Daily Archives: January 6, 2016

ರಿಯಾಲಿಟಿ ಶೋ ಪ್ರಧಾನಿ!

ಗುರು, ಚಿಕ್ಕಮಗಳೂರು

ವಿಪರ್ಯಾಸ ಎಂದರೆ ಇದೇ ಇರಬೇಕು. ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಗೆ ಮೈಸೂರಿಗೆ ಬಂದ ಪ್ರಧಾನಿ ಸ್ವಾಮೀಜಿಯ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಿ ಬುದ್ಧಿಜೀವಿಗಳನ್ನು ಹೀಗಳೆಯುತ್ತಾರೆ. ತಾನು ಅದೇ ಊರಲ್ಲಿ ಭಾಗವಹಿಸುತ್ತಿರುವ ಇನ್ನೊಂದು ಕಾರ್ಯಕ್ರಮದಲ್ಲಿ ಎದುರು ನೋಡುತ್ತಿರುವುದು ಬುದ್ದಿಜೀವಿ ವಲಯವನ್ನು ಪ್ರತಿನಿಧಿಸುವ ವಿಜ್ಞಾನಿಗಳನ್ನು ಎನ್ನುವ ಪ್ರಜ್ಞೆಯೂ ಅವರಿಗಿರುವುದಿಲ್ಲ.

ಮಾರನೇ ದಿನ ಬೆಂಗಳೂರಿನಲ್ಲಿ ಯೋಗ ಕ್ಯಾಂಪ್ ಉದ್ಘಾಟಿಸುತ್ತಾರೆ. ಅದೇ ಹೊತ್ತಿಗೆ ಪಠಾಣಕೋಟ್ ನಲ್ಲಿ ಈ ದೇಶದ ಸೈನಿಕರು ಭಯೋತ್ಪಾದಕರ ಗುಂಡಿಗೆ ಅಸುನೀಗುತ್ತಿದ್ದಾರೆ, ಅಷ್ಟೇ ಅಲ್ಲ ಸೂಕ್ತ ರಕ್ಷಣಾತ್ಮಕ ವ್ಯವಸ್ಥೆ ಇಲ್ಲದೆ ಗ್ರನೇಡ್ ನಿಷ್ಕ್ರಿಯ ಗೊಳಿಸಲು ಹೋದ ವೀರನೂ ಮೃತಪಡುತ್ತಾನೆ. ಸಾವಿರಾರು modi-in-biharಭಕ್ತರನ್ನು ಹೊಂದಿರುವ ಈ ವ್ಯಕ್ತಿಗೆ ಮಾತ್ರ ಏನೂ ಅನ್ನಿಸುವುದಿಲ್ಲ. (ಈ ಘಟನೆಯೊಂದಿಗೆ ತಕ್ಷಣ ನೆನಪಾಗುವುದು 2009 ರಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೆರೆಯಿಂದ ಜಲಾವೃತಗೊಂಡಿದ್ದಾಗ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಮಂತ್ರಿಗಳು ಮೈಸೂರಿನ ಮಠವೊಂದರ ಆವರಣದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪಿ.ಮಹಮ್ಮದ್ ಬರೆದ ಪರಿಣಾಮಕಾರಿ ಕಾರ್ಟೂನ್ ಇನ್ನೂ ಅನೇಕರಿಗೆ ನೆನಪಿರಬಹುದು).

ದೇಶವೊಂದರ ನಾಯಕ, ಆತನ ಮನಸ್ಥಿತಿ, ಬುದ್ದಿವಂತಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನೇ ಪ್ರತಿನಿಧಿಸುತ್ತಿರುತ್ತವೆ. ದುರಂತವೆಂದರೆ ಸದ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಮನುಷ್ಯ ಪ್ರಚಾರದ ಹುಚ್ಚಿಗೆ ಮರುಳಾಗಿ ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳ ಸ್ಪರ್ದಿಗಳಂತೆ ವರ್ತಿಸುತ್ತಿರುವುದು. ಆ ಸ್ಪರ್ದಿಗಳಿಗೆ ಇರುವ ದೊಡ್ಡ ಮಟ್ಟದ ಚಾಲೆಂಜ್ ತಾವು ಸದಾ ಟಿ.ಆರ್.ಪಿ ಪುಲ್ಲರ್ಸ್ ಆಗಿರಬೇಕು. ಅಂತಹದೊಂದು ಪ್ರಯತ್ನದಲ್ಲಿ ಯಶಸ್ವಿಯಾದರೆ ಎಲಿಮಿನೇಟ್ ಆಗದಂತೆ ಬಹಳ ಕಾಲ ಉಳಿಯಬಹುದು. ಪ್ರಸ್ತುತ ಪ್ರಧಾನ ಮಂತ್ರಿಗೂ ಇಂತಹದೇ ಗೀಳು ಹತ್ತಿದಂತಿದೆ.

ನಮ್ಮಲ್ಲಿ ಬಹುತೇಕರು ಕೈಗಳ ಮೇಲೆ ಹಚ್ಚೆ ಹಾಕಿಸುತ್ತಾರೆ. ಹಾಗೆ ಹಾಕಿಸುವರಾರೂ ತಮ್ಮ ಹೆಸರನ್ನು ಬರೆಸಿಕೊಳ್ಳುವುದಿಲ್ಲ, ಬದಲಿಗೆ ತಮ್ಮ ಪ್ರೀತಿಪಾತ್ರರ ಹೆಸರನ್ನು ಸದಾ ಹಸಿರಾಗಿರಿಸಲು ಬರೆಸಿಕೊಳ್ಳುತ್ತಾರೆ. ಈಗ ಟಾಟ್ಟೂ ಕಾಲದಲ್ಲೂ ಅದೇ ಮನೋಭಾವ ಮುಂದುವರಿದಿದೆ. (ಇಲ್ಲಿ ಹೆಸರಿಗಿಂತ ಚಿತ್ರ ಮುನ್ನೆಲೆಗೆ ಬಂದಿರಬಹುದು). ಆದರೆ ತನ್ನ ಹೆಸರನ್ನೇ ಅಚ್ಚಾಗಿಸಿರುವ ಅಂಗಿಯನ್ನು ಪ್ರಮುಖ ರಾಜತಾಂತ್ರಿಕ ಮಾತುಕತೆ (ಒಬಾಮಾ ಭೇಟಿ) ಸಂದರ್ಭದಲ್ಲಿ ಹಾಕಿಕೊಂಡ ಪ್ರಧಾನಿ ಮನಸ್ಥಿತಿ ನೆನಸಿಕೊಂಡರೆ ರೇಜಿಗೆ ಹುಟ್ಟುತ್ತೆ.

ಮೊನ್ನೆ ಮೊನ್ನೆವರೆಗೆ ಪಾಕಿಸ್ತಾನಕ್ಕೆ ‘ಲವ್ ಲೆಟರ್ಸ್ ಬರೆಯುವುದನ್ನ ನಿಲ್ಲಿಸಬೇಕು’ ಎಂದು ಗುಟುರು ಹಾಕುತ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ಪಾಕ್ ಗೆ ಭೇಟಿ ನೀಡುತ್ತಾರೆ. ಸೌಹಾರ್ದ ವಾತಾವರಣಕ್ಕೆ ಅಂತಹದೊಂದು ಪ್ರಯತ್ನ ಶ್ಲಾಘನೀಯವೇ, ಆದರೆ, ಅದರ ಹಿಂದಿನ ಬದ್ಧತೆ ಪ್ರಶ್ನಾರ್ಹ. ಸಂಗೀತಗಾರರು, ಕ್ರಿಕೆಟಿಗರು ಎರಡೂ ದೇಶಗಳಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ವಿರೋಧ ವ್ಯಕ್ತ ಪಡಿಸುವ ಪರಿವಾರಕ್ಕೆ ನಿಷ್ಠನಾಗಿರುವ ವ್ಯಕ್ತಿಯ ಬದ್ಧತೆ ಪ್ರಶ್ನಿಸುವುದು ಸಹಜ. ಅದರಾಚೆಗೆ, ಇದು ಕೇವಲ ಪ್ರಚಾರಕ್ಕೆ ಜೋತು ಬಿದ್ದವರ ಸ್ಟ್ರಾಟಜಿಯಾಗಿದ್ದರೆ (ಮತ್ತದೇ ಬಿಗ್ ಬಾಸ್ ಸ್ಪರ್ಧಿಯಂತೆ) ನಾಚಿಕೆಗೇಡು.
ಇವರ ಪ್ರಚಾರದ ಗೀಳಿಗೆ ಇನ್ನೊಂದು ಉದಾಹರಣೆ ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿ ನಡೆಸುವ ಎನ್.ಆರ್.ಐ ಸಭೆಗಳು. ಬಿಹಾರದಲ್ಲಿ ಸೋತು ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾದಾಗ, ಇಲ್ಲಿ ಕಳೆದುಕೊಂಡದ್ದನ್ನು ಹುಡುಕಲು ಲಂಡನ್ ನಲ್ಲಿ ಪ್ರಯತ್ನಿಸುತ್ತಾರೆ.

ಭಾರತಕ್ಕೆ ಹೂಡಿಕೆ ತರುವ ಪ್ರಯತ್ನವಾಗಿ ಅವರು ಅನೇಕ ಗ್ಲೋಬಲ್ ನಾಯಕರನ್ನು ಭೇಟಿ ಮಾಡುತ್ತಿರುವ ಸುದ್ದಿಗಳು ವಿದೇಶಿ ಪ್ರವಾಸದ ಹೊತ್ತಿನಲ್ಲಿ ಬಂದಿವೆ. ಗೂಗಲ್, ಮೈಕ್ರೋಸಾಫ್ಟ್ ಫೇಸ್ ಬುಕ್..ಹೀಗೆ ಹಲವು ಸಂಸ್ಥೆಗಳ ಮುಖ್ಯಸ್ಥರನ್ನು ಅವರು ಭೇಟಿ ಮಾಡಿದ್ದಾರೆ. ಅದರ ಹಿಂದೆಯೂ ಕೂಡ ದೂರದೃಷ್ಟಿಗಿಂತ ಪ್ರಚಾರದ ಗೀಳೇ ಪ್ರಮುಖವಾಗಿ ಕಾಣುತ್ತಿದೆ. ಮೇಲೆ ಹೇಳಿರುವ ಯಾವ ಕಂಪನಿಗಳೂ, ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಸಮಾಧಾನಕಾರ ಪರಿಹಾರ ನೀಡಲಾರವು. ಅವರು ಇಲ್ಲಿಯ ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಅಳವಡಿಸಬಹುದು, ಫ್ರೀ-ಬೇಸಿಕ್ಸ್ ಹೆಸರಿನಲ್ಲಿ ಮಂಗಮಾಡಬಹುದು. ಆದರೆ ನಿರುದ್ಯೋಗ ಸಮಸ್ಯೆ ನೀಗಬಲ್ಲವಂತಹವು ದೊಡ್ಡ ದೊಡ್ಡ ಉದ್ದಿಮೆಗಳು.

ಲಕ್ಷ್ಮಿ ಮಿತ್ತಲ್ ಬಳ್ಳಾರಿ ಸಮೀಪ ಸ್ಟೀಲ್ ಪ್ಲಾಂಟ್ ಹಾಕುವ ಯೋಜನೆ ಬಹಳ ದಿನಗಳಿಂದ ಪೂರ್ಣಗೊಂಡಿಲ್ಲ. ಅಂತಹದೊಂದು ಉದ್ದಿಮೆ ಬಂದರೆ, ನೂರಾರು ಕೈಗಳಿಗೆ ಕೆಲಸ ಸಿಗುತ್ತೆ. ಫೇಸ್ ಬುಕ್ ನವರು ಬಂದು ಇಲ್ಲಿ ಕನಿಷ್ಟ ಪಕ್ಷ ಒಂದು ಪುಸ್ತಕ ಅಂಗಡಿಯನ್ನೂ ಇಡುತ್ತಾರೆಂದು ನಿರೀಕ್ಷಿಸಲಾಗದು. ಹೀಗಿರುವಾಗ ಕೇವಲ ಪ್ರಚಾರ ಪ್ರೇರಿತ ಸ್ಟ್ರಾಟಜಿಗಳನ್ನು ಅನುಸರಿಸಿ ಬಿಗ್ ಬಾಸ್ ಸ್ಪರ್ಧಿಯೊಬ್ಬ ಟಿ.ಆರ್.ಪಿ ರೇಸ್ ನಲ್ಲಿ ಕೊನೆತನಕ ಉಳಿದುಕೊಂಡು ದುಡ್ಡು ಗೆಲ್ಲಬಹುದು. ಆದರೆ ಪ್ರಜಾಪ್ರಭುತ್ವದಲ್ಲಿ ಹಾಗಾಗುವುದಿಲ್ಲ. ಜನರನ್ನು ಮರಳು ಮಾಡಲಾಗದು. ಬ್ಯಾಂಕ್ ಅಕೌಂಟ್ ತೆರೆದಿರುವ ಮಂದಿ ಆಗಾಗ ಬ್ಯಾಂಕ್ ಗಳಿಗೆ ಭೇಟಿ ನೀಡಿ 15 ಲಕ್ಷ ರೂ ಯಾವಾಗ ಬರುತ್ತೆ ಎಂದು ಕೇಳುತ್ತಿದ್ದಾರೆ.