Daily Archives: August 29, 2015

ಸಾಮಾಜಿಕ ನ್ಯಾಯದ ಸಮಾಧಿ ಕಟ್ಟಲು “ಹಾರ್ದಿಕ” ಸ್ವಾಗತ

                                                                                                                                                       – ಶ್ರೀಧರ್ ಪ್ರಭು

ಕಾಲವೆಂಬ ಪ್ರವಾದಿ

ಅನೇಕ ಬಾರಿ ಕಾಲವೇ ಒಂದು ಪ್ರವಾದಿಯ ಹಾಗೆ ಮುಂಬರುವ ಅಪಾಯಕಾರಿ ಭವಿಷ್ಯದ ಮುನ್ಸೂಚನೆ ನೀಡುತ್ತಿರುತ್ತದೆ. ಇಂದಿಗೆ ಸರಿಯಾಗಿ ಎರಡೂವರೆ ದಶಕಗಳ ಹಿಂದೆ (ಆಗಸ್ಟ್ – ಸೆಪ್ಟೆಂಬರ್ ೧೯೯೦) ನಡೆದ ಎರಡು ಘಟನೆಗಳು ಬರಲಿರುವ ಭವಿಷ್ಯದ ಬಗ್ಗೆ ಸ್ಪಷ್ಟ ಮುನ್ಸೂಚನೆ ನೀಡಿದ್ದವು. ಆದರೆ ಗಮನಿಸಬೇಕಾದವರು ಇವುಗಳನ್ನು ಗಮನಿಸಲೇ ಇಲ್ಲ. ಹೀಗಾಗಿ ಇವು ಅತ್ಯಂತ ಶಾಂತವಾಗಿ ಕಾಲದ ಗರ್ಭಕ್ಕೆ ಸೇರಿ ಮರೆಯಾಗಿ ಹೋದವು.

ಮೊದಲ ಘಟನೆ ನಡೆದದ್ದು ೨೬ ನೆ ಆಗಸ್ಟ್, ೧೯೯೦ ರಂದು ಸಂಘ ಪರಿವಾರದ ಮುಖವಾಣಿ “ಓರ್ಗನೈಸರ್” ಅಂದು ತನ್ನ ಮುಖಪುಟದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ಹೀಗೆ ಬರೆಯಿತು:
“The havoc the politics of reservation is playing with the social fabric is unimaginable. It provides a premium for mediocrity, encourages brain-drain and sharpens caste-divide”

(ಮೀಸಲಾತಿ ರಾಜಕಾರಣ ನಮ್ಮ ಸಮಾಜದ ಅಡಿಪಾಯವನ್ನು ನಾವು ಊಹಿಸಲಾಗದಷ್ಟು ಘಾಸಿಗೊಳಿಸುತ್ತಿದೆ. ಮೀಸಲಾತಿ ಅಯೋಗ್ಯತನವನ್ನು ಉತ್ತೇಜಿಸಿ, ಪ್ರತಿಭಾ ಪಲಾಯನಕ್ಕೆ ಕಾರಣವಾಗುವುದಲ್ಲದೇ, ಜಾತಿಯ ಕಂದರವನ್ನು ಮತ್ತಷ್ಟು ಆಳಗೊಳಿಸುತ್ತದೆ).

ಎರಡನೇ ಘಟನೆ ನಡೆದದ್ದು ಇದಾದ ಒಂದು ತಿಂಗಳ ನಂತರ, ೨೮ ಸೆಪ್ಟೆಂಬರ್, ೧೯೯೦ ರಲ್ಲಿ.
ಅಂದಿನ ಗುಜರಾತ್ ನಲ್ಲಿ ಅಧಿಕಾರದಲ್ಲಿದ್ದ ಚಿಮಣ್ ಭಾಯಿ ಪಟೇಲ್ ನೇತೃತ್ವದ ಜನತಾ ದಳ ಸರಕಾರ ಒಂದು ಅಧಿಕೃತ ಹೇಳಿಕೆ ನೀಡಿತು

Hardik-2
“ನಾವು ನಮ್ಮ ರಾಜ್ಯದಲ್ಲಿ ಜಾರಿಯಲ್ಲಿರುವ ೩೧% ಮೀಸಲಾತಿಯನ್ನೇ (೧೦% ಒಬಿಸಿ ಮತ್ತು ೨೧% ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ) ಸರಿಯಾಗಿ ಜಾರಿಗೊಳಿಸದೆ ಎಷ್ಟೋ ಹುದ್ದೆಗಳು ಖಾಲಿ ಉಳಿದಿವೆ. ಹೀಗಾಗಿ ನಾವು ಮಂಡಲ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸುವುದಿಲ್ಲ.”
ಇದಾದ ನಂತರ ಗುಜರಾತ್ ನಲ್ಲೊಂದು ದಿವ್ಯ ಮೌನ ಆವರಿಸಿತು. ದಲಿತ ಮತ್ತು ಹಿಂದುಳಿದ ವರ್ಗಗಳು ತಮ್ಮ ಪೂರ್ವ ಜನ್ಮದ ಪ್ರಾರಬ್ಧವಿದು ಎಂದುಕೊಂಡು ಸುಮ್ಮನಾದರೆ, ಮೇಲ್ವರ್ಗಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟವು. ಹೀಗೆ ಗುಜರಾತ್ ಎಂದಿಗೂ ಎಂದೆಂದಿಗೂ ಮುಂಬರುವ ಭವಿಷ್ಯದ ಮುನ್ಸೂಚನೆ ನೀಡುತ್ತಲೇ ಬಂದಿದೆ. ಗಮನಿಸಬೇಕಾದವರು ಗಮನಿಸಿಲ್ಲ.
ಇಂದು ಗುಜರಾತ್ ನಲ್ಲಿ ಪರಿಶಿಷ್ಟ ಜಾತಿಗಳಿಗೆ ೭%, ಪರಿಶಿಷ್ಟ ಪಂಗಡಗಳಿಗೆ ೧೨% ಮತ್ತು ಹಿಂದುಳಿದ ವರ್ಗಗಳಿಗೆ ೨೭% ಮೀಸಲಾತಿ ಜಾರಿಯಲ್ಲಿದೆ.

ನಿಸರ್ಗವೂ ಪಟೇಲನದೇ

ಇದೆಲ್ಲ ನಡೆದಾಗ, ಇಂದು ಲಕ್ಷಾನುಗಟ್ಟಲೆ ಪಟಿದಾರರನ್ನು ಸಂಘಟಿಸಿ ಗುಜರಾತನ್ನು ಸ್ಥಬ್ದಗೊಳಿಸುತ್ತಿರುವ ಹಾರ್ದಿಕ ಪಟೇಲ್ ಎಂಬ ಇಪ್ಪತ್ತೊಂದರ ಎಳಸು ಇನ್ನೂ ಹುಟ್ಟೇ ಇರಲಿಲ್ಲ.
ಇತ್ತೀಚಿಗೆ ಒಬ್ಬ ಪತ್ರಕರ್ತರು ಈ ಹಾರ್ದಿಕ ಪಟೇಲನನ್ನು ವಿಚಾರಿಸಿದರು “ನೀವುಗಳು ಸಭೆ ಸೇರುವ ಮುಂಚೆ ಪೋಲೀಸರ ಅನುಮತಿ ಪಡೆಯಲಿಲ್ಲವೇಕೆ?”
ಈ ಹುಡುಗ ಹೇಳುವುದು “ಭಯೋತ್ಪಾದಕರು ದೇಶದೊಳಗೆ ಬರಲು ಅನುಮತಿ ಪಡೆದು ಬರುತ್ತಾರೆಯೇ?”

ಹೀಗೆ ತನ್ನನ್ನು ಭಯೋತ್ಪಾದಕರಿಗೆ ಹೋಲಿಸಿಕೊಳ್ಳುವ ಈ ಹುಡುಗ ಇಂದು ಗುಜರಾತಿನಲ್ಲಿ ಪ್ರಚಲಿತವಿರುವ ಒಂದು ಗಾದೆಯನ್ನು ನೆನಪಿಸುವಂತಿದ್ದಾನೆ: “ಇದು ನಿನ್ನದಲ್ಲದಿದ್ದರೆ ಪಟೇಲನದು”.

ಮನುಷ್ಯರ ವಿಷಯ ಹೋಗಲಿ, ನಿಸರ್ಗವೂ ಪಟೇಲನದೇ. ಆಕಾಶ, ಪಾತಾಳ, ಸಮುದ್ರ ನದಿ ಗಳ ಮೇಲೆಲ್ಲಾ ಪಟೇಲನದೇ ಹಕ್ಕು. ಒಟ್ಟು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯ ಪಟೇಲ್ ಸಮುದಾಯದವರೇ ಬಹುತೇಕ ಬಾರಿ ಮುಖ್ಯಮಂತ್ರಿಗಳು. ೧೯೬೦ ರಲ್ಲಿ ಹಿಂದಿನ ಮುಂಬೈ ಪ್ರಾಂತ್ಯದಿಂದ ಬೇರ್ಪಟ್ಟು ನಿರ್ಮಾಣವಾದ ಗುಜರಾತ್ ಪ್ರಥಮ ಮುಖ್ಯ ಮಂತ್ರಿಗಳು ಗಾಂಧೀಜಿಯವರ ವೈದ್ಯರಾಗಿದ್ದ ಡಾ. ಜೀವರಾಜ್ ಮೆಹತ. ನಂತರದಲ್ಲಿ ೧೯೭೩ ರ ತನಕ ಪಟೇಲರಿಗೆ ರಾಜ್ಯಾಧಿಕಾರ ದೊರೆತಿರಲಿಲ್ಲ. ಅಂದು ಕಾಂಗ್ರೆಸ್ ನಲ್ಲಿದ್ದ ಚಿಮನ್ ಭಾಯಿ ಪಟೇಲ್ ಗುಜರಾತ್ ನ ಮೊದಲ ಪಟೇಲ್ ಮುಖ್ಯ ಮಂತ್ರಿ.
ಇದಕ್ಕೆ ಮೊದಲು ಮತ್ತು ನಂತರದಲ್ಲಿ ಬಹುತೇಕ ಮಂತ್ರಿಮಂಡಲಗಳು ಪಟೇಲರ ಪ್ರಾತಿನಿಧ್ಯ ಕಂಡವು. ಸೋಳಂಕಿಯವರ ಮಂತ್ರಿ ಮಂಡಲ ಬಿಟ್ಟರೆ ಬೇರೆಲ್ಲ ಮಂತ್ರಿ ಮಂಡಲಗಳಲ್ಲಿ ಪಟೇಲರು ಪ್ರಮುಖ ಖಾತೆ ಗಳನ್ನೇ ಪಡೆದಿದ್ದರು. ಗುಜರಾತ್ ರಾಜ್ಯದ ಅಧಿಕಾರದ ಚುಕ್ಕಾಣಿಯ ಕಾಲವನ್ನು ಬಿಡಿ ಬಿಡಿಯಾಗಿ ಲೆಕ್ಕ ಹಾಕಿದರೆ ಒಟ್ಟು ಹದಿನೈದು ವರ್ಷ ಮುಖ್ಯ ಮಂತ್ರಿಗಳಾಗಿದ್ದು ಪಟೇಲರೇ.
ನಬಾರ್ಡ್ ನ ಪೂರ್ವ ಅಧ್ಯಕ್ಷರಾಗಿದ್ದ ಡಾ. ಪ್ರಕಾಶ್ ಬಕ್ಷಿ ಆಯೋಗದ ಶಿಫಾರಸ್ಸಿನ ಮೇರೆಗೆ ೧೯೮೧ ರಲ್ಲಿ ಮೂರು ಹಂತಗಳ ಮೀಸಲಾತಿ ವ್ಯವಸ್ಥೆ ಜಾರಿ ಮಾಡಲು ಮುಂದಾದ ಮಧವಸಿನ್ಹ್ ಸೋಲಂಕಿ ಸರಕಾರ ೧೯೮೫ ರಲ್ಲಿ ರಾಜಿನಾಮೆ ಕೊಡಬೇಕಾಯಿತು. ಆದರೆ ೧೯೮೫ ರಲ್ಲಿ ನಡೆದ ಚುನಾವಣೆಗಳಲ್ಲಿ ಸೊಲಂಕಿ ಭರ್ಜರಿ ಬಹುಮತದೊಂದಿಗೆ (೧೪೯/೧೮೨) ಆಯ್ಕೆ ಯಾದರು. ಇದರಿಂದ ಹತಾಶರಾದ ಪಟೇಲರು ಕಾಂಗ್ರೆಸ್ಸನ್ನು ತೊರೆದರು. ನಂತರ ಈ ಕಡೆ ತಿರುಗಲೇ ಇಲ್ಲ.

ಇತ್ತ ಜುಲೈ ೧೯೭೩ ರಲ್ಲಿ ತಮ್ಮದೇ ಪಕ್ಷದ ಅಂದಿನ ಮುಖ್ಯ ಮಂತ್ರಿ ಘನಶ್ಯಾಮ್ ಓಜ್ಹ ರನ್ನು ಪದಚ್ಯುತ ಗೊಳಿಸಿ ಮುಖ್ಯ ಮಂತ್ರಿಯಾದ ಚಿಮಣ್ ಭಾಯಿ ಪಟೇಲ್ ೧೯೭೪ ರಲ್ಲಿ ಬ್ರಷ್ಟಾಚಾರ ಆರೋಪ ಹೊತ್ತು ಗದ್ದುಗೆ ಬಿಡಬೇಕಾಯಿತು. ಅಷ್ಟು ಹೊತ್ತಿಗೆ ಪಟೇಲರು ಕಾಂಗ್ರೆಸ್ ನಿಂದ ನಾನಾ ಕಾರಣಗಳಿಗೆ ದೂರವಾಗಿಬಿಟ್ಟಿದ್ದರು. ಹಾಗೆಯೇ ಚಿಮಣ್ ಭಾಯಿ ಕೂಡ ಜನತಾ ಪರಿವಾರಕ್ಕೆ ಸೇರಿ ವಿ ಪಿ ಸಿಂಗ್ ಸರಕಾರ ಕೇಂದ್ರದಲ್ಲಿ ಬಂದಾಗ ೧೯೯೦ ರ ಹೊತ್ತಿಗೆ ಗುಜರಾತ್ ನ ಜನತಾ ಪರಿವಾರದ ಪಾಳಯದಿಂದ ಮುಖ್ಯಮಂತ್ರಿಯಾದರು.

ಆಗ ಅಧಿಕಾರ ಗದ್ದುಗೆ ಕಸಿದ ಪಟೇಲರ ಪಾಳಯ ಪಕ್ಷಾತೀತವಾಗಿ ತಮ್ಮ ಜನಾಂಗದ ಕಪಿಮುಷ್ಟಿ ಯನ್ನು ಸಡಿಲಿಸಲೇ ಇಲ್ಲ.
ಆದರೆ ಇದಕ್ಕೆ ತಡೆ ಉಂಟಾಗಿದ್ದು ೨೦೦೧ ರಲ್ಲಿ. ಆ ವರ್ಷ ಗಾಂಧಿ ಜಯಂತಿಯ ದಿವಸವೇ, ವ್ಯಾಪಕ ಬ್ರಷ್ಟಾಚಾರ, ಭೀಕರ ಭೂಕಂಪ ಪರಿಹಾರ ಕಾರ್ಯವನ್ನು ವನ್ನು ಸರಿಯಾಗಿ ನಿಭಾಯಿಸದ ಆರೋಪ ಮತ್ತು ಕರ್ತವ್ಯಲೋಪದ ಆರೋಪಗಳು ಬಂದು ಕೇಶುಭಾಯಿ ಪಟೇಲ್ ರಾಜಿನಾಮೆ ನೀಡಿದ್ದರು. ಹೀಗೆ ಅಚಾನಕ್ಕಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಅದೊಂದು ಬಹುಮತವಿಲ್ಲದ ಸರಕಾರವಾಗಿತ್ತು ಮತ್ತು ಅವರ ಸಂಪೂರ್ಣ ಹಿಡಿತ ಪಟೇಲರ ಕೈಯಲ್ಲಿತ್ತು ಮತ್ತು ಪಟೇಲರಿಗೆ ಅತೀವ ಅಸಮಾಧಾನವೂ ಇತ್ತು. ಅಲ್ಲಿಗೆ ಸರಿಯಾಗಿ ಗೋಧ್ರ ಮತ್ತು ಗೋಧ್ರೋತ್ತರ ಗಲಭೆ ಗಳಿಂದಾಗಿ ಮೋದಿ ಸ್ಥಾನ ಗಟ್ಟಿ ಗೊಂಡಿತು. ಮೋದಿ ಸ್ಥಾನ ಗಟ್ಟಿಯಾದಷ್ಟು ಪಟೇಲರ ಸಿಟ್ಟೂ ಬಲಗೊಂಡಿತ್ತು.

ಗೋಧ್ರ ಕಾಂಡದ ವೇಳೆಗೆ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾಗಿದ್ದ ಪ್ರವೀಣ್ ತೊಗಡಿಯ ಒಬ್ಬ ಗುಜರಾತಿ ಪಟೇಲ್; ಹಾಗೆಯೇ ಗುಜರಾತ್ ವಿ.ಎಚ್. ಪಿ ನ ಅಧ್ಯಕ್ಷರು ಕೂಡ ಡಾ. ಜೈದೀಪ ಪಟೇಲ್. ಗೋಧ್ರಾ ಕಾಂಡದ ಬಾಬು ಬಜರಂಗಿ ಅಲಿಯಾಸ್ ಬಾಬು ಪಟೇಲ್ ಕೂಡ ಒಬ್ಬ ಪಟೇಲ್ ಎಂಬ ಸತ್ಯ ನಮಗೆ ಗೊತ್ತಿರಲಿ. ಮೋದಿ ಕ್ಯಾಬಿನೆಟ್ ನಲ್ಲಿ ಪಟೇಲರು ಇದ್ದರಾದರೂ ಇವರೆಲ್ಲ ಆನಂದಿ ಬೆನ್ ಮಾದರಿಯ ಮೋದಿಗೆ ಜೈ ಹೇಳುವ “ನಿರುಪದ್ರವಿ” ಪಟೇಲರು. ಕೇಶುಭಾಯಿ ರಂಥಹ ಬಲಾಢ್ಯರನ್ನು ಮೋದಿ ವಸ್ತುಶಃ ತುಳಿದು ಬಿಟ್ಟಿದ್ದರು. ನಿಮಗೆ ಗೊತ್ತಿರಲಿ, ಮುಖ್ಯ ಮಂತ್ರಿಯಾಗಿ ನಿರಂಕುಶ ಅಧಿಕಾರ ಚಲಾಯಿಸಿದ ಕೇಶುಭಾಯಿ ಯಾವುದೋ ಒಂದು ದೇವಸ್ಥಾನದ ಟ್ರಸ್ಟಿ ಯಾಗಲು ಚುನಾವಣೆಗೆ ನಿಂತಾಗ ಅವರ ವಿರುದ್ಧ ಮೋದಿ ಪ್ರಚಾರಕ್ಕೆ ನಿಂತು ಸೋಲಿಸಿ ಬಿಟ್ಟಿದ್ದರು. ಹಿಂದೂ ಕೋಮುವಾದ ಬೆಳೆಸಲು ಅದಕ್ಕೆ ಸೀಮೆಯೆಣ್ಣೆ ಸುರಿಯಲು ತಮ್ಮ ಜನ ಬೇಕು ಆದರೆ ಅಧಿಕಾರ ಮಾತ್ರ ಮೋದಿಗೆ ಎಂಬ ಬಗ್ಗೆ ಪಟೇಲ್ ಸಮುದಾಯಕ್ಕೆ ತುಂಬಾ ಹಿಂಸೆ ಕೊಟ್ಟಿತ್ತು. ಅದರೂ ಏನೂ ಮಾಡುವಂತಿರಲಿಲ್ಲ.

ಹೀಗಾಗಿ ೨೦೦೭ ರ ವಿಧಾನಸಭಾ ಚುನಾHardik-3ವಣೆಯಲ್ಲಿ ಕೇಶುಭಾಯಿ ಪಟೇಲ್ ಭಾರತೀಯ ಜನತಾ ಪಾರ್ಟಿಯಲ್ಲಿದ್ದರೂ ಬಹಿರಂಗವಾಗಿಯೇ ಕಾಂಗ್ರೆಸ್ ಗೆ ಬೆಂಬಲ ನೀಡಿದರು. ಆದರೂ ಕೇಶುಭಾಯಿ ಪಟೇಲರನ್ನು ಪಕ್ಷ ಬಿಟ್ಟು ಹೊರಹಾಕಲಿಲ್ಲ. ಏಕೆಂದರೆ ಇಡೀ ಪಟೇಲ್ ಸಮುದಾಯ ತಿರುಗಿ ಬೀಳುವ ಅಪಾಯವಿತ್ತು. ಇದರಿಂದ ಹತಾಶರಾದ ಕೇಶುಭಾಯಿ ೨೦೧೨ ರಲ್ಲಿ ಗುಜರಾತ್ ವಿಕಾಸ ಪಕ್ಷ ಕಟ್ಟಿದರು. ಇದು ಸಂಘ ಪರಿವಾರದ ಮೇಲೆ ಪಟೇಲರ ಮೊದಲ ಬಹಿರಂಗ ವಿದ್ರೋಹ. ಇಡೀ ಪಟೇಲ್ ಸಮುದಾಯ ತನ್ನ ಹಣಬಲವನ್ನು ಪಣಕಿಟ್ಟು ಬಿಟ್ಟಿದ್ದರೂ ಎರಡೇ ಸ್ಥಾನಕ್ಕೆ ಕೇಶುಭಾಯಿ ಪಕ್ಷ ತೃಪ್ತಿ ಪಡಬೇಕಾಯಿತು. ಪಟೇಲರು ಈಗ ಹಲ್ಲುಕಿತ್ತ ಹಾವಾಗಿದ್ದರು. ಒಮ್ಮೆ ಮೋದಿ ಪ್ರಧಾನಿಯೆಂದು ಬಿಂಬಿತ ಗೊಂಡ ಮೇಲೆ ಪಟೇಲರ ಸಿಟ್ಟು ದವಡೆಗೆ ಮೂಲವಾಗಿಬಿಟ್ಟಿತ್ತು.
ಹೀಗಿದ್ದೂ ಪಟೇಲರು ಎಂದಿಗೂ ದಮನಿತ ವರ್ಗವಾಗಿರಲೇ ಇಲ್ಲ. ಇವರೇ ತಮ್ಮ ಜನಾಂಗದ ಬಗ್ಗೆ ಹೇಳಿಕೊಳ್ಳುವಂತೆ ಇವರದ್ದು ಕ್ಷತ್ರೀಯ ವಂಶವಂತೆ. ಕಾಲಾಂತರದಲ್ಲಿ ಗ್ರಾಮಗಳ ಮತ್ತು ದೊಡ್ಡ ಜಹಗೀರುಗಳ ಮಾಲೀಕರಾದರು. ಇಂದು ಭಾರತ ಮತ್ತು ವಿದೇಶಗಳ ಔಷಧಿ ಉದ್ಯಮ ಪಟೇಲರ ಕೈಯಲ್ಲಿದೆ. ಅಮೆರಿಕೆಯ ಸುಮಾರು ೨೨೦೦೦ ಹೋಟೆಲ್ ಗಳ ಸಿಂಹ ಪಾಲು ಪಟೇಲ ರದ್ದೇ. ಇಂದಿನ ಮುಖ್ಯ ಮಂತ್ರಿ ಮತ್ತು ಮೋದಿ ಪ್ರತಿನಿಧಿ ಆನಂದಿ ಬೆನ್ ಪಟೇಲರ ಮಂತ್ರಿಮಂಡಲದಲ್ಲಿ ಏಳು ಜನ ಪಟೇಲರಿದ್ದಾರೆ; ಹಾಗೇ ಗುಜರಾತ್ ನ ವಿಧಾನ ಸಭೆಯಲ್ಲಿ ಒಟ್ಟು ೧೨೦ ಜನ ಶಾಸಕರು ಕೂಡ ಪಟೇಲರೇ.
ಇದೆಲ್ಲ ಇತಿಹಾಸದ ವಿಷಯ. ವರ್ತಮಾನದಲ್ಲಿ ನಡೆಯುತ್ತಿರುವ ಮೀಸಲಾತಿ (ವಿರೋಧಿ) ಅಂದೋಲನಕ್ಕೆ ಮೂರು ಮುಖ್ಯ ಕಾರಣಗಳು ಮತ್ತು ಆಯಾಮಗಳಿವೆ.

ಪ್ರಯೋಗ ಶಾಲೆಯಲ್ಲಿ ಪಟೇಲರೆಂಬ ಬಲಿಪಶುಗಳು
ಮೊದಲನೇದ್ದು, ಗುಜರಾತ್ ಎಂಬ ಪ್ರಯೋಗ ಶಾಲೆಯಲ್ಲಿ ಪಟೇಲರೆಂಬ ಬಲಿಪಶುಗಳನ್ನು ಬಳಸಿಕೊಂಡು ಮೀಸಲಾತಿಯನ್ನು ಕೊಚ್ಚಿ ಹಾಕುವ ಮೊದಲ ಪ್ರಯತ್ನ. ಇಂದು ಯಾವ ಸಾಮಾಜಿಕ ಅಥವಾ ರಾಜಕೀಯ ಪ್ರಯೋಗವನ್ನು ಮೊದಲು ಪರಿವಾರಕ್ಕೆ ಮೊದಲ ಸುರಕ್ಷಿತ ಪ್ರಯೋಗ ಶಾಲೆ ಗುಜರಾತ್ ಎಂಬುದು ನಿರ್ವಿವಾದಿತ.

ಹಾಗಾಗಿಯೇ, ಇದೇ ಸಮುದಾಯ ನಿಯಂತ್ರಿಸುವ ವಿಶ್ವ ಹಿಂದೂ ಪರಿಷತ್ತು ಮೀಸಲಾತಿ ಯನ್ನು ಕೊನೆಗೊಳಿಸಬೇಕು ಎಂದು ಖಚಿತ ಸ್ವರದಲ್ಲಿ ಹೇಳುತ್ತಿದೆ. ಮೋದಿ ಅಧಿಕಾರಕ್ಕೆ ಬಂದ ಎರಡನೇ ಸಾರಿ ಸಾಕಷ್ಟು ಪಟೇಲರ ಸಮುದಾಯದ ಕೈಯಲ್ಲಿದ್ದ ವಿಶ್ವ ಹಿಂದೂ ಪರಿಷತ್ತಿನ ನೇತೃತ್ವವನ್ನು ತುಳಿದರು. ಹೀಗೆ ಇದು ಒಟ್ಟಾರೆ ಕೋಮುವಾದಿ ನೇತೃತ್ವ ಯಾರ ಕೈಗಿರಬೇಕು ಎಂದು ನಿರ್ಧರಿಸಲು ಎರಡು ಬಣಗಳ ನಡುವಿನ ಹೋರಾಟ.

ಗುಜರಾತಿನ ದಲಿತ ಮತ್ತು ಹಿಂದುಳಿದ ಸಮುದಾಯ ಹೇಗೂ ಕೋಮು ವಿಷದಲ್ಲಿ ನೆಂದು ತೊಪ್ಪೆಯಾಗಿದೆ. ಹೀಗಾಗಿ ಇಲ್ಲಿ ಇಂಥಹ ಪ್ರಯೋಗಗಳು ಸುಲಭ ಸಾಧ್ಯ. ಸಂವಿಧಾನವನ್ನು ನಾಶಮಾಡಲು ಅತ್ಯಂತ ಸುಲಭದ ಮಾರ್ಗ ಮೀಸಲಾತಿ ವಿರೋಧ ಎಂಬುದು ಇವರಿಗೆ ಮನದಟ್ಟಾಗಿದೆ. ಮೊದಲ ಕೆಲ ದಿವಸ “ತಮ್ಮದೇ” ಆದ ಆನಂದಿ ಬೆನ್ ಸರಕಾರದಿಂದ ಪಟೇಲರ ಸಂಘಟನೆ ಮತ್ತು ರಾಲಿಗಳಿಗೆ ಬಹಿರಂಗವಾಗಿಯೇ ಬೆಂಬಲ ಸಿಕ್ಕಿತು. ಚಳುವಳಿಕಾರರ ಲಕ್ಷಾಂತರ ವಾಹನಗಳಿಗೆ ಟೋಲ್ ಕೂಡ ಮಾಫಿ ಮಾಡಲಾಗಿದ್ದು ಪಬ್ಲಿಕ್ ಗ್ರೌಂಡ್ ನಂತಹ ನಗರ ನಡು ಮಧ್ಯದ ಮೈದಾನವನ್ನು ಹೆಚ್ಚು ಕಡಿಮೆ ಪುಗಸಟ್ಟೆಯಾಗಿಯೇ ನೀಡಲಾಗಿತ್ತು. ಹೀಗೆ ಅಧಿಕಾರದಲ್ಲಿರುವ ಪಕ್ಷ ಮತ್ತು ಪರಿವಾರದ ಬೆಂಬಲವಿಲ್ಲದೆ ಒಬ್ಬ ಮೀಸೆ ಸರಿಯಾಗಿ ಬಾರದ ಹುಡುಗ ಐದು ಲಕ್ಷ ಜನರನ್ನು ಸಂಘಟಿಸುವುದು ಸಾಧ್ಯವೇ? .

ಗುಜರಾತ್ ಮಾದರಿ

ಎರಡನೇ ಆಯಾಮ ಗುಜರಾತ್ ನ ಒಟ್ಟಾರೆ ಅರ್ಥಿಕ ದುರ್ಗತಿ. ಗುಜರಾತ್ ಅಭಿವೃದ್ಧಿಯ ಮಾದರಿ ಎಂಬ ‘ಗೊಬೆಲ್ಸ್ ಸತ್ಯ’ ವನ್ನು ಎಷ್ಟು ಬಾರಿ ಕೂಗಿ ಹೇಳಿದರೂ “ತಮ್ಮ ದೇವರ ಸತ್ಯ” ಪಟೇಲರಿಗೆ ತಿಳಿದೇ ಇದೆ. ತಮ್ಮ ವ್ಯಾಪಾರ ವಹಿವಾಟುಗಳು ನಿಧಾನದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿರುವುದು ಪಟೇಲರಿಗೆ ಮಾತ್ರವಲ್ಲ ಗುಜರಾತಿನ ಎಲ್ಲ ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ತರಿಗೆ ಸ್ಪಷ್ಟವಾಗಿ ಗೋಚರವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅದಾಣಿ, ಅಂಬಾನಿ ಮಾದರಿಯ ಕೆಲವೇ ಕೆಲವು ಬೆರಳೆಣಿಕೆಯ ಮಂದಿಗೆ ಮಣೆ ಹಾಕುವುದು ನೋಡಿ ಪಟೇಲ ಸಮುದಾಯ ತಮ್ಮ ಮಕ್ಕಳ ಕತ್ತಲೆ ಭವಿಷ್ಯ ವನ್ನು ಈಗಾಗಲೇ ಗ್ರಹಿಸಿದ್ದಾರೆ. ಕೇವಲ ದುಡ್ಡು ಲೇವಾದೇವಿ ವ್ಯವಹಾರ ಮಾಡಿ ದುಡ್ಡು ಮಾಡುತ್ತಿದ್ದವರಿಗೆ ಈಗ ಯಾವ ಸರಕಾರೀ ನೌಕರಿ ಅಥವಾ ಖಾಸಗಿ ನೌಕರಿಯೂ ಸಿಕ್ಕುತ್ತಿಲ್ಲ. ಅನೇಕ ದೇಶಗಳು ಪಟೇಲರ ಹೆಸರು ಕಂಡ ಕೂಡಲೇ ವೀಸ ಕೂಡ ನೀಡುತ್ತಿಲ್ಲ. ಈ ಸಮುದಾಯದ ಯುವ ಜನ ಒಟ್ಟಾರೆಯಾಗಿ ಪುಡಿ ರಾಜಕಾರಣ, ವ್ಯಾಪಾರ ವ್ಯವಹಾರ ಮಾಡಿ ಅದರಲ್ಲೇ ಎಷ್ಟು ಮುಳುಗಿ ಬಿಟ್ಟಿದ್ದಾರೆ ಎಂದರೆ ಹೆಚ್ಚಿನ ಜನ ಜನ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗುವುದು ಹೋಗಲಿ, ನೆಪಕ್ಕೆ ಬರೆಯುವಷ್ಟು ಸಾಮರ್ಥ್ಯ ಕೂಡ ಕಳೆದುಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಒಬ್ಬ ಸಮರ್ಥ ಸಾಹಿತಿ, ಕವಿ, ವಿಜ್ಞಾನಿ ಹೀಗೆ ಯಾವುದೇ ಅಕ್ಷರಕ್ಕೆ ನಂಟಿರುವ ಯಾವ ಕಸುಬನ್ನೂ ಹತ್ತಿರ ಸೇರಿಸಿಕೊಂಡಿಲ್ಲ. ಒಂದು ಸಮಾಜ ಕೋಮು ವಿಷವನ್ನು ಸೇವಿಸಿ ಬಿಟ್ಟರೆ ಎಷ್ಟೊಂದು ಹಾನಿ ಯಾಗುತ್ತದೆ ಎಂಬುದಕ್ಕೆ ಇದೇ ಜೀವಂತ ಉದಾಹರಣೆ.

ಕೋಲು ಯಾರದೋ ಅವರದ್ದೇ ಎಮ್ಮೆ

ಮೂರನೇ ಆಯಾಮ ಒಟ್ಟಾರೆ ಕಾನೂನು ವ್ಯವಸ್ಥೆಯ ಕುಸಿತದ್ದು. ಗುಜರಾತಿನಲ್ಲಿ ಕಾನೂನು ಎಂಬುದು ಒಂದು ಕೋಲು ಇದ್ದ ಹಾಗೆ. ಕೋಲು ಯಾರದೋ ಅವರದ್ದೇ ಎಮ್ಮೆ ಎಂಬ ಗಾದೆಯ ಹಾಗೆ. ಬಹು ಸಂಖ್ಯೆಯಲ್ಲಿರುವ ತಾವು ಳಾಠಿ ಬೀಸಿದರೆ ಎಟುಕದ ವಸ್ತುವೇ ಇಲ್ಲ ಎಂಬ ಗರ್ವ. ಏಕೆಂದರೆ ಪಟೇಲರು ಕ್ಷತ್ರಿಯರಂತೆ ರಾಜ್ಯವಾಳಿದ ವರ್ಗ; ಹಾಗಾಗಿ ಇತಿಹಾಸದುದ್ದಕ್ಕೂ ಅಕ್ಷರದಿಂದ ವಂಚಿತರಾದ ದಲಿತ ಮತ್ತು ಹಿಂHardik-1ದುಳಿದವರಂತಲ್ಲ. ರಸ್ತೆಗಿಳಿದು ಹೋರಾಟ ಮಾಡಿದ ಜಾಟರ ಮಾದರಿಯಲ್ಲೇ ಹೆಜ್ಜೆ ಇಟ್ಟರೆ ಇಂದಲ್ಲ ನಾಳೆ ನೌಕರಿಯಲ್ಲಿ ಅಲ್ಲದಿದ್ದರೂ ಇನ್ನೂ ಹೆಚ್ಚು ರಾಜಕೀಯ ಪ್ರಾತಿನಿಧ್ಯ ಖಚಿತ ಎಂಬುದು ಇವರಿಗೆ ತಿಳಿದಿದೆ. ಈ ಹೋರಾಟದ ಸಂದಿನಲ್ಲಿ ಆನಂದಿ ಬೆನ್ ತರಹದ ಡಮ್ಮಿ ಮುಖ್ಯಮಂತ್ರಿ ನಡೆಯದು, ಮೋದಿಯನ್ನು ಅವಲಂಬಿಸದ ನಿಜವಾದ ಪ್ರಾತಿನಿಧ್ಯ ಕೊಡಿ ಎಂಬ ಬೇಡಿಕೆ ಇವರದ್ದು.

ಸಾರ್ವತ್ರಿಕ ವ್ಯಾಧಿಯ ಸ್ವರೂಪ
ಇಂದು ಪಟೇಲರ ಹೋರಾಟ ದೇಶವ್ಯಾಪಿ ಪಡೆದು ಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಇಂದು ಹಾರ್ದಿಕ ಪಟೇಲ್ ಗುಜರಾತಿಯಲ್ಲಿ ಮಾತನಾಡುತ್ತಿಲ್ಲ ಪ್ರಜ್ಞಾಪೂರ್ವಕವಾಗಿ ಹಿಂದಿಯಲ್ಲಿ ಮಾತನಾಡುತ್ತಿದ್ದಾನೆ. ಇದು ಮೋದಿ ಕಿವಿಗೆ ಕೇಳಿಸಲೆಂದು ಮಾತ್ರವಲ್ಲ ಇನ್ನಿತರ ಬಲಾಢ್ಯ ಜಾತಿಗಳನ್ನು ಒಟ್ಟು ಗೂಡಿಸಿಕೊಳ್ಳುವ ಹುನ್ನಾರ. ಇವನು ಹೇಳುತ್ತಿರುವುದು: ಬಿಹಾರದ ಕೂರ್ಮಿ ಜನಾಂಗ ಮತ್ತು ಆಂಧ್ರದ ಕಮ್ಮ ಜನಾಂಗ ನಮ್ಮವರೇ. ನಾವು ಅವರೆಲ್ಲರೂ ಕ್ಷತ್ರೀಯರೇ! ಹೀಗೆ ಪೂರ್ವ ಮತ್ತು ಉತ್ತರದ ಕೊಂಡಿ ಬಿಹಾರದ ಚುನಾವಣಾ ಮತ್ತು ದಕ್ಷಿಣಕ್ಕೆ ಹೆಬ್ಬಾಗಿಲು ಆಂಧ್ರ / ತೆಲಂಗಾಣಗಳ ಬಲಿಷ್ಟರ ಜಾತಿ ಪ್ರಜ್ಞೆ ಕೆರಳಿಸಲು ಏನೆಲ್ಲಾ ಸಾಧ್ಯವೋ ಅದೆಲ್ಲ ಮಾಡಲಾಗುತ್ತಿದೆ.

ಮೋದಿಯವರ ಜಾತಿಗೇ ತೊಂದರೆ!

ಪಟೇಲರು ಮೀಸಲಾತಿ ಕೇಳುತ್ತಿರುವುದು ಒಬಿಸಿ ವರ್ಗದಲ್ಲಿ. ಹೀಗಾಗಿ, ಈ ಎಲ್ಲ ಪ್ರಹಸನದಲ್ಲಿ ಪಾಠವಿರುವುದು ದಲಿತರಿಗಲ್ಲ, ಪರಿವಾರದ ಬೆನ್ನೆಲುಬಾಗಿರುವ ಓ ಬಿ ಸಿ ಗಳಿಗೆ. ಒಂದು ವೇಳೆ ಬಲಾಢ್ಯ ಪಟೇಲರಿಗೆ “ಸೂಕ್ತ” ಪ್ರಾತಿನಿಧ್ಯ ಸಿಕ್ಕರೆ ಇಂದು ಮೋದಿಯವರಂಥ (ಘಂಚಿ – ಗಾಣಿಗ) ಸಣ್ಣ ಪುಟ್ಟ ಸಮುದಾಯ ಗಳು ಒಬಿಸಿ ಪಟ್ಟಿಯಿಂದ ಕಣ್ಮರೆ ಯಾಗುತ್ತವೆ. ಇಂದು ಹಿಂದುಳಿದವರು ಬುದ್ಧ ಬಸವ ಫುಲೆ ಮತ್ತು ಅಂಬೇಡ್ಕರ್ ಪರಂಪರೆಗೆ ಬರದಿದ್ದರೆ ಈ ಪ್ರಯೋಗದ ಮೊಟ್ಟ ಮೊದಲ ಬಲಿಪಶುಗಳಾಗಿ ಬಿಡುತ್ತಾರೆ. ಆದ್ದರಿಂದ ಸಂವಿಧಾನವನ್ನೇ ತಮ್ಮ ಧರ್ಮ ಗ್ರಂಥ ಮತ್ತು ಅಂಬೇಡ್ಕರ್ ಚಿಂತನೆಯೇ ತಮ್ಮ ಅಸ್ತಿತ್ವ ಮತ್ತು ಹೋರಾಟದ ಮೂಲ ದ್ರವ್ಯವಾಗಿಸದಿದ್ದರೆ ಹಿಂದುಳಿದ ವರ್ಗಗಳು ಈ ಪ್ರಯೋಗಶಾಲೆ ಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗುವುದು ಖಚಿತ.
ನಂತರ ಸರದಿ ದಲಿತರದ್ದು. ಅಂಬೇಡ್ಕರ್ ವಿಚಾರಧಾರೆಯನ್ನು ತಮ್ಮ ಪೇಟೆಂಟ್ ಎಂದುಕೊಳ್ಳದೆ ವಿಶ್ವಮಾನ್ಯ ಪ್ರವಾದಿ ಸ್ವರೂಪದ ಅಂಬೇಡ್ಕರ್ ವಾದವನ್ನು ಸರ್ವತ್ರೀಕರಣಗೊಳಿಸುವ ಎಲ್ಲ ದಮನಿತ ವರ್ಗಗಳಿಗೂ ಔಷಧಿ ಮಾದರಿಯಲ್ಲಿ ಒದಗಿಸುವ ಐತಿಹಾಸಿಕ ಜವಾಬ್ದಾರಿ ದಲಿತರ ಮೇಲಿದೆ.