ಜಾತ್ರೆಯ  ಆಮಂತ್ರಣ ಪತ್ರಿಕೆಯಲ್ಲಿ  ಮುಸ್ಲಿಮ್  ಡಿಸಿಯ  ಹೆಸರು ವಿವಾದ ಹಾಗೂ ಕರಾವಳಿಯ  ಕೋಮು ಸಾಮರಸ್ಯದ  ಇತಿಹಾಸ


-ಇರ್ಷಾದ್ ಉಪ್ಪಿನಂಗಡಿ


ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ  ದೇವಸ್ಥಾನದ ಜಾತ್ರಾಮಹೋತ್ಸವದ ಆಮಂತ್ರಣ  ಪತ್ರಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ  ಇಬ್ರಾಹಿಂ ಅವರ  ಹೆಸರನ್ನು  ಉಲ್ಲೇಖಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. “ಜಿಲ್ಲಾಧಿಕಾರಿ  ಎ.ಬಿ ಇಬ್ರಾಹಿಂ ಮುಸ್ಲಿಮ್  ಸಮುದಾಯದವರಾಗಿದ್ದು ಅವರ ಹೆಸರನ್ನುsri-mahalingeshwara-temple_1409380877 ಆಮಂತ್ರಣ ಪತ್ರಿಕೆಯಲ್ಲಿ  ಮುದ್ರಿಸಿರುವುದು ಹಿಂದೂಗಳ ಭಾವನೆ ಧಕ್ಕೆ ಉಂಟಾಗುತ್ತದೆ ಮಾತ್ರವಲ್ಲ ಇದು 1997ರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 7 ವಿಧಿಯ ಉಲ್ಲಂಘನೆ” ಎಂಬುವುದು ಸಂಘಪರಿವಾರದ ಸಂಘಟನೆಗಳ ವಾದ. ಇದರ ಮುಂದುವರಿದ ಭಾಗವಾಗಿ ಮಾಜಿ ಬಿಜೆಪಿ ಶಾಸಕಿ ಹಾಗೂ ಹಾಲಿ ಪುತ್ತೂರು ವಿಧಾನಸಭಾ ಕ್ಷೇತ್ರದ  ಕಾಂಗ್ರೆಸ್ ಶಾಸಕಿ ಶಕುಂತಲಾ ಶೆಟ್ಟಿಯವರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ “ಮುಸ್ಲಿಮ್” ಜಿಲ್ಲಾಧಿಕಾರಿಯ  ಹೆಸರನ್ನು  ಆಮಂತ್ರಣ  ಪತ್ರಿಕೆಯಿಂದ ಕೈಬಿಟ್ಟು ಮರುಮುದ್ರಣ ಮಾಡಲು ಸೂಚಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸಂಘಪರಿವಾರ ದೇವಸ್ಥಾನದ ಮುಂಭಾಗದ ಜಾತ್ರೆ ನಡೆಯುವ ಸ್ಥಳದಲ್ಲಿ ಹಿಂದೂಗಳ ಹೊರತಾಗಿ ಇತರ ಧರ್ಮೀಯರಿಗೆ ಅಂಗಡಿ ತೆರೆಯಲು ಅವಕಾಶ ನೀಡುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿ. ಜಿಲ್ಲೆಯ ದಂಡಾಧಿಕಾರಿಯಾಗಿರುವರು ಜಿಲ್ಲಾಧಿಕಾರಿಗಳು. ಅವರು ಅಲಂಕರಿಸಿರೋ ಹುದ್ದೆ  ಧರ್ಮಾತೀತವಾದುದು. ಜಿಲ್ಲಾಧಿಕಾರಿಯನ್ನೇ ಧರ್ಮದ ಆಧಾರದಲ್ಲಿ ಪರಿಗಣಿಸುವುದಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಎಲ್ಲಿಗೆ ಬಂದು ತಲುಪುತ್ತಿದೆ ಎಂಬುವುದು ಸ್ಪಷ್ಟಗೊಳ್ಳುತ್ತಿದೆ. ಇಂದು  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆರೆಯುತ್ತಿರುವ ಸಂಘಪರಿವಾರದ ಕೋಮುವಾದ ಹಾಗೂ ಅದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರೋ ಮುಸ್ಲಿಮ್ ibrahim-iasಕೋಮುವಾದ ಜಿಲ್ಲೆಯ ಜನರನ್ನು ಸಂಪೂರ್ಣವಾಗಿ ಧರ್ಮದ ಆಧಾರದಲ್ಲಿ  ಬೇರ್ಪಡಿಸುವ ಕಾರ್ಯದಲ್ಲಿ ನಿರತವಾಗಿವೆ. ದಕ್ಷಿಣ  ಕನ್ನಡ ಜಿಲ್ಲೆ ಒಂದು  ಕಾಲದಲ್ಲಿ ಧಾರ್ಮಿಕ ಸೌಹಾರ್ದತೆಗೆ  ಹೆಸರಾದ ಜಿಲ್ಲೆಯಾಗಿತ್ತು. ಇಂದು  ಜಾತ್ರೆಯ  ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಮ್ ಜಿಲ್ಲಾಧಿಕಾರಿಯ ಹೆಸರು ಉಲ್ಲೇಖವಾಗಿರುವುದಕ್ಕೆ ವಿವಾದ ಎಬ್ಬಿಸುವ ಕೋಮುವಾದಿಗಳು, ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ  ತೆರೆಯಬಾರದು ಎಂದು ಫರ್ಮಾನು  ಹೊರಡಿಸುವ ಸಂಘಪರಿವಾರಿಗಳು ಜಿಲ್ಲೆಯ  ಸಾಮರಸ್ಯ  ಇತಿಹಾಸದತ್ತ  ಒಮ್ಮೆ ಕಣ್ಣು ಹಾಯಿಸಬೇಕು. ದಕ್ಷಿಣ ಕನ್ನಡ  ಜಿಲ್ಲೆಯ ಮೂಲ  ಪೂಜಾ ಪದ್ಧತಿ ಭೂತಾರಾಧನೆ ಮತ್ತು ನಾಗಾರಾಧನೆ. ಈ ನಾಡಿಗೆ ವೈದಿಕ ಹಿಂದೂ ಧರ್ಮ ಕಾಲಿಟ್ಟ ತರುವಾಯ ಇಸ್ಲಾಮ್  ಧರ್ಮ ಅರಬ್  ವರ್ತಕರ ಮೂಲಕ ಇಲ್ಲಿಗೆ ಕಾಲಿಟ್ಟಿತು. ನಂತರ ಪೋರ್ಚುಗೀಸ್ ಪ್ರವಾಸಿ ವಾಸ್ಕೋಡಗಾಮನ ಆಗಮನದೊಂದಿಗೆ ಕ್ರೈಸ್ತ ಧರ್ಮ ಕೂಡಾ ತುಳುನಾಡನ್ನ ಪ್ರವೇಶಿಸಿತು. ಈ ನಾಡಿನ ಮೂಲಧರ್ಮಕ್ಕೆ  ಭಿನ್ನವಾದ ಎರಡೂ ಮತಗಳನ್ನ ಇಲ್ಲಿಯ ಮೂಲನಿವಾಸಿಗಳು ಸ್ವಾಗತಿಸಿ ಅವರನ್ನು ತಮ್ಮದಾಗಿಸಿಕೊಂಡರು. ಅದೇ  ರೀತಿ ಇಲ್ಲಿ ನೆಲೆವೂರಿದ ಅರಬ್ ಮುಸ್ಲಿಮರೂ, ಪೂರ್ಚ್ ಗೀಸ್ ಕ್ರೈಸ್ತರೂ ತಮ್ಮ ಧರ್ಮ, ಸಂಸ್ಕೃತಿಯನ್ನು ಕಟ್ಟಿ ಬೆಳೆಸುವುದರೊಂದಿಗೆ ಈ  ನಾಡಿನ ಜನ , ಸಂಸ್ಕೃತಿಯೊಂದಿಗೆ  ಬೆರೆತು ತುಳುವರಾದರು ಎಂಬುವುದನ್ನು ಇತಿಹಾಸ ತಿಳಿಸಿಕೊಡುತ್ತದೆ. ತುಳುನಾಡಿದ ಭೂತಕೋಲದ  ಪಾಡ್ದನಗಳಲ್ಲಿ ಮುಸ್ಲಿಮರು ಪ್ರಮುಖಪಾತ್ರಗಳಲ್ಲಿ ಮಿಂಚುತ್ತಾರೆ. ಜುಮಾದಿ ದೈವ ಪಾಡ್ದನ, ಸಿರಿ ಪಾಡ್ದನ ಹಾಗೂ ಅತ್ತಾವರ ದೈವಗಳ ಪಾಡ್ದನಗಳಲ್ಲಿ ಮುಸ್ಲಿಮ್ ಪಾತ್ರದಾರಿಗಳು ಕಂಡುಬರುತ್ತಾರೆ. ಮುಸ್ಲಿಮ್ ಮಂತ್ರವಾದಿ ಅಲಿಭೂತ, ಸಮುದ್ರ ಬೀಭತ್ಸದಿಂದ ರಕ್ಷಣೆ ಕೊಡುತ್ತಿದ್ದ ಬಬ್ಬರ್ಯ ಯಾನೆ ಬಪ್ಪ  ಬ್ಯಾರಿಯನ್ನ ತುಳುವರು  ದೈವೀ  ಪುರುಷರನ್ನಾಗಿ  ಆರಾಧನೆ ಮಾಡುವ ಸಂಸ್ಕೃತಿ  ಈ ತುಳುನಾಡಿದ್ದು.  ಉಡುಪಿ  ಮಠಗಳ ಪರ್ಯಾಯ ಉತ್ಸವಗಳಲ್ಲಿ ಮುಸ್ಲಿಮ್ ಕುಟುಂಬವೊಂದು ರಥ ಅಲಂಕರಿಸುವುದು, ಪ್ರಭಾವಳಿ ರಚಿಸುವುದು, ದುರುಸು ಬಾಣಗಳನ್ನು ಬಿಡುವುದೇ ಮೊದಲಾದ ಶತಮಾನಗಳಿಂದ ನಡೆದುಕೊಂಡ ಬಂದ ಸಂಪ್ರದಾಯಗಳು ಇಲ್ಲಿಯ ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆಗಳಾಗಿವೆ.

ಜಿಲ್ಲೆಯನ್ನು ಕೆಳದಿರಾಜ ವೆಂಕಟಪ್ಪ ನಾಯಕ  ಆಳುತ್ತಿದ್ದಾಗ ಭುವನಗಿರಿ ದುರ್ಗವೆನ್ನುವಲ್ಲಿ ಮುಸ್ಲಿಮರಿಗೆ ಮಸೀದಿ ಕಟ್ಟಿಸಿಕೊಟ್ಟ. ಆತನ ಮೊಮ್ಮಗ  ವೀರಭದ್ರನಾಯಕ  ತಾವರೆಕೆರೆಯ ಮಸೀದಿಗೆ  ಎಡಹಳ್ಳಿ ಗ್ರಾಮವನ್ನು ದತ್ತು ನೀಡಿದನಂತೆ. ಕೆಳದಿರಾಣಿ ಚೆನ್ನಮ್ಮಾಜಿ ದಕ್ಷಿಣ ಕನ್ನಡ  ಜಿಲ್ಲೆಯ ಕಿನ್ನಿಕಂಬಳ ಹಾಗೂ  ಗಂಜಿ ಮಠವೆನ್ನುವಲ್ಲಿ  ಮುಸ್ಲಿಮ್ ಸೂಫಿ ಸಂತರಿಗೆ 101  ಎಕರೆ ಜಮೀನು ದಾನ  ನೀಡಿದ ಉಲ್ಲೇಖಗಳು ಇತಿಹಾಸದ ಪುಟ ತಿರುಗಿಸಿದಾಗ  ತಿಳಿದುಬರುತ್ತದೆ. ದಕ್ಷಿಣ ಕನ್ನಡ  ಜಿಲ್ಲೆ ಮೈಸೂರು ಅರಸರಾದ  ಹೈದರಾಲಿ ಹಾಗೂ ಟಿಪ್ಪು ಸುಲ್ತಾನದ ಆಡಳಿತದಲ್ಲಿದ್ದ  ಸಂದರ್ಭದಲ್ಲಿ ಹಿಂದೂ ಧರ್ಮೀಯರ ಆರಾಧನಾ ಕೇಂದ್ರಗಳಿಗೆ ಭೂಮಿ ಹಾಗೂ ಆರ್ಥಿಕ ಸಹಕಾರವನ್ನು ನೀಡಿರುವ ಅನೇಕ  ಉದಾಹರಣೆಗಳಿವೆ. ಟಿಪ್ಪು ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನಕ್ಕೆ ಮೂಡುಶೆಡ್ಡೆ ಗ್ರಾಮವನ್ನು ದತ್ತುವಾಗಿ ನೀಡಿ, ಅಲ್ಲಿಯ ಪೂಜಾ ವಿಧಿಗಳಿಗೆ ದಿನಕ್ಕೆ ನಾಲ್ಕು ರೂಪಾಯಿಯಂತೆ  ತಸ್ತಿಕ್  ನೀಡಿದ್ದ. ಗುರುಪುರದ ಲಿಂಗಾಯಿತ  ಮಠ , ಮಂಜೇಶ್ವರದ ಮದನಂತೇಶ್ವರ ದೇವಾಲಯ  ಹಾಗೂ ಬಂಟ್ವಾಳ ತಾಲೂಕಿನ ಶಂಬೂರು  ಎಂಬಲ್ಲಿ ಹಿಂದೂ ದೇವಾಲಯಗಳಿಗೆ ಭೂಮಿ ಹಾಗೂ  ಆರ್ಥಿಕ ಸಹಾಯ ನೀಡಿರುವ  ಅನೇಕ ಉಲ್ಲೇಖಗಳು ದಕ್ಷಿಣ ಕನ್ನಡ  ಜಿಲ್ಲಾಡಳಿತ ಪ್ರಕಟಿಸಿದ ಜಿಲ್ಲೆಯ  ಇತಿಹಾಸದ ಕುರಿತಾಗಿ ಬೆಳಕು  ಚೆಲ್ಲುವ  ಪುಸ್ತಕವೊಂದರಲ್ಲಿ ವಹಾಬ್ ದೊಡ್ಡಮನೆ  ಬರೆದಿರುವ  ಲೇಖನದಲ್ಲಿ ಇಂಥಹಾ ಸಾಮರಸ್ಯದ  ಅನೇಕ ಉಲ್ಲೇಖಗಳಿವೆ. ಬಹುಷಃ ಈ ಎಲ್ಲಾ  ವಿಚಾರಗಳು ಧರ್ಮದ  ಹೆಸರಲ್ಲಿ ಮನಸ್ಸನ್ನು  ಒಡೆಯೋ ಕೆಲಸದಲ್ಲಿ   ನಿರತರಾಗಿರುವ ಧರ್ಮರಕ್ಷಕರಿಗೆ  ತಿಳಿದಿರಲಿಕ್ಕಿಲ್ಲ. ಒಂದು ವೇಳೆ  ತಿಳಿದಿದ್ದರೂ ಇಂಥಹಾ  ಸಾಮರಸ್ಯವನ್ನು ಅವರು ಬಯಸೋದಿಲ್ಲ  ಎಂಬುವುದು  ಜಿಲ್ಲೆಯಯಲ್ಲಿ  ಪದೇ  ಪದೇ ನಡೆಯುತ್ತಿರುವ ಘಟನೆಗಳಿಂದ ಸಾಬೀತಾಗುತ್ತಾ   ಬಂದಿರುವ  ಸತ್ಯ.

ಇಂದಿಗೂ  ದಕ್ಷಿಣ  ಕನ್ನಡ  ಜಿಲ್ಲೆಯಲ್ಲಿ ಕೂಡುಬಾಳುವಿಕೆ ಹಾಗೂ  ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಅನೇಕ ಧಾರ್ಮಿಕ ಕೇಂದ್ರಗಳು  ನಮ್ಮ ಮುಂದಿವೆ. ಮಂಗಳೂರಿನ ಬೈಲು ಪೇಟೆಯೆಂಬಲ್ಲಿ  ಸೂಫಿ  ಸಂತರ ದರ್ಗಾವೊಂದಿದೆ. ಅದರ  ಹೆಸರು ಶೈಖ್ ಸೈಯದ್ ಮೆಹಮೂದ್  ಜಲಾಲುದ್ದೀನ್ ಮತ್ತು ಅಶೈಖ್  ಸೈಯದ್ ಹಯಾತ್ ವಲಿವುಲ್ಲಾಹಿ ದರ್ಗಾ. ಈ  ದರ್ಗಾದಲ್ಲಿರುವ ಸಂತ ಮೂಲತಃ  ಬಾಗ್ದಾದ್ ನಿಂದ ಬಂದು ಇಲ್ಲಿ ನೆಲೆನಿಂತವರು. ಸ್ಥಳೀಯರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆತು  ಅವರ ಮನಗೆದ್ದರು.20160121_130438 ಈ ಸೂಫಿ ಸಂತ ಕೊನೆಉಸಿರೆಳೆದ ನಂತರ ಬೈಲು ಪೇಟೆಯಲ್ಲೇ ಅವರನ್ನು ಸಮಾಧಿ ಮಾಡಲಾಯಿತು.  ನಂತರ ಗ್ರಾಮಸ್ಥರ ಪಾಲಿಗೆ ಪುಣ್ಯಪುರುಷರ ಈ ಸಮಾಧಿ ಪವಿತ್ರ ಸ್ಥಳವಾಗಿ ಮಾರ್ಪಟ್ಟಿತು. ಇಂದಿಗೂ ಈ ದರ್ಗಾಕ್ಕೆ ಮುಸ್ಲಿಮರಿಗಿಂತ ಅಧಿಕ ಸಂಖ್ಯೆಯಲ್ಲಿ ಹಿಂದೂಗಳೇ ಭೇಟಿನೀಡುತ್ತಾರೆ. ಈ ಗ್ರಾಮ  ಹಿಂದೂ ಕೃಷಿಕರು ತಾವು ಬೆಳೆದ ಮೊದಲ  ಬೆಳೆಯನ್ನು ಸಂತರ ದರ್ಗಾಕ್ಕೆ ತಂದು ಭಕ್ತಿಯಿಂದ ಅರ್ಪಿಸುತ್ತಾರೆ. ದರ್ಗಾದಲ್ಲಿ ಪೂಜೆ ಸಲ್ಲಿಸಿ ನಂತ್ರ  ತಾವು  ಬೆಳೆದ ಬೆಳೆಯನ್ನ ಮಾರಾಟ ಮಾಡುತ್ತಾರೆ. ಇಂದಿಗೂ ಈ ಪದ್ದತಿ ಇಲ್ಲಿ ಚಾಲ್ತಿಯಲ್ಲಿದೆ. ಈ ಗ್ರಾಮದ ಹಿಂದೂಗಳು ಇಲ್ಲಿರುವ ಸೂಫಿ ಸಂತರನ್ನು  “ಶೇಖರ್ ಪಂಡಿತೆರ್” ಎಂದು ಕರೆಯುತ್ತಾರೆ. “ಶೇಖರ್  ಪಂಡಿತೆರ್” ಕುರಿತಾಗಿ ಗ್ರಾಮದ  ಹಿಂದೂಗಳ ಮನಸ್ಸಿನಲ್ಲಿ   ಗೌರವ, ಭಕ್ತಿ.  ಪ್ರತಿ ವಾರ ದರ್ಗಾಕ್ಕೆ ಬೆಲ್ಲ, ಅಕ್ಕಿ ಕೊಡುವ ಪದ್ದತಿಯನ್ನು ಸ್ಥಳೀಯ ಹಿಂದೂಗಳು ಪಾಲಿಸಿಕೊಂಡು ಬರುತ್ತಿದ್ದಾರೆ. ಇನ್ನು  ಮೂರು  ವರ್ಷಕ್ಕೊಮ್ಮೆ ನಡೆಯುವ ಊರೂಸ್ ಸಮಾರಂಭವನ್ನೂ ಇಲ್ಲಿ ಹಿಂದೂ ಮುಸ್ಲಿಮರು ಜೊತೆಗೂಡಿ ಆಚರಿಸುತ್ತಾರೆ.  “ ಮಂಗಳೂರಿನಲ್ಲಿ  ಏನೇ ಗಲಾಟೆ  ಆದ್ರೂ  ನಮಗಿಲ್ಲಿ  ಯಾವ ಭಯವೂ ಇಲ್ಲ . ಈ ದರ್ಗಾದ ಬಳಿ ಇರೋದು ಕೇವಲ ಎರಡು ಮುಸ್ಲಿಮರ ಮನೆ .ಆದ್ರೂ ಸ್ಥಳೀಯ ಬಹುಸಂಖ್ಯಾತ ಹಿಂದೂಗಳಿಂದ ನಮಗ್ಯಾವ  ಭಯವೂ ಇಲ್ಲ. ನಾವೆಲ್ಲರೂ  ಜೊತೆಗಿದ್ದೇವೆ, ಅದಕ್ಕೆ ಶೇಖ್  ಸೈಯದ್ ಮೆಹಮೂದ್ ಜಲಾಲುದ್ದೀನ್ ಸಂತರ ದರ್ಗಾ  ಕಾರಣ” ಎನ್ನುತ್ತಾರೆ ಸ್ಥಳೀಯ ನಿವಾಸಿ  ಅಬ್ದುಲ್ ಖಾದರ್ . ಇಲ್ಲಿಗೆ  ಭೇಟಿ  ನೀಡಿದಾಗ ಗ್ರಾಮಸ್ಥರ ಮೂಲಕ ಮತ್ತೊಂದು  ಸೌಹಾರ್ದದ ಕಥೆ  ಕೇಳಲ್ಪಟ್ಟೆ. ಬೈಲು ಪೇಟೆಯ ಜುಮ್ಮಾ ಮಸೀದಿಯಲ್ಲಿ  ಧರ್ಮ ಗುರುವೊಬ್ಬರಿದ್ದರು. ದಿನಂಪ್ರತಿ ಐದು  ಹೊತ್ತಿನ ಅಜಾನ್ (ನಮಾಜಿಗೆ ಕರೆಯುವ )  ಕರೆಯನ್ನು ಇವರೇ  ನೀಡುತ್ತಿದ್ದರು. ಮಸೀದಿಯ ಅಲ್ಪ ಸನಿಹದಲ್ಲೇ ಜುಮಾದಿ ದೈವದ ಭಂಡಾರದ  ಮನೆಯಿದೆ. ಪ್ರತಿನಿತ್ಯ ಮಸೀದಿಯಯಲ್ಲಿ ಕೊಡುತ್ತಿರುವ  ಆಜಾನ್  ಕರೆ  ಪಕ್ಕದ  ಜುಮಾದಿ ದೈವದ   ಬಂಡಾರದ  ಮನೆಯ ಪೂಜಾರಿಗೂ  ಕೇಳುತಿತ್ತು. ಆದರೆ, ರಂಜಾನ್ ತಿಂಗಳ ಒಂದು ದಿನ ಮಸೀದಿಯ ಧರ್ಮಗುರು ಕೂಗುತ್ತಿದ್ದ ಆಜಾನ್ ಕರೆ ಎಂದಿನಂತಿರಲಿಲ್ಲ. ಅವರ ಧ್ವನಿ ತುಂಬಾನೇ ಕ್ಷೀಣವಾಗಿತ್ತು. ಇದರಿಂದ  ವಿಚಲಿತರಾದ ಜುಮಾದಿ ದೈವದ ಭಂಡಾರ ಮನೆಯ ಪುಜಾರಿ ಮಸೀದಿಗೆ ಹೋಗಿ ಧರ್ಮಗುರುವನ್ನು ವಿಚಾರಿಸಿದಾಗ, ಧರ್ಮಗುರು ರಂಜಾನ್ ಉಪವಾಸದಲ್ಲಿದ್ದು  ವೃತ ತೊರೆಯಲು ಅವರ ಬಳಿ  ಆಹಾರವಿಲ್ಲ ಎಂಬ ಸಂಗತಿ ತಿಳಿದುಬರುತ್ತದೆ. ಕೂಡಲೇ ಭಂಡಾರದ ಮನೆಗೆ ಬಂದ ಪೂಜಾರಿ ಜುಮಾದಿ ದೈವದ ಚಿನ್ನದ ನಾಲಗೆಯನ್ನು ಕೊಯ್ದು ಧರ್ಮಗುರುವಿಗೆ ನೀಡಿ ಅದನ್ನು ಸ್ಥಳೀಯ ದೋಂದಜ ಗುತ್ತಿನ ಮನೆಗೆ ಮಾರಿ ಉಪವಾಸ ತೊರೆಯಲು ಬೇಕಾದ ಆಹಾರ ಪದಾರ್ಥಗಳನ್ನು ತಂದುಕೊಳ್ಳುವಂತೆ ಸೂಚಿಸಿದರು. ನಂತರ ಊರ ಜನರಿಗೆ ಜುಮಾದಿ ದೈವದ ಚಿನ್ನದ  ನಾಲಗೆ ಕಾಣೆಯಾಗಿರುವ  ಸುದ್ದಿ ತಿಳಿಯಿತು.ಈ ಕುರಿತಾಗಿ ಭಂಡಾರದ ಮನೆಯ ಪೂಜಾರಿಯ  ಬಳಿ ಗ್ರಾಮಸ್ಥರು ವಿಚಾರಿಸಿದಾಗಲೂ ಪೂಜಾರಿಗೆ ಏನೂ  ತಿಳಿದಿರಲಿಲ್ಲ. ಕೆಲ ಹೊತ್ತಿನಲ್ಲೇ ಜುಮಾದಿ ದೈವ ಪೂಜಾರಿಗೆ ದರ್ಶನದಲ್ಲಿ  ಬಂದು ತಾನೇ ಮಸೀದಿಯ ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನ  ನೀಡಿದ್ದೇನೆಂದು ತಿಳಿಸಿತು. ಅಂದು ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನು ಕೊಯ್ದು ಕೊಟ್ಟಿದ್ದು ಪೂಜಾರಿಯಲ್ಲ  ಬದಲಾಗಿ ಪುಜಾರಿಯ ರೂಪವನ್ನು ತಾಳಿದ ಜುಮಾದಿ ದೈವ ಎಂಬುವುದು  ಇಲ್ಲಿನ ಎರಡೂ  ಸಮುದಾಯದ  ಗ್ರಾಮಸ್ಥರ ನಂಬಿಕೆ. ಇಂಥಹಾ ಹತ್ತಾರು ಧರ್ಮಮೀರಿದ ಮನುಷ್ಯ ಪ್ರೀತಿಯ ಕಥೆಗಳು ಇಲ್ಲಿ ಸಾಮಾನ್ಯ.

ಧಾರ್ಮಿಕ ಕೂಡುಬಾಳುವಿಕೆಗೆ ಸಾಕ್ಷಿಯಾಗಿರುವ ಮತ್ತೊಂದು ಕ್ಷೇತ್ರ ದಕ್ಷಿಣ  ಕನ್ನಡ ಜಿಲ್ಲೆಯ ಪಕ್ಕದ ಜಿಲ್ಲೆ ಕಾಸರಗೋಡಿನ ಉದ್ಯಾವರ ಅಸಯ್ಯದ್  ಶಹೀದ್  ದರ್ಗಾ ಹಾಗೂ ಮಾಡಾ ಅರಸು  ದೈವಗಳ ದೈವಸ್ಥಾನ. ಇತ್ತೀಚೆಗೆ ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿ  ಮಾರ್ಪಡುತ್ತಿರುವ ಈ ಗ್ರಾಮದಲ್ಲಿ ಹಿಂದೂ-ಮುಸ್ಲಿಮ್ ಭಾಂಧವ್ಯವನ್ನು  ಕಟ್ಟಿಬೆಳೆಸಿದ  ಕ್ಷೇತ್ರವಿದು. ಇಲ್ಲೊಂದು ಅಪರೂಪದ ಹಾಗೂ ವಿಶಿಷ್ಟ ಸಂಪ್ರದಾಯವಿದೆ. ವರ್ಷಂಪ್ರತಿ ಎಪ್ರಿಲ್ ತಿಂಗಳಲ್ಲಿ ಬಿಸು ಹಬ್ಬದ ಬಳಿಕ ಅಂದರೆ, ಎಪ್ರಿಲ್ 14 ಕ್ಕೆ ಮಾಡ ಅರಸು ದೈವಗಳ ಜಾತ್ರಾಮಹೋತ್ಸವ ನಡೆಯುತ್ತದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ ಅಥವಾ ಸಂತೆ ಇಡಬಾರದು ಎಂದು ಸಂಘಪರಿವಾರಿಗಳು ಫರ್ಮಾನು ಹೊರಡಿಸಿದ್ದಾರೋ ಅದಕ್ಕೆ ವಿರುದ್ಧ ಎಂಬುವಂತೆ  ಮಾಡಾ ಅರಸು ದೈವಗಳ  ಜಾತ್ರೆ ಆರಂಭಕ್ಕೂ ಮುನ್ನ  ಗ್ರಾಮದ  ಮುಸ್ಲಿಮರು ಅರಸು ದೈವಗಳ  ದೈವಸ್ಥಾನದ  ಆವರಣಕ್ಕೆ ಬಂದು ಸಂತೆ ಇಡುವ ಪದ್ದತಿ ಇಂದಿಗೂ ಇದೆ. ಊರ ಮುಸ್ಲಿಮ್  ಕುಟುಂಬ ವೀಳ್ಯದೆಳೆ ತೆಂಗಿನಕಾಯಿ  ಜೊತೆಗೆ ಬಂದು ಅರಸು ದೈವಗಳ  ಆರ್ಶೀರ್ವಾದ ಪಡೆದುಕೊಂಡು ಮೊದಲು ದೈವಸ್ಥಾನದ ಆವರಣದಲ್ಲಿ ಸಂತೆ  ನಡೆಸುತ್ತಾರೆ. ನಂತರ ಇತರರಿಗೂ ಸಂತೆ ನಡೆಸಲು  ಅವಕಾಶ ನೀಡಲಾಗುತ್ತದೆ.

ನಂತರ  ಗ್ರಾಮದ  ಮುಸ್ಲಿಮರನ್ನು ಅರಸು ದೈವಗಳ  ಜಾತ್ರೆಗೆ  ಆಹ್ವಾನಿಸಲು ದೈವಸ್ಥಾನದ  ಪ್ರಮುಖರು ಉದ್ಯಾವರ ಮಸೀದಿಗೆ ತೆರಳುತ್ತಾರೆ. ದರ್ಗಾದ ಮುಂದೆ  ಮಸೀದಿಯ ಜಮಾತ್ ಮುಖಂಡರಿಗೆ  ಜಾತ್ರೆಗೆ  ಆಹ್ವಾನ  ನೀಡುತ್ತಾರೆ. ಈ ಸಂಪ್ರದಾಯ ಹುಟ್ಟಲು ಒಂದು ಕಾರಣವಿದೆ. ಶತಮಾನಗಳ  ಹಿಂದೆ  ಈ ಗ್ರಾಮಕ್ಕೆ  ಬಂದ ಅರಸು ಸಹೋದರರಿಗೆ  ಉದ್ಯಾವರ ದರ್ಗಾದ  ಪುಣ್ಯ ಪುರುಷ  ಇದೇ  ಊರಲ್ಲಿ ನೆಲೆನಿಲ್ಲುವಂತೆ ವಿನಂತಿ ಮಾಡ್ತಾರೆ. ಅದರಂತೆ ಅರಸು  ಸಹೋದರರು ಈ ಗ್ರಾಮದಲ್ಲಿ ನೆಲೆನಿಲ್ತಾರೆ. ಗ್ರಾಮದ ಮುಸ್ಲಿಮ್ ಪುಣ್ಯ ಪುರುಷ  ಹಾಗೂ  ಅರಸು  ಸಹೋದರರ  ನಡುವೆ ಉತ್ತಮ ಭಾಂದವ್ಯವಿತ್ತು. ಈ ಪ್ರಕಾರ ಮುಸ್ಲಿಮ್ ಸಂತ  ಹಾಗೂ  ಅರಸು ಸಹೋದರರ ನಡುವೆ ಒಂದು ಒಪ್ಪಂದವಾಗುತ್ತದೆ. ಈ  ಪ್ರಕಾರ ಪ್ರತಿ ವರ್ಷ ನಡೆಯೋ ಉತ್ಸವಕ್ಕೆ  ಗ್ರಾಮದ ಮುಸ್ಲಿಮರು ಆಹ್ವಾನದ ಮೇರೆಗೆ ಬಂದು ಪಾಲ್ಗೊಳ್ಳಬೇಕು ಹಾಗೂ  ಊರೂಸ್ ಕಾರ್ಯಕ್ರಮಕ್ಕೆ ನಾಡಿನ ಹಿಂದೂಗಳು  ಭಾಗವಹಿಸಬೇಕೆಂದು. ಇದರಂತೆ  ಈ  ಸಂಪ್ರದಾಯ ಇಂದಿಗೂ ಆಚರಿಸಲ್ಪಡುತ್ತಾ  ಬಂದಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ವರ್ಷಂಪ್ರತಿ ಮಾಡ ಅರಸು ದೈವಗಳ 5 ದಿನಗಳ  ಜಾತ್ರೆ ಹಾಗೂ  ಎರಡು  ದಿನಗಳ  ಬಂಡಿ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಜಾತ್ರೆಗೆ  ಗ್ರಾಮದ 20160211_165540 ಮುಸ್ಲಿಮರು ಬರುತ್ತಾರೆ. ದೈವಸ್ಥಾನದ  ಅಂಗಳದಲ್ಲಿರೋ ಸಿಂಹಾಸನ  ಕಟ್ಟೆಯಲ್ಲಿ  ಬ್ರಾಹ್ಮಣರಿಗೆ ಹಾಗೂ ಮುಸ್ಲಿಮರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ  ಮುಸ್ಲಿಮರನ್ನು ಬಹಳ ಗೌರವದಿಂದ ನೋಡಿಕೊಳ್ಳಲಾಗುತ್ತಿದೆ. ಇನ್ನು 5 ವರ್ಷಕ್ಕೊಮ್ಮೆ ನಡೆಯೋ ದರ್ಗಾದ ಉರೂಸ್ ಗೂ ಇಲ್ಲಿಯ  ಗ್ರಾಮದ ಹಿಂದೂಗಳು ಹೊರೆಕಾಣಿಕೆಯನ್ನ ನೀಡ್ತಾರೆ. ಉರೂಸ್ ಗೆ  ಆಗಮಿಸಿದ ಎಲ್ಲಾ ಹಿಂದೂಗಳಿಗೆ ಊಟೋಪಚಾರ ಗೌರವಗಳನ್ನ ನೀಡಲಾಗುತ್ತೆ. ಮಾಡಾ ಅರಸು ದೈವಗಳ ದೈವಸ್ಥಾನ ನಿರ್ಮಾಣಕ್ಕೆ ಇಲ್ಲಿಯ ಮುಸ್ಲಿಮ್ ಜಮಾತ್ ವತಿಯಿಂದ 15,000  ಧನ ಸಹಾಯ  ನೀಡಲಾಗಿದೆ. ಈ ರೀತಿಯ ಧಾರ್ಮಿಕ ಸೌಹಾರ್ದತೆಯ ಕುರಿತಾಗಿ ಗ್ರಾಮದ ಎರಡೂ ಸಮುದಾಯಗಳ ಹಿರಿಯರಿಗೆ ಉತ್ತಮ ಅಭಿಪ್ರಾಯವಿದೆ. “ಈ ಗ್ರಾಮದಲ್ಲಿರೋ ಅರಸು ದೈವ ಹಾಗೂ ದರ್ಗಾದ ಶೇಖರು ಊರಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಇಂಥಹಾ ಸೌಹಾರ್ದತೆ ಉಳಿಯಬೇಕು ಬೆಳಿಯಬೇಕು. ಇದುವರೆಗೂ ನಾವೆಲ್ಲಾ ಈ ಸೌಹಾರ್ದ ಪರಂಪರೆಯನ್ನು ಉಳಿಸಿಕೊಂಡು  ಬಂದಿದ್ದೇವೆ, ಇದನ್ನು ಮುಂದುವರಿಸುವ  ಜಾವಾಬ್ದಾರಿ ಇಂದಿನ ಯುವ ಸಮೂಹದ್ದು”  ಎನ್ನುತ್ತಾರೆ ಅರಸು ದೈವದ ಮುಂಡತ್ತಾಯ  ದೇವರ  ಪಾತ್ರದಾರಿ ಮಂಜು ಬೆಲ್ಚಡ. “ನಾವು ಈ ರೀತಿಯ ಮತ ಸೌಹಾರ್ದತೆಯನ್ನು ಬಯಸ್ತೇವೆ. ಇದು ಹೀಗೆ ಮುಂದುವರಿಯಲಿ ಎಂದು ದೇವರಲ್ಲಿ  ಪ್ರಾರ್ಥನೆ ಮಾಡ್ತೇನೆ. ನಮ್ಮ ಮಕ್ಕಳನ್ನು ಅರಸು ದೈವಗಳ ಜಾತ್ರಾಮಹೋತ್ಸವಕ್ಕೆ ಕಲಿಸಿಕೊಡುತ್ತೇನೆ” ಎನ್ನುತ್ತಾರೆ ಗ್ರಾಮಸ್ಥ ಯು.ಕೆ ಮುಹಮ್ಮದ್.  ಉದ್ಯಾವರ-ಮಾಡ ಅರಸು ದೈವಗಳ ಸ್ಥಾನ ಹಾಗೂ ಅಸೈಯದ್ ಶೇಖ್ ದರ್ಗಾಗಳು ಈ ಗ್ರಾಮದಲ್ಲಿ ಮತಸೌಹಾರ್ದತೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ದಕ್ಷಿಣ ಕನ್ನಡ  ಜಿಲ್ಲೆಯ ಅಜಿಲಮೊಗೆರು  ಗ್ರಾಮದಲ್ಲಿರು  ಮುಸ್ಲಿಮ್ ಸಂತನ ಉರೂಸ್ ಕಾರ್ಯಕ್ರಮಕ್ಕೆ ಸ್ಥಳೀಯ  ಹಿಂದೂಗಳು ತುಪ್ಪ ಕೊಡುವುದು  ಹಾಗೂ ಆ ಗ್ರಾಮದ ದೇವಸ್ಥಾನದ  ಜಾತ್ರಾಮಹೋತ್ಸವಕ್ಕೆ ಮುಸ್ಲಿಮರು ಎಣ್ಣೆ ಕೊಡುವ  ಸಂಪ್ರದಾಯ ಆಚರಣೆಯಲ್ಲಿತ್ತು. ಉರೂಸ್ ಕಾರ್ಯಕ್ರಮಕ್ಕೆ ಊರ  ಹಿಂದೂಗಳೂ ಜಾತ್ರಾ ಮಹೋತ್ಸವಕ್ಕೆ ಗ್ರಾಮದ ಮುಸ್ಲಿಮರೂ ಹೋಗಿಬರುತ್ತಾ ಪರಸ್ಪರ ಸಹಕಾರ ನೀಡುತ್ತಾ ಸಾರಮಸ್ಯ ಸಾರುವ ಪದ್ದತಿ  ಇಂದಿಗೂ ಗ್ರಾಮದಲ್ಲಿ  ಕಾಣಸಿಗುತ್ತದೆ. ಇವತ್ತು ಮುಸ್ಲಿಮ್ ಜಿಲ್ಲಾಧಿಕಾರಿಯ  ಹೆಸರಿನಲ್ಲಿ ವಿವಾದಕ್ಕೆ ಕಾರಣವಾಗಿರುವ ಪುತ್ತೂರು ಮಹಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅಧಿಕ  ಸಂಖ್ಯೆಯ  ಮುಸ್ಲಿಮರು ಭಾಗವಹಿಸುತ್ತಿದ್ದರು. ಜಾತ್ರೆಗದ್ದೆಯಲ್ಲಿ ವ್ಯಾಪಾರ ಮಾಡುವವರೂ ಬಹುತೇಕ  ಮುಸ್ಲಿಮರೇ ಆಗಿದ್ದರು. ಜಾತ್ರೆಗೆ ಅಗತ್ಯವಿರುವ ಬಾಳೆಕಾಯಿ, ತೆಂಗಿನಕಾಯಿಯನ್ನು ಮುಸ್ಲಿಮ್ ವರ್ತಕರು ನೀಡುತ್ತಿದ್ದರು. ಇನ್ನು ಜಾತ್ರಾಮಹೋತ್ಸವದಲ್ಲಿ ಸುಡು ಮದ್ದು ಪ್ರದರ್ಶನ ಮಾಡುತ್ತಿದ್ದವನು ಬದಿಯಡ್ಕ ಮೂಲದ ಮುಸ್ಲಿಮ್ ಸುಡುಮದ್ದು  ವ್ಯಾಪಾರಿ. ಆದರೆ ಬಾಬರೀ  ಮಸೀದಿ  ಧ್ವಂಸ ಘಟನೆಯ ನಂತರ ಜಾತ್ರೆಗೆ ಬರುವ ಮುಸ್ಲಿಮರ ಸಂಖ್ಯೆ ಕಡಿಮೆಯಾಯಿತು. ಕೋಮುವಾದಿ  ಸಂಘಟನೆಗಳು ಅನ್ಯಧರ್ಮಿಯರು ಜಾತ್ರೆಗೆ ಬರದಂತೆ ಹಾಗೂ  ಜಾತ್ರೆಯಲ್ಲಿ ಮುಸ್ಲಿಮರು  ವ್ಯಾಪಾರ ನಡೆಸದಂತೆ ಫರ್ಮಾನು ಹೊರಡಿಸಿದರು. ಇವೆಲ್ಲದರ ನಡುವೆಯೂ ಇಂದಿಗೂ ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳ ದೇವಸ್ಥಾನಗಳ ವಾರ್ಷಿಕ ಮೇಳಗಳಲ್ಲಿ, ಭೂತಕೋಲ ಆಚರಣೆಗಳಲ್ಲಿ, ಕಾರ್ಕಳದ ಆತ್ತೂರ್ ಚರ್ಚ್ ಉತ್ಸವಗಳಲ್ಲಿ, ಸೈದಾನ್ ಬೀಬಿ ದರ್ಗಾ, ಉಳ್ಳಾಲ ಸೈಯದ್ ಮದನಿ ದರ್ಗಾಗಳ ಉರೂಸ್ ಗಳಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಕೂಡಿ ಆಚರಣೆ ಮಾಡೋ ಇಂಥಹಾ ಸಾಕಷ್ಟು ಉದಾಹರಣೆಗಳು  ಜಿಲ್ಲೆಯಲ್ಲಿ ಕಾಣಸಿಗುತ್ತದೆ. ಆದ್ರೆ  ಇಂದು ಎರಡೂ ಧರ್ಮಗಳ ಕೋಮುವಾದಿಗಳು ಮೂಲಭೂತವಾದಿಗಳು ಇಂಥಹಾ ಕೂಡುಬಾಳುವಿಕೆಯ ಸಂಸ್ಕೃತಿಗೆ ಕೊಳ್ಳಿ ಇಡುತ್ತಿದ್ದಾರೆ. ಈ ಮೂಲಕ  ಕರಾವಳಿಯಲ್ಲಿ  ಹಿಂದೂ ಮುಸ್ಲಿಮ್  ಸಮುದಾಯಗಳ ನಡುವೆ ಸೃಷ್ಟಿಯಾಗಿರುವ ಕಂದಕವನ್ನು ಇನ್ನಷ್ಟು ವಿಸ್ತರಿಸೋ  ದುರುದ್ದೇಶ ಇವರದ್ದು. ಜಿಲ್ಲೆಯ  ಜಿಲ್ಲಾಧಿಕಾರಿ ಮುಸ್ಲಿಮ್ ಸಮುದಾಯದವರೆಂಬ ಕಾರಣಕ್ಕಾಗಿ  ಜಾತ್ರೆಯ  ಆಮಂತ್ರಣ  ಪತ್ರದಿಂದ ಹೆಸರು ಕಿತ್ತುಹಾಕುವಂತೆ ಒತ್ತಾಯಿಸುವುದು, ಜಾತ್ರೆಗದ್ದೆಯಲ್ಲಿ ಮುಸ್ಲಿಮರು ಅಂಗಡಿ  ತೆರೆಯದಂತೆ ಫರ್ಮಾನು ಹೊರಡಿಸುತ್ತಿರುವುದು ಇದರ ಮುಂದುವರಿದ ಭಾಗವಷ್ಟೇ. ಕರಾವಳಿಯ ಸಾರಮಸ್ಯ ಬಯಸೋ ಜನಸಮುದಾಯ ಎಚ್ಚೆತ್ತುಕೊಂಡು ಮನಸ್ಸುಗಳನ್ನು ವಿಭಜಿಸೋ  ಸನಾತನವಾದಿಗಳ ಇಂಥಹಾ ಪ್ರಯತ್ನಗಳನ್ನು ಸೋಲಿಸಬೇಕಿದೆ.

5 thoughts on “ಜಾತ್ರೆಯ  ಆಮಂತ್ರಣ ಪತ್ರಿಕೆಯಲ್ಲಿ  ಮುಸ್ಲಿಮ್  ಡಿಸಿಯ  ಹೆಸರು ವಿವಾದ ಹಾಗೂ ಕರಾವಳಿಯ  ಕೋಮು ಸಾಮರಸ್ಯದ  ಇತಿಹಾಸ

 1. Ananda Prasad

  ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಜಿಲ್ಲಾಧಿಕಾರಿ ಹೆಸರು ಹಾಕಿದ್ದು ಜನರ ಸಮಸ್ಯೆಯೇ ಅಲ್ಲ. ಜನಸಾಮಾನ್ಯರ, ಕೃಷಿಕರ ನೈಜ ಸಮಸ್ಯೆಗಳು ಬೇಕಾದಷ್ಟು ಇವೆ. ಅವುಗಳ ಬಗ್ಗೆ ಯಾವ ಸಂಘಟನೆಗಳೂ ದನಿ ಎತ್ತುವುದಿಲ್ಲ. ಉದಾಹರಣೆಗೆ ರಾಜ್ಯ ಸರ್ಕಾರ ಲೋಕಾಯುಕ್ತ ಹುದ್ದೆಯನ್ನು ತುಂಬಿಸದೆ ಖಾಲಿ ಇಟ್ಟಿದೆ. ಲೋಕಾಯುಕ್ತರನ್ನು ಶೀಘ್ರ ನೇಮಿಸಿ ಎಂದು ಜನಾಂದೋಲನ ಮಾಡಲು ಯಾವ ಸಂಘಟನೆಗಳೂ ಉಗ್ರ ಪ್ರತಿಭಟನೆ ಕೈಗೊಳ್ಳುವುದಿಲ್ಲ. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ಅದನ್ನು ಒಂದು ‘ನಾಮ್ ಕೆ ವಾಸ್ತೆ’ ಸಂಸ್ಥೆಯನ್ನಾಗಿ ಮಾಡಿ ರಾಜ್ಯವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದರೂ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಕಂಡುಬರಲಿಲ್ಲ. ನಮ್ಮ ಜನ ಅಗತ್ಯವಾಗಿ ಮಾಡಬೇಕಾದ ವಿಷಯಗಳಿಗೆ ಪ್ರತಿಭಟನೆ ಮಾಡುವುದಿಲ್ಲ. ಡಿ. ಕೆ. ರವಿ ಆತ್ಮಹತ್ಯೆ ಪ್ರಕರಣ ಮೇಲ್ನೋಟಕ್ಕೇ ಆತ್ಮಹತ್ಯೆ ಎಂಬುದು ಕಂಡುಬರುತ್ತಿದ್ದರೂ ಅದನ್ನು ಕೊಲೆ ಎಂದು ಬಿಂಬಿಸಿ ರಾಜ್ಯದಾದ್ಯಂತ ಸ್ಫೋಟಕ ಪ್ರತಿಭಟನೆಗಳನ್ನು ಜನ ಮಾಡಿದರು. ಪ್ರತಿಭಟನೆಯ ಕಾವು ಹೇಗಿತ್ತು ಎಂದರೆ ಇಡೀ ರಾಜ್ಯವೇ ಹೊತ್ತಿ ಉರಿಯಲು ಸಿದ್ಧವಾಗಿರುವಂತೆ ಕಂಡಿತ್ತು. ಈಗ ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ನಿರ್ಜೀವಗೊಳಿಸಲು ತೊಡಗಿರುವಾಗಲೂ ಯಾವುದೇ ಪ್ರತಿಭಟನೆ ಜನರ ಕಡೆಯಿಂದ ಭುಗಿಲೇಳುತ್ತಿಲ್ಲ. ಧರ್ಮ, ದೇವರ ವಿಷಯದಲ್ಲಿ ಮಾತ್ರ ಜನರನ್ನು ರೊಚ್ಚಿಗೇಳಿಸುವ ಸಂಸ್ಥೆಗಳು ಅತ್ಯಗತ್ಯವಾಗಿ ಮಾಡಬೇಕಾದ ವಿಷಯಗಳಿಗಾಗಿ ಪ್ರತಿಭಟನೆ ಮಾಡಲು ಮುಂದಾಗುತ್ತಿಲ್ಲ. ಜನಪರ ವಿಷಯಗಳಿಗಾಗಿ ಉಗ್ರ ಪ್ರತಿಭಟನೆ ಮಾಡಿದ್ದಿದ್ದರೆ ಈ ದೇಶವು ಈಗಾಗಲೇ ಭ್ರಷ್ಟಾಚಾರ ಮುಕ್ತ ದೇಶವಾಗುತ್ತಿತ್ತು. ಜನಪೀಡಕ ಕೆಂಪು ಪಟ್ಟಿಯ ಅನವಶ್ಯಕ ಕಾನೂನುಗಳನ್ನು ರದ್ದುಪಡಿಸಿ ಜನೋಪಯೋಗಿ ಕಾನೂನುಗಳು ದೇಶದಲ್ಲಿ ರೂಪುಗೊಳ್ಳುತ್ತಿದ್ದವು.

  Reply
 2. Ananda Prasad

  ಜಾತ್ರೆಯ ಆಮಂತ್ರಣ ಪತ್ರದಲ್ಲಿ ಮುಸ್ಲಿಂ ಧರ್ಮದ ಜಿಲ್ಲಾಧಿಕಾರಿ ಹೆಸರು ಹಾಕಿದ್ದರ ವಿರುದ್ಧ ಹೋರಾಡಲು ಎಷ್ಟೊಂದು ಸಂಘಟನೆಗಳು ಒಂದಾಗಿವೆ ಆದರೆ ಮಾಹಿತಿ ಹಕ್ಕು ಕಾರ್ಯಕರ್ತ ಮಂಗಳೂರಿನ ವಿನಾಯಕ ಬಾಳಿಗರ ಬರ್ಬರ ಕೊಲೆಯ ವಿರುದ್ಧ ಹೋರಾಡಲು ಯಾವುದೇ ಹಿಂದೂ ಸಂಘಟನೆಗಳಿಗೂ ಪುರುಸೊತ್ತು ಇಲ್ಲ, ಎಂಥಾ ವಿಪರ್ಯಾಸವಿದು? ಒಬ್ಬ ಸೈನಿಕ ಗಡಿಯಲ್ಲಿ ಸತ್ತರೆ ಅದನ್ನು ವೈಭವೀಕರಿಸುವವರು, ಅದಕ್ಕಾಗಿ ಲಕ್ಷಾಂತರ ರೂಪಾಯಿಗಳ ಪರಿಹಾರ ಘೋಷಿಸುವವರು, ಅವರ ಮನೆಗೆ ಎಡತಾಕುವ ರಾಜಕೀಯ ಧುರೀಣರು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಹಿಂದೂಗಳಿಂದಲೇ ಬರ್ಬರ ಹತ್ಯೆಗೀಡಾದ ಬಾಳಿಗರ ಮನೆಗೆ ಭೇಟಿ ನೀಡಲಿಲ್ಲ, ಪರಿಹಾರಕ್ಕಾಗಿ ಒತ್ತಾಯಿಸಲಿಲ್ಲ. ಹಿಂದೂಗಳ ಕೊಲೆಯ ವಿರುದ್ಧ ಪ್ರತಿಭಟಿಸುವಲ್ಲಿಯೂ ಎಂಥಾ ತಾರತಮ್ಯ! ದೇವಸ್ಥಾನದ ಹಣಕಾಸಿನ ಅವ್ಯವಹಾರದ ವಿಚಾರದಲ್ಲಿ ಹೋರಾಡಿದ ಬಾಳಿಗರ ಬೆಂಬಲಕ್ಕೆ ಯಾವ ಹಿಂದೂ ಸಂಘಟನೆಗಳೂ ಬಂದಿಲ್ಲ. ಹಿಂದೂ ಸಂಘಟನೆಗಳ ಇಂಥಾ ಆಷಾಢಭೂತಿತನಕ್ಕೆ ಏನೆಂದು ಹೇಳೋಣ? ಭ್ರಷ್ಟಾಚಾರದ ವಿರುದ್ಧ ಹೋರಾಡಿ ಹತ್ಯೆಗೀಡಾದ ಬಾಳಿಗರ ದೇಶಸೇವೆ ಯಾವುದೇ ಸೈನಿಕರ ಬಲಿದಾನಕ್ಕಿಂತ ಕಡಿಮೆಯಲ್ಲ ಆದರೂ ಈ ವಿಚಾರದ ಬಗ್ಗೆ ನಮ್ಮ ಮಾಧ್ಯಮಗಳು, ನಮ್ಮ ಜನರ ಪ್ರತಿಕ್ರಿಯೆ ಶೂನ್ಯದ ಸಮೀಪ ಇದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಹಿಂದೂಗಳಿಂದಲೇ ವೀರಮರಣವನ್ನಪ್ಪಿದ ಬಾಳಿಗರ ಸಾವು ಕೊಲೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದ್ದರೂ ನಮ್ಮ ರಾಜ್ಯದ ಜನರ ಪ್ರತಿಕ್ರಿಯೆ ಇದರ ವಿರುದ್ಧ ಮೂಡಲಿಲ್ಲ. ಡಿ. ಕೆ. ರವಿಯವರ ಸಾವು ಆತ್ಮಹತ್ಯೆಯಿಂದ ಆದುದು ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತಿದ್ದರೂ ಆಗ ನಮ್ಮ ಜನರು ಎಬ್ಬಿಸಿದ ಗದ್ದಲದ ೦.೫% ನಷ್ಟು ಕೂಡ ಗದ್ದಲ ಈಗ ನಮ್ಮ ಜನರು ಎಬ್ಬಿಸುತ್ತಿಲ್ಲ. ಹಾಗಾದರೆ ನಮ್ಮ ಜನರ ವಿವೇಚನೆಗೆ ದೆವ್ವ ಮೆಟ್ಟಿದೆಯೇ?

  ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಪ್ರಬಲ ಅಸ್ತ್ರವಾಗಬಹುದಾದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಕೆಲಸದಲ್ಲಿ ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ತೊಡಗಿದ್ದರೂ ವಿರೋಧ ಪಕ್ಷಗಳು ಪ್ರಬಲ ಪ್ರತಿಭಟನೆ ನಡೆಸುತ್ತಿಲ್ಲ ಅಂದರೆ ಒಳಗಿಂದೊಳಗೆ ಲೋಕಾಯುಕ್ತ ದುರ್ಬಲಗೊಳಿಸುವಲ್ಲಿ ವಿರೋಧ ಪಕ್ಷಗಳು ಆಡಳಿತ ಪಕ್ಷಕ್ಕೆ ಸಹಕರಿಸುತ್ತಿವೆ ಎಂದಾಯಿತು. ಈಗ ಆಮ್ ಆದ್ಮಿ ಪಕ್ಷದವರು ಮಾತ್ರ ಇದರ ಬಗ್ಗೆ ಪ್ರತಿಭಟಿಸುವ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಂಥ ಪ್ರಮುಖ ವಿಚಾರಗಳು ನಮ್ಮ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸುದ್ದಿಯೇ ಅಲ್ಲ. ಈ ಬಗ್ಗೆ ಯಾವ ವಾಹಿನಿಯಲ್ಲಿಯೂ ನಿರಂತರ ಚರ್ಚೆ ನಡೆದದ್ದು ಕಂಡುಬರಲಿಲ್ಲ. ಮಾಧ್ಯಮಗಳೇ ಎಚ್ಚತ್ತುಕೊಳ್ಳದಿದ್ದರೆ ಜನ ಎಚ್ಚತ್ತುಕೊಳ್ಳುವುದು ಹೇಗೆ? ಕರ್ನಾಟಕದ ಎಲೆಕ್ಟ್ರಾನಿಕ್ ಮಾಧ್ಯಮಗಳು ಆತ್ಮಹತ್ಯೆ ಮಾಡಿಕೊಂಡಿವೆಯೇ, ಜೀವಂತ ಇಲ್ಲವೇ ಅಥವಾ ಇದ್ದೂ ಸತ್ತಂತೆ ನಟಿಸುತ್ತಿವೆಯೇ ಎಂಬ ಸಂದೇಹ ಕಾಡುತ್ತಿದೆ.

  Reply
 3. ಸೀತಾ

  ಒಬ್ಬ ಜವಾಬ್ದಾರಿಯುತ ಸರಕಾರೀ ಅಧಿಕಾರಿಯಾಗಿ ಇಬ್ರಾಹ್ಮಿಂ ಅವರು ಕಾನೂನಿಗೆ ವಿರುದ್ಧವಾಗಿ ಹಿಂದೂ ದೇವಾಲಯದ ಕಾರ್ಯಕ್ರಮದಲ್ಲಿ ತಲೆ ಹಾಕುವ ಕೆಲಸ ಮಾಡಬಾರದಿತ್ತು. ನಾಡಿನ ಕಾನೂನಿಗೆ ಅಧಿಕಾರಿಗಳು ಬೆಲೆ ನೀಡದಿದ್ದರೆ ಜನಸಾಮಾನ್ಯರಲ್ಲಿ ಕಾನೂನು ಬಗ್ಗೆ ವಿಶ್ವಾಸವೇ ಹೋಗಿಬಿಡುತ್ತದೆ. ಮಹಾಲಿಂಗೇಶ್ವರ ದೇವರಲ್ಲಿ ಇಬ್ರಾಹ್ಮಿಂ ಅವರಿಗೆ ವೈಯಕ್ತಿಕ ನೆಲೆಯ ನಂಬಿಕೆ ಇದ್ದರೆ ಖಂಡಿತ ಅವರು ಜನಸಾಮಾನ್ಯನಾಗಿ ಜಾತ್ರೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಲಿ, ಯಾರೂ ತಕರಾರು ತೆಗೆಯುವುದಿಲ್ಲ.

  Reply
 4. Sachin Nemade

  Dear Ravi, was disappointed to find no article on Babasaheb Ambedkar on his birth anniversary. Has he become irrelevant to Vartamaana and you? Or are you so busy that you can’t write five lines on this occasion? Very disappointing.

  Reply

Leave a Reply

Your email address will not be published.