯ ಎಂದು ತಿಳಿದು ಸುದ್ದಿಯ ಮರುಪರಿಶೀಲನೆ ಮಾಡದೆ, ಅದನ್ನೇ ಸುದ್ದಿ ರೂಪಕ್ಕಿಳಿಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ.

ನಾನು ನಮ್ಮ ಪತ್ರಿಕೆಯನ್ನು ಹೊಗಳಿಕೊಳ್ಳಲು ಹೇಳುತ್ತಿಲ್ಲ. ಕಳೆದ ವಾರ ನಮ್ಮ ’ಕರ್ನಾಟಕ ದರ್ಶನ’ ಪುರವಣಿಯಲ್ಲಿ ಭಟ್ಕಳ ಪಟ್ಟಣದ ಬಗ್ಗೆ ವಿಸ್ತೃತವಾದ ವರದಿ ಪ್ರಕಟವಾಯಿತು. ನಿಮ್ಮಲ್ಲಿ ಯಾರಾದರೂ ಓದದೇ ಇದ್ದರೆ, ಅದನ್ನು ಓದಬೇಕು ಅಂತ ಬಯಸುತ್ತೇನೆ. ಅಂತಹ ಪ್ರಯೋಗಗಳನ್ನು ಬೇರೆಯವರೂ ಮಾಡುತ್ತಿರಬಹುದು. ಆದರೆ, ಅಂತಹವು ಹೆಚ್ಚಾಗಬೇಕು ಎನ್ನುವುದಷ್ಟೇ ನನ್ನ ಅಭಿಪ್ರಾಯ.

ಆಮೇಲೆ ಇದನ್ನು ಮಾಡಬೇಕು ಅಂದರೆ ಇದಕ್ಕೆ ಅಡ್ಡದಾರಿ ಇಲ್ಲ. ಒಬ್ಬ ವರದಿಗಾರ್ತಿ ಅಲ್ಲಿಗೆ ಹೋಗಿ, ಮೂರ್ನಾಲ್ಕು ದಿನಗಳ ಕಾಲ ಪ್ರವಾಸ ಮಾಡಿ ಸುದ್ದಿ ಬರೆದರು. ನಂತರ ಹಲವರೊಂದಿಗೆ ಮಾತನಾಡಿ, ವಿಷಯ ಸಂಗ್ರಹಿಸಿ ಸುದ್ದಿ ಬರೆದರು. paidmedia2ಒಂದು-ಎರಡು ದಿನಗಳಲ್ಲಿ ಆಗುವ ಕೆಲಸವಲ್ಲ

5.
ಹೊಸ ದೆವ್ವ: ಪೇಡ್ ನ್ಯೂಸ್
ಆದಾಯದ ಏರುಪೇರು (ಜಾಹಿರಾತುಗಳ ಮೇಲೆ ಅತಿಯಾದ ಅವಲಂಬನೆ) ಪರಿಣಾಮವಾಗಿ ದೇಶಾದ್ಯಂತ ಹುಟ್ಟಿಕೊಂಡಿರುವ ಹೊಸ ದೆವ್ವ ಪೇಡ್ ನ್ಯೂಸ್. ಇದೊಂದು ಅರ್ಥಹೀನ ಪದ-ಪ್ರಯೋಗ ಅನ್ನಿಸುತ್ತೆ. ಆದರೆ ಅದು ಸೃಷ್ಟಿಯಾಗಿದೆ. ನ್ಯೂಸ್ ಗೂ ದುಡ್ಡಿಗೂ ಸಂಬಂಧವಿರಬಾರದು. ನ್ಯೂಸ್ ಅಂದರೆ, ಯಾವುದೋ ಒಂದು ಘಟನೆ, ಬೆಳವಣಿಗೆ..ಹೀಗೆ ಘಟಿಸುವಂತಹದ್ದು ಸುದ್ದಿ. ಅದು ಪೇಡ್ ಆಗುವುದೆಂದರೆ!!

ಇತ್ತೀಚೆಗೆ ಮಾಧ್ಯಮ ಸಂಸ್ಥೆಗಳೇ ಪೇಡ್ ನ್ಯೂಸ್ ಗೆ ಅಧಿಕೃತತೆಯ ಮುದ್ರೆ ಒತ್ತುತ್ತಿದ್ದಾರೆ. ಇದು ಹೆಚ್ಚಾಗಿ ನಡೆಯುವುದು ಚುನಾವಣಾ ಸಮಯದಲ್ಲಿ. ಭ್ರಷ್ಟ ರಾಜಕಾರಣಿಗಳು, ಪತ್ರಕರ್ತರನ್ನೂ ಭ್ರಷ್ಟರನ್ನಾಗಿಸ ಬಯಸುತ್ತಾರೆ. ಇದು ಪತ್ರಿಕೋದ್ಯಮವನ್ನು ಮೀರಿ, ಪ್ರಜಾಪ್ರಭುತ್ವಕ್ಕೆ ಮಾರಕ. ಚುನಾವಣೆ ಸಂದರ್ಭದಲ್ಲಿ ಪ್ರಕಟವಾಗುವ ’ಪೇಡ್ ನ್ಯೂಸ್’ ಅನ್ನೇ ’ನಿಜವಾದ ಸುದ್ದಿ’ ಎಂದು ಮತದಾರ ತಿಳಿದುಬಿಟ್ಟರೆ ಪ್ರಜಾಪ್ರಭುತ್ವ ವ್ಯವಸ್ಥೆಗೇ ಪೆಟ್ಟು. ಇಂತಹವು, ದುರ್ದೈವ ಅಂದ್ರೆ, ನಮ್ಮಲ್ಲೂ ಆಗಿವೆ. ಇದಕ್ಕೆ ಕಡಿವಾಣ ಹಾಕೋದು ಹೇಗೆ ಅಂತ ಚಿಂತನೆಗಳು ನಡೆಯುತ್ತಿವೆ.

KN-Shanthakumar-prajavani-Hasana-2ಈ ಬೆಳವಣಿಗೆಗಳಿಗೆ ಇನ್ನೊಂದು ಮುಖ ಇದೆ. ಸಮಾಜ ಹೇಗಿರುತ್ತೋ. ಹಾಗೆಯೇ ಸಮಾಜದ ಭಾಗವಾಗಿರುವ ಪತ್ರಕರ್ತರೂ. ಪತ್ರಕರ್ತರಲ್ಲೂ ಭ್ರಷ್ಟರಿದ್ದಾರೆ.

6.
ಇದು ಮಹಿಳೆಯರ ಕಾಲೇಜು. ಹಾಗಾಗಿ ಮಹಿಳೆಯರು ಮತ್ತು ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟಂತೆ ಮಾತನಾಡಿ ನನ್ನ ಮಾತು ಮುಗಿಸುತ್ತೇನೆ. 70 ರ ದಶಕದಲ್ಲಿ, ನಮ್ಮಣ್ಣ ಹರಿಕುಮಾರ್ ಸಂಪಾದಕರಾಗಿದ್ದಾಗ ಮಹಿಳೆಯರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಆರಂಭವಾಯಿತು. ಆ ಹೊತ್ತಿಗೆ ಕನ್ನಡದ ಪತ್ರಿಕೋದ್ಯಮದಲ್ಲಿ ಅದೇ ಮೊದಲು. ಅದೇ ಪರಂಪರೆ ಇಂದಿಗೂ ಮುಂದುವರೆದಿದೆ. ಸಮಾಜದಲ್ಲಿ ಮಹಿಳೆಯರು ಶೇಕಡ 50 ರಷ್ಟು ಇದ್ದಾರೆ. ಆದರೆ, ಪತ್ರಿಕೋದ್ಯಮದಂತಹ ಗಂಭೀರ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು.