Daily Archives: August 13, 2015

ನ್ಯಾಯಾಂಗದಲ್ಲಿ ದಲಿತ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಪ್ರಶ್ನೆ


– ಶ್ರೀಧರ್ ಪ್ರಭು


 

“ಶುದ್ಧೀಕರಣ”

ಗಂಗೆ ಯಮುನೆ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳು ಸಂಗಮಿಸುವ ಪರಮ ಪವಿತ್ರ ಪ್ರಯಾಗದಲ್ಲಿ ಬಹು ದೊಡ್ಡದೊಂದು ಅನಾಹುತ ನಡೆದುಹೋಗಿತ್ತು. ಮೇ ೧೯೯೮ರ ವರೆಗೆ ಅಲಹಾಬಾದ್ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಭರ್ತ್ರಹರಿ ಪ್ರಸಾದ್ ಒಬ್ಬ ದಲಿತರಾಗಿದ್ದರು ಎಂದು ಗೊತ್ತಾಗಿಬಿಟ್ಟಿತ್ತು!! ಒಬ್ಬ ದಲಿತ ನ್ಯಾಯಸ್ಥಾನದಲ್ಲಿ ಕುಳಿತರೆ ಅದಕ್ಕಿಂತ ಕೆಟ್ಟ ಅನಾಹುತ ಇನ್ನೊಂದಿದೆಯೇ? 11-courtಈ ದಲಿತ ನ್ಯಾಯಾಧೀಶರು ಕುಳಿತು ಇಡೀ ನ್ಯಾಯಂಗಣವನ್ನೇ ‘ಅಪವಿತ್ರ’ಗೊಳಿಸಿ ಹೋಗಿದ್ದರು!! ಪುಣ್ಯವಶಾತ್ ಅವರ ನಂತರದಲ್ಲಿ (ಜೂನ್ ೧೯೯೮ ರಲ್ಲಿ ) ಅಧಿಕಾರವಹಿಸಿ ಕೊಂಡ ಜಸ್ಟಿಸ್ ಶ್ರೀವಾಸ್ತವ ಅಲಹಾಬಾದ ಜಿಲ್ಲಾ ಅಪರ ನ್ಯಾಯಾಧೀಶರಾಗಿ ಅಧಿಕಾರವಹಿಸಿಕೊಂಡ ಮರುಕ್ಷಣದಲ್ಲೇ ಒಂದು ಮಹಾನ್ ಪುಣ್ಯದ ಕೆಲಸ ಮಾಡಿದರು. ಒಂದು ಟ್ಯಾಂಕರ್ ತುಂಬಾ ‘ಶುದ್ಧ’ ಗಂಗಾ ಜಲ ತರಿಸಿ ತಮ್ಮ ಕೊಠಡಿಯನ್ನು ಸಂಪೂರ್ಣವಾಗಿ ‘ಶುದ್ಧಿ’ ಗೊಳಿಸಿದರು. ನ್ಯಾಯದಾನ ಮಾಡಬೇಕಾದರೆ ಪರಿಶುದ್ಧ ಪರಿಸರ ಮುಖ್ಯ ನೋಡಿ!

ಇದರ ಸುಳಿವು ಸಿಕ್ಕ ಒಬ್ಬ ‘ಪಾಖಂಡಿ’ ಪತ್ರಕರ್ತರೊಬ್ಬರು ಈ ಘಟನೆಯನ್ನು ಎಲ್ಲ ಪ್ರಮುಖ ಹಿಂದಿ ಪತ್ರಿಕೆಗಳಿಗೆ ವಿವರ ವರದಿ ಮಾಡಿ ಕಳಿಸಿಕೊಟ್ಟರು. ಆಮೇಲೆ? ಆ ತಕ್ಷಣವೇ ಅಲಹಾಬಾದ್ ಜಿಲ್ಲಾ ಮುಖ್ಯ ಸೆಷನ್ಸ್ ನ್ಯಾಯಮೂರ್ತಿಗಳು ಒಂದು “ಕಾರಣ ಕೇಳಿ ನೋಟೀಸ್” ಜಾರಿ ಮಾಡಿದರು. ಯಾರ ಮೇಲೆ? ಜಸ್ಟಿಸ್ ಶ್ರೀವಾಸ್ತವರ ಮೇಲೆ ಅಂತೀರಾ? ಛೇ! ಅಲ್ಲ. ಭರ್ತ್ರಹರಿ ಪ್ರಸಾದ್ ರ ಮೇಲೆ. ನ್ಯಾಯಾಂಗದ ಒಳಗಿನ ಈ ವಿಚಾರ ಹೊರಗೆ ಹಾಕಿದ್ದಾದರೂ ಯಾರು ಎಂದು.

ನ್ಯಾಯಮೂರ್ತಿ ಭರ್ತ್ರಹರಿ ಪ್ರಸಾದ್ ಉತ್ತರ ರವಾನಿಸಿದರು. ‘ಗಂಗಾ ಜಲದ ವಿಚಾರ ಸತ್ಯ. ಆದರೆ, ಈ ವಿಚಾರ ಪತ್ರಿಕೆಗಳಿಗೆ ಹೇಗೆ ಹೋಯಿತು ಎಂದು ಗೊತ್ತಿಲ್ಲ’ ಎಂದು. ಆ ನಂತರ ನ್ಯಾಯಮೂರ್ತಿ ಶ್ರೀವಾಸ್ತವರ ಹೇಳಿಕೆ ಕೂಡ ಪಡೆಯಲಾಯಿತು. ಈ ಘನವೆತ್ತ ನ್ಯಾಯಮೂರ್ತಿಗಳು ಶುದ್ಧಿಯ ವಿಚಾರ ಅಲ್ಲಗಳೆಯಲಿಲ್ಲ. ಆದರೆ ಅವರಿಗೆ ಅಸ್ತಮಾ ಇದ್ದ ಕಾರಣ ಅವರು ಶುದ್ಧಿ ಮಾಡಿಸಬೇಕೆಂದು ವೈದ್ಯರು ಹೇಳಿದ್ದರಂತೆ. Court-Indianಇನ್ನು ಶುದ್ದಿ ಮಾಡಿದ ಸಿಬ್ಬಂದಿಯ ಹೇಳಿಕೆಗಳು ಪಡೆಯಲಾಯಿತೆ? ಇಲ್ಲ.

ಈ ದಲಿತ ನ್ಯಾಯಾಧೀಶರನ್ನು ಸೀದಾ ಮನೆಗೆ ಕಳಿಸಲಾಯಿತು! ಕೊನೆಗೂ ‘ಧರ್ಮ’ವೇ ಗೆದ್ದದ್ದು. ಹಾಗಾಗಿಯೇ, ನಮ್ಮ ಘೋಷವಾಕ್ಯ – ಸತ್ಯಮೇವ ಜಯತೇ!

ಬೆರಳೆಣಿಕೆಯ ದಲಿತ ಪ್ರಾತಿನಿಧ್ಯ

ಈ ರೀತಿ ನಮ್ಮ ನ್ಯಾಯಾಂಗಣಗಳನ್ನು ‘ಅಪವಿತ್ರ’ಗೊಳಿಸುವ ಪ್ರಮೇಯ ಬರಲೇಬಾರದೆಂದು ನಮ್ಮ ಉನ್ನತ ನ್ಯಾಯಾಂಗದಲ್ಲಿ ದಲಿತರೇ ಕಾಣಸಿಗುವುದಿಲ್ಲ. ವರ್ಷ ೨೦೦೦ ರಲ್ಲಿ ಕರಿಯಾ ಮುಂಡಾ ನೇತೃತ್ವದ ಸಂಸತ್ತಿನ ಎರಡೂ ಸದನಗಳ ಮೂವತ್ತೊಂದು ಸದಸ್ಯರ ಸಮಿತಿಯ “ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ವರದಿ” ಯ ಪ್ರಕಾರ ೧೯೯೮ರಲ್ಲಿದ್ದ ೪೮೧ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಕೇವಲ ೧೫ ಜನ ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು ಕೇವಲ ೫ ಜನ ಪರಿಶಿಷ್ಟ ಪಂಗಡದವರು. ಅಂದು ಇದ್ದ ೧೮ ಉಚ್ಚ ನ್ಯಾಯಾಲಯಗಳ ಪೈಕಿ ಸುಮಾರು ೧೫ ನ್ಯಾಯಾಲಯಗಳಲ್ಲಿ ಒಬ್ಬರೇ ಒಬ್ಬ ದಲಿತ ನ್ಯಾಯಾಧೀಶರಿರಲಿಲ್ಲ. ೨೦೧೧ ರಲ್ಲಿ ಪರಿಶಿಷ್ಟ ಜಾತಿಗಳ ಆಯೋಗ ಪ್ರಕಟಿಸಿದ ವರದಿಯ ಪ್ರಕಾರ ಅಂದಿನ ದಿನಾಂಕಕ್ಕೆ ಇದ್ದ ೮೫೦ ನ್ಯಾಯಾಧೀಶರಲ್ಲಿ ಪರಿಶಿಷ್ಥ ಜಾತಿ ಮತ್ತು ಪಂಗಡ ಗಳವರು ಕೇವಲ ೨೪ ಜನರು. ಎಷ್ಟೊಂದು ಗಂಗಾಜಲ ಉಳಿಯಿತು ನೋಡಿ!

ಉನ್ನತ ನ್ಯಾಯಾಂಗ (Higher Judiciary)

೧೯೫೦ ರಿಂದ ಇಂದಿನವರೆಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ನೇಮಕವಾದ ದಲಿತರ ಸಂಖ್ಯೆ ಕೇವಲ ನಾಲ್ಕು – ಎ. ವರದರಾಜನ್, ಬಿ. ಸಿ. ರಾಯ್, ಕೆ. ರಾಮಸ್ವಾಮಿ ಮತ್ತು ಕೆ. ಜಿ. ಬಾಲಕೃಷ್ಣನ್. ಕಳೆದ ಅರವೈತ್ತೈದು ವರ್ಷಗಳಲ್ಲಿ ಈ ದೇಶದ ದಲಿತರಲ್ಲಿ ನಾಲ್ಕು ಜನ ಮಾತ್ರ ಸುಪ್ರೀಂ ಕೋರ್ಟ್ ಲ್ಲಿ ಕೂರಲು ಲಾಯಕ್ಕದವರೇ? ಹಾಗೆಯೆ, ಒಂದು ಅಂದಾಜಿನ ಪ್ರಕಾರ ಸುಪ್ರೀಂ ಕೋರ್ಟ್ ನ ಸುಮಾರು ೫೬% ರಷ್ಟು ನ್ಯಾಯಾಧೀಶರು ಬ್ರಾಹ್ಮಣರು. Supreme Courtಒಟ್ಟು ಹೈ ಕೋರ್ಟ್ ನ್ಯಾಯಾಧೀಶರಲ್ಲಿ ಕೂಡ ಬ್ರಾಹ್ಮಣರ ಅನುಪಾತ ೫೦% ನಷ್ಟು.

೨೦೦೯ ರ ಸುಮಾರಿಗೆ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಒಂದು ಮನವಿ ಸಲ್ಲಿಸಿ ನ್ಯಾಯಾಂಗದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಲು ಕೋರಿತು. ಆದರೆ ಈವರೆಗೂ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾವುದೇ ಉಚ್ಚ ನ್ಯಾಯಾಲಯವೂ ಯಾವ ಸೂತ್ರ ಯಾ ನಿರ್ದೇಶನಗಳನ್ನೂ ಜಾರಿ ಮಾಡಲಿಲ್ಲ.

ಕೇಶವಾನಂದ ಭಾರತಿ ಪ್ರಕರಣದಿಂದ ಮೊದಲ್ಗೊಂಡು ಅನೇಕ ತೀರ್ಮಾನಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ ನ್ಯಾಯಾಂಗವೆಂದರೆ “ಪ್ರಭುತ್ವ” (State). ಪ್ರಭುತ್ವದ ಇನ್ನೆರಡು ಅಂಗಗಳಲ್ಲಿ ಮೀಸಲಾತಿ ಇರುವುದು ನಿಜವಾದರೆ ನ್ಯಾಯಾಂಗ ಇದಕ್ಕೆ ಹೊರತಾಗಿರಬೇಕೇ? ಇನ್ನು ನ್ಯಾಯಾಲಯಗಳ ಸಿಬ್ಬಂದಿಗಳ ನೇಮಕದಲ್ಲಿ ಮೀಸಲಾತಿ ಇದೆ. ಆದರೆ ನ್ಯಾಯಮೂರ್ತಿಗಳ ನೇಮಕದಲ್ಲಿ ಏಕಿಲ್ಲ?

ರಾಷ್ಟ್ರೀಯ ನ್ಯಾಯಾಂಗ ಸೇವಾ ಆಯೋಗ ರಚಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆಯೋಗ ರಚನೆಯಾದರೆ ಎಲ್ಲಿ ಮೀಸಲಾತಿ ಜಾರಿಮಾಡುವ ಪ್ರಮೇಯ ಬಂದೀತೋ ಎಂದು ಈವರೆಗೆ ಯಾವ ಸರಕಾರವೂ ನ್ಯಾಯಾಂಗ ಸೇವೆಗಳ ಆಯೋಗ ರಚನೆ ಮಾಡುವ ಸಾಹಸ ಮಾಡಿಲ್ಲ. ಕೊಲಿಜಿಯಂ ಪದ್ಧತಿ ರದ್ದಾಗಿ ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ನ ಮುಂದಿದೆ. ಈ ಕೊಲಿಜಿಯಂ ಪದ್ಧತಿಯಡಿ ದಲಿತರಿಗೆ ಸೇರಿದಂತೆ ಅನೇಕ ಜನಪರ ಕಾಳಜಿಯ ನ್ಯಾಯಾಧೀಶರಿಗೆ ಹಿನ್ನಡೆಯಾಗಿದೆಯೆಂದು ಬಹುತೇಕ ಎಲ್ಲ ವಕೀಲರೂ ವಾದಿಸಿದ್ದಾರೆ.

ಇತ್ತೀಚಿಗೆ ತಮ್ಮ ಎಡ ಮತ್ತು ಪ್ರಜಾಸತ್ತಾತ್ಮಕ ನಿಲುಮೆಯಿಂದ ಪಟ್ಟ ಪಾಡನ್ನು ಉಲ್ಲಾಳ ಲಕ್ಷ್ಮೀನಾರಾಯಣ ಭಟ್ಟರು ತಮ್ಮ “ಸ್ಟೋರಿ ಆಫ್ ಎ ಚೀಫ್ ಜಸ್ಟಿಸ್ ” ಪುಸ್ತಕದಲ್ಲಿ ಬಿಡಿಸಿಟ್ಟಿದ್ದಾರೆ. ಈ ಕೊಲಿಜಿಯಂ ವ್ಯವಸ್ಥೆಯಲ್ಲಿ ಒಬ್ಬ (ಜಾತ್ಯತೀತ ನಿಲುಮೆಯ) ಬ್ರಾಹ್ಮಣ ನ್ಯಾಯಾಧೀಶರಿಗೇ ಇಷ್ಟೊಂದು ಅನ್ಯಾಯವಾಗಿರುವುದಾದರೆ ಇನ್ನು ದಲಿತರ ಪಾಡೇನು?

ಸರಕಾರಿ ವಕೀಲರು

ಇನ್ನು ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್, Karnataka High Courtಅಡ್ವೋಕೇಟ್ ಜನರಲ್ ಹೋಗಲಿ ಸಾಮಾನ್ಯ ಸರಕಾರೀ ವಕೀಲರ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಪಾಲಿಸಿಲ್ಲ. ಸರಕಾರದ ಯಾವ ಬ್ಯಾಂಕ್, ನಿಗಮ, ಮಂಡಳಿಗಳು ಕೂಡ ತಮ್ಮ ಪ್ಯಾನೆಲ್ ಗಳಲ್ಲಿ ಮೀಸಲಾತಿ ಹೋಗಲಿ ದಲಿತರ ಬಗ್ಗೆ ಕನಿಷ್ಠ ಪ್ರಾತಿನಿಧ್ಯದ ಬಗ್ಗೆ ಕೂಡ ಗಮನ ಹರಿಸಿಲ್ಲ.

ವಕೀಲರೇ ದಲಿತರ ಮಧ್ಯದ ಅತಿ ದೊಡ್ಡ ಅಸಂಘಟಿತ ವಲಯ

ಇಂಥ ನೇಮಕಾತಿಗಳಲ್ಲಿ ಮೀಸಲಾತಿ ಬಗ್ಗೆ ಯಾವುದೇ ಕಾನೂನು ಅಥವಾ ನಿಯಮಗಳು ಹೋಗಲಿ ಕನಿಷ್ಠ ನಿರ್ದೇಶನ ಸೂತ್ರಗಳು ಕೂಡ ಇಲ್ಲ. ಎಲ್ಲಾ ಸರಕಾರಗಳು ದಲಿತರ ಪರ ಮೊಸಳೆ ಕಣ್ಣೀರು ಹಾಕುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಈವರೆಗೆ ದಲಿತರ ಪರವಾಗಿ ದಲಿತ ವಕೀಲರೇ ಧ್ವನಿ ಎತ್ತಿಲ್ಲ ಎಂದರೆ ಎಂಥ ಬೇಸರದ ವಿಷಯ.

ವಕೀಲರ ಸಾರ್ವತ್ರಿಕ ಪ್ರಾತಿನಿಧ್ಯದ ಸಂಸ್ಥೆ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ನಲ್ಲಿ ಕೂಡ ಯಾವ ಪ್ರಾತಿನಿಧ್ಯವಿಲ್ಲ. ಇಂದು ವಕೀಲರಾಗಿ ನೊಂದಣಿ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆ ಕಡ್ಡಾಯ. ಆದರೆ ಈ ಪರೀಕ್ಷೆ ಗಳಲ್ಲಿ ಕೂಡ ಮೀಸಲಾತಿಯಿಲ್ಲ. ದಲಿತ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗ ಹೋಗಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೂಡ ಕನಿಷ್ಠ ಶುಲ್ಕ ವಿನಾಯತಿ ಕೊಡುವ ಔದಾರ್ಯವನ್ನೂ ವಕೀಲರ ಪರಿಷತ್ತು ತೋರಿಲ್ಲ. ತನ್ನ ವೆಬ್ಸೈಟ್ ನಲ್ಲಿ ನಮೂದಿಸಿರುವ ಪ್ರಶ್ನಾವಳಿ (FAQ) ಗಳಲ್ಲಿ ವಕೀಲರ ಪರಿಷತ್ತು “ನಮ್ಮ ಪರೀಕ್ಷೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ” ಎಂದು ಘೋಷಿಸಿ ಕೊಂಡಿದೆ. ವಿಪರ್ಯಾಸವೆಂದರೆ ವಕೀಲರ ಪರಿಷತ್ತಿನ ವೆಬ್ಸೈಟ್ ನಲ್ಲಿ ದೊಡ್ಡದೊಂದು Young_Ambedkarಅಂಬೇಡ್ಕರ್ ಪಟವಿದೆ!

ದುರಂತವೆಂದರೆ ಇಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ದಲಿತ ವಕೀಲರನ್ನು ಪ್ರತಿನಿಧಿಸುವ ಯಾವುದೇ ಸಂಘ ಸಂಸ್ಥೆಗಳಿಲ್ಲ. ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿಯೂ ದಲಿತ ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಳ್ಳುವ ದಲಿತರು ಇಂದಿನವರೆಗೂ ವಕೀಲರ ಮಧ್ಯೆ ಸಂಘಟನೆ ಕಟ್ಟಿಲ್ಲ. ಸಂಘಟಿತರಾಗದವರೆಗೂ ದಲಿತರಿಗೆ ಮುಕ್ತಿಯಿಲ್ಲ ಎಂಬುದಕ್ಕೆ ಈ ಕ್ರೂರ ವಾಸ್ತವಗಳಿಗಿಂತಲೂ ಹೆಚ್ಚಿನ ಸಾಕ್ಷಿಗಳು ದಲಿತರಿಗೆ, ಅದರಲ್ಲೂ ಮುಖ್ಯವಾಗಿ ವಕೀಲರಿಗೆ ಬೇಕಿಲ್ಲ ಎಂದು ಕೊಳ್ಳೋಣ.

೨೦೧೧ ರಲ್ಲಿ ಸಂವಿಧಾನ ತಿದ್ದುಪಡಿ ತಂದು ಸಹಕಾರ ಸಂಘಗಳ ಕಾನೂನಿಗೆ ಸಮಗ್ರ ಸರ್ಜರಿ ಮಾಡಲಾಯಿತು. ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಮೂಲಭೂತ ಕರ್ತವ್ಯವೆಂದು ಸಾರಲಾಯಿತು. ಜೊತೆಗೆ, ಸಹಕಾರ ಸಂಘಗಳಲ್ಲಿ ಸಾಮಾಜಿಕ ಮತ್ತು ಮಹಿಳಾ ಮೀಸಲಾತಿ ಜಾರಿಗೊಳಿಸಲಾಯಿತು. ಆದರೆ ವಕೀಲರ ಸಂಘಗಳಲ್ಲಿ ಈ ಮೀಸಲಾತಿ ಜಾರಿಯಾಗಿಲ್ಲ. ವಕೀಲರ ಸಂಘಗಳಿಗೆ ಸರಕಾರಗಳು ಸಾಕಷ್ಟು ಸಹಾಯ ಧನ ನೀಡಿವೆ. ಏಷ್ಯಾದಲ್ಲಿಯೇ ಅತೀ ದೊಡ್ಡದು ಎನ್ನಿಸಿಕೊಳ್ಳುವ ಬೆಂಗಳೂರು ವಕೀಲರ ಸಂಘದ ಬೈ ಲಾ ಗಳನ್ನು ಅನುಮೋದಿಸಿದ್ದು ಸ್ವತಃ ಸಹಕಾರ ಸಂಘಗಳ ಪ್ರಬಂಧಕರು. ಆದರೆ ಇಲ್ಲಿ ಮಹಿಳಾ, OBC ಮತ್ತು ದಲಿತ ಮೀಸಲಾತಿಯ ಪ್ರಶ್ನೆಯೇ ಇಲ್ಲ. ಈವರೆಗೆ ಯಾವ ದಲಿತರೂ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾಗಿಲ್ಲ. ಈವರೆಗೆ ಯಾವ ದಲಿತರೂ ಹಿಂದುಳಿದವರು ಮತ್ತು ಮಹಿಳೆಯರು ಈ ಬಗ್ಗೆ ಪ್ರಶ್ನೆ ಮಾಡಿಲ್ಲ.

ದಲಿತ, ಮಹಿಳಾ ಮತ್ತು ಹಿಂದುಳಿದ ವರ್ಗಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಪ್ರನಿಧಿಸುತ್ತಿಲ್ಲ ಎಂಬುದು ಕೇವಲ ಈ ವರ್ಗ ವಿಭಾಗಗಳ ಪ್ರಶ್ನೆಯಲ್ಲ. ಇದು ನಮ್ಮ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಾಡಬೇಕಿರುವ ಪ್ರಶ್ನೆ. ‘ದಲಿತರು ಎಲ್ಲರಿಗೂ ಸಮನಾಗಿ ಬದುಕುತ್ತಿದ್ದಾರೆ’, ‘ಜಾತಿ ವ್ಯವಸ್ಥೆ ಸತ್ತು ಹೋಗಿದೆ’ ಅಥವಾ ‘ಬರೀ ವರ್ಗವೊಂದೇ ಸತ್ಯ ಜಾತಿ ಮಿಥ್ಯ’ ಎಂದು ವಾದಿಸುವ ಸಿದ್ಧಾಂತಿಗಳು ನ್ಯಾಯಾಂಗದಲ್ಲಿ ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೋಚಿಸುವರೆ?

ಇದೆಲ್ಲ ಹಾಗಿರಲಿ, ರಾಜ್ಯ ಸರಕಾರದ ಕಛೇರಿಗಳಲ್ಲಿ ಅಂಬೇಡ್ಕರ್ ಪಟವನ್ನು ಹಾಕಲು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಯಾವ ಕೊಠಡಿಯಲ್ಲೂ ಅಂಬೇಡ್ಕರ್ ಪಟವಿಲ್ಲ. ಹಾಗೆಯೇ ಅನೇಕ ಅಧೀನ ನ್ಯಾಯಾಲಯಗಳಲ್ಲೂ ಇದೇ ಸ್ಥಿತಿಯಿದೆ. ಒಂದು ಪಟವಾಗಿ ಕೂಡ ನಮ್ಮನ್ನು ತಲುಪದ ಅಂಬೇಡ್ಕರ್ ನ್ಯಾಯಾಂಗದ ಭಾವಕೊಶವನ್ನು ತುಂಬಲು ಸಾಧ್ಯವೇ?

ಅಂಬೇಡ್ಕರ್ ಸಂವಿಧಾನ ರಚಿಸಿದರು; ಆ ಸಂವಿಧಾನವೇ ನಮ್ಮನ್ನು ಕಾಪಾಡುತ್ತದೆ ಎಂದುಕೊಂಡಿದ್ದರೆ ನಮ್ಮಷ್ಟು ಮೂರ್ಖರೇ ಇನ್ನೊಬ್ಬರಿಲ್ಲ. ನಾವು ಸಂವಿಧಾನವನ್ನು ಕಾಪಾಡಿದರೆ ತಾನೇ ಅದು ನಮ್ಮನ್ನು ಕಾಪಾಡುವುದು?