Category Archives: ರಮೇಶ್ ಕುಣಿಗಲ್

ಅಂಗಡಿಗಳು, ಮ್ಯಾನೇಜರ್‌ಗಳು, ಪಾಕೆಟ್ ಕಾರ್ಟೂನ್‌ಗಳು…

– ರಮೇಶ ಕುಣಿಗಲ್

ಕಾರ್ಟೂನಿಸ್ಟ್ ಪಿ. ಮಹಮ್ಮದ್ ಫೇಸ್‌ಬುಕ್ ನಲ್ಲಿ ‘ಪ್ರಜಾವಾಣಿ’ ಪತ್ರಿಕೆಯಿಂದ ಹೊರನೆಡೆಯಲು ಕಾರಣವಾದ ಸಂಗತಿಗಳನ್ನು ಪಟ್ಟಿ ಮಾಡಿದ್ದಾರೆ. ಅವರ ಚೂಪು ಮೀಸೆಯ ರಾಜಕಾರಣಿಯನ್ನು ಟೀಕೆ ಮಾಡುವ ಚಿತ್ರಗಳಿಗೆ ಕಚೇರಿಯಲ್ಲಿ ಬಂದ ಪ್ರತಿಕ್ರಿಯೆಗಳು ಮಹಮ್ಮದ್ ಅವರು ಹೊರ ನಡೆಯಲು ಮಾನಸಿಕವಾಗಿ ಸಿದ್ಧರಾಗಲು ಮೊದಲ ಕಾರಣ. ಪತ್ರಿಕೆ ಉಸ್ತುವಾರಿ ಹೊತ್ತ ‘ದಂಡಾಧಿಪತಿ’ – ಇವರ ಕಾರ್ಟೂನ್ ಗಳನ್ನು ‘ಡೆರಾಗೆಟರಿ’, ‘ಇನ್ಸಲ್ಟಿಂಗ್’ ಎಂದು ಟೀಕಿಸಿದ್ದಲ್ಲದೆ, ಬೇರೆ ಯಾವುದರ ಬಗ್ಗೆ (“ಚಿನ್ನಿದಾಂಡು, ಕುಂಟಾಬಿಲ್ಲೆ ಇತ್ಯಾದಿ ಮಹತ್ವದ ವಿಷಯಗಳ ಬಗ್ಗೆ”) ಕಾರ್ಟೂನ್ ಬರೆದು ಸಮಯ ಕಳೆಯಬಹುದು ಎಂದೂ ಸಲಹೆ ಕೊಟ್ಟಿದ್ದಾರೆ.

ಚೂಪು ಮೀಸೆಯ ಆಸಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಎಂದು ಎಲ್ಲರಿಗೂ ಗೊತ್ತು. ಅವರ ಬಗ್ಗೆ ಟೀಕಿಸಿ ಬರೆದ ಚಿತ್ರಗಳು ಪತ್ರಿಕೆ ಉಸ್ತುವಾರಿ ಹೊತ್ತವರಿಗೆ ಏಕೆ ಕಸಿವಿಸಿ ಉಂಟುಮಾಡಬೇಕು? ಕಾರ್ಟೂನ್ ಕೇವಲ ಕಾರ್ಟೂನ್. ಅದು ಲೇಖನ ಅಲ್ಲ, ಸಂಪಾದಕೀಯ ಅಲ್ಲ, ವರದಿನೂ ಅಲ್ಲ. ಪ್ರಸ್ತುತ ಬೆಳವಣಿಗೆಗಳಿಗೆ ತಕ್ಷಣದ ಪ್ರತಿಕ್ರಿಯೆ. ಕಾರ್ಟೂನಿಸ್ಟ್ ಕಲೆ, ನೈಪುಣ್ಯದ ಕಾರಣ ಒಂದು ಪಾಕೆಟ್ ಕಾರ್ಟೂನ್‌ಗೆ ಈ ಮೇಲಿನ ಹೇಳಿರುವ ಬೇರೆಲ್ಲಾ ಬರಹದ ರೂಪಗಳಿಗಿಂತ ಹೆಚ್ಚಿನ ಮಹತ್ವ ದೊರಕಬಹುದು. ಆದರೆ ಪಿ.ಮಹಮ್ಮದ್ ತಮ್ಮ ಹಿಂದಿನ ಪೋಸ್ಟ್ ನಲ್ಲಿ ಹೇಳಿರುವ ಹಾಗೆ ಕಾರ್ಟೂನ್ ನ್ನು ಗ್ರಹಿಸುವುದರಲ್ಲಿಯೇ ದೋಷವಿದೆ (ಕೆಲವರಲ್ಲಿ). ಆ ಕಾರಣ ಇಂತಹ ಪ್ರತಿಕ್ರಿಯೆಗಳು ಬರಲು ಸಾಧ್ಯ.

ಚೂಪು ಮೀಸೆಯ ಮುಖ್ಯಮಂತ್ರಿಗೆ ಅಂತಹದೊಂದು ದೋಷ ಇರಲಿಕ್ಕೂ ಸಾಕು. ಅದನ್ನು ಪತ್ರಿಕೆ ಸಂಪಾದಕರು, ಉಸ್ತುವಾರಿ ಹೊತ್ತವರ ಜೊತೆ ಅವರು ಆಪ್ತವಾಗಿ ಹೇಳಿರಬಹುದು. ಅಧಿಕಾರದಲ್ಲಿರುವ ರಾಜಕಾರಣಿಗೆ ಪಾಕೆಟ್ ಕಾರ್ಟೂನ್‌ಗಳು ಕಸಿವಿಸಿ ಉಂಟು ಮಾಡುತ್ತವೆ ಎಂದರೆ, ಅದು ಕಾರ್ಟೂನಿಸ್ಟ್‌ರ ಯಶಸ್ಸ್ಸು ಮತ್ತು ಪತ್ರಿಕೆಯ ಹೆಮ್ಮೆ. ಆದರೆ ಪ್ರಜಾವಾಣಿ ಸಂಸ್ಥೆಗೆ ಆ ಹೆಮ್ಮೆಯನ್ನು ಅನುಭವಿಸಲಾಗದಷ್ಟು ದಾರಿದ್ರ್ಯ ಬಂತಲ್ಲ, ಅದು ವಿಪರ್ಯಾಸ.

ಚೂಪು ಮೀಸೆ ರಾಜಕಾರಣಿ ಬಗ್ಗೆ ಪ್ರಜಾವಾಣಿ ಪತ್ರಿಕೆಗೆ ವಿಶೇಷ ಪ್ರೀತಿ ಏಕೆ ಎಂದು ಈಗ ಎಲ್ಲರಿಗೂ ಗೊತ್ತು. ಸಂಸ್ಥೆಯ ಮಾಲೀಕರ ಒಡೆತನದಲ್ಲಿದ್ದ ಜಮೀನನ್ನು ಸರಕಾರಿ ಯೋಜನೆಯಿಂದ ಡಿನೋಟಿಫೈ ಮಾಡಿಸಬೇಕಿತ್ತು. ಈ ಕುರಿತು ವಿಸ್ತೃತ ವರದಿ ಹಿಂದೆ ವರ್ತಮಾನದಲ್ಲಿ ಪ್ರಕಟವಾಗಿದೆ. ಪತ್ರಿಕೆಯ ಮಾಲೀಕರಿಗೆ ಕೋಟಿಗಟ್ಟಲೆ ಬೆಲೆಬಾಳುವ ಜಮೀನನ್ನು ಉಳಿಸಿಕೊಳ್ಳುವಾಗ ‘ಪಾಕೆಟ್ ಕಾರ್ಟೂನ್‌ನ್ನು’ ಬಲಿ ಕೊಟ್ಟರೆ ಏನು ಮಹಾ ಎನ್ನಿಸಿರಬಹುದು.

ದಂಡಾಧಿಪತಿ ಜೊತೆಗೆ ಅವರ ಮೇಲಿನ ಸಂಪಾದಕರು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣಕರ್ತರು. ಮ್ಯಾನೇಜರ್ ಹುದ್ದೆಯಲ್ಲಿ ಇರಬೇಕಾದವರನ್ನು ಆಯ್ಕೆ ಮಾಡುವುದು ಸಂಪಾದಕರು (ಪ್ರಜಾವಾಣಿ ವಿಷಯದಲ್ಲಿ ಅವರು ಮಾಲೀಕರೂ ಹೌದು). ಮಾಲೀಕರು ತಮ್ಮ ನಿರ್ಧಾರಗಳನ್ನು ತನ್ನ ಕೆಳಗಿನ ಮ್ಯಾನೇಜರ್ ಮೂಲಕ ಜಾರಿಗೆ ತರುತ್ತಾರೆ. ಮೇಲ್ನೋಟಕ್ಕೆ ಅದು ಮ್ಯಾನೇಜರ್ ವರ್ತನೆ ಎನ್ನಿಸಿದರೂ, ಅದು ಕಂಪನಿ ಮಾಲೀಕರ ಅಣತಿಯಂತೆಯೇ ಆಗಿರುತ್ತದೆ. ಈ ಹಿಂದೆ ಯಡಿಯೂರಪ್ಪನವರ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣಗಳು ಒಂದಾದ ಮೇಲೆ ಒಂದರಂತೆ ಹೊರಬಂದಾಗ, ಈ ಪತ್ರಿಕೆ ಕಣ್ಣು ಮುಚ್ಚಿ ಕುಳಿತಿತ್ತು. ಆಗ ಡಿನೋಟಿಫಿಕೇಶನ್ ಕುರಿತ ವರದಿಗಳಿಗೆ ನಿರ್ಬಂಧ ಹಾಕಿದರು. ಇದೀಗ ಗೊತ್ತಾಗಿರುವಂತೆ, ಅವರ ನಿರ್ಬಂಧ ವರದಿಗಳಿಗಷ್ಟೇ ಸೀಮಿತವಾಗಿರಲಿಲ್ಲ, ಕಾರ್ಟೂನ್‌ಗಳಿಗೂ ವ್ಯಾಪಿಸಿತ್ತು. ಅಂತ ಅದೆಷ್ಟು ಅಮೂಲ್ಯ ಕಾರ್ಟೂನ್‌ಗಳು ಪ್ರಜಾವಾಣಿಯ ಕಸದ ಬುಟ್ಟಿ ಸೇರಿ ಹಾಳಾದವೋ? ಓದುಗರಿಗೆ ನಷ್ಟ.

ಮಹಮ್ಮದ್ ಅವರ ವರ್ತನೆ ಕೆಲವರಿಗೆ ಅವಸರದ್ದು ಎನ್ನಿಸಬಹುದು. ಮತ್ತೆ ಕೆಲವರಿಗೆ ಬೇರೊಂದು ಪತ್ರಿಕೆಗೆ ಹೋಗುವುದಾದರೆ, ಸುಮ್ಮನೆ ಹೋಗಬೇಕಿತ್ತು, ಹೀಗೆ ಕೆಲಸ ಕೊಟ್ಟ ಪತ್ರಿಕೆ ಬಗ್ಗೆ ಹೀಗೇಕೆ ಮಾತನಾಡಬೇಕಿತ್ತು ಎಂದೂ ಕೆಲವರಿಗೆ ಕಾಡಬಹುದು. ಆದರೆ ಪತ್ರಿಕೋದ್ಯಮ ಇತಿಹಾಸದಲ್ಲಿ ಇಂತಹ ಸಂಗತಿಗಳು ದಾಖಲಾಗುವುದು ಅವಶ್ಯಕ. ಅತ್ಯಂತ ವಿಶ್ವಾಸಾರ್ಹ ಎನಿಸಿಕೊಳ್ಳುವ ಪತ್ರಿಕೆ ತನ್ನ ಪ್ರತಿಭಾವಂತ ಕಾರ್ಟೂನಿಸ್ಟ್‌ರ ವಿಶ್ವಾಸವನ್ನೇ ಉಳಿಸಿಕೊಳ್ಳಲು ಸಾಧ್ಯವಾಗದೇ ಹೋದರೆ, ಜನರ ವಿಶ್ವಾಸದ ಮಾತೆಲ್ಲಿ?

ಪ್ರಜಾವಾಣಿ ಅವಕಾಶ ಕೊಟ್ಟ ಕಾರಣ ಮಹಮ್ಮದ್ ಹೆಚ್ಚಿನ ಮನ್ನಣೆ, ಜನಪ್ರಿಯತೆ ಗಳಿಸಿದ್ದಾರೆ ಎನ್ನುವುದು ಎಷ್ಟು ನಿಜವೋ, ಅಷ್ಟೇ ನಿಜ ಮಹಮ್ಮದ್ ಕಾರಣ ಪ್ರಜಾವಾಣಿಗೂ ಹೆಚ್ಚಿನ ಮನ್ನಣೆ ಸಿಕ್ಕಿದೆ. ಅವರ ಸ್ಥಾನಕ್ಕೆ ಸೂಕ್ತ ಕಲಾವಿದನನ್ನು ಹುಡುಕುವುದು ತುಂಬಾ ಕಷ್ಟದ ಕೆಲಸ ಎನ್ನುವುದು ಗೊತ್ತಿರುವ ಸಂಗತಿಯೆ. ಮುಖ್ಯವಾಗಿ ಪ್ರಜಾವಾಣಿ ಮಾಲೀಕರು ಮತ್ತು ಉಸ್ತುವಾರಿ ಹೊತ್ತವರು ಒಬ್ಬ ಕಲಾವಿದನನ್ನೂ ಟ್ರೈನಿ ಸಬ್ ಎಡಿಟರ್ ಅಥವಾ ವರದಿಗಾರನಂತೆಯೇ ಕಾಣುತ್ತಾರೆ. ಅವರ ಪಾಲಿಗೆ ಕಾರ್ಟೂನ್ ಕೂಡ ಒಂದು ಅಸೈನ್‌ಮೆಂಟ್. ಅದರಾಚೆಗೆ ಯೋಚನೆ ಮಾಡುವ ಪ್ರಜ್ಞೆ ಕಳೆದುಕೊಂಡ ಕಾರಣವೇ ಅವರ ಕಾರ್ಟೂನ್‌ಗಳನ್ನು ಡೆರಾಗೆಟರಿ ಎಂದು ಟೀಕಿಸಿದ್ದು.

ಮಹಮ್ಮದ್ ಎದುರಿಸಿರುವ ಪರಿಸ್ಥಿತಿ ಪತ್ರಿಕೆಯಲ್ಲಿರುವ ಇತರೆ ಅನೇಕರು ಕೂಡ ಅನುಭಿಸಿರಬಹುದು. ಮಧ್ಯಮ ವರ್ಗ ಕುಟಂಬದಿಂದ ಬಂದ ಅನೇಕರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ. ಅತ್ತ ಭ್ರಷ್ಟರಾಗುವ ಆಸಕ್ತಿಯೂ ಇರುವುದಿಲ್ಲ. ಅಂತಹವರು ಸುಮ್ಮನೆ ತಮ್ಮ ಇತಿ-ಮಿತಿಗಳನ್ನು ಮೊದಲೇ ಅರ್ಥಮಾಡಿಕೊಂಡು ಆ ಚೌಕಟ್ಟಿನ ಒಳಗೇ ಇದ್ದು ಕೆಲಸ ನಿರ್ವಹಿಸುತ್ತಾರೆ. ಆಗ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ಪಕ್ಷ ಧಿಕ್ಕರಿಸಿ ಹೊರ ನಡೆದರೆ, ಬೇರೆ ಪತ್ರಿಕಾಲಯಗಳಲ್ಲಿ ಪರಿಸ್ಥಿತಿ ಬೇರೆಯಾಗಿರುತ್ತೆ ಎನ್ನುವ ಖಾತ್ರಿಯೇನಿಲ್ಲವಲ್ಲ.

ಮಹಮ್ಮದ್ ಅವರಿಗೂ ಈ ಸಂದಿಗ್ಧ ಗೊತ್ತಿದೆ. ಆದರೂ ಅವರಿಗೆ ನಂಬರ್ 1 ಅಂಗಡಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಇರಲಿ. ಸಂಬಳ ಗಾಳಿಮಾತುಗಳು ಹೇಳುವಂತೆ ಒಂದು ಲಕ್ಷ ಅಲ್ಲದಿದ್ದರೂ, ಅವರ ಅಗತ್ಯಗಳನ್ನು ಪೂರೈಸುವಷ್ಟಿರಲಿ. ಕಾರ್ಟೂನಿಸ್ಟ್ ಯಾವುದೋ ಅಂಗಡಿಯಲ್ಲಿ ಕಳೆದು ಹೋಗಲಿಲ್ಲ ಎನ್ನುವುದಷ್ಟೇ ಸಮಾಧಾನ.