Daily Archives: December 10, 2015

ಹೊಲ ಮೇಯ್ದ ಬೇಲಿ ಜಾಗ ಖಾಲಿ ಮಾಡಿತು

ಕೃಷ್ಣಮೂರ್ತಿ. ಕೆ

ಅಲ್ಲಲ್ಲಿ ಗುಸು-ಗುಸು ಮೂಲಕ ಆರಂಭವಾದ ಸುದ್ದಿಯೊಂದು ಮೊನ್ನೆ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಅವರ ರಾಜೀನಾಮೆಯೊಂದಿಗೆ ಒಂದು ಹಂತಕ್ಕೆ ಬಂದಿದೆ. ಎಂ.ಎಸ್ ಬಿಲ್ಡಿಂಗ್ ನ ಕಾರಿಡಾರ್ ಗಳಲ್ಲಿ, ಮೀಡಿಯಾ ಕಚೇರಿಗಳಲ್ಲಿ ಹಾಗೂ ಅಧಿಕಾರಗಳ ಖಾಸಬಾತ್ ನಲ್ಲಿ ಲೋಕಾಯುಕ್ತ ಹಗರಣದ ಸುದ್ದಿ ಹರಿದಾಡುತ್ತಿತ್ತು.

 

ಕೃಷ್ಣಮೂರ್ತಿ ಎಂಬುವವರು Lok-1ದೂರು ಕೊಟ್ಟಿದ್ದಾರೆ ಎಂದಾಗಲೂ, ಅನೇಕರು ವಿಷಯ ಇಷ್ಟೊಂದು ಗಂಭೀರ ಇದೆ ಎಂದು ಪರಿಗಣಿಸಿರಲಿಲ್ಲ. ಆದರೆ, ಕೆಲ ಸುದ್ದಿ ಮಾಧ್ಯಮಗಳ ಆಸಕ್ತಿ ಜೊತೆಗೆ ಈ ವಿಚಾರದ ಕಾವನ್ನು ಹಾಗೇ ಕಾಪಾಡಿಕೊಂಡು ಬಂದವರು ಸಮಾಜ ಪರಿವರ್ತನ ಸಂಸ್ಥೆಯ ಎಸ್.ಆರ್. ಹಿರೇಮಠ ಹಾಗೂ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಾಯಕರು. ಈ ಪಕ್ಷದಲ್ಲಿ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಗೆದ್ದುಬಂದ ಒಬ್ಬೇ ಒಬ್ಬ ಜನಪ್ರತಿನಿಧಿ ಇಲ್ಲದಿದ್ದರೂ, ವಿಚಾರವನ್ನು ಜನರಿಗೆ ರವಾನಿಸಿ, ಲೋಕಾಯುಕ್ತ ಸಂಸ್ಥೆಯಲ್ಲಿ ನಡೆಯುತ್ತಿರುವ ಭಾನಗಡಿಗಳ ಬಗ್ಗೆ ಒಂದು ಅಭಿಪ್ರಾಯ ರೂಪಿಸುವಲ್ಲಿ ಶ್ರಮ ಪಟ್ಟರು. ಹಲವರು ಬಂಧನಕ್ಕೊಳಗಾದರು.
ಇಷ್ಟೆಲ್ಲಾ ಆದ ನಂತರ ಭಾಸ್ಕರ್ ರಾವ್ ರಾಜೀನಾಮೆ ನೀಡಿದರು. ಅದಕ್ಕಿಂತ ಮುಖ್ಯವಾದದ್ದು ಈ ಪ್ರಕರಣದ ತನಿಖೆ ಆರಂಭವಾಗಿ ಕೆಲವರಾದರೂ ಜೈಲುಪಾಲಾಗಿದ್ದು. ನ್ಯಾಯಾಂಗ ಬಂಧನದಲ್ಲಿರುವವರು ಜಾಮೀನಿಗಾಗಿ ಸುಪ್ರಿಂ ಕೋರ್ಟ್ ಗೆ ಮೊರೆ ಇಡುತ್ತಿದ್ದಾರೆ. ಮಾಧ್ಯಮ ಹಾಗೂ ಸಮಾಜದ ಬಗ್ಗೆ ಕಳಕಳಿ ಇರುವ ಕೆಲವರು ನಿಯಮಿತವಾಗಿ ಈ ಬಗ್ಗೆ ದನಿ ಎತ್ತದೇ ಹೋಗಿದ್ದರೆ ವಿಷಯ ಈ ಹಂತ ತಲುಪುತ್ತಿರಲಿಲ್ಲ.

 

 

ರಾಜೀನಾಮೆ ಅಂಗೀಕಾರ ಆದ ತಕ್ಷಣ ಕೆಲವೆಡೆ ರಾಹುಕಾಲ ಮುಗಿಯಿತು, ರಾಜ್ಯಕ್ಕೆ ಅಂಟಿದ್ದ ಭ್ರಷ್ಟ ಕಳಂಕ ತೊಲಗಿತು..ಎಂಬರ್ಥದ ಹೇಳಿಕೆಗಳು ಕೇಳಿಬಂದವು. ಆ ಕ್ಷಣಕ್ಕೆ catchy ಆಗಿರಲೆಂದು ಕೊಟ್ಟ ತಲೆಬರಹಗಳಿರಬಹುದು ಇವು. ಆದರೆ, ಅಂತLok-3ಹ ಮಹತ್ವದ್ದೇನೂ ಆಗಿಲ್ಲ ಎನ್ನುವುದು ಅಷ್ಟೇ ಸತ್ಯ. ಭ್ರಷ್ಟಾಚಾರ ನಿಗ್ರಹಕ್ಕೆಂದು ಇರುವ ಸಂಸ್ಥೆಗೆ ರಾಜಕಾರಣಿಗಳು ದುಡ್ಡು ಪಡೆದು ನೇಮಕ ಮಾಡುತ್ತಾರೆ. ಹಾಗೆ ನೇಮಕ ಆದವರಿಂದ ಆದಷ್ಟು ಲಾಭ ಪಡೆದು, ಅವರನ್ನು ರಕ್ಷಿಸಲು ಕೆಲವರು ಹೊರಡುತ್ತಾರೆ.

 

ಇಡೀ ಸಂಚಿನಲ್ಲಿ ಪಾಲ್ಗೊಂಡ ಪ್ರಮುಖರನ್ನು ಹೊರತು ಪಡಿಸಿ, ಸಣ್ಣ ಪುಟ್ಟವರಷ್ಟೆ ಕೇಸು ಹಾಕಿಸಿಕೊಂಡು ಜೈಲು ಸೇರುತ್ತಾರೆ. ಇಷ್ಟೆಲ್ಲಾ ಗೊತ್ತಾದ ಮೇಲೆ, ಎಂಥ ಮೂಢನಿಗೂ ಅನ್ನಿಸುವ ಸತ್ಯವೆಂದರೆ, ಅಶ್ವಿನ್ ರಾವ್ ಗಿಂತ ಅವರಪ್ಪ ಈ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ಆದರೆ ಅಶ್ವಿನ್ ರಾವ್ ಮಾಡಿದ ತಪ್ಪಿಗೆ ಅವರಪ್ಪ ಸಾಕ್ಷಿಯಂತೆ, ಹಾಗಾಗಿ ಅವರು ರಾಜಿನಾಮೆ ಕೊಟ್ಟರಷ್ಟೆ ಸಾಕು!
ಇಂತಹ ಭ್ರಷ್ಟನನ್ನು ತಂದು ಈ ಸ್ಥಾನಕ್ಕೆ ಕೂರಿಸಿದವರಲ್ಲಿ ಹಲವರ ಪಾತ್ರವಿದೆ. ಹಿಂದಿನ ಸರಕಾರದಲ್ಲಿದ್ದವರು, ಅವರ ಮೇಲೆ ಕೂತಿದ್ದ ಮತ್ತೊಬ್ಬ ತೂಕದ (ಅಲ್ಲಲ್ಲ..’ಭಾರ’ದ) ವ್ಯಕ್ತಿ, ನಂತರ ತಮ್ಮ ಅನುಕಾಲಕ್ಕಾಗಿ ಬಳಸಿಕೊಂಡ ಈಗಿನವರು -ಎಲ್ಲರದೂ ಪಾತ್ರವಿದೆ. ಆದರೆ, ಇವಾರಾರೂ ಜೈಲುಪಾಲಾಗಲಿಲ್ಲ. ಈ ನ್ಯಾಯಮೂರ್ತಿಯವರೂ ಜೈಲುಪಾಲಾಗುತ್ತಾರೇನೋ ಎಂಬ ಬಗ್ಗೆ ಖಾತ್ರಿಯಿಲ್ಲ.
ಇದುವರೆಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತಿತ್ತು. ಈ ಪ್ರಕರಣದಿಂದ ನ್ಯಾಯಾಂಗ ಹಾಗೂ ಪತ್ರಿಕೋದ್ಯಮದಲ್ಲಿನ ಭ್ರಷ್ಟತೆ ಬಗ್ಗೆ ಚರ್ಚೆ ಒಂದಿಷ್ಟು ವಿಸ್ತಾರ ಪಡೆದುಕೊಂಡಿತು. ಹೀಗೆ ಹಿಂದೆ ಬಳ್ಳಾರಿ ಗಣಿ ಬಗ್ಗೆ ವರದಿಗಳು ಬಂದಾಗ, ಲೋಕಾಯುಕ್ತ ತನಿಖೆ ಸಂದರ್ಭದಲ್ಲಿ ಗಣಿ ಉದ್ಯಮಿಗಳಿಂದ ಕೆಲ ಮಾಧ್ಯಮದವರಿಗೆ ನಿಯಮಿತವಾಗಿ ಹಣ ರವಾನೆಯಾಗಿದ್ದು ಸುದ್ದಿಯಾಗಿತ್ತು. ಆ ನಂತರ ಅದು ಚರ್ಚೆಯಾಗಲಿಲ್ಲ. ಲೋಕಾಯುಕ್ತ ವ್ಯಾಪ್ತಿಯಲ್ಲಿ ಪತ್ರಿಕೋದ್ಯಮ, ಪತ್ರಕರ್ತರು ಬರುವುದಿಲ್ಲ ಎಂಬ ಕಾರಣಕ್ಕೆ, ಆ ವಿಚಾರ ಅಲ್ಲಿಗೇ ನಿಂತಿತು. ಆ ಬಗ್ಗೆ ಆಗಲೇ ಒಂದು ವಿಚಾರಣೆ ನಡೆದು ತಪ್ಪಿತಸ್ಥರ ಮೇಲೆ ಕ್ರಮ ಬೇಡ, ಕನಿಷ್ಟ ಅಂತಹವರ ಬಗ್ಗೆ ಸಮಾಜದಲ್ಲಿ ಅಸಹ್ಯ ಹುಟ್ಟಿದ್ದರೆ ಸಾಕಿತ್ತು. ಅಂತಹದೊಂದು ಪ್ರಯತ್ನ ಈಗಲಾದರೂ ಆದರೆ ಒಳ್ಳೆಯದು.

 

ಅದರೊಟ್ಟಿಗೆ ನ್ಯಾಯಮೂರ್ತಿ ಎಂಬ ಕಾರಣಕ್ಕೆ ಭಾಸ್ಕರ್ ರಾವ್ ಯಾವುದೋ ನೆಪ ಮಾಡಿಕೊಂಡು ಪ್ರಕರಣದಲ್ಲಿ ಕೇವಲ ಸಾಕ್ಷಿಯಾಗಿ ಉಳಿದರೆ, ನ್ಯಾಯದಾನ ಪ್ರಕ್ರಿಯೆ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತದೆ.

Lok-2
ಜೊತೆಗೆ ಮುಂದೆ ಇಂತಹ ಪ್ರಮುಖ ಸ್ಥಾನಗಳಿಗೆ ಬರುವವರು ಎಂತಹವರಿರುತ್ತಾರೋ ಎಂಬ ಬಗ್ಗೆ ಅನುಮಾನಗಳಿವೆ. ಈಗಿನ “ಘನ” ಸರಕಾರ ಒಂದೇ ಹೆಸರನ್ನು ಪದೇ ಪದೇ ಕಳುಹಿಸಿ ಒತ್ತಾಯ ಹಾಕಿದ್ದು ಗೊತ್ತೇ ಇದೆ. ತಮ್ಮ ರಾಜಕೀಯ ಲಾಭಕ್ಕಾಗಿ ನೇಮಕ ಮಾಡುವುದಾದರೆ, ಅದರಿಂದ ಅನಾಹುತಗಳೇ ಹೆಚ್ಚು. ಆ ಕಾರಣಕ್ಕೆ ನ್ಯಾಯಾಂಗದ ಭ್ರಷ್ಟ ವ್ಯವಸ್ಥೆ ಬಗ್ಗೆಯೂ ಮುಕ್ತವಾಗಿ ಚರ್ಚೆಯಾಗಲಿ. ಯಾರೂ ಪ್ರಶ್ನಾತೀತರಾರಿ ಉಳಿಯಬಾರದು.