“ಹೇ ರಾಮ್!” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ


– ಪಾರ್ವತಿ ಪಿಟಗಿ


ಸಿಂಧ್ಯಾನಟ್ಟಿಯನ್ನು ನಿರ್ಮಲ ಗ್ರಾಮವನ್ನಾಗಿಸುವ ಉದ್ದೇಶದಿಂದ ಗ್ರಾಮದ ಎಲ್ಲ ಮನೆಗಳಲ್ಲೂ ಶೌಚಾಲಯಗಳಿರುವಂತೆ ಮಾಡಲು ಗ್ರಾಮ ಪಂಚಾಯತಿ ಹಟತೊಟ್ಟು ನಿಂತಿತ್ತು. ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿಯೊಂದು ಮನೆಯೂ ಶೌಚಾಲಯವನ್ನು ಹೊಂದಬೇಕಿತ್ತು. ಅದಕ್ಕಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಐದು ಸಾವಿರದ ನಾಲ್ಕುನೂರು ಹಾಗೂ ನಿರ್ಮಲ ಭಾರತ ಅಭಿಯಾಣ ಯೋಜನೆಯಲ್ಲಿ ನಾಲ್ಕುಸಾವಿರದ ಏಳನೂರು ರೂಪಾಯಿಗಳನ್ನು ಗ್ರಾಮ ಪಂಚಾಯಿತಿ ಫಲಾನುಭವಿಗಳಿಗೆ ನೀಡುತ್ತಿತ್ತು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ಪಡೆಯಬೇಕಾದರೆ ಮೊದಲು ಉದ್ಯೋಗ ಚೀಟಿ ಹೊಂದಬೇಕಿತ್ತು. ಅಲ್ಲದೇ, ಸ್ವತ: ತಾವೇ ಶೌಚಾಲಯದ ಗುಂಡಿ ತೋಡಿ ಹಣ ಪಡೆಯಬಹುದಿತ್ತು.

ಮುದುಕ ಪತ್ರೆಪ್ಪನಿಗೆ ಪ್ರಾಥಮಿಕ ಶಾಲೆಯ ಈಶ್ವರ ಮಾಸ್ತರ ‘ನೋಡಪಾ ನಿನಗೂ ವಯಸ್ಸಾದು. ಇನ್ನ ಬರಬರತ ಕೈಕಾಲಾಗ ಶಕ್ತಿ ಇರೂದಿಲ್ಲಾ. ಸಂಡಾಸಕ್ಕ ಇನ್ನ ಎಷ್ಟ ದಿನಾ ಆ ಗುಡ್ಡದ ವಾರಿಗೆ ಹೊಕ್ಕಿ? ಈಗ ಕಣ್ಣ ಕಾಣುದಿಲ್ಲಾ, ಎಲ್ಲೆರ ಎಡವಿ ಹಾಕ್ಕೊಂಡ ಬಿದ್ದೆಂದ್ರ ಏನ ಮಾಡ್ತಿ?’ ಎಂದೆಲ್ಲ ತಿಳುವಳಿಕೆ ನೀಡಿ ಆತನೂ ಶೌಚಾಲಯವನ್ನು ಕಟ್ಟಿಕೊಳ್ಳುವಂತೆ ಮನವೊಲಿಸಿದ್ದರು. ಈಶ್ವರ ಮಾಸ್ತರ ಜನರ ಮನವೊಲಿಸುವುದಕ್ಕೂ ಕಾರಣವಿತ್ತು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಆ ಗ್ರಾಮದಲ್ಲಿ ಈ ವರ್ಷ ಇಂತಿಷ್ಟು ಶೌಚಾಲಯಗಳಾಗಬೇಕೆಂದು ಗುರಿ ನೀಡಲಾಗಿತ್ತು. ಅಷ್ಟೆಲ್ಲ ಶೌಚಾಲಯಗಳನ್ನು ಕಟ್ಟಿಸುವಂತೆ ಗ್ರಾಮಸ್ಥರಿಗೆ ತಿಳಿಹೇಳುವುದು ಕೇವಲ ಅವರೊಬ್ಬರಿಂದಷ್ಟೇ ಸಾಧ್ಯವಿರಲಿಲ್ಲ. ಹಾಗಾಗಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಆದೇಶದಂತೆ ಈ ಬಲವಂತದ ಮಾಘಸ್ನಾನ ಆ ಗ್ರಾಮದ ಎಲ್ಲ ಸರಕಾರಿ ನೌಕರರಿಗೂ ಅನ್ವಯಿಸುತ್ತಿತ್ತು. ಪ್ರತಿಯೊಬ್ಬ ಪ್ರಾಥಮಿಕ ಶಿಕ್ಷಕರ ಪಾಲಿಗೆ ಎರೆಡೆರಡು ಶೌಚಾಲಯಗಳನ್ನು ಕಟ್ಟಿಸುವ ಜವಾಬ್ದಾರಿ ಬಿದ್ದಿದ್ದರಿಂದ ಈಶ್ವರ ಮಾಸ್ತರ ಈ ನಿಟ್ಟಿನಲ್ಲಿ ಪತ್ರೆಪ್ಪನ ಮನವೊಲಿಸಿದ್ದ. ಹೇಳಿಕೇಳಿ ಮಾಸ್ತರು. ಅವರ ಪಾಠ ಪತ್ರೆಪ್ಪನಿಗೆ ನಾಟಿತ್ತು. gandhi-artಅದರ ಫಲವೇ ಅಂದು ಆತ ಶೌಚಾಲಯಕ್ಕೆಂದು ಅರ್ಜಿಕೊಡಲು ಮೊದಲು ಉದ್ಯೋಗ ಚೀಟಿಯನ್ನು ಪಡೆಯಲು ಬಂದಿದ್ದ.

ಪತ್ರೆಪ್ಪನ ಹೆಸರಿನಲ್ಲಿ ಉದ್ಯೋಗ ಚೀಟಿಯನ್ನು ಜನರೇಟ ಮಾಡುತ್ತಿದ್ದ ಸತೀಶ, ‘ಏನಪಾ ಯಜ್ಜಾ, ನರೇಗಾ ಸ್ಕೀಮಿನ್ಯಾಗ ಸಂಡಾಸ ಕಟ್ಟಗೊಂತೀಯಾ? ಕಟಗೋ ಕಟಗೋ. ನೀನು ಥೇಟ ಗಾಂಧಿ ಇದ್ದಂಗ ಅದಿ ನೋಡಪಾ’ ಎಂದಮಾತು ಅಲ್ಲಿಯ ಕೆಲವು ಸದಸ್ಯರ ಹಾಗೂ ಸ್ಟಾಫಿನ ಕಿವಿ ತಲುಪಿತ್ತು.

ಪತ್ರೆಪ್ಪ ಶೌಚಾಲಯದ ತಗ್ಗು ತೋಡಿ ಪಂಚಾಯತಿಯ ಸಲಹೆಯಂತೆ ಫೋಟೊ ತೆಗೆದುಕೊಂಡು ಬಂದ. ಅವನ ಹೆಸರಿನಲ್ಲಿ ನರೇಗಾ ಯೋಜನೆಯ ವೆಬ್‌ಸೈಟ್‌ನಲ್ಲಿ ಕೆಲಸ ಹಾಕಿ ಎನ್‌ಎಮ್‌ಆರ್‌ನ್ನು ಕೂಡ ಕಂಪ್ಯೂಟರ್ ಆಪರೇಟರ್ ಸತೀಶ ಜನರೇಟ ಮಾಡಿದ. ಮುಂದೆ ಪತ್ರೆಪ್ಪ ಶೌಚಾಲಯವನ್ನೂ ಕೂಡ ಕಟ್ಟಿಸಿದ. ಆಮೇಲೆ ಹೆಚ್ಚುಕಡಿಮೆ ಪ್ರತಿದಿನವೂ ಗ್ರಾಮ ಪಂಚಾಯತಿಗೆ ಹಣಕ್ಕಾಗಿ ಅಲೆದಾಡತೊಡಗಿದ. ಆದರೆ ಕೇಂದ್ರ ಸರಕಾರದಲ್ಲಿಯೇ ಈ ಯೋಜನೆಗೆಂದು ತೆಗೆದಿಟ್ಟ ಹಣದಲ್ಲಿ ಕೊರತೆ ಇದ್ದುದರಿಂದ ಬಿಲ್ಲನ್ನು ಪಾವತಿಸಲಾಗಲಿಲ್ಲ. ಹಣ ಜಮೆಯಾಗುವವರೆಗೂ ಪತ್ರೆಪ್ಪ ಅಲೆದಾಡಲೇಬೇಕಿತ್ತು. ಹೀಗೆ ಅಲೆದಾಡುವ ಪತ್ರೆಪ್ಪ ಪಂಚಾಯತಿಯ ಕಟ್ಟೆಯನ್ನು ಹತ್ತಿದರೆ ಸಾಕು ‘ಏ ಗಾಂಧಿ ಬಂದಾ ಗಾಂಧಿ ನೋಡ್ರೆಲ್ಲೆ’ ಎಂದೆಲ್ಲ ಗೇಲಿ ಮಾಡತೊಡಗಿದರು. ಒಟ್ಟಿನಲ್ಲಿ ಪತ್ರೆಪ್ಪನ ನಿಜನಾಮ ಅಳಿಸಿ ಆತ ಎಲ್ಲರ ಬಾಯಲ್ಲೂ ಗಾಂಧಿ ಆಗಿ ಮಾರ್ಪಟ್ಟ.

******

ಅಕ್ಟೋಬರ್ ಎರಡು ಇನ್ನೇನು ಒಂದು ವಾರವಿದೆ ಎನ್ನುವಾಗ ಸತೀಶ ಗಾಂಧಿ ಜಯಂತಿಯ ನೋಟೀಸ್ ತೆಗೆಯುತ್ತಿದ್ದ. ಅಲ್ಲಿದ್ದ ಸದಸ್ಯನೊಬ್ಬ ‘ಈ ಸಲಾ ಗಾಂಧಿ ಜಯಂತಿಗೆ ಏನಾರ ಸ್ಪೆಶಲ್ ಪ್ರೋಗ್ರಾಮ್ ಮಾಡಬೇಕು’ ಎನ್ನುತ್ತಲೇ ಅಲ್ಲಿದ್ದವರ ತಲೆಯಲ್ಲಿ ಒಮ್ಮೆಲೇ ಛಕ್ ಅಂತ ಪತ್ರೆಪ್ಪ ಗಾಂಧಿಯಾಗಿ ಹೊಳೆದುಬಿಟ್ಟ. ಮತ್ತೊಬ್ಬ ಸದಸ್ಯ, ‘ಪತ್ರೆಪ್ಪನ್ನ ಗಾಂಧಿನ್ನ ಮಾಡೂಣು.’ ಅಂದ. ವಿಷಯ ಬಲು ಮೋಜೆನ್ನಿಸಿ ‘ಆತು ಹ್ಯಾಂಗೂ ಪ್ರತ್ಯಕ್ಷ ಗಾಂಧಿಯಂಗ ಅದಾನಲ್ಲ’ ಎಂಬ ಉತ್ತರ ಉಳಿದವರಿಂದ ಹೊರಬಂತು. ಈ ವಿಚಾರ ಆಡಳಿತಮಂಡಳಿಯಲ್ಲಿಯೂ ಚರ್ಚಿತವಾಗಿ, ಅಕ್ಟೋಬರ್ ಎರಡರಂದು ಪತ್ರೆಪ್ಪನನ್ನು ಗಾಂಧಿಯನ್ನಾಗಿಸುವುದೆಂದು ತೀರ್ಮಾನವಾಗಿಬಿಟ್ಟಿತು.

ಎಂದಿನಂತೆ ಪಂಚಾಯತಿಗೆ ಬಂದ ಪತ್ರೆಪ್ಪನನ್ನು ಪಂಚಾಯತಿ ಸಿಬ್ಬಂದಿಯೊಬ್ಬ ‘ನೋಡಪಾ ಪತ್ರೇಸಿ, ನಿನಗ ಪಾಯಖಾನೆ ಬಿಲ್ಲಬರಬೇಕ ಹೌದಲ್ಲೊ?’ ಎಂದು ಕೇಳಿದ್ದೇ ತಡ, ‘ಹೌದ್ರಿಮತ್ತ, ನೀವ ಕಟ್ಟಸ ಕಟ್ಟಸ ಅಂತ ಗಂಟ ಬಿದ್ದ ಕಟ್ಟಾಕಹಚ್ಚೀರಿ. ಬಿಲ್ಲ ಕೊಡತೀವಿ ಅಂದ್ರಿ. ಈಗ ನೋಡಿದ್ರ ನಾ ಸಾಲಾ ಮಾಡಿ ಕಟ್ಟೀನಿ, ಆದ್ರ ಇನ್ನವರಿಗೂ ಬಿಲ್ಲ ಕೊಡವಲ್ಲರಿ. ಈಗ ದಿನಾ ಬೆಳಗ ಆದ್ರ ಸಾಕ ಮನಿಮುಂದ ಸಾಲಗಾರ ಬಂದ ನಿಂದರತಾರಾ.’

‘ಅದೆಲ್ಲಾ ಖರೆಪಾ ಆದ್ರ ಸರಕಾರದ ಖಜಾನೆಯಾಗ ರೊಕ್ಕ ಇಲ್ಲಾ. ಆದ್ರೂ ಒಂದ ಮಾತ ಹೇಳತೀನಿ ಕೇಳ. ಮೊದಲ ರೊಕ್ಕಾ ಜಮಾ ಆದ ಕೂಡಲೇ ತಾಬಡ ತೂಬಡ ನಿನ್ನ ಅಕೌಂಟಿಗೆ ರೊಕ್ಕಾ ಜಮಾಮಾಡಾಕ ಪ್ರಯತ್ನ ಮಾಡತೀವಿ.’

‘ಏನಂತ ಹೇಳ್ರಿ, ಹ್ಯಾಂಗಾರಾ ರೊಕ್ಕಾ ಬಂದ ಈ ಪಂಚಾಯತಿಗೆ ಎಡತಾಕೂದು ತಪ್ಪಿರ ಸಾಕಾಗೇತಿ.’

‘ಏನೂ ಇಲ್ಲಾ, ನೀ ಈ ಸಲಾ ಗಾಂಧಿ ಜಯಂತಿಗೆ ಗಾಂಧಿ ಆಗಿ ನಿಂದರಬೇಕ ನೋಡಪಾ.’

‘ಇಷ್ಟ ಹೌದಲ್ಲೊ, ಯಾಕ ಆಗವಲ್ಲತರಿ’ ಎನ್ನುವುದರೊಂದಿಗೆ ತನ್ನ ಒಪ್ಪಿಗೆ ಸೂಚಿಸಿದ ಪತ್ರೆಪ್ಪ.

ಗಾಂಧಿಯಾಗಬೇಕಿದ್ದರೆ ಮೊದಲು ಆತನ ತಲೆ ಕೂದಲವನ್ನೆಲ್ಲ ಬೋಳಿಸಬೇಕಿತ್ತು. ಹೇಗೆ ಮಾಡುವುದೆಂಬ ಅನುಮಾನ ಪತ್ರೆಪ್ಪನನ್ನು ಕಾಡಿದರೂ ಬಿಲ್ಲಿನ ಆಸೆಗಾಗಿ ಆತ ಗಾಂಧಿಯಾಗಲೇಬೇಕಿತ್ತು.

ನೀಟಾಗಿ ತಲೆಬೋಳಿಸಿಕೊಂಡು ಪಂಚಾಯತಿಗೆ ಬಂದ ಪತ್ರೆಪ್ಪನನ್ನು ಕಂಡು ಸದಸ್ಯರೊಬ್ಬರು ‘ಅಲಲಲಲ ಥೇಟ ಗಾಂಧೀನ ಆದಿ ನೋಡಪಾ, ನಾವು ಸಾಕ್ಷಾತ್ ಗಾಂಧಿನ್ನ ನೋಡಾಕತ್ತೀವಿ ಅಂದ್ರ ನಮ್ಮದೂ ಒಂದ ನಸೀಬನ ಅನ್ನು’ ಎಂದರು. ಮತ್ತೊಬ್ಬ ಸದಸ್ಯ, ‘ಎಲ್ಲೆಬಾಯಿ ತಗಿ ಹಲ್ಲ ಎಷ್ಟ ಅದಾವು ನೋಡುಣು?’ ಎಂದಾಗ ಪತ್ರೆಪ್ಪ ಗಟ್ಟಿಯಾಗಿ ಬಾಯಿ ಮುಚ್ಚಿಕೊಂಡ.

*****

ಗ್ರಾಮ ಪಂಚಾಯತಿಯವರ ಅಣತಿಯಂತೆ ಪತ್ರೆಪ್ಪ ಅಕ್ಟೋಬರ್ ಎರಡರಂದು ಚುಮುಚುಮು ನಸುಕಿನಲ್ಲಿಯೇ ಬಂದ. ಪಂಚಾಯತಿಯ ಧ್ವಜಸ್ಥಂಭದ ಕಸ ಸ್ವಚ್ಛಗೊಳಿಸುತ್ತಿದ್ದ ಸಿಪಾಯಿ ಮಲ್ಲೇಶಿ ‘ಏ ಬಂದಪಾ ಗಾಂಧಿ ಮಹಾತ್ಮಾ’ ಎಂದು ನಗತೊಡಗಿದ. ಸ್ವಲ್ಪ ಸಮಯದ ನಂತರ, ಪತ್ರೆಪ್ಪ ಒಂದುಮೂಲೆಯಲ್ಲಿ ಸುಮ್ಮನೇ ನಿಂತಿದ್ದನ್ನು ಕಂಡು ‘ಏ ಬಾರೋ ಗಾಂಧಿ ಅಜ್ಜಾ, ನೀ ಒಂದಿಷ್ಟು ಕಸಾ ಹೊಡಗಬಾ. ಗಾಂಧಿ ಅಂದ್ರ ಏನ ಅಂತ ತಿಳದಿ? ಗಾಂಧಿ ಅಜ್ಜಾ ಕೊಳಿಗೇರಿಗೂ ಹೋಗಿ ಸ್ವಚ್ಛ ಮಾಡಿ ಬಂದಾರಾ. ಬಾ ಬಾ’ ಎಂದು ಪತ್ರೆಪ್ಪನಿಗೆ ಕಸ ಗುಡಿಸಲು ಪೊರಕೆ ಕೊಟ್ಟ. ವಿಧಿಯಿಲ್ಲದೇ ಪತ್ರೆಪ್ಪ ಕಸಗುಡಿಸಿದ.

ಈ ಸಲ ವಿಶೇಷ ಗಾಂಧಿ ಜಯಂತಿಯನ್ನು ಆಚರಿಸುತ್ತಿದ್ದರಿಂದ ಸದಸ್ಯರು ಹಾಗೂ ಸಿಬ್ಬಂದಿಯವರೆಲ್ಲ ಬೇಗನೇ ಬಂದರು. ಗಾಂಧಿಜಿಗೆ ತುಂಡು ಪಂಜೆಯನ್ನುಡಿಸಿ, ಕನ್ನಡಕ ಹಾಕಿ, ಕೈಯಲ್ಲೊಂದು ಕೋಲು ಕೊಟ್ಟರು. ರೆಡಿಯಾಗಿ ನಿಂತ ಪತ್ರೆಪ್ಪನನ್ನು ಅಚ್ಚರಿಯಿಂದ ‘ಅಯ್ಯ ಥೇಟ ಗಾಂಧಿ ಅಜ್ಜಾನ ಆಗ್ಯಾನ ನೋಡ್ರಿ’ ಎನ್ನತೊಡಗಿದರು. ಎಲ್ಲರಿಗೂ ತಾನೊಂದು ಪ್ರದರ್ಶನದ ಗೊಂಬೆ gandhi-art2ಆದುದಕ್ಕೆ ಪತ್ರೆಪ್ಪ ಮುಜುಗರಗೊಂಡ. ‘ಎಲ್ಲಾನೂ ರೆಡಿ ಆತಾ?’ ಎನ್ನುತ್ತ ಬಂದ ಅಧಿಕಾರಿಗಳಿಗೆ ‘ಎಲ್ಲಾನೂ ಬಿಡ್ರಿ ಸಾಹೇಬ್ರ ಮದಲ ನಮ್ಮ ಗಾಂಧಿನ್ನ ನೋಡ್ರಿ’ ಎಂದು ಪತ್ರೆಪ್ಪನನ್ನು ತೋರಿಸಿದರು. ಸಾಹೇಬರು ವೆರಿಗುಡ್ ಎನ್ನುವ ಮೊದಲೇ ಗಾಂಧಿ ’ನೋಡ್ರಿ ಸಾಹೇಬ್ರ ನನ್ನ ಬಿಲ್ಲ ಅಟು ಹ್ಯಾಂಗಾರ ಮಾಡಿ ಲಗೂಣ ಬರುವಂಗ ಮಾಡ್ರಿ’ ಎಂದು ಬೇಡಿಕೊಳ್ಳತೊಡಗಿದ. ’ಏ ಇಂದ ನೀ ಸುಮ್ಮನಿರಪಾ ನೀ ಯಾರ ಕಡೆನೂ ಏನೂ ಕೇಳಬಾರದೇನಪಾ. ಯಾಕಂದ್ರ ನೀ ಗಾಂಧೀ ಆಗಿ ನಿನಗ ಗೊತೈತಿ ಇಲ್ಲೊ?’ ಎಂದಾಗ, ಪತ್ರೆಪ್ಪ ’ಅಯ್ಯೊ ಸಾಹೇಬ್ರ ಬಿಲ್ಲಿನ ಸಮಂದ ಅಲ್ಲೇನ್ರಿ ನಾ ಗಾಂಧಿ ಆಗಿದ್ದು’ ಅನ್ನಲು ಹೋಗಿ ಸ್ವರ ಹೊರಬರದೇ ಪೆಚ್ಚಾಗಿ ನಿಂತುಕೊಂಡ.

ಗಾಂಧೀಜಿ ಫೋಟೊ ಪೂಜೆ ಮಾಡಿ ಹಿರಿಯ ಅಧಿಕಾರಿಗಳೊಬ್ಬರು ದೊಡ್ಡದಾಗಿ ಗಾಂಧೀಜಿ ಬಗ್ಗೆ ಭಾಷಣ ಬಿಗಿಯತೊಡಗಿದರು. ಗಾಂಧೀಜಿ ಪಟ್ಟಪಾಡನ್ನು ಒಂದೊಂದಾಗಿ ವಿವರಿಸುತ್ತಿದ್ದಂತೆ ಪತ್ರೆಪ್ಪನ ಮುಖದಲ್ಲಿ ಬೆವರಿಳಿಯತೊಡಗಿದರೆ, ಸದಸ್ಯರು ಈಗ ಅವರ ಕೈಗೆ ಸಿಕ್ಕ ಗಾಂಧಿ ಕಡೆಯಿಂದ ಏನೆಲ್ಲ ಮಾಡಿಸಬಹುದು ಎಂಬ ಲೆಕ್ಕ ಹಾಕತೊಡಗಿದ್ದರು. ಒಬ್ಬ ಆತನನ್ನು ಬರಿಗಾಲಲ್ಲಿ ನಡೆಸಿ ದಂಡಿಯಾತ್ರೆ ಮಾಡಿಸಬೇಕೆಂದುಕೊಂಡರೆ, ಮತ್ತೊಬ್ಬ ಆತನನ್ನು ಉಪವಾಸ ಸತ್ಯಾಗ್ರಹ ಮಾಡಿಸಬೇಕೆಂದುಕೊಂಡ. ಮಗದೊಬ್ಬ ಆತನ ಕೈಲಿಂದ ಚರಕ ನೂಲಿಸಬೇಕೆಂದ. ಅವನ ಅದೃಷ್ಟಕ್ಕೆ ಆತನಿಗೆ ಗುಂಡು ಹೊಡೆಯಿಸುವುದೆಂದು ಯಾರೂ ಯೋಚನೆ ಮಾಡಲಿಲ್ಲ.

ಅಧಿಕಾರಿಗಳ ಭಾಷಣ ಮುಗಿದ ನಂತರ, ಎಲ್ಲರಿಗೂ ಪೂರಿಬಾಜಿ ನೀಡಲಾಯಿತು. ಆದರೆ ಪತ್ರೆಪ್ಪ ಮಾತ್ರ ಉಪವಾಸ ಸತ್ಯಾಗ್ರಹಿ ಎಂದು ಭಾವಿಸಿ ಚಹಾಕೂಡ ಕುಡಿಯಲು ನೀಡಲಿಲ್ಲ. ಪತ್ರೆಪ್ಪ ಸಣ್ಣ ಧ್ವನಿಯಿಂದ ’ಯಾವ ಸುಖಕ್ಕ ನಾ ಗಾಂಧಿ ಆಗಿನೋ’ ಎನ್ನುವುದನ್ನು ಕೇಳಿಸಿಕೊಂಡ ಪಂಚಾಯತಿ ಸಿಬ್ಬಂದಿಯೊಬ್ಬ ’ಏ ಗಾಂಧಿ ಅಂದ್ರ ಸುಖಾ ಅಂತ ತಿಳದಿ ಏನ? ಗಾಂಧಿ ಅಂದ್ರನ ಕಷ್ಟಾ’ ಎಂದ.

ಪಂಚಾಯತಿಯ ಕಚೇರಿಯಿಂದ ಮೆರವಣಿಗೆ ಹೊರಟಿತು. ಸಮಯ ಆಗಲೇ ಹತ್ತುಗಂಟೆಯನ್ನು ಸಮೀಪಿಸುತ್ತಿತ್ತು. ಪತ್ರೆಪ್ಪನನ್ನು ಕಂಡ ಜನ ’ಅಬಬಬಬ ಪತ್ರೆಪ್ಪ! ಖರೆ ಖರೆ ಗಾಂಧಿ ಆಗ್ಯಾನ ನೋಡ್ರಿ’ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ’ಫೋಟೊದನ್ನ ಗಾಂಧೀನ ಎದ್ದಬಂದಂಗ ಆಗೇತಿ,’ ’ಏ ಗಾಂಧಿ ಚಂದ ಆಗ್ಯಾನಾಬಿಡ’ ಎಂದೆಲ್ಲ ಜನರ ಬಾಯಿಯಲ್ಲಿ ಗಾಂಧಿ ನಲಿದಾಡತೊಡಗಿದರೆ ಪಂಚಾಯತಿಯ ಸಿಬ್ಬಂದಿ ಹಾಗೂ ಸದಸ್ಯರು ಹೆಮ್ಮೆಯಿಂದ, ’ನಮ್ಮ ಪಂಚಾಯ್ತಿ ಅಂದ್ರ ಏನ ತಿಳದೀರಿ? ಸಜೀವ ಗಾಂಧಿನ್ನ ಸೃಷ್ಟಿಮಾಡತೀವಿ ನಾವು’ ಎಂದು ಬೀಗತೊಡಗಿದರು.

ಮೆರವಣಿಗೆ ಕನ್ನಡ ಪ್ರಾಥಮಿಕ ಶಾಲೆಯನ್ನು ತಲುಪಿತು. ಅಲ್ಲಿ ಪತ್ರೆಪ್ಪನನ್ನು ಗಾಂಧೀಜಿ ಪುತ್ಥಳಿಯಂತೆ ನಿಲ್ಲಿಸಿಯೇಬಿಟ್ಟರು. ಮಕ್ಕಳೆಲ್ಲ ಗಾಂಧೀಜಿಗೆ ಕೈಮುಗಿದರು. ಶಾಲಾ ಮುಖ್ಯೋಪಾಧ್ಯಾಯರು ಸಾಕಷ್ಟು ಪರಿಣಾಮಕಾರಿಯಾಗಿ ಗಾಂಧೀಜಿಯವರ ಬಗ್ಗೆ ಭಾಷಣ ಮಾಡಿದರು. ಮಾತಿನ ಮಧ್ಯ ’ಈ ನಮ್ಮ ಗಾಂಧಿ ಈ ನಮ್ಮ ಗಾಂಧಿ’ ಎಂದು ಪತ್ರೆಪ್ಪನನ್ನು ತೋರಿಸುವಾಗ ಒಂದರೆಗಳಿಗೆ ಪತ್ರೆಪ್ಪನಿಗೆ ಹೆಮ್ಮೆ ಎನ್ನಿಸತೊಡಗಿತ್ತು. ಮಕ್ಕಳು ಕೂಡ ಅಲ್ಲಿ ಒಂಟಿಕಾಲಿನಲ್ಲಿ ನಿಂತಂತೆ ನಿಂತಿದ್ದ ಪತ್ರೆಪ್ಪನನ್ನು ಉದ್ದೇಶಿಸಿಯೇ ಗಾಂಧಿ ಗಾಂಧಿ ಎಂದು ಮಾತನಾಡತೊಡಗಿದ್ದರು.

ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಮುಗಿದ ನಂತರ, ಮೆರವಣಿಗೆ ಹೈಸ್ಕೂಲಿಗೆ ಹೊರಟಿತು. ನಿನ್ನೆಯಷ್ಟೇ ಜೋರಾಗಿ ಮಳೆಬಂದು ಹೋಗಿತ್ತಾದರೂ ಬಿಸಿಲು ಬಹಳ ತೀಕ್ಷ್ಣವಾಗಿತ್ತು. ನುಣ್ಣಗೆ ಬೋಳಿಸಿದ ತಲೆ, ತುಂಡು ಪಂಜೆಯಲ್ಲಿರುವ ಗಾಂಧೀಜಿ, ಪ್ರಾಥಮಿಕ ಶಾಲೆಯಿಂದ ದೂರದ ಹೈಸ್ಕೂಲು ತಲುಪುವುದರಲ್ಲಿ ಬಿಸಿಲಿನ ಬೇಗೆಯಲ್ಲಿ ಬೆಂದು ಬಸವಳಿದ. ಕೈಯಲ್ಲಿ ಬರೀ ಒಂದು ಕೋಲನ್ನು ಮಾತ್ರ ಹೊಂದಿದ್ದ ಆತ ಆಗಾಗ ಬಗ್ಗಿ ಬಗ್ಗಿ ಪಂಚೆಯಿಂದಲೇ ಬೆವರು ಒರೆಸಿಕೊಳ್ಳುತ್ತಿದ್ದ. ಹಾಗೇ ಕೈಯಿಂದಲೇ abstract-art-sheepತಲೆ ಒರೆಸಿಕೊಳ್ಳುವಾಗ ಬೆವರಿಂದ ಕೈ ಜಾರುತ್ತಿತ್ತು.

ಹೈಸ್ಕೂಲಿನಲ್ಲಿಯೂ ಪತ್ರೆಪ್ಪನಿಗೆ ಅದೇ ಮರ್ಯಾದೆ ದೊರೆಯಿತು. ಆತನನ್ನು ಕೆಳಗೆ ಕುಳಿತುಕೊಳ್ಳಲೂ ಬಿಡಲಿಲ್ಲ. ಏನಾದರೂ ತಿನ್ನಲು ಕೂಡ ಕೊಡಲಿಲ್ಲ. ಈಗ ಪತ್ರೆಪ್ಪನ ಮೈ ಅಷ್ಟೇ ಅಲ್ಲ ಹೊಟ್ಟೆಯೂ ಚುರುಗುಟ್ಟತೊಡಗಿತ್ತು.

ಮುಂದೆ ಮೆರವಣಿಗೆ ಊರಿನ ಪ್ರಸಿದ್ಧ ಸ್ಥಳ ಮಾರಮ್ಮನ ದೇವಸ್ಥಾನಕ್ಕೆ ಬಂದಿತು. ಹತ್ತು ವರ್ಷಗಳಿಂದ ತನ್ನ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡದೇ ಇರುವ ಗಾಂಧಿ ಭಕ್ತ ಬಲವಂತಪ್ಪ ಪ್ರತಿವರ್ಷವೂ ದೇವಸ್ಥಾನದ ಆವರಣದಲ್ಲಿ ಗಾಂಧೀಜಿ ಚಿತ್ರಕ್ಕೆ ಪೂಜೆ ಸಲ್ಲಿಸಿ ದೊಡ್ಡದಾಗಿ ಫೋಟೊ ತೆಗೆಸಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆಲ್ಲ ಊಟಹಾಕುತ್ತಿದ್ದ. ಈ ಸಲ ಜೀವಂತ ಗಾಂಧೀಜಿಯ ಮೆರವಣಿಗೆಯಾಗಿದ್ದರಿಂದ ಒಂದಿಷ್ಟು ಹೆಚ್ಚು ಖರ್ಚು ಮಾಡಿ ಮೆರವಣಿಗೆಯನ್ನು ಮತ್ತಷ್ಟು ವಿಜೃಂಭಣೆಯಿಂದ ನೆರವೇರಿಸಲು ಪತ್ರಕರ್ತರಷ್ಟೇ ಅಲ್ಲದೆ ಹತ್ತಿರದ ಸಿಟಿ ಕೇಬಲ್ ಟಿವಿ ಮಾಧ್ಯಮದವರನ್ನೂ ಬಲವಂತ ಕರೆಸಿಕೊಂಡಿದ್ದ. ಗ್ರಾಮಕ್ಕೆ ಟಿವಿಯವರೂ ಬಂದ ಸುದ್ದಿ ಊರನ್ನೇ ಮುತ್ತಿಕೊಂಡಿತು. ಹೀಗಾಗಿ ಪ್ರತಿ ಸಲಕ್ಕಿಂತಲೂ ಹೆಚ್ಚು ಜನ ದೌಡಾಯಿಸಿ ಬಂದಿದ್ದರು. ಜೋಲು ಮೋರೆ ಹಾಕಿಕೊಂಡಿದ್ದ ಗಾಂಧಿ ಈಗ ನಿಚ್ಚಳವಾಗಿದ್ದ. ಪತ್ರೆಪ್ಪನನ್ನು ಎಲ್ಲರ ಮಧ್ಯ ನಿಲ್ಲಿಸಿದರು. ಅಧ್ಯಕ್ಷರು ಅವನ ಪಕ್ಕದಲ್ಲಿಯೇ ನಿಂತುಕೊಂಡು ಫೋಟೊ ತೆಗೆದುಕೊಳ್ಳುವುದಲ್ಲದೇ ಟಿವಿ ಮಾಧ್ಯಮದವರು ವಿಡಿಯೋ ಮಾಡಿಕೊಂಡರು.

ಅಧ್ಯಕ್ಷ ಬಲವಂತ ಈ ರೀತಿ ಪ್ರತಿವರ್ಷಕ್ಕಿಂತಲೂ ಜೋರಾಗಿ ಗಾಂಧಿ ಜಯಂತಿ ಆಚರಿಸಿಕೊಳ್ಳುತ್ತಿರುವುದು ಟಿ.ವಿ. ಮತ್ತು ಪೇಪರ್‌ಗಳಲ್ಲಿ ಬರುವ ವಿಷಯ ಅವನ ಆಜನ್ಮ ವೈರಿಯಾದ ಉಪಾಧ್ಯಕ್ಷ ಪುಂಡಲೀಕನನ್ನು ಕೆರಳಿಸಿತು. ಆತ ಇದೇ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಮದನಳ್ಳಿಯವ. ಆತನಿಗೆ ಬಲವಂತ ಗಾಂಧೀಜಯಂತಿಯನ್ನು ಪಂಚಾಯತಿಯಲ್ಲಿ ಆಚರಿಸಿದ್ದಲ್ಲದೇ ಸಿಬ್ಬಂದಿಗಳನ್ನೆಲ್ಲ ಕರೆದುಕೊಂಡು ಮಾರಮ್ಮನ ದೇವಸ್ಥಾನದಲ್ಲಿ ಸ್ವಂತ ಖರ್ಚಿನಲ್ಲಿ ಆಚರಿಸುವ ವಿಷಯ ಎಳ್ಳಷ್ಟು ಹಿಡಿಸುತ್ತಿರಲಿಲ್ಲ. artಹೀಗಾಗಿ ಪುಂಡಲೀಕ ಮತ್ತು ಅವನ ಗುಂಪಿನವರು ಪಂಚಾಯತಿಯಲ್ಲಿ ಕಾರ್ಯಕ್ರಮ ಮುಗಿದ ತಕ್ಷಣ ತಮ್ಮ ಮನೆಗಳಿಗೆ ಸಾಗುತ್ತಿದ್ದರು. ಈ ಸಲ ಮಾತ್ರ ಪುಂಡಲೀಕನೂ ಸಹ ಮದನಳ್ಳಿಯಲ್ಲಿ ಸ್ಪರ್ಧೆಯ ಮೇಲೆ ಕಾರ್ಯಕ್ರಮವನ್ನಿಟ್ಟುಕೊಂಡ.

ಮಾರಮ್ಮನ ದೇವಸ್ಥಾನದಲ್ಲಿ ಕಾರ್ಯಕ್ರಮ ಮುಗಿದು ಮಧ್ಯಾಹ್ನದವರೆಗೂ ಸ್ವಲ್ಪವೂ ಕುಳಿತುಕೊಳ್ಳದೇ ಹಸಿವೆ ಹಾಗೂ ಬಿಸಿಲ ಬೇಗೆಯಿಂದ ತಳಮಳಿಸುತ್ತಿದ್ದ ಪತ್ರೆಪ್ಪ ಇನ್ನೇನು ಹೊಟ್ಟೆತುಂಬ ಊಟಮಾಡಿ ಮನೆಕಡೆಗೆ ಹೋಗಬಹುದೆಂಬ ಸಮಾಧಾನದ ನಿಟ್ಟುಸಿರು ಬಿಡುತ್ತಿರುವಾಗಲೇ ಪುಂಡಲೀಕನ ಗುಂಪಿನವರು ಬಂದವರೇ ಪತ್ರೆಪ್ಪ ಹಾಗೂ ಪಂಚಾಯತಿ ಸಿಬ್ಬಂದಿ ಮದನಳ್ಳಿಗೂ ಬರಬೇಕೆಂದು ಹಟತೊಟ್ಟರು. ಅಧ್ಯಕ್ಷ ಬಲವಂತ ‘ನಿಮ್ಮಷ್ಟಕ್ಕ ನೀವು ಮಾಡಕೋರಿ. ಈಗ ಊರತುಂಬ ಮೆರವಣಿಗೆ ಮಾಡಿವಲ್ಲಾ? ಮತ್ತ ಅಲ್ಲಿಗೂ ಹ್ಯಾಂಗ ಬರೂದು? ಅದಾನಲ್ಲ ನಿಮ್ಮೂರ ಚೇರಮನ್ ಅವನ್ನ ಕರಕೊಂಡ ಮಾಡಹೋಗ್ರಿ’ ಎಂದೆಲ್ಲ ಸಮಜಾಯಿಸುವುದರಲ್ಲಿ ಸ್ವತ: ಪುಂಡಲೀಕನೇ ಪ್ರತ್ಯಕ್ಷನಾಗಿ ‘ನೋಡಪಾ ನೀ ಒಬ್ಬ ಬಿಟ್ರಬಿಡು ಉಳದಾರು ನಮ್ಮೂರಿಗೂ ಬರಾಕಬೇಕು. ಯಾಕ ನಮ್ಮೂರು ಪಂಚಾಯ್ತಿಗೆ ಸಂಬಂಧಪಟ್ಟಿಲ್ಲನ? ಸರಳ ಈಗ ಎಲ್ಲಾರೂ ಬರಾಕಬೇಕ ನೋಡ್ರಿ. ಏ ನಡೀರಿ ಸಾಹೇಬ್ರ ನಡೀರಿ ನಡೀರಿ’ ಎಂದು ಜೋರುಮಾಡಿದ. ಸಾಹೇಬರು ‘ಏ ಪಂಚಾಯತಿಯೊಳಗ ಎಲ್ಲಾರೂ ಕೂಡಿ ಆಚರಿಸಿವಿ ಇಲ್ಲೊ? ಮುಗೀತ್ರೆಪಾ ಇನ್ನ.’ ಎಂದರು.

’ಹಂಗಾರ ನೀವು ಈ ಮಗನ ಕಾರ್ಯಕ್ರಮಕ್ಕ ಯಾಕಬಂದೀರಿ? ಪಂಚಾಯ್ತಾಗ ಮುಗದಿತ್ತಿಲ್ಲೊ? ತಣ್ಣಗ ಮನೀಗೆ ಹೋಗಬೇಕಿತ್ತಮತ್ತ? ಇಲ್ಲಿ ಕಾರ್ಯಕ್ರಮದ್ದ ಫೋಟೋನ ಪೇಪರಿನ್ಯಾಗ ಮತ್ತ ಟಿವಿನ್ಯಾಗ ಬರ್‍ತಾವು ಅನ್ನೂದು ನನಗ ಗೊತ್ತಿಲ್ಲಂತ ಮಾಡೀರೆನ? ಸುಮ್ಮನ ನಡೀರಿ ಅಲ್ಲೆ. ಏ ಬಾರಲೆ ಪತ್ರೇಸಿ. ನಿನ್ನ ದಂಡಿಯಾತ್ರಿ ಇನ್ನೂ ಮುಗದಿಲ್ಲಾ’ ಎಂದು ಪತ್ರೆಪ್ಪನನ್ನು ಜಗ್ಗಿದ ಕೂಡಲೇ ಪಾಪ ಮತ್ತೊಂದು ಕಿಲೋಮೀಟರ್ ಹಸಿದ ಹೊಟ್ಟೆಯಲ್ಲಿ ಉರಿವ ಬಿಸಿಲಲ್ಲಿ ನಡೆದು ಹೋಗುವುದನ್ನು ನೆನಪಿಸಿಕೊಂಡ ಪತ್ರೆಪ್ಪನ ಅಸಹನೆ ಉಕ್ಕಿಹರಿಯಿತು. ಪುಂಡಲೀಕ ಹಿಡಿದ ಕೈಯನ್ನು ಸಿಟ್ಟಿನಿಂದ ಕೊಸರಿಕೊಂಡವನೇ ’ಬ್ಯಾಡ್ರಿ ನನಗ ನಿಮ್ಮ ಯಾವ ಬಿಲ್ಲೂಬ್ಯಾಡಾ. ನಾ ಹ್ಯಾಂಗರ ಮಾಡಿ ದುಡದ ಸಾಲಾಮುಟ್ಟಸ್ತೀನಿ. ನನ್ನ ಕೈಬಿಟ್ಟು ಪುಣ್ಯಕಟ್ಟಗೋರಿ’ ಎಂದು ಕಿರುಚಿದ. ಅದೇ ಸಮಯಕ್ಕೆ ಪತ್ರೆಪ್ಪನನ್ನು ಹುಡುಕುತ್ತಾಬಂದ ಅವನ ಹೆಂಡತಿ ’ಎಲ್ಲೆ ಅದೀಯ ನಿನ ಮುದಕಾ? ಹೊಟ್ಟಿ ಖಬರ ಐತಿ ಇಲ್ಲೋ? ಅಡಿಗಿ ಆರಿ ಅರಗಾಲ ಆತು. ಈಗ ಬರತಿ ಆಗ ಬರತಿ ಅಂದ್ರ ಬರಲೇ ಇಲ್ಲಾ. ಉಪಾಸಾ ಇರಾಕ ನೀ ಏನ ಖರೆ ಖರೆನ ಗಾಂಧಿ ಅಂತ ತಿಳದಿಯನ ಮತ್ತ? ಬಾ ಇನ್ನ ಸಾಕ’ ಎಂದವಳಿಗೆ ನಿಜವಾದ ವಿಷಯ ತಿಳಿದು, ’ಅಯ್ಯ ನಿನಸುಡಲಿ ಯಾತಕಬೇಕ ಮಾರಾಯಾ ಅವರ ಬಿಲ್ಲು. ಸಾಕ ಬಾ ಇನ್ನ ಗಾಂಧಿ ಸೆಡಗರಾ’ ಎಂದು ಕೂಗಾಡತೊಡಗಿದಳು. ಆದರೂ ಪ್ರತಿಷ್ಠೆಯ ಕಿಚ್ಚನ್ನು ಹೊತ್ತಿಸಿಕೊಂಡಿದ್ದ ಪುಂಡಲೀಕ, ’ಅದ್ಹೆಂಗ ಆದೀತು? ಗಾಂಧಿ ಅಂದ್ರ ಎಲ್ಲಾರಿಗೂ ಗಾಂಧೀನ ಹೌದಲ್ಲೊ?’ ಎಂದು ದುಂಬಾಲುಬಿದ್ದ. ಕೋಪಗೊಂಡ ಅಧ್ಯಕ್ಷ, ’ನಿಮಗ ಬೇಕಾರ ನಿಮ್ಮೂರಾವನ್ನ ಗಾಂಧಿನ್ನ ಮಾಡ್ರಿ ಯಾರ ಬ್ಯಾಡಾ ಅಂತಾರಾ? ನಮ್ಮೂರ ಪತ್ರೆಪ್ಪನ್ನ ಯಾಕ ಕರಕೊಂಡ ಹೊಕ್ಕಿರಿ?’ ಎಂದ. ’ಅವಾ ಈ ಪಂಚಾಯ್ತಿಯವಾ ಅಂದ್ರ ನಮಗೂ ಸಂಬಂಧಪಡತಾನಾ’ ಎಂದೆಲ್ಲ ಪಟ್ಟುಬಿಡದೇ ಹಟಹಿಡಿದು ಕುಳಿತ ಪುಂಡಲೀಕನಿಗೆ ಎಲ್ಲರೂ ಮಣಿಯಲೇಬೇಕಾಯ್ತು.

ಪತ್ರೆಪ್ಪನ ದಂಡಿಯಾತ್ರೆ ನಡೆಯಿತು. ಅಧಿಕಾರಿಗಳೆಲ್ಲ ಊರ ಹಿರಿಯರೊಬ್ಬರ ಕಾರು ತರಿಸಿಕೊಂಡು ಮದನಳ್ಳಿ ತಲುಪಿದರು. ಆದರೆ ಪಾಪದ ಪತ್ರೆಪ್ಪ ಮಾತ್ರ ಆ ಊರ ಹುಡುಗರೊಂದಿಗೆ ದಂಡಿಯಾತ್ರೆ ಮಾಡಿಯೇ ಸಾಗಿದ. ಆತನ ಹೆಂಡತಿಯೂ ’ಭಾವಾಬಿಕನೇಸಿಗೂಳು ಎಲ್ಲಾ ಕೂಡಿ ನನ್ನ ಗಂಡನ್ನ ಏನಾರ ಮಾಡಿ ಇಟ್ಟಗಿಟ್ಟಾವ ಯವ್ವಾ’ ಎಂದು ಆ ಮೆರವಣಿಗೆಯೊಂದಿಗೇ ಸಾಗಿದಳು.

ಮದನಳ್ಳಿ ತಲುಪುವುದರಲ್ಲಿ ಪತ್ರೆಪ್ಪನ ಕೈಕಾಲುಗಳಲ್ಲಿನ ಶಕ್ತಿ ಉಡುಗಿತು. ಇಷ್ಟೊತ್ತಿನವರೆಗೂ ತೋರಿಕೆಗೆ ಹಿಡಿದ ಕೈಯಲ್ಲಿನ ಕೋಲು ಈಗ ನಿಜವಾಗಿಯೂ mahatma-gandhi-sketchಊರುಗೋಲಾಯಿತು.

ಮದನಳ್ಳಿಯಲ್ಲಿಯೂ ಟಿವಿ ಮಾಧ್ಯಮದವರು ಹಾಜರಿದ್ದರು. ಪುಂಡಲೀಕನಿಗೆ ಮತ್ತು ಅವನ ಗುಂಪಿನವರಿಗೆ ಸಿಂಧ್ಯನಟ್ಟಿಯವರಿಗಿಂತ ಹೆಚ್ಚು ಪ್ರಚಾರ ಸಿಗುವಂತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹಾಗಾಗಿ ಅಲ್ಲಿಗಿಂತ ವಿಶೇಷವಾಗಿ ಅಂದರೆ ಗಾಂಧೀಜಿ ಕೈಗೆ ಪೊರಕೆ ಕೊಟ್ಟು ಊರು ಸ್ವಚ್ಛಗೊಳಿಸುವುದು ಮತ್ತು ರಘುಪತಿ ರಾಘವ ರಾಜಾರಾಮ್ ಎಂಬ ಪ್ರಾರ್ಥನೆಯನ್ನು ಅನ್ನಿಸುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಉಪಾಧ್ಯಕ್ಷ ಅವುಗಳನ್ನೆಲ್ಲ ಕಟ್ಟುನಿಟ್ಟಿನಿಂದ ಪತ್ರೆಪ್ಪನಿಗೆ ಹೇಳಿಕೊಟ್ಟು ’ನೀ ಚೊಲೋತಂಗ ಮಾಡು ಟಿವಿಯೊಳಗ ಎಲ್ಲಾ ಪೇಪರದಾಗೂ ನಮ್ಮೂರ ಸುದ್ದೀನ ಬರಲಿ. ಆಗ ನಿನ್ನ ಬಿಲ್ಲು ಬರೇ ಹತ್ತದಿನದಾಗ ಬರೂವಂಗ ಮಾಡತೀನಿ’ ಎಂದು ಬಳಲಿಬೆಂಡಾಗಿದ್ದ ಪತ್ರೆಪ್ಪನಿಗೆ ಮತ್ತೆ ಉತ್ಸಾಹ ತುಂಬಿದ. ಪತ್ರೆಪ್ಪ ಅನಿವಾರ್ಯವಾಗಿ ಪೊರಕೆ ಹಿಡಿದು ಬಹಳ ಆಯಾಸದಿಂದ ಒಂದಿಷ್ಟು ಜಾಗವನ್ನು ಸ್ವಚ್ಛಗೊಳಿಸಿದ. ಮುಂದೆ ಅವರು ಹೇಳಿಕೊಟ್ಟಂತೆ ಮೈಕ್ ಮುಂದೆ ನಿಂತು ರಘುಪತಿ ರಾಘವ ರಾಜಾರಾಮ್ ಪ್ರಾರ್ಥನೆಯನ್ನು ಹೇಳತೊಡಗಿದ. ಇದ್ದಕ್ಕಿದ್ದಂತೇ ಪತ್ರೆಪ್ಪನಿಗೆ ತಲೆ ಗಿಮ್ಮನೇ ತಿರುಗಿದಂತಾಗಿ ಕಣ್ಣಿಗೆ ಚಕ್ರಬಂದು ಕೈಯಲ್ಲಿನ ಕೋಲು ಜರೆದು ಕೆಳಗೆ ಬಿತ್ತು. ಅದರ ಹಿಂದೆಯೇ ಕೆಳಗೆ ಕುಸಿದ ಆತನ ಗಂಟಲಿನಿಂದ ’ಹೇ ರಾಮ್’ ಎಂಬ ಎರಡು ಶಬ್ದಗಳು ಕ್ಷೀಣವಾಗಿ ಹೊರಬಂದವು.

One thought on ““ಹೇ ರಾಮ್!” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ

Leave a Reply

Your email address will not be published. Required fields are marked *