ತ್ರಿತಲಾಕ್ ನಿಷೇಧ, ಇಸ್ಲಾಮ್ ಹಾಗೂ ಸುಧಾರಣೆ


-ಇರ್ಷಾದ್ ಉಪ್ಪಿನಂಗಡಿ


 

1984ರಲ್ಲಿ ನಡೆದ ಶಾಬಾನು ಪ್ರಕರಣ ದೇಶದಾದ್ಯಂತ ಸಂಚಲನವನ್ನೇ ಮೂಡಿಸಿತ್ತು. ತನ್ನ 60 ವರ್ಷದ ಇಳಿ ವಯಸ್ಸಿನಲ್ಲಿ ಪತಿಯಿಂದ ತಲಾಕ್ ನೀಡಲ್ಪಟ್ಟ ಒಂಟಿinidan-muslim-woman ಮಹಿಳೆಯೊಬ್ಬಳು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಪ್ರಕರಣವಿದು. ಇಂದೋರಿನ ಶಾಬಾನುವಿಗೆ ಆಕೆಯ ಪತಿ ಅಹಮ್ಮದ್ ಖಾನ್ ತಲಾಕ್ ಕೊಟ್ಟಿದ್ದ. ಅಹಮ್ಮದ್ ಖಾನ್ ತಲಾಕ್ ನೀಡಿ ಮತ್ತೊಂದು ಮದುವೆಯಾಗಿ ಬದುಕುಕಟ್ಟಿಕೊಂಡಿದ್ದ. ಆದರೆ ಪತಿಯ ನಿರ್ಧಾರದಿಂದ ಶಾಬಾನು ದಿಕ್ಕುತೋಚದೆ ಕಂಗಾಲಾದ್ದರು. ಶಾಬಾನು ಕ್ರಿಮಿನಲ್ ಪ್ರೊಸೀಜರ್ ಕೋಡ್ 125ನೇ ವಿಧಿಯಂತೆ ಜೀವನಾಂಶಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆರಂಭದಲ್ಲಿ ಕೆಳ ನ್ಯಾಯಾಲ 85 ರೂಪಾಯಿ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿತ್ತು. ಜೀವನಾಂಶದಲ್ಲಿ ಹೆಚ್ಚಳ ಕೋರಿ ಮೇಲಿನ ನ್ಯಾಯಾಲಯಕ್ಕೆ ಅಪೀಲು ಮಾಡಿದ ಶಾಬಾನುಗೆ 185 ರೂಪಾಯಿ ಜೀವನಾಂಶ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗತೊಡಗಿತ್ತು. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇಸ್ಲಾಮಿಕ್ ನಿಯಮಗಳ ಪ್ರಕಾರ ಜೀವನಾಂಶಕ್ಕೆ ಅವಕಾಶ ಇಲ್ಲದ ಕಾರಣ ಶಾಬಾನುಗೆ ಜೀವನಾಂಶ ನೀಡಬಾರದೆಂದು ಪತಿ ಅಹಮ್ಮದ್ ಖಾನ್ ಬೆಂಬಲಕ್ಕೆ ನಿಂತಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದವು. ಶಾಬಾನೂ ವಿರುದ್ಧನೂ ಇದು ಮುಂದುವರಿಯಿತು. ಈ ನಡುವೆ ಮುಸ್ಲಿಮ್ ಮಹಿಳೆಯರ ಜೀವನಾಂಶವನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರ ಗಡಿಯಾರದ ಮುಳ್ಳುಗಳನ್ನು ಹಿಂದಕ್ಕೆ ತಿರುಗಿಸಿದಂತೆ ಎಂಬ ಪ್ರಗತಿಪರ ಚಿಂತಕರ ಅಭಿಪ್ರಾಯಗಳ ನಡುವೆಯೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜೀವನಾಂಶವನ್ನು ರದ್ದುಗೊಳಿಸುವಲ್ಲಿ ಮುಸ್ಲಿಮ್ ಸಂಘಟನೆಗಳು ಯಶಸ್ವಿಯಾದವು. ಇಂದಿಗೂ ಶಾಬಾನು ಪ್ರಕರಣ ಮುಸ್ಲಿಮ್ ಸಮಾಜದಲ್ಲಿ ಮಹಿಳೆಯರ ಅಸಹಾಯಕತೆ ಹಾಗೂ ಪುರುಷ ಪ್ರಾಬಲ್ಯದ ಸಂಕೇತವಾಗಿ ನಮ್ಮ ಮುಂದಿದೆ.

ಇದೀಗ ಮತ್ತೊಮ್ಮೆ ತ್ರಿವಳಿ ತಲಾಕ್ ವಿಚಾರ ಚರ್ಚೆಗೆ ಬಂದಿದೆ. “ತ್ರಿತಲಾಕ್” ನಿಷೇಧ ಸಂಬಂಧ ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ಸಲ್ಲಿಸಿರುವ ಅಫಿದವಿತ್ ದೇಶಾದ್ಯಂತ ಪರ ವಿರೋಧ ವಾದ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಮ್ ಸಮಾಜದ ಧಾರ್ಮಿಕ ಮುಖಂಡರು, ಕೇಂದ್ರ ಸರ್ಕಾರ ಮುಸ್ಲಿಮರ ಧಾರ್ಮಿಕ ಹಕ್ಕುಗಳ ಮೇಲೆ ಸವಾರಿ ಮಾಡುತ್ತಿದೆ ಎಂದು ಗುಲ್ಲೆಬ್ಬಿಸಲು ಆರಂಭಿಸಿದ್ದಾರೆ. ಈ ಕುರಿತಾಗಿ ಮಾಧ್ಯಮಗಳಲ್ಲೂ ಚರ್ಚೆ ನಡೆದಾಗ ಮಾಧ್ಯಮ ಪೂರ್ವಾಗ್ರಹಪೀಡಿತವಾಗಿ ನಡೆದುಕೊಳ್ಳುತ್ತಿದೆ ಎಂದು ಮಾಧ್ಯಮಗಳ ವಿರುದ್ಧವೂ ಮಾತಿನ ದಾಳಿ ನಡೆಸುತ್ತಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ “ತ್ರಿತಲಾಕ್”  ಹಾಗೂ ಸಮಾನ ನಾಗರಿಕ ಸಂಹಿತೆಯನ್ನ ಜಾರಿಗೆ ತರುವ ನೈತಿಕತೆ ಇದೆಯೋ ಇಲ್ಲವೋ ಎಂಬುವುದು ಮತ್ತೊಂದು ಚರ್ಚಾವಿಚಾರ. ಅವುಗಳೇನೇ ಇದ್ದರೂ ಇಲ್ಲಿ ನಾವು ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ವಿಚಾರ ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧವಾಗಿ ನಡೆಯಬೇಕಾದ ಸುಧಾರಣಾ ಕ್ರಾಂತಿಯ ಕುರಿತಾಗಿ.

ತ್ರಿತಲಾಕ್ ಕುರಿತಾಗಿ ಕುರಾನ್ ಏನು ಹೇಳುತ್ತದೆ?

ಇಸ್ಲಾಮ್ ಧರ್ಮದಲ್ಲಿ ಏಕಕಾಲಕ್ಕೆ ತ್ರಿತಲಾಕ್ ಅವಕಾಶ ಇದೆಯಾ ಎಂಬುವುದು ನಾವು ಗಮನಿಸಬೇಕಾದ ಪ್ರಮುಖ ಅಂಶ. ಇಸ್ಲಾಮ್ ಪ್ರಕಾರMuslim-women-mosque, ವಿವಾಹ ವಿಚ್ಚೇದನ ಆಗಬೇಕಾದರೆ ಪತಿ ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಹೇಳಬೇಕು. ಅಂದರೆ ಪ್ರತಿ ತಲಾಕ್ ನಡುವೆ ನಿರ್ದಿಷ್ಟ ಕಾಲವಕಾಶವಿದೆ. ಈ ಕಾಲಾವಕಾಶದಲ್ಲಿ ಪತಿ-ಪತ್ನಿ ದೈಹಿಕವಾಗಿ ಕೂಡಿದ ಪಕ್ಷದಲ್ಲಿ ತಲಾಕ್ ಅನೂರ್ಜಿತಗೊಳ್ಳುತ್ತದೆ. ಆದರೆ, ಒಂದೇ ಬಾರಿ ಮೂರು ತಲಾಕ್  ಹೇಳುವ ಪದ್ಧತಿ, ತ್ರಿತಲಾಕ್ ಕುರಿತಾಗಿ ಕುರಾನ್ ನಲ್ಲಿ ಯಾವುದೇ ಉಲ್ಲೇಖವಿಲ್ಲ. ತಲಾಖ್ ಕುರಿತಾಗಿ ಕುರಾನ್ ನಲ್ಲಿ ಈ ರೀತಿ ಹೇಳಲಾಗಿದೆ. “ಸಂದೇಶವಾಹಕರೇ, ನೀವು ಸ್ತ್ರೀಯರಿಗೆ ತಲಾಕ್ ಕೊಡುವಾಗ ಅವರಿಗೆ ಇದ್ದತ್ ಗಾಗಿ ತಲಾಕ್ ಕೊಡಿರಿ. ಇದ್ದತ್ತಿನ ಕಾಲಾವಧಿಗಳನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮ ಪ್ರಭುವಾದ ಅಲ್ಲಾಹನ ಬಗ್ಗೆ ಭಯ ಇರಲಿ. ಇದ್ದತ್ತಿನ ಕಾಲಾವಧಿಯಲ್ಲಿ ಅವರು ಯಾವುದೇ ಅಶ್ಲೀಲ ಕಾರ್ಯವೆಸಗದೇ ಇದ್ದಲ್ಲಿ ನೀವು ಅವರನ್ನು ಅವರ ಮನೆಯಿಂದ ಹೊರಹಾಕಬಾರದು ಮತ್ತು ಅಂಥವರು ತಾವಾಗಿಯೇ ಹೊರಟು ಹೋಗಬಾರದು. ಅಲ್ಲಾಹನು ನಿಶ್ವಯಿಸಿದ ಮೇರೆಗಳಿವು. ಅಲ್ಲಾಹನ ಮೇರೆಗಳನ್ನು ಮೀರಿದವನು ತನ್ನ ಮೇಲೆ ತಾನೇ ಅಕ್ರಮವೆಸಗುವನು. ಪ್ರಾಯಶಃ ಇದಾದ ಬಳಿಕ ಅಲ್ಲಾಹನು ಯಾವುದಾರದೂ ದಾರಿಯನ್ನು ಉಂಟುಮಾಡಲೂಬಹುದು. ನಿಮಗೆ ಅರಿಯದು” – ಕುರಾನ್, ಸೂರಾ 65 (ಅತ್ತಕಾಲ್) ಆಯತ್ 1. ಇನ್ನು ಕುರಾನ್ ಸೂರಾ 4 “ಅನ್ನಿಸಾದ” ಆಯತ್ 35 ರಲ್ಲಿ ತಲಾಕ್ ಕುರಿತಾದ ಉಲ್ಲೇಖ ಹೀಗಿದೆ. “ಪತಿ ಪತ್ನಿಯರ ಸಂಬಂಧ ಕೆಡುವುದೆಂದು ನಿಮಗೆ ಆತಂಕವಾದಲ್ಲಿ ಒಬ್ಬ ಮಧ್ಯಸ್ಥನನ್ನು ಪುರುಷನ ಕಡೆಯಿಂದಲೂ, ಒಬ್ಬನನ್ನು ಸ್ತ್ರೀಯ ಕಡೆಯಿಂದಲೂ ನಿಯುಕ್ತಿಗೊಳಿಸಿರಿ. ಅವರಿಬ್ಬರೂ ಸುಧಾರಿಸಲು ಬಯಸಿದರೆ ಅಲ್ಲಾಹ್ ಅವರ ನಡುವೆ ಸಾಮರಸ್ಯದ ಹಾದಿಯನ್ನು ತೆರೆಯುವನು. ನಿಶ್ವಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ”.

ಪತಿ ಪತ್ನಿ ಸಂಬಂಧ ನಡುವೆ ಬಿರುಕು ಉಂಟಾದಲ್ಲಿ ವಿಚ್ಚೇದನ ಪಡೆಯಲು ಯಾರ ವಿರೋಧವೂ ಇಲ್ಲ. ಅನಿವಾರ್ಯ ಸಂದರ್ಭದಲ್ಲಿ ವಿಚ್ಚೇದನtalaq-whatsapp ಅಗತ್ಯ ಕೂಡಾ. ಆದರೆ ವಿಚ್ಚೇದನಕ್ಕೆ ನೀತಿ ನಿಯಮಗಳು ಬೇಕು. ಯಾವುದೇ ಒಂದು ಕಾಲದಲ್ಲಿ ಜಾರಿಗೆ ಬಂದ ನಿಯಮಗಳು ಇವತ್ತಿಗೂ ಅನ್ವಯವಾಗಬೇಕು ಎಂಬ ವಾದ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ. ಕುರಾನ್ ನಲ್ಲಿ ಒಂದೇ ಬಾರಿಗೆ ಮೂರು ತಲಾಕ್ ನೀಡುವ ಉಲ್ಲೇಖಗಳಿಲ್ಲದಿದ್ದರೂ ಅದೆಷ್ಟೋ ತಲಾಕ್‍ಗಳು ಇದೇ ರೀತಿಯಲ್ಲಿ ನಡೆಯುತ್ತಿವೆ. ಸಿಟ್ಟಿನ ಭರದಲ್ಲೂ ಒಂದೇ ಬಾರಿಗೆ ಮೂರು ತಲಾಕ್ ನೀಡಿರುವ ಪ್ರಕರಣಗಳಿವೆ. ಇಂದಿನ ಆಧುನಿಕ ಸವಲತ್ತುಗಳನ್ನು ಬಳಸಿಕೊಂಡು ವಾಟ್ಸ್ಯಾಪ್, ಇಮೇಲ್‍ಗಳ ಮೂಲಕವೂ ತಲಾಕ್ ನೀಡಲಾಗುತ್ತಿದೆ. ಇಸ್ಲಾಮ್ ಧರ್ಮದಲ್ಲಿ ಈ ರೀತಿಯ ತಲಾಕ್ ಪದ್ದತಿಗೆ ಅವಕಾಶ ಇಲ್ಲ ಎಂದಾದಲ್ಲಿ ಈ ಪದ್ದತಿ ಮತ್ಯಾಕೆ ಜಾರಿಯಲ್ಲಿದೆ. “ತ್ರಿತಲಾಕ್” ನಿಷೇಧ ಧಾರ್ಮಿಕ ಹಕ್ಕುಗಳ ಮೇಲಿನ ದಾಳಿ ಎನ್ನುವವರು ತಲಾಕ್ ಒಳಗಾದ ಮಹಿಳೆಯರ ಪರಿಸ್ಥಿತಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವೇಕೆ? ಇಂದು ತಲಾಕ್ ಪ್ರಕರಣಗಳು ನ್ಯಾಯಪಂಚಾಯತಿಕೆ ನಡೆಸುವ ಮೂಲಕವೂ ನಡೆಯುತ್ತಿವೆ. ಸ್ಥಳೀಯ ಗೂಂಡಾಗಳೂ ತಲಾಕ್ ಪ್ರಕರಣದ ಪಂಚಾಯತಿಕೆ ನಡೆಸುತ್ತಾರೆ. ಇಲ್ಲಿ ಅನೇಕರಿಗೆ ಅತ್ತ ಧಾರ್ಮಿಕ ಕಾನೂನಿನ ಮಾಹಿತಿಯೂ ಇರುವುದಿಲ್ಲ ಇತ್ತ ದೇಶದ ಸಂವಿಧಾನ, ಕಾನೂನು ಕಟ್ಟಲೆಗಳ ಕುರಿತಾಗಿಯೂ ತಿಳುವಳಿಕೆಯೂ ಇರುವುದಿಲ್ಲ. ಇಲ್ಲಿ ಹಣ ಹಾಗೂ ತೋಳ್ಬಲ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಹೀಗಿರುವಾಗ ಮುಸ್ಲಿಮರ ವಿವಾಹ ವಿಚ್ಚೇದನ ಯಾಕೆ ಭಾರತೀಯ ಸಂವಿಧಾನದ ಕಾನೂನಿನಡಿಯಲ್ಲಿ ನಡೆಯಬಾರದು?

ಇಲ್ಲಿ ಕೇವಲ ಒಂದೇ ಬಾರಿಗೆ ಮೂರು ತಲಾಕ್ ಹೇಳುವ ತ್ರಿವಳಿ ತಲಾಕ್ ಒಂದೇ ವಿಚಾರ ಅಲ್ಲ. ತಲಾಕ್‍ಗೆ ಒಳಗಾದ ಪತ್ನಿಯburka ಮುಂದಿನ ಜೀವನ ನಿರ್ವಹಣೆಯ ಕುರಿತಾಗಿ ಚಿಂತಿಸಬೇಕಲ್ಲವೇ? ಸುನ್ನಿ ಹಾಗೂ ಶಿಯಾ ಪಂಗಡಗಳಲ್ಲಿ ತಲಾಕ್ ನೀಡಿದ ನಂತರ ಹೆಂಡತಿಯ ಖರ್ಚಿಗೆ ಗಂಡ ಜವಾಬ್ದಾರನಾಗಿರುವುದಿಲ್ಲ. ತಾಯಿಯ ಎದೆಹಾಲು ಬಿಡಿಸುವವರೆಗೆ ಮಕ್ಕಳನ್ನು ನೋಡಿಕೊಳ್ಳುವ ವೆಚ್ಚವನ್ನು ಗಂಡ ಭರಿಸಬೇಕಾಗುತ್ತದೆ. ಹೀಗಾದಲ್ಲಿ ವಿಚ್ಚೇದಿತ ಮಹಿಳೆಯ  ಮುಂದಿನ ಜೀವನದ ಗತಿಯೇನು? ಬಹುತೇಕ ಗ್ರಾಮೀಣ ಹಾಗೂ ನಗರ ಭಾಗಗಳಲ್ಲೂ ಮುಸ್ಲಿಮ್ ಮಹಿಳೆಯರಿಗೆ ಇಂದಿಗೂ ಉದ್ಯೋಗಕ್ಕೆ ಹೋಗಲು ಅವಕಾಶವಿಲ್ಲ. ಆರ್ಥಿಕವಾಗಿ ಪತಿಯನ್ನೋ ಅಥವಾ ತಂದೆಯನ್ನೂ ಆಕೆ ಅವಲಂಬಿಸಿರುತ್ತಾಳೆ. ಇಂತಹಾ ಸಂದರ್ಭದಲ್ಲಿ ವಿಚ್ಚೇದಿತಳಾದ ಮಹಿಳೆಗೆ ಸ್ವತಂತ್ರ ಜೀವನ ನಿರ್ವಹಣೆ ಹೇಗೆ ಸಾಧ್ಯ.

ಇದು ಒಂದು ಕಡೆಯಾದರೆ ಮುಸ್ಲಿಮ್ ಮಹಿಳೆಗೆ ಗಂಡನಿಂದ ವಿಚ್ಚೇದನ ಪಡೆಯಲು ಅವಕಾಶವಿರುವ ಖುಲಾ ಹಕ್ಕು ವಿಚಾರಕ್ಕೆ ಬರೋಣ. ಇಲ್ಲಿ ಪತಿ ಪತ್ನಿಗೆ ತಲಾಕ್ ಕೊಡುವಷ್ಟು ಸುಲಭವಾಗಿ ಪತ್ನಿ ಪತಿಗೆ ಖುಲಾ ಕೊಡಲು ಸಾಧ್ಯವಿಲ್ಲ ಎಂಬುವುದು ಗಮನಾರ್ಹ. ಇಲ್ಲಿ ಖುಲಾವನ್ನು ಹೆಣ್ಣು ಗಂಡನಿಂದ ಖರೀದಿಸಬೇಕಿದೆ. ಮದುವೆಯ ಸಂದರ್ಭದಲ್ಲಿ ಪತಿ ಕೊಟ್ಟ ಮಹರ್ ಮೊತ್ತವನ್ನು ಹಿಂತಿರುಗಿಸಬೇಕಿದೆ. ಹೀಗಾದಲ್ಲಿ ಮಾತ್ರ ಖುಲಾ ಸಿಗುತ್ತದೆ. ಇಲ್ಲಿ ಮಹಿಳೆ ತನ್ನ ಪತಿಯಿಂದ ಬಿಡುಗಡೆಗಾಗಿ ಆತನಿಂದ ಕಾಡಿ ಬೇಡಿ ಖುಲಾ ಪಡೆಯಬೇಕು. ಕೊನೆಗೂ ಖುಲಾ ಪಡೆಯಬೇಕಾದಲ್ಲಿ ಪತಿಯೇ ತಲಾಕ್ ನೀಡಬೇಕು ಹೊರತು ಪತ್ನಿ ಪತಿಗೆ ತಲಾಕ್ ನೀಡುವ ಅಧಿಕಾರ ಇಲ್ಲ. ಇಲ್ಲಿ ಪತಿಗೆ ಪತ್ನಿ ಬೇಡವಾದಲ್ಲಿ ತಲಾಕ್ ನೀಡುವ ಪದ್ದತಿ ಸರಳವಾಗಿದ್ದರೆ ಪತ್ನಿಗೆ ಪತಿ ಬೇಡವಾದಲ್ಲಿ ಖುಲಾ ನೀಡುವ ಪದ್ದತಿಯನ್ನು ಜಟಿಲಗೊಳಿಸಲಾಗಿದೆ. ಇದನ್ನು ಮಹಿಳಾ ಶೋಷಣೆ ಎಂದು ಕರೆಯದೆ ಮತ್ತೇನನ್ನಲು ಸಾಧ್ಯವೇ?

ಇಸ್ಲಾಮ್ ಮತ್ತು ಸುಧಾರಣೆ

ಪ್ರವಾದಿ ಮುಹಮ್ಮದ್ ಪೈಗಂಬರರ ಕಾಲದಲ್ಲಿ ಅರಬ್ ದೇಶದಲ್ಲಿ ಗುಲಾಮ ವ್ಯಾಪಾರಕ್ಕೆ ಅನುಮತಿ ಇತ್ತು. ಕುರಾನ್ ಕೂಡಾ ಅನುಮತಿ ನೀಡಿತ್ತುburkha sielence. ಇಂದು ಗುಲಾಮಗಿರಿ ಪದ್ದತಿ ದೊಡ್ಡ ಪಾತಕ. ಧರ್ಮದಲ್ಲಿ ಅನುಮತಿ ಇದೆ ಎಂದು ಮತ್ತೆ ಗುಲಾಮಗಿರಿ ಪದ್ದತಿಯನ್ನು ಆಚರಿಸಲು ಸಾಧ್ಯಾವೇ? ಅಂತಹ ಅನಾಗರಿಕ ಪದ್ದತಿಯನ್ನು ಒಪ್ಪಿಕೊಳ್ಳಲು ಖಂಡಿತಾ ಅಸಾಧ್ಯ. ಮನುಷ್ಯ ಘನತೆ ಎತ್ತಿಹಿಡಿಯುವ ಚಿಂತನೆಗಳು ಮೊಳಕೆಯೊಡೆಯುತ್ತಿದ್ದಂತೆ ಗುಲಾಮಗಿರಿಯಂತಹ ಅಮಾನವೀಯ ಪದ್ದತಿಗಳು ನಾಶವಾದವು. ಹೀಗೆ ಸುಧಾರಣೆಗಳು ಬದಲಾವಣೆಗೆ ಅವಕಾಶ ಕಲ್ಪಿಸುತ್ತವೆ. ಇಸ್ಲಾಮ್ ಧರ್ಮ ಎಂದರೆ ಸುಧಾರಣೆಗೆ ಅವಕಾಶ ಇಲ್ಲದ ಧರ್ಮ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಮುಸ್ಲಿಮ್ ಧಾರ್ಮಿಕ ಮುಖಂಡರು ಹಾಗೂ “ಧರ್ಮದ ಗುತ್ತಿಗೆ” ಪಡೆದುಕೊಂಡ ಮೂಲಭೂತವಾದಿಗಳು ವರ್ತಿಸುತ್ತಿದ್ದಾರೆ. ಅರಬ್ ದೇಶದಲ್ಲಿ ಇಸ್ಲಾಮ್ ಧರ್ಮದ ಆರಂಭವೇ ಸುಧಾರಣೆಯಿಂದಾಯಿತು. ಆ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದರು ಸಾಕಷ್ಟು ಸುಧಾರಣೆಗಳಿಗೆ ನಾಂದಿಹಾಡಿದರು. ಇಂತಹಾ ಸುಧಾರಣೆಗಳು ನಿಂತ ನೀರಾಗಬಾರದು ಅದು ಸದಾ ಹರಿಯುತ್ತಲೇ ಇರಬೇಕು. ವಿಪರ್ಯಾಸವೆಂದರೆ ಮುಸ್ಲಿಮ್ ಧಾರ್ಮಿಕ ಪಂಡಿತರು ಇಸ್ಲಾಮ್ ಧರ್ಮವನ್ನು ನಿಂತ ನೀರಾಗಿಸುವಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ. ಧರ್ಮದೊಳಗೆ ಸುಧಾರಣೆಯ ಚಿಂತನೆಗಳು ಮೊಳಕೆಯೊಡೆದಲ್ಲಿ ಅದನ್ನು ಧರ್ಮವಿರೋಧಿ ಎಂದು ಚಿವುಟಿ ಹಾಕುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಸ್ಲಾಮ್ ಪವಿತ್ರ ಗ್ರಂಥ ಕುರಾನ್‍ನಲ್ಲಿ ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯತೆ ನೀಡಿದ್ದರೂ ಮುಸ್ಲಿಮ್ ಮಹಿಳೆಯ ಪಾಲಿಗೆ ಅದು ದೂರದ ಮಾತಾಗಿತ್ತು. ಮಹಿಳೆ ಶಾಲೆಯ ಮೆಟ್ಟಿಲನ್ನೇರಲು ಸಾಕಷ್ಟು ಶ್ರಮಪಡಬೇಕಾಯಿತು. ಕೇವಲ ಮುಸ್ಲಿಮ್ ಸಮಾಜ ಮಾತ್ರವಲ್ಲ, ಇತರ ಧರ್ಮಗಳ ಪುರುಷ ಪ್ರಧಾನ ವ್ಯವಸ್ಥೆಯೂ ಸ್ತ್ರೀಯರನ್ನು ನಿಕೃಷ್ಟವಾಗಿ ನೋಡಿಕೊಂಡಿವೆ. ಅಲ್ಲೂ ಮಹಿಳಾ ವಿರೋಧಿಯಾದ, ಮನುಷ್ಯ ಘನತೆಗೆ ವಿರುದ್ಧವಾದ ಸಾಕಷ್ಟು ಆಚರಣೆ ಪದ್ದತಿಗಳು ಚಾಲ್ತಿಯಲ್ಲಿವೆ. ಆದರೆ ಸುಧಾರಣೆಗಳಿಗೆ ಓಗೊಡುವ ಮನಸ್ಸುಗಳ ಸಂಖ್ಯೆ ವೃದ್ದಿಗೊಳ್ಳುತ್ತಿರುವುದರಿಂದ ಸ್ಥಿತಿಗತಿ ಬದಲಾಗುತ್ತಿದೆ. ಸತಿಸಹಗಮನ ಪದ್ದತಿಯನ್ನು ಮನುವಾದಿಗಳು ಸಂಸ್ಕೃತಿ ಎಂದು ಕೊಂಡಾಡಿದಾಗ ಅದು ಅಮಾನವೀಯತೆ ಎಂದು ಸಾರುವ ಮೂಲಕ ಸತಿ ಪದ್ದತಿಯ ವಿರುದ್ಧದ ಆಂದೋಲನಕ್ಕೆ ರಾಜಾರಾಮ್ ಮೋಹನ್ ರಾಯ್ ನಾಂದಿಹಾಡಿದರು. ಅದೇ ರೀತಿ ಅಂಡೇಡ್ಕರ್, ಫುಲೆ ದಂಪತಿ, ನಾರಾಯಣ ಗುರು ಹೀಗೆ ಹತ್ತು ಹಲವಾರು ಸುಧಾರಕರು ಈ ಮಣ್ಣಿನಲ್ಲಿ ಸುಧಾರಣೆಯ ಬೀಜ ಬಿತ್ತಿದರು. ಅವರೆಲ್ಲರನ್ನೂ ಮನುವಾದಿಗಳು ಇಂದಿಗೂ ದ್ವೇಷ ಅಸೂಹೆಯಿಂದ ಕಂಡರೂ ಸುಧಾರಣೆಯ ಗಾಳಿಗೆ ಬೇಲಿ ಹಾಕಲು ಮನುವಾದಿಗಳಿಂದ ಸಾಧ್ಯವಾಗಿಲ್ಲ.

ಆದರೆ ಮುಸ್ಲಿಮ್ ಸಮಾಜದಲ್ಲಿ ಚಿಂತಕರು, ಸುಧಾರಣಾವಾಧಿಗಳು ಸುಧಾರಣೆಯ ಮಾತುಗಳನ್ನಾಡಿದಲ್ಲಿ, ಇಸ್ಲಾಮ್ ಧರ್ಮದ ರೀತಿ ನೀತಿ ಕಾನೂನುSupreme Court ಕಟ್ಟಲೆಗಳು ಅಂದಿಗೂ ಇಂದಿಗೂ ಎಂದಿಗೂ ಅನ್ವಯವಾಗುವಂತಹದ್ದು, ಈ ನಿಟ್ಟಿನಲ್ಲಿ ಸುಧಾರಣೆ ಅನಗತ್ಯ ಎಂಬ ವಾದಗಳು ಪ್ರತಿಪಾದನೆಯಾಗುತ್ತವೆ. ಈ ವಾದಗಳ ಮೊದಲ ಬಲಿಪಶು ಮಹಿಳೆಯೇ ಆಗಿರುತ್ತಾಳೆ. ಮುಸ್ಲಿಮ್ ಸಮಾಜದಲ್ಲಿ ಹಲಾಲ ಪದ್ದತಿಯೊಂದಿದೆ. ಹಲಾಲಾ ಎಂದರೆ ಪತ್ನಿಗೆ ತಲಾಕ್ ನೀಡಿದ ಪತಿಗೆ ಮತ್ತೆ ಆಕೆಯನ್ನೇ ಮರುಮದುವೆಯಾಗಬೇಕೆಂದು ಅನ್ನಿಸಿದ್ದಲ್ಲಿ ಪತ್ನಿಯ ಒಪ್ಪಿಗೆ ಇದ್ದರೆ ಮರುಮದುವೆಗೆ ಅವಕಾಶವಿದೆ. ಆದರೆ ಇಲ್ಲಿ ವಿಚ್ಚೇದನಗೊಂಡ ಪತಿ ಪತ್ನಿ ಮತ್ತೆ ಮರುಮದುವೆಯಾಗಬೇಕಾದರೆ ಒಂದು ನಿಯಮವಿದೆ; ಅದೇ ಹಲಾಲ. ಅಂದರೆ ಮರುಮದುವೆಗೆ ಮುನ್ನ ಆಕೆಗೆ ಒಂದು ದಿನದ ಮಟ್ಟಿಗೆ ಮತ್ತೊಬ್ಬನ ಜೊತೆ ಮದುವೆ ಮಾಡಿಕೊಳ್ಳಬೇಕು. ನಂತರ ಆತನಿಂದ ತಲಾಕ್ ಪಡೆದು ಇದ್ದತ್ ಅವಧಿಯನ್ನು ಪೂರ್ಣಗೊಳಿಸಬೇಕು. ಬಳಿಕ ಆಕೆಯನ್ನು ಮರುಮದುವೆಮಾಡಿಕೊಳ್ಳುವ ಅವಕಾಶ ಇದೆ. ಇಲ್ಲಿ ಪತಿ ತನ್ನ ಪತ್ನಿಗೆ ತಲಾಕ್ ಕೊಟ್ಟು ಬಳಿಕ ತಪ್ಪಿನ ಅರಿವಾಗಿ ಮತ್ತೆ ಮರುಮದುವೆಯಾಗಬೇಕಾದಲ್ಲಿ ಶಿಕ್ಷೆ ಅನುಭವಿಸಬೇಕಾಗಿ ಬರುವುದು ಮಹಿಳೆಗೆ. ಒಂದು ದಿನದ ಮಟ್ಟಿಗೆ ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದಾದರೆ ಅದು ಆ ಮಹಿಳೆಯ ಮನಸ್ಸಿನ ಮೇಲೆ ಎಷ್ಟೊಂದು ಗಾಢವಾದ ಪರಿಣಾಮ ಬೀರಬಹುದು ಎಂದು ಕನಿಷ್ಠ ಆಲೋಚನೆ ಮುಸ್ಲಿಮ್ ಸಮಾಜದ ಧಾರ್ಮಿಕ ಪಂಡಿತರು ಮಾಡಿದಲ್ಲಿ ಈ ಆಚರಣೆ ಜಾರಿಯಲ್ಲಿರುತಿತ್ತೇ? ಇಂದಿಗೂ ಕೆಲವೆಡೆ ಈ ಹಲಾಲಾ ಪದ್ದತಿ ಜಾರಿಯಲ್ಲಿದೆ. ಅಸಲಿಗೆ ಈ ರೀತಿಯ ಹಲಾಲಾ ಪದ್ದತಿ ಇಸ್ಲಾಮ್ ಧರ್ಮದಲ್ಲಿ ಜಾರಿಯಲ್ಲಿರಲಿಲ್ಲ. ಆದರೂ ಮುಸ್ಲಿಮರಲ್ಲಿ ಆಚರಣೆಯಲ್ಲಿತ್ತು. ಈ ಕುರಿತಾಗಿ ಮುಸ್ಲಿಮ್ ಧರ್ಮದ ಚಿಂತಕರು ಧ್ವನಿ ಎತ್ತಿದಾಗ ಮತ್ತದೇ ಧರ್ಮವಿರೋಧಿಗಳ ಪಟ್ಟ. ಇಲ್ಲಿ ತ್ರಿತಲಾಕ್ ಇರಬಹುದು, ಹಲಾಲ ಪದ್ದತಿಯಿರಬಹುದು, ಬಹುಪತ್ನಿತ್ವ ಇರಬಹುದು, ಒಂದು ಕಾಲದಲ್ಲಿ ಆಚರಣೆಯಲ್ಲಿತ್ತು ಎಂಬ ಸಬೂಬು ನೀಡಿ ಇಂದಿಗೂ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳುವುದು ಸರಿಯಲ್ಲ. ಸಮಾಜ, ಚಿಂತನೆಗಳು ಕಾಲಕ್ಕೆ ತಕ್ಕಹಾಗೆ ಬದಲಾಗುತ್ತವೆ. ಇದರ ಜೊತೆಜೊತೆಯಲ್ಲೇ ಮನುಷ್ಯ ಘನತೆಗೆ ಕುಂದು ತರುವಂತಹ, ಒಂದು ವರ್ಗವನ್ನು ಶೋಷಣೆ ಮಾಡುವಂತಹ, ಜೀವ ವಿರೋಧಿ, ಪ್ರಗತಿ ವಿರೋಧಿ ಆಚರಣೆಗಳು, ಕಾನೂನುಗಳು, ಚಿಂತನೆಗಳು ಬದಲಾಗಬೇಕಿದೆ. ಬದಲಾವಣೆ ಸಾಧ್ಯವಾಗದೇ ಇದ್ದಲ್ಲಿ ಈ ನೆಲದ ಕಾನೂನು ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದರ ಮೂಲಕ ಬದಲಾವಣೆಯನ್ನು ಚಲಾವಣೆಗೆ ತರಬೇಕಿದೆ. ಈಗಾಗಲೇ ಮುಸ್ಲಿಮ್ ಮಹಿಳೆಯರು ತ್ರಿತಲಾಕ್ ಕುರಿತಾದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ವಾದವನ್ನು ಪ್ರತಿಭಟಿಸುತ್ತಿದ್ದಾರೆ. ಮಹಿಳೆಯರನ್ನು ಶೋಷಣೆಗೆ ಒಳಪಡಿಸುವ ಇಂತಹ ಪದ್ದತಿಯ ವಿರುದ್ಧದ ಹೋರಾಟಕ್ಕೆ ಎಲ್ಲಾ ಸಮುದಾಯಗಳ ಪ್ರಗತಿಪರ, ಸುಧಾರಣಾವಾದಿ ಚಿಂತಕರು ಹಾಗೂ ಸ್ತ್ರೀವಾದಿಗಳು ಜೊತೆಸೇರಬೇಕಿದೆ. ಕೊನೆಯದಾಗಿ ಒಂದು ವಿಚಾರ. ಇಸ್ಲಾಮ್‍ನಲ್ಲಿ ಬದಲಾವಣೆ ಸಾಧ್ಯವೇ ಇಲ್ಲ ಎಂದು ವಾದ ಮಾಡುವ ಮುಸ್ಲಿಮರು “ವಾಸ್ತವದಲ್ಲಿ  ಒಂದು ಜನಾಂಗವು ಸ್ವತಃ ತಾನೇ ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳುವವರೆಗೂ ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸುವುದಿಲ್ಲ”, ಕುರಾನ್  ನಲ್ಲಿರುವ ಈ ಶ್ಲೋಕವನ್ನು ಮೊದಲು ಅರ್ಥೈಸಿಕೊಳ್ಳಬೇಕಿದೆ.

 

3 thoughts on “ತ್ರಿತಲಾಕ್ ನಿಷೇಧ, ಇಸ್ಲಾಮ್ ಹಾಗೂ ಸುಧಾರಣೆ

  1. good name

    ಎಲ್ಲಾ ಸಮುದಾಯದ ಸ್ತ್ರಿ ಪುರುಷರು ತ್ರಿತಲಾಖ್ ವಿರುದ್ಧ ಹೊರಾಡಿ ಅಂತಾರೆ. ಆದರೆ ಹಿಂದುಗಳ ರಾಮನನ್ನು ಬೈದಷ್ಟು, ಶನಿ ಶಿಂಗಣಾಪುರಕ್ಕೆ ಮುತ್ತಿಗೆ ಹಾಕಿದಷ್ಟು ಇದು ಸುಲುಭಾಸುಲುಭಾನಾ?? ತಲೆ ಉಳಿತದಾ ನಮ್ಮದು??

    Reply

Leave a Reply

Your email address will not be published.