Category Archives: ಭಾನಾಮತಿ – ನೈಜ ಘಟನೆಗಳ ಸುತ್ತ

ಸಾಲದಿಂದ ಬೆನ್ನೇರಿದ ಭಾನಾಮತಿ!

ಅದು ನನ್ನ ವಾರ್ಷಿಕ ರಜೆಯ ಸಮಯ. ಕುಟುಂಬ ಸಮೇತ ಗೋವಾ ಟ್ರಿಪ್ ಮಾಡಬೇಕು ಎನ್ನುವುದು ನನ್ನ ಆಲೋಚನೆ. ಆದರೆ ಒಂದೇ ಒಂದು ಫೋನ್ ಕಾಲ್ ನನ್ನ ಯೋಜನೆಯನ್ನು ವಿಫಲಗೊಳಿಸಿತು. ಅದು ಬಳ್ಳಾರಿಯಲ್ಲಿ ಒಂದು ಕಾರ್ಯಕ್ರಮಕ್ಕೆ ಕರೆ.

ಅಲ್ಲಿ ಹೋದರೆ ಒಂದು ವಿಸ್ಮಯ ಎದುರಾಯಿತು. ಅಲ್ಲಿನ ಜನರ ಮುಂದೆ ಕಾರ್ಯಕ್ರಮ ನೀಡಿದ ನಂತರ, “ಸರ್, ನೀವು ಈ ದೆವ್ವ, ಮಾಟ, ಮಂತ್ರ ನಂಬಲ್ಲ ಅಲ್ಲವಾ? ಗಾಣಗಾಪುರಕ್ಕೆ ಬನ್ನಿ. ಅಲ್ಲಿ 25 ವಯಸ್ಸಿನ ಹುಡುಗ ಮರ ತಿರುಗುಮುರುಗಾಗಿ ಹತ್ತುತ್ತಾನೆ. ಇದಕ್ಕೆ ಏನು ಹೇಳ್ತೀರಿ?” ಎಂದರು. ಆ ಹುಡುಗನ ವಿಶಿಷ್ಟ ಶಕ್ತಿಗೆ ಬೇರೆ ಕಾರಣಗಳಿರಬಹುದು. ಆದರೆ ಅದಕ್ಕೂ ಅತೀಂದ್ರಿಯ ಶಕ್ತಿಗಳಿಗೂ ಸಂಬಂಧವಿಲ್ಲ ಎನ್ನೋದು ನನ್ನ ದೃಢ ನಂಬಿಕೆ. ಆದರೂ ಅವನನ್ನು ಭೇಟಿ ಮಾಡುವ ಕುತೂಹಲ ನನ್ನಲ್ಲೂ ಇತ್ತು.

ಬಳ್ಳಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಗಾಣಗಾಪುರಕ್ಕೆ ಹೊರಟೆ. ಗಾಣಗಾಪುರದ ದೇವಾಲಯದಲ್ಲಿ ಸಮಯದಲ್ಲಿ ದೇವಸ್ಥಾನದಲ್ಲಿ ಘಂಟೆ ನಗಾರಿಗಳು ಜೋರಾಗಿ ಶಬ್ದ ಮಾಡುತ್ತಿದ್ದವು. ಅದೇ ಸಮಯದಲ್ಲಿ ಒಂದು ಹುಡುಗ ದಿಢೀರನೆ ಓಡಿಹೋಗಿ ಮರ ಉಲ್ಟಾ ಹತ್ತಿ ಮರದ ತುದಿಯಲ್ಲಿ ಹುಚ್ಚನಂತೆ ಕುಣೀಯೊಕೆ ಶುರು ಮಾಡಿದ. ಅಲ್ಲಿದ್ದ ಜನರು ಕುತೂಹಲದಿಂದ ಅದನ್ನು ವೀಕ್ಷಿಸುತ್ತಿದ್ದರು.

ಅಲ್ಲಿದ್ದವರನ್ನು ವಿಚಾರಿಸಿದೆ. “ಸರ್, ಇಲ್ಲಿ 20 ವರ್ಷದಿಂದ, 12 ಘಂಟೆಗೆ ಸರಿಯಾಗಿ ದತ್ತ ಮಹಾರಾಜರಿಗೆ ಆರತಿ ನಡೆಯುತ್ತೆ. ಆ ಸಮಯದಲ್ಲಿ ನಗಾರಿಗಳು ಬಾರಿಸುತ್ತಿದ್ದಂತೆ ಇಲ್ಲಿರುವ ಕೆಲವರು ಮೈಮೇಲೆ ದೇವರು, ದೆವ್ವ ಬಂದ ಹಾಗೆ ಆಡುತ್ತಾರೆ.” ಎಂದರು. ಸುಮಾರು 40 ಜನರು ಈ ರೀತಿ ಆಡೋದನ್ನ ನಾನು ನೋಡಿದೆ. ಅದರಲ್ಲಿ ಕೆಲವರನ್ನು ಮಾತನಾಡಿಸಿದೆ. ಮತ್ತೊಂದು ಕಡೆ ಹುಡುಗ  ತಿರುಗಾ ಮುರುಗಾ ಮರ ಹತ್ತಿ ತುದಿಯಲ್ಲಿ ಹುಚ್ಚನಂತೆ ಕುಣೀತಾ ಇದ್ದ.  ನಗಾರಿಗಳ ಶಬ್ದ ನಿಂತಾಗ ಅಲ್ಲಿರುವ ಜನರು ಮಾಮೂಲು ಸ್ಥಿತಿಗೆ ಬಂದರು. ಆ ಹುಡುಗನನ್ನು ಸುಮಾರು ಅಧ ಗಂಟೆಯಿಂದ ಗಮನಿಸುತ್ತಿದ್ದೆ. ಅವನು ಮರದಿಂದ ಕೆಳಗೆ ಇಳಿಯುತ್ತಿದ್ದಂತೆ ಅವನನ್ನು ಸಮಾಧಾನವಾಗಿ ಮಾತನಾಡಿಸಿದೆ…

“ಯಾವೂರಪ್ಪ ನಿಂದು, ಬಹಳ ಜೋರಾಗಿ ಕುಣೀತಾ ಇದ್ದೆ?”
“ಮಹಾರಾಷ್ಟ್ರ.”
“ಎಷ್ಟು ತಿಂಗಳಿಂದ ಇಲ್ಲಿದ್ದೀಯಾ?”
“ಮೂರು ತಿಂಗಳಿಂದ”
“ಇಲ್ಲಿಗೆ ಯಾಕೆ ಬಂದೆ?”
“ಏನು ಅಂತ ಹೇಳ್ಲಿ ಸರ್, ನೀವೇನಾದರು ನನ್ನ ಕಥೆ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ.” ಕುತೂಹಲ ಹುಟ್ಟಿಸಿದ.
“ಅಂತ ಕಥೆ ಏನಪ್ಪ ನಿಂದು?”
“ಏನು ಹೇಳಲಿ ಸರ್, ಮೂರುತಿಂಗಳ ಹಿಂದೆ ನನ್ನ ಹೊಟ್ಟೆ ಶೇಕ್ ಆಗೋದು, ಎದೆ ಜೋರಾಗಿ ಬಡಿದುಕೊಳ್ಳೋದು ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಸರಿಯಾಗಿ ಊಟ ಸೇರಲ್ಲ.”
“ನಿನ್ನ ಜೊತೆ ಯಾರಿದ್ದಾರೆ?”
“ನನ್ನ ಇಬ್ಬರು ಗೆಳೆಯರ ಜೊತೆಯಲ್ಲಿದ್ದೇನೆ. ಇಲ್ಲಿರುವವರೂ ನನ್ನ ಗೆಳೆಯರೇ.”
“ಇದೆಲ್ಲ ಸರಿ ಕಣಪ್ಪ. ಅರ್ಧ ಗಂಟೆ ಮುಂಚೆ ಮರ ಹತ್ತಿ ಕುಣೀತಾ ಇದ್ದೆ. ಈಗ ಮಾಮೂಲಾಗಿ ಮಾತನಾಡುತ್ತಿದ್ದೀಯ. ಇದು ಹೇಗೆ?”
“ಸರ್, ನಗಾರಿಗಳ ಸದ್ದು ಕೇಳಿದರೆ ಈ ತರ ಆಗುತ್ತದೆ,” ಎಂದ.
“ನನಗೂ ಶಬ್ದ ಕೇಳಿಸಿತು. ಆದರೆ ನಾನೇನು ಕುಣಿದಿಲ್ಲ …ಅದ್ಯಾಕೆ ನೀನು ಮಾತ್ರ?”
“ಸರ್, ನನಗೆ ಗೊತ್ತಿರುವವರು ಯಾರೋ ಭಾನಾಮತಿ ಮಾಡಿಸಿದ್ದಾರೆ. ಅದರಿಂದ ಹೀಗಾಗುತ್ತಿದೆ,” ಎಂದ. ಆ ಹುಡುಗ ಭಾನಾಮತಿಯ ಭ್ರಮೆಯಲ್ಲಿದ್ದ.

ನಂತರ ನಾನು ಅವನೊಂದಿಗೆ ಅಲ್ಲಿಗೇ ಮಾತು ನಿಲ್ಲಿಸಿ ಅವನ ಗೆಳೆಯನನ್ನು ಕರೆದು ಮಾತನಾಡಿಸಿದೆ.

“ನೋಡಪ್ಪ ನಿನ್ನ ಗೆಳೆಯನಿಗೆ ಯಾವ ಭಾನಾಮತಿಯೂ ಆಗಿಲ್ಲ. ಅವನು ಬೇಕಂತಲೇ ಹೀಗೆ ಆಡುತ್ತಿದ್ದಾನೆ ಎಂದು ನನಗೆ ಗೊತ್ತು. ನಿಜ ಹೇಳು. ನಾನು ಯಾರಿಗೂ ಹೇಳೋಲ್ಲ. ಅವು ಏಕೆ ಹೀಗೆ ಆಡುತ್ತಿದ್ದಾನೆ?”

ನಿಜ ಹೇಳದಿದ್ದರೆ ಇದನ್ನು ಟಿ.ವಿ.ಯಲ್ಲಿ ಹಾಕಿಸಿ ಪ್ರಚಾರ ಮಾಡುವ ಬೆದರಿಕೆಯನ್ನೂ ಹಾಕಿದೆ. ಆಗ ದಾರಿಗೆ ಬಂದ.

“ಸರ್, ಅವನು ಊರಲ್ಲಿ ತಂದೆ ತಾಯಿಗೆ ಗೊತ್ತಿಲ್ಲದ ಹಾಗೆ ಕಂಡವರ ಹತ್ತಿರವೆಲ್ಲ ಮೈ ತುಂಬಾ ಸಾಲ ಮಾಡೊಕೊಂಡಿದ್ದ. ಆ ಸಾಲ ತೀರಿಸಲಾಗದೆ ಭಾನಾಮತಿ ಎಂಬ ನೆಪ ಹುಡುಕಿಕೊಂಡ. ಯಾರಾದರೂ ಸಾಲ ವಾಪಸ್ ಕೇಳೋಕೆ ಬಂದರೆ ವಿಚಿತ್ರವಾಗಿ ಆಡುತ್ತಿದ್ದ. ಅದರಿಂದ ಜನಗಳು ಅವನ ಹತ್ತಿರ ಕೇಳೋದೆ ಬಿಟ್ಟಿಬಿಟ್ಟರು,” ಎಂದ.

ಮತ್ತೂ ವಿಶೇಷ ಎಂದರೆ, ಅವನು ಚಿಕ್ಕಂದಿನಿಂದಲೇ ಯೋಗಾಭ್ಯಾಸ ಮಾಡಿದ್ದಾನೆ. ಯೋಗಶಕ್ತಿಯನ್ನು ಬಳಸಿಕೊಂಡು ಮೈಮೇಲೆ ತನ್ನ ತಾನೆ ಮ್ಯೆಯನ್ನು ನಡುಗಿಸೋದು. ನರಗಳೆಲ್ಲ ಕಾಣುವ ಹಾಗೆ ಮಾಡುವುದು. ಹೊಟ್ಟೆ ಅಲ್ಲಾಡಿಸುವುದು… ಇತ್ಯಾದಿ ವಿದ್ಯೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ನಮ್ಮ ನಿಮ್ಮ ನಡುವೆ ದೆವ್ವಗಳಿವೆ ಹುಷಾರ್!

ಒಂದು ಹಳೆಯ ಪಾಳು ಬಂಗಲೆ.  ನಿರ್ಜನ ಪ್ರದೇಶ. ಹಗಲಲ್ಲೇ  ಹೋಗಲು ಭಯ. ಇನ್ನು ರಾತ್ರಿ ಹೋದರಂತೂ ಮುಗಿದೇ ಹೋಯಿತು. ಅಲ್ಲಿರುವ ದೆವ್ವ ನಮ್ಮನ್ನು ಮೈ ಸೇರಿಕೊಳ್ಳದೇ ಇರುವುದಿಲ್ಲ. ಅಥವಾ ನಮ್ಮನ್ನು ಹೆದರಿಸದೆ ಸುಮ್ಮನಂತೂ ಇರುವುದಿಲ್ಲ. ಇದು ಎಷ್ಟೋ ದೆವ್ವದ ಸಿನಿಮಾಗಳಲ್ಲಿ ನಾವು ಕಾಣುವ ಕಥೆ. ಅಂತಹ ಪಾಳು ಬಂಗಲೆಗಳು ಎಲ್ಲಿಯೂ ಇರಬಹುದು. ನೆನ್ನೆ ದೆವ್ವ ನೋಡ್ದೆ ಸಾರ್ ! ನಾನು ನಿಮ್ಗೆಯಾಕ್ ಸುಳ್ಳು ಹೇಳಲಿ ? ಸುಳ್ಳೇಳಿ ನನ್ಗೇನ್ ಆಗ್ಬೇಕ್?

ಆಸ್ಪತ್ರೆಯ ಶವಾಗಾರದಲ್ಲಿ ನಿನ್ನೆ ದೆವ್ವ ಕಾಣಿಸಿತು ತೋಟವೊಂದರ ಪಾಳು ಬಾವಿಯಲ್ಲಿ ಬಿದ್ದ ಆ ಹೆಂಗಸು ದೆವ್ವವಾಗಿದ್ದಾಳೆ. ಶಾಲೆಯ ಮುಂದಿನ ಮರಕ್ಕೆ ನೇಣು ಹಾಕಿಕೊಂಡ ವ್ಯಕ್ತಿ ದೆವ್ವ ಆಗಿದ್ದಾನೆ. ಅದರ ಚೇಷ್ಟೆಯಿಂದ ಮಕ್ಕಳು ಹೆದರಿ ಶಾಲೆಗೇ ಹೋಗಲ್ಲ ಎನ್ನುತ್ತಾರೆ. ನಮ್ಮ ಹಿಂದಿನ ಓಣಿಯಲ್ಲಿ ದೆವ್ವ ಇರೋದ್ರಿಂದ ಅಲ್ಲಿ ಜನಹೋಗಲು ಭಯಪಡುತ್ತಾರೆ. ದೆವ್ವ ಬಂದೋರು 10 ಕೆಜಿ ಮೆಣಸಿನಕಾಯಿ ತಿನ್ನುತ್ತಾರೆ. ಹೆಂಗಸಿನ ಮೇಲೆ ಬಂದ ದೆವ್ವ ನೂರಾರು ಜನ ಹಿಡಿದ್ರೂ ಬಿಡಿಸಿಕೊಳ್ಳೋಕೆ ಆಗಲ್ಲ. ದೆವ್ವ ಬಂದೋರು ಎಲ್ಲಾ ಭಾಷೆಯಲ್ಲಿ ಮಾತಾಡುತ್ತಾರೆ. ಪಕ್ಕದಮನೆ ಗಂಗೆಗೆ ದೆವ್ವ ಬಂದು ಕೊಟ್ಟದ್ದೆಲ್ಲಾ ತಿನ್ನುತ್ತಾಳೆ. ಆ ಹುಡುಗ, ಹುಡುಗಿ ಲವ್ ಮಾಡ್ತಿದ್ರಂತೆ ಹುಡುಗ ಕೈಕೊಟ್ಟ ಮೇಲೆ ಹುಡುಗಿ ಸತ್ತು ದೆವ್ವವಾಗಿ ಆತನ ಮೇಲೆ ಹಿಡಿದುಕೊಂಡಿದ್ದಾಳೆ.. ಆ ಸಾಬ್ರು ಸಾವಿರಾರು ದೆವ್ವ ಬಿಡ್ಸೆವ್ರಂತೆ ? ನಮ್ಮೂ ವಾಮಾಚಾರಿ ಎಲ್ಲಾ ದೆವ್ವಗಳ್ನ ಸೀಸೆಯಲ್ಲಿ ಹಾಕಿ ಬಂದ್ ಮಾಡವ್ನೆ ? ನಮ್ಮ ದೆವ್ರು ಅದೆಷ್ಟೋ ದೆವ್ವಗಳ ತನ್ನ ಕಾಲಕೆಳಗೆ ಹಾಕ್ಕೊಂಡಿದೆ ಗೊತ್ತಾ ನಿಮ್ಗೆ? .ದಿನ ಬೆಳಗಾದರೆ ಇಂತಹ ಎಷ್ಟೋ ಹೇಳಿಕೆಗಳನ್ನು ನಾವು ಕೇಳುತ್ತಲೇ ಇರುತ್ತೇವೆ.

ದೆವ್ವಗಳು ನಿಜಕ್ಕೂ ಅಸ್ತಿತ್ವದಲ್ಲಿವೆಯೇ? 
ಇದು ಇಂದಿನ ಪ್ರಶ್ನೆಯಲ್ಲ. ಶತ ಶತಮಾನಗಳದ್ದು. ನಮ್ಮ ಮನಸ್ಸಿನಲ್ಲಿ ಭಯ ಎನ್ನುವ ಒಂದು ಭಾವನೆ ಎಷ್ಟು ತೀವ್ರವಾಗಿರುತ್ತದೋ ಅಷ್ಟೇ ತೀವ್ರವಾಗಿ ಈ ನಂಬಿಕೆಯೂ ಬೇರೂರಿರುತ್ತದೆ. ದೆವ್ವಗಳ ನಂಬಿಕೆ ಅತ್ಯಂತ ಹಳೆಯದಾದರೂ ಅವುಗಳನ್ನು ವಿಜ್ಞಾನದ ನಿಕಷಕ್ಕೆ ಒಡ್ಡಿ ಅವುಗಳನ್ನು ಅರ್ಥೈಸಿಕೊಳ್ಳುವ ಜ್ಞಾನ ಈ ಸಂದರ್ಭದಲ್ಲಿದೆ. ಅದರ ಹಿನ್ನೆಲೆಯಲ್ಲೇ ನಾವು ದೆವ್ವಗಳನ್ನು ನೋಡಬೇಕು.

ಕಾನೂನು ಏನು ಹೇಳುತ್ತದೆ? 
ಕಾನೂನು ಅಂಧಶ್ರದ್ಧೆಗಳನ್ನು ಎಂದಿಗೂ ಉತ್ತೇಜಿಸುವುದಿಲ್ಲ. ದೆವ್ವ ಇದೆ ಎಂದು ಹೇಳುವುದು ಅಥವಾ ಅದನ್ನು ಬಿಡಿಸುತ್ತೇವೆ ಎಂದು ಬಹಿರಂಗವಾಗಿ ಹೇಳುವುದು ಮಹಾಅಪರಾಧ ಎಂದು ಸರ್ವೋಚ್ಛ ನ್ಯಾಯಾಲಯವೇ ಒಂದು ಪ್ರಕರಣದಲ್ಲಿ ತೀರ್ಪು ನೀಡಿದೆ.  ದೆವ್ವಗಳ ಅಸ್ತಿತ್ವದ ಬಗ್ಗೆ ನಮ್ಮ ಯಾವುದೇ ಶಾಸನಾಂಗ, ಕಾರ್ಯಾಂಗ ಅಥವಾ ನ್ಯಾಯಾಂಗಗಳು ದೃಢಪಡಿಸಿಲ್ಲ. ಅಂದರೆ ಅದು ವಾಸ್ತವಕ್ಕೆ ವಿರೋಧವಾದುದು ಎಂದು ಸುಸ್ಪಷ್ಟ. ವಾಸ್ತವ ಮೀರಿದ ಜನರ ಮನದಲ್ಲಿ ಅಂತರ್ಗತವಾದ ಭಯವನ್ನೇ ದುರ್ಬಳಕೆ ಮಾಡಿಕೊಂಡು ಜನರನ್ನು ಏಮಾರಿಸುತ್ತಿರುವವರ ವರ್ಗ ಕಾನೂನು ಪ್ರಕಾರ ಅಪರಾಧಿಗಳು. ಯಾರೇ ದೆವ್ವಗಳ ಅಸ್ತಿತ್ವವನ್ನು ಯಾವ ರೀತಿಯಲ್ಲಾದರೂ ದೃಢಪಡಿಸಿ ಅದರ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಕಾನೂನಿಗೆ ಒಪ್ಪಿಸಿ.

ದೆವ್ವದ ಕಲ್ಪನೆ ಹೇಗೆ ಬಂದಿತು? 
ದೆವ್ವಗಳಿವೆ ಎಂದು ಯಾರು ಎಷ್ಟೇ ಹೇಳಿಕೊಳ್ಳಲಿ, ವೈಜ್ಞಾನಿಕ ಶ್ರದ್ಧೆಯಿಂದ ಪರೀಕ್ಷಿಸಿದರೆ ಎಲ್ಲಿಯೂ ಚಲನಚಿತ್ರಗಳಲ್ಲಿ ಕಾಣಿಸಿದಂತೆ ದೆವ್ವಗಳು ಕಾಣುವುದಿಲ್ಲ. ಅವುಗಳ ಅಸ್ತಿತ್ವ ಸಾಬೀತಾಗುವುದೂ ಇಲ್ಲ. ನಾನು ಎಷ್ಟೋ ದೆವ್ವದ ಪ್ರಕರಣಗಳನ್ನು ಬಿಡಿಸಿದ್ದೇನೆ. ಪ್ರಾರಂಭದಲ್ಲಿ ದೆವ್ವವೇ ಎಂದು ಎಲ್ಲರೂ ದೃಢವಾಗಿ ನಂಬಿದ್ದರೂ ಪ್ರಕರಣ ಬಿಡಿಸಿದಾಗ ಅಲ್ಲಿ ಮನುಷ್ಯರ ಕೈವಾಡ ಸ್ಪಷ್ಟವಾಗಿ ಕಾಣುತ್ತದೆ. ಹಳೆಯ ಬಂಗಲೆಗಳಲ್ಲಿ ಕಾನೂನು ವಿರೋಧಿ ಚಟುವಟಿಕೆಗಳು ನಡೆಸುವವರು, ಕತ್ತಲ ಕಾಡುಗಳಲ್ಲಿ ಅನೈತಿಕ ಸಂಗತಿಗಳಲ್ಲಿ ತೊಡಗಿರುವವರು ಈ ದೆವ್ವಗಳನ್ನು ಮುಂದೆ ಮಾಡಿ ತಮ್ಮ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಾರೆ. ಬಹಳಷ್ಟು ಪ್ರಕರಣಗಳಲ್ಲಿ ಸಂಬಂಧಪಟ್ಟ ವ್ಯಕ್ತಿ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗಿ ತನ್ನ ಪ್ರಾಮುಖ್ಯತೆಯನ್ನು ಸಾಬೀತುಪಡಿಸಲು ದೆವ್ವದ ವೇಷ ಧರಿಸುವುದನ್ನು ನಾನೇ ಖುದ್ದಾಗಿ ಕಂಡಿದ್ದೇನೆ. ಎಷ್ಟೋ ಹೆಂಗಸರು ತಮ್ಮಲ್ಲಿನ ಆಂತರಿಕ ಬಯಕೆಗಳನ್ನು ತಣಿಸಿಕೊಳ್ಳಲು ಅಥವಾ ತಾವು ಮಾಡುತ್ತಿರುವ ಅನೈತಿಕ ಸಂಗತಿಗಳು ಬಯಲಿಗೆ ಬಾರದಂತಿರಲು ಈ ರೀತಿ ಆಟ ಹೂಡುತ್ತಾರೆ. ಎಷ್ಟೋ ಪ್ರಕರಣಗಳಲ್ಲಿ ಮನಸ್ಸಿನ ನೋವು, ಯಾತನೆ ತೋರಿಸಲು ಆಗದೇ ಇದ್ದಾಗ ಆಗುವ ಉನ್ಮಾದವೂ ದೆವ್ವವೇ.

ದೆವ್ವಗಳು ಸಿನಿಮಾಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿಗಳ ರೂಪ ಧರಿಸುತ್ತವೆ. ಆ ರೀತಿ ದೆವ್ವ ನಿಜವಾಗಿಯೂ ಮನುಷ್ಯನ ರೂಪ ಪಡೆಯಲು ಸಾಧ್ಯವಿಲ್ಲ. ಮನುಷ್ಯನ ದೇಹದ ನಾಲ್ಕನೇ ಮೂರು ಭಾಗ ಅಮೈನೋ ಆಸಿಡ್ನಿಂದ ತುಂಬಿಕೊಂಡಿದೆ. ಅದಿಲ್ಲದೆ ಯಾವ ಜೀವವೂ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಮಾನವನ ಆತ್ಮ ಅತ್ಯಂತ ಶಕ್ತಿಯತವಾಗಿದ್ದು ಅದು ದೆವ್ವವಾಗುತ್ತದೆ. ಅದೇ ಪುನರ್ ಜನ್ಮ ಕಾಣುತ್ತದೆ ಎಂದು ವಾದಿಸುವವರಿದ್ದಾರೆ. ಈ ಆತ್ಮ ಸ್ವಯಂ ಯೋಚಿಸಬಲ್ಲುದು. ಸ್ವಯಂ ಚಲಿಸಬಲ್ಲುದು. ಸ್ವಯಂ ತೀರ್ಮಾನಗಳನ್ನು ಕೈಗೊಳ್ಳಬಹುದು. ತನ್ನ ಜೀವ ಇದ್ದಾಗ ಇದ್ದ ರಾಗ ದ್ವೇಷಗಳನ್ನೂ ಮರೆಯದೆ ಜೀವಿಸಬಹುದು. ಈ ಆತ್ಮಕ್ಕೆ ಅಗಣಿತ ಶಕ್ತಿ ಇದೆ ಎಂದು ದೆವ್ವಗಳ ಅಸ್ತಿತ್ವದ ಬಗ್ಗೆ ಒಂದು ದೃಢ ವಿಶ್ವಾಸ.

ಇಂತಹ ಅಗಣಿತ ಶಕ್ತಿಯ ಆತ್ಮ ಇರುವ ಮನುಷ್ಯ ಯಕಃಶ್ಚಿತ್ ಮನುಷ್ಯನಿಗಿಂತ ಕೊಂಚವೂ ಹೆಚ್ಚು ಶಕ್ತಿಯನ್ನು ಬದುಕಿನ ಅವಧಿಯಲ್ಲಿ ತೋರಿಸಲು ಸಾಧ್ಯವಿಲ್ಲ ಏಕೆ? ಸಾಯುವ ಮುನ್ನ ದೇಹ ಇರುವಾಗಲೇ  ಈ ಆತ್ಮ ತನ್ನ ಶಕ್ತಿಯನ್ನೇಕೆ ಪ್ರದರ್ಶಿಸುವುದಿಲ್ಲ?

ಮೆದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆ ನಮ್ಮ ಭಾವನೆಗಳ ಏರುಪೇರಿಗೆ ಕಾರಣ. ಅದಿಲ್ಲದೆಯೂ ದೆವ್ವಗಳಿಗೆ ಭಾವನೆಗಳು ಹೇಗೆ ಉಂಟಾಗುತ್ತವೆ? ಅಷ್ಟೇ ಅಲ್ಲ, ದೆವ್ವಗಳು ಒಳ್ಳೆಯವೇನೂ ಅಲ್ಲ. ಅವೆಲ್ಲವೂ ಡಿಸ್ಟ್ರಕ್ಟಿವ್. ಅಂದರೆ ಮನುಷ್ಯನನ್ನು ನಾಶ ಮಾಡಲು ಜನ್ಮ(?) ಪಡೆದಿರುತ್ತವೆ ಎಂಬ ನಂಬಿಕೆ. ಮೆದುಳಿಲ್ಲದೆ ಇಲ್ಲದೆಯೂ ಆತ್ಮ ಕೆಲಸ ಮಾಡಲು ಸಾಧ್ಯವೇ? ಇದು ಗೋಡೆಗಳನ್ನು ದಾಟಿ ಬರಲು ಸಾಧ್ಯವಿದ್ದರೆ ಮತ್ತೇಕೆ ಬದುಕಿರುವಾಗ ಆತ್ಮ ಹೊತ್ತ ದೇಹಕ್ಕೆ ಆ ಶಕ್ತಿ ಇರುವುದಿಲ್ಲ?

ಮನುಷ್ಯ ಮಾತನಾಡುವುದು ಶಬ್ದದ ಅಲೆಗಳ ಮೂಲಕ ಕಿವಿಗೆ ಕೇಳುತ್ತದೆ. ಆತ್ಮ ಅಥವಾ ದೆವ್ವ ಮನುಷ್ಯರೊಂದಿಗೆ ಸಂವಹನ ಮಾಡಲು ಸಾಧ್ಯ ಎಂದಾದರೆ ಅದು ಮನುಷ್ಯನ ಯಾವುದೋ ಒಂದು ಅಳತೆಗೆ ನಿಲುಕಲೇಬೇಕು. ಅದಾವುದು?

ವಿಜ್ಞಾನ ಮುಂದುವರೆದು ನಾವು ಬದುಕಿನ ಎಲ್ಲ ಬಗೆಯ ಒತ್ತಡಗಳನ್ನು ಸೆನ್ಸರ್, ಕಾಂತ, ವಿದ್ಯುತ್, ಎಕ್ಸ್ ರೇ, ಆಡಿಯೋ ಥರ್ಮಲ್ ಇತ್ಯಾದಿ ಮಾಪಕಗಳಿಂದ ಅಳೆಯಲು ಕಲಿತಿದ್ದೇವೆ. ಈ ವಿದ್ಯೆಗೂ ನಿಲುಕದ ಶಕ್ತಿ ಹೇಗೆ ನಮ್ಮ ಸುತ್ತಲೂ ಅಸ್ತಿತ್ವದಲ್ಲಿರಲು ಸಾಧ್ಯ? ಆತ್ಮ ಎನ್ನುವುದು ನಿಜಕ್ಕೂ ಎಲ್ಲಿರುತ್ತದೆ? ಹೃದಯದಲ್ಲೇ? ಹಾಗಿದ್ದರೆ ಹೃದಯ ಬದಲಿಸುವಾಗ ಅದು ಎಲ್ಲಿ ಹೋಗುತ್ತದೆ? ಹೃದಯ ಶಸ್ತ್ರಚಿಕಿತ್ಸೆ ನಡೆಸುವಾಗ ಏನು ಮಾಡುತ್ತದೆ? ಆತ್ಮ ಮೆದುಳಿನಲ್ಲಿರುತ್ತದೆಯೇ? ಆದರೆ ಮೆದುಳು ಸತ್ತ ಜನರು ವೈದ್ಯಕೀಯ ಭಾಷೆಯಲ್ಲಿ ಜೀವಂತವಾಗೇ ಇರುತ್ತಾರೆ. ಪ್ರಾಣಿಗಳಿಗೂ ಆತ್ಮ ಇರುತ್ತದೆಯೇ? ಗಿಡ ಮರಗಳಲ್ಲೂ ಆತ್ಮ ಇರುತ್ತದೆಯೇ? ದೆವ್ವಗಳಿಗೆ ವಿಶೇಷ ಶಕ್ತಿ ಇದೆ ಎಂದು ನಂಬಲಾಗುತ್ತದೆ. ಅವುಗಳು ಎಷ್ಟು ತೂಕವನ್ನಾದರೂ ಎತ್ತಬಲ್ಲವು. ಎಲ್ಲಿಗೆ ಬೇಕಾದರೂ ಹಾರಬಲ್ಲವು. ಅವುಗಳಿಗೆ ಸಾವು ಇಲ್ಲ. ಅವು ಸುಲಭವಾಗಿ ಅತಿಮಾನವ ಶಕ್ತಿಗಳು ಮಾಡುವ ಕೆಲಸವನ್ನು ಮಾಡಬಲ್ಲವು ಎಂದು ನಂಬಲಾಗುತ್ತದೆ. ಮನುಷ್ಯರನ್ನು ನೋಡಿದರೆ ಜಗತ್ತಿನ ಎಲ್ಲ ಮನುಷ್ಯರಿಗೂ ಸರ್ವೇ ಸಾಧಾರಣವಾಗಿರುವ ಶಕ್ತಿಗಳಿವೆಯೇ ಹೊರತು ಯಾರಿಗೂ ಅತಿಮಾನವ ಶಕ್ತಿಗಳಿಲ್ಲ. ದೆವ್ವಗಳು ಮಾತ್ರ ಹೇಗೆ ಕಾರುಗಳನ್ನು ಎತ್ತಿ ಎಸೆಯಲು ಸಾಧ್ಯ? ಅಥವಾ ಮನೆಯೊಳಕ್ಕೆ ಪ್ರವೇಶ ಪಡೆಯಲು ಸಾಧ್ಯ? ಎಷ್ಟೋ ದೆವ್ವಗಳು ಕೆಲವು ಮನೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಮನೆಗಳು ಮಾನವ ನಿರ್ಮಿತ ತಾತ್ಕಾಲಿಕ ರಚನೆಗಳಷ್ಟೇ. ದೆವ್ವಗಳ ಅಪಾರ ಶಕ್ತಿ ಏಕೆ ಒಂದು ಮನೆಗೆ ಮಾತ್ರ ಮೀಸಲಾಗುತ್ತದೆ? ದೆವ್ವದ ಮನೆಯನ್ನು ಕೆಡವಿದರೆ ಏನಾಗುತ್ತದೆ? ಕೆಲವು ದೆವ್ವಗಳು ರಾತ್ರಿಯಲ್ಲಿ ಬರುತ್ತವೆ? ಎಲ್ಲಿಂದ ಬರುತ್ತವೆ? ಅವುಗಳು ಜೀವಿಸುವ ಗುಟ್ಟಿನ ತಾಣಗಳಿವೆಯೇ?  ಅವು ನಮ್ಮೊಂದಿಗೆ ಸಂವಹನ ನಡೆಸಬಲ್ಲ ಶಕ್ತಿ ಹೊಂದಿದ್ದರೆ ಅವುಗಳಿಗೆ ಏಕೆ ಒಂದು ಸ್ಥಾನಮಾನ ನೀಡಬಾರದು?  ಸಾಮಾನ್ಯವಾಗಿ ದೆವ್ವಗಳು ಅಸಂತೃಪ್ತಿಯಿಂದ ಸತ್ತವರದಾಗಿರುತ್ತವೆ. ಆತ್ಮಕ್ಕೆ ಏಕೆ ಕೋಪ ಬರುತ್ತದೆ? ಅವುಗಳಿಗೆ ದೇಹವಿಲ್ಲ, ನಿದ್ದೆಯಿಲ್ಲ, ವಿಶ್ರಾಂತಿ ಅಗತ್ಯವಿಲ್ಲ. ಎಲ್ಲಿ ಬೇಕೆಂದರೂ ಅಲೆದಾಡಬಲ್ಲ ಶಕ್ತಿಯುಳ್ಳ, ಕೆಲಸ ಮಾಡಬೇಕಾದ ಅಗತ್ಯವಿಲ್ಲದ ದೆವ್ವಗಳಿಗೇಕೆ ಕೋಪ ಬರಬೇಕು? ದೆವ್ವಗಳು ಎಲ್ಲ ಭಾಷೆಗಳನ್ನೂ ಹೇಗೆ ಅರ್ಥೈಕೊಳ್ಳಬಲ್ಲವು? ಶತ ಶತಮಾನಗಳಿಂದ ಎಷ್ಟೋ ಕೋಟಿ ಮಂದಿ ಸತ್ತಿದ್ದಾರೆ. ಅವರೆಲ್ಲ ಎಷ್ಟು ಕೋಟಿದೆವ್ವಗಳಾಗಿರಬಹುದು? ಎಲ್ಲಿವೆ? ದೆವ್ವಗಳಿರುವ ತಾಣ. ಹಳೆಯ ಬಂಗಲೆ, ಸ್ಮಶಾನ ಅಥವಾ ಒಂದು ದುರಂತ  ನಡೆದ ಯಾವುದೋ ಒಂಟು ಕಟ್ಟಡ. ಪ್ರತಿ ಮನೆಯಲ್ಲೂ ಸಾವು ಸಂಭವಿಸುತ್ತದೆ. ಪ್ರತಿ ಆಸ್ಪತ್ರೆಯಲ್ಲೂ ನೂರಾರು ಮಂದಿ ಸಾಯುತ್ತಾರೆ. ಇವರೇಕೆ ದೆವ್ವವಾಗಿ ಪರಿವರ್ತನೆಯಾಗುವುದಿಲ್ಲ?

ಪ್ಯಾರಾಸೈಕಾಲಜಿ ಏನು ಹೇಳುತ್ತದೆ? 

ದೆವ್ವ ಎನ್ನುವುದು ನಮ್ಮ ಅತಿಮಾನವ ಅನುಭವದ ಒಂದು ಭಾವನೆ. ಇದು ದೈಹಿಕವಲ್ಲ. ಮೆಂಟಲ್ ಡ್ರಮಟೈಸೇಷನ್ ಎಂದರೆ ಮನಸ್ಸಿನಲ್ಲೇ ಒಂದು ನಾಟಕದ ರೂಪ ಪಡೆಯುವ ಒಂದು ಅನುಭವ.

ದೆವ್ವದ ಅನುಭವ: ಕೆಲವರಿಗೆ ಮನೆಯಲ್ಲಿ ಯಾರೋ ಓಡಾಡಿದ ಅನುಭವವಾಗುತ್ತದೆ. ಕಿವಿಗೆ ಅಸಹಜ ಶಬ್ದ ಕೇಳುತ್ತದೆ. ಅದನ್ನು ದೆವ್ವ ಎಂದು ತೀರ್ಮಾನಿಸುತ್ತಾರೆ.

ಒಂದು ವೈದ್ಯಕೀಯ ಪ್ರಯೋಗಾಲಯದಲ್ಲಿ ಒಬ್ಬಾಕೆ ಅಸಹಜ ಅನುಭವ ಉಂಟಾಗುತ್ತಿದೆ ಎಂದು ಕೆಲಸ ಬಿಟ್ಟಳು. ಅಲ್ಲಿ ದೆವ್ವವಿದೆ ಎನ್ನುವುದು ಆಕೆಯ ದೂರು. ರ್ಯಾಂಡಿ ಎಂಬಾತ ಅದರ ಪ್ರಯೋಗಕ್ಕೆ ಇಳಿದ. ಒಂದು ತೆಳುವಾದ ಕತ್ತಿಯನ್ನು ಒಂದು ಕ್ಲಿಪ್ಗೆ ಸಿಕ್ಕಿಸಿಕೊಂಡು ಇಡೀ ಕೋಣೆಯಲ್ಲಿ ನಡೆದಾಡಿದ. ಆ ಕೋಣೆಯ ಮಧ್ಯಭಾಗಕ್ಕೆ ಬಂದ ಕೂಡಲೇ ಅದು ಯಾರೋ ಒತ್ತಿ ಹಿಡಿದಂತೆ ಪಕ್ಕಕ್ಕೆ ಬಾಗುತ್ತಿತ್ತು. ಗೋಡೆಯ ಪಕ್ಕ ನಡೆದಾಗ ಅದು ನೇರವಾಗಿರುತ್ತಿತ್ತು. ಅದು ಕೊನೆಯ ಮಧ್ಯಭಾಗದಲ್ಲಿ ಹೀಗೆ ಬಾಗುತ್ತಿರಲು ಆತ ಕಂಡು ಹಿಡಿದ ಕಾರಣ ಎಲ್ಲ ದೆವ್ವದ ಅನುಭವಗಳಿಗೂ ಉತ್ತರ ನೀಡುತ್ತದೆ-ಅದು ಇನ್ಫ್ರಾಸೌಂಡ್. 20 ಹರ್ಟ್ಸ್ ಗಿಂತ ಲೂ ಕಡಿಮೆ ಪ್ರಮಾಣದ ಶಬ್ದದ ಅಲೆಗಳು ಮನುಷ್ಯರ ಗ್ರಹಿಕೆಗೆ ಸಿಗುವುದಿಲ್ಲ. ಆದರೆ ಅದರ ಪರಿಣಾಮ ಮಾತ್ರ ಅನುಭವಕ್ಕೆ ಬರುತ್ತದೆ(ಕತ್ತಿ ಬಾಗಿದಂತೆ). ಆದರೆ ಈ ಕಡಿಮೆ ಪ್ರಮಾಣದ ಶಬ್ದದ ಅಲೆಗಳನ್ನೂ ಗ್ರಹಿಸುವ ಸೂಕ್ಷ್ಮ ಮತಿಗಳಿರುತ್ತಾರೆ(ಕೆಲವರಿಗೆ ಮಾತ್ರ ದೆವ್ವಗಳು ಕಾಣುತ್ತವೆ ಅಥವಾ ಅನುಭವಕ್ಕೆ ಬರುವಂತೆ). ಇದೇ ಹಿನ್ನೆಲೆಯಲ್ಲಿ ಆತ ಹಲವಾರು ದೆವ್ವದ ಪ್ರಕರಣಗಳು ಇನ್ಫ್ರಾಸೌಂಡ್ನ ಪ್ರಭಾವವೇ ಎಂದು ಸಾಬೀತುಪಡಿಸಿದ.

ದೆವ್ವದ ಅನುಭವಕ್ಕೆ ಬಂದವರು ಯಾವುದಾದರೊಂದು ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಆದ್ದರಿಂದ ಅಂತಹವರನ್ನು ನಾವು ಸೂಕ್ಷ್ಮವಾಗಿ ಗಮನಿಸಿ ಅವರಿಗೆ ತಕ್ಕಂತಹ ವಾತಾವರಣ ನಿರ್ಮಿಸಬೇಕು. ಅವರಿಗೆ ಕುಟುಂಬದಲ್ಲಿ ಸಾಕಷ್ಟು ಪ್ರಾಮುಖ್ಯತೆ ನೀಡಬೇಕು. ದೆವ್ವ ಹಿಡಿದವರು ಅಥವಾ ಅದರ ಅನುಭವ ಹೊಂದುತ್ತಿರುವವರಿಗೆ ಯಾವ ಬಗೆಯ ಸಂಕಷ್ಟ ಇದೆ ಎಂದು ಗಮನಿಸಿ ಅದನ್ನು ಪರಿಹರಿಸಲು ಪ್ರಯತ್ನಪಡಬೇಕು. ಕೆಲವೊಮ್ಮೆ ಅವರಿಗೆ ಹತ್ತಿರದವರಲ್ಲೂ ಹೇಳಿಕೊಳ್ಳಲಾಗದ ಸಮಸ್ಯೆಗಳಿರುತ್ತವೆ. ಅದಕ್ಕೆ ಮನೋವೈದ್ಯರ ಸಲಹೆ ಪಡೆಯುವುದು ಉತ್ತಮ.

ಸಾಂಪ್ರದಾಯಿಕವಾಗಿ ದೆವ್ವ ಬಿಡಿಸುವ ವಸ್ತು ಅಥವಾ ವ್ಯಕ್ತಿಗಳನ್ನು ನೋಡಿದರೆ ಅವರೂ ಭಯ ಹುಟ್ಟಿಸುವಂತಿರುತ್ತಾರೆ. ಇದು ದೆವ್ವ ಹಿಡಿದವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಇದು ಕೇವಲ ಮಾನಸಿಕವಾದ ಸಂಗತಿ ಎನ್ನುವುದಕ್ಕೆ ಇದಕ್ಕಿಂತ ಪುರಾವೆಗಳಿರುವುದಿಲ್ಲ. ದೆವ್ವ ಹಿಡಿದವರನ್ನು ಸಾಮಾನ್ಯವಾಗಿ ಅವರ ದೇಹಕ್ಕೆ ಹೊಡೆಯುವ ಅಥವಾ ಹಿಂಸೆ ನೀಡುವ ಮೂಲಕ ದೆವ್ವ ನಿವಾರಣೆ ಮಾಡುವ ಪ್ರಯತ್ನ ಮಾಡುತ್ತಾರೆ. ಇದರ ಅರ್ಥ ಆ ವ್ಯಕ್ತಿಗೆ ಹಿಂಸೆಯೇ ಹೊರತು ಅವರಲ್ಲಿರುವ ಯಾವ ಅಂಶಕ್ಕೂ ಅಲ್ಲ ಎನ್ನುವುದನ್ನು ತಿಳಿಯಬೇಕು.

(ದೆವ್ವಗಳಿವೆ ಎಂದು ಸಾಬೀತು ಪಡಿಸುವವರು ಹಾಗೂ ದೆವ್ವಗಳನ್ನು ಬಿಡಿಸುವವರಿಗೆ  ನಾನು ಈ ಮೂಲಕ ಬಹಿರಂಗ ಪಡಿಸುವುದೇನೆಂದರೆ ದೆವ್ವಗಳ ಅಸ್ತಿತ್ವವನ್ನು ವೈಜ್ಞಾನಿಕವಾಗಿ ಪ್ರದರ್ಶಿಸಿದರೆ ಒಂದು ಲಕ್ಷ ರೂ ನೀಡಲು ಸಿದ್ದನಿದ್ದೇನೆ.  ಇಲ್ಲದಿದ್ದರೆ  ಇಲ್ಲದ ದೆವ್ವಗಳ ಹೆಸರನ್ನು ಮುಂದಿಟ್ಟುಕೊಂಡು ಮುಗ್ದಜನರನ್ನು ಮಾನಸಿಕವಾಗಿ ಕೊಲ್ಲುವ ಕಾರ್ಯಕ್ಕೆ ತಿಲಾಂಜಲಿ ನೀಡಲಿ.  ಸಾರ್ವಜನಿಕರಲ್ಲಿ ನನ್ನದೊಂದು ಮನವಿ: ನಿಮ್ಮ ಊರಿನಲ್ಲಿ ಇಂತಹ ಘಟನೆಗಳು ಅಥವಾ ವ್ಯಕ್ತಿಗಳು ಇದ್ದರೆ ನಮಗೆ ತಿಳಿಸಲು ಕೋರಿದೆ.)

– ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
]ಮೊ:9481776616
miraclebuster_nataraj@yahoo.com