ದಲಿತರು ಮದುವೆ ಮಾಡಿದರೆ, ಹೋಟೆಲಲ್ಲಿ ಊಟ ಹಾಕಬೇಕು!

 – ಜೀವಿ

ಅನ್ನದ ಮಡಿಕೆ ಹುಡುಕಾಡಿ ಮಡಿಕೆ ಎಂಬ ಅಡ್ಡ ಹೆಸರನ್ನೇ ಗಟ್ಟಿ ಮಾಡಿಕೊಂಡಿದ್ದ ಗೆಳೆಯ ಮಹೇಶನಿಗೆ ಹಸಿದವರಿಗೆ ಅನ್ನ ಕೊಡಿಸುವುದೆಂದರೆ ಇಷ್ಟದ ಕೆಲಸ. ಕಬ್ಬು ಕಡಿಯುವ ಕೆಲಸದ ಮೇಸ್ತ್ರಿಯಾಗಿದ್ದ ಆತನಿಗೆ ಜಾತಿ ರಹಿತವಾಗಿ ಸ್ನೇಹಿತರಿದ್ದರು. ಆತನ ಜೇಬು ಯಾವಾಗಲೂ ಗಟ್ಟಿಯಾಗಿರುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ಬಂದ ಆದಾಯದಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಸ್ನೇಹಿತರಿಗೆ ಕಳೆಯುತ್ತಿದ್ದ. ಒಂದು ವರ್ಷದ ಹಿಂದೆ ಅತ ಆಕಸ್ಮಿಕವಾಗಿ ಸಾವಪ್ಪಿದ.

33 ವರ್ಷ ವಯಸ್ಸಿನಲ್ಲೇ ಬಂದ ಸಾವು ಆತನನ್ನು ನಂಬಿದ್ದವರ ಬದುಕನ್ನು ಮಸುಕಾಗಿಸಿದೆ. ಮೇಲ್ಜಾತಿಯ ಹಲವರು ’ನಮಗೆ ಅದೆಷ್ಟು ದಿನ ಅನ್ನ ಹಾಕಿದ್ದ’ ಎಂದು ಸಾವಿನ ದಿನ ಕಣ್ಣೀರಿಟ್ಟರು. ಅಂತ್ಯಕ್ರಿಯೆ ಮುಗಿಸಿದ ನಂತರ ಊmealsರಿನವರು ಮತ್ತು ನೆಂಟರಿಷ್ಟರು ಸೇರಿ ತಿಥಿ ಕಾರ್ಯ ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆಗಳು ಆರಂಭಿಸಿದರು. ಬದುಕಿದ್ದಾಗ ಎಲ್ಲರಿಗೂ ಅನ್ನ ಹಾಕಿದ್ದಾನೆ. ಅವನ ತಿಥಿ ದಿನ ಇಡೀ ಊರಿಗೆ ಅನ್ನ ಹಾಕಬೇಕು ಎಂದು ಅವನ ಅಪ್ಪ, ಇಬ್ಬರು ಸಹೋದರರು ಹಾಗೂ ನಾನೂ ಸೇರಿ ಹಲವರು ಬಯಸಿದೆವು. ದಲಿತ ಕೇರಿಯ ಯಾವುದೇ ಮದುವೆ-ತಿಥಿ ನಡೆದರೂ ಮೇಲ್ಜಾತಿಯವರಿಗೆ ಊಟ ಹಾಕಿರುವ ಉದಾಹರಣೆ ಇಲ್ಲ. ಆದರೆ ಇಡೀ ಊರಿಗೆ ಊಟ ಹಾಕಬೇಕು ಎಂಬ ಆಸೆ ಆತನ ಆಪ್ತ ಬಳಗಕ್ಕೆ ಇತ್ತು. ಅಲ್ಲೆ ಇದ್ದ ನಾಲ್ಕೈದು ಮಂದಿ ಮೇಲ್ಜಾತಿಯವರು ಆಗಬಹುದು ಎಂದು ತಲೆಯಾಡಿಸಿದರು. ಆದರೆ ಊಟದ ವ್ಯವಸ್ಥೆ ಪ್ರತ್ಯೇಕವಾಗಿರಬೇಕು ಎಂದು ಷರತ್ತು ಮುಂದಿಟ್ಟರು.

ಅಕ್ಕಿ, ರಾಗಿ, ಮಾಂಸ ಸೇರಿದಂತೆ ಊಟದ ಎಲೆಯ ಸಮೇತ ಎಲ್ಲವನ್ನೂ ಕೊಡಿಸಬೇಕು. ಪ್ರತ್ಯೇಕವಾಗಿ ಅಡುಗೆ ಮಾಡಿಸಿಕೊಂಡು ನಮ್ಮ ಕೇರಿಯಲ್ಲೇ ಊಟ ಮಾಡಿಕೊಳ್ಳುತ್ತೇವೆ. ಆ ಊಟಕ್ಕೆ ನೀವು ಬರಬೇಡಿ, ನೀವು ಮಾಡಿಕೊಳ್ಳುವ ಊಟಕ್ಕೆ ನಾವು ಬರುವುದಿಲ್ಲ. ಹಾಗಿದ್ದರೆ ಮಾತ್ರ ನಾವು ಊಟ ಮಾಡುತ್ತೇವೆ. ಇಲ್ಲದಿದ್ದರೆ ಬೇಡ ಎಂದರು. ಆ ತನಕ ಸುಮ್ಮನಿದ್ದ ನಾನು ನನ್ನ ಅಭಿಪ್ರಾಯ ಮುಂದಿಟ್ಟೆ. ಮಹೇಶ ಇರುವ ತನಕ ಎಲ್ಲರಿಗೂ ಊಟ ಹಾಕಿದ್ದಾನೆ. (ಹೋಟೆಲ್‌ಗಳಲ್ಲಿ ಮಾತ್ರ, ಎಷ್ಟೇ ಸ್ನೇಹಿತರಿದ್ದರೂ ಮೇಲ್ಜಾತಿಯವರು ಅವನ ಮನೆ ಊಟ ಮಾಡಿರಲಿಲ್ಲ.) ಅವನ ಸಾವು ಎಲ್ಲರಿಗೂ ನೋವು ತಂದಿದೆ. ಊಟ ಹಾಕುವುದೆಂದರೆ ಅವನಿಗೆ ಸಂತೋಷದ ವಿಷಯ. ಅದಕ್ಕಾಗಿ ಊಟ ಬೇಡ ಎನ್ನಬೇಡಿ. ಆದರೆ ನಿಮ್ಮ ಷರತ್ತು ಒಪ್ಪಿಕೊಳ್ಳಲು ನಾವು ಸಿದ್ದರಿಲ್ಲ. ಒಂದೇ ಕಾರ್ಯಕ್ಕೆ ಪ್ರತ್ಯೇಕ ಅಡುಗೆ ಮಾಡುವುದು ಬೇಡ. ಮೇಲ್ಜಾತಿ ಅಡುಗೆ ಭಟ್ಟರನ್ನೇ ಕರೆಸಿ ನಾವೇ ಮಾಡಿಸುತ್ತೇವೆ. ಇಡೀ ಊರಿನ ಜನ ಬಂದು ಊಟ ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ಮೇಲ್ಜಾತಿ ಕೇರಿಯಲ್ಲೇ ನೀವೇ ನೇmeals-1ತೃತ್ವ ವಹಿಸಿಕೊಂಡು ಅಡುಗೆ ಮಾಡಿಸಿ ದಲಿತ ಕೇರಿಯ ಎಲ್ಲರೂ ನೆಂಟರಿಷ್ಟರೊಂದಿಗೆ ಅಲ್ಲೇ ಬಂದು ಊಟ ಮಾಡುತ್ತೇವೆ ಎಂದೆ. (ಇದು ಆಗದಿರುವ ಕೆಲಸ ಎಂಬುದು ಮೊದಲೇ ಗೊತ್ತಿದ್ದರೂ ನನ್ನ ಅಭಿಪ್ರಾಯವನ್ನು ಮಂಡಿಸಿದೆ.) ಯಾವುದೇ ಕಾರಣಕ್ಕೂ ಅದು ಆಗದಿರುವ ಕೆಲಸ. ನೀವು ಮಾಡಿಸುವ ಅಡುಗೆಯನ್ನು ನಾವು ಊಟ ಮಾಡಲು ಸಾಧ್ಯವಿಲ್ಲ. ನಾವು ಮಾಡಿಸಿದ ಜಾಗಕ್ಕೆ ನೀವೂ ಬರುವಂತಿಲ್ಲ ಎಂದು ಮೇಲ್ಜಾತಿವರು ಕಡಾ ಖಂಡಿತವಾಗಿ ಹೇಳಿದರು.

ದಲಿತರ ಮನೆಯ ಅಕ್ಕಿ, ರಾಗಿ, ಮಾಂಸ, ಮೆಣಸಿನ ಕಾಯಿ ಎಲ್ಲವನ್ನೂ ಪಡೆದು ಪ್ರತ್ಯೇಕವಾಗಿ ಅಡುಗೆ ಮಾಡಿಕೊಂಡು ಊಟ ಮಾಡಲು ಮೇಲ್ಜಾತಿವರು ಸಿದ್ದರಿದ್ದಾರೆ. ದಲಿತರು ಮಾಡಿದ ಅಥವಾ ಮೇಲ್ಜಾತಿ ಅಡುಗೆ ಭಟ್ಟರಿಂದ ಮಾಡಿಸಿದ ಊಟ ಮಾಡಲು ಸಿದ್ದರಿಲ್ಲ. ನೀವೇ ಮಾಡಿಸಿ ನಾವು ಬಂದು ಊಟ ಮಾಡುತ್ತೇವೆ ಎಂದರೂ ಒಪ್ಪುತ್ತಿಲ್ಲ. ದಲಿತರೊಂದಿಗೆ ಸಹಪಂಕ್ತಿ ಭೋಜನ ಮಾಡಬೇಕಾಗುತ್ತದೆ ಎಂಬುದು ಇದಕ್ಕೆ ಕಾರಣ. ಅಲ್ಲಿದ್ದ ನಾಲ್ಕೈದು ಮಂದಿ ಮೇಲ್ಜಾತಿವರು ಹೋಗಿ ಊರ ಮುಂದೆ ವಿಷಯ ತಿಳಿಸಿದರು. ಕೆಲವರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳಲು ಒಪ್ಪಲಿಲ್ಲ. ಕೊನೆಗೂ ಇಡೀ ಊರಿಗೆ ಊಟ ಹಾಕುವ ಮಹೇಶನ ಮನೆಯವರು ಮತ್ತು ಆಪ್ತರ ಆಸೆ ಈಡೇರಲಿಲ್ಲ.

ಇದೀಗ ಅದೇ ಮಹೇಶನ ತಮ್ಮನಿಗೊಂದು ಚಿಂತೆ ಎದುರಾಗಿದೆ. ಈ ವರ್ಷ ಮದುವೆ ಮಾಡಿಕೊಳ್ಳುವ ಸಿದ್ದತೆಯಲ್ಲಿದ್ದಾನೆ. ಈವರೆಗೆ ದಲಿತರ ಮನೆ ಮದುವೆಗಳಿಗೆ ಮೇಲ್ಜಾತಿಯವರು ಬಂದಿದ್ದರೆ, ಆದರೆ ಊಟ ಮಾತ್ರ ಮಾಡಿಲ್ಲ. ದಲಿತ ಕೇರಿಯಲ್ಲೇ ಮದುವೆ ನಡೆದರೆ ಅಲ್ಲಿ ಬಹುತೇಕ ದಲಿತರೇ ಅಡುಗೆ ಮಾಡಿರುತ್ತಾರೆ ಎಂಬ ಕಾರಣಕ್ಕೆ ಊಟ ಮಾಡುವುದಿಲ್ಲ. ಆದರೆ ಇತ್ತೀಚೆಗೆ ದಲಿತರ ಮನೆ ಮದುವೆಗಳು ಕೂಡ ನಗರ ಮತ್ತು ಪಟ್ಟಣದ ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿವೆ. ಅಲ್ಲಿ ಎಲ್ಲರಂತೆ ಊಟದ ಅಡುಗೆ ಗುತ್ತಿಗೆ ಪಡೆದವರು ಯಾವ ಜಾತಿಯವರು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಬಹುತೇಕ ಕಲ್ಯಾಣ ಮಂಟಪಗಳಲ್ಲಿ ಕ್ಲೀನಿಂಗ್ ಕೆಲಸದಲ್ಲಿ ಮಾತ್ರ ಕೆಳ ಜಾತಿಯವರಿಗೆ ಅವಕಾಶ ಸಿಗುತ್ತಿದೆ. ಅಡುಗೆ ಮಾಡುವ ಗುತ್ತಿಗೆದಾರರು ಬಹುತೇಕ ಮೇಲ್ವರ್ಗದವರೇ ಅಗಿರುತ್ತಾರೆ. ದಲಿತರ ಮದುವೆಗೆ ಬೇರೆ, ಮೇಲ್ಜಾತಿಯವರ ಮದುವೆಗೆ ಬೇರೆ ಅಡುಗೆ ಗುತ್ತಿಗೆದಾರರು ಇಲ್ಲ. ಆದರೂ ಕಲ್ಯಾಣ ಮಂಟಪದಲ್ಲಿ ನಡೆಯುವ ದಲಿತರ ಮನೆಯ ಮದುವೆ ಊಟವನ್ನು ಮೇಲ್ಜಾತಿವರು ಮಾಡಿಲ್ಲ. ಮದುವೆಗೆ ಬರುವ ಮೇಲ್ಜಾತಿವರಿಗೆ ಹೋಟೆಲ್‌ಗಳಲ್ಲಿ ಊಟ ಕೊಡಿಸುವುದು ಮMeals-2ದುವೆ ಮನೆಯವರ ಜವಾಬ್ದಾರಿ. ಮದುವೆ ಮನೆಯವರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಮಾವಿನಕೆರೆ ಬೆಟ್ಟದಲ್ಲಿ ನನ್ನೂರಿನ ದಲಿತ ಯುವತಿ ಸವಿತಾಳ ಮದುವೆ ನಡೆಯಿತು. ಬೆಂಗಳೂರು ಮೂಲದ ಮೇಲ್ಜಾತಿ ಯುವಕನೊಂದಿಗೆ ಪ್ರೀತಿ ಬೆಳೆದಿತ್ತು. ಅಪ್ಪ-ಅಮ್ಮ ಇಲ್ಲದ ಯುವಕ ದಲಿತ ಯುವತಿಯೊಂದಿಗೆ ಮದುವೆಯಾಗಲು ಒಪ್ಪಿದ್ದ. ಸಂಬಂಧಿಕರು ಸೇರಿ ಮಾವಿನಕೆರೆ ಬೆಟ್ಟದಲ್ಲಿ ಮದುವೆ ಮಾಡಿದರು. ಸವಿತಾಳ ಅಣ್ಣ ಮಂಜ ಸಮೀಪದ ಪಟ್ಟಣದಲ್ಲಿ ಊಟದ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದ. ಮದುವೆ ಗಂಡಿನ ಸಂಬಂಧಿಕರು ಊಟ ಮಾಡಿದರು. ಈ ಮದುವೆಗೆ ಬಂದಿದ್ದ ನನ್ನೂರಿನ ಮೇಲ್ಜಾತಿಯ ಜನರಲ್ಲಿ ಒಬ್ಬರೂ ಊಟ ಮಾಡಲಿಲ್ಲ. ಊರಿನ ಮೇಲ್ಜಾತಿವರಿಗೆ ಹೋಟೆಲ್‌ನಲ್ಲಿ ಊಟ ಕೊಡಿಸುವುದಿಲ್ಲ ಎಂದು ಮಂಜ ಮೊದಲೇ ನಿರ್ಧಾರ ಮಾಡಿದ್ದ. ಅಡುಗೆ ಕ್ಯಾಟರಿಂಗ್ ವ್ಯವಸ್ಥೆಯನ್ನು ಬ್ರಹ್ಮಾಣರಿಗೆ ಕೊಟ್ಟಿದ್ದೇನೆ. ಅಲ್ಲೂ ಊಟ ಮಾಡಲು ನಮ್ಮೂರಿನ ಮೇಲ್ಜಾತಿಯವರು ಹಿಂಜರಿದರೆ ನನ್ನದೇನು ತಪ್ಪಿಲ್ಲ ಎಂದ. ಊಟ ಆರಂಭವಾದ ಸಂದರ್ಭದಲ್ಲಿ ನನ್ನೆದುರಿಗೆ ಸಿಕ್ಕಿದ ಪಟೇಲರಿಗೆ ಊಟ ಮಾಡಿ ಎಂದೆ, ಸುಮ್ಮನೆ ನಕ್ಕು ಹೊರಟರು. ಯಾರೊಬ್ಬರೂ ಊಟ ಮಾಡಲಿಲ್ಲ.

ಕಲ್ಯಾಣ ಮಂಟಪದಲ್ಲಿ ಅಡುಗೆ ಮಾಡುವವರು ಯಾವ ಜಾತಿಯವರು ಎಂಬುದು ಯಾರಿಗೂ ಗೊತ್ತಿಲ್ಲ. ಅಡುಗೆಯವರ ಕಾರಣಕ್ಕೆ ಮೇಲ್ಜಾತಿವರು ಊಟ ಮಾಡಲು ನಿರಾಕರಿಸುತ್ತಿಲ್ಲ. ದಲಿತರೊಂದಿಗೆ ಒಟ್ಟಿಗೆ ಕುಳಿತು ಸಹಭೋಜನ ಮಾಡಲು ಮೇಲ್ಜಾತಿ ಮನಸ್ಸುಗಳು ಒಪ್ಪುತ್ತಿಲ್ಲ.

ಒಂದೇ ಊರಿನವರು ಎಂಬ ಕಾರಣಕ್ಕೆ ಮದುವೆಗೆ ಕರೆಯುತ್ತೇವೆ. ಅವರ ಮನೆ ಮದುವೆಯಲ್ಲಿ ನಾವು ಹಾಕಿರುವ ಮುಯ್ಯಿ (ಹಣದ ರೂಪದ ಗಿಫ್ಟ್) ತೀರಿಸುವ ಸಲುವಾಗಿಯಾದರೂ ಬಂದೇ ಬರುತ್ತಾರೆ. ಅವರಿಗೆ ಪ್ರತ್ಯೇಕವಾಗಿ ಹೋಟೆಲ್‌ನಲ್ಲಿ ಊಟ ಕೊಡಿಸಲು ನಾನು ಅವಕಾಶ ಕೊಡುವುದಿಲ್ಲ ಎಂದು ಮಹೇಶನ ತಮ್ಮ ನಾಗರಾಜ ಹೇಳುತ್ತಿದ್ದಾನೆ. ಕಲ್ಯಾಣ ಮಂಟಪದಲ್ಲಿ ಮಾಡಿರುವ ಊಟ ಮಾಡಿದರೆ ಮಾಡಲಿ ಇಲ್ಲದಿದ್ದರೆ, ಹಾಗೇ ಹೋಗಲಿ ಎನ್ನುತ್ತಿದ್ದಾನೆ. ಅವನ ನಿರ್ಧಾರವನ್ನು ನಾನೂ ಒಪ್ಪುತ್ತಿದ್ದೇನೆ. ಆದರೂ ನಾಗರಾಜನ ಅಪ್ಪ ನಮಗ್ಯಾರಿಗೂ ಗೊತ್ತಾಗದಂತೆ ಹೋಟೆಲ್‌ಗೆ ಕರೆದೊಯ್ಯಬಹುದು.

1 thought on “ದಲಿತರು ಮದುವೆ ಮಾಡಿದರೆ, ಹೋಟೆಲಲ್ಲಿ ಊಟ ಹಾಕಬೇಕು!

 1. Ananda Prasad

  ಅಂಬೇಡ್ಕರ್ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸೇರಿದಾಗ ಕೈಗೊಂಡ ೨೨ ಪ್ರತಿಜ್ಞೆಗಳ ಬಗ್ಗೆ ಇಂದು ದೇಶವ್ಯಾಪಿ ಚಿಂತನೆ ನಡೆಯಬೇಕಾಗಿದೆ. ಈ ಪ್ರತಿಜ್ಞೆಗಳನ್ನು ಮಾಧ್ಯಮಗಳು ದೇಶದ ಜನರ ಮುಂದೆ ಇಡುವುದು ಅಗತ್ಯ. ಆದರೆ ಮಾಧ್ಯಮಗಳು ಈ ವಿಷಯವನ್ನು ಜನರ ಮುಂದೆ ಇಡುತ್ತಲೇ ಇಲ್ಲ. ನಮ್ಮ ದೇಶವು ಸುಧಾರಣೆ ಆಗಬೇಕಾದರೆ ಅಂಬೇಡ್ಕರ್ ಅವರ ಈ ಪ್ರತಿಜ್ಞೆಗಳ ಬಗ್ಗೆ ಇಡೀ ದೇಶದ ಜನ ಚಿಂತಿಸುವಂತೆ ಆಗಬೇಕು. ಹಿಂಗ್ಯಾಕೆ.ಇನ್ ವೆಬ್ ಸೈಟಿನಲ್ಲಿ ಪ್ರಕಟವಾದ ಅಂಬೇಡ್ಕರ್ ಅವರ ೨೨ ಪ್ರತಿಜ್ಞೆಗಳು ಹೀಗಿವೆ.
  1. ಬ್ರಹ್ಮ, ವಿಷ್ಣು, ಮಹೇಶ್ವರನಲ್ಲಿ ನನಗೆ ನಂಬಿಕೆಯಿಲ್ಲ, ಅವರನ್ನು ನಾನು ಪೂಜಿಸುವುದಿಲ್ಲ.
  2. ದೇವರ ರೂಪವೆಂದು ಪರಿಗಣಿತವಾದ ರಾಮ ಮತ್ತು ಕೃಷ್ಣನಲ್ಲಿ ನನಗೆ ನಂಬಿಕೆಯಿಲ್ಲ, ಪೂಜಿಸುವುದಿಲ್ಲ.
  3. ಗೌರಿ, ಗಣಪತಿ ಮತ್ತಿತರ ಹಿಂದೂ ದೇವ – ದೇವತೆಗಳಲ್ಲಿ ನನಗೆ ನಂಬಿಕೆಯಿಲ್ಲ, ನಾನವರನ್ನು ಪೂಜಿಸುವುದಿಲ್ಲ.
  4. ದೇವರ ಅವತಾರಗಳಲ್ಲಿ ನನಗೆ ನಂಬಿಕೆಯಿಲ್ಲ.
  5. ಬುದ್ಧ ವಿಷ್ಣುವಿನ ಅವತಾರವೆಂಬುದನ್ನು ನಾನು ನಂಬುವುದಿಲ್ಲ. ಅದು ತಪ್ಪು ಮತ್ತು ಹುಚ್ಚುತನದ ಪ್ರಚಾರ.
  6. ಶ್ರಾದ್ಧದಂತಹ ಆಚರಣೆಗಳನ್ನು ನಾನು ಮಾಡುವುದಿಲ್ಲ.
  7. ಬುದ್ಧನ ನೀತಿ ಮತ್ತು ಪಾಠಗಳಿಗೆ ಧಕ್ಕೆ ತರುವಂತಹ ಕೆಲಸಗಳನ್ನು ನಾನು ಮಾಡುವುದಿಲ್ಲ.
  8. ಸಮಾರಂಭಗಳನ್ನು ಬ್ರಾಹ್ಮಣರು ನೆರವೇರಿಸುವುದಕ್ಕೆ ನಾನು ಬಿಡುವುದಿಲ್ಲ.
  9. ಮನುಷ್ಯರು ಸಮಾನರು ಎನ್ನುವುದನ್ನು ನಾನು ನಂಬುತ್ತೇನೆ.
  10. ಸಮಾನತೆಗಾಗಿ ಹೋರಾಡುತ್ತೇನೆ.
  11. ಬುದ್ಧನ ಎಂಟು ದಮ್ಮಗಳನ್ನು ನಾನು ಪಾಲಿಸುತ್ತೇನೆ.
  12. ಬುದ್ಧನ ‘ಪರಮಿತ’ವನ್ನು ನಾನು ಪಾಲಿಸುತ್ತೇನೆ.
  13. ಎಲ್ಲಾ ಜೀವಿಗಳ ಬಗೆಗೂ ಪ್ರೀತಿ ಮತ್ತು ಅನುಕಂಪವನ್ನು ತೋರಿಸುತ್ತೇನೆ, ಅವರ ರಕ್ಷಣೆ ಮಾಡುತ್ತೇನೆ.
  14. ನಾನು ಕದಿಯುವುದಿಲ್ಲ.
  15. ನಾನು ಸುಳ್ಳು ಹೇಳುವುದಿಲ್ಲ.
  16. ನಾನು ಪಾಪವನ್ನು ಮಾಡುವುದಿಲ್ಲ.
  17. ಮದ್ಯಪಾನವನ್ನಾಗಲೀ, ಡ್ರಗ್ಸ್ ತೆಗೆದುಕೊಳ್ಳುವುದನ್ನಾಗಲೀ ನಾನು ಮಾಡುವುದಿಲ್ಲ.
  18. ದಮ್ಮವನ್ನು ಪಾಲಿಸುತ್ತಾ ಪ್ರೀತಿಯಿಂದ ಪ್ರತಿ ದಿನವನ್ನು ಕಳೆಯಬಯಸುತ್ತೇನೆ.
  19. ಹಿಂದೂ ಧರ್ಮ ಮಾನವೀಯತೆಯ ವಿರೋಧಿ. ಅದು ಮಾನವೀಯತೆಯ ಬೆಳವಣಿಗೆಯನ್ನೂ ಸಹಿಸುವುದಿಲ್ಲ. ಕಾರಣ ಹಿಂದೂ ಧರ್ಮ ಅಸಹಾಯಕತೆಯ ಸೌಧದ ಮೇಲೆ ನಿಂತಿದೆ. ಹಾಗಾಗಿ ನಾನು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇನೆ.
  20. ಬುದ್ಧನ ಧಮ್ಮವೇ ನಿಜವಾದ ಧರ್ಮವೆಂದು ನಾನು ನಂಬುತ್ತೇನೆ.
  21. ಇದು ನನ್ನ ಪುನರ್ಜನ್ಮವೆಂದೇ ನನ್ನ ನಂಬುಗೆ.
  22. ನನ್ನಿಡೀ ಜೀವನವನ್ನು ಬುದ್ಧನ ತತ್ವಾದರ್ಶಗಳಿಗೆ ಅನುಗುಣವಾಗಿ ಜೀವಿಸುತ್ತೇನೆಂದು ಈ ಮೂಲಕ ನಾನು ಘೋಷಿಸುತ್ತೇನೆ.

  Reply

Leave a Reply

Your email address will not be published.