Category Archives: ನಕ್ಸಲ್ ಕಥನ

ಪ್ರಜಾ ಸಮರ – 13 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಮಧ್ಯಭಾರತದ ದಂಡಕಾರಣ್ಯದ ಬಸ್ತಾರ್ ಅರಣ್ಯದಲ್ಲಿ 1971 ರಲ್ಲಿ ಸಿ.ಪಿ.ಐ. (ಎಂ.ಎಲ್.) ಸಂಘಟನೆಯ ಪ್ರಮುಖ ನಾಯಕರಲ್ಲಿ ಒಬ್ಬನಾಗಿದ್ದ ಹಾಗೂ ಚಾರು ಮುಜಂದಾರ್‌ನ ಸಂಗಾತಿ ಜೋಗು ರಾಯ್ ನಕ್ಸಲ್ ಚಟುವಟಿಕೆಗೆ ಬುನಾದಿ ಹಾಕಿದ ಮೊದಲ ವ್ಯಕ್ತಿ. ಈತನ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ವಲಯದ ರಾಯ್‌ಪುರ, ದರ್ಗ್, ಬಸ್ತಾರ್, ಬಿಲಾಸ್‌ಪುರ, ಸರ್ಗುಜ, ರಾಯ್‌ಗರ್, ಭೂಪಾಲ್, ಗ್ವಾಲಿಯರ್, ಉಜ್ಜಯನಿ ಜಿಲ್ಲೆಗಳಲ್ಲಿ ಕ್ರಾಂತಿಕಾರಿ ಕಿಸಾನ್ ಮಜ್ದೂರ್ ಸಂಘಟನೆಗಳು ಅಸ್ತಿತ್ವಕ್ಕೆ ಬಂದಿದ್ದವು. ಬಸ್ತಾರ್ ಅರಣ್ಯ ಪ್ರದೇಶವನ್ನು ಕೇಂದ್ರವಾಗಿಟ್ಟು ಚಟುವಟಿಕೆ ಆರಂಭಿಸಿದ ನಕ್ಸಲರು ಜಗದಾಲ್‌ಪುರ್ ಎಂಬ ಜಿಲ್ಲಾ ಕೇಂದ್ರದಲ್ಲಿ ಪ್ರಥಮಬಾರಿಗೆ ಭಿತ್ತಿ ಪತ್ರವನ್ನು ಅಂಟಿಸುವುದರ ಮೂಲಕ ತಮ್ಮ ಆಗಮನವನ್ನು ಸರ್ಕಾರಕ್ಕೆ ಜಾಹಿರುಗೊಳಿಸಿದ್ದರು.

ನಿರಂತರವಾಗಿ ನಡೆದ ಸರ್ಕಾರದ ನಿರ್ಲಕ್ಷ್ಯ ಮತ್ತು ಶೋಷಣೆಗೆ ಒಳಗಾಗಿದ್ದ ಅಲ್ಲಿನ ಆದಿವಾಸಿಗಳ ಪಾಲಿಗೆ ನಕ್ಸಲ್ ಕಾರ್ಯಕರ್ತರು maoist-naxalitesಒಂದರ್ಥದಲ್ಲಿ ನಿಜವಾದ ಆಸರೆಯಾದರು. ಆದಿವಾಸಿಗಳ ಬವಣೆ ಮತ್ತು ಅವರ ಅತಂತ್ರ ಬದುಕಿನ ಇತಿಹಾಸ ನಿನ್ನೆ ಅಥವಾ ಮೊನ್ನೆಯದಲ್ಲ. ಇದಕ್ಕೆ ಶತಶತಮಾನಗಳ ಕಾಲದ ಇತಿಹಾಸವಿದೆ. ಇವರುಗಳ ಸಹಜ ಬದುಕಿಗೆ ಮೊದಲು ಅಡ್ಡಿಯೊಡ್ಡಿದವರೆಂದರೇ, ಭಾರತವನ್ನಾಳಲು ಬಂದ ಬ್ರಿಟೀಷರು.

ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಮೇರಿಕಾದ ಮೂಲನಿವಾಸಿಗಳಾದ ರೆಡ್ ಇಂಡಿಯನ್ನರಂತೆ, ಆಫ್ರಿಕಾದ ಮೂಲ ನಿವಾಸಿಗಳಂತೆ, ಭಾರತದ ಆದಿವಾಸಿಗಳು ಸಹ ತಮ್ಮದೇ ಬದುಕು ಕಟ್ಟಿಕೊಂಡು, ಹೊರಜಗತ್ತಿನ ಸಂಪರ್ಕವಿಲ್ಲದೇ ಜೀವನ ನಡೆಸಿದ್ದರು. ಮಧ್ಯಭಾರತದ ಅರಣ್ಯಕ್ಕೆ 19 ನೇ ಶತಮಾನದ ಆರಂಭದಲ್ಲಿ ಮೊದಲ ಬಾರಿಗೆ ಬ್ರಿಟೀಷರು ಲಗ್ಗೆ ಇಟ್ಟರು. ಭಾರತದಲ್ಲಿ ರೈಲ್ವೆ ಮಾರ್ಗ ವಿಸ್ತರಿಸುವ ನೆಪದಲ್ಲಿ ಅರಣ್ಯದ ಮರಗಳನ್ನು ಕಡಿಯಲು ಹೊರಟಾಗ ಬ್ರಿಟೀಷ್ ಸರ್ಕಾರ ಪ್ರಥಮ ಬಾರಿಗೆ ಆದಿವಾಸಿಗಳ ಪ್ರತಿರೋಧವನ್ನು ಎದುರಿಸಬೇಕಾಯಿತು. ಈ ನೆಲದ ನಿಜವಾರಸುದಾರರಾದ ಆದಿವಾಸಿಗಳ ಸಮಸ್ಯೆಯ ಆಳಕ್ಕೆ ಇಳಿದು, ಅವರ ನೋವುಗಳನ್ನು ಅರ್ಥ ಮಾಡಿಕೊಳ್ಳುವ ಹೃದಯವಾಗಲಿ, ಅಥವಾ ವ್ಯವಧಾನವಾಗಲಿ ಬಿಟೀಷ್ ಸರ್ಕಾರಕ್ಕೆ ಮತ್ತು ಅಧಿಕಾರಿ ವರ್ಗಕ್ಕೆ ಇರಲಿಲ್ಲ. ಅಂದಿನ ಅವರ ಅಹಂಕಾರ ಮತ್ತು ದರ್ಪ ಎರಡು ಶತಮಾನಗಳ ನಂತರ ಆದಿವಾಸಿಗಳ ಸಮಸ್ಯೆಯಾಗಿ ಈಗ ನಕ್ಸಲ್ ಹೋರಾಟದ ರೂಪದಲ್ಲಿ ಭಾರತ ಸರ್ಕಾರವನ್ನು ಕಾಡುವುದರ ಜೊತೆಗೆ ಬಾಧಿಸುತ್ತಿದೆ.

1856 ರಿಂದ 1910 ರವರೆಗೆ ಮದ್ಯಭಾರತದ ಆದಿವಾಸಿಗಳು ಬ್ರಿಟೀಷ್ ಸಕಾರದ ಜೊತೆ ನಿರಂತರವಾಗಿ ನಡೆಸಿದ ಸಂಘರ್ಷದ ಫಲವಾಗಿ ಅಂದಿನ ಬ್ರಿಟೀಷ್ ಸರ್ಕಾರ, 1927 ರಲ್ಲಿ ಆದಿವಾಸಿಗಳ ರಕ್ಷಣೆಗಾಗಿ ವಿಶೇಷ ಕಾಯ್ದೆಯನ್ನು ಜಾರಿಗೆ ತಂದು ಅವರು ಬದುಕುತ್ತಿರುವ ಅರಣ್ಯ ಪ್ರದೇಶವನ್ನು ಸುರಕ್ಷಿತ ವಲಯವೆಂದು ಘೋಷಿಸಿತು., ಅಲ್ಲಿ ಯಾವುದೇ ಚಟುವಟಿಕೆ ನಡೆಯದಂತೆ ನಿರ್ಬಂಧಿಸುವ ಹಕ್ಕನ್ನು ಆಯಾ ಜಿಲ್ಲಾ ಕಲೆಕ್ಟರ್‌ಗಳಿಗೆ ನೀಡಿತು.

1947 ರ ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಈ ಕಾನೂನನ್ನು ಮಾರ್ಪಡಿಸಿ 1950 ರಲ್ಲಿ ಅರಣ್ಯ ಮತ್ತು ಗಣಿಕಾರಿಕೆ ನಡೆಸುವ ಹಕ್ಕನ್ನು ತನ್ನದಾಗಿಸಿಕೊಂಡಿತು. ಇದರ ಫಲವಾಗಿ ಆದಿವಾಸಿಗಳಿಗೆ ಅರಣ್ಯದ ಕಿರು ಉತ್ಪನ್ನಗಳನ್ನು ಹೊರತು ಪಡಿಸಿದರೇ ಭೂಮಿಯ ಹಕ್ಕು ಇಲ್ಲವಾಯಿತು. ಮಧ್ಯ ಪ್ರದೇಶದಿಂದ ಬೇರ್ಪಟ್ಟು ಛತ್ತೀಸ್‌ಗಡ ರಾಜ್ಯವಾಗಿ ರೂಪುಗೊಂಡಿರುವ ಈ ರಾಜ್ಯದಲ್ಲಿ ಒಟ್ಟು ಭೂಮಿಯ ಶೇಕಡ ಐವತ್ತರಷ್ಟು ಅರಣ್ಯ ಪ್ರದೇಶವಿದ್ದು ಇಲ್ಲಿ ಆದಿವಾಸಿಗಳು ಬದುಕುತಿದ್ದಾರೆ.

1950 ರಲ್ಲಿ ಇವರನ್ನು ಹಿಂದುಳಿದ ಬುಡಕಟ್ಟು ಜನಾಂಗವೆಂದು ಗುರುತಿಸಿರುವ ಕೇಂದ್ರ ಸರ್ಕಾರ ಇವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಘೋಷಿಸಿದೆ. ಆದರೆ, ಈ ಅವಕಾಶವೆಲ್ಲಾ ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ, ನಾಗಲ್ಯಾಂಡ್ ಮತ್ತು ಮಿಜೋರಾಂ, ಮಣಿಪುರ ಹಾಗೂ ತ್ರಿಪುರಾ ರಾಜ್ಯಗಳ ಬುಡಕಟ್ಟು ಜನಾಂಗದ ಪಾಲಾಗುತ್ತಿದೆ. ಏಕೆಂದರೇ, ಈಶಾನ್ಯ ರಾಜ್ಯಗಳ ಅರಣ್ಯ ಪ್ರದೇಶಕ್ಕೆ ಕಾಲಿಟ್ಟ ಕ್ರೈಸ್ತ ಮಿಷನರಿಗಳ ಪ್ರಭಾವದಿಂದ ಶಿಕ್ಷಣಕ್ಕೆ ತೆರೆದುಕೊಂಡ ಅಲ್ಲಿನ ಜನ ಕೇಂದ್ರ ಸರ್ಕಾರದ ಮೀಸಲಾತಿಯನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡರು. ಆದರೆ, ತಮ್ಮ ನೆಲದ ಸಂಸ್ಕೃತಿಯೊಂದಿಗೆ ಆಳವಾಗಿ ಬೆರೆತು ಹೋಗಿರುವ ಮಧ್ಯಭಾರತದ ಆದಿವಾಸಿಗಳು ನಾಗರೀಕ ಜಗತ್ತಿನ ಎಲ್ಲಾ ಸವಲತ್ತುಗಳಿಂದ ವಂಚಿತರಾದರು.

ಭಾರತದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಂರ ಮತಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರಗಳು ಕಾಲಕ್ಕೆ ತಕ್ಕಂತೆ ಅನೇಕ ಸವಲತ್ತುಗಳನ್ನು ಘೊಷಿಸಿಕೊಂಡು ಬಂದಿವೆ. ಆದರೇ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸದ ಮತ್ತು ತಾವು ವಾಸಿಸುವ ಹಳ್ಳಿಗಳು ಸಹ ಸರ್ಕಾರದ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಸೇರ್ಪಡೆಯಾಗದ ಕಾರಣ ಇಲ್ಲಿನ ಆದಿವಾಸಿಗಳು ಸ್ವಂತ ನೆಲದಲ್ಲಿ ಪರಕೀಯರಂತೆ ಬದುಕಬೇಕಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಅರಣ್ಯ ಭೂಮಿಯ ಮೇಲಿನ ಹಕ್ಕನ್ನು ಸ್ಥಾಪಿಸಿಕೊಂಡಿರುವ ಸರ್ಕಾರಗಳು ಆದಿವಾಸಿಗಳು ಬದುಕುತ್ತಿರುವ ಪ್ರದೇಶದಲ್ಲಿ ಹೇರಳವಾದ ಗಣಿಕಾರಿಕೆಗೆ ಮತ್ತು ಅಣೆಕಟ್ಟುಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಹಲವಾರು ರೀತಿಯ ಸಂಘರ್ಷಕ್ಕೆ ದಾರಿಯಾಗಿದೆ. ಒರಿಸ್ಸಾ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳ ಸರ್ಕಾರಗಳು ಕಲ್ಲಿದ್ದಲು, ಅಲ್ಯೂಮಿನಿಯಂ ಬಾಕ್ಸೈಟ್ ಮತ್ತು ಕಬ್ಬಿಣದ ಅದಿರು ಇವುಗಳ ಗಣಿಗಾರಿಕೆಗೆ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಕಂಪನಿಗಳಿಗೆ ಪರವಾನಗಿ ನೀಡಿವೆ. coal-mine2005 ರಲ್ಲಿ ಆದಿವಾಸಿಗಳ ಗಮನಕ್ಕೆ ಬಾರದಂತೆ ಛತ್ತೀಸ್‌ಗಡ ಸರ್ಕಾರವು ಎಸ್ಸಾರ್ ಸ್ಟೀಲ್ ಕಂಪನಿಯೊಂದಿಗೆ 7000 ಕೋಟಿ ಬಂಡವಾಳದ ಉಕ್ಕು ತಯಾರಿಕಾ ಘಟಕ ಮತ್ತು ಟಾಟಾ ಕಂಪನಿಯೊಂದಿಗೆ 10000 ಕೋಟಿ ಬಂಡವಾಳದ ಉಕ್ಕಿನ ಕಾರ್ಖಾನೆಗೆ ಒಪ್ಪಂದ ಮಾಡಿಕೊಂಡಿತು. ಈಗ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತಿದ್ದು, ಆದಿವಾಸಿಗಳು ವಾಸಿಸುತ್ತಿರುವ ಹಳ್ಳಿಗಳ ಸುತ್ತ ಮುತ್ತ ಹತ್ತು ಅಡಿ ಎತ್ತರದ ಮಣ್ಣಿನ ದಿಬ್ಬವನ್ನು ನಿರ್ಮಿಸಿ ಅವರ ಸಂಚಾರಕ್ಕೆ ನಿರ್ಬಂಧ ಹೇರುವುದರ ಮೂಲಕ ಅರಣ್ಯದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಸಕಾರಗಳ ಇಂತಹ ಮೂರ್ಖತನದ ನಿರ್ಧಾರಗಳಿಂದಾಗಿ ಆದಿವಾಸಿಗಳು ತಮ್ಮ ರಕ್ಷಣೆಗಾಗಿ ನಕ್ಸಲರ ಮೊರೆ ಹೋಗುತಿದ್ದಾರೆ. ಈ ಪ್ರದೇಶದ ಹೊ, ಹೊರಾನ್, ಕೊಲ್ಸ್, ಮುಂಡಾ, ಗೊಂಡಾ, ಸಂತಾಲ್ ಮುಂತಾದ ಬುಡಕಟ್ಟು ಜನಾಂUದ ಆದಿವಾಸಿಗಳು ಮಾವೋವಾದಿ ನಕ್ಷಲರ ರಕ್ಷಣೆಯಲ್ಲಿ ಬದುಕು ದೂಡುತಿದ್ದಾರೆ.

ಬ್ರಿಟೀಷರಿಂದ ಗೊಂಡ್ವಾನ ಎಂದು ಕರೆಸಿಕೊಳ್ಳುತಿದ್ದ ಈ ವಲಯದ ಬಹುತೇಕ ಅರಣ್ಯ ಪ್ರದೇಶ ಒರಿಸ್ಸಾದ ಮಲ್ಕನ್ ಗಿರಿ ಜಿಲ್ಲೆ ಸೇರಿದಂತೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದ ಒಂಬತ್ತು ಜಿಲ್ಲೆಗಳು ನಕ್ಸಲರ ಹಿಡಿತದಲ್ಲಿವೆ .ಇಲ್ಲಿನ ಅರಣ್ಯ ಪ್ರದೇಶಕ್ಕೆ ಅರಣ್ಯಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳು ಇರಲಿ, ಭಾರತದ ಸೇನೆ ಕೂಡ ಕಾಲಿಡಲು ಹಿಂಜರಿಯುತ್ತದೆ. ನಕ್ಸಲರೇ ಸೃಷ್ಟಿಸಿಕೊಂಡಿರುವ ಜನಾತನ್ ಸರ್ಕಾರ್ ವ್ಯವಸ್ಥೆ ಈ ಪ್ರದೇಶದಲ್ಲಿ ಜಾರಿಯಲ್ಲಿದೆ.

ದಂಡಕಾರಣ್ಯ ಮತ್ತು ಬಸ್ತರ್ ಆರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ಐದು ನೂರು ಜನರಿಂದ ಹಿಡಿದು ಐದು ಸಾವಿರ ಜನಸಂಖ್ಯೆವರೆಗೆ ಒಂದು ಆಡಳಿತ ಮಂಡಳಿ ಅಸ್ತಿತ್ವದಲ್ಲಿದೆ. ಇಲ್ಲಿ ಒಂಬತ್ತು ವಿಭಾಗಗಳು ಕಾರ್ಯನಿರ್ವಹಿಸುತ್ತವೆ. maoist_jungle_bastar_20091026ಕೃಷಿ, ವ್ಯಾಪಾರ ಮತ್ತು ಉದ್ಯೋಗ, ಆರ್ಥಿಕ ಚಟುವಟಿಕೆ, ನ್ಯಾಯ, ಆಸ್ಪತ್ರೆ, ಜನಸಂಪರ್ಕ, ಶಾಲೆ ಮತ್ತು ಸಾಂಸ್ಕೃತಿಕ ಚಟುವಟಿಕೆ, ಅರಣ್ಯ ಹೀಗೆ ವಿಭಾಗಗಳಿದ್ದು ಇವೆಲ್ಲವೂ ವಲಯ ಸಮಿತಿಯ ಮೇಲ್ವಿಚಾರಣೆಯಲ್ಲಿ ಕಾರ್ಯರ್ವಹಿಸುತ್ತವೆ. ಮೂರು ವಲಯ ಸಮಿತಿಗಳಿಗೆ ಒಂದು ಪ್ರಾದೇಶಿಕ ಸಮಿತಿ ಮಾಗದರ್ಶನ ನೀಡುತ್ತದೆ. ಇಂತಹ ಸಮಿತಿಗಳು ಬಸ್ತರ್, ದಂಡಕಾರಣ್ಯ ಮತ್ತು ಒರಿಸ್ಸಾದ ಮಲ್ಕನ್ ಗಿರಿ ಹಾಗೂ ಮಹಾರಾಷ್ಟ್ರದ ಗಡ್‌ಚಿರೋಲಿ ಅರಣ್ಯಪ್ರದೇಶಗಳಲ್ಲಿಯೂ ಸಹ ಅಸ್ತಿತ್ವದಲ್ಲಿ ಇವೆ.

ನಕ್ಸಲರ ಈ ಜನತಾ ಸರ್ಕಾರದ ಕಾರ್ಯಚಟುವಟಿಕೆಗಳಿಗಾಗಿ ಈ ಪ್ರಾಂತ್ಯದಲ್ಲಿ ಕಾಮಗಾರಿ ಕೆಲಸ ನಿರ್ವಹಿಸುವ ಗುತ್ತಿಗೆದಾರರು, ಅರಣ್ಯ ಗುತ್ತಿಗೆದಾರರು, ಅಬಕಾರಿ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಮತ್ತು ಗಣಿಗಾರಿಕೆ ಹಾಗೂ ಉದ್ದಿಮೆ ನಡೆಸುವ ಕಂಪನಿಗಳಿಂದ ಹಣವನ್ನು ವಸೂಲಿ ಮಾಡಲಾಗುತ್ತದೆ. ನಕ್ಸಲ್ ಸಂಘಟನೆಯ ಹಿರಿಯ ಪದಾಧಿಕಾರಿಯೊಬ್ಬ ದೆಹಲಿ ಮತ್ತು ಪ್ರೆಂಚ್ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ವಾರ್ಷಿಕವಾಗಿ ಐದುಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದಾಗಿ ಹೇಳಿದ್ದಾನೆ. ಇದಕ್ಕೆ ಪೂರಕವಾಗಿ ಜಾರ್ಖಂಡ್ ರಾಜ್ಯದ ಗ್ರಾಮೀಣಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಸಂಪತ್ ಎಂಬುವರು ಜಾರ್ಖಂಡ್ ರಾಜ್ಯವೊಂದರಲ್ಲಿ ವಾರ್ಷಿಕವಾಗಿ ಐನೂರು ಕೋಟಿ ರೂಪಾಯಿಗಳನ್ನು ನಕ್ಸಲ್ ಸಂಘಟನೆಗಳು ವಸೂಲಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಈ ರೀತಿ ಸಂಗ್ರಹವಾದ ಹಣವನ್ನು ತಮ್ಮ ಹಿಡಿತದಲ್ಲಿರುವ ಹಳ್ಳಿಗಳ ಅಭಿವೃದ್ಧಿ ಮತ್ತು ಶಸ್ತ್ರಾಸ್ತ್ರ ಖರೀದಿಗಾಗಿ ನಕ್ಸಲರು ಉಪಯೋಗಿಸುತಿದ್ದಾರೆ. ದಂಡಕಾರಣ್ಯದಲ್ಲಿ (ನಾಲ್ಕು ರಾಜ್ಯಗಳು ಸೇರಿ) ಹತ್ತುಸಾವಿರ ಶಸ್ತ್ರಸಜ್ಜಿತ ನಕ್ಸಲ್ ಯೋಧರಿದ್ದು ಇವರಿಗೆ ಸಹಾಯಕರಾಗಿ ಸಮವಸ್ತ್ರವಿಲ್ಲದ ಸುಮಾರು 90000 ನಕ್ಸಲರು ಬೆಂಬಲವಾಗಿ ನಿಂತಿದ್ದಾರೆ.

ನಕ್ಸಲ್ ಸಂಘಟನೆಯಲ್ಲಿ ಕೇಂದ್ರ ಸಮಿತಿಯೊಂದು ಇದ್ದು ಈ ಸಮಿತಿ ಸಂಘಟನೆಯ ಸರ್ವೋಚ್ಛ ಅಂಗವಾಗಿದೆ. ನಲವತ್ತು ಸದಸ್ಯರಿರುವ ಸೆಂಟ್ರ್ರಲ್ ಕಮಿಟಿ ಎಂದು ಕರೆಯಲಾಗುವ ಈ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ವ್ಯಕ್ತಿ ಮುಖ್ಯನಾಯಕನಾಗಿರುತ್ತಾನೆ. (ಈಗ ಗಣಪತಿ ಸರ್ವೋಚ್ಚ ನಾಯಕ.) ನಂತರ ಕೇಂದ್ರ ಸಮಿತಿಯ ಅಡಿಯಲ್ಲಿ ಬರುವ ಪಾಲಿಟ್ ಬ್ಯೂರೋ ಎಂಬ ಸಮಿತಿಯಿದ್ದು ಇದಕ್ಕೆ ಹದಿನಾಲ್ಕು ಮಂದಿ ಸದಸ್ಯರಾಗಿರುತ್ತಾರೆ. ನಕ್ಸಲ್ ಸಂಘಟನೆಯ ಎಲ್ಲಾ ವಿಷಯಗಳ ಕುರಿತಂತೆ ಪಾಲಿಟ್ ಬ್ಯೂರೋ ಸದಸ್ಯರು ಕೇಂದ್ರ ಸಮಿತಿಗೆ ಶಿಫಾರಸ್ಸು ಮಾಡುತ್ತಾರೆ.maoist-mass-meeting ಅಂತಿಮ ನಿರ್ಧಾರ ಕೇಂದ್ರ ಸಮಿತಿ ತೆಗೆದುಕೊಳ್ಳುತ್ತದೆ. ಪಾಲಿಟ್ ಬ್ಯೂರೊ ಅಂಗದ ಪ್ರತಿಯೊಬ್ಬ ಸದಸ್ಯ ಒಂದೊಂದು ವಲಯದ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಿಸುತ್ತಾನೆ. ಇತ್ತೀಚೆಗೆ ಸಂಘಟನೆಯ ಸದಸ್ಯರ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದು, ಒರಿಸ್ಸಾ, ಜಾರ್ಖಂಡ್ ಮುಂತಾದ ಅರಣ್ಯ ಪ್ರದೇಶಗಳಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದ ಯುವಕರು ತಾವೇ ನಾಯಕರೆಂದು ಸ್ವಯಂ ಘೋಷಿಸಿಕೊಂಡು ನಕ್ಸಲ್ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇಂತಹವರಲ್ಲಿ ಒರಿಸ್ಸಾದ ಸವ್ಯಸಾಚಿಪಾಂಡ ಎಂಬಾತ ಕೂಡ ಮುಖ್ಯನಾದವನು.

ನಕ್ಸಲರ ಗುರಿ ಮತ್ತು ಉದ್ದೇಶ ಆದಿವಾಸಿ ಮತ್ತು ಅರಣ್ಯವಾಸಿ ಬುಡಕಟ್ಟು ಜನರ ಕಲ್ಯಾಣ ಎಂಬುದು ನಿಜವಾದರೂ, ಇದರಿಂದ ಆದಿವಾಸಿಗಳು ನೆಮ್ಮದಿಯಿಂದ ಬಾಳುತಿದ್ದಾರೆ ಎಂಬುದು ಮಾತ್ರ ಕೇವಲ ಅರ್ಧ ಸತ್ಯ. ಸರ್ಕಾರ ಮತ್ತು ನಕ್ಸಲರ ನಡುವಿನ ಸಂಘರ್ಷದಲ್ಲಿ ಸಿಲುಕಿ ಹಾಕಿಕೊಂಡಿರುವ ಅಮಾಯಕ ಆದಿವಾಸಿಗಳ ಸ್ಥಿತಿ “ಅತ್ತ ದರಿ, ಇತ್ತ ಪುಲಿ” ಎಂಬಂತಾಗಿದೆ. ಭಾರತದ ಇತರೆ ಪ್ರದೇಶಗಳಿಗೆ ಹೋಲಿಸಿದರೆ, ದಂಡಕಾರಣ್ಯ ಮತ್ತು ಬಸ್ತರ್ ಅರಣ್ಯ ಪ್ರದೇಶದಲ್ಲಿ ಹಿಂಸೆ ಮಿತಿ ಮೀರಿದೆ. ಇದಕ್ಕೆ ಸರ್ಕಾರದ ಅವಿವೇಕದ ನಿರ್ಣಯ ಕೂಡ ಕಾರಣವಾಗಿದೆ. ನಕ್ಸಲರನ್ನು ನಿಗ್ರಹಿಸಲು ಆದಿವಾಸಿಗಳನ್ನು ಎತ್ತಿ ಕಟ್ಟುವುದರ ಮೂಲಕ ಅವರ ಕೈಗೆ ಬಂದೂಕ ಕೊಟ್ಟು ಸ್ಥಾಪಿಸಿದ “ಸಲ್ವಜುಡಂ” ಎಂಬ ಸರ್ಕಾರದ ಕೃಪಾಪೋಷಿತ ಸಂಘಟನೆ ಆದಿವಾಸಿಗಳ ಪಾಲಿಗೆ ಮರಣಶಾಸನವಾಗಿದೆ.

ಪ್ರಜಾ ಸಮರ – 12 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, ಈ ನೆಲದ ನಿಜ-ವಾರಸುದಾರರೆಂದು ಹೇಳಲಾಗುವ ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು ಮಾವೋವಾದಿ ನಕ್ಸಲರ ಸಂಘಟನೆಯಲ್ಲ, ಇದೇ ನಕ್ಸಲ್ ವಿಚಾರಧಾರೆ ಕುಡಿಯೊಡೆದ ನೆಲವಾದ ಆಂಧ್ರ ಪ್ರದೇಶದ ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮರಾಜು ಎಂಬ ಒಬ್ಬ ಅಪ್ರತಿಮ ನಾಯಕ ಮತ್ತು ದೇಶಭಕ್ತ. ಇಂದಿನ ಬಸ್ತಾರ್ ಅರಣ್ಯ ಪ್ರದೇಶವೆಂದು ಕರೆಯುವ ಆಂಧ್ರ ಗಡಿ ಭಾಗದ ಅರಣ್ಯ ಸೇರಿದಂತೆ ಮಧ್ಯಪ್ರದೇಶ, ಒರಿಸ್ಸಾ, ಆಂಧ್ರದ ಗಡಿಭಾಗದ ಅರಣ್ಯದಲ್ಲಿ ವಾಸವಾಗಿರುವ ಚೆಂಚು ಎಂಬ ಬುಡಕಟ್ಟು ಜನಾಂಗದ ಪರವಾಗಿ 1920 ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿ ಹೋರಾಡಿ ಅವರಿಂದ ಅಮಾನುಷವಾಗಿ ಹತ್ಯೆಯಾದ ಹುತಾತ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರ ಈ ಅಲ್ಲೂರಿ ಸೀತಾರಾಮರಾಜು.

ಭಾರತದ ಆದಿವಾಸಿಗಳು ತಮ್ಮ ಸಂಸ್ಕೃತಿ ಮತ್ತು ಬದುಕಿಗೆ ಧಕ್ಕೆ ಬಂದಾಗ ಬ್ರಿಟಿಷರು ಮಾತ್ರವಲ್ಲ, ಮರಾಠ ಸಾಮಂತರು, ನಿಜಾಮರು, ಮೊಗಲರು, ಹೀಗೆ ಎಲ್ಲರ ವಿರುದ್ದ ಯುದ್ದ ಸಾರಿದ ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ. ಮಧ್ಯಪ್ರದೇಶದ ಗೊಂಡ ಆದಿವಾಸಿಗಳಿಗೆ ಅವರದೇ ಜನಾಂಗದ ಒಬ್ಬ ಸಾಮಂತನಿದ್ದ ಎಂಬುದಕ್ಕೆ ಮಹಾರಾಷ್ಟ್ರದ ಗೊಂಡಿಯ ಮತ್ತು ಮಧ್ಯಪ್ರದೇಶದ ಬಾಳ್‌ಘಾಟ್ ಜಿಲ್ಲೆಯ ನಡುವೆ ಅರಣ್ಯದ ಮಧ್ಯೆ ಇರುವ ಲಾಂಜಿ ಎಂಬ ಹಳ್ಳಿಯಲ್ಲಿ ಸಾಮಂತ ನಿರ್ಮಿಸಿದ್ದ ಮಣ್ಣಿನ ಕೋಟೆ ಈಗಲೂ ಅಸ್ತಿತ್ವದಲ್ಲಿದೆ. ಅಲ್ಲದೆ ಈ ಕೋಟೆಯ ಸಮೀಪವಿರುವ ಶಿವನ ದೇವಸ್ಥಾನಕ್ಕೆ ಸಾವಿರಾರು ಆದಿವಾಸಿಗಳು ಈಗಲೂ ಭೇಟಿ ನೀಡುತಿದ್ದಾರೆ. ಈಗ ಬಿಹಾರದ ರಾಂಚಿ ಜಿಲ್ಲೆಗೆ ಸೇರಿರುವ ಅರಣ್ಯದಲ್ಲಿ 1900 ರಲ್ಲಿ ಮುಂಡಾ ಎಂಬ ಆದಿವಾಸಿ ಜನಾಂಗದ ಬಿರ್‍ಸಾ ಮುಂಡಾ ಎಂಬ ನಾಯಕ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಕೂಡ ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಆದಿವಾಸಿ ಜನಾಂಗಕ್ಕೆ ಸೇರದ ಅಂಧ್ರದ ಈ ಮೇಲ್ಜಾತಿಗೆ ಸೇರಿದ ಯುವಕ ನಡೆಸಿದ ಹೋರಾಟ ಮಾತ್ರ ಅವಿಸ್ಮರಣೀಯವಾದುದು.

ಬ್ರಿಟಿಷರ ಫಿರಂಗಿ, ಬಂದೂಕಗಳ ನಡುವೆ ಬಿಲ್ಲು ಬಾಣಗಳನ್ನು ಹಿಡಿದು ಚೆಂಚು ಎಂಬ ಬುಡಕಟ್ಟು ಜನಾಂಗವನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡುತಿದ್ದ ಅಲ್ಲೂರಿ ಸೀತಾರಾಮರಾಜುವನ್ನು ಅಂತಿಮವಾಗಿ ಸೆರೆ ಹಿಡಿದ ಬ್ರಿಟೀಷರು ದರೋಡೆಕೋರ ಎಂಬ ಪಟ್ಟ ಕಟ್ಟಿದಾಗ, ಕೆಚ್ಚೆದೆಯಿಂದ ಕೆರಳಿ ನಿಂತ ಸಾಹಸಿ ಈತ, ಈ ದೇಶವನ್ನು ಕೊಳ್ಳೆ ಹೊಡೆಯಲು ಬಂದ ನೀವು ನಿಜವಾದ ದರೋಡೆಕೋರರು, ನಾನಲ್ಲ ಎಂದು ಮುಖಕ್ಕೆ ಬಾರಿಸಿದ ಹಾಗೆ ಹೇಳಿದ ಅಪ್ರತಿಮ ಧೈರ್ಯಶಾಲಿ.

1887 ರ ಜುಲೈ 4 ರಂದು ವಿಶಾಖಪಟ್ಟಣ ಜಿಲ್ಲೆಯ ಪಂಡುರಂಗಿ ಎಂಬ ಗ್ರಾಮದದಲ್ಲಿ ಜನಿಸಿದ ರಾಜುವಿನ ತಂದೆ ಆಗಿನ ಬ್ರಿಟಿಷ್ ಆಳ್ವಿಕೆಯ ಸರ್ಕಾರದಲ್ಲಿ ರಾಜಮಂಡ್ರಿ ಸರೆಮನೆಯಲ್ಲಿ ಪೋಟೊಗ್ರಾಪರ್ ಆಗಿ ಕೆಲಸಮಾಡುತಿದ್ದರು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಸೀತಾರಾಮರಾಜು ನಂತರ ತಂದೆಯ ಊರಾದ ಭೀಮಾವರಂ ಸಮೀಪದ ಮೊಗಳ್ಳು ಗ್ರಾಮದಲ್ಲಿ ಚಿಕ್ಕಪ್ಪನಾದ ರಾಮಚಂದ್ರ ರಾಜು ಎಂಬುವರ ಆಶ್ರಯದಲ್ಲಿ ಬೆಳೆಯಬೇಕಾಯಿತು. ಚಿಕ್ಕಪ್ಪ ಪಶ್ಚಿಮ ಗೋದಾವರಿ ಜಲ್ಲೆಯ ನರಸಾಪುರದಲ್ಲಿ ತಹಶಿಲ್ದಾರ್ ಆಗಿ ಕೆಲಸ ನಿರ್ವಹಿಸುತಿದ್ದರಿಂದ ಸೀತಾರಾಮು ರಾಜುವಿಗೆ ಅರ್ಥಿಕವಾಗಿ ನೆರವಾಗಿದ್ದರು. ಕಾಲೇಜು ಶಿಕ್ಷಣಕ್ಕಾಗಿ ತಾಯಿಯ ತವರೂರಾದ ವಿಶಾಖಪಟ್ಟಣಕ್ಕೆ ಬಂದ ಈತ ಅಲ್ಲಿ ಎ.ವಿ.ಎನ್. ಕಾಲೇಜಿಗೆ ದಾಖಲಾದನು. ೧೯೧೨-೧೩ರ ವೇಳೆಗೆ ಮೆಟ್ರಿಕ್ ಓದುತಿದ್ದಾಗಲೇ ಕ್ರಾಂತಿಕಾರಿ ವಿಚಾರಗಳಿಂದ ಪ್ರಭಾವಿತರಾಗಿದ್ದ ರಾಜು, ಭಾರತದ ಸ್ವಾತಂತ್ರಕ್ಕಾಗಿ ಹೋರಾಡಲು ಪಣ ತೊಟ್ಟಿದ್ದನು.

ಇದೇ ವೇಳೆಗೆ ಬ್ರಿಟಿಷರು ಆದಿವಾಸಿ ಬುಡಕಟ್ಟು ಜನಾಂಗಗಳ ವಿರುದ್ಧ ಜಾರಿಗೆ ತಂದ 1882ರ ಅರಣ್ಯ ಕಾಯ್ದೆಯ ಕಾನೂನು ಆತನ ಹೋರಾಟಕ್ಕೆ ವೇದಿಕೆಯಾಯಿತು. ಬ್ರಿಟಿಷರ ವಿರುದ್ಧ ಪ್ರತಿಭಟಿಸುವ ಸಲುವಾಗಿ ಶಿಕ್ಷಣ ತೊರೆದು ಆದಿವಾಸಿಗಳನ್ನು ಸಂಘಟಿಸುವುದರ ಮೂಲಕ ಅವರ ಪರ ಹೋರಾಟಕ್ಕೆ ಇಳಿದನು. ಅರಣ್ಯ ಕಾಯ್ದೆ ಪ್ರಕಾರ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಆದಿವಾಸಿಗಳು ತಮ್ಮ ಪೋಡುಗಳನ್ನು( ಹಳ್ಳಿ) ಬಿಟ್ಟು ಬೇರೊಂದೆಡೆ ವಲಸೆ ಹೋಗಬಾರದು. ಇದು ಆದಿವಾಸಿಗಳ ಸಹಜ ಬದುಕಿನ ಮೇಲೆ ನಿಯಂತ್ರಣ ಹೇರುವ ಕಾನೂನಾಗಿತ್ತು. ಕೃಷಿ ಚಟುವಟಿಕೆ ಮತ್ತು ಪ್ರಾಣಿಗಳ ಬೇಟೆ, ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಬದುಕುತಿದ್ದ ಈ ಜನರು ಬೇಸಾಯಕ್ಕಾಗಿ ಬೇರೆಡೆ ಹೋಗುವುದು ಅನಿವಾರ್ಯವಾಗಿತ್ತು. ಏಕೆಂದರೆ, ಅವರು ಒಂದು ಪ್ರದೇಶದಲ್ಲಿ ಒಮ್ಮೆ ಬೆಳೆ ತೆಗೆದ ನಂತರ ನಂತರ ಭೂಮಿಯನ್ನು ಹಲವಾರು ವರ್ಷಗಳ ಕಾಲ ಹಾಗೆಯೇ ಬಿಡುವುದು ವಾಡಿಕೆಯಾಗಿತ್ತು. ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳುವ ಮತ್ತು ನಿಸರ್ಗಕ್ಕೆ ಎರವಾಗದ ರೀತಿ ಇದ್ದ ಅವರ ದೇಶಿ ಜ್ಞಾನ ಆದಿವಾಸಿಗಳ ಬದುಕಿನೊಳಗೆ ಪರಂಪರಾನುಗತವಾಗಿ ಬೆಳೆದು ಬಂದಿತ್ತು. ಅಕ್ಷರ ಲೋಕದಿಂದ ವಂಚಿತರಾಗಿ, ನಾಗರೀಕತೆಯಿಂದ ದೂರವಾಗಿದ್ದ ಚಂಚು ಬುಡಕಟ್ಟು ಜನರ ಪರವಾಗಿ ಅಲ್ಲೂರಿ ಸೀತಾರಾಮರಾಜು ನಡೆಸಿದ ಹೋರಾಟ “ರಂಪ ದಂಗೆ” ಎಂದು ಆಂಧ್ರದ ಇತಿಹಾಸದಲ್ಲಿ ದಾಖಲಾಗಿದೆ.

ಬ್ರಿಟಿಷರ ಅಮಾನವೀಯವಾದ ಈ ಅರಣ್ಯ ಕಾನೂನಿನ ವಿರುದ್ಧ ಸಮರ ಸಾರುವ ಮುನ್ನ ಆದಿವಾಸಿಗಳನ್ನು ಸಂಘಟಿಸಿದ ರಾಮರಾಜು ಹೋರಾಟಕ್ಕೆ ಮುನ್ನ ಆದಿವಾಸಿಗಳಲ್ಲಿ ಮನೆ ಮಾಡಿಕೊಂಡಿದ್ದ ಹಲವು ಅನಿಷ್ಟ ಆಚರಣೆಗಳನ್ನು (ಭಾನಾಮತಿ, ನರಬಲಿಯಂತಹ ಪದ್ಧತಿಗಳು) ಹೋಗಲಾಡಿಸಿದ್ದ. ಆದಿವಾಸಿಗಳ ಸೇನೆಯೊಂದನ್ನು ಕಟ್ಟಿಕೊಂಡು ಬ್ರಿಟಿಷರ ಕಚೇರಿಗಳ ಮೇಲೆ ದಾಳಿನಡೆಸಿದ. ಅಲ್ಲೂರಿ ಸೀತಾರಾಮರಾಜು ರೂಪಿಸಿದ್ದ ಯೋಜನೆಗಳು ಆತನಿಗೆ ಯಶಸ್ಸು ತಂದುಕೊಟ್ಟವು. ಈತನ ಮಾರ್ಗದರ್ಶನದಲ್ಲಿ ತಯಾರಾದ ಆದಿವಾಸಿಗಳ ತಂಡ ಬ್ರಿಟಿಷರ ಕಚೇರಿ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಬಂದೂಕ ಮತ್ತು ಮದ್ದು ಗುಂಡುಗಳನ್ನು ದೋಚಿತು. ಇದಲ್ಲದೆ, ಇವರ ಮೇಲೆ ಕ್ರಮಕೈಗೊಳ್ಳಲು ಅರಣ್ಯಕ್ಕೆ ಬಂದ ಬಂದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿತು.

ಈ ಬೆಳವಣಿಗೆಯಿಂದ ವಿಚಲಿತವಾದ ಬ್ರಿಟಿಷ್ ಸರ್ಕಾರ 1922 ರಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಹೋರಾಡಿ ಅನುಭವ ಇದ್ದ ಅಸ್ಸಾಂ ರೈಫಲ್ ಸೇನೆಯನ್ನು ಆಂಧ್ರಕ್ಕೆ ಕರೆಸಿಕೊಂಡಿತು. ಸೇನೆಯು ಬಸ್ತರ್ ಪ್ರದೇಶದ ಗಡಿಭಾಗದ ಅರಣ್ಯಕ್ಕೆ ಆಗಮಿಸಿದಾಗ, ಅರಣ್ಯದಲ್ಲಿ ಭೂಗತನಾಗಿದ್ದುಕೊಂಡು ಹೋರಾಟ ನಡೆಸುತಿದ್ದ ಸೀತಾರಾಮ ರಾಜುವನ್ನು 1924 ರಲ್ಲಿ ಆಂದ್ರದ ಪೊಲೀಸ್ ಅಧಿಕಾರಿ ಜ್ಞಾನೇಶ್ವರ ರಾವ್ ಎಂಬಾತ ಸೆರೆ ಹಿಡಿದನು. ಅಲ್ಲೂರಿ ಸೀತಾರಾಮರಾಜುವನ್ನು ಮರಕ್ಕೆ ಕಟ್ಟಿ ಹಾಕಿದ ಬ್ರಿಟಿಷ್ ಅಧಿಕಾರಿಗಳು ಸಾವಿರಾರು ಆದಿವಾಸಿಗಳ ಎದುರಿನಲ್ಲಿ ಆತನ ಎದೆಗೆ ಗುಂಡಿಟ್ಟು ಕೊಂದು ಹಾಕಿದರು. ಸೀತಾಮರಾಜುನನ್ನು ಹಿಡಿದು ಕೊಟ್ಟ ಪೊಲೀಸ್ ಅಧಿಕಾರಿಗೆ ಬ್ರಿಟಿಷ್ ಸರ್ಕಾರ “ರಾವ್ ಬಹದ್ದೂರ್” ಎಂಬ ಬಿರುದು ನೀಡಿ ಗೌರವಿಸಿತು.

ಆದಿವಾಸಿಗಳ ಮತ್ತು ಉತ್ತರ ತೆಲಂಗಾಣದ ಜನರ ಬಾಯಲ್ಲಿ “ಮಾನ್ಯಂ ವೀರುಡು” (ಅರಣ್ಯದ ನಾಯಕ) ಎಂದು ಕರೆಸಿಕೊಳ್ಳು ಈ ಹುತಾತ್ಮನ ಬಗ್ಗೆ ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಆಂಧ್ರ ಸರ್ಕಾರ ಒರಿಸ್ಸಾ, ಮಧ್ಯಪ್ರದೇಶ (ಇಂದಿನ ಛತ್ತೀಸ್‌ಗಡ್), ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಕ್ಕೆ ಅಲ್ಲೂರಿ ಸೀತಾರಾಮರಾಜು ಅರಣ್ಯ ವಲಯ ಎಂದು ಘೋಷಿಸಿ ಗೌರವಿಸಿದೆ. ವಿಶಾಖಪಟ್ಟಣ ನಗರದ ಕಡಲ ತಡಿಯ ರಸ್ತೆಗೆ (ಬೀಚ್ ರೋಡ್) ಸೀತಾರಾಮರಾಜುವಿನ ಹೆಸರಿಟ್ಟು, ಪ್ರತಿಮೆಯನ್ನು ಸಹ ನಿಲ್ಲಿಸಲಾಗಿದೆ. ಭಾರತ ಸಕಾರ 1997 ರಲ್ಲಿ ಈತನ ಜನ್ಮಶತಾಬ್ಧಿಯ ಅಂಗವಾಗಿ ಅಂಚೆ ಚೀಟಿಯನ್ನು ಹೊರತಂದಿತ್ತು. ಈಗಿನ ತೆಲಗು ಚಿತ್ರರಂಗದ ಸೂಪರ್‍ಸ್ಟಾರ್‌ಗಳಲ್ಲಿ ಒಬ್ಬನಾಗಿರುವ ಯುವ ನಟ ಮಹೇಶ್ ಬಾಬುವಿನ ತಂದೆ, ಹಿರಿಯ ನಟ ಕೃಷ್ಣ 1980 ರಲ್ಲಿ ತಮ್ಮ ನೂರನೇ ಚಿತ್ರವಾಗಿ ಅಲ್ಲೂರಿ ಸೀತಾರಾಮರಾಜು ಚಿತ್ರವನ್ನು ನಿರ್ಮಿಸಿದ್ದರು. ಸ್ವತಃ ತಾವೇ ಸೀತರಾಮುವಿನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಇವತ್ತಿಗೂ ತೆಲುಗು ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು.

ಇಂತಹ ಸುಧೀರ್ಘ ಇತಿಹಾಸವಿರುವ ಬಸ್ತಾರ್ ಅರಣ್ಯ ವಲಯಕ್ಕೆ 1980ರ ದಶಕದಲ್ಲಿ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್‌ನ ಕಾರ್ಯಕರ್ತರು ಪ್ರವೇಶ ಮಾಡುವ ಮುನ್ನವೇ 70ರ ದಶಕದಲ್ಲಿ ಇಲ್ಲಿನ ಆದಿವಾಸಿ ಜೊತೆ ಪಶ್ಚಿಮ ಬಂಗಾಳದ ನಕ್ಸಲ್ ಕಾರ್ಯಕರ್ತರು ಸಹ ಸಂಪರ್ಕ ಸಾಧಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ಚಳುವಳಿಯ ಕಿಚ್ಚು ಹತ್ತಿಸಿದ ಚಾರು ಮುಜಮದಾರ್ ಮಾರ್ಗದರ್ಶನದಲ್ಲಿ ಜೋಗು ರಾಯ್ ಎಂಬ ಸಿ.ಪಿ.ಐ.(ಎಂ.ಎಲ್.) ನಾಯಕ ಈ ಪ್ರದೇಶಕ್ಕೆ ಭೇಟಿ ನೀಡಿ “ಕ್ರಾಂತಿಕಾರಿ ಕಿಸಾನ್ ಮಜ್ದೂರ್ ಪಾರ್ಟಿ” ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದ. ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿ, ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಹೋಗಿದ್ದ ಆದಿವಾಸಿಗಳು ತಮ್ಮ ರಕ್ಷಣೆಗೆ ಬಂದ ನಕ್ಸಲ್ ಕಾರ್ಯಕರ್ತರನ್ನು ಸ್ವಾಗತಿಸಿದ್ದರು. ಪ್ರಥಮ ಬಾರಿಗೆ ಜಗದಾಲ್ ಪುರ್ (ಈಗ ಛತ್ತೀಸ್‌ಘಡದ ಒಂದು ಜಿಲ್ಲಾ ಕೇಂದ್ರ) ಪಟ್ಟಣದಲ್ಲಿ ಭಿತ್ತಿಪತ್ರಗಳು ಕಾಣಿಸಿಕೊಂಡಿದ್ದವು.

ಈ ಘಟನೆ ಹೊರತು ಪಡಿಸಿದರೆ, 1980 ರಲ್ಲಿ ಪೆದ್ದಿ ಶಂಕರ್ ಮಹರಾಷ್ಟ್ರದ ಗಡ್‌ಚಿರೋಲಿ ಅರಣ್ಯ ಪ್ರದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವೇಣು ಎಂಬ ಇನ್ನೊಬ್ಬ ಯುವಕ ಬಸ್ತಾರ್ ಅರಣ್ಯ ವಲಯ ಪ್ರವೇಶಿಸಿ ಆದಿವಾಸಿಗಳ ಜೊತೆ ಕಳಚಿ ಹೋಗಿದ್ದ ನಕ್ಸಲ್ ಸಂಬಂಧದ ಕೊಂಡಿಯನ್ನು ಮತ್ತೇ ಬೆಸೆದ. (ಈಗಿನ ಬಸ್ತಾರ್ ಅರಣ್ಯದ ನಕ್ಸಲರ ಹಿರಿಯ ನಾಯಕನಾಗಿ ವೇಣು ಕಾರ್ಯ ನಿರ್ವಹಿಸುತಿದ್ದಾನೆ.)

ಬಸ್ತಾರ್ ಅರಣ್ಯಕ್ಕೆ ದಕ್ಷಿಣದಿಂದ ಅಂಧ್ರದ ನಕ್ಸಲ್ ಸಂಘಟನೆ ಮತ್ತು ಪೂರ್ವದಿಂದ ಪಶ್ಚಿಮ ಬಂಗಾಳದ ನಕ್ಸಲರು ಪ್ರವೇಶಿಸುವ ಮುನ್ನ ಅನಕ್ಷರಸ್ತ ಆದಿವಾಸಿಗಳಿಗೆ ದಿಕ್ಕು, ದೆಸೆ, ಆಧಾರವಾಗಿ ಹಲವಾರು ಉದಾತ್ತ ಮನೋಭಾವದ ವ್ಯಕ್ತಿಗಳು ಕೆಲಸ ಮಾಡುತಿದ್ದರು. ಇವರುಗಳಲ್ಲಿ ಅಸ್ಪತ್ರೆ ಸ್ತಾಪಿಸಿದ ಬಾಬಾ ಅಮ್ಟೆ, ಶಿಕ್ಷಣಕ್ಕಾಗಿ ಹಳ್ಳಿಗಳಲ್ಲಿ ಶಾಲೆ ತೆರೆದ ಕೊಲ್ಕತ್ತ ನಗರದ ರಾಮಕೃಷ್ಣ ಮಿಷನ್ ಸಂಸ್ಥೆಯ ಪದಾಧಿಕಾರಿಗಳು, ಆರೋಗ್ಯ ಶಿಬಿರ ಏರ್ಪಡಿಸಿ, ಚಿಕಿತ್ಸೆ ನೀಡುತಿದ್ದ, ವೃತ್ತಿಯಲ್ಲಿ ವೈದ್ಯೆಯಾಗಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಪುತ್ರಿ ಹಾಗೂ ಆಕೆಯ ಪತಿ ಮತ್ತು ಹಿಮಾಂಶುಕುಮಾರ್ ಮೊದಲಾದವರು ಮುಖ್ಯರಾಗಿದ್ದಾರೆ.

(ಮುಂದುವರೆಯುವುದು)

ಪ್ರಜಾ ಸಮರ – 11 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

1980 ರಲ್ಲಿ ಪೆದ್ದಿಶಂಕರನ ಹತ್ಯೆಯಿಂದಾಗಿ ಮಹಾರಾಷ್ಟ್ರದಲ್ಲಿ ಹತ್ತಿಕೊಂಡ ನಕ್ಸಲ್ ಚಟುವಟಿಕೆ ಮತ್ತು ಹಿಂಸಾಚಾರದ ಕಿಡಿ ಮೂರು ದಶಕಗಳ ನಂತರವೂ ಆರದ ಬೆಂಕಿಯಾಗಿ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಗಡಿಭಾಗದ ಜಿಲ್ಲೆಗಳಾದ ಗಡ್‌ಚಿರೋಲಿ, ಚಂದ್ರಾಪುರ, ಗೊಂಡಿಯ ಮತ್ತು ಭಂಡಾರ ಜಿಲ್ಲೆಗಳಲ್ಲಿ ಇವೊತ್ತಿಗೂ ಹತ್ತಿ ಉರಿಯುತ್ತಿದೆ. ಇವುಗಳನ್ನು ನಕ್ಸಲ್ ಪೀಢಿತ ಜಿಲ್ಲೆಗಳೆಂದು ಅಲ್ಲಿನ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಗಡ್‌ಚಿರೋಲಿ ಜಿಲ್ಲೆಯ 120 ಆದಿವಾಸಿಗಳ ಹಳ್ಳಿಗಳನ್ನು ನಕ್ಸಲರ ತಾಣಗಳೆಂದು ಗುರುತಿಸಲಾಗಿದ್ದು ಈ ಪ್ರದೇಶಕ್ಕೆ ಪೊಲೀಸರು ಕಾಲಿಡಲು ಹೆದರುತ್ತಾರೆ. ಇಲ್ಲಿನ ಹಿಂಸಾಚಾರಕ್ಕೆ ಬಲಿಯಾದ ನಕ್ಸಲಿಯರು ಮತ್ತು ಪೊಲೀಸರಲ್ಲಿ ಶೇಕಡ ಎಂಬತ್ತರಷ್ಟು ಮಂದಿ ಸ್ಥಳಿಯ ಆದಿವಾಸಿಗಳಾದ ಗೊಂಡ ಮತ್ತು ಚೆಂಚು ಜನಾಂಗದವರಾಗಿದ್ದಾರೆ. ಹಿಂಸೆ ಹೇಗೆ ಹಲವು ರೂಪಗಳಲ್ಲಿ ಮತ್ತು ಹಲವು ಆಯಾಮಗಳಲ್ಲಿ ಇಲ್ಲಿನ ಜನರನ್ನು ಕಾಡುತ್ತಿದೆ ಎಂಬುದಕ್ಕೆ 1997 ರಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ.

ಆದಿವಾಸಿ ಜನಾಂಗದ ಪ್ರಭಾಕರ ಟೆಕವಾಡೆ ಮತ್ತು ಪಂಡುಅಲಂ ಇಬ್ಬರೂ ಬಾಲ್ಯದಿಂದಲೂ ಸಹಪಾಠಿಗಳು ಮತ್ತು ಗೆಳೆಯರು. ಮಹಾರಾಷ್ಟ್ರ ಸರ್ಕಾರ ಗಿರಿಜನ ಮಕ್ಕಳಿಗಾಗಿ ಗಡ್‌ಚಿರೋಲಿ ಜಿಲ್ಲೆಯ ಬ್ರಹ್ಮಗಡ್ ಎಂಬಲ್ಲಿ ಸ್ಥಾಪಿಸಿದ್ದ ಲೋಕ್ ಬಿರದಾರಿ ಎಂಬ ವಸತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೆಗೂ ಒಟ್ಟಿಗೆ ಓದಿದವರು. ಶಿಕ್ಷಣದ ನಂತರ ಪಂಡು ಅಲಂ ಮಹರಾಷ್ಟ್ರ ಪೊಲೀಸ್ ಪಡೆಗೆ ಸೇರಿದ ನಂತರ ನಕ್ಸಲ್ ನಿಗ್ರಹ ಪಡೆ ಕೋಬ್ರಾ ತಂಡಕ್ಕೆ ಕಮಾಂಡೊ ಆಗಿ ನಿಯೋಜಿತನಾದರೆ, ಆತನ ಗೆಳೆಯ ಪ್ರಭಾಕರ ಟೆಕವಾಡೆ ನಕ್ಸಲ್ ಸಂಘಟನೆ ಸೇರಿ ದಳಂ ಹೆಸರಿನ ತಂಡವೊಂದರಲ್ಲಿ ಜುರು ಎಂಬ ಹೆಸರಿನಲ್ಲಿ ನಾಯಕನಾದ.

ತನ್ನ ಹುಟ್ಟೂರಾದ ಜಾಂಡಿಯ ಎಂಬ ಹಳ್ಳಿಗೆ ತನ್ನ ಸಂಬಂಧಿಕರ ಮದುವೆ ಬಂದಿದ್ದ ಪ್ರಭಾಕರ ಅಲಿಯಾಸ್ ಜುರು ಬಗ್ಗೆ ಅವನ ಒಂದು ಕಾಲದ ಗೆಳೆಯನೇ ಆದ ಪಂಡು ಆಲಂ ತಾನು ಸೇವೆ ಸಲ್ಲಿಸುತಿದ್ದ ಪೊಲೀಸ್ ಕಮಾಂಡೊ ಗುಂಪಿನ ಕೋಬ್ರಾ ಪಡೆಗೆ ಮಾಹಿತಿ ರವಾನಿಸಿ ಪ್ರಭಾಕರನನ್ನು ಗುಂಡಿಟ್ಟು ಕೊಲ್ಲಲು ಸಹಕರಿಸಿದ. ಇದಕ್ಕೆ ಪ್ರತಿಯಾಗಿ ನಕ್ಸಲರು ಪಂಡುವನ್ನು ನೆಲ ಬಾಂಬ್ ಸ್ಪೋಟಿಸುವುದರ ಮೂಲಕ ಕೊಂದು ಹಾಕಿದರು. ಈ ಇಬ್ಬರೂ ಬಾಲ್ಯದ ಗೆಳೆಯರು ಮೂರು ತಿಂಗಳ ಅವಧಿಯಲ್ಲಿ ಮೃತ ಪಟ್ಟಾಗ ಇವರುಗಳ ವಯಸ್ಸು ಮುವತ್ತೈದನ್ನು ದಾಟಿರಲಿಲ್ಲ.

ಇಂತಹ ಘಟನೆಗಳಲ್ಲದೆ, ಪೊಲೀಸ್ ಮಾಹಿತಿದಾರರೆಂದು ನಕ್ಸಲಿಯರ ಕೈಯಲ್ಲಿ ಮತ್ತು ನಕ್ಸಲ್ ಬೆಂಬಲಿಗರೆಂದು ಪೊಲೀಸರ ಹಿಂಸೆಯಲ್ಲಿ ಪ್ರತಿ ವರ್ಷ ನೂರಕ್ಕೂ ಹೆಚ್ಚು ಆದಿವಾಸಿಗಳು ಗಡ್‌ಚಿರೋಲಿ ಜಿಲ್ಲೆಯಲ್ಲಿ ಅಸುನೀಗುತಿದ್ದಾರೆ. ಇದನ್ನು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ವತಃ ಒಪ್ಪಿಕೊಂಡಿದ್ದಾರೆ.

ನಿರಂತರ ಹಿಂಸಾತ್ಮಕ ಚಟುವಟಿಕೆಗಳ ಕಾರಣದಿಂದಾಗಿ ಮಹಾರಾಷ್ಟ್ರದ ಗೊಂಡಿಯ, ಗಡ್‌ಚಿರೋಲಿ, ಚಂದ್ರಾಪುರ, ಭಂಡಾರ ಜಿಲ್ಲೆಗಳಲ್ಲಿ ಯಾವುದೇ ಕೈಗಾರಿಕೆ ಅಥವಾ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗದೇ ಅತ್ಯಂತ ಹಿಂದುಳಿದ ಜಿಲ್ಲೆಗಳಾಗಿ ಉಳಿದಿವೆ. ಚಂದ್ರಾಪುರ ಜಿಲ್ಲೆಯಲ್ಲಿ ನೆರೆಯ ಛತ್ತೀಸ್‌ಗಡ ರಾಜ್ಯದಿಂದ ಬರುವ ಕಚ್ಛಾ ಕಲ್ಲಿದ್ದನ್ನು ಸಂಸ್ಕರಿಸುವ 24 ಕ್ಕೂ ಹೆಚ್ಚು ಘಟಕಗಳಿದ್ದು ಇವೆಲ್ಲವೂ ಬಹುತೇಕ ರಾಜಕಾರಣಿಗಳ ಒಡೆತನದಲ್ಲಿವೆ. ಇನ್ನೂ ಗ್ರಾಮೀಣಾಭಿವೃದ್ಧಿಯಂತೂ ಇಲ್ಲಿನ ಜನತೆಯ ಪಾಲಿಗೆ ಕನಸಿನ ಮಾತಾಗಿದೆ. ಮಹಾರಾಷ್ಡ್ರ ಮತ್ತು ಛತ್ತೀಸ್ ಗಡ ಗಡಿಭಾಗದ 231 ಹಳ್ಳಿಗಳ 40 ಚದುರ ಕಿಲೊಮೀಟರ್ ವ್ಯಾಪ್ತಿ ಪ್ರದೇಶವನ್ನು ರೆಡ್ ಏರಿಯಾ ಎಂದು ಘೋಷಿಸಲಾಗಿದೆ. ಈ ಪ್ರದೇಶಕ್ಕೆ ನಕ್ಸಲ್ ನಿಗ್ರಹ ಪಡೆ ಕೋಬ್ರಾ ಕೂಡ ಕಾಲಿಡಲು ಸಾಧ್ಯವಾಗಿಲ್ಲ. ಈ ಪ್ರದೇಶದ ಹಳ್ಳಿಗಳಲ್ಲಿ ಮಾವೋವಾದಿ ನಕ್ಸಲರಿಂದ ಜನಾತನ್ ಸರ್ಕಾರ ಎಂಬ ಪರ್ಯಾಯ ಸರ್ಕಾರ ಅಸ್ಥಿತ್ವದಲ್ಲಿದೆ. ಈ ಅರಣ್ಯ ಪ್ರದೇಶದಲ್ಲಿ ನಕ್ಸಲ್ ತರಬೇತಿ ಕೇಂದ್ರ, ಮದ್ದುಗುಂಡುಗಳ ತಯಾರಿಕಾ ಕೇಂದ್ರ, ಮತ್ತು ಮುದ್ರಣ ಘಟಕಗಳಿದ್ದು, ನಕ್ಸಲಿಯರೇ ಹಲವು ಹಳ್ಳಿಗಳಲ್ಲಿ ಶಾಲೆ ನಡೆಸುತಿದ್ದಾರೆ. ಗೊಂಡಿ ಭಾಷೆಗೆ ಲಿಪಿ ಇಲ್ಲದ ಕಾರಣ ತೆಲುಗು ಭಾಷೆಯಲ್ಲಿ ನಕ್ಸಲರು ಮಕ್ಕಳಿಗೆ ಶಿಕ್ಷಣ ನೀಡುತಿದ್ದಾರೆ.

ಗಡ್‌ಚಿರೋಲಿ ಜಿಲ್ಲೆಯಲ್ಲಿ ತಲಾ 10 ರಿಂದ 12 ಸದಸ್ಯರಿರುವ 20 ಕ್ಕೂ ಹೆಚ್ಚು ದಳಂ ಹೆಸರಿನ ತಂಡಗಳಿದ್ದು ಇವರಿಗೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಆದಿವಾಸಿ ಯುಕ, ಯುವತಿಯರು ಸಮವಸ್ತ್ರವಿಲ್ಲದೆ ನಕ್ಸಲ್ ಕಾರ್ಯಕರ್ತರಾಗಿ ದುಡಿಯುತಿದ್ದಾರೆ. ಈ ಪ್ರದೇಶದಲ್ಲಿರುವ ಮಾವೋವಾದಿ ಸಕ್ಸಲ್ ಸಂಘಟನೆಗೆ ಪ್ರಸಿದ್ಧ ಸಿಗರೇಟ್ ತಯಾರಿಕಾ ಕಂಪನಿಯಾದ ಐ.ಟಿ.ಸಿ. ಕಂಪನಿ ಒಡೆತನಕ್ಕೆ ಸೇರಿದ ಬಲ್ಲಾಪುರ್ ಕಾಗದ ತಯಾರಿಕಾ ಕಂಪನಿ ಮತ್ತು ಕಲ್ಲಿದ್ದಲು ಘಟಕಗಳು ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳನ್ನು ಕಾಣಿಕೆ ರೂಪದಲ್ಲಿ ಸಲ್ಲಿಸುತ್ತಿವೆ. ಅರಣ್ಯದ ನಡುವೆ ಇರುವ ನಕ್ಸಲ್ ತಂಡಗಳಿಗೆ ಧವಸ, ಧಾನ್ಯಗಳನ್ನು ಆದಿವಾಸಿಗಳು ನೀಡುತಿದ್ದಾರೆ. ನಕ್ಸಲ್ ಚಟುವಟಿಕೆಗೆ ಬೆಂಬಲ ನೀಡದಿರುವ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದ್ದರೂ ಸಹ ಆದಿವಾಸಿಗಳು ಅಸಹಾಯಕರಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳಿಗಿಂತ ಹೆಚ್ಚಾಗಿ ನಕ್ಸಲಿಯರೇ ಆದಿವಾಸಿಗಳಿಗೆ ಆಪತ್‌ಬಾಂಧವರಾಗಿದ್ದಾರೆ. ಪೊಲೀಸರ, ಅರಣ್ಯಾಧಿಕಾರಿಗಳ ಮತ್ತು ದಲ್ಲಾಳಿಗಳ ಕಿರುಕುಳ ತಪ್ಪಿದೆ. ಆದಿವಾಸಿಗಳು ಸಂಗ್ರಹಿಸುವ ಅರಣ್ಯದ ಕಿರು ಉತ್ಪನ್ನಗಲಿಗೆ ಯೋಗ್ಯ ಬೆಲೆ ದೊರಕುತ್ತಿದೆ. ನಕ್ಸಲರ ಆರ್ಭಟಕ್ಕೆ ಹೆದರಿರುವ ಬೀಡಿ ತಯಾರಿಕೆಯ ಎಲೆಯಾದ ತೆಂಡು ಮತ್ತು ಕಾಗದ ತಯಾರಿಕೆಗೆ ಬಳಸಲಾಗುವ ಬಿದರಿನ ಬೊಂಬಿಗೂ ಸಹ ದಲ್ಲಾಳಿಗಳು ಉತ್ತಮ ಬೆಲೆ ನೀಡುತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆದಿವಾಸಿಗಳು ಸದ್ಯಕ್ಕೆ ಅಭಿವೃದ್ಧಿಯಿಂದ ವಂಚಿತರಾದರೂ ನಕ್ಸಲೀಯರ ನೆಪದಿಂದಾಗಿ ನೆಮ್ಮದಿಯಿಂದ ಇದ್ದಾರೆ. ಗಡ್‌ಚಿರೋಲಿ ಜಲ್ಲೆಯ ಎರಡು ತಾಲೂಕುಗಳಲ್ಲಿ ಜಮೀನ್ದಾರರ ವಶವಾಗಿದ್ದ 20 ಸಾವಿರ ಸಾವಿರ ಎಕರೆ ಕೃಷಿ ಭೂಮಿಯನ್ನು ವಾಪಸ್ ಪಡೆದು ಆದಿವಾಸಿಗಳಿಗೆ ಹಂಚಲಾಗಿದೆ.

ಇಪ್ಪತ್ತು ವರ್ಷಗಳ ಹಿಂದೆ ಗಡ್‌ಚಿರೋಲಿ ಜಿಲ್ಲೆಯ ಅಹೇರಿ ತಾಲೂಕಿನ ಹಳ್ಳಿಯೊಂದರಲ್ಲಿ ಅರಣ್ಯಾಧಿಕಾರಿಗಳು ತನ್ನ ಅಪ್ಪನಿಗೆ ನೀಡುತಿದ್ದ ಕಿರುಕುಳ ಸಹಿಸಲಾಗದೆ ನಕ್ಸಲ್ ಸಂಘಟನೆಗೆ ಸೇರಿದ್ದ ಆದಿವಾಸಿ ಯುವತಿಯೊಬ್ಬಳು ಇಂದು ಈ ಪ್ರಾಂತ್ಯದ ಮಹಿಳಾ ಕಮಾಂಡರ್ ಆಗಿ ಬೆಳೆದು ನಿಂತಿದ್ದಾಳೆ. ಯಮುನಕ್ಕ ಎಂಬ ಹೆಸರಿನ ಈಕೆ ಆದಿವಾಸಿಗಳಿಗೆ ಕಿರುಕುಳ ನೀಡುವ ಅಧಿಕಾರಿಗಳನ್ನು ಹಿಡಿದು ತಂದು ಹಳ್ಳಿಗಳ ನಡುವಿನ ಮರಕ್ಕೆ ಕಟ್ಟಿ ಹಾಕಿ ಎಲ್ಲಾ ಹೆಂಗಸರಿಂದ ಮುಖಕ್ಕೆ ಉಗುಳಿಸುವ ಕಾರ್ಯಕ್ರಮ ಹಮ್ಮಿಕೊಂಡ ನಂತರ ಮಹಿಳೆಯರ ಮೇಲಿನ ಅಪರಾಧದ ಚಟುವಟಿಕೆ ಕೂಡ ಕಡಿಮೆಯಾಗಿದೆ.

ವರ್ತಮಾನದ ನಕ್ಸಲ್ ಇತಿಹಾಸದ ವಿಪರ್ಯಾಸವೆಂದರೆ, ಗಡ್‌ಚಿರೋಲಿ ಜಿಲ್ಲೆಯಷ್ಟೆ ಅಲ್ಲ, ಇಡೀ ದಂಡಕಾರಣ್ಯದಲ್ಲಿ ನಕ್ಸಲ್ ಚಟುವಟಿಕೆ ಈಗ ಆದಿವಾಸಿ ಯುವಕರ ಕೈಯಲ್ಲಿದೆ. ಕಳೆದ ಎರಡು ಮೂರು ದಶಕದಿಂದ ನಕ್ಸಲ್ ಹೋರಾಟದಲ್ಲಿ ಬೆಳೆದು ಬಂದ ಇವರೆಲ್ಲಾ ಈಗ ನಾಯಕರಾಗಿ ಹೊರ ಹೊಮ್ಮಿದ್ದಾರೆ. ವಾಸ್ತವವಾಗಿ ಇವರೆಲ್ಲಾ ಅನಕ್ಷಸ್ತರಾಗಿದ್ದು ನಕ್ಸಲ್ ಚಳುವಳಿಯ ಮೂಲ ತತ್ವ ಮತ್ತು ಸಿದ್ಧಾಂತಗಳಿಂದ ವಿಮುಖರಾಗಿದ್ದಾರೆ. ಒಂದು ಕಾಲದಲ್ಲಿ ಮಾವೋ, ಲೆನಿನ್, ಮಾರ್ಕ್ಸ್ ವಿಚಾಧಾರೆಗಳ ಆಧಾರದ ಮೇಲೆ ಹೋರಾಟವನ್ನು ಹುಟ್ಟು ಹಾಕಿದ ಆಂಧ್ರ ಮೂಲದ ಮಾವೋವಾದಿ ನಕ್ಸಲ್ ನಾಯಕರು ವೃದ್ಧಾಪ್ಯದಿಂದ ನಿವೃತ್ತಿ ಹೊಂದಿದ್ದಾರೆ, ಇಲ್ಲವೇ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ನಗರಗಳಲ್ಲಿ ಕುಳಿತು ಮಾವೋವಾದಿಗಳ ಹೋರಾಟವನ್ನು ಕುರಿತು ಇಲ್ಲವೇ ಅವರ ಪರವಾಗಿ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳು ಕೂಡ ನಕ್ಸಲ್ ಬೆಂಬಲಿಗರ ಆತ್ಮವಂಚನೆಯ ಮಾತುಗಳಾಗಿ ಪರಿವರ್ತನೆ ಹೊಂದುತ್ತಿವೆ.

ಛತ್ತೀಸ್‌ಗಡ, ಒರಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆ ಮುಂದುವರಿಸುತ್ತಿರುವ ಬುಡಕಟ್ಟು ಜನಾಂಗದ ನಾಯಕರು ಗಣಿ ಕಂಪನಿಗಳಿಂದ ಬೆದರಿಕೆಯ ಮೂಲಕ ಸಂಪಾದಿಸುತ್ತಿರುವ ಹಣದಲ್ಲಿ ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಜೊತೆಗೆ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಏಕೆಂದರೆ, ಇವರಿಗೆಲ್ಲಾ ನಕ್ಸಲ್ ಹೋರಾಟದ ಮೂಲ ಆಶಯವಾಗಲಿ, ಚಿಂತನೆಗಳಾಗಲಿ, ಇವುಗಳ ಗಂಧ-ಗಾಳಿ ಕೂಡ ತಿಳಿದಿಲ್ಲ. ತತ್ವ ಮತ್ತು ಸಿದ್ಧಾಂತ ಕೊರತೆಯಿಂದಾಗಿ ಗಡ್‌ಚಿರೋಲಿ ಜಿಲ್ಲೆಯಲ್ಲಿ ಇತೀಚೆಗಿನ ವರ್ಷಗಳಲ್ಲಿ ನಕ್ಸಲಿಯರಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚಾಗತೊಡಗಿದೆ.

2003 ಆಗಸ್ಟ್ 29 ರಂದು ಅರಣ್ಯದಲ್ಲಿ ಗಸ್ತು ತಿರುಗುತಿದ್ದ ಪೊಲೀಸ್ ಜೀಪನ್ನು ನೆಲಬಾಂಬ್ ಮೂಲಕ ಸ್ಪೋಟಿಸಿದರ ಪರಿಣಾಮ ಐವರು ಪೊಲೀಸರು ಮೃತಪಟ್ಟರು. 2004 ರ ಮಾರ್ಚ್ ತಿಂಗಳಿನಲ್ಲಿ ಚಂದ್ರಾಪುರ ಜಿಲ್ಲೆಯಲ್ಲಿ ಆಂಧ್ರ ಗಡಿಭಾಗಕ್ಕೆ ಸಮೀಪವಿರುವ ಮೊಕಾಡಿ ಎಂಬ ರೈಲ್ವೆ ನಿಲ್ದಾಣವನ್ನು ಸ್ಪೋಟಿಸಲಾಯಿತು. 2005 ರ ಪೆಬ್ರವರಿಯಲ್ಲಿ ಬ್ರಹ್ಮಘಡ್ ಪೊಲೀಸ್ ಠಾಣೆಯ ಪೊಲೀಸ್ ವಾಹನವನ್ನು ನೆಲಬಾಂಬ್ ಮೂಲಕ ಧ್ವಂಸಗೊಳಿಸಿದ್ದರಿಂದ ಏಳು ಮಂದಿ ಪೊಲೀಸರು ಮೃತಪಟ್ಟರೆ, ಅದೇ ವರ್ಷದ ಮೇ ತಿಂಗಳಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಗೊಂಡಿಯ ಜಿಲ್ಲೆಯಲ್ಲಿ ಇಬ್ಬರು ನಾಗರೀಕರು ಮತ್ತು ಐವರು ಪೊಲೀಸರು ಅಸುನೀಗಿದರು. 2009 ರ ಅಕ್ಟೋಬರ್ ತಿಂಗಳಿನಲ್ಲಿ ಗಡ್‌ಚಿರೋಲಿ ಅರಣ್ಯದ ಬಳಿ ಪೊಲೀಸ್ ತಪಾಸಣಾ ಕೇಂದ್ರದ ಮೇಲೆ ನಸುಕಿನ ಜಾವ ನಡೆಸಿದ ಧಾಳಿಯಲ್ಲಿ ನಿದ್ರೆಯಲ್ಲಿದ್ದ ಸಿಬ್ಬಂದಿ ಸೇರಿದಂತೆ 17 ಮಂದಿ ಪೊಲೀಸರು ನಕ್ಸಲಿಯರ ಹಿಂಸೆಗೆ ಬಲಿಯಾದರು.

ಜಗತ್ತಿನಲ್ಲಿ ಹಿಂಸೆ ಎಂಬುದು ಅದು ಪೊಲೀಸರ ಕೃತ್ಯವಾಗಿರಲಿ ಅಥವಾ ನಕ್ಸಲಿಯರ ಕೃತ್ಯವಾಗಿರಲಿ ಅದು ಮನುಕುಲದ ವಿರೋಧಿ ನೀತಿ ಎಂಬುದನ್ನು ಮರೆಯಬಾರದು. ಇದನ್ನು ಪ್ರೋತ್ಸಾಹಿಸುವುದು ಇಲ್ಲವೇ ನಿಗ್ರಹದ ನೆಪದಲ್ಲಿ ಪರೋಕ್ಷವಾಗಿ ಮುಂದುವರಿಸುವುದು ಮನುಷ್ಯರು ಮಾಡಬಹುದಾದ ಕ್ರಿಯೆ ಅಲ್ಲ. ಇದನ್ನು ನಾಗರೀಕ ಜಗತ್ತು ಎಂದಿಗೂ ಸಮರ್ಥಿಸಿವುದಿಲ್ಲ, ಜೊತೆಗೆ ಸಮರ್ಥಿಸಲೂಬಾರದು.

(ಮುಂದುವರಿಯುವುದು)

ಪ್ರಜಾ ಸಮರ-10 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ದಂಡಕಾರಣ್ಯವೆಂಬುದು ಇಂದು ಮಧ್ಯಭಾರತದ ನಾಲ್ಕು ರಾಜ್ಯಗಳ ನಡುವೆ ಹಂಚಿ ಹೋಗಿರುವ ಅರಣ್ಯವಾದರೂ ಇಂದಿಗೂ ಈ ಅರಣ್ಯದಲ್ಲಿ ವಾಸಿಸುವ ಎಪ್ಪತ್ತು ಲಕ್ಷ ಆದಿವಾಸಿ ಬುಡಕಟ್ಟು ಜನಾಂಗಗಳ ಪಾಲಿಗೆ ಒಂದೇ ತಾಯಿ ನೆಲವಾಗಿದೆ.

ಮಹಾರಾಷ್ಟ್ರದ ಗಡ್‌ಚಿರೋಲಿ, ಭಂಡಾರ, ಮಧ್ಯಪ್ರದೇಶದ ಬಾಳ್‌ಘಾಟ್, ರಾಜ್‌ನಂದನ್‌ಗಾವ್, ಛತ್ತೀಸ್ ಗಡದ ಕಂಕೇರ್, ಬಸ್ತಾರ್, ಒರಿಸ್ಸಾದ ದಂತೇವಾಡ, ಮಲ್ಕನ್ ಗಿರಿ ಎಂಬ ನಾಲ್ಕು ರಾಜ್ಯಗಳ ಎಂಟು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ದಂಡಕಾರಣ್ಯದ ಪ್ರಾಕೃತಿಕ ಸಂಪತ್ತು ಈಗ ಆದಿವಾಸಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಅರಣ್ಯದ ನಡುವೆ ಹರಿಯುವ ನದಿಗಳು, ಇಲ್ಲಿನ ಬಿದಿರು, ತೇಗ, ಹೊನ್ನೆ ಮರಗಳು, ಬೀಡಿ ತಯಾರಿಕೆಗೆ ಬಳಸಲಾಗುವ ತೆಂಡು ಮರದಎಲೆಗಳು, ಈ ನೆಲದ ಗರ್ಭದಡಿಯಲ್ಲಿ ಅಡಗಿರುವ ತಾಮ್ರ, ಕಲ್ಲಿದ್ದಲು, ಬಾಕ್ಷೈಟ್, ಗ್ರಾನೈಟ್ ಮತ್ತು ಮಾರ್ಬಲ್, ಲೈಮ್ ಸ್ಟೋನ್ ( ಸಿಮೆಂಟ್ ತಯಾರಿಕೆಗೆ ಬಳಸುವ ಸುಣ್ಣದ ಕಲ್ಲು) ಇವೆಲ್ಲವೂ ನಿರಂತರ ಲೂಟಿಯಾಗುತಿದ್ದು, ಇವುಗಳ ರಕ್ಷಕರಾಗಿ, ದಂಡಕಾರಣ್ಯದ ಮಕ್ಕಳಾಗಿ ಬದುಕಿದ್ದ ಗೊಂಡಾ ಮತ್ತು ಕೋಯಾ ಬುಡಕಟ್ಟು ಜನಾಂಗ ಸೇರಿದಂತೆ ಹಲವಾರು ಆದಿವಾಸಿಗಳು ಈಗ ತಮ್ಮ ಕಣ್ಣೆದುರುಗಿನ ದರೋಡೆಗೆ ಮೂಕ ಸಾಕ್ಷಿಗಳಾಗಿದ್ದಾರೆ. ದಂಡಕಾರಣ್ಯದ ನೈಸರ್ಗಿಕ ಸಂಪತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಹೇಗಿತ್ತು ಎಂಬುದಕ್ಕೆ ಪ್ರಖ್ಯಾತ ಪಕ್ಷಿ ತಜ್ಞ ಸಲೀಂ ಅಲಿಯವರ ಆತ್ಮ ಕಥನ “The fall of a Sparrow” (ಒಂದು ಗುಬ್ಬಚ್ಚಿಯ ಪತನ) ಕೃತಿಯನ್ನು ನಾವು ಓದಬೇಕು. 1930ರ ದಶಕದಲ್ಲಿ ಈ ಪ್ರದೇಶಕ್ಕೆ ಪಕ್ಷಿಗಳ ಅಧ್ಯಯನಕ್ಕೆ ಹೋಗಿದ್ದ ಸಲೀಂ ಅಲಿಯವರು ಇಲ್ಲಿನ ಪಾಕೃತಿಕ ಸಂಪತ್ತು, ಬುಡಕಟ್ಟು ಜನಾಂಗ, ಅವರ ಸಂಸ್ಕೃತಿ ಎಲ್ಲವನ್ನೂ ವಿವರವಾಗಿ ಅಲ್ಲದಿದ್ದರೂ, ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದಾರೆ.

ನಮ್ಮನ್ನಾಳುವ ಸರ್ಕಾರಗಳ ದಿವು ನಿರ್ಲಕ್ಷ್ಯ ಮತ್ತು ವಿಫಲತೆ ಹಾಗೂ ಜನಪ್ರತಿನಿಧಿಗಳ ಹಗಲು ದರೋಡೆಗೆ ಬೇಸತ್ತ ಇಲ್ಲಿನ ಆದಿವಾಸಿಗಳು ಮಾವೋವಾದಿ ನಕ್ಸಲರ ನೇತೃತ್ವದಲ್ಲಿ ಈಗ ತಮ್ಮದೇ ಆದ ಜನತಾ ಸರ್ಕಾರ ರಚಿಸಿಕೊಂಡು ಬದುಕಿತಿದ್ದಾರೆ. ದಂಡಕಾರಣ್ಯ ವ್ಯಾಪ್ತಿಯ 2,800 ಹಳ್ಳಿಗಳಲ್ಲಿ ಮಾವೋವಾದಿ ನಕ್ಷಲರ ನೇತೃತ್ವದ ಪರ್ಯಾಯ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಈ ಹಳ್ಳಿಗಳಿಗೆ ಯಾವೊಬ್ಬ ಜನಪ್ರತಿನಿಧಿ, ಸರ್ಕಾರಿ ನೌಕರ ಕಾಲಿಡಲಾಗದ ಪರಿಸ್ಥಿತಿ ಉದ್ಬವವಾಗಿದೆ. ತಮ್ಮ ಸುದೀರ್ಘ ಮೂರು ದಶಕಗಳ ಒಡನಾಟದಿಂದ ಮಾವೋವಾದಿ ನಕ್ಷಲರು ಇಲ್ಲಿನ ಜನರ ಪ್ರೀತಿ, ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶಕ್ಕೆ ನೆರೆಯ ಆಂಧ್ರದಿಂದ 1980ರ ಜೂನ್ ತಿಂಗಳಿನಲ್ಲಿ ನಕ್ಸಲಿಯರು ಪ್ರಥಮ ಬಾರಿಗೆ ಕಾಲಿಟ್ಟರು. ಈ ಹಿಂದೆ ಪ್ರಸ್ತಾಪಿಸಿರುವ ಹಾಗೆ ಕೊಂಡಪಲ್ಲಿ ಸೀತಾರಾಮಯ್ಯನವರ ವೈದ್ಯೆ ಪುತ್ರಿಯಿಂದಾಗಿ ನಕ್ಸಲರು ದಂಡಕಾರಣ್ಯಕ್ಕೆ ಕಾಲಿಡಲು ಪ್ರೇರಣೆಯಾಯಿತು.

1980ರ ಏಪ್ರಿಲ್ 22ರಂದು, ಕೊಂಡಪಲ್ಲಿ ಸೀತಾರಾಮಯ್ಯ ಪ್ರಜಾಸಮರ ದಳವನ್ನು (ಸಿ.ಪಿ.ಐ. ಎಂ.ಎಲ್ ಬಣ) ವನ್ನು ಸ್ಥಾಪಿಸಿದ ನಂತರ ಉತ್ತರ ತೆಲಂಗಾಣ ಮತ್ತು ಅದಕ್ಕೆ ಹೊಂದಿಕೊಂಡಂತೆ ಇದ್ದ ಮಹಾರಾಷ್ರದ ಗಡ್‌ಚಿರೋಲಿ ಮತ್ತು ಬಸ್ತಾರ್ ವಲಯದ ( ಬಸ್ತಾರ್ ಈಗ ಛತ್ತೀಸ್‌ಘಡ ರಾಜ್ಯಕ್ಕೆ ಸೇರಿದೆ) ಆದಿವಾಸಿಗಳ ಪರವಾಗಿ ಹೋರಾಟ ನಡೆಸಲು ನಿರ್ಧರಿಸಿದರು. ಅಲ್ಲಿನ ಆದಿವಾಸಿಗಳು ಅರಣ್ಯ ಗುತ್ತಿಗೆದಾರರು ಮತ್ತು ಅರಣ್ಯಾಧಿಕಾರಿಗಳಿಂದ ತೀವ್ರವಾಗಿ ಶೋಷಣೆಗೆ ಒಳಗಾಗಿದ್ದರು. ಬೀಡಿ ತಯಾರಿಕೆ ಬಳಸಲಾಗುತಿದ್ದ ತಂಡು ಎಲೆಗಳ ಒಂದು ಕಟ್ಟಿಗೆ (ನೂರು ಎಲೆಗಳು) ಆದಿವಾಸಿಗಳಿಗೆ ಕೇವಲ 5 ಪೈಸೆ ನೀಡಲಾಗುತಿತ್ತು. ಪೇಪರ್ ತಯಾರಿಕೆಗೆ ಬಳಸುತಿದ್ದ ಮೂರು ಅಡಿ ಉದ್ದದ ಬಿದಿರಿನ ನೂರು ಬೊಂಬುಗಳ ಒಂದು ಕಟ್ಟಿಗೆ ಒಂದು ರೂಪಾಯಿಯನ್ನು ನೀಡಲಾಗುತಿತ್ತು. ಆದಿವಾಸಿಗಳಿಂದ ಪಡೆದ ತಂಡು ಎಲೆಗಳು ಮತ್ತು ಬಿದಿರು ಬೊಂಬುಗಳನ್ನು ಗುತ್ತಿಗೆದಾರರು ಶೇಕಡ ನೂರರಿಂದ ಇನ್ನೂರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತಿದ್ದರು. ದಿನಕ್ಕೆ ಒಮ್ಮೆ ಮಾತ್ರ ಉಪ್ಪು ಹಾಕಿದ ಜೋಳದ ಗಂಜಿ ಆದಿವಾಸಿಗಳ ಆಹಾರವಾಗಿತ್ತು. ಹಸಿವಾದಾಗಲೆಲ್ಲಾ ಅವರು ಅರಣ್ಯದಲ್ಲಿ ದೊರೆಯುವ ಹಣ್ಣು ಇಲ್ಲವೆ ಸೊಪ್ಪು, ಮತ್ತು ಗೆಡ್ಡೆಗಳನ್ನು ಆಯ್ದು ತಂದು ಬೇಯಿಸಿ ತಿನ್ನುವುದರ ಮೂಲಕ ತಮ್ಮ ಹಸಿವೆಯನ್ನು ನೀಗಿಸಿಕೊಳ್ಳುತಿದ್ದರು. ಈ ಬಡತನ ಮತ್ತು ಹಸಿವಿನ ನಡುವೆಯೂ ಗುತ್ತಿಗೆದಾರರು, ಸರ್ಕಾರಿ ನೌಕರರು ಇವರುಗಳ ಕಾಮ ತೃಷೆಗೆ ತಮ್ಮ ಹೆಣ್ಣು ಮಕ್ಕಳು ಬಲಿಯಾಗುತಿದ್ದಾಗ ಆದಿವಾಸಿಗಳು ಮೌನವಾಗಿ ಒಳಗೊಳೆಗೆ ಅತ್ತು ತಮ್ಮನ್ನು ತಾವೇ ಸಂತೈಸಿಕೊಳ್ಳುತಿದ್ದರು.

ಇದರ ನಡುವೆ ಕಾಡಿನ ಕಿರು ಉತ್ಪನ್ನಗಳ ಸಂಗ್ರಹಕ್ಕೆ ಅರಣ್ಯಕ್ಕೆ ಹೋದಾಗ ಅರಣ್ಯಾಧಿಕಾರಿಗಳಿಂದ ಕಿರುಕುಳ ಅನುಭವಿಸಬೇಕಾಗಿತ್ತು. ಹಲವು ವೇಳೆ ಕಾಡಿನ ನಡುವೆ ವಿರಳವಾದ ಪ್ರದೇಶದಲ್ಲಿ ಆದಿವಾಸಿಗಳು ಬೆಳೆದಿದ್ದ ಫಸಲನ್ನು ಆನೆಗಳಿಂದ ಧ್ವಂಸ ಮಾಡಿಸಿ ಕೈಗೆ ಬಂದ ಫಸಲು ಭಾಯಿಗೆ ಇಲ್ಲದಂತೆ ಮಾಡುತಿದ್ದರು. ಕಿರುಕುಳ ತಡೆಯಲು ಆದಿವಾಸಿಗಳು ಅಧಿಕಾರಿಗಳಿಗೆ ಕೋಳಿ, ಮೀನು ಇವುಗಳನ್ನು ಒದಗಿಸಬೇಕಾಗಿತ್ತು. ಕೆಲವು ವೇಳೆ ಈ ಮುಗ್ಧ ಜನತೆ ಸಂಗ್ರಹಿಸಿ ಇಟ್ಟಿದ್ದ ಮಸಾಲೆ ಪದಾರ್ಥಗಳು ( ಚಕ್ಕೆ ಲವಂಗ ಇತ್ಯಾದಿ) ಮತ್ತು ಹುಣಸೆ ಹಣ್ಣು ಇವುಗಳನ್ನು ಕೊಂಡೊಯ್ಯತಿದ್ದರು. ಮಧ್ಯ ಪ್ರದೇಶ ಸಕಾರವೊಂದೇ ಅರಣ್ಯದ ಕಿರು ಉತ್ಪನ್ನಗಳ ಗುತ್ತಿಗೆ ನೀಡುವುದರಿಂದ ವಾರ್ಷಿಕ 250 ಕೋಟಿ ಆದಾಯ ಪಡೆಯುತಿತ್ತು. ವಾಸ್ತವವಾಗಿ ದಂಡಕಾರಣ್ಯದ ಅರಣ್ಯದಲ್ಲಿ ಎರಡರಿಂದ ಮೂರು ಸಾವಿರ ಕೋಟಿ ಬೆಲೆ ಬಾಳುವ ಕಿರು ಉತ್ಪನ್ನಗಳು ಅರಣ್ಯ ಗುತ್ತಿಗೆ ಹೆಸರಿನಲ್ಲಿ ಲೂಟಿಯಾಗುತಿದ್ದವು. ಇವುಗಳಲ್ಲಿ ಸುಗಂಧ ತಯಾರಿಕೆಗೆ ಬಳಸಲಾಗುವ ಗಿಡಮೂಲಿಕೆಗಳು ಮತ್ತು ಸೋಪು ತಯಾರಿಕೆಗೆ ಬಳಸಲಾಗುತಿದ್ದ ಎಣ್ಣೆಯನ್ನು ಉತ್ಪತ್ತಿ ಮಾಡುತಿದ್ದ ಹಲವು ಜಾತಿಯ ಮರಗಳು ಗುತ್ತಿಗೆದಾರರ ಲಾಭಕೋರತನಕ್ಕೆ ಬಲಿಯಾದವು. ನಾಲ್ಕು ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶದ 236 ಹಳ್ಳಿಗಳ 12 ಸಾವಿರ ಆದಿವಾಸಿಗಳಿಂದ 67 ವಿವಿಧ ಬಗೆಯ ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಲಾಗುತಿತ್ತು.

ಇಂತಹ ಪರಿಸ್ಥಿತಿಯಲ್ಲಿ ನೆರೆಯ ಆಂಧ್ರದ ಉತ್ತರ ತೆಲಂಗಾಣದ ವಾರಂಗಲ್ ಕರೀಂನಗರ ಮತ್ತು ಅದಿಲಾಬಾದ್ ಹಾಗೂ ಕಮ್ಮಮ್ ಜಿಲ್ಲೆಗಳಿಂದ 1980ರ ಜೂನ್ ತಿಂಗಳಿನಲ್ಲಿ ಎರಡು ತಂಡಗಳಲ್ಲಿ ನಕ್ಸಲರು ಈ ಪ್ರದೇಶಕ್ಕೆ ಕಾಲಿಟ್ಟರು. ಒಂದು ತಂಡ ಬಸ್ತಾರ್ ವಲಯ ಪ್ರವೇಶಿಸಿದರೆ, ಇನ್ನುಂದು ಗಡ್‌ಚಿರೋಲಿ ಅರಣ್ಯ ಪ್ರದೇಶಕ್ಕೆ ಕಾಲಿಟ್ಟಿತು.

ಗಡ್ ಚಿರೋಲಿ ಅರಣ್ಯ ಪ್ರದೇಶಕ್ಕೆ ತನ್ನ ಸಹ ಕಾರ್ಯಕರ್ತರ ಜೊತೆ ಕಾಲಿಟ್ಟ ತಂಡದ ನಾಯಕ ಪೆದ್ದಿ ಶಂಕರ್ ಎಂಬ ದಲಿತ ಯುವಕ. ಈತನ ತಂದೆ ತೆಲಂಗಾಣ ಪ್ರಾಂತ್ಯದ ಸಿಂಗರೇಣಿ ಕಲ್ಲಿದ್ದಲು ಗಣಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತಿದ್ದ. ಕಲ್ಲಿದ್ದಲು ಗಣಿ ಕಾರ್ಮಿಕರ ಕೂಲಿ ದರ ಹೆಚ್ಚಳಕ್ಕಾಗಿ ನಕ್ಸಲರು ನಡೆಸಿದ ಹೋರಾಟದಿಂದ ಪ್ರಭಾವಿತನಾಗಿದ್ದ ಪೆದ್ದಿ ಶಂಕರ ಹೈಸ್ಕೂಲು ಶಿಕ್ಷಣ ಮುಗಿದ ಕೂಡಲೇ, ಪ್ರಜಾ ಸಮರಂ ಗ್ರೂಪ್ ನ ರ್‍ಯಾಡಿಕಲ್ ಯೂತ್ ಲೀಗ್ ಸಂಘಟನೆಯ ಸದಸ್ಯನಾಗಿ ಗುರುತಿಸಿಕೊಂಡು, ಖಾಸಾಗಿ ಬಸ್ ಒಂದರಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತಿದ್ದ.

ತನ್ನ ಹಳ್ಳಿಯಲ್ಲಿ ನಡೆದ ಒಂದು ಘಟನೆ ಅವನನ್ನು ಪೂರ್ಣಾವಧಿ ಮಾವೋವಾದಿ ನಕ್ಸಲನನ್ನಾಗಿ ಪರಿವರ್ತಿಸಿತು. ತನ್ನ ಹುಟ್ಟೂರಾದ ಅದಿಲಾಬಾದ್ ಜಿಲ್ಲೆಯ ಬೆಲಂಪಲ್ಲಿಯಲ್ಲಿ ತನ್ನ ಜಾತಿಗೆ ಸೇರಿದ ಇಬ್ಬರು ರೌಡಿಗಳು (ಕುಂಡೆಲ ಶಂಕರ ಮತ್ತು ದಸ್ತಗಿರಿ) ಊರ ಜನರು ಸೇರಿದಂತೆ ಮಹಿಳೆಯರಿಗೆ ಇನ್ನಿಲ್ಲದ ಕಿರುಕುಳ ನೀಡುತಿದ್ದರು. ಅವರ ವಿರುದ್ಧ ಮಾತನಾಡುವರೇ ಇಲ್ಲದ ಸ್ಥಿತಿಯಲ್ಲಿ ಪೆದ್ದಿ ಶಂಕರ ಮತ್ತು ಅವನ ಕಾಮ್ರೇಡ್ ಗೆಳೆಯರು ರೌಡಿಗಳಿಗೆ ಒಮ್ಮೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಸಹ ನಡುರಸ್ತೆಯಲ್ಲಿ ನಿಂತು ಮಹಿಳೆಯರನ್ನು ಅಶ್ಲೀಲ ಶಬ್ಧಗಳಿಂದ ಚುಡಾಯಿಸುವುದು ಮುಂದುವರಿದಾಗ, ಕೋಪಗೊಂಡ ಪೆದ್ದಿ ಶಂಕರ ತನ್ನ ಮಿತ್ರ ಗಜಲ್ಲ ಗಂಗಾರಾಮ್ ಜೊತೆ ಸೇರಿ ಹಾಡು ಹಗಲೇ ಇಬ್ಬರೂ ರೌಡಿಗಳನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಂದು ಬಿಸಾಕಿದ. ದಲಿತ ಯುವಕ ಪೆದ್ದಿಶಂಕರನ ಈ ಶೌರ್ಯ ಅವನ ಹುಟ್ಟೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಈ ಘಟನೆಯ ನಂತರ ಸಿಂಗರೇಣಿ ಕಲ್ಲಿದ್ದಲು ಗಣಿಯಲ್ಲಿ ಮಹಿಳಾ ಕೂಲಿ ಕಾರ್ಮಿಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಕಂಪನಿಯನ್ನು ಮತ್ತು ಅಲ್ಲಿನ ಅಧಿಕಾರಿಗಳನ್ನು ಪ್ರತಿಭಟನೆಯ ಮೂಲಕ ಅಲುಗಾಡಿಸಿದ್ದ. ಅತ್ಯಾಚಾರವೆಸಗಿದ ಅಧಿಕಾರಿಯ ಮನೆಗೆ ನುಗ್ಗಿ ಇಡೀ ಮನೆಯನ್ನು ಧ್ವಂಸ ಮಾಡಿದ್ದ. ಇದಲ್ಲದೆ, 1978ರಲ್ಲಿ ಸಾವಿರಾರು ಅಡಿ ಆಳದ ಕಲ್ಲಿದ್ದಲ ಗಣಿಯಲ್ಲಿ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದೆ ಅಮಾಯಕ ಅಶಿಕ್ಷಿತ ಕಾರ್ಮಿಕರು ದುಡಿಯುತ್ತಿರುವದನ್ನು ನೋಡಿದ್ದ ಶಂಕರ ಕಾರ್ಮಿಕರ ಮೂಲಭೂತ ಸೌಕರ್ಯಕ್ಕಾಗಿ ಕಂಪನಿಯ ವಿರುದ್ಧ ನಡೆಸಿದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗೋಲಿಬಾರ್ ನಿಂದ ಇಬ್ಬರು ಕಾರ್ಮಿಕರು ಮೃತಪಟ್ಟರು. ಪೊಲೀಸರು ಪೆದ್ದಿ ಶಂಕರ್ ವಿರುದ್ಧ ಡಕಾಯಿತಿ, ಕೊಲೆ ಯತ್ನ ಮತ್ತು ಹಿಂಸೆಗೆ ಪ್ರಚೋದನೆ ನೀಡಿದ ಆರೋಪ ಮುಂತಾದ ಮೊಕದ್ದಮೆಗಳನ್ನು ದಾಖಲಿಸಿದರು. ಇದರಿಂದಾಗಿ ಪೆದ್ದಿ ಶಂಕರ್ ಅನಿವಾರ್ಯವಾಗಿ ಭೂಗತನಾಗುವುದರ ಮೂಲಕ ನಕ್ಸಲ್ ಹೋರಾಟಕ್ಕೆ ದುಮುಕಿ ಬಂದೂಕವನ್ನು ಕೈಗೆತ್ತಿಕೊಂಡಿದ್ದ.

1980ರ ಜೂನ್ ತಿಂಗಳಲ್ಲಿ ಗೋದಾವರಿ ನದಿಯನ್ನು ದಾಟಿ ಮಹರಾಷ್ಟ್ರದ ಚಂದ್ರಾಪುರ ಅರಣ್ಯ ಪ್ರವೇಶಿಸಿದ ಪೆದ್ದಿಶಂಕರ ಮತ್ತು ಅವನ ತಂಡ ಪ್ರಾರಂಭದಲ್ಲಿ ಮೂರು ಹಳ್ಳಿಗಳಲ್ಲಿ ವಾಸವಾಗಿದ್ದ ಸುಮಾರು 700 ಗೊಂಡಾ ಆದಿವಾಸಿಗಳ ಜೊತೆ ಅವರುಗಳ ಗೊಂಡಾ ಭಾಷೆಯಲ್ಲಿ ಮಾತನಾಡುತ್ತಾ, ಅರಣ್ಯ ಗುತ್ತಿಗೆದಾರರು ಮತ್ತು ಹಣದ ಲೇವಾದೇವಿದಾರರು ಹೇಗೆ ಸುಲಿಯುತಿದ್ದಾರೆ ಎಂಬುದನ್ನು ವಿವರಿಸಿ, ಅವರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. ಆದಿವಾಸಿಗಳ ವಿಶ್ವಾಸ ಗಳಿಸಿದ ನಂತರ ಮೊಯಿನ್‌ಬಿನ್‌ಪೆಟ್ಟ, ಬೌರ ಮತ್ತು ಪೈಡ್‌ಗನ್ ಎಂಬ ಮೂರು ಹಳ್ಳಿಗಳಲ್ಲಿ ವಾಸಿಸುತ್ತಾ ಆದಿವಾಸಿಗಳನ್ನು ಹೋರಾಟಕ್ಕೆ ಅಣಿಗೊಳಿಸಿದರು. ದುರಾದೃಷ್ಟವಶಾತ್ ಅದೇ ವರ್ಷ ನವಂಬರ್ 2ರಂದು ಪೆದ್ದಿ ಶಂಕರ ಮಹಾರಾಷ್ಟ್ರ ಪೊಲೀಸರ ಗುಂಡಿಗೆ ಬಲಿಯಾಗಬೇಕಾಯಿತು. ಅಂದು ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯದಲ್ಲಿ ಮೊಯಿನ್‌ಬಿನ್‌ಪೆಟ್ಟ ಹಳ್ಳಿಗೆ ಶಂಕರ ಮತ್ತು ಅವನ ತಂಡ ಊಟಕ್ಕಾಗಿ ಬರುತ್ತಿರುವ ಬಗ್ಗೆ ಜಮೀನ್ದಾರನೊಬ್ಬನ ಸೇವಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಊಟ ಮುಗಿಸಿ ಶಂಕರ ಮತ್ತು ಅವನ ನಾಲ್ವರು ಸಂಗಾತಿಗಳು ಹೊರಡುತಿದ್ದಂತೆ ಶಂಕರನ ತಂಡಕ್ಕೆ ಪೊಲೀಸರು ಎದುರಾದರು. ಅವರಿಂದ ತಪ್ಪಿಸಿಕೊಂಡು ಓಡುತಿದ್ದಾಗ, ಪೊಲೀಸರು ಹಾರಿಸಿದ ಗುಂಡು ಪೆದ್ದಿಶಂಕರನ ಬೆನ್ನಿಗೆ ತಾಗಿ ಜೋಳದ ಹೊಲದಲ್ಲಿ ಮಕಾಡೆ ಬಿದ್ದುಬಿಟ್ಟ. ಉಳಿದ ನಾಲ್ವರು ಸಂಗಾತಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೂರು ದಿನಗಳ ಕಾಲ ಸ್ಥಳಿಯ ಶಾಲೆಯೊಂದರಲ್ಲಿ ಶಂಕರನ ಶವವನ್ನು ಆದಿವಾಸಿಗಳು ಸರಂಕ್ಷಿಸಿ ಕಾಯ್ದಿದ್ದರು. ನಂತರ ಮಹಾರಾಷ್ಟ್ರ ಪೊಲೀಸರು ತಮ್ಮ ವಶಕ್ಕೆ ಪಡೆದು ಅಂತ್ಯ ಸಂಸ್ಕಾರ ಮಾಡಲು ಮುಂದಾದಾಗ ಪ್ರತಿಭಟಿಸಿದ ಆದಿವಾಸಿಗಳು ಪೊಲೀಸರಿಂದ ಶಂಕರನ ಶವವನ್ನು ಮರಳಿ ಪಡೆದು ಶಂಕರನಿಗೆ ಗುಂಡೇಟು ಬಿದ್ದ ಜಾಗದಲ್ಲೇ ಅಂತ್ಯಸಂಸ್ಕಾರ ನೆರೆವೇರಿಸಿದರು. ಮಗನ ಸಾವಿನ ಸುದ್ಧಿ ತಂದೆಗೆ ಹತ್ತು ದಿನಗಳ ನಂತರ ತಿಳಿಯಿತು. ಅದಿಲಾಬಾದ್‌ನಿಂದ ಬಂದಿದ್ದ ಶಂಕರನ ತಂದೆ, ತನ್ನ ಮಗ ಪೊಲೀಸರ ಗುಂಡಿಗೆ ಬಲಿಯಾದ ಜೋಳದ ಹೊಲದ ಭೂಮಿಯಲ್ಲಿ ಶವಸಂಸ್ಕಾರ ಮಾಡಿದ್ದ ಪೂಜೆ ಸಲ್ಲಿಸಿ ಹಿಂತಿರುಗಿದ. ಮಹಾರಾಷ್ಟ್ರ ಸರ್ಕಾರ ಶಂಕರನ ಮೇಲೆ ಗುಂಡು ಹಾರಿಸಿದ ಪೊಲೀಸ್ ಪೇದೆ ಚಂದ್ರಿಕದೀಪ್ ರಾಯ್ ಎಂಬಾತನಿಗೆ ಐನೂರು ರೂಪಾಯಿ ಬಹುಮಾನ ಮತ್ತು ಆತನ ಜೊತೆಗಿದ್ದವರಿಗೆ ತಲಾ ನೂರು ಬಹುಮಾನ ಘೋಷಿಸಿತು.

ಆಂಧ್ರಪ್ರಧೇಶದಿಂದ ದಂಡಕಾರಣ್ಯ ವಲಯಕ್ಕೆ ತನ್ನ ಕಾರ್ಯಚಟುವಟಿಕೆ ವಿಸ್ತರಿಸಿದ ಪ್ರಜಾಸಮರಂ ಗುಂಪಿನ ಮೊದಲ ಬಲಿಯಾಗಿ ಪೆದ್ದಿ ಶಂಕರ ಪ್ರಾಣ ತೆತ್ತ ಘಟನೆ ಪರೋಕ್ಷವಾಗಿ ಗೊಂಡಾ ಆದಿವಾಸಿಗಳಲ್ಲಿ ನಕ್ಸಲರ ಬಗ್ಗೆ, ಅವರ ಬದ್ಧತೆ ಕುರಿತಂತೆ ವಿಶ್ವಾಸ ಮೂಡಲು ಕಾರಣವಾಯಿತು. ಪೆದ್ದಿಶಂಕರನ ಸಾವಿನಿಂದ ಮಹರಾಷ್ಟ್ರದಲ್ಲಿ ನಕ್ಸಲ್ ಚಳುವಳಿ ತಲೆಯೆತ್ತುವುದಿಲ್ಲ ಎಂದು ನಂಬಿದ್ದ ಪೊಲೀಸರ ಲೆಕ್ಕಾಚಾರವೆಲ್ಲಾ ಸಂಪೂರ್ಣ ತಲೆಕೆಳಗಾಯಿತು. ಮಹರಾಷ್ಟ್ರದ ನಕ್ಸಲ್ ಪೀಡಿತ ಜಿಲ್ಲೆಗಳ ಪೈಕಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಗಡ್‌ಚಿರೋಲಿ ಜಿಲ್ಲೆ ಇವತ್ತಿಗೂ ಮುಂಚೂಣಿಯಲ್ಲಿದೆ.

(ಮುಂದುವರೆಯುವುದು)

ಪ್ರಜಾ ಸಮರ-9 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಆಂಧ್ರದಲ್ಲಿ ಎನ್.ಟಿ.ಆರ್. ನೇತೃತ್ವದ ತೆಲುಗು ದೇಶಂ ಸರ್ಕಾರ 1989ರ ಚುನಾವಣೆಯಲ್ಲಿ ಪತನಗೊಂಡು ಡಿಸಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಮುಖ್ಯಮಂತ್ರಿಯಾಗಿ ಡಾ.ಎಂ. ಚೆನ್ನಾರೆಡ್ಡಿ ಅಧಿಕಾರ ವಹಿಸಿಕೊಂಡರು. ಪ್ರಜಾಸಮರಂ ಗ್ರೂಪ್ ಮೇಲೆ ತೆಲುಗು ದೇಶಂ ಸರ್ಕಾರ ಹೇರಲಾಗಿದ್ದ ನಿಷೇಧವನ್ನು ಕಾಂಗ್ರೆಸ್ ಸರ್ಕಾರ ತೆರವುಗೊಳಿಸಿತು. ಬಂಧಿಸಲಾಗಿದ್ದ ಎಲ್ಲಾ ನಾಯಕರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು. ಇದರ ಅಂಗವಾಗಿ ವಾರಂಗಲ್ ಜಿಲ್ಲಾ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಬಹಿರಂಗ ರ್‍ಯಾಲಿಗೆ ಐದು ಲಕ್ಷ ಜನ ಸೇರುವುದರ ಮೂಲಕ ನಕ್ಸಲಿಯರ ಸಾಮರ್ಥ್ಯ ಏನೆಂಬುದನ್ನು ಸಮಾಜಕ್ಕೆ ತೋರಿಸಿಕೊಡಲಾಯಿತು. ಈ ವೇಳೆಗಾಗಲೇ ವಯಸ್ಸು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರನ್ನು ಬಸ್ತಾರ್ ಅರಣ್ಯ ಪ್ರದೇಶದ ಗುಪ್ತ ಸ್ಥಳಕ್ಕೆ ಸಾಗಿಸಿ ವಿಶ್ರಾಂತಿ ನೀಡಲಾಗಿತ್ತು.

ಇದೇ ಸಮಯಕ್ಕೆ ಸರಿಯಾಗಿ ಆಂಧ್ರದ ಪಿ.ಡಬ್ಲ್ಯು.ಜಿ. ಗುಂಪಿನ ಸದಸ್ಯರು ತಮಿಳುನಾಡಿನ ಕೆಲವು ಸದಸ್ಯರ ಮೂಲಕ ಶ್ರೀಲಂಕಾದ ಎಲ್.ಟಿ.ಟಿ.ಇ. ಗುಂಪಿನ ಜೊತೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ತಮಿಳು ಮೂಲದ ಎಲ್.ಟಿ.ಟಿ.ಇ. ಸಂಘಟನೆಯ ಸದಸ್ಯರು ಶ್ರೀಲಂಕಾದಿಂದ  ಆಂಧ್ರಕ್ಕೆ ಬಂದು ಅರಣ್ಯ ಪ್ರದೇಶದಲ್ಲಿ ಹಲವು ತಿಂಗಳು ಕಾಲ ನಕ್ಸಲಿಯರಿಗೆ ಆಧುನಿಕ ಗೆರಿಲ್ಲಾ ಯುದ್ಧ ತಂತ್ರಗಳನ್ನು ಕಲಿಸಿದರು. ಅಷ್ಟೇ ಅಲ್ಲದೇ ಕೇವಲ ಬಂದೂಕು ಮತ್ತು ಬಾಂಬ್‌‌ಗಳನ್ನು ಬಳಸುತ್ತಿದ್ದ ನಕ್ಸಲರಿಗೆ ಅತ್ಯಾಧುನಿಕ ಶಸ್ರಾಸ್ತ್ರಗಳಾದ ಏ.ಕೆ. 47 ಬಂದೂಕು, ಮಿಷಿನ್‌ಗನ್, ರಾಕೇಟ್‌ಲಾಂಚರ್‌‍ಗಳನ್ನು ಕೊಟ್ಟು ಹೋದರು. ಪಿ.ಡಬ್ಲ್ಯು.ಜಿ. ಮತ್ತು ಎಲ್.ಟಿ.ಟಿ.ಇ. ಸಂಘಟನೆಗಳ ನಡುವೆ ಶಸ್ರಾಸ್ತ್ರಗಳ ಖರೀದಿ ಒಪ್ಪಂದ ಕೂಡ ಏರ್ಪಟ್ಟಿತು.

ಕೇವಲ ಒಂದು ವರ್ಷದ ಅವಧಿಯಲ್ಲಿ, ಅಂದರೆ 1990ರಲ್ಲಿ ಡಾ. ಎಂ. ಚೆನ್ನಾರೆಡ್ಡಿಯ ಸ್ಥಾನಕ್ಕೆ ಮುಖ್ಯಮಂತ್ರಿಯಾಗಿ ಬಂದ ಎನ್. ಜನಾರ್ದನ ರೆಡ್ಡಿಯ ಆಗಮನದಿಂದಾಗಿ ಮಾವೋವಾದಿ ನಕ್ಸಲರ ಮತ್ತು ಸರ್ಕಾರದ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿತು. ಉಭಯ ಬಣಗಳ ಸಂಘರ್ಷ  ಮುಂದುವರೆದು, 92ರಲ್ಲಿ ಕಾಂಗ್ರೆಸ್ ಪಕ್ಷದ ಮೂರನೇ ಮುಖ್ಯಮಂತ್ರಿಯಾಗಿ ನೇಮಕಗೊಂಡ ವಿಜಯಬಾಸ್ಕರ ರೆಡ್ಡಿಯ ಕಾಲದಲ್ಲಿ ತೀವ್ರವಾಗಿ ಉಲ್ಭಣಗೊಂಡಿತು. ಇದರ ಪರಿಣಾಮವಾಗಿ ಕಾಂಗ್ರೆಸ್ ಸರ್ಕಾರ ಕೂಡ ಆಂಧ್ರ ಪ್ರದೇಶದಲ್ಲಿ ಎಲ್ಲಾ ನಕ್ಸಲ್ ಸಂಘಟನೆಗಳ ಮೇಲೆ ನಿಷೇಧವನ್ನು  ಜಾರಿ ಮಾಡಿತು.

1995ರಲ್ಲಿ ನಡೆದ ಚುಣಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಎನ್.ಟಿ.ಆರ್. ಮತ್ತೇ ಅಧಿಕಾರಕ್ಕೆ ಬಂದರು. ಆದರೆ ಅವರ ಅವಧಿ ಕೆಲವೇ ದಿನಗಳಿಗೆ ಸೀಮಿತವಾಗಿತ್ತು. ಏಕೆಂದರೆ, ಎನ್.ಟಿ.ಆರ್. ತಮ್ಮ ವೃದ್ಧಾಪ್ಯದಲ್ಲಿ ಶಿವಪಾರ್ವತಿ ಎಂಬ ಹೆಸರಿನ ಹರಿಕಥೆ ಮಾಡುತ್ತಿದ್ದ ಮಧ್ಯ ವಯಸ್ಸಿನ ಹೆಣ್ಣುಮಗಳನ್ನು ಮೋಹಿಸಿ ವಿವಾಹವಾದ ಕಾರಣಕ್ಕಾಗಿ ಕುಟುಂಬದ ಸದಸ್ಯರಿಂದ ಮತ್ತು ಪಕ್ಷದ ಶಾಸಕರಿಂದ ತಿರಸ್ಕೃತಗೊಂಡರು. ಕ್ಷಿಪ್ರಗತಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಎನ್.ಟಿ.ಆರ್. ಸ್ಥಾನಕ್ಕೆ ಅವರ ಅಳಿಯ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಬಂದರು. ನಾಯ್ಡು ಕೂಡ 1996ರ ಜುಲೈ ತಿಂಗಳಿನಲ್ಲಿ ಪ್ರಜಾ ಸಮರಂ ಮತ್ತು ಅದರ ಎಲ್ಲಾ ಅಂಗಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿ, ಕಾರ್ಯಕರ್ತರನ್ನು ಬಂಧಿಸಲು ಸೂಚಿಸಿದರು. ಇದರಿಂದ ಕೆರಳಿದ ನಕ್ಸಲರು ನಾಯ್ಡು ಹತ್ಯೆಗೆ ಸಂಚು ರೂಪಿಸಿದರು. 1998 ರಲ್ಲಿ ಕರೀಂನಗರ ಜಿಲ್ಲೆಯೊಂದರಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವ ಸಂದರ್ಭದಲ್ಲಿ ಸ್ಪೋಟಕಗಳನ್ನು ಇಡಲಾಗಿದ್ದ ಎತ್ತಿನ ಗಾಡಿಯೊಂದನ್ನು ರಸ್ತೆ ಬದಿ ನಿಲ್ಲಿಸಿ  ನಾಯ್ಡ ಅವರ ಕಾರು ಹಾಯ್ದು ಹೋಗುವಾಗ ಸ್ಪೋಟಿಸಲು ನಕ್ಸಲರು ಯೋಜನೆ ರೂಪಿಸಿದ್ದರು. ಆದರೆ, ಪೊಲೀಸರ ಮುಂಜಾಗ್ರತಾ ಕ್ರಮದಿಂದ ಬಾಂಬುಗಳು ಪತ್ತೆಯಾದ ಕಾರಣ ಆ ದಿನ ಚಂದ್ರಬಾಬು ನಾಯ್ಡುರವರ ಪ್ರಾಣ ಉಳಿಯಿತು.

ಪ್ರಜಾಸಮರ ದಳ ತನ್ನ ಕಾರ್ಯ ಚಟುವಟಿಕೆಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಪೀಪಲ್ಸ್ ಆರ್ಮಿ ಗ್ರೂಪ್ (ಪಿ.ಜಿ.ಎ.) ಎಂಬ ಇನ್ನೊಂದು ಹೋರಾಟದ ಪಡೆಯನ್ನು 2000ದ ಡಿಸಂಬರ್ ತಿಂಗಳಿನಲ್ಲಿ ಹುಟ್ಟುಹಾಕಿತು. ಇದಕ್ಕೆ ಶ್ರೀಲಂಕಾದ ಎಲ್.ಟಿ.ಟಿ. ಸಂಘಟನೆಯ ಕಾರ್ಯಯೋಜನೆ ಪರೋಕ್ಷವಾಗಿ ಪ್ರೇರಣೆಯಾಗಿತ್ತು. ಈ ಬೆಳವಣಿಗೆಯಿಂದ ವಿಚಲಿತಗೊಂಡ ನಾಯ್ಡು ಆಂಧ್ರ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಯನ್ನು ಬುಡಸಮೇತ ಕಿತ್ತೊಗೆಯಬೇಕೆಂದು ನಿರ್ಧರಿಸಿದರು. ಈ ಕಾರಣಕ್ಕಾಗಿ ಆಂಧ್ರ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದರು. ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದ ಪೊಲೀಸರು ನಕ್ಸಲ್ ನಾಯಕರನ್ನು ನಿರಂತರ ಬೇಟೆಯಾಡಿ ಕೊಂದರು. ಪೊಲೀಸರ ಈ ಆಕ್ರೋಶಕ್ಕೆ ಒಂದು ಬಲವಾದ ಕಾರಣವಿತ್ತು.

1989ರಲ್ಲಿ ನಕ್ಸಲ್ ಚಟುವಟಿಕೆಯ ನಿಗ್ರಹಕ್ಕೆ ಆಂಧ್ರ ಸರ್ಕಾರ ವಿಶೇಷ ಪಡೆಯೊಂದನ್ನು ರೂಪಿಸಿ, ಅದರ ನೇತೃತ್ವವನ್ನು ಹಿರಿಯ ಪೊಲೀಸ್ ಅಧಿಕಾರಿ ಕೆ.ಎಸ್.ವ್ಯಾಸ್ ಅವರಿಗೆ ವಹಿಸಿತ್ತು. ರಾಷ್ಟ್ರೀಯ ಭದ್ರತಾ ಕಮಾಂಡೋ ಪಡೆಯ ಮಾದರಿಯಲ್ಲಿ ಪೊಲೀಸರನ್ನು ತಯಾರು ಮಾಡಲು ವ್ಯಾಸ್ ಅವರು ಅರಣ್ಯದ ಮಧ್ಯೆ ತರಬೇತಿ ಶಿಬಿರ ಆರಂಭಿಸಿ, ಮಿಲಿಟರಿ ಅಧಿಕಾರಿಗಳ ಮೂಲಕ ಆಂಧ್ರ ಪೊಲೀಸರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಈ ತರಬೇತಿ ಮತ್ತು ನಕ್ಸಲ್ ನಿಗ್ರಹ ಪಡೆ ಸೇರುವ ಪೊಲೀಸರಿಗೆ ತಮ್ಮ ವೇತನದ ಶೇ. 60 ರಷ್ಟು ಹೆಚ್ಚು ವೇತನ ನೀಡುವುದಾಗಿ ಆಂಧ್ರ ಸರ್ಕಾರ ಘೋಷಿಸಿತು.

ಆಂಧ್ರ ಸರ್ಕಾರದ ಈ ಯೋಜನೆಗೆ ಹಿಂಸೆಯ ಮೂಲಕ ಪ್ರತಿಕ್ರಿಯಿಸಿದ ನಕ್ಸಲರು 2001ರಲ್ಲಿ ಚಿತ್ತೂರು ಬಳಿ ಚಂದ್ರಬಾಬು ನಾಯ್ಡು ಮಾಲಿಕತ್ವದ ಹೆರಿಟೇಜ್ ಹಾಲು ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿದರು. ಇದಲ್ಲದೆ ಚಿತ್ತೂರು ಕೈಗಾರಿಕಾ ವಲಯದಲ್ಲಿ ಇರುವ ಟಾಟಾ ಟೀ ಕಂಪನಿ ಮತ್ತು ಕೋಕಾಕೋಲಾ ಕಂಪನಿಯ ಮೇಲೆ ದಾಳಿ ನಡೆಸಿದರು. ಕೇಂದ್ರ ಸಚಿವರೊಬ್ಬರ ಗ್ರಾನೈಟ್ ಉದ್ದಿಮೆಯ ಘಟಕವನ್ನೂ ಸಹ ನಾಶಪಡಿಸಿದರು. ಈ ಸಂದರ್ಭದಲ್ಲಿ ವಿಚಲಿತಗೊಂಡ ಆಂಧ್ರ ಸರ್ಕಾರ ನಕ್ಸಲರನ್ನು ಮಾತುಕತೆಗೆ ಆಹ್ವಾನಿಸಿತು. 2002 ರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸತತವಾಗಿ ನಡೆದ ಮೂರು ಸುತ್ತಿನ ಮಾತುಕತೆಗಳು ವಿಫಲವಾದವು. ಕೇಂದ್ರ ಸರ್ಕಾರ ಕೂಡ 2003ರ ಫೆಬ್ರವರಿ 8ರಂದು ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸುಧೀರ್ಘವಾಗಿ ಚರ್ಚಿಸಿತು. ನಕ್ಸಲರ ಪ್ರಭಾವವನ್ನು ಕುಗ್ಗಿಸುವ ನಿಟ್ಟಿನಲ್ಲಿ ನಕ್ಸಲ್ ಪೀಡಿತ ರಾಜ್ಯಗಳ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಪ್ರತಿ ವರ್ಷ 15 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿತು.

ತಮ್ಮ ಪ್ರತಿರೋಧವನ್ನು ತೀವ್ರಗೊಳಿಸಿದ ನಕ್ಸಲ್ ಕಾರ್ಯಕರ್ತರು 2003ರ ಮಾರ್ಚ್ 23ರಂದು ಅನಂತಪುರದ ಬಳಿ ಇರುವ ತಂಪು ಪಾನೀಯ ತಯಾರಿಕೆಯಲ್ಲಿ ದೈತ್ಯ ಬಹುರಾಷ್ಟ್ರೀಯ ಕಂಪನಿಯಾದ ಪೆಪ್ಸಿ ಘಟಕದ ಮೇಲೆ ದಾಳಿ ಮಾಡಿದರು. ಮೇ 28ರಂದು ರಾಯಾವರಂ ಎಂಬ ಗ್ರಾಮದಲ್ಲಿ ದೂರವಾಣಿ ಕೇಂದ್ರವನ್ನು ಧ್ವಂಸಗೊಳಿಸಿದರು. ಜುಲೈ ನಾಲ್ಕರಂದು ನಲ್ಗೊಂಡ ಜಿಲ್ಲೆಯ ದೊಂಡಪಡು ಎಂಬ ಗ್ರಾಮದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ದಾಳಿ ನಾಲ್ಕು ಲಕ್ಷ ರೂ ನಗದು ಮತ್ತು ಐವತ್ತು ಲಕ್ಷ ರೂಪಾಯಿ ಮೌಲ್ಯದ ಒಂಬತ್ತು ಕೆ.ಜಿ. ಚಿನ್ನವನ್ನು ದೋಚುವುದರ ಮೂಲಕ ನಕ್ಸಲ್ ಹೋರಾಟ ರಾಯಲಸೀಮಾ (ಕಡಪ,  ಕರ್ನೂಲು, ಅನಂತಪುರ, ಚಿತ್ತೂರು ಜಿಲ್ಲೆಗಳು) ಪ್ರದೇಶಕ್ಕೂ ಕಾಲಿಟ್ಟಿದೆ ಎಂಬ ಸಂದೇಶವನ್ನು ಆಂಧ್ರ ಸರ್ಕಾರಕ್ಕೆ ರವಾನಿಸಿದರು. ಇದೂ ಸಾಲದೆಂಬಂತೆ ಪೊಲೀಸ್ ಅಧಿಕಾರಿ ವ್ಯಾಸ್ ಅವರನ್ನು ತಮ್ಮ ಹಿಟ್ ಲಿಸ್ಟ್‌‌ನಲ್ಲಿ ದಾಖಲಿಸಿಕೊಂಡಿದ್ದ ನಕ್ಸಲರು 1993ರಲ್ಲಿ ಹೈದರಾಬಾದ್ ನಗರದ ಅವರ ನಿವಾಸದ ಮುಂದಿ ಕೈತೋಟದಲ್ಲಿ ಬೆಳಗಿನ ಜಾವ ವ್ಯಾಯಾಮ ಮಾಡುತ್ತಿದ್ದ ಸಮಯದಲ್ಲಿ ಹತ್ಯೆ ಮಾಡಿದರು.

ಇವುಗಳಿಗೆ ತೃಪ್ತರಾಗದ ಪ್ರಜಾಸೈನ್ಯ ದಳ (ಪಿ.ಜಿ.ಎ.) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹತ್ಯೆಗೆ ಮತ್ತೇ ಯೋಜನೆ ರೂಪಿಸಿತು. 1993 ರ ಅಕ್ಟೋಬರ್ ತಿಂಗಳಿನಲ್ಲಿ ನಾಯ್ಡು ತಿರುಪತಿಗೆ ಭೇಟಿ ನೀಡುವ ಸಮಯದಲ್ಲಿ ರಸ್ತೆಯಲ್ಲಿ ನೆಲಬಾಂಬ್ ಇರಿಸಿ ಕೊಲ್ಲಲು ಪ್ರಯತ್ನಿಸಲಾಯಿತು. ತಿರುಮಲ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಅನ್ನು ಸ್ಪೋಟಿಸಲಾಯಿತಾದರೂ, ನಾಯ್ಡು ಪ್ರಯಾಣಿಸುತ್ತಿದ್ದ ಕಾರಿನ ಮುಂದಿನ ಚಕ್ರ ಮುಂದೆ ಸಾಗಿ, ಕಾರಿನ ಹಿಂದಿನ ಚಕ್ರದ ಬಳಿ ಬಾಂಬ್ ಸಿಡಿಯಿತು. ಮುಂದಿನ ಆಸನದಲ್ಲಿ ಕುಳಿತ್ತಿದ್ದ ನಾಯ್ಡು ಪ್ರಾಣಪಾಯದಿಂದ ಪಾರಾದರೂ ಕೂಡ ಅವರ ಭುಜಕ್ಕೆ ಬಲವಾದ ಪೆಟ್ಟು ಬಿದ್ದು ಪ್ರಜ್ಞಾಹೀನರಾದರು. ವೆಂಕಟೇಶ್ವರನ ದಯೆಯಿಂದ ಉಳಿದುಕೊಂಡೆ ಎಂದು ಹೇಳಿದ ಚಂದ್ರಬಾಬು ನಾಯ್ಡುಗೆ ಆಂಧ್ರದಲ್ಲಿ ನಕ್ಸಲಿಯರ ಬಗ್ಗೆ ಎಷ್ಟೊಂದು ಜೀವಭಯವಿದೆ ಎಂದರೆ, ಇವತ್ತಿಗೂ ಅವರು ಗೋದಾವರಿ ನದಿ ದಾಟಿ ಉತ್ತರ ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಿಗೆ ಹೋಗಲು ಹೆದರುತ್ತಾರೆ. ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಅವರು ಭಾಗವಹಿಸುವುದಿಲ್ಲ. ಈ ಘಟನೆ ನಡೆದ ಒಂಬತ್ತು ವರ್ಷದ ನಂತರವೂ ಕೂಡ ನಕ್ಸಲರ ಹಿಟ್ ಲಿಸ್ಟ್‌ನಲ್ಲಿ ಚಂದ್ರಬಾಬು ನಾಯ್ಡು ಎಂಬ ಹೆಸರು ಮೊದಲನೇ ಸ್ಥಾನದಲ್ಲಿದೆ. ಏಕೆಂದರೆ, ನಾಯ್ಡು ಹತ್ಯೆಗೆ ಸಂಚು ರೂಪಿಸಿದ್ದ ಹಿರಿಯ ಮಾವೋವಾದಿ ನಾಯಕ ಸಂಡೆ ರಾಜಮೌಳಿಯನ್ನು 2007ರಲ್ಲಿ ಬಂಧಿಸದ ಆಂಧ್ರ ಪೊಲೀಸರು ಎನ್‌‍ಕೌಂಟರ್ ಮೂಲಕ ಮುಗಿಸಿದರು. ಈ ನಾಯಕನ ಸುಳಿವಿಗಾಗಿ ಆಂಧ್ರ ಸರ್ಕಾರ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

ಆಂಧ್ರದಲ್ಲಿ ಪ್ರಜಾಸಮರಂ ಮತ್ತು ಅದರ ಅಂಗ ಘಟಕಗಳಿಂದ ತೀವ್ರತರವಾದ ಹಿಂಸಾತ್ಮಕ ಚಟುವಟಿಕೆ ನಡೆಯಲು ಅದರ ಸಂಸ್ಥಾಪಕ ಕೊಂಡಪಲ್ಲಿ ಸೀತಾರಾಮಯ್ಯನವರ ಅನುಪಸ್ಥಿತಿ ಕೂಡ ಪರೋಕ್ಷವಾಗಿ ಕಾರಣವಾಯಿತು. ಈ ನಡುವೆ ಕೊಂಡಪಲ್ಲಿಯವರ ವಿಚಾರಗಳಿಗೆ ಒಪ್ಪದ ಬಿಸಿರಕ್ತದ ಯುವ ನಾಯಕರು ಕೊಂಡಪಲ್ಲಿ ಅವರನ್ನು 1991ರಲ್ಲಿ ಸಂಘಟನೆಯಿಂದ ಹೊರಹಾಕಿದರು. ತನ್ನ ಒಡನಾಡಿ ಕೆ.ಜಿ. ಸತ್ಯಮೂರ್ತಿಯವರನ್ನು ಸೈದ್ಧಾಂತಿಕ ಭಿನ್ನಾಭಿಪ್ರಯಾದ ಮೇಲೆ ಹೊರಹಾಕಿದ್ದ ಕೋಡಪಲ್ಲಿ ಅದೇ ರೀತಿಯಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯಿಂದ ವೃದ್ಧಾಪ್ಯದಲ್ಲಿ ಹೊರದಬ್ಬಿಸಿಕೊಂಡರು. ಪಾರ್ಕಿಸನ್ ಕಾಯಿಲೆಗೆ ತುತ್ತಾಗಿದ್ದ ಅವರು 1992ರಲ್ಲಿ ತಮ್ಮೂರಾದ ಜೊನ್ನಪಡು ಗ್ರಾಮದ ಮನೆಯಲ್ಲಿದ್ದಾಗ ಆಂಧ್ರ ಪೊಲೀಸರಿಂದ ಬಂಧಿತರಾದರು. ನಾಲ್ಕು ವರ್ಷಗಳ ನಂತರ ಆಂಧ್ರ ಸರ್ಕಾರ ವೃದ್ಧಾಪ್ಯದ ಹಿನ್ನಲೆ ಮತ್ತು ಮಾನವೀಯ ನೆಲೆಯಲ್ಲಿ ಅವರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ರದ್ದು ಪಡಿಸಿ ಬಿಡುಗಡೆ ಮಾಡಿತು. 2002ರ ಏಪ್ರಿಲ್ ತಿಂಗಳಿನ 12 ರಂದು ತಮ್ಮ 87 ನೇ ವಯಸ್ಸಿನಲ್ಲಿ ವಿಜಯವಾಡದ ತಮ್ಮ ಮೊಮ್ಮಗಳ ಮನೆಯಲ್ಲಿ ಕೊಂಡಪಲ್ಲಿ ಸೀತಾರಾಮಯ್ಯ ನಿಧನರಾದರು. ಹತ್ತು ವರ್ಷಗಳ ನಂತರ 2012ರ ಅದೇ ಏಪ್ರಿಲ್ 8 ರಂದು ಅವರ ಒಡನಾಡಿ ಕೆ.ಜಿ.ಸತ್ಯಮೂರ್ತಿ ಸಹ ವಿಜಯವಾಡದ ಸಮೀಪದ ಹಳ್ಳಿಯಲ್ಲಿ ಲಾರಿ ಚಾಲಕನಾಗಿದ್ದ ಅವರ ಕಿರಿಯ ಮಗನ ಮನೆಯಲ್ಲಿದ್ದಾಗ 84 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಮೃತಪಟ್ಟರು. ಇದೇ 2012ರ ಏಪ್ರಿಲ್ ಕೊನೆಯ ವಾರ ಹೈದರಾಬಾದ್ ನಗರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯನ್ನು ಹುಟ್ಟು ಹಾಕಿದ ಇಬ್ಬರು ಮಹಾನ್ ನಾಯಕರ ನೆನಪಿಗೆ ಯಾವುದೇ ಭಾಷಣಗಳಿಲ್ಲದೆ, ಹೋರಾಟದ ಕ್ರಾಂತಿ ಗೀತೆಗಳನ್ನು ಹಾಡುವುದರ ಮೂಲಕ ಗೌರವ ಸಮರ್ಪಿಸಿದರು.

ಆಂಧ್ರ ಪ್ರದೇಶದಲ್ಲಿ 2003ರ ವೇಳೆಗೆ, 23 ವರ್ಷಗಳ ಅವಧಿಯಲ್ಲಿ (1980-2003) ಸರ್ಕಾರ ಮತ್ತು ನಕ್ಸಲಿಯರ ನಡುವೆ ನಡೆದ ಸಂಘರ್ಷದಲ್ಲಿ 6 ಸಾವಿರ ಮಂದಿ ಮೃತಪಟ್ಟಿದ್ದರು. ಇದರಲ್ಲಿ ಆಂಧ್ರ ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ 1800 ನಕ್ಸಲ್ ನಾಯಕರನ್ನು ಹತ್ಯೆಗೈಯ್ದಿದ್ದರು. ಅಲ್ಲದೇ ನಕ್ಸಲರ ಗುಂಡಿಗೆ 1100ಕ್ಕು ಹೆಚ್ಚು ಪೊಲೀಸರು ಬಲಿಯಾಗಿದ್ದರು. ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅತಿ ಹೆಚ್ಚು ಎನ್‌‍ಕೌಂಟರ್‌ಗಳು ಜರುಗಿದ್ದವು. ಈ ನಡುವೆ ನಕ್ಸಲ್ ಸಂಘಟನೆಯಲ್ಲಿ ಮಹತ್ತರ ಬೆಳವಣಿಗೆಯೊಂದು ಜರುಗಿತು. ಎಂ.ಸಿ.ಸಿ. (ಮಾವೋ ಕಮ್ಯೂನಿಷ್ಟ್ ಸೆಂಟರ್) ಎಂದು ಪ್ರತ್ಯೇಕ ಗೊಂಡಿದ್ದ ಬಣ ಪೀಪಲ್ಸ್ ವಾರ್ ಗ್ರೂಪ್ ಜೊತೆ 2004ರಲ್ಲಿ ಸೇರ್ಪಡೆಗೊಂಡಿತು. ಇದರಿಂದಾಗಿ ಮಧ್ಯಭಾರತ ಮತ್ತು ಪೂರ್ವ ಭಾಗದ ರಾಜ್ಯಗಳ ಮೇಲೆ ಪೀಪಲ್ಸ್ ವಾರ್ ಗ್ರೂಪ್ ಬಣದ ಪ್ರಾಬಲ್ಯ ಮತ್ತಷ್ಟು ಹೆಚ್ಚಾಯಿತು.

2004ರಲ್ಲಿ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಸರ್ಕಾರ ಪತನಗೊಂಡು, ಡಾ.ವೈ.ಎಸ್. ರಾಜಶೇಖರರೆಡ್ಡಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು. ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾದ ಕೂಡಲೇ ಆಂಧ್ರದ ನಕ್ಸಲ್ ಸಂಘಟನೆಗಳ ಮೇಲಿದ್ದ ನಿಷೇಧವನ್ನು ತೆಗೆದು ಹಾಕಿದರು. ಎಲ್ಲಾ ಸಂಘಟನೆಯ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದರು. 2004ರ ಅಕ್ಟೋಬರ್ 15 ರಿಂದ 18 ರವರೆಗೆ ಹೈದರಾಬಾದ್ ನಗರದಲ್ಲಿ ನಡೆದ ಮಾತುಕತೆಯಲ್ಲಿ ಪೀಪಲ್ಸ್ ವಾರ್ ಗ್ರೂಪ್‌‍ನ ಕಾರ್ಯದರ್ಶಿ ರಾಮಕೃಷ್ಣ ಅಲಿಯಾಸ್ ಅಕ್ಕಿರಾಜು ಮತ್ತು ಆಂಧ್ರ-ಒರಿಸ್ಸಾ ಗಡಿಭಾಗದ ಹೊಣೆಹೊತ್ತಿದ್ದ ಸುಧಾಕರ್ ಮತ್ತು ಉತ್ತರ ತೆಲಂಗಾಣ ಭಾಗದಿಂದ ಜಿ.ರವಿ ಹಾಗೂ ಜನಶಕ್ತಿ ಸಂಘಟನೆಯ ನಾಯಕರಾದ ಅಮರ್ ಮತ್ತು ರಿಯಾಜ್ ಸೇರಿದಂತೆ ಹಲವು ಪ್ರಮುಖರು ಮಾತುಕತೆಯಲ್ಲಿ ಪಾಲ್ಗೊಂಡರು. ಆಂಧ್ರ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ನಂತರ ನಾಗರೀಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದ ಎಸ್.ಆರ್. ಶಂಕರನ್ ಉಭಯ ಬಣಗಳ ನಡುವೆ ಮಧ್ಯಸ್ತಿಕೆ ವಹಿಸಿದ್ದರು. ನಕ್ಸಲ್ ಸಂಘಟನೆಗಳ ನಾಯಕರು ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇರಿಸಿದರು.

ಅವುಗಳೆಂದರೆ:

  1. ಸರ್ಕಾರ ಸ್ವತಂತ್ರ ಆಯೋಗವನ್ನು ರಚಿಸಿ ಸರ್ಕಾರಿ ಭೂಮಿಯನ್ನು ಗುರುತಿಸಬೇಕು.
  2. ಈ ಭೂಮಿಯನ್ನು ಆದಿವಾಸಿಗಳಿಗೆ ಮತ್ತು ಭೂರಹಿತ ಕೃಷಿಕೂಲಿಕಾರ್ಮಿಕರಿಗೆ ಹಂಚಬೇಕು.
  3. ಆಂಧ್ರ ಪ್ರದೇಶದಲ್ಲಿ ವಿಶ್ವಬ್ಯಾಂಕ್ ನೆರವಿನಿಂದ ನಡೆಯುತ್ತಿರುವ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಬೇಕು.

ಈ ಬೇಡಿಕೆಗಳನ್ನು ಆಲಿಸಿದ  ಸರ್ಕಾರ ತಕ್ಷಣಕ್ಕೆ ಯಾವುದೇ ಆಶ್ವಾಸನೆ ನೀಡದೇ ಬೇಡಿಕೆಗಳ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿ ತೀರ್ಮಾನ ಕೈಗೊಳ್ಳುವುದಾಗಿ  ತಿಳಿಸಿತು. ಶಾಂತಿ ಮಾತುಕತೆಗಾಗಿ ಮೂರು ತಿಂಗಳ ಕಾಲ ಘೋಷಿಸಲಾಗಿದ್ದ ಕದನ ವಿರಾಮ ಮುಕ್ತಾಯದ ಹಂತಕ್ಕೆ ಬಂದರೂ ಕೂಡ ಆಂಧ್ರ ಸರ್ಕಾರದಿಂದ ನಕ್ಸಲರ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಮಾತುಕತೆ ವಿಫಲವಾಯಿತು. ಆದರೆ, ಇದರಿಂದ ಆಂಧ್ರ ಪೊಲೀಸರಿಗೆ ಮಾತ್ರ ಉಪಯೋಗವಾಗಿತ್ತು. ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಹಲವಾರು ನಾಯಕರ ಭಾವಚಿತ್ರಗಳನ್ನ ಈ ಸಂದರ್ಭದಲ್ಲಿ ಸೆರೆ ಹಿಡಿದರು.

ಸರ್ಕಾರದೊಂದಿಗೆ ಮಾತುಕತೆ ವಿಫಲಗೊಂಡ ನಂತರ 2004ರ ಡಿಸಂಬರ್ ತಿಂಗಳಿನಲ್ಲಿ ಹೈದರಾಬಾದ್ ಸಮೀಪದ ಘಾಟ್‌ಶೇಖರ್ ಎಂಬ ಪಟ್ಟಣದ ಬಳಿ ಆಂಧ್ರ ಸರ್ಕಾರದ ಪಂಚಾಯತ್ ಖಾತೆ ಸಚಿವ ಎ. ಮಾಧವರೆಡ್ಡಿ ನಕ್ಸಲರ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾಯಿತು. ನಂತರ 2005ರ ಮಾರ್ಚ್ 11ರಂದು ಗುಂಟೂರು ಜಿಲ್ಲೆಯ ಚಿಲ್ಕುರಿಪೇಟ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ನಕ್ಸಲಿಯರು ಏಳು ಮಂದಿ ಪೊಲೀಸರ ಹತ್ಯೆಗೆ ಕಾರಣರಾದರು. ಇದಕ್ಕೆ ಪ್ರತಿಯಾಗಿ ಆಂಧ್ರ ಪೊಲೀಸರು 2005 ರ ಏಪ್ರಿಲ್ 5 ರಂದು ಜನಶಕ್ತಿ ಸಂಘಟನೆಯ ನಾಯಕ ರಿಯಾಜ್‌‍ನನ್ನು ಎನ್‌ಕೌಂಟರ್ ಮೂಲಕ ಮುಗಿಸಿದರು. ಇದರಿಂದ ರೊಚ್ಚಿಗೆದ್ದ ನಕ್ಸಲ್ ಸಂಘಟನೆಗಳು ಎನ್‌ಕೌಂಟರ್‌ಗೆ ಪ್ರತಿಯಾಗಿ 2005ರ ಆಗಸ್ಟ್ 15ರಂದು ಮೆಹಬೂಬ್ ನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ನರಸರೆಡ್ಡಿ ಸೇರಿದಂತೆ ಎಂಟು ಮಂದಿ ಕಾಂಗ್ರೇಸ್ ಕಾರ್ಯಕರ್ತರನ್ನು ಹತ್ಯೆಮಾಡಿದರು. ಅಂತಿಮವಾಗಿ 2005ರ ಆಗಸ್ಟ್ 17ರಂದು ಆಂಧ್ರಾದ್ಯಂತ ಪೀಪಲ್ಸ್ ವಾರ್ ಗ್ರೂಪ್ ಸೇರಿದಂತೆ ಎಲ್ಲಾ ಸಂಘಟನೆಗಳ ಮೇಲೆ ಮತ್ತೇ ನಿಷೇಧ ಹೇರಲಾಯಿತು. ಮತ್ತೇ ಎರಡನೇ ಬಾರಿ ಆಂಧ್ರದಲ್ಲಿ ಅಧಿಕಾರದ ಗದ್ದುಗೆಯೇರಿದ ಡಾ. ರಾಜಶೇಖರ್ ರೆಡ್ಡಿ ನಂತರದ ಕೆಲವೇ ದಿನಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಇದರಿಂದಾಗಿ ಸರ್ಕಾರ ಮತ್ತು ನಕ್ಸಲರ ನಡುವಿನ ಸಂಧಾನದ ಬಾಗಿಲು ಮುಚ್ಚಿ ಹೊಯಿತು.

ಈ ನಡುವೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಪ್ರತ್ಯೇಕ ತೆಲಂಗಣಾ ರಾಜ್ಯಕ್ಕೆ ಹೋರಾಟ ತೀವ್ರಗೊಂಡಿದ್ದರಿಂದ ಇಡೀ ರಾಜ್ಯದ ಎಲ್ಲಾ ಜನತೆಯ ಗಮನ ಅತ್ತ ಹರಿಯಿತು. ಇತ್ತೀಚೆಗೆ ಆಂಧ್ರದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಸಂಘರ್ಷ ಕಡಿಮೆಯಾಗಿದ್ದು, ಅಘೋಷಿತ ಕದನ ವಿರಾಮ ಏರ್ಪಟ್ಟಂತೆ ಕಾಣಬರುತ್ತಿದೆ. ನಕ್ಸಲ್ ಸಂಘಟನೆಯ ನಾಯಕರು ತೆಲಂಗಣಾ ಹೋರಾಟಕ್ಕೆ ಬೆಂಬಲ ಸೂಚಿಸಿ ತಮ್ಮ ಕಾರ್ಯಚಟುವಟಿಕೆಯನ್ನು ಮಧ್ಯಪ್ರದೇಶ, ಛತ್ತೀಸ್‌ಘಡ ನಡುವಿನ ದಂಡಕಾರಣ್ಯ ಮತ್ತು ಬಸ್ತಾರ್ ಅರಣ್ಯ ಪ್ರದೇಶದ ಆದಿವಾಸಿಗಳಿಗೆ ಮೀಸಲಿರಿಸಿದ್ದಾರೆ. ಆಂಧ್ರದ ಕರೀಂನಗರ, ನಲ್ಗೊಂಡ, ವಾರಂಗಲ್. ಶ್ರೀಕಾಕುಳಂ, ಅದಿಲಾಬಾದ್, ಕೃಷ್ಣಾ, ಗೋದಾವರಿ, ಕಮ್ಮಂ ಜಿಲ್ಲೆಗಳಲ್ಲಿ ಇವತ್ತಿಗೂ ನಕ್ಸಲರ ಪ್ರಾಬಲ್ಯವಿದ್ದು, ಸರ್ಕಾರದ ಎಲ್ಲಾ ಕಾಮಗಾರಿ ಕೆಲಸಗಳ ಗುತ್ತಿಗೆದಾರರು ಮತ್ತು  ಅಬ್ಕಾರಿ ಗುತ್ತಿಗೆದಾರರ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಅಬ್ಕಾರಿ ಗುತ್ತಿಗೆಯನ್ನು ತಾವೇ ನಿಭಾಯಿಸುತಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಬಳಿ ಗೋದಾವರಿ ನದಿಗೆ ಪೊಲಾವರಂ ಬಳಿ ನಿರ್ಮಿಸಲು ಉದ್ದೇಶಿಲಾಗಿರುವ ಇಂದಿರಾ ಸಾಗರ ಅಣೆಕಟ್ಟಿನಿಂದ ಎರಡು ಲಕ್ಷ ಆದಿವಾಸಿ ಕುಟುಂಬಗಳು ಅತಂತ್ರರಾಗುವ ಸಂಭವವಿದೆ. ಈ ಅಣೆಕಟ್ಟಿನ ನಿರ್ಮಾಣಕ್ಕೆ ಪೀಪಲ್ಸ್ ವಾರ್ ಸಂಘಟನೆಯ ಈಗಿನ ನಾಯಕ ಗಣಪತಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಧ್ಯದ ಸ್ಥಿತಿಯಲ್ಲಿ ಆಂಧ್ರದಲ್ಲಿ ನಕ್ಸಲ್ ಹೋರಾಟ ಸ್ಥಗಿತಗೊಂಡಂತೆ ಭಾಸವಾದರೂ ಅದು ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವ ಕ್ಷಣದಲ್ಲಾದರೂ ಅಗ್ನಿಪರ್ವತದಂತೆ ಬಾಯಿ ತೆರೆಯಬಹುದು.

(ಮುಂದುವರಿಯುವುದು)