Category Archives: ರಮೇಶ್ ಕುಣಿಗಲ್

ಪ್ರಳಯ ಮತ್ತು ಟಿವಿ ಚಾನಲ್‌ಗಳ ಮಹಾದ್ರೋಹ

– ರಮೇಶ್ ಕುಣಿಗಲ್

ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಬಾಲಕಿಯೊಂದಿಗೆ ಇತ್ತೀಚೆಗೆ ಮಾತನಾಡುತ್ತಿದ್ದೆ. “ನೀನು ಮುಂದೆ ಏನು ಓದ್ತಿಯ? ನಿಂಗೆ ಏನು ಆಗಬೇಕು ಅಂತ ಆಸೆ?” ಎಂದು ಕೇಳಿದೆ. ಬಾಲಕಿ, “ನನಗೆ ಏನೂ ಆಸೆ ಇಲ್ಲ. ನಾನು ಏನೂ ಆಗೊಲ್ಲ” ಎಂದಳು. ಯಾಕಮ್ಮ ಎಂದರೆ, “ಡಿಸೆಂಬರ್‌ನಲ್ಲಿ ಪ್ರಳಯ ಆಗುತ್ತಲ್ಲ, ಆಮೇಲೆ ನಾವೆಲ್ಲಿ ಇರ್ತೀವಿ?” – ಉತ್ತರಿಸಿದಳು. ಗಾಬರಿಯಾಯಿತು.

ಟಿವಿ ಚಾನೆಲ್‌ಗಳು ಪ್ರಳಯದ ಭೀತಿ ಸೃಷ್ಟಿಸಿರುವ ಪರಿಣಾಮ ಇದು. ಟಿಆರ್‌ಪಿಗಾಗಿ ಪ್ರಳಯದ ಕೌಂಟ್‌ಡೌನ್ ಚಾನೆಲ್‌ಗಳಲ್ಲಿ ಆರಂಭವಾಗಿದೆ. ಪತ್ರಿಕೆಯೊಂದರಲ್ಲಿ ವರದಿಯಾಗಿರುವ ಪ್ರಕಾರ, ಅನೇಕ ರೋಗಿಗಳು ತಮ್ಮ ಆಪರೇಶನ್ ದಿನಾಂಕವನ್ನು ಮುಂದೂಡಿದ್ದಾರೆ. ಪ್ರಳಯ ಸಂಭವಿಸುವುದೇ ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾದರೂ ಏಕೆ ಎನ್ನುವುದು ಅವರ ವಾದ. ಒಂದು ಪಕ್ಷ ನಿಗದಿತ ದಿನದಂದು ಪ್ರಳಯ ನಡೆಯದೆ ಬದುಕುಳಿದರೆ ಚಿಕಿತ್ಸೆ ಮಾಡಿಸಿಕೊಂಡರಾಯಿತು – ಅವರ ಲೆಕ್ಕಾಚಾರ.

ಯಾವುದು ಸಾಧ್ಯ ಅಲ್ಲವೋ, ಯಾವುದು ಅಸತ್ಯವೋ.. ಅಂತಹವುಗಳನ್ನು ನಂಬಿಸುವುದು ಈ ಕಾಲದಲ್ಲಿ ಬಹು ಸಲೀಸು. ಪಂಡಿತ ಎಂದು ಕರೆಸಿಕೊಳ್ಳುವ ಒಬ್ಬನನ್ನು ತಂದು ಕೂರಿಸಿ ಅವನಿಂದ ಎಲ್ಲಾ ಸುಳ್ಳುಗಳನ್ನು, ಆಧಾರ ರಹಿತ ಮಾಹಿತಿಯನ್ನು ಬಿತ್ತರಿಸಿದರೆ ಸಾಕು, ಜನ ಬೇಸ್ತು ಬೀಳುತ್ತಾರೆ ಮತ್ತು ನಂಬುತ್ತಾರೆ.

ಇದೇ ರೀತಿ 1999 ರ ಅಂತ್ಯದಲ್ಲೂ ಪ್ರಳಯ ಆಗುತ್ತೆ ಅಂತ ನರೇಂದ್ರ ಎಂಬ ಪ್ರಳಯಾಂತಕ ಪುಸ್ತಕ ಬರೆದು ಪ್ರಚಾರ ಗಿಟ್ಟಿಸಿದ್ದರು. ‘ತರಂಗ’ ಎಂಬ ವಾರ ಪತ್ರಿಕೆ ಪ್ರಳಯದ ಬಗ್ಗೆ ವಿಶೇಷ ಸಂಚಿಕೆಯನ್ನು ಹೊರತಂದು ಲಾಭ ಮಾಡಿಕೊಂಡಿತ್ತು. ಅದರ ಪ್ರತಿಗಳು ನಿಗದಿತ ದರಕ್ಕಿಂತ ಮೂರು-ನಾಲ್ಕು ಪಟ್ಟು ಹೆಚ್ಚಿನ ರೇಟಿಗೆ ಮಾರಾಟವಾಗಿದ್ದವು. ಆದರೆ ಪ್ರಳಯ ಆಯಿತೆ? ಊಹ್ಞುಂ. ಲಾಭ ಆಯಿತು – ’ತರಂಗ’ದ ಮಾಲೀಕರಿಗೆ.

ಸಾವಿನ ಬಗ್ಗೆ ಆತಂಕ ಇಟ್ಟುಕೊಂಡಿರುವ ಜನರಿಗೆ ಇಂತಹ ಸಂಗತಿಗಳ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲವನ್ನು ಲಾಭವನ್ನಾಗಿ ಪರಿವರ್ತಿಸುವ ಉದ್ದೇಶ ಈ ಚಾನೆಲ್‌ಗಳದ್ದು. ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕಾದ ಇವರು ಹೀಗೆ ಅಜ್ಞಾನದ ಕೂಪಕ್ಕೆ‍ ತಳ್ಳುತ್ತಿದ್ದಾರೆ.

ಈಗಷ್ಟೆ ಶಾಲೆಗೆ ಹೋಗುವ ಮಕ್ಕಳಲ್ಲೂ ಪ್ರಳಯದ ಭೀತಿ.ಇಂತಹ ಸುದ್ದಿಗಳ ಪರಿಣಾಮ ಏನು ಎನ್ನುವುದರ ಪ್ರಜ್ಞೆ ಕಿಂಚಿತ್ತೂ ಚಾನೆಲ್‌ನವರಿಗೆ ಇದ್ದಂತಿಲ್ಲ. ಸರ್ಜರಿ ಮುಂದೂಡಿದವರ ಆರೋಗ್ಯ ಸ್ಥಿತಿ ಎಷ್ಟು ಹದಗೆಟ್ಟೀತು ಎಂಬುದರ ಕಲ್ಪನೆಯೂ ಇವರಿಗೆ ಇದ್ದಂತಿಲ್ಲ.

ಇವರಿಗೆ ಜವಾಬ್ದಾರಿಯಿಂದ ವರ್ತಿಸುವಂತೆ ತಿಳಿಸುವವರಾರು?

ಕಾವೇರಿ ಸಮಸ್ಯೆ : ಮಿಡಿಯಾ ಡಾರ್ಲಿಂಗ್ ಸುರೇಶ್ ಕುಮಾರ್ ಎಲ್ಲಿದ್ದಾರೆ?

 – ರಮೇಶ್ ಕುಣಿಗಲ್

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಾರ್ವಜನಿಕವಾಗಿ ಗೊತ್ತಿರುವ ಅಂಕಿ ಅಂಶಗಳು ಹೇಳುತ್ತವೆ. ಇಲ್ಲದಿರುವ ನೀರನ್ನು ಬಿಡುವುದು ಹೇಗೆ? ಅಥವಾ ನಮ್ಮ ಅಗತ್ಯಗಳನ್ನು ಬಲಿಕೊಟ್ಟು ನೀರು ಬಿಡುವುದು ಹೇಗೆ? ಎಂದು ಚರ್ಚೆ, ಹೋರಾಟಗಳು ನಡೆಯುತ್ತಿವೆ. ರಾಜ್ಯದ ಅಂಕಿ ಅಂಶಗಳನ್ನು ನ್ಯಾಯಾಲಯದಲ್ಲಿ ಸೂಕ್ತವಾಗಿ ಮಂಡಿಸಿ, ರಾಜ್ಯದ ಹಿತ ಕಾಪಾಡಬೇಕಾದ್ದು ರಾಜ್ಯ ಸರಕಾರದ ಕರ್ತವ್ಯ.

ಇಂತಹ ಸಂದರ್ಭಗಳಲ್ಲಿ ಈ ನೆಲದ ಕಾನೂನು ಮಂತ್ರಿಯ ಹೊಣೆ ದೊಡ್ಡದು. ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪನ್ನು ಧಿಕ್ಕರಿಸಿದ್ದಾಗ ಉಂಟಾಗಿದ್ದ ಪರಿಸ್ಥಿತಿಯಲ್ಲಿ ಕಾನೂನು ಮಂತ್ರಿಯಾಗಿ ಹೈರಾಣಾದವರು ಡಿ.ಬಿ ಚಂದ್ರೇಗೌಡರು. ಅವರು ಇಂದು ಬಿಜೆಪಿಯಲ್ಲಿದ್ದಾರೆ. ಆದರೆ ಇದೇ ಬಿಜೆಪಿಯ ಸದ್ಯದ ಕಾನೂನು ಮಂತ್ರಿ ಸುರೇಶ್ ಕುಮಾರ್‌ಗೆ ಏನಾಗಿದೆ?

ಅಸ್ಸಾಂ ಯುವಕರು ಬೆಂಗಳೂರು ಬಿಟ್ಟು ರೈಲು ಹತ್ತಿ ತಾಯ್ನಾಡಿಗೆ ಹೊರಟು ನಿಂತಿದ್ದಾಗ, ರೈಲ್ವೇ ನಿಲ್ದಾಣಕ್ಕೆ ಹೋಗಿ ಆರು ಗಂಟೆಗಳ ಕಾಲ ಅವರಿಗೆ ಸಂತೈಸುವ ‘ನಾಟಕ’ ಆಡಿ ಫೇಸ್‌ಬುಕ್ ಸ್ಟೇಟಸ್ ಹಾಕಿಕೊಳ್ಳುವ ಮಂತ್ರಿಗೆ ಕಾವೇರಿ ವಿಚಾರದಲ್ಲಿ ಏಕೆ ಮೌನ? ಈ ಹಿಂದಿನ ಕಾವೇರಿ ಪ್ರಾಧಿಕಾರದ ಸಭೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದವರು ಮುಖ್ಯಮಂತ್ರಿ, ನೀರಾವರಿ ಮಂತ್ರಿ ಮತ್ತು ಕಾನೂನು ಮಂತ್ರಿ. ಆದರೆ ಮೊನ್ನೆ ನಡೆದ ಸಭೆಯಲ್ಲಿ ಸುರೇಶ್ ಕುಮಾರ್ ಹಾಜರಿರಲಿಲ್ಲ. ಅಷ್ಟೇ ಅಲ್ಲ ಮುಖ್ಯಮಂತ್ರಿಯವರು ದೆಹಲಿಯಲ್ಲಿ ನಡೆಸಿದ ಕಾನೂನು ತಜ್ಞರ ಸಭೆಗಳಲ್ಲೂ ಇವರು ಹಾಜರಾದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿಲ್ಲ. ಆದರೆ ಇವರು ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹಾಜರಾದರು. ಕಾವೇರಿಗಿಂತ ಪಕ್ಷದ ಸಭೆ ಮುಖ್ಯವಾಯಿತು.

ಮಾಧ್ಯಮದ ಹಿರಿ ತಲೆಗಳ ಪೈಕಿ ಹಲವರಿಗೆ ಸುರೇಶ್ ಕುಮಾರ್ – ಸಜ್ಜನ, ಪ್ರಾಮಾಣಿಕ, ನಿಷ್ಠ. ಹಾಗಾದರೆ ಇವರು ದಕ್ಷರಾಗುವುದು ಯಾವಾಗ? ಸಜ್ಜನಿಕೆ ಅಥವಾ ಪ್ರಾಮಾಣಿಕತೆ ಎಲ್ಲಾ ವ್ಯಕ್ತಿಗಳಲ್ಲೂ ನಿರೀಕ್ಷಿಸಬಹುದಾದ ಸಾಮಾನ್ಯ ಗುಣಗಳು. ಆದರೆ ಒಬ್ಬ ಮಂತ್ರಿ ಪ್ರಾಮಾಣಿಕನಾಗಿದ್ದರಷ್ಟೇ ಸಾಲದು. ತನ್ನ ಕರ್ತವ್ಯ ಅರಿತುಕೊಂಡು ದಕ್ಷತೆಯಿಂದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. (ಅವರು ಎಷ್ಟರ ಮಟ್ಟಿಗೆ ಪ್ರಾಮಾಣಿಕ ಅನ್ನುವುದು ಈಗ ಸಂಶಯ ಬಿಡಿ. ಸುಳ್ಳು ಮಾಹಿತಿ ಕೊಟ್ಟು ಎರಡೆರಡು ನಿವೇಶನ ಪಡೆದ ಆರೋಪ ಇಲ್ಲವೆ? ಆ ಸಂದರ್ಭದಲ್ಲಂತೂ ಕೆಲ ಮಾಧ್ಯಮ ಸಂಸ್ಥೆಗಳು ‘ಅತ್ಯಂತ ಪ್ರಾಮಾಣಿಕ ವ್ಯಕ್ತಿಗೆ ಅಂಟಿದ ಕಳಂಕ’ ಎಂದೆಲ್ಲಾ ಕಣ್ಣೀರು ಹಾಕಿದರು.)

“ಕಾವೇರಿ ಸಮಸ್ಯೆ ಬಗೆಹರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಲಾಗುತ್ತಿದೆ..” ಎಂಬರ್ಥದ ಸವಕಲು ಹೇಳಿಕೆಗಳನ್ನು ಹೊರತುಪಡಿಸಿದರೆ ಸುರೇಶ್ ಕುಮಾರ್ ಇದುವರೆಗೆ ಕಾವೇರಿ ವಿಚಾರದಲ್ಲಿ ಒಂದೇ ಒಂದು ಗಂಭೀರ ಹೇಳಿಕೆ ನೀಡಲಿಲ್ಲ. ವಿಚಿತ್ರವೆಂದರೆ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸುವ ವಿರೋಧ ಪಕ್ಷಗಳು ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿಯನ್ನಷ್ಟೆ ಟೀಕಿಸುತ್ತವೆಯೇ ಹೊರತು, ಕಾನೂನು ಮಂತ್ರಿಯ ವೈಫಲ್ಯದ ಬಗ್ಗೆ ಮಾತನಾಡುವುದಿಲ್ಲ.

ಸುರೇಶ್ ಕುಮಾರ್ ಅವರ ನಡವಳಿಕೆಯನ್ನು ಕೆಲಕಾಲ ಗಮನಿಸಿದ ಯಾರಿಗೇ ಆದರೂ ಅರ್ಥವಾಗುವ ಸಂಗತಿ ಎಂದರೆ, ಅವರು ವಿವಾದಾತ್ಮಕ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ. ನಿಮ್ಮ ಮಂತ್ರಿಗಳು ವಿಧಾನ ಸಭೆಯಲ್ಲಿ ಬ್ಲೂ ಫಿಲಂ ನೋಡ್ತಾ ಇದ್ದರಲ್ಲ ಅಂತ ಕೇಳಿದಾಕ್ಷಣ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯನ್ನು ಈಗಷ್ಟೇ ಮುಗಿಸಿ ಬಂದವರಂತೆ ಅವರು ಗಂಭೀರವದನರಾಗಿ – ‘ಅಂತಹದೊಂದು ಪ್ರಕರಣ ನಡೆದದ್ದೇ ಆಗಿದ್ದರೆ..ಅದು ಖಂಡನೀಯ’ ಎನ್ನುತ್ತಾರೆ. ಬಿಜೆಪಿಯ ಆಂತರಿಕ ಕಲಹ ಮುಗಿಲು ಮುಟ್ಟಿದ್ದರೂ ಊಹ್ಞುಂ ಒಂದೇ ಒಂದು ಮಾತೂ ಇಲ್ಲ. ಸುಮ್ಮನೆ ಮಾತನಾಡಿ ಯಾರಾದಾದರೂ ವಿರೋಧ ಕಟ್ಟಿಕೊಳ್ಳುವುದೇಕೆ ಎನ್ನುವ ಮನೋಭಾವ.

ಬೆಂಗಳೂರಿನ ನೀರು ಸರಬರಾಜು ಕೂಡಾ ಅವರದೇ ಖಾತೆ. ನಗರಕ್ಕೆ ನಾಲ್ಕನೇ ಹಂತದ ಕುಡಿವ ನೀರಿನ ಯೋಜನೆಗಾಗಿ ಜನರಿಂದ ಹಣ ಪಡೆದುಕೊಂಡು ವರ್ಷಗಳೇ ಉರುಳಿವೆ. ಅವರಿಗಿನ್ನೂ ನೀರು ಕೊಟ್ಟಿಲ್ಲ. ಬೆಂಗಳೂರಿಗೆ ನೀರು ಬೇಕಿದ್ದರೆ ಕಾವೇರಿಯಲ್ಲಿ ನೀರು ಇರಬೇಕು. ಆದರೂ ಅವರು ಕಾವೇರಿ ಬಗ್ಗೆ ಮಾತನಾಡುವುದಿಲ್ಲ.

ಹಾಗಾದರೆ ಇವರಿಗೆ ಜವಾಬ್ದಾರಿ ಇಲ್ಲವೆ ಅಥವಾ ಜವಾಬ್ದಾರಿಯನ್ನು ಕಸಿಯಲಾಗಿದೆಯೆ? ಅವರೇ ಸ್ಪಷ್ಟಪಡಿಸಬೇಕು.

ಕಾಂಗ್ರೆಸ್ ರಾಜ್ಯಪಾಲ ಭಾರದ್ವಾಜರ ಸಲಹೆ ಕೇಳಿದ್ದರೆ…

– ರಮೇಶ್ ಕುಣಿಗಲ್

ಆಳುವ ಸರಕಾರದ ಸವಲತ್ತು, ಅಧಿಕಾರಗಳನ್ನು ಅನುಭವಿಸಿಯೂ ಹಿರಿಯ, ಪ್ರಾಮಾಣಿಕ ಪತ್ರಕರ್ತ ಎಂದೇ ಖ್ಯಾತರಾಗಿರುವ ಕುಲದೀಪ್ ನಯ್ಯರ್ ಅವರ ಆಟೋಬಯೋಗ್ರಾಫಿ ಎಂಬ ಹೆಸರಿನಲ್ಲಿ ಹೊರಬಂದಿರುವ ಹಿಸ್ಟರಿ ಪುಸ್ತಕವೊಂದು ಸದ್ಯದಲ್ಲೇ ಕನ್ನಡದಲ್ಲಿ ಬಿಡುಗಡೆಗೊಳ್ಳಲಿದೆ.

ಕೃತಿಯ ಪರಿಚಯ ಅಥವಾ ವಿಮರ್ಶೆಗೆ ಈ ಸಂದರ್ಭದಲ್ಲಿ ಹೋಗದೆ, ಲೇಖಕರು ತಮ್ಮ ಬರಹದಲ್ಲಿ ಪ್ರಸ್ತುತ ಕರ್ನಾಟಕ ರಾಜ್ಯಪಾಲರಿಗೆ ಸಂಬಂಧಿಸಿದಂತೆ ದಾಖಲಿಸಿರುವ ಘಟನೆಯನ್ನು ಚರ್ಚಿಸುವುದಷ್ಟೇ ಈ ಲೇಖನದ ಉದ್ದೇಶ. Beyond the Lines ಕೃತಿಯ ಪುಟ 342ರಲ್ಲಿ ಲೇಖಕರು ಹೀಗೆ ಬರೆಯುತ್ತಾರೆ..

“Karnataka governor H.R Bharadwaj admitted before me that altering register, etc was not a difficult task. ‘Nobody seeks my advice these days, otherwise the 2G or CWG scam could have been managed’, Bharadwaj said”.

ಈ ಸಾಲುಗಳಿಗೆ ಮೊದಲು ನಯ್ಯರ್ ಹವಾಲಾ ಪ್ರಕರಣದಲ್ಲಿ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಲಖುಭಾಯಿ ಪಾಠಕ್ ಎಂಬುವವರಿಂದ ಹಣ ಪಡೆದಿದ್ದರು ಎನ್ನಲಾದ ಪ್ರಕರಣ ಕುರಿತು ಮಾತನಾಡುತ್ತಾರೆ. ಪಾಠಕ್ ಹಣ ನೀಡಿದ್ದನ್ನು ಒಪ್ಪಿಕೊಂಡಿದ್ದರೂ, ಅವರು ಪ್ರಧಾನಿಯನ್ನು ಭೇಟಿ ಮಾಡಿದ್ದಕ್ಕೆ ಯಾವ ಆಧಾರಗಳೂ ಸಿಗದಂತೆ ದಾಖಲೆಗಳನ್ನು ತಿರುಚಲಾಗಿತ್ತು ಎಂದು ಆರೋಪಿಸುತ್ತಾರೆ. ನಂತರ ಭಾರದ್ವಾಜ್ ಹೇಳಿದರು ಎನ್ನಲಾದ ಈ ಮೇಲಿನ ಮಾತನ್ನು ದಾಖಲಿಸುತ್ತಾರೆ.

ಭಾರದ್ವಾಜರ ವಾಚಾಳಿತನ ಗೊತ್ತಿರುವ ಯಾರಿಗೇ ಆಗಲಿ, ಅವರು ಹೀಗೆ ಹೇಳಿರುವುದನ್ನು ಸಂಶಯಿಸುವುದಿಲ್ಲ. ಎಷ್ಟೇ ಆಗಲಿ, ಬೋಫೋರ್ಸ್ ಹಗರಣದ ಮುಷ್ಟಿಯಿಂದ ಕಾಂಗ್ರೆಸ್ ರಾಜಕಾರಣದ ಪ್ರಥಮ ಕುಟುಂಬವನ್ನು ಮುಕ್ತಗೊಳಿಸಿದ ಆರೋಪ ಅವರ ಮೇಲೆ ಈಗಾಗಲೇ ವಿರೋಧ ಪಕ್ಷಗಳು ಹೊರಿಸಿವೆ. ಇದೇ ಹಿನ್ನೆಲೆಯಲ್ಲಿ ನೋಡಿದಾಗ, ‘ಇತ್ತೀಚಿನ ದಿನಗಳಲ್ಲಿ ನನ್ನ ಸಲಹೆಯನ್ನು ಯಾರೂ ಕೇಳುತ್ತಿಲ್ಲ’ ಎಂದು ಅವಲತ್ತುಕೊಳ್ಳುವುದರ ಹಿಂದೆ, ಈ ಹಿಂದೆ ಅವರ ಸಲಹೆಯಿಂದಲೇ ಹಲವರು ಪಾರಾಗಿದ್ದರು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

“ದಾಖಲೆಗಳನ್ನು ತಿರುಚುವುದು ಕಷ್ಟದ ಕೆಲಸವೇನಲ್ಲ..” ಎನ್ನುವ ಮೂಲಕ ಸದ್ಯ ದೊಡ್ಡ ಚರ್ಚೆಯಲ್ಲಿರುವ 2G, CWG ಅಥವಾ ಮುಂದುವರಿದು ಕೋಲ್‌ಗೇಟ್ ಹಗರಣಗಳಿಂದ ಸರಕಾರದ ನೇತಾರರು ದಾಖಲೆಗಳನ್ನು ತಿರುಚುವ ಮೂಲಕ ಹೊರಬರುವುದು ಕಷ್ಟವೇನಾಗಿರಲಿಲ್ಲ ಎಂದು ಭಾರದ್ವಾಜರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಭಾರದ್ವಾಜ್ ಬಿಜೆಪಿ ಸರಕಾರ ಇರುವ ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಬಂದ ನಂತರವೂ ‘ನಾನು ಒಬ್ಬ ಕಾಂಗ್ರೆಸ್ಸಿಗ’ ಎಂದು ಹೆಮ್ಮೆಯಿಂದಲೇ ಹೇಳಿಕೊಂಡಿದ್ದರು. ‘ಹೈಕಮಾಂಡ್’ ಕರೆದರೆ ಕೇಂದ್ರಕ್ಕೂ ಹಿಂದುರುಗಲು ಸಿದ್ಧ, ಎಲ್ಲಿಯೂ ಇಲ್ಲವಾದರೆ ಇಂದಿಗೂ ಕೋಟ್ ಸಿದ್ಧವಿದೆ, ನಾನು ನನ್ನ ಹೆಂಡತಿ ಇಬ್ಬರೂ ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ ಎಂದು ಪತ್ರಿಕಾ ಸಂದರ್ಶನಗಳಲ್ಲಿ ಹೇಳಿದ ಉದಾಹರಣೆಗಳಿವೆ. (ಅವರ ಪತ್ನಿಯೂ ಸುಪ್ರೀಂಕೋರ್ಟ್ ಹಿರಿಯ ವಕೀಲರು).

ಆಡಳಿತದಲ್ಲಿರುವ ಸರಕಾರಗಳಿಗೆ ಇಂತಹ ‘ಆಪತ್ಬಾಂಧವರ’ ಸಹಕಾರ, ಸಲಹೆಗಳು ಬೇಕಾಗುತ್ತವೆ. ಇಂತಹ ‘ಸಲಹೆ, ಸಹಕಾರ’ ನೀಡಿ ಭಾರದ್ವಾಜರಂತಹ ವಕೀಲರು, ಸಂವಿಧಾನ ತಜ್ಞರು ತಮ್ಮ ಸೇವೆಗೆ ಅನುಗುಣವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸುತ್ತಾರೆ. ಅವರು ಇಂದು ಕರ್ನಾಟಕದ ರಾಜ್ಯಪಾಲರಾಗಿರುವುದೂ ಅಂತಹುದೇ ಸೇವೆಯ ಫಲ.

ಝಕಾರಿಯಾ ಕಾಪಿಮಾಡಿದ ಪ್ಯಾರಾಗ್ರಾಫ್ ಮತ್ತು ಕಿವಿ ಕಚ್ಚಿದ ಸುಶೀಲ್ ಕುಮಾರ್!

– ರಮೇಶ್ ಕುಣಿಗಲ್

“I apologize unreservedly” – ಟೈಮ್ ಮತ್ತು ಸಿಎನ್ಎನ್ ಸಂಸ್ಥೆಗಳಿಂದ ಅಮಾನತ್ತುಗೊಂಡ ನಂತರ ಫರೀದ್ ಝಕಾರಿಯಾ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ. ಸಿಎನ್ಎನ್ ಬ್ಲಾಗ್ ನಲ್ಲಿ ಕೂಡಾ ತಮ್ಮ ತಪ್ಪು ಒಪ್ಪಿಕೊಂಡು ತನ್ನ ಸಂಪಾದಕರಿಗೆ, ಓದುಗರಿಗೆ, ನೋಡುಗರಿಗೆ ಹಾಗೂ ಜಿಲ್ ಲೆಪೋರಗೆ ಕ್ಷಮೆ ಕೋರಿದ್ದಾರೆ. (ಟೈಮ್ ಅವರನ್ನು ಒಂದು ತಿಂಗಳ ಕಾಲಾವಧಿಗೆ ಅಮಾನತ್ತು ಮಾಡಿದೆ.) ಲೆಪೋರ ದಿ ನ್ಯೂಯಾರ್ಕರ್ ನ ಏಪ್ರಿಲ್ 23 ರ ಸಂಚಿಕೆಗೆ ಬರೆದ ಲೇಖನದ ಕೆಲ ಸಾಲುಗಳನ್ನು ತನ್ನ ಅಂಕಣದಲ್ಲಿ ಯಥಾವತ್ತಾಗಿ ಬಳಸಿಕೊಂಡಿದ್ದು ಮತ್ತು ಮೂಲ ಲೇಖಕಿಯ ಹೆಸರು ಹೇಳದೆ ಅವು ತನ್ನದೇ ಸಾಲುಗಳು ಎಂಬಂತೆ ಬರೆದದ್ದು ಅವರ ಮೇಲಿರುವ ಆರೋಪ.

ತನ್ನ ಟೈಮ್ (ಆಗಸ್ಟ್ 20ರ ಸಂಚಿಕೆ) ಅಂಕಣದಲ್ಲಿ ಝಕಾರಿಯಾ ಬರೆದದ್ದು:

“Adam Winkler, a professor of constitutional law at UCLA, documents the actual history in Gunfight: The Battle over the Right to Bear Arms in America. Guns were regulated in the U.S. from the earliest years of the Republic. Laws that banned the carrying of concealed weapons were passed in Kentucky and Louisiana in 1813. Other states soon followed: Indiana in 1820, Tennessee and Virginia in 1838, Alabama in 1839 and Ohio in 1859. Similar laws were passed in Texas, Florida and Oklahoma. As the governor of Texas (Texas!) explained in 1893, the “mission of the concealed deadly weapon is murder. To check it is the duty of every self-respecting, law-abiding man.”

ಲೆಪೋರ ಏಪ್ರಿಲ್ 23 ರ ನ್ಯೂಯಾರ್ಕರ್ ನಲ್ಲಿ ಬರೆದದ್ದು:

“As Adam Winkler, a constitutional-law scholar at U.C.L.A., demonstrates in a remarkably nuanced new book, “Gunfight: The Battle Over the Right to Bear Arms in America,” firearms have been regulated in the United States from the start. Laws banning the carrying of concealed weapons were passed in Kentucky and Louisiana in 1813, and other states soon followed: Indiana (1820), Tennessee and Virginia (1838), Alabama (1839), and Ohio (1859). Similar laws were passed in Texas, Florida, and Oklahoma. As the governor of Texas explained in 1893, the “mission of the concealed deadly weapon is murder. To check it is the duty of every self-respecting, law-abiding man.”

ಎರಡೂ ಬರಹಗಳನ್ನು ಅವಲೋಕಿಸಿದರೆ ಝಕಾರಿಯ ಎಡವಿದ್ದೆಲ್ಲಿ ಎನ್ನುವುದು ಗೊತ್ತಾಗುತ್ತೆ. ಲೆಪೋರ ತಮ್ಮ ಲೇಖನದಲ್ಲಿ ಆಡಮ್ ವಿಂಕ್ಲರ್ ಪುಸ್ತಕವನ್ನು ಹೆಸರಿಸುತ್ತಾ ಅಮೆರಿಕಾದ ಗನ್ ಸಂಸ್ಕೃತಿ ಬಗ್ಗೆ ಬರೆಯುತ್ತಾರೆ. ಝಕಾರಿಯಾ ತನ್ನ ಅಂಕಣದಲ್ಲಿ ಅದೇ ಮಾತುಗಳನ್ನು, ಅಲ್ಲಲ್ಲಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ, ಬಳಸಿಕೊಳ್ಳುತ್ತಾರೆ. ಉತ್ಸಾಹಿ ಬ್ಲಾಗರ್ ಗಳು ಝಕಾರಿಯಾನ ಯಡವಟ್ಟನ್ನು ಹೊರತಂದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಝಕಾರಿಯಾನ ಸಂಪಾದಕರು/ಮಾಲೀಕರು ಅವರನ್ನು ಅಮಾನತ್ತು ಮಾಡಿದರು. ಝಕಾರಿಯಾವರನ್ನು ಅಮಾನತ್ತು ಮಾಡುವಾಗ ಟೈಮ್ ಮ್ಯಾಗಜೀನ್ ಹೇಳಿದ್ದು ‘ನಮ್ಮಲ್ಲಿ ಪ್ರಕಟವಾಗುವ ಬರಹಗಳಲ್ಲಿ ಅಂಕಿ ಅಂಶಗಳು ಪಕ್ಕಾ ಇದ್ದರಷ್ಟೇ ಸಾಲದು, ಬರವಣಿಗೆ ಕೂಡಾ ಸ್ವತಃ ಲೇಖಕರದ್ದೇ ಆಗಿರಬೇಕು’. ಝಕಾರಿಯಾ ಕೂಡ ಮರು ಮಾತಿಲ್ಲದೆ ತನ್ನಿಂದ ‘ಟೆರಿಬಲ್ ಮಿಸ್ಟೇಕ್’’ ಆಗಿದೆ ಎಂದು ಒಪ್ಪಿಕೊಳ್ಳುತ್ತಾರೆ.

ಕನ್ನಡದ ಕೆಲ ಪತ್ರಿಕೆಗಳು ಸೇರಿದಂತೆ ಭಾರತದ ಬಹುತೇಕ ಪತ್ರಿಕೆಗಳಲ್ಲಿ ಝಕಾರಿಯಾರ ಸುದ್ದಿ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾಯಿತು. ಟೈಮ್ ಮತ್ತು ಸಿಎನ್ಎನ್ ಸಂಸ್ಥೆಗಳಿಂದ ಅಮಾನತ್ತುಗೊಂಡ ಝಕಾರಿಯಾ ಮೂಲತಃ ಭಾರತೀಯ ಎನ್ನುವುದು ಇಷ್ಟರ ಮಟ್ಟಿಗೆ ಸುದ್ದಿಯಾಗಲು ಕಾರಣ. ಅಷ್ಟೇ ಅಲ್ಲ ಬಹುತೇಕ ಪತ್ರಕರ್ತರಿಗೆ ಝಕಾರಿಯಾನ ಕರಿಯರ್ ಆಕರ್ಷಣೀಯ. ಕೇವಲ 28 ರ ಹರೆಯಕ್ಕೆ ಅಮೆರಿಕಾದ ಮ್ಯಾಗಜೀನ್ ಫಾರಿನ್ ಅಫೇರ್ಸ್ ಸಂಪಾದಕರಾಗಿದ್ದು ಝಕಾರಿಯ.

ಮುಂಬೈನಲ್ಲಿ 1964ರಲ್ಲಿ ಹುಟ್ಟಿ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು. ನಂತರ ಹಾರ್ವರ್ಡ್ ವಿ.ವಿಯಿಂದ ಪಿಎಚ್ ಡಿ ಗಳಿಸಿದರು. ನಂತರದ ದಿನಗಳಲ್ಲಿ ಅವರ ಕರಿಯರ್ ಗ್ರಾಫ್ ಸದಾ ಏರುಗತಿಯಲ್ಲಿಯೇ. ವಿದೇಶಾಂಗ ನೀತಿ ನಿರೂಪಣೆಯಲ್ಲಿ ಪ್ರಭಾವ ಬೀರಬಲ್ಲ ಜಗತ್ತಿನ ಕೆಲವೇ ಕೆಲವು ಚಾಣಾಕ್ಷರ ಪೈಕೆ ಝಕಾರಿಯಾ ಒಬ್ಬರು. ಟೈಮ್ ನಲ್ಲಿ ಒಂದು ಕಾಲಂ. ಸಿಎನ್ಎನ್ ನಲ್ಲಿ GPS – Global Public Square ಎಂಬ ಶೋ. ನಾನಾ ದೇಶಗಳ ಅಗ್ರಗಣ್ಯ ನಾಯಕರನ್ನೆಲ್ಲಾ ಸಂದರ್ಶಿಸಿದ ಖ್ಯಾತಿ, ಅನುಭವ ಅವರದು. ಇದೇ ವರ್ಷ ಹೊರಬಂದ ದಿ ಪೋಸ್ಟ್ ಅಮೆರಿಕನ್ ವರ್ಲ್ಡ್ ಸೇರಿದಂತೆ ಇವರ ನಾಲ್ಕು ಪುಸ್ತಕಗಳು ಪ್ರಪಂಚದ ಹಲವು ಬುದ್ಧಿಜೀವಿಗಳಿಗೆ ಆಕರಗಳಾಗಿವೆ. ಭಾರತ ಸರಕಾರ ಅವರಿಗೆ ಪದ್ಮ ಭೂಷಣ ಗೌರವ ನೀಡಿದೆ.

ಇಷ್ಟೆಲ್ಲಾ ಆಗಿರುವ ಝಕಾರಿಯಾ ತನ್ನ ಲೇಖನಕ್ಕೆ ಮತ್ತೊಬ್ಬರ ಬರಹದ ಸಾಲುಗಳನ್ನು ಬಳಸಿಕೊಳ್ಳುವ ಅಗತ್ಯವೇನಿತ್ತು? ನಂತರ ಕ್ಷಮೆ ಕೋರುವ ಅನಿವಾರ್ಯತೆ ಏಕೆ ಸೃಷ್ಟಿಸಿಕೊಳ್ಳಬೇಕಿತ್ತು? ಪ್ರಪಂಚದ ಉತ್ಕೃಷ್ಟ ವಿಶ್ವವಿದ್ಯಾನಿಲಯಗಳಲ್ಲಿ ಓದಿದ, ಅಗ್ರಮಾನ್ಯ ಚಿಂತಕರಲ್ಲಿ ಒಬ್ಬರೆನಿಸಿಕೊಂಡ ಝಕಾರಿಯಾ ಒಂದೇ ಒಂದು ಪ್ಯಾರಾವನ್ನು ಮತ್ತೊಬ್ಬರಿಂದ ಎರವಲು ಪಡೆದು ಹಳ್ಳಕ್ಕೆ ಬಿದ್ದರಲ್ಲಾ…

ಬರೆಯುವ ಉಮ್ಮೇದಿಯಲ್ಲಿ, ಮತ್ತೊಬ್ಬರ ಲೇಖನವನ್ನು ರೆಫರ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೆ? ಹಾಗೂ ಆಗಿರಬಹುದು. ಆ ಲೇಖಕಿ ತನ್ನ ಲೇಖನದಲ್ಲಿ ಮತ್ತೊಬ್ಬ ಗ್ರಂಥಕರ್ತನ ಬಗ್ಗೆ ಉಲ್ಲೇಖಿಸುವಾಗ ಬಳಸಿದ ಪದಗಳನ್ನು ಅದೇ ರೀತಿ ಎರವಲು ಪಡೆದರೆ ಏನಾದೀತು, ಎಂಬ ಆ ಕ್ಷಣದ ಉಡಾಫೆಯೂ ಈ ಸಂದಿಗ್ಧಕ್ಕೆ ತಂದು ನಿಲ್ಲಿಸಿರಲಿಕ್ಕೆ ಸಾಕು. ಆದರೆ, ಈ ಒಂದು ಪ್ರಕರಣದಿಂದ ಝಕಾರಿಯಾ ಸಂಪಾದಿಸಿದ್ದ ಮನ್ನಣೆ, ಜನಪ್ರಿಯತೆಗೆ ಕಪ್ಪು ಚುಕ್ಕಿ ತಾಕಿತಲ್ಲ!

ಇದೇ ಸಂದರ್ಭದಲ್ಲಿ ಥಟ್ಟನೆ ಹೋಲಿಕೆಗೆ ನೆನಪಾಗುವುದು ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಸುಶೀಲ್ ಕುಮಾರ್ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿಯ ಕಿವಿ ಕಚ್ಚಿದ ಎನ್ನುವ ಪ್ರಸಂಗ.

ಪಂದ್ಯದ ವೇಳೆಯಲ್ಲಿಯೇ ಎದುರಾಳಿ ರೆಫ್ರಿಗೆ ದೂರು ಕೊಟ್ಟ, ಆದರೆ ರೆಫ್ರಿ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರದ ವೀಡಿಯೋ ತುಣುಕುಗಳಲ್ಲಿ ಈ ಆರೋಪ ನಿಜ ಇರಬಹುದೇ ಎಂಬ ಅನುಮಾನಕ್ಕೆ ಎಡೆಮಾಡುವ ದೃಶ್ಯಗಳಿವೆ. ಬೆಳ್ಳಿ ಗೆದ್ದ ಹುಡುಗ, ಎದುರಾಳಿಯ ಕಿವಿ ಏಕೆ ಕಚ್ಚಬೇಕಿತ್ತು? ಈ ಸಂಭ್ರಮದ ಕ್ಷಣದಲ್ಲಿ ಒಂದು ವಿಷಾದ ಹಾಗೇ ಉಳಿದು ಬಿಡುತ್ತದೆ.

ಎರಡೂ ಘಟನೆಗಳು ಮೇಲ್ನೋಟಕ್ಕೆ ಭಿನ್ನ ಎನಿಸಬಹುದು. ಆದರೆ ಒಂದಂತೂ ಸತ್ಯ. ಝಕಾರಿಯಾಗೆ ತಾವು ಮಾಡುತ್ತಿರುವ ತಪ್ಪಿನ ಅರಿವಿತ್ತು. ಅಂತೆಯೇ ಸುಶೀಲ್ ಕುಮಾರ್ ಗೂ. ಗೊತ್ತಿದ್ದೂ ಯಡವಟ್ಟು ಮಾಡಿಕೊಂಡದ್ದೇಕೆ? ಎರಡು ಪ್ರಕರಣಗಳಲ್ಲಿ ಕಂಡುಬರುವ ಸಮಾನ ಅಂಶ – ಇಬ್ಬರೂ ಆ ಒಂದು ಕ್ಷಣ ಮೈ ಮರೆತರು.

ಇಬ್ಬರ ತಪ್ಪುಗಳಿಂದ ಕಲಿಯಬೇಕಾದವರು ಬೇಕಾದಷ್ಟು ಮಂದಿ ಇದ್ದಾರೆ. ಕನ್ನಡ ಬರಹಗಾರರ ಮತ್ತು ಮಾಧ್ಯಮ ಲೋಕದಲ್ಲಿ ಒಂದು ಪ್ಯಾರಾ ಕಾಪಿ ಮಾಡಿದ್ದು ಹೋಗಲಿಬಿಡಿ, ಇಡೀ ಪುಸ್ತಕವನ್ನೇ ಬೇರೆಯವರಿಂದ ಅನುವಾದ ಮಾಡಿಸಿ ತಮ್ಮದು ಎಂದು ಪ್ರಿಂಟ್ ಮಾಡಿಸಿಕೊಂಡವರಿದ್ದಾರೆ. ಮತ್ತೊಂದೆಡೆ ತಾವೇ ಬರೆದ ಬರಹಕ್ಕೆ ಮತ್ತೊಬ್ಬರ ಹೆಸರು ಕೊಟ್ಟು ಬಾಣ ಬಿಟ್ಟವರಿದ್ದಾರೆ. ಅಮಾಯಕ ಹೆಣ್ಣು ಮಕ್ಕಳ ಮಾನವನ್ನು ಟಿಆರ್ ಪಿಗಾಗಿ ಹರಾಜಿಗಿಟ್ಟು ಮೌಲ್ಯಗಳನ್ನೇ ಹೀರಿದವರೂ ಇದ್ದಾರೆ.

(ಚಿತ್ರಕೃಪೆ: ವಿಕಿಪೀಡಿಯ)

ಪುಸ್ತಕ ಪರಿಚಯ – ಬುಕ್ ಆಫ್ ಟೀ

– ರಮೇಶ್ ಕುಣಿಗಲ್

ಹಲವರಿಗೆ ಟೀ ಚಟ. ಈಗಷ್ಟೆ ಕುಡಿದು ಕಪ್ ಕೆಳಗಿಡುವ ಮೊದಲೇ ಇನ್ನೊಂದು ಕಪ್ ಟೀಗೆ ಆರ್ಡರ್ ಮಾಡುವ ಮಹಾನುಭಾವರಿದ್ದಾರೆ. ಕೆಲವೊಮ್ಮೆ ಹೊಟೇಲ್ ಮಾಣಿಗಳಿಗೆ ಅಚ್ಚರಿಯಾಗಿ ‘ನಮ್ಮ ಹೋಟೆಲ್ ಟೀ ಇಷ್ಟು ಚೆನ್ನಾಗಿದೆಯಾ’ ಎಂದು ಹುಬ್ಬೇರಿಸಿದ್ದೂ ಇದೆ. ಆದರೆ ಈ ಚಟದವರಿಗೆ ಟೀ ಟೇಸ್ಟ್ ಗಿಂತ ಟೀ ಕುಡಿಯುವದಷ್ಟೇ ಮುಖ್ಯವಾಗಿರುತ್ತೆ. ಹೆಚ್ಚು ಕಡಿಮೆ ಇಂಥದೇ ಚಾಳಿ ಬೆಳಸಿಕೊಂಡಿರುವ ಕುಮಾರ್ ಎಸ್. ತನ್ನ ಟೀ ಗೀಳನ್ನು ಶೋಧಿಸುತ್ತಾ ಶೋಧಿಸುತ್ತಾ ಒಂದು ಪುಸ್ತಕಕ್ಕೆ ಆಗುವಷ್ಟು ಸಾಮಗ್ರಿ ಸಂಗ್ರಹಿಸಿದ್ದರು. ನಂತರ ಅದನ್ನು ಒಪ್ಪವಾಗಿ ಜೋಡಿಸಿ ಇದೇ ನನ್ನ ‘ಬುಕ್ ಆಫ್ ಟೀ’ ಎಂದು ಹೊರತಂದಿದ್ದಾರೆ. ಇದರ ಹಿಂದೆ ಇನ್ನು ಮುಂದೆ ‘ಯಾಕೆ ಇಷ್ಟು ಟೀ ಕುಡಿತೀಯ?’ ಎಂದು ಯಾರೂ ಕೇಳಬಾರದು ಎಂಬ ಉದ್ದೇಶವೂ ಇದ್ದಂತಿದೆ.

ಇದು ಆಕಾರದಲ್ಲಿ ಮತ್ತು ಹೂರಣದಲ್ಲಿ ಭಿನ್ನ ಪುಸ್ತಕ. ಟೀ ಬಗ್ಗೆ ಇರುವ ನಂಬಿಕೆಗಳು, ಇತಿಹಾಸ ಜೊತೆ ಜೊತೆಗೆ ಸೃಜನಶೀಲ ಲೇಖಕರು ಟೀಯನ್ನು ಕಂಡ ಬಗೆಯೂ ಈ ಪುಸ್ತಕದಲ್ಲಿವೆ. ಓದುತ್ತಾ ಹೋದಂತೆ ಟೀ ಬಗ್ಗೆ ಮೋಹ ಹೆಚ್ಚಾಗಬಹುದು, ಹೆಚ್ಚೆಚ್ಚು ಟೀ ಕುಡಿಯಲು ಪ್ರೇರಣೆಯಾಗಬಹುದು. (ಆ ಮೂಲಕ ನಿಮ್ಮ ಇನ್ನಿತರೆ ಹಾಟ್ ಡ್ರಿಂಕ್ ಗಳಿಂದ ದೂರ ಇರಲು ಸಹಾಯವೂ ಆಗಬಹುದು!). ಟೀ, ಟೀ ಜೊತೆಗೆ ಬೆರೆತ ಕತೆ, ಕವಿತೆ, ಝೆನ್ ಕತೆ, ಹೈಕು ಎಲ್ಲಾ ಇಲ್ಲಿದೆ. ಪಲ್ಲವ ಪ್ರಕಾಶನದ ವೆಂಕಟೇಶ್ ವಿಶೇಷ ಆಸಕ್ತಿ ವಹಿಸಿ ಈ ಪುಸ್ತಕ ಹೊರತಂದಿದ್ದಾರೆ. ಮೊದಲ ನೋಟಕ್ಕೇ ಸೆಳೆಯುವ ಮುಖಪುಟವನ್ನು ಸ್ವತಃ ಲೇಖಕ ಕುಮಾರ್ ಸಿದ್ಧ ಮಾಡಿದ್ದಾರೆ. ಪುಸ್ತಕದ ಒಟ್ಟು ಅಂದಕ್ಕೆ ಒಪ್ಪವಾಗುವಂತಹ ಹಲವು ಚಿತ್ರಗಳಿವೆ.

ಇದರಾಚೆಗೆ ಟೀ ಒಂದು ಉದ್ಯಮ. ಅಲ್ಲಿ ಶ್ರೀಮಂತ ಎಸ್ಟೇಟು ಮಾಲೀಕರಿದ್ದಾರೆ, ಹಾಗೆಯೇ ಬಡ ಕೂಲಿಯವರಿದ್ದಾರೆ. ಟೀ ಉದ್ಯಮವನ್ನು ವಿಶ್ಲೀಷಿಸುವಂತಹ ಬರಹಗಳು ಇಲ್ಲ. ಜೊತೆಗೆ ಕಾರ್ಮಿಕರ ನೋವು ನಲಿವಿನ ಚಿತ್ರಣಗಳಿಲ್ಲ. ಈ ಪುಸ್ತಕವೇನು ಟೀ ಸುತ್ತಲಿನ ಬದುಕಿನ ಸಮಾಜೋ-ಆರ್ಥಿಕ ಅಧ್ಯಯನ ಅಲ್ಲದಿರುವುದರಿಂದ ಅದೆಲ್ಲ ಇಲ್ಲದಿರುವುದಕ್ಕೆ ಲೇಖಕರಲ್ಲಿ ದೋಷ ಹುಡುಕುವ ಅಗತ್ಯವೇನಿಲ್ಲ. ಮುಂದೊಂದು ದಿನ ಈ ಲೇಖಕರು ಆ ಬಗ್ಗೆ ಆಸಕ್ತಿ ಬೆಳಸಿಕೊಂಡು ಒಂದು ಪರಿಪೂರ್ಣ ಅಧ್ಯಯನ ಆಧಾರಿತ ಪುಸ್ತಕ ಹೊರತಂದರೆ ಮತ್ತಷ್ಟು ಖುಷಿ ಪಡೋಣ.

ಈ ಪುಸ್ತಕವನ್ನೊಮ್ಮೆ ಕೈಗೆತ್ತಿಕೊಂಡು ಓದಿ ನೋಡಿ. ಡೋಂಟ್ ವರಿ, ಓದಿ ಮುಗಿಸಲು ಹೆಚ್ಚು ಸಮಯವೇನು ಬೇಕಿಲ್ಲ.

ಬುಕ್ ಆಫ್ ಟೀ
ಲೇಖಕ: ಕುಮಾರ್ ಎಸ್.
ಪುಟ: 106
ಬೆಲೆ: ರೂ 100
ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ (ವಯಾ ಎಮ್ಮಿಗನೂರು),
ಬಳ್ಳಾರಿ – 583 113 ದೂ: 94803 53507