Monthly Archives: March 2017

“ನಾವು ಇದುವರೆಗೆ 29 ಚುನಾವಣೆ ಗೆದ್ದಿದ್ದೇವೆ”

ಆಕ್ಟಿವಿಸಂ ಮತ್ತು ಚುನಾವಣಾ ರಾಜಕಾರಣ

-ಪ್ರಸಾದ್ ರಕ್ಷಿದಿ

ಚುನಾವಣೆಗಳಲ್ಲಿ ಆಕ್ಟಿವಿಸ್ಟರುಗಳ ಸೋಲಿನ ಬಗ್ಗೆ ಎಲ್ಲ ಪತ್ರಿಕೆಗಳಲ್ಲೂ ನಿರಾಶೆ ಹಾಗು ಮತದಾರರ ಸಿನಿಕತನದ ಬಗ್ಗೆ ಲೇಖನಗಳು ಹೇಳಿಕೆಗಳು ಬರುತ್ತಿವೆ. ‘ಚುನಾವಣಾ ರಾಜಕೀಯವೇ ಬೇರೆ’ ಎಂಬ ಮಾತನ್ನು ಉದಾಹರಿಸಿ, ಆ raxidiಧೋರಣೆಯೇ ತಪ್ಪು ಅವಕಾಶವಾದಿಗಳದ್ದು ಎಂಬ ಟೀಕೆಯೂ ನಡೆಯುತ್ತಿದೆ. ಇದೆಲ್ಲದರ ಹಿಂದೆ ಆಕ್ಟಿವಿಸ್ಟರು ಜನರಿಗಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ ಜನ ಅರಿತು ಅವರಿಗೆ ಮತನೀಡಬೇಕೆಂಬ ಆಗ್ರಹವಿದೆ.

 
ಆದರೆ ಈ ರೀತಿ ಬರೆಯುವ ಹೆಚ್ಚಿನ ಬರಹಗಾರರರು ಅಕಡೆಮಿಕ್ ವಲಯದವರು. ಮತ್ತು ಇವರು ಹೆಚ್ಚೆಂದರೆ ಭಾಷಣದ ಮೂಲಕ ಮತಯಾಚನೆ ಮಾಡುವವವರು. ಅದಕ್ಕಿಂತ ಮುಂದೆಹೋಗಿ ಮತದಾರನ ನೇರ ಸಂಪರ್ಕಕ್ಕೆ ಬರುವುದೇ ಕಡಿಮೆ. ಬಂದರೂ ನಗರ ಪ್ರದೇಶಗಳಲ್ಲಿ ಬಂದಾರೇ ಹೊರತು ಹಳ್ಳಿಗಳತ್ತ ಅವರು ಮುಖಮಾಡಿದ್ದು ಇಲ್ಲ. ಹಾಗಾಗಿ ಇವರು ಒಂದು ರೀತಿಯ ದೂರ ವಿಶ್ಲೇಷಕರು. ಈಗ ಇರೋಮ್ ಶರ್ಮಿಲಾ ವಿಚಾರದಲ್ಲೂ ಇಂಥದ್ದೇ ಲೇಖನಗಳು ಹಲವು ಬಂದಿವೆ. (ಮಣಿಪುರ ಪರಿಸ್ಥಿತಿ ನನಗೆ ಗೊತ್ತಿಲ್ಲ ಆದರೆ ಪತ್ರಿಕೆ ನೋಡಿ ಬರೆಯುವವರಿಗಿಂತ ಅಲ್ಲಿನವರ ಅಭಿಪ್ರಾಯ ಮುಖ್ಯ)

 
ನಮ್ಮಲ್ಲಿ ಸಾಮಾನ್ಯವಾದ ನಿಲುವಿದೆ. ಅದು ಆಕ್ಟಿವಿಸಂ ಎಂದರೆ “ಸರ್ಕಾರದ ವಿರುದ್ಧ” ಎಂದು. ಇದು ಒಂದು ರೀತಿ ‘ಖಾಯಂ ವಿರೋಧ ಪಕ್ಷದಲ್ಲಿರು’ ಎಂದ ಹಾಗೆ. ಆದರೆ ಆಕ್ಟಿವಿಸಂ ಹಾಗೆಯೇ ಇರಬೇಕಾಗಿಲ್ಲ ಮತ್ತು ಇರಬಾರದು ಕೂಡಾ. ಈ ವಿಚಾರಕ್ಕೆ ಮುಂದೆ ಬರುತ್ತೇನೆ.
ನಾವೊಂದಷ್ಟು ಜನ (ಆಗ ಬೆರಳೆಣಿಕೆಯಷ್ಟು) ಗೆಳೆಯರು 1976-77 ಒಂದು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕರ್ತರಾಗಿ ಕೆಲಸ ಪ್ರಾರಂಭಿಸಿದೆವು. ನಾವು ಕೆಲಸ ಆರಂಭಿಸಿದ್ದು ಜೆ.ಪಿ.ಯವರ ಸಂಪೂರ್ಣ ಕ್ರಾಂತಿಯ ಕರೆಯನ್ನು ನಂಬಿ. ಆಗ ನಮ್ಮಲ್ಲಿ ಓಟಿನ ಹಕ್ಕೂ ಬಂದಿರಲಿಲ್ಲ. ನಮ್ಮ ಗುಂಪು ನಮ್ಮ ಸುತ್ತಲಿನ ಗ್ರಾಮಗಳ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದವು. ಅದು ರೈತ-ಕಾರ್ಮಿಕ-ದಲಿತ ಹೋರಾಟಗಳು, ಇನ್ನಿತರ ಜಮೀನು- ಕುಟುಂಬ ವಿವಾದಗಳು, ಊರಜಗಳ ಹೊಡೆದಾಟಗಳು, ಗಣಪತಿ,ಚೌಡಿ ಉತ್ಸವ, ಉರುಸ್ ಎಲ್ಲದರಲ್ಲೂ ನಮ್ಮ ಬಳಗವರಿರುತ್ತಿದ್ದರು. ಹಾಗೇ ನಾಟಕ, ಕಲೆ. ಯಕ್ಷಗಾನ, ಕ್ರೀಡೆ. ಸಾಕ್ಷರತಾ ಆಂದೋಲನ, ಊರಿನ, ಶಾಲೆ ಆಸ್ಪತ್ರೆಗಾಗಿ ಪ್ರಯತ್ನಗಳು, ಕುಡಿಯುವ ನೀರಿಗಾಗಿ ಹೋರಾಟ, ವಸತಿ ಯೋಜನೆಗಳು, ಜನರ ದಿನ ನಿತ್ಯದ ಸಮಸ್ಯೆಗಳು, ಎಲ್ಲದರಲ್ಲೂ ನಾವಿದ್ದೆವು. ಆದರೆ ನಮ್ಮ ಹೋರಾಟ ಕೆಲವುಬಾರಿ ಸರ್ಕಾರದ ವಿರುದ್ಧವೂ ಕೆಲವು ಬಾರಿ ಸರ್ಕಾರದ್ದೇ ಯೋಜನೆಗಳ ಅನುಷ್ಟಾನಕ್ಕಾಗಿಯೂ ಇರುತ್ತಿತ್ತು. (ಉದಾ: ಅರಣ್ಯೀಕರಣದ ವಿಷಯಬಂದಾಗ ರೈತ ಚಳುವಳಿಯಲ್ಲಿದ್ದ ನಾವು ರೈತ ಸಂಘದ ನಿಲುವಿಗೆ ವಿರುದ್ಧವಾಗಿ ಅರಣ್ಯ ಇಲಾಖೆಗೆ ನಮ್ಮೂರಿನಲ್ಲಿ ನೂರಾರು ಎಕರೆ ಅರಣ್ಯೀಕರಣಕ್ಕೆ ಬೆಂಬಲವಾಗಿ ನಿಂತಿದ್ದೆವು, ನಮ್ಮ ಪಂಚಾಯತಿ ವ್ಯಾಪ್ತಿಯಲ್ಲೇ ಏಳುನೂರು ಎಕರೆಗೂ ಹೆಚ್ಚು ಈ ರೀತಿಯ ಅರಣ್ಯವಿದೆ)

 
ನಮ್ಮ ಬಳಗ 77ರಲ್ಲೇ ಚುನಾವಣಾ ರಾಜಕೀಯಕ್ಕೆ ಇಳಿದಿತ್ತು. ಇಂದಿರಾಗಾಂಧಿ ವಿರುಧ್ಧ. ಆದರೆ ಪ್ರಥಮ ಗೆಲುವನ್ನು ಕಂಡದ್ದು ಸುಮಾರು ಆರು ವರ್ಷಗಳನಂತರ ಪಂಚಾಯತ್ ಚುನಾವಣೆಯಲ್ಲಿ. ಅಲ್ಲಿಂದೀಚೆ ಇಂದಿನವರೆಗೆ ನಾವು ಪಂಚಾಯತಿಯಿಂದ ಪಾರ್ಲಿಮೆಂಟಿನವರೆಗೆ ಅಂದರೆ ಎಲ್ಲ ಮಂಡಲ, ತಾಲ್ಲೂಕು, ಜಿಲ್ಲೆ, ಎ.ಪಿ.ಎಂ.ಸಿಗಳೂ ಸೇರಿ 37 ಚುನಾವಣೆಗಳನ್ನು ಎದುರಿಸಿದ್ದೇವೆ. ಇಂದಿನವರೆಗೆ 29 ಚುನಾವಣೆಗಳನ್ನು ಗೆದ್ದಿದ್ದೇವೆ! ಅಂದರೆ ಸಣ್ಣ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳೇ ನೇರವಾಗಿ ಗೆದ್ದಿದ್ದಾರೆ. ವಿಧಾನ ಸಭೆ, ಅಥವಾ ಲೋಕ ಸಭಾ ಚುನಾವಣೆಯಲ್ಲಿ ಸೋತಾಗಲೂ ನಮ್ಮೂರಿನಲ್ಲಿ ಮುನ್ನಡೆ ಉಳಿಸಿಕೊಂಡಿದ್ದೇವೆ. ಆದರೆ ಇದರಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ನಮ್ಮ ಬಳಗದ ಸದಸ್ಯರಲ್ಲಿ ಆಕ್ಟಿವಿಸಂನ ಮುಂಚೂಣಿಯಲ್ಲಿದ್ದವರು ಯಾರೂ ಯಾವುದೇ ಚುನಾವಣೆ ಎದುರಿಸಲೇ ಇಲ್ಲ. ನಾವು ನಮ್ಮ ಗೆಳೆಯರಲ್ಲೇ ಆದಷ್ಟು ಉತ್ತಮರನ್ನು ಅಭ್ಯರ್ಥಿಯನ್ನಾಗಿಸುತ್ತಿದ್ದೆವು. (ಅವರಲ್ಲೂ ಕೆಲವರು ಗೆದ್ದನಂತರ ಏನೇನೋ ಮಾಡಿದ ಉದಾಹರಣೆ ಇದೆ!) ಇದರಿಂದ ಮತಯಾಚನೆಯೂ ಸುಲಭವಾಗುತ್ತಿತ್ತು. “ಇವರನ್ನು ಗೆಲ್ಲಿಸಿ ಕೊಡಿ ಇವರಲ್ಲಿ ನಾವು ಕೆಲಸಮಾಡಿಸಿಕೊಡುತ್ತೇವೆ ಒಂದುವೇಳೆ ಇವರು ಮಾಡಲೇ ಇಲ್ಲ ಅಂದ್ಕೊಳಿ ನಾವು ನಿಮ್ ಜೊತೆ ಇದ್ದೇ ಇರ್ತೀವಲ್ಲ” ಎನ್ನುತ್ತಿದ್ದೆವು. ಜನ ನಮ್ಮನ್ನು ಬಿಟ್ಟುಕೊಡಲಿಲ್ಲ. ನಮ್ಮ ಗ್ರಾಮಪಂಚಾಯತಿ ನಿರಂತರ ಇಪ್ಪತೈದು ವರ್ಷಗಳ ಕಾಲ ನಮ್ಮ ಬಳಗದ ಕೈಯಲ್ಲಿತ್ತು. ಈಗ ಎರಡು ಚುನಾವಣೆಗಳಲ್ಲಿ ನಾವು (ಹಿರಿಯರು)ನೇರವಾಗಿ ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದೇವೆ.

 
ಇಷ್ಟು ವರ್ಷಗಳಲ್ಲಿ ನಾವು ಗಮನಿಸಿದ ಸಂಗತಿಯೆಂದರೆ, ಚುನಾವಣೆಗೆ ನಿಲ್ಲುವ ಇತರರು ಮಾಡುವ ಭ್ರಷ್ಟಾಚಾರವನ್ನು (ತೀರಾ ತೊಂದರೆ ಮಾಡುವಂತವರನ್ನು ಬಿಟ್ಟು) ಮನ್ನಿಸುತ್ತಾರೆ ಆದರೆ ಒಬ್ಬ ಆಕ್ಟಿವಿಸ್ಟ್ ಭ್ರಷ್ಟನಾಗುವುದನ್ನು ಒಪ್ಪುವುದಿಲ್ಲ. ಇನ್ನೊಂದು ವಿಷಯವೆಂದರೆ ಸ್ಥಳೀಯ ಚುನಾವಣೆಗಳಲ್ಲಿ ಒಂದು ಸ್ಥಾನಕ್ಕೆ ನಿಂತಿರುವ ಅಭ್ಯರ್ಥಿಯ ಜಾತಿಪ್ರಶ್ನೆ ಬಂದಾಗ, ನಿಂತಿರುವ ಎಲ್ಲರೂ ಒಳ್ಳೆಯವರೇ ಅದರೆ, ಜನ ಹೆಚ್ಚಾಗಿ ಅವರವರ ಜಾತಿಯವನಿಗೆ ಮತನೀಡುತ್ತಾರೆ. ಒಂದು ವೇಳೆ ಎಲ್ಲರೂ ಕೆಟ್ಟವರಾದರೂ ಹಾಗೇ ಮಾಡುತ್ತಾರೆ. ಆದರೆ ಒಬ್ಬ ಯೋಗ್ಯನಿದ್ದು ಉಳಿದವರು ಅಯೋಗ್ಯರಾದರೆ ಜಾತಿಯನ್ನು ಮೀರಿಯೇ ಯೋಗ್ಯನಿಗೆ ಮತದಾನ ಮಾಡುತ್ತಾರೆ.

ಹಾಗೆಯೇ ಹಣ ಹಂಚುವುದರಿಂದ ಆಗುವ ಪರಿಣಾಮವೂ ಅಷ್ಟೆ ಹಣ ಪಡೆದವರಲ್ಲಿ ಹೆಚ್ಚಿನವರು ಅವರಿಗೆ ಬೇಕಾದವರಿಗೇ ಮತ ನೀಡುತ್ತಾರೆ. ಕೆಲವೇ ಕೆಲವರು ಮಾತ್ರ ಹಣಕ್ಕೆ ಮತ ನೀಡುತ್ತಾರೆ. ಆದೆ ನೆಕ್ ಟು ನೆಕ್ ಅನ್ನುವ ಸ್ಪರ್ಧೆಯಿದ್ದಲ್ಲಿ ಇದು ಫಲಿತಾಂಶವನ್ನು ಉಲ್ಟಾ ಮಾಡಬಲ್ಲುದು. ಸೋಲುವ ಭಯವೇ ಅಭ್ಯರ್ಥಿಯನ್ನು ಹಣ ಹಂಚುವ ಯೋಚನೆಗೆ ತಳ್ಳುತ್ತದೆ. ಕಳೆದ ಪಂಚಾಯತ ಚುನಾವಣೆಯಲ್ಲಿ ನಮ್ಮ ಬಳಗದ ಸದಸ್ಯರೊಬ್ಬರು ನಾನು ಯಾವಕಾರಣಕ್ಕೂ ಹಣ ಹಂಚುವುದಿಲ್ಲ ಎಂದು ಹೇಳಿಯೇ ಕೆಲವರು ಯುವಕರನ್ನು ಕರೆದುಕೊಂಡು ಮನೆಮನೆಗೆ ತಿರುಗಿ ಮತಯಾಚನೆ ಮಾಡಿದರು. ಅವರು ಗೆದ್ದರು. ಅವರುಗಳಿಸಿದ ಒಟ್ಟು ಮತಗಳು ಅವರೆದುರಿಗಿದ್ದ ಉಳಿದ ಎಲ್ಲಾ ಅಭ್ಯರ್ಥಿಗಳ ಮತಗಳ ಮೊತ್ತವನ್ನು ಮೀರಿತ್ತು! ಆದರೆ ಇತ್ತೀಚಿನ ಪಂಚಾಯತ ಚುನಾವಣೆಗಳಲ್ಲಿ ಒಂದೇ ಕ್ಷೇತ್ರದಲ್ಲಿ ಬೇರೆಬೇರೆ ಮೀಸಲಾತಿಯ ಒಂದಕ್ಕಿಂತ ಹೆಚ್ಚು ಸ್ಥಾನಗಳಿದ್ದಾಗ ಜನ ಎಲ್ಲಾ ಮತಗಳನ್ನು ಅವರವರ ಜಾತಿಯವರಿಗೇ ಹಾಕುತ್ತಾರೆ. ಅಂತಹ ಅವಕಾಶ ಇಲ್ಲದಲ್ಲಿ ಮಾತ್ರ ಇನ್ನಿತರ ಆದ್ಯತೆಯ ಮೇಲೆ ಚಲಾಯಿಸ ತೊಡಗಿದ್ದಾರೆ.

ಆದರೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಇದು ಅನ್ವಯಿಸುವುದಿಲ್ಲ. ಆದರೆ ಚುನಾವಣೆಗಳಲ್ಲಿ ಯಾವುದೇ ಒಂದು ಅಲೆ ಇದ್ದಾಗ ಸ್ಥಳೀಯ ಆಕ್ಟಿವಿಸಂ ಕೆಲಸ ಮಾಡುವುದಿಲ್ಲ. ಜನ ಅಲೆಯಲ್ಲಿ ಕೊಚ್ಚಿಹೋಗುವುದೇ ಹೆಚ್ಚು. ಹಣವಿದ್ದರೆ ಏನು ಬೇಕಾದರೂ ಮಾಡಬಹುದು, ಏನ್ನನ್ನಾದರೂ ಗಳಿಸಬಹುದು ಎನ್ನುವ ಈ ಸಂದರ್ಭದಲ್ಲಿಯೂ, ಸ್ಥಳೀಯ ಚುನಾವಣೆಗಳನ್ನುಯಾವುದೇ ಹಣ ಆಮಿಷಗಳ ನೆರವಿಲ್ಲದೆ ಗೆಲ್ಲಲು, ನಿಜವಾದ ಆಕ್ಟಿವಿಸ್ಟ್ ಗುಂಪುಗಳಿಗೆ, ತುಂಬ ಅವಕಾಶ ಇದೆ. ಅಲ್ಲದೆ ಅವರು ಅದಕ್ಕೆ ಬೇಕಾದ ಸ್ಥಳೀಯ ರಾಜಕಾರಣದ ಚಾಕಚಕ್ಯತೆಯನ್ನು ಕೂಡಾ ಗಳಿಸಿಕೊಂಡಿರುತ್ತಾರೆ.
ಯಾವುದಾದರೂ ಭಾವನಾತ್ಮಕ ವಿಷಯಗಳಿದ್ದರೆ, ಅದರ ಮೇಲೆ ಸವಾರಿ ಮಾಡುವುದು, ಇನ್ನೂ ಹೆಚ್ಚು ತತ್ಕಾಲದ ಲಾಭವನ್ನು ತಂದುಕೊಡುತ್ತದೆ ಎನ್ನುವುದನ್ನು ಇಂದು ಎಲ್ಲ ಪಕ್ಷಗಳೂ ಕಂಡುಕೊಂಡಿವೆ. ಹಾಗಾದಾಗ ಚುನಾವಣೆಗಳಲ್ಲಿ ಬೇರೆಲ್ಲ ನಿಜ ಸಮಸ್ಯೆಗಳು ಪಕ್ಕಕ್ಕೆ ಸರಿದು ಹೋಗುತ್ತವೆ. “ಜಲ್ಲಿ ಕಟ್ಟು” ವಿಚಾರದಲ್ಲಿ ತಮಿಳಿನಾಡಿನಲ್ಲಿ ಎಲ್ಲರೂ ಪಕ್ಷಬೇಧ ಮರೆತು ಹೋರಾಡಲು ಕಾರಣ “ಜಲ್ಲಿಕಟ್ಟು” ಬೇಕು ಎನ್ನುವುದಕ್ಕಿಂತ, ಹೆಚ್ಚಾಗಿ ನಾವು ದೂರ ನಿಂತರೆ ವಿರೋಧಿಗಳು ಅದರ ರಾಜಕೀಯ ಲಾಭ ಪಡೆಯುತ್ತಾರೆ ಎನ್ನುವುದೇ ಆಗಿದೆ.

ಇನ್ನೂ ಒಂದು ಕಾರಣವಿದೆ ನಮ್ಮ ಆಕ್ಟಿವಿಸಂ ಕೆಲವೇ ಅಥವಾ ಒಂದರೆಡು ವಿಷಯಗಳಿಗೆ ಸೀಮಿತವಾಗಿದ್ದರೆ ಅದು ಚುನಾವಣೆಯಲ್ಲಿ ನಮಗೆ ಯಾವುದೇ ಪ್ರತಿಫಲವನ್ನು ನೀಡಲಾರದು. ಉದಾ: ನಮ್ಮ ತಾಲ್ಲೂಕಿನಲ್ಲಿ ಪ್ರಮುಖ ವಿಷಯವಾದ ಪರಿಸರನಾಶದ ಬಗ್ಗೆ ನಿರಂತರವಾಗಿ ಹೋರಾಡುವ ಯಾವ ವ್ಯಕ್ತಿಯೂ ಇಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಯಾಕೆಂದರೆ ಈ ಸಮಸ್ಯೆ ನಿಜವಾದದ್ದೇ ಆದರೂ ಜನರ ಬದುಕಿನಲ್ಲಿ ಬೇರೆ ಬೇರೆ ರೀತಿ ತಳುಕುಹಾಕಿಕೊಂಡಿದೆ. ಆದ್ದರಿಂದ ಒಬ್ಬ ಪರಿಸರ ಹೋರಾಟಗಾರ ಇಲ್ಲಿ ಏಕಕಾಲಕ್ಕೆ ಕೆಲವರ ಮೆಚ್ಚಿನ ವ್ಯಕ್ತಿಯೂ. ಇನ್ನುಕೆಲವರ ವಿರೋಧಿಯೂ ಹಲವರಿಗೆ ಅನುಪಯುಕ್ತನೂ, ಮತ್ತೂ ಕೆಲವರಿಗೆ ಅನುಮಾನಾಸ್ಪದನೂ ಆಗಿರುತ್ತಾನೆ. ಇದು ಸುಮಾimagesರಾಗಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಿಗೂ ಅನ್ವಯಿಸುತ್ತದೆ. ಹಿಂದೆ ರೈತಸಂಘ ಚುನಾವಣೆಗಳಲ್ಲಿ ಹೆಚ್ಚು ಯಶಸ್ಸು ಗಳಿಸಲಾಗದಿರಲು ಇದೂ ಒಂದು ಕಾರಣ.

ಹಾಗಾಗಿ ಅಕ್ಟಿವಿಸಂ ನಮೂಲಕ ಚುನಾವಣೆಯನ್ನೆದುರಿಸುವ ಉದ್ದೇಶವಿದ್ದರೆ, ಜನರ ನಿತ್ಯದ ಹಲವು ಸಮಸ್ಯೆಗಳನ್ನೊಳಗೊಂಡ ಬಹುಮುಖಿ ಕಾರ್ಯಕ್ರಮಗಳ, ಕಾರ್ಯಕರ್ತರ ಪಡೆ ಅಗತ್ಯವಾಗುತ್ತದೆ. ರಾಜಕೀಯ ಪಕ್ಷಗಳಿಗೆ ಈ ಸಮಸ್ಯೆ ಇಲ್ಲ. ಮತದಾರ ಯಾವಾಗಲೂ ಯಾವುದಾದರೊಂದು ಪಕ್ಷವನ್ನು ಆರಿಸುವ ಅನಿವಾರ್ಯ ಪರಿಸ್ಥಿತಿಯಲ್ಲಿ ಇರುತ್ತಾನೆ. ಆದರೆ ಆಕ್ಟಿವಿಸಂ ಮೂಲಕ ರಾಜಕೀಯ ಅಧಿಕಾರ ಪಡೆಯಬಯಸುವವರು ಎಲ್ಲವನ್ನೂ ಶೂನ್ಯದಿಂದ ಪ್ರಾರಂಬಿಸಬೇಕಾದ್ದರಿಂದ, ಅದಕ್ಕೆ ಬೇಕಾಗುವ ದೊಡ್ಡ ಪಡೆಯನ್ನು ಕಟ್ಟುವುದು ಕಷ್ಟದ ಕೆಲಸ.
ನಮ್ಮ ತಾಲ್ಲೂಕಿನಲ್ಲಿ ಒಬ್ಬರು ಹಿರಿಯ ಗಾಂಧಿವಾದಿಯಿದ್ದರು. ಅವರು ಕಂದಾಯ ಇಲಾಖೆಯಲ್ಲಿ ದುಡಿದು ನಿವೃತ್ತರಾದವರು. ನಂತರ ಸಕಲೇಶಪುರ ಮತ್ತು ಆಲೂರು ವಿಧಾನಸಭಾಕ್ಷೇತ್ರದ ಎರಡೂ ತಾಲ್ಲೂಕುಗಳಲ್ಲಿ ತಾಲ್ಲೂಕು ಕಛೇರಿಯ ಮುಂದೆ ನಿಂತು ಅಲ್ಲಿಗೆ ಬರುವ ಬಡವರ, ಮತ್ತು ರೈತರ ಕೆಲಸಗಳನ್ನು ಲಂಚವಿಲ್ಲದೆ ಮಾಡಿಸಿಕೊಡುತ್ತಿದ್ದರು. ಮಧ್ಯಾಹ್ನ ಯಾರಾದರೊಬ್ಬರು ಅವರಿಗೆ ಊಟ ಹಾಕಿಸುತ್ತಿದ್ದರು, ಸಂಜೆಯ ವೇಳೆಗೆ ಇನ್ನೊಬ್ಬರಿಂದ ಬಸ್ ಚಾರ್ಜು ಮಾತ್ರ ಕೇಳಿಪಡೆದು ಊರಿಗೆ ಮರಳುವುದು ಅವರ ಪದ್ಧತಿ. ಇದು ಅನೇಕ ವರ್ಷಗಳ ಕಾಲ ನಡೆಯಿತು. ತಾಲ್ಲೂಕು ಕಚೇರಿಯ ದಲ್ಲಾಳಿಗಳಿಂದ ಒಂದೆರಡು ಬಾರಿ ಅವರ ಮೇಲೆ ಹಲ್ಲೆಯೂ ನಡೆಯಿತು.

ಅವರು ಅನೇಕ ಬಾರಿ ವಿಧಾನಸಭೆಗೆ ಸ್ಪರ್ಧಿಸಿದರು. ಪ್ರತಿ ಚುನಾವಣೆಯಲ್ಲಿ, ಮತದಾರನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಕರಪತ್ರವೊಂದು ಮುದ್ರಿಸಿಕೊಂಡು ಮನೆಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದರು. ಮೊದಲಬಾರಿ ಅವರು ಸ್ಪರ್ಧಿಸಿದ್ದಾಗ ಒಂದರೆಡು ಸಾವಿರ ಮತ ಗಳಿಸಿದ್ದರು. ಅವರ ಕೊನೆಯ ಚುನಾವಣೆಯಲ್ಲಿ ಅವರು ಗಳಿಸಿದ ಮತ ನೂರಕ್ಕೂ ಕಡಿಮೆ. ಹಾಗೆಂದು ಈಗಲೂ ಅವರನ್ನು ಕೊಂಡಾಡುವ, ಅಂತವರು ಗೆಲ್ಲಬೇಕೆಂದು ಹೇಳುವವವರ ಸಂಖ್ಯೆ ಬಹಳ ದೊಡ್ಡದೇ. ಆದರೆ ಚುನಾವಣೆ ಬಂದಾಗ ತಾವು ಅವರಿಗೆ ನೀಡುವ ಮತ ಮತ್ತೊಬ್ಬನ ಗೆಲುವಿಗೆ ಕಾರಣವಾದೀತೆಂಬ, ಜನರ ಲೆಕ್ಕಾಚಾರವೇ ಅಂತವರಿಗೆ ಮುಳುವಾಗುತ್ತದೆ.

 

ಇಂದು ನೂರಾರು ಸಂಘ ಸಂಸ್ಥೆಗಳಿವೆ. ಹೋರಾಟದ ಗುಂಪುಗಳಿವೆ. ನಾನಾರೀತಿಯ ಹೋರಾಟಗಳೂ ಇವೆ. ನಾನಾ ತರದ ಜನ ಅದರಲ್ಲಿ ತೊಡಗಿಕೊಂಡಿರುತ್ತಾರೆ. ಎಲ್ಲ ಹೋರಾಟಗಳೂ ಒಂದೇ ಬಗೆಯವಾಗಿರುವುದಿಲ್ಲ. ಒಂದು ಹೋರಾಟಕ್ಕೆ ಸ್ಥಳೀಯವಾಗಿ ಒಂದು ಅಭಿಪ್ರಾಯವಿದ್ದರೆ ಹೊರಗೆ ಇನ್ನೊಂದು ಅಭಿಪ್ರಾಯವಿರುತ್ತದೆ. ನಿಜವಾದ ಹೋರಾಟಗಾರರು, ಸ್ವಹಿತಾಸಕ್ತಿಯಿಂದ ಬಂದವರು, ರಾಜಕೀಯ ಲಾಭಕ್ಕಾಗಿ ಬಂದವರು. ದೂರದಲ್ಲಿ ಕುಳಿತು ಹೋರಾಟ ರೂಪಿಸುವವರು, ಇತ್ಯಾದಿಗಳೂ ಇರುತ್ತಾರೆ.

ರೈತರ ಪರ ಹೋರಾಟದಲ್ಲಿ ಸಂತ್ರಸ್ತನಾಗಿ ಭಾಗಿಯಾಗಿರುವಾತ ಹಳ್ಳಿಯಲ್ಲಿ ಮೀಟರ್ ಬಡ್ಡಿ ಸಂಗ್ರಾಹಕನೂ ಆಗಿರುತ್ತಾನೆ! ಇದು ಪತ್ರಿಕೆಗಳಲ್ಲಿ ಬರೆಯುವ ಸೆಮಿನಾರುಗಳಲ್ಲಿ ಮಾತನಾಡುವವರಿಗೆ ತಿಳಿದೇ ಇರುವುದಿಲ್ಲ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಜನರಿಗೆ ಈ ಹೋರಾಟಗಾರರಿಗಿಂತ ಕಷ್ಟಕ್ಕೆ ಆಗುವ ಅಥವಾ ಕಾಸು ಕೊಡುವ ರಾಜಕಾರಣಿಯೇ ಯೋಗ್ಯನಾಗಿ ಕಾಣುತ್ತಾನೆ. ಸಿದ್ಧಾಂತಗಳು ತಲೆಕೆಳಗಾಗುತ್ತವೆ. ಹೋರಾಟಗಾರರು ಗೆಲ್ಲಲಿಲ್ಲ ಎಂದು ವಿಷಾದಿಸುವಾಗ ಅವರ ಗೆಲುವಿಗೆ ಸಾಧ್ಯತೆಯೇ ಇರಲಿಲ್ಲ ಎಂಬುದನ್ನು ಮರೆಯುತ್ತಾರೆ. ಇರೋಮ್ ಶರ್ಮಿಳಾರನ್ನು ಗೆಲ್ಲಿಸಲು ಬೇಕಾದ ಕಾರ್ಯಕ್ರಮವಾಗಲೀ.. ಕಾರ್ಯಪಡೆಯಾಗಲೀ ಇತ್ತೇ?

ಅಚ್ಚೇದಿನ್: ಎಚ್ಚರ, ನಿಮ್ಮ ಖಾತೆಗಳೇ ಕ್ಯಾಶಲೆಸ್!

ಅಚ್ಚೇದಿನಗಳ ಕನಸು ಕಂಡು ನೋಟು ರದ್ದತಿ ಬೆಂಬಲಿಸಿದವರಲ್ಲಿ ವಿಷಾದದ ಮೌನ

– ಪ್ರದೀಪ್ ಮಾಲ್ಗುಡಿ

ಬ್ಯಾಂಕ್ಗಳಲ್ಲಿನ ಹಣಕಾಸು ವಹಿವಾಟು ಇದ್ದಕ್ಕಿದ್ದಂತೆ ದೊಡ್ಡ ಸುದ್ದಿಯಾಗಿದೆ. ನಮ್ಮ ದುಡ್ಡನ್ನು ಖಾತೆಗೆ ಜಮಾ ಮಾಡಲು, ಹಣ ಹಿಂತೆಗೆದುಕೊಳ್ಳಲು ಕೂಡ ದುಬಾರಿ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಇಡಲಾಗದ ಗ್ರಾಹಕರ ಮೇಲೆ ಕೂಡ ಎಸ್ಬಿಐ ಕೆಂಗಣ್ಣು ಬೀರಿದೆ.

 

patna-atmಹಣಕಾಸಿನ ವಹಿವಾಟಿಗೆ ದೊಡ್ಡ ಮೊತ್ತದ ಶುಲ್ಕವನ್ನು ವಿಧಿಸೋಕೆ ಬ್ಯಾಂಕ್ಗಳು ಮುಂದಾಗಿವೆ. ಇದಕ್ಕೆ ಮುನ್ನುಡಿ ಬರೆದದ್ದು ಎಚ್ಡಿಎಫ್ಸಿ. ಅನಂತರ ಎಸ್ಬಿಐ ಕೂಡ ಅನೇಕ ಹಂತಗಳಲ್ಲಿ ಶುಲ್ಕ ವಿಧಿಸೋಕೆ ಮುಂದಾಗಿದೆ. ಕೆಲವೇ ದಿನಗಳಲ್ಲಿ ಇದೇ ದಾರಿಯನ್ನು ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಕೂಡ ಹಿಡಿಯಬಹುದು.
ಎಸ್ಬಿಐ ಇತ್ತೀಚೆಗೆ ಮಾಡಿರುವ ಹೊಸ ನಿಯಮಗಳು ಗ್ರಾಹಕರು ಇನ್ನು ಮುಂದೆ ಬ್ಯಾಂಕ್ ಸುತ್ತ ಕೂಡ ಸುಳಿಯದೇ ಇರುವಂತೆ ಎಚ್ಚರಿಕೆ ನೀಡಿವೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಲೇಬೇಕು, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ರೆ ಭಾರಿ ದಂಡ ವಿಧಿಸುವುದು, ಉಳಿತಾಯ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಭಾರಿ ದಂಡ, ಪಿನ್ ನಂಬರ್ ಚೇಂಚ್, ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಶುಲ್ಕ ತೆರಬೇಕು. ಮೆಟ್ರೋ ಸಿಟಿಯ ಗ್ರಾಹಕರ ಖಾತೆಯಲ್ಲಿ 5000 ರೂಪಾಯಿ, ನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 3000 ರೂಪಾಯಿ, ಉಪನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 2000 ರೂಪಾಯಿ, ಗ್ರಾಮೀಣ ಪ್ರದೇಶದ ಗ್ರಾಹಕರ ಖಾತೆಯಲ್ಲಿ 1000 ರೂಪಾಯಿ ಇರಲೇಬೇಕು. ಇಲ್ಲದಿದ್ದಲ್ಲಿ ದಂಡ ಕಟ್ಟಿ ಅಂತ ಎಸ್ಬಿಐ ಹೇಳಿದೆ. ಏಪ್ರಿಲ್ 1ರಿಂದಲೇ ಎಸ್ಬಿಐನಿಂದ ಈ ಹೊಸ ನಿಮಯ ಜಾರಿಯಾಗುತ್ತೆ.

 
ಗ್ರಾಹಕರ ಖಾತೆಗಳನ್ನೇ ಕ್ಯಾಶ್ಲೆಸ್ ಮಾಡೋ ಇನ್ನೊಂದು ನಿಯಮವನ್ನು ಕೂಡ ಎಸ್ಬಿಐ ರೂಪಿಸಿದೆ. ಅದರ ಪ್ರಕಾರ, ಮೆಟ್ರೋ ಸಿಟಿ ಗ್ರಾಹಕರ ಖಾತೆಯಲ್ಲಿ ಶೇ.50ಕ್ಕಿಂತ ಕಡಿಮೆ ಇದ್ರೆ 50 ರೂ., ಶೇ. 50ರಿಂದ 70ರಷ್ಟು ಕಡಿಮೆಯಾದ್ರೆ 75 ರೂ., ಶೇ. 75ಕ್ಕಿಂತ ಕಡಿಮೆಯಾದ್ರೆ 100 ರೂ. ದಂಡ ವಿಧಿಸಲಾಗುತ್ತೆ. ಇನ್ನು ಗ್ರಾಮೀಣ ಗ್ರಾಹಕರ ಖಾತೆಯಲ್ಲಿ ಶೇ. 50ಕ್ಕಿಂತ ಕಡಿಮೆಯಾದ್ರೆ 20 ರೂಪಾಯಿ, ಶೇ. 50ರಿಂದ 75ರಷ್ಟು ಕಡಿಮೆಯಾದ್ರೆ 30 ರೂ., ಶೇ. 75ರ ಮೇಲೆ ಕಡಿಮೆಯಾದ್ರೆ 50 ರೂ. ದಂಡ ಕಟ್ಟಬೇಕಾಗುತ್ತದೆ. ಇದಲ್ಲದೇ ದಂಡದ ಜೊತೆಗೆ ಸೇವಾ ತೆರಿಗೆ ಕೂಡ ಕಟ್ಟಬೇಕಾಗುತ್ತದೆ.
ಮೊದಲು ಹಣಕಾಸು ವಹಿವಾಟಿನ ಮೇಲೆ ಶೇ. 0.50ರಷ್ಟು ದರ ವಿಧಿಸೋದಾಗಿ ಹೇಳಲಾಗಿತ್ತು. ಕಡೆಗೆ ಪ್ರತಿ ತಿಂಗಳಲ್ಲಿ 4 ವಹಿವಾಟಿನ ನಂತರ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕು ಎಂದು ಎಚ್ಡಿಎಫ್ಸಿ ಹೇಳಿದೆ. ಐಸಿಐಸಿಐ ಕೂಡ ಇದೇ ರೀತಿಯಲ್ಲಿ ಶೇ. 0.58 ಶುಲ್ಕವನ್ನು ವಿಧಿಸ್ತಿದೆ. ಕೆಲವು ವೇಳೆ ವಹಿವಾಟಿಗೆ ಉಚಿತ ಆಫರ್ ಕೂಡ ನೀಡುತ್ತಿದೆ.

 

demonetisationಇನ್ನು ಕೇಂದ್ರ ಸರ್ಕಾರದ ಕ್ಯಾಶ್ಲೆಸ್ ಎಕಾನಮಿ ಕರೆಗೆ ಓಗೊಟ್ಟಿರೋದಾಗಿ ಹೇಳಿದ್ದ ಕೆಲವು ಬ್ಯಾಂಕ್ಗಳು ಉಚಿತ ವಹಿವಾಟು ನೀಡೋದಾಗಿ ಘೋಷಿಸಿದ್ದವು. ಆದರೆ, ಎಚ್ಡಿಎಫ್ಸಿ, ಎಸ್ಬಿಐ ಬ್ಯಾಂಕ್ಗಳು ಮಾತ್ರ ಕ್ಯಾಶ್ಲೆಸ್ ಕರೆಯನ್ನು ಬಡ, ಕೂಲಿ, ಕಾರ್ಮಿಕ ವರ್ಗದವರ ಖಾತೆಯನ್ನೇ ಕ್ಯಾಶ್ಲೆಸ್ ಮಾಡೋ ಹುನ್ನಾರ ನಡೆಸಿವೆ.

 
ಎಚ್ಡಿಎಫ್ಸಿ ಪ್ರತಿ ವಹಿವಾಟಿಗೆ 150 ಶುಲ್ಕ ವಿಧಿಸುತ್ತೆ. ಕೆಲವು ಬ್ಯಾಂಕ್ಗಳು 50, ಇನ್ನು ಕೆಲವು 1000ಕ್ಕೆ 5 ರೂ. ಶುಲ್ಕ ವಸೂಲಿ ಮಾಡ್ತಿವೆ. ಒಂದೊಂದು ಬ್ಯಾಂಕ್ಗಳು ಒಂದೇ ವಹಿವಾಟಿಗೆ ತಮ್ಮ ಮನಸಿಗೆ ತೋರಿದಷ್ಟು ಶುಲ್ಕವನ್ನು ವಿಧಿಸೋದು ಯಾವ ಸೀಮೆಯ ನ್ಯಾಯ? ಹೀಗೆ ಮನಸೋ ಇಚ್ಚೆ ಗ್ರಾಹರಕರನ್ನು ಬ್ಯಾಂಕ್ಗಳು ಲೂಟಿ ಮಾಡ್ತಿವೆ. ಆದರೆ, ಆರ್ಬಿಐ ಮಾತ್ರ ಏನೊಂದನ್ನೂ ನೋಡದೆ, ಕೇಳದೆ ಸುಮ್ಮನೆ ಕುಳಿತಿದೆ.

 
ಆಕ್ಸಿಸ್ ಬ್ಯಾಂಕ್ ಬೇರೆ ಶಾಖೆಯ ಖಾತೆಗಳ ವಹಿವಾಟಿಗೆ ಶುಲ್ಕ ವಿಧಿಸುತ್ತೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಆದರೆ, ಬ್ಯಾಂಕ್ಗಳು ಮಾತ್ರ ಡಿಜಿಟಲ್ ನೆಟ್ವರ್ಕ್ ಇದ್ದರೂ, ಕಳ್ಳದಾರಿಯಲ್ಲಿ ಗ್ರಾಹಕರಿಂದ ಹಣ ಸುಲಿಯುತ್ತಿವೆ.

 
ಇವೆಲ್ಲಕ್ಕಿಂತ ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪಾರದರ್ಶಕ ವಹಿವಾಟಿಗಾಗಿ ಎಲ್ಲೆಡೆ ಬಿಲ್ ನೀಡುವುದನ್ನು ಕಡ್ಡಾಯಗೊಳಿಸಿ ಕಾನೂನನ್ನೂ ರೂಪಿಸಲಾಗಿದೆ. ಆದರೆ, ದೇಶದ ಹಣಕಾಸಿನ ವಹಿವಾಟು ನಡೆಸುವ ಬ್ಯಾಂಕ್ಗಳೇ ಇದುವರೆಗೆ ಬಿಲ್ ನೀಡಿ, ಹಣ ಪಡೆಯುವ ಕ್ರಮವನ್ನು ಪಾಲಿಸಿಲ್ಲ. ಎಸ್ಬಿಐ ರೂಪಿಸಿರುವ ಹೊಸ ನಿಮಯಗಳು ಜಾರಿಯಾದರೆ, ನಿಮ್ಮ ಖಾತೆಯನ್ನು ರಾಜಾರೋಷವಾಗಿ ದೋಚುವ ಕೆಲಸ ಇನ್ನಷ್ಟು ಜೋರಾಗಿಯೇ ನಡೆಯುತ್ತೆ. ಶೇಕಡಾವಾರು ಆಧಾರದಲ್ಲಿ ಶುಲ್ಕ, ಹೆಚ್ಚುವರಿ ವಹಿವಾಟಿಗೆ ಶುಲ್ಕ, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಿಧಿಸಿದರೆ, ಬಡವರ, ಮಧ್ಯಮವರ್ಗದವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ದುಡ್ಡಿಗೆ ಕತ್ತರಿ ಬೀಳೋದಂತೂ ನಿಶ್ಚಿತವಾದಂತಾಗಿದೆ.

 
ಗ್ರಾಹಕರಿಗೆ ನಿಮ್ಮ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳಲಾಗಿದೆ ಎಂಬ ಕನಿಷ್ಠ ವಿಷಯವನ್ನೂ ತಿಳಿಸದೇ ಬ್ಯಾಂಕ್ಗಳು ಗ್ರಾಹಕರನ್ನು ಸುಲಿಯುತ್ತಿವೆ. ಈ ಸುಲಿಗೆಯ ಯಾಗಕ್ಕೆ ಮುಂಬರುವ ಮೂರ್ಖರ ದಿನಕ್ಕಾಗಿ ಮುಹೂರ್ತವನ್ನು ಕೂಡ ನಿಗದಿಗೊಳಿಸಲಾಗಿದೆ. ಇಷ್ಟೆಲ್ಲ ಆದರೂ ಆರ್ಬಿಐ ಮೌನವಾಗಿದೆ. ಈ ಮೂಲಕ ಅದರ ಅಸ್ತಿತ್ವದ ಮೇಲೆ ಅನುಮಾನ ಕೂಡ ಮೂಡಿದೆ. ಏನಾದರೂ ಆಗಲಿ ಅಚ್ಚೇದಿನ್ ಬಂದವೇ ಎಂದು ಮಾತ್ರ ಯಾರೂ ಕೇಳಬಾರದು. ಕೇಳಿದರೆ ಪಾಕಿಸ್ತಾನಕ್ಕೆ ಒನ್ ವೇ ಟಿಕೆಟ್ ಕಳುಹಿಸಲಾಗುತ್ತೆ.

ಚಿತ್ರಕೃಪೆ;  Indian Express, Business Standard