“ಹೀಗೊಂದು ಬಾನಾಮತಿ” : ಪ್ರೋತ್ಸಾಹಕ ಬಹುಮಾನ ಪಡೆದ ಕತೆ

– ಡಿ.ಎನ್. ಗೀತಾ

ನಾನು ಮನೆಗೆ ಹಿಂದಿರುಗುವಾಗ ಪೂರ್ತಿ ಕತ್ತಲಾಗಿತ್ತು. ಮಾಯಾನಗರಿಯ ಝಗಮಗಿಸುವ ದೀಪಗಳ ಬೆಳಕಿನಲ್ಲಿ ಹತ್ತಾರು ಸಿಗ್ನಲ್‌ಗಳನ್ನು ದಾಟಿ ಈಗಷ್ಟೇ ತಲೆಯೆತ್ತಿರುವ ನಮ್ಮ ಹೊಸ ಬಡಾವಣೆಗೆ ಬಂದಾಗ ತಾಯಿಯ ಮಡಿಲಿಗೆ ಬಂದಷ್ಟೇ ನೆಮ್ಮದಿಯೆನಿಸಿತು. ಸುಳಿಗಾಳಿಗೆ ಬಡಾವಣೆಯ ಸಾಲು ಮರಗಳು ಮೆಲ್ಲಗೆ ತಲೆದೂಗುತ್ತಿದ್ದರೆ, ನಾನೇ ಕಾಂಪೌಂಡಿನ ಮುಂದೆ ನೆಟ್ಟಿದ್ದ ಪಾರಿಜಾತದ ಪುಟ್ಟ ಸಸಿ ಈಗ ದೊಡ್ಡದಾಗಿ ಒಡಲ ತುಂಬಾ ಹೂವರಳಿಸಿಕೊಂಡು ನಿಂತಿತ್ತು.

ಕಾರನ್ನು ಪೋರ್ಟಿಕೋದಲ್ಲಿ ನಿಲ್ಲಿಸಿ, ಸುತ್ತ ತುಂಬಿದ್ದ ಪಾರಿಜಾತದ ಪರಿಮಳವನ್ನು ಎಳೆದುಕೊಳ್ಳುತ್ತಾ ಕಾಲಿಂಗ್ ಬೆಲ್ಲನ್ನು ಒತ್ತಿದ್ದೆ. ನೇತ್ರ ಬಾಗಿಲು ತೆರೆದಳು. ಎಂದಿನಂತೆ ಈ ದಿನ ಮುಖ ಕಳೆಕಳೆಯಾಗಿರದೆ ಮಂಕಾಗಿತ್ತು. ಏಕಿರಬಹುದೆಂದು ಯೋಚಿಸುತ್ತಲೇ ಒಳಬಂದೆ.

“ಅಲ್ಲಾ, ಎಷ್ಟು ಸಾರಿ ನಿಮ್ಮ ಮೊಬೈಲಿಗೆ ಕಾಲ್ ಮಾಡೋದು, ನೀವು ಒಂದು ಕಾಲನ್ನೂ ಅಟೆಂಡ್ ಮಾಡಲಿಲ್ಲ…..,” ಆಕ್ಷೇಪಿಸಿದಳು ನೇತ್ರ.

ನಿಜ…. ಈ ದಿನ ಲ್ಯಾಬ್‌ನಲ್ಲಿ ತೀರ ಜಾಸ್ತಿ ಎನಿಸುವಷ್ಟು ಕೆಲಸದ ಒತ್ತಡವಿತ್ತು. ಈ ಸಂಜೆಯೊಳಗೆ ರಿಪೋರ್ಟೊಂದನ್ನು ಒದಗಿಸಲೇಬೇಕಿತ್ತು. ಹಾಗಾಗಿ ಮೊಬೈಲನ್ನು ಸೈಲೆಂಟ್ ಮೋಡಿನಲ್ಲಿಟ್ಟು ನನ್ನ ಕಾರ್ಯದಲ್ಲಿ ತಲ್ಲೀನವಾಗಿದ್ದೆ.

“ಯಾಕಪ್ಪಾ, ಏನಂಥಾ ಅರ್ಜೆಂಟ್ ಇತ್ತು?…..”

“ಕೈ ಕಾಲು ಮುಖ ತೊಳೆದು ಬಂದು ಫ್ರೆಷ್ ಆಗುತ್ತಾ ಕೇಳಿದೆ”.

“ನಮ್ಮ ಚಿನ್ನುವಿನ ಸ್ಕೂಲ್‌ನಲ್ಲಿ ಬಾನಾಮತಿಯ ಕಾಟ ಶುರುವಾಗಿದೆಯಂತೆ ರೀ…”

ಬೆದರಿದವಳಂತೆ ಕಂಡಳು ನೇತ್ರ. ನನಗೆ ತಮಾಷೆಯೆನಿಸಿತು. ಬಾನಾಮತಿಯೇ? ಯಾವಯಾವುದೋ ಕುಗ್ರಾಮಗಳಲ್ಲಿ ಈ ಕಾಟವಿದೆಯೆಂದು ಪತ್ರಿಕೆಗಳಲ್ಲಿ ವರದಿ ಓದಿದ ನೆನಪು. ಅದೀಗ ದಿನಕ್ಕೊಂದು ಹೊಸ ಅವತಾರವೆತ್ತುವ ನಮ್ಮ ಮಾಯಾನಗರಿಗೂ ಕಾಲಿಟ್ಟಿತೇ?

“ಹೌದಾ, ಬಾನಾಮತಿಯಾ, ಅವಳು ಯಾವ ಭಾಷೆಯ ಹೀರೋಯಿನ್ ಅಂತೆ…,” ತಮಾಷೆ ಮಾಡಿದೆ.

“ನಿಮಗೆ ಯಾವಾಗಲೂ ತಮಾಷೇನೇ, ನಾನು ಹೇಳ್ತಿರೋದು ನಿಜವಾಗ್ಲೂ ಹೌದೂ ರೀ, ಪ್ರತಿ ಅಮಾವಾಸ್ಯೆ ಹುಣ್ಣಿಮೆಗೆ ಬಾನಾಮತಿ ಕಾಟ ಶುರುವಾಗತ್ತಂತೆ….”

“ಆ ಕಾಟಾನಾದ್ರೂ ಹೇಗಿರುತ್ತೆ ಅಂತ ಹೇಳು ಮಹರಾಯ್ತಿ….” ಮತ್ತೆ ಛೇಡಿಸಿದೆ.

“ಕ್ಲಾಸ್ ರೂಮ್‌ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತಂತೆ ರೀ, ಎಲ್ಲೆಲ್ಲಿಂದಲೋ ಬಟ್ಟೆಯ ಸುರುಳಿ ಬಂದು ಬೀಳುತ್ತಂತೆ. ಬಿದ್ದ ಸ್ವಲ್ಪ ಹೊತ್ತಿಗೆ ಅವೂ ಹೊತ್ತಿಕೊಂಡು ಉರಿಯುತ್ತಂತೆ, ಇವತ್ತು ಸ್ಕೂಲಿನ ಲೈಬ್ರವರಿಗೂ ಬೆಂಕಿ ಬಿತ್ತು ಅಂತ ಚಿನ್ನು ಹೇಳ್ತಿದ್ಳು, ತುಂಬಾ ಮಕ್ಳು ಹೆದ್ರಿಕೊಂಡು ಸ್ಕೂಲಿಗೂ ಹೋಗ್ತಿಲ್ಲವಂತೆ, ನಾಳೆಯಿಂದ ನಾನೂ ಚಿನ್ನುವನ್ನು ಖಂಡಿತಾ ಕಳಿಸಲ್ಲ…”

ನೇತ್ರ ಬಹಳ ಹೆದರಿದ್ದಾಳೆಂದು ನನಗೆ ಗೊತ್ತಾಯಿತು. ಅವಳು ಯಾವಾಗಲೂ ಹಾಗೆಯೇ. ಎಲ್ಲವನ್ನೂ ಬಹಳ ಬೇಗ ನಂಬುತ್ತಾಳೆ. ಮಗಳಿಗೆ ಸ್ಡಲ್ಪ ಮೈ ಬಿಸಿಯಾದರೂ ಸಾಕು ದೇವಾಲಯಗಳಿಗೆ ಹೋಗಿ ತಾಯತ ಕಟ್ಟಿಸಿಕೊಂಡು ಬರುತ್ತಾಳೆ. ಪ್ರತೀ ಹುಣ್ಣಿಮೆ ಅಮಾವಾಸ್ಯೆ ಬಂದರೆ ಯಾವುದೇ ಜರೂರಿ ಕೆಲಸವಿದ್ದರೂ ಹೊರಹೋಗುವುದಿಲ್ಲ.

“ಮಹರಾಯ್ತಿ, ನೀನೇನಾದ್ರೂ ವರ್ಕಿಂಗ್ ವುಮನ್ ಆಗಿದ್ರೆ ನಿನ್ನ ಈ ಹುಚ್ಚಾಟ ನೋಡೋಕಾಗ್ದೆ  ಡಿಸ್ಮಿಸ್ ಮಾಡಿಬಿಟ್ಟಿರೋರು, ಅಷ್ಟಕ್ಕೆ ಬಚಾವಾದೆ ಬಿಡು….”

ನಾನು ಆಗಾಗ ಛೇಡಿಸಿದರೆ ಗಂಭೀರಳಾಗುತ್ತಾಳಲ್ಲ ನೇತ್ರ.

’ಅಲ್ಲಾ ಕಾಲ ಬದಲಾಗಿದೆ ಅಂತೀವಿ, ಆದ್ರೆ ರಾತ್ರಿ-ಹಗಲು, ಬಿಸಿಲು-ಮಳೆ ಇವೆಲ್ಲಾ ನಿಜ ಅನ್ನೋದಾದ್ರೆ ಈ ದೆವ್ವ ಭೂತ ಇಂಥವೂ ನಿಜ…’ ಅವಳ ವಾದ ಮುಂದುವರೆಯುತ್ತದೆ ಆಗಾಗ.

“ಅವೆಲ್ಲಾ ಇರ್‍ಲಿ, ಈಗ ಚಿನ್ನು ಎಲ್ಲಿ ಕಾಣ್ತಿಲ್ಲ…” ಆರರ ಹರೆಯದ ಮಗಳು ತನ್ಮಯಿಗಾಗಿ ಸುತ್ತಲೂ ಕಣ್ಣಾಡಿಸಿದೆ.

“ಅವಳಿಗೆ ಮೈ ಸ್ವಲ್ಪ ಬಿಸಿಯಾಗಿತ್ತು, ಭಯದಿಂದ ಜ್ವರ ಬಂದಿರಬಹುದು, ಸಿರಪ್ ಕೊಟ್ಟು ಮಲಗ್ಸಿದೀನಿ…,” ನೇತ್ರಾಳಿಂದ ವಿವರಣೆ ಬಂದಿತ್ತು.

“ಸರಿ ಬಿಡು, ಎರಡು ದಿನ ಚಿನ್ನುವನ್ನು ಸ್ಕೂಲಿಗೆ ಕಳಿಸಬೇಡ, ನಾಳೆ ನಾನೇ ಹೋಗಿ ಅಲ್ಲಿ ಏನಾಗಿದೆ ಅಂತ ನೋಡಿ ಬರ್‍ತೀನಿ…” ಎಂದೆ.

“ಪ್ಲೀಸ್, ಹಾಗೆ ಮಾತ್ರಾ ಮಾಡ್ಬೇಡಿ, ನಿಮ್ಗೇನಾದ್ರೂ ಅಪಾಯ ಆದ್ರೆ…. ಬೇಡ ಬೇಡ ನೀವೂ ಹೋಗ್ಬೇಡಿ, ಚಿನ್ನುವನ್ನು ಬೇರೆ ಸ್ಕೂಲಿಗೆ ಹಾಕೋಣ…”
ಉದ್ವೇಗದಿಂದ ನೇತ್ರ ನುಡಿದಾಗ ಈಗ ಮೌನವಾಗಿರುವುದೇ ಒಳಿತೆನಿಸಿತು.

ಆ ರಾತ್ರಿ ನನಗೆ ಬಹಳ ಹೊತ್ತು ನಿದ್ರೆ ಬರಲಿಲ್ಲ. ಈ ಆಧುನಿಕ ಕಾಲದಲ್ಲೂ ಬಾನಾಮತಿಯಂತಹ ಪದಕ್ಕೆ ಅರ್ಥವಿದೆಯೇ? ತಮ್ಮ ಶತೃಗಳನ್ನು ನಿರ್ಮೂಲನ ಮಾಡಲು, ಅಥವಾ ಅವರ ಬಲ ಕುಗ್ಗಿಸಲು ಕ್ಷುದ್ರ ಶಕ್ತಿಗಳ ಸಹಾಯದಿಂದ ಛಾವಣಿಯ ಮೇಲೆ ಕಲ್ಲು ಬೀಳಿಸುವುದು, ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಸುವುದು, ಇಂಥವೆಲ್ಲಾ ಈ ಬಾನಾಮತಿಯ ಪ್ರಯೋಗದಲ್ಲಿ ನಡೆಯುತ್ತವೆ ಎಂಬುದನ್ನು ನಾನೂ ಯಾವಾಗಲೋ ಓದಿದ್ದೆ. ಆದರೆ ಅದು ವಾಸ್ತವದಲ್ಲಿ ಎಷ್ಟು ನಿಜವೋ ಗೊತ್ತಿಲ್ಲವಲ್ಲ.

ಹೌದು…. ಇಂಥದ್ದೇ ಒಂದು ಪ್ರಕರಣ ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಡೆದಿದ್ದ ನೆನಪು. ಆಗ ಅಪ್ಪ ಕೊಡಗಿನ ಗ್ರಾಮವೊಂದರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಮಳೆಗಾಲ ಚಳಿಗಾಲವೆನ್ನದೇ ಸದಾ ಹಸಿರಿನಲ್ಲಿ ಕಂಗೊಳಿಸುವ ಆ ಗ್ರಾಮ ನಮಗೆ ಖುಷಿ ಕೊಟ್ಟಿದ್ದಂತೂ ಹೌದು. ಅಪ್ಪನೊಂದಿಗೆ ತುಂಬಿ ಹರಿಯುವ ಪ್ರವಾಹವನ್ನು ದೋಣಿಯಲ್ಲಿ ದಾಟಿ ತಮ್ಮ ಆನಂದನೊಂದಿಗೆ ಶಾಲೆಗೆ ಹೋಗುತ್ತಿದ್ದ ನೆನಪಂತೂ ಬಹು ಸೊಗಸು. ಒಂದು ಚಳಿಗಾಲದ ದಿನಗಳಲ್ಲಿ ಶಾಲೆಯಲ್ಲಿ ಕೊಳ್ಳಿದೆವ್ವವಿದೆಯೆಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಶನಿವಾರ ಅರ್ಧ ದಿನ ನಡೆಯುವ ತರಗತಿಗೆ ನಾವೆಲ್ಲಾ ಬೆಳಿಗ್ಗೆ ಏಳಕ್ಕೆಲ್ಲಾ ಶಾಲೆಯಲ್ಲಿರಬೇಕಿತ್ತು. ಪೂರ್ತಿ ಮಂಜು ಆವರಿಸಿ ಶಾಲೆ ಪೂರ್ತಿ ಮಂಜಿನ ಬೆಟ್ಟವೇನೋ ಎಂಬ ಭ್ರಮೆ ಉಂಟಾಗುತ್ತಿತ್ತು. ಅಂಥಹ ಒಂದು ಮುಂಜಾನೆ ಶಾಲೆಯ ಮುಂದೆ ಹತ್ತಾರು ಕೊಳ್ಳಿಗಳು ಥಕಥಕನೆ ಕುಣಿದಿದ್ದನ್ನು ನೋಡಿ ನಾನು ಅಪ್ಪನನ್ನು ಭಯದಿಂದ ಅಪ್ಪಿಕೊಂಡಿದ್ದೆ. ಸ್ವಲ್ಪ ದಿನ ತರಗತಿಗಳೂ ನಿಂತು ಹೋದವು.

ಶಾಲೆಗೂ ಬೀಗ ಹಾಕಲಾಗಿತ್ತು. ಕೊನೆಗೆ ಗ್ರಾಮದ ಚುರುಕು ಯುವಕನೊಬ್ಬ ಆ ಕೊಳ್ಳಿದೆವ್ವದ ರಹಸ್ಯವನ್ನು ಬಯಲು ಮಾಡಿದ್ದ. ಶಾಲೆಯ ಪಕ್ಕದಲ್ಲಿ ಒಂದು ಕಾಫಿ ತೋಟವಿತ್ತು. ಅದರ ಮಾಲಿಕ ಸಾಕಷ್ಟು ದೊಡ್ಡ ಕುಳ. ಆತನಿಗೆ ಸರ್ಕಾರಿ ಶಾಲೆಯಿದ್ದ ಭೂಮಿಯ ಮೇಲೆ ಮೊದಲಿನಿಂದ ಕಣ್ಣಿತ್ತು. ಅದಕ್ಕೆ ಆಳುಗಳಿಂದ ಕೊಳ್ಳಿದೆವ್ವದ ನಾಟಕವಾಡಿಸಿದ್ದ. ಹಾಗೆ ಮಾಡಿದರೆ ಶಾಲೆ ಪಾಳು ಬೀಳುತ್ತದೆ. ಮತ್ತೆಲ್ಲೋ ಶಾಲೆ ಆರಂಭವಾದರೆ ಜನ ಆ ನೆಲವನ್ನೂ ಮರೆಯುತ್ತಾರೆ. ಆಗ ನಿಧಾನವಾಗಿ ತನ್ನ ತೋಟವನ್ನೂ ಅಲ್ಲಿಗೂ ವಿಸ್ತರಿಸಬಹುದು. ಇದು ಆತನ ಹಂಚಿಕೆ. ಊರಿನವರ ಮುಂದೆ ಆತನ ಹಂಚಿಕೆ ಬಯಲಾಗಿ ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಆತ. ಕೊಳ್ಳಿದೆವ್ವದ ರಹಸ್ಯವನ್ನು ಬೇಧಿಸಿದ ಯುವಕನನ್ನು ಎತ್ತಿನ ಗಾಡಿಯಲ್ಲಿ ಕುಳ್ಳಿರಿಸಿ ಊರ ತುಂಬಾ ಮೆರವಣಿಗೆ ಮಾಡಿದ ಘಟನೆ ಇನ್ನೂ ನೆನಪಿನಲ್ಲಿ ಹಸಿರಾಗಿದೆ. ಆ ರಹಸ್ಯ ಒಂದು ವೇಳೆ ಬಯಲಾಗಿರದಿದ್ದರೆ ಶಾಲೆಯಿರುವ ಜಾಗದಲ್ಲಿ ಇನ್ನೊಂದು ಕಾಫಿ ತೋಟ ನಿರ್ಮಾಣವಾಗಿರುತ್ತಿತ್ತಲ್ಲ.

ನಡೆದ ಘಟನೆಗಳನ್ನು ಮೆಲುಕು ಹಾಕುತ್ತಿದ್ದ ಮನಸ್ಸು ಮತ್ತೆ ಬಾನಾಮತಿಯತ್ತ ಹೊರಳಿತು. ಈಗ ಚಿನ್ನುವಿನ ಶಾಲೆಯಲ್ಲಿ ಬಾನಾಮತಿಯ ಕಾಟ ನಿಜವಿರಬಹುದು ಎನ್ನುವುದೇ ಅನುಮಾನ. ಯಾವುದೋ ಸ್ವಾರ್ಥ ಸಾಧನೆಗಾಗಿ ಯಾರೋ ನಡೆಸುತ್ತಿರುವ ಆಟವೇ ಇದಾಗಿರಬಹುದೇ?

‘ಮಕ್ಕಳೇ, ಈ ದೆವ್ವ ಭೂತ ಇಂಥಹ ಸಂಗತಿಗಳನ್ನೆಲ್ಲಾ ನಂಬಲೇಬೇಡಿ, ನಿಮ್ಮ ಆತ್ಮವಿಶ್ವಾಸ, ಸತತ ಪ್ರಯತ್ನ ಇವಿಷ್ಟರಲ್ಲಿ ನಂಬಿಕೆ ಇಡಿ, ಆಗ ಎಂಥ ದೆವ್ವವೂ ಓಡಿ ಹೋಗುತ್ತದೆ…..’ ಎಂದು ಆಗಾಗ ಅಪ್ಪ ಶಾಲೆಯಲ್ಲಿ ಬೋಧಿಸುತ್ತಿದ್ದರಲ್ಲ.

ಈ ಘಟನೆ ನಡೆದು ಬಹಳ ವರ್ಷಗಳೇ ಕಳೆದಿವೆ. ಈಗ ಅಪ್ಪನೂ ಬದುಕಿಲ್ಲ. ಆದರೆ ಅವರ ಮಾತುಗಳು ಕಿವಿಯಲ್ಲಿ ಗುಂಯ್‌ಗುಟ್ಟುತ್ತವೆ. ಅಪ್ಪನಿಂದ ಪ್ರೇರಣೆಯಾಗಿ ನಾನೂ ಎಲ್ಲರಂತೆ ಡಾಕ್ಟರ್, ಇಂಜೀನಿಯರ್ ಎಂಬ ಭ್ರಮೆಗೆ ಬೀಳದೆ ವಿಧಿ ವಿಜ್ಞಾನದ ತರಬೇತಿ ಮುಗಿಸಿದ್ದೆ. ಕೂದಲು, ಉಗುರೂ ಕೂಡಾ ಬಿಡದೆ ಪರೀಕ್ಷೆ ಮಾಡಿ ಅಪರಾಧಿಗಳನ್ನು ಕಂಡು ಹಿಡಿಯುವ ಈ ವಿದ್ಯೆ ನಾನು ಕಲಿತ ಕಾಲಕ್ಕೆ ಸಾಕಷ್ಟು ಅಪರಿಚಿವಾಗಿಯೇ ಇತ್ತು. ನನ್ನ ಭಿನ್ನರುಚಿಯನ್ನು ಗಮನಿಸಿದ ಅಪ್ಪ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಅಮ್ಮನೂ ಅಪ್ಪನಂತೆಯೇ. ನನ್ನ ಎಲ್ಲಾ ಪ್ರಯತ್ನಕ್ಕೂ ಬೆಂಬಲವಾಗಿ ನಿಂತಳು. ನಾನು ವಿಧಿವಿಜ್ಞಾನದಲ್ಲಿ ಮುಖ್ಯಸ್ಥನಾಗಿ ನೇಮಕವಾಗುವ ವೇಳೆಗೆ ಅಪ್ಪ ಬದುಕಿರದಿದ್ದರೂ ನೋಡುವುದಕ್ಕೆ ಅಮ್ಮನಿರುವುದು ಸ್ಡಲ್ಪ ಸಮಾಧಾನ ತಂದಿತ್ತು. ಈಗಲೂ ಅಮ್ಮನಿಗೆ ನನ್ನ ಪ್ರಯೋಗಗಳಲ್ಲಿ ನಡೆಯುವ ಆಸಕ್ತಿದಾಯಕ ವಿಷಯಗಳನ್ನು ಕೇಳಲು ಬಲು ಆಸಕ್ತಿ. ಸದ್ಯಕ್ಕೆ ಅವಳೀಗ ಇಲ್ಲಿಲ್ಲ. ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿರುವ ತಮ್ಮ ಆನಂದನ ಮನೆಗೆ ಹೋಗಿದ್ದಾಳೆ.

ಬಹಳಷ್ಟು ಹೊತ್ತು ಯೋಚಿಸುತ್ತಾ ಮಲಗಿದ್ದೆ. ಏನಾದರಾಗಲಿ ನಾಳೆ ಚಿನ್ನುವಿನ ಶಾಲೆಗೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಬರಬೇಕೆಂದು ನಿರ್ಧರಿಸಿದೆ.

ಮರುದಿನ ಎಂದಿನಂತೆಯೇ ಹೊರಟೆ. ಚಿನ್ನುವಿನ ಜ್ವರ ಕಡಿಮೆಯಾಗಿತ್ತು. ನೇತ್ರಾಳಿಗೆ ನಾನು ಶಾಲೆಗೆ ಹೋಗುತ್ತಿರುವ ವಿಷಯ ಗೊತ್ತಾಗದಂತೆ ಎಚ್ಚರಿಕೆ ವಹಿಸಿದೆ.

“ಅಪ್ಪಿ ತಪ್ಪಿ ಚಿನ್ನುವಿನ ಸ್ಕೂಲಿನ ಹತ್ತಿರ ಹೋಗಿಬಿಡ್ಬೇಡಿ, ಹೇಳಿದ್ದೀನಿ…”

ಅವಳ ಎಚ್ಚರಿಕೆಗೆ ನಸುನಗುತ್ತಾ ತಲೆಯಲುಗಿಸಿದೆ. ಆದರೆ ನನ್ನ ಕಾರು ಸ್ವಲ್ಪ ದೂರ ಸಾಗಿ ನಂತರ ಚಿನ್ನುವಿನ ಶಾಲೆಯತ್ತ ತಿರುಗಿತು.

ನಾಲ್ಕಂಥಸ್ತಿನ ಭವ್ಯವಾದ ಶಾಲೆಯ ಕಟ್ಟಡ ನನ್ನನ್ನು ಸ್ವಾಗತಿಸಿತು. ಕಾರನ್ನು ಪಾರ್ಕ್ ಮಾಡಿ ಮುಖ್ಯೋಪಾಧ್ಯಾಯಿನಿಯನ್ನು ಹುಡುಕಿಕೊಂಡು ಹೊರಟೆ. ಆಕೆ ತನ್ನ ಕ್ಯಾಬಿನ್‌ನಲ್ಲಿ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು. ಸುಮಾರು ಐವತ್ತು ವರ್ಷದವರಾದ ಆಕೆ ಗೌರವವಾದ ಚಹರೆಯನ್ನು ಹೊಂದಿದ್ದರು. ಕಂಗಳಿಗೆ ದಪ್ಪ ಗಾಜಿನ ಕನ್ನಡಕವಿತ್ತು.

ನನ್ನ ಪರಿಚಯವಿದ್ದುದರಿಂದ ಒಣನಗೆಯನ್ನು ಬೀರಿ ಕುಳಿತುಕೊಳ್ಳಲು ಎದುರಿದ್ದ ಕುರ್ಚಿಯನ್ನು ತೋರಿದರು. ನಾನೇ ಮೆಲ್ಲನೆ ಬಾನಾಮತಿಯ ಬಗ್ಗೆ ಪ್ರಸ್ಥಾಪಿಸಿದೆ.

“ಹೌದು ಸರ್, ನಮ್ಗೂ ಪೇರೆಂಟ್ಸಿಗೆ ಉತ್ತರಿಸಿ ಸಾಕಾಗಿದೆ, ಪಾಪ ಮಕ್ಳನ್ನು ಸ್ಕೂಲಿಗೆ ಕಳಿಸೋಕೆ ಎಲ್ರೂ ಹೆದರ್ತಿದ್ದಾರೆ, ಎಲ್ಲೆಲ್ಲಿಂದಲೋ ಬಟ್ಟೆಗಳ ಸುರುಳಿಗಳು ಬಂದು ಬೀಳುತ್ವೆ, ಇದ್ದಕ್ಕಿದ್ದಂತೆ ಕ್ಲಾಸ್ ರೂಮ್ಸ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತೆ, ನಿನ್ನೆ ನೋಡಿ, ನಮ್ಮ ಲೈಬ್ರವರಿಗೂ ಬೆಂಕಿ ಬಿದ್ದಿತ್ತು, ಹೇಗೋ ಆಗುವ ಅನಾಹುತವನ್ನು ತಡೆದಿದ್ದೇವೆ, ಇದು ಹೀಗೆಯೇ ಮುಂದುವರೆದ್ರೆ ನಾವು ಸ್ಕೂಲನ್ನು ಮುಚ್ಚಬೇಕಾಗುತ್ತೆ, ಸುಮಾರು 1200 ಸ್ಟೂಡೆಂಟ್ಸ್ ಇಲ್ಲಿದ್ದಾರೆ, 60 ಜನ ಟೀಚರ್ಸ್ ಇದ್ದಾರೆ, ಇವರೆಲ್ಲರ ಭವಿಷ್ಯವೇನು ಸರ್, ಮ್ಯಾನೇಜ್ಮೆಂಟಿನವರೂ ತುಂಬ ಚಿಂತೆ ಮಾಡ್ತಿದ್ದಾರೆ…..”

ಆಕೆ ಪ್ರಾಮಾಣಿಕವಾಗಿ ತನ್ನ ಅಳಲನ್ನು ತೋಡಿಕೊಂಡರು.

“ಮೇಡಂ, ನಿಮ್ಗೆ ಗೊತ್ತಿರ್ಬೋದು, ನಾನು ಪೋರೆನ್ಸಿಕ್ ತಜ್ಞನಾಗಿದ್ದೇನೆ , ಬಾನಾಮತಿಯಂತಹ ಭೂತ ಚೇಷ್ಟೆಗಳನ್ನು ನನ್ನ ಉದ್ಯೋಗ ಖಂಡಿತಾ ಒಪ್ಪಲ್ಲ, ಇದನ್ನು ಯಾರೋ, ಯಾವುದೋ ಸ್ವಾರ್ಥಕ್ಕೆ ಮಾಡುತ್ತಿದ್ದಾರೆಂದು ಖಂಡಿತವಾಗಿ ಹೇಳಬಲ್ಲೆ, ನೀವು ಒಪ್ಪೋದಾದ್ರೆ ಇದರ ಬಗ್ಗೆ ತನಿಖೆ ಮಾಡ್ಬೇಕು ಅಂತ ಅಂದುಕೊಂಡಿದ್ದೀನಿ….”
ನನ್ನ ಮಾತುಗಳಿಂದ ಆಕೆಗೆ ಸಂತೋಷವಾಗಿದೆಯೆಂದು ಮುಖಭಾವವೇ ಹೇಳಿತು.
“ಥ್ಯಾಂಕ್ಯೂ ಮಿ……”

ನನ್ನ ಹೆಸರಿಗಾಗಿ ಆಕೆ ತಡವರಿಸಿದಾಗ ಅಶೋಕ್ ಎಂದೆ.

“ಥ್ಯಾಂಕ್ಯೂ ಮಿ.ಅಶೋಕ್, ನಿಮ್ಮ ಈ ಮನೋಭಾವ ನಂಗೆ ಮೆಚ್ಚುಗೆಯಾಯ್ತು, ನೀವು ತನಿಖೆ ಮಾಡೋದಾದ್ರೆ ನಂದೇನೂ ಅಭ್ಯಂತರ ಇಲ್ಲ, ಯಾವ್ದೇ ಸಹಕಾರ ಬೇಕಾದ್ರೂ ಕೊಡ್ತೀನಿ..” ಎಂದರಾಕೆ.

“ಮೇಡಂ, ಮೊದಲನೆಯದಾಗಿ ಈ ತನಿಖೆ ಪೂರ್ತಿ ರಹಸ್ಯವಾಗಿರ್‍ಲಿ, ಯಾಕೇಂದ್ರೆ ಅಪರಾಧಿಗಳು ವಿಷಯ ತಿಳಿದ್ರೆ ತಪ್ಪಿಸಿಕೊಳ್ಳುವ ಚಾನ್ಸ್ ಇರುತ್ತೆ…..”

ನನ್ನ ಮಾತಿಗೆ ಆಕೆಯೂ ಒಪ್ಪಿದರು. ನನ್ನಿಚ್ಛೆಯಂತೆ ಅವರು ಶಾಲೆಯ ಅಧ್ಯಾಪಕರ ವಿವರಗಳನ್ನು ಲ್ಯಾಪ್‌ಟಾಪ್‌ನಲ್ಲಿ ತೋರಿಸುತ್ತಾ ಹೋದರು. ಆ ಶಾಲೆ ಬಾಲಕಿಯರ ಶಾಲೆಯಾಗಿತ್ತು. ನರ್ಸರಿಯಿಂದ ಹತ್ತನೇ ತರಗತಿಯವರೆಗೂ ತರಗತಿಗಳು ವಿಸ್ತರಿಸಿದ್ದವು. ಬಹಳ ಉಪಾಧ್ಯಾಯಿನಿಯರಿದ್ದರೂ ಉಪಾಧ್ಯಾಯರೂ ವಿರಳ ಸಂಖ್ಯೆಯಲ್ಲಿದ್ದರು. ಅವರ ಪ್ಯೆಕಿ ಒಬ್ಬ ಉಪಾಧ್ಯಾಯರ ಭಾವಚಿತ್ರ ನನ್ನನ್ನು ಆಕರ್ಷಿಸಿತು. ಉದ್ದಕೂದಲನ್ನು ಹುಡುಗಿಯರಂತೆ ಪೋನಿಟೈಲ್ ಕಟ್ಟಿ, ಒಂದು ಕಿವಿಗೆ ಟಿಕ್ಕಿ ಹಾಕಿಕೊಂಡಿದ್ದ ಆತ ಕುರುಚಲು ಗಡ್ಡವನ್ನೂ ಬಿಟ್ಟು ವಿಲಕ್ಷಣವಾಗಿ ಕಾಣುತ್ತಿದ್ದ.

“ಯಾರೀತ?….” ಆಸಕ್ತಿಯಿಂದ ಕೇಳಿದೆ.

“ಇವ್ರು ಡ್ಯಾನ್ಸ್ ಮಾಸ್ಟರ್ ರಾಕೇಶ್ ಅಂತ, ಇತ್ತೀಚೆಗೆ ಸೇರಿದ್ದಾರೆ, ಈ ವರ್ಷದಿಂದ ನಮ್ಮ ಸ್ಕೂಲಿನಲ್ಲೂ ಕರಾಟೆ, ಡ್ಯಾನ್ಸ್ ಇತ್ಯಾದಿ ವಿಷಯಗಳನ್ನು ಸೇರಿಸಿದ್ದೇವೆ, ಅದಕ್ಕೆ ಪ್ರತ್ಯೇಕ ಫೀ ಇರುತ್ತೆ, ಸಂಜೆ ರೆಗ್ಯುಲರ್ ಕ್ಲಾಸಸ್ ಮಗಿದ್ಮೇಲೆ ಆ ಕ್ಲಾಸಸ್ ಇರುತ್ತೆ…..” ಆಕೆ ವಿವರಿಸಿದರು.

ನನಗೆ ಆತನ ಮುಖಚಹರೆ ಮೆದುಳಿನಲ್ಲಿ ಅಚ್ಚೊತ್ತಿತು. ಅವನ ತೀಕ್ಷ್ಣ ಕಣ್ಣುಗಳು ಒಂದು ಅಸಹಜ ಭಾವನೆಯನ್ನು ನನ್ನಲ್ಲಿ ಹುಟ್ಟಿಸಿತು. ದಿನವೂ ಅಪರಾಧಿಗಳ ಸುಳಿವಿಗಾಗಿ ಸೂಕ್ಷ್ಮ ವಸ್ತುಗಳನ್ನು ಪರೀಕ್ಷಿಸುವ ನನಗೆ ಆತ ಅನುಮಾನ ಹುಟ್ಟಿಸತೊಡಗಿದ್ದ.

“ಮೇಡಂ, ಥ್ಯಾಂಕ್ಯೂ… ಈಗ ಇಷ್ಟು ಸಾಕು ಅನ್ಸುತ್ತೆ, ಆ ಡ್ಯಾನ್ಸ್ ಮಾಸ್ಟರ್ ಎಷ್ಟು ಹೊತ್ತಿಗೆ ಸಿಕ್ತಾರೆ…”

“ಸಂಜೆ ನಾಲ್ಕೂವರೆಗೆ ಬೇಸ್ಮೆಂಟ್ ರೂಮ್ಸ್‌ನಲ್ಲಿರ್‍ಟಾರೆ…” ಆಕೆ ವಿವರಿಸಿದರು.

“ಸರಿ ಮೇಡಂ, ಸಂಜೆ ಬಂದು ಅವರನ್ನು ಭೇಟಿ ಮಾಡ್ತೀನಿ… ಎಂದ ನನಗೆ ಆಕೆ ಧನ್ಯವಾದ ಹೇಳಿದರು.”

ಅವರಿಂದ ಬೀಳ್ಕೊಂಡು ಹೊರಬಂದೆ. ಎಲ್ಲೆಂದರಲ್ಲಿ ಅರೆಬರೆ ಸುಟ, ಸುತ್ತಿದ್ದ ಬಟ್ಟೆಯ ತುಂಡುಗಳು ಬಿದ್ದಿದ್ದವು. ಕಾರಿನ ಹತ್ತಿರ ನಡೆಯುವಾಗ ಕುಂಕುಮ ಹಚ್ಚಿದ್ದ ಲಿಂಬೆಹಣ್ಣಿನ ಎರಡು ಹೋಳುಗಳು, ಒಂದಷ್ಟು ಅರಿಷಿಣ ಹೂವುಗಳು ನೆಲದಲ್ಲಿ ಕಂಡವು. ಮೆಲ್ಲನೆ ಬಾಗಿ ಕುಳಿತೆ. ನನ್ನ ಸೂಕ್ಷ್ಮ ದೃಷ್ಟಿಗೆ ಲಿಂಬೆಹಣ್ಣಿಗೆ ಒಂದೆರಡು ತಲೆಗೂದಲುಗಳು ಅಂಟಿದ್ದು ಕಂಡಿತು. ಮತ್ತೆ ತಡಮಾಡದೆ ಆ ಕೂದಲುಗಳನ್ನು ಹೊರತೆಗೆದು ನನ್ನ ಕರವಸ್ತ್ರದಿಂದ ಸುತ್ತಿ ಜೇಬಿಗಿಳಿಸಿದೆ. ತರಗತಿಗಳು ನಡೆಯುತ್ತಿದ್ದುದರಿಂದ ಅಲ್ಲಲ್ಲಿ ಅಧ್ಯಾಪಕರ ಧ್ವನಿಗಳು ಕೇಳಿ ಬರುತ್ತಿದ್ದವು. ಸಮಯ ನೋಡಿದೆ. ಆಗಲೇ ಹನ್ನೊಂದು ಘಂಟೆಯಾಗಿತ್ತು. ಅಲ್ಲಿಂದ ನೇರವಾಗಿ ನಮ್ಮ ಲ್ಯಾಬಿನತ್ತ ಹೊರಟೆ. ಮತ್ತೆ ನನ್ನ ಕೆಲಸಗಳಲ್ಲಿ ಮುಳುಗಿ ಹೋದೆ. ಆದರೆ ಸಂಜೆ ಆ ಡ್ಯಾನ್ಸ್ ಮಾಸ್ಟರನ್ನು ಭೇಟಿಯಾಗುವುದನ್ನು ನಾನು ಮರೆಯುವಂತಿರಲಿಲ್ಲ. ಲ್ಯಾಬಿಗೆ ಊಟ ತರಿಸಿಕೊಂಡು ಉಂಡ ಶಾಸ್ತ್ರಮಾಡಿ, ಕೆಲವು ರಿಪೋರ್ಟ್ಸ್‌ಗಳನ್ನು ನೋಡಿ, ಕೆಲಸ ಮಾಡುವ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನಿತ್ತು ಹೊರಬಿದ್ದೆ. ಚಿನ್ನುವಿನ ಶಾಲೆ ತಲುಪಿದಾಗ ಸರಿಯಾಗಿ ಸಮಯ ನಾಲ್ಕೂವರೆಯಾಗಿತ್ತು.

ತರಗತಿಗಳು ಮುಗಿದಿದ್ದರಿಂದ ಶಾಲಾ ಆವರಣ ನಿಶ್ಯಬ್ದವಾಗಿತ್ತು. ಮೊದಲ ಹಂತದಿಂದ ಕೆಳಗಿಳಿದರೆ ಬೇಸ್ಮೆಂಟ್ ರೂಮ್ಸ್ ಸಿಗುತ್ತದೆ. ಅಲ್ಲೂ ನಾಲ್ಕಾರು ರೂಮುಗಳಿವೆ. ಒಂದು ರೂಮಿನಲ್ಲಿ ನಾನು ಲ್ಯಾಪ್ಟಾಪಿನಲ್ಲಿ ಕಂಡ ಆ ವಿಲಕ್ಷಣ ವ್ಯಕ್ತಿ ಪ್ಯಾಂಟು ಜುಬ್ಬಾ ಧರಿಸಿ ಹುಡುಗಿಯರಿಗೆ ಡ್ಯಾನ್ಸ್ ಹೇಳಿ ಕೊಡುತ್ತಿದ್ದ.

ನಾನೇ ಹೋಗಿ ಆತನನ್ನು ಮಾತನಾಡಿಸಿದೆ. ನನ್ನ ಮಗಳು ತನ್ಮಯಿಯನ್ನು ಡ್ಯಾನ್ಸಿಗೆ ಸೇರಿಸುವ ಬಗ್ಗೆ ಸುಳ್ಳು ಸುಳ್ಳೇ ಪ್ರಸ್ಥಾಪ ಮಾಡಿದೆ.

“ಅದಕ್ಕೇನು ಸರ್, ಧಾರಾಳವಾಗಿ ಕಳಿಸಿಕೊಡಿ, ನನ್ನದೊಂದು ಡ್ಯಾನ್ಸ್ ಟ್ಯುಟೇರಿಯಲ್ ಕೂಡಾ ಇದೆ, ಅಲ್ಲಿಗೆ ಭಾನುವಾರ ಬೇಕಿದ್ರೆ ಕಳಿಸಿ….” ಆತ ಸ್ನೇಹದಿಂದಲೇ ಮಾತನಾಡಿದ.

ನಾನು ಮೆಲ್ಲನೆ ಬಾನಾಮತಿಯ ವಿಷಯವನ್ನು ಪ್ರಸ್ಥಾಪಿಸಿದೆ. ಆತ ಬೆದರಿದಂತೆ ಕಂಡ.

“ಸರ್, ನಿಜ ಹೇಳ್ತಿದೀನಿ, ಈ ಬಾನಾಮತಿ ಇರೋದು ನಿಜ, ನಮ್ಮ ಹಳ್ಳೀಲೇ ನಾನು ಇಂಥವನ್ನೆಲ್ಲಾ ನೋಡಿದ್ದೀನಿ, ಏನಾಗುತ್ತೋ ಏನೋ, ಪ್ರತೀ ಹುಣ್ಣಿಮೆ, ಅಮಾವಾಸ್ಯೆ ಬಂದ್ರೆ ಭಯವಾಗುತ್ತೆ…..” ಎಂದ ಆತನ ಮಾತಿಗೆ ತಲೆಯಾಡಿಸಿದೆ.

ಈಗ ಹುಡುಗಿಯರಿಗಾಗಿ ಹಾಡಿನ ಕ್ಯಾಸೆಟ್ ಒಂದನ್ನು ಹಾಕಿ ಬಂದ. ನಮ್ಮ ಚಿನ್ನುವಿನ ವಯಸ್ಸಿನಿಂದ ಹದಿವಯಸ್ಸಿನ ಹುಡುಗಿಯವರೆಗೂ ಎಲ್ಲಾ ವಯೋಮಾನದ ಹುಡುಗಿಯರೂ ಅಲ್ಲಿದ್ದರು. ಸುಮಾರು 15 ಜನವಿರಬಹುದು. ಎಲ್ಲರೂ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕತೊಡಗಿದ್ದರು.

ಈಗ ಆತ ರಿಲ್ಯಾಕ್ಸ್ ಆದವನಂತೆ ಜುಬ್ಬಾದ ಪಾಕೇಟಿನಿಂದ ಪುಟ್ಟ ಬಾಚಣಿಗೆಯೊಂದನ್ನು ಹೊರತೆಗೆದು, ಪೋನಿಟೈಲ್ ಬಿಚ್ಚಿ ಭುಜದವರೆಗೆ ಇಳಿಬಿದ್ದ ತನ್ನ ನೀಳ ಕೂದಲನ್ನು ಬಾಚಿಕೊಂಡ. ಅಷ್ಟರಲ್ಲಿ ಟೇಬಲ್ ಮೇಲಿಟ್ಟಿದ್ದ ಆತನ ಮೊಬೈಲ್ ರಿಂಗಾಯಿತು. ಆತ ಕೈಲಿದ್ದ ಬಾಚಣಿಗೆಯನ್ನು ಅಲ್ಲಿಯೇ ಇಟ್ಟು ಮೊಬೈಲ್ ಕೈಗೆತ್ತಿಕೊಂಡ. ನನ್ನ ಎದೆ ಢವಗುಟ್ಟಿತು. ಆತನ ಬಾಚಣಿಗೆಯಲ್ಲಿ ನಾಲ್ಕಾರು ನೀಳ ಕೂದಲುಗಳು ಸಿಕ್ಕಿಕೊಂಡಿದ್ದವು. ಆತನ ಮೇಲಿನ ಅನುಮಾನ ಬಗೆಹರಿಯಬೇಕೆಂದರೆ ನನಗೆ ಆ ಕೂದಲುಗಳು ಬೇಕಿತ್ತು. ಆಗಷ್ಟೇ ಕೆಂಪು ಲಿಂಬೆಹಣ್ಣಿನ ಮೇಲೆ ಸಿಕ್ಕಿರುವ ತಲೆಗೂದಲಿನೊಂದಿಗೆ ಇದನ್ನೂ ತುಲನೆ ಮಾಡಲು ಸಾದ್ಯ. ಆತ ಸಿಗ್ನಲ್ ಸಿಗಲಿಲ್ಲವೆಂದು ರೂಮಿನ ಹೊರಗೆ ಹೋಗಿದ್ದು ನನಗೆ ಅನುಕೂಲವೇ ಆಯಿತು. ಮೆಲ್ಲನೆ ಆ ಬಾಚಣಿಗೆಯಿಂದ ನಾಲ್ಕಾರು ತಲೆಗೂದಲುಗಳನ್ನು ಬಿಡಿಸಿ ಕರವಸ್ತ್ರದಿಂದ ಸುತ್ತಿ ಜೇಬಿಗಿಳಿಸಿ ನಿರಾಳವಾಗಿ ಹೊರ ಬಂದೆ. ಬೆಳಿಗ್ಗೆ ಸಿಕ್ಕಿದ್ದ ತಲೆಗೂದಲುಗಳನ್ನು ಜೋಪಾನವಾಗಿ ಲ್ಯಾಬಿನಲ್ಲಿರಿಸಿ ಬಂದಿದ್ದರಿಂದ ಆತಂಕವಿರಲಿಲ್ಲ. ಬಾಗಿಲಲ್ಲಿ ನಿಂತಿದ್ದ ಡ್ಯಾನ್ಸ್ ಮಾಸ್ಟರ್‌ಗೆ ಧನ್ಯವಾದ ಹೇಳಿ ಹೊರಬಿದ್ದೆ.

ಪರೀಕ್ಷೆಗಳು ಪೂರ್ತಿ ಮುಗಿದು ರಿಪೋಟರ್ ಹೊರಬೀಳುವ ಹೊತ್ತಿಗೆ ಮತ್ತೆರೆಡು ದಿನಗಳು ಕಳೆದಿದ್ದವು. ನಾನು ಈ ಬಗ್ಗೆ ತನಿಖೆ ಮಾಡುತ್ತಿರುವುದು ನೇತ್ರಾಳ ಗಮನಕ್ಕೆ ಬರಲೇ ಇಲ್ಲ. ಒಂದು ವೇಳೆ ನನ್ನ ಅನಿಸಿಕೆ ಸುಳ್ಳಾಗಿದ್ದರೆ… ಆ ಎರಡು ಕೂದಲುಗಳು ಹೊಂದದಿದ್ದರೆ….. ನನಗೆ ಉದ್ವೇಗವಾಗಿತ್ತು.

ಕೊನೆಗೂ ಫಲಿತಾಂಶ ಹೊರಬಿತ್ತು. ಆ ಎರಡೂ ಕಡೆ ಸಿಕ್ಕಿದ ತಲೆಗೂದಲುಗಳು ಪೂರ್ತಿ ಹೊಂದಾಣಿಕೆಯಾಗಿದ್ದವು. ಅಂದರೆ ಬಾನಾಮತಿಯ ಪ್ರಕರಣಕ್ಕೂ, ಆ ಡ್ಯಾನ್ಸ್ ಮಾಸ್ಟರ್ ರಾಕೇಶನಿಗೂ ಯಾವುದೋ ಸಂಪರ್ಕ ಇತ್ತು. ಆದರೆ ಅದೇನೆಂದು ಕಂಡು ಹಿಡಿಯಬೇಕಿತ್ತಷ್ಡೇ.

ನಾನು ಮತ್ತೆ ತಡ ಮಾಡಲಿಲ್ಲ. ಹತ್ತಿರದ ಪೋಲಿಸ್ ಸ್ಡೇಷನ್ನಿಗೆ ಸುದ್ದಿ ಮುಟ್ಟಿಸಿದೆ. ಅಲ್ಲಿನ ಇನ್ಸ್‌ಪೆಕ್ಟರ್ ಸ್ನೇಹಜೀವಿ, ಶಿಸ್ತಿನ ಮನುಷ್ಯ. ತಕ್ಷಣ ಆತ ಈ ಬಗ್ಗೆ ಕ್ರ್ರೆಂ ಬ್ರಾಂಚಿಗೆ ಸುದ್ದಿ ಮುಟ್ಟಿಸಿದ. ಶಾಲೆಯ ಮುಖ್ಯೋಪಾಧ್ಯಾಯಿನಿಗೂ ಸುದ್ದಿ ಹೋಯಿತು. ಆದರೆ ಎಲ್ಲ ವಿಷಯವನ್ನೂ ಗೌಪ್ಯವಾಗಿಡಲಾಯಿತು.

ಆ ದಿನ ಬಾನಾಮತಿಯ ಪ್ರಕರಣ ನಡೆದ ನಾಲ್ಕನೇ ದಿನ. ಶಾಲೆಯ ಪ್ರಾರ್ಥನೆ ನಡೆಯುತ್ತಿದ್ದ ಬೆಳಗ್ಗಿನ ಸಮಯದಲ್ಲಿ ಡ್ಯಾನ್ಸ್ ಮಾಸ್ಟರ್ ರಾಕೇಶ್ ಬಂಧಿತನಾದ. ಸುತ್ತಲೂ ಪೋಲಿಸರಿದುದ್ದರಿಂದ ಅವನಿಗೆ ತಪ್ಪಿಸಿಕೊಳ್ಳುವ ಅವಕಾಶವೂ ಇರಲಿಲ್ಲ. ಮೊದಮೊದಲಿಗೆ ಅವನು ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ತನ್ನ ತಪ್ಪನ್ನು ಒಪ್ಪಿಕೊಂಡ. ಶಾಲೆಯಲ್ಲಿ ಬಾನಾಮತಿಯ ಪ್ರಕರಣವನ್ನು ಸೃಷ್ಟಿಸಿದ್ದ ಕಾರಣವನ್ನು ಅವನು ಬಾಯ್ಬಿಟ್ಟಾಗ ಮಾತ್ರಾ ಇನ್ಸ್‌ಪೆಕ್ಟರ್ ರಾದಿಯಾಗಿ ಎಲ್ಲರೂ ಸ್ಥಂಭಿತರಾಗಿದ್ದರು.

ತಬ್ಬಲಿಯಾಗಿ ಅನಾಥಾಶ್ರಮವೊಂದರಲ್ಲಿ ಬೆಳೆದ ರಾಕೇಶ ಹೈಸ್ಕೂಲು ಓದುವಾಗಲೇ ವಿಕೃತ ಮನೋಭಾವನೆಯನ್ನು ಬೆಳೆಸಿಕೊಳ್ಳತೊಡಗಿದ್ದ. ಅಲ್ಲಿ ಒಣ ಹಾಕುವ ಹೆಂಗಸರ ಒಳ ಉಡುಪುಗಳನ್ನು ಕದ್ದು ತಂದು ತಾನು ಗುಟ್ಟಾಗಿ ಹಾಕಿಕೊಳ್ಳುವ ಕೆಟ್ಟ ಚಾಳಿ ಬೆಳೆಸಿಕೊಂಡ. ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಳ್ಳುತ್ತಾ ಬೆಳೆದರೂ ಪ್ರತಿಭೆಯಿತ್ತು. ಡ್ಯಾನ್ಸ್ ಮಾಸ್ಟರ್ ಒಬ್ಬರ ಬಳಿ ಪಾಶ್ಚಾತ್ಯ ನೃತ್ಯ ಕಲಿತ. ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವ ಕಲೆ ಕರಗತವಾಯಿತು. ಸ್ವಲ್ಪ ಕಾಲ ಕಲಿತು ಕೊನೆಗೆ ತಾನೇ ನೃತ್ಯ ಶಾಲೆಯನ್ನು ತೆರೆದ. ಆದರೆ ಆ ವಿಕೃತ ಮನೋಭಾವ ಒಳಗೊಳಗೆ ಹೊಗೆಯಾಡುತ್ತಿತ್ತು. ಆಗ ಅವನಿಗೆ ಸಿಕ್ಕಿದ್ದೇ ಚಿನ್ನು ಓದುತ್ತಿದ್ದ ಬಾಲಕಿಯರ ಶಾಲೆ. ಅಲ್ಲಿ ಅರಳುತ್ತಿದ್ದ ಹೆಣ್ಣುಮಕ್ಕಳನ್ನು ನೋಡಿ ಅವನ ವಿಕೃತ ಮನೋಭಾವನೆ ಜಾಗೃತವಾಯಿತು. ತನಗೆ ಇಷ್ಟವಾದ ಹುಡುಗಿಯನ್ನು ಬೇಸ್ಮೆಂಟಿನ ರೂಮೊಂದರಕ್ಕೆ ಎಳೆದೊಯ್ದು ಆಕೆಯ ನಗ್ನ ದೇಹವನ್ನು ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಿದ್ದ. ಹುಡುಗಿಯರನ್ನು ಬೆದರಿಸಲು ಬಾನಾಮತಿಯ ಸೃಷ್ಟಿ ಮಾಡಿದ. ತಾನು ಆ ದೆವ್ವದ ತೃಪ್ತಿಗಾಗಿ ಹೀಗೆಲ್ಲಾ ಮಾಡುತ್ತಿರುವುದಾಗಿ ಮುಗ್ಧ ಹುಡುಗಿಯರನ್ನು ನಂಬಿಸಿದ. ವಿಷಯ ಬಾಯ್ಬಿಟ್ಟರೆ ಆ ಬಾನಾಮತಿ ಎಲ್ಲರನ್ನೂ ಆ ಆಹುತಿ ತೆಗೆದುಕೊಳ್ಳುವುದಾಗಿ ಹೆದರಿಸುತ್ತಿದ್ದ. ಹಾಗಾಗಿ ಪಾಪದ ಹುಡುಗಿಯರು ಸುಮ್ಮನಾಗುತ್ತಿದ್ದರು. ಪುಣ್ಯಕ್ಕೆ ರಾಕೇಶ ಅತ್ಯಾಚಾರದಂತಹ ಕುಕೃತ್ಯಕ್ಕೆ ಮನಸ್ಸು ಮಾಡಿರಲಿಲ್ಲ. ಇದ್ದುದರಲ್ಲಿ ಅದೊಂದು ಸಮಾಧಾನವಿತ್ತು. ತಾನು ಮೊಬೈಲಿನಲ್ಲಿ ಚಿತ್ರೀಕರಿಸಿದ್ದನ್ನು ಕಂಪ್ಯೂಟರಿಗೆ ಡೌನ್‌ಲೋಡ್ ಮಾಡಿಕೊಂಡು ನೋಡಿ ಸುಖಿಸುತ್ತಿದ್ದ.

ಇಷ್ಟು ವಿಷಯ ರಾಕೇಶನಿಂದ ಹೊರಬಿದ್ದಾಗ ಎಲ್ಲರೂ ಆಕ್ರೋಶದಿಂದ ತುಟಿ ಕಚ್ಚಿದರು.

“ಅದೆಲ್ಲಾ ಸರಿ, ಆದ್ರೆ ಬಾನಾಮತಿಯ ಹೆಸರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಳ್ತಿತ್ತಲ್ಲ, ಅದು ಹೇಗೆ, ಅದನ್ನು ಮೊದಲು ಬೊಗಳು….” ಇನ್ಸ್‌ಪೆಕ್ಟರ್ ಜೋರು ಮಾಡಿದರು.

“ಓ ಅದಾ, ಪೊಟ್ಯಾಷಿಯಂ ಪರ್ಮಾಂಗನೇಟ್ ಹಾಗೂ ಗ್ಲಿಸರೀನನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಬಟ್ಟೆಯಲ್ಲಿ ಸುತ್ತಿ ಎಸೆದ್ರೆ ಬೆಂಕಿ ಹೊತ್ತಿಕೊಳ್ಳುತ್ತೆ. ನಾನೂ ಹಾಗೇ ಮಾಡ್ತಾ ಇದ್ದೆ. ರಂಜಕವನ್ನು ತೆರೆದು ಕ್ಲಾಸ್‌ರೂಮ್‌ಗಳಲ್ಲಿ ಬಚ್ಚಿಡ್ತಾ ಇದ್ದೆ. ಅದು ಗಾಳಿಯಲ್ಲಿರುವ ಆಕ್ಸಿಜನ್ ಜೊತೆ ಸೇರಿ ಬೆಂಕಿ ಹೊತ್ತಿಕೊಳ್ತಿತ್ತು ಅಷ್ಟೇ. ಪುಸ್ತಕ ಓದಿ ಈ ವಿಷಯ ತಿಳಿದುಕೊಂಡಿದ್ದೆ…..”

ಮೇಧಾವಿಯಂತೆ ಮಾತನಾಡಿದ ರಾಕೇಶನ ಕೆನ್ನೆಗೆರಡು ಬಾರಿಸಿದ ಇನ್ಸ್‌ಪೆಕ್ಟರ್ ಅಲ್ಲೇ ನಿಂತಿದ್ದ ನನಗೆ ಧನ್ಯವಾದ ಹೇಳಿ, ಅವನನ್ನು ಬಂಧಿಸಿ ಎಳೆದೊಯ್ದರು.

“ಮಿ.ಅಶೋಕ್, ಸ್ವಾತಂತ್ರ್ಯ ಬಂದ ವರ್ಷ ಆರಂಭವಾದ ಶಾಲೆ ನಮ್ದು, ಪ್ರತೀ ವರ್ಷ ಗಾಂಧೀಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸ್ತೀವಿ, ಆ ದಿನ ದೇಶಭಕ್ತಿಯ ನಾಟಕ, ನೃತ್ಯ ಎಲ್ಲವನ್ನೂ ಮಕ್ಕಳೇ ನಡೆಸಿಕೊಡ್ತಾರೆ, ಮುಂದಿನ ತಿಂಗಳೇ ಗಾಂಧಿ ಜಯಂತಿ ಬರ್ತಿದೆಯಲ್ಲ, ಈಗ ಹೀಗಾಯ್ತಲ್ಲ ಅಂತ ತುಂಬಾ ಬೇಜಾರಾಗಿತ್ತು. ಸದ್ಯ ನಿಮ್ಮಿಂದ ಎಲ್ಲ ಸರಿಯಾಯ್ತು. ‘ನಂಬಿಕೆಗಳಿರಲಿ, ಆದ್ರೆ ಮೂಢನಂಬಿಕೆ ಬೇಡ’ ಅಂದ್ರು ಬಾಪೂಜಿ, ಆದ್ರೆ ಈ ರಾಕೇಶನಂತಹ ಕೆಟ್ಟ ಜನಗಳು ಹೇಗೆ ಜನರ ಮೂಢನಂಬಿಕೆಯನ್ನೇ ಬಳಸಿಕೊಂಡು ಆಡಬಾರದ ಆಟ ಆಡ್ತಾರೆ ನೋಡಿದ್ರಲ್ಲಾ, ಎನಿಹೌ ಥ್ಯಾಂಕ್ಯೂ ವೆರಿಮಚ್, ನಮ್ಮ ಶಾಲೆಯ ಗಾಂಧಿ ಜಯಂತಿಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನೀವೇ ಬರಬೇಕು…”

ಮುಖ್ಯೋಪಾಧ್ಯಾಯಿನಿ ಕಣ್ತುಂಬಿಕೊಂಡು ನನ್ನನ್ನು ಬೀಳ್ಕೊಟ್ಟರು.

ವಿಷಯ ತಿಳಿದ ನೇತ್ರ, ತನ್ಮಯಿಗೂ ಸಮಾಧಾನವಾಯಿತು.

“ಅಂತೂ ಮನೆಯವರಿಗೂ ವಿಷಯ ತಿಳಿಸದೆ ಇನ್ವೆಸ್ಟಿಗೇಷನ್ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಆದ್ರಿ ಬಿಡಿ, ಸುಮ್ನೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಒಂದು ಪತ್ತೇದಾರಿ ಆಫೀಸೇ ತೆರೆದುಬಿಡಿ….” ನೇತ್ರ ತಮಾಷೆ ಮಾಡಿದಳು.

ನನಗೂ ನಾಲ್ಕು ದಿನಗಳಿಂದ ಕವಿದಿದ್ದ ಆತಂಕ ಬಿಟ್ಟಂತಾಗಿ ನಿರಾಳವಾಗಿ ಉಸಿರಾಡಿದೆ.

One thought on ““ಹೀಗೊಂದು ಬಾನಾಮತಿ” : ಪ್ರೋತ್ಸಾಹಕ ಬಹುಮಾನ ಪಡೆದ ಕತೆ

Leave a Reply

Your email address will not be published. Required fields are marked *