ಹೌದು, ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ


-ಇರ್ಷಾದ್ ಉಪ್ಪಿನಂಗಡಿ


 

ಜನನುಡಿ ಸಾಹಿತ್ಯ ಸಮಾವೇಶದಲ್ಲಿ ಮುಸ್ಲಿಮ್-ದಲಿತ-ಹಿಂದುಳಿದ ವರ್ಗಗಳ ಐಕ್ಯತೆ: ಸವಾಲುಗಳ ಸಾಧ್ಯತೆ ವಿಚಾರಗೋಷ್ಠಿಯಲ್ಲಿrahamath-tarikere ಹಿರಿಯ ಚಿಂತಕ ಪ್ರೊ.ರೆಹಮತ್ ತರೀಕೆರೆ ಮಾತನಾಡುತ್ತಾ ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಅಗತ್ಯವಿದೆ ಎಂದಿದ್ದಾರೆ. ಖಂಡಿತವಾಗಿಯೂ ದಾರಿತಪ್ಪುತ್ತಿರುವ ಮುಸ್ಲಿಮ್ ಸಮುದಾಯಕ್ಕೆ ಸರಿದಾರಿತೋರಿಸಲು ಒಬ್ಬ ಅಂಬೇಡ್ಕರ್ ಮುಸ್ಲಿಮ್ ಸಮುದಾಯದಿಂದಲೇ ಹುಟ್ಟಿಬರಬೇಕಿದೆ. ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಯಾಕೆ ಬೇಕು ಎಂಬ ವಿಚಾರ ಚರ್ಚೆಗೊಳಪಡಿಸುವುದರ ಮೊದಲು ಮುಸ್ಲಿಮ್ ಸಮುದಾಯದ ಕುರಿತಾಗಿ ಡಾ. ಅಂಬೇಡ್ಕರ್ ಅವರಿದ್ದ ದೃಷ್ಟಿಕೋನ ಏನಾಗಿತ್ತು ಎಂಬುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಅದನ್ನು ತಣಿಸಿದ್ದು ಆನಂದ್ ತೇಲ್ತುಂಬ್ಡೆ ಅವರ ಅಂಬೇಡ್ಕರ್ ಮತ್ತು ಮುಸ್ಲಿಮರು ಪುಸ್ತಕ. (ಕನ್ನಡಕ್ಕೆ: ಬಿ ಗಂಗಾಧರ್ ಮೂರ್ತಿ) ಮುಸ್ಲಿಮರ ವಿರುದ್ಧ ಭಾರತೀಯ ಸಮಾಜವನ್ನು ಎತ್ತಿಕಟ್ಟುವ ಸಂಘಪರಿವಾರದ ಹುನ್ನಾರವನ್ನು ಡಾ.ಬಿ ಆರ್ ಅಂಬೇಡ್ಕರ್ ವಿರೋಧಿಸುವುದರ ಜೊತೆಗೆ ಮುಸ್ಲಿಮ್ ಸಮುದಾಯದಲ್ಲಿರುವ ಅತಿಧಾರ್ಮಿಕತೆ ಹಾಗೂ ಮಹಿಳಾ ಶೋಷಣೆಯನ್ನು ಖಂಡಿಸಿದ್ದರು. ಭಾರತೀಯ ಮುಸ್ಲಿಮ್ ಸಮುದಾಯದ ಸಾಮಾಜಿಕ ಜೀವನದ ಜೊತೆಗೆ ರಾಜಕೀಯ ಜೀವನವೂ ಚಲನಶೀಲತೆಯನ್ನು ಕಳೆದುಕೊಂಡಿದೆ. ಮುಸ್ಲಿಮ್ ಸಮುದಾಯದ ಜನರ ಪ್ರಧಾನ ಆಸಕ್ತಿ ಧರ್ಮವೇ ಹೊರತು ರಾಜಕಾರಣವಲ್ಲ. ಮುಸ್ಲಿಮ್ ಸಮಾಜದಲ್ಲಿರುವ ಪಿಡುಗುಗಳನ್ನು ತೊಡೆದು ಹಾಕಲು ಯಾವ ಪ್ರಮಾಣದಲ್ಲಿ ಸುಧಾರಣಾ ಚಳುವಳಿಗಳು ನಡೆಯಬೇಕಿತ್ತೂ ಆ ಪ್ರಮಾಣದಲ್ಲಿ ಆಗಿಲ್ಲ ಎಂಬುವುದು ಡಾ. ಅಂಬೇಡ್ಕರ್ ಅವರ ನಿಲುವಾಗಿತ್ತು.

ಇನ್ನು ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಯಾಕೆ ಬೇಕು ಎಂಬ ವಿಚಾರಕ್ಕೆ ಬರೋಣ. 1984 ರಲ್ಲಿ ತನ್ನ ಪತಿಯಿಂದ ತಲಾಕ್Young_Ambedkar ನೀಡಲ್ಪಟ್ಟ ಒಂಟಿ ಮಹಿಳೆಯೊಬ್ಬಳು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಸಂದರ್ಭದಲ್ಲಿ ಭಾರತೀಯ ಮುಸ್ಲಿಮ್ ಸಮಾಜದ ಧಾರ್ಮಿಕ ಸಂಘಟನೆಗಳು ಶರೀಯತ್ ಮೇಲೆ ದಾಳಿ ನಡೆಯುತ್ತಿದೆ ಎಂದು ಬೊಬ್ಬಿಟ್ಟು ಕೋಲಾಹಲ ಎಬ್ಬಿಸಿ ಕೊನೆಗೂ ಗೆದ್ದು ಎದೆಯುಬ್ಬಿಸಿದಾಗ ಧರ್ಮ, ಶಾಸ್ತ್ರೀಯ ಗ್ರಂಥದ ನ್ಯಾಯ ಕಟ್ಟಲೆಗಿಂತ ಮಹಿಳೆಯೊಬ್ಬಳ ಬದುಕು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ಅಬ್ಬರಿಸಿದ ಸಮಾಜಕ್ಕೆ ತಿಳಿಹೇಳಲೊಬ್ಬರು ಅಂಬೇಡ್ಕರ್ ಬೇಕಿತ್ತು. ಒಂದೇ ಉಸಿರಿಗೆ ಮೂರು ತಲಾಕ್ ಹೇಳುವ ಪದ್ದತಿ ಸ್ವತಃ ಇಸ್ಲಾಮ್ ಧರ್ಮದಲ್ಲಿ ಇಲ್ಲದಿದ್ದರೂ ಕೇಂದ್ರ ಸರ್ಕಾರ ತ್ರಿತಲಾಕ್ ನಿಷೇಧದ ಮಾತೆತ್ತಿದಾಗ ಧಾರ್ಮಿಕ ಹಕ್ಕಿನ ಮೇಲಿನ ದಾಳಿ ಎಂದು ಸಾಲು ಸಾಲು ಸಮಾವೇಶ ನಡೆಯುತ್ತದೆ. ಮುಸ್ಲಿಮ್ ಸಮಾಜದ ಮುಖ್ಯವಾಹಿನಿಯಿಂದ ಮಹಿಳೆಯರನ್ನು ಸಂಪೂರ್ಣವಾಗಿ ದೂರವಿಡಲಾಗಿದೆ. ಧಾರ್ಮಿಕ ಸ್ಥಾನಮಾನದಿಂದ ಸಂಪೂರ್ಣ ವಂಚಿತರಾಗಿರುವುದು ಒಂದು ಕಡೆಯಾದರೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಮುಸ್ಲಿಮ್ ಮಹಿಳೆಯರನ್ನು ವೇದಿಕೆಗಳಲ್ಲಿ ಕುಳಿತುಕೊಳ್ಳಲು ಅವಕಾಶ ನಿಡುವುದು ಸರಿಯೋ ತಪ್ಪೋ ಎಂಬುವುದು ಸಮುದಾಯದಲ್ಲಿ ಬಹುಚರ್ಚಿತ ವಿಷಯಗಳಲ್ಲೊಂದು. ಹೆಣ್ಣುಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕು ಎಂಬ ಚಿಂತನೆ ಮುಸ್ಲಿಮ್ ಸಮುದಾಯಕ್ಕೆ ಬಂದಿದ್ದು ಇತ್ತೀಚೆಗೆ. ಆದರೆ ವಿದ್ಯಾಭ್ಯಾಸ ಪಡೆದ ಹೆಣ್ಣುಮಕ್ಕಳು ಸಮಾಜದಲ್ಲಿ ಸೂಕ್ತ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ  ಮುಸ್ಲಿಮ್ ಮಹಿಳಾ ಸಮಾತನೆಯ ಬಗ್ಗೆ ಅರಿವು ಮೂಡಿಸಲೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ.

ಮುಸ್ಲಿಮ್ ಸಮಾಜದ ಆರ್ಥಿಕ ಸಾಮಾಜಿಕ ಶೋಚನೀಯ ಪರಿಸ್ಥಿತಿಯ ಕುರಿತಾಗಿ ಜಸ್ಟೀಸ್ ಸಾಚಾರ್ ವಿಸ್ಕೃತ ವರದಿಯೊಂದನ್ನು ಸಲ್ಲಿಸಿದ್ದಾರೆ. ಈ ವರದಿಯನ್ನು ಜಾರಿಯಾದಲ್ಲಿ ಮುಸ್ಲಿಮ್ ಸಮಾಜದ ಸಾಮಾಜಿಕ ಪರಿಸ್ಥಿತಿಯಲ್ಲಿ ಒಂದಿಷ್ಟು ಬದಲಾವಣೆಗಳು ಖಂಡಿತಾ ಸಾಧ್ಯ. ಆದರೆ ಮುಸ್ಲಿಮ್ ಸಮುದಾಯದ ಬಹುಸಂಖ್ಯಾತ ವರ್ಗ ಇದರ ಕುರಿತಾಗಿ ತಲೆಕೆಡಿಸಿಕೊಂಡೇ ಇಲ್ಲ. ಅದೇ ಸಂದರ್ಭದಲ್ಲಿ ತ್ರಿ ತಲಾಕ್ ಹಾಗೂ  ಶರೀಯತ್ ಸಂರಕ್ಷಣೆಯ ವಿಚಾರ ಮುಸ್ಲಿಮ್ ಸಮಾಜದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸಾಲು ಸಾಲು ಪ್ರತಿಭಟನೆಗಳೂ ನಡೆಯುತ್ತವೆ.

ಯುವಸಮುದಾಯದಲ್ಲಿ ಅತಿಧಾರ್ಮಿಕತೆ ಹೆಚ್ಚಾಗುತ್ತಿದೆ. ಕ್ರಿಕೆಟಿಗ ಮೊಹಮ್ಮದ್ ಶಫಿ  ಬುರ್ಖಾ ಧರಿಸದ ತನ್ನ ಪತ್ನಿಯೊಂದಿಗಿದ್ದ ಪೋಟೋ ಸಾಮಾಜಿಕ burkaಜಾಲತಾಣಗಳಲ್ಲಿ ಬಹುಚರ್ಚಿತ ವಿಷಯವಾಗುತ್ತದೆ. ಇನ್ನೂ ಕುತೂಹಲಕಾರಿಯಾಗಿ ಕಂಡುಬಂದಿದ್ದು ಕರಾವಳಿಯ ಸಚಿವರೊಬ್ಬರ ಇಸ್ಲಾಮ್ ಧಾರ್ಮಿಕ ಗ್ರಂಥ ಕುರಾನ್ ಕಂಠಪಾಠ ಮಾಡಿದ ಮಗಳನ್ನು ತಂದೆ ( ವುಜೂ) ಅಂಗಶುದ್ದಿ ಮಾಡದೇ ಮುಟ್ಟಬಹುದಾ ಎಂಬ ಚರ್ಚೆ. ಮುಸ್ಲಿಮ್ ಸಮಾಜದಲ್ಲಿ ಯಾವುದು ಪ್ರಾಮುಖ್ಯತೆ ಪಡೆಯಬೇಕಾಗಿರುವ ವಿಚಾರವಾಗಿದೆಯೋ ಅದು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿಲ್ಲ. ಬದಲಾಗಿ ಕೆಲಸಕ್ಕೆ ಬಾರದ ವಿಚಾರಗಳೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಯುವ ಸಮಾಜ ಅದರಲ್ಲೂ ಸುಶಿಕ್ಷಿತ ಯುವ ಸಮೂಹವೂ ಸ್ವರ್ಗ ನರಕ ಹಾಗೂ ಪರಲೋಕದ ಬಗ್ಗೆಯೇ ಹೆಚ್ಚೆಚ್ಚು ಚಿಂತಿಸುವಷ್ಟರ ಮಟ್ಟಿಗೆ ತಲುಪಿದೆ ಮುಸ್ಲಿಮರ ಸ್ಥಿತಿ. ಇವೆಲ್ಲದರ ಬಗ್ಗೆ ತಿಳುವಳಿಕೆ ಮೂಡಿಸಿ ವೈಚಾರಿಕತೆಯ ಅರಿವನ್ನು ಸಮಾಜಕ್ಕೆ ಮೂಡಿಸುವ ನಿಟ್ಟಿನಲ್ಲಿ ಅಂಬೇಡ್ಕರೊಬ್ಬರು ಮುಸ್ಲಿಮ್ ಸಮುದಾಯಕ್ಕೆ ಬೇಕಾಗಿದ್ದಾರೆ.

ರಾಜಕೀಯ ಸುಧಾರಣೆಯಂತಹ ವಿಷಯದಲ್ಲಿ ಮುಸ್ಲಿಮ್ ನಾಯಕತ್ವವು ಭಾರತದ ಹಲವಾರು ಪ್ರಾಂತ್ಯಗಳಲ್ಲಿ ತೋರಿಸುವ ಅವೈಚಾರಿಕ ಪ್ರತಿಕ್ರಿಯೆಯಿಂದಾಗಿ ಭಾರತೀಯ ಮುಸ್ಲಿಮ್ ಸಮುದಾಯದಲ್ಲಿ ರಾಜಕೀಯ ಜಡತ್ವ ಕಾಣಿಸಿಕೊಂಡಿದೆ. ಮುಸ್ಲಿಮ್ muslims460ರಾಜಕಾರಣಿಕರು ತಮ್ಮ ರಾಜಕಾರಣಕ್ಕೆ ಧಾರ್ಮಿಕೇತರ ಸಂಗತಿಗಳನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ ಎಂಬುವುದು ಅಂಬೆಡ್ಕರ್ ಅಭಿಪ್ರಾಯವಾಗಿತ್ತು. ಇದು ಸತ್ಯ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮುಸ್ಲಿಮ್ ಸಮುದಾಯದ ನಾಯಕತ್ವ ಧಾರ್ಮಿಕೇತರ ಸಂಗತಿಗಿಂತ ಧಾರ್ಮಿಕ ಸಂಗತಿಯನ್ನೇ ಪ್ರಮುಖವಾಗಿಟ್ಟುಕೊಂಡು ಓಟ್ ಬ್ಯಾಂಕ್ ರಾಜಕೀಯ ನಡೆಸುತ್ತಿವೆ. ಧಾರ್ಮಿಕ ಮೂಲಭೂತವಾದಿಗಳ ಕೈಯಲ್ಲೋ ಅಥವಾ ಮುಸ್ಲಿಮ್ ಕಾರ್ಡ್ ಬಳಸಿಕೊಂಡು ಸ್ವಹಿತ ಕಾಪಾಡಿಕೊಳ್ಳುವ ರಾಜಕಾರಣಿಗಳ ಕೈಯಲ್ಲಿ ಮುಸ್ಲಿಮ್ ಸಮುದಾಯದ ನಾಯಕತ್ವವಿದೆ. ಇದರ ಪರಿಣಾಮವಾಗಿಯೇ ಸಾಚಾರ್ ವರದಿ ಜಾರಿಗಿಂತ ಶರೀಯತ್ ಸಂರಕ್ಷಣೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡುವುದಾದರೆ ಮುಸ್ಲಿಮ್ ಸಮುದಾಯಕ್ಕೆ ವೈಚಾರಿಕತೆಯನ್ನು ಬಿತ್ತುವ ಉದಾರವಾದಿ ನಾಯಕತ್ವದ ಅಗತ್ಯತೆ ತೀರಾ ಇದೆ. ಸಂಘಪರಿವಾರದ ಕುತಂತ್ರಕ್ಕೆ ಉತ್ತರ ಕೊಡಲು ಹೋಗಿ ಉಗ್ರವಾದದತ್ತ ಮುಖಮಾಡುತ್ತಿರುವ ಯುವಕರನ್ನು ಸರಿದಾರಿಗೆ ತಂದು ಸಾಂವಿಧಾನಿಕ ಮಾರ್ಗದಲ್ಲಿ ಹೋರಾಟ ನಡೆಸಲು ಸಮುದಾಯದ ನಾಯಕತ್ವ  ವಹಿಸಿಕೊಳ್ಳಲೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ.

4 thoughts on “ಹೌದು, ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ

 1. mangalore

  ಸಧ್ಯಕ್ಕೆ ಇರ್ಶಾದ್ ರವರೇ ತಾನೊಬ್ಬ ಅಂಬೇಡ್ಕರ್ ಎಂದು ಸ್ವಯಃ ಗೋಷಿಸಿದರೆ ಸಾಕು !
  ಇಸ್ಲಾಮ್ ಅಂದರೇ ಏನೆಂದು ತಿಳಿಯದೇ ಸಮಾಜದಲ್ಲಿದ್ದ ಏನೋ ಕೆಲವು ಅವ್ಯವಸ್ಥೆಗಳನ್ನು ಬೊಟ್ಟು ಮಾಡಿ ಇಸ್ಲಾಮ್ ಗೆ ವ್ಯಖ್ಯೆ ನೀಡಲು ಹೊರಟಿರುವುದು ಹಾಸ್ಯಾಸ್ಪದ

  Reply
  1. shankar halagatti

   ರಹಮತ್ ಅವರ ವಿಚಾರಗಳನ್ನು ಯಾರಾದರೂ ಒಪ್ಪುವಂತಹದ್ದು. ತುಂಬಾ ಕಳಕಳಿಯಿಂದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.ಮುಸ್ಲೀಮರಲ್ಲಿ ಶಿಕ್ಷಣ ಹೊಂದಿದವರು ಈ ಕುರಿತು ಚರ್ಚೆ ನಡೆಯಲಿ. ಮುಕ್ತವಾದ ಮಾತುಕತೆಗಳು ಆಗಲಿ. ಉರ್ದು ಪತ್ರಿಕೆಗಳಲ್ಲಿ ರಹಮತ್ ರವರ ಚಿಂತನೆ ಪ್ರಕಟವಾಗುವಂತಾಗಲಿ.ನಮಾಜ ಮುಗಿಸಿ ಮಸೀದಿ ಹೊರಗಡೆ ಗುಂಪು ಗುಂಪು ನಿಂತು ಮಾತನಾಡುವ ಮುಸ್ಲೀಮ ಜನರ ಮಧ್ಯ ಈ ಮಾತುಗಳ ಕುರಿತು ಮಾತನಾಡುವಂತಾಗಬೇಕು. ಇಳ್ಳೆಯ ಲೇಖನ ಗುರುಗಳೆ.sch

   Reply
 2. good name

  ಉತ್ತಮ ಲೇಖನ. ತಮ್ಮ ಸಮಾಜದ ಸುಧಾರಣೆಗೆ ಮುಸ್ಲಿಂ ಯುವಕರು ತಾವೇ ಪ್ರಯತ್ನಿಸಬೇಕು. ತಾವೇ ಬದಲಾವಣೆಯ ಹರಿಕಾರರಾಗಬೇಕಾಗಿದೆ. ಸದಾ ಹಿಂದುಗಳ, ಸಂಘಪರಿವಾರದ ಮೋದಿಯವರ ದೂಷಣೆ ಮಾಡುತ್ತಾ ಕೂಡದೇ ನಿಜವಾದ ಸಮಸ್ಯೆಗಳ ಬಗ್ಗೆ ಜನತೆಗೆ ತಿಳಿಸಿ ಹೇಳಬೇಕಾಗಿದೆ. ಎಲ್ಲರೂ ಶಿಕ್ಷಣ ಪಡೆಯುವದೂ ಸಹ ಅತಿ ಅಗತ್ಯವಾಗಬೇಕಾಗಿದೆ.

  Reply

Leave a Reply

Your email address will not be published.