Daily Archives: August 2, 2015

ಕದಿಯದ ಭತ್ತಕ್ಕೆ ಹರಕೆ ಹೊತ್ತು ಬೆನ್ನು ಚುಚ್ಚಿಸಿಕೊಂಡವರು

ಶೋಷಿತರಿಗೆ ಮೊದಲು, ತಾವು ಶೋಷಣೆಗೆ ಒಳಗಾಗಿದ್ದೇವೆ ಅನ್ನೋದು ಅರ್ಥ ಆಗೋದು ಯಾವಾಗ..

– ಜೀವಿ

ಸುತ್ತ ಏಳು ಹಳ್ಳಿ ಜನ ಸೇರಿ ಆಚರಿಸುವ ಜಾತ್ರೆಯಲ್ಲಿ ಭಾಗವಹಿಸುವುದನ್ನು ಅವ್ವ ತನಗೆ ಬುದ್ದಿ ತಿಳಿದ ದಿನದಿಂದ ಒಮ್ಮೆಯೂ ತಪ್ಪಿಸಿಕೊಂಡಿಲ್ಲ. ತಾತ-ಮುತ್ತಾನ ಕಾಲದಿಂದ ನಡೆದಿರುವ ಉಡಸಲಮ್ಮ ಜಾತ್ರೆ ಎಂದರೆ ಎಲ್ಲಿಲ್ಲದ ಭಕ್ತಿ ಅವ್ವನಲ್ಲಿದೆ. ಈ ವರ್ಷ(2015) ಏಪ್ರಿಲ್ ಮೊದಲ ವಾರದಲ್ಲಿ ನಡೆದ ಜಾತ್ರೆಗೆ ಎಲ್ಲ ಸಿದ್ದತೆಗಳು ನಡೆದಿದ್ದವು. ಎಲ್ಲರೂ ಹೊಸ ಬಟ್ಟೆ ತೊಟ್ಟು ಅತ್ತಿತ್ತ ಅಡ್ಡಾಡುತ್ತಿದ್ದರು. ಆದರೆ ಅವ್ವ ಮಾತ್ರ ಈ ಬಾರಿ ನಾನು ಜಾತ್ರೆಗೆ ಹೋಗSidi-1ಲಾರೆ ಎಂದು ಹಠ ಹಿಡಿದು ಕುಳಿತಿದ್ದಳು. ಹೆಂಡತಿ ಮಕ್ಕಳೊಂದಿಗೆ ಆಗ ತಾನೆ ಮನೆಗೆ ಹೋಗಿದ್ದ ನನ್ನನ್ನು ಕೊಲೆಗಾರನಿಗಿಂತ ಅಪರಾಧಿ ಸ್ಥಾನದಲ್ಲಿ ಕಂಡು ಶಪಿಸಿದಳು. ಮನೆ ಮುರುಕ ಕೆಲಸ ಮಾಡಿದ ನಿನ್ನಂತವನಿಗೆ ಜನ್ಮ ಕೊಟ್ಟಿದ್ದಕ್ಕೂ ಸಾರ್ಥಕವಾಯಿತು ಎಂದು ಕಣ್ಣೀರ ಧಾರೆ ಹರಿಸಿದಳು. ಹೆತ್ತ ಕರುಳಿಗೇ ಅಪರಾಧಿಯಂತೆ ಕಂಡ ನಾನು ಹಾಗೇ ಕಣ್ಣಂಚು ಒದ್ದೆ ಮಾಡಿಕೊಂಡು ಮೂಲೆಗೊರಗಿ ಕುಳಿತೆ. ಅವ್ವನ ಈ ದುಃಖಕ್ಕೆ ಬಲವಾದ ಕಾರಣವೂ ಇತ್ತು.

ಜಾತ್ರೆಯಲ್ಲಿ ಏಳು ಊರಿನ ತಲಾ ಒಂದೊಂದು ಬಂಡಿ ಮತ್ತು ಮೂರು ತೇರನ್ನು ಕೆಂಡದಲ್ಲಿ ಎಳೆದಾಡಿದ ನಂತರ ಅದರಲ್ಲಿ ಒಂದೂರಿನ ದಲಿತರನ್ನು ಸಿಡಿಗೇರಿಸುವ ಪದ್ದತಿ ಇದೆ. ಸಿಡಿಗೆ ಏರುವ ದಲಿತರು ಏಳು ದಿನದಿಂದ ಸಂಸಾರ ತೊರೆದು ಉಪವಾಸ ವ್ರತ ಮಾಡಬೇಕು. ಕೊನೆಯ ದಿನ ಅವರ ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಚುಚ್ಚಲಾಗುತ್ತದೆ. ಮಹಿಳೆಯರು ಬಾಯಿಗೆ ದಬ್ಬಳದಂತ ಸರಳನ್ನು ಚುಚ್ಚಿಕೊಳ್ಳುತ್ತಾರೆ. ಎಲ್ಲರೂ ಜಾತ್ರೆ ದಿನ ದೇವಸ್ಥಾನದ ಮುಂದೆ ಹಾಜರಾಗುತ್ತಾರೆ. ಪುರುಷರು ಸಿಡಿ ಏರಿ ಮೂರು ಸುತ್ತು ಸುತ್ತಿ ಶಿಕ್ಷೆ ರೂಪದಲ್ಲಿ ಹರಕೆ ತೀರಿಸುತ್ತಾರೆ. ತನ್ನ ಪೂರ್ವಜರು ಮಾಡಿರುವ ತಪ್ಪಿಗೆ ಶಿಕ್ಷೆ ಪಡೆಯುತ್ತಿದ್ದೇವೆ ಎಂಬ ಭಾವನೆ ದಲಿತರಲ್ಲಿದೆ.

ಹಿಂದೊಮ್ಮೆ ಹೊಟ್ಟೆಗೆ ಗತಿ ಇಲ್ಲದ ದಲಿತ ಕುಟುಂಬಗಳು ಕಣದಲ್ಲಿ ರಾಶಿ ಹಾಕಿದ್ದ ಭತ್ತವನ್ನು ಕದ್ದು ತಂದಿದ್ದರಂತೆ. ಅದರ ಮಾಲೀಕರು ಪೊಲೀಸರಿಗೆ ದೂರು ನೀಡಿ ಭತ್ತ ಉದುರಿರುವ ಜಾಡು ಹಿಡಿದು ದಲಿತ ಕೇರಿಗೆ ಬಂದಿದ್ದರಂತೆ. ಸಿಕ್ಕಿ ಬೀಳುವ ಆತಂಕದಲ್ಲಿ ಉಡಸಲಮ್ಮನನ್ನು ಮನದಲ್ಲೆ ನೆನದು ಸಂಕಷ್ಟದಿಂದ ಪಾರು ಮಾಡಿದರೆ ಜಾತ್ರೆಯಲ್ಲಿ ಎರಡು ವರ್ಷಕ್ಕೊಮ್ಮೆ ಸಿಡಿ ಏರುತ್ತೇವೆ ಎಂದು ಹರಕೆ ಮಾಡಿಕೊಂಡಿದ್ದರಂತೆ. ಕೂಡಲೇ ಮನೆಯಲ್ಲಿದ್ದ ಭತ್ತದ ಬಣ್ಣ ಬದಲಾಗಿ ಪೊಲೀಸರು ವಾಪಸ್ ಹೋದರಂತೆ. ಸೆರೆ ಬಿಡಿಸಿಕೊಂಡ ದೇವರಿಗೆ ಶಿಕ್ಷೆ ರೂಪದ ಹರಕೆ ತೀರಿಸುವುದು ನಮ್ಮ ಕರ್ತವ್ಯ ಎಂದು ಇಂದಿಗೂ ದಲಿತರು ನಂಬಿದ್ದಾರೆ. ಬಿಳಿ ಭತ್ತ ಕ್ಷಣಾರ್ಧದಲ್ಲಿ ಕೆಂಭತ್ತವಾಗಿ ಬಣ್ಣ ಬದಲಾಯಿತು. ಈ ಮಾಯ ಮಂತ್ರ ನಡೆಯುತ್ತಿದ್ದ ಕಾಲದಲ್ಲಿ ಪೊಲೀಸ್ ವ್ಯವಸ್ಥೆ ಇತ್ತು ಎಂಬುದನ್ನೂ ನಂಬಲಾಗುತ್ತಿದೆ. ಈ ಕತೆಯನ್ನು ನನಗೆ ಅವ್ವನೇ ಹತ್ತಾರು ಬಾರಿ ಹೇಳಿದ್ದಳು. ಅವ್ವನ ಮುತ್ತಜ್ಜ, ಅಜ್ಜ, ಅಪ್ಪ ಎಲ್ಲರೂ ಸಿಡಿ ಏರಿದವರು. ಈಗ ಅಣ್ಣಂದಿರು, ಅವರ ಮಕ್ಕಳು, ಅಕ್ಕನ ಮಕ್ಕಳು ಎಲ್ಲರೂ ಸಿಡಿ ಏರುತ್ತಿದ್ದಾರೆ. ಹಾಗಾಗಿ ಅವ್ವನಿಗೆ ಉಡಸಲಮ್ಮನ ಬಗ್ಗೆ ಅಪಾರ ಭಕ್ತಿ.

ದಲಿತರಿಗೇ ಅರಿವಿಲ್ಲದೆ ಅವರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಹಲವು ದಿನಗಳಿಂದ ನನಗೆ ಬೇಸರವಿತ್ತು. ಜಾತ್ರೆ ಹಿಂದಿನ ದಿನ ಆಪ್ತರೊಂದಿಗೆ ನಾಳೆ ನಡೆಯಲಿರುವ ಸಿಡಿ ಹೆಸರಿನ ಶೋಷಣೆ ಬಗ್ಗೆ ವಿವರಿಸಿದ್ದೆ. ಹೇಗಾದರೂ ತಡೆಯಬೇಕಲ್ಲ ಎಂದುಕೊಂಡು ಪತ್ರಿಕೆಗಳಲ್ಲಿ ವರದಿ ಮಾಡಲು ನಿರ್ಧರಿಸಿದೆವು. ತಹಸೀಲ್ದಾರ್ ಗೆ ಕರೆ ಮಾಡಿ ಪ್ರತಿಕ್ರಿಯೆ ಕೇಳಿದೆವು. ಅವರು ಈ ವಿಷಯ ನನ್ನ ಗಮನದಲ್ಲಿದ್ದು, ತಡೆಯುವ ಪ್ರಯತ್ನ ಮಾಡುತ್ತೇವೆ ಎಂದರು. ಅಮಾನವೀಯ ಸಿಡಿ ಪದ್ದತಿ ಜೀವಂತ ಇರುವುದು ಮತ್ತು ತಹಸೀಲ್ದಾರ್ ತಡೆಯುವ ಪ್ರಯತ್ನ ಮಾಡುವುದನ್ನು ಪತ್ರಿಕೆಗಳಲ್ಲಿ ವರದಿ ಮಾಡಿದೆವು. ಆಂಗ್ಲ ಪತ್ರಿಕೆ ಸೇರಿ ಮೂರು ಪತ್ರಿಕೆಗಳಲ್ಲಿ ಸುದ್ದಿ ಜಾತ್ರೆ ದಿನವೇ ಪ್ರಕಟವಾಯಿತು.

ತಹಸೀಲ್ದಾರ್ ಕೂಡ ಗ್ರಾಮಕ್ಕೆ ಹೋಗಿ ದಲಿತರಿಗೆ ಕೊಂಡಿ ಚುಚ್ಚುವುದು ಮತ್ತು ಅಮಾನವೀಯವಾಗಿ ಸಿಡಿ ಏರುವ ಪದ್ದತಿಗಳನ್ನು ಮಾಡಕೂಡದು ಎಂದು ತಾಕೀತು ಮಾಡಿ ಬಂದಿದ್ದರು. ಅದಾಗಲೇ ಕೊಂಡಿ ಚುಚ್ಚುವ ಕಾರ್ಯ ಮುಗಿದಿತ್ತು. ಹಾಗಾಗಿ ಈ ವರ್ಷ ಸಿಡಿ ಏರಿಕೊಳ್ಳಿ, ಮುಂದಿನ ದಿನಗಳಲ್ಲಿ ಇದು ನಡೆಯ ಕೂಡದು ಎಂದು ಹೇಳಿ ಹೋಗಿದ್ದರು. ಪೊಲೀಸರೊಂದಿಗೆ ತಹಸೀಲ್ದಾರ್ ಬಂದು ಹೋಗಿರುವುದು ಮತ್ತು ಮುಂದಿನ ದಿನಗಳಲ್ಲಿ ಜಾತ್ರೆ ನಿಲ್ಲಲಿದೆ ಎಂಬ ಗುಲ್ಲು ಸುತ್ತ ಏಳು ಹಳ್ಳಿಯಲ್ಲೂ ಹರಡಿತ್ತು. ಅದು ಅವ್ವನ ಕಿವಿಗೂ ಮುಟ್ಟಿತ್ತು. ಹಿಂದಿನ ದಿನ ವರದಿ ಮಾಡುವಾಗ ಜಾತ್ರೆಯಲ್ಲಿರುವ ಆಚರಣೆಗಳ ಬಗ್ಗೆ ಅವ್ವನ ಬಳಿಯೂ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದೆ. ಹಾಗಾಗಿ ಓದಲು ಬರದಿದ್ದರೂ ಅವ್ವನಿಗೆ ಇದು ನನ್ನ ಕೆಲಸವೇ ಎಂದು ಗೊತ್ತಾಗಿತ್ತು.

ರಚ್ಚೆ ಹಿಡಿದಂತೆ ಅವ್ವ ಅಳುತ್ತಿದ್ದಳು. ಸಿಡಿ ಏರುವುದನ್ನು ಅಧಿಕಾರಿಗಳು ತಡೆದರೆ ಮುಂದೆ ಉಡಸಲಮ್ಮನ ಶಾಪಕ್ಕೆ ತನ್ನ ತವರು ಮನೆ ಜನ ಹಾಗೂ ನಾನು ತುತ್ತಾಗುತ್ತೇವೆ ಎಂಬುದು ಅವ್ವನ ಆತಂಕ. ಸಿಡಿ ಏರಲಿಲ್ಲ ಎಂಬ ಕಾರಣಕ್ಕೆ ಯಾರನ್ನಾದರೂ ದೇವಿ ಬಲಿ ಪಡೆದರೆ ಅವರ ಕುಟುಂಬಕ್ಕೆ ನೀನು ಹೊಣೆಯಾಗುತ್ತೀಯಾ?, ಜಾತ್ರೆ ನಿಲ್ಲಲು ನೀನೂ ಕಾರಣವಾದೆ ಎಂಬ ಸಿಟ್ಟಿಗೆ ಆಕೆ ನಿನ್ನನ್ನೂ ಬಲಿ ಪಡೆದುಕೊಂಡರೆ ನಾವೇನು ಮಾಡಬೇಕು? ಎಂದು ಪ್ರಶ್ನೆಗಳ ಸುರಿಮಳೆಗೈದಳು. ಮನೆಯಲ್ಲಿದ್ದವರೆಲ್ಲ ಸೇರಿ ಸಮಾಧಾನ ಮಾಡಿದರೂ ಅವ್ವನ ದುಃಖ ಕಡಿಮೆಯಾಗಲಿಲ್ಲ. ಯಾವುದೇ ಕಾರಣಕ್ಕೂ ನಾನು ಜಾತ್ರೆಗೆ ಬರಲಾರೆ ಎಂದು ಪಟ್ಟು ಹಿಡಿದಳು. ಜಾತ್ರೆಯಲ್ಲಿ ಯಾರದರೂ ನಿನ್ನ ಮಗ ಈ ಕೆಲಸ ಮಾಡಿದ್ದಾನೆ, ಸರಿಯೇ? ಎಂದು ಪ್ರಶ್ನೆ ಮಾಡಿದರೆ ಏನು ಹೇಳಲಿ?. ತವರೂರಿನ ಜನರಿಗೆ ಹೇಗೆ ಮೂಖ ತೋರಲಿ? ಎಂದು ಕಣ್ಣೀರಿಟ್ಟಳು.

ಆ ಸಮಯಕ್ಕೆ ಜಾತ್ರೆಗೆಂದು ಬಂದ ಅಕ್ಕ, ಅವ್ವನನ್ನು ಸಮಾಧಾನ ಮಾಡಿದಳು. ಸಿಡಿ ಕಂಬಕ್ಕೆ ದಲಿತರೇ ಏಕೆ ಏರಬೇಕು?, ತಪ್ಪು ಅಥವಾ ಶೋಷಣೆ ಎಂದು ಈವರೆಗೆ ನಮಗೆ ಅನ್ನಿಸಿರಲಿಲ್ಲ. ಈಗ ಅವನು ಪತ್ರಿಕೆಯಲ್ಲಿ ಬರೆದ ನಂತರ ತಪ್ಪಲ್ಲವೇ ಎನ್ನಿಸುತ್ತಿದೆ. ಸಿಡಿಗಂಬದಿಂದ ಕೆಳಗಿರುವ ಕೆಂಡಕ್ಕೆ ಬಿದ್ದು ಯಾರಾದರೂ ಪ್ರಾಣ ಕಳೆದುಕೊಂಡರೆ ಯಾರು ಹೊಣೆ? ದೇವರು ಬಂದು ಕಾಪಾಡಲು ಸಾಧ್ಯವೇ?, ಅವನ ಕೆಲಸ ಅವನು ಮಾಡಿದ್ದಾನೆ, ಅವನಿಗೇನು ತೊಂದರೆ ಆಗಲ್ಲ ಎಂದು ಅಕ್ಕ ಅವ್ವನಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದಳು. ಕೊನೆಗೂ ಹೇಗೋ ಮನವೊಲಿಸಿ ಅವ್ವನನ್ನು ಅಕ್ಕ ಜಾತ್ರೆಗೆ ಕರೆದೊಯ್ದಳು. ಕಣ್ಣೀರಿಡುತ್ತಲೇ ಅವ್ವ ಜಾತ್ರೆಯತ್ತ ನಡೆದಳು. ನಾನು ಮಾತ್ರ ಜಾತ್ರೆ ಕಡೆ ತಲೆ ಹಾಕಬಾರದು ಎಂದು ಆಜ್ಞೆ ಮಾಡಿದಳು.Sidi-2

ಮಡದಿ-ಮಕ್ಕಳೆಲ್ಲ ಜಾತ್ರೆ ಕಳುಹಿಸಿ ಗೆಳೆಯ ರಾಜನೊಂದಿಗೆ ಮನೆಯಲ್ಲೆ ಉಳಿದುಕೊಂಡೆ. ಆಪ್ತಮಿತ್ರ ಮಡಿಕೆ ಸತ್ತ ನಂತರ ನಡೆಯುತ್ತಿದ್ದ ಮೊದಲ ಜಾತ್ರೆಯಾದ್ದರಿಂದ ಉತ್ಸಾಹ ಕೂಡ ಕುಂದಿ ಹೋಗಿತ್ತು. ರಾಜನೊಂದಿಗೆ ಮಹೇಶನ ಸಮಾಧಿ ಸ್ಥಳ ಹಾಗೂ ಅತ್ತಿತ್ತ ಸುತ್ತಾಡಿಕೊಂಡು ಕಾಲ ಕಳೆದೆ. ಜಾತ್ರೆ ಕಡೆಯಿಂದ ಓಡಿ ಬಂದ ಸತೀಶನ ಕೋಪ ನೆತ್ತಿಗೇರಿತ್ತು. ಉಡಸಲಮ್ಮ ಮೈಮೇಲೆ ಬಂದವಳಂತೆ ಕುಣಿಯುತ್ತಿದ್ದ. ನೀವೆಲ್ಲಾ ಎಲ್ಲಿ ಹೋಗಿದ್ದೀರಿ ನಮ್ಮ ಮೇಲೆ ಇಂದಿಗೂ ದೌರ್ಜನ್ಯ ನಡೆಯುತ್ತಿದೆ ಎಂದು ಸಿಟ್ಟಿನಿಂದಲೇ ನನ್ನತ್ತ ಬಂದ. ಸಮಾಧಾನ ಮಾಡಿ ಏನಾಯಿತು ಎಂದು ಕೇಳಿದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತೀಶ, ಜಾತ್ರೆಗೆಂದು ಬಂದಿದ್ದ. ನಮ್ಮೂರಿನಿಂದ ಹೋಗುವ ತೇರಿನೊಂದಿಗೆ ಜಾತ್ರೆ ಸೇರಿಕೊಂಡಿದ್ದ. ಕೆಂಡದಲ್ಲಿ ಕಾಲಾಡಿ ದೇವಸ್ಥಾನ ಸುತ್ತು ಹಾಕುವ ಸಂದರ್ಭದಲ್ಲಿ ತೇರು ಎಳೆಯಲು ಕೈಜೋಡಿಸಲು ಮುಂದಾಗಿದ್ದಾನೆ. ಎಲ್ಲರ ಜೊತೆ ತೇರು ಮುಟ್ಟಿ ಎಳೆಯಲು ಉತ್ಸಾಹದಲ್ಲಿ ನಿಂತಿದ್ದಾನೆ. ಅಷ್ಟರಲ್ಲಿ ಅಲ್ಲಿದ್ದ ಮೇಲ್ಜಾತಿಯವರು ಆತನನ್ನು ಹೊರ ಹೋಗುವಂತೆ ಸೂಚಿಸಿದ್ದಾರೆ. ನಿಮ್ಮವರು ತೇರು ಮುಟ್ಟುವಂತಿಲ್ಲ. ಆದರೂ ಕಳೆದ ವರ್ಷ ನೀವೆಲ್ಲ ತೇರು ಎಳೆದು ಮೈಲಿಗೆ ಮಾಡಿದ್ದೀರಿ. ಪರಿಣಾಮವಾಗಿ ಕಳಸವೇ ಬಿದ್ದು ಹೋಗಿತ್ತು. ಈ ವರ್ಷವೂ ಆ ರೀತಿ ಆಗುವುದು ಬೇಡ ಎಂದು ಉಪದೇಶ ಹೇಳಿದ್ದಾರೆ.

ಆದರೆ ಅದಕ್ಕೊಪ್ಪದ ಸತೀಶ ತೇರು ಎಳದೇ ತೀರುತ್ತೇನೆ, ಆಗಿದ್ದಾಗಲಿ ಎಂದು ನಿಂತಿದ್ದಾನೆ. ಅಷ್ಟರಲ್ಲಿ ಮೇಲ್ಜಾತಿ ಯುವಕರು ಮತ್ತು ಸತೀಶನ ನಡುವೆ ಮಾತಿಗೆ ಮಾತು ಬೆಳೆದಿದೆ. ಗುಂಪು ಸೇರಿಕೊಂಡ ಹಿನ್ನೆಲೆಯಲ್ಲಿ ಸತೀಶನ ತಮ್ಮ ಹರೀಶನೂ ಓಡಿ ಬಂದು ನಾವ್ಯಾಕೆ ತೇರು ಎಳೆಯಬಾರದು ಎಂದು ಕೇಳಿದ್ದಾನೆ. ಆದರೆ ಅಷ್ಟರಲ್ಲಿ ಅಲ್ಲಿಗೆ ಓಡಿ ಬಂದ ಸತೀಶನ ಅಕ್ಕ ವಾಣಿ ಇಬ್ಬರನ್ನು ಸಮಾಧಾನ ಮಾಡಿ ಕರೆದೊಯ್ದಿದ್ದಾಳೆ. ಅವರು ಸಾಕಷ್ಟು ಮಂದಿ ಇದ್ದಾರೆ, ಏನಾದರೂ ಮಾಡಿ ಬಿಡುತ್ತಾರೆ. ತೇರು ಎಳೆದು ನಮಗೇನು ಆಗಬೇಕಿಲ್ಲ, ಬನ್ನಿ ಎಂದು ಎಳೆದೊಯ್ದಿದ್ದಾಳೆ. ಅದೇ ಸಿಟ್ಟಿನಿಲ್ಲಿ ಜಾತ್ರೆ ಬಿಟ್ಟು ಮನೆ ಕಡೆ ಬಂದ ಸತೀಶ ನನ್ನ ಬಳಿ ಸಿಟ್ಟು ತೋಡಿಕೊಂಡ. ನಾನು ಇದ್ದಿದ್ದರೂ ತೇರು ಎಳೆಯಲು ನಿನಗ ಅವಕಾಶ ಕೊಡಿಸಲು ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈ ಅಸ್ಪಶ್ಯತೆ ಆಚರಣೆ ವಿರುದ್ಧ ಸ್ಥಳದಲ್ಲೆ ಧರಣಿ ಮಾಡಬಹುದಿತ್ತು ಎಂದೆ. ಈಗಲೂ ಕಾಲ ಮಿಂಚಿಲ್ಲ, ತೇರು ಮುಟ್ಟಲು ಅವಕಾಶ ನೀಡಿದೆ ಅಸ್ಪಶ್ಯತೆ ಆಚರಣೆ ಮಾಡಿ, ಎಲ್ಲರೆದುರು ನಿನ್ನನ್ನು ಅವಮಾನ ಮಾಡಿದ್ದರೆ. ಅವರ ಹೆಸರು ಗೊತ್ತಿದ್ದರೆ ಹೇಳು, ಅಂತವರ ವಿರುದ್ಧ ಠಾಣೆಗೆ ಹೋಗಿ ಮೊಕದ್ದಮೆ ದಾಖಲಿಸೋಣ ಎಂದೆ. ಸ್ನೇಹಿತರು ಮತ್ತು ಕೆಲವು ಅಧಿಕಾರಿಗಳನ್ನು ಸಂಪರ್ಕ ಮಾಡಿ ಹೇಗೆ ಮುಂದುವರಿಯಬೇಕು ಎಂಬ ಸಲಹೆ ಪಡೆದುಕೊಂಡೆ.

ಅದಕ್ಕೂ ಮುನ್ನ ನಿಮ್ಮ ಅಪ್ಪ-ಅಮ್ಮನನ್ನು ಕೇಳಿಕೊಂಡು ಬಾ ಎಂದು ಕಳುಹಿಸಿಕೊಟ್ಟೆ. ಸತೀಶ-ಹರೀಶ ಇಬ್ಬರೂ ಹೋಗಿ ಅವರಪ್ಪನನ್ನು ಕರೆತಂದರು. ನಾವೇ ಠಾಣೆಗೆ ಹೋಗಿ ದೂರು ಕೊಟ್ಟರೆ ಊರಿನವರು ಬೇಸರ ಮಾಡಿಕೊಳ್ಳುತ್ತಾರೆ. ಹಾಗಾಗಿ ದಲಿತ ಕೇರಿಯ ಎಲ್ಲರನ್ನೂ ಒಂದು ಮಾತು ಕೇಳಿಬಿಡೋಣ ಎಂದರು ಅವರಪ್ಪ. ನಾನು ಕೂಡ ಸ್ವಲ್ಪ ತಾಳ್ಮೆ ಉಳಿಸಿಕೊಂಡೆ. ಏನೂ ಕಾಣದ ಮಕ್ಕಳನ್ನು ಕರೆದೊಯ್ದು ಪೊಲೀಸ್, ಕಂಪ್ಲೆಂಟ್, ಕೋರ್ಟ್ ಅಂತ ಅಲೆಸುತ್ತಿದ್ದಾನೆ ಎಂದು ಸತೀಶನ ಅಪ್ಪ-ಅಮ್ಮ ನನಗೆ ಶಾಪ ಹಾಕಬಾರದು ಎಂಬ ಕಾರಣಕ್ಕೆ ಸ್ವಲ್ಪ ಹೊತ್ತು ಕಾದು ನೋಡಿದೆ. ಜೊತೆಯಲ್ಲೆ ಇದ್ದ ರಾಜ ಹೇಳಿದ ’ಇದು ಆಗದೆ ಇರುವ ಕೆಲಸ, ನೀನು ಜಾತ್ರೆಗೆ ಬಂದಿದ್ದೀಯ ಸುಮ್ಮನೆ ಬಾಡೂಟ ಮುಗಿಸಿಕೊಂಡು ಹೋಗು’ ಎಂದು ಸಲಹೆ ನೀಡಿದ.

ಅವನ ಮಾತು ಕೇಳದ ನಾನು ಜಾತ್ರೆ ಮುಗಿಸಿಕೊಂಡು ಆಗಾಗ ಬರುತ್ತಿದ್ದವರನ್ನೆಲ್ಲ ತಡೆದು ಘಟನೆಯನ್ನು ವಿವರಿಸಿದೆ. ಯುವಕರು ಹೌದು ಈಗಲೂ ಅಸ್ಪಶ್ಯತೆ ಆಚರಿಸುತ್ತಿರುವವರಿಗೆ ಬುದ್ದಿ ಕೆಲಸಬೇಕು ಎಂದರು. ಆದರೆ ಹಿರಿಯರಲ್ಲಿ ಬಹುತೇಕರು ನಾವೆಂದೂ ತೇರು ಮುಟ್ಟಿಲ್ಲ. ಕೇರಿಯಲ್ಲಿ ತಮ್ಮಯ್ಯನ ಮಗಳು ಮೈನೆರಿದ್ದಾಳೆ, ಸೂತಕ ಇದ್ದರೂ ತೇರು ಮುಟ್ಟಿರುವುದು ನಿನ್ನದೇ ತಪ್ಪು’ ಎಂದು ಸತೀಶನನ್ನು ಆರೋಪಿ ಮಾಡಿದರು. ‘ನೀನೋ ಹಬ್ಬ-ಜಾತ್ರೆಯಲ್ಲಿ ಊರಿಗೆ ಬಂದು ಹೋಗುತ್ತೀಯ. ನಿನ್ನ ಮಾತು ಕೇಳಿ ಪೊಲೀಸ್ ಠಾಣೆಗೆ ಹೋದರೆ ಮುಂದಾಗುವ ಅನಾಹುತಗಳನ್ನು ನಿತ್ಯೆ ಇಲ್ಲೆ ಇರುವ ನಾವು ಅನುಭವಿಸಬೇಕು. ಮುಂದೆ ಎದುರಾಗುವ ಕಷ್ಟ-ಸುಖದಲ್ಲಿ ಹಣಕ್ಕೆ ಅವರ ಮುಂದೆಯೇ ಕೈ ಚಾಚಬೇಕು. ಆಗಿದ್ದು ಆಗಿ ಹೋಗಿದೆ. ಊರಿನಲ್ಲಿ ಶಾಂತಿ ಕದಡುವ ಕೆಲಸ ಮಾಡಬೇಡ’ ಎಂದು ನನಗೂ ಚುಚ್ಚಿದರು. ಮೊದಲೇ ಸೂಚನೆ ನೀಡಿದ್ದ ರಾಜ ನನ್ನತ್ತ ನೋಡಿ ‘ನಿನಗಿದು ಬೇಕಿತ್ತೇ, ನಾನು ಮೊದಲೇ ಹೇಳಲಿಲ್ಲವೇ?, ಹೋಗು ಹೆಂಡತಿ-ಮಕ್ಕಳು ಜಾತ್ರೆಯಿಂದ ಬಂದಿದ್ದರೆ ಊಟ ಮಾಡಿ ನಿನ್ನ ಕೆಲಸ ನೋಡಿಕೊ’ ಎಂದು ಗದರಿಸಿದ. ಬೇರೆ ದಾರಿಯಿಲ್ಲದೆ ದುಃಖ ನುಂಗಿಕೊಂಡು ಮನೆಗೆ ಬಂದೆ.