Daily Archives: November 2, 2017

ಕಮ್ಯುನಿಷ್ಟರು, ಮದರ್ ತೆರೆಸಾ, ಕ್ರಿಶ್ಚಿಯನ್ನರು ಮತ್ತು ಪ್ರತಿಕ್ರಿಯಾತ್ಮಕ ಕೋಮುವಾದ

Naveen Soorinje


ನವೀನ್ ಸೂರಿಂಜೆ


ಆರ್.ಎಸ್.ಎಸ್ ಮತ್ತು ಪಿ.ಎಫ್.ಐ ಚರ್ಚೆಯ ವೇಳೆ ಹಲವು ಚಿಂತಕರು ಒಂದು ಸಾಮಾನ್ಯ ವಾದವನ್ನು ಮುಂದಿಡುತ್ತಾರೆ. ಪಿ.ಎಫ್.ಐ ಮತ್ತು ಆರ್.ಎಸ್.ಎಸ್ ಅನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ; ಪಿ.ಎಫ್.ಐ ನ ಕೋಮುವಾದ ಕ್ರಿಯೆಗೆ ಪ್ರತಿಕ್ರಿಯೆಯಷ್ಟೇ ಎನ್ನುವುದು. ಇದೇ ಚರ್ಚೆಯನ್ನು ಮುಂದುವರೆಸಿದಲ್ಲಿ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಹಾಗಾದರೆ ಕ್ರಿಶ್ಚಿಯನ್ ಸಮುದಾಯದಲ್ಲಿ ಯಾಕೆ ಆರ್.ಎಸ್.ಎಸ್ ಗೆ ಪ್ರತಿಕ್ರಿಯೆಯಾಗಿ ಪಿ.ಎಫ್.ಐ ರೀತಿಯ ಪ್ರತಿಕ್ರಿಯಾತ್ಮಕ ಸಂಘಟನೆಗಳು ಬೆಳೆದಿಲ್ಲ?

ಹಲವರಿಗೆ ತಿಳಿದಿರಲಿಕ್ಕಿಲ್ಲ. ಆರ್.ಎಸ್.ಎಸ್, ಪಿ.ಎಫ್.ಐ ರೀತಿಯಲ್ಲಿ ಕ್ರಿಶ್ಚಿಯನ್ನರಲ್ಲೂ ಒಂದು ಪ್ರತಿಗಾಮಿ, ಪ್ರತಿಕ್ರಿಯಾತ್ಮಕ ಸಂಘಟನೆ ಹುಟ್ಟಿಕೊಂಡಿತ್ತು. ಅದರ ಹೆಸರು ಸ್ಯಾಕ್ ! ಮಂಗಳೂರಿನಲ್ಲಿ ಚರ್ಚ್ ಗಳ ಮೇಲೆ ಭಜರಂಗದಳ ದಾಳಿ ಮಾಡಿದ ಸಂಧರ್ಭದಲ್ಲಿ ಈ ಸ್ಯಾಕ್ ಸಂಘಟನೆ ಸ್ವಲ್ಪ ಸದ್ದು ಮಾಡಿತ್ತು. ಆಗ ನೈತಿಕ ಪೊಲೀಸ್ ಗಿರಿಯೂ ಸುದ್ದಿಯಲ್ಲಿತ್ತು. ಹಿಂದೂ ಹುಡುಗಿಯರು ಮುಸ್ಲಿಂ ಯುವಕನ ಜೊತೆ ಇದ್ದರೆ ಭಜರಂಗದಳದ ದಾಳಿ, ಮುಸ್ಲಿಂ ಹುಡುಗಿ ಹಿಂದೂ ಹುಡುಗನ ಜೊತೆ ಇದ್ದರೆ ಪಿ.ಎಫ್.ಐ ದಾಳಿಗಳು ವ್ಯಾಪಕವಾಗಿ ನಡೆಯುತ್ತಿದ್ದವು. ಆಗ ಕ್ರಿಶ್ಚಿಯನ್ ಹುಡುಗಿಯರು ಹಿಂದೂ ಮುಸ್ಲಿಂ ಸಮುದಾಯದ ಹುಡುಗರ ಜೊತೆ ಇದ್ದರೆ ನಾವು ಸಹಿಸೋದಿಲ್ಲ ಎಂದು ಸ್ಯಾಕ್ ಹೇಳಿಕೊಂಡಿತ್ತು.

ಇವತ್ತು ಆರ್.ಎಸ್.ಎಸ್ ಅನ್ನು ನಿಷೇಧ ಮಾಡಬೇಕೆಂದು ಪಿ.ಎಫ್.ಐ ಆಗ್ರಹಿಸಿದರೆ, ಪಿ.ಎಫ್.ಐ ಅನ್ನು ನಿಷೇದಿಸಬೇಕು ಎಂದು ಆರ್.ಎಸ್.ಎಸ್ ಆಗ್ರಹಿಸುತ್ತಿದೆ. ಈ ಎರಡೂ ಸಂಘಟನೆಗಳು ನಿಯಂತ್ರಣಕ್ಕೆ ಅರ್ಹವಾಗಿವೆ ಎಂದು ಪ್ರಗತಿಪರರ ವಾದವಾಗಿರುವಂತದ್ದು. ಆದರೆ ಸ್ಯಾಕ್ ಅನ್ನು ನಿಷೇದಿಸಬೇಕು ಎಂದು ಯಾರೂ ಆಗ್ರಹಿಸುವ ಪ್ರಮೇಯವೇ ಬಂದಿಲ್ಲ. ಅದಕ್ಕೆ ಕಾರಣ ಕ್ರಿಶ್ಚಿಯನ್ ಸಮುದಾಯದಲ್ಲಿ ಸಹಜವಾಗಿಯೇ ಇರುವ ಆಧುನಿಕತೆ, ಶಿಸ್ತು, ಸ್ವನಿಯಂತ್ರಣ ಮತ್ತು ಮಾನವಪ್ರೇಮ. ಅಂತಹ ಅದಮ್ಯ ಜೀವಪ್ರೇಮ ಮತ್ತು ಶಿಸ್ತಿಗೆ ಕಾರಣ ಅಲ್ಲಿ ಆಗಿಹೋಗಿರುವ ಮದರ್ ತೆರೇಸಾರಂತಹ ಅಸಂಖ್ಯ ಅಸಂಖ್ಯ ಮಾನವ ಪ್ರೇಮಿಗಳು.

ಕಲ್ಲಡ್ಕ ಪ್ರಭಾಕರ ಭಟ್ಟ ಜಗದೀಶ ಕಾರಂತ ಸೇರಿದಂತೆ ಯಾವುದೇ ಹಿಂದುತ್ವವಾದಿಗಳ ಭಾಷಣ ಕೇಳಿದಲ್ಲಿ ಅಲ್ಲೊಂದು ವಾಕ್ಯ ಬರುತ್ತದೆ. ಮುಸ್ಲೀಮರ ರೀಚಾರ್ಜ್ ಅಂಗಡಿಯಲ್ಲಿ ಮೊಬೈಲ್ ರೀಚಾರ್ಜ್ ಮಾಡಬೇಡಿ, ಹಿಂದೂಗಳ ಗೂಡಂಗಡಿಯಲ್ಲಿ ಮುಸ್ಲೀಮರನ್ನು ಹೆಚ್ಚು ಹೊತ್ತು ನಿಲ್ಲಿಸಬೇಡಿ ಎಂಬ ಕ್ಷುಲ್ಲಕ ಮಾತುಗಳು ಸಾಮಾನ್ಯ. ಆದರೆ ಚರ್ಚ್ ದಾಳಿಯ ಸಂಧರ್ಭದಲ್ಲಿ ಇಳಿ ವಯಸ್ಸಿನ ಸನ್ಯಾಸಿನಿಯರ ಮೇಲೆ ಬಾಸುಂಡೆ ಬರುವಂತೆ ಬಾರಿಸಿದರೂ ಅನಾಥಾಲಯಗಳಲ್ಲಿ ಹಿಂದೂಗಳ ಸೇವೆ ಮಾಡಬೇಡಿ, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಬೇಡಿ, ಬುದ್ದಿಮಾಂದ್ಯ ಹಿಂದೂ ಮಕ್ಕಳಿಗೆ ಉಚಿತ ವಿದ್ಯಾಬ್ಯಾಸ ಕೊಡಬೇಡಿ ಎಂಬ ಮಾತುಗಳು ಎಲ್ಲೂ ಕೇಳಿಬರಲಿಲ್ಲ. ಇಂತಹ ಸೇವಾ ಮನೋಭಾವವೇ ಆ ಸಮುದಾಯವನ್ನು ಹಲವು ಸಂಕಟಗಳಿಂದ ಪಾರುಮಾಡಿದೆ.

ಚರ್ಚ್ ಗಳ ಮೇಲೆ ದಾಳಿ ನಡೆದಾಗ ಬೆರಳೆಣಿಕೆಯ ಹುಡುಗರು ಕಲ್ಲು ತೂರಾಟ ನಡೆಸಿದ್ದು ಬಿಟ್ಟರೆ ಕ್ರಿಶ್ಚಿಯನ್ನರು ಪ್ರತಿದಾಳಿಗಿಳಿಯಲಿಲ್ಲ. ದಾಳಿಗೊಳಗಾದ ಚರ್ಚ್ ಗಳ ಜಾಗದಲ್ಲಿ ಬೇರೆ ಧರ್ಮದ ಧಾರ್ಮಿಕ ಕೇಂದ್ರಗಳನ್ನು ಕಲ್ಪಿಸಿಕೊಂಡರೆ ದಕ್ಷಿಣ ಕನ್ನಡದ ಸ್ಥಿತಿ ಊಹಿಸಲೂ ಅಸಾದ್ಯವಾಗಿರುತಿತ್ತು. ಅಲ್ಲಿವರೆಗೂ ಬೀದಿಗಿಳಿಯದ ಕ್ರಿಶ್ಚಿಯನ್ನರು ಮೊದಲ ಬಾರಿಗೆ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದರು. ಕೆಲವರು ಕಲ್ಲು ತೂರಾಟ ನಡೆಸಿದ್ದರೂ ಯಾವುದೇ ಚರ್ಚ್ ನ ಮುಖ್ಯಸ್ಥರು ಅದನ್ನು ಬೆಂಬಲಿಸಲಿಲ್ಲ ಮತ್ತು ಮುಂದುವರಿಸಲು ಬಿಡಲಿಲ್ಲ.

ಅವತ್ತು ಚರ್ಚ್ ದಾಳಿ ಸಂಬಂಧ ಬಿಷಪ್ ಅಲೋಶಿಯಸ್ ಪ್ಲಾವ್ ಡಿಸೋಜಾ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಅಷ್ಟರಲ್ಲಿ ಬಿಜೈ ಚರ್ಚ್ ನೊಳಗೆ ಪೊಲೀಸರು ನುಗ್ಗುತ್ತಿದ್ದಾರೆ ಎಂಬ ಮಾಹಿತಿ ಬಂತು. ತಕ್ಷಣ ಬೈಕನ್ನೇರಿ ಹೊರಟೆ. ಮಾಜಿ ಸಚಿವ ನಾಗರಾಜ ಶೆಟ್ಟರ ಮನೆ ದಾಟುತ್ತಿದ್ದಂತೆ ಚರ್ಚ್ ಬಳಿಯ ಸ್ಮಶಾನದಲ್ಲಿ ಒಂದು ಗುಂಪು ಕಲ್ಲು ತೂರಾಟ ನಡೆಸಲಾರಂಬಿಸಿತ್ತು. ಕಲ್ಲು ನೇರವಾಗಿ ನನ್ನ ಬೈಕ್ ಡೂಂಗೆ ಬಿದ್ದು ಡೂಮ್ ಪುಡಿಯಾಯ್ತು. ಇದರ ಮಾಹಿತಿ ತಿಳಿದ ಕಿರಿಯ ಫಾದರ್ ಒಬ್ಬರು ನನಗೆ ಕರೆ ಮಾಡಿ ಬೈಕ್ ಡ್ಯಾಮೇಜ್ ನ ಪರಿಹಾರ ಕೊಡುತ್ತೇನೆ ಎಂದಿದ್ದಲ್ಲದೆ ಯುವಕರ ಕೃತ್ಯಕ್ಕೆ ಕ್ಷಮೆ ಕೇಳಿದ್ದರು. “ಮೊದಲು ಕ್ರಿಶ್ಚಿಯನ್ ಯುವಕರಿಗೆ ಪ್ರತಿಭಟನೆಯನ್ನು ಕಲಿಸಬೇಕು. ಮೊದಲ ಬಾರಿ ಬೀದಿಗಿಳಿದಿರೋದ್ರಿಂದ ಹೀಗಾಗಿದೆ. ಸ್ವಲ್ಪ ಎಡಪಂಥೀಯರ ಜೊತೆ ನಿಮ್ಮ ಯುವಕರನ್ನು ಬೆರೆಸಿ” ಅಂದಿದ್ದೆ.

ಆ ನಂತರದ ಬೆಳವಣಿಗೆಯಲ್ಲಿ ಚರ್ಚ್ ದಾಳಿ ಸಂತ್ರಸ್ತರ ಜೊತೆ ನಿಂತಿದ್ದು ಎಡಪಂಥೀಯರು ಮಾತ್ರ. ಕ್ರಿಶ್ಚಿಯನ್ ಸಮುದಾಯವನ್ನು ಅಭದ್ರತೆಯಿಂದ ಹೊರತರುವ, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಆಗ್ರಹಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಮಾಡುವ ಜವಾಬ್ದಾರಿ ಎಡಪಂಥೀಯರದ್ದೇ ಆಗಿದೆ. ಈ ಸಂಧರ್ಭದಲ್ಲಿ ಕ್ರಿಶ್ಚಿಯನ್ನರ ಅತ್ಯುನ್ನತ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನುಡಿದ ‘ಕಮ್ಯುನಿಷ್ಟರು ಕ್ರಿಶ್ಚಿಯನ್ನರಂತೆಯೇ ಚಿಂತಿಸುತ್ತಾರೆ’ ಎಂಬ ಮಾತುಗಳು ಉಲ್ಲೇಖನೀಯ. ಈ ಹಿನ್ನಲೆಯಲ್ಲಿ  ಕ್ರಿಶ್ಚಿಯನ್ ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ನವಂಬರ್ ೬ ರಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಮದರ್ ತೆರೇಸಾ ವಿಚಾರ ವೇದಿಕೆ ಅಶ್ರಯದಲ್ಲಿ ನಡೆಯಲಿರುವ ಮದರ್ ತೆರೆಸಾ ನೆನಪಿನ ಕಾರ್ಯಕ್ರಮ ಹೆಚ್ಚು ಪ್ರಸ್ತುತತೆಯನ್ನು ಪಡೆದುಕೊಂಡಿದೆ.