Daily Archives: March 6, 2017

ಅಚ್ಚೇದಿನ್: ಎಚ್ಚರ, ನಿಮ್ಮ ಖಾತೆಗಳೇ ಕ್ಯಾಶಲೆಸ್!

ಅಚ್ಚೇದಿನಗಳ ಕನಸು ಕಂಡು ನೋಟು ರದ್ದತಿ ಬೆಂಬಲಿಸಿದವರಲ್ಲಿ ವಿಷಾದದ ಮೌನ

– ಪ್ರದೀಪ್ ಮಾಲ್ಗುಡಿ

ಬ್ಯಾಂಕ್ಗಳಲ್ಲಿನ ಹಣಕಾಸು ವಹಿವಾಟು ಇದ್ದಕ್ಕಿದ್ದಂತೆ ದೊಡ್ಡ ಸುದ್ದಿಯಾಗಿದೆ. ನಮ್ಮ ದುಡ್ಡನ್ನು ಖಾತೆಗೆ ಜಮಾ ಮಾಡಲು, ಹಣ ಹಿಂತೆಗೆದುಕೊಳ್ಳಲು ಕೂಡ ದುಬಾರಿ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಇಡಲಾಗದ ಗ್ರಾಹಕರ ಮೇಲೆ ಕೂಡ ಎಸ್ಬಿಐ ಕೆಂಗಣ್ಣು ಬೀರಿದೆ.

 

patna-atmಹಣಕಾಸಿನ ವಹಿವಾಟಿಗೆ ದೊಡ್ಡ ಮೊತ್ತದ ಶುಲ್ಕವನ್ನು ವಿಧಿಸೋಕೆ ಬ್ಯಾಂಕ್ಗಳು ಮುಂದಾಗಿವೆ. ಇದಕ್ಕೆ ಮುನ್ನುಡಿ ಬರೆದದ್ದು ಎಚ್ಡಿಎಫ್ಸಿ. ಅನಂತರ ಎಸ್ಬಿಐ ಕೂಡ ಅನೇಕ ಹಂತಗಳಲ್ಲಿ ಶುಲ್ಕ ವಿಧಿಸೋಕೆ ಮುಂದಾಗಿದೆ. ಕೆಲವೇ ದಿನಗಳಲ್ಲಿ ಇದೇ ದಾರಿಯನ್ನು ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಕೂಡ ಹಿಡಿಯಬಹುದು.
ಎಸ್ಬಿಐ ಇತ್ತೀಚೆಗೆ ಮಾಡಿರುವ ಹೊಸ ನಿಯಮಗಳು ಗ್ರಾಹಕರು ಇನ್ನು ಮುಂದೆ ಬ್ಯಾಂಕ್ ಸುತ್ತ ಕೂಡ ಸುಳಿಯದೇ ಇರುವಂತೆ ಎಚ್ಚರಿಕೆ ನೀಡಿವೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಲೇಬೇಕು, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ರೆ ಭಾರಿ ದಂಡ ವಿಧಿಸುವುದು, ಉಳಿತಾಯ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಭಾರಿ ದಂಡ, ಪಿನ್ ನಂಬರ್ ಚೇಂಚ್, ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಶುಲ್ಕ ತೆರಬೇಕು. ಮೆಟ್ರೋ ಸಿಟಿಯ ಗ್ರಾಹಕರ ಖಾತೆಯಲ್ಲಿ 5000 ರೂಪಾಯಿ, ನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 3000 ರೂಪಾಯಿ, ಉಪನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 2000 ರೂಪಾಯಿ, ಗ್ರಾಮೀಣ ಪ್ರದೇಶದ ಗ್ರಾಹಕರ ಖಾತೆಯಲ್ಲಿ 1000 ರೂಪಾಯಿ ಇರಲೇಬೇಕು. ಇಲ್ಲದಿದ್ದಲ್ಲಿ ದಂಡ ಕಟ್ಟಿ ಅಂತ ಎಸ್ಬಿಐ ಹೇಳಿದೆ. ಏಪ್ರಿಲ್ 1ರಿಂದಲೇ ಎಸ್ಬಿಐನಿಂದ ಈ ಹೊಸ ನಿಮಯ ಜಾರಿಯಾಗುತ್ತೆ.

 
ಗ್ರಾಹಕರ ಖಾತೆಗಳನ್ನೇ ಕ್ಯಾಶ್ಲೆಸ್ ಮಾಡೋ ಇನ್ನೊಂದು ನಿಯಮವನ್ನು ಕೂಡ ಎಸ್ಬಿಐ ರೂಪಿಸಿದೆ. ಅದರ ಪ್ರಕಾರ, ಮೆಟ್ರೋ ಸಿಟಿ ಗ್ರಾಹಕರ ಖಾತೆಯಲ್ಲಿ ಶೇ.50ಕ್ಕಿಂತ ಕಡಿಮೆ ಇದ್ರೆ 50 ರೂ., ಶೇ. 50ರಿಂದ 70ರಷ್ಟು ಕಡಿಮೆಯಾದ್ರೆ 75 ರೂ., ಶೇ. 75ಕ್ಕಿಂತ ಕಡಿಮೆಯಾದ್ರೆ 100 ರೂ. ದಂಡ ವಿಧಿಸಲಾಗುತ್ತೆ. ಇನ್ನು ಗ್ರಾಮೀಣ ಗ್ರಾಹಕರ ಖಾತೆಯಲ್ಲಿ ಶೇ. 50ಕ್ಕಿಂತ ಕಡಿಮೆಯಾದ್ರೆ 20 ರೂಪಾಯಿ, ಶೇ. 50ರಿಂದ 75ರಷ್ಟು ಕಡಿಮೆಯಾದ್ರೆ 30 ರೂ., ಶೇ. 75ರ ಮೇಲೆ ಕಡಿಮೆಯಾದ್ರೆ 50 ರೂ. ದಂಡ ಕಟ್ಟಬೇಕಾಗುತ್ತದೆ. ಇದಲ್ಲದೇ ದಂಡದ ಜೊತೆಗೆ ಸೇವಾ ತೆರಿಗೆ ಕೂಡ ಕಟ್ಟಬೇಕಾಗುತ್ತದೆ.
ಮೊದಲು ಹಣಕಾಸು ವಹಿವಾಟಿನ ಮೇಲೆ ಶೇ. 0.50ರಷ್ಟು ದರ ವಿಧಿಸೋದಾಗಿ ಹೇಳಲಾಗಿತ್ತು. ಕಡೆಗೆ ಪ್ರತಿ ತಿಂಗಳಲ್ಲಿ 4 ವಹಿವಾಟಿನ ನಂತರ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕು ಎಂದು ಎಚ್ಡಿಎಫ್ಸಿ ಹೇಳಿದೆ. ಐಸಿಐಸಿಐ ಕೂಡ ಇದೇ ರೀತಿಯಲ್ಲಿ ಶೇ. 0.58 ಶುಲ್ಕವನ್ನು ವಿಧಿಸ್ತಿದೆ. ಕೆಲವು ವೇಳೆ ವಹಿವಾಟಿಗೆ ಉಚಿತ ಆಫರ್ ಕೂಡ ನೀಡುತ್ತಿದೆ.

 

demonetisationಇನ್ನು ಕೇಂದ್ರ ಸರ್ಕಾರದ ಕ್ಯಾಶ್ಲೆಸ್ ಎಕಾನಮಿ ಕರೆಗೆ ಓಗೊಟ್ಟಿರೋದಾಗಿ ಹೇಳಿದ್ದ ಕೆಲವು ಬ್ಯಾಂಕ್ಗಳು ಉಚಿತ ವಹಿವಾಟು ನೀಡೋದಾಗಿ ಘೋಷಿಸಿದ್ದವು. ಆದರೆ, ಎಚ್ಡಿಎಫ್ಸಿ, ಎಸ್ಬಿಐ ಬ್ಯಾಂಕ್ಗಳು ಮಾತ್ರ ಕ್ಯಾಶ್ಲೆಸ್ ಕರೆಯನ್ನು ಬಡ, ಕೂಲಿ, ಕಾರ್ಮಿಕ ವರ್ಗದವರ ಖಾತೆಯನ್ನೇ ಕ್ಯಾಶ್ಲೆಸ್ ಮಾಡೋ ಹುನ್ನಾರ ನಡೆಸಿವೆ.

 
ಎಚ್ಡಿಎಫ್ಸಿ ಪ್ರತಿ ವಹಿವಾಟಿಗೆ 150 ಶುಲ್ಕ ವಿಧಿಸುತ್ತೆ. ಕೆಲವು ಬ್ಯಾಂಕ್ಗಳು 50, ಇನ್ನು ಕೆಲವು 1000ಕ್ಕೆ 5 ರೂ. ಶುಲ್ಕ ವಸೂಲಿ ಮಾಡ್ತಿವೆ. ಒಂದೊಂದು ಬ್ಯಾಂಕ್ಗಳು ಒಂದೇ ವಹಿವಾಟಿಗೆ ತಮ್ಮ ಮನಸಿಗೆ ತೋರಿದಷ್ಟು ಶುಲ್ಕವನ್ನು ವಿಧಿಸೋದು ಯಾವ ಸೀಮೆಯ ನ್ಯಾಯ? ಹೀಗೆ ಮನಸೋ ಇಚ್ಚೆ ಗ್ರಾಹರಕರನ್ನು ಬ್ಯಾಂಕ್ಗಳು ಲೂಟಿ ಮಾಡ್ತಿವೆ. ಆದರೆ, ಆರ್ಬಿಐ ಮಾತ್ರ ಏನೊಂದನ್ನೂ ನೋಡದೆ, ಕೇಳದೆ ಸುಮ್ಮನೆ ಕುಳಿತಿದೆ.

 
ಆಕ್ಸಿಸ್ ಬ್ಯಾಂಕ್ ಬೇರೆ ಶಾಖೆಯ ಖಾತೆಗಳ ವಹಿವಾಟಿಗೆ ಶುಲ್ಕ ವಿಧಿಸುತ್ತೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಆದರೆ, ಬ್ಯಾಂಕ್ಗಳು ಮಾತ್ರ ಡಿಜಿಟಲ್ ನೆಟ್ವರ್ಕ್ ಇದ್ದರೂ, ಕಳ್ಳದಾರಿಯಲ್ಲಿ ಗ್ರಾಹಕರಿಂದ ಹಣ ಸುಲಿಯುತ್ತಿವೆ.

 
ಇವೆಲ್ಲಕ್ಕಿಂತ ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪಾರದರ್ಶಕ ವಹಿವಾಟಿಗಾಗಿ ಎಲ್ಲೆಡೆ ಬಿಲ್ ನೀಡುವುದನ್ನು ಕಡ್ಡಾಯಗೊಳಿಸಿ ಕಾನೂನನ್ನೂ ರೂಪಿಸಲಾಗಿದೆ. ಆದರೆ, ದೇಶದ ಹಣಕಾಸಿನ ವಹಿವಾಟು ನಡೆಸುವ ಬ್ಯಾಂಕ್ಗಳೇ ಇದುವರೆಗೆ ಬಿಲ್ ನೀಡಿ, ಹಣ ಪಡೆಯುವ ಕ್ರಮವನ್ನು ಪಾಲಿಸಿಲ್ಲ. ಎಸ್ಬಿಐ ರೂಪಿಸಿರುವ ಹೊಸ ನಿಮಯಗಳು ಜಾರಿಯಾದರೆ, ನಿಮ್ಮ ಖಾತೆಯನ್ನು ರಾಜಾರೋಷವಾಗಿ ದೋಚುವ ಕೆಲಸ ಇನ್ನಷ್ಟು ಜೋರಾಗಿಯೇ ನಡೆಯುತ್ತೆ. ಶೇಕಡಾವಾರು ಆಧಾರದಲ್ಲಿ ಶುಲ್ಕ, ಹೆಚ್ಚುವರಿ ವಹಿವಾಟಿಗೆ ಶುಲ್ಕ, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಿಧಿಸಿದರೆ, ಬಡವರ, ಮಧ್ಯಮವರ್ಗದವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ದುಡ್ಡಿಗೆ ಕತ್ತರಿ ಬೀಳೋದಂತೂ ನಿಶ್ಚಿತವಾದಂತಾಗಿದೆ.

 
ಗ್ರಾಹಕರಿಗೆ ನಿಮ್ಮ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳಲಾಗಿದೆ ಎಂಬ ಕನಿಷ್ಠ ವಿಷಯವನ್ನೂ ತಿಳಿಸದೇ ಬ್ಯಾಂಕ್ಗಳು ಗ್ರಾಹಕರನ್ನು ಸುಲಿಯುತ್ತಿವೆ. ಈ ಸುಲಿಗೆಯ ಯಾಗಕ್ಕೆ ಮುಂಬರುವ ಮೂರ್ಖರ ದಿನಕ್ಕಾಗಿ ಮುಹೂರ್ತವನ್ನು ಕೂಡ ನಿಗದಿಗೊಳಿಸಲಾಗಿದೆ. ಇಷ್ಟೆಲ್ಲ ಆದರೂ ಆರ್ಬಿಐ ಮೌನವಾಗಿದೆ. ಈ ಮೂಲಕ ಅದರ ಅಸ್ತಿತ್ವದ ಮೇಲೆ ಅನುಮಾನ ಕೂಡ ಮೂಡಿದೆ. ಏನಾದರೂ ಆಗಲಿ ಅಚ್ಚೇದಿನ್ ಬಂದವೇ ಎಂದು ಮಾತ್ರ ಯಾರೂ ಕೇಳಬಾರದು. ಕೇಳಿದರೆ ಪಾಕಿಸ್ತಾನಕ್ಕೆ ಒನ್ ವೇ ಟಿಕೆಟ್ ಕಳುಹಿಸಲಾಗುತ್ತೆ.

ಚಿತ್ರಕೃಪೆ;  Indian Express, Business Standard