Daily Archives: August 4, 2015

ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ : ಮಹಾತ್ಮ ಮತ್ತು ಮಹಾತಾಯಿ


– ಶ್ರೀಧರ್ ಪ್ರಭು


ಯಮದೂತರಂತಿದ್ದ ಅವರಿಬ್ಬರ ಅವನ ಹೆಗಲುಗಳ ಮೇಲೆ ಭಾರವಾದ ಮೂಟೆಗಳು. ಪುಣೆಯ ಗರ್ಭದಲ್ಲಿರುವ ಆ ಪುಟ್ಟ ಗಲ್ಲಿಯನ್ನು ಹುಡುಕುವಷ್ಟರಲ್ಲಿ ಇವರಿಬ್ಬರಿಗೂ ಮೈಯೆಲ್ಲಾ ಬೆವರಿ ಹೋಗಿತ್ತು. ಸುಮಾರು ಹತ್ತು ಹನ್ನೆರಡು ಹೆಣ್ಣು ಮಕ್ಕಳನ್ನು ಕೂಡಿಸಿಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಆ ತಾಯಿಗೆ ಈ ಇಬ್ಬರು ಧಡೂತಿ ಗಾತ್ರದ ಆಸಾಮಿಗಳನ್ನು ನೋಡಿ ಒಂದು ಕ್ಷಣ ಉಸಿರೇ ನಿಂತು ಹೋಯಿತು!

ನಾಲ್ಕೈದು ದಿವಸದ ಹಿಂದೆ ಮಧ್ಯ ರಾತ್ರಿಯ ವೇಳೆ ಮನೆಯ ಕಿಟಕಿ ಸರಳುಗಳನ್ನು ಮುರಿದು ಇವರಿಬ್ಬರೂ ಕೊಡಲಿ ಬಾಕು ಹಿಡಿದುಕೊಂಡು ಈ ತಾಯಿ ಮತ್ತವರ ಗಂಡನನ್ನು ಕೊಲೆ ಮಾಡಲು ಬಂದಿದ್ದರು. ತಕ್ಷಣ ಎಚ್ಹೆತ್ತುಕೊಂಡ ತನ್ನ ಪತಿ, ಅಂಥಹ ಕರಾಳ ರಾತ್ರಿ ಕೊಲೆಗಾರರನ್ನು ದಿಟ್ಟಿಸಿ ನೋಡುತ್ತಾ ತನಗೆ ಹೇಳಿದ ಮಾತುಗಳು ಅವರಿಗೆ ನೆನಪಾದವು:

“ಸಾವಿತ್ರಿ, ಇವರು ರಾಮೊಶಿಗಳು; ವೈದಿಕಶಾಹಿಯ ಅತಿ ಕ್ರೂರ ವಿಕೃತಿಗೆ ಬಲಿಯಾದ ಜನ. ಇವರದ್ದೇನೂ ತಪ್ಪಿಲ್ಲ. ಶತ ಶತಮಾನಗಳಿಂದ ಪುರೋಹಿತಶಾಹಿ ಸಮಾಜ ಇವರನ್ನು ವಿದ್ಯೆಯಿಂದ ವಂಚಿಸಿ ಬಿಡಿಗಾಸಿಗಾಗಿ ಹೇಯ ಕೃತ್ಯಗಳನ್ನು ಮಾಡಲು ದೂಡಿದೆ. ನಮ್ಮ ಕ್ರೂರ ಸಮಾಜದ ವಾಸ್ತವವೆಂದರೆ, ಇವರ ಕೈಯಲ್ಲೇ ಕೊಲೆಯಾಗಲು ಹೊರಟಿದ್ದೇನೆ. ಇಂಥಹ ದಲಿತ ದಮನಿತರ ಪರವಾಗಿ ಶ್ರಮಿಸಿ ಇವರಿಗೇ ನನ್ನ ಜೀವ ಸಮರ್ಪಿಸಲು ಸಂತೋಷವೆನಿಸುತ್ತಿದೆ. ಅದಿರಲಿ… ನಾನು ಸತ್ತ ಮೇಲೆ ಕೂಡ ನಮ್ಮ ಕೆಲಸ ನಿಲ್ಲಿಸಬೇಡ. ಇವರ ಮಕ್ಕಳನ್ನು ನಮ್ಮ ಶಾಲೆಯಲ್ಲೇ ಓದಿಸಿ ವಿದ್ಯಾವಂತರನ್ನಾಗಿ ಮಾಡು.”

ಅಷ್ಟು ಹೇಳಿದ್ದೆ ತಡ. ಈ ಕೊಲೆಗಾರರು ಕೊಡಲಿ ಕೆಳಗಿಳಿಸಿದ್ದರು.

” ಸ್ವಾಮಿ! ನೀವು ಶಾಲೆ ನಡೆಸುತ್ತಿದ್ದೀರಾ? ಅಲ್ಲಿ ನಮ್ಮ ಮಕ್ಕಳು ಓದಬಹುದೇ?”

“ನೀವು ನಿಮ್ಮ ಕೆಲಸ ಮುಗಿಸಿ. ಅದೆಲ್ಲ ನಿಮಗ್ಯಾಕೆ?” ಪತಿ ಅತ್ಯಂತ ಶಾಂತ ಚಿತ್ತರಾಗಿ ಹೇಳಿದರು.

ತಕ್ಷಣ ಕೈ ಮುಗಿದು ನಿಂತ ಇವರಿಬ್ಬರೂ ಹೇಳಿದರು “ಸ್ವಾಮಿ, ನಿಮ್ಮಿಬ್ಬರನ್ನು ಕೊಲೆ ಮಾಡಲು ನಮಗೆ ತಲಾ ಒಂದು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಸರಿಯಾಗಿ ಐದು ರೂಪಾಯಿ ಕೂಡ ಕೈಯಲ್ಲಿ ಹಿಡಿದು ನೋಡಿದ ಜನವಲ್ಲ ನಾವು…. ಆದರೆ, ನಿಮ್ಮಂತಹ ಮಹಾತ್ಮರನ್ನು ಕೊಲೆ ಮಾಡಿ ಅದೆಂತಹ ಮಹಾ ಪಾತಕ ಮಾಡುತ್ತಿದ್ದೆವು!!!”

೧೮೪೮ ರಲ್ಲಿ ಪುಣೆಯ ವೈದಿಕರು-ಸಂಪ್ರದಾಯವಾದಿಗಳು ಜ್ಯೋತಿ ರಾವ್ ಗೋವಿಂದರಾವ್ ಫುಲೆ ಮತ್ತವರ ಪತ್ನಿ ಸಾವಿತ್ರಿ ಬಾಯಿಯವರನ್ನು ಕೊಲೆ ಮಾಡಲು ಎರಡು ಸಾವಿರ ರೂಪಾಯಿಯ ಸುಪಾರಿ ನೀಡಿದ್ದರೆಂದರೆ ಈ ದಂಪತಿ ಅದೆಂತಹ ಕ್ರಾಂತಿಯ ಕಿಡಿ ಹಚ್ಚಿದ್ದರೆಂದು ಊಹಿಸಿಕೊಳ್ಳಿ!

ಮಹಾತ್ಮಾ ಫುಲೆ ಹಚ್ಚಿದ ಕ್ರಾಂತಿಯ ಕಿಡಿ ನಂತರದ ಅನೇಕ ಸಾಮಾಜಿಕ ಮತ್ತು ರಾಜಕೀಯ ಪರಿವರ್ತನೆಗಳಿಗೆ ಮೂಲ ಸ್ರೋತವಾಗಿತ್ತು. ಆದರೂ ಫುಲೆ ದಂಪತಿಯ ಸಮಾಜಪರ ಕಾರ್ಯಗಳ ಹರವು ತುಂಬಾ ವಿಸ್ತೃತ.

ಕ್ರಾಂತಿಯ ಹರಿಕಾರ

ಫುಲೆಯವರು ಮಹಾತ್ಮಾ ಫುಲೆ ಕೇವಲ ಜಾತಿ ವಿರೋಧಿ ಚಳುವಳಿ ಮಾತ್ರ ನಡೆಸಲಿಲ್ಲ; ಭಾರತದ ಶಿಕ್ಷಣ ಕ್ರಾಂತಿಯ ಹರಿಕಾರರಾಗಿದ್ದರು. ಪ್ರಖ್ಯಾತ ಶೈಕ್ಷಣಿಕ ಇತಿಹಾಸಕಾರ ಸರ್ ಹೆನ್ರಿ ಶಾರ್ಪ್ ಹೇಳುವಂತೆ:

“ಜ್ಯೋತಿಬಾ ಮಹಿಳಾ ಶಿಕ್ಷಣ ಕ್ರಾಂತಿಯ ಕಿಡಿ ಹಚ್ಚಿದಾಗ ಭಾರತದ ಮೆಲ್ವರ್ಗಗಳು ಹಾಡಿ ಹೊಗಳುವ ಸುಧಾರಕರಾದ ಮಹಾದೇವ ರಾನಡೆ ಹತ್ತು ವರ್ಷದ ಹಸುಳೆ, ಇನ್ನು ಅಗರ್ಕರ್. ಕೆ. ಕರ್ವೆ, ಪಂಡಿತಾ ರಾಮಾಬಾಯಿ, ಮೋಹನದಾಸ ಗಾಂಧಿಯವರು ಹುಟ್ಟೇ ಇರಲಿಲ್ಲ.”

೧೮೭೬ರಲ್ಲಿ ಅವರು ಪ್ರಾರಂಭಿಸಿದ “ವಿಕ್ಟೋರಿಯ ಅನಾಥಾಲಯ” ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಅನೇಕ ವಿಧವೆಯರಿಗೆ ಆಶ್ರಯ ನೀಡಿ ಅನೇಕ ವಿಧವೆಯರ ಮಕ್ಕಳು ಶಿಕ್ಷಣ ಮತ್ತು ಪಡೆಯಲು ಸಹಾಯ ಮಾಡಿತು.

ಪುಣೆಯಲ್ಲಿ ತನ್ನದೇ ಜಾತಿಯ ವಂಚಕನೊಬ್ಬನ ಬಲಿಗೆ ಬಿದ್ದ ಬ್ರಾಹ್ಮಣ ವಿಧವೆಯೋಬ್ಬಳಿಗೆ ಅಲ್ಲಿನ ಬ್ರಾಹ್ಮಣ ಸಮಾಜ ಸಾಯಿಸಲು ಹವಣಿಸುತ್ತಿತ್ತು. mahatma-jyoti-rao-phuleಫುಲೆ ದಂಪತಿ ತಮ್ಮ ಮನೆಯಲ್ಲಿ ರಕ್ಷಣೆ ನೀಡಿ ಅವಳಿಗೆ ಜನಿಸಿದ ಯಶವಂತನೆಂಬ ಬಾಲಕನನ್ನು ಫುಲೆ ದಂಪತಿಗಳು ದತ್ತು ಪಡೆದು ಸಾಕಿ ಸಲಹಿ ವೈದ್ಯನನ್ನಾಗಿ ಮಾಡುತ್ತಾರೆ.

ತಾಯಿ ಸಾವಿತ್ರಿ ಬಾಯಿಯ ತ್ಯಾಗ ಬಹು ದೊಡ್ಡದು. ಜನರ ಸೇವೆಯಲ್ಲೇ ತಮ್ಮ ಪ್ರಾಣ ವನ್ನು ಸಮರ್ಪಿಸಿದರು ಈ ಮಹಾತಾಯಿ. ಪುಟ್ಟ ಬಾಲ ವಿಧವೆಯರನ್ನು ಕೊಂದು ಹಾಕುವ ಕ್ರೂರ ಪದ್ಧತಿ ಇದ್ದ ಕಾಲದಲ್ಲಿ ಈ ತಾಯಿ “ಬಾಲ ಹತ್ಯಾ ಪ್ರತಿಬಂಧಕ ಗೃಹ” ತೆರೆದರು.

ಅಮ್ಮ ಸಾವಿತ್ರಿ, ವಿಶ್ವದ ಪ್ರಥಮ ಮಹಿಳಾ ಚಳುವಳಿಗಾರ್ತಿ ಎಂದು ವಿಶ್ವ ವಿಖ್ಯಾತ ಚಿಂತಕಿ ಟಿಫಾನಿ ವೇಯ್ನ್ ತಮ್ಮ “Feminist Writings from Ancient Times to the Modern World: A Global Sourcebook and History.” ಪುಸ್ತಕದಲ್ಲಿ ಹೇಳುತ್ತಾರೆ.

೧೮೯೭ ರಲ್ಲಿ ಭೀಕರವಾದ ಪ್ಲೇಗ್ ರೋಗ ಹರಡಿತು. ತಮ್ಮ ಅರವತ್ತಾರರ ಇಳಿ ವಯಸ್ಸಿನಲ್ಲೂ ವೈದ್ಯನಾಗಿದ್ದ ಮಗ ಯಶವಂತನ ಜತೆ ಸೇರಿ ಮಹಾಮಾತೆ ಸಾವಿತ್ರಿ ಬಾಯಿ ಸಾವಿರಾರು ರೋಗಿಗಳ ಸೇವೆ ಮಾಡಿ ಜನತೆಗೊಸ್ಕರ ತಮ್ಮ ಪ್ರಾಣ ವನ್ನೇ ಅರ್ಪಿಸಿದರು!

ತಾಯಿ ಸಾವಿತ್ರಿ ಒಬ್ಬ ಕವಿಯಿತ್ರಿ ಕೂಡ; ಎರಡು ಕವನ ಸಂಕಲನಗಳನ್ನು ಇವರ ಮರಣಾನಂತರ ಬಿಡುಗಡೆಗೊಳಿಸಲಾಯಿತು. ಎಂಥೆಂಥವರಿಗೆಲ್ಲ ಪದ್ಮ ಪ್ರಶಸ್ತಿ – ಭಾರತರತ್ನ ಕೊಡುವ ಸರಕಾರ ಈ ಮಹಾತಾಯಿಯ ಹೆಸರಿನಲ್ಲಿ ಒಂದು ಅಂಚೆ ಚೀಟಿ ಬಿಡುಗಡೆ ಮಾಡಿದ್ದೂ ಬಿಟ್ಟರೆ ಇನ್ನೇನೂ ಮಾಡಿಲ್ಲ! ಕೇವಲ ತೀರ ಇತ್ತೀಚಿಗೆ (೨೦೧೪) ಪುಣೆ ವಿಶ್ವ ವಿದ್ಯಾಲಯಕ್ಕೆ ಇವರ ಹೆಸರನ್ನು ಇಡಲಾಗಿದೆ. ಅಷ್ಟು ಬಿಟ್ಟರೆ ಈ ವಿಶ್ವವಂದ್ಯೆ ಮಹಾತಾಯಿಯ ತ್ಯಾಗವನ್ನು ಸ್ಮರಿಸುವ ಅಮರಗೊಳಿಸುವ ಯಾವ ಪ್ರಯತ್ನಗಳೂ ನಡೆದಿಲ್ಲ.

ಫುಲೆ ಮತ್ತು ಭಾರತದ ಮಾತೃ ಭಾಷಾ ಕ್ರಾಂತಿ

ಮಹಾತ್ಮಾ ಫುಲೆಯವರ ಸಾಮಾಜಿಕ ಸುಧಾರಣೆಯ ವ್ಯಕ್ತಿತ್ವದ ಮಜಲು ಬಹುಶೃತ. ಆದರೆ ಫುಲೆ ಸಾಧನೆ ಅಷ್ಟು ಮಾತ್ರಕ್ಕೆ ಸೀಮಿತವಾಗಿರಲಿಲ್ಲ.phule ನಮ್ಮ ಚರಿತ್ರೆ ಅವರಿಗೆ ಸಲ್ಲಬೇಕಾದ ಗೌರವದ ಒಂದು ಪ್ರತಿಶತ ಕೂಡ ಸಲ್ಲಿಸಿಲ್ಲ. ಫುಲೆ ದಂಪತಿಗಳು ಕೇವಲ ಒಂದು ಜಾತಿಗೆ ಸೇರಿದವರು ಎಂದು ವ್ಯವಸ್ಥಿತ ಅಪಪ್ರಚಾರ ನಡೆಸಿ ಅವರ ಮಹಾತ್ಮೆಯನ್ನು ಮುಚ್ಚಿ ಹಾಕುವ ಪ್ರಯತ್ನ ಚರಿತ್ರೆಯುದ್ದಕ್ಕೂ ನಡೆಯುತ್ತಲೇ ಬಂದಿದೆ. ಫುಲೆ ಕೇವಲ ಜಾತಿ ವಿರೋಧಿ ಹೋರಾಟಗಳ ನೇತಾರರಗಿರಲಿಲ್ಲ; ಸಂಪೂರ್ಣ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದರು.

ಫುಲೆಯವರ ಅನೇಕ ಸಾಧನೆಗಳು ಚರಿತ್ರೆಯ ಗರ್ಭದಲ್ಲಿ ಹುಡುಗಿ ಹೋಗಿವೆ. ಅವುಗಳಲ್ಲಿ ಒಂದೆರಡನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.

೧೬೭೪ ರಲ್ಲಿ ಶಿವಾಜಿಯ ಪಟ್ಟಾಭಿಷೇಕವಾದ ನಂತರ ಶುರುವಾಗಿದ್ದು “ದಕ್ಷಿಣಾ ಪದ್ಧತಿ”. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬೊಕ್ಕಸದ ಒಂದು ಬಹು ದೊಡ್ಡ ಮೊತ್ತವನ್ನು ಬ್ರಾಹ್ಮಣರಿಗೆ ದಕ್ಷಿಣೆಯ ರೂಪದಲ್ಲಿ ನೀಡಲಾಗುತ್ತಿತ್ತು. ಶಿವಾಜಿಯ ನಂತರದಲ್ಲಿ ಪೇಶ್ವೆ ಆಡಳಿತ ಶುರುವಾದ ಮೇಲಂತೂ ಈ ದಕ್ಷಿಣೆಯ ಪದ್ಧತಿ ಉಚ್ಹ್ರಾಯಕ್ಕೇರಿತು.

ಪುಣೆಯ ಅರವತ್ತು ಸಾವಿರ ಬ್ರಾಹ್ಮಣರಿಗೆ ಸುಮಾರು ಹತ್ತು ಲಕ್ಷ ರೂಪಾಯಿ ಹಂಚಲಾಯಿತು! ಹತ್ತೊಂಬತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಹಂಚಿದ (೧೮೦೦-೧೮೧೦) ವಾರ್ಷಿಕ ಮೊತ್ತ ಬರೋಬ್ಬರಿ ಹತ್ತು ಲಕ್ಷಕ್ಕೆ ಇಂದಿನ ದಿನಗಳಲ್ಲಿ ಎಷ್ಟು ಮೌಲ್ಯವೆಂದು ಅರ್ಥಶಾಸ್ತ್ರ ಬಲ್ಲವರು ಹೇಳಬೇಕು! ಒಟ್ಟಾರೆ ಎರಡನೇ ಬಾಜಿರಾಯ ವಸ್ತುಶಃ ತನ್ನ ಇಡೀ ಖಜಾನೆಯನ್ನೇ ಬ್ರಾಹ್ಮಣರ ಪಾದಕ್ಕೆ ಅರ್ಪಿಸಿದ್ದ!

ಆಂಗ್ಲರು ಮರಾಠರನ್ನು ಸೋಲಿಸಿದ ನಂತರದಲ್ಲಿ ಲಾರ್ಡ್ ಎಲ್ಫಿನ್ಸ್ಟನ್ ಈ “ದಕ್ಷಿಣಾ ಫಂಡ್” ನ ಮೊತ್ತವನ್ನು ವಾರ್ಷಿಕ ಹತ್ತು ಲಕ್ಷದಿಂದ ಇಪ್ಪತ್ತು ಸಾವಿರಕ್ಕಿಳಿಸಿದ. ಪುಣೆಯ ಕೆಲ ಸುಧಾರಣಾವಾದಿ ಬ್ರಾಹ್ಮಣರು ಈ ದಕ್ಷಿಣೆಯನ್ನು ಬ್ರಾಹ್ಮಣರ ಸಂಸ್ಕೃತ ಪಾಂಡಿತ್ಯಕ್ಕೆ ಮೀಸಲಿರಿಸುವ ಬದಲು Jyotirao Phuleಮರಾಠಿ ಭಾಷೆಯ ವಿಕಾಸಕ್ಕೆ ವಿನಿಯೋಗಿಸಬೇಕು ಎಂದು ಸಹಿ ಸಂಗ್ರಹ ಚಳುವಳಿ ಪ್ರಾರಂಭಿಸಿದರು.

ಹತ್ತಿರ ಹತ್ತಿರ ಒಂದು ಲಕ್ಷ ಸಂಖ್ಯೆಯ ಪುಣೆಯ ಬಹುಸಂಖ್ಯಾತ ಬ್ರಾಹ್ಮಣ ವರ್ಗ ಒಂದು ಕಡೆ; ಬೆರಳೆಣಿಕೆಯ ಕೆಲವೇ ಸುಧಾರಣಾವಾದಿಗಳು ಇನ್ನೊಂದೆಡೆ. ತಾವು ಅಳುತ್ತಿದ್ದ ಪ್ರಜೆಗಳಲ್ಲೇ ಅತ್ಯಂತ ಪ್ರಭಾವಿ ವರ್ಗವಾಗಿದ್ದ ಬ್ರಾಹ್ಮಣರನ್ನು ಎದುರು ಹಾಕಿಕೊಳ್ಳಲು ಬ್ರಿಟಿಷರು ಹಿಂದೆ ಮುಂದೆ ನೋಡುತ್ತಿದ್ದರು. ಸುಧಾರಣಾವಾದಿ ಬ್ರಾಹ್ಮಣರ ಒಂದು ವರ್ಗ ಫುಲೆ ಯವರನ್ನು ತಮ್ಮ ನೇತೃತ್ವ ವಹಿಸುವಂತೆ ಕೇಳಿಕೊಂಡಿತು.

ಎಷ್ಟರ ಮಟ್ಟಿಗೆ ಎಂದರೆ ಮರಾಠಿ ಭಾಷೆಗೆ ದಕ್ಷಿಣ ಫಂಡ್ ಕೊಡಬೇಕು ಎಂದು ಒತ್ತಾಯಿಸಿ ಬಗ್ಗೆ ನಡೆದ ಸಭೆಯಲ್ಲಿ ಮನವಿ ಸಲ್ಲಿಸಲು ನನ್ನ ಹೆಸರು ಬೇಡ ತನ್ನ ಹೆಸರು ಬೇಡ ಎಂದು ಬ್ರಾಹ್ಮಣರು ಗಾಬರಿ ಗೊಂಡಾಗ, ಬ್ರಾಹ್ಮಣರ ಪರವಾಗಿ ಸ್ವತಃ ಫುಲೆ ತಾವೇ ತಮ್ಮ ಹೆಸರಿನಲ್ಲೇ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕಾಯಿತು. ಯಾವಾಗ ಫುಲೆ ಯವರ ಹೆಸರು ಮುಂದಕ್ಕೆ ಬಂತೋ ಬ್ರಾಹ್ಮಣ ಸಂಪ್ರದಾಯವಾದಿಗಳು ಬಾಲವನ್ನೇ ಬಿಚ್ಚಲಿಲ್ಲ. ಫುಲೆ ಸಂಘಟಿಸಿದ ಮೆರವಣಿಗೆಗೆ ರಕ್ಷಣೆ ಕೊಡಲು ಪುಣೆಯ ಸುಮಾರು ೨೫೦ ದಲಿತ-ಶೂದ್ರ ಪೈಲ್ವಾನರು ಮುಂದೆ ಬಂದರು, ಒಂದು ಲಕ್ಷದ ಹತ್ತಿರ ಸಂಖ್ಯಾಬಲದ ವಿಪ್ರೋತ್ತಮರು ಬಾಲ ಮುದುರಿ ಲಟಿಕೆ ಮುರಿಯುತ್ತಾ ಮನೆಯಲ್ಲೇ ಕುಳಿತುಕೊಂಡರು.

ಕೇವಲ ಇಪ್ಪತ್ತು-ಇಪ್ಪಂತ್ತೊಂದು ವರ್ಷ ಪ್ರಾಯದ ಜ್ಯೋತಿಬಾ ಫುಲೆ ತಮ್ಮ ಮೂರರಷ್ಟು ಪ್ರಾಯದ ಜನರನ್ನು ಸಂಘಟಿಸಿ ಹೋರಾಟ ನಡೆಸಿ “ದಕ್ಷಿಣಾ ಫಂಡ್” ನ್ನು ಮರಾಠಿ ಭಾಷೆಯ ವಿಕಾಸಕ್ಕೆ ಬಳಸುವಂತೆ ಮಾಡಿದರು.

ಹೀಗೆ ಮರಾಠಿಯ ವಿಕಾಸನದ ಪ್ರಕ್ರಿಯೆ ಪ್ರತಿಯೊಂದು ನೆಲದ ಭಾಷೆಯ ವಿಕಸನದ ಹೋರಾಟದ ಕಿಡಿ ಹಚ್ಚಿತು!

ಕೇವಲ ಬ್ರಾಹ್ಮಣರಿಗೆ ಮೀಸಲಾಗಿದ್ದ “ಹಿಂದೂ ಕಾಲೇಜ್” ನ್ನು ಎಲ್ಲರಿಗೂ ಮುಕ್ತಗೊಳಿಸಿ ಮರಾಠಿಯ ಬೆಳವಣಿಗೆಗೆ ಮಾತ್ರವಲ್ಲ ಒಂದಿಡೀ ಜನಾಂಗ ಶಿಕ್ಷಣ ಹೊಂದಲು ಕಾರಣರಾದ ಖ್ಯಾತಿ ಕೂಡ ಮಹಾತ್ಮಾ ಫುಲೆಯವರಿಗೆ ಸಲ್ಲಬೇಕು. ಫುಲೆ ನೇತೃತ್ವದ ಜಾಗೃತ ನಾಗರೀಕರ ಹೋರಾಟಕ್ಕೆ ಮಣಿದ ಬ್ರಿಟಿಷ್ ಸರಕಾರ ದಕ್ಷಿಣಾ ಫಂಡ್ ನ್ನು ಮರಾಠಿ ಭಾಷೆಗೆ ಮೀಸಲಿಟ್ಟಿತು. ಸಂಸ್ಕೃತ ಪಾಂಡಿತ್ಯದ ನೆಪದಲ್ಲಿ ಕೇವಲ ಬ್ರಾಹ್ಮಣರ ದುಂದು ವೆಚ್ಚ ಭರಿಸಲು ಬಳಕೆಯಾಗುತ್ತಿದ್ದ ಲಕ್ಷಗಟ್ಟಲೆ ಹಣ ನೆಲದ ಭಾಷೆಯ ವಿಕಾಸಕ್ಕೆ ಬಳಕೆಯಾಗತೊಡಗಿತು. ಈ ಹೋರಾಟವೇ, ಭಾಷಾ ಚಳುವಳಿ ಮತ್ತು ಸಮ್ಮೇಳನಗಳನ್ನು ಸಂಘಟಿಸಲು ಬೇಕಾದ ಭದ್ರ ಅರ್ಥಿಕ ಬುನಾದಿಯನ್ನು ಒದಗಿಸಿತು. ಫುಲೆಯವರು ಚಾಲನೆ ಕೊಟ್ಟ ಈ ಜನರ ಭಾಷಾ ವಿಕಾಸದನ ಈ ಪ್ರಕ್ರಿಯೆಯಿಂದಾಗಿಯೇ ಭಾಷಾವಾರು ಪ್ರಾಂತಗಳ ನಿರ್ಮಾಣದ ಚಿಂತನೆಗೆ ಚಾಲನೆ ಸಿಕ್ಕಿತು.

ಆದ್ದರಿಂದಲೇ, ಕನ್ನಡ ಸೇರಿದಂತೆ ಭಾರತದ ಎಲ್ಲಾ ಭಾಷಾ ಸಮ್ಮೇಳನಗಳನ್ನು ನಡೆಸುವ ಸಂದರ್ಭಗಳಲ್ಲಿ ಮಹಾತ್ಮಾ ಫುಲೆಯವರನ್ನು ನೆನೆದು ಕೈ ಮುಗಿಯಬೇಕು.

ಭಾರತದ ಮೊಟ್ಟ ಮೊದಲ ಕಾನೂನು ನೆರವು ಕೇಂದ್ರ – ಜನ ಸಾಮಾನ್ಯರಿಗೆ ದಕ್ಕಿದ ಧಾರ್ಮಿಕ ಹಕ್ಕು

ಫುಲೆಯವರಿಗೆ ಶೂದ್ರ ದಲಿತರಿಗಿಂತ ಜಾಸ್ತಿ ಬ್ರಾಹ್ಮಣ ಸಮಾಜವೇ ಹೆಚ್ಚು ಋಣಿಯಾಗಿರಬೇಕು. ಬ್ರಾಹ್ಮಣ ವಿಧವೆಯರ ಕೇಶಮುಂಡನೆ ಮಾಡಬಾರದು Savitribai-Phuleಎಂದು ಫುಲೆ ಸವಿತಾ ಸಮಾಜಕ್ಕೆ ಕಟ್ಟಳೆ ವಿಧಿಸಿದ್ದರು!

ಅದೇ ಹೊತ್ತಿಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಸಂಸ್ಥಾಪಕ ಸದಸ್ಯ, ಅಂದಿನ ಕಾಲದ ಅತ್ಯುನ್ನತ ಸಮಾಜ ಸುಧಾರಕರೆನಿಸಿಕೊಂಡಿದ್ದ ಬ್ರಾಹ್ಮಣ ಸಮಾಜದ ನ್ಯಾಯಮೂರ್ತಿ ಮಹಾದೇವ ಗೋವಿಂದ ರಾನಡೆ ಏನು ಮಾಡುತ್ತಿದ್ದರು ಗೊತ್ತೇ? ರಾನಡೆ ಮಾಡಿದ ಮೊದಲ ಘನಂದಾರಿ ಕೆಲಸವೆಂದರೆ, “ಬಾಲಾಜಿ ಪಾಟೀಲ್” ಮುಕದ್ದಮೆಯಲ್ಲಿ ಬ್ರಾಹ್ಮಣರನ್ನು ಕರೆಸದೇ ನಡೆಸುವ ಮತ್ತು ಬ್ರಾಹ್ಮಣರಿಗೆ ದಕ್ಷಿಣೆ ಕೊಡದ ಮದುವೆಯೇ ಅನೂರ್ಜಿತ ಎಂದು ತೀರ್ಪು ಕೊಟ್ಟಿದ್ದು! ಈ ತೀರ್ಪನ್ನು ಸತ್ಯಶೋಧಕ ಸಮಾಜ ಮುಂಬೈ ಉಚ್ಚ ನ್ಯಾಯಾಲಯಕ್ಕೆ ಕೊಂಡು ಹೋಗಿ ಅನೂರ್ಜಿತ ಗೊಳಿಸಿಲ್ಲ ದಿದ್ದರೆ ಎನೇನು ಅನಾಹುತಗಳಾಗುತ್ತಿದ್ದವೋ! ರಾನಡೆ ಮಾಡಿದ ಎರಡನೇ ಘನಂದಾರಿ ಕೆಲಸವೆಂದರೆ, ಬಹು ದೊಡ್ಡ ಸುಧಾರಕನೆಂದು ತೋರಿಸಿಕೊಳ್ಳಲು ತಾವು ನಲವತ್ತರ ಅಂಚಿನಲ್ಲಿದ್ದಾಗ ತಮ್ಮ ಪತ್ನಿ ತೀರಿಕೊಂಡಾಗ ಕೇವಲ ಹನ್ನೊಂದು ವರ್ಷ ಪ್ರಾಯದ ಬಾಲ ವಿಧವೆಯನ್ನು ಮದುವೆಯಾಗಿದ್ದು! ಹೀಗಿದ್ದೂ ರಾನಡೆಯವರಿಗೆ ಇಂದು ಒಬ್ಬ ಸಮಾಜ ಸುಧಾರಕನ ಪಟ್ಟ ಪಟ್ಟಿದ್ದಾರೆ!

ಸೆಪ್ಟೆಂಬರ್ ೨೪, ೧೮೭೩ ರಲ್ಲಿ ಫುಲೆಯವರು ಸ್ಥಾಪಿಸಿದ “ಸತ್ಯಶೋಧಕ ಸಮಾಜ” ಮಹಾರಾಷ್ಟ್ರದ ಪ್ರತಿ ಹಳ್ಳಿಯಲ್ಲೂ ಸಾಮಾಜಿಕ ಸಂಚಲನವನ್ನು ಹುಟ್ಟು ಹಾಕಿತು. ನಮ್ಮ ಉತ್ತರ ಕರ್ನಾಟಕದಲ್ಲೂ ಜನಪ್ರೀಯವಾಗಿರುವ “ಗೀ ಗೀ ಪದಗಳ” ಮುಖಾಂತರ ಜನ ಜಾಗೃತಿ ಸಾಧಿಸಲಾಯಿತು. ಸತ್ಯಶೋಧಕ ಸಮಾಜದ ನೇತೃತ್ವದಲ್ಲಿ ಲಕ್ಷಾಂತರ ಅಬ್ರಾಹ್ಮಣರು ವೈದಿಕರ ನೆರವಿಲ್ಲದೇ ಮದುವೆ, ಅಂತ್ಯ ಕ್ರಿಯೆ, ಪುಣ್ಯ ತಿಥಿಗಳನ್ನು ಮಾಡತೊಡಗಿದರು. ಪುರೋಹಿತಶಾಹಿಗಳಿಗೆ ಮೈಯೆಲ್ಲಾ ಪರಚಿಕೊಳ್ಳುವಂತಾಯಿತು!

ಪ್ರತಿವರ್ಷವೂ ಊರಿನ ಬ್ರಾಹ್ಮಣರನ್ನು ಕರೆಸಿ ಶಾಸ್ತ್ರೋಕ್ತ ರೀತ್ಯ ದಶಪಿಂಡ ಕ್ರಿಯೆ ಮಾಡಿಸುತ್ತಿದ್ದ ಅಹಮದ್ ನಗರ ಜಿಲ್ಲೆಯ ಭಾವಡಿ ಎಂಬ ಹಳ್ಳಿಯ ಬಲವಂತ ಲಕ್ಷ್ಮಣ ಘಾಟ್ಪಂಡೆ ಎಂಬುವವರ ಶೂದ್ರ ಕುಟುಂಬ ಈ ಬಾರಿ ಬ್ರಾಹ್ಮಣರನ್ನು ಕರೆಯಿಸಲಿಲ್ಲ; ಬದಲಿಗೆ ಭಕ್ತಿಯಿಂದ ಹಿರಿಯರನ್ನು ಮನಸಾ ವಂದಿಸಿ ನದಿ ದಡದಲ್ಲಿ ಮಿಂದೆದ್ದು ಬಂದರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಬಾಳ ಗಣುಜಿ ನವಲೆ ಎಂಬ ಬ್ರಾಹ್ಮಣ, ಮಹಾರಾಷ್ಟ್ರದ ನಿಖಿಲ ಬ್ರಾಹ್ಮಣ ಸಮಾಜದ ಕುಮ್ಮಕ್ಕು ಪಡೆದು ಇವರ ಮೇಲೆ ಒಂದು ಮೊಕದ್ದಮೆಯನ್ನೇ ಜಡಿದು ಬಿಟ್ಟ! ಬ್ರಾಹ್ಮಣರ ವಾದವೇನೆಂದರೆ ಬ್ರಾಹ್ಮಣ್ಯ / ಪೌರೋಹಿತ್ಯವೆಂಬುದು ಸರಕಾರೀ ಪದವಿಗೆ ಸಮಾನ. ಯಾರೇ ಆಗಲಿ ಬ್ರಾಹ್ಮಣರ ಮುಖಾಂತರವೇ ಪೂಜೆ ಮಾಡಿಸಬೇಕು, ಇಲ್ಲದಿದ್ದರೆ ಅದು ಕಾನೂನು ಬಾಹಿರ! ಆದ್ದರಿಂದ, ಜುಲ್ಮಾನೆ ಕಟ್ಟಿ ಕೊಡಬೇಕು! ಬ್ರಾಹ್ಮಣರನ್ನು ಕರೆಯಿಸದೆ ಪೂಜೆ ಪುನಸ್ಕಾರ ಮಾಡಿಸಿದರೆ ಶೂದ್ರರು ದಂಡ ಕಟ್ಟಬೇಕು!!

ತಾಲೂಕು ಮಟ್ಟದ ಕೋರ್ಟ್ ನಲ್ಲಿ ಶುರುವಾದ ಈ ಮುಕದ್ದಮೆ ಸುಮಾರು ಇಪ್ಪತ್ತು ವರ್ಷ ನಡೆದು ಬೊಂಬಾಯಿ ಉಚ್ಚ ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳ ವಿಭಾಗೀಯ ಪೀಠದವರೆಗೂ ಹೋಯಿತು. ಕೊನೆಗೂ ಶೂದ್ರ ಸಮಾಜ ಗೆದ್ದಿತು!

ಘಾಟ್ಪಂಡೆಯ ಮುಕದ್ದಮೆ [(1918) 20 BOMLR 454] ಮಾತ್ರವಲ್ಲ, ಅಂದಿನ ಪ್ರತಿ ಸಾಮಾಜಿಕ ಸಂಘರ್ಷದ ಪರಿಣಾಮವಾಗಿ ಕೋರ್ಟಿನ 1998-savitribai_phule[1]ಮೆಟ್ಟಲೇರುತ್ತಿದ್ದ ಅಥವಾ ನೂಕಲ್ಪಡುತಿದ್ದ ಸಾವಿರಾರು ದಲಿತ-ಶೂದ್ರರಿಗೆ ಬೆನ್ನೆಲುಬಾಗಿ ನಿಂತಿದ್ದ “ಸತ್ಯಶೋಧಕ ಸಮಾಜ”, ಭಾರತದ ಮೊಟ್ಟ ಮೊದಲ ‘ಕಾನೂನು ನೆರವು ಕೇಂದ್ರ’ (Legal Aid Clinic) ವಾಗಿತ್ತು; ಅಷ್ಟೇ ಅಲ್ಲ, ಶತಮಾನ ಗಳ ನಂತರ ಬಂದ ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆಗಳಿಗೆ ಮೂಲ ಪ್ರೇರೇಪಣೆ.

ಸತ್ಯ ಶೋಧಕ ಸಮಾಜದ ನೆರವಿನಿಂದ ನಡೆದ ಮುಕದ್ದಮೆಗಳನ್ನು ನೂರಾರು ವಕೀಲರು ಉಚಿತವಾಗಿ ಇಲ್ಲವೇ ಅತಿ ಕಡಿಮೆ ಖರ್ಚಿಗೆ ನಡೆಸಿ ಕೊಟ್ಟರು; ಸಾಮಾಜಿಕ ಕಾರ್ಯಕರ್ತರು ತಮ್ಮ ತನು ಮನ ಧನ ಅರ್ಪಿಸಿ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಿ ಕೂಡ ಸತ್ಯವನ್ನು ಗೆಲ್ಲಿಸಿದರು. ಧಾರ್ಮಿಕ ಸ್ವಾತಂತ್ರದ, ಅಷ್ಟೇ ಅಲ್ಲ, ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆ ಮತ್ತು ಕಾನೂನು ನೆರವು ಕೇಂದ್ರಗಳ ಪಿತಾಮಹ ಕೂಡ ಫುಲೆಯವರು.

ಭಾರತವನ್ನು ಕಟ್ಟಿದ್ದು ಅದಕ್ಕೆ ಕಣ್ಣು ಕೊಟ್ಟಿದ್ದು ಭಾರತದಲ್ಲಿ ಮಹೋನ್ನತ ಸಾಧನೆಗೈದ ಶೂದ್ರ ಮತ್ತು ದಲಿತರು. ಆದರೆ ಅವರನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ಸಮೀಕರಿಸಿ ನೋಡಲಾಗುತ್ತದೆ. ಅವರು ಒಟ್ಟಾರೆ ಸಮಾಜದ ಒಳಿತಿಗೆ ಶ್ರಮಿಸಿದ ಸಮಸ್ತ ಮಜಲುಗಳನ್ನು ಸಂಶೋಧಿಸುವ ಪ್ರಯತ್ನ ನಡೆಯಬೇಕು.

ಫುಲೆ ನೈಜ ಅರ್ಥದಲ್ಲಿ ಮಹಾತ್ಮ – ತಾಯಿ ಸಾವಿತ್ರಿಬಾಯಿಯವರು ವಿದ್ಯೆ ಕೊಟ್ಟ ಸರಸ್ವತಿ ಎಂದು ಪ್ರತಿ ಭಾರತೀಯ ಅರಿತಾಗಲೇ ಭಾರತ ನೈಜ ಅರ್ಥದಲ್ಲಿ ಸ್ವತಂತ್ರವಾಯಿತು ಎಂದುಕೊಳ್ಳಬಹುದು.