ಸ್ವಾತಂತ್ರ್ಯೋತ್ಸವಕ್ಕೆಂದು ಬಂದು ದಾಸ್ಯ ಮೆರೆದವರು

– ಸದಾನಂದ ಲಕ್ಷ್ಮೀಪುರ

“ಇಂದು ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಿರುವ ಪರಿಹಾರ ಒಂದೇ. ನಮ್ಮ ಎಲ್ಲಾ ಹಿಂದು ಯುವಕರು ಮನಸ್ಸು ಮಾಡಬೇಕು. ಕನಿಷ್ಟ ಮೂರು ಮಕ್ಕಳನ್ನು ಪಡೆಯಬೇಕು. ಎಲ್ಲಿ ಕೈ ಎತ್ತಿ..ನಿಮ್ಮಲ್ಲಿ ಎಷ್ಟು ಜನ ನನ್ನ ಮಾತಿನಂತೆ ನಡೆದುಕೊಳ್ಳುತ್ತೀರಿ..” ಎಂದು ಕಲ್ಲಡ್ಕ ಪ್ರಭಾಕರ ಭಟ್ ಕೇಳುತ್ತಿದ್ದರೆ, ಧರ್ಮದ ಅಮಲಿನದ್ದ ಅನೇಕರು ಹಾಗೂ ಧರ್ಮದ ಜೊತೆಗೆ ಮದ್ಯದ ಮತ್ತಿನೊಂದಿಗೆ ಅಲ್ಲಿ ಹಾಜರಿದ್ದ ಕೆಲವರು ಕೈ ಎತ್ತಿ, ಓ… ಎಂದು ಕೂಗಿ ಸಮ್ಮತಿ ಸೂಚಿಸಿದರು.

ಆ ಕಾರ್ಯಕ್ರಮ ನಡೆದದ್ದು ಸ್ವಾತಂತ್ರೋತ್ಸವ ಹಿಂದಿನ ದಿನ ಮಧ್ಯರಾತ್ರಿ. ಆ ಕಾರ್ಯಕ್ರಮದಲ್ಲಿ ಹಾಜರಿದ್ದವರೆಲ್ಲರೂ ಯುವಕರೇ. RSSಕೋಮುವಾದಿ ವ್ಯಕ್ತಿಯೊಬ್ಬನ ಮಾತಿಗೆ ಮಾರುಹೋಗಿ ಕೈ ಎತ್ತುವ ಮುನ್ನ, ಇಂತಹದೊಂದು ಸಂಗತಿಗೆ ತನ್ನ ಸಂಗಾತಿಯ ಸಮ್ಮತಿಯೂ ಅಗತ್ಯ ಎಂಬ ಕನಿಷ್ಟ ಪ್ರಜ್ಞೆ ಇದ್ದಿದ್ದರೆ, ಅಲ್ಲಿ ಕೈ ಎತ್ತಿ ಠೇಂಕರಿಸುತ್ತಿರಲಿಲ್ಲ. Of course, ಆ ಭಾಷಣಕಾರ ಪ್ರತಿನಿಧಿಸುವ ಸಂಸ್ಥೆಗಾಗಲಿ, ಈ ಹುಡುಗರ ತಲೆತುಂಬಿಕೊಂಡಿರುವ ಆಲೋಚನೆಗಳಲ್ಲಾಗಲಿ ಮಹಿಳೆಗೆ ಸ್ವತಂತ್ರ ಆಲೋಚನೆಗಳಿರುತ್ತವೆ, ಕೇಳಿಸಿಕೊಳ್ಳಬೇಕು, ಗೌರವಿಸಬೇಕು ಎಂಬ ತಿಳವಳಿಕೆ ಇದ್ದರೆ ತಾನೆ?

ಬರೋಬ್ಬರಿ ಒಂದು ಗಂಟೆ ಮೇಲೆ ಎಂಟು ನಿಮಿಷ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ತನ್ನ ಭಾಷಣದುದ್ದಕ್ಕೂ ಕೆಂಡಕಾರಿದ್ದು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಹಾಗೂ ಮುಸಲ್ಮಾನರ ವಿರುದ್ಧ. ಕಾರ್ಯಕ್ರಮದ ಹೆಸರ ಅಖಂಡ ಭಾರತ ಸಂಕಲ್ಪ ದಿನ. ಆದರೆ ಮಾತನಾಡಿದ್ದು ಮಾತ್ರ ಜನರನ್ನು ಧರ್ಮ, ಮತದ ಆಧಾರದ ಮೇಲೆ ಒಡೆಯುವ ಬಗ್ಗೆ. ಅದನ್ನು ವಿಪರ್ಯಾಸ ಅನ್ನಬೇಕೋ, ಮಾತನಾಡುವವರನ್ನು ಹುಚ್ಚರೆನ್ನಬೇಕೋ..ಗೊತ್ತಾಗುತ್ತಿಲ್ಲ. “ಜಗತ್ತಿನಲ್ಲಿ ಧರ್ಮ ಅಂತ ಇರೋದು ಹಿಂದು ಮಾತ್ರ. ಉಳಿದವೆಲ್ಲಾ ಮತಗಳು. ಜಗತ್ತಿನ ಎಲ್ಲರನ್ನೂ ಒಪ್ಪಿಕೊಳ್ಳುವ ಧರ್ಮ ಹಿಂದೂ ಮಾತ್ರ” ಎಂದು ಮಾತನಾಡುತ್ತಲೇ, ಮುಸ್ಲಿಂರ ವಿರುದ್ಧ, ಕ್ರಿಶ್ಚಿಯನ್ನರ ವಿರುದ್ಧ ಕಿಡಿಕಾರುತ್ತಾರೆ. ಇಡೀ ಭೂಮಿಯೇ ಒಂದು ಕುಟುಂಬ ಎಂದು ಹೇಳುವುದಾದರೆ, ಎದುರುಮನೆ ಹುಡುಗ, ಪಕ್ಕದ ಮನೆಯ ಹುಡುಗಿ ಜೊತೆ ಬಸ್ ನಲ್ಲಿ ಪ್ರಯಾಣಿಸಿದರೆ, ಹಿಡಿದು ನಿಲ್ಲಿಸಿ ಹೊಡೆಯುತ್ತಾರೆ. population-explosionಇಂತಹ ಮಹಾನ್ ನಾಯಕರು ಅಂತಹ ನಡವಳಿಕೆಗಳನ್ನು ಸಭೆಯಲ್ಲಿ ನಿಂತು ಸಮರ್ಥಿಸಿಕೊಳ್ಳುತ್ತಾರೆ. ಆದರೂ ಮಾತನಾಡುವಾಗ ವಸುದೈವ ಕುಟುಂಬಕಂ! ಕೇಕೆ ಹಾಕುವರಿಗೆ ಇಂತಹ ಸಣ್ಣಪುಟ್ಟ ವೈರುಧ್ಯಗಳು ಅರ್ಥವಾಗುವುದಿಲ್ಲವೆ?

ಈ ಭಟ್ ಮಹಾಶಯ ಹೇಳಿದ ಇನ್ನೊಂದು ಮಾತು – ಲವ್ ಜಿಹಾದ್ ಹೆಸರಿನಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಒಲಿಸಿಕೊಂಡು ಮದುವೆಯಾಗಿ ಡಜನ್ ಗಟ್ಟಲೆ ಮಕ್ಕಳು ಮಾಡುವುದೇ ಅವರ ಉದ್ದೇಶ. ಈ ಮಾತನ್ನು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಆದರೂ ಹೇಳುವುದನ್ನು ಬಿಡೋಲ್ಲ. ಅಷ್ಟೇ ಅಲ್ಲ, ಒಂದು ಮಾತು ಮುಂದೆ ಹೋಗಿ, ‘ನೀವು ಹಾಗೆ ಮಾಡುವುದು ಯಾವಾಗ..?’ ಎಂದು ಹಿಂದೂ ಯುವಕರಿಗೆ ಪ್ರಚೋದನೆ ನೀಡುತ್ತಾರೆ.

ಮಹಾತ್ಮ ಗಾಂಧಿ ದೇಶ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕೆಂದು ಬಯಸಿದ್ದರಂತೆ. ಅದು ಆಗಲಿಲ್ಲ. ರಾಮರಾಜ್ಯದ ಬದಲು, ಸಂವಿಧಾನ ಬದ್ಧ ಪ್ರಜಾರಾಜ್ಯ ಬಂದದ್ದು ಇಡೀ ದೇಶದ ಅಭಿವೃದ್ಧಿಗೆ ತೊಡಕಂತೆ. ಇಂತಹ ಜನವಿರೋಧಿ ಮಾತುಗಳಿಗೂ ಚಪ್ಪಾಳೆ ಹಾಕುವವರಿದ್ದಾರಲ್ಲ ಎಂಬುದೇ ಆಘಾತಕಾರಿ. ಯಾವುದೇ ರಾಜ ಆಗಲಿ, ಅಲ್ಲಿ ಅಧಿಕಾರ ತಂದೆಯಿಂದ ಮಕ್ಕಳಿಗೆ ರವಾನೆಯಾಗುತ್ತದೆ. india-flagರಾಮ ಆದರೂ ಅಷ್ಟೆ, ಕೃಷ್ಣ ಆದರೂ ಅಷ್ಟೆ. ಬಡವನಿಗೆ, ನಿರ್ಗತಿಕನಿಗೆ ತನ್ನ ಆಳುವವರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲು ಸಾಧ್ಯವೇ? ಹೀಗೆ ಸ್ವಾತಂತ್ರ್ಯದ ಮೂಲ ತತ್ತ್ವಕ್ಕೆ ವಿರುದ್ಧವಾಗಿ ಮಾತನಾಡುವವರಿಗೆ ಚಪ್ಪಾಳೆ ಹಾಕುವುದೆಂದರೆ, ನಮ್ಮ ಅಸ್ಥಿತ್ವವನ್ನು ಕಡೆಗಣಿಸಿದಂತೆ.

ಸ್ವತಂತ್ರ ಆಲೋಚನೆಯಿಂದ ತಪ್ಪು-ಸರಿಗಳ ವ್ಯತ್ಯಾಸ ಅರಿಯಲು ಶಿಕ್ಷಣ ಅಗತ್ಯ. ಆದರೆ ಸೋಕಾಲ್ಡ್ ‘ಶಿಕ್ಷಿತ’ ರೇ ಚಪ್ಪಾಳೆ ಹೊಡೆವರಲ್ಲಿ, ಮೂರು ಮಕ್ಕಳನ್ನು ಮಾಡಿಕೊಳ್ಳಲು ಸಮ್ಮತಿ ಸೂಚಿಸಿದವರಲ್ಲಿ ಅನೇಕರಿದ್ದರು.

5 thoughts on “ಸ್ವಾತಂತ್ರ್ಯೋತ್ಸವಕ್ಕೆಂದು ಬಂದು ದಾಸ್ಯ ಮೆರೆದವರು

 1. Anonymous

  ಸಂವಿಧಾನ ಹೇಳುವ ಪ್ರಜಾಪ್ರಭುತ್ವ, ಸಮಾಜವಾದಿ ಮತ್ತು ಜಾತ್ಯಾತೀತ ರಾಷ್ಟ್ರ ನಿರ್ಮಾಣ ಆಗಬೇಕು ಎಂದು ಗಾಂಧೀಜಿ ಬಯಸಿರಲಿಲ್ಲ. ಎಡಗೈಯಲ್ಲಿ ಭಗವದ್ಘೀತೆ ಹಿಡಿದು ರಾಮರಾಜ್ಯಕ್ಕಾಗಿ ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಅದೇ ಸಂವಿಧಾನ ಆಗಬೇಕು ಎಂದು ಬಯಸ್ಸಿದ್ದರು ಎಂದು ಬೊಗಳಿದ ಆ ಕಲ್ಲಡ್ಕ ಭಟ್ಟ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವರ್ಣಶ್ರಮ ವ್ಯವಸ್ಥೆ ಮೂಲಕ ಇಂದಿಗೂ ಅಸ್ಪೃಶ್ಯತೆಗೆ ಕಾರಣವಾಗಿರುವ ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಿ ಎಂದು ಕರೆಕೊಟ್ಟು ಅಮಲಿನಲ್ಲಿದ್ದವರಿಂದ ಶಿಳ್ಳೆ ಗಿಟ್ಟಿಸಿಕೊಂಡ. ಇವನನ್ನು ಮನುಷ್ಯ ಎಂದು ಕರೆಯಬೇಕೆ….?

  Reply
 2. mallikarjun

  ಹಾಸನದ ಮಹಾವೀರ ವೃತ್ತದಲ್ಲಿ ಈ ಸಮಾರಂಭ ನಡೆಯಿತು. ಪ್ರತಿ ವರುಷ ಅಲ್ಲೇ ನಡೆಯಿತು. ಆದರೆ ಇದೇ ಪ್ರಥಮ ಬಾರಿ ಹೇಮಾವತಿ ಪ್ರತಿಮೆ ಬಳಿ ಸಿಪಿಐ(ಎಂ)ನಿಂದಲೂ ಸಮಾರಂಭ ನಡೆಯಿತು. ಅಲ್ಲಿ ಏನೇನು ನಡೆಯಿತು ಬರೆಯಲಿಲ್ಲ ಏಕೆ? ಗುರುಗಳೇ! ಅಲ್ಲಿಗೆ ನೀವು ಹೋಗಲಿಲ್ಲವೇ?

  Reply
  1. G.W.Carlo

   ಬಹುಶಃ ಅವರು ಹೋಗಿರಲಿಲ್ಲ. ನೀವು ಹೋಗಿದ್ದೀರಿ, ನೀವೇ ಬರೆಯಬಹುದಲ್ವ?

   Reply
 3. ರಣಧೀರ

  ಮಲ್ಲಿಕಾರ್ಜುನ್ ಅವರೇ, ಈ ಲೇಖನದ ಬಗ್ಗೆ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ಟ ಮಾಡಿದ ಪ್ರಚೋದನಕಾರಿ ಭಾಷಣದ ಬಗ್ಗೆ ನಿಮ್ಮ ಅಭಿಪ್ರಾಯ ಏನಾದರೂ ಇದ್ದರೆ ಹೇಳಿ. ಅವರು ಸಿಪಿಐ(ಎಂ) ಸಮಾರಂಭಕ್ಕೆ ಹೋಗಿದ್ದರೂ ಬಿಟ್ಟಿದ್ದರೋ ಗೊತ್ತಿಲ್ಲ. ಹೋಗಿದ್ದರೆ ನೀವೇ ಬರೆಯಿರಿ.

  Reply
 4. ಶ್ರೀರಾಮ

  ಪ್ರಜಾಪ್ರಭೂತ್ವ ವ್ಯವಸ್ಥೆಯನ್ನು ಹಿಂದೂಪರರು ಒಪ್ಪಿಕೊಳ್ಳಲು ಇಂದಿಗೂ ಸಿದ್ದರಿಲ್ಲ. ಭಗವದ್ಘೀತೆ ಸಂವಿಧಾನವಾಗಬೇಕು, ಭಗವಧ್ವಜ ರಾಷ್ಟ್ರಧ್ವಜ ಆಗಬೇಕು ಎಂಬ ಆಸೆ ಇದೆ. ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿರುವ ಸಮಾನತೆ ಅವರಿಗೆ ಇಷ್ಟ ಇಲ್ಲ. ಅದಕ್ಕೆ ಅವಕಾಶ ಸಿಕ್ಕಾಗ ಹೀಗೆಲ್ಲಾ ಮಾತನಾಡಿ ಹಿಂದೂ ಭಾವನೆ ಬಲಗೊಳಿಸುವ ಪ್ರಯತ್ನ ಮಾಡುತ್ತಾರೆ. ಈ ಬೆಳವಣಿಗೆ ಅಪಾಯಕಾರಿ.

  Reply

Leave a Reply

Your email address will not be published.