“ಸತ್ಯಾನ್ವೇಷಣೆ” : ಪ್ರೋತ್ಸಾಹಕ ಬಹುಮಾನ ಪಡೆದ ಕತೆ

 – ಧ್ರುವಮಾತೆ

’ಅರ್ಥವಾಗದ ಭಾಷೇಲಿ ಸತ್ಯಣ್ಣನಿಗೆ ಪತ್ರ ಬರೀತಿದ್ದವರಾದರೂ ಯಾರು?’

ಅರ್ಥವಾಗದ ಭಾಷೇಲಿ ಮೇಲಿಂದ ಮೇಲೆ ಪತ್ರಗಳು ಬರತೊಡಗಿದಾಗ ಸತ್ಯಣ್ಣನಿಗೆ ನಿಜವಾಗಿ ತಲೆಕೆಟ್ಟು ಹೋಗಿತ್ತು. ಗಂಡನ ಒದ್ದಾಟ ನೋಡಲಾರದೆ ಸಾವಿತ್ರಿ ಅಂದಿದ್ಲು “ಮಾಲಯಕ್ಕೆ ಬೆಂಗ್ಳೂರಿಂದ ಮೂರ್ತಣ್ಣ ಭಾವ ಬಂದಿದಾರಂತಲ್ಲ. ಅವ್ರಗೆ ತೋರ್‍ಸಿ ನೋಡಾಣ, ಹತ್ತೂರು ಸುತ್ತಿದೋರವರು, ಅದೆಂತಾಂತ ಅವ್ರಿಗೆ ಗೊತ್ತಾದೀತು.” ಪತ್ನಿಯ ಮಾತು ಸರಿ ಎನಿಸಿ ಸತ್ಯಣ್ಣ ಪತ್ರಗಳ ಕಟ್ಟಿನೊಂದಿಗೆ ದೊಡ್ಡಪ್ಪಯ್ಯನ ಮನೆಯತ್ತ ಹೆಜ್ಜೆ ಹಾಕಿದ್ರು. “ಹೋಯ್ ನೀ ಯಾವಾಗ ತೆಲುಗು ಕಲ್ತದ್ದಾ ಮಾರಾಯ?”, ಮೂರ್ತಣ್ಣ ನಗೆಯಾಡಿದಾಗ ಸತ್ಯಣ್ಣ ಅಂದಿದ್ರು “ನೀವ್ ತಮಾಷೆ ಮಾಡಬ್ಯಾಡಿ ಮೂರ್ತಣ್ಣ, ಮೂರ್ ತಿಂಗ್ಳಲ್ಲಿ ಇದು ಹತ್ತನೇ ಪತ್ರ ಗೊತ್ತುಂಟಾ? ನಂಗಂತೂ ಮಂಡೆ ಕೆಟ್ಟು ಮೊಸರಾಗಿದೆ. ಅಲ್ಲಾ, ಇದ್ನೆಲ್ಲ ಅದ್ಯಾರ್ ಬರೀತಿದಾರೋ, ಯಾಕ್ ಬರೀತಿದಾರೋ ಆ ದೇವ್ರಿಗೆ, ಗೊತ್ತು ಮಾರಾಯ್ರೆ.”
“ಮೂರ್ ತಿಂಗಳಿಂದಾನಾ?! ಮತ್ಯಾಕ್ ಇಷ್ಟು ದಿನ ಸುಮ್ನಿದ್ಯೋ? ತೀರ್ಥಳ್ಳಿ ಪೇಟೇಲಿ ಯಾರಿಗಾರ ತೋರ್‍ಸಿ ಅದೆಂತಾಂತ ತಿಳ್ಕಣಾದು ತಾನೇ?”
“ಹಂಗ್ ಮಾಡಾಕ್ ಹೋಗೀನೇ ಎಡವಟ್ಟಾದ್ದಲ್ವ. ತೀರ್ಥಳ್ಳಿ ರೈಸ್ ಮಿಲ್ ರೈಟ್ರಿಗೆ ಪತ್ರಗಳನ್ನು ತೋರಿಸ್ದೆ, ಒಂದೇ ಏಟಿಗೆ ಆ ಅಸಾಮಿ ’ಏನ್ ಭಟ್ರೆ ನಿಮ್ ಊರಿಗೂ, ಕರ್ನೂಲಿಗೂ ಬಾಳಾಬಾಳಾ ದೋಸ್ತ್ ಇದ್ದಂಗಿದೆಯಲ್ಲ ಏನ್ ಸಮಾಚಾರ?’ ಅಂದ್ ಬಿಡಾದಾ? ಒಂದ್ ನಿಮಿಷ ನನ್ ಗುಂಡಿಗೆ ನಿಂತೋತು ನೋಡಿ.”
“ಹೋಯ್ , ಅದೆಂತಾಂತ ಸರ್‍ಯಾಗಿ ಹೇಳಬಾರ್‍ದನಾ?”
“ಅಯ್ಯೋ ರಾಮ್ನೆ, ಅದ್ಯಾಕೆ ಕೇಳ್ತೀರಿ ಆ ಕಥೇನ? ಹೋದ್ವರ್ಷ, ಸೂರತ್‌ಕಲ್ಲಿಗೋಗ ಬೇಕಿತ್ತು, ಆದ್ರೆ ಬಸ್ ತಪ್ಪೋತೂಂತ ಯಾವನೋ ಬಂದು ಕೇಳ್ದಾಂತ ಅಂಗ್ಡಿ ಹೂವಪ್ಪ ಅವನಂಗಡೀಲಿ ರಾತ್ರಿ ಮಲ್ಕಣಾಕೆ ಜಾಗ ಕೊಟ್ಟಿದ್ದೆ ತಪ್ಪಾತು ನೋಡಿ. ಮರ್‍ದಿನ ಬೆಳಗಾಗುತ್ತಿದ್ದಂತೆ ಆ ಅಸಾಮಿ ಹೋಗಿಯಾಗಿತ್ತು. ಆದ್ರೆ ಮದ್ಯಾಹ್ನದೊತ್ತಿಗೆ ಅಂಗ್ಡೀಗೆ ಬಂದ ಪೋಲಿಸ್ನೋರು ಹೂವಪ್ಪನ್ನ ಸ್ಟೇಷನ್ನಿಗೆ ಎಳಕಂಡು ಹೋಗಿ, ’ನಿಂಗೂ ಅವ್ನಿಗೂ ಏನ್ ಸಂಬಂಧ’ ಅಂತ ಕೇಳಿ ಹೂವಪ್ಪನ್ನ ಹಣ್ಣುಗಾಯಿ-ನೀರುಗಾಯಿ ಮಾಡಿದಾರೆ. ಯಾಕ್ ಗೊತ್ತುಂಟಾ? ಅವತ್ತು ಹೂವಪ್ಪನಂಗಡೀಲಿ ಉಳಕೊಂಡೋನು ಕರ್ನೂಲಿನ ಉಗ್ರಗಾಮಿಯಂತೆ ಮಾರಾಯ್ರೆ.”
“ಹೋಗ್ಲಿ ಬಿಡು. ನೀ ಏನೂ ಯೋಚ್ನೆ ಮಾಡಬ್ಯಾಡ. ನವ್ ಆಫೀಸ್ನಾಗೆ ತೆಲುಗಿನೋರಿದಾರೆ, ಪತ್ರಾನ ತೋರಿಸಿ, ಅದೇನೂಂತ ವಿಚಾರ್‍ಸಿ ತಿಳಿಸ್ತೀನಿ. ಅಂದಂಗೆ ಅವರೂ ಕರ್ನೂಲಿನೋರೆ,” ಮೂರ್ತಣ್ಣ ಅಂದಾಗ ಮೂಲೆಯಲ್ಲಿ ಮುದುರಿ ಮಲಗಿದ್ದ ಅನಂತಯ್ಯ ಗೊಣಗಿದ್ದರು.
“ನಮ್ ಮೀನೂನ ಕರ್ನೂಲಿಗೇ ಕೊಟ್ಟಿದ್ದು. ಬ್ಯಾಡ, ಬ್ಯಾಡಾಂದ್ರೂ ಕೇಳ್ದೆ ಆ ಪಾಪದ ಕೂಸನ್ನ ಮೈ ನೆರೆಯೋ ಮುಂಚೇನೇ ಆ ಕಣ್ ಕಾಣದಿದ್ ರಾಜ್ಯಕ್ಕೆ..”
ಸತ್ಯಣ್ಣ, ಮೂರ್ತಣ್ಣ ಮುಖ-ಮುಖ ನೋಡಿ ಕೊಂಡ್ರು. ತಕ್ಷಣ ಸತ್ಯಣ್ಣ ಅನಂತಯ್ಯನ ಹತ್ತಿರ ಹೋಗಿ ಕೇಳಿದ್ರು, “ಹೇಳಿ ದೊಡ್ಡಪ್ಪಯ್ಯ ನೀವೆಂತ ಹೇಳಿದ್ದು. ಯಾರನ್ನ ಕರ್ನೂಲಿಗೆ ಕೊಟ್ಟಿದ್ದು?” ಉಹೂಂನ್ ಅನಂತಯ್ಯ ಜಪ್ಪಯ್ಯ ಅನ್ಲಿಲ್ಲ. ಸತ್ಯಣ್ಣ ಮತ್ತೆ ಮತ್ತೆ ಪೀಡಿಸಿದಾಗ “ಥೂ ಹೋಗಾ ಆಚೆ ಮಂಗನ್  ತಂದು” ಎಂದು ಬೈದು ಮಗ್ಗುಲಾಗಿದ್ರು.

“ಮೀನು, ಮೀನಾಕ್ಷಿ, ಮೀನಾ, ಮೀನಾಕ್ಷಕ್ಷ’ ತುಂಬ ಚಿರಪರಿಚಿತ ಹೆಸರೆನ್ನಿಸಿತು ಸತ್ಯಣ್ಣನಿಗೆ. ಹೌದು, ಈ ಹೆಸರು ತನಗೆ ಚೆನ್ನಾಗಿ ಗೊತ್ತು. ಯಾರದು? ಉಹೂಂ, ಗೊತ್ತಾಗ್ತಿಲ್ಲ. ಎಲ್ಲ ಗೋಜಲು, ಗೋಜಲು. ನೆರೆದ ಮಂದಿ, ತಳಿರು-ತೋರಣ, ವಾಲಗದ ಸದ್ದು, ಅಲಂಕರಿಸಿಕೊಂಡ ಪುಟ್ಟ ಹುಡುಗಿ ಹೌದು, ಅವಳ್ಯಾರು? ತನಗೆ ಗೊತ್ತಿರುವವಳೇ ಆದ್ರೆ ಈಗ ನೆನಪಾಗ್ತಿಲ್ಲ, ಮಸುಕುಮಸುಕು ನೆನಪು, ಅಸ್ಪಷ್ಟ ದೃಶ್ಯಗಳು! ತುಂಬ ಹಿಂಸೆ ಎನಿಸಿ ಕಣ್ಮುಚ್ಚಿ ಕುಳಿತುಬಿಟ್ಟರು ಸತ್ಯಣ್ಣ.

ಹತ್ತಿರ ಬಂದ ಮೂರ್ತಣ್ಣ ” ಅಪ್ಪಯ್ಯರಿಗೆ 90 ವರ್ಷ ದಾಟ್ತು. ಜೊತೆಗೆ ಮರೆವಿನ ಖಾಯಿಲೆ ಬೇರೆ. ಅವರೆಂತ ಮಾತಾಡ್ತಾರೇಂತ ಅವರಿಗೇ ಗೊತ್ತಿರಲ್ಲ. ಅಂತಾದ್ರಾಗೆ ನೀ ಯಾಕೆ ಅವರ ಮಾತಿಗೆ ಮಂಡೆ ಕೆಡಿಸ್ಕೋತಿ. ನಾ ವಿಚಾರಿಸಿ ತಿಳಿಸ್ತೀನೀಂತ ಹೇಳಿದೀನಲ್ಲ, ಏನೂ ಯೋಚ್ನೆ ಮಾಡ ಬ್ಯಾಡ, “ಸಮಾಧಾನಿಸಿದ್ದರು.

ಮೂರ್ತಣ್ಣ ಪಕ್ಷ ಮುಗಿಸಿ ಬೆಂಗಳೂರಿಗೆ ಹೊರಟು ಹೋಗಿದ್ರು. ಆದ್ರೆ ಸತ್ಯಣ್ಣ ಮಾತ್ರ ದೊಡ್ಡಪ್ಪನನ್ನು ಬಿಟ್ಟಿರಲಿಲ್ಲ, ಅದರ ಬಾಯಿ ಬಿಡಿಸಲು ಪ್ರಯತ್ನಿಸಿದ್ದರು. ಕೆಲವೊಮ್ಮೆ ಗೆಲುವಾಗಿ ಮಾತಾಡ್ತಿದ್ದ ಅನಂತಯ್ಯ ಇದ್ದಕ್ಕಿದ್ದಂತೆ ತಟಸ್ಥರಾಗಿಬಿಡ್ತಿದ್ರು. ಮತ್ತೇ ಕೆಲವೊಮ್ಮೆ ತಾವೇ ಸಾಕಿದ ಸತ್ಯಣ್ಣನನ್ನು ಗುರುತಿಸದೇ ’ಇವನ್ಯಾರೊ ಬಂದು ನನ್ನ ಪ್ರಾಣ ತಿಂತಾನಲ್ಲೋ ಓಡಿಸ್ರೋ ಇವನನ್ನ’ ಅಂತ ಬೊಬ್ಬೆ ಹಾಕ್ತಿದ್ರು.

ವಾರದ ನಂತರ ಮೂರ್ತಣ್ಣನ ಫೋನು ಬಂದಿತ್ತು. ” ಏನೋ ದಿನಾ ಮನೆಗೆ ಹೋಗಿ ಬರ್‍ತಿದ್ಯಂತೆ, ಪ್ರಾಣೇಶ ಹೇಳ್ದ. ಅಪ್ಪಯ್ಯ ಏನಾರ ಬಾಯಿ ಬಿಟ್ರಾ?”
“ಹೂಂ, ಹಳೇದೆಲ್ಲ ಪೂರ್ತಿ ಮರೆತಿಲ್ಲ ಅವ್ರು. ನಾ ಹುಟ್ತಿದ್ದ ಹಾಗೆ ನನ್ನ ಹಡೆದಮ್ಮ ತೀರಿಕೊಂಡ್ಳಂತೆ. ನನ್ನಪ್ಪಯ್ಯಗೆ ವೈರಾಗ್ಯ ಬಂದು ದೇಶಾಂತರ ಹೋದ್ರಂತೆ. ಮೂರು ವರ್ಷದ ಮೇಲೆ ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷ ಆದೋರು ’ನಂಗೆ ಉಡುಪೀಲಿ ಅಡ್ಗೆ ಕೆಲ್ಸಸಿಕ್ಕಿದೆ. ಹುಡುಗ್ರನ್ನ ಕರ್ಕೊಂಡು ಹೋಗ್ತೀನಿ’ ಅಂದ್ರಂತೆ. ನಮ್ಮನ್ನ ಕರ್ಕೊಂಡೋಗಿ ವರ್ಷದ್ ಮೇಲೆ ಇದ್ದಕ್ಕಿದ್ದ ಹಾಗೆ ಊರಿಗ್ ಬಂದು ’ಮೀನಾಕ್ಷಿಗೆ ಮದ್ಯೆ ಮಾಡ್ತಿದೀನಿ. ಆಂಧ್ರದ ಕಡೆಯೋರು, ನಮ್ಮೋರೇ, ಉಡುಪಿಗೆ ಯಾತ್ರೆಗೆ ಬಂದೋರು ನಂಗೆ ಗುರುತಾದ್ರು. ಚುರುಕಾಗಿರೋ ಮೀನೂನ ಕಂಡು ಖುಷಿಯಾಗಿ ತಮ್ ಸೊಸೆ ಮಾಡ್ಕಾತೀವಿ ಅಂತ ಒಂದೇ ಹಠ ಹಿಡಿದಿದಾರೆ. ಹುಡುಗ ಚಂದಾಗಿದಾನೆ. ನೀವೆಲ್ಲ ಮದ್ವೆಗೆ ಬರ್‍ಬಕು’ ಅಂದ್ರಂತೆ. ಅಂದ್ರೆ ಅವತ್ತು ದೊಡಪಯ್ಯ ಮೀನೂ, ಮೀನೂಂತ ಗೊಣಗಿದ್ರಲ್ಲ, ಅವ್ಳು ನನ್ನಕ್ಕನಂತೆ. ’ಭಾಷೆ ಬರದಿರೋ ಪ್ರಾಂತ್ಯಕ್ಕೆ ಆ ಎಳೇ ತತ್ತೀನಿ ಮದ್ವೆ ಮಾಡಿ ಕಳಿಸಿ ಅದಕನ್ಯಾಯ ಮಾಡಬ್ಯಾಡ. ನಿಂಗಷ್ಟು ಕಷ್ಟವಾದ್ರೆ ಹುಡುಗ್ರನ್ನ ನಾ ಸಾಕ್ತೀನಿ’ ಅಂತ ದೊಡಪ್ಪಯ್ಯ ಎಷ್ಟು ಹೇಳಿದ್ರೂ ಕೇಳದೇ ಅಪ್ಪಯ್ಯ ಅಕ್ಕನ ಮದ್ವೆ ಮಾಡಿದ್ರಂತೆ. ತಮ್ಮ ತನ್ನ ಮಾತನ್ನ ಕೇಳಲಿಲ್ಲ ಅನ್ನಾ ಸಿಟ್ಟಿಗೆ ಅಕ್ಕನ ಮದುವೆಗೆ ಅವ್ರು ಹೋಗಿಲ್ಲಿಲ್ವಂತೆ. ಆದ್ರೆ ಅಕ್ಕನ ಮದ್ವೆಯಾಗಿ ಆರು ತಿಂಗ್ಳಿಗೇ ಅಪ್ಪಯ್ಯ ತೀರಿಕೊಂಡ್ರೂತ ಹೇಳಿ ಯಾರೋ ನನ್ನ ತಂದು ದೊಡಪಯ್ಯನ ಹತ್ರ ಬಿಟ್ರಂತೆ. ’ನಿನಪ್ಪಯ್ಯ ಗೊಟಕ್ ಅಂದ; ಆಮೇಲೆ ಮೀನಾಕ್ಷಿ ಮನೆಯೋರ ಸಂಪರ್ಕವೇ ಆಗ್ಲಿಲ್ಲ. ಒಟ್ಟಿನಲ್ಲಿ ನಿನ್ನಪಯ್ಯ ನಿನ್ನಕ್ಕಂಗೆ ಮೋಸ ಮಾಡ್ದ’ ಅಂತ ಕಣ್ಣೀರು ಹಾಕಿದ್ರು. ’ ಮಿನಾಕ್ಷಿ’ ಅನ್ನ ಹೆಸ್ರು ನಂಗೆ ತುಂಬ ಗೊತ್ತಿದೆ ಅನ್ನಿಸ್ತಿರತ್ತೆ ನಂಗೆ. ಅಪ್ಪಯ್ಯ ಹೇಳಾದು ದಿಟವೇ ಇರಬೌದು ಅಲ್ವಾ ಮೂರ್ತಣ್ಣ?”

“ಇರಬೌದೇನು ದಿಟವೇ. ಯಾಕೆಂದ್ರೇ ನಿಂಗೆ ಪತ್ರ ಬರೆದಿರೋಳು ಮೀನಾಕ್ಷಿ ಅನ್ನೋಳೇಯ. ’ನಾ ನಿನಕ್ಕ, ಗಂಡ ತೀರಿಕೊಂಡಿದಾರೆ, ಮದ್ವೆಗಿರಾ ಮಗ್ಳಿದಾಳೆ, ಏನಾರ ಸಹಾಯ ಮಾಡೂಂತ’ ಎಲ್ಲ ಕಾಗದದಲ್ಲೂ ಬರಕಂಡಿದಾಳೆ. ಏನಾರ ಆಗ್ಲಿ, ನನ್ ಫ್ರೆಂಡೊಂಬ್ರು ಕರ್ನೂಲಿನೋರಿದಾರೆ ಅಂದಿದ್ನಲ್ಲ. ಅವ್ರ ಹೆಸ್ರು ಸತೀಶ್‌ಬಾಬು ಅಂತ. ಅವರ್ ಜತೆ ಒಂದಪ ಕರ್ನೂಲಿಗೆ ಹೋಗಿ ಬಾ ನೋಡಾಣ,” ಮೂರ್ತಣ್ಣ ಅಂದಿದ್ರು. ಒಪ್ಪಿದ ಸತ್ಯಣ್ಣ ಕರ್ನೂಲಿಗೆ ಹೊರಟಿದ್ರು.

“ಇಲ್ಲಿಂದ ಬೆಂಗ್ಳೂರು, ಅಲ್ಲಿಂದ ಕರ್ನೂಲು ಅದೆಷ್ಟು ದೂರವೋ ಬ್ಯಾಡ ಮಾರಾಯ್ತಿ ಇವೆಲ್ಲ,” ಸತ್ಯಣ್ಣ ಅಂತಿದ್ರೆ “ನೀವ್ ಸುಮ್ನಿರಿ, ನೀವೇನು ನಡಕಂಡು ಹೋಗ್ತೀರಾ? ಇಲ್ವಲ್ಲ. ಬಸ್ಸಲ್ಲೋ, ರೈಲಲ್ಲೋ ತಾನೆ ಹೋಗದು. ಇಷ್ಟಕ್ಕೂ ಮೂರ್ತಣ್ಣ ಭಾವನ ಫ್ರೆಂಡೂ ಜತೇಲಿರ್‍ತಾರಲ್ಲ. ಐವತ್ತು ವರ್ಷದ ಮೇಲೆ ಒಡಹುಟ್ಟಿದೋಳನ್ನು ನೋಡ್ತಿದೀರಿ, ಬರಿಗೈಲಿ ಹೋದ್ರೆ ಏನ್ ಚಂದ?” ಅಂತೇಳಿ ಸಾವಿತ್ರಿ ಮನೇಲೇ ಬೆಳೆದ 25 ಕೆ.ಜಿ ಅಕ್ಕಿ, 25 ತೆಂಗಿನಕಾಯಿ, 5 ಕೆ.ಜಿ. ಕಾಫಿಪುಡಿ ಎಲ್ಲ ಮೂಟೆ ಕಟ್ಟಿ ಕೊಟ್ಟಿದ್ಲು. “ಹೋಯ್, ಸಾಲ ಮಾಡಿಯಾದ್ರೂ ಸೈ, ಅತ್ಗೆ ಕೈಮೇಲೆ ಒಂದೈದು ಸಾವ್ರ ಹಾಕಿ ಬನ್ನಿ. ಹೋಯ್ ಇಲ್ ಕೇಳಿ ಇನ್ನೊಂದು ವಿಷ್ಯ. ಮದ್ವೆಗಿರಾ ಮಗ್ಳಿದ್ದಾಳೆ ಅಂತ ಬರಕಂಡಿದಾರಲ್ಲ ಅತ್ಗೆ ನಮ್ ಗುರೂಗೇನಾರಾ ಆಗತ್ತಾಂತ ವಿಚಾರಿಸಿ.” ವಿಷಯ ಪ್ರಸ್ಥಾಪಿಸೋ ಮೊದ್ಲೇ “ನೀವ್ ನೆಗಾಡ ಬಾರ್‍ದು” ಅಂತ ಪತ್ನಿ ಹೇಳಿದ್ರೂ ಸತ್ಯಣ್ಣ ಗೊಳ್ಳನೆ ನಕ್ಕು ಬಿಟ್ಟಿದ್ರು.

ಒಂದೂವರೆ ದಿನದ ಪ್ರಯಾಣದ ನಂತರ ಸತೀಶ್‌ಬಾಬು ಜತೆ ಕರ್ನೂಲು ತಲುಪಿದ ಸತ್ಯಣ್ಣ ತುಂಬ ಉದ್ವೇಗಗೊಂಡಿದ್ರು. ಪೂರ್ತಿ ಹಳೆಯದಾದ ಮನೆಯೊಂದರ ಮುಂದೆ ನಿಂತು ಬಾಗಿಲು ಬಡಿದಾಗ ಒಳಗಿಂದ ’ಎವರಂಡಿ?’ (ಯಾರ್ರಿ?) ಎಂಬ ಕ್ಷೀಣ ದನಿ ಕೇಳಿತ್ತು. ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆದ ತೀರ ಬಡಕಲು ಹೆಂಗಸೊಬ್ಬರು “ಎವರಂಡಿ? ಎವರು ಕಾವಲಾ? “(ಯಾರ್‍ರಿ? ಯಾರು ಬೇಕಾಗಿತ್ತು.) ಅಂತ ಕೇಳಿದ್ರು. ಅವರನ್ನು ನೋಡುತ್ತಲೇ ಅವರು ಸತ್ಯಣ್ಣನ ಅಕ್ಕನೆಂದು ತಿಳಿದು ಹೋಗಿತ್ತು ಸತೀಶ್‌ಬಾಬುಗೆ. ಅಷ್ಟೊಂದು ಹೋಲಿಕೆ ಇತ್ತು ಅಕ್ಕ-ತಮ್ಮನಲ್ಲಿ! ಆದರೂ ಕೇಳಿದ್ದರವರು “ನೂವು ಮೀನಾಕ್ಷಿಯಮ್ಮ ಕದ?” (ನೀನು ಮೀನಾಕ್ಷಮ್ಮ ಅಲ್ವಾ?) “ಅವುನು, ಮಿರೂ?” (ಹೌದು, ನೀವು?) ಅಂದ ಆ ಹೆಂಗಸು ಹಿಂದೆಯೇ ನಿಂತಿದ್ದ ಸತ್ಯಣ್ಣನನ್ನು ಕಂಡು ಬಾಯಲ್ಲಿ ಮಾತು ಹೊರಡದೇ ಕಲ್ಲಿನಂತೆ ನಿಂತು ಬಿಟ್ಟಿದ್ರು! ಅಷ್ಟೇ ಉದ್ವೆಗಗೊಂಡಿದ್ದ ಸತ್ಯಣ್ಣ ಅದು ಹೊರಬಾಗಿಲೆಂಬುದನ್ನು ಮರೆತು ಅಕ್ಕನ ಕಾಲಿಗೆರಗಿದ್ರು. ಐವತ್ತು ವರ್ಷಗಳ ನಂತರ ಅಕ್ಕ-ತಮ್ಮನ ಮಿಲನವಾಗಿತ್ತು! ತಕ್ಷಣ ಎಚ್ಚೆತ್ತ ಮೀನಾಕ್ಷಿ ತಮ್ಮನನ್ನೆಬ್ಬಿಸಿ “ರಂಡಿ, ರಂಡಿ, ಲೋಪಲ ರಂಡಿ” (ಬನ್ನಿ, ಬನ್ನಿ, ಒಳಗೆ ಬನ್ನಿ) ಅಂತ ಒಳಕರೆದು ಉಪಚರಿಸಿದ್ರು.

ಮನೆಯ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಕಾಫಿ ಕುಡಿದು, ಸ್ನಾನ ಮುಗಿಸಿ ಬಂದವರಿಗೆ ಮೀನಾಕ್ಷಿ ತಿಂಡಿ ಎಂದು ತಂದಿತ್ತ ಒಣ ಅವಲಕ್ಕಿ ಅವರ ಬಡತನವನ್ನು ಸಾರಿ ಹೇಳ್ತಿತ್ತು. ತಿಂಡಿ ಮುಗಿಸಿ ಎದುರು ಬದುರು ಕೂತ ಅಕ್ಕ ತಮ್ಮನಿಗೆ ಮಾತಾಡಲು ಬೆಟ್ಟದಷ್ಟಿತ್ತು, ಆದ್ರೆ ಭಾಷೆ ತೊಡಕಾಗಿತ್ತು. ತೀರ ಎಳೆಯ ವಯಸ್ಸಿನಲ್ಲಿ ಮದುವೆಯಾಗಿ ಕರ್ನೂಲು ಸೇರಿದ ಮೀನಾಕ್ಷಿಗೆ ಕನ್ನಡ ಪೂರ್ತಿ ಮರೆತೇ ಹೋಗಿತ್ತು. ಇನ್ನು ಸತ್ಯಣ್ಣನಿಗೆ ತೆಲುಗಿನ ಗಂಧ-ಗಾಳಿಯೇ ಇರಲಿಲ್ಲ. ಇಬ್ಬರ ನಡುವೆ ಭಾಷಾಂತರಿಯಾಗಿ ಕುಳಿತರು ಸತೀಶ್‌ಬಾಬು.

“ಮದ್ವೆ ಮಾಡಿ ಕಳಿಸಿಬಿಟ್ರೆ ಮುಗೀತಾ ತವರಿನ ಜವಾಬ್ದಾರಿ? ಒಂದ್ಸಾರಿಯಾದ್ರೂ ಯಾರಾದ್ರೂ ಬಂದು ನಾ ಹೇಗಿದೀನೀಂತ ನೋಡಿದ್ರಾ? ಏನೋ ಅತ್ತೆ, ಮಾವ ಒಳ್ಳೆಯವರು ಮಗಳ ತರ ನೋಡಿಕೊಂಡ್ರು. ಪ್ರೈವೇಟಾದ್ರೂ ನಿನ್ ಭಾವನಿಗೆ ಒಳ್ಳೇ ಕೆಲಸವೇ ಇತ್ತು. ಅವರಿದ್ದಾಗ ಸುಖವಾಗೇ ಇದ್ವಿ. ಅವರು ಹೋಗಿದ್ದೇ ಹೋಗಿದ್ದು ನಂಗೆ ಬಿ.ಪಿ., ಶುಗರ್, ಹಾರ್ಟ್ ಪ್ತಾಬ್ಲಮ್, ಎಲ್ಲಾ ಒಟ್ಟಿಗೇ ಶುರುವಾಯ್ತು, ಜೀವನ ನರಕವಾಯ್ತು. ಔಷಧಿಗೋಸ್ಕರ ಮನೆಯ ಒಂದೊಂದೇ ಸಾಮಾನು ಮಾರತೊಡಗಿದೆವು, ಆಗಲೇ ನಿನ್ ಭಾವನ ಪೆಟ್ಟಿಗೇಲಿ ಊರಿನ ಅಡ್ರೆಸ್ ಸಿಕ್ಕಿದ್ದು. ನಿನ್ ಹೆಸ್ರು ಮಾತ್ರ ಚೆನ್ನಾಗಿ ನೆನಪಿತ್ತು ನಂಗೆ, ಹಾಗಾಗಿ ಪತ್ರ ಬರೆಸಿ ಹಾಕ್ದೆ ಮಗಳ ಕೈಲಿ. ನೋಡು, ಇವ್ಳೇ ನನ್ ಮಗ್ಳು ಭಾರ್ಗವಿ. ಎಂಟತ್ತು ಮಕ್ಕಳು ಸತ್ತು ಕೊನೆಗುಳಿದೋಳು. ಬುದ್ಧಿವಂತೆ, ಅದ್ರೆ ಓದಿಸ್ಲಿಕ್ಕಾಗಿಲ್ಲ ಮುಂದೆ. ಹೈಸ್ಕೂಲು ಮುಗೀತಿದ್ದ ಹಾಗೆ ಟೈಲರಿಂಗ್ ಕಲಿತ್ಲು. ಈಗ ನಮಗೆ ಅದೇ ಜೀವನಾಧಾರ,” ಬಡಬಡನೆ ಮಾತಾಡಿದ್ರು ಮೀನಾಕ್ಷಿ.

“ನಿನ್ ಮದ್ವೆ ಆದಾಗ ನಂಗೆ ಬರೀ ಐದು ವರ್ಷವಂತೆ. ನಿನ್ ಮದ್ವೆಯಾಗಿ ಆರು ತಿಂಗ್ಳಿಗೇ ಅಪ್ಪಯ್ಯ ತೀರಿಕೊಂಡ್ರಂತೆ. ನಂಗವರನ್ನು ನೋಡಿದ ನೆನಪೇ ಇಲ್ಲ. ಇನ್ನು ನಿನ್ನ ನೆನಪೆಲ್ಲಿಂದ ಇರಬೇಕು? ನಿನ್ ಪತ್ರ ಬರೋತನಕ ನಂಗೆ ಒಬ್ಳು ಅಕ್ಕ ಇದಾಳೇನ್ನೋದೇ ಮರೆತೋಗಿತ್ತು. ನನ್ನ ಸಾಕಿ, ಬೆಳೆಸಿದ್ದೆಲ್ಲ ದೊಡ್ಡಪ್ಪಯ್ಯನೇ. ಅವರಿಗಿಬ್ರು ಮಕ್ಳು ಕೃಷ್ಣಮೂರ್ತಿ, ಪ್ರಾಣೇಶಾಂತ. ನಿನ್ ಪತ್ರ ಕಂಡ ಕೂಡ್ಲೆ ಬರ್‍ಲಿಕ್ಕೆ ನಂಗೆಲ್ಲಿ ತೆಲುಗು ಬರ್‍ತಿತ್ತು ಹೇಳು? ಮೂರ್ತಣ್ಣನೇ ಯಾರಿಗೋ ಪತ್ರ ತೋರಿಸಿ, ಅದ್ರಲ್ಲಿರಾ ವಿಚಾರ ನಂಗ್ ತಿಳಿಸಿ, ಇವರ್ ಜತೆ ನನ್ಗಿಲ್ಲಿಗೆ ಬರ್‍ಲಿಕ್ಕೆ ಸಹಾಯ ಮಾಡಿದ್ದು. ಇವರು ಸತೀಶ್‌ಬಾಬುಂತ, ಮೂರ್ತಣ್ಣನ ಫ್ರೆಂಡು, ಈ ಊರಿನೋರೇ ಇವ್ರು.”

ಮೀನಾಕ್ಷಿ ಸತ್ಯಣ್ಣನ ಸಂಸಾರದ ಬಗ್ಗೆ ವಿಚಾರಿಸಿದಾಗ ಅವರೆಂದಿದ್ರು, “ಹೆಂಡ್ತಿ ಸಾವಿತ್ರಿ ದಕ್ಷಿಣ ಕನ್ನಡ ಜಿಲ್ಲೆಯೋಳು, ನಂಗಿಬ್ರು ಗಂಡು ಮಕ್ಕಳು, ಇಬ್ರಿಗೂ ವಿದ್ಯೆ ಅಷ್ಟಕ್ಕಷ್ಟೇ. ಹೈಸ್ಕೂಲು ಮುಗಿಸಿದಾರೆ. ದೊಡ್ಡೋನಿಗೆ ಪ್ಯಾಟೆ ಹುಚ್ಚು. ಹಂಗಾಗಿ ಮಂಗ್ಳೂರು ಸೇರಕಂಡು ಹೋಟ್ಲಲ್ಲಿ ಮೇನೇಜರ್ ಆಗಿದಾನೆ. ಎರಡ್ನೇಯವನು ಮಾತ್ರ ನಮ್ದೇ ಜಮೀನು, ತೋಟ ನೋಡಿಕೊಂಡಿದಾನೆ. ಇಗಾ, ಇದೆಲ್ಲ ನಮ್ ತೋಟದ್ದೇ. ನಿಂಗೇಂತ ನಿನ್ ನಾದ್ನಿ ಕಳ್ಸಿದಾಳೆ.” ಸತ್ಯಣ್ಣನ ಮಾತು ಕೇಳಿ ತಾಯಿ-ಮಗಳ ಮುಖ ಊರಗಲವಾಗಿತ್ತು!

ಮರುದಿನ ಊರಿಗೆ ಹೊರಡುವ ತನಕವೂ ಸತೀಶ್‌ಬಾಬು ಸ್ವಲ್ಪವೂ ಬೇಸರಿಸದೇ ಅಕ್ಕ-ತಮ್ಮನ ಮಾತಿಗೆ ಸಹಕರಿಸಿದ್ರು. ಒಂದೆರಡು ದಿನವಿದ್ದು ಹೋಗುವಂತೆ ಅಕ್ಕ ಒತ್ತಾಯಿಸಿದಾಗ “ಇಲ್ಲ ಅಡಿಕೆ ಕೊಯಿಲು ನಡೀತಿದೆ, ಹೋಗ್ಲೇಬೇಕು. ಎಲ್ಲಾ ಮುಗಿದ್ಮೇಲೆ ಬರ್‍ತೀನಿ. ಸಾವಿತ್ರಿ ತಿರುಪತಿ ನೋಡ್ಬೇಕೂಂತಿದ್ಲು. ಎಲ್ರೂ ಒಟ್ಟಿಗೆ ತಿರುಪತಿಗೆ ಹೋಗಿ ಹಂಗೇ ಊರಿಗೆ ಹೋಗೋಣ. ದೊಡ್ಡಪ್ಪಯ್ಯಂಗೆ ಇನ್ನೂ ನಿನ್ನ ನೆನೆಪಿದೆ; ನಾ ನಿಮ್ಮೂರಿಗೆ ಬರ್‍ತೀನಿ ಅಂತಿದ್ದ ಹಾಗೇ ’ಮೀನೂನ ಕರ್ಕಂಬಾ, ಅದ್ನ ನೋಡ್ದೇ ಯಾವ ಕಾಲವಾತೋ’ ಅಂದಿದಾರೆ. ಆದ್ರೆ ನಂದೊಂದು ಷರತ್ತು. ಇನ್ನೊಂದ್ಸತಿ ನಾ ಬರೋದ್ರಾಗೆ ನೀವಿಬ್ರೂ ಕನ್ನಡ ಕಲ್ತಿರಬೇಕು ಮತ್ತೆ, ಕೇಳ್ತೆನೇ ಹುಡ್ಗಿ?” ಸತ್ಯಣ್ಣ ಸೊಸೇನ ತಮಾಷೆ ಮಾಡಿದ್ರು. ’ಖಂಡಿತ ಹೆಂಡ್ತಿ ಜತೆ ಬರಬೇಕು’ ಅಂತ ಅಕ್ಕ ಪದೇ ಅಂದಾಗ ಸರಿಯೆಂದ ಸತ್ಯಣ್ಣ ಅಕ್ಕನ ಕೈಗೆ ಐದು ಸಾವಿರ ರೂಪಾಯಿ ಇಟ್ಟಿದ್ರು. ಈಗಂತೂ ಮೀನಾಕ್ಷಿಗೆ ದುಃಖ ತಡಿಲಿಕ್ಕಾಗಿರಲಿಲ್ಲ, ಆದರೆ ಭಾರ್ಗವಿ ಕಂಗಳಲ್ಲಿ ನಕ್ಷತ್ರದ ಹೊಳಪು!

ಮಾತು ಕೊಟ್ಟಂತೆ, ಮೂರು ತಿಂಗಳ ನಂತರ ಸತ್ಯಣ್ಣ ಮತ್ತೆ ಕರ್ನೂಲಿಗೆ ಹೋಗಿದ್ರು. ಆದ್ರೆ ಸಾವಿತ್ರಿ ಬರದ ಕಾರಣ ತಿರುಪತಿಗೆ ಹೋಗುವುದು ಕ್ಯಾನ್ಸಲ್ ಆಗಿ, ಅಕ್ಕ, ಅಕ್ಕನ ಮಗಳೊಂದಿಗೆ ಊರಿಗೆ ಮರಳಿದ್ರು.

ಸಾವಿತ್ರಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದ್ರೆ ಅವಳಿಗಿಂತ ಸಂತೋಷ ಪಟ್ಟೋರು ಅನಂತಯ್ಯ. ಮರೆವಿನ ಖಾಯಿಲೆ ಇದ್ದರೂ ಐವತ್ತು ವರ್ಷಗಳ ದೀರ್ಘಾವಧಿಯ ನಂತರವೂ ತಮ್ಮನ ಮಗಳನ್ನು ಗುರುತಿಸಿದ್ರು. “ಹ್ಯಾಂಗಿದ್ದಿ ಕೂಸು?” ತಲೆ ನೇವರಿಸಿ ಕಣ್ಣೀರು ಹಾಕಿದ್ರು.

“ಅತ್ತೆ ಬಂದು ಒಂದು ವಾರವಾತು, ಒಂದ್ಸರಿ ಬಂದು ಮಾತಾಡ್ಸಿ ಹೋಗ್ ಬಾರ್‍ದನಾ?” ತಾಯಿ ಪದೇ ಪದೇ ಫೋನು ಮಾಡಿದಾಗ ಗುರುಗುಡುತ್ತಲೇ ಬಂದ ಗುರುರಾಜ, “ನೋಡು, ಮದ್ವೆ ಗಿದ್ವೆ ಅಂತೆಲ್ಲ ಏನಾರ ರಗಳೆ-ರಾಮಾಯಣ ತಗದ್ಯೋ ನಾ ದೇಶಾಂತ್ರ ಹೋಗ್ತೀನಷ್ಟೇ. ಮದ್ಲೇ ನಮ್ದು ತೊಳೆದಿಟ್ಟ ಕೆಂಡದ ವಂಶ, ಅದ್ರ ಮೇಲೆ ಈ ಮನೇಗೆ ಬಂದ್ ಸೇರಾದೂ ಅಂತಾ ಹೆಣ್ಣೇ ಅಗ್ಬೇಕಾ?” ಅಂದವನೇ ಗುಡು-ಗುಡು ಉಪ್ಪರಿಗೆ ಏರಿದ್ದ.

“ಅಯ್ಯೋ ರಾಮ್ನೇ, ಏನಾತಿವ್ನಿಗೆ? ಏನೇನೋ ಮಾತಾಡ್ತಾನಲ್ಲ, ಮಂಗನ್ ತಂದು” ಸಾವಿತ್ರಿ ಗೊಣಗಿದ್ಲು.

ತಂದೆಯೊಡನೆ ತೋಟಕ್ಕೆ ಹೋಗಿದ್ದ ಅತ್ತೆ, ಅವ್ರ ಮಗ್ಳು ಮನೆಗೆ ಬಂದ್ಮೇಲೂ ಗುರಾಜ ಉಪ್ಪರಿಗೆಯಿಂದ ಇಳೀಲಿಲ್ಲ. ರಾತ್ರಿ ಊಟಕ್ಕೆ ತಾಯಿ ಕರೆದಾಗ ವಿಧಿ ಇಲ್ಲದೇ ದುಮುಗುಡುತ್ತಲೇ ಕೆಳಗಿಳಿದು ಬಂದಿದ್ದ. ತಂದೆ, ತಮ್ಮನ ಮದ್ಯೆ ಊಟಕ್ಕೆ ಕೂತೋನು ತಲೆ ಎತ್ತಿರಲಿಲ್ಲ. ’ಇವ್ನೇ ನನ್ ದೊಡ್ಮಗ ಮಂಗ್ಳೂರಾಗಿರಾದು’ ಅಂತ ತಂದೆ ಅತ್ತೆಗೆ ಪರಿಚಯಿಸಿದಾಗ ಮಾತ್ರ ಬೇರೆ ದಾರಿ ಕಾಣದೇ ತಲೆ ಎತ್ತಿದ್ದ. ಅಷ್ಟೇ ಶಾಕ್’ ಹೊಡೆಸಿ ಕೊಂಡವನಂತಾಗಿದ್ದ! ಅಣ್ಣನ ಅವಸ್ಥೆ ಕಂಡು ನಾಗ್ರಾಜ ಮುಸಿ-ಮುಸಿ ನಕ್ಕಿದ್ದ. ಊಟ ಮುಗಿದು ಕೈತೊಳೀಲಿಕ್ಕೆ ಬಂದಾಗ ತಮ್ಮನ ಬೆನ್ನಿಗೊಂದು ಗುದ್ದಿದ್ದ, “ಇಜ್ಜಲಿನ ಬಣ್ಣ, ಬಾಯ್ತುಂಬ ಹುಳುಕು ಹಲ್ಲು ಅಂತ ಏನೇನೋ ಹೇಳಿ ನನ್ನೇ ಮಂಗ ಮಾಡಿದ್ಯನಾ, ಪೆಕರನ್ನ ತಂದು.”

ಊಟ ಮುಗಿಸಿ ಎಲೆಯಡಿಕೆ ಹಾಕ್ತಿದ್ದಾಗ ಸತ್ಯಣ್ಣ ಅಕ್ಕನಿಗಂದ್ರು “ನಿನ್ ಮಗ್ಳನ್ನ ನಮ್ಮನೆ ಸೊಸೆ ಮಾಡ್ಕಾಬೇಕೂಂತ ನಮ್ ಸಾವಿತ್ರಿ ಆಸೆ. ನಮ್ ಕರಿಯನ್ನ ದಂತದ ಗೊಂಬೆ ತರಾ ಇರೋ ನಿನ್ ಮಗ್ಳು ಒಪ್ಪಬೇಕಲ್ಲ?’

“ಏನೋ ಹಾಗಂದ್ರೆ, ಅವ್ಳು ತಂದೆ ತರ ಬೆಳ್ಳಗೆ ಲಕ್ಷಣವಾಗಿದಾಳೆ ನಿಜ, ಆದ್ರೆ ಅವಳ್ನ ಹಡೆದ ನಾನು ಕಪ್ಪೇ ಅಲ್ವಾ? ನಿಜವಾಗಿ ನಿನ್ ಮಗ ಇವಳನ್ನೇನಾರ ಒಪ್ಪಿದ್ರೆ ಅದು ನಮ್ಮ ಎಷ್ಟೋ ಜನ್ಮಗಳ ಪುಣ್ಯ ಅಂದ್ಕೋತೀವಿ.” ಮೀನಾಕ್ಷಿ ಹೇಳ್ತಿದ್ದ ಹಾಗೆ ಸಾವಿತ್ರಿ ಅಂದಿದ್ಲು “ಓಯ್ ಕೇಳಿ ಇಲ್ಲಿ, ಗುರಾಜ ಈಗ್ಲೇ ಮದ್ವೆ ಆಗಲ್ವಂತೆ.” ತಕ್ಷಣ ಗುರಾಜನೆಂದಿದ್ದ “ಥೂ, ನಾ ಏನೋ ತಮಾಷಿ ಮಾಡೀಲೆ ನೀ ಎಂತ ಮಾರಾಯ್ತಿ?” ಗುರಾಜನ ಮಾತು ಕೇಳಿ ಸತ್ಯಣ್ಣ, ಸಾವಿತ್ರಿ, ಮೀನಾಕ್ಷಿ, ನಾಗ್ರಾಜ ಒಟ್ಟಿಗೇ ಗೊಳ್ಳನೆ ನಕ್ಕು ಬಿಟ್ಟಿದ್ರು. ಸತ್ಯಣ್ಣ ಮಗ್ನಿಗೆ ತಮಾಷಿ ಮಾಡಿದ್ರು, “ಅಂದ್ರೇ, ನಮ್ ಭಾರ್ಗವಿ ನಿಂಗೊಪ್ಗೆ ಅಂತಾತು, ಈಗ್ ನೀ ಹೇಳೇ ಹುಡ್ಗಿ ನಮ್ ಕರಿಯ ನಿಂಗ್ ಒಪ್ಗೇನಾ?”

’ಥೂ, ಈ ಅಪ್ಪಯ್ಯಂಗೆ ಯಾವಾಗ್ಲೂ ತಮಾಷಿನೇ.” ಗುರಾಜ ನಾಚಿದರೆ, ಪಳಕ್ಕನೆ ನಕ್ಕ ಭಾರ್ಗವಿ ಮುಖ ಕೆಂಪಾಗಿತ್ತು!

Leave a Reply

Your email address will not be published. Required fields are marked *