Daily Archives: August 17, 2015

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015 : ಕತೆ ಕಳುಹಿಸಲು ಕೇವಲ ಎರಡು ವಾರ ಬಾಕಿ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2015(ಹಿಂದಿನ ವರ್ಷವೊಂದರ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧೆ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:

ಆಗಸ್ಟ್ 31, 2015.

ಸೆಪ್ಟೆಂಬರ್ katha spardhe inside logo 2015 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:

editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ಸ್ವಾತಂತ್ರ್ಯೋತ್ಸವಕ್ಕೆಂದು ಬಂದು ದಾಸ್ಯ ಮೆರೆದವರು

– ಸದಾನಂದ ಲಕ್ಷ್ಮೀಪುರ

“ಇಂದು ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಿರುವ ಪರಿಹಾರ ಒಂದೇ. ನಮ್ಮ ಎಲ್ಲಾ ಹಿಂದು ಯುವಕರು ಮನಸ್ಸು ಮಾಡಬೇಕು. ಕನಿಷ್ಟ ಮೂರು ಮಕ್ಕಳನ್ನು ಪಡೆಯಬೇಕು. ಎಲ್ಲಿ ಕೈ ಎತ್ತಿ..ನಿಮ್ಮಲ್ಲಿ ಎಷ್ಟು ಜನ ನನ್ನ ಮಾತಿನಂತೆ ನಡೆದುಕೊಳ್ಳುತ್ತೀರಿ..” ಎಂದು ಕಲ್ಲಡ್ಕ ಪ್ರಭಾಕರ ಭಟ್ ಕೇಳುತ್ತಿದ್ದರೆ, ಧರ್ಮದ ಅಮಲಿನದ್ದ ಅನೇಕರು ಹಾಗೂ ಧರ್ಮದ ಜೊತೆಗೆ ಮದ್ಯದ ಮತ್ತಿನೊಂದಿಗೆ ಅಲ್ಲಿ ಹಾಜರಿದ್ದ ಕೆಲವರು ಕೈ ಎತ್ತಿ, ಓ… ಎಂದು ಕೂಗಿ ಸಮ್ಮತಿ ಸೂಚಿಸಿದರು.

ಆ ಕಾರ್ಯಕ್ರಮ ನಡೆದದ್ದು ಸ್ವಾತಂತ್ರೋತ್ಸವ ಹಿಂದಿನ ದಿನ ಮಧ್ಯರಾತ್ರಿ. ಆ ಕಾರ್ಯಕ್ರಮದಲ್ಲಿ ಹಾಜರಿದ್ದವರೆಲ್ಲರೂ ಯುವಕರೇ. RSSಕೋಮುವಾದಿ ವ್ಯಕ್ತಿಯೊಬ್ಬನ ಮಾತಿಗೆ ಮಾರುಹೋಗಿ ಕೈ ಎತ್ತುವ ಮುನ್ನ, ಇಂತಹದೊಂದು ಸಂಗತಿಗೆ ತನ್ನ ಸಂಗಾತಿಯ ಸಮ್ಮತಿಯೂ ಅಗತ್ಯ ಎಂಬ ಕನಿಷ್ಟ ಪ್ರಜ್ಞೆ ಇದ್ದಿದ್ದರೆ, ಅಲ್ಲಿ ಕೈ ಎತ್ತಿ ಠೇಂಕರಿಸುತ್ತಿರಲಿಲ್ಲ. Of course, ಆ ಭಾಷಣಕಾರ ಪ್ರತಿನಿಧಿಸುವ ಸಂಸ್ಥೆಗಾಗಲಿ, ಈ ಹುಡುಗರ ತಲೆತುಂಬಿಕೊಂಡಿರುವ ಆಲೋಚನೆಗಳಲ್ಲಾಗಲಿ ಮಹಿಳೆಗೆ ಸ್ವತಂತ್ರ ಆಲೋಚನೆಗಳಿರುತ್ತವೆ, ಕೇಳಿಸಿಕೊಳ್ಳಬೇಕು, ಗೌರವಿಸಬೇಕು ಎಂಬ ತಿಳವಳಿಕೆ ಇದ್ದರೆ ತಾನೆ?

ಬರೋಬ್ಬರಿ ಒಂದು ಗಂಟೆ ಮೇಲೆ ಎಂಟು ನಿಮಿಷ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ತನ್ನ ಭಾಷಣದುದ್ದಕ್ಕೂ ಕೆಂಡಕಾರಿದ್ದು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಹಾಗೂ ಮುಸಲ್ಮಾನರ ವಿರುದ್ಧ. ಕಾರ್ಯಕ್ರಮದ ಹೆಸರ ಅಖಂಡ ಭಾರತ ಸಂಕಲ್ಪ ದಿನ. ಆದರೆ ಮಾತನಾಡಿದ್ದು ಮಾತ್ರ ಜನರನ್ನು ಧರ್ಮ, ಮತದ ಆಧಾರದ ಮೇಲೆ ಒಡೆಯುವ ಬಗ್ಗೆ. ಅದನ್ನು ವಿಪರ್ಯಾಸ ಅನ್ನಬೇಕೋ, ಮಾತನಾಡುವವರನ್ನು ಹುಚ್ಚರೆನ್ನಬೇಕೋ..ಗೊತ್ತಾಗುತ್ತಿಲ್ಲ. “ಜಗತ್ತಿನಲ್ಲಿ ಧರ್ಮ ಅಂತ ಇರೋದು ಹಿಂದು ಮಾತ್ರ. ಉಳಿದವೆಲ್ಲಾ ಮತಗಳು. ಜಗತ್ತಿನ ಎಲ್ಲರನ್ನೂ ಒಪ್ಪಿಕೊಳ್ಳುವ ಧರ್ಮ ಹಿಂದೂ ಮಾತ್ರ” ಎಂದು ಮಾತನಾಡುತ್ತಲೇ, ಮುಸ್ಲಿಂರ ವಿರುದ್ಧ, ಕ್ರಿಶ್ಚಿಯನ್ನರ ವಿರುದ್ಧ ಕಿಡಿಕಾರುತ್ತಾರೆ. ಇಡೀ ಭೂಮಿಯೇ ಒಂದು ಕುಟುಂಬ ಎಂದು ಹೇಳುವುದಾದರೆ, ಎದುರುಮನೆ ಹುಡುಗ, ಪಕ್ಕದ ಮನೆಯ ಹುಡುಗಿ ಜೊತೆ ಬಸ್ ನಲ್ಲಿ ಪ್ರಯಾಣಿಸಿದರೆ, ಹಿಡಿದು ನಿಲ್ಲಿಸಿ ಹೊಡೆಯುತ್ತಾರೆ. population-explosionಇಂತಹ ಮಹಾನ್ ನಾಯಕರು ಅಂತಹ ನಡವಳಿಕೆಗಳನ್ನು ಸಭೆಯಲ್ಲಿ ನಿಂತು ಸಮರ್ಥಿಸಿಕೊಳ್ಳುತ್ತಾರೆ. ಆದರೂ ಮಾತನಾಡುವಾಗ ವಸುದೈವ ಕುಟುಂಬಕಂ! ಕೇಕೆ ಹಾಕುವರಿಗೆ ಇಂತಹ ಸಣ್ಣಪುಟ್ಟ ವೈರುಧ್ಯಗಳು ಅರ್ಥವಾಗುವುದಿಲ್ಲವೆ?

ಈ ಭಟ್ ಮಹಾಶಯ ಹೇಳಿದ ಇನ್ನೊಂದು ಮಾತು – ಲವ್ ಜಿಹಾದ್ ಹೆಸರಿನಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಒಲಿಸಿಕೊಂಡು ಮದುವೆಯಾಗಿ ಡಜನ್ ಗಟ್ಟಲೆ ಮಕ್ಕಳು ಮಾಡುವುದೇ ಅವರ ಉದ್ದೇಶ. ಈ ಮಾತನ್ನು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಆದರೂ ಹೇಳುವುದನ್ನು ಬಿಡೋಲ್ಲ. ಅಷ್ಟೇ ಅಲ್ಲ, ಒಂದು ಮಾತು ಮುಂದೆ ಹೋಗಿ, ‘ನೀವು ಹಾಗೆ ಮಾಡುವುದು ಯಾವಾಗ..?’ ಎಂದು ಹಿಂದೂ ಯುವಕರಿಗೆ ಪ್ರಚೋದನೆ ನೀಡುತ್ತಾರೆ.

ಮಹಾತ್ಮ ಗಾಂಧಿ ದೇಶ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕೆಂದು ಬಯಸಿದ್ದರಂತೆ. ಅದು ಆಗಲಿಲ್ಲ. ರಾಮರಾಜ್ಯದ ಬದಲು, ಸಂವಿಧಾನ ಬದ್ಧ ಪ್ರಜಾರಾಜ್ಯ ಬಂದದ್ದು ಇಡೀ ದೇಶದ ಅಭಿವೃದ್ಧಿಗೆ ತೊಡಕಂತೆ. ಇಂತಹ ಜನವಿರೋಧಿ ಮಾತುಗಳಿಗೂ ಚಪ್ಪಾಳೆ ಹಾಕುವವರಿದ್ದಾರಲ್ಲ ಎಂಬುದೇ ಆಘಾತಕಾರಿ. ಯಾವುದೇ ರಾಜ ಆಗಲಿ, ಅಲ್ಲಿ ಅಧಿಕಾರ ತಂದೆಯಿಂದ ಮಕ್ಕಳಿಗೆ ರವಾನೆಯಾಗುತ್ತದೆ. india-flagರಾಮ ಆದರೂ ಅಷ್ಟೆ, ಕೃಷ್ಣ ಆದರೂ ಅಷ್ಟೆ. ಬಡವನಿಗೆ, ನಿರ್ಗತಿಕನಿಗೆ ತನ್ನ ಆಳುವವರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲು ಸಾಧ್ಯವೇ? ಹೀಗೆ ಸ್ವಾತಂತ್ರ್ಯದ ಮೂಲ ತತ್ತ್ವಕ್ಕೆ ವಿರುದ್ಧವಾಗಿ ಮಾತನಾಡುವವರಿಗೆ ಚಪ್ಪಾಳೆ ಹಾಕುವುದೆಂದರೆ, ನಮ್ಮ ಅಸ್ಥಿತ್ವವನ್ನು ಕಡೆಗಣಿಸಿದಂತೆ.

ಸ್ವತಂತ್ರ ಆಲೋಚನೆಯಿಂದ ತಪ್ಪು-ಸರಿಗಳ ವ್ಯತ್ಯಾಸ ಅರಿಯಲು ಶಿಕ್ಷಣ ಅಗತ್ಯ. ಆದರೆ ಸೋಕಾಲ್ಡ್ ‘ಶಿಕ್ಷಿತ’ ರೇ ಚಪ್ಪಾಳೆ ಹೊಡೆವರಲ್ಲಿ, ಮೂರು ಮಕ್ಕಳನ್ನು ಮಾಡಿಕೊಳ್ಳಲು ಸಮ್ಮತಿ ಸೂಚಿಸಿದವರಲ್ಲಿ ಅನೇಕರಿದ್ದರು.