Daily Archives: November 20, 2015

ಸಂಘಪರಿವಾರದ ರಕ್ತಸಿಕ್ತ ಅಧ್ಯಾಯದಲ್ಲಿ ಬಿಲ್ಲವರ ಸರತಿಯಲ್ಲಿ ಬಂಟರು

Naveen Soorinje


– ನವೀನ್ ಸೂರಿಂಜೆ


 

 

ಜತೆಗೆ ಆಟವಾಡಿ ಬಂದ ಸಮೀಯುಲ್ಲಾನನ್ನು ಹಿಂದೂ ಕೋಮುವಾದಿಗಳಿಂದ ರಕ್ಷಿಸಲು ಹೊರಟ ಹರೀಶ್ ಪೂಜಾರಿ ಬಲಿಯಾಗಿದ್ದಾನೆ. ಹಿಂದುತ್ವ ಸಂಘಟನೆಯ ಪದಾಧಿಕಾರಿಯಾಗಿರೋ ಭುವಿತ್ ಶೆಟ್ಟಿ ಮತ್ತು ಅಚ್ಯುತ ಮುಂತಾದ ಏಳು ಮಂದಿಯ ತಂಡ ಹರೀಶ್ ಪೂಜಾರಿ ಕೊಲೆಯನ್ನೂ ಸಮೀಯುಲ್ಲಾನ ಕೊಲೆಯತ್ನವನ್ನೂ ಮಾಡಿದೆ ಎಂದು ಪೊಲೀಸರು ಕೇಸು ದಾಖಲಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕೋಮುವಾದಿಗಳ ರಕ್ಕಸ ನಗೆಯ ಮಧ್ಯೆಯೂ ಹರೀಶ್ ಸಮೀಯುಲ್ಲಾನಂತಹ ಮಲಿನಗೊಳ್ಳದ ಮನಸ್ಸುಗಳು ಜಿಲ್ಲೆಯಲ್ಲಿದೆ ಎಂಬುದೇ ಸಮಾದಾನವಾಗಿದ್ದರೆ, ಆರ್.ಎಸ್.ಎಸ್ ಜಾತಿ ಲೆಕ್ಕಾಚಾರದಲ್ಲಿ ಕೋಮು ಕ್ರಿಮಿನಲ್ ಗಳನ್ನು ಸೃಷ್ಠಿಸುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಈವರೆಗೂ ಹಿಂದುಳಿದ ಜಾತಿಗಳಾದ ಬಿಲ್ಲವರನ್ನು ಕೊಲೆಗಳಿಗೆ ಬಳಸುತ್ತಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನೂ ಸಹ ಬಳಸಲು ಶುರು ಮಾಡಿದೆ. ಇದರ ಹಿಂದೆ ಆರ್.ಎಸ್.ಎಸ್ ನ ವ್ಯವಸ್ಥಿತ ಅಜೆಂಡಾ ಕೆಲಸ ಮಾಡಿದೆ. ಇದನ್ನು ತಡೆಯದೇ ಇದ್ದಲ್ಲಿ ಬಂಟರ ಸಮಾಜ ಮತ್ತು ಜಿಲ್ಲೆ ಮುಂಬರುವ ದಿನಗಳಲ್ಲಿ ಭಾರೀ ದಂಡ ತೆರಬೇಕಾಗುತ್ತದೆ.

ನಿನ್ನೆ ಮೊನ್ನೆಯವರೆಗೆ ಆರ್.ಎಸ್.ಎಸ್ ಬಿಲ್ಲವರನ್ನಷ್ಟೇ ಕೋಮುಗಲಭೆಗಳಿಗೆ ಬಳಕೆ ಮಾಡಿ ಜೈಲಿಗೆ ಕಳುಹಿಸುತ್ತಿತ್ತು.bhajarangadal  ಅಮ್ನೇಶಿಯಾ ಪಬ್ ನಲ್ಲಿ ಯುವತಿಯ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿತು. ಬಂಧಿತ 25 ಆರೋಪಿಗಳಲ್ಲಿ ಎಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರು. ಬಹುತೇಕ ಬಿಲ್ಲವರು. ನಂತರ ಹಲವಾರು ಕೋಮುಗಲಭೆಗಳು, ನೈತಿಕ ಪೊಲೀಸ್ ಗಿರಿಗಳು ನಡೆದವು. ದನ ಸಾಗಾಟಗಾರರ ಮೇಲೆ ಹಲ್ಲೆಗಳು ನಡೆದವು. ಆ ಹಲ್ಲೆಗಳಲ್ಲಿ ಕೋಮುಗಲಭೆಗಳಲ್ಲಿ ಒಂದೇ ಒಂದು ಜನಿವಾರಧಾರಿ ಆರೋಪಿ ಇರಲಿಲ್ಲ. ನಂತರ ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಹೋಂ ಸ್ಟೇ ದಾಳಿಯಲ್ಲಿ ಹಿಂದೂ ಸಂಘಟನೆಯ 41 ಕಾರ್ಯಕರ್ತರನ್ನು ಬಂಧಿತರಾಗಿದ್ದರು. ಅದರಲ್ಲೂ ಸಹ ಬಹತೇಕ ಬಿಲ್ಲವರು ಮತ್ತು ಸಣ್ಣಪುಟ್ಟ ಜಾತಿಗಳವರು. ಈಗಲೂ ಮಂಗಳೂರು ಜೈಲಿನ ಬಿ ಬ್ಲಾಕ್ ನಲ್ಲಿ ಇರುವ ಕೋಮುಗಲಭೆಯ ಆರೋಪಿಗಳನ್ನು ಮಾತನಾಡಿಸಿದ್ರೆ ಅದರಲ್ಲಿ ಒಬ್ಬನೇ ಒಬ್ಬ ಜನಿವಾರಧಾರಿ ಇಲ್ಲ. ಎಲ್ಲರೂ ಹಿಂದುಳಿದ ವರ್ಗಗಳಿಗೇ ಸೇರಿದವರು. ಇನ್ನು ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಹಿಂದತ್ವವಾದಿಗಳಲ್ಲೂ ಬಹುತೇಕ ಬಿಲ್ಲವರೇ ಆಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್. ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. (ವಿಚಿತ್ರ ಎಂದರೆ ಕೋಮುವಾದಿಗಳ ವಿರುದ್ಧ ನಿಂತು ಸಾವನ್ನಪ್ಪಿದವರೂ ಕೂಡಾ ಬಿಲ್ಲವರೇ. ಹರೀಶ್ ಪೂಜಾರಿ, ಶ್ರೀನಿವಾಸ್ ಬಜಾಲ್, ಭಾಸ್ಕರ ಕುಂಬ್ಳೆ ಈ ರೀತಿ ಬಿಲ್ಲವರೇ ಕೋಮುವಾದಿಗಳಿಗೆ ಎದೆಯೊಡ್ಡಿ ಹುತಾತ್ಮರಾದವರು.) ಹೀಗೆ ಕೊಲೆ-ಕೊಲ್ಲು-ಕೊಲ್ಲಿಸು ಈ ಮೂರಕ್ಕೂ ಸಾಮಾಜಿಕವಾಗಿ ಹಿಂದುಳಿದ ಬಿಲ್ಲವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನು ಬಳಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದೆ. ಅದರ ಭಾಗವಾಗಿಯೇ ಹರೀಶ್ ಪೂಜಾರಿಯನ್ನು ಕೊಲೆ ಮಾಡಿ ಭುವಿತ್ ಶೆಟ್ಟಿ ಎಂಬ ಬಂಟರ ಹುಡುಗ ಜೈಲುಪಾಲಾಗಿದ್ದಾನೆ.

ಮಂಗಳೂರು ಕೋಮುವಾದದ ಜಗತ್ತಿನಲ್ಲಿ ಈಗ ಬಂಟರು ಫೀಲ್ಡಿಗಿಳಿದಿದ್ದಾರೆ. ಬಿಲ್ಲವರ ರಾಜಕೀಯ ಮುಗ್ದತೆಯನ್ನು ಬಳಸಿಕೊಂಡು ಮೇಲ್ವರ್ಗಗಳು ಬಲಿ ಪಡೆಯುತ್ತಿದ್ದವು. ಆರ್.ಎಸ್.ಎಸ್ ಮತ್ತು ಬಿಜೆಪಿಯಲ್ಲಿ ಬಿಲ್ಲವರಿಗೆ ನಾಯಕತ್ವ ಬೇಕಾಗಿಯೂ ಇರಲಿಲ್ಲ ಮತ್ತು ಅದನ್ನು ಕೊಡಲೂ ಇಲ್ಲ. ಕೇವಲ ಕಾಲಾಳುಗಳಾಗಿ ಸತ್ತರು ಮತ್ತು ಸಾಯಿಸಿ ಜೈಲು ಪಾಲಾದ್ರು. ಆದರೆ ಬಂಟರು ಹಾಗಲ್ಲ. ಸಾಮಾಜಿಕ ಸ್ಥಾನಮಾನಗಳ ಜೊತೆಗೇ ಕೋಮುವಾದಿಗಳ ಜೊತೆ ಸೇರುತ್ತಿದ್ದಾರೆ. ಮುಂಬೈ ಅಂಡರ್ ವಲ್ಡ್ ಪ್ರಾರಂಭವಾಗಿದ್ದೇ ಕರಾವಳಿಯ ಬಂಟರಿಂದ. ಹಾಗಂತ ಅದೇನೂ ಅವರಿಗೆ ಮುಜುಗರ ತರುವಂತಹ ವಿಚಾರವಲ್ಲ. ಬದಲಾಗಿ ಪ್ರತಿಷ್ಠೆಯ ವಿಷಯವಾಗಿತ್ತು. ದೇವಸ್ಥಾನ ಪುನರುಜ್ಜೀವನ, ಬ್ರಹ್ಮಕಲಶ, ನಾಗಮಂಡಲ, ಕೋಲ ನೇಮಗಳಲ್ಲಿ ಈ ಭೂಗತ ಜಗತ್ತಿನ ಶೆಟ್ರುಗಳಿಗೆ ವಿಶೇಷ ಗೌರವವಿದೆ.

 ***

ತೊಂಭತ್ತರ ದಶಕದ ಆರ್ಥಿಕ ಸುಧಾರಣೆಗಳ ಫಲವಾಗಿ ಕರಾವಳಿಯ ಜಾತೀಯ ಸಮೀಕರಣದಲ್ಲಿ ಹಲವು ಬಗೆಯ20090124pub4 ಚಲನೆಗಳು ಕಂಡುಬಂದವು. ಜ್ಞಾನ ಹಾಗೂ ಉದ್ಯೋಗ ಆಧಾರಿತ ಹೊಸ ಸಮಾಜೋ ಆರ್ಥಿಕ  ಸನ್ನಿವೇಶದಲ್ಲಿ ಸೃಷ್ಟಿಯಾದ ನೂತನ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಮೂಲತಃ ವ್ಯವಸಾಯದ ಜೊತೆಗೆ  ಪೂರಕವಾಗಿ ಮುಂಬಯಿ ಉದ್ಯೋಗದ ಸಂಪರ್ಕದ ಹಣವನ್ನು ಅವಲಂಬಿಸಿದ್ದ ಇಲ್ಲಿಯ ಬಂಟ ಮತ್ತು ಬಿಲ್ಲವ ಜಾತಿಗಳು ಸಾಕಷ್ಟು ಯಶಸ್ಸನ್ನು ಕಂಡವು. ಅಲ್ಲದೆ ಆ ಕಾಲಕ್ಕಾಗಲೇ ಭೂಸುಧಾರಣೆಗಳ ಫಲವಾಗಿ ಭೂಮಿಯನ್ನು ಆಧರಿಸಿದ್ದ ಆರ್ಥಿಕ ಸಂಬಂಧಗಳು ಕೂಡಾ ಬಹತೇಕ ಸಡಿಲವಾಗಿದ್ದವು.

ಅಂತೆಯೇ ಒಂದು ಕಡೆ ಆರ್ಥಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಇನ್ನೊಂದೆಡೆ ಮಧ್ಯಮ ವರ್ಗೀಯ ಉದ್ಯೋಗಗಳ ಪ್ರಸರಣ- ಇವೆರಡೂ ಸಹಜವಾಗಿಯೇ ಸಾಮಾಜಿಕ ಸ್ತರೀಕರಣದಲ್ಲಿ ಮತ್ತು ಸಂಬಂಧಗಳಲ್ಲಿ ಮಾರ್ಪಾಡುಗಳಿಗೆ ಬೇಡಿಕೆಯಿಟ್ಟವು. ಅಂದರೆ ಹೊಸದಾಗಿ ದೊರೆತ ಆರ್ಥಿಕ ಸ್ಥಿತಿವಂತಿಕೆಯ ದೆಸೆಯಿಂದ ಇಲ್ಲಿಯ ಹಿಂದುಳಿದ ಜಾತಿಗಳು ಸಾಮಾಜಿಕ ಶ್ರೇಣೀಕರಣದಲ್ಲಿ ಮೇಲ್ಮುಖ ಚಲನೆಯನ್ನು ಅಪೇಕ್ಷಿಸಿದವು. ಯಕ್ಷಗಾನ ಮೇಳಗಳಲ್ಲಿ ಭಾಗವಹಿಸುವ ಹಕ್ಕಿಗೆ ಬಿಲ್ಲವರು ಬೇಡಿಕೆಯಿಟ್ಟದ್ದು ಅಥವಾ ಕಟೀಲು ಮೊದಲಾದೆಡೆ ದೇವಾಲಯಗಳ ಮ್ಯಾನೇಜ್ ಮೆಂಟ್ ಗೆ ಸಂಬಂಧಪಟ್ಟಂತೆ ಕಂಡುಬಂದ ಸಂಘರ್ಷಗಳು ಮತ್ತು ಇತರೆ ಕೆಲವು ಬೆಳವಣಿಗೆಗಳು ಅಂತಹ ಪ್ರವೃತ್ತಿಗಳನ್ನು ಸಂಕೇತಿಸಿದ್ದವು.

ಆರ್ಥಿಕ ನೆಲೆಯಲ್ಲಿ ಬಲಗೊಳ್ಳುತ್ತಿದ್ದ ಕೆಳವರ್ಗಗಳ ಮಹತ್ವಾಕಾಂಕ್ಷೆಗಳು ಮತ್ತು ಹಕ್ಕೊತ್ತಾಯ ಸಾಮಾಜಿಕ ಶ್ರೇಣೀಕರಣದ ಪೀಠಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಜನಿವಾರಿಗಳಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿದವು. ಆರಂಭದಲ್ಲಿ ಜೀರ್ಣೋದ್ಧಾರ, ನಾಗಮಂಡಲ ಅಥವಾ ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ನಾಯಕತ್ವವನ್ನ ಹೊಸ ಆರ್ಥಿಕ ವರ್ಗಗಳಾಗಿರೋ ಬಂಟರು ಮತ್ತು ಬಿಲ್ಲವರಿಗೆ ನೀಡುವ ಮೂಲಕ ಹೊಸ ಯುಗದ ಸವಾಲುಗಳನ್ನ ಎದುರಿಸುವ ಪ್ರಯತ್ನಗಳನ್ನ ಬ್ರಾಹ್ಮ,ಣರು ನಡೆಸಿದ್ದನ್ನ ನಾವು ನೋಡಿದ್ದೇವೆ.

ಹಾಗೇಯೇ ಆರ್ಥಿಕ ಸುಧಾರಣೆಯ ಫಲ ಮತ್ತು ಅದರ ಜೊತೆಯೇ ಸೃಷ್ಟಿಯಾದ ಅತೃಪ್ತಿ ರಾಜಕೀಯ ನೆಲೆಯಲ್ಲೂ ಸಂಚಲನವನ್ನ ಕಾಣಿಸಿದವು. ಚುನಾವಣಾ ರಾಜಕಾರಣದಲ್ಲಿ ಅವಶ್ಯವಿದ್ದ ಸಂಖ್ಯಾಬಲ ಮತ್ತು ಸಂಪನ್ಮೂಲ- ಇವೆರಡೂ ಕ್ರಮವಾಗಿ ಕರಾವಳಿಯ ಹಿಂದುಳಿದ ವರ್ಗವಾಗಿರೋ ಬಿಲ್ಲವ ಮತ್ತು ಬಂಟರಲ್ಲಿ ಇದ್ದವು. ಹೀಗಾಗಿ, ಅಂತಹ ವರ್ಗಗಳ ಒಳಗೊಳ್ಳುವಿಕೆ ಆರ್.ಎಸ್.ಎಸ್ ಗೆ ಅನಿವಾರ್ಯವಾಗಿತ್ತು. ಅದರ ಭಾಗವಾಗಿಯೇ ಯಕ್ಷಗಾನ, ನಾಗಮಂಡಲ, ಭ್ರಹ್ಮಕಲಶ, ಜಾತ್ರೆ, ನೇಮಗಳಲ್ಲಿ ಬಂಟ- ಬಿಲ್ಲವರಿಗೆ ಪುರೋಹಿತಶಾಹಿಗಳು ನಾಯಕತ್ವ ನೀಡಿದವು. ಇಂದೊಂದು ಜನಿವಾರಧಾರಿಗಳ ಮಲ್ಟಿ ಪ್ಲ್ಯಾನ್ ಆಗಿದೆ. ಇಂತಹ ಒಂದು ವಿಶಿಷ್ಟ ಸನ್ನಿವೇಶದಲ್ಲಿಯೇ ನಾವು ಹಿಂದೂಪರ ಸಂಘಟನೆಗಳ ಪ್ರಸರಣವನ್ನು ಕಾಣುವುದು. ಇದು ಒಂದು ನೆಲೆಯಲ್ಲಿ ಹೊಸಕಾಲದ ಹೊಸ ಒತ್ತಡಗಳಿಗೆ ಪುರೋಹಿತಶಾಹಿ ಪ್ರತಿಕೃಯಿಸಿದ ರೀತಿಯಾಗಿದ್ದರೆ ಇನ್ನೊಂದೆಡೆ ಜೀರ್ಣೋದ್ಧಾರಗಳಂತಹ ಮೊದಲ ಸುತ್ತಿನ ಕಾರ್ಯತಂತ್ರಗಳ ಮುಂದುವರಿಕೆಯೂ ಆಗಿದೆ.

ಹಿಂದುತ್ವ ಸಂಘಟನೆಯ ಕಾಲಾಳುಗಳ ಸಂಘಟನೆಯ ನಾಯಕತ್ವ ದೊರಕಿದ್ದು ಹೊಸಕಾಲದಲ್ಲಿ ಹೊಸ ಕಸವು ಪಡೆದುಕೊಂಡ ವರ್ಗಗಳಿಗೇ.Accused_Homestay_Attack ಪುರೋಹಿತಶಾಹಿಯ ಇಂತಹ ಕಾರ್ಯತಂತ್ರಗಳ ಇನ್ನೊಂದು ಅಂಶ ಹಿಂದುಳಿದ ಜಾತಿಗಳಿಗೆ ಸಮಾನ ಶತ್ರುವೊಂದನ್ನು ಸ್ಷಷ್ಟಪಡಿಸಿಕೊಟ್ಟದ್ದು. ಅದು ಮುಸ್ಲೀಮರು. ಹೀಗಾಗಿ ಕರಾವಳಿಯ ಕೆಳವರ್ಗಗಳಲ್ಲಿ ಹೊಸದಾಗಿ ಸೃಷ್ಟಿಯಾದ ಎನರ್ಜಿಗೆ, ಕ್ರೀಯಾಶೀಲಿತೆಗೆ ಒಂದು ವೇದಿಕೆ ನಿರ್ಮಿಸಿಕೊಡುವ ಮೂಲಕ ಪುರೋಹಿತಶಾಹಿ ಅವುಗಳ ಹಕ್ಕೊತ್ತಾಯದ ಬೇಡಿಕೆಗಳು ತನ್ನತ್ತವೇ ತಿರುಗಿ ತಾನು ಅನುಭವುಸುತಿದ್ದ ಪಂಕ್ತಿಭೇದಗಳಂತಹ ವಿಶೇಷ ಸಾಮಾಜಿಕ ಸ್ಥಾನಮಾನ, ಸೌಲಭ್ಯಗಳು ಸಾರ್ವತ್ರಿಕವಾಗಿ ಪ್ರಶ್ನೆಯಾಗುವುದರಿಂದ ಸ್ವಯಂ ರಕ್ಷಿಸಿಕೊಂಡಿದೆ. ಪಂಕ್ತಿಬೇದವನ್ನು, ದೇವಸ್ಥಾನದ ಸ್ಥಾನ ಮಾನವನ್ನು ಪ್ರಶ್ನೆ ಮಾಡಬೇಕಾಗಿದ್ದವರನ್ನೇ ಪುರೋಹಿತಶಾಹಿಗಳು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದಾರೆ.

ಉತ್ತರದಲ್ಲಿ ಹಿಂದುಳಿದ ವರ್ಗಗಳನ್ನ ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಕ್ರಿಯೆಯನ್ನ ನಾವು ಕಾಣುತ್ತೇವೆ. ಆದರೆ ಅಲ್ಲಿ ಅಂತಹ ಹೊಸ ಆರ್ಥಿಕತೆಯ ಸುಳಿವುಗಳು ಇಲ್ಲದಿರುವಂತದ್ದು ಮತ್ತು ಅಲ್ಲಿ ಚಲನೆ ಮುಖ್ಯವಾಗಿ ಮೀಸಲಾತಿ ಆಧರಿಸಿದ್ದು. ಹೀಗಾಗಿ ಅಲ್ಲಿನ ಹಿಂದುಳಿದ ಜಾತಿಗಳು ಮುಸ್ಲಿಮರನ್ನು ಮೀಸಲಾತಿಗೆ ಸಹಸ್ಪರ್ಧಿಗಳು ಮತ್ತು ಆ ಮೂಲಕ ಅವರು ತಮ್ಮ ಸೌಲಭ್ಯಗಳಿಗೆ ಸಂಚಕಾರ ಎನ್ನುವಂತೆ ಪರಿಗಣಿಸುವಲ್ಲಿ ಹಿಂದುತ್ವ ಪ್ರಾಜೆಕ್ಟ್ ಕಾರ್ಯನಿರ್ವಹಿಸಿದೆ. ಇತ್ತೀಚೆಗೆ ನಡೆದ ಬಿಹಾರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಲಾಲು ಹಾಗೂ ನಿತೀಶ್ ಅವರನ್ನ ಕುರಿತಂತೆ “ಅವರು ದಲಿತ, ಮಹಾದಲಿತ ಹಾಗೂ ಹಿಂದುಳಿದ ವರ್ಗಗಳಿಂದ ಶೇಕಡಾ ಐದರಷ್ಟು ಮೀಸಲು ಕೋಟಾವನ್ನು ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡಲು ಪಿತೂರಿ ಮಾಡುತ್ತಿದ್ದಾರೆ” ಎಂದು ನುಡಿದದ್ದು ಇದೇ ತಂತ್ರದ ಭಾಗವಾಗಿಯೇ.

ಕರಾವಳಿಯಲ್ಲಿ ಹಿಂದುತ್ವ ಸಂಘಟನೆಗಳ ಮೂಲಕ ಅಂತಹ ಒಂದು ಗೋಲ್ ಪೋಸ್ಟ್ ಅನ್ನು ಕೆಳವರ್ಗಗಳಿಗೆ ಬ್ರಾಹ್ಮಣಶಾಹಿ ಸಂಘಪರಿವಾರ ಒದಗಿಸಿಕೊಟ್ಟಿದೆ. ಪರಿವಾರದ ಕಾಲಾಳು ಸಂಘಟನೆಗಳಲ್ಲಿ ಹಿಂದುಳಿದ ಜಾತಿಗಳಿಗೆ ನಾಯಕತ್ವವನ್ನ ಕೊಡುವುದು ಮತ್ತು ಅದೇ ವೇಳೆಗೆ ಅವುಗಳ ದೃಷ್ಟಿ ತನ್ನ ವಿರುದ್ಧ ಬೀಳದಂತೆ ನೋಡಿಕೊಳ್ಳುವುದು- ಇವೆರಡೂ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟ ಹಾಗೂ ಸಂಕೀರ್ಣ ಸ್ವರೂಪದ ನಿಯಂತ್ರಣ ವ್ಯವಸ್ಥೆಯನ್ನ ಅಪೇಕ್ಷಿಸಿದವು. ಇವತ್ತು ಕಲ್ಲಡ್ಕ ಅನ್ನೋದು ಇಡೀ ಕರಾವಳಿಯ ಹೈಕಮಾಂಡ್ ಅನ್ನೋ ರೀತಿಯಲ್ಲಿ ಉದಯಿಸಿದ್ದು ಸಂಘಪರಿವಾರದ ಅಂತಹ ಪ್ರಯತ್ನಗಳು ಯಶಸ್ವಿಯಾಗಿರುವುದನ್ನ ಸಂಕೇತಿಸುತ್ತವೆ.

***

ಬಿಲ್ಲವರ ಸಮುದಾಯದಲ್ಲಿ ಆರ್.ಎಸ್.ಎಸ್ ನ ಯೂಸ್ ಅ್ಯಂಡ್ ತ್ರೋ ಗೆ ಬಲಿಯಾದುದರ ಬಗ್ಗೆ ಗಂಭಿರ ಚರ್ಚೆಗಳು ನಡೆಯುತ್ತಿದೆ. ಹಿಂದುತ್ವವಾದದಿಂದ ಬೀದಿಪಾಲಾದ ಬಿಲ್ಲವ ಕುಟುಂಬಗಳ ಉದಾಹರಣೆಯನ್ನು ಮುಂದಿಟ್ಟುಕೊಂಡು ಸಮುದಾಯದೊಳಗೇ ಜಾಗೃತಿ ಕಾರ್ಯ ಸ್ವಲ್ಪ ಮಟ್ಟಿಗೆ ಪ್ರಾರಂಭವೇನೋ ಆಗಿದೆ. ಅದರ ಅರಿವಿದ್ದೇ ಇದೀಗ ಆರ್ ಎಸ್ ಎಸ್ ಕಣ್ಣು ಬಂಟ ಸಮುದಾಯದತ್ತಾ ಬಿದ್ದಿದೆ. ಅಂಡರ್ ವಲ್ಡ್ ಅನ್ನು ಹತ್ತಿರದಿಂದ ನೋಡಿದ ಸಮುದಾಯವಾಗಿರೋ ಬಂಟ ಸಮುದಾಯದಲ್ಲಿ ರೌಡೀಸಂ ಎನ್ನುವುದೂ ಕೂಡಾ ಪ್ರತಿಷ್ಠೆಯ ವಿಚಾರವಾಗಿದೆ. ದೇವಸ್ಥಾನಗಳಲ್ಲಿ ಯಜಮಾನಿಕೆಯನ್ನು ಕೊಟ್ಟು ತಮ್ಮ ನೈವೇದ್ಯ ಬೇಯಿಸಿಕೊಂಡವರು ಇದೀಗ ತಮ್ಮ ದ್ವೇಷದ ರಾಜಕಾರಣಕ್ಕೂ ಬಂಟರನ್ನು ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸದೃಡವಾಗಿರುವ ಇಂತಹ ಸಮುದಾಯ ಕೋಮುವಾದಿಗಳಿಗೆ ಅಸ್ತ್ರವಾಗುತ್ತಿರೋದು ಬಂಟ ಸಮುದಾಯ ಮತ್ತು ಸಮಾಜಕ್ಕೆ ಅತ್ಯಂತ ಆತಂಕಕಾರಿ.