ಸರ್ಕಾರೇತರ ವಲಯಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯ


– ಶ್ರೀಧರ್ ಪ್ರಭು


 

ಸುಮಾರು ವರ್ಷಗಳಿಂದ ಜನಪರ ಕಾಳಜಿಯ ಪತ್ರಕರ್ತ ಪಿ. ಸಾಯಿನಾಥ್ ತಮ್ಮ ಲೇಖನಗಳಲ್ಲಿ ನಮ್ಮ ದೇಶದ ಸರಕಾರಗಳು ಬೃಹತ್ ಉದ್ದಿಮೆಗಳಿಗೆ ನೀಡಿರುವ ಸಬ್ಸಿಡಿ ಹಣದ ಬಗ್ಗೆ ಬರೆಯುತ್ತಿದ್ದಾರೆ. ಜುಲೈ ೨೮, ೨೦೧೪ ರಲ್ಲಿ ಔಟ್ಲುಕ್ ಪತ್ರಿಕೆಗೆ ಬರೆದ ‘How Much Can We Forgo To India Inc?’ ಎಂಬ ತಮ್ಮ ಲೇಖನದಲ್ಲಿ ಒಂದು ಆಸಕ್ತಿಕರ ವಿಚಾರವನ್ನು ಸಾಯಿನಾಥ್ ಬರೆದರು:

ನಮ್ಮ ದೇಶದ ಉದ್ಯೋಗಪತಿಗಳಿಗೆ ಸರಕಾರ ಕೊಟ್ಟ ಸಬ್ಸಿಡಿ ಹಣ ಸರಾಸರಿ ಪ್ರತಿ ಒಂದು ಗಂಟೆಗೆ ಏಳು ಕೋಟಿ ರೂಪಾಯಿಗಳು, ಪ್ರತಿ ದಿನಕ್ಕೆ ೧೬೮ ರೂಪಾಯಿಗಳು ಹಾಗೆ ಒಟ್ಟಾರೆ ೨೦೧೩-೨೦೧೪ ರ ಅರ್ಥಿಕ ವರ್ಷದಲ್ಲಿ ನಮ್ಮ ದೇಶದ ಸರಕಾರ ಬಂಡವಾಳಶಾಹಿಗಳಿಗೆ ಒಟ್ಟಾರೆಯಾಗಿ ಕೊಟ್ಟ ನೇರ ಸಬ್ಸಿಡಿ ಮೊತ್ತ ರೂ.೫.೩೨ ಲಕ್ಷ ಕೋಟಿಗಳು (ರೂ. ೫,೩೨,೦೦೦,೦೦೦೦೦೦೦). ಈ ಮೊತ್ತವು ೨೦೧೦-೨೦೧೧ ರ ಅರ್ಥಿಕ ವರ್ಷದಲ್ಲಿ ರೂ. ೩.೭೩ ಲಕ್ಷ ಕೋಟಿ ರೂಪಾಯಿ (ರೂ. ೫,೩೨,೦೦೦,೦೦೦೦೦೦೦) ಆಗಿದ್ದಿತು. ಯು ಪಿ ಎ ಸರಕಾರ ಆಡಳಿತದಲ್ಲಿದ್ದ 2005-06 ರಿಂದ 2013-14 ವರೆಗಿನ ಅರ್ಥಿಕ ವರ್ಷಗಳಲ್ಲಿ ಒಟ್ಟಾರೆಯಾಗಿ ೩೬.೫ ಲಕ್ಷ ಕೋಟಿ ಗಳಷ್ಟು ಔದ್ಯಮಿಕ ಸಾಲ ಮನ್ನಾ ಮಾಡಲಾಗಿದೆ.

ನಮ್ಮ ದೇಶದಲ್ಲಿ ಔದ್ಯೋಗಿಕ ಪ್ರಗತಿ, ನಿರುದ್ಯೋಗ ನಿವಾರಣೆ ಇತ್ಯಾದಿ ಸಾಧ್ಯವಾಗಿದ್ದರೆ outlookindia-how-much-can-we-forgo-to-india-inc-psainathಉದ್ದಿಮೆಗಳಿಗೆ ಸಬ್ಸಿಡಿ ಕೊಡುವುದನ್ನು ಸಮರ್ಥಸಿಕೊಳ್ಳಲು ಸಾಧ್ಯವಿದೆ. ಆದರೆ ಇವ್ಯಾವೂ ಸಾಧ್ಯವಾಗಿಲ್ಲ. ೨೦೧೧-೧೪ ವರೆಗಿನ ಮೂರು ಅರ್ಥಿಕ ವರ್ಷಗಳಲ್ಲಿ ಸುಮಾರು ೧.೬೭ ಲಕ್ಷ ಕೋಟಿಗಳಷ್ಟು ಹಣವನ್ನು ಬಂಗಾರ ಬೆಳ್ಳಿಗಳ ಮೇಲಿನ ಕಸ್ಟಮ್ ಸುಂಕ ಮನ್ನಾ ರೂಪದಲ್ಲಿ ಕೊಡಲಾಗಿದೆ. ಬೆಳ್ಳಿ ಬಂಗಾರ ಕೊಳ್ಳಲು ಸಬ್ಸಿಡಿ ಕೊಟ್ಟರೆ ಉದ್ಯೋಗಗಳು ಹುಟ್ಟಿಕೊಳ್ಳುವುದಿಲ್ಲ. ಇದರಿಂದ ಬಂಡವಾಳಶಾಹಿಗಳ ಹೊಟ್ಟೆ ಮಾತ್ರ ತುಂಬುತ್ತದೆ.

ತಳ ಸಮುದಾಯಗಳ ಜಮೀನು ಮತ್ತು ಬದುಕು ಕಿತ್ತುಕೊಂಡು ಜನರು ದುಡಿದ ಹಣವನ್ನು ಅವ್ಯಾಹತವಾಗಿ ಭಿಕ್ಷೆರೂಪದಲ್ಲಿ ಸ್ವೀಕರಿಸುತ್ತಿರುವ ಕಾರ್ಪೊರೇಟ್ ವರ್ಗಕ್ಕೆ ಜನರಿಗೆ ಈವರೆಗೆ ಯಾವುದೇ ಪಾಪ ಪ್ರಜ್ಞೆ ಕಾಡಿಲ್ಲ. ಕಾರ್ಪೊರೇಟ್ ವಲಯಗಳಲ್ಲಿ ತಳ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಈವರೆಗೆ ಯಾವ ಸರಕಾರಗಳಿಗೂ ಎನ್ನಿಸಿಲ್ಲ. ಜನರ ಹಣವನ್ನು ಉದ್ದಿಮೆದಾರರಿಗೆ ಸಬ್ಸಿಡಿ ರೂಪದಲ್ಲಿ ಕೊಡುವಾಗ ಯಾವ ಹಂತದಲ್ಲಾದರೂ ಸರಿ ದುಡಿಯುವ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಯಾವ ಸರಕಾರಗಳಿಗೂ ಎನ್ನಿಸಲಿಲ್ಲ.

ಒಂದು ಉದ್ದಿಮೆಯ ಒಡೆತನ ಹೇಗೆ ನಿರ್ಧರಿತವಾಗುತ್ತದೆ? ಆ ಉದ್ದಿಮೆಯಲ್ಲಿ ಯಾರ ಹಣ ಹೆಚ್ಚು ಹೂಡಿಕೆಯಾಗಿದೆಯೋ ಅವರೇ ಅದರ ಮಾಲೀಕರು. ಯಾವ ರೀತಿಯಲ್ಲಿ ನೋಡಿದರೂ ನಮ್ಮ ಉದ್ದಿಮೆಗಳಲ್ಲಿ ಸರಕಾರದ ಮತ್ತು ಸರಕಾರಿ ವಲಯದ ಬ್ಯಾಂಕುಗಳ ಹಣವೇ ಹೂಡಿಕೆಯಾಗಿದೆ. ನಮ್ಮ ಮನೆಗಳಿಗೆ ಹಾಕಿಸಿಕೊಳ್ಳುವ ಸೌರ ವಿದ್ಯುತ್ ಯಂತ್ರಗಳನ್ನು ಅಳವಡಿಸಲು Industrial_Mangaloreಹತ್ತು ಸಾವಿರ ಸಾಲ ಕೊಡುವಾಗ ಕೂಡ ಈ ಬ್ಯಾಂಕುಗಳು ನೂರಾರು ಪುಟಗಳಷ್ಟು ಕಾಗದದ ಮೇಲೆ ಏನೇನೂ ಬರೆಸಿದುಕೊಂಡು ನಮ್ಮ ಸಹಿ ಹಾಕಿಸುತ್ತವೆ. ಕಣ್ಣ ಮುಚ್ಚಿ ಸಹಿ ಹಾಕುವುದು ಬಿಟ್ಟರೆ ನಮ್ಮ ಬಳಿ ಯಾವುದೇ ಅನ್ಯ ಮಾರ್ಗವಿರುವುದಿಲ್ಲ. ಉದ್ದಿಮೆದಾರರಿಗೆ ಇಷ್ಟೊಂದು ಷರತ್ತು ಕರಾರುಗಳನ್ನು ವಿಧಿಸುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಈ ಉದ್ದಿಮೆಗಳಲ್ಲಿ ತಳಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಒಂದೇ ಒಂದು ಕರಾರು ವಿಧಿಸಿಲ್ಲ. ಪ್ರತಿ ಸಾಲ ಪತ್ರದಲ್ಲಿ ಒಂದೇ ಒಂದು ಇಂಥಹ ಕರಾರು ವಿಧಿಸಿದರೆ ಯಾವ ಸಾಲಗಾರ ಉದ್ದಿಮೆದಾರ ಅದನ್ನು ನಿರಾಕರಿಸಲು ಸಾಧ್ಯ? ಅದು ಹೋಗಲಿ ಪ್ರಾತಿನಿಧ್ಯ ಕಲ್ಪಿಸಿದರೆ ಬಡ್ಡಿ ದರದಲ್ಲಿ ವಿನಾಯತಿ ನೀಡುವ ಪ್ರಸ್ತಾವನೆ ಇದ್ದರೆ ಯಾವ ಉದ್ದಿಮೆದಾರ ಇಂದು ಪ್ರಾತಿನಿಧ್ಯ ಕಲ್ಪಿಸುವುದಿಲ್ಲ. ಒಬ್ಬ ಅಥವಾ ಕೆಲವೇ ದಲಿತ-ಹಿಂದುಳಿದ ಉದ್ದಿಮೆದಾರರಿಗೆ ನೇರ ಸಬ್ಸಿಡಿ ಕೊಡುವ ಬದಲು ಒಬ್ಬ ಉದ್ದಿಮೆದಾರ ಎಷ್ಟು ದಲಿತ- ಹಿಂದುಳಿದ ವರ್ಗದ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾನೆ/ಳೆ ಎಂಬುದರ ಮೇಲೆ ಸಬ್ಸಿಡಿ ನಿರ್ಧಾರಿತವಾದರೆ ಹೆಚ್ಚು ಸೂಕ್ತ.

ಒಟ್ಟಿನಲ್ಲಿ ಸರಕಾರ ಮನಸ್ಸು ಮಾಡಿದರೆ ಯಾವುದೇ ಕಾನೂನು ಸರ್ಜರಿ ಅಗತ್ಯವಿಲ್ಲದೇ ಸೂಕ್ತ ಪ್ರಾತಿನಿಧ್ಯ ಸುಲಭ ಸಾಧ್ಯ. ಇದ್ದ ಕಾನೂನಿಗೆ ಸಣ್ಣ ಪುಟ್ಟ ಬದಲಾವಣೆ ಮಾಡಿದರೆ ಹೆಚ್ಚಿನದನ್ನು ಕೆಲವೇ ವರ್ಷಗಳಲ್ಲಿ ಸಾಧಿಸಬಹುದು. ಪ್ರಾತಿನಿಧಿಕವಾಗಿ ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸೋಣ:

 • ಒಂದು ಕಂಪನಿ ಮತ್ತು ಒಂದು ಸಹಕಾರ ಸಂಘಕ್ಕೆ ಅತ್ಯಂತ ಹತ್ತಿರದ ‘ಸಂಬಂದಿ’ ಎಂದು ಹೇಳಬಹುದು. ಹಾಗಾಗಿ ಕಾರ್ಪೊರೇಟ್ ವಲಯದ ಪ್ರಾತಿನಿಧ್ಯದ ಸೂತ್ರವನ್ನು ಹೊಸದಾಗಿ ಹುಡುಕಿಕೊಳ್ಳುವ ಅಗತ್ಯವಿಲ್ಲ. ಸಹಕಾರ ಸಂಘಗಳಲ್ಲಿ ಕಲ್ಪಿಸಿದ ಮಹಿಳಾ ಮತ್ತು ದಲಿತ ಪ್ರಾತಿನಿಧ್ಯದ ಸೂತ್ರವನ್ನೇ ಕಂಪನಿಗಳಿಗೆ ವಿಸ್ತರಿಸಬಹುದು. ಸಹಕಾರ ಸಂಘಗಳಿಗೆ ಸಂಬಂದಿಸಿದ ಹೊಸ ಕಾನೂನನ್ನು ತಂದ ಸಂದರ್ಭದಲ್ಲಿ ಸಂವಿಧಾನದಲ್ಲಿ ಸೂಕ್ತ ಪರಿಷ್ಕರಣೆ ಮಾಡಲಾಯಿತು. ಇದೇ ಮಾದರಿಯನ್ನು ಕಂಪನಿವಲಯಕ್ಕೆ ವಿಸ್ತರಿಸುವುದು ಸುಲಭ ಸಾಧ್ಯ. ಹಾಗೆ ನೋಡಿದರೆ ಕಂಪನಿಗಳಿಗೆ ಹೋಲಿಸಿದರೆ ಸಾಮಾಜಿಕ ಮೇಲ್ವರ್ಗಗಳ ಹಿಡಿತದಲ್ಲಿರುವ ಸಹಕಾರ ಸಂಘಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವುದೇ ಅತ್ಯಂತ ಕಷ್ಟಕರವಾಗಿತ್ತು. ಇದು ಸಾಧ್ಯವಾದ ಮೇಲೆ ಕಂಪನಿಗಳಲ್ಲಿ ಪ್ರಾತಿನಿಧ್ಯ ಸುಲಬವಾಗಿ ಸಾಧಿಸಬಹುದು.
 • ೨೦೧೩ ರಲ್ಲಿ ಬಂದ ಹೊಸ ಕಂಪನಿ ಕಾಯಿದೆಯ ಪ್ರಕಾರ ಐನೂರು ಕೋಟಿಗಳಷ್ಟು ನಿವ್ವಳ ಸಂಪತ್ತಿರುವ (net worth) ಅಥವಾ ಒಂದು ಸಾವಿರ ಕೋಟಿಗಳಷ್ಟು ವಾರ್ಷಿಕ ವಹಿವಾಟಿರುವ (turnover) ಒಂದು ಕಂಪನಿ ತನ್ನ ಕಳೆದ ಮೂರು ವರ್ಷಗಳ ನಿವ್ವಳ ಆದಾಯದ ೨% ಮೊತ್ತವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಖರ್ಚು ಮಾಡಲೇಬೇಕು. ಇದೇ ಕಾನೂನಿನಡಿಯಲ್ಲಿ ತಮ್ಮ ಕಂಪನಿಗಳಲ್ಲಿ ಎಲ್ಲ ಹಂತದಲ್ಲೂ, ಅದರಲ್ಲೂ ಉನ್ನತ ಹುದ್ದೆಗಳಲ್ಲಿ ಸೂಕ್ತ ಸಾಮಾಜಿಕ ಪ್ರಾತಿನಿಧ್ಯ ಕಲ್ಪಿಸಿದ ಕಂಪನಿಗಳಿಗೆ ಸಾಮಾಜಿಕ ಜವಾಬ್ದಾರಿಯಿಂದ ಸೂಕ್ತ ವಿನಾಯತಿ ಕಲ್ಪಿಸಿದರೆ ಅನೇಕ ಕಂಪನಿಗಳು ತಾವೇ ಮುಂದೆ ಬಂದು ಸೂಕ್ತ ಪ್ರಾತಿನಿಧ್ಯ ಕಲ್ಪಿಸಬಹುದು.
 • ನಮ್ಮ ದೇಶದ ಎಲ್ಲಾ ಬ್ಯಾಂಕುಗಳು ನಡೆಯುವದು ರಿಸರ್ವ್ ಬ್ಯಾಂಕ್ ನೀಡುವ ಪರವಾನಗಿಯ ಮೇಲೆ. ಹೀಗಾಗಿ ಬ್ಯಾಂಕುಗಳನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕುಗಳು ಎಂದು ವಿಂಗಡಣೆ ಮಾಡುವುದು ಅಸಮಂಜಸ. ೧೬-೧೨-೨೦೧೫ ರಲ್ಲಿ ಬಂದ ರಿಸರ್ವ್ ಬ್ಯಾಂಕ್ ಮತ್ತು ಜಯಂತಿಲಾಲ್ ಮಿಸ್ತ್ರಿ ಪ್ರಕರಣದಲ್ಲಿ ಖಾಸಗಿ ಬ್ಯಾಂಕುಗಳೂ ಸೇರಿದಂತೆ ಎಲ್ಲ ಬ್ಯಾಂಕುಗಳೂ ಸಾರ್ವಜನಿಕ ಪ್ರಾಧಿಕಾರಗಳಾಗಿದ್ದು (Public Authority) ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕ ಹಿತಾಸಕ್ತಿ ಇರುವ ಯಾವುದೇ ಮಾಹಿತಿಯನ್ನು ಕೊಡಲೇಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹೀಗಾಗಿ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಎಲ್ಲ ಬ್ಯಾಂಕುಗಳನ್ನೂ ಸಮಾನವಾಗಿ ನೋಡಬೇಕಿದೆ.
 • ವಿದ್ಯುತ್ ಉತ್ಪಾದನೆ, ನೀರಾವರಿ, ವಿಮಾನ ನಿಲ್ದಾಣ ನಿರ್ಮಾಣ, ಹೆದ್ದಾರಿ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯ ಯೋಜನೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಯೋಗದ (Private Public Partnership – PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ನಿಜಕ್ಕೂ ನೋಡಿದರೆ ಖಾಸಗಿ ಸಹಭಾಗಿತ್ವ ಇಲ್ಲಿ ನಗಣ್ಯ. ಯೋಜನೆಗಳಿಗೆ ಬೇಕಾದ ಭೂಮಿಯನ್ನು ಸರಕಾರವೇ ಕೊಡಮಾಡುತ್ತದೆ. ಈ ಯೋಜನೆಗಳಲ್ಲಿ ಭೂಮಿಯೇ ೨೦%-೩೦% ಮೂಲ ಬಂಡವಾಳವೆಂದು ತೋರಿಸಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕು ಮತ್ತು ಹಣಕಾಸು ಸಂಸ್ಥೆ ಗಳಿಂದ ೭೦%-೮೦% ರಷ್ಟು ಸಾಲ ಪಡೆಯಲಾಗುತ್ತದೆ. ಅದರೊಂದಿಗೆ ಈ ಯೋಜನೆಗಳಿಗೆ ಕಡಿಮೆ ಬಡ್ಡಿ ದರದ ಸಾಲ, ತೆರಿಗೆ ವಿನಾಯತಿ ರೂಪದಲ್ಲಿ ಪರೋಕ್ಷ ಮತ್ತು ಪ್ರತ್ಯಕ್ಷ ರೂಪದಲ್ಲಿ ಸಾಕಷ್ಟು ಹಣಕಾಸಿನ ನೆರವು ನೀಡುತ್ತದೆ. ಅನೇಕ ಬಾರಿ ಈ ಯೋಜನೆಗಳಿಗೆ ಸರಕಾರವೇ ಮುಖ್ಯ ಗ್ರಾಹಕನಾಗಿ ಹೆಚ್ಚಿನ ಬೆಂಬಲ ಬೆಲೆ ಕೊಟ್ಟು ಸಿದ್ಧ ವಸ್ತುಗಳನ್ನು ಖರೀದಿ ಮಾಡುತ್ತದೆ. ಉದಾಹರಣೆಗೆ ನವೀಕೃತ ಮೂಲಗಳ ವಿದ್ಯುತ್ ಉತ್ಪಾದನೆ ಯೋಜನೆಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಸರಕಾರವೇ ತನ್ನ ಒಡೆತನದ ಕಂಪನಿಗಳ ಮೂಲಕ ಹೆಚ್ಚಿನ ಬೆಲೆಗೆ ಖರೀದಿಸುತ್ತದೆ, ಪವನ ವಿದ್ಯುತ್ ಮತ್ತು ಸೌರ ಶಕ್ತಿ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ತಿಗೆ ಸಾಮಾನ್ಯವಾಗಿ ೩೦-೩೦% ಹೆಚ್ಚಿನ ದರ ನಿಗದಿಯಾಗಿರುತ್ತದೆ. ಇದನ್ನು ಸರಕಾರವೇ ತನ್ನ ಕಂಪನಿಗಳ ಮುಖೇನ ಖರೀದಿಸಿ ಯೋಜನೆಗಳಿಗೆ ೩೦ ವರ್ಷಗಳವರೆಗೆ ದರ ಖಾತರಿ ನೀಡುತ್ತದೆ. ಸರಕಾರಿ ಒಡೆತನದ ಸಂಸ್ಥೆಗಳೇ ಈ ಯೋಜನೆಗಳಿಗೆ ಬೇಕಾಗುವ ನಾನಾ ಪರವಾನಗಿಗಳನ್ನು ತೆಗೆಸಿಕೊಡುತ್ತವೆ. ಕಂದಾಯ ಇಲಾಖೆಯ ಸರಕಾರಿ ಭೂಮಿ ಅಥವಾ ಅರಣ್ಯ ಭೂಮಿಯನ್ನು ಉಪಯೋಗಿಸಿಕೊಂಡು ಇಷ್ಟೆಲ್ಲಾ ಸವಲತ್ತುಗಳನ್ನೂ ಪಡೆಯುವ ಈ ಸಂಸ್ಥೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಿ ಉದ್ಯೋಗ ಮತ್ತು ಒಡೆತನಗಳಲ್ಲಿ ತಳ ಸಮುದಾಯಗಳು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಿದ ಉದಾಹರಣೆಗಳೇ ಇಲ್ಲ.
 • ಸರಕಾರಿ ಮಾನ್ಯತೆ ಮತ್ತು ಅನುದಾನ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ. ಸಮಾನ ಶಿಕ್ಷಣವನ್ನು ಜಾರಿಗೊಳಿಸಿದ ಸರಕಾರ (ಕನಿಷ್ಟ ಕಾಗದದಲ್ಲಾದರೂ ಸರಿ) ಪ್ರಾತಿನಿಧ್ಯವನ್ನು ಜಾರಿಗೊಳಿಸದಿರುವುದಕ್ಕೆ ಯಾವ ಸಕಾರಣಗಳೂ ಇಲ್ಲ. ಪ್ರಾಥಮಿಕ ಶಿಕ್ಷಣ ಒಂದು ಮೂಲಭೂತ ಹಕ್ಕು ಎಂದಾದರೆ ಅದನ್ನು ಒದಗಿಸುವ ಜವಾಬ್ದಾರಿಯನ್ನು ಹೊತ್ತಿರುವ ವಿದ್ಯಾ ಸಂಸ್ಥೆಗಳು ಸರಕಾರದ ಕೆಲಸವನ್ನೇ ಮಾಡುತ್ತಿವೆ. ಅದಕ್ಕಾಗಿ ಸರಕಾರ ಅನುದಾನವನ್ನೂ ಕೊಡುತ್ತಿದೆ ಎಂದಾದರೆ ಅವು ಸರಕಾರದ ನಿಯಂತ್ರಣಕ್ಕೆ ಒಳಪಡಲೇಬೇಕಲ್ಲವೇ?
 • ನಮ್ಮ ದೇಶದ ಮೂರು ಔದ್ಯೋಗಿಕ ಸಂಘಟನೆಗಳಾದ ಸಿಐಐ, ಫಿಕ್ಕಿ ಮತ್ತು ಅಸ್ಹೊಚೆಮ್ ಗಳು ಪ್ರಾತಿನಿಧ್ಯದ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸುತ್ತಲೇ ತಾವೇ ಸ್ವಯಂ ಪ್ರೇರಿತವಾಗಿ ದಲಿತ ಪ್ರಾತಿನಿಧ್ಯ ಕೊಡುವುದಾಗಿ ಹೇಳಿಕೊಂಡು ಮುಂದೆ ಬಂದಿವೆ. ಪ್ರಾತಿನಿಧ್ಯವನ್ನು ಕಲ್ಪಿಸಲು ತಾವೇ ಸ್ವಯಂ ಪ್ರೇರಿತ ನಿಯಮಗಳನ್ನು (Voluntary Code of Conduct) ಮಾಡಿಕೊಂಡಿರುವುದಾಗಿ ಘೋಷಿಸಿ ೨೦೧೪ ಡಿಸೆಂಬರನಲ್ಲಿ ಅವುಗಳೇ ಕೆಲವು ಅಂಕಿ ಅಂಶಗಳ ಪ್ರಕಟಿಸಿ ತಾವು ಕೈಗೊಂಡ ಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿವೆ. ಅವರೇ ಘೋಶಿಸಿಕೊಂಡಂತೆ ದೇಶದ ಮೂರೂ ಬೃಹತ್ ಸಂಘಟನೆಗಳು ಸೇರಿ ದೇಶದ ಎಂಟು ಜಿಲ್ಲೆಗಳನ್ನು ದತ್ತು ಪಡೆದಿವೆ. ೬೭೬ ಜಿಲ್ಲೆಗಳಿರುವ ಈ ಬೃಹತ್ ದೇಶದಲ್ಲಿ ಏಳೆಂಟು ಜಿಲ್ಲೆಗಳಲ್ಲಿ ಕೆಲಸ ಮಾಡಿದರೆ ಸಾಕೇ? ಇನ್ನು ಉದ್ದಿಮೆಗಳಿಗೆ ಸ್ವಯಂ ನಿಯಂತ್ರಣ ಸಾಧ್ಯವಾಗಿರುತ್ತಿದ್ದರೆ ನಮ್ಮ ದೇಶದಲ್ಲಿ ಕಾನೂನು ಕಟ್ಟಳೆಗಳು ಬೇಕಿತ್ತೇ? ಉದ್ದಿಮೆಗಳು ಸ್ವಯಂ ಪ್ರೇರಣೆಯಿಂದ ಸರಿಯಾದ ಸಮಯದಲ್ಲಿ ಕಾನೂನು ರೀತ್ಯಾ ತೆರಿಗೆ, ಸಾಲಪಾವತಿ ಮತ್ತು ವಿದ್ಯುತ್ ದರ ಕಟ್ಟಿದ್ದರೆ ನಮ್ಮ ದೇಶ ಇಂದು ಅಮೇರಿಕಾವನ್ನೂ ಮೀರಿಸುತ್ತಿತ್ತು. ಹೀಗಾಗಿ ಪ್ರಾತಿನಿಧ್ಯದ ವಿಚಾರದಲ್ಲಿ ಸ್ವಯಂ ನಿಯಂತ್ರಣದಿಂದ ಸಾರ್ವಜನಿಕ ನಿಯಂತ್ರಣಕ್ಕೆ ನಾವು ಸಾಗಬೇಕಿದೆ.
 • ಮಠಮಾನ್ಯಗಳಿಗೆ ಸಾಕಷ್ಟು ಸರಕಾರಿ ಅನುದಾನ ಸಂದಿದೆ. ಧರ್ಮಬೇದವಿಲ್ಲದೆ ಸರಕಾರದ ಹಣ / ಅನುದಾನ ಪಡೆಯುತ್ತಿರುವ ಎಲ್ಲ ಜಾತಿ ಧರ್ಮಗಳ ಮಠ- ಮದರಸ- ಇಗರ್ಜಿಗಳಲ್ಲಿ ಮತ್ತು ಮುಖ್ಯವಾಗಿ ಅವರು ನಡೆಸುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸಬೇಕಿದೆ. ಮಠಗಳನ್ನು ನಡೆಸುವುದು ಧಾರ್ಮಿಕ ಕಾರ್ಯ ಅದರಲ್ಲಿ ಸರಕಾರದ ಹಸ್ತಕ್ಷೇಪವಿರಬಾರದು ಎಂಬುದು ದಿಟ. ಆದರೆ ಮಠಮಾನ್ಯಗಳು ಲಾಭಕ್ಕಾಗಿ ನಡೆಸುವ ಸಂಸ್ಥೆಗಳನ್ನು ಇತರ ವಾಣಿಜ್ಯ ಸಂಸ್ಥೆಗಳ ಜೊತೆಯಲ್ಲಿಯೇ ಪರಿಗಣಿಸಬೇಕಾಗುತ್ತದೆ. ತಮ್ಮ ಧರ್ಮದ ಮೂಲ ಆಶಯ ಸಮಾನತೆ ಎಂದು ಸಾರುವ ಧಾರ್ಮಿಕ ಮುಖಂಡರು ಧಾರ್ಮಿಕ ಸಂಸ್ಥೆಗಳು ನಡೆಸುವ ವಾಣಿಜ್ಯ ಚಟುವಟಿಕೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದನ್ನು ಸ್ವಾಗತಿಸಬೇಕಿದೆ. ಸಾಚಾರ್ ಆಯೋಗದ ಶಿಫಾರಸ್ಸನ್ನು ಮೊದಲ್ಗೊಂಡು ಮುಸ್ಲಿಂ ಸಮುದಾಯದ ಸಂಸ್ಥೆಗಳಲ್ಲಿ ವರದಿಯಲ್ಲಿ ತಿಳಿಸಿರುವ ಅಶ್ರಫ್, ಅಜ್ಲಫ಼್ ಮತ್ತು ಅರ್ಜಲ್ ಸಮುದಾಯಗಳಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸುವ ಕುರಿತು ಮಾಡಿರುವ ಪ್ರಸ್ತಾವನೆಗಳನ್ನು ಮುಸ್ಲಿಂ ಸಮುದಾಯದ ನಡೆಸುತ್ತಿರುವ ಸಂಸ್ಥೆಗಳಲ್ಲೇ ಮೊದಲಿಗೆ ಜಾರಿಗೆ ತರಬೇಕಿದೆ. ಹಾಗೆಯೇ ದಲಿತ ಕ್ರೈಸ್ತರ ವಿಚಾರದಲ್ಲಿ ಕ್ರೈಸ್ತ ಧರ್ಮದ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವ ನಿರ್ಧಾರ ತೆಗೆದುಕೊಳ್ಳಬೇಕಿದೆ.
 • ಇಂದು ಎಲ್ಲ ಕ್ಷೇತ್ರಗಳಿಗಿಂತ ಉನ್ನತ ನ್ಯಾಯಾಂಗದಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದು ಅತ್ಯಗತ್ಯವಾಗಿದೆ. ಇದರ ಸಂಬಂಧವಾಗಿ ಇದೇ ಲೇಖಕ ಬರೆದ “ನ್ಯಾಯಾಂಗದಲ್ಲಿ ದಲಿತ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಪ್ರಶ್ನೆ” ಎಂಬ ಲೇಖನದ ಕೆಲ ಅಂಶಗಳನ್ನು ಇಲ್ಲಿ ಗಮನಿಸಬಹುದು:

೧೯೫೦ ರಿಂದ ಇಂದಿನವರೆಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ನೇಮಕವಾದ ದಲಿತರ ಸಂಖ್ಯೆ ಕೇವಲ ನಾಲ್ಕು – ಎ. ವರದರಾಜನ್, ಬಿ. ಸಿ. ರಾಯ್, ಕೆ. ರಾಮಸ್ವಾಮಿ ಮತ್ತು ಕೆ. ಜಿ. ಬಾಲಕೃಷ್ಣನ್. ಕಳೆದ ಅರವೈತ್ತೈದು ವರ್ಷಗಳಲ್ಲಿ ಈ ದೇಶದ ದಲಿತರಲ್ಲಿ ನಾಲ್ಕು ಜನ ಮಾತ್ರ Supreme Courtಸುಪ್ರೀಂ ಕೋರ್ಟ್ ಲ್ಲಿ ಕೂರಲು ಲಾಯಕ್ಕದವರೇ?

ಹಾಗೆಯೆ, ಒಂದು ಅಂದಾಜಿನ ಪ್ರಕಾರ ಸುಪ್ರೀಂ ಕೋರ್ಟ್ ನ ಸುಮಾರು ೫೬% ರಷ್ಟು ನ್ಯಾಯಾಧೀಶರು ಬ್ರಾಹ್ಮಣರು. ಒಟ್ಟು ಹೈ ಕೋರ್ಟ್ ನ್ಯಾಯಾಧೀಶರಲ್ಲಿ ಕೂಡ ಬ್ರಾಹ್ಮಣರ ಅನುಪಾತ ೫೦% ನಷ್ಟು. ೨೦೦೯ ರ ಸುಮಾರಿಗೆ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಒಂದು ಮನವಿ ಸಲ್ಲಿಸಿ ನ್ಯಾಯಾಂಗದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಲು ಕೋರಿತು. ಆದರೆ ಈವರೆಗೂ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾವುದೇ ಉಚ್ಚ ನ್ಯಾಯಾಲಯವೂ ಯಾವ ಸೂತ್ರ ಯಾ ನಿರ್ದೇಶನಗಳನ್ನೂ ಜಾರಿ ಮಾಡಲಿಲ್ಲ. ಕೇಶವಾನಂದ ಭಾರತಿ ಪ್ರಕರಣದಿಂದ ಮೊದಲ್ಗೊಂಡು ಅನೇಕ ತೀರ್ಮಾನಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ: ನ್ಯಾಯಾಂಗವೆಂದರೆ “ಪ್ರಭುತ್ವ” (State). ಪ್ರಭುತ್ವದ ಇನ್ನೆರಡು ಅಂಗಗಳಲ್ಲಿ ಮೀಸಲಾತಿ ಇರುವುದು ನಿಜವಾದರೆ ನ್ಯಾಯಾಂಗ ಇದಕ್ಕೆ ಹೊರತಾಗಿರಬೇಕೇ? ಇನ್ನು ನ್ಯಾಯಾಲಯಗಳ ಸಿಬ್ಬಂದಿಗಳ ನೇಮಕದಲ್ಲಿ ಮೀಸಲಾತಿ ಇದೆ. ಆದರೆ ನ್ಯಾಯಮೂರ್ತಿಗಳ ನೇಮಕದಲ್ಲಿ ಏಕಿಲ್ಲ? ರಾಷ್ಟ್ರೀಯ ನ್ಯಾಯಾಂಗ ಸೇವಾ ಆಯೋಗ ರಚಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆಯೋಗ ರಚನೆಯಾದರೆ ಎಲ್ಲಿ ಮೀಸಲಾತಿ ಜಾರಿಮಾಡುವ ಪ್ರಮೇಯ ಬಂದೀತೋ ಎಂದು ಈವರೆಗೆ ಯಾವ ಸರಕಾರವೂ ನ್ಯಾಯಾಂಗ ಸೇವೆಗಳ ಆಯೋಗ ರಚನೆ ಮಾಡುವ ಸಾಹಸ ಮಾಡಿಲ್ಲ. ಕೊಲಿಜಿಯಂ ಪದ್ಧತಿ ರದ್ದಾಗಿ ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ನ ಮುಂದಿದೆ. ಈ ಕೊಲಿಜಿಯಂ ಪದ್ಧತಿಯಡಿ ದಲಿತರಿಗೆ ಸೇರಿದಂತೆ ಅನೇಕ ಜನಪರ ಕಾಳಜಿಯ ನ್ಯಾಯಾಧೀಶರಿಗೆ ಹಿನ್ನಡೆಯಾಗಿದೆಯೆಂದು ಬಹುತೇಕ ಎಲ್ಲ ವಕೀಲರೂ ವಾದಿಸಿದ್ದಾರೆ.

ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್,ಅಡ್ವೋಕೇಟ್ ಜನರಲ್ ಹೋಗಲಿ ಸಾಮಾನ್ಯ ಸರಕಾರೀ ವಕೀಲರ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಪಾಲಿಸಿಲ್ಲ. ಸರಕಾರದ ಯಾವ ಬ್ಯಾಂಕ್, ನಿಗಮ, ಮಂಡಳಿಗಳು ಕೂಡ ತಮ್ಮ ಪ್ಯಾನೆಲ್ ಗಳಲ್ಲಿ ಮೀಸಲಾತಿ ಹೋಗಲಿ ದಲಿತರ ಬಗ್ಗೆ ಕನಿಷ್ಠ ಪ್ರಾತಿನಿಧ್ಯದ ಬಗ್ಗೆ ಕೂಡ ಗಮನ ಹರಿಸಿಲ್ಲ. ಇಂಥ ನೇಮಕಾತಿಗಳಲ್ಲಿ ಮೀಸಲಾತಿ ಬಗ್ಗೆ ಯಾವುದೇ ಕಾನೂನು ಅಥವಾ ನಿಯಮಗಳು ಹೋಗಲಿ ಕನಿಷ್ಠ ನಿರ್ದೇಶನ ಸೂತ್ರಗಳು ಕೂಡ ಇಲ್ಲ. ಎಲ್ಲಾ ಸರಕಾರಗಳು ದಲಿತರ ಪರ ಮೊಸಳೆ ಕಣ್ಣೀರು ಹಾಕುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಈವರೆಗೆ ದಲಿತರ ಪರವಾಗಿ ದಲಿತ ವಕೀಲರೇ ಧ್ವನಿ ಎತ್ತಿಲ್ಲ ಎಂದರೆ ಎಂಥ ಬೇಸರದ ವಿಷಯ. ವಕೀಲರ ಸಾರ್ವತ್ರಿಕ ಪ್ರಾತಿನಿಧ್ಯದ ಸಂಸ್ಥೆ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ನಲ್ಲಿ ಕೂಡ ಯಾವ ಪ್ರಾತಿನಿಧ್ಯವಿಲ್ಲ. ಇಂದು ವಕೀಲರಾಗಿ ನೊಂದಣಿ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆ ಕಡ್ಡಾಯ. ಆದರೆ ಈ ಪರೀಕ್ಷೆ ಗಳಲ್ಲಿ ಕೂಡ ಮೀಸಲಾತಿಯಿಲ್ಲ. ದಲಿತ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗ ಹೋಗಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೂಡ ಕನಿಷ್ಠ ಶುಲ್ಕ ವಿನಾಯತಿ ಕೊಡುವ ಔದಾರ್ಯವನ್ನೂ ವಕೀಲರ ಪರಿಷತ್ತು ತೋರಿಲ್ಲ. ತನ್ನ ವೆಬ್ಸೈಟ್ ನಲ್ಲಿ ನಮೂದಿಸಿರುವ ಪ್ರಶ್ನಾವಳಿ (FAQ) ಗಳಲ್ಲಿ ವಕೀಲರ ಪರಿಷತ್ತು “ನಮ್ಮ ಪರೀಕ್ಷೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ” ಎಂದು ಘೋಷಿಸಿ ಕೊಂಡಿದೆ.

ವಿಪರ್ಯಾಸವೆಂದರೆ ವಕೀಲರ ಪರಿಷತ್ತಿನ ವೆಬ್ಸೈಟ್ ನಲ್ಲಿ ದೊಡ್ಡದೊಂದು ಅಂಬೇಡ್ಕರ್ ಪಟವಿದೆ! ದುರಂತವೆಂದರೆ ಇಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ದಲಿತ ವಕೀಲರನ್ನು ಪ್ರತಿನಿಧಿಸುವ ಯಾವುದೇ ಸಂಘ ಸಂಸ್ಥೆಗಳಿಲ್ಲ. ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿಯೂ ದಲಿತ ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಳ್ಳುವ ದಲಿತರು ಇಂದಿನವರೆಗೂ ವಕೀಲರ ಮಧ್ಯೆ ಸಂಘಟನೆ ಕಟ್ಟಿಲ್ಲ. ಸಂಘಟಿತರಾಗದವರೆಗೂ ದಲಿತರಿಗೆ ಮುಕ್ತಿಯಿಲ್ಲ ಎಂಬುದಕ್ಕೆ ಈ ಕ್ರೂರ ವಾಸ್ತವಗಳಿಗಿಂತಲೂ ಹೆಚ್ಚಿನ ಸಾಕ್ಷಿಗಳು ದಲಿತರಿಗೆ, ಅದರಲ್ಲೂ ಮುಖ್ಯವಾಗಿ ವಕೀಲರಿಗೆ ಬೇಕಿಲ್ಲ ಎಂದು ಕೊಳ್ಳೋಣ. ೨೦೧೧ ರಲ್ಲಿ ಸಂವಿಧಾನ ತಿದ್ದುಪಡಿ ತಂದು ಸಹಕಾರ ಸಂಘಗಳ ಕಾನೂನಿಗೆ ಸಮಗ್ರ ಸರ್ಜರಿ ಮಾಡಲಾಯಿತು. ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಮೂಲಭೂತ ಕರ್ತವ್ಯವೆಂದು ಸಾರಲಾಯಿತು. ಜೊತೆಗೆ, ಸಹಕಾರ ಸಂಘಗಳಲ್ಲಿ ಸಾಮಾಜಿಕ ಮತ್ತು ಮಹಿಳಾ ಮೀಸಲಾತಿ ಜಾರಿಗೊಳಿಸಲಾಯಿತು. ಆದರೆ ವಕೀಲರ ಸಂಘಗಳಲ್ಲಿ ಈ ಮೀಸಲಾತಿ ಜಾರಿಯಾಗಿಲ್ಲ. ವಕೀಲರ ಸಂಘಗಳಿಗೆ ಸರಕಾರಗಳು ಸಾಕಷ್ಟು ಸಹಾಯ ಧನ ನೀಡಿವೆ. ಏಷ್ಯಾದಲ್ಲಿಯೇ ಅತೀ ದೊಡ್ಡದು ಎನ್ನಿಸಿಕೊಳ್ಳುವ ಬೆಂಗಳೂರು ವಕೀಲರ ಸಂಘದ ಬೈ ಲಾ ಗಳನ್ನು ಅನುಮೋದಿಸಿದ್ದು ಸ್ವತಃ ಸಹಕಾರ ಸಂಘಗಳ ಪ್ರಬಂಧಕರು. ಆದರೆ ಇಲ್ಲಿ ಮಹಿಳಾ, OBC ಮತ್ತು ದಲಿತ ಮೀಸಲಾತಿಯ ಪ್ರಶ್ನೆಯೇ ಇಲ್ಲ. ಈವರೆಗೆ ಯಾವ ದಲಿತರೂ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾಗಿಲ್ಲ. ಈವರೆಗೆ ಯಾವ ದಲಿತರೂ ಹಿಂದುಳಿದವರು ಮತ್ತು ಮಹಿಳೆಯರು ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ದಲಿತ, ಮಹಿಳಾ ಮತ್ತು ಹಿಂದುಳಿದ ವರ್ಗಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಪ್ರನಿಧಿಸುತ್ತಿಲ್ಲ ಎಂಬುದು ಕೇವಲ ಈ ವರ್ಗ ವಿಭಾಗಗಳ ಪ್ರಶ್ನೆಯಲ್ಲ. ಇದು ನಮ್ಮ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಾಡಬೇಕಿರುವ ಪ್ರಶ್ನೆ. ‘ದಲಿತರು ಎಲ್ಲರಿಗೂ ಸಮನಾಗಿ ಬದುಕುತ್ತಿದ್ದಾರೆ’, ‘ಜಾತಿ ವ್ಯವಸ್ಥೆ ಸತ್ತು ಹೋಗಿದೆ’ ಅಥವಾ ‘ಬರೀ ವರ್ಗವೊಂದೇ ಸತ್ಯ ಜಾತಿ ಮಿಥ್ಯ’ ಎಂದು ವಾದಿಸುವ ಸಿದ್ಧಾಂತಿಗಳು ನ್ಯಾಯಾಂಗದಲ್ಲಿ ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೋಚಿಸುವರೆ?”

*******

ವಿಷಯದ ವ್ಯಾಪ್ತಿ ಅಗಾಧವಾಗಿರುವ ಕಾರಣ ಇಲ್ಲಿ ಕೆಲವೇ ಕೆಲವು ನಿದರ್ಶನಗಳನ್ನು ಚರ್ಚಿಸಲಾಗಿದೆ. ಇದು ಕೇವಲ ಚರ್ಚೆಗೆ ಅನುವಾಗುವ ರೀತಿಯಲ್ಲಿನ ಒಂದು ಪ್ರಾಥಮಿಕ ಪ್ರಯತ್ನ ಮಾತ್ರ. ಇಲ್ಲಿರುವ ಸಲಹೆಗಳು ಕಾರ್ಯಸಾಧುವೇ ಅಲ್ಲವೇ ಎಂಬುದು ವಿಸ್ತ್ರತ ಚರ್ಚೆಗೆ ಒಳಪಡಬೇಕಾದ ವಿಚಾರ.

ಸಾಮಾಜಿಕ ಪ್ರಾತಿನಿಧ್ಯದ ಜೊತೆಯಲ್ಲೇ ಚರ್ಚೆಗೆ ಒಳಪಡಬೇಕಾದ ವಿಚಾರ ಅನುಷ್ಥಾನದ್ದು. ಇಂದು ಸರಕಾರಿ ವಲಯದಲ್ಲೇ ಬ್ಯಾಕ್ ಲಾಗ್ ಸಮಸ್ಯೆ ಬೃಹತ್ತಾಗಿ ಬೆಳೆದು ನಿಂತಿರುವಾಗ ಸರ್ಕಾರೇತರ ವಲಯಗಳಲ್ಲಿ ಪ್ರಾತಿನಿಧ್ಯವನ್ನು ಸಮರ್ಪಕವಾಗಿ ಅನುಷ್ಥಾನಗೊಳಿಸಬಹುದೇ? ಸಮಸ್ಯೆಗಳು ಮತ್ತು ಸವಾಲುಗಳು ಸಾಕಷ್ಟಿವೆ. ಸರಕಾರೇತರ ವಲಯದಲ್ಲಿ ಅರ್ಥಿಕ ಹಿಂಜರಿತ, ಲಾಭ ಹೆಚ್ಚಿಸುವ ಒತ್ತಡಗಳು, ಉದ್ಯೋಗ ಕಳೆದುಕೊಳ್ಳುವ ಭಯ, ಅಸಂಘಟಿತ ಕಾರ್ಮಿಕರ ಶೋಷಣೆ ಅತ್ಯಂತ ಹೆಚ್ಚಾಗಿದೆ. ವಿಶೇಷ ವಿತ್ತ ವಲಯಗಳಿಗೆ ಮತ್ತು ಸಾಫ್ಟ್ವೇರ್ ಕಂಪನಿಗಳಿಗೆ ಕಾರ್ಮಿಕ ಕಾನೂನುಗಳೂ ಸೇರಿದಂತೆ ದೇಶದ ಕಲ್ಯಾಣದ ಸದುದ್ದೇಶವುಳ್ಳ ಅನೇಕ ಕಾನೂನುಗಳು (Welfare Legislation) ಅನ್ವಯಿಸುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ಯಾವುದೇ ಕಾರ್ಮಿಕ ಸಂಘಟನೆಗಳಿಗೆ ಅವಕಾಶವಿಲ್ಲ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲವರ್ಗಗಳಿಗೆ ಸೇರಿದವರಿಗೆ ಸಹ ಇನ್ನೂ ನ್ಯಾಯ ದೊರೆತಿಲ್ಲ. ಅದರಲ್ಲಿ ತಳ ಸಮುದಾಯಗಳ ಪ್ರಾತಿನಿಧ್ಯವನ್ನು ಅರಗಿಸಿಕೊಳ್ಳುವಷ್ಟು ನಮ್ಮ ಸಮಾಜ ಇನ್ನೂ ಬೆಳೆದಿಲ್ಲ ಎನ್ನುವುದು ಸತ್ಯವೇ.

ಆದರೆ ಸಣ್ಣ ಪುಟ್ಟ ವಿಚಾರಗಳಿಗೆ ಒಂದು ಆಯೋಗ ರಚಿಸುವ ಸರಕಾರಗಳು ಸರಕಾರೇತರ ವಲಯಗಳ ಪ್ರಾತಿನಿಧ್ಯದ ವಿಶ್ಲೇಷಣೆಗೆ ಯಾವುದೇ ಒಂದು ಆಯೋಗವನ್ನು ರಚಿಸದಿರುವುದು ವಿಷಾದನೀಯ. ರಾಜ್ಯ ಮತ್ತು ರಾಷ್ಟ್ರದ ಕಾನೂನು ಅಯೋಗಗಳೂ (Law Commissions) ಕೂಡ ಈ ಬಗ್ಗೆ ಕಣ್ಣು ಹರಿಸಿಲ್ಲ. ಸಧ್ಯದ ಸಂವಿಧಾನದ ಮತ್ತು ಕಾನೂನುಗಳ ಚೌಕಟ್ಟಿನಲ್ಲೇ ಅಥವಾ ಅವುಗಳನ್ನು ವಿಸ್ತರಿಸಿ ಪ್ರಾತಿನಿಧ್ಯವನ್ನು ಕಲ್ಪಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ಸಾಗಬೇಕಿದೆ.

ಇಂಥಹ ಒಂದು ಪ್ರಾಮಾಣಿಕ ಪ್ರಯತ್ನ ನಮ್ಮ ರಾಜ್ಯದ ‘ಅಹಿಂದ’ ಸರಕಾರದಿಂದಲೇ ಪ್ರಾರಂಭವಾದರೆ ತುಂಬಾ ಸಂತೋಷ.

1 thought on “ಸರ್ಕಾರೇತರ ವಲಯಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯ

 1. Salam Bava

  ಅತೀ ವಿಚಾರ ಪ್ರಭೋದಕ ಲೇಖನ .ಈ ಬರಹದ ಲೇಖಕರೂ ಭಾಗವಹಿಸಿದ್ದ ,ಖಾಸಗಿ ವಲಯದಲ್ಲಿ ಒಬಿಸಿ,ಎಸ್ಸಿ ಮತ್ತು ಎಸ್ಟಿ ಮೀಸಲಾತಿಗಾಗಿ ಒತ್ತಾಯಿಸಿ ಆಯೋಜಿಸಿದ್ದ ದುಂಡು ಮೇಜಿನ ಚರ್ಚೆಯಲ್ಲಿ ಖ್ಯಾತ್ಯ,ಹಿರಿಯ ಅಂಕಣಕಾರ ಶಿವಸುಂದರರ ಈ ಅಭಿಪ್ರಾಯ ಪತ್ರಿಕೆಯಲ್ಲಿ ಓದಿದೆ . “ಬ್ರಾಹ್ಮಣವಾದ ಹಾಗೂ ಖಾಸಗೀಕರಣ ಸಾಮಾಜಿಕ ನ್ಯಾಯದ ಶತ್ರುಗಳು” ಇದು ನನ್ನನ್ನು ತುಂಬಾ ಚಿಂತಿಸುವಂತೆ ಮಾಡಿತು .
  ಅದೇ ಪ್ರಕಾರ ಲೇಖಕರು ಹೇಳಿದ್ದು – “ಖಾಸಗಿ ಕಂಪನಿಗಳು ರೂಪು ಗೊಂಡಿರುವುದು ಸಾರ್ವಜನಿಕರ ಹಣದಿಂದ ,ಆದುದರಿಂದ ಈ ದೇಶದಲ್ಲಿ ಸ್ಥಾಪನೆಯಾಗುವ ಯಾವುದೇ ಖಾಸಗಿ ಕಂಪನಿಗಳಲ್ಲಿ ಮೀಸಲಾತಿಯನ್ನು ಕೇಳುವುದಕ್ಕೆ ಹಿಂಜರಿಕೆ ಬೇಡ”
  ಇಂಥಹ ಜನಪರ ಮನಸ್ಸುಗಳು ದುರ್ಬಲರ ಪರವಾಗಿ ಸ್ವಂದಿಸುದಿಂದಲೇ ದಲಿತರ ,ದೀನರ ಬೇಡಿಕೆಗೆ ಬಲ ಬರುವುದು .

  Reply

Leave a Reply to Salam Bava Cancel reply

Your email address will not be published.