Category Archives: ಮಹಾದೇವ ಹಡಪದ

“ಹುಲಿಯ ನೆರಳಿನೊಳಗೆ – ಅಂಬೇಡ್ಕರವಾದಿಯ ಆತ್ಮಕಥೆ” ಒಂದು ಟಿಪ್ಪಣಿ


-ಮಹಾದೇವ ಸಾಲಾಪೂರ


ಉಚಲ್ಯಾ, ಅಕ್ರಮಸಂತಾನ, ಗಬಾಳ, ಬಹಿಷ್ಕೃತ, ವಾಲ್ಮೀಕಿ, ಬಲುತ, ನೋವು ತುಂಬಿದ ಬದುಕು ಹೀಗೆ ಮರಾಠಿಯಿಂದ ಅನುವಾದಗೊಂಡ ಹಾಗೂ ಕನ್ನಡದಲ್ಲಿ ಪ್ರಕಟವಾದ ದಲಿತ ಆತ್ಮಕತೆಗಳ ಬಾಲ್ಯ ಮತ್ತು ಬದುಕಿನ ಚಿತ್ರಣಗಳು ವಿಭಿನ್ನ ಅನುಭವ ಜಗತ್ತನ್ನು ನಿರ್ಮಿಸಿಕೊಟ್ಟಿವೆ. ಪ್ರತಿಯೊಬ್ಬರ ಬಾಲ್ಯವೂ ಅಸಮಾನ ಭಾರತದ ಚರಿತ್ರೆಯನ್ನು ಹೇಳುತ್ತದೆ. Huliya Neralu-2ಕುಲಮೂಲದ ಕಸುಬುಗಳು, ಕಸುಬಿನ ದಾರುಣ ಚಿತ್ರಣ, ಹುಟ್ಟಿನಿಂದ ಗುರುತಿಸಲ್ಪಡುವ ಜಾತಿಯೂ, ಆಯಾ ಪರಿಸರಕ್ಕೆ ಸಂಬಂಧಪಟ್ಟ ಆಚರಣೆಗಳು, ಬಂಧು-ಬಾಂಧವರ ಸಂಬಂಧಗಳು, ಬಡತನ, ಹಸಿವು, ಶೋಷಣೆ, ಕಲಿಕೆಗಾಗಿ ಪರಿತಪಿಸುವ ರೀತಿಯೂ, ಆಧುನಿಕ ಶಿಕ್ಷಣವ್ಯವಸ್ಥೆಯಲ್ಲಿನ ಶಾಲಾ ಆವರಣದಲ್ಲಿ ಆಚರಿಸಲ್ಪಡುವ ಅಸ್ಪೃಶ್ಯತೆಯೂ ಹೀಗೆ ಭೀಕರವಾದ ತಾರತಮ್ಯದ ಜಗತ್ತನ್ನು ದಲಿತ ಆತ್ಮಕತೆಗಳಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಎಲ್ಲ ಆತ್ಮಕತೆಗಳ ಬಾಲ್ಯವು ಒಂದೆ ಪಡಿಯಚ್ಚಿನಲ್ಲಿ ಎರಕಹೊಯ್ದಂತೆ ಭಾಸವಾದರೂ ಕಟ್ಟಿಕೊಡುವ ಪರಿಸರದ ನಿವೇದನೆ ಅಸ್ಪೃಶ್ಯ ಭಾರತದ ಒಂದೊಂದು ಮಗ್ಗಲುಗಳನ್ನು ಶೋಧಿಸುತ್ತವೆ. ಸಾಂಪ್ರದಾಯಿಕ ಪ್ರಜಾಪ್ರಭುತ್ವವು ಹಳ್ಳಿಗಳಲ್ಲಿತ್ತು. ಅದೇ ಆಶಯದಲ್ಲಿ ಸಂವಿಧಾನವೂ ರಚನೆಯಾಗಬೇಕಿತ್ತು ಎಂದು ಹಂಬಲಿಸುವವರು ದಲಿತ ಅಸ್ಮಿತೆಯ ಈ ಬಾಲ್ಯದ ಕುರುಹುಗಳನ್ನು ಕೊಂಚ ಗಮನಿಸಬೇಕು.

ಈ ದೇಶದಲ್ಲಿ ಪವಿತ್ರವಾದದ್ದು ಒಂದೇ, ಅದು ಸಂವಿಧಾನ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಳ್ಳುತ್ತಾನೆ ಎಂದಾದರೆ ಅವನಿಗೆ ಅಂಬೇಡ್ಕರ್ ಅವರು ಯಾವದೋ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಆಧುನಿಕ  ಭಾರತದ ನಿರ್ಮಾತೃ, ಅಪ್ರತಿಮ ದೇಶಪ್ರೇಮಿ, ಪಾರಂಪರಿಕವಾಗಿ ಅಸ್ತಿತ್ವದಲ್ಲಿದ್ದ ಸಂವಿಧಾನವನ್ನು ಭಂಜಿಸಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನದ ಮೂಲಕ ಹೊಸಗುರುತನ್ನು ನೀಡಿದ ಮಹಾತ್ಮ ಎಂಬುದನ್ನು ಮಣಗಾನುತ್ತಾನೆ. (ಆಗ ಮನೆಯೊಳಗೆ ತೂಗುಹಾಕಿರುವ ಅಂಬೇಡ್ಕರ್ ಅವರ ಫೋಟೋ ನೋಡಿ ನೀವು ಅವರಾ..? ಎನ್ನುವ ಹೊಸ ಐಡೆಂಟಿಟಿಯ ವಿಧಾನ ಇಲ್ಲವಾಗಬಹುದು.) ಆ ಹುಲಿಯ ಹೆಜ್ಜೆಗುರುತುಗಳನ್ನು ಇವತ್ತಿನ ಈ ಜಾತಿಸಂಘಟಣೆಯ ಜಂಝಾವಾತಗಳ ನಡುವೆ ಮತ್ತೆಮತ್ತೆ  ಕೆದಕಬೇಕಿದೆ, ಅವರ ಆಲೋಚನೆಗಳನ್ನು ಈ ಹೊತ್ತಿಗೆ ತಕ್ಕಂತೆ ವಿಮರ್ಶಿಸಿ, ಆ ಅಧ್ಯಯನದ ಶಿಸ್ತನ್ನು, ಆ ನ್ಯಾಯನಿಷ್ಠುರ ವ್ಯಕ್ತಿತ್ವವನ್ನು ಹೆಚ್ಚು ಅರಿತುಕೊಳ್ಳುವ ಅಗತ್ಯವಿದೆ. ಈ ಅರಿವಿನಲ್ಲಿ ಭಾರತದ ಹೊಸ ಚಲನೆಯ ಆರಂಭವಾಗಿರುವುದರಿಂದ ಅಂಬೇಡ್ಕರ್ ಅವರ ಬದುಕು ಬರಹ ಭಾಷಣಗಳನ್ನು ನಾವು ಮತ್ತೆಮತ್ತೆ ಓದಿಕೊಳ್ಳುತ್ತಲೇ ಇರಬೇಕಾಗುತ್ತದೆ.

ಕೃಷಿವಿಜ್ಞಾನಿಯಾದ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ ಅಂಬೇಡ್ಕರವಾದಿಯ ಆತ್ಮಕಥೆ’ಯನ್ನು ಕನ್ನಡಕ್ಕೆ ಬಿ. ಶ್ರೀಪಾದರವರ  ಭಾವಾನುವಾದ ಮಾಡಿದ್ದಾರೆ.  ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಭಾರತದ ಕ್ರಾಂತಿಸೂರ್ಯರ ಬದುಕು ಮತ್ತು ಹೋರಾಟದ ಕುರಿತಾದ ಟಿಪ್ಪಣಿಗಳಿರುವುದರಿಂದ ಈ ಹೊತ್ತುಗೆ ಉಳಿದೆಲ್ಲ ಆತ್ಮಕತೆಗಳಿಗಿಂತ ಭಿನ್ನವಾಗಿದೆ.

ಅಂಬೇಡ್ಕರರ ನಂತರ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಪಡೆದ ಎರಡನೇ  ದಲಿತವ್ಯಕ್ತಿ ಎಂದೇ ಹೆಸರಾಗಿರುವ ಇವರ ಬದುಕಿನಲ್ಲೂ ಅಸ್ಪೃಶ್ಯ ಭಾರತದ ಅನುಭವಗಳೇ ತುಂಬಿದ್ದಾವೆ. ಆ ಎಲ್ಲ ಅಪಮಾನ, ನಿಂದೆ, ಬಡತನ, ಅಸಹಾಯಕತೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಛಲದ ಹುಲಿಯ ಹೆಜ್ಜೆಜಾಡಿನಲ್ಲಿ ನಡೆಯುವ ನಿಮ್ಗಾಡೆಯವರ ಬದುಕು ಮತ್ತು ಹೋರಾಟದ  ಭಾವಜಗತ್ತು ಸ್ವವಿಮರ್ಶಾ ಧಾಟಿಯಲ್ಲಿರುವುದರಿಂದ ತುಂಬ ಆಪ್ತವಾಗುತ್ತದೆ.

ಆತ್ಮಕತೆಯ ಮೊದಲ ಅಧ್ಯಾಯದ ಕೊನೆಯಭಾಗದಲ್ಲಿ ಅವರ ತಂದೆ ಹೇಳಿಬರೆಯಿಸಿದ ಭಾಷಣದಲ್ಲಿ ಭೀಮರಾವ ಅಂಬೇಡ್ಕರ್ ಅವರ ಹೆಸರನ್ನು ಕೇಳಿ ಪುಳಕಿತರಾಗುವ Young_Ambedkarನಿಮ್ಗಾಡೆಯವರ ಆತ್ಮಕತೆಯುದ್ದಕ್ಕೂ ಬಾಬಾಸಾಹೇಬರ ಛಲದ, ಆತ್ಮವಿಶ್ವಾಸದ, ಅಧ್ಯಯನ ಶಿಸ್ತಿನ, ಹೋರಾಟ ರೂಪಿಸಿದ ರೀತಿಗಳೆಲ್ಲವೂ ಪ್ರಭಾವೀಕರಿಸಿರುವುದನ್ನ ಚಿತ್ರಿಸಿದ್ದಾರೆ. ತೀರ ಖಾಸಗಿಯಾಗಿ ಅವರೊಂದಿಗೆ ಒಡನಾಡಿದ ಕ್ಷಣಗಳಂತೂ ನಾಮದೇವ ನಿಮ್ಗಾಡೆಯವರನ್ನು ರೂಪಿಸಿದ್ದಾವೆ. ನೆಹರೂ ಅವರನ್ನು ತರುಬಿ ಕೇಳುವ ಪ್ರಶ್ನೆ, ಗಾಂಧೀಜಿಯವರ ಅಸ್ಪೃಶ್ಯತೆ ನಿವಾರಣೆ ನಡೆಯ ನಡುವಿನ ಭಿನ್ನತೆಯನ್ನ ವಿವರಿಸುವ ಬಗೆ, ಹಾಗೂ ಮಾರ್ಟಿನ್ ಲೂಥರ ಕಿಂಗ್ ಅವರೊಂದಿಗಿನ ಸಂವಾದದಲ್ಲಿ ಭಾರತದಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆಯ ವಾಸ್ತವವನ್ನೂ ಆವೇಶಭರಿತರಾಗಿ ನಿರರ್ಗಳ ಮಾತಾಡುವ ಉಮೇದು…. ಈ ಎಲ್ಲದರ ಹಿಂದೆ ಆಳವಾದ ಸುಪ್ತಪ್ರಜ್ಞೆಯಲ್ಲಿ ತುಂಬಿಕೊಂಡಿದ್ದ ಬಾಬಾಸಾಹೇಬರ ಚಿಂತನೆಗಳೇ ಪ್ರೇರಣಶಕ್ತಿಯಾಗಿದ್ದವು.

ತನ್ನ ಸಹಪಾಠಿ ಓದುತ್ತಿದ್ದ ಪುಸ್ತಕ ಯಾವುದೆಂದು ಕೇಳಲು ಹೋಗಿ ಅವಮಾನಿತರಾದ ಲೇಖಕರು ಮುಂದೊಂದು ದಿನ ತುಳಸೀರಾಮಾಯಣ ಓದಿ ‘ಈ ಅವಮಾನಗಳು, ಬಯ್ಗಳುಗಳು, ತಲೆಯೆತ್ತಿ  ಬದುಕಲು ನನಗೆ ಮತ್ತಷ್ಟು ದೃಢತೆಯನ್ನು, ಆತ್ಮವಿಶ್ವಾಸವನ್ನು ತಂದುಕೊಟ್ಟವು.  ಈ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಲು ಅಂದೇ ದೃಢಸಂಕಲ್ಪ ಮಾಡಿದೆ. ಈ ನಿಸ್ಸಹಾಯಕತೆಯನ್ನು ಮೀರಲು ನನಗಿರುವ ಒಂದೇ ಗುರಿ ಶಿಕ್ಷಣವೆಂದು ಅಂದು ನನಗೆ ಮನದಟ್ಟಾಯಿತು’ ಎಂದು ಹೇಳುತ್ತಾರೆ. ಇನ್ನೊಂದೆಡೆ ದೇವಸ್ಥಾನದ ಅತಿಕ್ರಮ ಪ್ರವೇಶ ಮತ್ತು ದೇವರ ವಿಗ್ರಹಗಳನ್ನು ನಾಶಪಡಿಸದ್ದಾರೆಂಬ ಸುಳ್ಳು ಆರೋಪ ಮಾಡಿದ ಸವರ್ಣಿಯರು ಕೊಟ್ಟ ಫಿರ್ಯಾದಿಯನ್ನ ಅನುಸರಿಸಿ ಪೋಲಿಸರು ಬಂಧಿಸಲು ಬಂದಾಗ  ತಂದೆ ಹೇಳುವ ಧೈರ್ಯದ ಮಾತುಗಳು ಹೀಗೆ ನಾಮದೇವ ನಿಮ್ಗಾಡೆಯವರನ್ನು ಆಂತರಿಕವಾಗಿ ಮತ್ತು ಬಹಿರಂಗವಾಗಿ ಹೋರಾಟದ ಬದುಕಿಗೆ ಸಜ್ಜುಗೊಳಿಸುವ ಘಟಣೆಗಳು – ವ್ಯಷ್ಠಿಯಿಂದ ಸಮಷ್ಠಿಗೆ ತುಡಿಯುವ ಜೀವವೊಂದನ್ನು ತಯಾರು ಮಾಡಿದ ಹಾಗಿವೆ.

ವಿಧಾನಸಭೆಯ ಸದಸ್ಯರಾಗುವ ಅವಕಾಶವೊಂದು ಒದಗಿಬಂದಾಗ ಬಾಬಾಸಾಹೆಬರು ಹೇಳುವ ಮಾರ್ಮಿಕವಾದ ಮಾತುಗಳು ಬಹಳ ಉಪಯುಕ್ತವಾದವು ಎನಿಸುತ್ತವೆ. ಮಗನಿಗೆ ಭೀಮರಾವ್ ಎಂದು ಹೆಸರಿಟ್ಟಾಗ, ಶಿಕ್ಷಣಕ್ಕೆ ಒಂದು ಕಡೆ ನಿಲುಗಡೆಯಿಡಬೆಕಲ್ಲ ಎಂದು ಹೇಳಿದಾಗ, ಸಂಸತ್ತಿನಲ್ಲಿ ಅವರ ಕಾಲಿಗೆರಗಿದಾಗ ಹೀಗೆ ನಿಮ್ಗಾಡೆಯವರಿಗೆ ಅಂಬೇಡ್ಕರರು ಪ್ರತಿಕ್ರಿಯಿಸಿರುವ ರೀತಿಗಳಂತೂ ಅದ್ಭುತ ಗಳಿಗೆಗಳೇ ಆಗಿವೆ. ಇದು ನಾಮದೇವ ನಿಮ್ಗಾಡೆಯವರ ಆತ್ಮಕಥನ ಹೇಗೋ ಹಾಗೆ ಭೀಮರಾವ್ ಅಂಬೇಡ್ಕರರ ಜೀವನಚರಿತ್ರೆಯೂ ಆಗಿದೆ ಎಂಬರ್ಥದಲ್ಲಿ ಹೇಳಿರುವ ಡಾ. ಅಪ್ಪಗೆರೆ ಸೋಮಶೇಖರ್ ಅವರ ಮಾತು ಅಕ್ಷರಶಃ ಸತ್ಯ.

ಏಳು ಎದ್ದೇಳು – ಜಾಗೃತನಾಗು ಭಾರತೀಯ

– ಮಹಾದೇವ ಹಡಪದ

ನಾಲ್ಕು ಸಾದಾ ಆರ್ಡಿನರಿ ಬಸ್ಸುಗಳು ಓಡಾಡುವ ಮಾರ್ಗದಲ್ಲಿ ಎರಡು ತಡೆರಹಿತ ಏಸಿ ಬಸ್ಸುಗಳನ್ನು ಬಿಟ್ಟರೆ… ನಾಲ್ಕು ಬಸ್ಸಿನಲ್ಲಿ ಕುರಿ ನುಗ್ಗಿದಂತೆ ನುಗ್ಗುವ ಗದ್ದಲ ಕಮ್ಮಿಯಾಗುತ್ತದೆ. ಹಣಬಲವುಳ್ಳವರು ಬಸ್ಸಿನಲ್ಲಿ ಓಡಾಡುವುದನ್ನು ಘನತೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ ನಾಲ್ಕು ಬಸ್ಸಿನಲ್ಲಿ ಒಂದು ಬಸ್ಸನ್ನು ರದ್ದುಮಾಡಿ ಮೂರು ಆರ್ಡಿನರಿ ಮತ್ತು ಮೂರು ತಡೆರಹಿತ ಸಕಲ ಸೌಕರ್ಯಗಳುಳ್ಳ ಬಸ್ಸನ್ನು ಬಿಡುತ್ತಾರೆ. ಮಧ್ಯಮವರ್ಗದ ಆಯ್ಕೆ ಬರಬರುತ್ತ ಸಕಲ ಸೌಕರ್ಯದ ಕಡೆಗೆ ಹೋಗುತ್ತದೆ. ಮೂರಿದ್ದ ಆರ್ಡಿನರಿ ಎರಡಾಗುತ್ತವೆ. ಒಂದಾಗುತ್ತದೆ. ಕೊನೆಗೊಂದು ದಿನ ಆರ್ಡಿನರಿ ಬದುಕು ಇಲ್ಲವಾಗುತ್ತದೆ. ಆಗ ನಾವು ಅಭಿವೃದ್ಧಿ ಹೊಂದಿದ್ದೇವೆಂದು ಗುಜರಾತಿನವರಂತೆ ಜಗತ್ತನ್ನು ನಂಬಿಸಲು ಸುಲಭವಾಗುತ್ತದೆ.

ಗಾಣದೆತ್ತಿನಂತೆ ಸತತ ದುಡಿಯುವವನ ಬದುಕಿನ ಬಗ್ಗೆ ಯೋಚಿಸುವುದಿರಲಿ ಈ ಅಭಿವೃದ್ಧಿ ಮಂತ್ರದಲ್ಲಿ ಅಂಥವನೊಬ್ಬ ನಮ್ಮದೆ ಭಾರತದಲ್ಲಿ ಬದುಕುತ್ತಿದ್ದಾನೆಂದು ಹೇಳಲು ನಾಚಿಕೊಳ್ಳುವಂತ ನವಸಮಾಜ ನಿರ್ಮಾಣಗೊಳ್ಳುತ್ತಲಿರುವುದನ್ನು ಕಣ್ಣುಳ್ಳವರು ಕಾಣುತಾ, ಕಿವಿಯುಳ್ಳವರು ಕೇಳುತಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೋದಿ ಅವರ ಭಜನೆಯಲ್ಲಿಯೂ ಏಕತಾನತೆಯ ಕೆಟ್ಟ ಪದವೊಂದು ನಾಲಿಗೆಯ ತುದಿಯಲ್ಲಿ ಮಾತ್ರ ಪುಟಿದೇಳುತ್ತಿದೆ. ಅಂಥ ಪದವನ್ನು ಮಾತುಮಾತಿಗೂ ಅಭಿವೃದ್ಧಿ ಎಂಬ ಹೆಸರಿಂದ ಗುರುತಿಸಲಾಗುತ್ತಿದೆ. ಹೀಗೆ ಮಾತಾಡುವವರನ್ನು ಆತುರಗೇಡಿಗಳು, ಯಡಬಿಡಂಗಿಗಳು ಎಂದು ಹೀಗಳೆಯುವದು ಸುಲಭದ ಮಾತಾಯಿತು. ಅವರಿಗೆ ಅರ್ಥವಾಗದ ಭಾಷೆ ಒಂದಿದೆ.. ಅದು ಸಂಬಂಜಾ ಅಂತಾರಲ್ಲ ಅದು. ಅಂಥವರಿಗೆ ಮಾನವೀಯ ಕೌಶಲಗಳು ಸಾಯಲಿ ಮೌಲ್ಯಗಳು ಕೂಡ ಅರ್ಥವಾಗುವುದಿಲ್ಲ. ಹಿರಿಯರನ್ನು ಗೌರವಿಸುವುದರಲ್ಲಿ ಅವರ ಸಂಬಂಧದ ಎಳೆಗಳು ತಪ್ಪಿವೆ. ಅನಂತಮೂರ್ತಿಯವರ ವಿಷಯದಲ್ಲಿ ನೇರವಾಗಿ ಹೇಳಬೇಕೆಂದರೆ ಅವರ ಮನೆಗೆ ಫೋನು ಮಾಡಿದವರಲ್ಲಿ ಹೆಚ್ಚಾಗಿ ಬ್ರಾಹ್ಮಣ ಹುಡುಗರು.. ಅವರು ಹೆಚ್ಚು ವ್ಯಾಕುಲಗೊಂಡು ಈ ವಿಷಯವನ್ನು ಹೇಳಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಕಳ್ಳುಬಳ್ಳಿಯ ಮಾತಿರಲಿ ಹಿರಿತನಕ್ಕೆ ಗೌರವವಿಲ್ಲದ ಇಂಡಿಯಾ ಎಂಬ ಈ ಮನೆತನದ ನಡೆ ಮುಂದೆ ಯಾವ ಮಾದರಿಯ ಅಭಿವೃದ್ಧಿಯನ್ನು ಹೊಂದೀತು ಎಂಬುದು ನಿಜಕ್ಕು ಆತಂಕ ಮೂಡಿಸುತ್ತದೆ. ಇದು ಹಿರಿತನವನ್ನು ಸಂಪೂರ್ಣ ನಿರ್ಲಕ್ಷಿಸಿರುವ ಮತ್ತು ಜೀವನಾನುಭವವನ್ನು ಹಸಿಹಸಿಯಾಗಿ ಗ್ರಹಿಸಿ ‘ಆನೆ ನಡೆದದ್ದೇ ಮಾರ್ಗ’ ಎಂಬ ಮಾದರಿಯಲ್ಲಿ ರೂಪುಗೊಂಡ ಸರಕಾರ. ಬಿಳಿ ಆನೆಯ ಬಗ್ಗೆ ಚಕಾರವೆತ್ತದಂತೆ ನೋಡಿಕೊಳ್ಳಲು ಈ ಸಣ್ಣಪುಟ್ಟ ಲುಂಪೇನಗಳು ಹೆಚ್ಚು ಆಕ್ಟಿವ್ ಆಗಿರುವುದನ್ನು ನೋಡಿದರೆ ಸರ್ವಾಧಿಕಾರ ಧೋರಣೆಗಳು ಸ್ಪಷ್ಟಗೊಳ್ಳುತ್ತವೆ. ಇಡೀ ಅಜಂಡಾದಲ್ಲಿ ಇತಿಹಾಸ ಮರುಕಳಿಸುವ ಹುಚ್ಚುತನವೇ ತುಂಬಿಕೊಂಡಿರುವುದರಿಂದ ಮಾನವತ್ವ ಬಯಸುವವರು ಸಾಕಷ್ಟು ನೋವುಗಳನ್ನು ಸಹಿಸಿ ಹೋರಾಡುವ ಕೆಚ್ಚು ಬೆಳೆಸಿಕೊಳ್ಳಬೇಕಾಗಿದೆ.

ನಮಗರಿವಿಲ್ಲದಂತೆ ಗೆದ್ದೆತ್ತಿನ ಬಾಲದ ಕಡೆಗೆ ನಮ್ಮ ನೋಟ ಹೊರಳುತ್ತದೆ. ಈ ಗೆಲುವನ್ನು ಪ್ರಜಾಪ್ರಭುತ್ವದ ನೆರಳಲ್ಲಿ ಎಷ್ಟು ಸುಲಭವಾಗಿ ನಾವು ಒಪ್ಪಿಕೊಂಡಿದ್ದೇವೆ ಅನ್ನಿಸುತ್ತದೆ. ಆದರೆ ಭಾರತದ ನೆರಳುಗಳಾದ ಅಹಿಂಸೆ ಮತ್ತು ಸ್ವಾಭಿಮಾನದ ಹೋರಾಟಗಳು ಈ ಗೆಲುವಿನ ಹಿಂದೆ ಯಾಕೆ ಕೆಲಸ ಮಾಡಲಿಲ್ಲ ಎಂಬುದು ನಿಜವಾಗಿಯೂ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಭಂಡತನ ಹೀಗೆ ಗೆಲ್ಲುತ್ತದೆ ಎಂದಾದರೆ ಪ್ರಜಾಪ್ರಭುತ್ವವನ್ನು ಬಯಸಿದ ಈ ದೇಶದ ಅಸಂಖ್ಯ ಗಣಗಳ ವಿಚಾರಶಕ್ತಿಗಳು ಇಷ್ಟು ಬೇಗ ಕಳೆಗುಂದಿದವೇ..? ಅಥವಾ ಅವು ಭಾರತದ ಮುಗ್ಧ ಜಗತ್ತನ್ನು ಸರಿಯಾಗಿ ತಲುಪಲಿಲ್ಲವೇ..! ಬಾಬಾಸಾಹೇಬರು ಮತ್ತು ಗಾಂಧೀಜಿಯವರಿಗೆ ಈ ದೇಶದ ಆಧ್ಯಾತ್ಮಿಕ ಶಕ್ತಿಯ ಮೇಲೆ ಅದಮ್ಯ ನಂಬಿಕೆಯಿತ್ತು. ಒಬ್ಬರು ತನಗಲ್ಲದ ಧರ್ಮವನ್ನು ಧಿಕ್ಕರಿಸಿ ಸ್ವಾಭಿಮಾನಕ್ಕಾಗಿ ಈ ನೆಲದ ಮತ್ತೊಂದು ಪಥವನ್ನು ಆಯ್ದುಕೊಂಡರೆ ಮತ್ತೊಬ್ಬರು ಈ ನೆಲದ ಕರುಣೆಯ ಕ್ಷೀಣ ಸ್ವರದಲ್ಲಿ ಸ್ವಾತಂತ್ರ್ಯದ ಶಕ್ತಿ ತುಂಬಿದರು. ಈ ಎರಡೂ ಪಂಥಗಳನ್ನು ಕಸಿ ಮಾಡಿದ ಅನೇಕರು ಸಮಾಜವಾದದ ಕನಸು ಕಂಡರು… ವಿಚಾರಧಾರೆಗಳು ಎಷ್ಟೇ ಕವಲೊಡೆದರೂ ಭಾರತದ ಆತ್ಮವನ್ನು ಹುಡುಕುವ ಗುರಿವೊಂದೇ ಆಗಿತ್ತು. ಆದರೆ ಈಗ ಆಧ್ಯಾತ್ಮ ಮತ್ತು ಆತ್ಮಗಳು ಸ್ವರ್ಣಾಭಿವೃದ್ಧಿ ಕನಸಲ್ಲಿ ಪ್ರವಾಹಕ್ಕೆ ಸಿಕ್ಕಿ ದಡ ಸೇರದಂತೆ ಆ ದಡ ಈ ದಡಕ್ಕೆ ತಾಗಿಕೊಂಡು ಓಡುತ್ತಿವೆ. ಈಗ ನಿಜಕ್ಕೂ ಭಾರತ ಜಾಗೃತವಾಗಿರಬೇಕಾಗಿದೆ.

***

ರಾಮಾಯಣದ ರಾಮನಿಗೂ, ಲಂಕೆಯ ರಾವಣನಿಗೂ ಅಭಿವೃದ್ಧಿಯ ಹುಚ್ಚಿತ್ತು. ಸಂಬಂಧಗಳನ್ನು ಪೋಷಿಸಿಕೊಂಡು, ಹಿರಿ-ಕಿರಿಯ ಮುನಿಗಳ ಸಲಹೆಯನ್ನು ಪಡೆದುಕೊಂಡು, ನೆರೆಕೆರೆಯವರ ಮಾತುಗಳನ್ನು ಲೆಖ್ಖಕ್ಕೆ ತೆಗೆದುಕೊಂಡು, ರಾಜ್ಯದ ಸಮಸ್ತ ಜನತೆಯ ಆಶಯಗಳಿಗೆ ಪೂರಕವಾಗಿ ಆಡಳಿತ ನಡೆಸಲು ಹವಣಿಸಿದನೊಬ್ಬ ರಾಜ. ಇನ್ನೊಬ್ಬ ಇಡೀ ಲಂಕೆಯನ್ನು ಸ್ವರ್ಣಮಯ ಮಾಡುವ ಹಂಬಲ ಹೊತ್ತು, ಹಠದಿಂದ ಶಿವನನ್ನು ಗೆದ್ದು, ತನ್ನ ಮನಸ್ಸಿನ ಇಚ್ಛೆಗನುಸಾರವಾಗಿ ತನ್ನ ಕುಟುಂಬದವರು, ಪ್ರಜೆಗಳು ಆಜ್ಞಾವರ್ತಿಗಳಾಗಿ ಜೀವಿಸಬೇಕೆಂದು ಹಂಬಲಿಸಿದ. ನಿಜವಾಗಿಯೂ ಸರ್ವಾಧಿಕಾರಿ ಧೋರಣೆ ಹೆಚ್ಚು ಕಾಣುವುದು ರಾವಣನಲ್ಲಿಯೇ ಅನ್ನಬೇಕು. ಯಾಕೆಂದರೆ ಅವನು ಅದಾಗಲೇ ಲಂಕೆಯನ್ನು ಸ್ವರ್ಣನಗರಿಯನ್ನಾಗಿ ರೂಪಿಸಿದ್ದ. ಈ ಪುರಾಣದ ಅವಲೋಕನದಲ್ಲಿ ನಿಜವಾಗಿಯೂ ಮೋದಿ ಯಾರು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಗೆದ್ದ ಖುಷಿಯಲ್ಲಿದ್ದ ರಾವಣನಿಗೆ ಪೃಥ್ವಿಯ ಮೇಲಿನ ಸಮಸ್ತ ಜೀವಜಂತುಗಳು ಹೆದರಿಕೊಂಡೆ ಸಹಾಯ ಮಾಡುತ್ತಿದ್ದವು. ಸೀತೆಯ ಸುಳಿವನ್ನು ಹುಡುಕುತ್ತ ವಿರಹದಿಂದ ಅಲೆಯುತ್ತಿದ್ದ ರಾಮನಿಗೆ, ರಾಮನ ಪ್ರೀತಿಯ ಕಂಗಳಿಗೆ ಆಸರಾದ ಜೀವಗಳು ಸಂಬಂಧದ ಎಳೆಯನ್ನು ಹೆಣೆದುಕೊಳ್ಳಲು ಹವಣಿಸುತ್ತಿದ್ದವು. ಅದಕ್ಕೆ ಏನೋ ಇಂದಿಗೂ ಪ್ರತಿಯೊಂದು ಊರಿನಲ್ಲಿಯೂ ರಾಮನ ಕುರುಹುಗಳನ್ನೂ, ರಾಮಾಯಣದ ಸ್ಥಳನಾಮೆಗಳನ್ನು ಜನಪದರು ಗುರುತಿಸುತ್ತಾರೆ.

ಸೋಗಲಾಡಿಗಳು ಯಾವತ್ತಿಗೂ ಜನಮಾನಸದ ಭಾವನೆಗಳ ಮೇಲೆ ಸವಾರಿ ಮಾಡುವ ಹಪಹಪಿ ಹೊಂದಿರುತ್ತಾರೆ. ಸ್ವರ್ಣಾಭಿವೃದ್ಧಿಯ ಗುರಿ ತೋರಿಸಿ ದೊಡ್ಡದೊಂದು ಕಂದಕ ಕೊರೆದು ಜನರ ಭಾವನೆಗಳನ್ನು ಅಲ್ಲಿ ಹೂತುಬಿಡುತ್ತಾರೆ. ಇಂಡಿಯಾದ ಹೊಸ ಪ್ರಧಾನಿ ನರೇಂದ್ರ ಮೋ(ಡಿ)ದಿಯವರನ್ನು ಹೆಚ್ಚೆಚ್ಚು ಜನರಿಗೆ ಪರಿಚಯಿಸಿದವರು ಅವರನ್ನು ಬೆತ್ತಲು ಮಾಡಲು ಹವಣಿಸಿದ ಅವನ ವಿರೋಧಿಗಳೇ ಎಂದು ಹಲಕೆಲವರು ಅಲ್ಲಿ-ಇಲ್ಲಿ ಬರೆದುಕೊಂಡಿದ್ದಾರೆ. ಒಬ್ಬ ವ್ಯಕ್ತಿಯ ಗುಣಾವಗುಣಗಳ ಅವಲೋಕನ ನಡೆಯುವುದು ಸತ್ತಮೇಲೆಯೇ ಎಂಬುದು ಇಂದಿಗೂ ಮುಗ್ಧಭಾರತ ನಂಬಿಕೊಂಡಿದೆ. ಅಂದರೆ ಅವನ ಅಂತಿಮ ಶವಯಾತ್ರೆಯಲ್ಲಿ ಜನ ಮಾತಾಡಿಕೊಳ್ಳುವುದರ ಆಧಾರದಲ್ಲಿ ಅವನು ಸ್ವರ್ಗ ಸೇರಿದನೋ ನರಕ ಸೇರಿದನೋ ಎಂಬುದನ್ನು ನಿರ್ಧರಿಸುತ್ತಾರೆ. ಈ ನೆಲದ ಅನೇಕ ಕನಸುಗಳು ಕಟ್ಟಿದ ಭಾರತ-ಹಿಂದುಸ್ಥಾನ,-ಇಂಡಿಯಾ ಎಂಬ ಅನೇಕ ಸಂಕೇತಾಕ್ಷರಗಳ ಹಿಂದಿನ ರೂಪುಗಳು ಒಡೆದು ಶವಯಾತ್ರೆ ಹೊರಟಂತೆ.. ಆ ಹೊರಟಿದ್ದ ಜನಸಮೂಹದಲ್ಲಿ ಮೋದಿಯವರ ಕೈಯಲ್ಲಿ ಬೆಂಕಿಯ ಮಡಕೆಯನ್ನು ಕೊಟ್ಟಂತೆ ಈ ಫಲಿತಾಂಶದ ಪರಿಣಾಮವಿತ್ತು. ಟಿವಿ ಪರದೆಯಲ್ಲಿ ವಾರಗಟ್ಟಲೆ ಚರ್ಚೆಗಳು ನಡೆದವು. ಆ ಚರ್ಚೆಗಳಲ್ಲಿ ಒಂದಂತೂ ಸಾಬೀತಾಗುತ್ತಿತ್ತು ಹೊಸ ಭಾರತದ ಹೆಸರು ಅಭಿವೃದ್ಧಿ ಎಂಬುದಾಗಿತ್ತು.

ಶಿಖರ ಸೂರ್ಯ ಕಾದಂಬರಿಯಲ್ಲಿ ಬರುವ ಕನಕಪುರಿ ರಾಜ್ಯದ ಲಕ್ಷಣಗಳನ್ನೇ ಈ ಮಾಧ್ಯಮದವರು ಚರ್ಚಿಸುತ್ತಿದ್ದಾರಲ್ಲ ಎನಿಸುತ್ತಿತ್ತು. ಚಿನ್ನದ ಬೇಟೆಯೊಂದೇ ಗುರಿಯಾದರೆ ಹರಿವ ನದಿ, ಉರಿವ ಸೂರ್ಯ, ಹಳ್ಳಕೊಳ್ಳ ಜಲಚರ, ಪ್ರಾಣಿ, ಪಕ್ಷಿಗಳು, ಗಿಡ, ಮರ, ತರು ಲತೆಗಳು ಸೇರಿದಂತೆ ಉಸುರುವ ಗಾಳಿ, ತಿನ್ನುವ ಅನ್ನ ಹೀಗೆ ಮನುಷ್ಯನ ಮೂಲಭೂತ ಬದುಕಿನ ಆಧಾರಗಳಿಗೆ ಕಿಂಚಿತ್ತೂ ಕಿಮ್ಮತ್ತಿಲ್ಲವಾದೀತು.

ಗೀತೆಯ ಶ್ಲೋಕವೊಂದಕ್ಕೆ ಮೋದಿಯ ಭಾವಚಿತ್ರವನ್ನು ಡಿಜ್ ಡಿಜೈನಾಗಿ ಪ್ರಭಾವಳಿಗಳ ಮೂಲಕ ಆಡಿಯೋ-ವೀಡಿಯೋ ಎಡಿಟ್ ಮಾಡಿ ಅಂತರ್ಜಾಲದಲ್ಲಿ ಹರಿದಾಡಿಸಿ, ಈ ಭಾರತದ ಸಮ್ಮೋಹನ ಶಕ್ತಿಯಾದ ಧರ್ಮಾಧಾರಿತ ರಾಜಕಾರಣ, ಕಪ್ಪುಹಣ, ರಾಷ್ಟ್ರೀಯತೆಯ ಹುಚ್ಚುಮೋಹ, ಅಭಿವೃದ್ಧಿಯೆಂಬ ಗುಮ್ಮನನ್ನು ಅಸ್ತ್ರವನ್ನಾಗಿಸಿ ತೀರ ಮುಗ್ಧರನ್ನು ಮರಳು ಮಾಡಿ ಗೆದ್ದಾಯ್ತು. ಆದರೆ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಎದುರು ಸಾಲಿನಲ್ಲಿ ಕೂಡಲು ಬೆರಳಣಿಕೆಯಷ್ಟು ಜನಗಳನ್ನು ಆರಿಸಿ ಕಳಿಸಿರುವುದರ ಮುನ್ಸೂಚನೆ ಯಾವ ರೂಪದಲ್ಲಿ ವಕ್ಕರಿಸುತ್ತದೆಯೋ ಹೇಳಲಾಗುತ್ತಿಲ್ಲ. ಫಲಿತಾಂಶದ ದಿನ ಮತ್ತು ಫಲಿತಾಂಶದ ನಂತರ ನನ್ನಂತವರು ಅನೇಕರು ಥಳಮಳಿಸಿದರು. ಆ ಆತಂಕವನ್ನು ವಿವರಿಸುವ ಗೋಜಿಗೆ ಹೋಗಲಾರದಷ್ಟು ಹೋಳಿ, ದೀಪಾವಳಿ ಹಬ್ಬಗಳು ದೇಶದ ಎಲ್ಲ ಹಿರಿ-ಕಿರಿ ಊರು ನಗರ ಪಟ್ಟಣಗಳಲ್ಲಿ ನಡೆಯುತ್ತಿತ್ತು. ಸುಳ್ಳು ಮತ್ತು ಸತ್ಯಗಳ ನಡುವಿನ ತೆಳುಗೆರೆ ಮಾಯವಾಗಿರುವುದನ್ನು ನೋಡಿದರೆ ಭಾರತ ಭಾರಿ ಬೆಲೆ ತೆರುತ್ತದೆಂಬುದನ್ನು ಊಹಿಸಬಹುದಾಗಿದೆ.

ಆಡಳಿತದ ಚುಕ್ಕಾಣಿ ಹಿಡಿದವ ಮೊದಲು ಸಿಬ್ಬಂದಿಗಳನ್ನು ತಮ್ಮ ಕೈ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ಇಸ್ಪಿಟ್ ಆಟದಲ್ಲಿ ಮೊದಲು ಎಲೆಗಳನ್ನು ಜೋಡಿಸಿಕೊಳ್ಳುವ ರೀತಿಯ ಕೆಲಸವದು. ಆಟದ ಗಮ್ಮತ್ತಿರುವುದು ಎಲೆಗಳನ್ನು ಬಿಡುವ ಕ್ರಮದಲ್ಲಿಯೇ ಎಂದಾದರೆ ಆಟದಲ್ಲಿ ತೊಡಗಿರುವ ಪ್ರತಿಯೊಬ್ಬನೂ ಗೆಲ್ಲಲು ಹವಣಿಸುತ್ತಾನೆ. ಆದರೆ ಈಗ ಭಾರತದಲ್ಲಿ ಆಟದ ಎಲೆಗಳೆಲ್ಲವನ್ನು ಒಬ್ಬನ ಕೈಯಲ್ಲೇ ಕೊಟ್ಟು ಆಟವಾಡು ಎಂದರೆ..! ಆಡಲು ಅಲ್ಲೇನಿದೆ…?

ಮುಂದೊಂದು ದಿನ ಯಾವನೋ ಒಬ್ಬ ಸಾಹಿತಿ ಭಾರತದಲ್ಲಿ ಮೌಲ್ಯಗಳು ಸಾಯುತ್ತಿವೆ ಎಂದು ಭಾಷಣ ಮಾಡಿದನೆಂದು ಇಟ್ಟುಕೊಳ್ಳಿ… ಆಗ ಮಾಧ್ಯಮಗಳು ಅದನ್ನು “ಮೌಲ್ವಿಗಳು ಸಾಯುತ್ತಿದ್ದಾರೆ” ಎಂದು ವಿಷಯವನ್ನು ತಿರುಚಿ ಎರಡು ಕೋಮುಗಳ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿನಾಕಾರಣ ವೈಷಮ್ಯ ಹುಟ್ಟುಹಾಕುತ್ತವೆ. ಅಂಥ ಮಾಧ್ಯಮಗಳೊಟ್ಟಿಗೆ ನಾವು ಬದುಕಬೇಕಾಗಿದೆ. ಬಾಯಿಗೆ ಬಂದದ್ದನ್ನು ವಿವೇಚಿಸುವ ಶಕ್ತಿಯಿಲ್ಲದ ನಿರೂಪಕರು ಜನಮಂದೆಯನ್ನು ಹುರುಪುಗೊಳಿಸಿ ಹುಚ್ಚೆಬ್ಬಿಸುತ್ತಿದ್ದಾರೆ. ಜನರ ಅಭಿಮತ ಇಂಗಿತಗಳನ್ನು ತಾವೇ ರೂಪಿಸುವ ಗುತ್ತಿಗೆ ಪಡೆದಂತೆ ಆಡುತ್ತಿರುವ ಟಿವಿ ಮಾಧ್ಯಮಗಳಿಗೆ ಯಾವ ಹಿಡನ್ ಅಜಂಡಾಗಳಿದ್ದಾವೋ.. ಗೊತ್ತಿಲ್ಲ ಆದರೆ ಖಾಊಜಾ ಎಂಬ ಮೂರಕ್ಷರದ ಮಂತ್ರ ಬಯಸುವ ಭಾರತವನ್ನು ಈ ಮಾಧ್ಯಮ ಸಲೀಸಾಗಿ ತಯಾರು ಮಾಡುತ್ತಿದೆ. ಹಾಗಾಗಿ ಈ ಸಲ ಅಭಿವೃದ್ಧಿಯ ಹುಚ್ಚುತನ ಗೆದ್ದಿದೆ ಎಂದು ಮಾತ್ರ ಹೇಳುವುದು ತಪ್ಪಾದೀತು. ಈ ಸಲ ಭಾರತದಲ್ಲಿ ನಿಜವಾಗಿ ಜಯ ಸಾಧಿಸಿದವರು ಬಂಡವಾಲಶಾಹಿಗಳು. ಅವರೊಂದಿಗೆ ನಮ್ಮ ನೆಲದ ಸ್ವಾಭಿಮಾನ, ಅಹಿಂಸೆ ಮತ್ತು ಸಮಾಜವಾದದಂತ ಸಾವಿರಾರು ತೊರೆಗಳು ಕೊಚ್ಚಿಹೋಗದಂತೆ ಎಚ್ಚರವಹಿಸಬೇಕಾಗಿದೆ.

ಜಾತಿ ಮೇಲಾಟ – ಈ ಸಂಘರ್ಷಗಳಿಗೆ ಕೊನೆ ಎಂದು..?

– ಮಹಾದೇವ ಹಡಪದ

ಸಾಮಾಜಿಕ ಬದಲಾವಣೆ ಅನ್ನುವುದು ಬರೀ ಭಾವನಾತ್ಮಕ ಗೇಯವಾಗಿ, ಸಂದರ್ಭನುಸಾರ ಆದರ್ಶದ ಮಾತಾಗಿ, ಗೆಳೆತನದಲ್ಲಿ ಜಾತಿ ನಿರ್ಲಕ್ಷಿಸುವ ಜಾಣಕುರುಡಾಗಿ ಮಾತ್ರ ಕಾಣುತ್ತದೆ. ಇರುವುದೆಲ್ಲವೂ ಹೇಗಿತ್ತೋ ಹಾಗೆ ಇರಬೇಕೆಂದು ಬಯಸುವವರ ಗುಂಪುಗಳು ಸಂಶೋಧನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಜಾತಿಯ ಕುರುಹುಗಳು ಪತ್ರಿಕೆಗಳ ಒಳಪುಟದಲ್ಲಿ ಮಾತ್ರ ಪ್ರಕಟಗೊಂಡು ಘಟನೆಗಳು ತಣ್ಣಗಾಗುತ್ತಿವೆ. devdasiಆದರೆ ಬದಲಾಗುತ್ತಿರುವ ಸಾಮಾಜಿಕ ಸಂದರ್ಭದಲ್ಲಿ ದಲಿತ ಮಹಿಳೆಯರು ನಿಜಕ್ಕೂ ಸುರಕ್ಷಿತವಾಗಿಲ್ಲ. ಅದು ಗ್ರಾಮಭಾರತದಲ್ಲಿ ದಲಿತ ಮಹಿಳೆಯರ ಬದುಕು ಇಂದಿಗೂ ಸುಧಾರಣೆ ಕಂಡಿಲ್ಲ. ಸೇವೆಯ ಹೆಸರಿನಲ್ಲಿ ದೇವದಾಸಿ ಪದ್ಧತಿಯನ್ನು ಉಳಿಸಿಕೊಂಡು ಬಂದಿದ್ದವರು ಈಗ ದಲಿತ ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಮೌನದ ನಾಗರೀಕ ಲಕ್ಷಣವಾಗಿದೆ. ಆಕೆ ಮದುವೆಯಾಗಿ ಮಕ್ಕಳನ್ನು ಹೊಂದಿದ್ದೂ ಯಾವನೋ ಮಲಗಲು ಕರೆದಾಗ ಹೋಗಲು ನಿರಾಕರಿಸಿದರೆ ಅತ್ಯಾಚಾರವಾಗುತ್ತದೆ. ಹೇಳಿಕೊಂಡರೆ ಗಂಡನಿಂದ ಸೋಡಚೀಟಿ ಪಡೆಯಬೇಕು. ಸಮಾಜದ ಕೊಂಕು ಮಾತುಗಳಿಗೆ ತುತ್ತಾಗಬೇಕು, ಗಂಡನ ಮನೆಯವರ ತಿರಸ್ಕಾರ ಅನುಭವಿಸಬೇಕು ಇಲ್ಲವೇ ಅತ್ಯಾಚಾರವನ್ನು ಗುಲ್ಲು ಮಾಡದೆ ಸಹಿಸಿಕೊಂಡು ಹೊಗಬೇಕು. ಇದೆಲ್ಲದರ ಹಿಂದೆ ಸಾಮಾಜಿಕ ಸ್ಥಾನಮಾನಗಳು, ಗೌರವ-ಮರ್ಯಾದೆಗಳು, ಭಯ-ಭಕ್ತಿ ಅಂಜಿಕೆಯ ಭಾವಗಳು ಸಂಚರಿಸುತ್ತಿರುತ್ತವೆ. ಆ ಮೌನದ ನೊಂದ ಜೀವಗಳು ತಮ್ಮ ಒಡುಲುರಿಯ ಸ್ಫೋಟಕ್ಕೆ ಸಿದ್ಧಗೊಳ್ಳುತ್ತಿರುವ ಈ ಹಂತದಲ್ಲಿ ದೌರ್ಜನ್ಯದ ನಾನಾಮುಖಗಳೂ ಗೋಚರಿಸುತ್ತಿವೆ. ಆ ಘಟಣೆಗಳಿಗೆ ಯಾವ ಸಂಶೋಧನೆಯ ಬಣ್ಣಹಚ್ಚಿದರೂ ಜಾತಿ ಕಾರಣ ಎಂಬುದು ಸ್ಪಷ್ಟವಾಗಿದೆ.

ರಾಯಚೂರು, ಬೀದರ, ಗುಲ್ಬರ್ಗಾ, ಕೊಪ್ಪಳ, ಬಳ್ಳಾರಿ, ಬಿಜಾಪೂರ ಜಿಲ್ಲೆಗಳಲ್ಲಿನ ದಲಿತ ಹೆಣ್ಣುಮಕ್ಕಳ ಆತಂಕಕ್ಕೆ ಕೊನೆಯಿಲ್ಲ. ಆದಿಶಕ್ತಿಯ ಹೆಸರನ್ನು ಮುಂದೆ ಮಾಡಿಕೊಂಡು ಬಸವಿ ಬಿಡುವ ಆಚರಣೆ ಕಳ್ಳತನದಲ್ಲಿ ನಡೆಯುತ್ತಿರುವುದು ಇಂದಿಗೂ ನಿಂತಿಲ್ಲ. ಗೆಳೆಯ ಪಂಪಾರಡ್ಡಿ ಮೊನ್ನೆಯಷ್ಟೆ ದೇವದಾಸಿ ಬಿಡುತ್ತಿದ್ದ ಹುಡುಗಿಗೆ ಮದುವೆ ಮಾಡಿಸಿದರು. ಮರಿಯಮ್ಮನಹಳ್ಳಿಯ ಆರನೇ ವಾರ್ಡಿನಲ್ಲಿ ಆಡುವ ಎಷ್ಟೋ ಮಕ್ಕಳಿಗೆ ತಂದೆ ಯಾರೆಂಬುದು ಗೊತ್ತಿಲ್ಲ. ವಿಸ್ತಾರದಲ್ಲಿ ಬೆಳೆಯುತ್ತಿರುವ ಅಸಂಖ್ಯ ಮಕ್ಕಳ ಕತೆಗಳು ಅಪೌಷ್ಟಿಕವಾಗಿರುವ ಬದುಕಿನ ಚಿತ್ರಣವನ್ನು ನೀಡುತ್ತವೆ. ಹೀಗಿರುವಾಗ ಈ ದೇಶದ ಚರಿತ್ರೆಯಲ್ಲಿನ ಅಸ್ಪೃಶ್ಯತೆಯ ರೂಪಗಳು ಜಾತಿಯಿಂದ ಜಾತಿಯ ಕಾರಣಕ್ಕಾಗಿ ಸೃಷ್ಟಿಯಾದುದಲ್ಲ ಎಂದು ಹೇಗೆ ನಿರ್ಧರಿಸಲಾಗುತ್ತದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಮೊನ್ನೆಯಷ್ಟೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಯಿತು. ಅದು ಜಾತಿಯ ಕಾರಣಕ್ಕಾಗಿಯೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಶಂಕ್ರಮ್ಮ ಎಂಬ ದಲಿತ ಹೆಣ್ಣುಮಗಳನ್ನು ಲೈಂಗಿಕ ತೃಷೆಗಾಗಿ ಕಾಡಿಸುತ್ತಿದ್ದ ದಲಿತೇತರ ಜನಾಂಗದ ವ್ಯಕ್ತಿಯೊಬ್ಬ ಕುಂಟಲಗಿತ್ತಿ ಮೂಲಕ ಆಕೆಗೆ ಎರಡು ಸಾವಿರ ರೂಪಾಯಿ ದುಡ್ಡಿನ ಆಸೆ ತೋರಿಸಿ ಮಲಗಲು ಕರೆದಿದ್ದಾನೆ. ಆ ಹೆಣ್ಣುಮಗಳು ಈ ವಿಷಯವನ್ನು ಗಂಡ ಬಸವರಾಜನಿಗೆ ಹೇಳಿದಾಗ ಆತ ಬಳಗಾನೂರು ಠಾಣೆಯಲ್ಲಿ ಆ ವ್ಯಕ್ತಿಯ ಮೇಲೆ ಕೇಸು ದಾಖಲಿಸಿದ್ದಾನೆ. ಅದು ಊರಿನಲ್ಲಿರುವ ಕುಲಬಾಂಧವರ ಗೌರವವನ್ನು ಮಣ್ಣುಗೂಡಿಸಿತೆಂದು ಮತ್ತೊಬ್ಬ ತನ್ನ ಸಮಾಜದ ದೊಣ್ಣೆನಾಯಕ ಬಸವರಾಜ ರೂಡಲಬಂಡ ಎಂಬಾತ ತನ್ನ ಜಾತಿಯ ಹುಡುಗರನ್ನೆಲ್ಲ ಸೇರಿಸಿಕೊಂಡು ಕೇಸು ದಾಖಲಿಸಿದ ತಪ್ಪಿಗಾಗಿ ಆ ಊರಿನಲ್ಲಿರುವ ಎಲ್ಲ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸ್ವಕೋಮಿನ ವ್ಯಕ್ತಿಯದು ತಪ್ಪಿದೆ ಎಂಬುದು ಅರಿವಿದ್ದರೂ “ದಲಿತರದ್ದು ಭಾರಿ ಸೊಕ್ಕಾಗಿದೆ” ಎಂಬ ಕಾರಣ ನೀಡಿ ಜಾತಿ ಕಾರಣಕ್ಕಾಗಿಯೇ ಈ ಹಲ್ಲೆಯನ್ನು ಮಾಡಲಾಗಿದೆ. caste-riot-policeನೂರಿಪ್ಪತ್ತು ಮನೆಗಳಿರುವವರು ಕೇವಲ ಎಂಟು ದಲಿತರ ಕುಟುಂಬಗಳ ಮೇಲೆ ಹಲ್ಲೆ ಮಾಡಿದ್ದಾರೆ. ಆ ದಿವಸ ಪೋಲಿಸರು ಬರುವುದು ಹತ್ತು ನಿಮಿಷ ತಡವಾಗಿದ್ದರೆ ನಮ್ಮೆಲ್ಲರ ಹೆಣಗಳು ಬೀಳುತ್ತಿದ್ದವು ಎಂದು ಹೇಳುವ ಹನಮಂತಪ್ಪನ ದ್ವನಿಯಲ್ಲಿ ಆ ರೋಷದ ಕಾವು ಕೇಳುತ್ತದೆ. ಹತಾಶರಾದ ಎಂಟು ಕುಟುಂಬದ ಸದಸ್ಯರು ಆ ಊರೊಳಗೆ ಉಳಿಯುವುದಿಲ್ಲವೆನ್ನುತ್ತಿದ್ದಾರೆ. ದ್ವೇಷವನ್ನು ಉಡಿಯಲ್ಲಿ ಕಟ್ಟಿಕೊಂಡು ಈ ಲಜ್ಜೆಗೆಟ್ಟವರ ಜಾತಿ ಅಹಂಕಾರದ ಜೊತೆ ಸಹಬಾಳ್ವೆ ಮಾಡುವುದಾದರೂ ಹೇಗೆ..? ಸಹನೆಯಿಂದ ಬದುಕಿದರೂ ನಮ್ಮ ಹೆಣ್ಣುಮಕ್ಕಳು ಸುರಕ್ಷಿತವಾಗಿರುತ್ತಾರೆಂದು ನಂಬುವುದು ಹೇಗೆ..? ಈ ಎಲ್ಲ ಪ್ರಶ್ನೆಗಳ ನಡುವೆ ರಾಜಿಮಾಡಿಕೊಂಡು ಬದುಕಲಾದೀತೆ.

ಈಗ ಹಳ್ಳಿಗಳಲ್ಲಿರುವ ಜಾತಿಯಾಧಾರಿತ ಓಣಿಗಳು ಒಂದಾಗುವುದು ಯಾವಾಗ..? ಈಗ ಮೊದಲಿನ ಹಾಗೇನೂ ಇಲ್ಲ ಎನ್ನುವ ಮನಸ್ಸನ್ನು ಚಿವುಟಿದರೆ ನೋವಾಗುತ್ತದೆ. ಕೆಲವು ಗುಂಪಿನ ಕೆಲವು ಕೋಮಿನ ವಿಷವರ್ತುಲಗಳು ಜಾಗೃತಗೊಂಡು ಸಂಪ್ರದಾಯಗಳನ್ನು ಜತನದಿಂದ ಕಾಯ್ದುಕೊಳ್ಳಲು ಹವಣಿಸುತ್ತವೆ. ಮದುವೆಯ ದಿನ ಆರುಂಧತಿ ವಸಿಷ್ಠರ ನಕ್ಷತ್ರ ತೋರಿಸುವಾಗ ‘ಆರುಂಧತಿಯ ಹಾಗೆ ಬಾಳು’ ಎಂದು ಪುರೋಹಿತ ಪಾಮರರು ಆಶೀರ್ವದಿಸುತ್ತಾರೆ. ಆದರೆ ವಾಸ್ತವದಲ್ಲಿ ಅದೆ ಪುರೋಹಿತಶಾಹಿಗಳು ತಮ್ಮ ಮನೆಗೆ ಅರುಂಧತಿ ಜಾತಿಗೆ ಸೇರಿದ ಹೆಣ್ಣುಮಗಳನ್ನು ಸೊಸೆಯಾಗಿ ತಂದುಕೊಳ್ಳಲಾರರು. ಆದರ್ಶಕ್ಕಷ್ಟೆ ಪುರಾಣಗಳನ್ನು ಕೇಳುವ ಈ ಅಸಮಾನತೆಯ ಸಂಪ್ರದಾಯಕ್ಕೆ ಕೊನೆಯೆಂಬುದಿಲ್ಲವಾಗಿದೆ. ಈವರೆಗೂ ದಲಿತ-ಬ್ರಾಹ್ಮಣರ ಅಥವ ದಲಿತ-ಮೇಲ್ಜಾತಿಗಳ ಹೆಣ್ಣು ಗಂಡಿನ ಸಂಬಂಧಗಳಲ್ಲಿ ಬರೀ ಬ್ರಾಹ್ಮಣರ/ಮೇಲ್ಜಾತಿಯ ಹೆಣ್ಣುಮಕ್ಕಳು ದಲಿತ ಗಂಡಸರನ್ನು ಮದುವೆ ಮಾಡಿಕೊಂಡಿದ್ದಾರೆ ಹೊರತು ಎಷ್ಟು ದಲಿತರ ಹೆಣ್ಣುಮಗಳು ಬ್ರಾಹ್ಮಣರ/ಮೇಲ್ಜಾತಿಯವರ ಸೊಸೆಯಾಗಿ ಹೋದದ್ದಿದೆ? caste-clashesಇಂಥ ಕೊಡುಕೊಳ್ಳುವಿಕೆಯನ್ನು ನಿರಾಕರಿಸುವ ಸಮಾಜದಲ್ಲಿ ದಲಿತ ಹೆಣ್ಣುಮಕ್ಕಳು ಇಂದು ಸುರಕ್ಷಿತವಾಗಿದ್ದಾರೆಂದು ಹೇಗೆ ಹೇಳುವುದು..? ಹರಿದ ಕುಪ್ಪಸ ಸೀರೆಯತ್ತ ಕಳ್ಳ ಕಣ್ಣಿಡುವುದು ಕೂಡ ಗ್ರಾಮಭಾರತದಲ್ಲಿ ಬಡತನ, ವಿಧವೆ, ಅನಾಥೆ ಅಥವಾ ಜಾತಿಕಾರಣದಿಂದಲೆ ಅಲ್ಲವೇ..? ಇಂಥ ಮನಃಸ್ಥಿತಿ ಹೆಪ್ಪುಗಟ್ಟಿರುವ ಸಮಾಜದಲ್ಲಿ ಸಮಸಮಾನತೆಯ ಕನಸು ಕಾಣುವವರು ಎಲ್ಲವೂ ಸರಿಯಾಗಿದೆ ಎಂಬ ಭ್ರಮೆಯ ಆದರ್ಶದಲ್ಲಿ, ಅಕ್ಷರದ ಅಹಂಕಾರದಲ್ಲಿ ಬದುಕುವುದನ್ನು ವಿಮರ್ಶಿಸಿಕೊಳ್ಳಬೆಕಾಗಿದೆ.

ವೋಟಿಗಾಗಿ ಪಟಗಳ ಪರಾಕ್ರಮಣದಲ್ಲಿ ಒಂದಷ್ಟು ವಿಶ್ರಾಂತಿ

– ಮಹಾದೇವ ಹಡಪದ

ಮಹಾತ್ಮರುಗಳ ಆದರ್ಶದ ಗುರುತಿಗಾಗಿ, ಆರಾಧನೆಯ ಭಾಗವಾಗಿ, ಅವರ ಗುಣಾವಗುಣಗಳನ್ನು ಎಳ್ಳಷ್ಟು ಅಳವಡಿಸಿಕೊಳ್ಳದ ಇವರ ದುಂದುಗಾರಿಕೆಯ ಪ್ರಚಾರದ ಭಿತ್ತಿಪತ್ರದಲ್ಲಿ, ಪಕ್ಷದ ಸಣ್ಣ-ದೊಡ್ಡ ಕರಪತ್ರ, ಫ್ಲೆಕ್ಸ್‌ ಮತ್ತು ಕಟೌಟಗಳಲ್ಲಿ ಎಲ್ಲ ಮಾಹಾನ್ ವ್ಯಕ್ತಿಗಳ ಪಟಗಳು ರಾರಾಜಿಸುತ್ತಿದ್ದವು. ಆ ಆದರ್ಶದ ಮಾದರಿ ವ್ಯಕ್ತಿತ್ವಗಳ ಚಿತ್ರದ ಕೆಳಗೆ ಈ ಪುಂಡರ ಭಯಂಕರ ವಿನಯದ, ಹುಸಿನಗೆಯ, ಕೈಮುಗಿದ, ಎರಡು ಬೆರಳೆತ್ತಿದ ಕಕ್ಕದ ಗೆಶ್ಚರ್ ಫೋಜುಗಳಲ್ಲಿ ಇವರ ಬಿಳಿ ವಸ್ತ್ರದ ಪಟಗಳಿದ್ದವು. ಮತದಾರನ ಆಯ್ಕೆ ತೋರಿಕೆಯದಾದರೆ, ಹಣ-ಹೆಂಡದ ಸೊತ್ತಾದರೆ, ಜಾತಿ ಅಭಿಮಾನ ಬೆಂಬಲಿಸಿದರೆ… ಕಳೆದೈದು ವರ್ಷದ ಮಠಸರ್ಕಾರ ಮತ್ತೆಷ್ಟನ್ನು ದಾನ ಮಾಡೀತು ಎಂಬ ಭಯ ಹುಟ್ಟಿತು. ಆ ಫ್ಲೆಕ್ಸ್‌ವೊಳಗಿನ ಚಿತ್ರಗಳು ಮಾತು ಮರೆತಿವೆ ಅನಿಸುತ್ತಿತ್ತು. ಅವುಗಳು ಪಾತ್ರವಾಗಿ ಈ ರಂಗದ ಮೇಲೆ ಬರುವ ಹಾಗೆ ಇದ್ದಿದ್ದರೆ…!? ಕನಸೊಳಗ ಬಂದಂಗ ನನ್ನ ಮನೋರಂಗದ ಆಳದೊಳಗ ಇಳಿದು ಕಷ್ಟ ಸುಖ ಹಂಚಿಕೊಂಡ ಚಿತ್ರದೊಳಗಿನ ವೋಟು ಕದಿಯುವ ಪಟಗಳಲ್ಲೂ ಚೈತನ್ಯ ಬತ್ತಿದಂತೆ ಭಾಸವಾಯ್ತು.

ಬಸವಣ್ಣ :
ಒಮ್ಮೆ ಕೈಲಾಸದಿಂದ ಶಿವನು “ವಾರದಲ್ಲೊಂದು ದಿವಸ ದುಡಿಮೆ ಮಾಡಿರಿ, ಉಳಿದ ದಿನಗಳಲ್ಲಿ ಶಿವನ ಪೂಜೆ ಮಾಡಿರಿ” ಎಂಬ ಸಂದೇಶವನ್ನು ಭೂಮಂಡಲದ ಸಮಸ್ತ ಜೀವಿಗಳಿಗೆ ತಲುಪಿಸಿ ಬಾ ಎಂದು ನಂದಿಯನ್ನು ಭೂಮಿಗೆ ಕಳಿಸುತ್ತಾನೆ. ಆದರೆ ನಂದಿಯು ಭೂಮಿಗೆ ಬಂದು “ವಾರದಲ್ಲೊಂದು ದಿನ ಪೂಜೆ ಮಾಡಿರಿ Basavaಉಳಿದ ದಿವಸಗಳಲ್ಲಿ ದುಡಿಮೆ ಮಾಡಿರಿ” ಎಂದು ಉಲ್ಟಾ ಹೇಳಿಬಿಡುತ್ತಾನೆ. ಆಗ ಅವನಿಗೆ ಆ ಶಿವನು ಕೊಟ್ಟ ಶಿಕ್ಷೆ.. ನಾನು ಹೇಳಿದ್ದನ್ನು ನೀನು ಸರಿಯಾಗಿ ತಲುಪಿಸಲಿಲ್ಲವಾದ ಕಾರಣ ನೀನು ಅವರೊಂದಿಗೆ ದುಡಿದುಕೊಂಡು ಬದುಕ ಹೋಗೆಂದು ನಂದಿಯನ್ನು ಭೂಮಂಡಲಕ್ಕೆ ಕಳಿಸಿಬಿಡುತ್ತಾನೆ. ಅಂದಿನಿಂದ ಇಂದಿನತನಕ ರೈತನ ಸಂಗಾತಿಯಾಗಿ ನಂದಿ ಹಗಲಿರುಳೆನ್ನದೆ ಭೂಮಿಯಲ್ಲಿ ದುಡಿಯುತ್ತಿದ್ದಾನೆ. ಎಂಬ ಕತೆ ಜನಪದರಲ್ಲಿ ಪ್ರಸಿದ್ಧವಾಗಿದೆ.

ಆ ಮೂಕ ಬಸವ ತಪ್ಪು ಸಂವಹನಕ್ಕಾಗಿ ಆ ಶಿಕ್ಷೆ ಅನುಭವಿಸುತ್ತಿರಲು ಅಹಿಂಸೆ ಮತ್ತು ಎಲ್ಲರೊಳಗಿನ ಪ್ರೀತಿಗೆ ಎಣ್ಣೆಬತ್ತಿಯಾಗಿ, ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಯಾಗಿ ಜನಮಾನಸದಲ್ಲಿ ನಿಲ್ಲಿಸಿದ ಕರುಣಾಮೂರ್ತಿ 12 ನೆಯ ಶತಮಾನದ ಈ ಬಸವ, ರಾಜನಕಿಂತ ಒಂದು ಕೈ ಮೇಲಾಗಿ ಕುದುರೆ ಏರಿ ಖಡ್ಗ ಹಿರಿದು ರಸ್ತೆಯ ತಿರುವಿನಲ್ಲೆಲ್ಲ ಮೂರ್ತಿಯಾಗಿದ್ದಾನೆ. ಇವರ ಅಡ್ಡನಾಡಿ ಕುಹಕತನಗಳ ಸಮರ್ಥನೆಗಾಗಿ, ಜಾತಿಸಂಘಟನೆಯ ದಾರ್ಷ್ಟ್ಯಕ್ಕಾಗಿ, ಈ ಬಸವ ಇವರ ಫ್ಲೆಕ್ಷಗಳಲ್ಲಿ ಬಂಧಿಯಾಗಿದ್ದಾನೆ.

ಮಠಗಳಿಗೆ ಭೇಟಿ ಕೊಡುವ ಪ್ರತಿಯೊಬ್ಬ ಶಾಸಕ, ಮಂತ್ರಿಮಹೋದಯರು ಸ್ವಾಮಿಗಳನ್ನು ಮೆಚ್ಚಿಸಲೋಸುಗ ಮಠಗಳಿಗೆ ಆರ್ಥಿಕ ಬೆಂಬಲ ನೀಡುತ್ತ ಬಂದಿದ್ದಾರೆ. ಇನ್ನು ಕೆಲವರ ಕಪ್ಪು ಹಣ ಬಿಳಿಯಾದದ್ದು ಮಠಗಳ ಕೃಪಾಶೀರ್ವಾದದಿಂದ ಅನ್ನುವುದು ಜಗಜ್ಜಾಹೀರು. ಇವರೆಲ್ಲರ ಆದರ್ಶದ ಆ ಬಸವಣ್ಣನೂ ಪಟದೊಳಗೆ ತಣ್ಣಗೆ ಕೂತಿರುವುದ ಕಂಡು ಪಾಪ! ಬಸವ ಎಂಬ ಮರುಕ ಹುಟ್ಟಿತು. ವೇದಿಕೆಯ ಮೆಲೆ ಕಳ್ಳ ಗುರುಗಳು ಸುಳ್ಳ ಶಿಷ್ಯರು ಕುಳಿತು ವಚನಕಾಲದ ಶರಣ ತತ್ವಗಳನ್ನು ಪಾಲಿಸಲು ಎದುರು ಕುಳಿತಿರುವ ಸಾವಿರಾರು ಮುಗ್ಧ ಭಕ್ತರಿಗೆ ಬೋಧೆ ಮಾಡುತ್ತಾರೆ. ಕಳ್ಳ-ಸುಳ್ಳರು ತಾವೆಂಬುದು ಮನದಟ್ಟಾಗಿದ್ದರೂ ತಾವಲ್ಲ, ನೀವು ಹೀಗೆ ಬದುಕಿ ಎಂದು ಮತ್ತೊಬ್ಬರಿಗೆ ಹೇಳುವ ಇವರ ನಡುವೆ ಆ ಬಸವ ಮೂಕನಾಗಿದ್ದಾನೆ. ವಚನ ಸಂದೆಶಗಳ ಹೆಸರಿನಲ್ಲಿ ಬಸವಣ್ಣನವರ ಪಟ ಮಾತ್ರ ಪ್ರಚಾರಕ್ಕೆ ಮತ್ತು ದುಡಿಮೆಗಾಗಿ ಬೇಕೆ ಹೊರತು ಅವರ ಆದರ್ಶಗಳು ಇವರಿಗೆ ಬೇಕಿಲ್ಲ – ಇವರ ಕೋಮಿನ ಮತದಾರರಿಗೆ ಬೆಕು. ಅವರೊಳಗಿನ ಜಾತಿಪ್ರಜ್ಞೆಯನ್ನು ಗಟ್ಟಿಗೊಳಿಸಲು ಬಳಸಿಕೊಳ್ಳುತ್ತಾರೆ. ಆತ್ಮಸಂವಾದದಲ್ಲಿ ಬಸವಣ್ಣ ನೂರಾರು ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತ ತನ್ನೊಳಗೆ ತಾನೆ ಇರುವುದರಿಂದ ಲೋಕಕ್ಕಿಂತ ತನ್ನ ತಾನು ತಿದ್ದಿಕೊಳ್ಳಲಾರದ ಸ್ಥಿತಿಯಲ್ಲಿರುವ ಬಸವ ಕಂಡ.

ಅಂಬೇಡ್ಕರ್ :
ಬೆಳಕಿನ ದೊಂದಿ ಹಿಡಿದ ಸಾವಿರಾರು ನಕ್ಷತ್ರಗಳು ಮಿಣಕಮಿಣ ಮಿಂಚುತ್ತ ಫಳ್..ಫಳಾರ್ ಅಂತ ಮಿಂಚು ಸಿಡಿದು ಆಕಾಶ ಎರಡಾಗಿ ಸೀಳಿದ ಬೆಳಕಲ್ಲಿ ಯಾರೋ ನಿಂತಿದ್ದರು. ಅರೆ…! ಶಿಲ್ಪವಾಗಿರುವ ಮೂರ್ತಿ ಬೇರೆ ಇವರು ಬೇರೆ. ಇವರು ಬರುವಾಗ ಬೆನ್ನ ಹಿಂದೆ ಸರಿದು ಹೋಗುತ್ತಿದ್ದ ಕತ್ತಲಲ್ಲಿ ಎಷ್ಟೋ ಜೀವಿಗಳ ರೋದನ ಕೇಳುತ್ತಿತ್ತು. ಅದೆಲ್ಲದರ ನಡುವೆ ಭಗವತೋ ಅರಹತೋ ಸೊಲ್ಲಿನ ರಾಗ ಕೇಳುತ್ತಿತ್ತು.

ಪಂಚಶೀಲತತ್ವಗಳು ರಾಜಕೀಯದ ಅಖಾಡದೊಳಗ ಬಂದರೆ ಉತ್ಕಟವಾದ ಮನುಷ್ಯಪ್ರೀತಿ ಸಾಧ್ಯವಾಗತದ, ಆಗ ಮಾತ್ರ ಮನುಷ್ಯರನ್ನು Young_Ambedkarಮನುಷ್ಯರು ಪ್ರೀತಿಸುವ ಮತ್ತು ಶೋಷಣೆ ಮುಕ್ತ ಸಮಾಜ ಕಟ್ಟಲು ಸಾಧ್ಯವಾದೀತೆಂಬ ಹುಮ್ಮಸ್ಸಿನ ಮಾತು ನನ್ನೊಳಗೆ ಬೆಳೆಯುತ್ತಿದ್ದಂತೆ. ಆರ್.ಪಿ.ಆಯ್. ಕಾಂಗೈನೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗಲೆ ಬಾಬಾಸಾಹೇಬರು ಭೂಮಿ ಮ್ಯಾಲಿನ ಆಶಯದ ಕಡೆ ಬೆನ್ನು ತಿರುಗಿಸಿರುವ ಹಾಗೆ ಕಾಣುತ್ತಿದ್ದರು. ಯುಗಪ್ರವರ್ತಕನ ವೇಷದೊಳಗೆ ಬಂದು ಹೋದಂತೆ ಕನಸಾಗಿ ಉಳಿದರೇನೋ ಅನಿಸುತ್ತಿದ್ದಾಗ ಮತ್ತೆ ಮೋಡ ಮರೆಯಾದಂತೆ ಬೆಳಕಿನ ಕಿಡಿ ಆಕಾಶದಗಲಕ್ಕೂ ಏಳತೊಡಗಿತು. ಬುದ್ಧ ನಗುವಿನೊಂದಿಗೆ ಕಾಣಿಸಿಕೊಂಡ ವ್ಯಕ್ತಿಯೋರ್ವ ಕತ್ತಲು ಬೆಳಕಿನಲ್ಲಿ ಓಡಾಡುತ್ತಿದ್ದ. ಆ ಬೆಳಕು ಗಪ್ಪಗಾರಾದಾಗ ಮತ್ತದೆ ನಿಶ್ಯಬ್ಧ.

ಆ ಕತ್ತಲಲ್ಲಿ ಅದೊಂದೇ ಮಾತು ಖಡಕ್ಕಾಗಿ ಆಗಸದಿಂದ ಕೇಳಿಬಂತು. “ಸುಡುಗಾಡದ ಅನುಭವ ಇಂಥದ್ದು ಎಂದರೆ ಸುಡುಗಾಡವನ್ನು ಅರಿತುಕೊಂಡಂತಾಗುವುದಿಲ್ಲ. ಮುನ್ನುಗ್ಗು, ನಿನಗೆ ನೀನೆ ಸೂರ್ಯನಾಗಿ ನಿಲ್ಲು.” ನನ್ನ ಪ್ರಪಂಚ ಸಣ್ಣದಿದೆ ಎಂದು ಹೇಳಬೇಕೆನ್ನುವಷ್ಟರಲ್ಲಿ ಮತ್ತೆ ನಮೋ ಭಗವತೋ ಅರಹತೋ ಕೇಳತೊಡಗಿತು. ಆಕೃತಿ ಕತ್ತಲಲ್ಲಿ ಕರಗಿತು. ಆ ಕತ್ತಲದ ರೋದನದಲ್ಲಿ ವೋಟಿನ ವ್ಯಾಪಾರ ಜೋರಾಗಿಯೇ ನಡೆದಿತ್ತು. ಫಂಡರಪುರದಲ್ಲಿ ಕುದುರೆ ವ್ಯಾಪಾರ ನಡೆಸುವ ಹಾಗೆ ಟವೆಲ್ಲನ್ನು ಕೈ ಮೇಲೆ ಹಾಕಿಕೊಂಡ ದಲ್ಲಾಳಿಗಳು, ಒಳಮುಚಗಿನಲ್ಲಿ ಏನೇನೋ ಲೆಕ್ಕಾಚಾರ ನಡೆಸುತ್ತಿದ್ದರು. ಖರೀದಿಗೆ ಕೊಟ್ಟವನಿಗೆ ಸಮಾಧಾನ ಆದಂತೆ ಕಂಡಾಗ ಅವನು ನಕ್ಕ ಇವನು ಗೆದ್ದ ಸಂಭ್ರಮದಲ್ಲಿದ್ದ.

ಗಾಂಧಿ :
ಕತ್ತಲೆಂದರೆ ಭಯಗೊಳ್ಳುವ ನನಗೆ ಕನಸುಗಳು ಬಿದ್ದದ್ದು ಅಪರೂಪವೇ ಅನ್ನಬೇಕು. ಆದರೆ ನೆನ್ನೆ ದಿನ ಒಂದು ಪಾತ್ರ ಏಕಾಕಿಯಾಗಿ ಇತಿಹಾಸದಿಂದ ಜಿಗಿದು ನೇರವಾಗಿ ನನ್ನ ಕಣ್ಣೊಳಗೆ ಮೂಡಿತ್ತು. ಜಗತ್ತೇ ನಮ್ರವಾಗಿ ನಮಿಸುವಾಗ ಇವನೇಕೆ ತಲೆಬಾಗುತ್ತಿಲ್ಲವೆಂಬ ಕುತೂಹಲದಿಂದ ಬಂದ ಪಾತ್ರವದು. ನನ್ನ ಹಾಸಿಗೆಯ ಹಿಂತುದಿಯಲ್ಲಿ ಕುಳಿತು ಮೆದುವಾಗಿ ನನ್ನ ಮೈದಡವಿ ಎಚ್ಚರಿಸಿ ಎದ್ದು ನಿಂತಿತು. ಅದೇ ಆ ಬೋಳುದಲೆ, ಉದ್ದಮೂಗಿನ ಚಪ್ಪಟೆಯ ಹಣೆ, ಮುಖದ ಆಳದಲ್ಲೆಲ್ಲೋ ಅವಿತು ಕುಳಿತಂತಿರುವ ಕಣ್ಣುಗಳಿಗೆ ವೃತ್ತಾಕಾರದ ಕನ್ನಡಕ, ಒಣಗಿ ಹೋಗಿದ್ದ ಒಣಕಲು ಕಡ್ಡಿಯಂತ ಆ ದೇಹ ವ್ಯಂಗ್ಯಚಿತ್ರದಿಂದ ಜೀವತಳೆದು ಮಾತಾಡಿಸಿ ಹೋಗಲು ಬಂದಂತಿತ್ತು. “ಇಷ್ಟು ತಡರಾತ್ರಿಗೆ ಬಂದ ನೀವು ಅದಾರು..? ನಿಮ್ಮ ನಾಮಾಂಕಿತವು ಅದೇನು..?” ಎಂದು ಅನಾಗರೀಕ ದೊಡ್ಡಾಟದ ಪಾತ್ರವಾಗಿ ಮಾತಾಡಿಸಿಬಿಟ್ಟೆ. “ರಾಮನೆಂದರೆ ಯಾರೆಂಬುದನ್ನು ಬಲ್ಲೆಯಾ?” ಬಚ್ಚಬಾಯಿಯಲ್ಲಿ ಹಲ್ಲಿಲ್ಲದಿದ್ದರೂ ಮಾತು ಸ್ಫಟಿಕವಾಗಿದ್ದವು. “ಓ ಹೌದೇನು ರಾಮರಲ್ಲಿ ನನಗೆ ಇಬ್ಬರು ರಾಮರ ಬಗ್ಗೆ ಗೊತ್ತುಂಟು” ಎಂದು ಬೀಗಿದೆ ನಾನು. “ವರ್ಗ ವ್ಯವಸ್ಥೆಯನ್ನು ಸುಭದ್ರ ಕಾಪಾಡಲು ಸೃಷ್ಟಿಸಲ್ಪಟ್ಟ ಮಹಾಕಾವ್ಯದ ಕ್ಷಾತ್ರ ಕುಲದ ಪಾತ್ರ ರಾಮನ ಬಗ್ಗೆ ಕೇಳುತ್ತಿದ್ದೀರಾ..? ಅಥವಾ ಸಂಸ್ಕೃತಿಯನ್ನು ಹಾಗೆ! ಹೀಗೆ! ಆ ಹಿಂದೆ ಹೇಗಿತ್ತು ಈಗ ಹೀಗಾಯ್ತಲ್ಲ ಅಂತ ರಾಷ್ಟ್ರದ ಭವಿಷ್ಯ ಭ್ರಮಿಸಲ್ಪಟ್ಟ್ಟು – ಇತಿಹಾಸವನ್ನು ಸರಿಪಡಿಸಲು ಟೊಂಕ ಕಟ್ಟಿರುವ ಪುಂಡರ, ಭಂಡರ ಗುಂಪುಗಾರಿಕೆಗೆ ವಸ್ತುವಾಗಿರುವ ರಾಮನೋ..? ಯಾವ ರಾಮ ಹೇಳಿ?” ಎಂದು ಮರುಪ್ರಶ್ನಿಸಿದಾಗ. ಆ ಬಂದಂಥ ಮಹಾನುಭಾವ ಕನಿಕರದಿಂದಲೇ “ಆ ರಾಮರು ಬೇರೆ – ನಾನು ಕೇಳುತ್ತಿರುವ ರಾಮ ಬೇರೆ” ಎಂದರು.

ಈ ಜಗತ್ತಿನಲ್ಲಿ ಮೂರನೆಯ ರಾಮನೊಬ್ಬನಿದ್ದಾನೆಯೇ? ಅಯ್ಯಯ್ಯೋ ಹಾಗಿದ್ದರೆ ಆ ರಾಮನ ಕುರಿತಾಗಿ ನಾನು ತಿಳಿದುಕೊಳ್ಳಲಿಲ್ಲವಲ್ಲ ಎಂದು ನೊಂದುಕೊಳ್ಳುತ್ತಿರುವಾಗಲೇ… “ನಿನಗೆ ತಿಳಿದಿರಲೋ ಹುಡಗಾ, ಅವನೊಬ್ಬ ಅಹಿಂಸಾತ್ಮಕ ರಾಮ. ಮನಸ್ಸಿನ ತೇಜಸ್ಸನ್ನು, ನೈತಿಕ ನಡೆಯನ್ನು ಕ್ಷಣಕ್ಷಣಕ್ಕೂ ನಿನ್ನಲ್ಲಿ ಒರೆಗೆ ಹಚ್ಚುವ ಅಂತಃಶ್ಯಕ್ತಿಯ ಸೂಚಕ ಈ ರಾಮ” ಎಂದು ಹೇಳುತ್ತಿದ್ದಾಗ ನನಗೆ ಈಗ ಬಂದಿರುವ ಇವರು ಯಾರೆಂಬ ಬೆರಗು ಮೂಡತೊಡಗಿತು. ನನ್ನ ಮನದೊಳಗಿನ ಪ್ರಶ್ನೆ ಕಣ್ಣೊಳಗಿನ ಕಸ/ಕೆಸರು ಚುಚ್ಚುವ ಹಾಗೆ ಆತನ ಎದೆಗೆ ನಾಟಿತೋ ಏನೋ ಅವರು ಕಸಿವಿಸಿಯಾಗುತ್ತಿದ್ದರು. “ಅಯ್ಯೋ ಹುಚ್ಚು ಹುಡುಗಾ ನಾನಪ್ಪಾ, ಬದುಕಿದ್ದಾಗಲೇ ಮಹಾತ್ಮನಾಗಿದ್ದ ಈ ದೇಶದ ಪಿತಾಮಹಾ! ನನ್ನ ಗುರುತು ಸಿಕ್ಕಲಿಲ್ಲವೇನಪ್ಪ ನಿನಗೆ?” ಕನಿಕರದ ಮುಗುಳ್ನಗೆ ತುಟಿಯಿಂದಾಚೆ ಮೂಡಲಿಲ್ಲ, ಆದರೂ ನಕ್ಕರು.

ಛೇ..! ನನ್ನ ತಲೆಯಲ್ಲಿ ಭೀಮಗಾತ್ರದ ಮಾನವೀಯ ಮುಖಗಳನ್ನು ಬಿಟ್ಟರೆ ಬೇರೆಲ್ಲ ಮುಖಗಳು 200px-MKGandhi[1]ಗೋಮುಖದ ಸೋಗಿನ ಪಾತ್ರಗಳಂತೆ ಇತಿಹಾಸದಲ್ಲಿ ಕುಣಿಯುತ್ತಿದ್ದವು. ಇವನಾರು…? ಶುದ್ಧೋದನನ ಮಗ ಸುಗತ ಸಿದ್ಧಾರ್ಥನೇ? ಅಲ್ಲ. ಬಾವಲಿ ಥರದ ಚಾಚು ರೆಕ್ಕೆಗಳಲ್ಲಿ ಅವಮಾನ ಹತಾಶೆಗಳೆಲ್ಲವನು ಮುಚ್ಚಿಟ್ಟುಕೊಂಡು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ಮನ್ನಣೆ ಕೊಡಿಸಿ, ಮಖಮಲ್ಲು ವಸ್ತ್ರದಲ್ಲಿ ಬೆಚ್ಚಗಿನ ಬದುಕಿಗೆ ಅಣಿಮಾಡಿಕೊಟ್ಟ ಬಾಬಾ ಸಾಹೇಬ್..? ಅವರೂ ಅಲ್ಲ. ಈ ದೇಶದ ಪ್ರತಿಯೊಬ್ಬ ದೀನ ದಲಿತರ ಹಿಂದುಳಿದವರ ಉದ್ಧಾರ ಮಾಡಲು ಬರುವ ಪ್ರತಿಯೊಬ್ಬರೂ ಮಹಾತ್ಮರೇ ಆಗಿರುವಾಗ ಈಗ ಬಂದಿರುವ ಇವರ್‍ಯಾರು..?

“ನೆತ್ತಿಮಾಸ ಆರದ ಎಳೆಗರುವಿನಂತೆ ಯಾಕೆ ನಿನ್ನ ಚಿತ್ತವನ್ನು ಚಂಗನೆ ಚಂಚಲಗೊಳಿಸುತ್ತಿರುವೆ ಹುಡುಗಾ… ನಾನು ಕಣಪ್ಪ ಕಂದ, ಹಳ್ಳಿಯ ಸಾಂಸ್ಕೃತಿಕ ಮಾದರಿಯಲ್ಲಿ ಇಡೀ ಭಾರತವನ್ನು ನನ್ನ ಕನಸಿನ ಗ್ರಾಮಭಾರತವಾಗಿಸಲು ಹವಣಿಸಿದವ. ಅದೇ ಮಾದರಿಯಿಟ್ಟುಕೊಂಡು ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ಸತತ ಸೆಣಿಸಿದ ಸತ್ಯವಂತ ಅಹಿಂಸಾಮಾರ್ಗಿ ಗಾಂಧಿ,”

ನನ್ನ ದುರ್ದೆಸೆಗೆ ಮರುಕಪಟ್ಟಿರಬೇಕು. ನಾನು ಕ್ಷಮೆಯಾಚಿಸಲು ಏನೂ ಉಳಿದಿರಲಿಲ್ಲ ಅಲ್ಲಿ. ಹೇಗೆ ಸತ್ಕರಿಸಬೇಕು. ಯಾವ ಬಗೆಯಲ್ಲಿ ಉಪಚರಿಸಬೇಕೆಂದು ತಿಳಿಯದಾಗಿತ್ತು. ವಂದಮಿ, ಜೈ ಭೀಮ ಹೇಳಲೇ, ಲಾಲ್‌ಸಲಾಮ್ ಅನ್ನಲೇ, ಕಾಮ್ರೇಡ್ ಕುಳಿತುಕೊಳ್ಳಿ ಅನ್ನಬೇಕೋ ಅಥವಾ ಗುರು ಹಿರಿಯರನ್ನು ಕಂಡಾಗ ಮನಸ್ಸಿಲ್ಲದ ಮನಸ್ಸಿನಿಂದ ನಮಸ್ಕರಿಸುವಂತೆ ನಮಸ್ಕರಿಸಬೇಕೋ, ರಾಮರಾಮಾ ಎಂದು ಹೇಳಬೇಕೊ,,, ಒಂದೂ ತಿಳಿಯದೇ ಗೊಂದಲದಲ್ಲಿದ್ದಾಗ ಗಾಂಧಿ ಮುಂದೆ ಬಂದು ನನ್ನ ಬಿಗಿ ಹಿಡಿದು ಅಪ್ಪಿಕೊಳ್ಳಲು ಮುಂದಾದರು. “ನನ್ನಲ್ಲಿ ತ್ರಾಣ ಉಳಿದಿಲ್ಲ ಮಾರಾಯಾ, ಉಪವಾಸಕ್ಕೊಂದು ಕೊನೆಯೆಂಬುದು ಇಲ್ಲವಾಗಿದೆ ನನಗೆ, ಹಾಲು ಹಣ್ಣು ಕೊಟ್ಟು ಸಲಹುತ್ತೀಯಾ?” ನಮ್ರವಾಗಿತ್ತು ಮಾತಿನ ಧಾಟಿ.

“ಬಾಪೂಜಿ, ಈಗ ಯಾವ ಉಪವಾಸ ಮಾಡುತ್ತಿದ್ದೀರಿ..?”

“ಹತೋಟಿಯಲ್ಲಿಟ್ಟುಕೊಳ್ಳಲಾರದ ಆಸೆಗಳ ವಿರುದ್ಧ ಅಂತ ಹೇಳಲೇನು, ಇರುವ ರೊಕ್ಕ ಇದ್ದ ಹಾಗೆನೆ ಅದರ ಬೆಲೆಗೆ ಮಹತ್ವಕೊಟ್ಟು ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿರುವ ನನ್ನ ನೋಟುಗಳ ವಿರುದ್ಧ ಅನ್ನಬೇಕೋ ತಿಳಿಯದಾಗಿದೆ. ಒಟ್ಟಿನಲ್ಲಿ ಉಪವಾಸಕ್ಕೊಂದು ಕೊನೆಯಿಲ್ಲದಾಗಿದೆ…” ಮನಸ್ಸಿನ ಖಿನ್ನತೆಯಲ್ಲಿ ಇನ್ನೂ ಏನನ್ನೋ ಹೇಳುತ್ತಲಿದ್ದರು.

“ಇಲ್ಲೇ ಇರಿ ಈಗ ಬಂದೆ,” ಎಂದು ಎದ್ದು ಒಳಹೋಗುತ್ತಿದ್ದಂತೆಯೇ ರಘುಪತಿ ರಾಘವ ಭಜನ್ ಕೇಳಿತೋ ಇಲ್ಲವೋ ಎಂಬಂತೆ ಕೇಳತೊಡಗಿತು. ಇಡೀ ಖೋಲಿಯೇ ಖಾಲಿಯಾಗಿತ್ತು ನನ್ನ ಕುರುಹಿಗೂ ನಾನು ಉಳಿದಿರಲಿಲ್ಲ. ಇದು ಚುನಾವಣಾ ಅಖಾಡದಿಂದ ಹೊರಗಿರುವ ಪಾತ್ರವೆನಿಸತೊಡಗಿತು. ಅದೇ ಆ ರಾಜಕೀಯ ಅಂಗಳದಲ್ಲಿನ ಫ್ಲೆಕ್ಷ್ ಒಂದರಿಂದ ಎದ್ದು ಬಂದಂತಿದ್ದ ಅವರ ಬಡಕಲು ಶರೀರದ ಅಂತಃಕರಣ ನನ್ನ ಕೆಣಕಿತ್ತು.

ಇವರ ಹೊರತಾಗಿ ಮತ್ತೊಬ್ಬರು ಮನಃಪಟಲದಲ್ಲಿ ಸುಳಿಯಲಿಲ್ಲವಾಗಿ ಬುದ್ದ, ಬಸವ, ಗಾಂಧಿ ಮತ್ತು ಅಂಬೇಡ್ಕರ ಅವರ ಆಲೋಚನೆಯ ಬೆಳಕಿನಲ್ಲಿರುವ ಪ್ರಜಾಪ್ರಭುತ್ವದ ಆಶಯಗಳು ಫ್ಲೆಕ್ಸ್‌ನಿಂದ ಹೊರಬಂದು ಆಚೆಗೆ ನಿಂತ ಚೈತನ್ಯಗಳಲ್ಲಿವೆ. ವೋಟ ಮಾಡಲು ಆ ರೂಪದ ವ್ಯಕ್ತಿಗಳ ತಲಾಶ ಮಾಡಬೇಕಿದೆ. ಆಗ ಮತ(ವೋಟು)ದ ಸಾರ್ಥಕ್ಯವೂ ಬಲಗೊಳ್ಳುತ್ತದೆ.

ಜೈಪುರ ಸಮ್ಮೇಳನದಲ್ಲಿ ಭ್ರಷ್ಟಾಚಾರದ ಹಣೆಪಟ್ಟಿ

– ಮಹಾದೇವ ಹಡಪದ

ಪರಂಪರೆಯಲ್ಲಿ ಕೆಟ್ಟದ್ದೂ ಒಳ್ಳೆಯದೂ ಇದ್ದೇ ಇರುತ್ತದೆ. ಒಳ್ಳೆಯದರ ನಡೆಯಲ್ಲಿ ಮಾನವೀಯ ಮೌಲ್ಯಗಳು ಜಾಗ ಮಾಡಿಕೊಂಡಿರುತ್ತವೆ. ಕೆಟ್ಟದರ ನಡೆಯು ಮಾತ್ರ ಬಹಬೇಗ ವಿಸ್ತಾರಗೊಳ್ಳುವ, ವಿಕಾರಗಳನ್ನು ಹೆರುವ ಶಕ್ತಿಯುಳ್ಳದ್ದಾಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರಾವಧಿಯ ಆಯಸ್ಸು ಅಲ್ಪಾವಧಿಯದ್ದಾಗಿರುವ ಕಾರಣ ಈ ಎರಡು ಸಮಾಜ ವಿಜ್ಞಾನಗಳನ್ನು ಸಮತೂಕದಲ್ಲಿಟ್ಟು ಆಡಳಿತದ ಹೊರೆ ಹೊರುವ ಸಮಾನತೆಯ ಆಶಯ ಮತ್ತೆಮತ್ತೆ ವ್ಯವಸ್ಥೆಯಿಂದ ನುಣುಚಿಕೊಳ್ಳುತ್ತಲೇ ಇರುತ್ತದೆ. ಕೆಟ್ಟ ಪರಂಪರೆಯು ರಿವೈವಲೈಜ್ ಆಗುವಷ್ಟು ಒಳ್ಳೆಯ ನಡೆ ಬಹಳ ದಿನ ಬದುಕಲಾರದು.

ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ಈ ನೆಲದ ಗುಣದಲ್ಲಿದೆ (ಪರಧರ್ಮ ಸಹಿಷ್ಣುತೆ…) ಎಂದು ಹೇಳುವ ಆಧ್ಯಾತ್ಮವಾದಿಗಳ ಅತ್ಯುತ್ಸಾಹದ ಮಾತುಗಾರಿಕೆಯಲ್ಲಿ ಎಲ್ಲಿಯತನಕ ವಾಸ್ತವದ ಅರಿವಾಗುವುದಿಲ್ಲವೋ ಅಲ್ಲಿಯತನಕ ಭಾರತದಲ್ಲಿನ ಸಮಾಜ ವ್ಯವಸ್ಥೆಯ ಮೂಲಬೇರಿನಲ್ಲಿ ಕವಲೊಡೆದ ಕೆಟ್ಟ ಪರಂಪರೆ ತನ್ನ ಪಥ ಬದಲಿಸಲಾರದು. ಒಬ್ಬರನ್ನೊಬ್ಬರು ಅನುಮಾನಿಸುತ್ತ, ಅಪಮಾನಿಸುತ್ತ, ದೂಷಿಸುತ್ತ ತಿರಸ್ಕರಿಸುವ ಚಾಳಿ ಬೆಳೆದು ಬಂದಂತೆಲ್ಲ ಅಸ್ಪೃಶ್ಯತೆಯ ಕಾಂಡ ಗಟ್ಟಿಗೊಳ್ಳುತ್ತಲೇ ಬಂದಿತು. ನಿಜವಾಗಿಯೂ ಈ ಹೂತು ಹೋದ ಮರದ ನೀಚತನದ ಬುಡಕ್ಕೆ ಕೈ ಹಾಕಿ ಇಡೀ ಗಿಡವನ್ನೇ ಅಲ್ಲಾಡಿಸಲು ಹವಣಿಸಿದವರು Young_Ambedkarಬಾಬಾಸಾಹೇಬರು, ಆ ಪ್ರಯುಕ್ತವಾಗಿ ಒಂದಷ್ಟು ಎಲೆ-ಹಣ್ಣು-ಕಾಯಿ-ಬೇರುಗಳಲ್ಲಿ ಉಸಿರಾಡುವ ಜಾಗಗಳು ಸಿಕ್ಕವು. ಅಷ್ಟಕ್ಕೆ ತೃಪ್ತರಾಗದ ವೈಚಾರಿಕರು ವೈಜ್ಞಾನಿಕವಾಗಿ ಸಂಸ್ಕೃತಿಯ ಒಳ-ಹೊರಗನ್ನು ಕೆಣಕತೊಡಗಿದರು. ಆಗ ಕೈಕಾಲಿಗೆಲ್ಲ ತೊಡರಿದ ಹಿಂದೂ ಎಂದು ಗುರುತಿಸಲ್ಪಟ್ಟ ಸಾಮಾಜಿಕ ಸ್ಥಿತ್ಯಂತರಗಳ ಮೇಲೆ ಬೆಳಕು ಬೀಳತೊಡಗಿತು. ಹಳೆಯ ದಫ್ತರಿನಲ್ಲಿ ದಾಖಲಾಗಿರುವ, ದಾಖಲಾಗದೇ ಉಳಿದಿರುವ ಸಮಾಜ ವಿಜ್ಞಾನದ ನ್ಯೂನ್ಯತೆಗಳು ಪಟಪಟನೆ ಅನಾವರಣಗೊಳ್ಳತೊಡಗಿದವು.

ಬದುಕಿನ ಕೌಶಲಗಳು ಕುಲ ಕಸಬುಗಳಾಗಿ, ಜಾತಿಗಳಾಗಿ, ಪಂಗಡಗಳಾಗಿ, ಒಳಪಂಗಡಗಳಾಗಿ, ಬಣ-ಬಳ್ಳಿ-ಕುಲಗೋತ್ರಗಳಾಗಿ ಒಂದರ ಒಳಗೊಂದು ಬೆಸೆದುಕೊಂಡ ಹೆಣಿಗೆಗಳಾಗಿ ವರ್ಣಾಶ್ರಮವನ್ನು ಸಾಕಿಕೊಂಡು ಬಂದಿರುವುದನ್ನು ಕಾಣುವಂತಾಯಿತು. ಹುಲಿ ಸವಾರಿ ಮಾಡುವವ, ನಾಯಿಯನ್ನು ಪಳಗಿಸಿ ಬೇಟೆಗೆ ಬಳಸಿದವ, ಕುರಿಗಳ ಸಾಕಿ, ದನಗಳ ಮೇಯಿಸಿ, ಹೊಲಗದ್ದೆಗಳ ಉತ್ತಿಬಿತ್ತಿ ಬೆಳೆದವ, ಹಾವಿನ ಹಾಸಿಗೆಯಲ್ಲಿ ಮಲಗಿದವ. ಹೀಗೆ ಕೂಡು ಬಾಳಿನ ಸಮುದಾಯ ಪ್ರಜ್ಞೆಗೆ ನೆರಳಾದವರು ಜನಾಂಗಗಳಿಗೆ ನಾಯಕರಾಗಿ, ಸತ್ತ ಮೇಲೆ ದೇವರಾಗಿ ಕಂಕಣ ಗೋತ್ರಗಳನ್ನು ಬೆಳೆಸಿದ್ದರು. ಈ ಎಲ್ಲ ತಿಳವಳಿಕೆಯನ್ನು ಪ್ರಕೃತಿಯಿಂದ ಕಲಿತ ಕೆಲವೇ ಜನರು ಒಟ್ಟು ಸಮುದಾಯಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ವರ್ಣವ್ಯವಸ್ಥೆಯನ್ನು ಸೃಷ್ಟಿಸಿದರು. ಅಂಕೆಗೆ ಒಳಪಟ್ಟವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎನ್ನುವುದು ಅರಲುಗೊಂಡ ಕೆರೆಗೆ ತೊರೆಬಂದು ಹಾಯ್ದಂತಾಯಿತ್ತು ಎಂಬಂತೆ ಮಹಾನ್ ಪರಂಪರೆಯಲ್ಲಿ ಸೇರಿಕೊಂಡಿತು.

ಈಗ ಕೆಟ್ಟ ಪರಂಪರೆ ವಿಲಕ್ಷಣ ರೂಪಗಳು ಮತ್ತೆ ಹೊಸ ಅವತಾರಗಳಲ್ಲಿ ಜೀವಂತಗೊಳ್ಳುತ್ತಿರುವ ಅನುಮಾನಗಳು ಗಟ್ಟಿಗೊಳ್ಳುತ್ತಿವೆ. ದಲಿತ ಮತ್ತು ಇತರೆ ಹಿಂದುಳಿದ ಸಮುದಾಯಗಳ ಕುರಿತಾಗಿ ಎಲ್ಲಿಲ್ಲದ ಅಸಮಾಧಾನಗಳು ಹೊಗೆಯಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಒಂದು ಕಾಲಕ್ಕೆ ಅಸ್ಪೃಶ್ಯರು, ಬಹಿಷ್ಕೃತರು, ನೀಚರು, ಲಂಪಟರು, ಅಪನಂಬಿಕಸ್ಥರು, ಕೊಳಕರು, ಗುನ್ಹೇಗಾರರು, ಜಾತಿಹೀನರು ಎಂದು ದೂಷಿಸಲ್ಪಟ್ಟವರನ್ನು ಇಂದಿನ ಪರಿಭಾಷೆಯಲ್ಲಿ ಭ್ರಷ್ಟರು ಭ್ರಷ್ಟಾಚಾರದ ಕಾರಣಕರ್ತರೆಂದು ಕರೆಯಲು ಆರಂಭಿಸಿರುವುದು ಕೂಡ ರಿವೈವಲಿಜಂನ ಲಕ್ಷಣದಂತೆ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಭ್ರಷ್ಟರನ್ನು ಪರಿಶಿಷ್ಟ ಜಾತಿ, ವರ್ಗ ಮತ್ತು ಅತಿ ಹಿಂದುಳಿದ ವರ್ಗಗಳಲ್ಲಿ ಕಾಣಬಹುದು ಎಂಬಂತಹ ಹೇಳಿಕೆಗಳನ್ನು ಈ ಹಿನ್ನೆಲೆಯಲ್ಲಿ ನೋಡಬಹುದು.

ಇತಿಹಾಸದ ಕರಾಳಪುಟಗಳಲ್ಲಿ ಇತರ ಸಮುದಾಯಗಳ ನೆನಪು ಬರೀ ಕಹಿಯಾಗಿ ಉಳಿದಿದೆ. ಹಾಗೆಂದ ಮಾತ್ರಕ್ಕೆ ಇದು ಭ್ರಷ್ಟಾಚಾರದ ಸಮರ್ಥನೆ ಮಾಡುವುದಾಗುವುದಿಲ್ಲ. ಆ ನೆನಪುಗಳಿಂದ ಬಿಡಿಸಿಕೊಳ್ಳಲು ವಾಮಮಾರ್ಗ ಹಿಡಿಯುವ ಇರಾದೆ ಯಾವ ಹಿಂದುಳಿದ ವರ್ಗಗಳ ಹಿತಾಸಕ್ತಿಯಾಗಿರುವುದಿಲ್ಲ ಅನ್ನುವುದನ್ನು ಸಮಾಜವಿಜ್ಞಾನಿಗಳು ಅರಿತುಕೊಂಡಿದ್ದಿದ್ದರೆ ಈ ತೆರನಾದ ದೂಷಣೆಯನ್ನು ಮಾಡುತ್ತಿರಲಿಲ್ಲ. ಇಲ್ಲಿಯತನಕವೂ ಬದುಕುವ ಹಕ್ಕಿಗಾಗಿ ಹೋರಾಟದ ಮುಖಾಂತರ ನ್ಯಾಯ ದೊರಕಿಸಿಕೊಂಡ ಸಮುದಾಯಗಳು ಈಗ ಅಧಿಕಾರಕ್ಕೆ ಬಂದ ತಕ್ಷಣ ಭ್ರಷ್ಟಾಚಾರದ ಪೋಷಕರಾಗಿ ಕಾಣಿಸಿಬಿಟ್ಟರೇ? ಕಾನೂನಿನ ಮುಖೇನ, ನೈತಿಕ ಪ್ರಜ್ಞೆಯನ್ನು ಬೆಳೆಸಿದ ಅಂಬೇಡ್ಕರ್ ಅವರ ಚಿಂತನೆಗಳು ನಿಮ್ಮ ರಾಜಕೀಯ, ಸಾಮಾಜಿಕ ಧೃವೀಕರಣದಿಂದ ಕೊನೆಗೊಳ್ಳಲಾರವು. ಹಿಂದುಳಿದ ವರ್ಗದ ಒಬ್ಬನೇ ಒಬ್ಬ ಸಮಾಜ ವಿಜ್ಞಾನಿಗೂ ಅನ್ನಿಸದ ಅಂಶ ನಿಮ್ಮ ಗಮನಕ್ಕೆ ಬಂದಿದೆ ಅಂದರೆ ಅದರರ್ಥ ನೀವು ಪರಂಪರೆಯನ್ನು ಹೇಗಿತ್ತೋ ಹಾಗೆ ಉಳಿಸಿಕೊಳ್ಳಲು ಹೇಳಿದ ಮಾತಿದು ಅನಿಸುತ್ತಿದೆ.

ಹಿಂದುಳಿದ ವರ್ಗಗಳವರಲ್ಲಿ ಬೆಳೆದುಬಂದ ಸಮಾಜವಿಜ್ಞಾನದಲ್ಲಿ ಆತ್ಮವಿಮರ್ಶೆಗೆ ಬಹುಮುಖ್ಯಸ್ಥಾನವನ್ನು ನೀಡಲಾಗಿದೆ. ತೀಕ್ಷ್ಣವಾಗಿ ತಿರಸ್ಕರಿಸುವ ಮತ್ತು ಸ್ವೀಕರಿಸುವ ಎರಡು ಸಮತೂಕದ ಗುಣಗಳ ನಡುವೆ ಭಾರತದಲ್ಲಿ ಅಂಬೇಡ್ಕರವಾದ ರಾಜಕೀವಾಗಿ, ಸಾಂಸ್ಕೃತಿವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ನೆಲೆಯಾಗಿರುವಂಥದ್ದು. ಹಾಗಾಗಿ ಇಲ್ಲಿನ ಚಾಟಿಯೇಟುಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ರೀತಿಯಲ್ಲಿ ನಿಮಗೆ ಗೋಚರಿಸುತ್ತವೆ. ಅಭಿಪ್ರಾಯಗಳನ್ನು ರೂಪಿಸುತ್ತಲೇ ಸಮಾಜ ವ್ಯವಸ್ಥೆಯನ್ನು ಕಟ್ಟುವ ಕ್ರಮ ವೇದಕಾಲೀನ ಕ್ರಿಯೆ, ಅದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಹುಸಂಖ್ಯಾತರ ಭಾವನೆಗಳ ವಿರುದ್ಧ ಹೇಳಿಕೆಗಳನ್ನು ನೀಡುತ್ತೀರಿ. ಇಂದು ನಾಳೆ ಹೀಗೆ ಮುಂದಿನ ಭವಿಷ್ಯದಲ್ಲಿ ಹಿಂದಿನ ಸಮಾಜದ ಪರಿಕಲ್ಪನೆಯೇ ಸರಿಯೆಂದು ಸಮರ್ಥಿಸುವುದಕ್ಕೂ ಆ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತೀರಿ. ಇದೆಲ್ಲದಕ್ಕು ಬೆನ್ನೆಲುಬಾಗಿ ನಿಮ್ಮ ಸೈದ್ಧಾಂತಿಕ ಹಿನ್ನೆಲೆಗಳು, ಚರ್ಚೆಗಳು ಬೆಳೆದು ಬರುತ್ತಿರುವುದು ವಿಪರ್ಯಾಸ.

ಜನಪರವಾಗಿದ್ದದ್ದು ಜನಪ್ರಿಯವಾಗುತ್ತಿದ್ದಂತೆ ಸಮಷ್ಠಿ ಪ್ರಜ್ಞೆಯ ಆಶಯಗಳನ್ನು ಕೊಂದುಕೊಳ್ಳುತ್ತದೆ. Nandy_ashisನೊಂದವರ ಪರವಾಗಿದ್ದ ಮಾತು ಮೌನವಾಗಿ ಕೇಸರಿಮಯವಾಗಿರುವ ಸಂಶೋಧಕ ಮಹಾಶಯರ ಮುದಿತಲೆಗಳ ಕೀಟಲೆಗಳನ್ನು ಕರ್ನಾಟಕದಲ್ಲಂತೂ ಕಾಣುತ್ತಿದ್ದೇವೆ. ಅವರಿಗೆ ಇತಿಹಾಸವನ್ನು ತಿದ್ದುವ ಹಟದಲ್ಲಿ ಮನುಷ್ಯತ್ವದ ನೆಲೆಗಳೂ ಕಾಣದಾಗಿವೆ. ಅಂಥದೇ ರೀತಿಯಲ್ಲಿ ಇಂಥ ಹೇಳಿಕೆಗಳನ್ನು ಸೈದ್ಧಾಂತಿಕವಾಗಿ ಸಮರ್ಥಿಸಿಕೊಳ್ಳುವ ಕುರುಡು ಅಭಿಮಾನಗಳೂ ಅಲ್ಲಲ್ಲಿ ಭ್ರಷ್ಟಾಚಾರವನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ಇತ್ಯಾದಿಯಾಗಿ ಹೇಳುತ್ತ ಸನಾತನ ಸಂಸ್ಕೃತಿಯನ್ನು ಪುನಃ ವೇದಕಾಲದ ನೈತಿಕ ನೆಲೆಗಟ್ಟಿನ ಮೂಲಕ ನೋಡುತ್ತಿರುವುದು ಇನ್ನೂ ದುರಂತ. ಖಾಸಗಿಯಾಗಿದ್ದ ಬದುಕುವ ಸ್ವಾತಂತ್ರ್ಯದಲ್ಲಿ ಏಕಾಕಿ ಪ್ರವೇಶಿಸಿ ನೀವು ಹೀಗೆ ಬದುಕಬೇಕು, ಇಂಥದನ್ನೆ ನೀವು ಆಯ್ದುಕೊಳ್ಳಬೇಕು, ಇದನ್ನೆ ತಿನ್ನಬೇಕು, ಹೀಗೆ ಉಡಬೇಕು-ಉಳಿಸಬೇಕು ಎಂಬಿತ್ಯಾದಿಯಾಗಿ… ತಾವಂದುಕೊಂಡಂತೆ ಸಮಾಜವನ್ನು ರೂಪಿಸುತ್ತಿರುವ ಕಾರ್ಪೋರೇಟ್ ಜಗತ್ತಿನ ಇಂದಿನ ಆರ್ಥಿಕ ನೀತಿಗಳು ಮನುಷ್ಯನ ಸಂವೇದನೆಯನ್ನು ಹತ್ತಿಕ್ಕುತ್ತಿರುವ ಈ ಹೊತ್ತಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದೆಲ್ಲ ಬೊಬ್ಬಿಡುವ ಇವರು ಆಳವಾದ ಸಾಮಾಜಿಕ ಏರುಪೇರುಗಳಿಗೆ ಆಹಾರವನ್ನು ಒದಗಿಸುವ ರೀತಿಯಲ್ಲಿ ಪ್ರತಿಕ್ರಿಯಿಸುವುದು ಯಾವ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದಿದೆ ಅನ್ನುವುದು ಸ್ಪಷ್ಟವಾಗಿದೆ.

ಪ್ರಿಯ ಆಶೀಶ್ ನಂದಿಯವರೇ, ನೀವು ಆಡಿರುವ ಮಾತುಗಳನ್ನು ಮುಂದಿನ ಪೀಳಿಗೆಯ ನಿಮ್ಮ ಮೊಮ್ಮಗ ಸಮರ್ಥಿಸಿಳ್ಳುತ್ತಾನೆಂಬ ಅರ್ಥದಲ್ಲಿ ನಿಮ್ಮ ಹಿಂಬಾಲಕರು ಆತ್ಮವಿಮರ್ಶೆಯ ಮಾತುಗಳನ್ನಾಡುತ್ತಿದ್ದಾರೆ. ಭ್ರಷ್ಟಾಚಾರ ಇಂದು ಜಾತಿಗಳನ್ನೂ ಮೀರಿದ ವ್ಯಾಪ್ತಿಯನ್ನು ಹೊಂದಿರುವುದರ ಅರಿವು ಇದ್ದೂ ದಲಿತ ಹಿಂದುಳಿದ ವರ್ಗಗಳ ಹಣೆಗೆ ಕಟ್ಟುತ್ತಿರುವ ನೀವೂ ಸಹಿತ ಕೆಳವರ್ಗಗಳ ಮೇಲೆ ಆರೋಪ ಮಾಡುವ ಮೂಲಕ ಮೇಲ್ವರ್ಗದ ಕೆಟ್ಟಪರಂಪರೆಗಳನ್ನು ಪೋಷಿಸಿದ್ದೀರಿ. ಈಗ ನೀವು ಏನೇ ಸಮಜಾಯಿಷಿ ಕೊಟ್ಟರೂ, ಯಾವುದೇ ಪುರಾವೆಗಳನ್ನು ಒದಗಿಸಿದರೂ ನನಗೆ ಮಾತ್ರ ನೀವು ಪುನರುತ್ಥಾನವಾದಿಗಳ ಹಾಗೆ ಕಾಣಿಸುತ್ತಿದ್ದೀರಿ.


 

ಪೂರಕ ಓದಿಗೆ:

ಆಶೀಶ್ ನಂದಿಯವರ ಜೈಪುರ ಭಾಷಣ:


Ashis Nandy’s full statement on what he really meant:

This is not what I meant or what I wanted to say. This is what I actually transpired.

I endorsed the statement of Tarun Tejpal, Editor of Tehelka, that corruption in India is an equalising force. I do believe that a zero corruption society in India will be a despotic society.

I also said that if people like me or Richard Sorabjee want to be corrupt, I shall possibly send his son to Harvard giving him a fellowship and he can send my daughter to Oxford. No one will think it to be corruption. Indeed, it will look like supporting talent.

But when Dalits, tribals and the OBCs are corrupt, it looks very corrupt indeed.

However, this second corruption equalizes. It gives them access to their entitlements. And so, as long as this equation persists, I have hope for the Republic.

I hope this will be the end of the matter. I am sorry if some have misunderstood me. Though there was no reason to do so. As should be clear from this statement, there was neither any intention nor any attempt to hurt any community. If anyone is genuinely hurt, even if through misunderstanding, I am sorry about that, too.

Ashis Nandy