Category Archives: ಮಲ್ಲಿಕಾರ್ಜುನ ಹೊಸಪಾಳ್ಯ

ರಾಜಕಾರಣಿಗಳ ಅಣೆ’ಕಟ್ಟು’ ಕಥೆ

– ಮಲ್ಲಿಕಾರ್ಜುನ ಹೊಸಪಾಳ್ಯ

ಒಂದು ಭಾರೀ ಅಣೆಕಟ್ಟು ಕಟ್ಟುವ ಯೋಜನೆ ಅಬ್ಬರದಿಂದ ಪ್ರಾರಂಭವಾಗುತ್ತದೆ. ಕೋಟಿಗಟ್ಟಲೆ ಮೊತ್ತದ ಕ್ರಿಯಾ ಯೋಜನೆಗಳು, ಟೆಂಡರುಗಳು, ಸ್ಥಳ ಪರಿಶೀಲನೆ ಮುಂತಾಗಿ ಹತ್ತು-ಹಲವು ಚಟುವಳಿಕೆಗಳ ಭರಾಟೆ ಜೋರಾಗಿರುತ್ತದೆ. ಆದರೆ ಈ ಯೋಜನೆಗೆ ಪರ-ವಿರೋಧ ರಾಜಕಾರಣಿಗಳಿರುತ್ತಾರೆ. ಅವರವರ ಹಿತಾಸಕ್ತಿಗನುಗುಣವಾಗಿ ವಕಾಲತ್ತು ನಡೆದಿರುತ್ತದೆ.

ಅಣೆಕಟ್ಟು ಕಟ್ಟುವುದನ್ನು ವಿರೋಧಿಸುವ ಗುಂಪಿನ ರಾಜಕಾರಣಿಗಳು ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಬರುತ್ತಾರೆ. ಸ್ಥಳೀಯ ರೈತರನ್ನು ಸೇರಿಸಿ ಯೋಜನೆಯನ್ನು ವಿರೋಧಿಸುವಂತೆ ಕರೆ ಕೊಡುತ್ತಾರೆ. ಯೋಜನೆ ಯಾಕೆ ಬೇಡ ಎಂಬುದಕ್ಕೆ ಅವರ ಭಾಷಣದಲ್ಲಿ ಈ ರೀತಿ ವಿವರಣೆ ಇರುತ್ತದೆ.

“ನಮ್ಮ ನದಿ ನೀರಿಗೆ ಅಣೆಕಟ್ಟು ಕಟ್ಟಿ, ಆ ನೀರಿನಿಂದ ಕರೆಂಟು ಉತ್ಪಾದಿಸಿ, ನಂತರ ಆ ನೀರನ್ನು ನಮಗೆ ಬಿಡುತ್ತಾರೆ. ನೀರಿನಲ್ಲಿರುವ ಕರೆಂಟು ತೆಗೆದರೆ ಅದು ಉಪಯೋಗಕ್ಕೆ ಬರದಂತಾಗುತ್ತದೆ, ಅದರಲ್ಲಿ ಸಾರವೇ ಇರುವುದಿಲ್ಲ. ಆ ನೀರನ್ನು ಬೆಳೆಗೆ ಹಾಯಿಸಿದರೆ ಏನೂ ಉಪಯೋಗವಾಗುವುದಿಲ್ಲ, ಹಾಗಾಗಿ ಈ ಯೋಜನೆಯನ್ನು ವಿರೋಧಿಸಿ,”  ಎಂದು ಮನಮುಟ್ಟುವಂತೆ ವಿವರಿಸುತ್ತಾರೆ. ರೈತರಿಗೆ ಇವರು ಹೇಳುವುದು ನಿಜ ಎನಿಸುತ್ತದೆ. ಕರೆಂಟು ತೆಗೆದ ಬಂಜೆ ನೀರು ನಮಗೇಕೆ ಬೇಕು? ಈ ಯೋಜನೆಯೇ ಬೇಡವೆಂದು ವಿರೋಧಿಸುತ್ತಾರೆ. ಅಣೆಕಟ್ಟು ಕೆಲಸ ಅರ್ಧಕ್ಕೇ ನಿಂತು ಹೋಗುತ್ತದೆ.

ಆಗ ಯೋಜನೆ ಪರವಾದ ರಾಜಕಾರಣಿಗಳು ಅಲ್ಲಿಗೆ ಬರುತ್ತಾರೆ. ರೈತರನ್ನು ಸೇರಿಸುತ್ತಾರೆ. ಅವರ ಮುಖಂಡ ಭಾಷಣ ಶುರು ಮಾಡುತ್ತಾನೆ. “ಕರೆಂಟನ್ನು ಕೈಯಲ್ಲಿ ಮುಟ್ಟಿದರೆ ಏನಾಗುತ್ತದೆ? ಶಾಕ್ ಹೊಡೆಯುತ್ತದೆ, ಮುಟ್ಟಿದವರು ಸಾಯುತ್ತಾರೆ, ಅಂದರೆ ನೀರಿನಲ್ಲಿರುವ ಕರೆಂಟು ಕೆಟ್ಟದ್ದು, ಅಪಾಯಕಾರಿ, ಇಂತಹ ಅಪಾಯಕಾರಿಯಾದ ಕರೆಂಟನ್ನು ನೀರಿನಿಂದ ತೆಗೆದು ಒಳ್ಳೆಯ, ಅಪಾಯಕಾರಿಯಲ್ಲದ ನೀರನ್ನು ಮಾತ್ರ ನಿಮಗೆ ಕೊಡುತ್ತೇವೆ, ನೀವು ಅದನ್ನು ಹೇಗೆ ಬೇಕಾದರೂ ಮುಟ್ಟಬಹುದು, ಬೆಳೆಗೂ ಬಳಸಬಹುದು, ಇಂತಹ ಯೋಜನೆ ನಿಮಗೆ ಬೇಡವೇ.?” ಎಂದು ಕೇಳುತ್ತಾರೆ. ಈ ಮುಖಂಡರ ವಾದಕ್ಕೆ ರೈತರು ತಲೆದೂಗುತ್ತಾರೆ. ನಮ್ಮ ಒಳ್ಳೆಯದಕ್ಕೆಂದು ಇರುವ ಈ ಯೋಜನೆ ಬರಲಿ ಎನ್ನುತ್ತಾರೆ. ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಅಲ್ಲಿ ಬೃಹತ್ ಅಣೆಕಟ್ಟು ತಲೆ ಎತ್ತುತ್ತದೆ.

[ನಮ್ಮ ರೈತರು, ಮುಗ್ಧ ಹಳ್ಳಿಗರನ್ನು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ. ಕಾಲಾನುಕ್ರಮದಿಂದಲೂ ಇದು ನಡೆಯುತ್ತಲೇ ಇದೆ. ಬಣ್ಣ-ಬಣ್ಣದ ಮಾತುಗಳು, ಅಂಕಿ-ಅಂಶಗಳು, ಆಕರ್ಷಕ ಹೆಸರಿನ ಯೋಜನೆಗಳ ಸುರಿಮಳೆಯಲ್ಲಿಯೇ ರೈತರನ್ನು ವಂಚಿಸಲಾಗುತ್ತಿದೆ. ರೈತರ ಬಜೆಟ್ ಎಂಬುದೂ ಸಹ ಇಂತಹುದೇ ಒಂದು ಗಿಮಿಕ್.]